ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w16 ಅಕ್ಟೋಬರ್‌ ಪು. 21-25
  • ನಿಮ್ಮ ನಿರೀಕ್ಷೆಯಿಂದ ನಂಬಿಕೆಯನ್ನು ಬಲಪಡಿಸಿಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ನಿರೀಕ್ಷೆಯಿಂದ ನಂಬಿಕೆಯನ್ನು ಬಲಪಡಿಸಿಕೊಳ್ಳಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹಿಂದಿನ ಕಾಲದ ದೇವಸೇವಕರಿಗೆ ಬಲವಾದ ನಂಬಿಕೆಯಿತ್ತು
  • ಅವರು ನಿಷ್ಠರಾಗಿ ಉಳಿದರು
  • ಬಲವಾದ ನಂಬಿಕೆಯಿರುವ ಈಗಿನ ಸೇವಕರು
  • ನಿಮಗೆ ಸುವಾರ್ತೆಯಲ್ಲಿ ನಿಜವಾಗಿಯೂ ನಂಬಿಕೆ ಇದೆಯೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಇಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ನಂಬಿಕೆ—ನಮ್ಮನ್ನು ಬಲಪಡಿಸುವ ಗುಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
w16 ಅಕ್ಟೋಬರ್‌ ಪು. 21-25
ಪ್ರಾಚೀನ ಕಾಲದ ನಂಬಿಗಸ್ತ ವೃದ್ಧನೊಬ್ಬ ಒಂದು ಕುಟುಂಬದೊಂದಿಗೆ ಮಾತನಾಡುತ್ತಿರುವುದು

ನಿಮ್ಮ ನಿರೀಕ್ಷೆಯಿಂದ ನಂಬಿಕೆಯನ್ನು ಬಲಪಡಿಸಿಕೊಳ್ಳಿ

‘ನಂಬಿಕೆಯು ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆಯಾಗಿದೆ.’—ಇಬ್ರಿ. 11:1.

ಗೀತೆಗಳು: 81, 134

ನಿಮ್ಮ ಉತ್ತರವೇನು?

  • ಹಿಂದಿನ ಕಾಲದ ಯೆಹೋವನ ಸೇವಕರು ಹೇಗೆ ತಮ್ಮ ನಂಬಿಕೆಯನ್ನು ಬಲಪಡಿಸಿಕೊಂಡರು?

  • ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಯೆಹೋವನು ನಮಗೆ ಏನೆಲ್ಲ ಕೊಟ್ಟಿದ್ದಾನೆ?

  • ಬಲವಾದ ನಂಬಿಕೆ ನಮ್ಮಲ್ಲಿದ್ದರೆ ನಾವೇನು ಮಾಡುತ್ತೇವೆ?

1, 2. (ಎ) ನಾವು ಎದುರುನೋಡುವ ವಿಷಯಗಳಿಗೂ, ಹೊರಗಿನ ಜನರು ಎದುರುನೋಡುವ ವಿಷಯಗಳಿಗೂ ವ್ಯತ್ಯಾಸ ಏನು? (ಬಿ) ಈ ಲೇಖನದಲ್ಲಿ ನಾವು ಏನು ಚರ್ಚೆ ಮಾಡಲಿದ್ದೇವೆ?

ಭವಿಷ್ಯದಲ್ಲಿ ಯೆಹೋವನು ಅನೇಕ ಅದ್ಭುತ ವಿಷಯಗಳನ್ನು ಮಾಡಲಿದ್ದಾನೆ. ಅವುಗಳಿಗಾಗಿ ನಾವು ಕಾತುರದಿಂದ ಕಾಯುತ್ತಿದ್ದೇವೆ. ತನ್ನ ನಾಮವನ್ನು ಪವಿತ್ರೀಕರಿಸಿ, ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ತನ್ನ ಚಿತ್ತ ನೆರವೇರುವಂತೆ ಮಾಡುತ್ತೇನೆಂದು ಹೇಳಿದ್ದಾನೆ. (ಮತ್ತಾ. 6:9, 10) ಈ ಎರಡು ವಿಷಯಗಳು ಕ್ರೈಸ್ತರು ನಿರೀಕ್ಷಿಸುತ್ತಿರುವ ವಿಷಯಗಳಲ್ಲೇ ಪ್ರಾಮುಖ್ಯವಾಗಿವೆ. ನಿತ್ಯಜೀವದ ನಿರೀಕ್ಷೆಯನ್ನು ಸಹ ಆತನು ನಮಗೆ ಕೊಟ್ಟಿದ್ದಾನೆ. ಆ ಸಮಯಕ್ಕಾಗಿ ನಾವೆಲ್ಲರೂ ಎದುರು ನೋಡುತ್ತಿದ್ದೇವೆ. (ಯೋಹಾ. 10:16; 2 ಪೇತ್ರ 3:13) ಜೊತೆಗೆ ಯೆಹೋವನು ನಮ್ಮನ್ನು ಕಡೇ ದಿವಸಗಳಲ್ಲಿ ಹೇಗೆ ಬೆಂಬಲಿಸುತ್ತಾನೆಂದು, ಮಾರ್ಗದರ್ಶಿಸುತ್ತಾನೆಂದು ನೋಡುವ ನಿರೀಕ್ಷೆಯೂ ನಮಗಿದೆ.

2 ಲೋಕದ ಜನರಿಗೂ ಸಹ ಕೆಲವೊಂದು ನಿರೀಕ್ಷೆಗಳಿವೆ. ಆದರೆ ಆ ನಿರೀಕ್ಷೆಗಳು ನೆರವೇರುತ್ತವೆ ಎನ್ನುವ ಭರವಸೆ ಅವರಿಗಿಲ್ಲ. ಉದಾಹರಣೆಗೆ, ಕೆಲವರು ಲಾಟರಿ ಖರೀದಿ ಮಾಡಿ ಹಣ ಗೆಲ್ಲಬೇಕು ಅಂತ ಅಂದುಕೊಳ್ಳುತ್ತಾರೆ. ಆದರೆ ಗೆದ್ದೆ ಗೆಲ್ಲುತ್ತೇವೆ ಎನ್ನುವ ಭರವಸೆ ಅವರಿಗೆ ಇರುವುದಿಲ್ಲ. ನಂಬಿಕೆ ಎನ್ನುವುದು ನಾವು ನಿರೀಕ್ಷಿಸುವ ವಿಷಯಗಳ ಮೇಲಿನ ‘ನಿಶ್ಚಿತ ಭರವಸೆಯಾಗಿದೆ’ ಎಂದು ಬೈಬಲ್‌ ಹೇಳುತ್ತದೆ. (ಇಬ್ರಿ. 11:1) ಯೆಹೋವನು ಕೊಟ್ಟಿರುವ ಮಾತುಗಳ ಮೇಲೆ ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುವುದು ಹೇಗೆಂದು ಈ ಲೇಖನದಲ್ಲಿ ನೋಡೋಣ. ಬಲವಾದ ನಂಬಿಕೆಯಿರುವುದು ಯಾಕೆ ತುಂಬ ಪ್ರಯೋಜನಕರ ಎಂದು ಸಹ ಕಲಿಯೋಣ.

3. ಯೆಹೋವನು ಕೊಟ್ಟ ಮಾತಿಗೆ ತಪ್ಪುವವನಲ್ಲ ಅನ್ನುವ ನಂಬಿಕೆ ನಮ್ಮಲ್ಲಿ ಯಾಕಿದೆ?

3 ನಾವ್ಯಾರೂ ಹುಟ್ಟುವಾಗಲೇ ನಂಬಿಕೆಯನ್ನು ಬೆನ್ನಿಗೆ ಕಟ್ಟಿಕೊಂಡು ಹುಟ್ಟಲ್ಲ. ನಮ್ಮಲ್ಲಿ ನಂಬಿಕೆ ಇರಬೇಕೆಂದರೆ ದೇವರ ಪವಿತ್ರಾತ್ಮ ನಮ್ಮ ಹೃದಯಗಳನ್ನು ಮಾರ್ಗದರ್ಶಿಸುವಂತೆ ಬಿಟ್ಟುಕೊಡಬೇಕು. (ಗಲಾ. 5:22) ಯೆಹೋವನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಪವಿತ್ರಾತ್ಮ ಸಹಾಯಮಾಡುತ್ತದೆ. ಯೆಹೋವ ದೇವರೇ ಸರ್ವಶಕ್ತನು ಮತ್ತು ವಿವೇಕಿಯು ಎಂದು ನಾವು ಅರ್ಥಮಾಡಿಕೊಂಡಾಗ ಕೊಟ್ಟ ಮಾತುಗಳನ್ನು ನೆರವೇರಿಸುವ ಸಾಮರ್ಥ್ಯ ಆತನಿಗಿದೆ ಎನ್ನುವ ಭರವಸೆ ನಮಗೆ ಬರುತ್ತದೆ. ಸ್ವತಃ ಯೆಹೋವ ದೇವರೇ ತಾನು ಕೊಟ್ಟಿರುವ ಮಾತುಗಳನ್ನು ಈಗಾಗಲೇ ನಡೆದಿರುವಂತೆ ಮಾತಾಡುತ್ತಾನೆ. “ಅವು ನೆರವೇರಿವೆ!” ಎಂದು ಆತನು ಬೈಬಲಿನಲ್ಲಿ ಹೇಳಿದ್ದಾನೆ. (ಪ್ರಕಟನೆ 21:3-6 ಓದಿ.) ಯೆಹೋವನು ಕೊಟ್ಟ ಮಾತಿಗೆ ತಪ್ಪುವವನಲ್ಲ ಅಂತ ನಮ್ಮೆಲ್ಲರಿಗೂ ಗೊತ್ತು. ಆತನು “ನಂಬಿಗಸ್ತನಾದ ದೇವರು.” ಹಾಗಾಗಿಯೇ ಆತನು ಭವಿಷ್ಯತ್ತಿನ ಬಗ್ಗೆ ಏನೆಲ್ಲ ಹೇಳಿದ್ದಾನೋ ಅದನ್ನೆಲ್ಲ ನಾವು ನಂಬುತ್ತೇವೆ.—ಧರ್ಮೋ. 7:9.

ಹಿಂದಿನ ಕಾಲದ ದೇವಸೇವಕರಿಗೆ ಬಲವಾದ ನಂಬಿಕೆಯಿತ್ತು

4. ಹಿಂದಿನ ಕಾಲದ ದೇವಸೇವಕರಿಗೆ ಯಾವುದರಲ್ಲಿ ನಂಬಿಕೆಯಿತ್ತು?

4 ಯೆಹೋವನು ಕೊಟ್ಟ ಮಾತುಗಳಲ್ಲಿ ಬಲವಾದ ನಂಬಿಕೆಯಿದ್ದ 16 ನಂಬಿಗಸ್ತ ಸ್ತ್ರೀ-ಪುರುಷರ ಬಗ್ಗೆ ಇಬ್ರಿಯ 11⁠ನೇ ಅಧ್ಯಾಯದಲ್ಲಿದೆ. “ತಮ್ಮ ನಂಬಿಕೆಯ ಮೂಲಕ” ಯೆಹೋವನನ್ನು ಮೆಚ್ಚಿಸಿದ ಇನ್ನೂ ಅನೇಕರ ಬಗ್ಗೆ ಅಲ್ಲಿ ತಿಳಿಸಲಾಗಿದೆ. (ಇಬ್ರಿ. 11:39) ಯೆಹೋವನು ಮುಂತಿಳಿಸಿದ್ದ ‘ಸಂತಾನವನ್ನು’ ಅವರೆಲ್ಲರೂ ಎದುರುನೋಡುತ್ತಿದ್ದರು. ಆ “ಸಂತಾನ” ದೇವರ ಎಲ್ಲ ವೈರಿಗಳನ್ನು ನಾಶಮಾಡಿ ಇಡೀ ಭೂಮಿಯನ್ನು ಮುಂಚಿನಂತೆಯೇ ಸುಂದರ ವನವಾಗಿ ಮಾರ್ಪಡಿಸುತ್ತದೆ ಎಂದು ಅವರಿಗೆ ಗೊತ್ತಿತ್ತು. (ಆದಿ. 3:15) ಯೆಹೋವ ದೇವರು ತಮ್ಮನ್ನು ಪುನರುತ್ಥಾನ ಮಾಡುತ್ತಾನೆ ಎನ್ನುವ ಭರವಸೆ ಸಹ ಆ ಸೇವಕರಿಗಿತ್ತು. ಯೇಸು ಸ್ವರ್ಗದ ನಿರೀಕ್ಷೆಯ ಬಾಗಿಲನ್ನು ತೆರೆಯುವ ಮುಂಚೆಯೇ ಇವರೆಲ್ಲ ತೀರಿಹೋಗಿದ್ದರಿಂದ ಅವರಿಗ್ಯಾರಿಗೂ ಸ್ವರ್ಗಕ್ಕೆ ಹೋಗುವ ನಿರೀಕ್ಷೆ ಇರಲ್ಲಿಲ್ಲ. (ಗಲಾ. 3:16) ಬದಲಿಗೆ ಅವರಿಗೆಲ್ಲ ಸುಂದರ ಪರದೈಸ್‌ ಆಗಲಿರುವ ಇದೇ ಭೂಮಿಯ ಮೇಲೆ ನಿತ್ಯಕ್ಕೂ ಜೀವಿಸುವ ನಿರೀಕ್ಷೆಯಿತ್ತು.—ಕೀರ್ತ. 37:11; ಯೆಶಾ. 26:19; ಹೋಶೇ. 13:14.

5, 6. (ಎ) ಅಬ್ರಹಾಮ ಮತ್ತು ಅವನ ಕುಟುಂಬದವರು ಏನನ್ನು ಎದುರುನೋಡಿದರು? (ಬಿ) ತಮ್ಮ ಬಲವಾದ ನಂಬಿಕೆಯನ್ನು ಅವರು ಹೇಗೆ ಕಾಪಾಡಿಕೊಂಡರು? (ಲೇಖನದ ಆರಂಭದ ಚಿತ್ರ ನೋಡಿ.)

5 ಈ ನಂಬಿಗಸ್ತ ಸೇವಕರ ಬಗ್ಗೆ ಇಬ್ರಿಯ 11:13⁠ರಲ್ಲಿ ಹೀಗೆ ಹೇಳಲಾಗಿದೆ: “ಇವರೆಲ್ಲರೂ ವಾಗ್ದಾನದ ನೆರವೇರಿಕೆಯನ್ನು ಹೊಂದಲಿಲ್ಲವಾದರೂ ಅವುಗಳನ್ನು ದೂರದಿಂದಲೇ ನೋಡಿ ಸ್ವಾಗತಿಸಿದರು.” ಹೊಸ ಲೋಕವನ್ನು ಎದುರುನೋಡುತ್ತಾ ಅಲ್ಲಿ ಜೀವಿಸುತ್ತಿರುವಂತೆ ಅವರೆಲ್ಲರೂ ಊಹಿಸಿಕೊಂಡರು. ಅಂಥವರಲ್ಲಿ ಒಬ್ಬನು ಅಬ್ರಹಾಮ. ಅಬ್ರಹಾಮನು ಆ ಸಮಯವನ್ನು “ನೋಡುವ ಪ್ರತೀಕ್ಷೆಯಲ್ಲಿ ಬಹಳ ಆನಂದಿಸಿದನು” ಎಂದು ಯೇಸು ಹೇಳಿದನು. (ಯೋಹಾ. 8:56) ಸಾರ, ಇಸಾಕ, ಯಾಕೋಬ ಮತ್ತು ಇನ್ನೂ ಅನೇಕರು ಯೆಹೋವನು “ಕಟ್ಟಿದ ಮತ್ತು ಸೃಷ್ಟಿಸಿದ” ದೇವರ ರಾಜ್ಯ ಯಾವಾಗ ಇಡೀ ಭೂಮಿಯ ಮೇಲೆ ಆಳ್ವಿಕೆ ಮಾಡುತ್ತದೆಂದು ಎದುರುನೋಡಿದರು.—ಇಬ್ರಿ. 11:8-11.

6 ಅಬ್ರಹಾಮ ಮತ್ತು ಅವನ ಕುಟುಂಬದವರು ತಮಗಿದ್ದ ಬಲವಾದ ನಂಬಿಕೆಯನ್ನು ಹೇಗೆ ಕಾಪಾಡಿಕೊಂಡರು? ಯೆಹೋವನ ಬಗ್ಗೆ ಕಲಿಯುವುದನ್ನು ಅವರು ನಿಲ್ಲಿಸಲಿಲ್ಲ. ದೇವದೂತರ ಮೂಲಕ, ಕನಸುಗಳ ಅಥವಾ ದರ್ಶನಗಳ ಮೂಲಕ ದೇವರು ಅವರೊಂದಿಗೆ ಮಾತಾಡಿದನು. ಆ ಕಾಲದಲ್ಲಿದ್ದ ವೃದ್ಧ ಸೇವಕರಿಂದ ಅಥವಾ ಪವಿತ್ರ ಬರಹಗಳಿಂದ ಸಹ ಅವರು ಕಲಿತಿರಬಹುದು. ಯೆಹೋವನ ವಾಗ್ದಾನಗಳನ್ನು ಅವರು ಯಾವತ್ತೂ ಮರೆಯಲಿಲ್ಲ. ಅದರ ಕುರಿತು ಧ್ಯಾನಿಸಲು ಇಷ್ಟಪಡುತ್ತಿದ್ದರು. ಹಾಗಾಗಿ ಯೆಹೋವನು ತನ್ನ ಮಾತನ್ನು ಉಳಿಸಿಕೊಳ್ಳುತ್ತಾನೋ ಇಲ್ಲವೋ ಎಂದು ಅವರಿಗೆ ಕಿಂಚಿತ್ತೂ ಸಂಶಯವಿರಲಿಲ್ಲ. ಕಷ್ಟಗಳು ಬಂದರೂ, ವಿರೋಧವನ್ನು ಅನುಭವಿಸಿದರೂ ನಿಷ್ಠಾವಂತರಾಗಿ ಉಳಿದರು.

7. (ಎ) ನಮ್ಮ ನಂಬಿಕೆಯನ್ನು ಬಲಪಡಿಸಲು ಯೆಹೋವ ದೇವರು ಏನೆಲ್ಲ ಕೊಟ್ಟಿದ್ದಾನೆ? (ಬಿ) ಆದರೆ ನಾವೇನು ಮಾಡಬೇಕು?

7 ನಮ್ಮ ನಂಬಿಕೆ ಬಲವಾಗಿರಬೇಕಾದರೆ ನಾವೇನು ಮಾಡಬೇಕು? ಯೆಹೋವನು ತನ್ನ ಭವಿಷ್ಯತ್ತಿನ ವಾಗ್ದಾನಗಳ ಬಗ್ಗೆ ಕಲಿಸಲು ನಮಗೆ ಬೈಬಲನ್ನು ಕೊಟ್ಟಿದ್ದಾನೆ. ನಾವು ಸಂತೋಷವಾಗಿ ಇರಬೇಕಾದರೆ ಏನು ಮಾಡಬೇಕು ಅಂತ ಅದರಲ್ಲಿ ಬರೆಸಿದ್ದಾನೆ. ಹಾಗಾಗಿ ನಾವು ಬೈಬಲನ್ನು ಪ್ರತಿದಿನ ಓದಬೇಕು, ಅದರಲ್ಲಿರುವ ಮಾರ್ಗದರ್ಶನವನ್ನು ಪಾಲಿಸಬೇಕು. (ಕೀರ್ತ. 1:1-3; ಅಪೊಸ್ತಲರ ಕಾರ್ಯಗಳು 17:11 ಓದಿ.) ಯೆಹೋವ ದೇವರು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಮೂಲಕ “ತಕ್ಕ ಸಮಯಕ್ಕೆ ಆಹಾರವನ್ನು” ಕೊಡುತ್ತಿದ್ದಾನೆ. (ಮತ್ತಾ. 24:45) ಹಿಂದಿನ ಕಾಲದ ಸೇವಕರಂತೆ ನಾವು ಸಹ ದೇವರ ವಾಗ್ದಾನಗಳ ಕುರಿತು ಓದಿ, ಆಳವಾಗಿ ಧ್ಯಾನಿಸಬೇಕು. ಹೀಗೆ ಮಾಡುವಾಗ ದೇವರಿಗೆ ನಿಷ್ಠೆಯಿಂದಿರಲು ಮತ್ತು ದೇವರ ರಾಜ್ಯ ಈ ಭೂಮಿಯನ್ನು ಆಳುವ ಸಮಯಕ್ಕಾಗಿ ಎದುರುನೋಡಲು ಸಾಧ್ಯವಾಗುತ್ತದೆ.

8. ಪ್ರಾರ್ಥನೆಯಿಂದ ನಮ್ಮ ನಂಬಿಕೆ ಹೇಗೆ ಬಲಗೊಳ್ಳುತ್ತದೆ?

8 ಬಲವಾದ ನಂಬಿಕೆಯನ್ನು ಕಾಪಾಡಿಕೊಳ್ಳಲು ಹಿಂದಿನ ದೇವಸೇವಕರಿಗೆ ಬೇರೆ ಯಾವುದು ಸಹಾಯ ಮಾಡಿತು? ಸಹಾಯಕ್ಕಾಗಿ ಅವರು ಯೆಹೋವ ದೇವರ ಬಳಿ ಪ್ರಾರ್ಥಿಸಿದರು. ಆತನು ತಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುವುದನ್ನು ನೋಡುವಾಗ ಅವರ ನಂಬಿಕೆ ಇನ್ನೂ ಬಲವಾಯಿತು. (ನೆಹೆ. 1:4, 11; ಕೀರ್ತ. 34:4, 15, 17; ದಾನಿ. 9:19-21) ಅದೇ ರೀತಿ, ನಾವು ಮಾಡಿದ ಪ್ರಾರ್ಥನೆಗಳಿಗೆ ಯೆಹೋವ ದೇವರು ಕಿವಿಗೊಟ್ಟು ನಮಗೆ ಸರಿಯಾದ ಸಮಯಕ್ಕೆ ಅಗತ್ಯವಿರುವುದನ್ನು ಕೊಡುವಾಗ ನಮ್ಮ ನಂಬಿಕೆ ಸಹ ಬಲವಾಗುತ್ತದೆ. (1 ಯೋಹಾನ 5:14, 15 ಓದಿ.) ಹಾಗಾಗಿ ನಾವು ಯೆಹೋವ ದೇವರಲ್ಲಿ ಪವಿತ್ರಾತ್ಮಕ್ಕಾಗಿ ‘ಕೇಳುತ್ತಾ ಇರಬೇಕು.’—ಲೂಕ 11:9, 13.

9. ಯಾವೆಲ್ಲ ವಿಷಯಗಳಿಗಾಗಿ ಪ್ರಾರ್ಥಿಸಬೇಕು?

9 ಅದು ಬೇಕು, ಇದು ಬೇಕು ಅಂತ ಕೇಳಲು ಮಾತ್ರ ನಾವು ಯೆಹೋವನಿಗೆ ಪ್ರಾರ್ಥನೆ ಮಾಡುವುದಲ್ಲ. ಆತನಿಗೆ ನಾವು ಪ್ರತಿದಿನ ಕೃತಜ್ಞತೆ ಹೇಳಬೇಕು ಮತ್ತು ಸ್ತುತಿಯನ್ನು ಸಲ್ಲಿಸಬೇಕು. ನಮಗೋಸ್ಕರ ಎಷ್ಟೋ ಅದ್ಭುತ ವಿಷಯಗಳನ್ನು ಆತನು ಮಾಡಿದ್ದಾನಲ್ಲ! (ಕೀರ್ತ. 40:5) ಯೆಹೋವನ ಜನರು ಪ್ರಪಂಚದೆಲ್ಲೆಡೆ ಇರುವ ತಮ್ಮ ಸಹೋದರರಿಗೋಸ್ಕರ ಪ್ರಾರ್ಥಿಸುತ್ತಾರೆ. ಉದಾಹರಣೆಗೆ, ‘ಸೆರೆಯಲ್ಲಿರುವವರಿಗಾಗಿ’ ನಾವು ಪ್ರಾರ್ಥಿಸುತ್ತೇವೆ. ‘ಮುಂದಾಳುತ್ವ ವಹಿಸುತ್ತಿರುವವರಿಗಾಗಿ’ ಸಹ ಪ್ರಾರ್ಥಿಸುತ್ತೇವೆ. ಇಂಥ ನಮ್ಮ ಪ್ರಾರ್ಥನೆಗಳಿಗೆ ಯೆಹೋವನು ಉತ್ತರಿಸುವುದನ್ನು ನೋಡುವಾಗ ಆತನಲ್ಲಿರುವ ನಮ್ಮ ನಂಬಿಕೆ ಇನ್ನೂ ಹೆಚ್ಚಾಗುತ್ತದೆ ಮತ್ತು ನಾವು ಆತನಿಗೆ ಇನ್ನಷ್ಟು ಆಪ್ತರಾಗುತ್ತೇವೆ.—ಇಬ್ರಿ. 13:3, 7.

ಅವರು ನಿಷ್ಠರಾಗಿ ಉಳಿದರು

10. ಧೈರ್ಯದಿಂದಿರಲು ಮತ್ತು ಯೆಹೋವನಿಗೆ ನಿಷ್ಠರಾಗಿರಲು ಅನೇಕರಿಗೆ ಯಾವುದು ಸಹಾಯಮಾಡಿತು?

10 ಇಬ್ರಿಯ 11⁠ನೇ ಅಧ್ಯಾಯದಲ್ಲಿ ಅಪೊಸ್ತಲ ಪೌಲನು ಹೀಗೆ ಹೇಳಿದನು: “ಮೃತರಾಗಿದ್ದ ತಮ್ಮವರನ್ನು ಸ್ತ್ರೀಯರು ಪುನರುತ್ಥಾನದ ಮೂಲಕ ಪುನಃ ಪಡೆದುಕೊಂಡರು; ಇತರ ಪುರುಷರು ಉತ್ತಮವಾದ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ ಯಾವುದೇ ರೀತಿಯ ವಿಮೋಚನಾ ಮೌಲ್ಯದಿಂದ ಬಿಡುಗಡೆಯನ್ನು ಸ್ವೀಕರಿಸದೇ ಹೋದದ್ದಕ್ಕಾಗಿ ಯಾತನೆಯನ್ನು ಅನುಭವಿಸಿದರು.” (ಇಬ್ರಿ. 11:35) ಅನೇಕರು ವಿರೋಧವನ್ನು ತಾಳಿಕೊಂಡರು ಮತ್ತು ಯೆಹೋವನಿಗೆ ನಿಷ್ಠರಾಗಿ ಉಳಿದರು. ಏಕೆಂದರೆ ದೇವರು ಮಾತುಕೊಟ್ಟ ಪುನರುತ್ಥಾನದಲ್ಲಿ ಅವರಿಗೆ ಸಂಪೂರ್ಣ ನಂಬಿಕೆಯಿತ್ತು. ಭವಿಷ್ಯತ್ತಿನಲ್ಲಿ ಯೆಹೋವನು ತಮಗೆ ಪುನಃ ಜೀವಕೊಟ್ಟು ಇದೇ ಭೂಮಿಯ ಮೇಲೆ ನಿತ್ಯಜೀವವನ್ನು ಕೊಡಲಿದ್ದಾನೆಂದು ಅವರಿಗೆ ಗೊತ್ತಿತ್ತು. ನಾಬೋತ ಮತ್ತು ಜೆಕರ್ಯನ ಬಗ್ಗೆ ಯೋಚಿಸಿ. ದೇವರಿಗೆ ವಿಧೇಯತೆ ತೋರಿಸಿದ್ದಕ್ಕಾಗಿ ಅವರನ್ನು ಕಲ್ಲೆಸೆದು ಕೊಲ್ಲಲಾಯಿತು. (1 ಅರ. 21:3, 15; 2 ಪೂರ್ವ. 24:20, 21) ದಾನಿಯೇಲನನ್ನು ಹಸಿದ ಸಿಂಹಗಳಿರುವ ಗವಿಗೆ ಬಿಸಾಡಲಾಯಿತು. ಅವನ ಸ್ನೇಹಿತರನ್ನು ಧಗಧಗನೆ ಉರಿಯುವ ಬೆಂಕಿಗೆ ಹಾಕಲಾಯಿತು. ಯೆಹೋವನಿಗೆ ನಿಷ್ಠೆ ತೋರಿಸದೆ ಇರುವುದಕ್ಕಿಂತ ಸಾವೇ ಲೇಸೆಂದು ಇವರೆಲ್ಲರೂ ಅಂದುಕೊಂಡರು. ಯೆಹೋವ ದೇವರು ಖಂಡಿತ ಪವಿತ್ರಾತ್ಮದ ಮೂಲಕ ಸಹಾಯ ಮಾಡುತ್ತಾನೆ, ತಮ್ಮನ್ನು ಕಷ್ಟಗಳಿಂದ ಬಿಡಿಸುತ್ತಾನೆ ಎನ್ನುವ ಸಂಪೂರ್ಣ ನಂಬಿಕೆ ಅವರಿಗಿತ್ತು.—ದಾನಿ. 3:16-18, 20, 28; 6:13, 16, 21-23; ಇಬ್ರಿ. 11:33, 34.

11. ನಂಬಿಕೆಯ ನಿಮಿತ್ತ ಕೆಲವು ಪ್ರವಾದಿಗಳು ಎಂಥ ಕಷ್ಟಗಳನ್ನು ಅನುಭವಿಸಿದರು?

11 ಮೀಕಾಯೇಹು ಮತ್ತು ಯೆರೆಮೀಯರಂಥ ಅನೇಕ ಪ್ರವಾದಿಗಳನ್ನು ಗೇಲಿಮಾಡಿ ಸೆರೆಮನೆಗೆ ಹಾಕಲಾಯಿತು. ಎಲೀಯನಂಥ ಇತರ ಪ್ರವಾದಿಗಳು “ಈ ಭೂಮಿಯ ಅರಣ್ಯಗಳಲ್ಲಿ, ಬೆಟ್ಟಗಳಲ್ಲಿ, ಗವಿಗಳಲ್ಲಿ ಮತ್ತು ಕುಣಿಗಳಲ್ಲಿ ಅಲೆದಾಡಿದರು.” ಅವರೆಲ್ಲರೂ ಕಷ್ಟಗಳನ್ನು ತಾಳಿಕೊಂಡರು. ದೇವರಿಗೆ ನಿಷ್ಠರಾಗಿದ್ದರು. ಯಾಕೆಂದರೆ “ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆ” ಅವರಿಗಿತ್ತು.—ಇಬ್ರಿ. 11:1, 36-38; 1 ಅರ. 18:13; 22:24-27; ಯೆರೆ. 20:1, 2; 28:10, 11; 32:2.

12. ಯಾರ ಉತ್ತಮ ಮಾದರಿಯನ್ನು ನಾವೆಲ್ಲರೂ ಅನುಕರಿಸಬಹುದು? (ಬಿ) ಕಷ್ಟಗಳನ್ನು ತಾಳಿಕೊಳ್ಳಲು ಅವನಿಗೆ ಯಾವುದು ಸಹಾಯಮಾಡಿತು?

12 ಯೇಸು ಕ್ರಿಸ್ತನು ಎಲ್ಲರಿಗಿಂತ ಅತೀ ಕಷ್ಟದ ಸನ್ನಿವೇಶವನ್ನು ಎದುರಿಸಿ, ಯೆಹೋವನಿಗೆ ನಿಷ್ಠನಾಗಿ ಉಳಿದನು. ತಾಳಿಕೊಳ್ಳಲು ಯೇಸುವಿಗೆ ಯಾವುದು ಸಹಾಯಮಾಡಿತು? ಪೌಲನು ಹೀಗೆ ಹೇಳಿದನು: “ಅವನು [ಯೇಸು] ತನ್ನ ಮುಂದೆ ಇಡಲ್ಪಟ್ಟಿದ್ದ ಆನಂದಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಯಾತನಾ ಕಂಬವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ.” (ಇಬ್ರಿ. 12:2) ಈ ಮಾತುಗಳನ್ನಾಡಿದ ನಂತರ ಪೌಲನು ಕ್ರೈಸ್ತರಿಗೆ ಯೇಸುವಿನ ಮಾದರಿಯನ್ನು ‘ನಿಕಟವಾಗಿ ಪರಿಗಣಿಸುವಂತೆ’ ಉತ್ತೇಜಿಸಿದನು. (ಇಬ್ರಿಯ 12:3 ಓದಿ.) ಒಂದನೇ ಶತಮಾನದಲ್ಲಿ ಅನೇಕರು ಯೆಹೋವನಿಗೆ ನಿಷ್ಠರಾಗಿ ಉಳಿಯಲು ಯೇಸುವಿನಂತೆ ಪ್ರಾಣ ಕೊಟ್ಟರು. ಅವರಲ್ಲಿ ಒಬ್ಬನು ಅಂತಿಪನು. (ಪ್ರಕ. 2:13) ಹಿಂದಿನ ದೇವಸೇವಕರಂತೆ ಭೂಮಿಯ ಮೇಲಿನ ನಿತ್ಯಜೀವಕ್ಕಾಗಿ ಇವರು ಕಾಯದೆ, ಈಗಾಗಲೇ ತಮ್ಮ ಬಹುಮಾನವನ್ನು ಪಡೆದುಕೊಂಡಿದ್ದಾರೆ. (ಇಬ್ರಿ. 11:35) ಯೇಸು 1914⁠ರಲ್ಲಿ ರಾಜನಾದ ಸ್ವಲ್ಪ ಕಾಲದ ನಂತರ ಅಭಿಷಿಕ್ತ ಕ್ರೈಸ್ತರು ಸ್ವರ್ಗಕ್ಕೆ ಪುನರುತ್ಥಾನವಾಗಿ ಅಮರತ್ವ ಪಡೆದುಕೊಂಡರು. ಅವರು ಯೇಸುವಿನೊಂದಿಗೆ ಸೇರಿ ಅಲ್ಲಿಂದ ಮಾನವರನ್ನು ಆಳುವರು.—ಪ್ರಕ. 20:4.

ಬಲವಾದ ನಂಬಿಕೆಯಿರುವ ಈಗಿನ ಸೇವಕರು

13, 14. (ಎ) ಸಹೋದರ ರೂಡಾಲ್ಫ್‌ ಗ್ರೈಕನ್‌ ಎಂಥ ಕಷ್ಟಗಳನ್ನು ತಾಳಿಕೊಂಡರು? (ಬಿ) ದೇವರಿಗೆ ನಿಷ್ಠರಾಗಿ ಉಳಿಯಲು ಅವರಿಗೆ ಯಾವುದು ಸಹಾಯಮಾಡಿತು?

13 ಯೇಸುವಿನ ಮಾದರಿಯನ್ನು ಇಂದು ಲಕ್ಷಾಂತರ ದೇವಸೇವಕರು ಹಿಂಬಾಲಿಸುತ್ತಿದ್ದಾರೆ. ದೇವರ ವಾಗ್ದಾನಗಳನ್ನು ಧ್ಯಾನಿಸಿ, ಕಷ್ಟಗಳ ಮಧ್ಯೆಯೂ ನಿಷ್ಠರಾಗಿದ್ದಾರೆ. ಅದಕ್ಕೆ ಒಂದು ಉದಾಹರಣೆ, ಸಹೋದರ ರೂಡಾಲ್ಫ್‌ ಗ್ರೈಕನ್‌. ಇವರು 1925⁠ರಲ್ಲಿ ಜರ್ಮನಿಯಲ್ಲಿ ಹುಟ್ಟಿದರು. ಇವರು ಚಿಕ್ಕವರಿರುವಾಗ ಇವರ ಹೆತ್ತವರು ಮನೆಯ ಗೋಡೆಗಳ ಮೇಲೆ ಬೈಬಲ್‌ ವಿಷಯಗಳಿದ್ದ ಚಿತ್ರಗಳನ್ನು ತೂಗುಹಾಕಿದ್ದರು. ಅವುಗಳ ಬಗ್ಗೆ ರೂಡಾಲ್ಫ್‌ ಹೀಗೆ ಹೇಳಿದರು: “ಒಂದು ಚಿತ್ರದಲ್ಲಿ ತೋಳ ಮತ್ತು ಕುರಿಮರಿ, ಚಿರತೆ ಮತ್ತು ಮೇಕೆಮರಿ, ಸಿಂಹ ಮತ್ತು ಕರು—ಎಲ್ಲವೂ ಶಾಂತಿಯಿಂದ ಇದ್ದವು. ಅವುಗಳನ್ನು ಒಬ್ಬ ಚಿಕ್ಕ ಹುಡುಗನು ನಡೆಸುತ್ತಿದ್ದನು.” (ಯೆಶಾ. 11:6-9) ಇದು ಸಹೋದರ ರೂಡಾಲ್ಫ್‌ ಗೆ ಇಡೀ ಭೂಮಿ ಪರದೈಸ್‌ ಆಗುವಾಗ ಹೇಗಿರುತ್ತೆ ಎಂದು ಯೋಚಿಸಲು, ಅದರ ಮೇಲಿನ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಸಹಾಯಮಾಡಿತು. ಅಲ್ಲದೆ, ಪೂರ್ವ ಜರ್ಮನಿಯ ನಾಜಿ ಗೆಸ್ಟಾಪೊಯಿಂದ ಮತ್ತು ನಂತರ ಕಮ್ಯೂನಿಸ್ಟ್‌ ಷ್ಟಾಸೀಯಿಂದ ಎಷ್ಟೋ ವರ್ಷಗಳ ವರೆಗೆ ಕಡು ಹಿಂಸೆ ಅನುಭವಿಸುತ್ತಿದ್ದಾಗ ಯೆಹೋವನಿಗೆ ನಿಷ್ಠೆಯಿಂದ ಉಳಿಯಲು ಅವರಿಗೆ ನೆರವಾಯಿತು.

14 ಸಹೋದರ ರೂಡಾಲ್ಫ್‌ ಅನೇಕ ಕಷ್ಟಗಳನ್ನು ಎದುರಿಸಿದರು. ಅವರ ತಾಯಿ ರಾವನ್ಸ್‌ಬ್ರೂಕ್‌ನ ಸೆರೆಶಿಬಿರದಲ್ಲಿ ಟೈಫಸ್‌ ಜ್ವರದಿಂದ ತೀರಿಹೋದರು. ಅವರ ತಂದೆ ತಾನು ಇನ್ನು ಮುಂದೆ ಒಬ್ಬ ಯೆಹೋವನ ಸಾಕ್ಷಿಯಾಗಿ ಇರುವುದಿಲ್ಲ ಎಂದು ಬರೆದುಕೊಟ್ಟು, ಆ ಪತ್ರಕ್ಕೆ ಸಹಿಹಾಕಿದರು. ಆದರೆ ರೂಡಾಲ್ಫ್‌ ರವರ ನಂಬಿಕೆ ಬಲವಾಗಿತ್ತು. ಸೆರೆಮನೆಯಿಂದ ಬಿಡುಗಡೆಯಾದ ನಂತರ ಅವರು ಸಂಚರಣ ಮೇಲ್ವಿಚಾರಕರಾಗಿ ಸೇವೆಮಾಡಿದರು. ನಂತರ ಗಿಲ್ಯಡ್‌ ಶಾಲೆಗೆ ಹಾಜರಾಗುವಂತೆ ಅವರನ್ನು ಆಮಂತ್ರಿಸಲಾಯಿತು. ಅಲ್ಲಿಂದ ಚಿಲಿ ದೇಶಕ್ಕೆ ನೇಮಕ ಪಡೆದು ಪುನಃ ಸಂಚರಣ ಮೇಲ್ವಿಚಾರಕರಾಗಿ ಸೇವೆ ಮುಂದುವರಿಸಿದರು. ಪ್ಯಾಟ್ಸೀ ಎನ್ನುವ ಮಿಷನರಿ ಸಹೋದರಿಯನ್ನು ಮದುವೆಯಾದರು. ಆದರೆ ಒಂದು ವರ್ಷದ ನಂತರ ಅವರಿಗೆ ಹುಟ್ಟಿದ ಹೆಣ್ಣುಮಗು ತೀರಿಹೋಯಿತು. ಸಮಯಾನಂತರ ಪ್ಯಾಟ್ಸೀ ಕೂಡ ತೀರಿಹೋದರು. ಪ್ಯಾಟ್ಸೀಗೆ ಆಗ ಕೇವಲ 43 ವರ್ಷ. ಈ ಎಲ್ಲ ಕಷ್ಟಗಳ ಮಧ್ಯೆಯೂ ರೂಡಾಲ್ಫ್‌ ಯೆಹೋವನ ಸೇವೆಯನ್ನು ಮುಂದುವರಿಸಿದರು. ಅವರಿಗೆ ವಯಸ್ಸಾಗಿ ಆರೋಗ್ಯ ಅಷ್ಟೇನೂ ಸರಿಯಿಲ್ಲದಿದ್ದರೂ ಪಯನೀಯರರಾಗಿ ಮತ್ತು ಸಭಾ ಹಿರಿಯರಾಗಿ ಸೇವೆಸಲ್ಲಿಸಿದರು. ಅವರ ಜೀವನ ಕಥೆಯನ್ನು ನಾವು 1997⁠ರ ಆಗಸ್ಟ್‌ 1, ಕಾವಲಿನಬುರುಜು ಪತ್ರಿಕೆಯ ಪುಟ 20-25⁠ರಲ್ಲಿ ಓದಬಹುದು.[1]

15. ಹಿಂಸೆಯ ಮಧ್ಯೆಯೂ ಯೆಹೋವನನ್ನು ಸಂತೋಷದಿಂದ ಆರಾಧಿಸುತ್ತಿರುವ ಸಹೋದರ-ಸಹೋದರಿಯರ ಉದಾಹರಣೆಗಳನ್ನು ಕೊಡಿ?

15 ಇವತ್ತು ಸಹ ನಮ್ಮ ಅನೇಕ ಸಹೋದರ ಸಹೋದರಿಯರು ಕಡು ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಹಾಗಿದ್ದರೂ ಅವರು ಯೆಹೋವನಿಗೆ ಸಂತೋಷದಿಂದ ಸೇವೆಸಲ್ಲಿಸುತ್ತಿದ್ದಾರೆ. ಅವರಲ್ಲಿ ನೂರಾರು ಜನ ‘ಕತ್ತಿಯನ್ನು ಹಿಡಿಯದ’ ಅಂದರೆ ಯುದ್ಧಗಳಲ್ಲಿ ಭಾಗವಹಿಸದ ಕಾರಣ ಎರಿಟ್ರೀಯ, ಸಿಂಗಾಪುರ್‌ ಮತ್ತು ದಕ್ಷಿಣ ಕೊರಿಯದ ಜೈಲಿನಲ್ಲಿದ್ದಾರೆ. (ಮತ್ತಾ. 26:52) ಉದಾಹರಣೆಗೆ, ಐಸಾಕ್‌, ನೆಗೆಡೆ ಮತ್ತು ಪೌಲಸ್‌ ಎನ್ನುವವರು ಎರಿಟ್ರೀಯ ದೇಶದಲ್ಲಿ 20ಕ್ಕಿಂತ ಹೆಚ್ಚು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಅವರನ್ನು ಕ್ರೂರವಾಗಿ ಹಿಂಸಿಸಲಾಗುತ್ತಿದೆ. ಇಷ್ಟು ವರ್ಷಗಳು ಅವರು ಜೈಲಿನಲ್ಲಿರುವುದರಿಂದ ಅವರಿಗೆ ಮದುವೆಯಾಗಲು, ತಂದೆ-ತಾಯಿಗಳನ್ನು ನೋಡಿಕೊಳ್ಳಲು ಆಗಲಿಲ್ಲ. ಆದರೂ ಅವರು ಯೆಹೋವನಿಗೆ ನಿಷ್ಠರಾಗಿದ್ದಾರೆ ಮತ್ತು ಅವರ ನಂಬಿಕೆ ಬಲವಾಗಿದೆ. ಜೈಲಿನ ಅಧಿಕಾರಿಗಳು ಸಹ ಈಗ ಅವರನ್ನು ಗೌರವಿಸುತ್ತಾರೆ. jw.orgನಲ್ಲಿ ಅವರ ಫೋಟೋಗಳನ್ನು ನೀವು ನೋಡಬಹುದು. ಹಿಂಸೆಯನ್ನು ಅನುಭವಿಸುತ್ತಿರುವುದಾದರೂ ಅವರು ನಗುತ್ತಿರುವುದನ್ನು ನೀವಲ್ಲಿ ಗಮನಿಸಬಹುದು.

ನಂಬಿಗಸ್ತ ವೃದ್ಧ ಸಹೋದರನೊಬ್ಬ ಕುಟುಂಬದೊಂದಿಗೆ ಅನುಭವವನ್ನು ಹಂಚಿಕೊಳ್ಳುತ್ತಿರುವುದು

ನಿಮ್ಮ ಸಭೆಯಲ್ಲಿರುವ ಸಹೋದರರು ಹೇಗೆ ತಮ್ಮ ನಂಬಿಕೆಯನ್ನು ಬಲವಾಗಿ ಇಟ್ಟುಕೊಂಡಿದ್ದಾರೆ? (ಪ್ಯಾರ 15, 16 ನೋಡಿ)

16. ಬಲವಾದ ನಂಬಿಕೆ ನಮ್ಮಲ್ಲಿದ್ದರೆ ನಾವೇನು ಮಾಡುತ್ತೇವೆ?

16 ಯೆಹೋವನ ಜನರೆಲ್ಲರೂ ಈ ಸಹೋದರರಂತೆ ಜೈಲಿನಲ್ಲಿ ಹಿಂಸೆಯನ್ನು ಅನುಭವಿಸಿರಲಿಕ್ಕಿಲ್ಲ. ಆದರೆ ಬಡತನ, ನೈಸರ್ಗಿಕ ವಿಪತ್ತು ಅಥವಾ ಯುದ್ಧಗಳಿಂದ ಬಳಲಿಹೋಗಿರಬಹುದು. ಇತರರು ಅಬ್ರಹಾಮ, ಇಸಾಕ, ಯಾಕೋಬ ಮತ್ತು ಮೋಶೆಯ ಮಾದರಿಯನ್ನು ಅನುಕರಿಸುತ್ತಾ ಹಣ-ಹೆಸರು ಮಾಡದೆ ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಲು ತ್ಯಾಗಗಳನ್ನು ಮಾಡಿರಬಹುದು. ಯೆಹೋವನಿಗೆ ಸಂತೋಷದಿಂದ ಸೇವೆಸಲ್ಲಿಸುತ್ತಾ ಮುಂದುವರಿಯಲು ನಮ್ಮ ಸಹೋದರರಿಗೆ ಯಾವುದು ಸಹಾಯಮಾಡುತ್ತಿದೆ? ಯೆಹೋವನ ಮೇಲೆ ಅವರಿಗಿರುವ ಪ್ರೀತಿ ಮತ್ತು ಆತನ ವಾಗ್ದಾನಗಳಲ್ಲಿ ಅವರಿಗಿರುವ ನಂಬಿಕೆ. ಯೆಹೋವ ದೇವರು ತನ್ನ ನಂಬಿಗಸ್ತ  ಸೇವಕರಿಗೆ ಹೊಸ ಲೋಕದಲ್ಲಿ ನಿತ್ಯಜೀವವನ್ನು ಕೊಟ್ಟು ಖಂಡಿತ ಆಶೀರ್ವದಿಸುತ್ತಾನೆ ಮತ್ತು ಅಲ್ಲಿ ಯಾವುದೇ ರೀತಿಯ ಅನ್ಯಾಯ ನಡೆಯುವುದಿಲ್ಲ ಎಂದು ಅವರಿಗೆ ಗೊತ್ತಿದೆ.—ಕೀರ್ತನೆ 37:5, 7, 9, 29 ಓದಿ.

17. (ಎ) ನೀವು ನಿಮ್ಮ ನಂಬಿಕೆಯನ್ನು ಬಲವಾಗಿ ಇಟ್ಟುಕೊಳ್ಳಲು ಏನು ಮಾಡುತ್ತೀರಿ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಕಲಿಯಲಿದ್ದೇವೆ?

17 ನಂಬಿಕೆ ಅಂದರೆ ನಿರೀಕ್ಷಿಸುವ ವಿಷಯಗಳ ಮೇಲಿನ “ನಿಶ್ಚಿತ ಭರವಸೆ” ಎಂದು ನಾವು ಕಲಿತೆವು. ಅಂಥ ನಂಬಿಕೆ ನಮ್ಮಲ್ಲಿ ಇರಬೇಕಾದರೆ ನಾವು ಯೆಹೋವನಿಗೆ ಪ್ರಾರ್ಥಿಸಬೇಕು ಮತ್ತು ಆತನ ವಾಗ್ದಾನಗಳ ಕುರಿತು ಧ್ಯಾನಿಸುತ್ತಾ ಇರಬೇಕು. ಆಗ ನಮಗೆ ಯಾವುದೇ ರೀತಿಯ ಕಷ್ಟಗಳು ಬಂದರೂ ತಾಳಿಕೊಳ್ಳುತ್ತೇವೆ. ನಂಬಿಕೆ ಇರುವುದು ಅಂದರೆ ಏನು ಅಂತ ಮುಂದಿನ ಲೇಖನದಲ್ಲಿ ಕಲಿಯೋಣ.

^ [1] ಸ್ಲೊವಾಕಿಯ ದೇಶದ ಸಹೋದರ ಆಂಡ್ರೇ ಹನೋಕ್‌ ಎನ್ನುವವರ ಜೀವನ ಕಥೆ ಸಹ ಓದಿ. ಅದು 2002⁠ರ ಏಪ್ರಿಲ್‌ 22, ಎಚ್ಚರ! ಪತ್ರಿಕೆಯಲ್ಲಿದೆ (ಇಂಗ್ಲಿಷ್‌).

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ