ಜೀವಕ್ಕಾಗಿರುವ ಓಟವನ್ನು ಬಿಟ್ಟುಬಿಡಬೇಡಿರಿ!
“ನಮ್ಮ ಮುಂದೆ ಇಡಲ್ಪಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ.” —ಇಬ್ರಿಯ 12:1, Nw.
1, 2. ಈ ಕಡೇ ದಿವಸಗಳಲ್ಲಿ ಯಾವ ರೋಮಾಂಚಕ ಘಟನೆಗಳು ಯೆಹೋವನ ಸೇವಕರನ್ನು ಭಾವೋದ್ರೇಕಗೊಳಿಸಿವೆ?
ನಾವು ರೋಮಾಂಚಕ ಹಾಗೂ ಪಂಥಾಹ್ವಾನದಾಯಕ ಸಮಯಗಳಲ್ಲಿ ಜೀವಿಸುತ್ತಿದ್ದೇವೆ. 80ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, 1914ರಲ್ಲಿ, ಯೇಸು ದೇವರ ಸ್ವರ್ಗೀಯ ರಾಜ್ಯದ ರಾಜನೋಪಾದಿ ಸಿಂಹಾಸನಾರೂಢನಾದನು. “ಕರ್ತನ ದಿನ” ಮತ್ತು ಅದರೊಂದಿಗೆ ಈ ವಿಷಯಗಳ ವ್ಯವಸ್ಥೆಯ “ಅಂತ್ಯಕಾಲ”ವು ಆರಂಭವಾಯಿತು. (ಪ್ರಕಟನೆ 1:10; ದಾನಿಯೇಲ 12:9) ಅಂದಿನಿಂದ ಜೀವಕ್ಕಾಗಿರುವ ಕ್ರೈಸ್ತನ ಓಟವು ಇನ್ನೂ ಹೆಚ್ಚು ತ್ವರಿತಗತಿಯದ್ದಾಗಿ ಪರಿಣಮಿಸಿದೆ. ಯೆಹೋವನ ಉದ್ದೇಶಗಳನ್ನು ಪೂರೈಸಲಿಕ್ಕಾಗಿ ತಡೆಯಿಲ್ಲದೆ ಚಲಿಸುತ್ತಿರುವ ಯೆಹೋವನ ಸ್ವರ್ಗೀಯ ರಥವಾದ ಆತನ ಸ್ವರ್ಗೀಯ ಸಂಸ್ಥೆಯೊಂದಿಗೆ ಜೊತೆಯಾಗಿ ಸಾಗಲು, ದೇವರ ಸೇವಕರು ತಮ್ಮನ್ನು ಹುರುಪಿನಿಂದ ವಿನಿಯೋಗಿಸಿಕೊಂಡಿದ್ದಾರೆ.—ಯೆಹೆಜ್ಕೇಲ 1:4-28; 1 ಕೊರಿಂಥ 9:24.
2 ನಿತ್ಯಜೀವದ ಕಡೆಗಿನ ‘ಓಟವನ್ನು ಓಡು’ವಾಗ ದೇವಜನರು ಅದರಲ್ಲಿ ಆನಂದವನ್ನು ಕಂಡುಕೊಂಡಿದ್ದಾರೊ? ಹೌದು, ನಿಜವಾಗಿಯೂ ಕಂಡುಕೊಂಡಿದ್ದಾರೆ! ಯೇಸುವಿನ ಸಹೋದರರಲ್ಲಿ ಉಳಿಕೆಯವರ ಒಟ್ಟುಗೂಡಿಸುವಿಕೆಯನ್ನು ನೋಡಿ ಅವರು ರೋಮಾಂಚಗೊಂಡಿದ್ದಾರೆ, ಮತ್ತು 1,44,000 ಮಂದಿಯಲ್ಲಿ ಉಳಿಕೆಯವರ ಅಂತಿಮ ಮುದ್ರೆಒತ್ತುವಿಕೆಯು ಇನ್ನೇನು ಪೂರ್ಣಗೊಳ್ಳಲಿದೆ ಎಂಬುದನ್ನು ಗ್ರಹಿಸಿ ಅವರು ಹರ್ಷಿಸುತ್ತಾರೆ. (ಪ್ರಕಟನೆ 7:3, 4) ಇದಲ್ಲದೆ, ಯೆಹೋವನ ನೇಮಿತ ಅರಸನು “ಭೂಮಿಯ ಪೈರ”ನ್ನು ಕೊಯ್ಯಲಿಕ್ಕಾಗಿ ತನ್ನ ಕತ್ತಿಯನ್ನು ಚಾಚಿದ್ದಾನೆ ಎಂಬುದನ್ನು ವಿವೇಚಿಸಿ ಅವರು ಭಾವೋದ್ರೇಕಿತರಾಗಿದ್ದಾರೆ. (ಪ್ರಕಟನೆ 14:15, 16) ಮತ್ತು ಅದು ಎಂತಹ ಬೆಳೆಯಾಗಿದೆ! (ಮತ್ತಾಯ 9:37) ಇಷ್ಟರ ವರೆಗೆ, 50 ಲಕ್ಷಕ್ಕಿಂತಲೂ ಹೆಚ್ಚು ಜೀವಗಳು—“ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು . . . ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ”—ಒಳಸೇರಿಸಲ್ಪಟ್ಟಿವೆ. (ಪ್ರಕಟನೆ 7:9) ಅಂತಿಮವಾಗಿ ಆ ಸಮೂಹವು ಎಷ್ಟು ದೊಡ್ಡದಾಗಿರುವುದೆಂಬುದನ್ನು ಯಾರೂ ಹೇಳಸಾಧ್ಯವಿಲ್ಲ, ಏಕೆಂದರೆ ಯಾವ ಮನುಷ್ಯನೂ ಅದನ್ನು ಎಣಿಸಲು ಶಕ್ತನಾಗಿರುವುದಿಲ್ಲ.
3. ಯಾವ ವಿಘ್ನಗಳ ಎದುರಿನಲ್ಲಿ ನಾವು ಯಾವಾಗಲೂ ಒಂದು ಆನಂದಭರಿತ ಆತ್ಮವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು?
3 ನಾವು ಓಟದಲ್ಲಿ ವೇಗದಿಂದ ಓಡುತ್ತಿರುವಾಗ, ಸೈತಾನನು ನಮ್ಮನ್ನು ಎಡವಿಬೀಳಿಸಲು ಅಥವಾ ನಮ್ಮ ವೇಗವನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಾನೆಂಬುದು ನಿಜ. (ಪ್ರಕಟನೆ 12:17) ಮತ್ತು ಅಂತ್ಯಕಾಲವನ್ನು ಗುರುತಿಸುವ ಯುದ್ಧಗಳು, ಬರಗಾಲಗಳು, ಅಂಟುರೋಗಗಳು, ಹಾಗೂ ಇನ್ನಿತರ ಎಲ್ಲ ಕಷ್ಟಸಂಕಟಗಳ ಎದುರಿನಲ್ಲಿ, ಓಡುತ್ತಾ ಇರುವುದು ಸುಲಭವಾಗಿರುವುದಿಲ್ಲ. (ಮತ್ತಾಯ 24:3-9; ಲೂಕ 21:11; 2 ತಿಮೊಥೆಯ 3:1-5) ಆದರೂ, ಓಟದ ಕೊನೆಯು ಹೆಚ್ಚು ಸಮೀಪವಾಗುತ್ತಿರುವಾಗ, ನಮ್ಮ ಹೃದಯಗಳು ಆನಂದದಿಂದ ಪುಟಿಯುತ್ತವೆ. ತನ್ನ ದಿನದಲ್ಲಿದ್ದ ಜೊತೆಕ್ರೈಸ್ತರು ಯಾವ ಆತ್ಮವನ್ನು ಪಡೆದುಕೊಂಡಿರುವಂತೆ ಪೌಲನು ಪ್ರಚೋದಿಸಿದನೋ ಆ ಆತ್ಮವನ್ನು ಪ್ರತಿಬಿಂಬಿಸಲು ನಾವು ಹೆಣಗಾಡುತ್ತೇವೆ: “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ.”—ಫಿಲಿಪ್ಪಿ 4:4.
4. ಫಿಲಿಪ್ಪಿಯ ಕ್ರೈಸ್ತರಿಂದ ಯಾವ ರೀತಿಯ ಆತ್ಮವು ಪ್ರದರ್ಶಿಸಲ್ಪಟ್ಟಿತು?
4 ಆ ಮಾತುಗಳನ್ನು ಪೌಲನು ಯಾರಿಗೆ ಸಂಬೋಧಿಸಿದನೋ ಆ ಕ್ರೈಸ್ತರು ತಮ್ಮ ನಂಬಿಕೆಯಲ್ಲಿ ಆನಂದವನ್ನು ಪಡೆದುಕೊಳ್ಳುತ್ತಿದ್ದರೆಂಬುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಪೌಲನು ಅವರಿಗೆ ಹೇಳಿದ್ದು: “ಕರ್ತನಲ್ಲಿ ಸಂತೋಷಪಡಿರಿ [“ಸಂತೋಷಪಡುತ್ತಾ ಇರಿ,” NW].” (ಫಿಲಿಪ್ಪಿ 3:1) ಫಿಲಿಪ್ಪಿಯವರು ಉದಾರಿಗಳೂ, ಪ್ರೀತಿಯುಳ್ಳವರೂ ಆಗಿದ್ದರು. ಫಿಲಿಪ್ಪಿ ಸಭೆಯು ಹುರುಪಿನಿಂದಲೂ ಅತ್ಯುತ್ಸಾಹದಿಂದಲೂ ಸೇವೆಮಾಡುತ್ತಿದ್ದ ಸಭೆಯಾಗಿತ್ತು. (ಫಿಲಿಪ್ಪಿ 1:3-5; 4:10, 14-20) ಆದರೆ ಪ್ರಥಮ ಶತಮಾನದ ಎಲ್ಲ ಕ್ರೈಸ್ತರಲ್ಲಿಯೂ ಆ ಆತ್ಮವಿರಲಿಲ್ಲ. ಉದಾಹರಣೆಗಾಗಿ, ಪೌಲನು ಇಬ್ರಿಯ ಪುಸ್ತಕವನ್ನು ಯಾರಿಗೆ ಬರೆದನೋ ಆ ಯೆಹೂದಿ ಕ್ರೈಸ್ತರಲ್ಲಿ ಕೆಲವರು ಚಿಂತೆಯ ಕಾರಣವಾಗಿದ್ದರು.
‘ಸಾಮಾನ್ಯವಾದುದಕ್ಕಿಂತಲೂ ಹೆಚ್ಚು ಲಕ್ಷ್ಯಕೊಡಿರಿ’
5. (ಎ) ಪ್ರಥಮ ಕ್ರೈಸ್ತ ಸಭೆಯು ರಚಿಸಲ್ಪಟ್ಟಾಗ, ಇಬ್ರಿಯ ಕ್ರೈಸ್ತರಲ್ಲಿ ಯಾವ ಆತ್ಮವಿತ್ತು? (ಬಿ) ಸಾ.ಶ. 60ರ ಸುಮಾರಿಗೆ ಕೆಲವು ಇಬ್ರಿಯ ಕ್ರೈಸ್ತರಲ್ಲಿದ್ದ ಆತ್ಮವನ್ನು ವರ್ಣಿಸಿರಿ.
5 ಲೋಕ ಇತಿಹಾಸದಲ್ಲಿ ಮೊದಲ ಕ್ರೈಸ್ತ ಸಭೆಯು, ಹುಟ್ಟು ಯೆಹೂದ್ಯರಿಂದ ಮತ್ತು ಮತಾವಲಂಬಿಗಳಿಂದ ರಚಿತವಾಗಿತ್ತು ಮತ್ತು ಸಾ.ಶ. 33ರಲ್ಲಿ ಯೆರೂಸಲೇಮಿನಲ್ಲಿ ಸ್ಥಾಪಿತವಾಗಿತ್ತು. ಅದು ಯಾವ ರೀತಿಯ ಆತ್ಮವನ್ನು ಪಡೆದಿತ್ತು? ಹಿಂಸೆಯಿದ್ದಾಗ್ಯೂ, ಅದರ ಉತ್ಸಾಹ ಮತ್ತು ಆನಂದವನ್ನು ತಿಳಿದುಕೊಳ್ಳುವರೆ ಒಬ್ಬನು ಅಪೊಸ್ತಲ ಕೃತ್ಯಗಳು ಪುಸ್ತಕದ ಆರಂಭದ ಅಧ್ಯಾಯಗಳನ್ನು ಓದುವುದೇ ಸಾಕು. (ಅ. ಕೃತ್ಯಗಳು 2:44-47; 4:32-34; 5:41; 6:7) ಆದರೂ, ದಶಕಗಳು ಕಳೆದಂತೆ, ಸನ್ನಿವೇಶವು ಬದಲಾಯಿತು, ಮತ್ತು ಅನೇಕ ಯೆಹೂದಿ ಕ್ರೈಸ್ತರು ಜೀವಕ್ಕಾಗಿರುವ ಓಟದಲ್ಲಿ ನಿಧಾನಿಗಳಾದರೆಂಬುದು ಸುವ್ಯಕ್ತ. ಸುಮಾರು ಸಾ.ಶ. 60ರಲ್ಲಿ ಅಸ್ತಿತ್ವದಲ್ಲಿದ್ದ ಅವರ ಸನ್ನಿವೇಶದ ಕುರಿತಾಗಿ ಒಂದು ಪರಾಮರ್ಶೆಯ ಗ್ರಂಥವು ಹೀಗೆ ಹೇಳುತ್ತದೆ: “ನಿರಾಸಕ್ತಿ ಮತ್ತು ಬೇಸರ, ನೆರವೇರದೆಹೋದ ನಿರೀಕ್ಷೆಗಳು, ಮುಂದೂಡಲ್ಪಟ್ಟ ಅಭಿಲಾಷೆಗಳು, ಉದ್ದೇಶಪೂರ್ವಕ ವೈಫಲ್ಯ ಮತ್ತು ಪ್ರತಿಯೊಂದು ವಿಷಯಗಳಲ್ಲಿ ಅಪನಂಬಿಗಸ್ತಿಕೆಯ ಒಂದು ಪರಿಸ್ಥಿತಿ. ಅವರು ಕ್ರೈಸ್ತರಾಗಿದ್ದರು, ಆದರೆ ತಮ್ಮ ಸ್ವರ್ಗೀಯ ಕರೆಯ ಮಹಿಮೆಯ ವಿಷಯದಲ್ಲಿ ಅವರಿಗೆ ಅತ್ಯಲ್ಪ ಗಣ್ಯತೆಯಿತ್ತು.” ಅಭಿಷಿಕ್ತ ಕ್ರೈಸ್ತರು ಇಂತಹ ಒಂದು ಸ್ಥಿತಿಗೆ ಹೇಗೆ ತಲಪಸಾಧ್ಯವಿತ್ತು? ಇಬ್ರಿಯರಿಗೆ (ಸಾ.ಶ. 61ರ ಸುಮಾರಿಗೆ ಬರೆಯಲ್ಪಟ್ಟದ್ದು) ಬರೆದ ಪೌಲನ ಪತ್ರದ ಕೆಲವು ಭಾಗಗಳ ಪರಿಗಣನೆಯು, ಆ ಪ್ರಶ್ನೆಗೆ ಉತ್ತರವನ್ನು ಕೊಡಲು ನಮಗೆ ಸಹಾಯ ಮಾಡುತ್ತದೆ. ಅಂತಹ ಪರಿಗಣನೆಯು, ತದ್ರೀತಿಯ ದುರ್ಬಲ ಆತ್ಮಿಕ ಸ್ಥಿತಿಗೆ ಇಳಿಯುವುದನ್ನು ತಡೆಗಟ್ಟಲು ಇಂದು ನಮ್ಮೆಲ್ಲರಿಗೆ ಸಹಾಯ ಮಾಡುವುದು.
6. ಮೋಶೆಯ ಧರ್ಮಶಾಸ್ತ್ರದ ಕೆಳಗಿನ ಆರಾಧನೆ ಮತ್ತು ಯೇಸು ಕ್ರಿಸ್ತನಲ್ಲಿ ನಂಬಿಕೆಯ ಮೇಲಾಧಾರಿತವಾದ ಆರಾಧನೆಯ ನಡುವೆ ಇರುವ ಕೆಲವು ಭಿನ್ನತೆಗಳು ಯಾವುವು?
6 ಯೆಹೋವನು ಮೋಶೆಯ ಮೂಲಕ ಕೊಟ್ಟ ಧರ್ಮಶಾಸ್ತ್ರಕ್ಕೆ ವಿಧೇಯತೆಯನ್ನು ತೋರಿಸುತ್ತೇವೆಂದು ಪ್ರತಿಪಾದಿಸಿದ ಒಂದು ವ್ಯವಸ್ಥೆಯಾದ ಯೆಹೂದ್ಯಮತದಿಂದ ಇಬ್ರಿಯ ಕ್ರೈಸ್ತರು ಹೊರಬಂದರು. ಆ ಧರ್ಮಶಾಸ್ತ್ರವು, ಅನೇಕ ಯೆಹೂದಿ ಕ್ರೈಸ್ತರಿಗೆ ಒಂದು ಆಕರ್ಷಣೆಯಾಗಿ ಮುಂದುವರಿಯಿತು, ಏಕೆಂದರೆ ಬಹುಶಃ ಅನೇಕ ಶತಮಾನಗಳ ವರೆಗೆ ಅದು ಯೆಹೋವನನ್ನು ಸಮೀಪಿಸುವಂತಹ ಏಕಮಾತ್ರ ಮಾರ್ಗವಾಗಿತ್ತು, ಮತ್ತು ಒಂದು ಯಾಜಕವ್ಯವಸ್ಥೆ, ಕ್ರಮವಾದ ಯಜ್ಞಾರ್ಪಣೆಗಳು, ಮತ್ತು ಯೆರೂಸಲೇಮಿನಲ್ಲಿದ್ದ ಲೋಕಪ್ರಸಿದ್ಧ ದೇವಾಲಯದೊಂದಿಗೆ, ಅದು ಆರಾಧನೆಯ ಪ್ರಚೋದನಾತ್ಮಕ ವ್ಯವಸ್ಥೆಯಾಗಿತ್ತು. ಕ್ರೈಸ್ತತ್ವವು ಭಿನ್ನವಾಗಿದೆ. ಅದು, ಯಾರು “ಬರುವ ಪ್ರತಿಫಲದ [ಭವಿಷ್ಯತ್ತಿನ] ಮೇಲೆ ಕಣ್ಣಿಟ್ಟಿ”ದ್ದು, “ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದ”ನೋ ಆ ಮೋಶೆಯಂತಹ ಒಂದು ಆತ್ಮಿಕ ದೃಷ್ಟಿಕೋನವನ್ನು ಕೇಳಿಕೊಳ್ಳುತ್ತದೆ. (ಇಬ್ರಿಯ 11:26, 27) ಅನೇಕ ಯೆಹೂದಿ ಕ್ರೈಸ್ತರಲ್ಲಿ ಅಂತಹ ಆತ್ಮಿಕ ದೃಷ್ಟಿಕೋನದ ಕೊರತೆಯಿತ್ತೆಂಬುದು ಸುವ್ಯಕ್ತ. ಅವರು ಜೀವಕ್ಕಾಗಿರುವ ಓಟವನ್ನು ಒಂದು ಉದ್ದೇಶಭರಿತ ರೀತಿಯಲ್ಲಿ ಓಡುವುದಕ್ಕೆ ಬದಲಾಗಿ, ಕುಂಟುತ್ತಾ ಸಾಗುತ್ತಿದ್ದರು.
7. ನಾವು ಯಾವ ವ್ಯವಸ್ಥೆಯಿಂದ ಹೊರಬಂದಿದ್ದೇವೋ ಅದು, ಜೀವಕ್ಕಾಗಿರುವ ಓಟದಲ್ಲಿ ನಾವು ಓಡುವ ವಿಧವನ್ನು ಹೇಗೆ ಬಾಧಿಸಬಹುದು?
7 ಇಂದು ತದ್ರೀತಿಯ ಒಂದು ಸನ್ನಿವೇಶವು ಇದೆಯೊ? ಹೌದು, ಇಂದಿನ ಪರಿಸ್ಥಿತಿಗಳು ಈ ಮುಂಚೆ ಇದ್ದ ಹಾಗೆ ಇಲ್ಲ. ಆದರೂ, ತೀರ ಜಂಬಕೊಚ್ಚಿಕೊಳ್ಳುವಂತಹ ವಿಷಯಗಳ ವ್ಯವಸ್ಥೆಯಿಂದ ಕ್ರೈಸ್ತರು ಹೊರಬರುತ್ತಾರೆ. ಈ ಲೋಕವು ಭಾವೋದ್ರೇಕಗೊಳಿಸುವಂತಹ ಸದವಕಾಶಗಳ ಆಮಿಷ ಒಡ್ಡುತ್ತದಾದರೂ, ಅದೇ ಸಮಯದಲ್ಲಿ ಅದು ಜನರ ಮೇಲೆ ಭಾರವಾದ ಜವಾಬ್ದಾರಿಗಳನ್ನು ಹೊರಿಸುತ್ತದೆ. ಇದಕ್ಕೆ ಕೂಡಿಸಿ, ನಮ್ಮಲ್ಲಿ ಅನೇಕರು, ಎಲ್ಲಿ ಅನಿಶ್ಚಿತ ಆತ್ಮವು ಸರ್ವಸಾಮಾನ್ಯವಾಗಿದೆಯೋ ಮತ್ತು ಎಲ್ಲಿ ಜನರು ಸ್ವಾರ್ಥಿಗಳೂ, ತಮ್ಮ ಸ್ವಂತ ಅಭಿರುಚಿಗಳಿಗೆ ಮಹತ್ವಕೊಡುವವರೂ ಆಗಿದ್ದಾರೋ ಅಂತಹ ದೇಶಗಳಲ್ಲಿ ಜೀವಿಸುತ್ತೇವೆ. ಇಂತಹ ವ್ಯವಸ್ಥೆಯಿಂದ ಪ್ರಭಾವಿಸಲ್ಪಡುವಂತೆ ನಾವು ನಮ್ಮನ್ನು ಬಿಟ್ಟುಕೊಡುವಲ್ಲಿ, ನಮ್ಮ ‘ಮನೋನೇತ್ರಗಳು’ ಸುಲಭವಾಗಿಯೇ ಮೊಬ್ಬಾಗಸಾಧ್ಯವಿದೆ. (ಎಫೆಸ 1:18) ನಾವೆಲ್ಲಿಗೆ ಹೋಗುತ್ತಿದ್ದೇವೆ ಎಂಬುದನ್ನು ನಾವು ಇನ್ನುಮುಂದೆ ಸ್ಪಷ್ಟವಾಗಿ ವಿವೇಚಿಸಲು ಅಸಮರ್ಥರಾಗಿರುವಲ್ಲಿ, ಜೀವಕ್ಕಾಗಿರುವ ಓಟದಲ್ಲಿ ನಾವು ಹೇಗೆ ಚೆನ್ನಾಗಿ ಓಡುವೆವು?
8. ಧರ್ಮಶಾಸ್ತ್ರದ ಕೆಳಗಿನ ಆರಾಧನೆಗಿಂತಲೂ ಕ್ರೈಸ್ತತ್ವವು ಹೆಚ್ಚು ಶ್ರೇಷ್ಠವಾಗಿರುವ ಕೆಲವು ವಿಧಗಳು ಯಾವುವು?
8 ಯೆಹೂದಿ ಕ್ರೈಸ್ತರನ್ನು ಪ್ರಚೋದಿಸಲಿಕ್ಕಾಗಿ, ಮೋಶೆಯ ಧರ್ಮಶಾಸ್ತ್ರಕ್ಕಿಂತಲೂ ಕ್ರೈಸ್ತ ವ್ಯವಸ್ಥೆಯ ಶ್ರೇಷ್ಠತೆಯ ಕುರಿತು ಪೌಲನು ಅವರಿಗೆ ಜ್ಞಾಪಕಹುಟ್ಟಿಸಿದನು. ಧರ್ಮಶಾಸ್ತ್ರದ ಕೆಳಗೆ ಹುಟ್ಟು ಇಸ್ರಾಯೇಲ್ ಜನಾಂಗವು ಯೆಹೋವನ ಜನಾಂಗವಾಗಿದ್ದಾಗ, ಪ್ರೇರಿತ ಪ್ರವಾದಿಗಳ ಮೂಲಕ ಯೆಹೋವನು ಅದರೊಂದಿಗೆ ಮಾತಾಡಿದನೆಂಬುದು ನಿಜ. ಆದರೆ, ಇಂದು “ಆತನು ಎಲ್ಲಕ್ಕೂ ಬಾಧ್ಯನನ್ನಾಗಿ ಯಾರನ್ನು ನೇಮಿಸಿದ್ದಾನೋ, ಮತ್ತು ಆತನು ಯಾರ ಮೂಲಕ ವಿಷಯಗಳ ವ್ಯವಸ್ಥೆಯನ್ನು ಮಾಡಿದ್ದಾನೋ ಆ ಪುತ್ರನ ಮೂಲಕ” ಮಾತಾಡುತ್ತಾನೆ ಎಂದು ಪೌಲನು ಹೇಳುತ್ತಾನೆ. (ಇಬ್ರಿಯ 1:2) ಇದಲ್ಲದೆ, ದಾವೀದನ ವಂಶದ ಎಲ್ಲ ರಾಜರಿಗಿಂತಲೂ—ಅವನ “ಜೊತೆಗಾರ”ರಿಗಿಂತಲೂ—ಯೇಸು ಮಹಾನ್ ಆಗಿದ್ದಾನೆ. ಅವನು ದೇವದೂತರಿಗಿಂತಲೂ ಹೆಚ್ಚು ಉನ್ನತನಾಗಿದ್ದಾನೆ.—ಇಬ್ರಿಯ 1:5, 6, 9.
9. ಪೌಲನ ದಿನದ ಯೆಹೂದಿ ಕ್ರೈಸ್ತರಂತೆ, ಯೆಹೋವನು ಹೇಳುವ ವಿಷಯಗಳಿಗೆ ನಾವು ‘ಸಾಮಾನ್ಯವಾದುದಕ್ಕಿಂತಲೂ ಹೆಚ್ಚು ಲಕ್ಷ್ಯಕೊಡು’ವವರಾಗಿರುವ ಅಗತ್ಯ ಏಕಿದೆ?
9 ಆದುದರಿಂದ, ಪೌಲನು ಯೆಹೂದಿ ಕ್ರೈಸ್ತರಿಗೆ ಸಲಹೆ ನೀಡಿದ್ದು: “ಆದದರಿಂದ ನಾವು ಕೇಳಿದ ಸಂಗತಿಗಳಿಗೆ ತಪ್ಪಿಹೋದೇವೆಂದು ಭಯಪಟ್ಟು ಅವುಗಳಿಗೆ [“ಸಾಮಾನ್ಯವಾದುದಕ್ಕಿಂತಲೂ,” NW] ಹೆಚ್ಚಾಗಿ ಲಕ್ಷ್ಯಕೊಡುವವರಾಗಿರಬೇಕು.” (ಇಬ್ರಿಯ 2:1) ಕ್ರಿಸ್ತನ ಕುರಿತಾಗಿ ಕಲಿಯುವುದು ಅದ್ಭುತಕರವಾದ ಆಶೀರ್ವಾದವಾಗಿತ್ತಾದರೂ, ಇನ್ನೂ ಹೆಚ್ಚಿನದ್ದು ಅಗತ್ಯವಾಗಿತ್ತು. ತಮ್ಮ ಸುತ್ತಲಿದ್ದ ಯೆಹೂದಿ ಲೋಕದ ಪ್ರಭಾವವನ್ನು ನಿಷ್ಫಲಗೊಳಿಸಲಿಕ್ಕಾಗಿ ಅವರು ದೇವರ ವಾಕ್ಯಕ್ಕೆ ನಿಕಟವಾದ ಗಮನವನ್ನು ಕೊಡುವ ಅಗತ್ಯವಿತ್ತು. ಈ ಲೋಕದಿಂದ ನಾವು ಯಾವುದಕ್ಕೆ ಒಡ್ಡಲ್ಪಡುತ್ತೇವೊ ಆ ಸತತವಾದ ಅಪಪ್ರಚಾರದ ವಿಷಯವಾಗಿ ಯೆಹೋವನು ಹೇಳುವ ಸಂಗತಿಗಳಿಗೆ ನಾವು ಸಹ ‘ಸಾಮಾನ್ಯವಾದುದಕ್ಕಿಂತಲೂ ಹೆಚ್ಚು ಲಕ್ಷ್ಯ’ಕೊಡುವ ಅಗತ್ಯವಿದೆ. ಇದರ ಅರ್ಥ, ಉತ್ತಮವಾದ ಅಭ್ಯಾಸ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಮತ್ತು ಒಂದು ಉತ್ತಮ ಬೈಬಲ್ ವಾಚನದ ಕಾರ್ಯತಖ್ತೆಯನ್ನು ಕಾಪಾಡಿಕೊಳ್ಳುವುದಾಗಿದೆ. ಇಬ್ರಿಯರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ತದನಂತರ ಹೇಳುವಂತೆ, ಕೂಟಗಳಿಗೆ ಹಾಜರಾಗುವುದರಲ್ಲಿ ಮತ್ತು ನಮ್ಮ ನಂಬಿಕೆಯನ್ನು ಇತರರಿಗೆ ಘೋಷಿಸುವುದರಲ್ಲಿ ಕ್ರಮವಾಗಿರುವುದನ್ನು ಸಹ ಇದು ಅರ್ಥೈಸುತ್ತದೆ. (ಇಬ್ರಿಯ 10:23-25) ಅಂತಹ ಚಟುವಟಿಕೆಯು ನಮಗೆ ಆತ್ಮಿಕವಾಗಿ ಜಾಗರೂಕರಾಗಿರಲು ಸಹಾಯ ಮಾಡುತ್ತದೆ; ಇದರಿಂದ ನಮ್ಮ ಮಹಿಮಾಯುತ ನಿರೀಕ್ಷೆಯು ನಮ್ಮ ದೃಷ್ಟಿಯಿಂದ ಮರೆಯಾಗುವುದಿಲ್ಲ. ನಾವು ನಮ್ಮ ಮನಸ್ಸುಗಳನ್ನು ಯೆಹೋವನ ಆಲೋಚನೆಗಳಿಂದ ತುಂಬಿಸುವುದಾದರೆ, ಈ ಲೋಕವು ನಮಗೆ ಮಾಡಸಾಧ್ಯವಿರುವ ಯಾವುದೇ ವಿಷಯದಿಂದ ನಾವು ಪರಾಜಿತರಾಗುವುದಿಲ್ಲ ಅಥವಾ ಸಮತೂಕತೆಯನ್ನು ಕಳೆದುಕೊಳ್ಳುವುದಿಲ್ಲ.—ಕೀರ್ತನೆ 1:1-3; ಜ್ಞಾನೋಕ್ತಿ 3:1-6.
‘ಒಬ್ಬರನ್ನೊಬ್ಬರು ಎಚ್ಚರಿಸುತ್ತಾ ಇರಿ’
10. (ಎ) ಯೆಹೋವನ ವಾಕ್ಯಕ್ಕೆ ಸಾಮಾನ್ಯವಾದುದಕ್ಕಿಂತಲೂ ಹೆಚ್ಚು ಲಕ್ಷ್ಯವನ್ನು ಕೊಡದಿರುವ ಒಬ್ಬನಿಗೆ ಏನು ಸಂಭವಿಸಸಾಧ್ಯವಿದೆ? (ಬಿ) ನಾವು ಹೇಗೆ ‘ಒಬ್ಬರನ್ನೊಬ್ಬರು ಎಚ್ಚರಿಸುತ್ತಾ’ ಇರಸಾಧ್ಯವಿದೆ?
10 ನಾವು ಆತ್ಮಿಕ ವಿಷಯಗಳಿಗೆ ನಿಕಟವಾದ ಗಮನವನ್ನು ಕೊಡದಿದ್ದರೆ, ದೇವರ ವಾಗ್ದಾನಗಳು ಅವಾಸ್ತವಿಕವಾಗಿ ಕಂಡುಬರಬಹುದು. ಪ್ರಥಮ ಶತಮಾನದಲ್ಲಿ, ಸಭೆಗಳು ಸಂಪೂರ್ಣವಾಗಿ ಅಭಿಷಿಕ್ತ ಕ್ರೈಸ್ತರಿಂದ ರಚಿತವಾಗಿದ್ದು, ಅಪೊಸ್ತಲರಲ್ಲಿ ಕೆಲವರು ಇನ್ನೂ ಜೀವಂತರಾಗಿದ್ದಾಗಲೇ ಇದು ಸಂಭವಿಸಿತು. ಪೌಲನು ಇಬ್ರಿಯರಿಗೆ ಎಚ್ಚರಿಕೆ ನೀಡಿದ್ದು: “ಸಹೋದರರೇ, ನೋಡಿಕೊಳ್ಳಿರಿ, ಜೀವಸ್ವರೂಪನಾದ ದೇವರನ್ನು ಬಿಟ್ಟುಹೋಗುವ ಅಪನಂಬಿಕೆಯುಳ್ಳ [“ನಂಬಿಕೆಯ ಕೊರತೆಯುಳ್ಳ,” NW] ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು. ನಿಮ್ಮಲ್ಲಿ ಒಬ್ಬರಾದರೂ ಪಾಪದಿಂದ ಮೋಸಹೋಗಿ ಕಠಿನರಾಗದಂತೆ ಈಹೊತ್ತು ಎಂಬ ಕಾಲವು ಇರುವ ತನಕ ಪ್ರತಿನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ.” (ಇಬ್ರಿಯ 3:12, 13) “ನೋಡಿಕೊಳ್ಳಿರಿ” ಎಂಬ ಪೌಲನ ಅಭಿವ್ಯಕ್ತಿಯು, ಎಚ್ಚರವಾಗಿರುವುದರ ಅಗತ್ಯವನ್ನು ಒತ್ತಿಹೇಳುತ್ತದೆ. ಅಪಾಯವು ಬೆದರಿಕೆಹಾಕುತ್ತದೆ! ನಂಬಿಕೆಯ ಕೊರತೆ—“ಪಾಪ”—ನಮ್ಮ ಹೃದಯಗಳಲ್ಲಿ ವಿಕಸಿಸಬಹುದು, ಮತ್ತು ನಾವು ದೇವರಿಗೆ ಹೆಚ್ಚು ಸಮೀಪವಾಗುವುದಕ್ಕೆ ಬದಲಾಗಿ ದೇವರಿಂದ ದೂರಸರಿಯಸಾಧ್ಯವಿದೆ. (ಯಾಕೋಬ 4:8) ‘ಒಬ್ಬರನ್ನೊಬ್ಬರು ಎಚ್ಚರಿಸುತ್ತಾ’ ಇರುವಂತೆ ಪೌಲನು ನಮಗೆ ಜ್ಞಾಪಕಹುಟ್ಟಿಸುತ್ತಾನೆ. ಸಹೋದರ ಸಹವಾಸದ ಆದರಣೆಯ ಅಗತ್ಯ ನಮಗಿದೆ. “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.” (ಜ್ಞಾನೋಕ್ತಿ 18:1) ಅಂತಹ ಸಹವಾಸಕ್ಕಾಗಿರುವ ಆವಶ್ಯಕತೆಯು, ಇಂದು ಕ್ರೈಸ್ತರನ್ನು, ಸಭಾ ಕೂಟಗಳು, ಸಮ್ಮೇಳನಗಳು, ಮತ್ತು ಅಧಿವೇಶನಗಳಿಗೆ ಹಾಜರಾಗುವುದರಲ್ಲಿ ಕ್ರಮವಾಗಿರುವಂತೆ ಪ್ರಚೋದಿಸುತ್ತದೆ.
11, 12. ಕೇವಲ ಮೂಲಭೂತ ಕ್ರೈಸ್ತ ಸಿದ್ಧಾಂತಗಳನ್ನು ತಿಳಿದುಕೊಂಡಿರುವುದರಿಂದ ನಾವು ತೃಪ್ತರಾಗಿರಬಾರದೇಕೆ?
11 ತದನಂತರ ತನ್ನ ಪತ್ರದಲ್ಲಿ ಪೌಲನು ಈ ಅಮೂಲ್ಯವಾದ ಸಲಹೆಯನ್ನು ಕೊಡುತ್ತಾನೆ: “ಕಾಲವನ್ನು ನೋಡಿದರೆ ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ ಒಬ್ಬನು ನಿಮಗೆ ದೈವೋಕ್ತಿಗಳ ಮೂಲಪಾಠಗಳನ್ನು ತಿರಿಗಿ ಕಲಿಸಿಕೊಡಬೇಕಾಗಿದೆ; ನೀವು ಹಾಲು ಕುಡಿಯತಕ್ಕವರೇ ಹೊರತು ಗಟ್ಟಿಯಾದ ಆಹಾರವನ್ನು ತಿನ್ನತಕ್ಕವರಲ್ಲ. . . . ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ.” (ಇಬ್ರಿಯ 5:12-14) ಸುವ್ಯಕ್ತವಾಗಿಯೇ, ಕೆಲವು ಯೆಹೂದಿ ಕ್ರೈಸ್ತರು ತಮ್ಮ ಗ್ರಹಣ ಸಾಮರ್ಥ್ಯಗಳನ್ನು ವರ್ಧಿಸುವುದರಲ್ಲಿ ತಪ್ಪಿಬಿದ್ದಿದ್ದರು. ಧರ್ಮಶಾಸ್ತ್ರ ಹಾಗೂ ಸುನ್ನತಿಯ ವಿಷಯವಾದ ಹೆಚ್ಚಿನ ಬೆಳಕನ್ನು ಅಂಗೀಕರಿಸಲು ಅವರು ನಿಧಾನಿಗಳಾಗಿದ್ದರು. (ಅ. ಕೃತ್ಯಗಳು 15:27-29; ಗಲಾತ್ಯ 2:11-14; 6:12, 13) ಸಾಪ್ತಾಹಿಕ ಸಬ್ಬತ್ ಮತ್ತು ಪವಿತ್ರವಾದ ವಾರ್ಷಿಕ ದೋಷಪರಿಹಾರಕ ದಿನಗಳಂತಹ ಸಾಂಪ್ರದಾಯಿಕ ಪದ್ಧತಿಗಳನ್ನು ಕೆಲವರು ಇನ್ನೂ ಅಮೂಲ್ಯವಾಗಿ ಪರಿಗಣಿಸಿದ್ದಿರಬಹುದು.—ಕೊಲೊಸ್ಸೆ 2:16, 17; ಇಬ್ರಿಯ 9:1-14.
12 ಆದುದರಿಂದ, ಪೌಲನು ಹೇಳುವುದು: “ಕ್ರಿಸ್ತನ ವಿಷಯವಾದ ಪ್ರಥಮ ಬೋಧನೆಯನ್ನು ಕುರಿತು ಇನ್ನೂ ಮಾತಾಡದೆ ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗೋಣ.” (ಇಬ್ರಿಯ 6:2) ತನ್ನ ಆಹಾರಪಥ್ಯಕ್ಕೆ ಬಹಳವಾಗಿ ಗಮನವನ್ನು ಕೊಡುವ ಮ್ಯಾರತಾನ್ (ಬಹುದೂರದ ಓಟದ ಪಂದ್ಯ) ಓಟಗಾರನೊಬ್ಬನು, ದೀರ್ಘವಾದ, ಶಕ್ತಿಗುಂದಿಸುವ ಓಟವನ್ನು ತಾಳಿಕೊಳ್ಳಲು ಹೆಚ್ಚು ಶಕ್ತನಾಗಿರುತ್ತಾನೆ. ತದ್ರೀತಿಯಲ್ಲಿ, ಮೂಲಭೂತ, ‘ಪ್ರಥಮ ಬೋಧನೆಗಳಿಗೆ’ ಮಾತ್ರವೇ ತನ್ನನ್ನು ಸೀಮಿತಗೊಳಿಸಿಕೊಳ್ಳದೆ, ಆತ್ಮಿಕ ಪೋಷಣೆಗೆ ನಿಕಟ ಗಮನವನ್ನು ಕೊಡುವ ಕ್ರೈಸ್ತನೊಬ್ಬನು, ಓಟದ ಪಥದಲ್ಲಿ ಉಳಿಯಲು ಮತ್ತು ಅದನ್ನು ಪೂರ್ಣಗೊಳಿಸಲು ಹೆಚ್ಚು ಶಕ್ತನಾಗಿರುತ್ತಾನೆ. (2 ತಿಮೊಥೆಯ 4:7ನ್ನು ಹೋಲಿಸಿರಿ.) ಇದರ ಅರ್ಥ, ಸತ್ಯದ “ಅಗಲ ಉದ್ದ ಎತ್ತರ ಆಳ”ದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾ, ಪ್ರೌಢತೆಗೆ ಪ್ರಗತಿಮಾಡುವುದಾಗಿದೆ.—ಎಫೆಸ 3:18.
“ನಿಮಗೆ ತಾಳ್ಮೆ ಬೇಕು”
13. ಗತ ಸಮಯಗಳಲ್ಲಿ ಇಬ್ರಿಯ ಕ್ರೈಸ್ತರು ತಮ್ಮ ನಂಬಿಕೆಯನ್ನು ಹೇಗೆ ಪ್ರದರ್ಶಿಸಿದ್ದರು?
13 ಸಾ.ಶ. 33ರ ಪಂಚಾಶತ್ತಮದ ನಂತರ ಆ ಕೂಡಲೆ ಹಿಂಬಾಲಿಸಿದ ಸಮಯಾವಧಿಯಲ್ಲಿ, ತೀವ್ರವಾದ ವಿರೋಧವಿದ್ದಾಗ್ಯೂ ಯೆಹೂದಿ ಕ್ರೈಸ್ತರು ದೃಢವಾಗಿ ನಿಂತರು. (ಅ. ಕೃತ್ಯಗಳು 8:1) ಪೌಲನು ಈ ಕೆಳಗಿನಂತೆ ಬರೆದಾಗ, ಇದು ಅವನ ಮನಸ್ಸಿನಲ್ಲಿದ್ದಿರಬಹುದು: “ನೀವು ಜ್ಞಾನಪ್ರಕಾಶದಲ್ಲಿ ಸೇರಿ ಕಷ್ಟಾನುಭವವೆಂಬ ಬಲು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ.” (ಇಬ್ರಿಯ 10:32) ಅಂತಹ ನಂಬಿಗಸ್ತ ತಾಳ್ಮೆಯು, ದೇವರ ಕಡೆಗಿರುವ ಅವರ ಪ್ರೀತಿಯನ್ನು ಪ್ರದರ್ಶಿಸಿತು ಮತ್ತು ಆತನ ಎದುರಿನಲ್ಲಿ ಅವರಿಗೆ ವಾಕ್ ಸರಳತೆಯನ್ನು ಕೊಟ್ಟಿತು. (1 ಯೋಹಾನ 4:17) ನಂಬಿಕೆಯ ಕೊರತೆಯ ಕಾರಣದಿಂದ ಆ ವಾಕ್ ಸರಳತೆಯನ್ನು ತೊರೆಯಬೇಡಿರೆಂದು ಪೌಲನು ಅವರಿಗೆ ಬುದ್ಧಿವಾದ ಹೇಳುತ್ತಾನೆ. ಅವನು ಅವರನ್ನು ಪ್ರಚೋದಿಸುವುದು: “ಹಾಗಾದರೆ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ; ಅದಕ್ಕೆ ಮಹಾ ಪ್ರತಿಫಲ ಉಂಟು. ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆ ಬೇಕು. ಬರುವಾತನು ಇನ್ನು ಸ್ವಲ್ಪಕಾಲದಲ್ಲಿ ಬರುವನು, ತಡಮಾಡುವದಿಲ್ಲ.”—ಇಬ್ರಿಯ 10:35-37.
14. ಅನೇಕ ವರ್ಷಗಳ ವರೆಗೆ ಯೆಹೋವನ ಸೇವೆಯನ್ನು ಮಾಡಿದ ಬಳಿಕವೂ, ನಾವು ತಾಳಿಕೊಳ್ಳುವಂತೆ ಯಾವ ವಾಸ್ತವಾಂಶಗಳು ನಮಗೆ ಸಹಾಯ ಮಾಡಬೇಕು?
14 ಇಂದು ನಮ್ಮ ಕುರಿತಾಗಿ ಏನು? ನಾವು ಮೊದಲು ಕ್ರೈಸ್ತ ಸತ್ಯವನ್ನು ಕಲಿತಾಗ ನಮ್ಮಲ್ಲಿ ಅನೇಕರು ಹುರುಪುಳ್ಳವರಾಗಿದ್ದರು. ನಮ್ಮಲ್ಲಿ ಆ ಹುರುಪು ಇನ್ನೂ ಇದೆಯೊ? ಅಥವಾ ‘ಮೊದಲು ನಮಗಿದ್ದ ಪ್ರೀತಿಯನ್ನು ನಾವು ಬಿಟ್ಟುಬಿಟ್ಟಿದ್ದೇವೊ?’ (ಪ್ರಕಟನೆ 2:4) ಅರ್ಮಗೆದೋನಿಗಾಗಿ ಕಾಯುತ್ತಾ ನಾವು ನಿರುತ್ಸಾಹಗೊಂಡಿದ್ದೇವೊ, ಬಹುಶಃ ಸ್ವಲ್ಪ ಆಶಾಭಂಗಗೊಂಡಿದ್ದೇವೊ ಅಥವಾ ಕಾದು ಬೇಸತ್ತುಹೋಗಿದ್ದೇವೊ? ಆದರೂ, ಸ್ವಲ್ಪ ನಿಂತು, ಆಲೋಚಿಸಿರಿ. ಸತ್ಯವು ಈ ಮುಂಚೆ ಎಷ್ಟು ಅದ್ಭುತಕರವಾಗಿತ್ತೋ ಅಷ್ಟೇ ಅದ್ಭುತಕರವಾಗಿ ಈಗಲೂ ಇದೆ. ಯೇಸು ಈಗಲೂ ನಮ್ಮ ಸ್ವರ್ಗೀಯ ಅರಸನಾಗಿದ್ದಾನೆ. ನಾವು ಇನ್ನೂ ಪ್ರಮೋದವನ ಭೂಮಿಯ ಮೇಲೆ ನಿತ್ಯಜೀವಕ್ಕಾಗಿ ನಿರೀಕ್ಷಿಸುತ್ತೇವೆ, ಮತ್ತು ಇಂದಿಗೂ ಯೆಹೋವನೊಂದಿಗಿನ ನಮ್ಮ ಸಂಬಂಧ ಇದ್ದೇ ಇದೆ. ಮತ್ತು “ಬರುವಾತನು ಇನ್ನು ಸ್ವಲ್ಪಕಾಲದಲ್ಲಿ ಬರುವನು, ತಡಮಾಡುವದಿಲ್ಲ” ಎಂಬುದನ್ನು ಎಂದಿಗೂ ಮರೆಯದಿರಿ.
15. ಯೇಸುವಿನಂತೆ, ಕೆಲವು ಕ್ರೈಸ್ತರು ತೀವ್ರವಾದ ಹಿಂಸೆಯನ್ನು ಹೇಗೆ ತಾಳಿಕೊಂಡಿದ್ದಾರೆ?
15 ಆದುದರಿಂದ, ಇಬ್ರಿಯ 12:1, 2ರಲ್ಲಿ ದಾಖಲೆಯಾಗಿರುವ ಪೌಲನ ಮಾತುಗಳು ಬಹಳ ಸೂಕ್ತವಾದವುಗಳಾಗಿವೆ: “ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪ [ನಂಬಿಕೆಯ ಕೊರತೆ]ವನ್ನೂ ನಾವು ಸಹ ತೆಗೆದಿಟ್ಟು ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.” ಈ ಕಡೇ ದಿವಸಗಳಲ್ಲಿ ದೇವರ ಸೇವಕರು ಅನೇಕ ವಿಷಯಗಳನ್ನು ತಾಳಿಕೊಂಡಿದ್ದಾರೆ. ಯಾತನಾಮಯ ಮರಣದ ಹಂತದ ವರೆಗೂ ನಂಬಿಗಸ್ತನಾಗಿದ್ದ ಯೇಸುವಿನಂತೆ, ನಮ್ಮ ಸಹೋದರ ಸಹೋದರಿಯರಲ್ಲಿ ಕೆಲವರು, ಅತ್ಯಂತ ಕಠಿನಕರವಾದ ಹಿಂಸೆಯನ್ನು—ಸೆರೆ ಶಿಬಿರಗಳು, ಚಿತ್ರಹಿಂಸೆ, ಬಲಾತ್ಕಾರ ಸಂಭೋಗ, ಮರಣವನ್ನು ಸಹ—ನಂಬಿಗಸ್ತಿಕೆಯಿಂದ ತಾಳಿಕೊಂಡಿದ್ದಾರೆ. (1 ಪೇತ್ರ 2:21) ನಾವು ಅವರ ಸಮಗ್ರತೆಯನ್ನು ಪರಿಗಣಿಸುವಾಗ, ನಮ್ಮ ಹೃದಯಗಳು ಅವರಿಗಾಗಿ ಪ್ರೀತಿಯಿಂದ ಬೀಗುವುದಿಲ್ಲವೊ?
16, 17. (ಎ) ಅಧಿಕಾಂಶ ಕ್ರೈಸ್ತರು ತಮ್ಮ ನಂಬಿಕೆಗೆ ಬರುವ ಯಾವ ಪಂಥಾಹ್ವಾನಗಳನ್ನು ಸಹಿಸಿಕೊಳ್ಳುತ್ತಾರೆ? (ಬಿ) ಜೀವಕ್ಕಾಗಿರುವ ಓಟದಲ್ಲಿ ಓಡುತ್ತಾ ಇರಲಿಕ್ಕಾಗಿ, ಯಾವುದನ್ನು ಜ್ಞಾಪಿಸಿಕೊಳ್ಳುವುದು ನಮಗೆ ಸಹಾಯ ಮಾಡುವುದು?
16 ಹಾಗಿದ್ದರೂ, ಅಧಿಕಾಂಶ ಕ್ರೈಸ್ತರಿಗೆ ಪೌಲನ ಮುಂದಿನ ಮಾತುಗಳು ಅನ್ವಯವಾಗುತ್ತವೆ: “ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವದರಲ್ಲಿ ಪ್ರಾಣಾಪಾಯದ ತನಕ ಇನ್ನೂ ಅದನ್ನು ಎದುರಿಸಲಿಲ್ಲ.” (ಇಬ್ರಿಯ 12:4) ಆದರೂ, ಈ ವ್ಯವಸ್ಥೆಯಲ್ಲಿ ಸತ್ಯದ ಮಾರ್ಗವು ನಮ್ಮಲ್ಲಿ ಯಾರಿಗೂ ಸುಲಭವಾದದ್ದಾಗಿಲ್ಲ. ಅಣಕವನ್ನು ಸಹಿಸಿಕೊಳ್ಳುತ್ತಾ, ಅಥವಾ ಪಾಪವನ್ನು ಮಾಡಲಿಕ್ಕಾಗಿರುವ ಒತ್ತಡವನ್ನು ಪ್ರತಿರೋಧಿಸುತ್ತಾ, ಐಹಿಕ ಕೆಲಸದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ಕೆಲವರು “ಪಾಪಿಗಳ ಪ್ರತಿಕೂಲ ಮಾತಿ”ನಿಂದ (NW) ನಿರುತ್ಸಾಹಗೊಳ್ಳುತ್ತಾರೆ. (ಇಬ್ರಿಯ 12:3) ದೇವರ ಉಚ್ಚ ಮಟ್ಟಗಳನ್ನು ಕಾಪಾಡಿಕೊಳ್ಳಲಿಕ್ಕಾಗಿರುವ ಕೆಲವರ ದೃಢ ನಿರ್ಧಾರವನ್ನು, ಬಲವಾದ ಶೋಧನೆಯು ನಾಶಮಾಡಿಬಿಟ್ಟಿದೆ. (ಇಬ್ರಿಯ 13:4, 5) ತಮ್ಮ ವಿಷಮಯ ಅಪಪ್ರಚಾರಕ್ಕೆ ಕಿವಿಗೊಡುವ ಕೆಲವರ ಆತ್ಮಿಕ ಸಮತೂಕವನ್ನು ಧರ್ಮಭ್ರಷ್ಟರು ಬಾಧಿಸಿದ್ದಾರೆ. (ಇಬ್ರಿಯ 13:9) ಇನ್ನಿತರರ ಆನಂದವನ್ನು ವ್ಯಕ್ತಿತ್ವ ಸಮಸ್ಯೆಗಳು ಕಸಿದುಕೊಂಡಿವೆ. ಮನೋರಂಜನೆ ಹಾಗೂ ಬಿಡುವಿನ ಸಮಯದ ಚಟುವಟಿಕೆಗಳ ಮೇಲಿನ ವಿಪರೀತ ಒತ್ತು, ಕೆಲವು ಕ್ರೈಸ್ತರನ್ನು ಬಲಹೀನರನ್ನಾಗಿ ಮಾಡಿದೆ. ಮತ್ತು ಈ ವಿಷಯಗಳ ವ್ಯವಸ್ಥೆಯಲ್ಲಿ ಜೀವಿಸುವುದರ ಕುರಿತಾದ ಸಮಸ್ಯೆಗಳಿಂದ ಅಧಿಕಾಂಶ ಮಂದಿಗೆ ಒತ್ತಡಕ್ಕೊಳಗಾಗಿರುವ ಅನಿಸಿಕೆಯಾಗಿದೆ.
17 ಈ ಸನ್ನಿವೇಶಗಳಲ್ಲಿ ಯಾವುವೂ ‘ಪ್ರಾಣಾಪಾಯ’ವನ್ನು ಒಳಗೂಡಿಲ್ಲವೆಂಬುದು ನಿಜ. ಮತ್ತು ಕೆಲವು ಸನ್ನಿವೇಶಗಳು, ನಾವು ಸ್ವತಃ ಮಾಡುವ ತಪ್ಪು ನಿರ್ಧಾರಗಳ ಕಾರಣದಿಂದಾಗಿವೆಯೆಂದು ಗುರುತಿಸಬಹುದಾಗಿದೆ. ಆದರೆ ಅವೆಲ್ಲವೂ ನಮ್ಮ ನಂಬಿಕೆಗೆ ಪಂಥಾಹ್ವಾನವನ್ನು ಒಡ್ಡುತ್ತವೆ. ಆದುದರಿಂದಲೇ ನಾವು ಯೇಸುವಿನ ತಾಳ್ಮೆಯ ಅತ್ಯುತ್ಕೃಷ್ಟವಾದ ಮಾದರಿಯ ಮೇಲೆ ನಮ್ಮ ದೃಷ್ಟಿಯನ್ನು ನೆಡಬೇಕು. ನಮ್ಮ ನಿರೀಕ್ಷೆಯು ಎಷ್ಟು ಅದ್ಭುತಕರವಾಗಿದೆ ಎಂಬುದನ್ನು ನಾವೆಂದಿಗೂ ಮರೆಯದಿರೋಣ. ಯೆಹೋವನು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂಬ ನಮ್ಮ ನಿಶ್ಚಿತಾಭಿಪ್ರಾಯವನ್ನು ನಾವೆಂದಿಗೂ ಕಳೆದುಕೊಳ್ಳದಿರೋಣ. (ಇಬ್ರಿಯ 11:6) ಆಗ, ಜೀವಕ್ಕಾಗಿರುವ ಓಟದಲ್ಲಿ ಓಡುತ್ತಾ ಇರಲು ನಮ್ಮಲ್ಲಿ ಆತ್ಮಿಕ ಬಲವಿರುವುದು.
ನಾವು ತಾಳಿಕೊಳ್ಳಸಾಧ್ಯವಿದೆ
18, 19. ಯೆರೂಸಲೇಮಿನಲ್ಲಿದ್ದ ಇಬ್ರಿಯ ಕ್ರೈಸ್ತರು ಪೌಲನ ಪ್ರೇರಿತ ಸಲಹೆಗೆ ಕಿವಿಗೊಟ್ಟರೆಂಬುದನ್ನು ಯಾವ ಐತಿಹಾಸಿಕ ಘಟನೆಗಳು ಸೂಚಿಸುತ್ತವೆ?
18 ಯೆಹೂದಿ ಕ್ರೈಸ್ತರು ಪೌಲನ ಪತ್ರಕ್ಕೆ ಹೇಗೆ ಪ್ರತಿಕ್ರಿಯೆ ತೋರಿಸಿದರು? ಇಬ್ರಿಯರಿಗೆ ಪತ್ರವು ಬರೆಯಲ್ಪಟ್ಟ ಸುಮಾರು ಆರು ವರ್ಷಗಳ ಬಳಿಕ, ಯೆಹೂದ ರಾಜ್ಯವು ಯುದ್ಧದಲ್ಲಿ ಭಾಗಿಯಾಗಿತ್ತು. ಸಾ.ಶ. 66ರಲ್ಲಿ, ರೋಮನ್ ಸೇನೆಯು ಯೆರೂಸಲೇಮಿಗೆ ಮುತ್ತಿಗೆಹಾಕಿತು. ಇದು ಯೇಸುವಿನ ಮಾತುಗಳನ್ನು ನೆರವೇರಿಸಿತು: “ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ.” (ಲೂಕ 21:20) ಆದರೂ, ಆ ಸಮಯದಲ್ಲಿ ಯೆರೂಸಲೇಮಿನಲ್ಲಿರಲಿದ್ದ ಕ್ರೈಸ್ತರ ಪ್ರಯೋಜನಕ್ಕಾಗಿ ಯೇಸು ಹೇಳಿದ್ದು: “ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿ ಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ; ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ.” (ಲೂಕ 21:21) ಆದುದರಿಂದ, ರೋಮ್ನೊಂದಿಗಿನ ಯುದ್ಧವು ಪರೀಕ್ಷೆಯೊಂದನ್ನು ಒಡ್ಡಿತು: ಆ ಯೆಹೂದಿ ಕ್ರೈಸ್ತರು, ಯೆಹೂದಿ ಆರಾಧನೆಯ ಕೇಂದ್ರವೂ ವೈಭವಭರಿತ ದೇವಾಲಯದ ನಿವೇಶನವೂ ಆಗಿದ್ದ ಯೆರೂಸಲೇಮನ್ನು ತೊರೆದುಬಿಡುವರೊ?
19 ಅನಿರೀಕ್ಷಿತವಾಗಿ ಮತ್ತು ಯಾವುದೇ ಪೂರ್ವಭಾವಿ ಕಾರಣವಿಲ್ಲದೆ, ರೋಮನರು ತಮ್ಮ ಮುತ್ತಿಗೆಯನ್ನು ಹಿಂದೆಗೆದುಕೊಂಡರು. ಸಂಭವನೀಯವಾಗಿ, ಧಾರ್ಮಿಕ ಯೆಹೂದ್ಯರು ಇದನ್ನು, ತಮ್ಮ ಪವಿತ್ರ ನಗರವನ್ನು ದೇವರು ಸಂರಕ್ಷಿಸುತ್ತಿದ್ದನೆಂಬ ರುಜುವಾತಿನೋಪಾದಿ ಪರಿಗಣಿಸಿದರು. ಕ್ರೈಸ್ತರ ಕುರಿತಾಗಿ ಏನು? ಅವರು ಪಲಾಯನಗೈದರೆಂದು ಇತಿಹಾಸವು ನಮಗೆ ತಿಳಿಸುತ್ತದೆ. ತದನಂತರ, ಸಾ.ಶ. 70ರಲ್ಲಿ, ರೋಮನರು ಹಿಂದಿರುಗಿ ಬಂದು, ಭೀತಿಹುಟ್ಟಿಸುವಂತಹ ರೀತಿಯಲ್ಲಿ ಜೀವನಷ್ಟವನ್ನು ಉಂಟುಮಾಡುವುದರೊಂದಿಗೆ ಯೆರೂಸಲೇಮನ್ನು ಸಂಪೂರ್ಣವಾಗಿ ನಾಶಮಾಡಿಬಿಟ್ಟರು. ಯೋವೇಲನಿಂದ ಮುಂತಿಳಿಸಲ್ಪಟ್ಟಂತಹ ‘ಯೆಹೋವನ ದಿನ’ವು ಯೆರೂಸಲೇಮಿನ ಮೇಲೆ ಆಗಮಿಸಿತ್ತು. ಆದರೆ ನಂಬಿಗಸ್ತ ಕ್ರೈಸ್ತರು ಅಲ್ಲಿ ಇರಲಿಲ್ಲ. ಅವರು ‘ಸುರಕ್ಷಿತವಾಗಿ ಪಾರಾದರು’ (NW).—ಯೋವೇಲ 2:30-32; ಅ. ಕೃತ್ಯಗಳು 2:16-21.
20. ‘ಯೆಹೋವನ’ ಮಹಾ ‘ದಿನ’ವು ಸಮೀಪವಾಗಿದೆ ಎಂಬುದನ್ನು ತಿಳಿದುಕೊಂಡಿರುವುದು, ನಮ್ಮನ್ನು ಯಾವ ವಿಧಗಳಲ್ಲಿ ಪ್ರಚೋದಿಸಬೇಕು?
20 ಇಂದು, ಈ ಇಡೀ ವಿಷಯಗಳ ವ್ಯವಸ್ಥೆಯನ್ನು ‘ಯೆಹೋವನ’ ಇನ್ನೊಂದು ಮಹಾ ‘ದಿನ’ವು ಬೇಗನೆ ಬಾಧಿಸಲಿದೆ ಎಂಬುದು ನಮಗೆ ಗೊತ್ತು. (ಯೋವೇಲ 3:12-14) ಆ ದಿನವು ಯಾವಾಗ ಬರುವುದೆಂಬುದು ನಮಗೆ ತಿಳಿದಿಲ್ಲ. ಆದರೆ ಅದು ನಿಶ್ಚಯವಾಗಿಯೂ ಬರುತ್ತದೆಂದು ದೇವರ ವಾಕ್ಯವು ನಮಗೆ ಆಶ್ವಾಸನೆಯನ್ನೀಯುತ್ತದೆ! ಅದು ತಡವಾಗುವುದಿಲ್ಲವೆಂದು ಯೆಹೋವನು ಹೇಳುತ್ತಾನೆ. (ಹಬಕ್ಕೂಕ 2:3; 2 ಪೇತ್ರ 3:9, 10) ಆದುದರಿಂದ, ನಾವು ‘ಕೇಳಿಸಿಕೊಂಡಿರುವ ವಿಷಯಗಳಿಗೆ ಸಾಮಾನ್ಯವಾದುದಕ್ಕಿಂತಲೂ ಹೆಚ್ಚು ಲಕ್ಷ್ಯವನ್ನು’ ಕೊಡೋಣ. ‘ನಮಗೆ ಸುಲಭವಾಗಿ ಹತ್ತಿಕೊಳ್ಳುವ ಪಾಪವನ್ನು,’ ಅಂದರೆ ನಂಬಿಕೆಯ ಕೊರತೆಯನ್ನು ದೂರತೊಲಗಿಸಿರಿ. ಎಷ್ಟೇ ದೀರ್ಘ ಸಮಯವು ತಗಲಲಿ, ಅಷ್ಟರ ವರೆಗೆ ತಾಳಿಕೊಳ್ಳುವ ನಿರ್ಧಾರವುಳ್ಳವರಾಗಿರಿ. ಯೆಹೋವನ ಮಹಾ ರಥದಂತಿರುವ ಸ್ವರ್ಗೀಯ ಸಂಸ್ಥೆಯು ಚಲಿಸುತ್ತಾ ಇದೆ ಎಂಬುದನ್ನು ಜ್ಞಾಪಕದಲ್ಲಿಡಿರಿ. ಅದು ತನ್ನ ಉದ್ದೇಶವನ್ನು ಪೂರೈಸುವುದು. ಆದುದರಿಂದ ನಾವೆಲ್ಲರೂ ಜೀವಕ್ಕಾಗಿರುವ ಓಟದಲ್ಲಿ ಓಡುತ್ತಾ ಇರೋಣ, ಅದನ್ನು ಬಿಟ್ಟುಬಿಡದಿರೋಣ!
ನಿಮಗೆ ನೆನಪಿದೆಯೊ?
◻ ಪೌಲನು ಫಿಲಿಪ್ಪಿಯವರಿಗೆ ಕೊಟ್ಟ ಯಾವ ಪ್ರಬೋಧನೆಗೆ ಲಕ್ಷ್ಯಕೊಡುವುದು, ಜೀವಕ್ಕಾಗಿರುವ ಓಟದಲ್ಲಿ ತಾಳಿಕೊಳ್ಳುವಂತೆ ನಮಗೆ ಸಹಾಯ ಮಾಡುವುದು?
◻ ನಮ್ಮನ್ನು ಅಪಕರ್ಷಿಸಲಿಕ್ಕಾಗಿರುವ ಈ ಲೋಕದ ಪ್ರವೃತ್ತಿಯನ್ನು ನಿಷ್ಫಲಗೊಳಿಸಲಿಕ್ಕಾಗಿ ಯಾವುದು ನಮಗೆ ಸಹಾಯ ಮಾಡುವುದು?
◻ ಈ ಓಟದಲ್ಲಿ ಉಳಿಯಲಿಕ್ಕಾಗಿ ನಾವು ಹೇಗೆ ಪರಸ್ಪರ ಸಹಾಯ ಮಾಡಿಕೊಳ್ಳಸಾಧ್ಯವಿದೆ?
◻ ಕ್ರೈಸ್ತನೊಬ್ಬನನ್ನು ನಿಧಾನಗೊಳಿಸಸಾಧ್ಯವಿರುವ ಕೆಲವು ವಿಚಾರಗಳು ಯಾವುವು?
◻ ನಾವು ತಾಳಿಕೊಳ್ಳುವಂತೆ ಯೇಸುವಿನ ಮಾದರಿಯು ನಮಗೆ ಹೇಗೆ ಸಹಾಯ ಮಾಡಬಲ್ಲದು?
[ಪುಟ 9 ರಲ್ಲಿರುವ ಚಿತ್ರ]
ಓಟಗಾರರಂತೆ ಕ್ರೈಸ್ತರು, ಯಾವುದೂ ತಮ್ಮನ್ನು ಅಪಕರ್ಷಿಸುವಂತೆ ಬಿಡಬಾರದು
[ಪುಟ 10 ರಲ್ಲಿರುವ ಚಿತ್ರ]
ಯೆಹೋವನ ಮಹಾ ಸ್ವರ್ಗೀಯ ರಥವು ದೇವರ ಉದ್ದೇಶವನ್ನು ಪೂರೈಸುವುದನ್ನು ಯಾವುದೂ ತಡೆಗಟ್ಟಸಾಧ್ಯವಿಲ್ಲ