ನೋಡುವವರಾಗಿ ನಡೆಯದೆ, ನಂಬಿಕೆಯಿಂದ ನಡೆಯಿರಿ!
‘ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ [ನಂಬಿಕೆಯಿಂದ] ನಡೆಯುತ್ತೇವೆ.’—2 ಕೊರಿಂಥ 5:7.
1. ಅಪೊಸ್ತಲ ಪೌಲನು ನೋಡುವವನಾಗಿ ಅಲ್ಲ ಬದಲಾಗಿ ನಂಬಿಕೆಯಿಂದ ನಡೆದನೆಂದು ಯಾವುದು ತೋರಿಸುತ್ತದೆ?
ಇಸವಿ ಸಾ.ಶ. 55ರ ಸಮಯ. ಕ್ರೈಸ್ತರ ಹಿಂಸಕನು ಮತ್ತು ಆಗ ಸೌಲ ಎಂಬ ಹೆಸರುಳ್ಳವನಾಗಿದ್ದ ವ್ಯಕ್ತಿಯು ಕ್ರೈಸ್ತತ್ವವನ್ನು ಅಂಗೀಕರಿಸಿ ಸುಮಾರು 20 ವರ್ಷಗಳು ದಾಟಿವೆ. ದಾಟಿರುವ ಈ ಸಮಯವು, ದೇವರಲ್ಲಿನ ತನ್ನ ನಂಬಿಕೆಯನ್ನು ಕುಂದಿಸುವಂತೆ ಇಲ್ಲವೆ ದುರ್ಬಲಗೊಳಿಸುವಂತೆ ಅವನು ಬಿಟ್ಟುಕೊಟ್ಟಿಲ್ಲ. ಪರಲೋಕದಲ್ಲಿನ ವಿಷಯಗಳನ್ನು ಅವನು ಕಣ್ಣಾರೆ ನೋಡಿಲ್ಲವಾದರೂ, ನಂಬಿಕೆಯಲ್ಲಿ ದೃಢವಾಗಿದ್ದಾನೆ. ಹೀಗಿರುವುದರಿಂದ ಅಪೊಸ್ತಲ ಪೌಲನು ಅಭಿಷಿಕ್ತ ಕ್ರೈಸ್ತರಿಗೆ ಬರೆಯುತ್ತಾ ಹೇಳಿದ್ದು: ‘ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ [ನಂಬಿಕೆಯಿಂದ] ನಡೆಯುತ್ತೇವೆ.’—2 ಕೊರಿಂಥ 5:7.
2, 3. (ಎ) ನಾವು ನಂಬಿಕೆಯಿಂದ ನಡೆಯುತ್ತಿದ್ದೇವೆಂಬುದನ್ನು ಹೇಗೆ ತೋರಿಸುತ್ತೇವೆ? (ಬಿ) ನೋಡುವವರಾಗಿ ನಡೆಯುವುದರ ಅರ್ಥವೇನು?
2 ನಂಬಿಕೆಯಿಂದ ನಡೆಯಲಿಕ್ಕಾಗಿ, ನಮ್ಮ ಜೀವನಗಳನ್ನು ನಿರ್ದೇಶಿಸಲು ದೇವರಿಗಿರುವ ಸಾಮರ್ಥ್ಯದಲ್ಲಿ ಸಂಪೂರ್ಣ ಭರವಸೆಯು ಆವಶ್ಯಕ. ನಮಗೇನು ಒಳ್ಳೇದು ಎಂಬುದನ್ನು ಆತನು ನಿಜವಾಗಿಯೂ ಬಲ್ಲವನಾಗಿದ್ದಾನೆ ಎಂಬ ಪೂರ್ಣ ಮನಗಾಣಿಕೆ ನಮಗಿರಬೇಕು. (ಕೀರ್ತನೆ 119:66) ನಾವು ಜೀವನದಲ್ಲಿ ನಿರ್ಣಯಗಳನ್ನು ಮಾಡಿ ಅವುಗಳಿಗೆ ತಕ್ಕಂತೆ ಕಾರ್ಯವೆಸಗುತ್ತಾ ಇರುವಾಗ, ನಾವು “ಕಣ್ಣಿಗೆ ಕಾಣದ” ನೈಜತೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿದ್ದೇವೆ. (ಇಬ್ರಿಯ 11:1) ಈ ನೈಜತೆಗಳಲ್ಲಿ, ವಾಗ್ದಾನಿತ ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲವು’ ಸೇರಿರುತ್ತದೆ. (2 ಪೇತ್ರ 3:13) ಆದರೆ ನೋಡುವವರಾಗಿ ನಡೆಯುವುದರ ಅರ್ಥ, ಕೇವಲ ನಮ್ಮ ಶಾರೀರಿಕ ಇಂದ್ರಿಯಗಳ ಮೂಲಕ ಗ್ರಹಿಸಿದ ವಿಷಯಗಳಿಂದ ನಿಯಂತ್ರಿತವಾದ ಜೀವನ ಕ್ರಮವನ್ನು ಬೆನ್ನಟ್ಟುವುದು ಆಗಿದೆ. ಇದು ಅಪಾಯಕಾರಿಯಾಗಿದೆ, ಏಕೆಂದರೆ ನಾವು ದೇವರ ಚಿತ್ತವನ್ನು ಸಂಪೂರ್ಣವಾಗಿ ಅಲಕ್ಷಿಸುವ ಸ್ಥಿತಿಗೆ ಇದು ನಡೆಸಬಲ್ಲದು.—ಕೀರ್ತನೆ 81:12; ಪ್ರಸಂಗಿ 11:9.
3 ನಾವು ಸ್ವರ್ಗೀಯ ಕರೆಯಿರುವ ‘ಚಿಕ್ಕ ಹಿಂಡಿನವರು’ ಆಗಿರಲಿ ಇಲ್ಲವೆ ಭೂನಿರೀಕ್ಷೆಯುಳ್ಳ ‘ಬೇರೆ ಕುರಿಗಳವರು’ ಆಗಿರಲಿ, ನಮ್ಮಲ್ಲಿ ಪ್ರತಿಯೊಬ್ಬರೂ ನೋಡುವವರಾಗಿ ಅಲ್ಲ ಬದಲಾಗಿ ನಂಬಿಕೆಯಿಂದ ನಡೆಯುವ ಬುದ್ಧಿವಾದವನ್ನು ಮನಸ್ಸಿಗೆ ತೆಗೆದುಕೊಳ್ಳತಕ್ಕದ್ದು. (ಲೂಕ 12:32; ಯೋಹಾನ 10:16) ಈ ಪ್ರೇರಿತ ಬುದ್ಧಿವಾದವನ್ನು ಪಾಲಿಸುವುದು ನಮ್ಮನ್ನು, ತಾತ್ಕಾಲಿಕವಾದ ‘ಪಾಪಭೋಗಗಳ’ ಅನುಭೋಗಕ್ಕೆ ಆಹುತಿಯಾಗುವುದರಿಂದ, ಪ್ರಾಪಂಚಿಕತೆಯ ಪಾಶಕ್ಕೆ ಬಲಿಬೀಳುವುದರಿಂದ ಮತ್ತು ಈ ವಿಷಯಗಳ ವ್ಯವಸ್ಥೆಯ ಅಂತ್ಯವು ದೃಷ್ಟಿಯಿಂದ ಮರೆಯಾಗುವುದರಿಂದ ಹೇಗೆ ಸಂರಕ್ಷಿಸಬಲ್ಲದು ಎಂಬುದನ್ನು ನೋಡೋಣ. ಇದಲ್ಲದೆ, ನೋಡುವವರಾಗಿ ನಡೆಯುವುದರ ಅಪಾಯಗಳನ್ನು ಸಹ ನಾವು ಪರೀಕ್ಷಿಸುವೆವು.—ಇಬ್ರಿಯ 11:25.
‘ಸ್ವಲ್ಪಕಾಲ ಪಾಪಭೋಗಗಳನ್ನು ಅನುಭವಿಸುವುದನ್ನು’ ತಿರಸ್ಕರಿಸುವುದು
4. ಮೋಶೆ ಯಾವ ಆಯ್ಕೆಮಾಡಿದನು, ಮತ್ತು ಏಕೆ?
4 ಅಮ್ರಾಮನ ಮಗನಾದ ಮೋಶೆಯು ಬಯಸುತ್ತಿದ್ದಲ್ಲಿ ಹೊಂದಸಾಧ್ಯವಿದ್ದ ಜೀವನದ ಕುರಿತಾಗಿ ಯೋಚಿಸಿರಿ. ಪುರಾತನ ಐಗುಪ್ತದ ರಾಜಮನೆತನದ ವಂಶಸ್ಥರೊಂದಿಗೆ ಬೆಳೆದ ಮೋಶೆಗೆ ಅಧಿಕಾರ, ಐಶ್ವರ್ಯ ಮತ್ತು ವರ್ಚಸ್ಸು ಸುಲಭವಾಗಿ ಕೈಗೆಟುಕುವಂತೆ ಇತ್ತು. ಮೋಶೆ ಹೀಗೆ ತರ್ಕಿಸಬಹುದಿತ್ತು: ‘ಸುಪ್ರಸಿದ್ಧವಾಗಿರುವ ಐಗುಪ್ತದ ವಿವೇಕದಲ್ಲಿ ನಾನು ಸುಶಿಕ್ಷಿತನಾಗಿದ್ದೇನೆ, ಮಾತಿನಲ್ಲೂ ಕಾರ್ಯದಲ್ಲೂ ಪ್ರಭಾವಶಾಲಿಯಾಗಿದ್ದೇನೆ. ಹೀಗಿರುವುದರಿಂದ ಈ ರಾಜಮನೆತನಕ್ಕೇ ನಾನು ಅಂಟಿಕೊಂಡಿದ್ದರೆ, ನನ್ನ ಈ ಸ್ಥಾನವನ್ನು ದಬ್ಬಾಳಿಕೆಗೊಳಗಾಗಿರುವ ನನ್ನ ಹೀಬ್ರು ಸಹೋದರರಿಗೆ ಸಹಾಯಮಾಡಲು ಉಪಯೋಗಿಸಬಲ್ಲೆ!’ (ಅ. ಕೃತ್ಯಗಳು 7:22) ಆದರೆ ಮೋಶೆಯು ‘ದೇವರ ಜನರೊಂದಿಗೆ ಕಷ್ಟವನ್ನು ಅನುಭವಿಸುವ’ ಆಯ್ಕೆಮಾಡಿದನು. ಏಕೆ? ಐಗುಪ್ತವು ಅವನಿಗೆ ನೀಡಿದಂಥದ್ದೆಲ್ಲವನ್ನೂ ತಿರಸ್ಕರಿಸಲು ಮೋಶೆಯನ್ನು ಯಾವುದು ಪ್ರಚೋದಿಸಿತು? ಬೈಬಲ್ ಉತ್ತರಿಸುವುದು: “[ಮೋಶೆಯು] ಅರಸನ ರೌದ್ರಕ್ಕೆ ಭಯಪಡದೆ ಐಗುಪ್ತದೇಶವನ್ನು ಬಿಟ್ಟುಹೋದದ್ದು ನಂಬಿಕೆಯಿಂದಲೇ. ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.” (ಇಬ್ರಿಯ 11:24-27) ನೀತಿಗಾಗಿ ಯೆಹೋವನು ನಿಶ್ಚಿತವಾಗಿ ಕೊಡಲಿದ್ದ ಬಹುಮಾನದಲ್ಲಿ ಮೋಶೆಗಿದ್ದ ನಂಬಿಕೆಯು, ಪಾಪ ಮತ್ತು ಸ್ವೇಚ್ಛಾಚಾರ ಹಾಗೂ ಅದರಿಂದಾಗಿ ಸಿಗುವ ಕ್ಷಣಿಕ ಸುಖವನ್ನು ಪ್ರತಿರೋಧಿಸಲು ಸಹಾಯಮಾಡಿತು.
5. ಮೋಶೆಯ ಮಾದರಿಯು ನಮ್ಮನ್ನು ಹೇಗೆ ಉತ್ತೇಜಿಸುತ್ತದೆ?
5 ನಮಗೂ ಕಠಿನವಾದ ನಿರ್ಣಯಗಳನ್ನು ಮಾಡಬೇಕಾಗುವ ಸಂದರ್ಭಗಳು ಅನೇಕಸಲ ಎದುರಾಗುತ್ತವೆ. ಅವು ಇಲ್ಲಿ ತಿಳಿಸಲ್ಪಟ್ಟಿರುವ ವಿಷಯಗಳ ಸಂಬಂಧದಲ್ಲಿ ಇರಬಹುದು: ‘ಬೈಬಲ್ ಮೂಲತತ್ತ್ವಗಳಿಗೆ ಪೂರ್ಣವಾಗಿ ಹೊಂದಿಕೆಯಲ್ಲಿರದಂಥ ನಿರ್ದಿಷ್ಟ ಆಚರಣೆಗಳು ಹಾಗೂ ರೂಢಿಗಳನ್ನು ನಾನು ಬಿಟ್ಟುಬಿಡಬೇಕೊ? ಭೌತಿಕ ಲಾಭಗಳನ್ನು ನೀಡಬಹುದಾದರೂ ನನ್ನ ಆಧ್ಯಾತ್ಮಿಕ ಪ್ರಗತಿಗೆ ತಡೆಯನ್ನು ತರುವಂಥ ಉದ್ಯೋಗವನ್ನು ನಾನು ಸ್ವೀಕರಿಸಬೇಕೊ?’ ಮೋಶೆಯ ಮಾದರಿಯು ನಾವು ಈ ಲೋಕದ ದೂರದೃಷ್ಟಿಯ ಕೊರತೆಯನ್ನು ಪ್ರತಿಬಿಂಬಿಸುವ ಆಯ್ಕೆಗಳನ್ನು ಮಾಡದಂತೆ ಉತ್ತೇಜಿಸುತ್ತದೆ; ಅದಕ್ಕೆ ಬದಲು ನಾವು ‘ಅದೃಶ್ಯನಾಗಿರುವಾತನಾದ’ ಯೆಹೋವ ದೇವರ ದೂರದೃಷ್ಟಿಯುಳ್ಳ ವಿವೇಕದಲ್ಲಿ ನಂಬಿಕೆಯನ್ನು ತೋರಿಸತಕ್ಕದ್ದು. ಮೋಶೆಯಂತೆ ನಾವು, ಈ ಲೋಕವು ನೀಡಬಹುದಾದ ಯಾವುದೇ ವಿಷಯಕ್ಕಿಂತಲೂ ಯೆಹೋವನ ಸ್ನೇಹವನ್ನು ಹೆಚ್ಚು ಅಮೂಲ್ಯವೆಂದೆಣಿಸುವಂತಾಗಲಿ.
6, 7. (ಎ) ತಾನು ನೋಡುವವನಾಗಿ ನಡೆಯಲು ಇಷ್ಟಪಡುತ್ತೇನೆಂದು ಏಸಾವನು ಹೇಗೆ ತೋರಿಸಿದನು? (ಬಿ) ಏಸಾವನಿಂದ ನಮಗೆ ಯಾವ ಎಚ್ಚರಿಕೆಯ ಮಾದರಿ ಸಿಗುತ್ತದೆ?
6 ಈಗ ಮೋಶೆಯನ್ನು, ಮೂಲಪಿತೃವಾದ ಇಸಾಕನ ಮಗನಾದ ಏಸಾವನೊಂದಿಗೆ ಹೋಲಿಸಿರಿ. ಏಸಾವನು, ತಕ್ಷಣವೇ ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಇಷ್ಟಪಟ್ಟನು. (ಆದಿಕಾಂಡ 25:30-34) ‘ಪ್ರಾಪಂಚಿಕನಾಗಿ’ ಅಂದರೆ ಆಧ್ಯಾತ್ಮಿಕ ವಿಷಯಗಳನ್ನು ಗಣ್ಯಮಾಡದಿದ್ದ ಏಸಾವನು, ‘ಒಂದೇ ಒಂದು ಊಟಕ್ಕೋಸ್ಕರ’ ತನ್ನ ಚೊಚ್ಚಲುತನದ ಹಕ್ಕನ್ನು ಮಾರಿಬಿಟ್ಟನು. (ಇಬ್ರಿಯ 12:16) ತನ್ನ ಜನ್ಮಹಕ್ಕನ್ನು ಮಾರುವ ನಿರ್ಣಯವು, ಯೆಹೋವನೊಂದಿಗಿನ ತನ್ನ ಸಂಬಂಧವನ್ನು ಹೇಗೆ ಬಾಧಿಸುವುದೆಂದಾಗಲಿ, ತನ್ನ ಸಂತತಿಯ ಮೇಲೆ ಹೇಗೆ ಪ್ರಭಾವಬೀರುವುದೆಂದಾಗಲಿ ಅವನು ಯೋಚಿಸಲಿಲ್ಲ. ಅವನಿಗೆ ಆಧ್ಯಾತ್ಮಿಕ ದೃಷ್ಟಿ ಇರಲಿಲ್ಲ. ದೇವರ ಅಮೂಲ್ಯವಾದ ವಾಗ್ದಾನಗಳನ್ನು ಅಲಕ್ಷಿಸುತ್ತಾ, ಏಸಾವನು ಅವುಗಳನ್ನು ಅಲ್ಪ ಮೌಲ್ಯದ್ದಾಗಿ ಎಣಿಸಿದನು. ಅವನು ನೋಡುವವನಾಗಿ ನಡೆದನು, ನಂಬಿಕೆಯಿಂದ ಅಲ್ಲ.
7 ಏಸಾವನು ಇಂದು ನಮಗಾಗಿ ಒಂದು ಎಚ್ಚರಿಕೆಯ ಮಾದರಿಯನ್ನು ಒದಗಿಸುತ್ತಾನೆ. (1 ಕೊರಿಂಥ 10:11) ನಾವು ಚಿಕ್ಕ ಇಲ್ಲವೆ ದೊಡ್ಡ ನಿರ್ಣಯಗಳನ್ನು ಮಾಡಬೇಕಾಗುವಾಗ, ‘ನಿಮಗೇನು ಬೇಕೊ ಅದನ್ನು ಈಗಿಂದೀಗಲೇ ಪಡೆದುಕೊಳ್ಳಿರಿ’ ಎಂದು ಹೇಳುವ ಸೈತಾನನ ಲೋಕದ ತತ್ತ್ವಪ್ರಚಾರದಿಂದ ನಾವು ಅಪಕರ್ಷಿತರಾಗಬಾರದು. ನಾವು ಹೀಗೆ ಕೇಳಿಕೊಳ್ಳುವುದು ಉತ್ತಮ: ‘ನಾನು ಮಾಡುವ ನಿರ್ಣಯಗಳಲ್ಲಿ ಏಸಾವನಂಥ ಪ್ರವೃತ್ತಿಗಳು ತೋರಿಬರುತ್ತಿವೆಯೊ? ನಾನೀಗ ಏನನ್ನು ಬಯಸುತ್ತೇನೊ ಅದನ್ನು ಬೆನ್ನಟ್ಟುವಲ್ಲಿ, ಆಧ್ಯಾತ್ಮಿಕ ಅಭಿರುಚಿಗಳು ಹಿಂದಕ್ಕೆ ತಳ್ಳಲ್ಪಡುವವೊ? ನಾನು ಮಾಡುವ ಆಯ್ಕೆಗಳು, ದೇವರೊಂದಿಗಿನ ನನ್ನ ಸ್ನೇಹ ಮತ್ತು ನನ್ನ ಭಾವೀ ಬಹುಮಾನವನ್ನು ಅಪಾಯಕ್ಕೊಡ್ಡುತ್ತಿವೆಯೊ? ನಾನು ಇತರರಿಗಾಗಿ ಯಾವ ರೀತಿಯ ಮಾದರಿಯನ್ನು ಇಡುತ್ತಿದ್ದೇನೆ?’ ನಮ್ಮ ಆಯ್ಕೆಗಳು ಆಧ್ಯಾತ್ಮಿಕ ವಿಷಯಗಳಿಗಾಗಿ ನಮಗಿರುವ ಗಣ್ಯತೆಯನ್ನು ಪ್ರತಿಬಿಂಬಿಸುವುದಾದರೆ ಯೆಹೋವನು ನಮ್ಮನ್ನು ಆಶೀರ್ವದಿಸುವನು.—ಜ್ಞಾನೋಕ್ತಿ 10:22.
ಪ್ರಾಪಂಚಿಕತೆಯ ಪಾಶದಿಂದ ತಪ್ಪಿಸಿಕೊಳ್ಳುವುದು
8. ಲವೊದಿಕೀಯದ ಕ್ರೈಸ್ತರು ಯಾವ ಎಚ್ಚರಿಕೆಯನ್ನು ಪಡೆದರು, ಮತ್ತು ಇದು ನಮಗೇಕೆ ಆಸಕ್ತಿಯ ಸಂಗತಿಯಾಗಿದೆ?
8 ಪ್ರಥಮ ಶತಮಾನದ ಅಂತ್ಯದಷ್ಟಕ್ಕೆ ಅಪೊಸ್ತಲ ಯೋಹಾನನಿಗೆ ಕೊಡಲ್ಪಟ್ಟ ಪ್ರಕಟನೆಯಲ್ಲಿ, ಮಹಿಮಾಭರಿತ ಯೇಸು ಕ್ರಿಸ್ತನು ಏಷ್ಯಾ ಮೈನರ್ನಲ್ಲಿದ್ದ ಲವೊದಿಕೀಯದ ಸಭೆಗೆ ಒಂದು ಸಂದೇಶವನ್ನು ಕೊಟ್ಟನು. ಅದು ಪ್ರಾಪಂಚಿಕತೆಯ ವಿರುದ್ಧ ಕೊಡಲ್ಪಟ್ಟ ಎಚ್ಚರಿಕೆಯ ಸಂದೇಶವಾಗಿತ್ತು. ಲವೊದಿಕೀಯದ ಕ್ರೈಸ್ತರು ಭೌತಿಕವಾಗಿ ಧನಿಕರಾಗಿದ್ದರಾದರೂ ಆಧ್ಯಾತ್ಮಿಕವಾಗಿ ದಿವಾಳಿಯಾಗಿದ್ದರು. ನಂಬಿಕೆಯಿಂದ ನಡೆಯುವುದನ್ನು ಮುಂದುವರಿಸುವ ಬದಲು, ಅವರ ಪ್ರಾಪಂಚಿಕ ಸ್ವತ್ತುಗಳು ಅವರ ಆಧ್ಯಾತ್ಮಿಕ ದೃಷ್ಟಿಯನ್ನು ಕುರುಡುಗೊಳಿಸುವಂತೆ ಬಿಟ್ಟುಕೊಟ್ಟಿದ್ದರು. (ಪ್ರಕಟನೆ 3:14-18) ಇಂದು ಪ್ರಾಪಂಚಿಕತೆಯು ಅದೇ ರೀತಿಯ ಪರಿಣಾಮವನ್ನು ಬೀರುತ್ತಿದೆ. ಅದು ನಮ್ಮ ನಂಬಿಕೆಯನ್ನು ದುರ್ಬಲಗೊಳಿಸಿ, ನಾವು ಜೀವಕ್ಕಾಗಿರುವ ‘ಓಟವನ್ನು ಸ್ಥಿರಚಿತ್ತದಿಂದ ಓಡುವುದನ್ನು’ ನಿಲ್ಲಿಸಲು ಕಾರಣವಾಗುತ್ತದೆ. (ಇಬ್ರಿಯ 12:1) ನಾವು ಜಾಗ್ರತೆವಹಿಸದಿದ್ದರೆ, ‘ಈ ಜೀವಮಾನದಲ್ಲಿ ಆಗುವ ಚಿಂತೆಗಳು’ ಆಧ್ಯಾತ್ಮಿಕ ಚಟುವಟಿಕೆಗಳನ್ನು ಹೊರಗೆ ತಳ್ಳಿ, ಅವುಗಳನ್ನು ಪೂರ್ಣವಾಗಿ “ಅಡಗಿಸ”ಬಲ್ಲವು.—ಲೂಕ 8:14.
9. ಸಂತೃಪ್ತಿ ಮತ್ತು ಆಧ್ಯಾತ್ಮಿಕ ಆಹಾರಕ್ಕಾಗಿರುವ ಗಣ್ಯತೆಯು ನಮ್ಮನ್ನು ಹೇಗೆ ಸಂರಕ್ಷಿಸುತ್ತದೆ?
9 ಈ ಲೋಕವನ್ನು ಪೂರ್ಣವಾಗಿ ಅನುಭೋಗಿಸುವುದು ಮತ್ತು ನಮ್ಮನ್ನು ಭೌತಿಕವಾಗಿ ಧನಿಕರನ್ನಾಗಿಸಿಕೊಳ್ಳುವುದರ ಬದಲಿಗೆ, ಸಂತೃಪ್ತಿಯೇ ಆಧ್ಯಾತ್ಮಿಕ ಸಂರಕ್ಷಣೆಗಾಗಿರುವ ಒಂದು ಕೀಲಿ ಕೈಯಾಗಿದೆ. (1 ಕೊರಿಂಥ 7:31; 1 ತಿಮೊಥೆಯ 6:6-8) ನಾವು ನೋಡುವವರಾಗಿ ಅಲ್ಲ, ಬದಲಾಗಿ ನಂಬಿಕೆಯಿಂದ ನಡೆಯುವಾಗ, ಈಗಿರುವ ಆಧ್ಯಾತ್ಮಿಕ ಪರದೈಸಿನಲ್ಲಿ ಆನಂದವನ್ನು ಕಂಡುಕೊಳ್ಳುತ್ತೇವೆ. ನಾವು ಪೌಷ್ಟಿಕವಾದ ಆಧ್ಯಾತ್ಮಿಕ ಆಹಾರವನ್ನು ಸೇವಿಸುತ್ತಿರುವಾಗ, “ಹೃದಯಾನಂದದಿಂದ ಹರ್ಷಧ್ವನಿಗೈಯು”ವಂತೆ ಪ್ರಚೋದಿಸಲ್ಪಡುವುದಿಲ್ಲವೊ? (ಯೆಶಾಯ 65:13, 14) ಅಷ್ಟುಮಾತ್ರವಲ್ಲದೆ, ದೇವರಾತ್ಮದ ಫಲವನ್ನು ತೋರಿಸುವವರ ಸಹವಾಸದಿಂದ ನಾವು ಹರ್ಷವನ್ನು ಪಡೆಯುತ್ತೇವೆ. (ಗಲಾತ್ಯ 5:22, 23) ಯೆಹೋವನು ಆಧ್ಯಾತ್ಮಿಕ ರೀತಿಯಲ್ಲಿ ಮಾಡುವ ಒದಗಿಸುವಿಕೆಗಳಲ್ಲಿ ನಾವು ತೃಪ್ತಿ ಹಾಗೂ ಚೈತನ್ಯವನ್ನು ಪಡೆದುಕೊಳ್ಳುವುದು ಎಷ್ಟು ಅತ್ಯಾವಶ್ಯಕ!
10. ನಾವು ನಮಗೆ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳತಕ್ಕದ್ದು?
10 ನಾವು ನಮಗೆ ಈ ರೀತಿಯ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳತಕ್ಕದ್ದು: ‘ನನ್ನ ಬದುಕಿನಲ್ಲಿ ಭೌತಿಕ ವಿಷಯಗಳಿಗೆ ಯಾವ ಸ್ಥಾನವಿದೆ? ನನ್ನ ಬಳಿಯಿರುವ ಭೌತಿಕ ಸ್ವತ್ತುಗಳನ್ನು ಸುಖವಿಲಾಸದ ಜೀವನಕ್ಕಾಗಿ ಉಪಯೋಗಿಸುತ್ತಿದ್ದೇನೊ ಅಥವಾ ಸತ್ಯಾರಾಧನೆಯನ್ನು ಪ್ರವರ್ಧಿಸಲಿಕ್ಕಾಗಿ ಉಪಯೋಗಿಸುತ್ತಿದ್ದೇನೊ? ನನಗೆ ಯಾವುದರಿಂದ ಅತಿ ಹೆಚ್ಚಿನ ಸಂತೃಪ್ತಿ ಸಿಗುತ್ತದೆ? ಬೈಬಲ್ ಅಧ್ಯಯನ ಮತ್ತು ಕ್ರೈಸ್ತ ಕೂಟಗಳಲ್ಲಿನ ಸಾಹಚರ್ಯದಿಂದಲೊ, ಕ್ರೈಸ್ತ ಜವಾಬ್ದಾರಿಗಳಿಂದ ಮುಕ್ತವಾಗಿರುವ ವಾರಾಂತ್ಯಗಳನ್ನು ಕಳೆಯುವುದರಿಂದಲೊ? ನಾನು ವಿನೋದಾವಳಿಗಾಗಿ ಅನೇಕ ವಾರಾಂತ್ಯಗಳನ್ನು ಬದಿಗಿರಿಸುತ್ತೇನೊ, ಇಲ್ಲವೆ ಆ ಸಮಯವನ್ನು ಕ್ಷೇತ್ರ ಸೇವೆ ಮತ್ತು ಸತ್ಯಾರಾಧನೆಗೆ ಸಂಬಂಧಪಟ್ಟ ಇತರ ಚಟುವಟಿಕೆಗಳಿಗಾಗಿ ಉಪಯೋಗಿಸುತ್ತೇನೊ?’ ನಂಬಿಕೆಯಿಂದ ನಡೆಯುವುದರ ಅರ್ಥ, ಯೆಹೋವನ ವಾಗ್ದಾನಗಳಲ್ಲಿ ಪೂರ್ಣ ಭರವಸೆಯೊಂದಿಗೆ ರಾಜ್ಯದ ಕೆಲಸದಲ್ಲಿ ಕಾರ್ಯಮಗ್ನರಾಗಿರುವುದೇ ಆಗಿದೆ.—1 ಕೊರಿಂಥ 15:58.
ಅಂತ್ಯವನ್ನು ದೃಷ್ಟಿಯಲ್ಲೇ ಇಟ್ಟುಕೊಂಡಿರುವುದು
11. ನಂಬಿಕೆಯಿಂದ ನಡೆಯುವುದು, ನಾವು ಅಂತ್ಯವನ್ನು ದೃಷ್ಟಿಯಲ್ಲೇ ಇಟ್ಟುಕೊಳ್ಳುವಂತೆ ಹೇಗೆ ಸಹಾಯಮಾಡುತ್ತದೆ?
11 ನಂಬಿಕೆಯಿಂದ ನಡೆಯುವುದು, ಅಂತ್ಯವು ತುಂಬ ದೂರದಲ್ಲಿದೆ ಇಲ್ಲವೆ ಅಂತ್ಯವು ಬರುವುದೇ ಇಲ್ಲ ಎಂಬ ಶಾರೀರಿಕ ದೃಷ್ಟಿಕೋನಗಳನ್ನು ತೊರೆಯುವಂತೆ ನಮಗೆ ಸಹಾಯಮಾಡುತ್ತದೆ. ಬೈಬಲ್ ಪ್ರವಾದನೆಯನ್ನು ಹಗುರವಾಗಿ ತೆಗೆದುಕೊಳ್ಳುವ ಸಂದೇಹವಾದಿಗಳಂತೆ ನಾವಿರುವುದಿಲ್ಲ. ಬದಲಾಗಿ, ನಮ್ಮ ದಿನಕ್ಕಾಗಿ ದೇವರ ವಾಕ್ಯವು ಮುಂತಿಳಿಸಿದಂಥ ವಿಷಯಗಳನ್ನು ಲೋಕದ ಘಟನೆಗಳು ಹೇಗೆ ನೆರವೇರಿಸುತ್ತಿವೆ ಎಂಬುದನ್ನು ನಾವು ಗ್ರಹಿಸುತ್ತೇವೆ. (2 ಪೇತ್ರ 3:3, 4) ಉದಾಹರಣೆಗೆ, ಸರ್ವಸಾಮಾನ್ಯವಾಗಿ ಜನರ ಮನೋಭಾವ ಹಾಗೂ ನಡವಳಿಕೆಯು ನಾವೀಗ ‘ಕಡೇ ದಿವಸಗಳಲ್ಲಿ’ ಜೀವಿಸುತ್ತಿದ್ದೇವೆ ಎಂಬುದಕ್ಕೆ ಪುರಾವೆಯನ್ನು ಕೊಡುವುದಿಲ್ಲವೊ? (2 ತಿಮೊಥೆಯ 3:1-5) ಪ್ರಚಲಿತ ಲೋಕ ಘಟನೆಗಳು ಬರೀ ಇತಿಹಾಸದ ಪುನರಾವರ್ತನೆಯಾಗಿಲ್ಲ, ಅವು “[ಕ್ರಿಸ್ತನು] ಪ್ರತ್ಯಕ್ಷನಾಗುವದಕ್ಕೂ ಯುಗದ ಸಮಾಪ್ತಿಗೂ” ಇರುವ ‘ಸೂಚನೆಯ’ ಭಾಗವಾಗಿವೆ ಎಂಬುದನ್ನು ನಾವು ನಂಬಿಕೆಯ ಕಣ್ಣುಗಳಿಂದ ನೋಡಬಲ್ಲೆವು.—ಮತ್ತಾಯ 24:1-14.
12. ಲೂಕ 21:20, 21ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳು ಪ್ರಥಮ ಶತಮಾನದಲ್ಲಿ ಹೇಗೆ ನೆರವೇರಿದವು?
12 ಈ ಸಾಮಾನ್ಯ ಶಕದ ಪ್ರಥಮ ಶತಮಾನದಲ್ಲಿ ನಡೆದಂಥ ಒಂದು ಘಟನೆಗೆ ನಮ್ಮ ದಿನದಲ್ಲಿರುವ ಒಂದು ಹೋಲಿಕೆಯನ್ನು ನೋಡಿರಿ. ಯೇಸು ಕ್ರಿಸ್ತನು ಭೂಮಿಯ ಮೇಲಿದ್ದಾಗ ತನ್ನ ಹಿಂಬಾಲಕರಿಗೆ ಎಚ್ಚರಿಸಿದ್ದು: “ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ; ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ.” (ಲೂಕ 21:20, 21) ಈ ಪ್ರವಾದನೆಯ ನೆರವೇರಿಕೆಯಲ್ಲಿ, ಸೆಸ್ಟಿಯಸ್ ಗ್ಯಾಲಸ್ನ ಆಧಿಪತ್ಯದ ಕೆಳಗೆ ರೋಮನ್ ಸೈನ್ಯಗಳು ಸಾ.ಶ. 66ರಲ್ಲಿ ಯೆರೂಸಲೇಮಿಗೆ ಮುತ್ತಿಗೆಹಾಕಿದವು. ಆದರೆ ಆ ಸೈನ್ಯಗಳು ಅನಿರೀಕ್ಷಿತವಾಗಿ ಅಲ್ಲಿಂದ ಹಿಂದೆಹೋದವು, ಮತ್ತು ಇದು ಕ್ರೈಸ್ತರಿಗೆ ‘ಬೆಟ್ಟಗಳಿಗೆ ಓಡಿಹೋಗಲು’ ಸೂಚನೆಯನ್ನು ಹಾಗೂ ಅವಕಾಶವನ್ನು ಕೊಟ್ಟಿತು. ಸಾ.ಶ. 70ರಲ್ಲಿ ರೋಮನ್ ಸೈನ್ಯಗಳು ಪುನಃ ಬಂದವು, ಮತ್ತು ಈ ಸಲ ಅವು ಯೆರೂಸಲೇಮ್ ಪಟ್ಟಣವನ್ನು ಆಕ್ರಮಿಸಿ ಅದರ ಆಲಯವನ್ನು ನಾಶಪಡಿಸಿದವು. ಇತಿಹಾಸಗಾರ ಜೋಸೀಫಸನು ವರದಿಸಿರುವಂತೆ, ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಯೆಹೂದ್ಯರು ಮಡಿದರು, ಮತ್ತು 97,000 ಮಂದಿಯನ್ನು ಸೆರೆಯಾಳುಗಳಾಗಿ ಒಯ್ಯಲಾಯಿತು. ಹೀಗೆ ಆ ಯೆಹೂದಿ ವಿಷಯಗಳ ವ್ಯವಸ್ಥೆಯ ಮೇಲೆ ದೈವಿಕ ನ್ಯಾಯತೀರ್ಪನ್ನು ಜಾರಿಗೊಳಿಸಲಾಯಿತು. ನಂಬಿಕೆಯಿಂದ ನಡೆದು, ಯೇಸುವಿನ ಎಚ್ಚರಿಕೆಯನ್ನು ಪಾಲಿಸಿದವರು ವಿಪತ್ತಿನಿಂದ ತಪ್ಪಿಸಿಕೊಂಡರು.
13, 14. (ಎ) ಮುಂದೆ ಯಾವ ಘಟನೆಗಳು ನಡೆಯಲಿವೆ? (ಬಿ) ಬೈಬಲ್ ಪ್ರವಾದನೆಯು ನೆರವೇರುತ್ತಿರುವ ರೀತಿಗೆ ನಾವೇಕೆ ಎಚ್ಚರಿಕೆಯಿಂದ ಗಮನಕೊಡುತ್ತಿರಬೇಕು?
13 ಇಂದು ನಮ್ಮ ದಿನದಲ್ಲಿ ಇದಕ್ಕೆ ಹೋಲುವಂಥ ಸಂಗತಿಯು ನಡೆಯಲಿದೆ. ವಿಶ್ವಸಂಸ್ಥೆಯೊಳಗಿನ ಘಟಕಗಳು ದೈವಿಕ ನ್ಯಾಯದಂಡನೆಯ ಜಾರಿಗೊಳಿಸುವಿಕೆಯಲ್ಲಿ ಒಳಗೂಡಿರುವವು. ಪ್ರಥಮ ಶತಮಾನದ ರೋಮನ್ ಸೈನ್ಯಗಳು ಪಾಕ್ಸ್ ರೊಮಾನಾ (ರೋಮನ್ ಶಾಂತಿ)ವನ್ನು ಕಾಪಾಡಲು ಉದ್ದೇಶಿಸಲ್ಪಟ್ಟಿದ್ದಂತೆಯೇ, ಇಂದಿನ ವಿಶ್ವಸಂಸ್ಥೆಯು ಶಾಂತಿಯನ್ನು ಕಾಪಾಡುವ ಸಾಧನವಾಗಿರಲು ಉದ್ದೇಶಿಸಲ್ಪಟ್ಟಿರುತ್ತದೆ. ಆ ಸಮಯದಲ್ಲಿ ಜ್ಞಾತವಾಗಿದ್ದ ಜಗತ್ತಿನಾದ್ಯಂತ ರೋಮನ್ ಸೈನ್ಯಗಳು ಸಾಧಾರಣಮಟ್ಟಿಗಿನ ಸುರಕ್ಷಿತತೆಯನ್ನು ಕಾಪಾಡಲು ಪ್ರಯತ್ನಿಸಿದವಾದರೂ, ಅವು ಯೆರೂಸಲೇಮನ್ನು ವಿಧ್ವಂಸಗೊಳಿಸಿದವು. ಅದೇ ರೀತಿಯಲ್ಲಿ ಇಂದು, ವಿಶ್ವಸಂಸ್ಥೆಯೊಳಗಿನ ಮಿಲಿಟರೀಕೃತ ಶಕ್ತಿಗಳು, ಧರ್ಮವು ಶಾಂತಿಭಂಗಗೊಳಿಸುವಂಥ ಒಂದು ಅಂಶವಾಗಿದೆಯೆಂದು ಪರಿಗಣಿಸಿ ಆಧುನಿಕ ದಿನದ ಯೆರೂಸಲೇಮ್ ಆಗಿರುವ ಕ್ರೈಸ್ತಪ್ರಪಂಚದ ಸಮೇತ ಮಹಾ ಬಾಬೆಲಿನ ಉಳಿದ ಭಾಗವನ್ನು ನಾಶಮಾಡಲು ಕ್ರಿಯೆಗೈಯುವವು ಎಂದು ಬೈಬಲ್ ಪ್ರವಾದನೆಯು ಸೂಚಿಸುತ್ತದೆ. (ಪ್ರಕಟನೆ 17:12-17) ಹೌದು, ಸುಳ್ಳು ಧರ್ಮದ ಇಡೀ ಲೋಕ ಸಾಮ್ರಾಜ್ಯವು ವಿನಾಶದ ಅಂಚಿನಲ್ಲಿ ನಿಂತಿದೆ.
14 ಸುಳ್ಳು ಧರ್ಮದ ವಿನಾಶವು, ಮಹಾ ಸಂಕಟದ ಆರಂಭವಾಗಿರುವುದು. ಮಹಾ ಸಂಕಟದ ಕೊನೆ ಭಾಗದಲ್ಲಿ, ಈ ದುಷ್ಟ ವಿಷಯಗಳ ವ್ಯವಸ್ಥೆಯ ಉಳಿದ ಘಟಕಗಳು ನಾಶಗೊಳಿಸಲ್ಪಡುವವು. (ಮತ್ತಾಯ 24:29, 30; ಪ್ರಕಟನೆ 16:14, 16) ನಂಬಿಕೆಯಿಂದ ನಡೆಯುವುದು, ಬೈಬಲ್ ಪ್ರವಾದನೆಯು ಹೇಗೆ ನೆರವೇರುತ್ತಿದೆ ಎಂಬುದಕ್ಕೆ ಎಚ್ಚರಿಕೆಯಿಂದ ಗಮನಕೊಡುವಂತೆ ಮಾಡುತ್ತದೆ. ವಿಶ್ವಸಂಸ್ಥೆಯಂಥ ಯಾವುದೇ ಮಾನವನಿರ್ಮಿತ ಏಜೆನ್ಸಿಯು ಶಾಂತಿ ಹಾಗೂ ಭದ್ರತೆಯನ್ನು ತರುವ ದೇವರ ಸಾಧನವಾಗಿದೆ ಎಂದು ಯೋಚಿಸಿ ನಾವು ಮರುಳಾಗುವುದಿಲ್ಲ. ಹೀಗಿರುವುದರಿಂದ, ‘ಯೆಹೋವನ ಮಹಾದಿನವು ಹತ್ತಿರವಿದೆ’ ಎಂಬ ನಮ್ಮ ದೃಢನಂಬಿಕೆಯನ್ನು ನಮ್ಮ ಜೀವನ ರೀತಿಯು ಪ್ರದರ್ಶಿಸಬೇಕಲ್ಲವೊ?—ಚೆಫನ್ಯ 1:14.
ನೋಡುವವರಾಗಿ ನಡೆಯುವುದು ಎಷ್ಟು ಅಪಾಯಕರವಾಗಿದೆ?
15. ದೇವರ ಆಶೀರ್ವಾದವನ್ನು ಅನುಭವಿಸಿದ್ದರೂ, ಇಸ್ರಾಯೇಲ್ ಜನಾಂಗವು ಯಾವ ಪಾಶಕ್ಕೆ ಸಿಕ್ಕಿಬಿತ್ತು?
15 ಪುರಾತನ ಇಸ್ರಾಯೇಲಿನ ಅನುಭವಗಳು, ನೋಡುವವರಾಗಿ ನಡೆಯುವುದು ನಂಬಿಕೆಯನ್ನು ದುರ್ಬಲಗೊಳಿಸುವಂತೆ ಬಿಟ್ಟುಕೊಡುವುದರ ಅಪಾಯಗಳನ್ನು ದೃಷ್ಟಾಂತಿಸುತ್ತವೆ. ಇಸ್ರಾಯೇಲ್ಯರು, ಐಗುಪ್ತದ ಸುಳ್ಳು ದೇವರುಗಳನ್ನು ಅವಮಾನಕ್ಕೆ ಗುರಿಪಡಿಸಿದ ಹತ್ತು ಬಾಧೆಗಳನ್ನು ಕಣ್ಣಾರೆ ಕಂಡು, ಕೆಂಪು ಸಮುದ್ರದೊಳಗಿಂದ ವಿಸ್ಮಯಕರವಾದ ರೀತಿಯ ರಕ್ಷಣೆಯನ್ನು ಅನುಭವಿಸಿದ ನಂತರವೂ, ಅವಿಧೇಯತೆಯಿಂದ ಚಿನ್ನದ ಬಸವನನ್ನು ಮಾಡಿ ಅದನ್ನು ಆರಾಧಿಸಲಾರಂಭಿಸಿದರು. ಅವರು ಅಸಹನೆಗೊಂಡು ಮೋಶೆಗಾಗಿ ಕಾಯುವುದರಲ್ಲಿ ದಣಿದುಹೋದರು, ಏಕೆಂದರೆ ಅವನು ‘ಬೆಟ್ಟದಿಂದ ಇಳಿದು ಬರುವುದರಲ್ಲಿ ತಡಮಾಡಿದ್ದನು.’ (NIBV) (ವಿಮೋಚನಕಾಂಡ 32:1-4) ಆ ಅಸಹನೆಯೇ, ಅವರು ತಮ್ಮ ಕಣ್ಣಿಗೆ ಕಾಣುತ್ತಿದ್ದ ಒಂದು ವಿಗ್ರಹವನ್ನು ಆರಾಧಿಸುವಂತೆ ಮಾಡಿತು. ಅವರು ನೋಡುವವರಾಗಿ ನಡೆದದ್ದು ಯೆಹೋವನನ್ನು ತುಚ್ಛೀಕರಿಸಿತು ಮತ್ತು ‘ಮೂರು ಸಾವಿರ ಮಂದಿ’ ಕೊಲ್ಲಲ್ಪಡುವಂತೆ ನಡೆಸಿತು. (ವಿಮೋಚನಕಾಂಡ 32:25-29) ಇಂದು ಯೆಹೋವನ ಆರಾಧಕನೊಬ್ಬನು ಯೆಹೋವನ ಮೇಲೆ ಅವಿಶ್ವಾಸವನ್ನು ಮತ್ತು ವಾಗ್ದಾನಗಳನ್ನು ನೆರವೇರಿಸುವ ಆತನ ಸಾಮರ್ಥ್ಯದಲ್ಲಿ ಭರವಸೆಯ ಕೊರತೆಯನ್ನು ಸೂಚಿಸುವಂಥ ನಿರ್ಣಯಗಳನ್ನು ಮಾಡುವಾಗ ಅದೆಷ್ಟು ದುಃಖಕರವಾಗಿರುತ್ತದೆ!
16. ಇಸ್ರಾಯೇಲ್ಯರು ಹೊರತೋರಿಕೆಗಳಿಂದ ಹೇಗೆ ಬಾಧಿಸಲ್ಪಟ್ಟಿದ್ದರು?
16 ಹೊರತೋರಿಕೆಗಳು ಇಸ್ರಾಯೇಲ್ಯರನ್ನು ಇತರ ವಿಧಗಳಲ್ಲಿ ನಕಾರಾತ್ಮಕವಾಗಿ ಬಾಧಿಸಿದವು. ನೋಡುವವರಾಗಿ ನಡೆಯುವುದು ಅವರನ್ನು ತಮ್ಮ ಶತ್ರುಗಳ ಭಯದಿಂದ ನಡುಗುವಂತೆ ಮಾಡಿತು. (ಅರಣ್ಯಕಾಂಡ 13:28, 32; ಧರ್ಮೋಪದೇಶಕಾಂಡ 1:28) ಅದು ಅವರನ್ನು ಮೋಶೆಯ ದೇವದತ್ತ ಅಧಿಕಾರದ ಕುರಿತು ಸವಾಲೆಸೆಯುವಂತೆ ಮತ್ತು ತಮ್ಮ ಜೀವನ ರೀತಿಯ ಬಗ್ಗೆ ಗುಣುಗುಟ್ಟುವಂತೆ ಮಾಡಿತು. ಈ ನಂಬಿಕೆಯ ಕೊರತೆಯೇ, ಅವರು ವಾಗ್ದತ್ತ ದೇಶಕ್ಕಿಂತಲೂ ಹೆಚ್ಚಾಗಿ ದೆವ್ವನಿಯಂತ್ರಿತ ಐಗುಪ್ತವನ್ನು ಆಶಿಸುವಂತೆ ಮಾಡಿತು. (ಅರಣ್ಯಕಾಂಡ 14:1-4; ಕೀರ್ತನೆ 106:24) ತನ್ನ ಜನರು ಅದೃಶ್ಯನಾಗಿರುವ ತಮ್ಮ ರಾಜನಿಗಾಗಿ ತೋರಿಸಿದ ತೀವ್ರ ಅಗೌರವವನ್ನು ನೋಡಿ ಯೆಹೋವನ ಮನಸ್ಸಿಗೆ ಎಷ್ಟು ನೋವಾಗಿರಬೇಕು!
17. ಇಸ್ರಾಯೇಲ್ಯರು ಸಮುವೇಲನ ದಿನಗಳಲ್ಲಿ ಯೆಹೋವನ ಮಾರ್ಗದರ್ಶನವನ್ನು ತಳ್ಳಿಹಾಕುವಂತೆ ಯಾವುದು ಮಾಡಿತು?
17 ಪ್ರವಾದಿಯಾದ ಸಮುವೇಲನ ದಿನಗಳಲ್ಲಿ, ಈ ದೈವಾನುಗ್ರಹಿತ ಇಸ್ರಾಯೇಲ್ ಜನಾಂಗವು ನೋಡುವವರಾಗಿ ನಡೆಯುವ ಪಾಶದಲ್ಲಿ ಪುನಃ ಸಿಕ್ಕಿಬಿತ್ತು. ಆ ಜನರು ತಾವು ನೋಡಸಾಧ್ಯವಿರುವಂಥ ಒಬ್ಬ ರಾಜನಿಗಾಗಿ ಆಸೆಪಡಲಾರಂಭಿಸಿದರು. ತಾನು ಅವರ ಅರಸನೆಂದು ಯೆಹೋವನು ತೋರ್ಪಡಿಸಿಕೊಂಡಿದ್ದರೂ, ಅವರು ನಂಬಿಕೆಯಿಂದ ನಡೆಯುವಂತೆ ಮಾಡಲಿಕ್ಕಾಗಿ ಇದು ಸಾಲದೇ ಹೋಯಿತು. (1 ಸಮುವೇಲ 8:4-9) ಅವರು ಯೆಹೋವನ ದೋಷರಹಿತ ಮಾರ್ಗದರ್ಶನವನ್ನು ಮೂರ್ಖತನದಿಂದ ತಳ್ಳಿಹಾಕುತ್ತಾ ಸುತ್ತಮುತ್ತಲಿನ ಜನಾಂಗಗಳಂತಿರಲು ಇಷ್ಟಪಟ್ಟು ಹಾನಿಯನ್ನು ಅನುಭವಿಸಿದರು.—1 ಸಮುವೇಲ 8:19, 20.
18. ನೋಡುವವರಾಗಿ ನಡೆಯುವುದರ ಅಪಾಯಗಳ ವಿಷಯದಲ್ಲಿ ನಾವು ಯಾವ ಪಾಠಗಳನ್ನು ಕಲಿಯಬಹುದು?
18 ಯೆಹೋವನ ಆಧುನಿಕ ದಿನದ ಸೇವಕರಾಗಿರುವ ನಮಗೆ ದೇವರೊಂದಿಗಿನ ನಮ್ಮ ಸುಸಂಬಂಧವು ಅತ್ಯಮೂಲ್ಯವಾಗಿದೆ. ಗತಕಾಲದ ಘಟನೆಗಳಿಂದ ನಾವು ಅಮೂಲ್ಯವಾದ ಪಾಠಗಳನ್ನು ಕಲಿತು ಅವುಗಳನ್ನು ನಮ್ಮ ಬದುಕಿನಲ್ಲಿ ಅನ್ವಯಿಸಿಕೊಳ್ಳಲು ಆತುರರಾಗಿದ್ದೇವೆ. (ರೋಮಾಪುರ 15:4) ಇಸ್ರಾಯೇಲ್ಯರು ನೋಡುವವರಾಗಿ ನಡೆದಾಗ, ಮೋಶೆಯ ಮುಖಾಂತರ ದೇವರು ತಮ್ಮನ್ನು ನಿರ್ದೇಶಿಸುತ್ತಿದ್ದಾನೆ ಎಂಬುದನ್ನು ಅವರು ಮರೆತರು. ನಾವು ಸಹ ಒಂದುವೇಳೆ ಜಾಗ್ರತೆವಹಿಸದಿದ್ದರೆ, ಯೆಹೋವ ದೇವರು ಮತ್ತು ಮಹಾ ಮೋಶೆಯಾದ ಯೇಸು ಕ್ರಿಸ್ತನು ಇಂದು ಕ್ರೈಸ್ತ ಸಭೆಯನ್ನು ನಿರ್ದೇಶಿಸುತ್ತಿದ್ದಾರೆ ಎಂಬುದನ್ನು ಮರೆಯುವ ಸಾಧ್ಯತೆಯಿದೆ. (ಪ್ರಕಟನೆ 1:12-16) ಯೆಹೋವನ ಸಂಘಟನೆಯ ಭೂಭಾಗದ ವಿಷಯದಲ್ಲಿ ಮಾನವ ದೃಷ್ಟಿಕೋನವನ್ನು ತಾಳುವುದರ ಬಗ್ಗೆ ನಾವು ಎಚ್ಚರದಿಂದಿರಬೇಕು. ಏಕೆಂದರೆ ಆ ರೀತಿಯ ದೃಷ್ಟಿಕೋನವನ್ನು ತಾಳುವುದಾದರೆ, ಅದು ಗುಣುಗುಟ್ಟುವ ಮನೋಭಾವಕ್ಕೆ ಮತ್ತು ಯೆಹೋವನ ಪ್ರತಿನಿಧಿಗಳಿಗಾಗಿ ಮಾತ್ರವಲ್ಲದೆ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ’ ದೊರೆಯುವ ಆಧ್ಯಾತ್ಮಿಕ ಆಹಾರಕ್ಕಾಗಿರುವ ಗಣ್ಯತೆಯನ್ನು ಕಳೆದುಕೊಳ್ಳುವುದಕ್ಕೆ ನಡೆಸಬಲ್ಲದು.—ಮತ್ತಾಯ 24:45.
ನಂಬುವವರಾಗಿ ನಡೆಯಲು ದೃಢಸಂಕಲ್ಪವುಳ್ಳವರಾಗಿರಿ
19, 20. ನೀವೇನು ಮಾಡಲು ದೃಢಸಂಕಲ್ಪದಿಂದ ಇದ್ದೀರಿ, ಮತ್ತು ಏಕೆ?
19 “ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ” ಎಂದು ಬೈಬಲ್ ಹೇಳುತ್ತದೆ. (ಎಫೆಸ 6:12) ನಮ್ಮ ಮುಖ್ಯ ಶತ್ರು ಪಿಶಾಚನಾದ ಸೈತಾನನಾಗಿದ್ದಾನೆ. ಅವನ ಗುರಿಯು ಯೆಹೋವನಲ್ಲಿನ ನಮ್ಮ ನಂಬಿಕೆಯನ್ನು ತೊಡೆದುಹಾಕುವುದೇ ಆಗಿದೆ. ದೇವರ ಸೇವೆಮಾಡುವ ನಮ್ಮ ನಿರ್ಣಯದಿಂದ ನಮ್ಮನ್ನು ವಿಮುಖಗೊಳಿಸಬಲ್ಲ ಯಾವುದೇ ರೀತಿಯ ಪ್ರಭಾವವನ್ನು ಸೈತಾನನು ಉಪಯೋಗಿಸದೇ ಬಿಡುವುದಿಲ್ಲ. (1 ಪೇತ್ರ 5:8) ಸೈತಾನನ ವ್ಯವಸ್ಥೆಯ ಹೊರತೋರಿಕೆಯಿಂದ ನಾವು ಮೋಸಹೋಗದಂತೆ ನಮ್ಮನ್ನು ಯಾವುದು ಸಂರಕ್ಷಿಸುವುದು? ನೋಡುವವರಾಗಿ ಅಲ್ಲ, ನಂಬಿಕೆಯಿಂದ ನಡೆಯುವುದೇ! ಯೆಹೋವನ ವಾಗ್ದಾನಗಳಲ್ಲಿ ಭರವಸೆ ಹಾಗೂ ದೃಢವಿಶ್ವಾಸವು, ನಾವು ‘ನಂಬಿಕೆಯ ವಿಷಯದಲ್ಲಿ ಹಡಗು ಒಡೆದು ನಷ್ಟ’ಪಡದಂತೆ ನಮ್ಮನ್ನು ರಕ್ಷಿಸುವುದು. (1 ತಿಮೊಥೆಯ 1:19) ಹೀಗಿರುವುದರಿಂದ ಯೆಹೋವನ ಆಶೀರ್ವಾದದಲ್ಲಿ ಪೂರ್ಣ ಭರವಸೆಯಿಂದ, ನಂಬಿಕೆಯಿಂದ ನಡೆಯುತ್ತಾ ಮುಂದುವರಿಯುವ ದೃಢಸಂಕಲ್ಪದಿಂದಿರೋಣ. ಮತ್ತು ಹತ್ತಿರದ ಭವಿಷ್ಯದಲ್ಲಿ ಸಂಭವಿಸಲಿರುವ ವಿಷಯಗಳಿಂದ ತಪ್ಪಿಸಿಕೊಳ್ಳುವಂತೆ ನಾವು ಪ್ರಾರ್ಥಿಸುತ್ತಾ ಇರೋಣ.—ಲೂಕ 21:36.
20 ನಾವು ನೋಡುವವರಾಗಿ ಅಲ್ಲ ಬದಲಾಗಿ ನಂಬಿಕೆಯಿಂದ ನಡೆಯುತ್ತಿರುವಾಗ, ನಮಗೊಬ್ಬ ಅತ್ಯುತ್ತಮ ಆದರ್ಶವ್ಯಕ್ತಿ ಇದ್ದಾನೆ. “ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು” ಎಂದು ಬೈಬಲ್ ಹೇಳುತ್ತದೆ. (1 ಪೇತ್ರ 2:21) ಅವನು ನಡೆದಂತೆಯೇ ನಾವು ಹೇಗೆ ನಡೆಯುತ್ತಾ ಇರಬಲ್ಲೆವು ಎಂಬುದನ್ನು ಮುಂದಿನ ಲೇಖನವು ಚರ್ಚಿಸುವುದು.
ನಿಮಗೆ ಜ್ಞಾಪಕವಿದೆಯೊ?
• ನೋಡುವವರಾಗಿ ಅಲ್ಲ, ನಂಬಿಕೆಯಿಂದ ನಡೆಯುವುದರ ವಿಷಯದಲ್ಲಿ ಮೋಶೆ ಹಾಗೂ ಏಸಾವನ ಮಾದರಿಯಿಂದ ನೀವೇನನ್ನು ಕಲಿತಿದ್ದೀರಿ?
• ಪ್ರಾಪಂಚಿಕತೆಯನ್ನು ದೂರವಿಡಲಿಕ್ಕಾಗಿರುವ ಒಂದು ಕೀಲಿ ಕೈ ಯಾವುದು?
• ನಂಬಿಕೆಯಿಂದ ನಡೆಯುವುದು, ಅಂತ್ಯವು ತುಂಬ ದೂರದಲ್ಲಿದೆ ಎಂಬ ದೃಷ್ಟಿಕೋನವನ್ನು ತೊರೆಯುವಂತೆ ನಮಗೆ ಹೇಗೆ ಸಹಾಯಮಾಡಬಲ್ಲದು?
• ನೋಡುವವರಾಗಿ ನಡೆಯುವುದು ಅಪಾಯಕಾರಿಯಾಗಿದೆ ಏಕೆ?
[ಪುಟ 17ರಲ್ಲಿರುವ ಚಿತ್ರ]
ಮೋಶೆಯು ನಂಬಿಕೆಯಿಂದ ನಡೆದನು
[ಪುಟ 18ರಲ್ಲಿರುವ ಚಿತ್ರ]
ಅನೇಕವೇಳೆ ವಿನೋದಾವಳಿಯು ನಿಮ್ಮನ್ನು ದೇವಪ್ರಭುತ್ವಾತ್ಮಕ ಚಟುವಟಿಕೆಗಳಿಂದ ದೂರವಿರಿಸುತ್ತದೊ?
[ಪುಟ 20ರಲ್ಲಿರುವ ಚಿತ್ರ]
ದೇವರ ವಾಕ್ಯಕ್ಕೆ ಗಮನಕೊಡುವುದು ನಿಮ್ಮನ್ನು ಹೇಗೆ ಸಂರಕ್ಷಿಸುತ್ತದೆ?