ವಾಚಕರಿಂದ ಪ್ರಶ್ನೆಗಳು
ಇಬ್ರಿಯ 4:15, 16 ರಲ್ಲಿ ತಿಳಿಸಲ್ಪಟ್ಟಿರುವ ಕ್ರಿಸ್ತ ಯೇಸುವಿನ ಮಹಾ ಯಾಜಕೀಯ ಸೇವೆಯ ಪ್ರಯೋಜನಗಳು, “ಬೇರೆ ಕುರಿ” ಗಳಿಗೆ ಈಗ ಹೇಗೆ ಅನ್ವಯಿಸುತ್ತವೆ?
ಮಹಾ ಯಾಜಕನೋಪಾದಿ ಯೇಸುವಿನ ಪಾತ್ರವು, ಆತನೊಂದಿಗೆ ಸ್ವರ್ಗದಲ್ಲಿರುವವರಿಗೆ ಪ್ರಮುಖ ಮಹತ್ವದ್ದಾಗಿದ್ದರೂ, ಐಹಿಕ ನಿರೀಕ್ಷೆಗಳಿರುವ ಕ್ರೈಸ್ತರು ಈಗಲೂ ಯೇಸುವಿನ ಯಾಜಕೀಯ ಸೇವೆಯಿಂದ ಪ್ರಯೋಜನಪಡೆಯುತ್ತಾರೆ.
ಆದಾಮನ ಸಮಯದಂದಿನಿಂದ, ಮಾನವರು ಪಾಪದ ಹೊರೆಯನ್ನು ಹೊತ್ತಿದ್ದಾರೆ. ಬಾಧ್ಯತೆಯಾಗಿ ಪಡೆದ ಅಪರಿಪೂರ್ಣತೆಯಿಂದ ನಾವು, ಇಸ್ರಾಯೇಲ್ಯರಂತೆ ಕಷ್ಟಾನುಭವಿಸುತ್ತೇವೆ. ಅವರು, ತಮ್ಮ ಸ್ವಂತ ಹಾಗೂ ಜನರ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸಿದ ಮಹಾ ಯಾಜಕರ ಮತ್ತು ಜೊತೆ ಯಾಜಕರ ಪರಂಪರೆಯ ಮರೆಹೊಕ್ಕರು. ಸಮಯಾನಂತರ, ಯೇಸು “ಮೆಲ್ಕಿಜೆದೇಕನ ತರಹದ” ಯಾಜಕನಾಗಿ ಅಭಿಷೇಕಿಸಲ್ಪಟ್ಟನು. ಪುನರುತ್ಥಾನಗೊಳಿಸಲ್ಪಟ್ಟ ನಂತರ, ತನ್ನ ಪರಿಪೂರ್ಣ ಮಾನವ ಯಜ್ಞದ ಮೌಲ್ಯವನ್ನು ಸಾದರಪಡಿಸಲು ಯೇಸು ಯೆಹೋವನ ಮುಂದೆ ತೋರಿಬಂದನು.—ಕೀರ್ತನೆ 110:1, 4.
ಇದು ಇಂದು ನಮಗಾಗಿ ಯಾವ ಅರ್ಥದಲ್ಲಿದೆ? ಇಬ್ರಿಯರಿಗೆ ಬರೆದ ತನ್ನ ಪತ್ರದಲ್ಲಿ ಮಹಾ ಯಾಜಕನೋಪಾದಿ ಯೇಸುವಿನ ಸೇವೆಯ ಕುರಿತಾಗಿ ಪೌಲನು ಚರ್ಚಿಸಿದನು. ಇಬ್ರಿಯ 5:1 ರಲ್ಲಿ, ನಾವು ಹೀಗೆ ಓದುತ್ತೇವೆ: “ಪ್ರತಿಯೊಬ್ಬ ಮಹಾಯಾಜಕನು ಮನುಷ್ಯರೊಳಗಿಂದ ಆರಿಸಲ್ಪಟ್ಟವನಾಗಿದ್ದು ಮನುಷ್ಯರಿಗೋಸ್ಕರ ದೇವರ ಕಾರ್ಯಗಳನ್ನು ಜರಗಿಸುವದಕ್ಕಾಗಿ ನೇಮಿಸಲ್ಪಡುತ್ತಾನಲ್ಲಾ. ಅವನು ಅವರಿಗೋಸ್ಕರ ಕಾಣಿಕೆಗಳನ್ನೂ ಪಾಪನಿವಾರಣಕ್ಕಾಗಿ ಯಜ್ಞಗಳನ್ನೂ ಸಮರ್ಪಿಸಬೇಕು.” ಅನಂತರ 5 ಮತ್ತು 6ನೆಯ ವಚನಗಳಲ್ಲಿ, ಯೇಸು ಒಬ್ಬ ಮಹಾ ಯಾಜಕನಾದನೆಂದು ಪೌಲನು ತೋರಿಸಿದನು. ಇದು ನಮ್ಮನ್ನು ಪ್ರಯೋಜನಗಳಿಗೆ ನಡಿಸಬಲ್ಲದು.
ಅದು ಹೇಗೆ? ಪೌಲನು ಬರೆದದ್ದು: “ಆತನು ಮಗನಾಗಿದ್ದರೂ ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು. ಇದಲ್ಲದೆ ಆತನು ಸಿದ್ಧಿಗೆ ಬಂದು . . . ತನಗೆ ವಿಧೇಯರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಕಾರಣನಾದನು.” (ಇಬ್ರಿಯ 5:8, 9) ಮೊದಲಾಗಿ, ಆ ವಚನವು, ದೇವರಿಗೆ ಮತ್ತು ಯೇಸುವಿಗೆ ನಿಷ್ಠರಾಗಿರುವವರು ತಮ್ಮ ಪಾಪಪೂರ್ಣ ದೆಸೆಯಿಂದ ತೆಗೆಯಲ್ಪಟ್ಟು ನಿತ್ಯ ಜೀವವನ್ನು ಪಡೆಯಲಿರುವಾಗ, ನಾವು ಹೊಸ ಲೋಕದಲ್ಲಿ ಹೇಗೆ ಪ್ರಯೋಜನ ಪಡೆಯಸಾಧ್ಯವಿದೆಯೆಂಬದರ ಕುರಿತಾಗಿ ನಾವು ಯೋಚಿಸುವಂತೆ ಮಾಡಬಹುದು. ಯೇಸುವಿನ ಯಜ್ಞದ ವಿಮೋಚನಾ ಮೌಲ್ಯ ಮತ್ತು ಮಹಾ ಯಾಜಕನೋಪಾದಿ ಆತನು ಸಲ್ಲಿಸುವ ಸೇವೆಯ ಮೇಲೆ ಆಧರಿತವಾದ ಒಂದು ಊರ್ಜಿತ ಪ್ರತೀಕ್ಷೆ ಅದಾಗಿದೆ.
ವಾಸ್ತವವಾಗಿಯಾದರೋ, ಮಹಾ ಯಾಜಕನೋಪಾದಿ ಆತನ ಪಾತ್ರ ಅಥವಾ ಸೇವೆಯಿಂದ ನಾವು ಈಗಲೇ ಪ್ರಯೋಜನವನ್ನು ಪಡೆಯಬಹುದು. ಇಬ್ರಿಯ 4:15, 16ನ್ನು (NW) ಗಮನಿಸಿರಿ: “ನಮಗೆ ಮಹಾಯಾಜಕನೋಪಾದಿ ಇರುವವನು, ನಮ್ಮ ಬಲಹೀನತೆಗಳಿಗಾಗಿ ಅನುಕಂಪ ತೋರಿಸಲಾಗದವನಲ್ಲ; ಬದಲಾಗಿ ನಮ್ಮಂತೆಯೇ ಎಲ್ಲಾ ವಿಷಯಗಳಲ್ಲಿಯೂ, ಆದರೆ ಪಾಪವಿಲ್ಲದೆ, ಪರೀಕ್ಷಿಸಲ್ಪಟ್ಟವನಾಗಿದ್ದಾನೆ. ಆದುದರಿಂದ, ನಮಗೆ ತಕ್ಕದಾದ ಸಮಯದಲ್ಲಿ ಸಹಾಯಕ್ಕಾಗಿ, ಕರುಣೆ ಮತ್ತು ಅಪಾತ್ರ ದಯೆಯು ದೊರೆಯುವಂತೆ, ನಾವು ಅಪಾತ್ರ ದಯೆಯ ಸಿಂಹಾಸನವನ್ನು ವಾಕ್ ಸ್ವಾತಂತ್ರ್ಯದೊಂದಿಗೆ ಸಮೀಪಿಸೋಣ.” “ತಕ್ಕದಾದ ಸಮಯ” ಯಾವಾಗ ಆಗಿರುವುದು? ಅದು ನಮಗೆ ಕರುಣೆ ಮತ್ತು ಅಪಾತ್ರ ದಯೆಯ ಅಗತ್ಯವಿರುವಾಗ ಆಗಿರುತ್ತದೆ. ನಾವೆಲ್ಲರೂ, ನಮ್ಮ ಅಪರಿಪೂರ್ಣತೆಯ ಕಾರಣ ಈ ಅಗತ್ಯವನ್ನು ಈಗ ಭಾವಿಸಬೇಕು.
ಈಗ ಸ್ವರ್ಗದಲ್ಲಿ ಒಬ್ಬ ಯಾಜಕನಾಗಿರುವ ಯೇಸು ಒಬ್ಬ ಮಾನವನೂ ಆಗಿದ್ದನು, ಆದುದರಿಂದ ಅವನು ಸಹಾನುಭೂತಿಯುಳ್ಳವನಾಗಿರಲು ಸಾಧ್ಯವಿದೆ ಎಂಬ ಮುಖ್ಯ ವಿಷಯವನ್ನು ಇಬ್ರಿಯ 4:15, 16 ಪರಿಗಣಿಸುತ್ತದೆ. ಯಾರ ಕಡೆಗೆ ಸಹಾನುಭೂತಿಯುಳ್ಳವನಾಗಿರಬಲ್ಲನು? ನಮ್ಮ ಕಡೆಗೆ. ಯಾವಾಗ? ಈಗ. ಯೇಸು ಒಬ್ಬ ಮಾನವನಾಗಿದ್ದಾಗ, ಮಾನವರಿಗೆ ಸಾಮಾನ್ಯವಾಗಿರುವ ಒತ್ತಡಗಳನ್ನು ಅನುಭವಿಸಿದನು. ಕೆಲವು ಸಂದರ್ಭಗಳಲ್ಲಿ, ಯೇಸು ಹಸಿವೆಯುಳ್ಳವನೂ ಬಾಯಾರಿದವನೂ ಆಗಿದ್ದನು. ಮತ್ತು ಪರಿಪೂರ್ಣನಾಗಿದ್ದಾಗ್ಯೂ, ಅವನು ಆಯಾಸಗೊಳ್ಳುತ್ತಿದ್ದನು. ಅದು ನಮಗೆ ಪುನರಾಶ್ವಾಸನೆಯನ್ನು ಕೊಡಬೇಕು. ಯಾಕೆ? ಯೇಸು ಸ್ವಾಭಾವಿಕ ದಣಿವನ್ನು ಅನುಭವಿಸಿದದ್ದರಿಂದ, ನಮಗೆ ಹೇಗನ್ನಿಸುತ್ತದೆಂಬ ಅರಿವು ಅವನಿಗಿದೆ. ತನ್ನ ಅಪೊಸ್ತಲರ ನಡುವೆ ಮತ್ಸರದ ಕಚ್ಚಾಟದೊಂದಿಗೆ ಯೇಸು ಹೆಣಗಾಡಬೇಕಿತ್ತೆಂಬದನ್ನು ಸಹ ಜ್ಞಾಪಿಸಿಕೊಳ್ಳಿರಿ. (ಮಾರ್ಕ 9:33-37; ಲೂಕ 22:24) ಹೌದು, ಅವನಿಗೆ ಆಶಾಭಂಗಗಳಿದ್ದವು. ನಾವು ಆಶಾಭಂಗಗೊಂಡಾಗ, ನಿರುತ್ಸಾಹಗೊಂಡಾಗ ಅವನಿಗೆ ತಿಳಿಯುತ್ತದೆಂಬ ಭರವಸೆಯನ್ನು ಅದು ನಮಗೆ ಕೊಡಬಾರದೋ? ನಿಶ್ಚಯವಾಗಿಯೂ ಕೊಡಬೇಕು.
ನೀವು ನಿರುತ್ಸಾಹಗೊಂಡಾಗ, ನೀವೇನನ್ನು ಮಾಡಬಲ್ಲಿರಿ? ಹೊಸ ಲೋಕದಲ್ಲಿ ನೀವು ಮನಸ್ಸು ಮತ್ತು ದೇಹದಲ್ಲಿ ಪರಿಪೂರ್ಣರಾಗಲು ನಿಮ್ಮ ಮಹಾ ಯಾಜಕನು ನಿಮಗೆ ಸಹಾಯ ಮಾಡುವ ವರೆಗೂ ನೀವು ಕಾಯಬೇಕೆಂದು ಪೌಲನು ಹೇಳಿದನೋ? ಇಲ್ಲ. ಪೌಲನಂದದ್ದು: “ನಮಗೆ ತಕ್ಕದಾದ ಸಮಯದಲ್ಲಿ ಸಹಾಯಕ್ಕಾಗಿ ಕರುಣೆ ಮತ್ತು ಅಪಾತ್ರ ದಯೆಯು” ದೊರೆಯಬಹುದು ಮತ್ತು ಅದು ಸದ್ಯದ ಸಮಯವನ್ನು ಒಳಗೂಡುತ್ತದೆ. ಇನ್ನೂ ಹೆಚ್ಚಾಗಿ ಯೇಸು ಒಬ್ಬ ಮಾನವನಾಗಿದ್ದಾಗ, ಆತನು “ನಮ್ಮಂತೆಯೇ ಎಲ್ಲಾ ವಿಷಯಗಳಲ್ಲಿ ಪರೀಕ್ಷಿಸಲ್ಪಟ್ಟ” ವನಾಗಿದ್ದು ಕಷ್ಟಾನುಭವ ಹಾಗೂ ಕಷ್ಟದೆಸೆಗಳನ್ನು ಅನುಭವಿಸಿದನು. ಆದುದರಿಂದ ನಾವು ಅಂತಹ ಸಂಗತಿಗಳನ್ನು ಎದುರಿಸುವಾಗ, ನಾವೇನನ್ನು ಅನುಭವಿಸುತ್ತಿದ್ದೇವೊ ಅದರ ಕುರಿತಾದ ಆತನ ತಿಳುವಳಿಕೆಯ ಮೇಲೆ ಆಧರಿಸಿ, ಅವನು ನಮಗೆ ಸಹಾಯ ಮಾಡಲು ಸಿದ್ಧನಿದ್ದಾನೆ. ಅದು ನಿಮ್ಮನ್ನು ಅವನ ಬಳಿ ಸೆಳೆಯುವದಿಲ್ಲವೋ?
ಈಗ ವಚನ 16ನ್ನು ಗಮನಿಸಿರಿ. ನಾವು—ಇದು ಅಭಿಷಿಕ್ತರನ್ನು ಮತ್ತು ಬೇರೆ ಕುರಿಗಳನ್ನು ಒಳಗೂಡುತ್ತದೆ—ವಾಕ್ ಸ್ವಾತಂತ್ರ್ಯದೊಂದಿಗೆ ದೇವರನ್ನು ಸಮೀಪಿಸಬಲ್ಲೆವೆಂದು ಪೌಲನು ಹೇಳುತ್ತಾನೆ. (ಯೋಹಾನ 10:16) ಪ್ರಾರ್ಥನೆಯಲ್ಲಿ ನಮಗೆ ಬೇಕಾದದ್ದನ್ನು—ಕೋಪದ, ಅಗೌರವ ತೋರುವ ವಿಷಯಗಳನ್ನು ಸಹ ಹೇಳಬಹುದೆಂಬದು ಅಪೊಸ್ತಲನು ಅರ್ಥೈಸಲಿಲ್ಲ. ಬದಲಾಗಿ, ಯೇಸುವಿನ ಯಜ್ಞದ ಮತ್ತು ಮಹಾ ಯಾಜಕನಾಗಿ ಆತನ ಪಾತ್ರದ ಆಧಾರದ ಮೇಲೆ, ಪಾಪಿಗಳಾಗಿದ್ದಾಗ್ಯೂ ನಾವು ದೇವರನ್ನು ಸಮೀಪಿಸಬಲ್ಲೆವು.
ನಮ್ಮ ಮಹಾ ಯಾಜಕನಾದ ಯೇಸು ಕ್ರಿಸ್ತನ ಸೇವೆಗಳಿಂದ ನಾವು ಈಗಲೂ ಪ್ರಯೋಜನ ಪಡೆಯಬಹುದಾದ ಇನ್ನೊಂದು ವಿಧವು, ನಮ್ಮ ಪಾಪಗಳನ್ನು ಅಥವಾ ತಪ್ಪುಗಳನ್ನು ಒಳಗೂಡುತ್ತದೆ. ಈ ಸದ್ಯದ ವ್ಯವಸ್ಥೆಯಲ್ಲಿ, ಯೇಸು ತನ್ನ ಯಜ್ಞದ ಪೂರ್ಣ ಮೌಲ್ಯವನ್ನು ನಮಗೆ ಅನ್ವಯಿಸುವನೆಂದು ನಾವು ನಿಶ್ಚಯವಾಗಿಯೂ ನಿರೀಕ್ಷಿಸುವದಿಲ್ಲ. ಅವನು ಹಾಗೆ ಮಾಡಿದರೂ, ನಮಗಿನ್ನೂ ನಿತ್ಯ ಜೀವವಿರುತ್ತಿರಲಿಲ್ಲ. ಲೂಕ 5:18-26 ರಲ್ಲಿ, ಮಾಳಿಗೆಯಲ್ಲಿನ ಒಂದು ಕಂಡಿಯ ಮೂಲಕ ಯಾರ ಮಂಚವು ಕೆಳಗಿಳಿಸಲ್ಪಟ್ಟಿತ್ತೋ ಆ ಪಾರ್ಶ್ವವಾಯುರೋಗವಿದ್ದ ಮನುಷ್ಯನು ಒಳಗೂಡಿರುವ ಸಂದರ್ಭ ನೆನಪಿದೆಯೋ? ಯೇಸು ಅವನಿಗಂದದ್ದು: “ಅಪ್ಪಾ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ.” ಕೆಲವು ನಿರ್ದಿಷ್ಟ ಪಾಪಗಳು ಪಾರ್ಶ್ವವಾಯುವನ್ನು ಉಂಟುಮಾಡಿದವೆಂದು ಅದು ಅರ್ಥೈಸಲಿಲ್ಲ. ಅದು ಆ ಮನುಷ್ಯನ ಸಾಮಾನ್ಯ ಪಾಪಗಳನ್ನು ಅರ್ಥೈಸಿರಬಹುದು ಮತ್ತು ಸ್ವಲ್ಪ ಮಟ್ಟಿಗೆ, ಬಾಧೆಗಳನ್ನು ಉಂಟುಮಾಡುವ ಬಾಧ್ಯತೆಯಾಗಿ ಪಡೆದ ಆತನ ಅಪರಿಪೂರ್ಣತೆಯನ್ನು ಅದು ಒಳಗೂಡಿದಿರ್ದಬಹುದು.
ದೋಷಪರಿಹಾರಕ ಯಜ್ಞದ ದಿನದಂದು ಅಜಾಜೇಲನಿಗೋಸ್ಕರವಾಗಿದ್ದ ಹೋರಿಯು ಇಸ್ರಾಯೇಲಿನ ಪಾಪಗಳನ್ನು ಹೊತ್ತುಕೊಂಡು ಹೋದಂತೆ, ತಾನು ನೀಡಲಿದ್ದ ಯಜ್ಞದ ಆಧಾರದ ಮೇಲೆ ಯೇಸು ಆ ಮನುಷ್ಯನ ಪಾಪಗಳನ್ನು ಹೊತ್ತುಕೊಂಡು ಹೋಗಸಾಧ್ಯವಿತ್ತು. (ಯಾಜಕಕಾಂಡ 16:7-10) ಆದರೂ, ಆ ಪಾರ್ಶ್ವವಾಯುರೋಗದ ಮನುಷ್ಯನು ಇನ್ನೂ ಒಬ್ಬ ಮನುಷ್ಯನಾಗಿದ್ದನು. ಅವನು ಪುನಃ ಪಾಪ ಮಾಡಲಿದ್ದನು, ಮತ್ತು ಸಮಯಾನಂತರ ಪಾಪಿಗಳಿಗೆ ಆಗಲೇ ಬೇಕಾಗುವಂತೆ, ಅವನು ಸತ್ತನು. (ರೋಮಾಪುರ 5:12; 6:23) ಯೇಸು ಏನನ್ನು ಹೇಳಿದ್ದನೋ ಅದು ಆ ಮನುಷ್ಯನಿಗೆ ತತ್‌ಕ್ಷಣವೇ ನಿತ್ಯ ಜೀವ ದೊರಕಿತೆಂದು ಅರ್ಥೈಸಲಿಲ್ಲ. ಬದಲಾಗಿ ಆ ಮನುಷ್ಯನು, ಆ ಸಮಯಕ್ಕಷ್ಟೇ ಸ್ವಲ್ಪ ಮಟ್ಟದ ಕ್ಷಮೆಯಿಂದ ಆಶೀರ್ವದಿಸಲ್ಪಟ್ಟಿದ್ದನು.
ಈಗ ನಮ್ಮ ಪರಿಸ್ಥಿತಿಯನ್ನು ಪರಿಗಣಿಸಿರಿ. ಅಪರಿಪೂರ್ಣರಾಗಿರುವದರಿಂದ, ನಾವು ದಿನಾಲೂ ತಪ್ಪು ಮಾಡುತ್ತೇವೆ. (ಯಾಕೋಬ 3:2) ನಾವು ಅದರ ಕುರಿತಾಗಿ ಏನು ಮಾಡಬಲ್ಲೆವು? ಒಳ್ಳೆಯದು, ನಾವು ಯಾರ ಮೂಲಕ ಯೆಹೋವನನ್ನು ಪ್ರಾರ್ಥನೆಯಲ್ಲಿ ಸಮೀಪಿಸಬಲ್ಲೆವೊ, ಆ ಕರುಣಾಮಯಿ ಮಹಾ ಯಾಜಕನೊಬ್ಬನು ನಮಗೆ ಸ್ವರ್ಗದಲ್ಲಿದ್ದಾನೆ. ಹೌದು, ಪೌಲನು ಬರೆದಂತೆ, ನಾವೆಲ್ಲರೂ “ತಕ್ಕದಾದ ಸಮಯದಲ್ಲಿ ಸಹಾಯಕ್ಕಾಗಿ, ಕರುಣೆ ಮತ್ತು ಅಪಾತ್ರ ದಯೆಯು ದೊರೆಯುವಂತೆ, ನಾವು ಅಪಾತ್ರ ದಯೆಯ [ದೇವರ] ಸಿಂಹಾಸನವನ್ನು ವಾಕ್ ಸ್ವಾತಂತ್ರ್ಯದೊಂದಿಗೆ ಸಮೀಪಿ”ಸಬಲ್ಲೆವು. ಫಲಸ್ವರೂಪವಾಗಿ, ಇಂದು ಬೇರೆ ಕುರಿಗಳವರು ಆಗಿರುವವರೆಲ್ಲರೂ, ಕ್ರಿಸ್ತನ ಮಹಾ ಯಾಜಕೀಯ ಸೇವೆಗಳಿಂದ, ಒಂದು ಶುದ್ಧವಾದ ಮನಸ್ಸಾಕ್ಷಿಯನ್ನು ಒಳಗೂಡಿಸಿ ಅದ್ಭುತಕರವಾದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.
ಐಹಿಕ ನಿರೀಕ್ಷೆಯಿರುವ ಕ್ರೈಸ್ತರೆಲ್ಲರೂ ಸಮೀಪಿಸುತ್ತಿರುವ ಹೊಸ ಲೋಕದಲ್ಲಿ ಭವ್ಯವಾದ ಪ್ರಯೋಜನಗಳನ್ನು ಎದುರುನೋಡಬಲ್ಲರು. ಪಾಪದ ಸಂಪೂರ್ಣ ಕ್ಷಮೆಗೆ ನಡೆಸುತ್ತಾ ಅನಂತರ ನಮ್ಮ ಸ್ವರ್ಗೀಯ ಮಹಾ ಯಾಜಕನು ತನ್ನ ಯಜ್ಞದ ಮೌಲ್ಯವನ್ನು ಪೂರ್ಣವಾಗಿ ಅನ್ವಯಿಸುವನು. ಜನರ ಶಾರೀರಿಕ ಹಾಗೂ ಆತ್ಮಿಕ ಆರೋಗ್ಯದ ಕುರಿತಾಗಿ ಕಾಳಜಿವಹಿಸುವ ಮೂಲಕ ಅವನು ಇನ್ನೂ ಮಹತ್ತಾದ ಪ್ರಯೋಜನಗಳನ್ನು ಸಹ ನೀಡುವನು. ಮತ್ತು ಧರ್ಮಶಾಸ್ತ್ರವನ್ನು ಕಲಿಸುವುದು ಇಸ್ರಾಯೇಲಿನಲ್ಲಿದ್ದ ಯಾಜಕರ ಒಂದು ಪ್ರಮುಖ ಜವಾಬ್ದಾರಿಯಾಗಿದದ್ದರಿಂದ, ಭೂಮಿಯ ಮೇಲೆ ದೇವರ ಜನರ ಶಿಕ್ಷಣವನ್ನು ಯೇಸು ಮಹತ್ತಾಗಿ ವಿಸ್ತರಿಸುವನು. (ಯಾಜಕಕಾಂಡ 10:8-11; ಧರ್ಮೋಪದೇಶಕಾಂಡ 24:8; 33:8, 10) ಆದುದರಿಂದ, ನಾವು ಯೇಸುವಿನ ಯಾಜಕೀಯ ಸೇವೆಗಳಿಂದ ಈಗ ಪ್ರಯೋಜನ ಪಡೆಯುತ್ತಿರುವಾಗ, ಇನ್ನೂ ಹೆಚ್ಚಿನದ್ದು ನಮ್ಮ ಮುಂದೆ ಕಾದಿದೆ!