ನಂಬಿಕೆಯನ್ನು ಪ್ರದರ್ಶಿಸುವುದರ ಮೂಲಕ ದೇವರ ವಾಗ್ದಾನಗಳಿಗೆ ಪ್ರತಿಕ್ರಿಯಿಸಿರಿ
“ಆತನು [ಯೆಹೋವ ದೇವರು] ಅಮೂಲ್ಯವಾಗಿಯೂ ಅತ್ಯುತ್ಕ್ರಷ್ಟವಾಗಿಯೂ ಇರುವ ವಾಗ್ದಾನಗಳನ್ನು ನಮಗೆ ಉಚಿತವಾಗಿ ದಯಪಾಲಿಸಿದ್ದಾನೆ.”—2 ಪೇತ್ರ 1:4, NW.
1. ನಿಜ ನಂಬಿಕೆಯನ್ನು ಪ್ರದರ್ಶಿಸಲು ನಮಗೆ ಯಾವುದು ಸಹಾಯಮಾಡುತ್ತದೆ?
ನಾವು ಆತನ ವಾಗ್ದಾನಗಳಲ್ಲಿ ನಂಬಿಕೆಯನ್ನು ಪ್ರದರ್ಶಿಸಬೇಕೆಂದು ಯೆಹೋವನು ಬಯಸುತ್ತಾನೆ. ಆದರೂ, “ನಂಬಿಕೆ ಎಲ್ಲ ಜನರ ಸ್ವತ್ತು ಅಲ್ಲ.” (2 ಥೆಸಲೋನಿಕ 3:2, NW) ಈ ಗುಣವು ದೇವರ ಪವಿತ್ರಾತ್ಮದ, ಯಾ ಕಾರ್ಯಕಾರಿ ಶಕ್ತಿಯ ಫಲವಾಗಿರುತ್ತದೆ. (ಗಲಾತ್ಯ 5:22, 23) ಆದುದರಿಂದ, ಯೆಹೋವನ ಆತ್ಮದ ಮೂಲಕ ನಡಿಸಲ್ಪಟ್ಟವರು ಮಾತ್ರ ನಂಬಿಕೆಯನ್ನು ಪ್ರದರ್ಶಿಸಬಲ್ಲರು.
2. ಅಪೊಸ್ತಲ ಪೌಲನು “ನಂಬಿಕೆ”ಯನ್ನು ಹೇಗೆ ಸ್ಫುಟಗೊಳಿಸುತ್ತಾನೆ?
2 ಆದರೆ ನಂಬಿಕೆ ಅಂದರೆ ಏನು? ಅಪೊಸ್ತಲ ಪೌಲನು ಅದನ್ನು “ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದು”ಎಂದು ಕರೆಯುತ್ತಾನೆ. ಈ ಅದೃಶ್ಯ ನಿಜತ್ವಗಳ ರುಜುವಾತುಗಳು ಎಷ್ಟು ಬಲವಾಗಿವೆ ಎಂದರೆ ನಂಬಿಕೆಯನ್ನು ಅದರೊಟ್ಟಿಗೆ ಸರಿಸಮಾನ ಮಾಡಲಾಗಿದೆ. “ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದು” ಕೂಡ ನಂಬಿಕೆಯಾಗಿರುತ್ತದೆ ಎಂದು ಹೇಳಲಾಗಿದೆ, ಯಾಕಂದರೆ ಯಾರು ಈ ಗುಣವನ್ನು ಹೊಂದಿರುತ್ತಾರೊ ಅವರಿಗೆ ಯೆಹೋವ ದೇವರ ಮೂಲಕ ವಾಗ್ದಾನಿಸಿದ ಎಲ್ಲ ವಿಷಯಗಳು ನೆರವೇರಿರುವಷ್ಟೇ ನಿಶ್ಚಿತವಾಗಿವೆ ಎಂಬ ಖಾತರಿ ಇದೆ.—ಇಬ್ರಿಯ 11:1.
ನಂಬಿಕೆ ಮತ್ತು ಯೆಹೋವನ ವಾಗ್ದಾನಗಳು
3. ಅಭಿಷಿಕ್ತ ಕ್ರೈಸ್ತರು ನಂಬಿಕೆಯನ್ನು ಪ್ರದರ್ಶಿಸುವಲ್ಲಿ ಏನನ್ನು ಅನುಭವಿಸುವರು?
3 ಯೆಹೋವನನ್ನು ಮೆಚ್ಚಿಸಲು, ನಾವು ಆತನ ವಾಗ್ದಾನಗಳಲ್ಲಿ ನಂಬಿಕೆಯನ್ನು ಪ್ರದರ್ಶಿಸಬೇಕು. ಅಪೊಸ್ತಲ ಪೇತ್ರನು ಇದನ್ನು ಸಾಧಾರಣ ಸಾ.ಶ. 64 ರಲ್ಲಿ ಬರೆದ ತನ್ನ ಎರಡನೇ ಪ್ರೇರಿತ ಪತ್ರಿಕೆಯಲ್ಲಿ ತೋರಿಸಿಕೊಟ್ಟನು. ತನ್ನ ಜತೆ ಅಭಿಷಿಕ್ತ ಕ್ರೈಸ್ತರು ನಂಬಿಕೆಯನ್ನು ಪ್ರದರ್ಶಿಸುವಲ್ಲಿ, “ಅಮೂಲ್ಯವಾಗಿಯೂ ಅತ್ಯುತ್ಕ್ರಷ್ಟವಾಗಿಯೂ ಇರುವ [ದೇವರ] ವಾಗ್ದಾನಗಳ” ನೆರವೇರಿಕೆಯನ್ನು ಅವರು ಕಾಣುವರೆಂದು ಆತನು ಸೂಚಿಸಿದನು. ಫಲಿತಾಂಶವಾಗಿ, ಅವರು ಸ್ವರ್ಗೀಯ ರಾಜ್ಯದಲ್ಲಿ ಯೇಸು ಕ್ರಿಸ್ತನೊಂದಿಗೆ ಸಹ ಬಾಧ್ಯಸ್ಥರಂತೆ “ದೈವ ಸ್ವಭಾವದಲ್ಲಿ ಪಾಲನ್ನು ಹೊಂದುವರು.” ನಂಬಿಕೆ ಮತ್ತು ಯೆಹೋವ ದೇವರ ಸಹಾಯದೊಂದಿಗೆ, ಅವರು ಈ ಲೋಕದ ಭ್ರಷ್ಟ ವ್ಯಸನಗಳ ಮತ್ತು ಆಚರಣೆಗಳ ಬಂಧನದಲ್ಲಿರುವುದರಿಂದ ಪಾರಾಗಿದ್ದರು. (2 ಪೇತ್ರ 1:2-4) ಮತ್ತು ಸ್ವಲ್ಪ ಆಲೋಚಿಸಿರಿ! ಇಂದು ನಿಜ ನಂಬಿಕೆಯನ್ನು ಪ್ರದರ್ಶಿಸುವವರು ಅಂತಹದ್ದೆ ಅಮೌಲ್ಯ ಸ್ವಾತಂತ್ರ್ಯದಲ್ಲಿ ಆನಂದಿಸುವರು.
4. ನಮ್ಮ ನಂಬಿಕೆಗೆ ನಾವು ಯಾವ ಗುಣಗಳನ್ನು ಒದಗಿಸಬೇಕು?
4 ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಮತ್ತು ನಮ್ಮ ದೇವ ದತ್ತ ಸ್ವಾತಂತ್ರ್ಯಕ್ಕಾಗಿ ಕೃತಜ್ಞತೆಯು ನಾವು ಮಾದರಿ ಕ್ರೈಸ್ತರಾಗಲು ನಮ್ಮ ಕೈಲಾದುದೆಲವ್ಲನ್ನು ಮಾಡಲು ನಮ್ಮನ್ನು ಪ್ರೇರೇಪಿಸಬೇಕು. ಪೇತ್ರನು ಹೇಳಿದ್ದು: “ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ ಜ್ಞಾನಕ್ಕೆ ದಮೆಯನ್ನೂ ದಮೆಗೆ ತಾಳ್ಮೆಯನ್ನೂ ತಾಳ್ಮೆಗೆ ಭಕ್ತಿಯನ್ನೂ ಭಕ್ತಿಗೆ ಸಹೋದರಸ್ನೇಹವನ್ನೂ ಸಹೋದರಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ.” (2 ಪೇತ್ರ 1:5-7) ನಾವು ಜ್ಞಾಪಕದಲ್ಲಿಟ್ಟುಕೊಳ್ಳುವುದು ವಿವೇಕದ್ದಾಗಿರುವ ಒಂದು ಪಟ್ಟಿಯನ್ನು ಪೇತ್ರನು ಹೀಗೆ ನಮಗೆ ಕೊಡುತ್ತಾನೆ. ಈ ಗುಣಗಳ ಕಡೆಗೆ ಹತ್ತಿರದ ನೋಟವನ್ನು ನಾವು ತಕ್ಕೊಳ್ಳೋಣ.
ನಂಬಿಕೆಗೆ ಅತ್ಯಾವಶ್ಯಕವಾದ ಅಂಶಗಳು
5, 6. ಸದ್ಗುಣವೆಂದರೇನು, ಮತ್ತು ನಾವದನ್ನು ನಂಬಿಕೆಗೆ ಹೇಗೆ ಒದಗಿಸಬಹುದು?
5 ಸದ್ಗುಣ, ಜ್ಞಾನ, ದಮೆ, ತಾಳ್ಮೆ, ದೇವ ಭಕ್ತಿ, ಸಹೋದರಸ್ನೇಹ, ಮತ್ತು ಪ್ರೀತಿಯನ್ನು, ಪರಸ್ಪರವಾಗಿ ಮತ್ತು ನಮ್ಮ ನಂಬಿಕೆಗೆ ಒದಗಿಸಬೇಕೆಂದು ಪೇತ್ರನು ಹೇಳಿದನು. ಈ ಗುಣಗಳನ್ನು ನಮ್ಮ ನಂಬಿಕೆಯ ಅತ್ಯಾವಶ್ಯಕ ಅಂಶಗಳನ್ನಾಗಿ ಮಾಡಲು ನಾವು ಕಷ್ಟಪಟ್ಟು ದುಡಿಯಬೇಕು. ಉದಾಹರಣೆಗಾಗಿ, ಸದ್ಗುಣವು ನಾವು ನಂಬಿಕೆಯ ಹೊರತಾಗಿ ಪ್ರದರ್ಶಿಸುವ ಒಂದು ಗುಣವಾಗಿರುವುದಿಲ್ಲ. ನಿಘಂಟುಕಾರ ಡಬ್ಲ್ಯೂ. ಇ. ವೈನ್, 2 ಪೇತ್ರ 1:5 ರಲ್ಲಿ “ನಂಬಿಕೆಯ ಪ್ರದರ್ಶಿಸುವಿಕೆಯಲ್ಲಿ ಸದ್ಗುಣವನ್ನು ಅತ್ಯಾವಶ್ಯಕ ಗುಣವನ್ನಾಗಿ ಕೂಡಿಸಲಾಗಿದೆ,” ಎಂದು ಸೂಚಿಸುತ್ತಾರೆ. ಪೇತ್ರನು ತಿಳಿಸಿದ ಇತರ ಗುಣಗಳಲ್ಲಿ ಪ್ರತಿಯೊಂದು ಕೂಡ ನಮ್ಮ ನಂಬಿಕೆಯ ಒಂದು ಅಂಶವಾಗಿರುವಂಥವುಗಳಾಗಿವೆ.
6 ಮೊದಲಾಗಿ, ನಮ್ಮ ನಂಬಿಕೆಗೆ ಸದ್ಗುಣವನ್ನು ಒದಗಿಸಬೇಕು. ಸದ್ಗುಣವುಳ್ಳವರಾಗಿರುವುದೆಂದರೆ ದೇವರ ದೃಷ್ಟಿಯಲ್ಲಿ ಯಾವುದು ಒಳ್ಳೇದೊ ಅದನ್ನು ಮಾಡುವುದು. ಇಲ್ಲಿ “ಸದ್ಗುಣವೆಂದು” ಭಾಷಾಂತರಿಸಿದ ಗ್ರೀಕ್ ಪದವನ್ನು ಕೆಲವು ಭಾಷಾಂತರಗಳಲ್ಲಿ “ಒಳ್ಳೇತನ”ವೆಂದು ಬಳಸಲಾಗಿದೆ. (ನ್ಯೂ ಇಂಟರ್ನ್ಯಾಶನಲ್ ವರ್ಶನ್; ದ ಜೆರೂಸಲೆಮ್ ಬೈಬಲ್; ಟುಡೇಸ್ ಇಂಗ್ಲಿಷ್ ವರ್ಶನ್) ಕೆಟ್ಟದ್ದು ಮಾಡುವುದನ್ನು ತಡೆಯಲು ಯಾ ಜತೆ ಮಾನವರಿಗೆ ಹಾನಿಯನ್ನುಂಟುಮಾಡುವುದನ್ನು ತಡೆಯಲು ಸದ್ಗುಣವು ನಮ್ಮನ್ನು ಪ್ರೇರೇಪಿಸುತ್ತದೆ. (ಕೀರ್ತನೆ 97:10) ಇತರರ ಆತ್ಮಿಕ, ದೈಹಿಕ, ಮತ್ತು ಭಾವನಾತ್ಮಕ ಪ್ರಯೋಜನಕ್ಕಾಗಿ ಒಳ್ಳೇದನ್ನು ಮಾಡುವಲ್ಲಿ ಧೈರ್ಯದ ಕ್ರಿಯೆಗಳನ್ನು ಅದು ಉತ್ತೇಜಿಸುತ್ತದೆ.
7. ನಮ್ಮ ನಂಬಿಕೆ ಮತ್ತು ಸದ್ಗುಣಕ್ಕೆ ನಾವು ಜ್ಞಾನವನ್ನು ಯಾಕೆ ಒದಗಿಸಬೇಕು?
7 ನಮ್ಮ ನಂಬಿಕೆ ಮತ್ತು ಸದ್ಗುಣಕ್ಕೆ ಜ್ಞಾನವನ್ನು ಒದಗಿಸುವಂತೆ ಪೇತ್ರನು ನಮ್ಮನ್ನು ಹುರಿದುಂಬಿಸುವುದು ಯಾಕೆ? ಒಳ್ಳೇದು, ನಮ್ಮ ನಂಬಿಕೆಗೆ ನಾವು ಹೊಸ ಆಹ್ವಾನಗಳನ್ನು ಎದುರಿಸುವಾಗ, ಒಳ್ಳೆಯದರ ಮತ್ತು ಕೆಟ್ಟದರ ಭೇದವನ್ನರಿಯುವಲ್ಲಿ ನಮಗೆ ಜ್ಞಾನದ ಅಗತ್ಯವಿದೆ. (ಇಬ್ರಿಯ 5:14) ಬೈಬಲ್ ಅಧ್ಯಯನ ಮತ್ತು ದೇವರ ವಾಕ್ಯವನ್ನು ಅನ್ವಯಿಸುವುದರಲ್ಲಿ ಮತ್ತು ದಿನನಿತ್ಯದ ಜೀವಿತದಲ್ಲಿ ವ್ಯಾವಹಾರಿಕ ವಿವೇಕವನ್ನು ಪ್ರದರ್ಶಿಸುವುದರಲ್ಲಿನ ಅನುಭವದ ಮೂಲಕ, ನಮ್ಮ ಜ್ಞಾನವನ್ನು ನಾವು ವೃದ್ಧಿಪಡಿಸುತ್ತೇವೆ. ಫಲವಾಗಿ, ಇದು ನಮ್ಮ ನಂಬಿಕೆಯನ್ನು ಕಾಪಾಡುವಂತೆ ಮಾಡುತ್ತದೆ ಮತ್ತು ನಾವು ಶೋಧನೆಯ ಕೆಳಗಿರುವಾಗ ಸದ್ಗುಣಕರವಾದದನ್ನು ಮಾಡುತ್ತಾ ಇರುವಂತೆ ನಮಗೆ ಸಹಾಯ ಮಾಡುತ್ತದೆ.—ಜ್ಞಾನೋಕ್ತಿ 2:6-8; ಯಾಕೋಬ 1:5-8.
8. ದಮೆಯು ಏನಾಗಿದೆ, ಮತ್ತು ಅದು ತಾಳ್ಮೆಯೊಂದಿಗೆ ಹೇಗೆ ಜೋಡಿಸಲ್ಪಟ್ಟಿದೆ?
8 ಶೋಧನೆಗಳನ್ನು ನಂಬಿಕೆಯೊಂದಿಗೆ ಎದುರಿಸುವಂತೆ ನಮಗೆ ಸಹಾಯ ಮಾಡಲು, ನಮ್ಮ ಜ್ಞಾನಕ್ಕೆ ದಮೆಯನ್ನು ಒದಗಿಸಬೇಕು. “ದಮೆ”ಗಿರುವ ಗ್ರೀಕ್ ಪದವು ನಮ್ಮ ಮೇಲೆಯೇ ಹಿಡಿತವನ್ನು ಇಟ್ಟುಕೊಳ್ಳುವ ಸಾಮರ್ಥ್ಯದ ಅರ್ಥವನ್ನೀಯುತ್ತದೆ. ಈ ದೇವರಾತ್ಮದ ಫಲವು ನಾವು ಆಲೋಚನೆ, ನುಡಿ, ಮತ್ತು ನಡತೆಯಲ್ಲಿ ನಿಗ್ರಹವನ್ನು ತೋರಿಸಲು ಸಹಾಯ ಮಾಡುತ್ತದೆ. ದಮೆಯನ್ನು ಪ್ರದರ್ಶಿಸುವುದರಲ್ಲಿ ಪಟ್ಟುಹಿಡಿಯುವಿಕೆಯ ಮೂಲಕ ನಾವು ಅದಕ್ಕೆ ತಾಳ್ಮೆಯನ್ನು ಒದಗಿಸುತ್ತೇವೆ. “ತಾಳ್ಮೆ”ಗೆ ಗ್ರೀಕ್ ಪದವು, ತಪ್ಪಿಸಿಕೊಳ್ಳಲಾಗದ ಕಷ್ಟದೆಸೆಯನ್ನು ಖಿನ್ನ ಮುಖದಿಂದ ಸಹಿಸಿಕೊಳ್ಳುವುದನ್ನಲ್ಲ, ಧೈರ್ಯವಂತಿಕೆಯ ಸ್ಥಿರತೆಯನ್ನು ಸೂಚಿಸುತ್ತದೆ. ಯೇಸುವು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಹಿಂಸಾ ಕಂಬವನ್ನು ಸಹಿಸಿದನು. (ಇಬ್ರಿಯ 12:2) ತಾಳ್ಮೆಯೊಂದಿಗೆ ಸಂಬಂಧಿಸಿದ ದೇವದತ್ತ ಶಕ್ತಿಯು ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ ಮತ್ತು ಸಂಕಟದಲ್ಲಿ ಸಂತೋಷಿಸುವಂತೆ, ಶೋಧನೆಗಳನ್ನು ಎದುರಿಸುವಂತೆ, ಮತ್ತು ಹಿಂಸಿಸಲ್ಪಟ್ಟಾಗ ಒಪ್ಪಂದವನ್ನು ತಡೆಯುವಂತೆ ನಮಗೆ ಸಹಾಯ ಮಾಡುತ್ತದೆ.—ಫಿಲಿಪ್ಪಿ 4:13.
9. (ಎ) ದೇವ ಭಕ್ತಿ ಅಂದರೇನು? (ಬಿ) ನಮ್ಮ ದೇವ ಭಕ್ತಿಗೆ ನಾವು ಯಾಕೆ ಸಹೋದರಸ್ನೇಹವನ್ನು ಒದಗಿಸಬೇಕು? (ಸಿ) ನಮ್ಮ ಸಹೋದರಸ್ನೇಹಕ್ಕೆ ನಾವು ಹೇಗೆ ಪ್ರೀತಿಯನ್ನು ಒದಗಿಸಸಾಧ್ಯವಿದೆ?
9 ನಮ್ಮ ತಾಳ್ಮೆಗೆ ದೇವ ಭಕ್ತಿ—ಯೆಹೋವನಿಗೆ ಪೂಜ್ಯ ಭಾವನೆ, ಆರಾಧನೆ, ಮತ್ತು ಸೇವೆ—ಯನ್ನು ಒದಗಿಸಬೇಕು. ನಾವು ದೇವ ಭಕ್ತಿಯನ್ನು ಆಚರಿಸುತ್ತಾ ಇರುವಾಗ ಮತ್ತು ಯೆಹೋವನು ತನ್ನ ಜನರೊಂದಿಗೆ ಹೇಗೆ ವ್ಯವಹರಿಸುತ್ತಾನೆಂದು ಕಾಣುವಾಗ ನಮ್ಮ ನಂಬಿಕೆಯು ಬೆಳೆಯುತ್ತದೆ. ಆದರೂ, ದೇವ ಭಕ್ತಿಯನ್ನು ತೋರಿಸಲು, ನಮಗೆ ಸಹೋದರಸ್ನೇಹ ಬೇಕು. ಎಷ್ಟೆಂದರೂ, “ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು.” (1 ಯೋಹಾನ 4:20) ಯೆಹೋವನ ಇತರ ಸೇವಕರಿಗಾಗಿ ನಿಜ ವಾತ್ಸಲ್ಯವನ್ನು ತೋರಿಸಲು ಮತ್ತು ಎಲ್ಲ ಸಮಯಗಳಲ್ಲಿ ಅವರ ಒಳಿತನ್ನು ಹುಡುಕಲು ನಮ್ಮ ಹೃದಯಗಳು ನಮ್ಮನ್ನು ಚಲಿಸಬೇಕು. (ಯಾಕೋಬ 2:14-17) ಆದರೆ ನಮ್ಮ ಸಹೋದರ ವಾತ್ಸಲ್ಯಕ್ಕೆ ಪ್ರೀತಿಯನ್ನು ಒದಗಿಸಬೇಕೆಂದು ನಮಗೆ ಯಾಕೆ ಹೇಳಲಾಗಿದೆ? ಸ್ಪಷ್ಟವಾಗಿಗಿಯೆ, ಕೇವಲ ನಮ್ಮ ಸಹೋದರರಿಗೆ ಮಾತ್ರವಲ್ಲದೆ, ಇಡೀ ಮಾನವ ಕುಲಕ್ಕೆ ನಾವು ಪ್ರೀತಿಯನ್ನು ತೋರಿಸಬೇಕೆಂದು ಪೇತ್ರನು ಅರ್ಥೈಸಿದನು. ವಿಶೇಷವಾಗಿ ಸುವಾರ್ತೆಯನ್ನು ಸಾರುವುದರ ಮತ್ತು ಜನರಿಗೆ ಆತ್ಮಿಕವಾಗಿ ಸಹಾಯ ಮಾಡುವುದರ ಮೂಲಕ ಈ ಪ್ರೀತಿಯನ್ನು ತೋರಿಸಲಾಗುತ್ತದೆ.—ಮತ್ತಾಯ 24:14; 28:19, 20.
ತಾರತಮ್ಯದ ಪರಿಣಾಮಗಳು
10. (ಎ) ಸದ್ಗುಣ, ಜ್ಞಾನ, ದಮೆ, ತಾಳ್ಮೆ, ದೇವಭಕ್ತಿ, ಸಹೋದರಸ್ನೇಹ, ಮತ್ತು ಪ್ರೀತಿಯನ್ನು ನಮ್ಮ ನಂಬಿಕೆಗೆ ಒದಗಿಸುವಲ್ಲಿ ನಾವು ಹೇಗೆ ವರ್ತಿಸುವೆವು? (ಬಿ) ಕ್ರೈಸ್ತನೆಂಬವನೊಬ್ಬನಲ್ಲಿ ಈ ಗುಣಗಳು ಇಲ್ಲದಿರುವಲ್ಲಿ ಏನು ಸಂಭವಿಸುತ್ತದೆ?
10 ನಮ್ಮ ನಂಬಿಕೆಗೆ ಸದ್ಗುಣ, ಜ್ಞಾನ, ದಮೆ, ತಾಳ್ಮೆ, ದೇವ ಭಕ್ತಿ, ಸಹೋದರಸ್ನೇಹ, ಮತ್ತು ಪ್ರೀತಿಯನ್ನು ಒದಗಿಸುವಲ್ಲಿ, ನಾವು ದೇವರಿಗೆ ಸ್ವೀಕೃತವಾದ ಮಾರ್ಗಗಳಲ್ಲಿ ಆಲೋಚನೆ, ಮಾತಾಡುವಿಕೆ, ಮತ್ತು ಕಾರ್ಯವನ್ನು ಮಾಡುವೆವು. ವ್ಯತಿಕ್ರಮವಾಗಿ, ಕ್ರೈಸ್ತನೆಂಬವನು ಈ ಗುಣಗಳನ್ನು ಪ್ರದರ್ಶಿಸುವುದರಲ್ಲಿ ತಪ್ಪುವಲ್ಲಿ, ಅವನು ಆತ್ಮಿಕವಾಗಿ ಅಂಧನಾಗುತ್ತಾನೆ. ಅವನು ದೇವರಿಂದ ಬರುವ ‘ಬೆಳಕಿಗೆ ತನ್ನ ಕಣ್ಣುಗಳನ್ನು ಮುಚ್ಚುತ್ತಾನೆ’ ಮತ್ತು ತಾನು ಪೂರ್ವದ ಪಾಪಗಳಿಂದ ಶುದ್ಧೀಕರಿಸಲ್ಪಟ್ಟಿರುವೆನೆಂದು ಅವನು ಮರೆಯುತ್ತಾನೆ. (2 ಪೇತ್ರ 1:8-10; 2:20-22) ಆದರೆ ನಾವೆಂದಿಗೂ ಆ ವಿಧದಲ್ಲಿ ತಪ್ಪದೆ ಇರೋಣ ಮತ್ತು ದೇವರ ವಾಗ್ದಾನಗಳಲ್ಲಿ ನಂಬಿಕೆಯನ್ನು ಕಳೆದುಕೊಳ್ಳದೆ ಇರೋಣ.
11. ನಿಷ್ಠ ಅಭಿಷಿಕ್ತರಿಂದ ಯುಕ್ತವಾಗಿ ನಾವೇನನ್ನು ಅಪೇಕ್ಷಿಸಬಹುದು?
11 ನಿಷ್ಠೆಯ ಅಭಿಷಿಕ್ತ ಕ್ರೈಸ್ತರಿಗೆ ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಇದೆ ಮತ್ತು ಅವನು ಅವರನ್ನು ಕರೆದು, ಆರಿಸಿಕೊಂಡದ್ದನ್ನು ಖಂಡಿತ ಮಾಡಲು ಅವರು ಹೆಣಗಾಡುತ್ತಾರೆ. ಅವರ ಮಾರ್ಗದಲ್ಲಿ ಎಡವುವ ಅಡಿಗ್ಡಳಿದ್ದರೂ, ದೇವ ಗುಣಗಳನ್ನು ಅವರು ಪ್ರದರ್ಶಿಸುವಂತೆ ನಾವು ನಿರೀಕ್ಷಿಸಬಲ್ಲೆವು. ನಂಬಿಗಸ್ತ ಅಭಿಷಿಕ್ತರಿಗೆ, ಸ್ವರ್ಗದಲ್ಲಿ ಆತ್ಮ ಜೀವಿತಕ್ಕಾಗುವ ಪುನರುತ್ಥಾನದ ಮೂಲಕ ‘ಯೇಸು ಕ್ರಿಸ್ತನ ನಿತ್ಯ ರಾಜ್ಯದೊಳಗೆ ಪ್ರವೇಶವು ಧಾರಾಳವಾಗಿ ದೇವರಿಂದ ಅನುಗ್ರಹಿಸಲ್ಪಡುವುದು.’—2 ಪೇತ್ರ 1:11.
12. ಎರಡನೇ ಪೇತ್ರ 1:12-15 ರ ಮಾತುಗಳನ್ನು ನಾವು ಹೇಗೆ ತಿಳಿದುಕೊಳ್ಳಬೇಕು?
12 ತಾನು ಬೇಗನೆ ಸಾಯಲಿರುವನು ಎಂದು ಪೇತ್ರನು ಅರಿತನು, ಮತ್ತು ಕೊನೆಗೆ ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನ ಹೊಂದಲು ಅವನು ನಿರೀಕ್ಷಿಸಿದನು. ಆದರೆ “ಈ ಗುಡಾರ”—ಅವನ ಮಾನವ ದೇಹ—ದಲ್ಲಿ ಜೀವಂತನಾಗಿರುವ ವರೆಗೆ ಆತನು ಜೊತೆ ವಿಶ್ವಾಸಿಗಳಲ್ಲಿ ನಂಬಿಕೆಯನ್ನು ಕಟ್ಟಲು ಪ್ರಯತ್ನಿಸಿದನು ಮತ್ತು ದೈವಿಕ ಅನುಗ್ರಹಕ್ಕೆ ಅಗತ್ಯವಿದ್ದ ವಿಷಯಗಳ ನೆನಪು ಹುಟ್ಟಿಸುವ ಮೂಲಕ ಅವರನ್ನು ಉತ್ತೇಜನ ಮಾಡಿದನು. ಮರಣದಲ್ಲಿ ಅವನ ಅಗಲುವಿಕೆಯ ಅನಂತರ, ಪೇತ್ರನ ಆತ್ಮಿಕ ಸಹೋದರ ಮತ್ತು ಸಹೋದರಿಯರು ಅವನ ಮಾತುಗಳನ್ನು ನೆನಪಿಗೆ ತಂದು ಅವರ ನಂಬಿಕೆಯನ್ನು ಉತ್ತೇಜಿಸಸಾಧ್ಯವಿತ್ತು.—2 ಪೇತ್ರ 1:12-15.
ಪ್ರವಾದನಾ ವಾಕ್ಯದಲ್ಲಿ ನಂಬಿಕೆ
13. ಯೇಸುವಿನ ಬರೋಣದ ಕುರಿತು ದೇವರು ಹೇಗೆ ನಂಬಿಕೆಯನ್ನು ಬಲಪಡಿಸುವ ಸಾಕ್ಷ್ಯವನ್ನು ಒದಗಿಸಿರುತ್ತಾನೆ?
13 “ಬಲದಿಂದಲೂ ಬಹು ಮಹಿಮೆಯಿಂದಲೂ” ಯೇಸುವಿನ ಬರೋಣದ ನಿಶ್ಚಿತತೆಯ ಕುರಿತು ದೇವರು ತಾನಾಗಿಯೆ ನಂಬಿಕೆ ಬಲಪಡಿಸುವ ಸಾಕ್ಷ್ಯವನ್ನು ಕೊಟ್ಟನು. (ಮತ್ತಾಯ 24:30; 2 ಪೇತ್ರ 1:16-18) ರುಜುವಾತು ಇಲ್ಲದೇ, ವಿಧರ್ಮಿ ಪುರೋಹಿತರು ತಮ್ಮ ದೇವರುಗಳ ಕುರಿತು ಸುಳ್ಳು ಕಲ್ಪನಾ ಕಥೆಗಳನ್ನು ಹೇಳಿದರು, ಆದರೆ, ಪೇತ್ರ, ಯಾಕೋಬ, ಮತ್ತು ಯೋಹಾನರು ಕ್ರಿಸ್ತನ ಮಹಿಮಾಭರಿತ ರೂಪಾಂತರಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು. (ಮತ್ತಾಯ 17:1-5) ಆತನು ಮಹಿಮಾಭರಿತನಾದದ್ದನ್ನು ಅವರು ನೋಡಿದ್ದರು ಮತ್ತು ಯೇಸುವನ್ನು ತನ್ನ ಪ್ರೀತಿಯ ಮಗನೆಂದು ಅಂಗೀಕರಿಸುವ ದೇವರ ಸ್ವಂತ ಸರ್ವದ ಶಬ್ದವನ್ನು ಕೇಳಿದ್ದರು. ಕ್ರಿಸ್ತನಿಗೆ ಆಗ ಕೊಡಲ್ಪಟ್ಟ ಆ ಅಂಗೀಕಾರ ಮತ್ತು ಪ್ರಕಾಶ ರೂಪವು ಆತನ ಮೇಲೆ ಗೌರವ ಮತ್ತು ಮಹಿಮೆಯ ಕೊಡುಗೆಯಾಗಿದ್ದವು. ಈ ದೈವಿಕ ಪ್ರಕಟನೆಯ ಕಾರಣದಿಂದ, ಹರ್ಮೋನಿನ ಬೆಟ್ಟದ ಚಾಚಿನ ಮೇಲೆ ಇರಬಹುದಾಗಿದ್ದ, ಆ ಸ್ಥಳಕ್ಕೆ ಪೇತ್ರನು “ಪರಿಶುದ್ಧಪರ್ವತ” ಎಂದು ಕರೆದನು.—ಹೋಲಿಸಿ ವಿಮೋಚನಕಾಂಡ 3:4, 5.
14. ಯೇಸುವಿನ ರೂಪಾಂತರದ ಮೂಲಕ ನಮ್ಮ ನಂಬಿಕೆಯು ಹೇಗೆ ಪ್ರಭಾವಿತವಾಗಬೇಕು?
14 ಯೇಸುವಿನ ರೂಪಾಂತರ ನಮ್ಮ ನಂಬಿಕೆಯ ಮೇಲೆ ಹೇಗೆ ಪ್ರಭಾವ ಬೀರಬೇಕು? ಪೇತ್ರನು ಹೇಳಿದ್ದು: “ಇದಲ್ಲದೆ ಪ್ರವಾದನವಾಕ್ಯವು ನಮಗೆ ಮತ್ತೂ ದೃಢವಾಗಿದೆ. ನಿಮ್ಮ ಹೃದಯದೊಳಗೆ ಬೆಳ್ಳಿಯು ಮೂಡಿ ಅರುಣೋದಯವಾಗುವ ಪರ್ಯಂತರ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಡುವದೇ ಒಳ್ಳೇದು.” (2 ಪೇತ್ರ 1:19) “ಪ್ರವಾದನವಾಕ್ಯವು” ಕೇವಲ ಇಬ್ರಿಯ ಶಾಸ್ತ್ರವಚನಗಳ ಪ್ರವಾದನೆಗಳನ್ನು ಒಳಗೊಂಡಿರದೆ, ತಾನು “ಬಲದಿಂದಲೂ ಬಹು ಮಹಿಮೆಯಿಂದಲೂ” ಬರುವೆನೆಂಬ ಯೇಸುವಿನ ಹೇಳಿಕೆಯನ್ನು ಕೂಡ ಒಳಗೂಡಿರುವುದು ಸ್ಪಷ್ಟ. ರೂಪಾಂತರದಿಂದಾಗಿ ಆ ವಾಕ್ಯವು ‘ಮತ್ತೂ ದೃಢವಾದದ್ದು’ ಹೇಗೆ? ರಾಜ್ಯ ಅಧಿಕಾರದಲ್ಲಿ ಕ್ರಿಸ್ತನ ಮಹಿಮಾಭರಿತ ಬರೋಣದ ಕುರಿತು ಇರುವ ಪ್ರವಾದನವಾಕ್ಯವನ್ನು ಆ ಘಟನೆಯು ರುಜುಪಡಿಸಿತು.
15. ಪ್ರವಾದನವಾಕ್ಯಕ್ಕೆ ಕಿವಿಗೊಡುವುದರಲ್ಲಿ ಏನು ಒಳಗೂಡಿದೆ?
15 ನಮ್ಮ ನಂಬಿಕೆಯನ್ನು ಬಲಪಡಿಸಲು, ನಾವು ಪ್ರವಾದನವಾಕ್ಯಕ್ಕೆ ಗಮನವನ್ನು ಕೊಡಬೇಕು. ಆ ವಾಕ್ಯವನ್ನು ಅಭ್ಯಾಸಿಸುವುದನ್ನು, ಕ್ರೈಸ್ತ ಕೂಟಗಳಲ್ಲಿ ಅದನ್ನು ಚರ್ಚಿಸುವುದನ್ನು, ಮತ್ತು ಅದರ ಸಲಹೆಯನ್ನು ಅನ್ವಯಿಸುವುದನ್ನು ಇದು ಒಳಗೂಡಿರುತ್ತದೆ. (ಯಾಕೋಬ 1:22-27) ನಾವು ಅದನ್ನು ‘ಅಂಧಕಾರದಲ್ಲಿ ಪ್ರಕಾಶಿಸುವ ದೀಪದಂತೆ,’ ನಮ್ಮ ಹೃದಯಗಳನ್ನು ಬೆಳಗುವಂತೆ ಬಿಡಬೇಕು. (ಎಫೆಸ 1:18) ಆಗ ಮಾತ್ರ ಅದು ನಮ್ಮನ್ನು “ಬೆಳ್ಳಿ,” ಯಾ ಉದಯಸೂಚಕವಾದ ಪ್ರಕಾಶವುಳ್ಳ ನಕ್ಷತ್ರ”ವಾದ, ಯೇಸು ಕ್ರಿಸ್ತನು, ತನ್ನನ್ನೇ ಮಹಿಮೆಯಲ್ಲಿ ತೋರ್ಪಡಿಸುವ ತನಕ ಮಾರ್ಗದರ್ಶಿಸುವುದು. (ಪ್ರಕಟನೆ 22:16) ಆ ಪ್ರಕಟನೆಯು ನಂಬಿಕೆಯಿಲ್ಲದವರಿಗೆ ನಾಶನ ಮತ್ತು ನಂಬಿಕೆಯನ್ನು ಪ್ರದರ್ಶಿಸುವವರಿಗೆ ಆಶೀರ್ವಾದದ ಅರ್ಥದಲ್ಲಿರುವುದು.—2 ಥೆಸಲೊನೀಕ 1:6-10.
16. ದೇವರ ವಾಕ್ಯದಲ್ಲಿನ ಎಲ್ಲ ಪ್ರವಾದನ ವಾಗ್ದಾನಗಳು ನೆರವೇರುವವೆಂದು ನಾವು ಯಾಕೆ ನಂಬಿಕೆಯಿಂದಿರಬಲ್ಲೆವು?
16 ದೇವರ ಪ್ರವಾದಿಗಳು ಕೇವಲ ವಿವೇಕಪ್ರದ ಭವಿಷ್ಯದ್ವಾಣಿಗಳನ್ನು ನುಡಿದ ಚತುರ ಪುರುಷರಾಗಿರಲಿಲ್ಲ, ಯಾಕಂದರೆ ಪೇತ್ರನಂದದ್ದು: “ಶಾಸ್ತ್ರದಲ್ಲಿರುವ ಯಾವ ಪ್ರವಾದನವಾಕ್ಯವೂ ಕೇವಲ ಮಾನುಷಬುದಿಯ್ಧಿಂದ ವಿವರಿಸತಕ್ಕಂಥದಲ್ಲವೆಂಬದನ್ನು ಮುಖ್ಯವಾಗಿ ತಿಳಿದುಕೊಳ್ಳಿರಿ. ಯಾಕಂದರೆ ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು ಪವಿತ್ರಾತ್ಮಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” (2 ಪೇತ್ರ 1:20, 21) ಉದಾಹರಣೆಗಾಗಿ, ದಾವೀದನಂದದ್ದು: “ಯೆಹೋವನ ಆತ್ಮವು ನನ್ನಲ್ಲಿ ಉಸುರಿತು.” (2 ಸಮುವೇಲ 23:1, 2) ಮತ್ತು ಪೌಲನು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು,” ಎಂದು ಬರೆದನು. (2 ತಿಮೊಥೆಯ 3:16) ದೇವರ ಪ್ರವಾದಿಗಳು ಆತನ ಆತ್ಮದ ಮೂಲಕ ಪ್ರೇರಿತರಾಗಿದದ್ದರಿಂದ, ಆತನ ವಾಕ್ಯದಲ್ಲಿರುವ ಎಲ್ಲ ವಾಗ್ದಾನಗಳು ನೆರವೇರುವವು ಎಂದು ನಾವು ನಂಬಿಕೆಯುಳ್ಳವರಾಗಿರಬಲ್ಲೆವು.
ಅವರಿಗೆ ದೇವರ ವಾಗ್ದಾನಗಳಲ್ಲಿ ನಂಬಿಕೆ ಇತ್ತು
17. ಯಾವ ವಾಗ್ದಾನವು ಹೇಬೆಲನ ನಂಬಿಕೆಗೆ ಆಧಾರವಾಗಿತ್ತು?
17 ಕ್ರೈಸ್ತರ ಪೂರ್ವದ ‘ಮಹಾ ಮೇಘದೋಪಾದಿಯ’ ಆತನ ಸಾಕ್ಷಿಗಳ ನಂಬಿಕೆಗೆ ಯೆಹೋವನ ವಾಗ್ದಾನಗಳು ಆಧಾರವಾಗಿದ್ದವು. (ಇಬ್ರಿಯ 11:1–12:1) ಉದಾಹರಣೆಗಾಗಿ, “ಸಂತಾನವು” “ಸರ್ಪನ” ತಲೆಯನ್ನು ಜಜ್ಜುವುದರ ದೇವರ ವಾಗ್ದಾನದಲ್ಲಿ ಹೇಬೆಲನಿಗೆ ನಂಬಿಕೆ ಇತ್ತು. ಹೇಬೆಲನ ಹೆತ್ತವರ ಮೇಲೆ ದೇವರ ಶಿಕ್ಷೆಯ ನೆರವೇರಿಕೆಯ ಆಧಾರವು ಅಲ್ಲಿತ್ತು. ಏದೆನ್ನ ಹೊರಗೆ, ಶಾಪದ ಭೂಮಿಯು ಮುಳ್ಳುಗಿಡಗಳನ್ನು ಮತ್ತು ಕಳೆಗಳನ್ನು ಉತ್ಪಾದಿಸಿದರ್ದಿಂದ, ಆದಾಮ ಮತ್ತು ಅವನ ಕುಟುಂಬವು ತಮ್ಮ ಮುಖಗಳ ಬೆವರಿನಲ್ಲಿ ಆಹಾರವನ್ನು ತಿಂದರು. ಹವ್ವಳು ತನ್ನ ಗಂಡನನ್ನು ಬಯಸುವುದು ಮತ್ತು ಆದಾಮನು ಅವಳ ಮೇಲೆ ದೊರೆತನ ನಡಿಸುವುದನ್ನು ಹೇಬೆಲನು ಗಮನಿಸಿರುವುದು ಸಂಭವನೀಯ. ಖಂಡಿತವಾಗಿ ಆಕೆ ತನ್ನ ಗರ್ಭಧಾರಣೆಯ ನೋವಿನ ಕುರಿತು ಮಾತಾಡಿದ್ದಳು. ಮತ್ತು ಏದೆನ್ ತೋಟದ ಪ್ರವೇಶದ್ವಾರವು ಕೆರೂಬಿಯರಿಂದ ಮತ್ತು ಧಗಧಗನೆ ಉರಿಯುವ ಕತ್ತಿಯ ಮೂಲಕ ಕಾವಲಿಡಲ್ಪಟ್ಟಿತ್ತು. (ಆದಿಕಾಂಡ 3:14-19, 24) ಹೇಬೆಲನಿಗೆ ಇವೆಲ್ಲವುಗಳು, ವಾಗ್ದಾನಿಸಿದ ಸಂತಾನದ ಮೂಲಕ ಬಿಡುಗಡೆಯು ಬರುವುದೆಂಬುದನ್ನು ಖಚಿತಪಡಿಸುವ ಒಂದು ‘ಸ್ಪಷ್ಟ ನಿದರ್ಶನೆ’ಯಾಗಿ ಏರ್ಪಟ್ಟಿತು. ನಂಬಿಕೆಯಲ್ಲಿ ಕ್ರಿಯೆಗೈದು, ಹೇಬೆಲನು ಕಾಯಿನನಿಗಿಂತ ಹೆಚ್ಚು ಮಹತ್ವದ್ದಾಗಿ ಪರಿಣಮಿಸಿದ ಯಜ್ಞವನ್ನು ದೇವರಿಗೆ ಅರ್ಪಿಸಿದನು.—ಇಬ್ರಿಯ 11:1, 4.
18, 19. ಅಬ್ರಹಾಮ ಮತ್ತು ಸಾರಳು ಯಾವ ವಿಧಗಳಲ್ಲಿ ನಂಬಿಕೆಯನ್ನು ಪ್ರದರ್ಶಿಸಿದರು?
18 ಪೂರ್ವಜರಾದ ಅಬ್ರಹಾಮ, ಇಸಾಕ, ಮತ್ತು ಯಾಕೋಬರಿಗೆ ಕೂಡ ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಇತ್ತು. ಭೂಮಿಯ ಎಲ್ಲ ಕುಟುಂಬಗಳು ಅವನ ಮೂಲಕ ತಮ್ಮನ್ನೇ ಆಶೀರ್ವದಿಸಿಕೊಳ್ಳುವವು ಮತ್ತು ಅವನ ಸಂತಾನಕ್ಕೆ ಒಂದು ದೇಶವು ಕೊಡಲ್ಪಡುವುದೆಂಬ ದೇವರ ವಾಗ್ದಾನದಲ್ಲಿ ಅಬ್ರಹಾಮನು ನಂಬಿಕೆಯನ್ನು ಪ್ರದರ್ಶಿಸಿದನು. (ಆದಿಕಾಂಡ 12:1-9; 15:18-21) ಅವನ ಮಗ ಇಸಾಕ ಮತ್ತು ಮೊಮ್ಮಗ ಯಾಕೋಬರು “ಅದೇ ವಾಗ್ದಾನಕ್ಕೆ ಸಹಬಾಧ್ಯರಾಗಿದ್ದರು.” ನಂಬಿಕೆಯಿಂದಲೆ ಅಬ್ರಹಾಮನು “ವಾಗ್ದಾತ್ತದೇಶಕ್ಕೆ ಬಂದಾಗ ಅಲ್ಲಿ . . . ಪ್ರವಾಸಿಯಾಗಿ ಬದುಕಿದನು” ಮತ್ತು ಆವನು “ಶಾಶ್ವತವಾದ ಆಸ್ತಿವಾರಗಳುಳ್ಳ ಪಟ್ಟಣವನ್ನು,” ಯಾವುದರ ಕೆಳಗೆ ಅವನು ಭೂಜೀವಿತಕ್ಕೆ ಪುನರುತ್ಥಾನವಾಗಲಿದ್ದನೋ ಆ ದೇವರ ಸ್ವರ್ಗೀಯ ರಾಜ್ಯವನ್ನು ಎದುರು ನೋಡಿದನು. (ಇಬ್ರಿಯ 11:8-10) ಅಂತಹದ್ದೆ ನಂಬಿಕೆ ನಿಮ್ಮಲ್ಲಿಯೂ ಇದೆಯೊ?
19 ಅಬ್ರಹಾಮನ ಹೆಂಡತಿ, ಸಾರಳು, 90 ವರ್ಷ ಪ್ರಾಯದವಳಾಗಿದ್ದು, ಮಕ್ಕಳನ್ನು ಹಡೆಯುವ ಪ್ರಾಯವನ್ನು ಎಷ್ಟೋ ಹೆಚ್ಚು ಮೀರಿದ್ದಾಗ, ಆಕೆ ದೇವರ ವಾಗ್ದಾನದಲ್ಲಿ ನಂಬಿಕೆಯನ್ನು ಪ್ರದರ್ಶಿಸಿದಳು ಮತ್ತು ಇಸಾಕನನ್ನು ಹೆರಲು ಮತ್ತು “ಗರ್ಭವತಿಯಾಗಲು” ಶಕ್ತಿಯನ್ನು ಹೊಂದಿದಳು. ಹೀಗೆ, ಸಂತಾನೋತ್ಪತ್ತಿಯ ಸಂಬಂಧದಲ್ಲಿ “ಮೃತಪ್ರಾಯನಾಗಿದ್ದ,” 100 ವರುಷ ಪ್ರಾಯದ ಅಬ್ರಹಾಮನಿಂದ, ಕಟ್ಟಕಡೆಗೆ “ಆಕಾಶದ ನಕ್ಷತ್ರಗಳಂತೆ . . . ಅಸಂಖ್ಯವಾಗಿ ಮಕ್ಕಳು ಹುಟ್ಟಿದರು.”—ಇಬ್ರಿಯ 11:11, 12; ಆದಿಕಾಂಡ 17:15-17; 18:11; 21:1-7.
20. ಪೂರ್ವಜರು ಅವರಿಗೆ ಮಾಡಿದ ದೇವರ ವಾಗ್ದಾನಗಳು ನೆರವೇರುವುದನ್ನು ಕಾಣಲಿಲ್ಲವಾದರೂ, ಅವರೇನು ಮಾಡಿದರು?
20 ನಂಬಿಗಸ್ತ ಪೂರ್ವಜರು ಅವರಿಗಿದ್ದ ದೇವರ ವಾಗ್ದಾನಗಳ ಪೂರ್ಣ ನೆರವೇರಿಕೆಯನ್ನು ನೋಡದೇ ಸತ್ತರು. ಆದರೂ, ಅವರು “ಅವುಗಳನ್ನು [ವಾಗ್ದಾನಿಸಿದ ವಿಷಯಗಳನ್ನು] ದೂರದಿಂದ ನೋಡಿ ಉಲ್ಲಾಸದೊಡನೆ ವಂದಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳೂ ಆಗಿದ್ದೇವೆಂದು ಒಪ್ಪಿಕೊಂಡರು.” ವಾಗ್ದಾತ್ತದೇಶವು ಅಬ್ರಹಾಮನ ಸಂತತಿಯ ಸ್ವಾಸ್ಥ್ಯವಾಗುವದಕ್ಕೆ ಮುಂಚೆ ಅನೇಕ ಸಂತಾನಗಳು ಗತಿಸಿದವು. ಹಾಗಿದ್ದರೂ, ದೇವ ಭಯದ ಪೂರ್ವಜರು ಅವರ ಜೀವಮಾನವಿಡೀ, ಯೆಹೋವನ ವಾಗ್ದಾನಗಳಲ್ಲಿ ನಂಬಿಕೆಯನ್ನು ಪ್ರದರ್ಶಿಸಿದರು. ಅವರು ನಂಬಿಕೆಯನ್ನು ಎಂದೂ ಕಳೆದುಕೊಳ್ಳದೆ ಇದ್ದ ಕಾರಣ, ಅವರಿಗಾಗಿ ದೇವರು ತಯಾರಿಸಿದ “ಪಟ್ಟಣ,”ವಾದ ಮೆಸ್ಸೀಯನ ರಾಜ್ಯದ ಭೂ ಆಳಿಕ್ವೆಯಲ್ಲಿ ಅವರು ಜೀವಕ್ಕಾಗಿ ಬೇಗನೆ ಪುನರುತ್ಥಾನ ಹೊಂದುವರು. (ಇಬ್ರಿಯ 11:13-16) ಅದೇ ರೀತಿಯಲ್ಲಿ, ಆತನ ಎಲ್ಲ ಆಶ್ಚರ್ಯಕರವಾದ ವಾಗ್ದಾನಗಳ ಒಡನೆಯ ನೆರವೇರಿಕೆಯನ್ನು ನಾವು ಕಾಣದಿರುವುದಾದರೂ ಕೂಡ, ನಂಬಿಕೆಯು ನಮ್ಮನ್ನು ಯೆಹೋವನಿಗೆ ನಿಷ್ಠಾವಂತರನ್ನಾಗಿಡುವುದು. ನಮ್ಮ ನಂಬಿಕೆಯು ಕೂಡ ನಮ್ಮನ್ನು ಅಬ್ರಹಾಮನಂತೆ, ದೇವರಿಗೆ ವಿಧೇಯರಾಗಲು ಪ್ರೇರೇಪಿಸುವುದು. ಮತ್ತು ಅವನು ಆತ್ಮಿಕ ಬಾಧ್ಯತೆಯನ್ನು ತನ್ನ ಸಂತತಿಗಳಿಗೆ ದಾಟಿಸಿದ ಹಾಗೇ ನಾವೂ ಯೆಹೋವನ ಅಮೂಲ್ಯ ವಾಗ್ದಾನಗಳಲ್ಲಿ ನಂಬಿಕೆಯನ್ನು ಪ್ರದರ್ಶಿಸುವಂತೆ ನಮ್ಮ ಮಕ್ಕಳಿಗೆ ಸಹಾಯ ಮಾಡಬಹುದು.—ಇಬ್ರಿಯ 11:17-21.
ನಂಬಿಕೆಯು ಕ್ರೈಸ್ತರಿಗೆ ಪ್ರಾಮುಖ್ಯ
21. ಇಂದು ದೇವರಿಗೆ ಸ್ವೀಕರಣೀಯವಾಗಿರಬೇಕಾಗಿರುವಲ್ಲಿ, ನಮ್ಮ ನಂಬಿಕೆಯ ಪ್ರದರ್ಶಿಸುವಿಕೆಯಲ್ಲಿ ಏನು ಒಳಗೂಡಿರಲೇ ಬೇಕು?
21 ಯೆಹೋವನ ವಾಗ್ದಾನಗಳ ನೆರವೇರಿಕೆಯಲ್ಲಿ ಭರವಸೆಯನ್ನಿಡುವುದಕ್ಕಿಂತ ಹೆಚ್ಚಿನದ್ದು ನಂಬಿಕೆಗೆ ನಿಶ್ಚಯವಾಗಿಯೂ ಇದೆ. ನಾವು ಆತನ ಒಪ್ಪಿಗೆಯಲ್ಲಿ ಆನಂದಿಸುವಲ್ಲಿ ಅನೇಕ ವಿಧಗಳಲ್ಲಿ ದೇವರಲ್ಲಿ ನಂಬಿಕೆಯನ್ನು ಪ್ರದರ್ಶಿಸುವುದು ಮಾನವ ಇತಿಹಾಸದಲ್ಲೆಲ್ಲ ಅವಶ್ಯವಾಗಿತ್ತು. “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ,” ಎಂದು ಪೌಲನು ತೋರಿಸಿಕೊಟ್ಟನು. (ಇಬ್ರಿಯ 11:6) ಇಂದು ಯೆಹೋವನಿಗೆ ಸ್ವೀಕರಣೀಯವಾಗಿರಬೇಕಾಗಿರುವಲ್ಲಿ, ಒಬ್ಬ ವ್ಯಕ್ತಿಯು ಯೇಸು ಕ್ರಿಸ್ತನಲ್ಲಿ ಮತ್ತು ಆತನ ಮೂಲಕ ದೇವರು ಒದಗಿಸಿರುವ ವಿಮೋಚನಾ ಯಜ್ಞದಲ್ಲಿ ನಂಬಿಕೆಯನ್ನು ಪ್ರದರ್ಶಿಸಲೇ ಬೇಕು. (ರೋಮಾಪುರ 5:8; ಗಲಾತ್ಯ 2:15, 16) ಇದು ಯೇಸುವು ತಾನೇ ಅಂದಂತೆ ಇದೆ: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು; ಮಗನಿಗೆ ಒಳಗಾಗದವನು ಜೀವವನ್ನು ಕಾಣುವದೇ ಇಲ್ಲ; ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವದು.”—ಯೋಹಾನ 3:16, 36.
22. ಯಾವ ವಾಗ್ದಾನದ ನೆರವೇರಿಕೆಯನ್ನು ಮೆಸ್ಸೀಯನ ರಾಜ್ಯವು ತರುವುದು?
22 ಕ್ರೈಸ್ತರು ಪ್ರಾರ್ಥಿಸುವಂಥ ರಾಜ್ಯದ ಕುರಿತು ದೇವರ ವಾಗ್ದಾನಗಳ ನೆರವೇರಿಕೆಯಲ್ಲಿ ಯೇಸುವು ಪ್ರಮುಖ ಪಾತ್ರವನ್ನು ವಹಿಸುತ್ತಾನೆ. (ಯೆಶಾಯ 9:6, 7; ದಾನಿಯೇಲ 7:13, 14; ಮತ್ತಾಯ 6:9, 10) ಪೇತ್ರನು ತೋರಿಸಿದಂತೆ, ರಾಜ್ಯದ ಅಧಿಕಾರ ಮತ್ತು ಮಹಿಮೆಯಲ್ಲಿ ಯೇಸುವಿನ ಬರೋಣದ ಕುರಿತಾದ ಪ್ರವಾದನವಾಕ್ಯವನ್ನು ರೂಪಾಂತರವು ದೃಢೀಕರಿಸಿತು. ಮೆಸ್ಸೀಯನ ರಾಜ್ಯವು ದೇವರ ಇನ್ನೊಂದು ವಾಗ್ದಾನದ ನೆರವೇರಿಕೆಯನ್ನು ತರುವುದು, ಯಾಕಂದರೆ ಪೇತ್ರನು ಬರೆದದ್ದು: “ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರು ನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವುದು.” (2 ಪೇತ್ರ 3:13) ಸಾ.ಶ.ಪೂ. 537 ರಲ್ಲಿ ಬಾಬೆಲಿನಲ್ಲಿನ ಯೆಹೂದಿ ಬಂದಿವಾಸಿಗಳನ್ನು, ಜೆರುಬ್ಬಾಬೆಲನು ದೇಶಾಧಿಪತಿಯಾಗಿ ಮತ್ತು ಯೆಹೋಶುವನು ಮಹಾ ಯಾಜಕನಾಗಿ, ಅವರ ಸ್ವದೇಶಕ್ಕೆ ಪುನಃಸ್ಥಾಪಿಸಿದಾಗ ಅದೇ ರೀತಿಯ ಪ್ರವಾದನೆಯು ನೆರವೇರಿತು. (ಯೆಶಾಯ 65:17) ಆದರೆ ಪೇತ್ರನು “ಹೊಸ ಆಕಾಶ”—ಸ್ವರ್ಗೀಯ ಮೆಸ್ಸೀಯನ ರಾಜ್ಯ—ವು “ಹೊಸ ಭೂಮಿ”—ಈ ಭೂಗೋಳದ ಮೇಲೆ ಜೀವಿಸುವ ನೀತಿಯ ಮಾನವ ಕುಲ—ವನ್ನು ಆಳಲಿರುವ ಭವಿಷ್ಯದ ಸಮಯಕ್ಕೆ ಸೂಚಿಸಿದನು.—ಹೋಲಿಸಿ ಕೀರ್ತನೆ 96:1.
23. ಸದ್ಗುಣದ ಕುರಿತು ನಾವು ಯಾವ ಪ್ರಶ್ನೆಗಳನ್ನು ಮುಂದೆ ಚರ್ಚಿಸಲಿರುವೆವು?
23 ಯೆಹೋವನ ನಿಷ್ಠೆಯ ಸೇವಕರಾಗಿ ಮತ್ತು ಆತನ ಪ್ರಿಯ ಕುಮಾರನಾದ ಯೇಸು ಕ್ರಿಸ್ತನ ಹಿಂಬಾಲಕರಾಗಿ, ನಾವು ದೇವರ ವಾಗ್ದಾನಿತ ಹೊಸ ಲೋಕಕ್ಕಾಗಿ ಹಾತೊರೆಯುತ್ತೇವೆ. ಅದು ಹತ್ತಿರವಿದೆ ಎಂದು ನಮಗೆ ಗೊತ್ತಿದೆ, ಮತ್ತು ಯೆಹೋವನ ಅತ್ಯಮೂಲ್ಯ ವಾಗ್ದಾನಗಳೆಲ್ಲಾ ನೆರವೇರುವವು ಎಂದು ನಮಗೆ ನಂಬಿಕೆ ಇದೆ. ನಮ್ಮ ದೇವರ ಮುಂದೆ ಸ್ವೀಕರಣೀಯವಾಗಿ ನಡೆಯಲು, ಸದ್ಗುಣ, ಜ್ಞಾನ, ದಮೆ, ತಾಳ್ಮೆ, ದೇವ ಭಕ್ತಿ, ಸಹೋದರಸ್ನೇಹ, ಮತ್ತು ಪ್ರೀತಿಯನ್ನು ಒದಗಿಸಿ ನಮ್ಮ ನಂಬಿಕೆಯನ್ನು ಬಲಪಡಿಸಬೇಕು.a ಈ ಸಂದರ್ಭದಲ್ಲಿ, ಕೇಳಬಹುದಾದದ್ದೇನಂದರೆ, ನಾವು ಸದ್ಗುಣವನ್ನು ಪ್ರದರ್ಶಿಸುವುದು ಹೇಗೆ? ಮತ್ತು ನಾವು ಸದ್ಗುಣವುಳ್ಳವರಾಗಿರುವುದು ನಮಗೆ ಮತ್ತು ಇತರರಿಗೆ, ವಿಶೇಷವಾಗಿ ದೇವರ ನಂಬಿಕೆಯನ್ನು ಪ್ರದರ್ಶಿಸುವುದರ ಮೂಲಕ ದೇವರ ವಾಗ್ದಾನಗಳಿಗೆ ಪ್ರತಿಕ್ರಿಯಿಸಿದ ನಮ್ಮ ಕ್ರೈಸ್ತ ಸಹವಾಸಿಗಳಿಗೆ, ಹೇಗೆ ಪ್ರಯೋಜನಕಾರಿಯಾಗುವುದು?
[ಅಧ್ಯಯನ ಪ್ರಶ್ನೆಗಳು]
a ನಂಬಿಕೆ ಮತ್ತು ಸದ್ಗುಣಗಳು ಕಾವಲಿನಬುರುಜು ವಿನ ಈ ಸಂಚಿಕೆಯಲ್ಲಿ ಚರ್ಚಿಸಲ್ಪಟ್ಟಿವೆ. ಜ್ಞಾನ, ದಮೆ, ತಾಳ್ಮೆ, ದೇವ ಭಕ್ತಿ, ಸಹೋದರಸ್ನೇಹ, ಮತ್ತು ಪ್ರೀತಿಯು ಹೆಚ್ಚು ಪೂರ್ಣವಾಗಿ ಮುಂದಿನ ಸಂಚಿಕೆಗಳಲ್ಲಿ ಗಮನಿಸಲ್ಪಡುವವು.
ನಿಮ್ಮ ಉತ್ತರಗಳೇನು?
▫ “ನಂಬಿಕೆ”ಯನ್ನು ಹೇಗೆ ಸ್ಪಷ್ಟೀಕರಿಸಬಹುದು?
▫ ಎರಡನೇ ಪೇತ್ರ 1:5-7 ಕ್ಕನುಸಾರವಾಗಿ, ಯಾವ ಗುಣಗಳನ್ನು ನಮ್ಮ ನಂಬಿಕೆಗೆ ಒದಗಿಸಬೇಕು?
▫ ಯೇಸುವಿನ ರೂಪಾಂತರವು ನಮ್ಮ ನಂಬಿಕೆಯ ಮೇಲೆ ಯಾವ ಪ್ರಭಾವವನ್ನು ಬೀರಬೇಕು?
▫ ಹೇಬೆಲ, ಅಬ್ರಹಾಮ, ಸಾರ, ಮತ್ತು ಆದಿ ಕಾಲಗಳ ಇತರರಿಂದ ನಂಬಿಕೆಯ ಯಾವ ಮಾದರಿಗಳು ಒದಗಿಸಲ್ಪಟ್ಟಿದ್ದವು?
[ಪುಟ 15 ರಲ್ಲಿರುವ ಚಿತ್ರ]
ಯೇಸುವಿನ ರೂಪಾಂತರವು ಒಬ್ಬ ವ್ಯಕ್ತಿಯ ನಂಬಿಕೆಯನ್ನು ಹೇಗೆ ಪ್ರಭಾವಿಸುವುದೆಂದು ನಿಮಗೆ ಗೊತ್ತೊ?