‘ನೋಟದಿಂದಲ್ಲ, ನಂಬಿಕೆಯಿಂದ ನಡೆಯುವುದು’
“ನಾವು ನೋಟದಿಂದಲ್ಲ, ನಂಬಿಕೆಯಿಂದ ನಡೆಯುತ್ತಿದ್ದೇವೆ.”—2 ಕೊರಿಂಥ 5:7, NW.
1. “ನಂಬಿಕೆಯಿಂದ ನಡೆ”ಯುವುದರ ಅರ್ಥವೇನು?
ದೇವರ ವಾಕ್ಯದಲ್ಲಿ ವಿವರಿಸಲ್ಪಟ್ಟ ನಿರ್ದೇಶನಗಳಿಗೆ ಸುಸಂಗತವಾಗಿ ನಾವು ಪ್ರತಿ ಸಲವು ಪ್ರಾರ್ಥಿಸುವಾಗ, ನಮ್ಮಲ್ಲಿ ಸ್ವಲ್ಪ ಮಟ್ಟಿಗಿನ ನಂಬಿಕೆಯಾದರೂ ಇದೆಯೆಂಬುದನ್ನು ನಾವು ತೋರಿಸುತ್ತೇವೆ. ನಾವು ಇತರರಿಗೆ ದೇವರ ರಾಜ್ಯದ ಕುರಿತು ಸಾಕ್ಷಿನೀಡಲು ತೊಡಗುವಾಗ, ಇದು ಸಹ ನಂಬಿಕೆಯನ್ನು ತೋರಿಸುತ್ತದೆ. ಮತ್ತು ನಾವು ನಮ್ಮ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸುವಾಗ, ‘ನಂಬಿಕೆಯಿಂದ ನಡೆಯುವುದು,’ (NW) ಅಂದರೆ, ನಂಬಿಕೆಯಿಂದ ನಿಯಂತ್ರಿಸಲ್ಪಟ್ಟಿರುವ ಒಂದು ಜೀವನ ಕ್ರಮವನ್ನು ಬೆನ್ನಟ್ಟುವುದು ನಮ್ಮ ಅಪೇಕ್ಷೆಯಾಗಿದೆ ಎಂಬುದರ ಪ್ರಮಾಣವನ್ನು ನಾವು ಕೊಡುತ್ತಿದ್ದೇವೆ.—2 ಕೊರಿಂಥ 5:7; ಕೊಲೊಸ್ಸೆ 1:9, 10.
2. ಸಭಾ ಚಟುವಟಿಕೆಗಳಲ್ಲಿನ ಭಾಗವಹಿಸುವಿಕೆಯು, ಒಬ್ಬನಿಗೆ ನಂಬಿಕೆಯಿದೆ ಎಂಬುದಕ್ಕೆ ರುಜುವಾತಾಗಿದೆ ಎಂದಾಗಿರಬೇಕಾಗಿಲ್ಲವೇಕೆ?
2 ನಾವು ನಿಜವಾಗಿಯೂ ಅಂತಹ ವಿಧದಲ್ಲಿ ಜೀವಿಸಲಿರುವುದಾದರೆ, ಸಾಧಾರವಾದ ನಂಬಿಕೆಯ ಅಗತ್ಯ ನಮಗಿದೆ. (ಇಬ್ರಿಯ 11:1, 6) ಅನೇಕ ಜನರು ಯೆಹೋವನ ಸಾಕ್ಷಿಗಳ ಕಡೆಗೆ ಆಕರ್ಷಿತರಾಗುವುದು, ಸಾಕ್ಷಿಗಳ ಉಚ್ಚ ನೈತಿಕ ಮಟ್ಟಗಳು ಮತ್ತು ಅವರ ಮಧ್ಯದಲ್ಲಿ ಅವರು ನೋಡುವ ಪ್ರೀತಿಯ ಕಾರಣದಿಂದಲೇ. ಅದೊಂದು ಉತ್ತಮ ಆರಂಭವಾಗಿದೆಯಾದರೂ, ಅಂತಹ ಜನರಲ್ಲಿ ನಂಬಿಕೆಯಿದೆ ಎಂಬುದನ್ನು ಅದು ಅರ್ಥೈಸುವುದಿಲ್ಲ. ಇತರರಿಗೆ, ನಂಬಿಕೆಯಲ್ಲಿ ಬಲವಾಗಿರುವ ಒಬ್ಬ ವಿವಾಹ ಸಂಗಾತಿ ಅಥವಾ ಒಬ್ಬ ಹೆತ್ತವರಿರಬಹುದು ಮತ್ತು ಅವರು ಯಾರನ್ನು ಪ್ರೀತಿಸುತ್ತಾರೊ ಆ ವ್ಯಕ್ತಿಯು ಒಳಗೂಡುವಂತಹ ಕೆಲವು ಚಟುವಟಿಕೆಗಳಲ್ಲಿ ಅವರು ಪಾಲಿಗರಾಗಬಹುದು. ಒಬ್ಬರ ಮನೆಯಲ್ಲಿ ಅಂತಹ ಒಂದು ಪ್ರಭಾವವನ್ನು ಹೊಂದಿರುವುದು ನಿಜವಾಗಿಯೂ ಒಂದು ಆಶೀರ್ವಾದವಾಗಿದೆ, ಆದರೆ ಇದು ಸಹ ದೇವರಿಗಾಗಿರುವ ವೈಯಕ್ತಿಕ ಪ್ರೀತಿ ಮತ್ತು ವೈಯಕ್ತಿಕ ನಂಬಿಕೆಗೆ ಬದಲಿಯಾಗಿರುವುದಿಲ್ಲ.—ಲೂಕ 10:27, 28.
3. (ಎ) ನಮಗೆ ಸಾಧಾರವಾದ ನಂಬಿಕೆ ಇರಬೇಕಾದಲ್ಲಿ, ಬೈಬಲಿನ ಕುರಿತು ನಾವು ವೈಯಕ್ತಿಕವಾಗಿ ಯಾವ ವಿಷಯವಾಗಿ ಮನಗಾಣಿಸಲ್ಪಟ್ಟಿರಬೇಕು? (ಬಿ) ಬೈಬಲಿನ ಪ್ರೇರಣೆಯ ಸಂಬಂಧದಲ್ಲಿ ಕೆಲವು ಜನರು ಇತರರಿಗಿಂತ ಹೆಚ್ಚು ಸುಲಭವಾಗಿ ಮನಗಾಣಿಸಲ್ಪಡುವುದು ಏಕೆ?
3 ನಿಜವಾಗಿಯೂ ನಂಬಿಕೆಯಿಂದ ನಡೆಯುವವರು, ಬೈಬಲು ದೇವರ ವಾಕ್ಯವಾಗಿದೆ ಎಂಬ ವಿಷಯದಲ್ಲಿ ಪೂರ್ಣವಾಗಿ ಮನಗಾಣಿಸಲ್ಪಟ್ಟಿರುತ್ತಾರೆ. ಪವಿತ್ರ ಶಾಸ್ತ್ರಗಳು ನಿಶ್ಚಯವಾಗಿಯೂ “ದೈವಪ್ರೇರಿತ”ವಾಗಿವೆ ಎಂಬುದಕ್ಕೆ ಹೇರಳವಾದ ಪ್ರಮಾಣವಿದೆ.a (2 ತಿಮೊಥೆಯ 3:16) ವ್ಯಕ್ತಿಯೊಬ್ಬನು ಮನಗಾಣಿಸಲ್ಪಡುವ ಮುಂಚೆ ಈ ಪ್ರಮಾಣದಲ್ಲಿ ಎಷ್ಟನ್ನು ಪರೀಕ್ಷಿಸತಕ್ಕದ್ದು? ಅದು ಅವನ ಹಿನ್ನೆಲೆಯ ಮೇಲೆ ಅವಲಂಬಿಸಬಹುದು. ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ತೃಪ್ತಿಪಡಿಸುವ ವಿಷಯವು ಇನ್ನೊಬ್ಬ ವ್ಯಕ್ತಿಯ ಮನವೊಲಿಸದಿರಬಹುದು. ಕೆಲವೊಂದು ವಿದ್ಯಮಾನಗಳಲ್ಲಿ, ಒಬ್ಬ ವ್ಯಕ್ತಿಗೆ ನಿರಾಕರಿಸಲಾಗದ ಬಹಳಷ್ಟು ರುಜುವಾತು ತೋರಿಸಲ್ಪಟ್ಟಾಗ್ಯೂ, ಅದು ಯಾವ ತೀರ್ಮಾನದ ಕಡೆಗೆ ಕೈತೋರಿಸುತ್ತದೋ ಅದನ್ನು ಅವನು ಇನ್ನೂ ನಿರಾಕರಿಸಬಹುದು. ಏಕೆ? ಅವನ ಹೃದಯದಲ್ಲಿ ಆಳವಾಗಿ ಬೇರೂರಿರುವ ಅಪೇಕ್ಷೆಗಳ ಕಾರಣದಿಂದಲೇ. (ಯೆರೆಮೀಯ 17:9) ಹೀಗೆ, ದೇವರ ಉದ್ದೇಶದಲ್ಲಿ ಅಭಿರುಚಿಯಿದೆಯೆಂದು ವ್ಯಕ್ತಿಯೊಬ್ಬನು ಪ್ರತಿಪಾದಿಸಬಹುದಾದರೂ, ಲೌಕಿಕ ಜನರಿಂದ ಮೆಚ್ಚಿಕೆಯನ್ನು ಪಡೆದುಕೊಳ್ಳಲು ಅವನ ಹೃದಯವು ಹಂಬಲಿಸಬಹುದು. ಅವನು ಬೈಬಲಿನ ಮಟ್ಟಗಳೊಂದಿಗೆ ಸಂಘರ್ಷಿಸುವಂತಹ ಜೀವನ ರೀತಿಯನ್ನು ಬಿಟ್ಟುಬಿಡಲು ಬಯಸದಿರಬಹುದು. ಆದಾಗಲೂ, ಯಾವನೇ ವ್ಯಕ್ತಿಯು ಸತ್ಯಕ್ಕಾಗಿ ನಿಜವಾಗಿಯೂ ಹಸಿದಿರುವುದಾದರೆ, ತನ್ನ ವಿಷಯದಲ್ಲಿ ಪ್ರಾಮಾಣಿಕನೂ ನಮ್ರನೂ ಆಗಿರುವುದಾದರೆ, ಬೈಬಲು ದೇವರ ವಾಕ್ಯವಾಗಿದೆಯೆಂಬುದನ್ನು ಅವನು ಸಕಾಲದಲ್ಲಿ ಗ್ರಹಿಸಿಕೊಳ್ಳುವನು.
4. ನಂಬಿಕೆಯನ್ನು ಸಂಪಾದಿಸುವ ಸಲುವಾಗಿ ಒಬ್ಬ ವ್ಯಕ್ತಿಯ ವತಿಯಿಂದ ಏನು ಕೇಳಿಕೊಳ್ಳಲ್ಪಡುತ್ತದೆ?
4 ಅನೇಕ ವೇಳೆ, ಬೈಬಲನ್ನು ಅಭ್ಯಾಸಿಸುವಂತೆ ಸಹಾಯಿಸಲ್ಪಡುತ್ತಿರುವ ಜನರು, ಅದು ದೇವರ ವಾಕ್ಯವಾಗಿದೆ ಎಂಬುದಕ್ಕೆ ಸಾಕಷ್ಟು ಕಾರಣಗಳನ್ನು ತಾವು ಈಗಾಗಲೇ ಕಲಿತಿದ್ದೇವೆಂಬುದನ್ನು ಕೆಲವೇ ತಿಂಗಳುಗಳೊಳಗೆ ಗಣ್ಯಮಾಡುತ್ತಾರೆ. ಯೆಹೋವನಿಂದ ಉಪದೇಶಿಸಲ್ಪಡಲಿಕ್ಕಾಗಿ ಅವರು ತಮ್ಮ ಹೃದಯವನ್ನು ತೆರೆಯುವಂತೆ ಇದು ಪ್ರಚೋದಿಸುವುದಾದರೆ, ಆಗ ಅವರ ಆಂತರಿಕ ಯೋಚನೆಗಳು, ಅವರ ಅಪೇಕ್ಷೆಗಳು, ಮತ್ತು ಅವರ ಪ್ರಚೋದನೆಗಳು, ಅವರೇನನ್ನು ಕಲಿಯುತ್ತಾರೊ ಅದರಿಂದ ಕ್ರಮೇಣ ರೂಪಿಸಲ್ಪಡುತ್ತವೆ. (ಕೀರ್ತನೆ 143:10) “ಹೃದಯದಿಂದ”ಲೇ ಒಬ್ಬ ವ್ಯಕ್ತಿಯು ನಂಬಿಕೆಯನ್ನು ಪ್ರಯೋಗಿಸುತ್ತಾನೆಂದು ರೋಮಾಪುರ 10:10 ಹೇಳುತ್ತದೆ. ಆ ವ್ಯಕ್ತಿಗೆ ನಿಜವಾಗಿಯೂ ಹೇಗನಿಸುತ್ತದೆ ಎಂಬುದನ್ನು ಅಂತಹ ನಂಬಿಕೆಯು ವ್ಯಕ್ತಪಡಿಸುತ್ತದೆ, ಮತ್ತು ಅದು ಅವನ ಜೀವನ ಕ್ರಮದಲ್ಲೂ ಸ್ಪಷ್ಟವಾಗಿ ತೋರಿಬರುತ್ತದೆ.
ಸಾಧಾರವಾದ ನಂಬಿಕೆಯ ಮೇಲೆ ನೋಹನು ಕ್ರಿಯೆಗೈದನು
5, 6. ನೋಹನ ನಂಬಿಕೆಯು ಯಾವುದರ ಮೇಲೆ ಆಧರಿಸಿತ್ತು?
5 ಸಾಧಾರವಾದ ನಂಬಿಕೆಯಿದ್ದವರಲ್ಲಿ ನೋಹನು ಒಬ್ಬನಾಗಿದ್ದನು. (ಇಬ್ರಿಯ 11:7) ಅದಕ್ಕಾಗಿ ಅವನಿಗೆ ಯಾವ ಆಧಾರವಿತ್ತು? ನೋಹನಿಗೆ ದೇವರ ವಾಕ್ಯವು, ಲಿಖಿತ ರೂಪದಲ್ಲಿ ಅಲ್ಲ, ಬಾಯಿಮಾತಾಗಿ ತಿಳಿಸಲ್ಪಟ್ಟಿತ್ತು. ಆದಿಕಾಂಡ 6:13, 21 ಹೇಳುವುದು: “ದೇವರು ನೋಹನಿಗೆ—ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅವರ ಅನ್ಯಾಯದಿಂದ ತುಂಬಿ ಅದೆ . . . ಎಂದು ಹೇಳಿದನು.” (ಓರೆಅಕ್ಷರಗಳು ನಮ್ಮವು.) ನೋಹನು ಒಂದು ನಾವೆಯನ್ನು ಕಟ್ಟುವಂತೆ ಯೆಹೋವನು ನಿರ್ದೇಶಿಸಿದನು, ಮತ್ತು ಅದರ ನಿರ್ಮಾಣದ ಕುರಿತಾಗಿ ವಿವರಗಳನ್ನು ಒದಗಿಸಿದನು. ಅನಂತರ ದೇವರು ಕೂಡಿಸಿದ್ದು: “ನಾನಂತೂ ಭೂಮಿಯ ಮೇಲೆ ಜಲಪ್ರಳಯವನ್ನು ಬರಮಾಡಿ ಆಕಾಶದ ಕೆಳಗಿರುವ ಸಕಲಪ್ರಾಣಿಗಳನ್ನೂ ಅಳಿಸಿಬಿಡುವೆನು; ಭೂಮಿಯಲ್ಲಿರುವ ಸಮಸ್ತವೂ ಲಯವಾಗುವದು.”—ಆದಿಕಾಂಡ 6:14-17.
6 ಇದಕ್ಕೆ ಮುಂಚಿತವಾಗಿ ಮಳೆ ಇತ್ತೋ? ಬೈಬಲ್ ಅದನ್ನು ಹೇಳುವುದಿಲ್ಲ. ಆದಿಕಾಂಡ 2:5 ಹೇಳುವುದು: “ಯೆಹೋವದೇವರು ಭೂಮಿಯ ಮೇಲೆ ಮಳೆಯನ್ನು ಸುರಿಸಿರಲಿಲ್ಲ.” ಆದರೆ ಶತಮಾನಗಳ ತರುವಾಯ ಜೀವಿಸಿದ ಮೋಶೆಯು, ನೋಹನ ದಿನದ ಕುರಿತಾಗಿ ಅಲ್ಲ ಬದಲಿಗೆ ಅದಕ್ಕಿಂತಲೂ ಬಹಳ ಮುಂಚಿತವಾದ ಸಮಯದ ಕುರಿತು ಚರ್ಚಿಸುವಾಗ ವಿಷಯಗಳನ್ನು ಹೀಗೆ ವ್ಯಕ್ತಪಡಿಸಿದನು. ಆದಿಕಾಂಡ 7:4ರಲ್ಲಿ ತೋರಿಸಲ್ಪಟ್ಟಿರುವ ಪ್ರಕಾರ, ನೋಹನೊಂದಿಗೆ ಮಾತಾಡುವಾಗ ಯೆಹೋವನು ಮಳೆಯನ್ನು ಸೂಚಿಸಿ ಮಾತಾಡಿದನು, ಮತ್ತು ಆತನು ಏನನ್ನು ಅರ್ಥೈಸಿದನೆಂದು ನೋಹನಿಗೆ ತಿಳಿಯಿತೆಂಬುದು ಸುವ್ಯಕ್ತ. ಆದರೂ ನೋಹನ ನಂಬಿಕೆಯು, ತಾನು ನೋಡಸಾಧ್ಯವಿದ್ದ ಸಂಗತಿಗಳಲ್ಲಿರಲಿಲ್ಲ. ನೋಹನು “ಅದು ವರೆಗೆ ಕಾಣದಿದ್ದ ಸಂಗತಿಗಳ ವಿಷಯವಾಗಿ ದೈವೋಕ್ತಿಯನ್ನು ಹೊಂದಿ”ದನೆಂದು ಅಪೊಸ್ತಲ ಪೌಲನು ಬರೆದನು. ತಾನು ಭೂಮಿಯ ಮೇಲೆ “ಜಲಪ್ರಳಯವನ್ನು,” ಅಥವಾ ಆದಿಕಾಂಡ 6:17ರಲ್ಲಿ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಅದನ್ನು ಒಂದು ಪಾದಟಿಪ್ಪಣಿಯಲ್ಲಿ ವ್ಯಕ್ತಪಡಿಸುವಂತೆ “ಸ್ವರ್ಗೀಯ ಸಾಗರವನ್ನು” ಬರಮಾಡುವೆನೆಂದು ದೇವರು ನೋಹನಿಗೆ ಹೇಳಿದನು. ಆ ಸಮಯದ ವರೆಗೆ ಅಂತಹ ಒಂದು ಸಂಗತಿಯು ಎಂದೂ ಸಂಭವಿಸಿರಲಿಲ್ಲ. ಆದರೆ ದೇವರು ಅಂತಹ ಒಂದು ವಿನಾಶಕಾರಿ ಜಲಪ್ರಳಯವನ್ನು ಖಂಡಿತವಾಗಿಯೂ ತರಸಾಧ್ಯವಿದೆಯೆಂಬುದಕ್ಕೆ, ನೋಹನಿಗೆ ದೃಗ್ಗೋಚರವಾಗಿದ್ದ ಎಲ್ಲ ಸೃಷ್ಟಿಯು ಒಂದು ಪ್ರತ್ಯಕ್ಷ ಪ್ರದರ್ಶನವಾಗಿತ್ತು. ನಂಬಿಕೆಯಿಂದ ಪ್ರಚೋದಿಸಲ್ಪಟ್ಟು, ನೋಹನು ನಾವೆಯನ್ನು ಕಟ್ಟಿದನು.
7. (ಎ) ದೇವರು ನೋಹನಿಗೆ ಮಾಡುವಂತೆ ಆಜ್ಞಾಪಿಸಿದ್ದ ವಿಷಯವನ್ನು ಮಾಡಲಿಕ್ಕಾಗಿ ಅವನಿಗೆ ಯಾವುದರ ಅಗತ್ಯವಿರಲಿಲ್ಲ? (ಬಿ) ನೋಹನ ನಂಬಿಕೆಯನ್ನು ಪರಿಗಣಿಸುವ ಮೂಲಕ ನಾವು ಹೇಗೆ ಪ್ರಯೋಜನಪಡೆಯುತ್ತೇವೆ, ಮತ್ತು ನಮ್ಮ ನಂಬಿಕೆಯು ಇತರರಿಗೆ ಹೇಗೆ ಒಂದು ಆಶೀರ್ವಾದವಾಗಿರಬಲ್ಲದು?
7 ಜಲಪ್ರಳಯವು ಯಾವಾಗ ಆರಂಭವಾಗುವುದೆಂದು ತಿಳಿಸುತ್ತಾ ದೇವರು ನೋಹನಿಗೆ ಒಂದು ತಾರೀಖನ್ನು ಕೊಟ್ಟಿರಲಿಲ್ಲ. ಆದರೂ, ನೋಹನು ನಾವೆಯ ಕಟ್ಟುವಿಕೆ ಮತ್ತು ಸಾರುವಿಕೆಯನ್ನು ತನ್ನ ಜೀವನದಲ್ಲಿ ಎರಡನೆಯ ಸ್ಥಾನಕ್ಕೆ ಹಾಕುತ್ತಾ, ಕಾದುನೋಡೋಣ ಎಂಬ ಮನೋಭಾವವನ್ನು ಆಯ್ದುಕೊಳ್ಳಲು ಇದನ್ನು ಒಂದು ನೆಪವಾಗಿ ಉಪಯೋಗಿಸಲಿಲ್ಲ. ಸಾಕಷ್ಟು ಸಮಯವಿರುವಾಗಲೇ, ನೋಹನು ನಾವೆಯೊಳಗೆ ಯಾವಾಗ ಹೋಗಬೇಕೆಂಬುದನ್ನು ದೇವರು ಹೇಳಿದನು. ಈ ಮಧ್ಯೆ, “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.” (ಆದಿಕಾಂಡ 6:22) ನೋಹನು ನೋಟದಿಂದಲ್ಲ, ನಂಬಿಕೆಯಿಂದ ನಡೆದನು. ಅವನು ಹಾಗೆ ಮಾಡಿದ್ದಕ್ಕಾಗಿ ನಾವೆಷ್ಟು ಆಭಾರಿಗಳಾಗಿದ್ದೇವೆ! ಅವನ ನಂಬಿಕೆಯಿಂದಾಗಿಯೇ ನಾವಿಂದು ಜೀವದಿಂದಿದ್ದೇವೆ. ನಮ್ಮ ವಿಷಯದಲ್ಲೂ, ನಾವು ತೋರಿಸುವಂತಹ ನಂಬಿಕೆಯು, ನಮಗಾಗಿ ಮಾತ್ರವಲ್ಲ, ನಮ್ಮ ಮಕ್ಕಳಿಗಾಗಿ ಹಾಗೂ ನಮ್ಮ ಸುತ್ತಲಿರುವ ಜನರಿಗಾಗಿ ಭವಿಷ್ಯತ್ತು ಏನನ್ನು ಕಾದಿರಿಸಿದೆಯೊ ಅದರ ಮೇಲೆ ಗಾಢವಾದ ಪ್ರಭಾವವನ್ನು ಬೀರಬಲ್ಲದು.
ಅಬ್ರಹಾಮನ ನಂಬಿಕೆ
8, 9. (ಎ) ಯಾವುದರ ಮೇಲೆ ಅಬ್ರಹಾಮನು ತನ್ನ ನಂಬಿಕೆಯನ್ನು ಆಧರಿಸಿದನು? (ಬಿ) ಯೆಹೋವನು ಅಬ್ರಹಾಮನಿಗೆ ‘ಕಾಣಿಸಿಕೊಂಡದ್ದು’ ಹೇಗೆ?
8 ಇನ್ನೊಂದು ಮಾದರಿಯನ್ನು—ಅಬ್ರಹಾಮನದ್ದನ್ನು ಪರಿಗಣಿಸಿರಿ. (ಇಬ್ರಿಯ 11:8-10) ಅಬ್ರಹಾಮನು ತನ್ನ ನಂಬಿಕೆಯನ್ನು ಯಾವುದರ ಮೇಲೆ ಆಧಾರಿಸಿದನು? ಅವನು ಎಲ್ಲಿ ಬೆಳೆದು ದೊಡ್ಡವನಾದನೊ ಆ ಕಸ್ದೀಯರ ಊರ್ ಪಟ್ಟಣದ ಪರಿಸರಗಳು ವಿಗ್ರಹಾರಾಧಕವೂ ಪ್ರಾಪಂಚಿಕವೂ ಆಗಿದ್ದವು. ಆದರೆ ಇತರ ಪ್ರಭಾವಗಳು ಅಬ್ರಹಾಮನ ದೃಷ್ಟಿಕೋನವನ್ನು ರೂಪಿಸಿದವು. 150 ವರ್ಷಗಳ ವರೆಗೆ ಅಬ್ರಹಾಮನು ಯಾರ ಸಮಕಾಲೀನನಾಗಿದ್ದನೊ ಆ ನೋಹನ ಮಗನಾದ ಶೇಮನೊಂದಿಗೆ ಅವನು ನಿಸ್ಸಂದೇಹವಾಗಿ ಸಹವಸಿಸಿದನು. ಯೆಹೋವನು “ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರದೇವರಾಗಿ”ದ್ದಾನೆಂದು ಅಬ್ರಹಾಮನಿಗೆ ಮನವರಿಕೆಯಾಯಿತು.—ಆದಿಕಾಂಡ 14:22.
9 ಬೇರೊಂದು ವಿಷಯವು ಅಬ್ರಹಾಮನ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು. ಯೆಹೋವನು “ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಮೆಸೊಪೊತಾಮ್ಯದಲ್ಲಿದ್ದಾಗ . . . ಅವನಿಗೆ ಕಾಣಿಸಿಕೊಂಡು—ನಿನ್ನ ಸ್ವದೇಶವನ್ನೂ ನಿನ್ನ ಬಂಧುಬಳಗವನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು ಎಂದು ಹೇಳಿದನು.” (ಅ. ಕೃತ್ಯಗಳು 7:2, 3) ಯೆಹೋವನು ಅಬ್ರಹಾಮನಿಗೆ ‘ಕಾಣಿಸಿಕೊಂಡದ್ದು’ ಹೇಗೆ? ಅಬ್ರಹಾಮನು ದೇವರನ್ನು ನೇರವಾಗಿ ನೋಡಲಿಲ್ಲ. (ವಿಮೋಚನಕಾಂಡ 33:20) ಆದಾಗಲೂ, ಯೆಹೋವನು ಅಬ್ರಹಾಮನಿಗೆ ಒಂದು ಕನಸಿನಲ್ಲಿ, ಮಹಿಮೆಯ ಒಂದು ಅಲೌಕಿಕ ಪ್ರದರ್ಶನದ ಮೂಲಕ, ಇಲ್ಲವೆ ದೇವದೂತ ಸಂದೇಶವಾಹಕ, ಅಥವಾ ಪ್ರತಿನಿಧಿಯ ಮೂಲಕ ಕಾಣಿಸಿಕೊಂಡನೆಂಬುದು ಸಂಭವನೀಯ. (ಹೋಲಿಸಿ ಆದಿಕಾಂಡ 18:1-3; 28:10-15; ಯಾಜಕಕಾಂಡ 9:4, 6, 23, 24.) ಯೆಹೋವನು ಅಬ್ರಹಾಮನಿಗೆ ಕಾಣಿಸಿಕೊಂಡ ರೀತಿಯು ಯಾವುದೇ ಆಗಿರಲಿ, ದೇವರು ತನ್ನ ಮುಂದೆ ಒಂದು ಬಹುಮೂಲ್ಯ ಸುಯೋಗವನ್ನಿಡುತ್ತಿದ್ದನೆಂದು ಆ ನಂಬಿಗಸ್ತ ಮನುಷ್ಯನಿಗೆ ಭರವಸೆಯಿತ್ತು. ಅಬ್ರಹಾಮನು ನಂಬಿಕೆಯಿಂದ ಪ್ರತಿಕ್ರಿಯಿಸಿದನು.
10. ಯೆಹೋವನು ಅಬ್ರಹಾಮನ ನಂಬಿಕೆಯನ್ನು ಹೇಗೆ ಬಲಪಡಿಸಿದನು?
10 ಅಬ್ರಹಾಮನ ನಂಬಿಕೆಯು, ದೇವರು ಅವನನ್ನು ಮಾರ್ಗದರ್ಶಿಸುತ್ತಿದ್ದ ದೇಶದ ಕುರಿತಾದ ವಿವರಗಳನ್ನು ಪಡೆದುಕೊಳ್ಳುವುದರ ಮೇಲೆ ಅವಲಂಬಿಸಲಿಲ್ಲ. ಆ ದೇಶವು ಅವನಿಗೆ ಯಾವಾಗ ಕೊಡಲ್ಪಡುವುದು ಎಂಬುದನ್ನು ಅರಿಯುವುದರ ಮೇಲೆಯೂ ಅದು ಆಧಾರಗೊಂಡಿರಲಿಲ್ಲ. ಅವನು ಯೆಹೋವನನ್ನು ಸರ್ವಶಕ್ತ ದೇವರೆಂದು ತಿಳುಕೊಂಡಿದ್ದ ಕಾರಣ ಅವನಿಗೆ ನಂಬಿಕೆಯಿತ್ತು. (ವಿಮೋಚನಕಾಂಡ 6:3) ಅವನಿಗೆ ಸಂತಾನ ಪ್ರಾಪ್ತಿಯಾಗುವುದೆಂದು ಯೆಹೋವನು ಅಬ್ರಹಾಮನಿಗೆ ಹೇಳಿದನಾದರೂ, ಅದು ಹೇಗೆ ಸಾಧ್ಯವೆಂದು ಅಬ್ರಹಾಮನು ಕೆಲವೊಮ್ಮೆ ಕುತೂಹಲಪಟ್ಟನು. ಅವನು ವೃದ್ಧನಾಗುತ್ತಿದ್ದನು. (ಆದಿಕಾಂಡ 15:3, 4) ನಕ್ಷತ್ರಗಳ ಕಡೆಗೆ ನೋಡಿ, ಸಾಧ್ಯವಿರುವಲ್ಲಿ ಅವುಗಳನ್ನು ಲೆಕ್ಕಿಸುವಂತೆ ಹೇಳುವ ಮೂಲಕ ಯೆಹೋವನು ಅಬ್ರಹಾಮನ ನಂಬಿಕೆಯನ್ನು ಬಲಪಡಿಸಿದನು. “ನಿನ್ನ ಸಂತಾನವು ಅಷ್ಟಾಗುವದು,” ಎಂದು ದೇವರು ಹೇಳಿದನು. ಅಬ್ರಹಾಮನು ಗಾಢವಾಗಿ ಪ್ರಚೋದಿಸಲ್ಪಟ್ಟನು. ಆ ಭಯಪ್ರೇರಕ ಸ್ವರ್ಗೀಯ ಮಂಡಲಗಳ ಸೃಷ್ಟಿಕರ್ತನು, ತಾನು ವಾಗ್ದಾನಿಸಿದ್ದನ್ನು ನೆರವೇರಿಸಸಾಧ್ಯವಿತ್ತೆಂಬುದು ಸುವ್ಯಕ್ತ. ಅಬ್ರಹಾಮನು “ಯೆಹೋವನನ್ನು ನಂಬಿದನು.” (ಆದಿಕಾಂಡ 15:5, 6) ಅಬ್ರಹಾಮನು ತಾನು ಏನನ್ನು ಕೇಳುತ್ತಿದ್ದನೊ ಅದನ್ನು ಅವನು ಇಷ್ಟಪಟ್ಟ ಕಾರಣಕ್ಕಾಗಿ ಮಾತ್ರ ನಂಬಲಿಲ್ಲ; ಅವನಿಗೆ ಸಾಧಾರವಾದ ನಂಬಿಕೆಯಿತ್ತು.
11. (ಎ) ಅಬ್ರಹಾಮನು 100ರ ಪ್ರಾಯವನ್ನು ಸಮೀಪಿಸಿದಂತೆ, ವೃದ್ಧೆಯಾದ ಸಾರಳು ಒಬ್ಬ ಮಗನನ್ನು ಹೆರುವಳು ಎಂಬ ದೇವರ ವಾಗ್ದಾನಕ್ಕೆ ಅವನು ಹೇಗೆ ಪ್ರತಿಕ್ರಿಯಿಸಿದನು? (ಬಿ) ತನ್ನ ಮಗನನ್ನು ಯಜ್ಞದೋಪಾದಿ ಅರ್ಪಿಸಲು ಮೋರೀಯ ಬೆಟ್ಟಕ್ಕೆ ಕರೆದುಕೊಂಡುಹೋಗುವುದನ್ನು ಒಳಗೊಂಡ ಪರೀಕ್ಷೆಯನ್ನು, ಯಾವ ರೀತಿಯ ನಂಬಿಕೆಯಿಂದ ಅಬ್ರಹಾಮನು ಎದುರಿಸಿದನು?
11 ಅಬ್ರಹಾಮನು 100 ವರ್ಷ ಪ್ರಾಯವನ್ನು ಮತ್ತು ಅವನ ಹೆಂಡತಿಯಾದ ಸಾರಳು 90 ವರ್ಷ ಪ್ರಾಯವನ್ನು ಸಮೀಪಿಸಿದಾಗ, ಅಬ್ರಹಾಮನು ಒಬ್ಬ ಪುತ್ರನನ್ನು ಪಡೆಯುವನು ಮತ್ತು ಸಾರಳು ತಾಯಿಯಾಗಿರುವಳು ಎಂಬ ತನ್ನ ವಾಗ್ದಾನವನ್ನು ಯೆಹೋವನು ಪುನಃ ತಿಳಿಸಿದನು. ತಮ್ಮ ಸನ್ನಿವೇಶವನ್ನು ಅಬ್ರಹಾಮನು ವಾಸ್ತವಿಕವಾಗಿ ಪರಿಗಣಿಸಿದನು. “ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ. ದೇವರನ್ನು ಘನಪಡಿಸುವವನಾಗಿ ಆತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟು ದೃಢ ನಂಬಿಕೆಯುಳ್ಳವನಾದನು.” (ರೋಮಾಪುರ 4:19-21) ದೇವರ ವಾಗ್ದಾನವು ವಿಫಲವಾಗಲಾರದೆಂದು ಅಬ್ರಹಾಮನಿಗೆ ತಿಳಿದಿತ್ತು. ತದನಂತರ, ದೇವರು ಅವನಿಗೆ ತನ್ನ ಮಗನಾದ ಇಸಾಕನನ್ನು ಮೋರೀಯ ದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವನನ್ನು ಒಂದು ಯಜ್ಞವಾಗಿ ಅರ್ಪಿಸುವಂತೆ ಹೇಳಿದಾಗ, ಅಬ್ರಹಾಮನು ತನ್ನ ನಂಬಿಕೆಯ ಕಾರಣ ವಿಧೇಯನಾದನು. (ಆದಿಕಾಂಡ 22:1-12) ಆ ಮಗನು ಜನಿಸುವಂತೆ ಅದ್ಭುತಕರವಾಗಿ ಮಾಡಸಾಧ್ಯವಿದ್ದ ದೇವರಿಗೆ, ಆ ಮಗನ ಸಂಬಂಧದಲ್ಲಿ ಆತನು ಮಾಡಿದಂತಹ ಇನ್ನೂ ಹೆಚ್ಚಿನ ವಾಗ್ದಾನಗಳನ್ನು ನೆರವೇರಿಸಲಿಕ್ಕಾಗಿ ಅವನನ್ನು ಉಜ್ಜೀವಿಸಲೂ ಸಾಧ್ಯವಿದೆಯೆಂಬ ಪೂರ್ಣ ಭರವಸೆ ಅಬ್ರಹಾಮನಿಗಿತ್ತು.—ಇಬ್ರಿಯ 11:17-19.
12. ಎಷ್ಟರ ವರೆಗೆ ಅಬ್ರಹಾಮನು ನಂಬಿಕೆಯಿಂದ ನಡೆಯಲು ಮುಂದುವರಿದನು, ಮತ್ತು ಬಲವಾದ ನಂಬಿಕೆಯನ್ನು ಪ್ರದರ್ಶಿಸಿದ ಅವನಿಗೂ ಅವನ ಕುಟುಂಬದ ಸದಸ್ಯರಿಗೂ ಯಾವ ಬಹುಮಾನವು ಕಾದಿದೆ?
12 ಅಬ್ರಹಾಮನು ತಾನು ಕೇವಲ ಅಪರೂಪವಾದ ಪರಿಸ್ಥಿತಿಗಳಲ್ಲಿ ಮಾತ್ರವಲ್ಲ, ತನ್ನ ಜೀವನದುದ್ದಕ್ಕೂ ನಂಬಿಕೆಯಿಂದ ನಿಯಂತ್ರಿಸಲ್ಪಟ್ಟಿದ್ದೇನೆಂಬುದನ್ನು ತೋರಿಸಿದನು. ಅಬ್ರಹಾಮನು ತನ್ನ ಜೀವಮಾನಕಾಲದಲ್ಲಿ ವಾಗ್ದತ್ತ ದೇಶದ ಯಾವುದೇ ಭಾಗವನ್ನು ದೇವರಿಂದ ಬಾಧ್ಯತೆಯಾಗಿ ಪಡೆಯಲಿಲ್ಲ. (ಅ. ಕೃತ್ಯಗಳು 7:5) ಆದರೂ ಅಬ್ರಹಾಮನು ಬಳಲಿಹೋಗಿ, ಕಸ್ದೀಯರ ಊರ್ ಪಟ್ಟಣಕ್ಕೆ ಹಿಂದಿರುಗಲಿಲ್ಲ. 100 ವರ್ಷಗಳ ವರೆಗೆ, ಅವನ ಮರಣದ ತನಕವೂ, ದೇವರು ಮಾರ್ಗದರ್ಶಿಸಿದಂತಹ ದೇಶದಲ್ಲಿ ಅವನು ಗುಡಾರಗಳಲ್ಲಿ ಜೀವಿಸಿದನು. (ಆದಿಕಾಂಡ 25:7) ಅವನು ಮತ್ತು ಅವನ ಹೆಂಡತಿಯಾದ ಸಾರಳು, ಅವರ ಮಗನಾದ ಇಸಾಕ ಮತ್ತು ಅವರ ಮೊಮ್ಮಗನಾದ ಯಾಕೋಬನ ಕುರಿತಾಗಿ ಇಬ್ರಿಯ 11:16 ಹೇಳುವುದು: “ದೇವರು ಅವರ ದೇವರೆನಿಸಿಕೊಳ್ಳುವದಕ್ಕೆ ನಾಚಿಕೊಳ್ಳದೆ ಅವರಿಗೋಸ್ಕರ ಪಟ್ಟಣವನ್ನು ಸಿದ್ಧಮಾಡಿದ್ದಾನೆ.” ಹೌದು, ತನ್ನ ಮೆಸ್ಸೀಯ ಸಂಬಂಧಿತ ರಾಜ್ಯದ ಭೂಕ್ಷೇತ್ರದಲ್ಲಿ ಯೆಹೋವನು ಅವರಿಗಾಗಿ ಒಂದು ಸ್ಥಳವನ್ನಿಟ್ಟಿದ್ದಾನೆ.
13. ಯೆಹೋವನ ಸೇವಕರಲ್ಲಿ ಇಂದು ಯಾರು ಅಬ್ರಹಾಮನಿಗಿದ್ದಂತಹ ರೀತಿಯ ನಂಬಿಕೆಯ ಪ್ರಮಾಣವನ್ನು ಕೊಡುತ್ತಾರೆ?
13 ಇಂದು ಯೆಹೋವನ ಸೇವಕರ ನಡುವೆ, ಅಬ್ರಹಾಮನಂತಿರುವವರು ಇದ್ದಾರೆ. ಅನೇಕ ವರ್ಷಗಳಿಂದ ಅವರು ನಂಬಿಕೆಯಿಂದ ನಡೆದಿದ್ದಾರೆ. ದೇವರು ಕೊಡುವಂತಹ ಬಲದಿಂದ ಅವರು ಪರ್ವತಸದೃಶ ತಡೆಗಳನ್ನು ಜಯಿಸಿದ್ದಾರೆ. (ಮತ್ತಾಯ 17:20) ದೇವರು ಅವರಿಗೆ ವಾಗ್ದಾನಿಸಿರುವ ಬಾಧ್ಯತೆಯನ್ನು ಯಾವಾಗ ಕೊಡುವನೆಂಬ ವಿಷಯವು ಅವರಿಗೆ ಗೊತ್ತಿಲ್ಲದಿರುವ ಕಾರಣ ಅವರು ನಂಬಿಕೆಯಲ್ಲಿ ಕದಲುವುದಿಲ್ಲ. ಯೆಹೋವನ ವಾಕ್ಯವು ವಿಫಲವಾಗದೆಂದು ಅವರಿಗೆ ಗೊತ್ತಿದೆ, ಮತ್ತು ಆತನ ಸಾಕ್ಷಿಗಳಲ್ಲಿ ಒಬ್ಬರಾಗಿ ಎಣಿಸಲ್ಪಡುವುದನ್ನು ಅವರು ಒಂದು ಬೆಲೆಕಟ್ಟಲಾರದ ಸುಯೋಗವಾಗಿ ಪರಿಗಣಿಸುತ್ತಾರೆ. ನಿಮಗೂ ಹಾಗೆ ಅನಿಸುತ್ತದೊ?
ಮೋಶೆಯನ್ನು ಪ್ರೇರಿಸಿದ ನಂಬಿಕೆ
14. ಮೋಶೆಯ ನಂಬಿಕೆಗಾಗಿ ತಳಪಾಯವು ಹೇಗೆ ಹಾಕಲಾಯಿತು?
14 ನಂಬಿಕೆಯ ಮತ್ತೊಂದು ಮಾದರಿಯು ಮೋಶೆಯಾಗಿದ್ದಾನೆ. ಅವನ ನಂಬಿಕೆಗೆ ತಳಪಾಯವೇನಾಗಿತ್ತು? ಅದನ್ನು ಶೈಶವದಲ್ಲಿಯೇ ಹಾಕಲಾಯಿತು. ಫರೋಹನ ಪುತ್ರಿಯು ಮೋಶೆಯನ್ನು ನೈಲ್ ನದಿಯ ತೀರದಲ್ಲಿ ಒಂದು ಪಪೈರಸ್ ಪೆಟ್ಟಿಗೆಯಲ್ಲಿ ಕಂಡುಕೊಂಡು, ಅವನನ್ನು ತನ್ನ ಮಗನಾಗಿ ಸ್ವೀಕರಿಸಿದರೂ, ಮೋಶೆಯ ಸ್ವಂತ ಹೀಬ್ರು ತಾಯಿಯಾದ ಯೊಕಬೆದಳು ಆ ಗಂಡು ಮಗುವಿಗೆ ಮೊಲೆಯುಣಿಸಿದಳು ಮತ್ತು ಆರಂಭದ ವರ್ಷಗಳಲ್ಲಿ ಅವನು, ಅವಳ ಆರೈಕೆಯ ಕೆಳಗೆ ಇದ್ದನು. ಯೆಹೋವನಿಗಾಗಿ ಪ್ರೀತಿ ಮತ್ತು ಅಬ್ರಹಾಮನಿಗೆ ಆತನು ಮಾಡಿದಂತಹ ವಾಗ್ದಾನಗಳಿಗಾಗಿ ಗಣ್ಯತೆಯನ್ನು ಬೇರೂರಿಸುತ್ತಾ, ಯೊಕಬೆದಳು ಅವನಿಗೆ ಚೆನ್ನಾಗಿ ಕಲಿಸಿದಳೆಂಬುದು ಸುವ್ಯಕ್ತ. ತದನಂತರ, ಫರೋಹನ ಮನೆತನದ ಒಬ್ಬ ಸದಸ್ಯನಾಗಿ, ಮೋಶೆಯು “ಐಗುಪ್ತದೇಶದವರ ಸರ್ವವಿದ್ಯೆಗಳಲ್ಲಿಯೂ ಉಪದೇಶಹೊಂದಿ”ದನು. (ಅ. ಕೃತ್ಯಗಳು 7:20-22; ವಿಮೋಚನಕಾಂಡ 2:1-10; 6:20; ಇಬ್ರಿಯ 11:23) ಆದರೆ, ಅವನಿಗೆ ಅನುಗ್ರಹದ ಸ್ಥಾನವಿದ್ದರೂ, ಮೋಶೆಯ ಹೃದಯವು ದಾಸತ್ವದಲ್ಲಿದ್ದ ದೇವರ ಜನರೊಂದಿಗಿತ್ತು.
15. ತನ್ನನ್ನು ಯೆಹೋವನ ಜನರೊಂದಿಗೆ ಗುರುತಿಸಿಕೊಳ್ಳುವುದು ಮೋಶೆಗೆ ಏನನ್ನು ಅರ್ಥೈಸಿತು?
15 ತನ್ನ 40ನೆಯ ವರ್ಷದಲ್ಲಿ ಮೋಶೆಯು, ಅನ್ಯಾಯವಾಗಿ ಉಪಚರಿಸಲ್ಪಡುತ್ತಿದ್ದ ಒಬ್ಬ ಇಸ್ರಾಯೇಲ್ಯನನ್ನು ಬಿಡಿಸಲು ಒಬ್ಬ ಐಗುಪ್ತ್ಯನನ್ನು ಕೊಂದುಹಾಕಿದನು. ಮೋಶೆಯು ದೇವರ ಜನರನ್ನು ಹೇಗೆ ವೀಕ್ಷಿಸಿದನೆಂಬುದನ್ನು ಈ ಘಟನೆಯು ತೋರಿಸಿತು. ನಿಶ್ಚಯವಾಗಿಯೂ, “ಮೋಶೆಯು ದೊಡ್ಡವನಾದ ಮೇಲೆ ಫರೋಹನ ಕುಮಾರ್ತೆಯ ಮಗನೆನಿಸಿಕೊಳ್ಳುವದು ಬೇಡವೆಂದದ್ದು ನಂಬಿಕೆಯಿಂದಲೇ.” ಐಗುಪ್ತದ ರಾಜನ ಆಸ್ಥಾನದ ಒಬ್ಬ ಸದಸ್ಯನೋಪಾದಿ “ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವುದ”ಕ್ಕೆ ಅಂಟಿಕೊಂಡಿರುವ ಬದಲಿಗೆ, ದೇವರ ಪೀಡಿತ ಜನರೊಂದಿಗೆ ತನ್ನನ್ನು ಗುರುತಿಸಿಕೊಳ್ಳಲು ಅವನು ನಂಬಿಕೆಯಿಂದ ಪ್ರಚೋದಿಸಲ್ಪಟ್ಟಿದ್ದನು.—ಇಬ್ರಿಯ 11:24, 25; ಅ. ಕೃತ್ಯಗಳು 7:23-25.
16. (ಎ) ಯಾವ ಆದೇಶವನ್ನು ಯೆಹೋವನು ಮೋಶೆಗೆ ನೀಡಿದನು, ಮತ್ತು ದೇವರು ಅವನಿಗೆ ಹೇಗೆ ಸಹಾಯ ಮಾಡಿದನು? (ಬಿ) ತನಗೆ ನೀಡಲ್ಪಟ್ಟ ಆದೇಶವನ್ನು ಪೂರೈಸುವುದರಲ್ಲಿ, ಮೋಶೆಯು ನಂಬಿಕೆಯನ್ನು ಹೇಗೆ ತೋರಿಸಿದನು?
16 ಮೋಶೆಯು ತನ್ನ ಜನರಿಗೆ ಪರಿಹಾರವನ್ನು ತರಲಿಕ್ಕಾಗಿ ಕ್ರಿಯೆಗೈಯಲು ಕಾತುರನಾಗಿದ್ದನು, ಆದರೆ ಅವರ ವಿಮೋಚನೆಗಾಗಿದ್ದ ದೇವರ ಸಮಯವು ಇನ್ನೂ ಬಂದಿರಲಿಲ್ಲ. ಮೋಶೆಯು ಐಗುಪ್ತದಿಂದ ಓಡಿಹೋಗಬೇಕಾಯಿತು. ಸುಮಾರು 40 ವರ್ಷಗಳ ಅನಂತರವೇ, ಇಸ್ರಾಯೇಲ್ಯರನ್ನು ಹೊರಡಿಸಲು ಐಗುಪ್ತಕ್ಕೆ ಹಿಂದಿರುಗುವಂತೆ ಯೆಹೋವನು ಒಬ್ಬ ದೇವದೂತನ ಮೂಲಕ ಮೋಶೆಗೆ ಆದೇಶನೀಡಿದನು. (ವಿಮೋಚನಕಾಂಡ 3:2-10) ಮೋಶೆಯು ಹೇಗೆ ಪ್ರತಿಕ್ರಿಯಿಸಿದನು? ಇಸ್ರಾಯೇಲನ್ನು ವಿಮೋಚಿಸುವ ವಿಷಯದಲ್ಲಿ ಯೆಹೋವನ ಸಾಮರ್ಥ್ಯದ ಕುರಿತಾಗಿ ಅವನು ಸಂದೇಹವನ್ನು ವ್ಯಕ್ತಪಡಿಸಲಿಲ್ಲ, ಆದರೆ ದೇವರು ತನ್ನ ಮುಂದೆ ಇಟ್ಟಿದ್ದ ಪಾತ್ರಕ್ಕಾಗಿ ತಾನು ಅನರ್ಹನೆಂದು ಅವನಿಗೆ ಖಂಡಿತವಾಗಿಯೂ ಅನಿಸಿತು. ಮೋಶೆಗೆ ಅಗತ್ಯವಿದ್ದ ಉತ್ತೇಜನವನ್ನು ಯೆಹೋವನು ಪ್ರೀತಿಪೂರ್ವಕವಾಗಿ ಒದಗಿಸಿದನು. (ವಿಮೋಚನಕಾಂಡ 3:11–4:17) ಮೋಶೆಯ ನಂಬಿಕೆ ಬಲವಾಯಿತು. ಅವನು ಐಗುಪ್ತಕ್ಕೆ ಹಿಂದಿರುಗಿದನು ಮತ್ತು ಯೆಹೋವನನ್ನು ಆರಾಧಿಸಲಿಕ್ಕಾಗಿ ಫರೋಹನು ಇಸ್ರಾಯೇಲನ್ನು ಬಿಟ್ಟುಬಿಡಲು ತಪ್ಪಿಹೋದದ್ದಕ್ಕಾಗಿ ಐಗುಪ್ತದ ಮೇಲೆ ಬರಲಿದ್ದ ಉಪದ್ರವಗಳ ಕುರಿತಾಗಿ ಆ ಶಾಸಕನಿಗೆ ಮುಖಾಮುಖಿಯಾಗಿ ಪದೇ ಪದೇ ಎಚ್ಚರಿಕೆ ನೀಡಿದನು. ಆ ಉಪದ್ರವಗಳನ್ನು ಉಂಟುಮಾಡಲು ಮೋಶೆಗೆ ಯಾವುದೇ ವೈಯಕ್ತಿಕ ಶಕ್ತಿಯಿರಲಿಲ್ಲ. ಅವನು ನೋಟದಿಂದಲ್ಲ ನಂಬಿಕೆಯಿಂದ ನಡೆದನು. ಅವನ ನಂಬಿಕೆಯು ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿತ್ತು. ಫರೋಹನು ಮೋಶೆಯನ್ನು ಬೆದರಿಸಿದನು. ಆದರೆ ಮೋಶೆಯು ಪಟ್ಟುಹಿಡಿದನು. “ಅವನು ಅರಸನ ರೌದ್ರಕ್ಕೆ ಭಯಪಡದೆ ಐಗುಪ್ತದೇಶವನ್ನು ಬಿಟ್ಟುಹೋದದ್ದು ನಂಬಿಕೆಯಿಂದಲೇ. ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.” (ಇಬ್ರಿಯ 11:27) ಮೋಶೆಯು ಪರಿಪೂರ್ಣನಾಗಿರಲಿಲ್ಲ. ಅವನು ತಪ್ಪುಗಳನ್ನು ಮಾಡಿದನು. (ಅರಣ್ಯಕಾಂಡ 20:7-12) ಆದರೆ ದೇವರಿಂದ ಆದೇಶವನ್ನು ಪಡೆದ ಅನಂತರ, ಒಟ್ಟಿನಲ್ಲಿ ಅವನ ಜೀವನ ಕ್ರಮವು ನಂಬಿಕೆಯಿಂದಲೇ ನಿಯಂತ್ರಿಸಲ್ಪಟ್ಟಿತು.
17. ನೋಹ, ಅಬ್ರಹಾಮ, ಮತ್ತು ಮೋಶೆ, ದೇವರ ಹೊಸ ಲೋಕವನ್ನು ನೋಡಲು ಜೀವದಿಂದಿರದಿದ್ದರೂ, ನಂಬಿಕೆಯಿಂದ ನಡೆಯುವುದು ಅವರಿಗೆ ಯಾವ ಪರಿಣಾಮವನ್ನು ತಂದಿತು?
17 ನಿಮ್ಮ ನಂಬಿಕೆಯು, ನೋಹ, ಅಬ್ರಹಾಮ, ಮತ್ತು ಮೋಶೆಯರ ನಂಬಿಕೆಯಂತಿರಲಿ. ಅವರು ದೇವರ ನೂತನ ಲೋಕವನ್ನು ಅವರ ದಿನದಲ್ಲಿ ನೋಡಲಿಲ್ಲ, ನಿಜ. (ಇಬ್ರಿಯ 11:39) ಅದು ಇನ್ನೂ ದೇವರ ನೇಮಿತ ಸಮಯವಾಗಿರಲಿಲ್ಲ; ಆತನ ಉದ್ದೇಶದ ವಿಷಯದಲ್ಲಿ ಇನ್ನೂ ಪೂರೈಸಲ್ಪಡಬೇಕಾದ ಇತರ ಅಂಶಗಳಿದ್ದವು. ಆದರೂ ದೇವರ ವಾಕ್ಯದಲ್ಲಿನ ಅವರ ನಂಬಿಕೆಯು ಕದಲಲಿಲ್ಲ, ಮತ್ತು ಅವರ ಹೆಸರುಗಳು ದೇವರ ಜೀವಬಾಧ್ಯರ ಪುಸ್ತಕದಲ್ಲಿವೆ.
18. ಸ್ವರ್ಗೀಯ ಜೀವಿತಕ್ಕೆ ಕರೆಯಲ್ಪಟ್ಟವರಿಗೆ, ನಂಬಿಕೆಯಿಂದ ನಡೆಯುವುದು ಅಗತ್ಯವಾಗಿದೆ ಏಕೆ?
18 “ದೇವರು ನಮಗೋಸ್ಕರ ಶ್ರೇಷ್ಠವಾದ ಭಾಗ್ಯವನ್ನು . . . ಸಂಕಲ್ಪಿಸಿದನು” ಎಂಬುದಾಗಿ ಅಪೊಸ್ತಲ ಪೌಲನು ಬರೆದನು. ಅಂದರೆ, ಕ್ರಿಸ್ತನೊಂದಿಗೆ ಸ್ವರ್ಗೀಯ ಜೀವಿತಕ್ಕೆ ಕರೆಯಲ್ಪಟ್ಟಿರುವ ಅಪೊಸ್ತಲ ಪೌಲನಂತಹವರಿಗೆ ಯಾವುದೊ ಶ್ರೇಷ್ಠ ಸಂಗತಿಯನ್ನು ದೇವರು ಮುನ್ನೋಡಿದನು. (ಇಬ್ರಿಯ 11:40) 2 ಕೊರಿಂಥ 5:7 (NW)ರಲ್ಲಿ ದಾಖಲಿಸಲ್ಪಟ್ಟ, “ನಾವು ನೋಟದಿಂದಲ್ಲ, ನಂಬಿಕೆಯಿಂದ ನಡೆಯುತ್ತಿದ್ದೇವೆ” ಎಂಬ ಮಾತುಗಳನ್ನು ಬರೆದಾಗ, ನಿಶ್ಚಯವಾಗಿಯೂ ಈ ವ್ಯಕ್ತಿಗಳೇ ಪೌಲನ ಮನಸ್ಸಿನಲ್ಲಿದ್ದರು. ಆ ಮಾತುಗಳು ಬರೆಯಲ್ಪಟ್ಟ ಸಮಯದಲ್ಲಿ, ಅವರಲ್ಲಿ ಯಾರೂ ತಮ್ಮ ಸ್ವರ್ಗೀಯ ಪ್ರತಿಫಲವನ್ನು ಪಡೆದಿರಲಿಲ್ಲ. ಅವರು ಅದನ್ನು ತಮ್ಮ ಶಾರೀರಿಕ ಕಣ್ಣುಗಳಿಂದ ನೋಡಸಾಧ್ಯವಿರಲಿಲ್ಲವಾದರೂ, ಅವರ ನಂಬಿಕೆಯು ಸಾಧಾರವುಳ್ಳದ್ದಾಗಿತ್ತು. ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದನು, ಸ್ವರ್ಗೀಯ ಜೀವಿತಕ್ಕೆ ಎಬ್ಬಿಸಲ್ಪಟ್ಟವರಲ್ಲಿ ಪ್ರಥಮಫಲವಾಗಿದ್ದನು. ಮತ್ತು ಅವನ ಸ್ವರ್ಗಾರೋಹಣದ ಮೊದಲು 500ಕ್ಕಿಂತಲೂ ಹೆಚ್ಚು ಪ್ರತ್ಯಕ್ಷಸಾಕ್ಷಿಗಳು ಅವನನ್ನು ನೋಡಿದ್ದರು. (1 ಕೊರಿಂಥ 15:3-8) ಆ ನಂಬಿಕೆಯಿಂದ ತಮ್ಮ ಇಡೀ ಜೀವನ ಕ್ರಮವು ನಿಯಂತ್ರಿಸಲ್ಪಡಲು ಅವರಿಗೆ ಹೇರಳವಾದ ಕಾರಣವಿತ್ತು. ನಮಗೂ ನಂಬಿಕೆಯಿಂದ ನಡೆಯಲಿಕ್ಕಾಗಿ ಸಕಾರಣಗಳಿವೆ.
19. ಇಬ್ರಿಯ 1:1, 2ರಲ್ಲಿ ತೋರಿಸಲ್ಪಟ್ಟಂತೆ, ಯಾರ ಮೂಲಕ ದೇವರು ನಮ್ಮೊಂದಿಗೆ ಮಾತಾಡಿದ್ದಾನೆ?
19 ಇಂದು, ಉರಿಯುವ ಗಿಡದ ಹತ್ತಿರ ಮೋಶೆಯೊಂದಿಗೆ ಮಾತಾಡಿದಂತೆ, ಯೆಹೋವನು ಒಬ್ಬ ದೇವದೂತನ ಮೂಲಕ ತನ್ನ ಜನರೊಂದಿಗೆ ಮಾತಾಡುವುದಿಲ್ಲ. ದೇವರು ತನ್ನ ಮಗನ ಮೂಲಕ ಮಾತಾಡಿದ್ದಾನೆ. (ಇಬ್ರಿಯ 1:1, 2) ಅವನ ಮೂಲಕ ದೇವರು ಏನು ಹೇಳಿದನೊ ಅದು ಬೈಬಲಿನಲ್ಲಿ ದಾಖಲಿಸಲ್ಪಡುವಂತೆ ಅವನು ಮಾಡಿದನು, ಮತ್ತು ಇದು ಲೋಕದ ಸುತ್ತಲಿರುವ ಜನರ ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿದೆ.
20. ನಮ್ಮ ಸನ್ನಿವೇಶವು, ನೋಹ, ಅಬ್ರಹಾಮ, ಮತ್ತು ಮೋಶೆಯ ಸನ್ನಿವೇಶಕ್ಕಿಂತಲೂ ಹೆಚ್ಚು ಅನುಕೂಲಕರವಾಗಿದೆ ಹೇಗೆ?
20 ನಮಗೆ ನೋಹ, ಅಬ್ರಹಾಮ, ಮತ್ತು ಮೋಶೆಗಿದ್ದಂತಹ ವಿಷಯಕ್ಕಿಂತ ಹೆಚ್ಚಿನ ವಿಷಯವಿದೆ. ನಮಗೆ ದೇವರ ಸಂಪೂರ್ಣ ವಾಕ್ಯವಿದೆ—ಮತ್ತು ಅದರಲ್ಲಿ ಹೆಚ್ಚಿನದ್ದು ಈಗಾಗಲೇ ನೆರವೇರಿದೆ. ಪ್ರತಿಯೊಂದು ವಿಧದ ಸಂಕಷ್ಟಗಳ ಎದುರಿನಲ್ಲಿಯೂ ಯೆಹೋವನ ನಂಬಿಗಸ್ತ ಸಾಕ್ಷಿಗಳಾಗಿ ಪರಿಣಮಿಸಿದ ಸ್ತ್ರೀಪುರುಷರ ಕುರಿತು ಬೈಬಲು ಹೇಳುವ ಸಕಲ ವಿಷಯಗಳ ನೋಟದಲ್ಲಿ, ಇಬ್ರಿಯ 12:1 ಪ್ರೇರಿಸುವುದು: “ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು . . . ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ.” ನಮ್ಮ ನಂಬಿಕೆಯು ಲಘುವಾಗಿ ಎಣಿಸಬೇಕಾದ ವಿಷಯವಾಗಿರುವುದಿಲ್ಲ. ‘ನಮಗೆ ಹತ್ತಿಕೊಳ್ಳುವ ಪಾಪವು’ ನಂಬಿಕೆಯ ಕೊರತೆಯಾಗಿದೆ. “ನಂಬಿಕೆಯಿಂದ ನಡೆ”ಯುತ್ತಾ ಇರಬೇಕಾದರೆ ಕಠಿನವಾದ ಹೋರಾಟವು ಅಗತ್ಯವಾಗಿದೆ.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ, ಬೈಬಲು—ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್) ಎಂಬ ಪುಸ್ತಕವನ್ನು ನೋಡಿರಿ.
ನಿಮ್ಮ ಹೇಳಿಕೆ ಏನಾಗಿದೆ?
◻ “ನಂಬಿಕೆಯಿಂದ ನಡೆಯು”ವುದರಲ್ಲಿ ಏನು ಒಳಗೊಂಡಿದೆ?
◻ ನೋಹನು ನಂಬಿಕೆಯನ್ನು ತೋರಿಸಿದ ವಿಧದಿಂದ ನಾವು ಹೇಗೆ ಪ್ರಯೋಜನಪಡೆಯಬಲ್ಲೆವು?
◻ ಅಬ್ರಹಾಮನು ನಂಬಿಕೆಯನ್ನು ತೋರಿಸಿದ ವಿಧವು ನಮಗೆ ಹೇಗೆ ಸಹಾಯ ಮಾಡುತ್ತದೆ?
◻ ನಂಬಿಕೆಯ ಮಾದರಿಯೋಪಾದಿ ಬೈಬಲು ಮೋಶೆಗೆ ಕೈತೋರಿಸುವುದೇಕೆ?
[ಪುಟ 10 ರಲ್ಲಿರುವ ಚಿತ್ರ]
ಅಬ್ರಹಾಮನು ನಂಬಿಕೆಯಿಂದ ನಡೆದನು
[ಪುಟ 10 ರಲ್ಲಿರುವ ಚಿತ್ರ]
ಫರೋಹನ ಸಮ್ಮುಖದಲ್ಲಿ ಮೋಶೆ ಮತ್ತು ಆರೋನರು ನಂಬಿಕೆಯನ್ನು ಪ್ರದರ್ಶಿಸಿದರು