ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 8/15 ಪು. 10-15
  • ಯೆಹೋವನು ನಮ್ಮ ಭರವಸೆಯಾಗಿರಬೇಕು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ನಮ್ಮ ಭರವಸೆಯಾಗಿರಬೇಕು
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಜ್ಞಾನ ಹಾಗೂ ಸ್ನೇಹದ ಮೇಲಾಧಾರಿತ ಭರವಸೆ
  • ಯೆಹೋವನ ಆಯ್ಕೆಗಳಲ್ಲಿ ಭರವಸೆಯನ್ನು ಪ್ರದರ್ಶಿಸುವುದು
  • ಯೆಹೋವನ ಆಯ್ಕೆಗಳಲ್ಲಿ ಸಂದೇಹಪಡಬೇಡಿರಿ
  • ಯೆಹೋವನ ನೀತಿಯಲ್ಲಿ ಭರವಸೆಯನ್ನು ಪ್ರದರ್ಶಿಸುವುದು
  • ದೇವರ ನೀತಿಯಲ್ಲಿ ನಮ್ಮ ಭರವಸೆಯನ್ನು ಬಲಪಡಿಸಿಕೊಳ್ಳುವುದು
    ಕಾವಲಿನಬುರುಜು—1998
  • ಭರವಸೆಯು ಪುನಸ್ಸ್ಥಾಪಿಸಲ್ಪಡಸಾಧ್ಯವಿದೆ!
    ಕಾವಲಿನಬುರುಜು—1998
  • ದೇವರ ಪ್ರೀತಿಯ ಮಹಾನ್‌ ಪುರಾವೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ‘ನೋಟದಿಂದಲ್ಲ, ನಂಬಿಕೆಯಿಂದ ನಡೆಯುವುದು’
    ಕಾವಲಿನಬುರುಜು—1998
ಇನ್ನಷ್ಟು
ಕಾವಲಿನಬುರುಜು—1998
w98 8/15 ಪು. 10-15

ಯೆಹೋವನು ನಮ್ಮ ಭರವಸೆಯಾಗಿರಬೇಕು

‘ಯೆಹೋವನು ನಿನ್ನ ಭರವಸಕ್ಕೆ ಆಧಾರನಾಗಿರುವನು.’—ಜ್ಞಾನೋಕ್ತಿ 3:26.

1. ದೇವರಲ್ಲಿ ಭರವಸೆಯಿಡುತ್ತೇವೆಂದು ಅನೇಕರು ಪ್ರತಿಪಾದಿಸುವುದಾದರೂ, ಅವರು ಯಾವಾಗಲೂ ಹಾಗೆ ಮಾಡುವುದಿಲ್ಲ ಎಂಬುದನ್ನು ಯಾವುದು ಸೂಚಿಸುತ್ತದೆ?

“ನಮ್ಮ ಭರವಸೆ ದೇವರಲ್ಲಿ” ಎಂಬ ಧ್ಯೇಯಮಂತ್ರವು ಅಮೆರಿಕದ ಹಣದ ಮೇಲೆ ಕಾಣಿಸಿಕೊಳ್ಳುತ್ತದೆ. ಆದರೆ ಈ ಹಣವನ್ನು—ಆ ದೇಶದಲ್ಲಾಗಲಿ ಬೇರೆಡೆಯಲ್ಲಾಗಲಿ—ಬಳಸುವವರೆಲ್ಲರು, ನಿಜವಾಗಿಯೂ ದೇವರಲ್ಲಿ ಭರವಸೆಯಿಡುತ್ತಾರೊ? ಇಲ್ಲವೆ ಅವರು ಹಣದ ಮೇಲೆಯೇ ಹೆಚ್ಚಿನ ಭರವಸೆಯನ್ನು ಇಡುತ್ತಾರೊ? ಆ ದೇಶದ ಇಲ್ಲವೆ ಬೇರೆ ಯಾವುದೇ ದೇಶದ ಹಣದ ಮೇಲಿನ ಭರವಸೆಯನ್ನು, ತನ್ನ ಅಧಿಕಾರವನ್ನು ಎಂದೂ ದುರುಪಯೋಗಿಸದ ಮತ್ತು ಯಾವ ವಿಧದಲ್ಲೂ ಅತ್ಯಾಶೆಯುಳ್ಳವನಾಗಿರದ ಪ್ರೀತಿಯ ಸರ್ವಶಕ್ತ ದೇವರಲ್ಲಿನ ಭರವಸೆಯೊಂದಿಗೆ ಸಮನ್ವಯ ಮಾಡಸಾಧ್ಯವಿಲ್ಲ. ವಾಸ್ತವದಲ್ಲಿ, ಆತನು ಅತ್ಯಾಶೆಯನ್ನು ಸ್ಪಷ್ಟವಾದ ಮಾತುಗಳಲ್ಲಿ ಖಂಡಿಸುತ್ತಾನೆ.—ಎಫೆಸ 5:5.

2. ಐಶ್ವರ್ಯದ ಶಕ್ತಿಯ ಬಗ್ಗೆ ನಿಜ ಕ್ರೈಸ್ತರಿಗೆ ಯಾವ ಮನೋಭಾವವಿದೆ?

2 ನಿಜ ಕ್ರೈಸ್ತರು ತಮ್ಮ ಭರವಸೆಯನ್ನು ‘ಮೋಸಕರ ಪ್ರಭಾವವುಳ್ಳ’ ಐಶ್ವರ್ಯದ ಮೇಲಲ್ಲ, ಬದಲಿಗೆ ದೇವರಲ್ಲಿ ಇಡುತ್ತಾರೆ. (ಮತ್ತಾಯ 13:22) ಸಂತೋಷವನ್ನು ಪ್ರವರ್ಧಿಸಲು ಮತ್ತು ಜೀವವನ್ನು ಕಾಪಾಡಲು ಹಣಕ್ಕಿರುವ ಶಕ್ತಿಯು ಬಹಳ ಸೀಮಿತವೆಂದು ಅವರು ಗ್ರಹಿಸುತ್ತಾರೆ. ಆದರೆ ಸರ್ವಶಕ್ತ ದೇವರ ಶಕ್ತಿಯ ಸಂಬಂಧದಲ್ಲಿ ಇದು ಸತ್ಯವಾಗಿರುವುದಿಲ್ಲ. (ಚೆಫನ್ಯ 1:18) ಆದುದರಿಂದ, “ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ,” ಎಂಬ ಬುದ್ಧಿವಾದವು ಎಷ್ಟೊಂದು ವಿವೇಕಯುತವಾಗಿದೆ!—ಇಬ್ರಿಯ 13:5.

3. ಧರ್ಮೋಪದೇಶಕಾಂಡ 31:6ರ ಪೂರ್ವಾಪರವು, ಈ ವಚನವನ್ನು ಪೌಲನು ಉದ್ಧರಿಸಿದುದರ ಮೇಲೆ ಹೇಗೆ ಬೆಳಕನ್ನು ಚೆಲ್ಲುತ್ತದೆ?

3 ಈ ಮೇಲಿನ ಮಾತುಗಳನ್ನು ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರಿಗೆ ಬರೆಯುತ್ತಿದ್ದಾಗ, ಮೋಶೆಯು ತನ್ನ ಮರಣಕ್ಕೆ ಮುಂಚೆ, ಇಸ್ರಾಯೇಲ್ಯರಿಗೆ ಕೊಟ್ಟಂತಹ ಉಪದೇಶಗಳನ್ನು ಅವನು ಉದ್ಧರಿಸಿದನು: “ನೀವು ಶೂರರಾಗಿ ಧೈರ್ಯದಿಂದಿರ್ರಿ; ಅವರಿಗೆ ಅಂಜಬೇಡಿರಿ; ಕಳವಳಪಡಬೇಡಿರಿ. ನಿಮ್ಮ ದೇವರಾದ ಯೆಹೋವನೇ ನಿಮ್ಮ ಸಂಗಡ ಇರುತ್ತಾನಲ್ಲಾ; ಆತನು ನಿಮ್ಮನ್ನು ಕೈಬಿಡುವದಿಲ್ಲ, ಅಪಜಯಕ್ಕೆ ಗುರಿಪಡಿಸುವದೇ ಇಲ್ಲ.” (ಧರ್ಮೋಪದೇಶಕಾಂಡ 31:6) ಅವರ ಭೌತಿಕ ಅಗತ್ಯಗಳನ್ನು ಪೂರೈಸುವಷ್ಟರ ಮಟ್ಟಿಗೆ ಮಾತ್ರ ಯೆಹೋವನಲ್ಲಿ ಭರವಸೆಯಿಡುವುದಕ್ಕಿಂತ, ಹೆಚ್ಚಿನ ಭರವಸೆಯನ್ನು ಮೋಶೆಯು ಇಲ್ಲಿ ಉತ್ತೇಜಿಸುತ್ತಿದ್ದನೆಂದು ಪೂರ್ವಾಪರವು ತೋರಿಸುತ್ತದೆ. ಅದು ಹೇಗೆ?

4. ದೇವರ ಮೇಲೆ ಭರವಸೆಯಿಡಸಾಧ್ಯವಿದೆ ಎಂಬುದನ್ನು ಆತನು ಇಸ್ರಾಯೇಲ್ಯರಿಗೆ ಹೇಗೆ ರುಜುಪಡಿಸಿದನು?

4 ಇಸ್ರಾಯೇಲ್‌ ರಾಷ್ಟ್ರವು 40 ವರ್ಷಗಳ ಕಾಲ ಅರಣ್ಯದಲ್ಲಿ ಅಲೆದಾಡುತ್ತಿದ್ದಾಗ, ಜೀವಿತದ ಆವಶ್ಯಕತೆಗಳನ್ನು ಅವರಿಗೆ ಒದಗಿಸುವುದರಲ್ಲಿ ದೇವರು ನಂಬಿಗಸ್ತನಾಗಿದ್ದನು. (ಧರ್ಮೋಪದೇಶಕಾಂಡ 2:7; 29:5) ಆತನು ನಾಯಕತ್ವವನ್ನೂ ಒದಗಿಸಿದನು. ಇದರ ಒಂದು ಅಭಿವ್ಯಕ್ತಿಯು, ಹಗಲಿನಲ್ಲಿ ಒಂದು ಮೇಘವಾಗಿಯೂ ರಾತ್ರಿಯಲ್ಲಿ ಅಗ್ನಿಯಾಗಿಯೂ ಇದ್ದು, ಇಸ್ರಾಯೇಲ್ಯರನ್ನು “ಹಾಲೂ ಜೇನೂ ಹರಿಯುವ . . . ದೇಶಕ್ಕೆ” ನಡೆಸಿತು. (ವಿಮೋಚನಕಾಂಡ 3:8; 40:36-38) ವಾಗ್ದತ್ತ ದೇಶವನ್ನು ವಾಸ್ತವವಾಗಿ ಪ್ರವೇಶಿಸುವ ಸಮಯವು ಸಮೀಪಿಸಿದಾಗ, ಮೋಶೆಯ ಉತ್ತರಾಧಿಕಾರಿಯಾಗಿ, ಯೆಹೋವನು ಯೆಹೋಶುವನನ್ನು ಆರಿಸಿದನು. ಆ ದೇಶದ ನಿವಾಸಿಗಳು ಪ್ರತಿಭಟಿಸುವರೆಂದು ನಿರೀಕ್ಷಿಸಸಾಧ್ಯವಿತ್ತು. ಆದರೆ ಯೆಹೋವನು ತನ್ನ ಜನರೊಂದಿಗೆ ಅನೇಕ ದಶಕಗಳಿಂದ ಮುನ್ನಡೆದಿದ್ದ ಕಾರಣ, ಇಸ್ರಾಯೇಲ್ಯರಿಗೆ ಭಯಪಡುವ ಅಗತ್ಯವಿರಲಿಲ್ಲ. ಭರವಸೆಯಿಡಸಾಧ್ಯವಿರುವ ಒಬ್ಬ ದೇವರೋಪಾದಿ ಯೆಹೋವನನ್ನು ತಿಳಿದುಕೊಳ್ಳಲು, ಇಸ್ರಾಯೇಲ್ಯರಿಗೆ ಸಕಾರಣವಿತ್ತು!

5. ಇಂದು ಕ್ರೈಸ್ತರ ಸನ್ನಿವೇಶವು, ವಾಗ್ದತ್ತ ದೇಶವನ್ನು ಪ್ರವೇಶಿಸುವ ಮೊದಲು ಇಸ್ರಾಯೇಲ್ಯರ ಸನ್ನಿವೇಶದಂತಿದೆ ಹೇಗೆ?

5 ಇಂದು ಕ್ರೈಸ್ತರು, ದೇವರ ನೂತನ ಲೋಕಕ್ಕೆ ಹೋಗುವ ದಾರಿಯಲ್ಲಿ, ಪ್ರಸ್ತುತ ದುಷ್ಟ ಲೋಕದ ಅರಣ್ಯವನ್ನು ದಾಟಿಕೊಂಡು ಹೋಗುತ್ತಿದ್ದಾರೆ. ಅವರಲ್ಲಿ ಕೆಲವರು ಈ ಮಾರ್ಗದಲ್ಲಿ 40 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಪಯಣಿಸುತ್ತಿದ್ದಾರೆ. ಈಗ ಅವರು ದೇವರ ನೂತನ ಲೋಕದ ಗಡಿಯ ಮೇಲೆ ನಿಂತಿದ್ದಾರೆ. ಆದರೂ, ವೈರಿಗಳು ಇನ್ನೂ ದಾರಿಯಲ್ಲಿ ಅಡ್ಡನಿಂತು, ಹಾಲೂ ಜೇನೂ ಹರಿದಂತಹ ಪ್ರಾಚೀನ ದೇಶಕ್ಕಿಂತಲೂ, ಹೆಚ್ಚು ಮಹಿಮಾಭರಿತವಾದ ವಾಗ್ದತ್ತ ದೇಶದೊಳಗೆ ಪ್ರವೇಶಿಸುವುದರಿಂದ ಎಲ್ಲರನ್ನು ತಡೆಯಲು ನಿಶ್ಚಯಿಸಿದ್ದಾರೆ. ಆದುದರಿಂದ ಇಂದಿನ ಕ್ರೈಸ್ತರಿಗೆ, “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ” ಎಂದು ಪೌಲನಿಂದ ಪುನರುಚ್ಚರಿಸಲ್ಪಟ್ಟ ಮೋಶೆಯ ಮಾತುಗಳು ಎಷ್ಟು ಸೂಕ್ತವಾಗಿವೆ. ಯಾರು ಬಲಿಷ್ಠರೂ ಧೈರ್ಯವಂತರೂ ಆಗಿ ಉಳಿದು, ಪೂರ್ಣ ನಂಬಿಕೆಯಿಂದ ಯೆಹೋವನಲ್ಲಿ ಭರವಸೆಯನ್ನು ಇಡುತ್ತಾರೊ, ಅವರೆಲ್ಲರಿಗೂ ಬಹುಮಾನದ ಖಾತ್ರಿಯಿದೆ.

ಜ್ಞಾನ ಹಾಗೂ ಸ್ನೇಹದ ಮೇಲಾಧಾರಿತ ಭರವಸೆ

6, 7. (ಎ) ಯೆಹೋವನಲ್ಲಿ ಅಬ್ರಹಾಮನಿಗಿದ್ದ ಭರವಸೆಯನ್ನು ಯಾವುದು ಪರೀಕ್ಷೆಗೆ ಒಳಪಡಿಸಿತು? (ಬಿ) ಇಸಾಕನನ್ನು ಬಲಿ ಅರ್ಪಿಸಲಿದ್ದ ಸ್ಥಳಕ್ಕೆ ಅಬ್ರಹಾಮನು ಹೋಗುತ್ತಿದ್ದಾಗ, ಅವನಿಗೆ ಹೇಗೆ ಅನಿಸಿದ್ದಿರಬಹುದು?

6 ಒಂದು ಹಂತದಲ್ಲಿ, ಇಸ್ರಾಯೇಲ್ಯರ ಪೂರ್ವಜನಾದ ಅಬ್ರಹಾಮನು, ತನ್ನ ಮಗನಾದ ಇಸಾಕನನ್ನು ಸರ್ವಾಂಗಹೋಮವಾಗಿ ಅರ್ಪಿಸುವಂತೆ ಆಜ್ಞಾಪಿಸಲ್ಪಟ್ಟನು. (ಆದಿಕಾಂಡ 22:2) ಕೂಡಲೇ ಮನಃಪೂರ್ವಕವಾಗಿ ವಿಧೇಯನಾಗಲು ಸಿದ್ಧನಾಗಿರುವಂತೆ, ಈ ಪ್ರೀತಿಪರ ತಂದೆಗೆ ಯೆಹೋವನಲ್ಲಿ ಇಂತಹ ದೃಢಭರವಸೆಯನ್ನು ಇಡಲು ಯಾವುದು ಶಕ್ತಗೊಳಿಸಿತು? ಇಬ್ರಿಯ 11:17-19 ಉತ್ತರಿಸುವುದು: “ಅಬ್ರಹಾಮನು ಪರಿಶೋಧಿತನಾಗಿ ನಂಬಿಕೆಯಿಂದಲೇ ಇಸಾಕನನ್ನು ಸಮರ್ಪಿಸಿದನು. ಇಸಾಕನು ಅವನ ಏಕಪುತ್ರನಾಗಿದ್ದರೂ ಮತ್ತು ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರೆಂದು ದೇವರು ಅವನಿಗೆ ಹೇಳಿದ್ದರೂ ಆ ವಾಗ್ದಾನಗಳನ್ನು ಹೊಂದಿದ ಅವನು ಆ ಒಬ್ಬನೇ ಮಗನನ್ನು ಸಮರ್ಪಿಸುವದಕ್ಕಿದ್ದನು. ತನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸ ಸಮರ್ಥನಾಗಿದ್ದಾನೆಂದು ತಿಳುಕೊಂಡನು. ಮತ್ತು ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಹೊಂದಿದನು.”

7 ಬಲಿ ಅರ್ಪಿಸಲಿರುವ ಸ್ಥಳವನ್ನು ಹೋಗಿಸೇರಲು ಅಬ್ರಹಾಮ ಮತ್ತು ಇಸಾಕರಿಗೆ ಮೂರು ದಿನಗಳು ಹಿಡಿದವು ಎಂಬುದನ್ನು ಜ್ಞಾಪಿಸಿಕೊಳ್ಳಿರಿ. (ಆದಿಕಾಂಡ 22:4) ಅವನು ಏನನ್ನು ಮಾಡುವಂತೆ ಕೇಳಿಕೊಳ್ಳಲ್ಪಟ್ಟನೊ, ಅದರ ಕುರಿತು ಮತ್ತೆ ಯೋಚಿಸಲು ಅಬ್ರಹಾಮನಿಗೆ ಸಾಕಷ್ಟು ಸಮಯವಿತ್ತು. ಅವನ ಅನಿಸಿಕೆಗಳನ್ನು ಮತ್ತು ಭಾವನೆಗಳನ್ನು ನಾವು ಊಹಿಸಿಕೊಳ್ಳಸಾಧ್ಯವೊ? ಇಸಾಕನ ಜನನವು ಆನಂದದ ಎಂತಹ ಅನಿರೀಕ್ಷಿತ ಕಾರಣವಾಗಿತ್ತು. ದೈವಿಕ ಹಸ್ತಕ್ಷೇಪದ ಆ ಪ್ರಮಾಣವು, ಅಬ್ರಹಾಮನಿಗೆ ಮತ್ತು ಈ ಮೊದಲು ಬಂಜೆಯಾಗಿದ್ದ ಅವನ ಹೆಂಡತಿ ಸಾರಳಿಗೆ ದೇವರೊಂದಿಗಿದ್ದ ಸಂಬಂಧವನ್ನು ಗಾಢವಾಗಿಸಿತು. ಇಸಾಕನಿಗೆ ಮತ್ತು ಅವನ ಸಂತತಿಗೆ ಭವಿಷ್ಯತ್ತು ಏನನ್ನು ಕಾದಿರಿಸಿತ್ತೊ, ಅದರ ನಿರೀಕ್ಷೆಯಲ್ಲಿ ಅವರು ತದನಂತರ ಜೀವಿಸಿದರೆಂಬುದು ಖಂಡಿತ. ಆದರೆ ದೇವರು ಈಗ ಏನನ್ನು ಕೇಳಿಕೊಂಡಿದ್ದನೊ ಅದರಿಂದಾಗಿ ಅವರ ಕನಸುಗಳು ಏಕಾಏಕಿಯಾಗಿ ಕೊನೆಗೊಳ್ಳುತ್ತಿದ್ದವೊ?

8. ದೇವರಲ್ಲಿ ಅಬ್ರಹಾಮನಿಗಿದ್ದ ಭರವಸೆಯು, ಆತನು ಇಸಾಕನನ್ನು ಪುನರುತ್ಥಾನಗೊಳಿಸಲು ಸಾಧ್ಯವೆಂಬ ನಂಬಿಕೆಗಿಂತ ಮಿಗಿಲಾಗಿತ್ತು ಹೇಗೆ?

8 ಆದರೂ, ಆಪ್ತ ಮಿತ್ರರಿಗೆ ಪರಸ್ಪರರ ಕುರಿತಿರುವ ವೈಯಕ್ತಿಕ ಜ್ಞಾನದ ಮೇಲಾಧಾರಿತವಾದ ಭರವಸೆಯು ಅಬ್ರಹಾಮನಿಗಿತ್ತು. ‘ಯೆಹೋವನ ಸ್ನೇಹಿತ’ನೋಪಾದಿ, ಅಬ್ರಹಾಮನು “ದೇವರನ್ನು ನಂಬಿದನು; ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು.” (ಯಾಕೋಬ 2:23) ಯೆಹೋವನಲ್ಲಿ ಅಬ್ರಹಾಮನ ಭರವಸೆಯು, ಕೇವಲ ದೇವರು ಇಸಾಕನನ್ನು ಪುನರುತ್ಥಾನಗೊಳಿಸಲು ಸಾಧ್ಯವಿತ್ತೆಂದು ನಂಬುವುದಕ್ಕಿಂತಲೂ ಹೆಚ್ಚಾಗಿತ್ತು. ಅಬ್ರಹಾಮನಿಗೆ ಎಲ್ಲ ನಿಜತ್ವಗಳ ಅರಿವಿಲ್ಲದಿದ್ದರೂ, ಯೆಹೋವನು ಅವನಿಂದ ಏನನ್ನು ಕೇಳಿಕೊಳ್ಳುತ್ತಿದ್ದನೊ ಅದು ಯೋಗ್ಯವಾಗಿಯೇ ಇತ್ತೆಂಬ ಮನವರಿಕೆಯೂ ಅವನಿಗಿತ್ತು. ಈ ವಿನಂತಿಯನ್ನು ಮಾಡುವುದರಲ್ಲಿ, ಯೆಹೋವನು ನೀತಿವಂತನಾಗಿದ್ದನೆಂಬುದನ್ನು ಶಂಕಿಸಲು ಅವನಿಗೆ ಯಾವ ಕಾರಣವೂ ಇರಲಿಲ್ಲ. ತರುವಾಯ, ಇಸಾಕನು ಯಜ್ಞಾರ್ಪಣೆಯಲ್ಲಿ ವಾಸ್ತವವಾಗಿ ಕೊಲ್ಲಲ್ಪಡುವುದನ್ನು ತಡೆಯಲು ಯೆಹೋವನ ದೇವದೂತನು ಮಧ್ಯ ಪ್ರವೇಶಿಸಿದಂತೆ, ಅಬ್ರಹಾಮನ ಭರವಸೆಯು ಬಲಗೊಂಡಿತು.—ಆದಿಕಾಂಡ 22:9-14.

9, 10. (ಎ) ಅಬ್ರಹಾಮನು ಈ ಮೊದಲು ಯೆಹೋವನಲ್ಲಿ ಭರವಸೆಯನ್ನು ಯಾವಾಗ ಪ್ರದರ್ಶಿಸಿದ್ದನು? (ಬಿ) ಅಬ್ರಹಾಮನಿಂದ ನಾವು ಯಾವ ಪ್ರಮುಖ ಪಾಠವನ್ನು ಕಲಿಯಸಾಧ್ಯವಿದೆ?

9 ಅಬ್ರಹಾಮನು ಯೆಹೋವನ ನೀತಿಯಲ್ಲಿ, ಇದೇ ರೀತಿಯ ಭರವಸೆಯನ್ನು ಸುಮಾರು 25 ವರ್ಷಗಳ ಹಿಂದೆ ಪ್ರದರ್ಶಿಸಿದ್ದನು. ಸೊದೋಮ್‌ ಗೊಮೋರ ಪಟ್ಟಣಗಳು ನಾಶವಾಗಲಿದ್ದವೆಂದು ಎಚ್ಚರಿಸಿದಾಗ, ತನ್ನ ಸೋದರಳಿಯನಾದ ಲೋಟನನ್ನು ಒಳಗೊಂಡು, ಅಲ್ಲಿ ಜೀವಿಸುತ್ತಿದ್ದ ಪ್ರತಿಯೊಬ್ಬ ನೀತಿವಂತನ ಕ್ಷೇಮದ ಕುರಿತು ಅವನು ಚಿಂತಿತನಾಗಿದ್ದದ್ದು ಸ್ವಾಭಾವಿಕವೇ. ಈ ಮಾತುಗಳಿಂದ ಅಬ್ರಹಾಮನು ದೇವರಿಗೆ ಮನವಿಮಾಡಿಕೊಂಡನು: “ಆ ರೀತಿಯಾಗಿ ದುಷ್ಟರಿಗೂ ಶಿಷ್ಟರಿಗೂ ಭೇದಮಾಡದೆ ದುಷ್ಟರ ಸಂಗಡ ನೀತಿವಂತರನ್ನೂ ಸಂಹರಿಸುವದು ನಿನ್ನಿಂದ ಎಂದಿಗೂ ಆಗಬಾರದು; ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ.”—ಆದಿಕಾಂಡ 18:25.

10 ಯೆಹೋವನ ಯಾವ ಕೃತ್ಯಗಳಲ್ಲೂ ಅನೀತಿಯಿಲ್ಲವೆಂದು ಪೂರ್ವಜನಾದ ಅಬ್ರಹಾಮನಿಗೆ ಮನವರಿಕೆಯಾಗಿತ್ತು. ಕೀರ್ತನೆಗಾರನು ತದನಂತರ ಹಾಡಿದ್ದು: “ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು; ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆತೋರಿಸುವವನು.” (ಕೀರ್ತನೆ 145:17) ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳುವುದು ಒಳ್ಳೆಯದು: ‘ಯೆಹೋವನ ನೀತಿಯ ಬಗ್ಗೆ ಸಂದೇಹಿಸದೆ, ನಾನು ಅನುಭವಿಸುವಂತೆ ಆತನು ಅನುಮತಿಸುವ ವಿಷಯಗಳನ್ನು ನಾನು ಸ್ವೀಕರಿಸುತ್ತೇನೊ? ಆತನು ಅನುಮತಿಸುವ ಯಾವುದೇ ಸಂಗತಿಯೂ, ನನ್ನ ಒಳಿತಿಗಾಗಿ ಮತ್ತು ಇತರರ ಒಳಿತಿಗಾಗಿಯೂ ಇರುವುದೆಂಬ ಮನವರಿಕೆ ನನಗಿದೆಯೊ?’ ನಾವು ಹೌದೆಂದು ಉತ್ತರಿಸುವುದಾದರೆ, ನಾವು ಅಬ್ರಹಾಮನಿಂದ ಒಂದು ಪ್ರಾಮುಖ್ಯ ಪಾಠವನ್ನು ಕಲಿತುಕೊಂಡಿದ್ದೇವೆ.

ಯೆಹೋವನ ಆಯ್ಕೆಗಳಲ್ಲಿ ಭರವಸೆಯನ್ನು ಪ್ರದರ್ಶಿಸುವುದು

11, 12. (ಎ) ದೇವರ ಸೇವಕರಿಗೆ ಭರವಸೆಯ ಯಾವ ಅಂಶವು ಅತ್ಯಗತ್ಯವಾಗಿದೆ? (ಬಿ) ಕೆಲವೊಮ್ಮೆ ಯಾವುದು ನಮಗೊಂದು ಸಮಸ್ಯೆಯಾಗಿರಬಹುದು?

11 ಯೆಹೋವನನ್ನು ತಮ್ಮ ಭರವಸೆಯಾಗಿ ವೀಕ್ಷಿಸುವವರು, ಆತನ ಉದ್ದೇಶಗಳ ನೆರವೇರಿಕೆಗಾಗಿ, ಆತನು ಆಯ್ಕೆಮಾಡುವ ಪುರುಷರಲ್ಲಿಯೂ ಭರವಸೆಯಿಡುತ್ತಾರೆ. ಇಸ್ರಾಯೇಲ್ಯರಿಗೆ ಇದು, ಮೋಶೆಯಲ್ಲಿ ಮತ್ತು ತದನಂತರ ಅವನ ಉತ್ತರಾಧಿಕಾರಿಯಾದ ಯೆಹೋಶುವನಲ್ಲಿ ಭರವಸೆಯನ್ನು ತೋರಿಸುವುದನ್ನು ಅರ್ಥೈಸಿತು. ಆದಿ ಕ್ರೈಸ್ತರಿಗೆ, ಅದು ಅಪೊಸ್ತಲರಲ್ಲಿ ಮತ್ತು ಯೆರೂಸಲೇಮ್‌ ಸಭೆಯ ಹಿರಿಯ ಪುರುಷರಲ್ಲಿ ಭರವಸೆಯನ್ನು ತೋರಿಸುವುದನ್ನು ಅರ್ಥೈಸಿತು. ಇಂದು ನಮಗೆ, “ಹೊತ್ತುಹೊತ್ತಿಗೆ” ಆತ್ಮಿಕ “ಆಹಾರ” ಕೊಡಲಿಕ್ಕೆ ನೇಮಿಸಲ್ಪಟ್ಟ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗದಲ್ಲಿ ಮತ್ತು ಆ ವರ್ಗದವರಿಂದ ಯಾರು ಆಡಳಿತ ಮಂಡಲಿಯನ್ನು ರಚಿಸುತ್ತಾರೊ, ಅವರಲ್ಲಿ ಭರವಸೆ ಇಡುವುದನ್ನು ಅದು ಅರ್ಥೈಸುತ್ತದೆ.—ಮತ್ತಾಯ 24:45.

12 ವಾಸ್ತವದಲ್ಲಿ, ಕ್ರೈಸ್ತ ಸಭೆಯಲ್ಲಿ ನಾಯಕತ್ವವನ್ನು ವಹಿಸುತ್ತಿರುವವರಲ್ಲಿ, ನಮ್ಮ ಭರವಸೆಯನ್ನು ಇಡುವುದು ನಮ್ಮ ಪ್ರಯೋಜನಕ್ಕಾಗಿಯೇ ಆಗಿದೆ. ನಮಗೆ ಹೀಗೆ ಹೇಳಲಾಗಿದೆ: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.”—ಇಬ್ರಿಯ 13:17.

ಯೆಹೋವನ ಆಯ್ಕೆಗಳಲ್ಲಿ ಸಂದೇಹಪಡಬೇಡಿರಿ

13. ನಾಯಕತ್ವವನ್ನು ವಹಿಸಲು ನೇಮಿಸಲ್ಪಟ್ಟವರಲ್ಲಿ ಭರವಸೆಯಿಡಲು ನಮಗೆ ಯಾವ ಕಾರಣವಿದೆ?

13 ಯೆಹೋವನ ಜನರ ಮಧ್ಯೆ ನಾಯಕತ್ವವನ್ನು ವಹಿಸುತ್ತಿರುವವರಲ್ಲಿ ಭರವಸೆಯನ್ನು ತೋರಿಸುವ ವಿಷಯದಲ್ಲಿ ಸಮತೂಕವುಳ್ಳವರಾಗಿರಲು ಬೈಬಲು ನಮಗೆ ಸಹಾಯ ಮಾಡುತ್ತದೆ. ನಾವು ಸ್ವತಃ ಹೀಗೆ ಕೇಳಿಕೊಳ್ಳಬಹುದು: ‘ಮೋಶೆಯು ಎಂದಾದರೂ ತಪ್ಪುಗಳನ್ನು ಮಾಡಿದನೊ? ಅಪೊಸ್ತಲರಲ್ಲಿ ಇರಬೇಕೆಂದು ಯೇಸುವು ಬಯಸಿದ್ದ ಕ್ರಿಸ್ತಸದೃಶ ಮನೋಭಾವವನ್ನು ಅವರು ಸದಾ ಪ್ರದರ್ಶಿಸಿದರೊ?’ ಉತ್ತರಗಳು ಸ್ಪಷ್ಟವಾಗಿವೆ. ತನ್ನ ಜನರನ್ನು ಮಾರ್ಗದರ್ಶಿಸಲು ಯೆಹೋವನು ನಿಷ್ಠಾವಂತ ಹಾಗೂ ದೈವಭಕ್ತಿಯುಳ್ಳ ಪುರುಷರನ್ನು, ಅವರು ಅಪರಿಪೂರ್ಣರಾಗಿದ್ದರೂ ಆಯ್ದುಕೊಂಡಿದ್ದಾನೆ. ಅಂತೆಯೇ, ಇಂದು ಹಿರಿಯರು ಅಪರಿಪೂರ್ಣರಾಗಿದ್ದರೂ, “ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮನು . . . ಅಧ್ಯಕ್ಷರಾಗಿ ಇಟ್ಟಿರು”ವವರೆಂದು ಅವರು ಗ್ರಹಿಸತಕ್ಕದ್ದು. ಅವರು ನಮ್ಮ ಬೆಂಬಲ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ.—ಅ. ಕೃತ್ಯಗಳು 20:28.

14. ನಾಯಕರೋಪಾದಿ ಆರೋನನನ್ನು ಇಲ್ಲವೆ ಮಿರ್ಯಾಮಳನ್ನು ಆಯ್ದುಕೊಳ್ಳುವ ಬದಲಿಗೆ, ಯೆಹೋವನು ಮೋಶೆಯನ್ನು ಆಯ್ದುಕೊಂಡದ್ದರಲ್ಲಿ ಯಾವ ವಿಷಯವು ಎದ್ದುಕಾಣುವಂತಹದ್ದಾಗಿದೆ?

14 ಆರೋನನು ಮೋಶೆಗಿಂತ ಮೂರು ವರುಷ ದೊಡ್ಡವನಾಗಿದ್ದನು, ಮತ್ತು ಅವರಿಬ್ಬರೂ ತಮ್ಮ ಅಕ್ಕ ಮಿರ್ಯಾಮಳಿಗಿಂತ ಚಿಕ್ಕವರಾಗಿದ್ದರು. (ವಿಮೋಚನಕಾಂಡ 2:3, 4; 7:7) ಮತ್ತು ಮೋಶೆಗಿಂತಲೂ ಆರೋನನು ನಿರರ್ಗಳವಾಗಿ ಮಾತಾಡುತ್ತಿದ್ದುದರಿಂದ, ಅವನು ತನ್ನ ತಮ್ಮನ ವದನಕನಾಗಿ ಕಾರ್ಯಮಾಡಲು ನೇಮಿಸಲ್ಪಟ್ಟನು. (ವಿಮೋಚನಕಾಂಡ 6:29—7:2) ಆದರೂ, ಇಸ್ರಾಯೇಲ್ಯರನ್ನು ಮುನ್ನಡೆಸಲು ಯೆಹೋವನು ಅವರಲ್ಲಿ ಹಿರಿಯವಳಾದ ಮಿರ್ಯಾಮಳನ್ನು ಇಲ್ಲವೆ ಹೆಚ್ಚು ನಿರರ್ಗಳ ವಾಗ್ಮಿಯಾದ ಆರೋನನನ್ನು ಆಯ್ದುಕೊಳ್ಳಲಿಲ್ಲ. ಆ ಗಳಿಗೆಯ ಎಲ್ಲ ನಿಜತ್ವಗಳನ್ನು ಮತ್ತು ಅಗತ್ಯಗಳನ್ನು ಪೂರ್ಣವಾಗಿ ಅರಿತುಕೊಂಡವನಾಗಿಯೇ ಆತನು ಮೋಶೆಯನ್ನು ಆಯ್ದುಕೊಂಡನು. ಸ್ವಲ್ಪ ಸಮಯಕ್ಕಾಗಿ ಆರೋನ ಮತ್ತು ಮಿರ್ಯಾಮರು ಈ ಸ್ಪಷ್ಟವಾದ ಒಳನೋಟವನ್ನು ಗ್ರಹಿಸದಿದ್ದಾಗ, ಅವರು ದೂರಿದ್ದು: “ಯೆಹೋವನು ಮೋಶೆಯ ಮೂಲಕವಾಗಿ ಮಾತ್ರವೇ ಮಾತಾಡಿದ್ದಾನೋ; ನಮ್ಮ ಮೂಲಕವೂ ಆತನು ಮಾತಾಡಲಿಲ್ಲವೇ”? ಮಿರ್ಯಾಮಳು ಬಹುಶಃ ಅಗ್ರಗಣ್ಯ ಪ್ರಚೋದಕಳಾಗಿದ್ದ ಕಾರಣ, ಯೆಹೋವನ ಆಯ್ಕೆಯನ್ನು—ಯಾರನ್ನು ಅವಳೂ ಆರೋನನೂ “ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕ”ನೆಂದು ಗ್ರಹಿಸಬೇಕಾಗಿತ್ತೊ ಅವನ—ಕಡೆಗೆ ಅವಳು ವ್ಯಕ್ತಪಡಿಸಿದ ಈ ಅಗೌರವಪೂರ್ಣ ಮನೋಭಾವಕ್ಕೆ ದಂಡಿಸಲ್ಪಟ್ಟಳು.—ಅರಣ್ಯಕಾಂಡ 12:1-3, 9-15.

15, 16. ತನಗೆ ಯೆಹೋವನಲ್ಲಿ ಭರವಸೆಯಿದೆ ಎಂಬುದನ್ನು ಕಾಲೇಬನು ಹೇಗೆ ರುಜುಪಡಿಸಿದನು?

15 ವಾಗ್ದತ್ತ ದೇಶವನ್ನು ಪರಿಶೀಲಿಸಲು 12 ಮಂದಿ ಗೂಢಚಾರರನ್ನು ಕಳುಹಿಸಿದಾಗ, ಅವರಲ್ಲಿ 10 ಮಂದಿ ನಕಾರಾತ್ಮಕ ವರದಿಯನ್ನು ನೀಡಿದರು. “ಉನ್ನತರಾದ” ಕಾನಾನ್ಯ “ಪುರುಷರ” ಕುರಿತು ಮಾತನಾಡುವ ಮೂಲಕ ಅವರು ಇಸ್ರಾಯೇಲ್ಯರ ಹೃದಯಗಳಲ್ಲಿ ಭಯವನ್ನು ಹುಟ್ಟಿಸಿದರು. ಈ ಕಾರಣ, ಇಸ್ರಾಯೇಲ್ಯರು “ಮೋಶೆ ಆರೋನರಿಗೆ ವಿರೋಧವಾಗಿ ಗುಣುಗುಟ್ಟಿ”ದರು. ಆದರೆ ಗೂಢಚಾರರಲ್ಲಿ ಎಲ್ಲರೂ, ಮೋಶೆ ಮತ್ತು ಯೆಹೋವನಲ್ಲಿ ಭರವಸೆಯ ಕೊರತೆಯನ್ನು ಪ್ರದರ್ಶಿಸಲಿಲ್ಲ. ನಾವು ಓದುವುದು: “ಇಸ್ರಾಯೇಲ್ಯರು ಮೋಶೆಗೆ ವಿರೋಧವಾಗಿ ಗುಣುಗುಟ್ಟಲಾಗಿ ಕಾಲೇಬನು ಅವರನ್ನು ಸುಮ್ಮನಿರಿಸಿ—ನಾವು ನಿರ್ಭಯವಾಗಿ ಆ ಬೆಟ್ಟದ ಸೀಮೆಗೆ ಹತ್ತಿಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳೋಣ; ಅದನ್ನು ಜಯಿಸಬಲ್ಲೆವು ಎಂದು ಹೇಳಿದನು.” (ಅರಣ್ಯಕಾಂಡ 13:2, 25-33; 14:2) ಕಾಲೇಬನ ದೃಢನಿಲುವು ಅವನ ಜೊತೆ ಗೂಢಚಾರನಾದ ಯೆಹೋಶುವನಲ್ಲಿಯೂ ಇತ್ತು. ಅವರಿಬ್ಬರೂ ಯೆಹೋವನನ್ನು ತಮ್ಮ ಭರವಸೆಯನ್ನಾಗಿ ಮಾಡಿಕೊಂಡಿದ್ದರೆಂದು, ಹೀಗೆ ಹೇಳುವ ಮೂಲಕ ತೋರ್ಪಡಿಸಿದರು: “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು; ಅದು ಹಾಲೂ ಜೇನೂ ಹರಿಯುವ ದೇಶ; ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಅದರಲ್ಲಿ ನಮ್ಮನ್ನು ಸೇರಿಸಿ ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು; . . . ಅದಲ್ಲದೆ ಆ ದೇಶದ ಜನರಿಗೆ ದಿಗಿಲುಪಡಬೇಡಿರಿ; . . . ನಮ್ಮ ಕಡೆ ಯೆಹೋವನು ಇದ್ದಾನೆ; ಅವರಿಗೆ ಭಯಪಡಬೇಡಿರಿ.” (ಅರಣ್ಯಕಾಂಡ 14:6-9) ಯೆಹೋವನಲ್ಲಿ ಅವರು ತೋರ್ಪಡಿಸಿದ ಭರವಸೆಯು ಬಹುಮಾನಿಸಲ್ಪಟ್ಟಿತು. ಆ ಸಮಯದಲ್ಲಿ ಜೀವಂತರಾಗಿದ್ದ ವಯಸ್ಕರಲ್ಲಿ, ಕಾಲೇಬ, ಯೆಹೋಶುವ ಮತ್ತು ಕೆಲವು ಲೇವಿಯರು ಮಾತ್ರ ವಾಗ್ದತ್ತ ದೇಶವನ್ನು ಪ್ರವೇಶಿಸುವ ಸುಯೋಗವನ್ನು ಪಡೆದಿದ್ದರು.

16 ಕೆಲವು ವರುಷಗಳ ತರುವಾಯ ಕಾಲೇಬನು ಹೇಳಿದ್ದು: “ನಾನಾದರೋ ನನ್ನ ದೇವರಾದ ಯೆಹೋವನನ್ನೇ ಸಂಪೂರ್ಣವಾಗಿ ನಂಬಿಕೊಂಡು ಯಥಾರ್ಥವನ್ನೇ ಹೇಳಿದೆನು. . . . ಯೆಹೋವನು ಈ ಮಾತುಗಳನ್ನು ಮೋಶೆಗೆ ಹೇಳಿದಂದಿನಿಂದ ಇಸ್ರಾಯೇಲ್ಯರು ಅರಣ್ಯದಲ್ಲಿ ಅಲೆಯುತ್ತಿದ್ದ ವರುಷಗಳೂ ಸೇರಿ ನಾಲ್ವತ್ತೈದು ವರುಷಗಳು ದಾಟಿದವು. ಯೆಹೋವನು ತಾನು ನುಡಿದಂತೆಯೇ ಈ ಕಾಲವೆಲ್ಲಾ ನನ್ನನ್ನು ಜೀವದಿಂದುಳಿಸಿದ್ದಾನೆ. ಈಗ ನಾನು ಎಂಭತ್ತೈದು ವರುಷದವನಾಗಿದ್ದೇನೆ. ಮೋಶೆಯು ನನ್ನನ್ನು ಕಳುಹಿಸಿದಾಗ ನನಗೆಷ್ಟು ಬಲವಿತ್ತೋ ಈಗಲೂ ಅಷ್ಟಿದೆ. . . . ನನಗೆ ಮುಂಚಿನಂತೆಯೇ ಶಕ್ತಿಯಿರುತ್ತದೆ.” (ಯೆಹೋಶುವ 14:6-11) ಕಾಲೇಬನ ಸಕಾರಾತ್ಮಕ ಮನೋಭಾವ, ಅವನ ನಂಬಿಗಸ್ತಿಕೆ, ಮತ್ತು ಅವನ ಶಾರೀರಿಕ ಸಾಮರ್ಥ್ಯಗಳನ್ನು ಗಮನಿಸಿರಿ. ಆದರೂ, ಮೋಶೆಯ ಉತ್ತರಾಧಿಕಾರಿಯಾಗಿರಲು ಯೆಹೋವನು ಕಾಲೇಬನನ್ನು ಆಯ್ದುಕೊಂಡಿರಲಿಲ್ಲ. ಈ ಸುಯೋಗವು ಯೆಹೋಶುವನಿಗೆ ನೀಡಲ್ಪಟ್ಟಿತ್ತು. ಯೆಹೋವನಿಗೆ ಈ ಆಯ್ಕೆ ಮಾಡಲು ಕಾರಣಗಳಿದ್ದವು, ಮತ್ತು ಅದು ಅತ್ಯುತ್ತಮವಾದ ಆಯ್ಕೆಯಾಗಿತ್ತೆಂಬ ಭರವಸೆ ನಮಗಿರಸಾಧ್ಯವಿದೆ.

17. ಪೇತ್ರನು ಹೊಣೆಗಾರಿಕೆಗೆ ಅನರ್ಹನೆಂಬುದನ್ನು ಯಾವುದು ತೋರ್ಪಡಿಸಿದ್ದಿರಬಹುದು?

17 ಅಪೊಸ್ತಲ ಪೇತ್ರನು ತನ್ನ ಯಜಮಾನನನ್ನು ಮೂರು ಬಾರಿ ಅಲ್ಲಗಳೆದನು. ಅವನು ಮಹಾಯಾಜಕನ ದಾಸನ ಕಿವಿಯನ್ನು ಕತ್ತರಿಸಿಹಾಕುತ್ತಾ, ದುಡುಕಿನಿಂದ ವಿಷಯಗಳನ್ನು ತಾನೇ ನಿರ್ವಹಿಸಿದ್ದನು. (ಮತ್ತಾಯ 26:47-55, 69-75; ಯೋಹಾನ 18:10, 11) ಪೇತ್ರನು ಅಂಜುಬುರುಕನೂ ಸಮತೂಕವಿಲ್ಲದ ವ್ಯಕ್ತಿಯೂ ಆಗಿದ್ದು, ವಿಶೇಷ ಸುಯೋಗಗಳನ್ನು ಅನುಭವಿಸುವುದಕ್ಕೆ ಅನರ್ಹನಾಗಿದ್ದನೆಂದು ಕೆಲವರು ಹೇಳಬಹುದು. ಆದರೂ, ಮೂರು ಗುಂಪುಗಳವರಿಗೆ ಸ್ವರ್ಗೀಯ ಕರೆಗೆ ದಾರಿಯನ್ನು ತೆರೆಯಲು, ರಾಜ್ಯದ ಕೀಲಿ ಕೈಗಳನ್ನು ಉಪಯೋಗಿಸುವ ಸುಯೋಗವು ಯಾರಿಗೆ ಕೊಡಲ್ಪಟ್ಟಿತ್ತು? ಪೇತ್ರನಿಗೆ ಆ ಸುಯೋಗವಿತ್ತು.—ಅ. ಕೃತ್ಯಗಳು 2:1-41; 8:14-17; 10:1-48.

18. ಯೂದನು ಉಲ್ಲೇಖಿಸಿದಂತೆ, ಯಾವ ತಪ್ಪಿನಿಂದ ನಾವು ದೂರವಿರಲು ಬಯಸುತ್ತೇವೆ?

18 ಹೊರತೋರಿಕೆಗಳಿಂದ ನ್ಯಾಯತೀರಿಸುವ ವಿಷಯದಲ್ಲಿ ನಾವು ಜಾಗರೂಕರಾಗಿರಬೇಕು ಎಂಬುದನ್ನು ಈ ಉದಾಹರಣೆಗಳು ತೋರಿಸುತ್ತವೆ. ನಾವು ಯೆಹೋವನಲ್ಲಿ ನಮ್ಮ ಭರವಸೆಯನ್ನು ಇಡುವುದಾದರೆ, ನಾವು ಆತನ ಆಯ್ಕೆಗಳ ವಿಷಯದಲ್ಲಿ ಸಂಶಯಪಡಲಾರೆವು. ಆತನ ಭೂಸಂಸ್ಥೆಯು ದೋಷಾತೀತರೆಂದು ಪ್ರತಿಪಾದಿಸದ ಅಪರಿಪೂರ್ಣ ಮಾನವರಿಂದ ಮಾಡಲ್ಪಟ್ಟಿದ್ದರೂ, ಆತನು ಅವರನ್ನು ಪ್ರಭಾವಶಾಲಿಯಾದ ವಿಧದಲ್ಲಿ ಉಪಯೋಗಿಸುತ್ತಿದ್ದಾನೆ. ಯೇಸುವಿನ ಮಲತಮ್ಮನಾದ ಯೂದನು, ಪ್ರಥಮ ಶತಮಾನದ ಕ್ರೈಸ್ತರಿಗೆ ‘ಪ್ರಭುತ್ವವನ್ನು ಅಸಡ್ಡೆಮಾಡುವ, ಮಹಾ ಪದವಿಯವರನ್ನು ದೂಷಿಸುವ’ ವ್ಯಕ್ತಿಗಳ ಕುರಿತು ಎಚ್ಚರಿಸಿದನು. (ಯೂದ 8-10) ನಾವು ಎಂದಿಗೂ ಅವರಂತೆ ಇರಬಾರದು.

19. ಯೆಹೋವನ ಆಯ್ಕೆಗಳ ವಿಷಯದಲ್ಲಿ ಸಂಶಯಪಡಲು ನಮಗೆ ಕಾರಣವಿಲ್ಲವೇಕೆ?

19 ಒಂದು ನಿರ್ದಿಷ್ಟ ಸಮಯದಲ್ಲಿ, ತನ್ನ ಜನರನ್ನು ತಾನು ಬಯಸುವ ಮಾರ್ಗದಲ್ಲಿ ಮಾರ್ಗದರ್ಶಿಸಲು ಬೇಕಾದ ವಿಶೇಷ ಗುಣಗಳಿರುವ ಕೆಲವು ಜವಾಬ್ದಾರ ವ್ಯಕ್ತಿಗಳನ್ನು ಯೆಹೋವನು ಆಯ್ದುಕೊಳ್ಳುತ್ತಾನೆಂಬುದು ಸುವ್ಯಕ್ತ. ನಾವು ದೇವರ ಆಯ್ಕೆಗಳ ವಿಷಯದಲ್ಲಿ ಸಂಶಯಪಡದೆ, ಈ ನಿಜತ್ವವನ್ನು ಗ್ರಹಿಸಿಕೊಳ್ಳಲು ಶ್ರಮಿಸತಕ್ಕದ್ದು. ಅದೇ ಸಮಯದಲ್ಲಿ, ಯೆಹೋವನು ನಮ್ಮನ್ನು ವ್ಯಕ್ತಿಗತವಾಗಿ ಎಲ್ಲಿ ಇರಿಸಿದ್ದಾನೊ ಅಲ್ಲಿ ದೀನಭಾವದಿಂದ ಸೇವೆಸಲ್ಲಿಸುವುದರಲ್ಲಿ ತೃಪ್ತರಾಗಿರಬೇಕು. ಹೀಗೆ ನಾವು ಯೆಹೋವನನ್ನು ನಮ್ಮ ಭರವಸೆಯನ್ನಾಗಿ ಮಾಡಿಕೊಂಡಿದ್ದೇವೆಂಬುದನ್ನು ತೋರಿಸುತ್ತೇವೆ.—ಎಫೆಸ 4:11-16; ಫಿಲಿಪ್ಪಿ 2:3.

ಯೆಹೋವನ ನೀತಿಯಲ್ಲಿ ಭರವಸೆಯನ್ನು ಪ್ರದರ್ಶಿಸುವುದು

20, 21. ಮೋಶೆಯೊಂದಿಗೆ ದೇವರು ವರ್ತಿಸಿದ ರೀತಿಯಿಂದ ನಾವು ಏನನ್ನು ಕಲಿಯಬಹುದು?

20 ಕೆಲವೊಮ್ಮೆ ನಾವು ನಮ್ಮಲ್ಲೇ ಹೆಚ್ಚಿನ ಭರವಸೆಯನ್ನಿಟ್ಟುಕೊಂಡು, ಯೆಹೋವನಲ್ಲಿ ಕಡಿಮೆ ಭರವಸೆಯುಳ್ಳವರಾಗಿರುವಂತೆ ತೋರುವಾಗ, ಮೋಶೆಯಿಂದ ಪಾಠವನ್ನು ಕಲಿತುಕೊಳ್ಳುವವರಾಗಿರೋಣ. ಅವನು 40 ವರ್ಷ ಪ್ರಾಯದವನಾಗಿದ್ದಾಗ, ಇಸ್ರಾಯೇಲ್ಯರನ್ನು ಐಗುಪ್ತದ ಸೆರೆಯಿಂದ ಮುಕ್ತಗೊಳಿಸಲು ಸ್ವತಃ ಕಾರ್ಯವೆಸಗಿದನು. ಅವನ ಪ್ರಯತ್ನಗಳು ಸದುದ್ದೇಶವುಳ್ಳವುಗಳಾಗಿದ್ದರೂ, ಅವು ಇಸ್ರಾಯೇಲಿನ ತತ್‌ಕ್ಷಣದ ಬಿಡುಗಡೆಯಲ್ಲಾಗಲಿ, ಅವನ ಸ್ವಂತ ಪರಿಸ್ಥಿತಿಯ ಸುಧಾರಣೆಯಲ್ಲಾಗಲಿ ಫಲಿಸಲಿಲ್ಲ. ವಾಸ್ತವದಲ್ಲಿ, ಅವನು ಅಲ್ಲಿಂದ ಓಡಿಹೋಗುವಂತೆ ಒತ್ತಾಯಿಸಲ್ಪಟ್ಟನು. ಅನ್ಯದೇಶದಲ್ಲಿ 40 ವರ್ಷಗಳ ಪ್ರಯಾಸಕರ ತರಬೇತಿಯ ನಂತರವೇ, ಅವನು ಈ ಮೊದಲು ಏನನ್ನು ಮಾಡಲು ಬಯಸಿದ್ದನೊ ಅದನ್ನು ಮಾಡುವಂತೆ ಆರಿಸಲ್ಪಡಲು ಅರ್ಹನಾಗಿದ್ದನು. ಈ ಸಮಯದಲ್ಲಿ ಅವನು ಯೆಹೋವನ ಬೆಂಬಲದಲ್ಲಿ ಭರವಸೆಯುಳ್ಳವನಾಗಿರಲು ಸಾಧ್ಯವಿತ್ತು, ಏಕೆಂದರೆ ಈಗ ವಿಷಯಗಳು ಯೆಹೋವನ ರೀತಿಗನುಸಾರ, ಆತನ ವೇಳಾಪಟ್ಟಿಗೆ ಅನುಗುಣವಾದ ಸಮಯದಲ್ಲಿ ಸಂಭವಿಸುತ್ತಿದ್ದವು.—ವಿಮೋಚನಕಾಂಡ 2:11–3:10.

21 ನಮ್ಮಲ್ಲಿ ಪ್ರತಿಯೊಬ್ಬರೂ ತಮ್ಮನ್ನು ಹೀಗೆ ಕೇಳಿಕೊಳ್ಳಬಹುದು: ‘ಕೆಲವೊಮ್ಮೆ ನಾನು ವಿಷಯಗಳನ್ನು ಬೇಗ ಬೇಗನೆ ಮಾಡಿಮುಗಿಸಲು ಇಲ್ಲವೆ ನನ್ನ ರೀತಿಗನುಸಾರ ಮಾಡಲು ಪ್ರಯತ್ನಿಸುತ್ತಾ, ಯೆಹೋವನು ಮತ್ತು ಸಭೆಯಲ್ಲಿರುವ ನೇಮಿತ ಹಿರಿಯರನ್ನು ಲೆಕ್ಕಿಸದೆ ಮುನ್ನುಗ್ಗುತ್ತೇನೊ? ನಿರ್ದಿಷ್ಟ ಸುಯೋಗಗಳಿಗೆ ಕಡೆಗಣಿಸಲ್ಪಟ್ಟಿದ್ದೇನೆಂದು ಭಾವಿಸುವ ಬದಲಿಗೆ, ಮುಂದುವರಿಯುತ್ತಿರುವ ನನ್ನ ತರಬೇತಿಯನ್ನು ನಾನು ಪೂರ್ಣಮನಸ್ಸಿನಿಂದ ಸ್ವೀಕರಿಸುತ್ತೇನೊ?’ ಮೂಲಭೂತವಾಗಿ, ನಾವು ಮೋಶೆಯಿಂದ ಒಂದು ಪ್ರಮುಖ ಪಾಠವನ್ನು ಕಲಿತಿದ್ದೇವೊ?

22. ಒಂದು ಮಹಾ ಸುಯೋಗವನ್ನು ಕಳೆದುಕೊಂಡರೂ, ಯೆಹೋವನ ಕುರಿತು ಮೋಶೆಗೆ ಹೇಗನಿಸಿತು?

22 ಅದೂ ಅಲ್ಲದೆ, ನಾವು ಮೋಶೆಯಿಂದ ಮತ್ತೊಂದು ಪಾಠವನ್ನು ಕಲಿಯಸಾಧ್ಯವಿದೆ. ಅರಣ್ಯಕಾಂಡ 20:7-13, ಅವನು ಮಾಡಿದ ಒಂದು ತಪ್ಪಿನ ಕುರಿತು ನಮಗೆ ಹೇಳುತ್ತದೆ. ಅದು ಅವನಿಗೆ ಭಾರಿ ನಷ್ಟವನ್ನು ತಂದಿತು. ಇಸ್ರಾಯೇಲ್ಯರನ್ನು ವಾಗ್ದತ್ತ ದೇಶಕ್ಕೆ ನಡೆಸುವ ಸುಯೋಗವನ್ನು ಅವನು ಕಳೆದುಕೊಂಡನು. ಹಾಗಾದರೆ, ಈ ವಿಷಯದಲ್ಲಿ ಯೆಹೋವನ ನಿರ್ಣಯವು ನ್ಯಾಯವಲ್ಲದ್ದೆಂದು ಅವನು ನೆನಸಿದನೊ? ದೇವರು ಅವನನ್ನು ಅಷ್ಟೊಂದು ಅನ್ಯಾಯವಾಗಿ ಉಪಚರಿಸುತ್ತಿದ್ದ ಕಾರಣ ಮುನಿಸಿಕೊಳ್ಳುತ್ತಾ, ಅವನು ತನ್ನನ್ನು ಪ್ರತ್ಯೇಕಿಸಿಕೊಂಡನೊ? ಮೋಶೆಯು ಯೆಹೋವನ ನೀತಿಯಲ್ಲಿ ಭರವಸೆಯನ್ನು ಕಳೆದುಕೊಂಡನೊ? ಸ್ವತಃ ಮೋಶೆಯು ತನ್ನ ಮರಣಕ್ಕೆ ಸ್ವಲ್ಪ ಮುಂಚಿತವಾಗಿ ಇಸ್ರಾಯೇಲ್‌ ಜನಾಂಗದೊಂದಿಗೆ ಮಾತಾಡಿದಾಗ, ಅವನು ಹೇಳಿದ ಮಾತುಗಳಲ್ಲಿ ನಾವು ಉತ್ತರಗಳನ್ನು ಕಂಡುಕೊಳ್ಳಸಾಧ್ಯವಿದೆ. ಯೆಹೋವನ ಕುರಿತು ಮೋಶೆಯು ಹೇಳಿದ್ದು: “ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.” (ಧರ್ಮೋಪದೇಶಕಾಂಡ 32:4) ಖಂಡಿತವಾಗಿಯೂ, ಮೋಶೆಯು ಕೊನೆಯ ತನಕ ಯೆಹೋವನಲ್ಲಿ ತನ್ನ ಭರವಸೆಯನ್ನು ಕಾಪಾಡಿಕೊಂಡನು. ನಮ್ಮ ಕುರಿತೇನು? ಯೆಹೋವನಲ್ಲಿ ಮತ್ತು ಆತನ ನೀತಿಯಲ್ಲಿ ನಮ್ಮ ಭರವಸೆಯನ್ನು ಬಲಪಡಿಸಿಕೊಳ್ಳಲು ನಾವು ವೈಯಕ್ತಿಕವಾಗಿ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಿದ್ದೇವೊ? ನಾವು ಅದನ್ನು ಹೇಗೆ ಮಾಡಬಲ್ಲೆವು? ನೋಡೋಣ.

ನೀವು ಹೇಗೆ ಉತ್ತರಿಸುವಿರಿ?

◻ ಯೆಹೋವನಲ್ಲಿ ಭರವಸೆಯಿಡಲು ಇಸ್ರಾಯೇಲ್ಯರಿಗೆ ಯಾವ ಕಾರಣಗಳಿದ್ದವು?

◻ ಭರವಸೆಯ ವಿಷಯದಲ್ಲಿ, ಅಬ್ರಹಾಮನಿಂದ ಏನನ್ನು ಕಲಿತುಕೊಳ್ಳಸಾಧ್ಯವಿದೆ?

◻ ಯೆಹೋವನ ಆಯ್ಕೆಗಳ ವಿಷಯದಲ್ಲಿ ಸಂಶಯ ಪಡುವುದರಿಂದ ನಾವು ಏಕೆ ದೂರವಿರಬೇಕು?

[ಪುಟ 13 ರಲ್ಲಿರುವ ಚಿತ್ರ]

ಯೆಹೋವನಲ್ಲಿನ ಭರವಸೆಯು, ಸಭೆಯಲ್ಲಿ ನಾಯಕತ್ವ ವಹಿಸುವವರಿಗೆ ಗೌರವವನ್ನು ತೋರಿಸುವುದನ್ನು ಒಳಗೊಳ್ಳುತ್ತದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ