ಪ್ರಮುಖ ವಿಷಯಗಳಿಗೆ ಪ್ರಥಮ ಸ್ಥಾನಕೊಡಲು ನಿಶ್ಚಯಿಸಿಕೊಳ್ಳಿರಿ!
ಅದು ಕೂಟವಿರುವ ದಿನವಾಗಿದೆ, ಆದರೆ ನಿಮಗೆ ಕೆಲಸಮಾಡಲಿಕ್ಕಿದೆ. ನೀವು ಯಾವುದಕ್ಕೆ ಆದ್ಯತೆ ಕೊಡುತ್ತೀರಿ?
ನೀವೊಬ್ಬ ಪತಿ ಮತ್ತು ತಂದೆಯಾಗಿದ್ದೀರಿ. ಕೆಲಸದ ಸ್ಥಳದಲ್ಲಿ ದಿನವಿಡೀ ಬೆವರು ಸುರಿಸಿ ಕೆಲಸಮಾಡಿ, ಮನೆಗೆ ಹಿಂತಿರುಗುವಾಗ, ಅಂದಿನ ಸಾಯಂಕಾಲದ ಸಭಾ ಕೂಟದ ವಿಷಯವು ನಿಮಗೆ ನೆನಪಾಗುತ್ತದೆ. ನೀವು ಕೆಲಸ ಬಿಟ್ಟ ತಕ್ಷಣ ಮನೆಗೆ ಹೋಗುವುದಾದರೆ, ನೀವು ಸ್ನಾನಮಾಡಿ, ಬಟ್ಟೆ ಬದಲಾಯಿಸಿ, ಸ್ವಲ್ಪ ತಿಂಡಿಯನ್ನು ತಿಂದು ಕೂಟಕ್ಕೆ ಹೋಗಸಾಧ್ಯವಿದೆ. ಆದರೆ, ಅನಿರೀಕ್ಷಿತವಾಗಿ, ನಿಮ್ಮ ಧಣಿಯು ನಿಮ್ಮ ಬಳಿಗೆ ಬಂದು, ಓವರ್ಟೈಮ್ ಮಾಡುವಂತೆ ಕೇಳಿಕೊಳ್ಳುತ್ತಾನೆ. ನಿಮಗೆ ಹೆಚ್ಚು ಹಣವನ್ನು ಕೊಡುತ್ತೇನೆಂದು ಅವನು ಮಾತುಕೊಡುತ್ತಾನೆ. ಮತ್ತು ನಿಮಗೆ ಹಣದ ಅಗತ್ಯವೂ ಇದೆ.
ಅಥವಾ ನೀವೊಬ್ಬ ಪತ್ನಿ ಮತ್ತು ತಾಯಿಯಾಗಿದ್ದೀರಿ. ನೀವು ರಾತ್ರಿಗಾಗಿ ಅಡಿಗೆಯನ್ನು ಮಾಡುತ್ತಿರುವಾಗ, ಮರುದಿನಕ್ಕೆ ಬೇಕಾಗಿರುವ ಇಸ್ತ್ರಿಮಾಡಲ್ಪಟ್ಟಿರದ ಬಟ್ಟೆಯ ರಾಶಿಯನ್ನು ನೋಡುತ್ತೀರಿ. ನೀವು ಹೀಗೆ ನಿಮ್ಮನ್ನೇ ಕೇಳಿಕೊಳ್ಳುತ್ತೀರಿ, ‘ಇವತ್ತು ಸಂಜೆ, ನಾನು ಕೂಟಕ್ಕೆ ಹೋದರೆ, ಇಸ್ತ್ರಿ ಮಾಡಲು ಮತ್ತೇ ಯಾವಾಗ ಸಮಯ ಸಿಗುತ್ತದೆ?’ ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡಿರುವುದರಿಂದ, ಜೀವನೋಪಾಯಕ್ಕಾಗಿ ದುಡಿಯುತ್ತಿದ್ದು, ಅದೇ ಸಮಯದಲ್ಲಿ ಮನೆಕೆಲಸಗಳನ್ನು ಮಾಡುವುದು ಎಷ್ಟೊಂದು ಕಷ್ಟಕರವಾಗಿದೆ ಎಂಬುದು ನಿಮಗೆ ಗೊತ್ತಾಗುತ್ತಿದೆ.
ಇಲ್ಲವೇ ನೀವೊಬ್ಬ ವಿದ್ಯಾರ್ಥಿಯಾಗಿದ್ದೀರಿ. ಮೇಜಿನ ಮೇಲೆ ಒಂದು ರಾಶಿ ಹೋಮ್ವರ್ಕ್ ಬಿದ್ದಿದೆ. ಅವುಗಳಲ್ಲಿ ಹೆಚ್ಚಿನವು ಮೊದಲೇ ನೀಡಲ್ಪಟ್ಟಿದ್ದವು, ಆದರೆ ನೀವು ಅದನ್ನು ಮಾಡದೆ ಹಾಗೆ ಇಟ್ಟಿದ್ದೀರಿ. ಈಗ ತುಂಬ ಹೋಮ್ವರ್ಕ್ ಅನ್ನು ಒಂದೇ ಸಲಕ್ಕೆ ಮಾಡಬೇಕಾಗಿದೆ. ಹೋಮ್ವರ್ಕನ್ನು ಮಾಡಿಮುಗಿಸಲಿಕ್ಕಾಗಿ ಕೂಟಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಳ್ಳಲು, ನಿಮಗೆ ನಿಮ್ಮ ಹೆತ್ತವರನ್ನು ಕೇಳಲು ಮನಸ್ಸಾಗುತ್ತದೆ.
ನೀವು ಯಾವುದನ್ನು ಪ್ರಥಮವಾಗಿ ಇಡುವಿರಿ: ಓವರ್ಟೈಮ್, ಇಸ್ತ್ರಿಮಾಡುವುದು, ಹೋಮ್ವರ್ಕ್, ಅಥವಾ ಸಭಾ ಕೂಟವನ್ನೋ? ಆತ್ಮಿಕ ರೀತಿಯಲ್ಲಿ ಮಾತಾಡುವುದಾದರೆ, ಪ್ರಮುಖ ವಿಷಯಗಳಿಗೆ ಪ್ರಥಮ ಸ್ಥಾನಕೊಡುವುದು ಏನನ್ನು ಅರ್ಥೈಸುತ್ತದೆ? ಯೆಹೋವನ ದೃಷ್ಟಿಕೋನವೇನು?
ಯಾವುದು ಪ್ರಥಮ ಸ್ಥಾನದಲ್ಲಿರಬೇಕು?
ಇಸ್ರಾಯೇಲ್ಯರು ಹತ್ತು ದಶಾಜ್ಞೆಗಳನ್ನು ಪಡೆದುಕೊಂಡ ಸ್ವಲ್ಪ ಸಮಯದ ಅನಂತರ, ಸಬ್ಬತ್ ದಿನದಲ್ಲಿ ಒಬ್ಬ ವ್ಯಕ್ತಿಯು ಕಟ್ಟಿಗೆಕೂಡಿಸುವುದನ್ನು ಕಂಡರು. ಇದು ನಿಯಮದಲ್ಲಿ ಕಟ್ಟುನಿಟ್ಟಾಗಿ ನಿರ್ಬಂಧಿಸಲ್ಪಟ್ಟಿತ್ತು. (ಅರಣ್ಯಕಾಂಡ 15:32-34; ಧರ್ಮೋಪದೇಶಕಾಂಡ 5:12-15) ಆಗ ಆ ಮೊಕದ್ದಮೆಗೆ ನೀವು ಹೇಗೆ ತೀರ್ಪುನೀಡಿರುತ್ತಿದ್ದಿರಿ? ಎಷ್ಟೆಂದರೂ ಅವನು ಒಂದು ಸುಖಭೋಗದ ಜೀವನ ಶೈಲಿಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಕೆಲಸಮಾಡದೆ, ತನ್ನ ಕುಟುಂಬಕ್ಕೆ ಬೇಕಾದ ಆವಶ್ಯಕತೆಗಳನ್ನು ಒದಗಿಸಲು ಕೆಲಸಮಾಡುತ್ತಿದ್ದನು ಎಂದು ಆ ಮನುಷ್ಯನನ್ನು ಕ್ಷಮಿಸುತ್ತಿದ್ದಿರೋ? ಸಬ್ಬತ್ ಆಚರಿಸಲು ವರ್ಷ ಪೂರ್ತಿ ಅನೇಕ ಸಂದರ್ಭಗಳಿವೆ ಎಂದು ಮತ್ತು ಆ ಮನುಷ್ಯನು ಮುಂದಾಗಿ ಯೋಜಿಸದ ಕಾರಣ, ಪ್ರಾಯಶಃ ಒಂದು ಸಬ್ಬತ್ತನ್ನು ತಪ್ಪಿಸಿಕೊಂಡಿದ್ದಕ್ಕಾಗಿ, ಅವನನ್ನು ಕ್ಷಮಿಸಸಾಧ್ಯವಿದೆ ಎಂದು ನೀವು ತರ್ಕಿಸುತ್ತಿದ್ದಿರೋ?
ಯೆಹೋವನು ಆ ಮೊಕದ್ದಮೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡನು. “ತರುವಾಯ ಯೆಹೋವನು—ಆ ಮನುಷ್ಯನಿಗೆ ಮರಣಶಿಕ್ಷೆಯಾಗಬೇಕು” ಎಂದು “ಮೋಶೆಗೆ ಆಜ್ಞಾಪಿಸಿದನು” ಎಂಬುದಾಗಿ ಬೈಬಲು ಹೇಳುತ್ತದೆ. (ಅರಣ್ಯಕಾಂಡ 15:35) ಆ ಮನುಷ್ಯನು ಏನು ಮಾಡಿದನೋ ಅದನ್ನು, ಯೆಹೋವನು ಅಷ್ಟೊಂದು ಗಂಭೀರವಾಗಿ ಏಕೆ ತೆಗೆದುಕೊಂಡನು?
ಕಟ್ಟಿಗೆಕೂಡಿಸಲು ಮತ್ತು ಆಹಾರ, ಬಟ್ಟೆ ಮತ್ತು ವಸತಿಯ ಸಂಬಂಧದಲ್ಲಿ ಬೇಕಾದ ಅಗತ್ಯಗಳನ್ನು ನೋಡಿಕೊಳ್ಳಲು ಜನರಿಗೆ ಆರು ದಿವಸಗಳಿದ್ದವು. ಏಳನೆಯ ದಿನವು ಆತ್ಮಿಕ ಅಗತ್ಯಗಳಿಗೆ ಮೀಸಲಾಗಿಡಲ್ಪಡಬೇಕಿತ್ತು. ಕಟ್ಟಿಗೆಯನ್ನು ಒಟ್ಟುಗೂಡಿಸುವುದು ತಪ್ಪಾಗಿರಲಿಲ್ಲ, ಆದರೂ ಯೆಹೋವನ ಆರಾಧನೆಗೆ ಮೀಸಲಾಗಿಡಲ್ಪಟ್ಟ ಸಮಯವನ್ನು ಬೇರೆ ಕೆಲಸಗಳಿಗೆ ಉಪಯೋಗಿಸುವುದು ತಪ್ಪಾಗಿತ್ತು. ಕ್ರೈಸ್ತರು ಮೋಶೆಯ ನಿಯಮದ ಕೆಳಗೆ ಇಲ್ಲದಿರುವುದಾದರೂ, ಇಂದು ನಮ್ಮ ಆದ್ಯತೆಗಳನ್ನು ತಕ್ಕ ಸ್ಥಾನದಲ್ಲಿಡುವುದರ ವಿಷಯದಲ್ಲಿ, ಈ ಘಟನೆಯು ನಮಗೆ ಪಾಠವೊಂದನ್ನು ಕಲಿಸುವುದಿಲ್ಲವೋ?—ಫಿಲಿಪ್ಪಿ 1:10.
ಅರಣ್ಯದಲ್ಲಿ 40 ವರ್ಷಗಳನ್ನು ಕಳೆದ ಬಳಿಕ, ಇಸ್ರಾಯೇಲ್ಯರು ವಾಗ್ದತ್ತ ದೇಶದೊಳಗೆ ಹೋಗಲು ಸಿದ್ಧರಾದರು. ಅರಣ್ಯದಲ್ಲಿ ದೈವಿಕವಾಗಿ ಒದಗಿಸಲ್ಪಟ್ಟ ಮನ್ನವನ್ನು ತಿಂದು ಕೆಲವರಿಗೆ ಸಾಕಾಗಿಹೋಗಿತ್ತು ಮತ್ತು ಅವರು ಬೇರೆ ರೀತಿಯ ಆಹಾರವನ್ನು ತಿನ್ನಲು ಎದುರುನೋಡಿದರು ಎಂಬುದರಲ್ಲಿ ಸಂದೇಹವಿಲ್ಲ. ಅವರು “ಹಾಲೂ ಜೇನೂ ಹರಿಯುವ” ದೇಶದೊಳಗೆ ಹೋಗುವಾಗ, ತಕ್ಕ ದೃಷ್ಟಿಕೋನವನ್ನು ಇಟ್ಟುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ, ಯೆಹೋವನು ಅವರಿಗೆ ಜ್ಞಾಪಿಸಿದ್ದು: “ಮನುಷ್ಯರು ಆಹಾರಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾರೆ.”—ವಿಮೋಚನಕಾಂಡ 3:8; ಧರ್ಮೋಪದೇಶಕಾಂಡ 8:3.
“ಹಾಲೂ ಜೇನೂ” ಇರುವ ದೇಶಕ್ಕಾಗಿ ಇಸ್ರಾಯೇಲ್ಯರಿಗೆ ಬಹಳ ಪರಿಶ್ರಮಪಡಬೇಕಿತ್ತು. ಸೇನೆಗಳನ್ನು ಸೋಲಿಸಬೇಕಾಗಿತ್ತು, ಮನೆಗಳನ್ನು ಕಟ್ಟಬೇಕಾಗಿತ್ತು, ಹೊಲವನ್ನು ಉಳಬೇಕಾಗಿತ್ತು. ಆದರೂ, ಆತ್ಮಿಕ ವಿಷಯಗಳ ಕುರಿತಾಗಿ ಮನನ ಮಾಡಲು ಪ್ರತಿ ದಿನ ಸ್ವಲ್ಪ ಸಮಯವನ್ನು ಬದಿಗಿರಿಸುವಂತೆ ಯೆಹೋವನು ಅವರಿಗೆ ಆಜ್ಞಾಪಿಸಿದನು. ಅವರು ತಮ್ಮ ಮಕ್ಕಳಿಗೆ ದೇವರ ಮಾರ್ಗಗಳನ್ನು ಕಲಿಸಲಿಕ್ಕಾಗಿ ಸಹ ಸಮಯವನ್ನು ಇಡಬೇಕಾಗಿತ್ತು. ಯೆಹೋವನು ಹೇಳಿದ್ದು: “ನೀವು ಮನೆಯಲ್ಲಿರುವಾಗಲೂ ಪ್ರಯಾಣದಲ್ಲಿರುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ [ನನ್ನ ಆಜ್ಞೆಗಳನ್ನು] ಮಾತಾಡುತ್ತಾ ನಿಮ್ಮ ಮಕ್ಕಳಿಗೆ ಇವುಗಳನ್ನು ಅಭ್ಯಾಸಮಾಡಿಸಬೇಕು.”—ಧರ್ಮೋಪದೇಶಕಾಂಡ 11:19.
ಆ ದೇಶದಲ್ಲಿದ್ದ ಪ್ರತಿಯೊಬ್ಬ ಇಸ್ರಾಯೇಲ್ಯನು ಮತ್ತು ಮತಾಂತರಗೊಂಡ ಪುರುಷರು, ವರ್ಷದಲ್ಲಿ ಮೂರು ಬಾರಿ ಯೆಹೋವನ ಸನ್ನಿಧಿಗೆ ಬರುವಂತೆ ಆಜ್ಞಾಪಿಸಲ್ಪಟ್ಟಿದ್ದರು. ಅಂಥ ಸಂದರ್ಭಗಳಿಂದ ಇಡೀ ಕುಟುಂಬವು ಆತ್ಮಿಕವಾಗಿ ಪ್ರಯೋಜನವನ್ನು ಪಡೆದುಕೊಳ್ಳುವರೆಂಬುದನ್ನು ಮನಸ್ಸಿನಲ್ಲಿಡುತ್ತಾ, ಅನೇಕ ಕುಟುಂಬದ ತಲೆಗಳು, ತಮ್ಮೊಂದಿಗೆ, ಹೆಂಡತಿಮಕ್ಕಳನ್ನು ಕರೆದುಕೊಂಡು ಹೋಗಲು ಏರ್ಪಾಡು ಮಾಡುತ್ತಿದ್ದವು. ಆದರೆ ಕುಟುಂಬವು ಮನೆಯಿಂದ ದೂರವಿರುವಾಗ, ಶತ್ರುಗಳ ಆಕ್ರಮಣದಿಂದ ಅವರ ಮನೆಗಳನ್ನು ಮತ್ತು ಹೊಲಗದ್ದೆಗಳನ್ನು ಯಾರು ಕಾಪಾಡುತ್ತಿದ್ದರು? ಯೆಹೋವನು ಮಾತುಕೊಟ್ಟದ್ದು: “ನೀವು ವರುಷಕ್ಕೆ ಮೂರಾವರ್ತಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಗೆ ಹೋಗುವಾಗ ಯಾರೂ ನಿಮ್ಮ ಭೂಮಿಯನ್ನು ಅಪಹರಿಸುವದಕ್ಕೆ ಅಪೇಕ್ಷಿಸುವದಿಲ್ಲ.” (ವಿಮೋಚನಕಾಂಡ 34:24) ತಾವು ಆತ್ಮಿಕ ವಿಷಯಗಳಿಗೆ ಪ್ರಥಮ ಸ್ಥಾನಕೊಡುವಲ್ಲಿ, ಭೌತಿಕವಾಗಿ ನಷ್ಟಗೊಳ್ಳುವುದಿಲ್ಲವೆಂಬುದನ್ನು ನಂಬಲು ಇಸ್ರಾಯೇಲ್ಯರಿಗೆ ನಂಬಿಕೆಯ ಅಗತ್ಯವಿತ್ತು. ಯೆಹೋವನು ಕೊಟ್ಟಮಾತಿಗೆ ಸತ್ಯವಾಗಿ ನಡೆದುಕೊಂಡನೋ? ನಿಶ್ಚಯವಾಗಿಯೂ ಆತನು ನಡೆದುಕೊಂಡನು!
ಮೊದಲಾಗಿ ದೇವರ ರಾಜ್ಯವನ್ನು ಹುಡುಕುತ್ತಾ ಇರಿ
ಎಲ್ಲದಕ್ಕಿಂತಲೂ ಮಿಗಿಲಾಗಿ, ಆತ್ಮಿಕ ವಿಷಯಗಳಿಗೆ ಪ್ರಥಮ ಸ್ಥಾನಕೊಡಬೇಕೆಂದು ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು. ಅವನು ತನ್ನ ಪರ್ವತ ಪ್ರಸಂಗದಲ್ಲಿ ಕೇಳುಗರಿಗೆ ಸಲಹೆ ನೀಡಿದ್ದು: “ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ನೀವು ಮೊದಲಾಗಿ ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ [ಆವಶ್ಯಕವಾದ ಭೌತಿಕ ವಿಷಯಗಳು] ನಿಮಗೆ ದೊರಕುವವು.” (ಮತ್ತಾಯ 6:31, 33) ಯೇಸು ಕ್ರಿಸ್ತನ ಮರಣದ ಅನಂತರವೇ, ಹೊಸದಾಗಿ ದೀಕ್ಷಾಸ್ನಾನಗೊಂಡ ಕ್ರೈಸ್ತರು ಆ ಸಲಹೆಯನ್ನು ಅನುಸರಿಸಿದರು. ಸಾ.ಶ. 33ರ ಪಂಚಾಶತ್ತಮದ ಉತ್ಸವದ ಆಚರಣೆಗಾಗಿ ಯೆರೂಸಲೇಮಿಗೆ ಪ್ರಯಾಣಿಸಿದ್ದವರಲ್ಲಿ ಅನೇಕರು, ಯೆಹೂದಿಗಳು ಅಥವಾ ಯೆಹೂದಿ ಮತಾವಲಂಬಿಗಳಾಗಿದ್ದರು. ಅಲ್ಲಿ ಯಾವುದೋ ಒಂದು ಅನಿರೀಕ್ಷಿತ ಘಟನೆಯಾಯಿತು. ಅವರು ಯೇಸು ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಕೇಳಿ, ಸ್ವೀಕರಿಸಿದರು. ಹೊಸದಾಗಿ ಕಂಡುಕೊಳ್ಳಲ್ಪಟ್ಟ ನಂಬಿಕೆಯ ಕುರಿತು ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ಕಾತುರರಾಗಿ ಅವರು ಯೆರೂಸಲೇಮಿನಲ್ಲಿಯೇ ಉಳಿದರು. ಅವರಲ್ಲಿದ್ದ ಆಹಾರ ಸರಬರಾಯಿಯು ಮುಗಿದುಹೋಗಲು ಪ್ರಾರಂಭವಾಯಿತಾದರೂ, ಭೌತಿಕ ಜೀವನಸೌಕರ್ಯಗಳು ಎರಡನೆಯ ವಿಷಯವಾಗಿದ್ದವು. ಅವರು ಮೆಸ್ಸೀಯನನ್ನು ಕಂಡುಕೊಂಡಿದ್ದರು! ಅವರ ಕ್ರೈಸ್ತ ಸಹೋದರರು ತಮ್ಮಲ್ಲಿದ್ದ ಭೌತಿಕ ವಸ್ತುಗಳನ್ನು ಹಂಚಿಕೊಂಡರು, ಹೀಗೆ ಅವರೆಲ್ಲರೂ ‘ಅಪೊಸ್ತಲರ ಬೋಧನೆಯಲ್ಲಿಯೂ . . . ಪ್ರಾರ್ಥನೆಗಳಲ್ಲಿಯೂ ನಿರತರಾ’ಗಲು ಶಕ್ತರಾದರು.—ಅ. ಕೃತ್ಯಗಳು 2:42.
ಸಕಾಲದಲ್ಲಿ, ಕೆಲವು ಕ್ರೈಸ್ತರು ಕೂಟಗಳಲ್ಲಿ ಕ್ರಮವಾಗಿ ಒಟ್ಟುಗೂಡುವುದರ ಅಗತ್ಯವನ್ನು ಕಡೆಗಣಿಸಿದರು. (ಇಬ್ರಿಯ 10:23-25) ತಮ್ಮ ಹಾಗೂ ತಮ್ಮ ಕುಟುಂಬಗಳಿಗಾಗಿ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಕಾರಣ, ಆತ್ಮಿಕ ವಿಷಯಗಳನ್ನು ಅಲಕ್ಷಿಸಿ, ಪ್ರಾಯಶಃ ಅವರು ಪ್ರಾಪಂಚಿಕರಾಗಿ ಪರಿಣಮಿಸಿದರು. ಸಭೆಯಾಗಿ ಕೂಡುವುದನ್ನು ಬಿಟ್ಟುಬಿಡಬಾರದೆಂದು ತನ್ನ ಸಹೋದರರಿಗೆ ಪ್ರೇರೇಪಿಸಿದ ಬಳಿಕ, ಅಪೊಸ್ತಲ ಪೌಲನು ಬರೆದುದು: “ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ.”—ಇಬ್ರಿಯ 13:5.
ಪೌಲನ ಸಲಹೆಯು ತುಂಬ ಸಮಯೋಚಿತವಾಗಿತ್ತು. ಇಬ್ರಿಯರಿಗೆ ಪೌಲನು ಪತ್ರವನ್ನು ಬರೆದ ಸುಮಾರು ಐದು ವರ್ಷಗಳ ಅನಂತರ, ಸೆಸ್ಟಿಯಸ್ ಗ್ಯಾಲಸ್ನ ರೋಮಿನ ಸೇನೆಯು ಯೆರೂಸಲೇಮನ್ನು ಸುತ್ತುವರಿಯಿತು. ನಂಬಿಗಸ್ತ ಕ್ರೈಸ್ತರು ಯೇಸುವಿನ ಎಚ್ಚರಿಕೆಯನ್ನು ಜ್ಞಾಪಿಸಿಕೊಂಡರು: “ನೀವು [ಇದನ್ನು] ಕಾಣುವಾಗ . . . ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗಿಂದ ಏನಾದರೂ ತೆಗೆದುಕೊಳ್ಳುವದಕ್ಕೆ ಇಳಿಯದೆ ಒಳಕ್ಕೆ ಹೋಗದೆ ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವದಕ್ಕೆ ಹಿಂತಿರಿಗಿ ಬಾರದೆ ಓಡಿಹೋಗಲಿ.” (ಮಾರ್ಕ 13:14-16) ತಮ್ಮ ರಕ್ಷಣೆಯು, ಒಳ್ಳೆಯ ಉದ್ಯೋಗ ಅಥವಾ ಭೌತಿಕ ಸಂಪತ್ತುಗಳ ಮೌಲ್ಯದ ಮೇಲಲ್ಲ, ಬದಲಾಗಿ ಯೇಸುವಿನ ನಿರ್ದೇಶನಗಳಿಗೆ ವಿಧೇಯತೆಯನ್ನು ತೋರಿಸುವುದರ ಮೇಲೆ ಅವಲಂಬಿಸಿತ್ತು ಎಂಬುದನ್ನು ಅವರು ತಿಳಿದುಕೊಂಡಿದ್ದರು. ಪೌಲನ ಸಲಹೆಗೆ ಪ್ರತಿಕ್ರಿಯಿಸಿ, ಆತ್ಮಿಕ ವಿಷಯಗಳನ್ನು ಪ್ರಥಮವಾಗಿಟ್ಟವರಿಗೆ ಮನೆ, ಉದ್ಯೋಗ, ಬಟ್ಟೆಬರೆ ಮತ್ತು ಒಡವೆಗಳನ್ನು ಬಿಟ್ಟು, ಬೆಟ್ಟಗಳಿಗೆ ಓಡಿಹೋಗಲು ಸುಲಭವಾಯಿತು. ಆದರೆ ಹಣದ ವ್ಯಾಮೋಹದಿಂದ ಹೊರಬರದವರಿಗೆ ಇದು ಸಾಧ್ಯವಾಗಲಿಲ್ಲ.
ಇಂದು ಕೆಲವರು ಪ್ರಮುಖ ವಿಷಯಗಳಿಗೆ ಪ್ರಥಮ ಸ್ಥಾನಕೊಡುವ ವಿಧ
ನಂಬಿಗಸ್ತ ಕ್ರೈಸ್ತರು ಇಂದು ತಮ್ಮ ಸಹೋದರರೊಂದಿಗೆ ಕ್ರಮವಾಗಿ ಜೊತೆಗೂಡುವುದನ್ನು ಪ್ರಾಮುಖ್ಯವೆಂದೆಣಿಸುತ್ತಾರೆ ಮತ್ತು ಕೂಟಗಳಿಗೆ ಹಾಜರಾಗಸಾಧ್ಯವಾಗುವಂತೆ ಅನೇಕರು ತ್ಯಾಗಗಳನ್ನು ಮಾಡುತ್ತಾರೆ. ಕೆಲವೊಂದು ಸ್ಥಳಗಳಲ್ಲಿ, ಷಿಫ್ಟ್ ಕೆಲಸವನ್ನು ಒಳಗೊಂಡಿರುವ ಉದ್ಯೋಗವು ಮಾತ್ರ ಲಭ್ಯವಿರುತ್ತದೆ. ಒಬ್ಬ ಸಹೋದರನು ತನ್ನ ಸಮಾಜದಲ್ಲಿ, ಹೆಚ್ಚಿನ ಜನರು ಮನೋರಂಜನೆಗಾಗಿ ಸಮಯವನ್ನು ಕಳೆಯಲಿಕ್ಕಾಗಿ ಇಷ್ಟಪಡುವ ಶನಿವಾರದ ರಾತ್ರಿಗಳಂದು, ತನ್ನ ಸಹೋದ್ಯೋಗಿಗಳ ಕೆಲಸವನ್ನು ಮಾಡುತ್ತಾನೆ. ಅವರು ಆ ಸಹೋದರನ ಷಿಫ್ಟ್ ಕೆಲಸವನ್ನು, ಕೂಟವಿರುವ ರಾತ್ರಿಗಳಂದು ಮಾಡುವುದಕ್ಕೆ ಒಪ್ಪಿಕೊಂಡರೆ ಅವನು ಇದನ್ನು ಮಾಡುತ್ತಾನೆ. ಷಿಫ್ಟ್ ಕೆಲಸವನ್ನು ಮಾಡುವ ಇತರ ಸಹೋದರರು, ಅವರ ಸ್ವಂತ ಸಭೆಯ ಕೂಟಗಳಿಗೆ ಹಾಜರಾಗಲು ಅವರ ಕೆಲಸವು ಅಡ್ಡಬರುತ್ತಿರುವಲ್ಲಿ, ಹತ್ತಿರದಲ್ಲಿರುವ ಸಭೆಗೆ ಹಾಜರಾಗುತ್ತಾರೆ. ಈ ರೀತಿಯಲ್ಲಿ, ಅವರು ಹೆಚ್ಚುಕಡಿಮೆ ಒಂದು ಕೂಟವನ್ನು ಸಹ ತಪ್ಪಿಸಿಕೊಳ್ಳುವುದಿಲ್ಲ. ಕೆನಡದಲ್ಲಿ ಹೊಸದಾಗಿ ಆಸಕ್ತಿ ತೋರಿಸಿದವಳೊಬ್ಬಳು, ದೇವಪ್ರಭುತ್ವ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟದ ಮಹತ್ತ್ವವನ್ನು ತಕ್ಷಣವೇ ಗ್ರಹಿಸಿದಳು, ಆದರೆ ಅವಳ ಕೆಲಸದ ಸಮಯದಿಂದಾಗಿ ಅವಳಿಗೆ ಅದನ್ನು ಹಾಜರಾಗಲಿಕ್ಕಾಗುತ್ತಿರಲಿಲ್ಲ. ಆದಕಾರಣ, ಅವಳು ತನ್ನ ಷಿಫ್ಟಿನ ಸಮಯದಲ್ಲಿ ತನ್ನ ಸಹೋದ್ಯೋಗಿಯು ಕೆಲಸಮಾಡುವಂತೆ ಹಣ ನೀಡಿದಳು. ಹೀಗೆ ಅವಳು ಈ ಪ್ರಾಮುಖ್ಯವಾದ ಕೂಟಗಳಿಗೆ ಹಾಜರಾಗಲು ಶಕ್ತಳಾದಳು.
ದೀರ್ಘ ಸಮಯದ ಕಾಯಿಲೆಯಿಂದ ಪೀಡಿಸಲ್ಪಡುತ್ತಿರುವವರು ಕೂಟವನ್ನು ತಪ್ಪಿಸಿಕೊಳ್ಳುವುದೇ ಅಪರೂಪ. ಅವರು ರಾಜ್ಯ ಸಭಾಗೃಹಕ್ಕೆ ಹೋಗಲು ಅಶಕ್ತರಾದಾಗ, ಟೆಲಿಫೋನ್ ಸಂಯೋಜನೆ ಅಥವಾ ಟೇಪ್ರೆಕಾರ್ಡಿನ ಮೂಲಕವಾಗಿ ಮನೆಯಲ್ಲಿಯೇ ಕಾರ್ಯಕ್ರಮವನ್ನು ಕೇಳಿಸಿಕೊಳ್ಳುತ್ತಾರೆ. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಯೆಹೋವನು ನೀಡುವ ಆತ್ಮಿಕ ಒದಗಿಸುವಿಕೆಗಳಿಗಾಗಿ ಅವರು ಶ್ಲಾಘನೀಯ ರೀತಿಯಲ್ಲಿ ಗಣ್ಯತೆಯನ್ನು ತೋರಿಸುತ್ತಾರೆ! (ಮತ್ತಾಯ 24:45) ವೃದ್ಧ ಹೆತ್ತವರನ್ನು ನೋಡಿಕೊಳ್ಳುತ್ತಿರುವ ಕ್ರೈಸ್ತರು ಸಭಾ ಕೂಟಕ್ಕೆ ಹೋಗಸಾಧ್ಯವಾಗುವಂತೆ, ಒಬ್ಬ ಸಹೋದರ ಅಥವಾ ಸಹೋದರಿಯು ಅವರ ಮನೆಯಲ್ಲಿದ್ದು, ಹೆತ್ತವರನ್ನು ನೋಡಿಕೊಳ್ಳುವಾಗ, ಅವರು ನಿಜವಾಗಿಯೂ ಅದನ್ನು ಗಣ್ಯಮಾಡುತ್ತಾರೆ.
ಮುಂದಾಗಿಯೇ ಯೋಜಿಸಿರಿ!
ತಮ್ಮ ಸ್ವಂತ ಆತ್ಮಿಕ ಅಗತ್ಯಗಳ ಕುರಿತಾಗಿ ಅರಿವುಳ್ಳ ಹೆತ್ತವರು, ತಮ್ಮ ಮಕ್ಕಳು ಕ್ರೈಸ್ತ ಕೂಟಗಳಿಗೆ ಗಣ್ಯತೆತೋರಿಸುವಂತೆ ಸಹಾಯಮಾಡಬೇಕು. ಒಂದು ಕಟ್ಟುಪಾಡಿನಂತೆ, ಹೋಮ್ವರ್ಕ್ಗಳು ಹಾಗೆ ಉಳಿಯುವಂತೆ ಬಿಡುವ ಬದಲು, ನೇಮಿಸಿದ ಸಮಯದಲ್ಲಿ ಅದನ್ನು ತಮ್ಮ ಮಕ್ಕಳು ಮಾಡಿಮುಗಿಸುವುದನ್ನು ಅವರು ಅಪೇಕ್ಷಿಸುತ್ತಾರೆ. ಕೂಟವಿರುವ ರಾತ್ರಿಗಳಲ್ಲಿ ಮಕ್ಕಳು ತಮ್ಮ ಹೋಮ್ವರ್ಕನ್ನು ಶಾಲೆಯಿಂದ ಹಿಂದಿರುಗಿ ಮನೆಗೆ ಬಂದ ಕೂಡಲೇ ಮಾಡುತ್ತಾರೆ. ಹವ್ಯಾಸಗಳು ಮತ್ತು ಇತರ ಚಟುವಟಿಕೆಗಳು ಸಭಾ ಕೂಟಗಳೊಂದಿಗೆ ಅಡ್ಡಬರುವಂತೆ ಅವರು ಅನುಮತಿಸುವುದಿಲ್ಲ.
ಒಬ್ಬ ಪತಿ ಮತ್ತು ತಂದೆಯೋಪಾದಿ ನೀವು ಕೂಟಕ್ಕೆ ಹೋಗುವುದಕ್ಕೆ ಆದ್ಯತೆಯನ್ನು ಕೊಡುತ್ತೀರೋ? ಒಬ್ಬ ಪತ್ನಿ ಮತ್ತು ತಾಯಿಯೋಪಾದಿ, ಕೂಟಗಳಿಗೆ ಹೋಗಲಿಕ್ಕಾಗಿ ನಿಮ್ಮ ಜವಾಬ್ದಾರಿಗಳನ್ನು ಯೋಜಿಸಲು ಪ್ರಯತ್ನಿಸುತ್ತೀರೋ? ಒಬ್ಬ ಹದಿವಯಸ್ಕರೋಪಾದಿ, ನೀವು ಕೂಟಗಳನ್ನು ಮಹತ್ತ್ವವೆಂದೆಣಿಸುತ್ತೀರೋ ಅಥವಾ ಹೋಮ್ವರ್ಕನ್ನೋ?
ಸಭಾ ಕೂಟವು ಯೆಹೋವನ ಒಂದು ಒದಗಿಸುವಿಕೆಯಾಗಿದೆ. ಆ ಪ್ರೀತಿಪರ ಏರ್ಪಾಡಿನಲ್ಲಿ ಪಾಲುತೆಗೆದುಕೊಳ್ಳುವುದಕ್ಕಾಗಿ ಎಲ್ಲ ಪ್ರಯತ್ನವನ್ನು ಮಾಡಬೇಕು. ನೀವು ಪ್ರಮುಖ ವಿಷಯಗಳಿಗೆ ಪ್ರಥಮ ಸ್ಥಾನಕೊಡುವುದಾದರೆ, ಯೆಹೋವನು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುವನು!