ಕ್ರೈಸ್ತ ನಂಬಿಕೆಯು ಪರೀಕ್ಷಿಸಲ್ಪಡುವುದು
“ನಂಬಿಕೆಯು ಎಲ್ಲ ಜನರ ಸ್ವತ್ತಾಗಿರುವುದಿಲ್ಲ.”—2 ಥೆಸಲೊನೀಕ 3:2, NW.
1. ಎಲ್ಲರಲ್ಲಿಯೂ ಯಥಾರ್ಥ ನಂಬಿಕೆ ಇಲ್ಲವೆಂಬುದನ್ನು ಇತಿಹಾಸವು ಹೇಗೆ ತೋರಿಸಿದೆ?
ಇತಿಹಾಸದಾದ್ಯಂತವೂ, ಯಥಾರ್ಥವಾದ ನಂಬಿಕೆಯುಳ್ಳ ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಇದ್ದರು. “ಯಥಾರ್ಥ” ಎಂಬ ಗುಣವಾಚಕವು ಯೋಗ್ಯವಾಗಿದೆ, ಏಕೆಂದರೆ ಇತರ ಕೋಟಿಗಟ್ಟಲೆ ಜನರು ಅವಿಚಾರಿತ ನಂಬಿಕೆ—ಸಮಂಜಸವಾದ ಆಧಾರ ಇಲ್ಲವೆ ಕಾರಣವಿಲ್ಲದೆ ನಂಬುವ ಸಿದ್ಧಮನಸ್ಸು—ಯಂತೆ ಇರುವ ಒಂದು ಬಗೆಯ ನಂಬಿಕೆಯನ್ನು ಪ್ರದರ್ಶಿಸಿದ್ದಾರೆ. ಅನೇಕ ವೇಳೆ ಅಂತಹ ನಂಬಿಕೆಯು, ಸುಳ್ಳು ದೇವರುಗಳನ್ನು ಇಲ್ಲವೆ ಸರ್ವಶಕ್ತನಾದ ಯೆಹೋವನಿಗೆ ಮತ್ತು ಆತನ ಪ್ರಕಟಿತ ವಾಕ್ಯಕ್ಕೆ ಅನುಗುಣವಾಗಿರದ ಆರಾಧನೆಯ ವಿಧಗಳನ್ನು ಒಳಗೊಂಡಿದೆ. ಆದಕಾರಣ ಅಪೊಸ್ತಲ ಪೌಲನು ಹೀಗೆ ಬರೆದನು: “ನಂಬಿಕೆಯು ಎಲ್ಲ ಜನರ ಸ್ವತ್ತಾಗಿರುವುದಿಲ್ಲ.”—2 ಥೆಸಲೊನೀಕ 3:2, NW.
2. ನಾವು ನಮ್ಮ ಸ್ವಂತ ನಂಬಿಕೆಯನ್ನು ಪರೀಕ್ಷಿಸಿಕೊಳ್ಳುವುದು ಏಕೆ ಅತ್ಯಾವಶ್ಯಕವಾಗಿದೆ?
2 ಆ ಸಮಯದಲ್ಲಿ ಕೆಲವರಿಗೆ ಯಥಾರ್ಥವಾದ ನಂಬಿಕೆ ಇತ್ತೆಂದು ಪೌಲನ ಹೇಳಿಕೆಯು ಸೂಚಿಸುತ್ತದೆ ಮತ್ತು ಇಂದು ಕೆಲವರಿಗೆ ಯಥಾರ್ಥವಾದ ನಂಬಿಕೆ ಇದೆಯೆಂಬುದನ್ನು ಅದು ಪರೋಕ್ಷವಾಗಿ ಸೂಚಿಸುತ್ತದೆ. ಈ ಪತ್ರಿಕೆಯ ಹೆಚ್ಚಿನ ವಾಚಕರು, ಇಂತಹ ಯಥಾರ್ಥವಾದ ನಂಬಿಕೆ—ದೈವಿಕ ಸತ್ಯದ ನಿಷ್ಕೃಷ್ಟ ಜ್ಞಾನಕ್ಕೆ ಅನುಗುಣವಾದ ನಂಬಿಕೆ—ಯುಳ್ಳವರಾಗಿರಲು ಮತ್ತು ಅದರಲ್ಲಿ ಅಭಿವೃದ್ಧಿಯನ್ನು ಪಡೆದುಕೊಳ್ಳಲು ಬಯಸುತ್ತಾರೆ. (ಯೋಹಾನ 18:37; ಇಬ್ರಿಯ 11:6) ನಿಮ್ಮ ವಿಷಯದಲ್ಲಿ ಅದು ಸತ್ಯವಾಗಿದೆಯೊ? ಹಾಗಾದರೆ, ನಿಮ್ಮ ನಂಬಿಕೆಯು ಪರೀಕ್ಷಿಸಲ್ಪಡುವುದೆಂಬ ವಾಸ್ತವಾಂಶವನ್ನು ಗ್ರಹಿಸಿ, ಅದಕ್ಕಾಗಿ ಸಿದ್ಧರಾಗಿರುವುದು ಅತ್ಯಗತ್ಯವಾಗಿದೆ. ಹಾಗೆಂದು ಏಕೆ ಹೇಳಸಾಧ್ಯವಿದೆ?
3, 4. ನಂಬಿಕೆಯ ಪರೀಕ್ಷೆಗಳ ವಿಷಯದಲ್ಲಿ ನಾವೇಕೆ ಯೇಸುವಿನ ಕಡೆಗೆ ನೋಡಬೇಕು?
3 ನಮ್ಮ ನಂಬಿಕೆಯ ಕೇಂದ್ರ ಬಿಂದು ಯೇಸು ಕ್ರಿಸ್ತನೆಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ನಮ್ಮ ನಂಬಿಕೆಯನ್ನು ಪರಿಪೂರ್ಣ ಮಾಡುವವನೋಪಾದಿ ಬೈಬಲು ಅವನ ಕುರಿತು ಮಾತಾಡುತ್ತದೆ ನಿಜ. ಯೇಸು ಹೇಳಿದ ಹಾಗೂ ಮಾಡಿದ ಸಂಗತಿಗಳ ಕಾರಣದಿಂದ, ವಿಶೇಷವಾಗಿ ಅವನು ಪ್ರವಾದನೆಯನ್ನು ನೆರವೇರಿಸಿದ ರೀತಿಯಿಂದ ಅವನು ಹಾಗೆಂದು ಕರೆಯಲ್ಪಟ್ಟನು. ಮಾನವರು ಯಥಾರ್ಥ ನಂಬಿಕೆಯನ್ನು ಸ್ಥಾಪಿಸಸಾಧ್ಯವಿರುವ ಆಧಾರವನ್ನು ಅವನು ಬಲಪಡಿಸಿದನು. (ಇಬ್ರಿಯ 12:2; ಪ್ರಕಟನೆ 1:1, 2) ಆದರೂ, ಯೇಸು “ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ” ಎಂದು ನಾವು ಓದುತ್ತೇವೆ. (ಇಬ್ರಿಯ 4:15) ಹೌದು, ಯೇಸುವಿನ ನಂಬಿಕೆ ಪರೀಕ್ಷಿಸಲ್ಪಟ್ಟಿತು. ನಮ್ಮನ್ನು ನಿರುತ್ಸಾಹಗೊಳಿಸುವ ಇಲ್ಲವೆ ಹೆದರಿಸುವ ಬದಲಿಗೆ, ಅದು ನಮಗೆ ಸಾಂತ್ವನವನ್ನು ನೀಡಬೇಕು.
4 ಯಾತನಾಸ್ತಂಭದ ಮೇಲೆ ಮರಣದ ವರೆಗೂ ಮಹಾ ಪರೀಕ್ಷೆಗಳನ್ನು ಅನುಭವಿಸುವ ಮೂಲಕ, ಯೇಸು “ವಿಧೇಯತೆಯನ್ನು ಕಲಿತುಕೊಂಡನು.” (ಇಬ್ರಿಯ 5:8) ತಮ್ಮ ಮೇಲೆ ಬರಸಾಧ್ಯವಿರುವ ಯಾವುದೇ ಪರೀಕ್ಷೆಗಳ ಎದುರಿನಲ್ಲೂ, ಮಾನವರು ಯಥಾರ್ಥ ನಂಬಿಕೆಗನುಸಾರ ಜೀವಿಸಬಲ್ಲರೆಂದು ಅವನು ತೋರಿಸಿಕೊಟ್ಟನು. “ದಣಿಗಿಂತ ಆಳು ದೊಡ್ಡವನಲ್ಲವೆಂಬದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಳ್ಳಿರಿ,” ಎಂದು ತನ್ನ ಹಿಂಬಾಲಕರ ಕುರಿತು ಯೇಸು ಹೇಳಿದ ವಿಷಯದ ಬಗ್ಗೆ ನಾವು ಆಲೋಚಿಸುವಾಗ, ಇದು ವಿಶೇಷವಾದ ಮಹತ್ವವನ್ನು ಪಡೆದುಕೊಳ್ಳುತ್ತದೆ. (ಯೋಹಾನ 15:20) ವಾಸ್ತವವಾಗಿ, ನಮ್ಮ ಕಾಲದಲ್ಲಿರುವ ಅವನ ಹಿಂಬಾಲಕರ ಕುರಿತಾಗಿ ಯೇಸು ಮುಂತಿಳಿಸಿದ್ದು: “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ಹಗೆಮಾಡುವರು.”—ಮತ್ತಾಯ 24:9.
5. ನಾವು ಪರೀಕ್ಷೆಗಳನ್ನು ಎದುರಿಸುವೆವು ಎಂಬುದನ್ನು ಶಾಸ್ತ್ರಗಳು ಹೇಗೆ ಸೂಚಿಸುತ್ತವೆ?
5 ಈ ಶತಮಾನದ ಆರಂಭದಲ್ಲಿ, ನ್ಯಾಯತೀರ್ಪು ದೇವರ ಮನೆಯಿಂದ ಆರಂಭವಾಯಿತು. ಶಾಸ್ತ್ರಗಳು ಮುಂತಿಳಿಸಿದ್ದು: “ನ್ಯಾಯವಿಚಾರಣೆಯ ಸಮಯ ಬಂದದೆ; ಆ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಯಿತಲ್ಲಾ. ಅದು ನಮ್ಮಲ್ಲಿ ಪ್ರಾರಂಭವಾಗಲು ದೇವರ ಸುವಾರ್ತೆಯನ್ನು ನಂಬಲೊಲ್ಲದವರ ಗತಿ ಏನಾಗಬಹುದು? ನೀತಿವಂತನೇ ರಕ್ಷಣೆಹೊಂದುವದು ಕಷ್ಟವಾದರೆ ಭಕ್ತಿಹೀನನೂ ಪಾಪಿಷ್ಠನೂ ನಿಲ್ಲುವದು ಹೇಗೆ?”—1 ಪೇತ್ರ 4:17, 18.
ನಂಬಿಕೆಯು ಪರೀಕ್ಷಿಸಲ್ಪಟ್ಟದ್ದು—ಏಕೆ?
6. ಪರೀಕ್ಷಿಸಲ್ಪಟ್ಟ ನಂಬಿಕೆಯು ಏಕೆ ಅಮೂಲ್ಯವಾಗಿದೆ?
6 ಒಂದು ಅರ್ಥದಲ್ಲಿ, ಪರೀಕ್ಷಿಸಲ್ಪಡದ ನಂಬಿಕೆಗೆ ಪ್ರಮಾಣೀಕೃತ ಮೌಲ್ಯವಿರುವುದಿಲ್ಲ, ಮತ್ತು ಅದರ ಗುಣಮಟ್ಟ ತಿಳಿಯದೇ ಉಳಿಯುತ್ತದೆ. ಅದನ್ನು ಇನ್ನೂ ಪಾವತಿಮಾಡಲ್ಪಟ್ಟಿರದ ಚೆಕ್ಗೆ ನೀವು ಹೋಲಿಸಬಹುದು. ನೀವು ಮಾಡಿದ ಕೆಲಸಕ್ಕಾಗಿ, ನೀವು ಒದಗಿಸಿದ ವಸ್ತುಗಳಿಗಾಗಿ, ಇಲ್ಲವೆ ಒಂದು ಕೊಡುಗೆಯಾಗಿಯೂ ನಿಮಗೊಂದು ಚೆಕ್ ಸಿಕ್ಕಿರಬಹುದು. ಚೆಕ್ಕು ಸಾಧಾರವುಳ್ಳದ್ದಾಗಿ ಕಂಡುಬರಬಹುದು, ಆದರೆ ಅದು ನಿಜವಾಗಿಯೂ ಸಾಧಾರವುಳ್ಳದ್ದಾಗಿದೆಯೊ? ಅದರಲ್ಲಿ ಕಂಡುಬರುವ ಹಣದ ಮೊತ್ತದ ಬೆಲೆ ಅದಕ್ಕಿದೆಯೆ? ತದ್ರೀತಿಯಲ್ಲಿ, ನಮ್ಮ ನಂಬಿಕೆಯು ಕೇವಲ ಒಂದು ತೋರಿಕೆ ಇಲ್ಲವೆ ಬರಿಯ ಹೇಳಿಕೆಗಿಂತ ಹೆಚ್ಚಿನದ್ದಾಗಿರಬೇಕು. ಅದಕ್ಕೆ ಪ್ರಾಯೋಗಿಕ ಮಹತ್ವ ಮತ್ತು ಯಥಾರ್ಥವಾದ ಉತ್ಕೃಷ್ಟತೆಯಿದೆ ಎಂದು ನಾವು ರುಜುಪಡಿಸಬೇಕಾದರೆ, ಅದು ಪರೀಕ್ಷಿಸಲ್ಪಡಬೇಕು. ನಮ್ಮ ನಂಬಿಕೆಯು ಪರೀಕ್ಷಿಸಲ್ಪಟ್ಟಾಗ, ಅದು ಬಲವಾದದ್ದೂ ಅಮೂಲ್ಯವಾದದ್ದೂ ಆಗಿದೆಯೆಂದು ನಾವು ಕಂಡುಕೊಳ್ಳಬಹುದು. ನಮ್ಮ ನಂಬಿಕೆಗೆ ಎಲ್ಲಿ ಪರಿಷ್ಕಾರವು ಇಲ್ಲವೆ ಬಲಪಡಿಸುವಿಕೆಯು ಬೇಕಾಗಿದೆಯೊ ಅಂತಹ ಯಾವುದೇ ಕ್ಷೇತ್ರಗಳನ್ನು ಒಂದು ಪರೀಕ್ಷೆಯು ಪ್ರಕಟಪಡಿಸಬಹುದು.
7, 8. ಯಾವ ಮೂಲದಿಂದ ನಮ್ಮ ನಂಬಿಕೆಯ ಪರೀಕ್ಷೆಗಳು ಬರುತ್ತವೆ?
7 ನಮ್ಮ ಮೇಲೆ ಹಿಂಸೆ ಮತ್ತು ನಂಬಿಕೆಯ ಇತರ ಪರೀಕ್ಷೆಗಳು ಬರುವಂತೆ ದೇವರು ಅನುಮತಿಸುತ್ತಾನೆ. ನಾವು ಓದುವುದು: “ಯಾವನಾದರೂ ಪಾಪಮಾಡುವದಕ್ಕೆ ಪ್ರೇರೇಪಿಸಲ್ಪಡುವಾಗ—ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ.” (ಯಾಕೋಬ 1:13) ಅಂತಹ ಪರೀಕ್ಷೆಗಳಿಗೆ ಯಾರು ಇಲ್ಲವೆ ಯಾವುದು ಕಾರಣವಾಗಿದೆ? ಸೈತಾನನು, ಈ ಲೋಕ, ಮತ್ತು ನಮ್ಮ ಸ್ವಂತ ಅಪರಿಪೂರ್ಣ ಶರೀರವೇ ಇದಕ್ಕೆ ಕಾರಣವಾಗಿದೆ.
8 ಸೈತಾನನು ಈ ಲೋಕದ ಮೇಲೆ, ಅದರ ಆಲೋಚನೆ ಹಾಗೂ ಅದರ ರೀತಿನೀತಿಗಳ ಮೇಲೆ ಶಕ್ತಿಶಾಲಿಯಾದ ಪ್ರಭಾವವನ್ನು ಬೀರುತ್ತಾನೆಂದು ನಾವು ಒಪ್ಪಿಕೊಳ್ಳಬಹುದು. (1 ಯೋಹಾನ 5:19) ಮತ್ತು ಕ್ರೈಸ್ತರ ವಿರುದ್ಧ ಹಿಂಸೆಯನ್ನು ಪ್ರೇರೇಪಿಸುವವನು ಅವನೇ ಎಂದು ನಮಗೆ ಬಹುಶಃ ಗೊತ್ತು. (ಪ್ರಕಟನೆ 12:17) ಆದರೆ ನಮ್ಮ ಅಪರಿಪೂರ್ಣ ಶರೀರಕ್ಕೆ ಆಕರ್ಷಕವಾಗಿರುವ ಮೂಲಕ, ಲೌಕಿಕ ಆಕರ್ಷಣೆಗಳಿಂದ ನಮ್ಮನ್ನು ಪ್ರಲೋಭಿಸುವ ಮೂಲಕ, ನಾವು ಪ್ರಲೋಭನೆಗೆ ವಶವಾಗಿ, ದೇವರಿಗೆ ಅವಿಧೇಯತೆಯನ್ನು ತೋರಿಸಿ, ದೇವರ ಅಪ್ರಸನ್ನತೆಯನ್ನು ಪಡೆದುಕೊಳ್ಳುವವರಾಗುವಂತೆ ಮಾಡುವ ಮೂಲಕ, ಸೈತಾನನು ನಮ್ಮನ್ನು ತಪ್ಪುದಾರಿಗೆ ನಡೆಸಲು ಪ್ರಯತ್ನಿಸುತ್ತಾನೆಂದು ನಾವು ತದ್ರೀತಿಯಲ್ಲಿ ಮನಗಂಡಿರುವುದಿಲ್ಲವೊ? ನಿಶ್ಚಯವಾಗಿಯೂ, ಸೈತಾನನ ವಿಧಾನಗಳು ನಮ್ಮನ್ನು ಆಶ್ಚರ್ಯಗೊಳಿಸಬಾರದು, ಏಕೆಂದರೆ ಯೇಸುವನ್ನು ಪ್ರಲೋಭಿಸಲು ಪ್ರಯತ್ನಿಸುವಾಗಲೂ ಅವನು ಅಂತಹದ್ದೇ ತಂತ್ರಗಳನ್ನು ಉಪಯೋಗಿಸಿದನು.—ಮತ್ತಾಯ 4:1-11.
9. ನಂಬಿಕೆಯ ಮಾದರಿಗಳಿಂದ ನಾವು ಹೇಗೆ ಪ್ರಯೋಜನ ಪಡೆದುಕೊಳ್ಳಬಲ್ಲೆವು?
9 ಯೆಹೋವನು ತನ್ನ ವಾಕ್ಯ ಹಾಗೂ ಕ್ರೈಸ್ತ ಸಭೆಯ ಮುಖಾಂತರ, ನಾವು ಅನುಕರಿಸಸಾಧ್ಯವಿರುವ ನಂಬಿಕೆಯ ನೈಜ ಮಾದರಿಗಳನ್ನು ನಮಗೆ ಒದಗಿಸುತ್ತಾನೆ. ಪೌಲನು ಸಲಹೆ ನೀಡಿದ್ದು: “ಸಹೋದರರೇ, ನೀವೆಲ್ಲರು ನನ್ನನ್ನು ಅನುಸರಿಸುವವರಾಗಿರಿ; ಮತ್ತು ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ.” (ಫಿಲಿಪ್ಪಿ 3:17) ಪ್ರಥಮ ಶತಮಾನದಲ್ಲಿದ್ದ ದೇವರ ಅಭಿಷಿಕ್ತ ಸೇವಕರಲ್ಲಿ ಒಬ್ಬನಾಗಿ, ಪೌಲನು ಮಹಾ ಪರೀಕ್ಷೆಗಳನ್ನು ಅನುಭವಿಸುತ್ತಿರುವಾಗಲೂ ನಂಬಿಕೆಯ ಕೃತ್ಯಗಳನ್ನು ಮಾಡುವುದರಲ್ಲಿ ನಾಯಕತ್ವವನ್ನು ವಹಿಸಿದನು. 20ನೆಯ ಶತಮಾನದ ಕೊನೆಯಲ್ಲೂ, ಹೋಲಿಸತಕ್ಕ ನಂಬಿಕೆಯ ಮಾದರಿಗಳ ಕೊರತೆ ನಮಗಿಲ್ಲ. ಇಬ್ರಿಯ 13:7ರ ಮಾತುಗಳು, ಪೌಲನು ಅವುಗಳನ್ನು ಬರೆದಾಗ ಎಷ್ಟು ಶಕ್ತಿಯುತವಾಗಿದ್ದವೊ ಅಷ್ಟೇ ಶಕ್ತಿಯುತವಾಗಿ ಈಗಲೂ ಅನ್ವಯಿಸುತ್ತವೆ: “ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ಸಭಾನಾಯಕರನ್ನು ಜ್ಞಾಪಕಮಾಡಿಕೊಳ್ಳಿರಿ; ಅವರು ಯಾವ ರೀತಿಯಿಂದ ನಡೆದುಕೊಂಡು ಪ್ರಾಣಬಿಟ್ಟರೆಂಬದನ್ನು ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ.”
10. ಇತ್ತೀಚಿನ ಸಮಯಗಳಲ್ಲಿ ಯಾವ ನಿರ್ದಿಷ್ಟವಾದ ನಂಬಿಕೆಯ ಮಾದರಿಗಳು ನಮ್ಮಲ್ಲಿವೆ?
10 ಅಭಿಷಿಕ್ತ ಉಳಿಕೆಯವರ ನಡತೆಯು ಹೇಗಾಗಿ ಪರಿಣಮಿಸಿದೆ ಎಂಬುದನ್ನು ನಾವು ಪರಿಗಣಿಸುವಾಗ, ಆ ಬುದ್ಧಿವಾದಕ್ಕೆ ವಿಶೇಷವಾದ ಒತ್ತು ದೊರೆಯುತ್ತದೆ. ನಾವು ಅವರ ಮಾದರಿಯ ಕುರಿತು ಆಲೋಚಿಸಿ, ಅವರ ನಂಬಿಕೆಯನ್ನು ಅನುಕರಿಸಬಲ್ಲೆವು. ಅವರದು ಪರೀಕ್ಷೆಗಳಿಂದ ಪರಿಷ್ಕರಿಸಲ್ಪಟ್ಟ ಯಥಾರ್ಥವಾದ ನಂಬಿಕೆಯಾಗಿದೆ. 1870ಗಳಷ್ಟು ಹಿಂದೆ, ಚಿಕ್ಕ ಆರಂಭಗಳಿಂದ ಹಿಡಿದು ಒಂದು ಲೋಕವ್ಯಾಪಕ ಕ್ರೈಸ್ತ ಸಹೋದರತ್ವವು ವಿಕಸಿಸಿದೆ. ಆ ಸಮಯದಂದಿನಿಂದ ಅಭಿಷಿಕ್ತರ ನಂಬಿಕೆ ಹಾಗೂ ತಾಳ್ಮೆಯ ಫಲವಾಗಿ, ಐವತ್ತೈದು ಲಕ್ಷಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳು, ಈಗ ದೇವರ ರಾಜ್ಯದ ಕುರಿತು ಸಾರುತ್ತಿದ್ದಾರೆ ಮತ್ತು ಕಲಿಸುತ್ತಿದ್ದಾರೆ. ಹುರುಪುಳ್ಳ ಯಥಾರ್ಥ ಆರಾಧಕರ ಪ್ರಚಲಿತ ಭೌಗೋಲಿಕ ಸಭೆಯು, ಪರೀಕ್ಷಿಸಲ್ಪಟ್ಟ ನಂಬಿಕೆಯ ಸಾಕ್ಷ್ಯವಾಗಿದೆ.—ತೀತ 2:14.
1914ರ ಸಂಬಂಧದಲ್ಲಿ ನಂಬಿಕೆಯು ಪರೀಕ್ಷಿಸಲ್ಪಟ್ಟದ್ದು
11. ಸಿ. ಟಿ. ರಸ್ಸಲ್ ಮತ್ತು ಅವರ ಸಹವಾಸಿಗಳಿಗೆ, 1914ನೇ ಇಸವಿಯು ಹೇಗೆ ಮಹತ್ತರವಾಗಿತ್ತು?
11 ಪ್ರಥಮ ಜಾಗತಿಕ ಯುದ್ಧವು ಆರಂಭವಾಗಲು ಅನೇಕ ವರ್ಷಗಳಿದ್ದಾಗಲೇ, ಬೈಬಲ್ ಪ್ರವಾದನೆಯಲ್ಲಿ 1914 ಒಂದು ಮಹತ್ತರವಾದ ತಾರೀಖಾಗಿರುವುದೆಂದು ಅಭಿಷಿಕ್ತ ಉಳಿಕೆಯವರು ಘೋಷಿಸುತ್ತಿದ್ದರು. ಹಾಗಿದ್ದರೂ, ಅವರ ನಿರೀಕ್ಷಣೆಗಳಲ್ಲಿ ಕೆಲವು ಆತುರದ ನಿರೀಕ್ಷಣೆಗಳಾಗಿದ್ದವು, ಮತ್ತು ಸಂಭವಿಸಲಿರುವ ವಿಷಯಗಳ ಅವರ ನೋಟವು ಪೂರ್ಣವಾಗಿ ನಿಷ್ಕೃಷ್ಟವಾಗಿರಲಿಲ್ಲ. ಉದಾಹರಣೆಗೆ, ವಾಚ್ ಟವರ್ ಸೊಸೈಟಿಯ ಪ್ರಥಮ ಅಧ್ಯಕ್ಷರಾಗಿದ್ದ ಸಿ. ಟಿ. ರಸ್ಸಲ್ ಮತ್ತು ಅವರ ಸಹವಾಸಿಗಳಿಗೆ, ವ್ಯಾಪಕವಾದ ಸಾರುವ ಕಾರ್ಯವು ಅಗತ್ಯವಾಗಿತ್ತೆಂಬುದನ್ನು ನೋಡಸಾಧ್ಯವಿತ್ತು. ಅವರು ಓದಿದ್ದು: “ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲ ಜನಾಂಗಗಳಿಗೆ ಒಂದು ಸಾಕ್ಷಿಯಾಗಿ ಸಾರಲಾಗುವುದು; ಆಗ ಅಂತ್ಯವು ಬರುವುದು.” (ಮತ್ತಾಯ 24:14, ಕಿಂಗ್ ಜೇಮ್ಸ್ ವರ್ಷನ್) ಸಾಪೇಕ್ಷವಾಗಿ ಚಿಕ್ಕದಾಗಿದ್ದ ಅವರ ಗುಂಪು ಎಂದಾದರೂ ಅದನ್ನು ಮಾಡಸಾಧ್ಯವಿತ್ತೊ?
12. ರಸ್ಸಲರ ಸಹವಾಸಿಗಳಲ್ಲಿ ಒಬ್ಬರು ಬೈಬಲ್ ಸತ್ಯಕ್ಕೆ ಹೇಗೆ ಪ್ರತಿಕ್ರಿಯಿಸಿದರು?
12 ಇದು ರಸ್ಸಲರ ಒಬ್ಬ ಸಹವಾಸಿಯಾಗಿದ್ದ ಏ. ಏಚ್. ಮ್ಯಾಕ್ಮಿಲನ್ ಅವರನ್ನು ಹೇಗೆ ಬಾಧಿಸಿತೆಂಬುದನ್ನು ಪರಿಗಣಿಸಿರಿ. ಕೆನಡದಲ್ಲಿ ಜನಿಸಿದ ಮ್ಯಾಕ್ಮಿಲನ್, ರಸ್ಸಲರ ಪುಸ್ತಕವಾದ ದ ಪ್ಲ್ಯಾನ್ ಆಫ್ ದಿ ಏಜಸ್ (1886) ಅನ್ನು ಪಡೆದುಕೊಂಡಾಗ, ಇನ್ನೂ 20 ವರ್ಷ ಪ್ರಾಯದವರೂ ಆಗಿರಲಿಲ್ಲ. (ದ ಡಿವೈನ್ ಪ್ಲ್ಯಾನ್ ಆಫ್ ದಿ ಏಜಸ್ ಎಂಬುದಾಗಿಯೂ ಕರೆಯಲ್ಪಟ್ಟ ಈ ಪುಸ್ತಕವು, ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ ಎಂಬ ಹೆಸರಿನ, ವ್ಯಾಪಕವಾಗಿ ವಿತರಿಸಲ್ಪಟ್ಟ ಸರಣಿಯ 1ನೆಯ ಸಂಪುಟವಾಯಿತು. ದ ಟೈಮ್ ಈಸ್ ಆ್ಯಟ್ ಹ್ಯಾಂಡ್ [1889] ಎಂಬ 2ನೆಯ ಸಂಪುಟವು, 1914ನ್ನು “ಅನ್ಯಜನಾಂಗಗಳ ಸಮಯಗಳ” ಅಂತ್ಯವಾಗಿ ಸೂಚಿಸಿತು.” [ಲೂಕ 21:24, KJ]) ಮ್ಯಾಕ್ಮಿಲನ್ ಅದನ್ನು ಓದುತ್ತಿದ್ದ ರಾತ್ರಿಯೇ ಹೀಗೆ ಯೋಚಿಸಿದರು: “ಅದರಲ್ಲಿ ಸತ್ಯದ ನಾದವಿದೆ!” 1900ರ ಬೇಸಗೆಯ ಕಾಲದಲ್ಲಿ, ಅವರು ಬೈಬಲ್ ವಿದ್ಯಾರ್ಥಿಗಳ—ಆಗ ಯೆಹೋವನ ಸಾಕ್ಷಿಗಳು ಹೀಗೆ ಕರೆಯಲ್ಪಟ್ಟರು—ಅಧಿವೇಶನವೊಂದರಲ್ಲಿ ರಸ್ಸಲರನ್ನು ಸಂಧಿಸಿದರು. ಬೇಗನೆ ಮ್ಯಾಕ್ಮಿಲನ್ ದೀಕ್ಷಾಸ್ನಾನ ಪಡೆದುಕೊಂಡು, ನ್ಯೂ ಯಾರ್ಕ್ನಲ್ಲಿರುವ ಸೊಸೈಟಿಯ ಮುಖ್ಯಕಾರ್ಯಾಲಯದಲ್ಲಿ ಸಹೋದರ ರಸ್ಸಲರೊಂದಿಗೆ ಕೆಲಸಮಾಡಲಾರಂಭಿಸಿದರು.
13. ಮತ್ತಾಯ 24:14ರ ನೆರವೇರಿಕೆಯ ಸಂಬಂಧದಲ್ಲಿ ಯಾವ ಸಮಸ್ಯೆಯನ್ನು ಮ್ಯಾಕ್ಮಿಲನ್ ಮತ್ತು ಇತರರು ಮನಗಂಡರು?
13 ಬೈಬಲಿನ ತಮ್ಮ ವಾಚನದ ಮೇಲೆ ಆಧಾರಿಸಿ, ಆ ಅಭಿಷಿಕ್ತ ಕ್ರೈಸ್ತರು 1914ನ್ನು ದೇವರ ಉದ್ದೇಶದಲ್ಲಿ ಒಂದು ಸಂಧಿಕಾಲವಾಗಿ ಸೂಚಿಸಿದರು. ಆದರೆ ಉಳಿದಿರುವ ಕೊಂಚ ಸಮಯದಲ್ಲಿ, ಮತ್ತಾಯ 24:14ರಲ್ಲಿ ಮುಂತಿಳಿಸಲ್ಪಟ್ಟ, ಜನಾಂಗಗಳಿಗೆ ಸಾರುವ ಕೆಲಸವು ಹೇಗೆ ನೆರವೇರುವುದೆಂದು ಮ್ಯಾಕ್ಮಿಲನ್ ಮತ್ತು ಇತರರು ಯೋಚಿಸಿದರು. ಅವರು ತದನಂತರ ಹೇಳಿದ್ದು: “ಅದನ್ನು ಪದೇ ಪದೇ ಸಹೋದರ ರಸ್ಸಲರೊಂದಿಗೆ ಚರ್ಚಿಸುತ್ತಿದ್ದದ್ದು ನನಗೆ ನೆನಪಿದೆ. ಅವರು ಹೀಗೆ ಹೇಳುತ್ತಿದ್ದರು, ‘ಸಹೋದರನೇ, ಯೆರೂಸಲೇಮಿನಲ್ಲಿರುವ ಯೆಹೂದ್ಯರಿಗಿಂತಲೂ ಹೆಚ್ಚು ಯೆಹೂದ್ಯರು ನ್ಯೂ ಯಾರ್ಕಿನಲ್ಲೇ ಇದ್ದಾರೆ. ಡಬ್ಲಿನ್ನಲ್ಲಿರುವ ಐರಿಷ್ ಜನರಿಗಿಂತಲೂ ಹೆಚ್ಚು ಐರಿಷ್ ಜನರು ಇಲ್ಲಿದ್ದಾರೆ. ರೋಮ್ನಲ್ಲಿರುವ ಇಟಾಲಿಯನ್ ಜನರಿಗಿಂತಲೂ ಹೆಚ್ಚು ಇಟಾಲಿಯನರು ಇಲ್ಲಿದ್ದಾರೆ. ನ್ಯೂ ಯಾರ್ಕ್ನಲ್ಲಿರುವ ಅವರಿಗೆ ನಾವು ಸಾರುವುದಾದರೆ, ಇಡೀ ಮಾನವಕುಲಕ್ಕೇ ನಾವು ಈ ಸಂದೇಶವನ್ನು ಸಾರುತ್ತಿರುವಂತೆ ಇರುವುದು.’ ಆದರೆ ಅದು ನಮ್ಮ ಮನಸ್ಸುಗಳನ್ನು ತೃಪ್ತಿಪಡಿಸುವಂತೆ ತೋರಲಿಲ್ಲ. ಆಗ, ನಾವು ‘ಫೋಟೊ-ಡ್ರಾಮ’ವನ್ನು ತಯಾರಿಸುವುದರ ಕುರಿತು ಯೋಚಿಸಿದೆವು.”
14. ಯಾವ ಪ್ರಮುಖ ಯೋಜನೆಯು 1914ಕಕ್ಕೆ ಮುಂಚೆ ಕೈಕೊಳ್ಳಲ್ಪಟ್ಟಿತು?
14 ‘ಸೃಷ್ಟಿಯ ಫೋಟೊ-ಡ್ರಾಮ’ ಎಂತಹ ಒಂದು ನವೀನ ಕಾರ್ಯವಾಗಿತ್ತು! ಅದರಲ್ಲಿ ಚಲನ ಚಿತ್ರಗಳು ಮತ್ತು ಬಣ್ಣಹಚ್ಚಿದ ಗ್ಲಾಸ್ ಸ್ಲೈಡ್ಗಳೊಂದಿಗೆ ಫೋನೊಗ್ರಾಫ್ ರೆಕಾರ್ಡುಗಳಲ್ಲಿ ಸಂಯೋಗಿಸಲಾದ ಬೈಬಲ್ ಭಾಷಣಗಳು ಮತ್ತು ಸಂಗೀತವಿತ್ತು. 1913ರಲ್ಲಿ, ಅಮೆರಿಕದ ಆರ್ಕನ್ಸಾದಲ್ಲಿ ನಡೆದ ಒಂದು ಅಧಿವೇಶನದ ಕುರಿತು ದ ವಾಚ್ ಟವರ್ ಪತ್ರಿಕೆಯು ಹೇಳಿದ್ದು: “ಬೈಬಲ್ ಸತ್ಯಗಳನ್ನು ಕಲಿಸುವುದರಲ್ಲಿ ಚಲನ ಚಿತ್ರಗಳನ್ನು ಉಪಯೋಗಿಸುವ ಸಮಯವು ಬಂದಿದೆ ಎಂಬುದನ್ನು ಒಮ್ಮತದಿಂದ ತೀರ್ಮಾನಿಸಲಾಯಿತು. . . . ತಾವು ಈ ಯೋಜನೆಯ ಕುರಿತಾಗಿಯೇ ಮೂರು ವರ್ಷಗಳಿಂದ ಕೆಲಸಮಾಡುತ್ತಾ ಇದ್ದು, ಈಗ ಸುಂದರವಾದ ನೂರಾರು ಚಿತ್ರಗಳು ಸಿದ್ಧವಾಗಿದ್ದವೆಂದು [ರಸ್ಸಲ್] ವಿವರಿಸಿದರು. ನಿಸ್ಸಂದೇಹವಾಗಿಯೂ ಇದು ಮಹಾ ಸಮೂಹಗಳನ್ನು ಆಕರ್ಷಿಸುವುದು ಮತ್ತು ಸುವಾರ್ತೆಯನ್ನು ಘೋಷಿಸುವುದು, ಹಾಗೂ ದೇವರಲ್ಲಿ ಮತ್ತೆ ನಂಬಿಕೆಯಿಡಲು ಸಾರ್ವಜನಿಕರಿಗೆ ಸಹಾಯ ಮಾಡುವುದು.”
15. “ಫೋಟೊ-ಡ್ರಾಮ” ಯಾವ ರೀತಿಯ ಪರಿಣಾಮಗಳನ್ನು ತಂದಿತು?
15 “ಫೋಟೊ-ಡ್ರಾಮ” ಜನವರಿ 1914ರಲ್ಲಿ ಅದರ ಪ್ರಥಮ ಪ್ರದರ್ಶನದ ತರುವಾಯ ಅದನ್ನೇ ಮಾಡಿತು. 1914ರ ದ ವಾಚ್ ಟವರ್ ಪತ್ರಿಕೆಯಿಂದ ತೆಗೆಯಲ್ಪಟ್ಟ ವರದಿಗಳು ಈ ಕೆಳಗಿನಂತಿವೆ:
ಏಪ್ರಿಲ್ 1: “ಎರಡು ಭಾಗಗಳನ್ನು ನೋಡಿದ ಬಳಿಕ, ಪಾದ್ರಿಯೊಬ್ಬನು ಹೇಳಿದ್ದು, ‘ಸೃಷ್ಟಿಯ ಫೋಟೊ-ಡ್ರಾಮದ ಕೇವಲ ಅರ್ಧ ಭಾಗವನ್ನು ನಾನು ನೋಡಿರುವುದಾದರೂ, ಬೈಬಲಿನ ಬಗ್ಗೆ ನಾನು ದೇವತಾಶಾಸ್ತ್ರದ ಪಾಠಶಾಲೆಯಲ್ಲಿನ ಮೂರು ವರ್ಷಗಳ ಅಧ್ಯಯನ ಅವಧಿಯಲ್ಲಿ ಕಲಿತ ವಿಷಯಗಳಿಗಿಂತಲೂ ಹೆಚ್ಚಿನ ವಿಷಯಗಳನ್ನು ಈಗಾಗಲೇ ಕಲಿತಿದ್ದೇನೆ.’ ಯೆಹೂದಿಯೊಬ್ಬನು ಅದನ್ನು ನೋಡಿ, ಹೇಳಿದ್ದು, ‘ನಾನು ಒಳಬಂದಾಗ ಆಗಿದ್ದ ರೀತಿಯ ಯೆಹೂದ್ಯನಿಗಿಂತ ಹೆಚ್ಚು ಉತ್ತಮವಾದ ಯೆಹೂದ್ಯನಾಗಿ ಹೊರಹೋಗುತ್ತೇನೆ.’ ಹಲವಾರು ಕ್ಯಾತೊಲಿಕ್ ಪಾದ್ರಿಗಳು ಮತ್ತು ನನ್ಗಳು ಈ ಡ್ರಾಮವನ್ನು ನೋಡಿದ್ದಾರೆ ಮತ್ತು ಬಹಳವಾಗಿ ಪ್ರಶಂಸಿಸಿದ್ದಾರೆ. . . . ಡ್ರಾಮದ ಹನ್ನೆರಡು ಸೆಟ್ಗಳು ಮಾತ್ರ ಪೂರ್ಣಗೊಂಡಿವೆ . . . ಹಾಗಿದ್ದರೂ ನಾವು ಈಗಾಗಲೇ ಮೂವತ್ತೊಂದು ನಗರಗಳನ್ನು ತಲಪಿದ್ದೇವೆ ಮತ್ತು ಡ್ರಾಮವನ್ನು ಪ್ರದರ್ಶಿಸುತ್ತಿದ್ದೇವೆ . . . ಪ್ರತಿ ದಿನ ಮೂವತ್ತೈದು ಸಾವಿರಕ್ಕಿಂತಲೂ ಹೆಚ್ಚು ಜನರು ಡ್ರಾಮವನ್ನು ನೋಡುತ್ತಿದ್ದಾರೆ, ಕೇಳಿಸಿಕೊಳ್ಳುತ್ತಿದ್ದಾರೆ, ಯೋಚಿಸುತ್ತಿದ್ದಾರೆ ಮತ್ತು ಆಶೀರ್ವದಿಸಲ್ಪಡುತ್ತಿದ್ದಾರೆ.”
ಜೂನ್ 15: “ಚಿತ್ರಗಳು ನಾನು ಸತ್ಯವನ್ನು ಇನ್ನೂ ಹೆಚ್ಚಿನ ಹುರುಪಿನಿಂದ ಹಬ್ಬಿಸುವಂತೆ ಮತ್ತು ಸ್ವರ್ಗೀಯ ತಂದೆಗಾಗಿ ಹಾಗೂ ನಮ್ಮ ಪ್ರಿಯ ಅಣ್ಣನಾದ ಯೇಸುವಿಗಾಗಿ ನನ್ನ ಪ್ರೀತಿಯನ್ನು ಹೆಚ್ಚಿಸುವಂತೆ ಮಾಡಿದೆ. ನಾನು ಪ್ರತಿದಿನ ಸೃಷ್ಟಿಯ ಫೋಟೊ-ಡ್ರಾಮದ ಮೇಲೆ ಮತ್ತು ಅದರ ಪ್ರದರ್ಶನದಲ್ಲಿ ಒಳಗೊಂಡಿರುವವರೆಲ್ಲರ ಮೇಲೆ ದೇವರ ಹೇರಳವಾದ ಆಶೀರ್ವಾದಕ್ಕಾಗಿ ಪ್ರಾರ್ಥಿಸುತ್ತೇನೆ . . . ಆತನಲ್ಲಿ ನಿಮ್ಮ ಸೇವಕನಾಗಿರುವ, ಎಫ್. ಡಬ್ಲ್ಯೂ. ನಾಕ್.—ಐಅವ.”
ಜುಲೈ 15: “ಚಿತ್ರಗಳು ಈ ನಗರದಲ್ಲಿ ಮಾಡಿರುವ ಒಳ್ಳೆಯ ಪರಿಣಾಮವನ್ನು ಗಮನಿಸಲು ನಾವು ಸಂತೋಷಿಸುತ್ತೇವೆ, ಮತ್ತು ಲೋಕಕ್ಕೆ ಕೊಡಲ್ಪಡುತ್ತಿರುವ ಈ ಸಾಕ್ಷಿಯು, ಸ್ವತಃ ಕರ್ತನೇ ಆಯ್ದುಕೊಂಡಿರುವ ರತ್ನಗಳಾಗಿರುವುದರ ಪ್ರಮಾಣವನ್ನು ಕೊಡುವ ಅನೇಕರನ್ನು ಒಟ್ಟುಗೂಡಿಸಲೂ ಉಪಯೋಗಿಸಲ್ಪಡುತ್ತಿದೆ ಎಂಬ ಆಶ್ವಾಸನೆ ನಮಗಿದೆ. ಫೋಟೊ-ಡ್ರಾಮ ಕೆಲಸದ ಕಾರಣ, ಸಭೆಯೊಂದಿಗೆ ಈಗ ಸಹವಾಸಿಸುತ್ತಿರುವ ಹಲವಾರು ಶ್ರದ್ಧಾಶೀಲ ಬೈಬಲ್ ವಿದ್ಯಾರ್ಥಿಗಳ ಪರಿಚಯ ನಮಗಿದೆ. . . . ಕರ್ತನಲ್ಲಿ ನಿಮ್ಮ ಸಹೋದರಿಯಾದ, ಎಮ ಎಲ್. ಬ್ರಿಕರ್.”
ನವೆಂಬರ್ 15: “ದ ಲಂಡನ್ ಆಪೆರ ಹೌಸ್, ಕಿಂಗ್ಸ್ವೇಯಲ್ಲಿ ಪ್ರದರ್ಶಿಸಲ್ಪಟ್ಟ ಸೃಷ್ಟಿಯ ಫೋಟೊ-ಡ್ರಾಮದ ಮೂಲಕ ಕೊಡಲಾಗುತ್ತಿರುವ ಅತ್ಯುತ್ತಮವಾದ ಸಾಕ್ಷಿಯ ಕುರಿತು ಕೇಳಿಸಿಕೊಳ್ಳಲು ನೀವು ಖಂಡಿತವಾಗಿಯೂ ಸಂತೋಷಿಸುವಿರಿ. ಈ ಪ್ರದರ್ಶನದ ಪ್ರತಿಯೊಂದು ಅಂಶದಲ್ಲಿ ಕರ್ತನ ಮಾರ್ಗದರ್ಶಕ ಹಸ್ತವು ಎಷ್ಟು ಅದ್ಭುತಕರವಾಗಿ ವ್ಯಕ್ತವಾಗಿದೆ ಎಂದರೆ, ಸಹೋದರರು ಬಹಳವಾಗಿ ಹರ್ಷಿಸುತ್ತಿದ್ದಾರೆ . . . ನಮ್ಮ ಸಭೆಯು ಎಲ್ಲಾ ವರ್ಗದ ಹಾಗೂ ರೀತಿಯ ಜನರಿಂದ ತುಂಬಿತ್ತು; ಸಭಿಕರಲ್ಲಿ ಅನೇಕ ಪಾದ್ರಿಗಳಿರುವುದನ್ನೂ ನಾವು ಗಮನಿಸಿದೆವು. ಒಬ್ಬ ಪುರೋಹಿತನು . . . ಅವನೂ ಅವನ ಹೆಂಡತಿಯೂ ಪುನಃ ಬಂದು ಅದನ್ನು ನೋಡಲಾಗುವಂತೆ ಟಿಕೆಟ್ಗಳಿಗಾಗಿ ಕೇಳಿದನು. ಚರ್ಚ್ ಆಫ್ ಇಂಗ್ಲೆಂಡ್ನ ಪಾದ್ರಿಯು ಹಲವಾರು ಬಾರಿ ಈ ಡ್ರಾಮವನ್ನು ನೋಡಿದ್ದಾನೆ, ಮತ್ತು . . . ಅದನ್ನು ನೋಡಲು ತನ್ನ ಮಿತ್ರರಲ್ಲಿ ಅನೇಕರನ್ನು ಕರೆತಂದಿದ್ದಾನೆ. ಇಬ್ಬರು ಬಿಷಪರು ಮತ್ತು ಬಿರುದುಳ್ಳ ಹಲವಾರು ಜನರು ಸಹ ಹಾಜರಾಗಿದ್ದಾರೆ.”
ಡಿಸೆಂಬರ್ 1: “ನಿಮ್ಮ ಮುಖಾಂತರ ನಮಗೆ ಬಂದಿರುವ ಈ ಮಹಾ ಹಾಗೂ ಅಮೂಲ್ಯವಾದ ಆಶೀರ್ವಾದಕ್ಕಾಗಿ, ನನ್ನ ಹೆಂಡತಿ ಮತ್ತು ನಾನು ನಿಜವಾಗಿಯೂ ನಮ್ಮ ಸ್ವರ್ಗೀಯ ತಂದೆಗೆ ಉಪಕಾರ ಸಲ್ಲಿಸುತ್ತೇವೆ. ನಿಮ್ಮ ಸುಂದರವಾದ ಫೋಟೊ-ಡ್ರಾಮವನ್ನು ನೋಡಿದ ಕಾರಣ ನಾವು ಸತ್ಯವನ್ನು ಸ್ವೀಕರಿಸಿದೆವು . . . ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ ಪುಸ್ತಕದ ಆರು ಸಂಪುಟಗಳು ನಮ್ಮಲ್ಲಿವೆ. ಅವು ಮಹಾ ಸಹಾಯದ ರೂಪದಲ್ಲಿವೆ.”
ಆಗಿನ ಪರೀಕ್ಷೆಗಳಿಗೆ ಪ್ರತಿಕ್ರಿಯೆ
16. ಇಸವಿ 1914, ನಂಬಿಕೆಯ ಪರೀಕ್ಷೆಯನ್ನು ಏಕೆ ತಂದಿತು?
16 ಇಂತಹ ಪ್ರಾಮಾಣಿಕ ಹಾಗೂ ಧರ್ಮನಿಷ್ಠ ಕ್ರೈಸ್ತರಿಗೆ, 1914ರಲ್ಲಿ ಕರ್ತನೊಂದಿಗೆ ಜೊತೆಗೂಡುವ ತಮ್ಮ ನಿರೀಕ್ಷೆಯು ನೆರವೇರಲಿಲ್ಲವೆಂದು ತಿಳಿದುಬಂದಾಗ ಏನಾಯಿತು? ಆ ಅಭಿಷಿಕ್ತರು ಅಸಾಧಾರಣವಾದ ಪರೀಕ್ಷೆಯ ಅವಧಿಯನ್ನು ಅನುಭವಿಸಿದರು. ನವೆಂಬರ್ 1, 1914ರ ದ ವಾಚ್ ಟವರ್ ಪ್ರಕಟಿಸಿದ್ದು: “ನಾವು ಒಂದು ಪರೀಕ್ಷೆಯ ಕಾಲದಲ್ಲಿದ್ದೇವೆಂಬುದನ್ನು ಜ್ಞಾಪಿಸಿಕೊಳ್ಳೋಣ.” ಇದರ ಕುರಿತು, ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್, 1993) ಎಂಬ ಪುಸ್ತಕವು ಹೇಳುವುದು: “1914ರಿಂದ 1918ರ ವರ್ಷಗಳು ಬೈಬಲ್ ವಿದ್ಯಾರ್ಥಿಗಳಿಗೆ ನಿಶ್ಚಯವಾಗಿಯೂ ‘ಒಂದು ಪರೀಕ್ಷೆಯ ಕಾಲ’ವಾಗಿ ಪರಿಣಮಿಸಿದವು.” ತಮ್ಮ ಮುಂದಿರುವ ಮಹಾನ್ ಕೆಲಸವನ್ನು ಕೈಕೊಳ್ಳಲು ಸಾಧ್ಯವಾಗುವಂತೆ, ತಮ್ಮ ನಂಬಿಕೆಯು ಪರಿಷ್ಕರಿಸಲ್ಪಡಲು ಮತ್ತು ತಮ್ಮ ಆಲೋಚನೆಯನ್ನು ಅಳವಡಿಸಿಕೊಳ್ಳಲು ಅವರು ಅನುಮತಿ ನೀಡುವರೊ?
17. ವರ್ಷ 1914 ಗತಿಸಿದ ಮೇಲೂ ಈ ಭೂಮಿಯ ಮೇಲೆ ಉಳಿಯುವುದರ ಕುರಿತು ನಂಬಿಗಸ್ತ ಅಭಿಷಿಕ್ತರು ಹೇಗೆ ಪ್ರತಿಕ್ರಿಯಿಸಿದರು?
17 ಸೆಪ್ಟೆಂಬರ್ 1, 1916ರ ದ ವಾಚ್ ಟವರ್ ಪತ್ರಿಕೆಯು ಹೇಳಿದ್ದು: “ಅನ್ಯಜನಾಂಗಗಳ ಸಮಯದ ಅಂತ್ಯಕ್ಕೆ ಮುಂಚೆ, ಚರ್ಚಿನ [ಅಭಿಷಿಕ್ತರ] ಒಟ್ಟುಗೂಡಿಸುವಿಕೆಯ ಕೊಯ್ಲಿನ ಕೆಲಸವು ನೆರವೇರುವುದೆಂದು ನಾವು ಊಹಿಸಿದ್ದೆವು; ಆದರೆ ಇದು ನಿರ್ದಿಷ್ಟವಾಗಿ ಬೈಬಲಿನಲ್ಲಿ ತಿಳಿಸಲ್ಪಟ್ಟಿರಲಿಲ್ಲ. . . . ಕೊಯ್ಲಿನ ಕೆಲಸವು ಮುಂದುವರಿಯುತ್ತಿರುವ ಕಾರಣ ನಾವು ವಿಷಾದಿಸುತ್ತೇವೊ? . . . ಪ್ರಿಯ ಸಹೋದರರೇ, ನಮ್ಮ ಪ್ರಚಲಿತ ಮನೋಭಾವವು, ದೇವರ ಕಡೆಗೆ ಬಹಳಷ್ಟು ಕೃತಜ್ಞತೆಯನ್ನು, ನಾವು ಸುಂದರವಾದ ಸತ್ಯವನ್ನು ಮನಗಾಣುವಂತೆ ಹಾಗೂ ಅದರಿಂದ ಗುರುತಿಸಲ್ಪಡುವಂತೆ ಆತನು ನಮಗೆ ನೀಡಿರುವ ಸುಯೋಗಕ್ಕೆ ಹೆಚ್ಚಿನ ಗಣ್ಯತೆಯನ್ನು, ಮತ್ತು ಆ ಸತ್ಯವನ್ನು ಇತರರ ಅರಿವಿಗೆ ತರಲು ಸಹಾಯ ಮಾಡುವುದರಲ್ಲಿ ಹೆಚ್ಚಿನ ಹುರುಪನ್ನು ತೋರಿಸುವಂತಹದ್ದಾಗಿರಬೇಕು.” ಅವರ ನಂಬಿಕೆಯು ಪರೀಕ್ಷಿಸಲ್ಪಟ್ಟಿತ್ತು, ಆದರೂ ಅವರು ಆ ಪರೀಕ್ಷೆಯನ್ನು ಎದುರಿಸಿ, ಯಶಸ್ಸನ್ನು ಪಡೆದರು. ಆದರೆ ನಂಬಿಕೆಯ ಪರೀಕ್ಷೆಗಳು ಅನೇಕವೂ ವಿವಿಧವೂ ಆಗಿರುವವು ಎಂಬುದು ಕ್ರೈಸ್ತರಾದ ನಮಗೆ ತಿಳಿದಿರಬೇಕು.
18, 19. ಸಹೋದರ ರಸ್ಸಲರ ಮರಣಾನಂತರ, ದೇವರ ಜನರು ನಂಬಿಕೆಯ ಯಾವ ಬೇರೆ ಪರೀಕ್ಷೆಗಳನ್ನು ಎದುರಿಸಿದರು?
18 ಉದಾಹರಣೆಗೆ, ಸಹೋದರ ಚಾರ್ಲ್ಸ್ ಟಿ. ರಸ್ಸಲ್ ಅವರು ಮೃತಪಟ್ಟ ಸ್ವಲ್ಪದರಲ್ಲೇ, ಉಳಿಕೆಯವರ ಮೇಲೆ ಮತ್ತೊಂದು ರೀತಿಯ ಪರೀಕ್ಷೆಯು ಬಂತು. ಅದು ಅವರ ನಿಷ್ಠೆ ಹಾಗೂ ನಂಬಿಕೆಯ ಪರೀಕ್ಷೆಯಾಗಿತ್ತು. ಮತ್ತಾಯ 24:45ರ ‘ನಂಬಿಗಸ್ತ ಆಳು’ ಯಾರಾಗಿದ್ದರು? ಸಹೋದರ ರಸ್ಸಲರೇ ಆಗಿದ್ದರೆಂದು ಕೆಲವರಿಗೆ ಅನಿಸಿತು, ಮತ್ತು ಅವರು ಹೊಸ ಸಂಘಟನಾತ್ಮಕ ಏರ್ಪಾಡುಗಳೊಂದಿಗೆ ಸಹಕರಿಸಲು ತಿರಸ್ಕರಿಸಿದರು. ರಸ್ಸಲರು ಆಳು ಆಗಿದ್ದಿದ್ದರೆ, ಅವರು ಸತ್ತ ಬಳಿಕ ಸಹೋದರರು ಏನು ಮಾಡಬೇಕಿತ್ತು? ಹೊಸದಾಗಿ ನೇಮಿಸಲ್ಪಟ್ಟ ಯಾರೋ ಒಬ್ಬ ವ್ಯಕ್ತಿಯನ್ನು ಅವರು ಹಿಂಬಾಲಿಸಬೇಕಿತ್ತೊ, ಇಲ್ಲವೆ ಯೆಹೋವನು ಒಂದು ಸಾಧನ ಅಥವಾ ಆಳು ವರ್ಗವಾಗಿ ಕೇವಲ ಒಬ್ಬ ವ್ಯಕ್ತಿಯನ್ನಲ್ಲ, ಬದಲಿಗೆ ಕ್ರೈಸ್ತರ ಒಂದು ಇಡೀ ಗುಂಪನ್ನು ಉಪಯೋಗಿಸುತ್ತಿದ್ದನೆಂದು ಗ್ರಹಿಸುವ ಸಮಯವು ಅದಾಗಿತ್ತೊ?
19 ನಿಜ ಕ್ರೈಸ್ತರ ಮೇಲೆ 1918ರಲ್ಲಿ ಮತ್ತೊಂದು ಪರೀಕ್ಷೆಯು ಬಂತು. ಆಗ, ಕ್ರೈಸ್ತಪ್ರಪಂಚದ ವೈದಿಕರಿಂದ ಪ್ರೇರಿಸಲ್ಪಟ್ಟ ಲೌಕಿಕ ಅಧಿಕಾರಿಗಳು, ಯೆಹೋವನ ಸಂಸ್ಥೆಯ ವಿರುದ್ಧ ‘ಧರ್ಮಶಾಸ್ತ್ರದ ಮೂಲಕ ಕೇಡು ಕಲ್ಪಿಸಿದರು.’ (ಕೀರ್ತನೆ 94:20, KJ) ಉತ್ತರ ಅಮೆರಿಕ ಹಾಗೂ ಯೂರೋಪಿನಲ್ಲಿ, ಬೈಬಲ್ ವಿದ್ಯಾರ್ಥಿಗಳ ವಿರುದ್ಧ ಹಿಂಸಾತ್ಮಕ ವಿರೋಧದ ಒಂದು ಅಲೆಯು ಬೀಸಿತು. 1918, ಮೇ 7ರಂದು ವೈದಿಕರಿಂದ ಪ್ರೇರಿತವಾದ ವಿರೋಧವು ತುತ್ತತುದಿಗೇರಿತು. ಆಗ ಜೆ. ಎಫ್. ರದರ್ಫರ್ಡ್ ಮತ್ತು ಅವರ ಆಪ್ತ ಸಹವಾಸಿಗಳಲ್ಲಿ ಹಲವಾರು ಜನರ—ಏ. ಏಚ್. ಮ್ಯಾಕ್ಮಿಲನ್ ಅವರನ್ನೂ ಸೇರಿಸಿ—ಬಂಧನಕ್ಕಾಗಿ ಅಮೆರಿಕದ ಫೆಡರಲ್ ವಾರಂಟ್ಗಳು ಹೊರಡಿಸಲ್ಪಟ್ಟವು. ಅವರ ಮೇಲೆ ರಾಜ್ಯದ್ರೋಹದ ಸುಳ್ಳು ಆರೋಪ ಹೊರಿಸಲಾಯಿತು, ಮತ್ತು ತಾವು ನಿದೋರ್ಷಿಗಳೆಂಬ ಅವರ ಮನವಿಗಳನ್ನು ಅಧಿಕಾರಿಗಳು ಕಡೆಗಣಿಸಿದರು.
20, 21. ಮಲಾಕಿಯ 3:1-3ರಲ್ಲಿ ಮುಂತಿಳಿಸಲ್ಪಟ್ಟಂತೆ, ಅಭಿಷಿಕ್ತರ ನಡುವೆ ಯಾವ ಕೆಲಸವು ಮಾಡಲ್ಪಟ್ಟಿತು?
20 ಮಲಾಕಿಯ 3:1-3ರಲ್ಲಿ ವರ್ಣಿಸಲ್ಪಟ್ಟಂತಹ ಶುದ್ಧೀಕರಣದ ಕೆಲಸವು ಆಗ ಸಂಭವಿಸುತ್ತಿದ್ದರೂ, ಆಗ ಅದು ಹಾಗೆಂದು ಗುರುತಿಸಲ್ಪಡಲಿಲ್ಲ: “ಆತನು ಬರುವ ದಿನವನ್ನು ಯಾರು ತಾಳಾರು? ಆತನು ಕಾಣಿಸಿಕೊಳ್ಳುವಾಗ ಯಾರು ನಿಂತಾರು? ಆತನು [ಒಡಂಬಡಿಕೆಯ ದೂತನು] ಅಕ್ಕಸಾಲಿಗನ ಬೆಂಕಿಗೂ ಅಗಸನ ಚೌಳಿಗೂ ಸಮಾನನಾಗಿದ್ದಾನೆ; ಬೆಳ್ಳಿಯನ್ನು ಶೋಧಿಸುವ ಅಕ್ಕಸಾಲಿಗನಂತೆ ಕುಳಿತು ಲೇವಿ ವಂಶದವರನ್ನು ಶೋಧಿಸಿ ಬೆಳ್ಳಿಬಂಗಾರಗಳನ್ನೋ ಎಂಬಂತೆ ಶುದ್ಧೀಕರಿಸುವನು; ಅವರು ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯಗಳನ್ನು ತಂದೊಪ್ಪಿಸುವರು.”
21 ಒಂದನೆಯ ಜಾಗತಿಕ ಯುದ್ಧವು ಕೊನೆಗೊಂಡಂತೆ, ಲೌಕಿಕ ಮಿಲಿಟರಿ ವಿಷಯಗಳ ಸಂಬಂಧದಲ್ಲಿ ಅವರು ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಕಾಪಾಡಿಕೊಳ್ಳುವರೊ ಇಲ್ಲವೊ ಎಂಬ ವಿಷಯದಲ್ಲಿ, ಬೈಬಲ್ ವಿದ್ಯಾರ್ಥಿಗಳಲ್ಲಿ ಕೆಲವರು ನಂಬಿಕೆಯ ಮತ್ತೊಂದು ಪರೀಕ್ಷೆಯನ್ನು ಎದುರಿಸಿದರು. (ಯೋಹಾನ 17:16; 18:36) ಕೆಲವರು ತಟಸ್ಥರಾಗಿ ಉಳಿಯಲಿಲ್ಲ. ಆದಕಾರಣ 1918ರಲ್ಲಿ, ಯೆಹೋವನು “ಒಡಂಬಡಿಕೆಯ ದೂತ”ನಾದ ಕ್ರಿಸ್ತ ಯೇಸುವನ್ನು ತನ್ನ ಆತ್ಮಿಕ ದೇವಾಲಯದ ಏರ್ಪಾಡಿಗೆ ಕಳುಹಿಸಿ, ತನ್ನ ಆರಾಧಕರ ಚಿಕ್ಕ ಗುಂಪನ್ನು ಲೌಕಿಕ ಕಳಂಕಗಳಿಂದ ಶುದ್ಧೀಕರಿಸಿದನು. ಯಥಾರ್ಥ ನಂಬಿಕೆಯನ್ನು ಪ್ರದರ್ಶಿಸಲು ಬದ್ಧರಾದವರು ಈ ಅನುಭವದಿಂದ ಪಾಠವನ್ನು ಕಲಿತು, ಸಾರುವುದನ್ನು ಹುರುಪಿನಿಂದ ಮುಂದುವರಿಸುತ್ತಾ ಮುಂದೆ ಸಾಗಿದರು.
22. ನಂಬಿಕೆಯ ಪರೀಕ್ಷೆಗಳ ಸಂಬಂಧದಲ್ಲಿ, ಯಾವ ವಿಷಯವನ್ನು ಇನ್ನೂ ಪರಿಗಣಿಸಲಿಕ್ಕಿದೆ?
22 ನಾವು ಪರಿಗಣಿಸಿದ ವಿಷಯವು, ಕೇವಲ ಕ್ಷಣಿಕವಾದ ಐತಿಹಾಸಿಕ ಅಭಿರುಚಿಯುಳ್ಳ ವಿಷಯವಾಗಿರುವುದಿಲ್ಲ. ಅದು ನೇರವಾಗಿ ಯೆಹೋವನ ಲೋಕವ್ಯಾಪಕ ಸಭೆಯ ಪ್ರಸ್ತುತ ಆತ್ಮಿಕ ಸ್ಥಿತಿಗೆ ಸಂಬಂಧಿಸಿದೆ. ಆದರೆ ಮುಂದಿನ ಲೇಖನದಲ್ಲಿ ನಾವು, ಇಂದು ದೇವಜನರಿಂದ ಎದುರಿಸಲಾಗುತ್ತಿರುವ ನಂಬಿಕೆಯ ಕೆಲವು ಪರೀಕ್ಷೆಗಳನ್ನು ಮತ್ತು ಇವುಗಳನ್ನು ನಾವು ಹೇಗೆ ಯಶಸ್ವಿಯಾಗಿ ಜಯಿಸಬಲ್ಲೆವೆಂಬುದನ್ನು ಪರಿಗಣಿಸೋಣ.
ನೀವು ಜ್ಞಾಪಿಸಿಕೊಳ್ಳುತ್ತೀರೊ?
◻ ತಮ್ಮ ನಂಬಿಕೆಯು ಪರೀಕ್ಷಿಸಲ್ಪಡುವುದು ಎಂಬುದನ್ನು ಯೆಹೋವನ ಜನರು ಏಕೆ ನಿರೀಕ್ಷಿಸಬೇಕು?
◻ 1914ರ ಮುಂಚೆ ದೇವರ ಸಂದೇಶವನ್ನು ಹಬ್ಬಿಸಲು ಯಾವ ರೀತಿಯ ಪ್ರಯತ್ನಗಳು ನಡೆಸಲ್ಪಟ್ಟವು?
◻ “ಫೋಟೊ-ಡ್ರಾಮ” ಏನಾಗಿತ್ತು, ಮತ್ತು ಅದು ಯಾವ ಫಲಿತಾಂಶಗಳನ್ನು ಉಂಟುಮಾಡಿತು?
◻ 1914-18ರ ವರೆಗೆ ನಡೆದ ಘಟನೆಗಳು, ಅಭಿಷಿಕ್ತರನ್ನು ಪರೀಕ್ಷಿಸಲು ಹೇಗೆ ಕಾರ್ಯನಡಿಸಿದವು?
[ಪುಟ 13 ರಲ್ಲಿರುವ ಚಿತ್ರ]
ಒಂದು ರೆಕಾರ್ಡಿಂಗ್ಗಾಗಿ ಪೀಠಿಕೆಯನ್ನು ಒಳಗೊಂಡಿದ್ದ ಸಿ. ಟಿ. ರಸ್ಸಲರ ಪತ್ರ. ಅದರಲ್ಲಿ ಅವರು ಹೀಗೆ ಹೇಳಿದರು: “‘ಸೃಷ್ಟಿಯ ಫೋಟೊ-ಡ್ರಾಮ’ವು, ಐಬಿಎಸ್ಎ [ಇಂಟರ್ನ್ಯಾಷನಲ್ ಬೈಬಲ್ ಸ್ಟೂಡೆಂಟ್ಸ್ ಅಸೊಸಿಯೇಷನ್] ಅವರಿಂದ ಪ್ರಸ್ತುತಪಡಿಸಲ್ಪಡುತ್ತದೆ. ಅದರ ಗುರಿಯು, ಧಾರ್ಮಿಕ-ವೈಜ್ಞಾನಿಕ ವಿಷಯಗಳಿಗೆ ಹೊಂದಿಕೊಂಡು, ಸಾರ್ವಜನಿಕ ಉಪದೇಶ ಹಾಗೂ ಬೈಬಲಿನ ಸಂರಕ್ಷಣೆಯೇ ಆಗಿದೆ”
[ಪುಟ 12 ರಲ್ಲಿರುವ ಚಿತ್ರ]
ಇಪ್ಪತ್ತನೆಯ ಶತಮಾನವು ಆರಂಭವಾಗುವುದರೊಳಗೆ, ಅನೇಕ ದೇಶಗಳಲ್ಲಿನ ಜನರು “ಮಿಲೇನಿಯಲ್ ಡಾನ್” ಸರಣಿಗಳ—ತದನಂತರ “ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್” ಎಂದು ಕರೆಯಲ್ಪಟ್ಟಿತು—ಸಹಾಯದಿಂದ ಬೈಬಲನ್ನು ಅಭ್ಯಾಸಿಸುತ್ತಿದ್ದರು
[ಪುಟ 15 ರಲ್ಲಿರುವ ಚಿತ್ರ]
ಡಮೀಟ್ರೀಅಸ್ ಪಾಪಾಜಾರ್ಜ್ ಅವರು “ಸೃಷ್ಟಿಯ ಫೋಟೊ-ಡ್ರಾಮ”ವನ್ನು ತೋರಿಸುತ್ತಾ ಪ್ರಯಾಣಿಸಿದರು. ತದನಂತರ, ತಮ್ಮ ಕ್ರೈಸ್ತ ತಾಟಸ್ಥ್ಯದ ಕಾರಣ ಅವರು ಬಂಧಿಸಲ್ಪಟ್ಟರು