ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ಡಿಸೆಂಬರ್‌ ಪು. 10-14
  • “ದೇವರು ಒಟ್ಟುಗೂಡಿಸಿದ್ದನ್ನು” ಗೌರವಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ದೇವರು ಒಟ್ಟುಗೂಡಿಸಿದ್ದನ್ನು” ಗೌರವಿಸಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮದುವೆ ಜೀವನಕ್ಕೆ ಕಲ್ಲು ಬಿತ್ತು
  • ವಿಚ್ಛೇದನಕ್ಕೆ ಇರುವ ಒಂದೇ ಒಂದು ಕಾರಣ
  • ದೊಡ್ಡ ಸಮಸ್ಯೆ ಇದ್ದರೂ ಗೌರವಿಸಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ವಿವಾಹವು ಮುರಿದುಹೋಗುವ ಹಂತದಲ್ಲಿರುವುದಾದರೆ
    ಕುಟುಂಬ ಸಂತೋಷದ ರಹಸ್ಯ
  • ವಿವಾಹವನ್ನು ಏಕೆ ಪವಿತ್ರವಾದದ್ದಾಗಿ ಪರಿಗಣಿಸಬೇಕು?
    ಎಚ್ಚರ!—2004
  • ವಿವಾಹ ಜೀವನದ ಆರಂಭ ಮತ್ತು ಉದ್ದೇಶ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ಡಿಸೆಂಬರ್‌ ಪು. 10-14
ಯೇಸು ತನ್ನ ಸುತ್ತ ಇರುವ ಜನರ ಗುಂಪಿಗೆ ಕಲಿಸುತ್ತಿದ್ದಾನೆ

“ದೇವರು ಒಟ್ಟುಗೂಡಿಸಿದ್ದನ್ನು” ಗೌರವಿಸಿ

“ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.”—ಮಾರ್ಕ 10:9.

ಗೀತೆಗಳು: 36, 87

ನಿಮ್ಮ ಉತ್ತರವೇನು?

  • ಮದುವೆಯ ಬಗ್ಗೆ ಯೆಹೋವ ಮತ್ತು ಯೇಸುವಿಗೆ ಯಾವ ದೃಷ್ಟಿಕೋನ ಇದೆ?

  • ವಿವಾಹ ವಿಚ್ಛೇದನಕ್ಕಿರುವ ಒಂದೇ ಕಾರಣ ಏನು, ಆದರೆ ಕೆಲವರು ಯಾಕೆ ವಿಚ್ಛೇದನ ಕೊಡದೇ ಇರಬಹುದು?

  • ತನ್ನ ಸಂಗಾತಿಯಿಂದ ಪ್ರತ್ಯೇಕ ಆಗುವುದರ ಬಗ್ಗೆ ಯೋಚಿಸುತ್ತಿರುವ ವ್ಯಕ್ತಿ ಯಾವ ಸಲಹೆಯ ಬಗ್ಗೆ ಯೋಚನೆ ಮಾಡಬೇಕು?

1, 2. ಇಬ್ರಿಯ 13:4 ಏನು ಮಾಡಲು ನಮ್ಮನ್ನು ಪ್ರಚೋದಿಸಬೇಕು?

ನಾವೆಲ್ಲರೂ ಯೆಹೋವನನ್ನು ಗೌರವಿಸಲು ಇಷ್ಟಪಡುತ್ತೇವೆ. ಆತನು ಅದಕ್ಕೆ ಅರ್ಹನಾಗಿದ್ದಾನೆ. ನಾವು ಆತನನ್ನು ಗೌರವಿಸಿದರೆ, ಆತನು ನಮ್ಮನ್ನು ಗೌರವಿಸುತ್ತಾನೆ. (1 ಸಮು. 2:30; ಜ್ಞಾನೋ. 3:9; ಪ್ರಕ. 4:11) ನಾವು ಬೇರೆಯವರನ್ನು, ಉದಾಹರಣೆಗೆ ಸರ್ಕಾರೀ ಅಧಿಕಾರಿಗಳನ್ನು ಗೌರವಿಸಬೇಕೆಂದು ಯೆಹೋವನು ಹೇಳಿದ್ದಾನೆ. (ರೋಮ. 12:10; 13:7) ಆದರೆ ನಮ್ಮ ಜೀವನದ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ನಾವು ಗೌರವ ತೋರಿಸಲು ಕಲಿಯಬೇಕಾಗಿದೆ, ವಿವಾಹ ಬಂಧದಲ್ಲಿ.

2 “ವಿವಾಹವು ಎಲ್ಲರಲ್ಲಿಯೂ ಗೌರವಾರ್ಹವಾಗಿರಲಿ ಮತ್ತು ದಾಂಪತ್ಯದ ಹಾಸಿಗೆಯು ಮಾಲಿನ್ಯವಿಲ್ಲದ್ದಾಗಿರಲಿ” ಎಂದು ಅಪೊಸ್ತಲ ಪೌಲನು ಬರೆದಿದ್ದಾನೆ. (ಇಬ್ರಿ. 13:4) ಇಲ್ಲಿ ಪೌಲನು ಮನಸ್ಸಿಗೆ ತೋಚಿದ ವಿಚಾರವನ್ನು ಸುಮ್ಮನೆ ಹಾಗೆ ಹೇಳುತ್ತಿಲ್ಲ. ಕ್ರೈಸ್ತರು ವಿವಾಹವನ್ನು ಗೌರವಿಸಬೇಕು ಅಥವಾ ಅಮೂಲ್ಯವಾಗಿ ಕಾಣಬೇಕೆಂದು ಹೇಳುತ್ತಿದ್ದಾನೆ. ನೀವು ವಿವಾಹವನ್ನು ಅದೇ ರೀತಿಯಲ್ಲಿ ನೋಡುತ್ತೀರಾ? ಮದುವೆ ಆಗಿರುವವರಂತೂ ವಿವಾಹವನ್ನು ಗೌರವದಿಂದ ನೋಡಲೇಬೇಕು.

3. ವಿವಾಹದ ಬಗ್ಗೆ ಯೇಸು ಯಾವ ಪ್ರಾಮುಖ್ಯವಾದ ಬುದ್ಧಿವಾದ ಕೊಟ್ಟನು? (ಲೇಖನದ ಆರಂಭದ ಚಿತ್ರ ನೋಡಿ.)

3 ನೀವು ವಿವಾಹವನ್ನು ಅಮೂಲ್ಯವಾಗಿ ನೋಡುವುದಾದರೆ ಯೇಸುವಿನ ಉತ್ತಮ ಮಾದರಿಯನ್ನು ಅನುಕರಿಸುತ್ತಾ ಇದ್ದೀರಿ. ಆತನು ಸಹ ವಿವಾಹವನ್ನು ಗೌರವಿಸಿದನು. ಒಮ್ಮೆ ಫರಿಸಾಯರು ವಿವಾಹ ವಿಚ್ಛೇದನದ ಬಗ್ಗೆ ಯೇಸುವಿಗೆ ಕೇಳಿದರು. ಆಗ ಯೇಸು ಮೊದಲ ವಿವಾಹ ನಡೆದಾಗ ದೇವರು ಏನು ಹೇಳಿದನೆಂದು ತಿಳಿಸಿದನು: “ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಡುವನು ಮತ್ತು ಅವರಿಬ್ಬರು ಒಂದೇ ಶರೀರವಾಗಿರುವರು.” ಇದಕ್ಕೆ ಕೂಡಿಸುತ್ತಾ, “ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ” ಎಂದನು.—ಮಾರ್ಕ 10:2-12 ಓದಿ; ಆದಿ. 2:24.

4. ವಿವಾಹದ ಏರ್ಪಾಡನ್ನು ಜಾರಿಗೆ ತಂದಾಗ ಯೆಹೋವನ ಯೋಚನೆ ಏನಾಗಿತ್ತು?

4 ವಿವಾಹದ ಏರ್ಪಾಡನ್ನು ಜಾರಿಗೆ ತಂದವನು ದೇವರು ಮತ್ತು ಈ ಏರ್ಪಾಡು ಶಾಶ್ವತವಾಗಿರಬೇಕು ಎಂದು ಯೇಸು ಸಹ ಹೇಳಿದನು. ದೇವರು ಆದಾಮ-ಹವ್ವರಿಗೆ ಮದುವೆ ಮಾಡಿದಾಗ ಅವರು ಮುಂದೆ ವಿಚ್ಛೇದನ ಪಡೆಯಬಹುದು ಎಂದು ಹೇಳಲಿಲ್ಲ. ‘ಅವರಿಬ್ಬರ’ ವಿವಾಹ ಬಂಧ ಶಾಶ್ವತವಾಗಿರಬೇಕೆಂದು ಬಯಸಿದನು.

ಮದುವೆ ಜೀವನಕ್ಕೆ ಕಲ್ಲು ಬಿತ್ತು

5. ಮರಣದಿಂದಾಗಿ ಮದುವೆ ಮೇಲೆ ಯಾವ ಪರಿಣಾಮ ಆಯಿತು?

5 ಆದಾಮ ಪಾಪ ಮಾಡಿದಾಗ ತುಂಬ ವಿಷಯಗಳು ತಲೆಕೆಳಗಾಗಿ ಹೋಯಿತು. ಇದರಲ್ಲಿ ಒಂದು ಯಾವುದೆಂದರೆ, ಮಾನವರಿಗೆ ಸಾವು ಬಂತು. ಇದರಿಂದ ಮದುವೆ ಜೀವನದ ಮೇಲೆ ಕಾರ್ಮೋಡ ಕವಿಯಿತು. ಗಂಡ-ಹೆಂಡತಿಯಲ್ಲಿ ಒಬ್ಬರು ತೀರಿಕೊಂಡಾಗ ವಿವಾಹ ಬಂಧ ಮುರಿದುಬಿಡುತ್ತದೆ ಮತ್ತು ಬದುಕಿರುವ ಸಂಗಾತಿ ಪುನಃ ಮದುವೆ ಆಗಬಹುದೆಂದು ಅಪೊಸ್ತಲ ಪೌಲನು ಹೇಳಿದನು.—ರೋಮ. 7:1-3.

6. ವಿವಾಹವನ್ನು ದೇವರು ಅಮೂಲ್ಯವಾಗಿ ನೋಡುತ್ತಾನೆ ಎಂದು ಧರ್ಮಶಾಸ್ತ್ರದಿಂದ ಹೇಗೆ ಗೊತ್ತಾಗುತ್ತದೆ?

6 ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ ವಿವಾಹಕ್ಕೆ ಸಂಬಂಧಪಟ್ಟ ವಿಚಾರಗಳು ಇದ್ದವು. ಉದಾಹರಣೆಗೆ, ಒಬ್ಬ ಇಸ್ರಾಯೇಲ್ಯನು ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಳ್ಳಬಹುದಿತ್ತು. ದೇವರು ಧರ್ಮಶಾಸ್ತ್ರವನ್ನು ಕೊಡುವ ಎಷ್ಟೋ ಹಿಂದಿನಿಂದ ಈ ಪದ್ಧತಿ ಇತ್ತು. ಆದರೂ ಧರ್ಮಶಾಸ್ತ್ರದ ಮೂಲಕ ಸ್ತ್ರೀಯರಿಗೆ ಮತ್ತು ಮಕ್ಕಳಿಗೆ ಸಂರಕ್ಷಣೆ ಸಿಕ್ಕಿತು. ಉದಾಹರಣೆಗೆ, ಒಬ್ಬ ಇಸ್ರಾಯೇಲ್ಯನು ಒಬ್ಬ ದಾಸಿಯನ್ನು ಮದುವೆಯಾಗಿ ನಂತರ ಇನ್ನೊಂದು ಮದುವೆ ಮಾಡಿಕೊಂಡರೆ ಮೊದಲ ಹೆಂಡತಿಯನ್ನು ಕೈಬಿಡದೆ ಮುಂಚಿನ ತರನೇ ನೋಡಿಕೊಳ್ಳಬೇಕಿತ್ತು. ಅವಳನ್ನು ಸಂರಕ್ಷಿಸಿ ಅವಳ ಆವಶ್ಯಕತೆಗಳನ್ನು ಪೂರೈಸಬೇಕಿತ್ತು. (ವಿಮೋ. 21:9, 10) ನಾವಿಂದು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವುದಿಲ್ಲ. ಆದರೆ ವಿವಾಹದ ಬಗ್ಗೆ ದೇವರಿಗೆ ಯಾವ ದೃಷ್ಟಿಕೋನ ಇದೆ ಎಂದು ಧರ್ಮಶಾಸ್ತ್ರದ ಮೂಲಕ ಗೊತ್ತಾಗುತ್ತದೆ. ಇದರಿಂದ ನಾವು ಸಹ ವಿವಾಹವನ್ನು ಗೌರವಿಸಬೇಕೆಂದು ಅರ್ಥಮಾಡಿಕೊಳ್ಳುತ್ತೇವೆ.

7, 8. (ಎ) ವಿಚ್ಛೇದನದ ಬಗ್ಗೆ ಧರ್ಮೋಪದೇಶಕಾಂಡ 24:1​ರಲ್ಲಿ ಧರ್ಮಶಾಸ್ತ್ರ ಏನು ಹೇಳಿತ್ತು? (ಬಿ) ವಿಚ್ಛೇದನದ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ?

7 ವಿಚ್ಛೇದನದ ಬಗ್ಗೆ ಮೋಶೆಯ ಧರ್ಮಶಾಸ್ತ್ರ ಏನು ಹೇಳಿತ್ತು? ಗಂಡ-ಹೆಂಡತಿ ವಿಚ್ಛೇದನ ಪಡೆಯುವ ವಿಚಾರವೇ ದೇವರ ಮನಸ್ಸಲ್ಲಿ ಇರಲಿಲ್ಲ. ಆದರೂ ಒಬ್ಬ ಇಸ್ರಾಯೇಲ್ಯನು ತನ್ನ ಹೆಂಡತಿಯಲ್ಲಿ ‘ಅವಲಕ್ಷಣವಾದ ಏನನ್ನಾದರೂ ಕಂಡರೆ’ ತ್ಯಾಗಪತ್ರ ಅಂದರೆ ವಿಚ್ಛೇದನ ಕೊಡಬಹುದು ಎಂದು ಧರ್ಮಶಾಸ್ತ್ರ ಹೇಳಿತು. (ಧರ್ಮೋಪದೇಶಕಾಂಡ 24:1 ಓದಿ.) ಆ “ಅವಲಕ್ಷಣ” ಏನು ಎಂದು ಧರ್ಮಶಾಸ್ತ್ರ ಹೇಳಲಿಲ್ಲ. ಆದರೆ ಅದು ಯಾವುದೇ ಚಿಕ್ಕ ತಪ್ಪಲ್ಲ ಬದಲಿಗೆ ನಾಚಿಕೆ ಹುಟ್ಟಿಸುವಂಥ ದೊಡ್ಡ ತಪ್ಪು ಆಗಿರಲೇಬೇಕು. (ಧರ್ಮೋ. 23:14) ದುಃಖದ ವಿಷಯ ಏನೆಂದರೆ, ಯೇಸುವಿನ ಕಾಲದಷ್ಟಕ್ಕೆ ಅನೇಕ ಯೆಹೂದ್ಯರು “ಯಾವುದೇ ಕಾರಣಕ್ಕಾಗಿ” ಅಂದರೆ ಚಿಕ್ಕಪುಟ್ಟ ಕಾರಣಗಳನ್ನೂ ನೆಪ ಮಾಡಿಕೊಂಡು ಹೆಂಡತಿಗೆ ವಿಚ್ಛೇದನ ಕೊಡುತ್ತಿದ್ದರು. (ಮತ್ತಾ. 19:3) ಇಂಥ ಮನೋಭಾವವನ್ನು ನಾವು ಬೆಳೆಸಿಕೊಳ್ಳಲು ಖಂಡಿತ ಇಷ್ಟಪಡಲ್ಲ.

8 ಪ್ರವಾದಿಯಾದ ಮಲಾಕಿಯನ ಕಾಲದಲ್ಲಿ ಒಬ್ಬ ಪುರುಷ ತನ್ನ ಮೊದಲ ಹೆಂಡತಿಗೆ ವಿಚ್ಛೇದನ ಕೊಡುವುದು ಮಾಮೂಲಿ ಆಗಿಬಿಟ್ಟಿತ್ತು. ಅವನು ತನ್ನ ಹೆಂಡತಿಗಿಂತ ಚಿಕ್ಕ ವಯಸ್ಸಿನ, ಯೆಹೋವನ ಆರಾಧಕಳಲ್ಲದ ಹುಡುಗಿಯನ್ನು ಮದುವೆಯಾಗುವ ಉದ್ದೇಶದಿಂದ ಹೀಗೆ ಮಾಡಿರಬಹುದು. ಆದರೆ ಇಂಥ ವಿಚ್ಛೇದನದ ಬಗ್ಗೆ ತನಗೆ ಹೇಗನಿಸುತ್ತದೆ ಎಂದು ದೇವರು ಸ್ಪಷ್ಟವಾಗಿ ಹೇಳಿದನು: ‘ನಾನು ಪತ್ನೀತ್ಯಾಗವನ್ನು ಹಗೆಮಾಡುತ್ತೇನೆ.’ (ಮಲಾ. 2:14-16) ದೇವರು ಆದಾಮ-ಹವ್ವರನ್ನು ಸೃಷ್ಟಿಮಾಡಿದಾಗ ಪುರುಷನು “ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು” ಎಂದು ಹೇಳಿದನು. ವಿವಾಹದ ಬಗ್ಗೆ ದೇವರ ಆ ದೃಷ್ಟಿಕೋನ ಇಂದಿಗೂ ಬದಲಾಗಿಲ್ಲ. (ಆದಿ. 2:24) ಯೇಸು ತನ್ನ ತಂದೆಯ ದೃಷ್ಟಿಕೋನವನ್ನು ಬೆಂಬಲಿಸುತ್ತಾ ಹೇಳಿದ್ದು: “ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.”—ಮತ್ತಾ. 19:6.

ಇಸ್ರಾಯೇಲ್‌ ಮಾಡಿದ ವ್ಯಭಿಚಾರಕ್ಕೆ ದೇವರ ಪ್ರತಿಕ್ರಿಯೆ

ಇಸ್ರಾಯೇಲ್‌ ಮತ್ತು ಯೆಹೂದದ ಜನರು ಯೆಹೋವನಿಗೆ ನಂಬಿಕೆದ್ರೋಹ ಮಾಡಿದರು. ಬೇರೆ ದೇವರುಗಳನ್ನು ಆರಾಧಿಸುತ್ತಿದ್ದ ಜನಾಂಗಗಳ ಜೊತೆ ಮೈತ್ರಿ ಮಾಡಿಕೊಂಡು ಸುಳ್ಳು ದೇವರುಗಳನ್ನು ಆರಾಧಿಸಿದರು. ಅವರು ‘ಕಲ್ಲುಮರಗಳೊಡನೆ ಹಾದರಮಾಡಿದ್ದರಿಂದ’ ದೇವರು ಅವರನ್ನು ಖಂಡಿಸಿದನು. (ಯೆರೆ. 2:13, 20; 3:1-3, 9; ಹೋಲಿಸಿ ಯೆಹೆಜ್ಕೇಲ 16:28; ಯಾಕೋಬ 4:4.) ಅವರು ಬದಲಾಗದೆ ಇದ್ದದರಿಂದ, ವ್ಯಭಿಚಾರ ಮಾಡುವ ಹೆಂಡತಿ ತರ ನಡಕೊಂಡದ್ದರಿಂದ ದೇವರು ಒಂದು ತೀರ್ಮಾನ ತೆಗೆದುಕೊಂಡನು. ಆತನಂದದ್ದು: ‘ಭ್ರಷ್ಟಳಾದ ಇಸ್ರಾಯೇಲು ಹಾದರಮಾಡಿದ ಕಾರಣದಿಂದಲೇ ನಾನು ಅವಳನ್ನು ನಿರಾಕರಿಸಿ ತ್ಯಾಗಪತ್ರ ಕೊಟ್ಟೆನು.’—ಯೆರೆ. 3:6-8.

ವಿಚ್ಛೇದನಕ್ಕೆ ಇರುವ ಒಂದೇ ಒಂದು ಕಾರಣ

9. ಮಾರ್ಕ 10:11, 12​ರಲ್ಲಿ ಯೇಸು ಹೇಳಿದ ಮಾತಿನ ಅರ್ಥವೇನು?

9 ‘ಒಬ್ಬ ಕ್ರೈಸ್ತನು ವಿಚ್ಛೇದನ ಕೊಟ್ಟು ಇನ್ನೊಬ್ಬರನ್ನು ಮದುವೆಯಾಗಲು ಸಾಧ್ಯನಾ?’ ಎಂದು ಕೆಲವರು ಕೇಳಬಹುದು. ಯೇಸು ಏನು ಹೇಳಿದನು ನೋಡಿ: “ತನ್ನ ಹೆಂಡತಿಗೆ ವಿಚ್ಛೇದನ ನೀಡಿ ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ಅವಳ ವಿರುದ್ಧ ವ್ಯಭಿಚಾರ ಮಾಡುವವನಾಗಿದ್ದಾನೆ. ಮತ್ತು ಒಬ್ಬ ಸ್ತ್ರೀಯು ತನ್ನ ಗಂಡನಿಗೆ ವಿಚ್ಛೇದನ ನೀಡಿ ಇನ್ನೊಬ್ಬನನ್ನು ಮದುವೆಮಾಡಿಕೊಂಡರೆ ಅವಳು ವ್ಯಭಿಚಾರ ಮಾಡುವವಳಾಗಿದ್ದಾಳೆ.” (ಮಾರ್ಕ 10:11, 12; ಲೂಕ 16:18) ಈ ಮಾತುಗಳಿಂದ ಏನು ಗೊತ್ತಾಗುತ್ತದೆ? ಯೇಸು ವಿವಾಹ ಬಂಧವನ್ನು ಗೌರವಿಸುತ್ತಾನೆ ಮತ್ತು ಬೇರೆಯವರೂ ಗೌರವಿಸಬೇಕು ಎಂದು ಬಯಸುತ್ತಾನೆ. ಗಂಡ ತನಗೆ ನಿಷ್ಠೆಯಿಂದ ಇರುವ ಹೆಂಡತಿಗೆ ವಿಚ್ಛೇದನ ಕೊಟ್ಟು ಬೇರೆ ಮದುವೆಮಾಡಿಕೊಂಡರೆ ಅದು ವ್ಯಭಿಚಾರ ಆಗುತ್ತದೆ. ಅದೇ ರೀತಿ ಹೆಂಡತಿ ಮಾಡಿದರೂ ವ್ಯಭಿಚಾರನೇ. ಯಾಕೆಂದರೆ ವಿಚ್ಛೇದನ ಕೊಟ್ಟ ಮಾತ್ರಕ್ಕೆ ಮದುವೆ ಬಂಧ ಕೊನೆಯಾಗಲ್ಲ. ದೇವರ ದೃಷ್ಟಿಯಲ್ಲಿ ಆ ಗಂಡ-ಹೆಂಡತಿ ಇನ್ನೂ “ಒಂದೇ ಶರೀರ” ಆಗಿರುತ್ತಾರೆ. ಅಷ್ಟೇ ಅಲ್ಲ, ಏನೂ ತಪ್ಪು ಮಾಡದಿರುವ ಹೆಂಡತಿಗೆ ವಿಚ್ಛೇದನ ಕೊಟ್ಟರೆ ಅವಳು ವ್ಯಭಿಚಾರ ಮಾಡುವ ಅಪಾಯ ಇದೆ ಎಂದೂ ಯೇಸು ಹೇಳಿದನು. ಅದು ಹೇಗೆ? ಹಣಕಾಸಿನ ಅಗತ್ಯ ಇರುವುದರಿಂದ ತಾನು ಇನ್ನೊಂದು ಮದುವೆ ಆಗಬೇಕು ಎಂದು ಅವಳು ಯೋಚಿಸಬಹುದು. ಈ ರೀತಿಯ ಮದುವೆ ಕೂಡ ವ್ಯಭಿಚಾರ ಆಗಿದೆ.

ವಿಚ್ಛೇದನ ಕೊಡಲು ಬೈಬಲಲ್ಲಿರುವ ಒಂದೇ ಒಂದು ಕಾರಣ

ಒಬ್ಬ ವ್ಯಕ್ತಿ ತನ್ನ ಸಂಗಾತಿಗೆ ವಿಚ್ಛೇದನ ಕೊಟ್ಟು ಇನ್ನೊಂದು ಮದುವೆಯಾಗಲು ಒಂದೇ ಕಾರಣ ಪೋರ್ನಿಯ ಎಂದು ಯೇಸು ಎರಡು ಸಲ ಹೇಳಿದನು. ಆ ಗ್ರೀಕ್‌ ಪದದ ಅರ್ಥವೇನು? ಬೈಬಲ್‌ ಹೇಳುವ ಪ್ರಕಾರ ಮದುವೆಯಾಗಿಲ್ಲದ ಇಬ್ಬರು ನಡೆಸುವ ಲೈಂಗಿಕ ಕ್ರಿಯೆಗೆ ಇದು ಸೂಚಿಸುತ್ತದೆ. ಇದರಲ್ಲಿ ಲೈಂಗಿಕ ಸಂಬಂಧ, ಬಾಯಿ ಮತ್ತು ಗುದದ್ವಾರದ ಮೂಲಕ ನಡೆಸುವ ಸೆಕ್ಸ್‌, ಲೈಂಗಿಕವಾಗಿ ಇನ್ನೊಬ್ಬರ ಜನನಾಂಗಗಳನ್ನು ಉದ್ರೇಕಿಸುವುದು ಸೇರಿದೆ.—2009 ಜುಲೈ 15​ರ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” ನೋಡಿ.

10. ವಿಚ್ಛೇದನ ಕೊಟ್ಟು ಇನ್ನೊಬ್ಬರನ್ನು ಮದುವೆಯಾಗಲು ಕ್ರೈಸ್ತರಿಗಿರುವ ಒಂದೇ ಒಂದು ಕಾರಣ ಯಾವುದು?

10 ಒಂದೇ ಒಂದು ಕಾರಣಕ್ಕೆ ಒಬ್ಬ ವ್ಯಕ್ತಿ ವಿಚ್ಛೇದನ ಕೊಡಬಹುದು ಎಂದು ಯೇಸು ಹೇಳಿದ್ದಾನೆ. ಆತನು ಹೇಳಿದ್ದು: “ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಗೆ ವಿಚ್ಛೇದನ ನೀಡಿ ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ ಎಂದು ನಿಮಗೆ ಹೇಳುತ್ತೇನೆ.” (ಮತ್ತಾ. 19:9) ಇದೇ ವಿಷಯವನ್ನು ಪರ್ವತ ಪ್ರಸಂಗದಲ್ಲೂ ಹೇಳಿದನು. (ಮತ್ತಾ. 5:31, 32) ಈ ಎರಡೂ ಸಂದರ್ಭಗಳಲ್ಲಿ ಯೇಸು ‘ಹಾದರ’ ಅಥವಾ ಲೈಂಗಿಕ ಅನೈತಿಕತೆಯ ಬಗ್ಗೆ ಹೇಳಿದನು. ಲೈಂಗಿಕ ಅನೈತಿಕತೆಯಲ್ಲಿ ವ್ಯಭಿಚಾರ, ವೇಶ್ಯಾವಾಟಿಕೆ, ಅವಿವಾಹಿತರ ನಡುವಿನ ಲೈಂಗಿಕ ಸಂಬಂಧ, ಸಲಿಂಗಕಾಮ, ಪಶುವಿನ ಜೊತೆ ನಡೆಸುವ ಲೈಂಗಿಕ ಕ್ರಿಯೆಯಂಥ ಪಾಪಗಳು ಸೇರಿವೆ. ಉದಾಹರಣೆಗೆ, ಗಂಡ ಅನೈತಿಕತೆ ನಡೆಸಿದರೆ ಅವನಿಗೆ ವಿಚ್ಛೇದನ ಕೊಡಬೇಕಾ ಬೇಡ್ವಾ ಅನ್ನುವುದು ಹೆಂಡತಿಗೆ ಬಿಟ್ಟಿದ್ದು. ಒಂದುವೇಳೆ ಅವಳು ವಿಚ್ಛೇದನ ಕೊಟ್ಟರೆ ಅವರಿಬ್ಬರು ಇನ್ನುಮುಂದೆ ದೇವರ ದೃಷ್ಟಿಯಲ್ಲಿ ಗಂಡ-ಹೆಂಡತಿ ಆಗಿರಲ್ಲ.

11. ತನ್ನ ಸಂಗಾತಿ ಲೈಂಗಿಕ ಅನೈತಿಕತೆ ನಡೆಸಿದರೂ ಯಾವ ಕಾರಣಗಳಿಗಾಗಿ ಒಬ್ಬರು ವಿಚ್ಛೇದನ ಕೊಡದೆ ಇರುವ ತೀರ್ಮಾನ ಮಾಡಬಹುದು?

11 ಲೈಂಗಿಕ ಅನೈತಿಕತೆ ನಡೆಸಿದ ಸಂಗಾತಿಗೆ ವಿಚ್ಛೇದನ ಕೊಡಲೇಬೇಕು ಎಂದು ಯೇಸು ಹೇಳುತ್ತಿಲ್ಲ. ಉದಾಹರಣೆಗೆ, ಗಂಡ ಅನೈತಿಕತೆಯಲ್ಲಿ ಒಳಗೂಡಿದರೂ ಹೆಂಡತಿ ಅವನ ಜೊತೆನೇ ಬಾಳುವ ನಿರ್ಧಾರ ಮಾಡಬಹುದು. ಯಾಕೆ? ಅವಳಿಗಿನ್ನೂ ಅವನ ಮೇಲೆ ಪ್ರೀತಿ ಇರಬಹುದು ಮತ್ತು ಅವನನ್ನು ಕ್ಷಮಿಸಿ ಮದುವೆ ಜೀವನದಲ್ಲಿ ಆಗಿರುವ ಏರುಪೇರುಗಳನ್ನು ತನ್ನ ಗಂಡನ ಜೊತೆ ಸೇರಿ ಸರಿಪಡಿಸಲು ಮನಸ್ಸಿರಬಹುದು. ಒಂದುವೇಳೆ ಅವಳು ವಿಚ್ಛೇದನ ಕೊಟ್ಟು ಇನ್ನೊಂದು ಮದುವೆ ಮಾಡಿಕೊಳ್ಳದೆ ಇದ್ದರೆ ಮುಂದೆ ಕೆಲವು ಕಷ್ಟಗಳು ಬರಬಹುದು. ಉದಾಹರಣೆಗೆ, ಅವಳ ಶಾರೀರಿಕ ಮತ್ತು ಲೈಂಗಿಕ ಅಗತ್ಯಗಳ ಬಗ್ಗೆ ಏನು? ಒಂಟಿಯಾಗಿ ಜೀವನ ಮಾಡಲು ಅವಳಿಂದ ಆಗುತ್ತಾ? ಮಕ್ಕಳ ಗತಿ ಏನು? ಸತ್ಯದಲ್ಲಿ ಅವರನ್ನು ಬೆಳೆಸಲು ಇನ್ನೂ ಕಷ್ಟ ಆಗುತ್ತಾ? (1 ಕೊರಿಂ. 7:14) ವಿಚ್ಛೇದನ ಕೊಡುವುದರಿಂದ ತಪ್ಪು ಮಾಡದಿರುವ ಸಂಗಾತಿಗೆ ದೊಡ್ಡ-ದೊಡ್ಡ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

12, 13. (ಎ) ಹೋಶೇಯನ ಮದುವೆ ಜೀವನದಲ್ಲಿ ಏನಾಯಿತು? (ಬಿ) ಹೋಶೇಯನು ಗೋಮೆರಳನ್ನು ಪುನಃ ಸೇರಿಸಿಕೊಂಡದ್ದು ಯಾಕೆ ಮತ್ತು ಇದರಿಂದ ನಾವೇನು ತಿಳಿದುಕೊಳ್ಳಬಹುದು?

12 ದೇವರಿಗೆ ವಿವಾಹದ ಬಗ್ಗೆ ಇರುವ ದೃಷ್ಟಿಕೋನವನ್ನು ನಾವು ಪ್ರವಾದಿ ಹೋಶೇಯನ ಮದುವೆ ಜೀವನದಿಂದ ತಿಳಿದುಕೊಳ್ಳಬಹುದು. ದೇವರು ಹೋಶೇಯನಿಗೆ ಮುಂದೆ “ವ್ಯಭಿಚಾರಿಣಿ” ಆಗಲಿದ್ದ ಮತ್ತು ‘ವ್ಯಭಿಚಾರದಿಂದ ಮಕ್ಕಳನ್ನು ಹೆರಲಿದ್ದ’ ಗೋಮೆರ ಎಂಬ ಸ್ತ್ರೀಯನ್ನು ಮದುವೆಯಾಗುವಂತೆ ಹೇಳಿದನು. ಹೋಶೇಯ ಮತ್ತು ಗೋಮೆರಳಿಗೆ ಒಬ್ಬ ಮಗ ಹುಟ್ಟಿದನು. (ಹೋಶೇ. 1:2, 3) ನಂತರ ಗೋಮೆರಳಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಹುಟ್ಟಿದರು. ಇವರು ಬೇರೆ ಪುರುಷನಿಂದ ಹುಟ್ಟಿದ ಮಕ್ಕಳಾಗಿರಬೇಕು. ಅವಳು ಪದೇಪದೇ ವ್ಯಭಿಚಾರ ಮಾಡಿದರೂ ಹೋಶೇಯನು ಅವಳ ಜೊತೆನೇ ಬಾಳಿದನು. ಆದರೆ ಅವಳು ಹೋಶೇಯನನ್ನು ಬಿಟ್ಟು ಹೋದಳು ಮತ್ತು ದಾಸಿಯಾದಳು. ಆಗ ಕೂಡ ಅವನು ಅವಳನ್ನು ಕರಕೊಂಡು ಬಂದನು. (ಹೋಶೇ. 3:1, 2) ಯೆಹೋವನು ಹೋಶೇಯನ ಮೂಲಕ ಏನು ತೋರಿಸಿಕೊಟ್ಟನು? ಇಸ್ರಾಯೇಲ್ಯರು ಬೇರೆ ದೇವರುಗಳನ್ನು ಆರಾಧನೆ ಮಾಡಿ ತಪ್ಪುಮಾಡಿದಾಗೆಲ್ಲ ತಾನು ಅವರನ್ನು ಪದೇಪದೇ ಕ್ಷಮಿಸಿದ್ದೇನೆಂದು ತೋರಿಸಿಕೊಟ್ಟನು. ಹೋಶೇಯನ ಮದುವೆ ಜೀವನದಿಂದ ನಾವೇನು ಕಲಿಯುತ್ತೇವೆ?

13 ಒಬ್ಬ ಕ್ರೈಸ್ತ ಸಂಗಾತಿ ಅನೈತಿಕತೆ ನಡೆಸಿದರೆ ಅನ್ಯಾಯವಾಗಿರುವ ಸಂಗಾತಿಗೆ ಒಂದು ನಿರ್ಧಾರ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಯೇಸು ಹೇಳಿದಂತೆ ಆ ಸಂಗಾತಿಗೆ ವಿಚ್ಛೇದನ ಕೊಡಲು ಮತ್ತು ಇನ್ನೊಂದು ಮದುವೆಯಾಗಲು ಸರಿಯಾದ ಕಾರಣ ಇದೆ. ಆದರೂ ತಪ್ಪು ಮಾಡಿರುವ ತನ್ನ ಸಂಗಾತಿಯನ್ನು ಕ್ಷಮಿಸಿದರೆ ಅದರಲ್ಲಿ ಏನೂ ತಪ್ಪಿಲ್ಲ. ತಪ್ಪು ಮಾಡಿದ ಗೋಮೆರಳನ್ನು ಹೋಶೇಯನು ಪುನಃ ಸೇರಿಸಿಕೊಂಡನು. ಅವನು ಅವಳಿಗೆ ಇನ್ನು ಮುಂದೆ ಬೇರೆ ಪುರುಷರ ಜೊತೆ ಸಂಬಂಧ ಇಟ್ಟುಕೊಳ್ಳಬಾರದು ಎಂದು ತಿಳಿಹೇಳಿದನು. ಹೋಶೇಯ ಸ್ವಲ್ಪ ಸಮಯ ಗೋಮೆರಳ ಜೊತೆ ಲೈಂಗಿಕ ಸಂಬಂಧ ಇಟ್ಟುಕೊಂಡಿರಲಿಲ್ಲ. (ಹೋಶೇ. 3:3) ಆದರೆ ಸಮಯ ಹೋದಂತೆ, ಅವನು ಮತ್ತೆ ಅವಳ ಜೊತೆ ಲೈಂಗಿಕ ಸಂಬಂಧದಲ್ಲಿ ಒಳಗೂಡಿರಬೇಕು. ಇದು ತಪ್ಪು ಮಾಡಿದ ಇಸ್ರಾಯೇಲ್ಯರನ್ನು ದೇವರು ಸ್ವೀಕರಿಸಿ ಅವರ ಜೊತೆ ಪುನಃ ಒಳ್ಳೇ ಸಂಬಂಧ ಮುಂದುವರಿಸುತ್ತಾನೆ ಅನ್ನುವುದನ್ನು ಸೂಚಿಸಿತ್ತು. (ಹೋಶೇ. 1:11; 3:3-5) ಈ ವಿಷಯದಿಂದ ನಾವೇನು ತಿಳಿದುಕೊಳ್ಳಬಹುದು? ತಪ್ಪು ಮಾಡಿರುವ ಸಂಗಾತಿ ಜೊತೆ ಅನ್ಯಾಯವಾಗಿರುವ ಸಂಗಾತಿ ಮತ್ತೆ ಲೈಂಗಿಕತೆಯಲ್ಲಿ ಒಳಗೂಡಿದರೆ ನಡೆದ ತಪ್ಪನ್ನು ಕ್ಷಮಿಸಿದ್ದಾರೆ ಎಂದರ್ಥ. (1 ಕೊರಿಂ. 7:3, 5) ಇದರ ನಂತರ ಆ ತಪ್ಪನ್ನು ಆಧಾರವಾಗಿಟ್ಟು ವಿಚ್ಛೇದನ ಕೊಡಲು ಸಾಧ್ಯವಿಲ್ಲ. ದೇವರು ವಿವಾಹ ಬಂಧವನ್ನು ಹೇಗೆ ಗೌರವಿಸುತ್ತಾನೋ ಅದೇ ರೀತಿ ಅವರಿಬ್ಬರೂ ಗೌರವಿಸಲು ಒಬ್ಬರಿಗೊಬ್ಬರು ಸಹಕಾರ ನೀಡಬೇಕು.

ದೊಡ್ಡ ಸಮಸ್ಯೆ ಇದ್ದರೂ ಗೌರವಿಸಿ

14. ಕೆಲವೊಮ್ಮೆ ವಿವಾಹದಲ್ಲಿ ಏನಾಗುತ್ತದೆ ಎಂದು 1 ಕೊರಿಂಥ 7:10, 11 ಹೇಳುತ್ತದೆ?

14 ಯೆಹೋವ ಮತ್ತು ಯೇಸು ವಿವಾಹವನ್ನು ಮಾನ್ಯಮಾಡುವಂತೆ ಎಲ್ಲ ಕ್ರೈಸ್ತರೂ ಮಾನ್ಯಮಾಡಬೇಕು. ಆದರೆ ಅಪರಿಪೂರ್ಣರಾಗಿರುವ ಕಾರಣ ಕೆಲವರು ಇದನ್ನು ಮಾಡುತ್ತಿಲ್ಲ. (ರೋಮ. 7:18-23) ಒಂದನೇ ಶತಮಾನದಲ್ಲಿದ್ದ ಕ್ರೈಸ್ತರ ವಿವಾಹದಲ್ಲೂ ಗಂಭೀರವಾದ ಸಮಸ್ಯೆಗಳಿದ್ದವು. ಆದ್ದರಿಂದ ಪೌಲನು, “ಹೆಂಡತಿಯು ತನ್ನ ಗಂಡನನ್ನು ಬಿಟ್ಟು ಅಗಲಬಾರದು” ಎಂದು ಹೇಳಿದನು. ಆದರೂ ಕೆಲವು ಗಂಡ-ಹೆಂಡತಿ ಅಗಲುತ್ತಾರೆ ಅಥವಾ ಪ್ರತ್ಯೇಕವಾಗುತ್ತಾರೆ.—1 ಕೊರಿಂಥ 7:10, 11 ಓದಿ.

ಒಂದು ದಂಪತಿಗೆ ಇಬ್ಬರು ಹಿರಿಯರು ಬೈಬಲಿಂದ ಬುದ್ಧಿವಾದ ಹೇಳುತ್ತಿದ್ದಾರೆ

ಗಂಡ-ಹೆಂಡತಿಯ ಮಧ್ಯೆ ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ ಅದನ್ನು ಹೇಗೆ ಬಗೆಹರಿಸಬಹುದು? (ಪ್ಯಾರ 15 ನೋಡಿ)

15, 16. (ಎ) ಸಂಸಾರದಲ್ಲಿ ಸಮಸ್ಯೆಯಾದಾಗ ಗಂಡ-ಹೆಂಡತಿಯ ಗುರಿ ಏನಾಗಿರಬೇಕು? ಯಾಕೆ? (ಬಿ) ಯೆಹೋವನ ಆರಾಧಕನಲ್ಲದ ಒಬ್ಬ ವ್ಯಕ್ತಿಯನ್ನು ಮದುವೆಯಾಗಿರುವ ಕ್ರೈಸ್ತರಿಗೆ ಇದು ಹೇಗೆ ಅನ್ವಯಿಸುತ್ತದೆ?

15 ಯಾವ ಕಾರಣಕ್ಕಾಗಿ ಗಂಡ-ಹೆಂಡತಿ ಒಬ್ಬರಿಂದ ಒಬ್ಬರು ಅಗಲಬಹುದು ಎಂದು ಪೌಲ ಹೇಳಲಿಲ್ಲ. ಆದರೆ ಅದಕ್ಕೆ ಕಾರಣ ಲೈಂಗಿಕ ಅನೈತಿಕತೆ ಅಲ್ಲ ಎಂದು ನಾವು ಹೇಳಬಹುದು. ಯಾಕೆಂದರೆ ಹಾಗೇನಾದರೂ ಇದ್ದಿದ್ದರೆ ವಿಚ್ಛೇದನ ಕೊಟ್ಟು ಇನ್ನೊಂದು ಮದುವೆಯಾಗಲು ಹೆಂಡತಿಗೆ ಸರಿಯಾದ ಕಾರಣವಿತ್ತು. ಆದರೆ ಪೌಲನು ಹೇಳಿದ್ದು: “ಒಂದುವೇಳೆ ಅಗಲಬೇಕಾದರೂ ಅವಳು ಮದುವೆಯಾಗದೇ ಉಳಿಯಲಿ ಅಥವಾ ತನ್ನ ಗಂಡನೊಂದಿಗೆ ಪುನಃ ಸಮಾಧಾನಮಾಡಿಕೊಳ್ಳಲಿ.” ಯಾಕೆಂದರೆ ಪ್ರತ್ಯೇಕವಾದ ದಂಪತಿ ದೇವರ ದೃಷ್ಟಿಯಲ್ಲಿ ಇನ್ನೂ ಗಂಡ-ಹೆಂಡತಿ ಆಗಿರುತ್ತಾರೆ. ಒಬ್ಬ ಗಂಡನಾಗಲಿ ಹೆಂಡತಿಯಾಗಲಿ ಅನೈತಿಕತೆಯಲ್ಲಿ ಒಳಗೂಡಲಿಲ್ಲ ಅಂದಮೇಲೆ ಅವರ ಮಧ್ಯೆ ಅದೇನೇ ಸಮಸ್ಯೆ ಇದ್ದರೂ ‘ಸಮಾಧಾನಮಾಡಿಕೊಳ್ಳಬೇಕು’ ಅಂದರೆ ಸಮಸ್ಯೆ ಬಗೆಹರಿಸಿ ಒಟ್ಟಿಗೆ ಜೀವನ ಮಾಡಬೇಕು ಎಂದು ಪೌಲ ಹೇಳಿದನು. ಅವರು ಸಭೆಯ ಹಿರಿಯರ ಸಹಾಯ ಕೇಳಬಹುದು. ಹಿರಿಯರು ಯಾರ ಪರನೂ ವಹಿಸದೆ ಬೈಬಲಿಂದ ಬುದ್ಧಿವಾದ ಕೊಡುತ್ತಾರೆ.

16 ಆದರೆ ಯೆಹೋವನ ಆರಾಧಕನಲ್ಲದ ಒಬ್ಬ ವ್ಯಕ್ತಿಯನ್ನು ಮದುವೆಯಾಗಿರುವ ಕ್ರೈಸ್ತರ ಸಂಸಾರದಲ್ಲಿ ಸಮಸ್ಯೆಯಾದರೆ ಏನು ಮಾಡಬಹುದು? ಸಮಸ್ಯೆಗಳು ಬಂದಾಗ ಅವರಿಬ್ಬರು ಪ್ರತ್ಯೇಕವಾಗಿ ವಾಸಿಸುವುದು ಸರಿನಾ? ಈಗಾಗಲೇ ನಾವು ನೋಡಿದಂತೆ, ವಿಚ್ಛೇದನಕ್ಕಿರುವ ಒಂದೇ ಒಂದು ಕಾರಣ ಲೈಂಗಿಕ ಅನೈತಿಕತೆ ಎಂದು ಬೈಬಲ್‌ ಹೇಳುತ್ತದೆ. ಆದರೆ ಯಾವ ಕಾರಣಗಳಿಂದಾಗಿ ಗಂಡ-ಹೆಂಡತಿ ಪ್ರತ್ಯೇಕವಾಗಿ ವಾಸಮಾಡಬಹುದು ಎಂದು ಬೈಬಲ್‌ ಹೇಳುವುದಿಲ್ಲ. ಪೌಲ ಬರೆದಿದ್ದು: “ಒಬ್ಬ ಸ್ತ್ರೀಗೆ ಅವಿಶ್ವಾಸಿಯಾದ ಗಂಡನಿದ್ದು ಅವನು ಅವಳೊಂದಿಗೆ ಬಾಳಲು ಸಮ್ಮತಿಸುವುದಾದರೆ ಅವಳು ತನ್ನ ಗಂಡನನ್ನು ಬಿಡದಿರಲಿ.” (1 ಕೊರಿಂ. 7:12, 13) ಈ ಬುದ್ಧಿವಾದ ಇಂದಿಗೂ ಅನ್ವಯವಾಗುತ್ತದೆ.

17, 18. ತಮ್ಮ ಸಂಗಾತಿ ಜೊತೆ ಜೀವಿಸಲು ಕಷ್ಟವಾಗುತ್ತಿದ್ದರೂ ಕೆಲವರು ಒಟ್ಟಿಗಿರಲು ಯಾಕೆ ನಿರ್ಧರಿಸಿದ್ದಾರೆ?

17 ಆದರೆ ಕೆಲವೊಮ್ಮೆ ಯೆಹೋವನ ಆರಾಧಕನಲ್ಲದ ಗಂಡನು ಒಟ್ಟಿಗೆ ‘ಬಾಳಲು ಸಮ್ಮತಿಸುವ’ ರೀತಿಯಲ್ಲಿ ನಡಕೊಳ್ಳುವುದಿಲ್ಲ. ಉದಾಹರಣೆಗೆ, ಅವನು ಹೆಂಡತಿಯನ್ನು ತುಂಬ ಹೊಡೆಯಬಹುದು. ಇದರಿಂದ ಅವಳ ಆರೋಗ್ಯ ಅಥವಾ ಜೀವಕ್ಕೇ ಅಪಾಯ ಬರಬಹುದೆಂದು ಅವಳಿಗೆ ಅನಿಸಬಹುದು. ಅವನು ಅವಳನ್ನೂ ಕುಟುಂಬವನ್ನೂ ನೋಡಿಕೊಳ್ಳದೆ ಇರಬಹುದು ಅಥವಾ ದೇವರ ಸೇವೆ ಮಾಡಕ್ಕೆ ಬಿಡದೆ ಕಾಟ ಕೊಡಬಹುದು. ಅಂಥ ಸಮಯದಲ್ಲಿ ಕ್ರೈಸ್ತಳಾದ ಪತ್ನಿ ಪ್ರತ್ಯೇಕವಾಗಿ ಇರಲು ತೀರ್ಮಾನಿಸಬಹುದು. ಇದರ ಬಗ್ಗೆ ಅವಳ ಗಂಡ ಏನೇ ಹೇಳಿದರೂ ‘ಅವನು ಬಾಳಲು ಸಮ್ಮತಿಸುವ’ ರೀತಿಯಲ್ಲಿ ನಡಕೊಳ್ಳದೇ ಇರುವುದರಿಂದ ಪತ್ನಿ ಪ್ರತ್ಯೇಕವಾಗುವ ನಿರ್ಧಾರ ಮಾಡಬಹುದು. ಆದರೆ ಕೆಲವು ಕ್ರೈಸ್ತರು ಇಂಥ ಸನ್ನಿವೇಶದಲ್ಲೂ ಸಂಗಾತಿ ಜೊತೆ ಬಾಳಲು ನಿರ್ಧರಿಸಿದ್ದಾರೆ. ಅವರು ತಾಳ್ಮೆಯಿಂದ ಇದ್ದಾರೆ ಮತ್ತು ಮದುವೆ ಜೀವನದಲ್ಲಿ ಸುಧಾರಣೆ ತರಲು ಶ್ರಮಿಸಿದ್ದಾರೆ. ಯಾಕೆ ಈ ನಿರ್ಧಾರ ತೆಗೆದುಕೊಂಡರು?

18 ಇಂಥ ಸನ್ನಿವೇಶದಿಂದಾಗಿ ಪ್ರತ್ಯೇಕವಾಗಿ ಇದ್ದರೂ ಅವರು ಇನ್ನೂ ಗಂಡ-ಹೆಂಡತಿನೇ. ಅಷ್ಟೇ ಅಲ್ಲ ವಿಚ್ಛೇದನ ಪಡಕೊಂಡವರು ಎದುರಿಸುವ ಸಮಸ್ಯೆಗಳನ್ನೇ ಪ್ರತ್ಯೇಕವಾದವರೂ ಎದುರಿಸಬೇಕಾಗುತ್ತದೆ. ಗಂಡ-ಹೆಂಡತಿ ಒಟ್ಟಿಗೆ ಜೀವಿಸಲು ಅಪೊಸ್ತಲ ಪೌಲ ಇನ್ನೊಂದು ಕಾರಣವನ್ನೂ ಕೊಟ್ಟಿದ್ದಾನೆ. ಅವನು ಹೇಳಿದ್ದು: “ಅವಿಶ್ವಾಸಿಯಾದ ಗಂಡನು ವಿಶ್ವಾಸಿಯಾದ ತನ್ನ ಹೆಂಡತಿಯ ದೆಸೆಯಿಂದ ಪವಿತ್ರೀಕರಿಸಲ್ಪಟ್ಟವನಾಗಿದ್ದಾನೆ ಮತ್ತು ಅವಿಶ್ವಾಸಿಯಾದ ಹೆಂಡತಿಯು ವಿಶ್ವಾಸಿಯಾದ ತನ್ನ ಗಂಡನ ದೆಸೆಯಿಂದ ಪವಿತ್ರೀಕರಿಸಲ್ಪಟ್ಟವಳಾಗಿದ್ದಾಳೆ; ಇಲ್ಲವಾದರೆ ನಿಮ್ಮ ಮಕ್ಕಳು ನಿಜವಾಗಿಯೂ ಅಶುದ್ಧರಾಗಿರುತ್ತಿದ್ದರು, ಆದರೆ ಈಗ ಅವರು ಪವಿತ್ರರಾಗಿದ್ದಾರೆ.” (1 ಕೊರಿಂ. 7:14) ಯೆಹೋವನನ್ನು ಆರಾಧಿಸದ ಗಂಡ ಅಥವಾ ಹೆಂಡತಿ ಜೊತೆ ಜೀವನ ಮಾಡುವುದು ಅಷ್ಟು ಸುಲಭವಲ್ಲದಿದ್ದರೂ ಕೆಲವು ಕ್ರೈಸ್ತರು ತಮ್ಮ ಸಂಗಾತಿಯ ಜೊತೆಯಲ್ಲೇ ಇರೋಣ ಎಂದು ನಿರ್ಧರಿಸಿದ್ದಾರೆ. ಇದರಿಂದ ಅವರ ಸಂಗಾತಿ ಸಮಯಾನಂತರ ಯೆಹೋವನ ಸಾಕ್ಷಿಯಾದರು. ಒಟ್ಟಿಗೆ ಇರುವ ನಿರ್ಧಾರ ಮಾಡಿದ್ದು ಒಳ್ಳೇದಾಯಿತು ಎಂದು ಅವರು ಈಗ ಸಂತೋಷಪಡುತ್ತಾರೆ.—1 ಕೊರಿಂಥ 7:16 ಓದಿ; 1 ಪೇತ್ರ 3:1, 2.

19. ಸಭೆಗಳಲ್ಲಿರುವ ಅನೇಕ ದಂಪತಿಗಳು ಸಂತೋಷದಿಂದ ಇರಲು ಕಾರಣವೇನು?

19 ಯೇಸು ವಿಚ್ಛೇದನದ ಬಗ್ಗೆ ಮಾತಾಡಿದ್ದಾನೆ ಮತ್ತು ಅಪೊಸ್ತಲ ಪೌಲನು ಪ್ರತ್ಯೇಕವಾಸದ ಬಗ್ಗೆ ಮಾತಾಡಿದ್ದಾನೆ. ದೇವರ ಸೇವಕರು ವಿವಾಹವನ್ನು ಮಾನ್ಯಮಾಡಬೇಕು ಎಂದು ಇವರಿಬ್ಬರೂ ಬಯಸುತ್ತಾರೆ. ಭೂವ್ಯಾಪಕವಾಗಿರುವ ಕ್ರೈಸ್ತ ಸಭೆಗಳಲ್ಲಿ ಇಂದು ಸಂತೋಷದಿಂದ ಸಂಸಾರ ಮಾಡಿಕೊಂಡು ಹೋಗುತ್ತಿರುವವರ ಉದಾಹರಣೆಗಳು ಬೇಕಾದಷ್ಟಿವೆ. ನಿಮ್ಮ ಸಭೆಯಲ್ಲೇ ಇಂಥ ದಂಪತಿಗಳನ್ನು ನೀವು ನೋಡಿರಬಹುದು. ನಿಷ್ಠೆ ತೋರಿಸುವ ಗಂಡಂದಿರು ತಮ್ಮ ಹೆಂಡತಿಯರನ್ನು ಪ್ರೀತಿಸುವುದನ್ನು ಮತ್ತು ಪ್ರೀತಿಯ ಪತ್ನಿಯರು ತಮ್ಮ ಗಂಡಂದಿರಿಗೆ ಗೌರವ ತೋರಿಸುವುದನ್ನು ನೀವು ನೋಡಿರಬಹುದು. ಇವರೆಲ್ಲ ದೇವರು ಮಾಡಿರುವ ವಿವಾಹ ಎಂಬ ಏರ್ಪಾಡನ್ನು ಗೌರವಿಸುತ್ತಾರೆ. “ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ಶರೀರವಾಗುವರು” ಎಂದು ಬೈಬಲ್‌ ಹೇಳುವುದನ್ನು ಲಕ್ಷಾಂತರ ದಂಪತಿಗಳು ಸತ್ಯವೆಂದು ಸಾಬೀತು ಮಾಡಿದ್ದಾರೆ. ಇದನ್ನು ನೋಡಿ ತುಂಬ ಸಂತೋಷವಾಗುತ್ತದೆ!—ಎಫೆ. 5:31, 33.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ