ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w17 ಸೆಪ್ಟೆಂಬರ್‌ ಪು. 23-27
  • ದೇವರ ವಾಕ್ಯಕ್ಕೆ ಶಕ್ತಿಯಿದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ವಾಕ್ಯಕ್ಕೆ ಶಕ್ತಿಯಿದೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಮ್ಮ ಜೀವನದಲ್ಲಿ
  • ಸೇವೆಯಲ್ಲಿ
  • ವೇದಿಕೆಯಿಂದ ಕಲಿಸುವಾಗ
  • ದೈನಿಕ ಬೈಬಲ್‌ ವಾಚನದಿಂದ ಪ್ರಯೋಜನ ಪಡೆಯುವುದು
    ಕಾವಲಿನಬುರುಜು—1995
  • ನೀವು ಬೈಬಲನ್ನ ಹೇಗೆ ಓದ್ತಾ ಇದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ದೇವರ ವಾಕ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ
    ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
  • ಆಧ್ಯಾತ್ಮಿಕ ವಿಷಯಗಳ ಬಗ್ಗೆ ಧ್ಯಾನಿಸುತ್ತಾ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
w17 ಸೆಪ್ಟೆಂಬರ್‌ ಪು. 23-27
ಒಬ್ಬ ವ್ಯಕ್ತಿ ಮನೆಯಲ್ಲಿ ಒಬ್ಬನೇ ಕೂತು ಮದ್ಯ ಕುಡಿಯುತ್ತಿದ್ದಾನೆ; ಯೆಹೋವನ ಸಾಕ್ಷಿಗಳು ಅವನ ಮನೆಗೆ ಬಂದು ಸಾರುತ್ತಿದ್ದಾರೆ; ಆ ವ್ಯಕ್ತಿ ಕೂಟಕ್ಕೆ ಬಂದಿದ್ದಾನೆ

ದೇವರ ವಾಕ್ಯಕ್ಕೆ ಶಕ್ತಿಯಿದೆ

“ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ . . . ಆಗಿದೆ.” —ಇಬ್ರಿ. 4:12.

ಗೀತೆಗಳು: 114, 113

ದೇವರ ವಾಕ್ಯದ ಶಕ್ತಿಯನ್ನು . . .

  • ನಿಮ್ಮ ಜೀವನದಲ್ಲಿ ಹೇಗೆ ಬಳಸಬಹುದು?

  • ಸೇವೆಯಲ್ಲಿ ಹೇಗೆ ಬಳಸಬಹುದು?

  • ವೇದಿಕೆಯಿಂದ ಕಲಿಸುವಾಗ ಹೇಗೆ ಬಳಸಬಹುದು?

1. ದೇವರ ವಾಕ್ಯಕ್ಕೆ ಶಕ್ತಿಯಿದೆ ಎಂದು ನಿಮಗೆ ಯಾಕೆ ಮನವರಿಕೆ ಆಗಿದೆ? (ಲೇಖನದ ಆರಂಭದ ಚಿತ್ರ ನೋಡಿ.)

ಯೆಹೋವನ ವಾಕ್ಯ ಅಂದರೆ ಆತನು ಮಾನವರಿಗೆ ಕೊಟ್ಟಿರುವ ಸಂದೇಶವು ‘ಸಜೀವವಾಗಿದೆ ಮತ್ತು ಪ್ರಬಲವಾಗಿದೆ.’ ಈ ವಿಷಯ ಆತನ ಜನರಿಗೆ ಪೂರ್ತಿ ಮನವರಿಕೆ ಆಗಿದೆ. (ಇಬ್ರಿ. 4:12) ಬೈಬಲ್‌ ಪ್ರಬಲವಾಗಿದೆ ಅಥವಾ ಅದಕ್ಕೆ ಶಕ್ತಿಯಿದೆ ಎಂದು ನಾವು ಸ್ವತಃ ನಮ್ಮ ಜೀವನದಲ್ಲಿ ಮತ್ತು ಇತರರ ಜೀವನದಲ್ಲಿ ನೋಡಿದ್ದೇವೆ. ಸಾಕ್ಷಿಗಳಾಗುವ ಮುಂಚೆ ಕೆಲವರು ಕಳ್ಳತನ ಮಾಡುತ್ತಿದ್ದರು, ಅಮಲೌಷಧ ಸೇವನೆ ಮಾಡುತ್ತಿದ್ದರು, ಲೈಂಗಿಕವಾಗಿ ಅನೈತಿಕವಾದ ಜೀವನ ನಡೆಸುತ್ತಿದ್ದರು. ಇನ್ನು ಕೆಲವರ ಜೀವನದಲ್ಲಿ ಹಣ, ಹೆಸರು ಎಲ್ಲಾ ಇದ್ದರೂ ಏನೊ ಇಲ್ಲ ಎಂಬ ಭಾವನೆ ಇತ್ತು. (ಪ್ರಸಂ. 2:3-11) ಆದರೆ ಅಂಥವರೂ ಬೈಬಲಿನ ಶಕ್ತಿಯನ್ನು ಸ್ವತಃ ಅನುಭವಿಸಿ ಬದಲಾದದ್ದರಿಂದ ಈಗ ಅವರ ಬಾಳಲ್ಲಿ ಉಜ್ವಲ ನಿರೀಕ್ಷೆ ಮತ್ತು ಗುರಿ ಇದೆ. ಇಂಥ ಹಲವಾರು ಅನುಭವಗಳನ್ನು ಕಾವಲಿನಬುರುಜು ಪತ್ರಿಕೆಯ “ಬದುಕು ಬದಲಾದ ವಿಧ” ಎಂಬ ಸರಣಿ ಲೇಖನಗಳಲ್ಲಿ ಓದಿ ಆನಂದಿಸಿದ್ದೇವೆ. ಕ್ರೈಸ್ತರಾದ ಮೇಲೂ ನಾವೆಲ್ಲರೂ ಬೈಬಲಿನ ಸಹಾಯದಿಂದ ಯೆಹೋವನೊಂದಿಗಿನ ಸಂಬಂಧವನ್ನು ಬಲಪಡಿಸುತ್ತಾ ಇರಬೇಕು.

2. ದೇವರ ವಾಕ್ಯದ ಶಕ್ತಿಯಿಂದಾಗಿ ಒಂದನೇ ಶತಮಾನದಲ್ಲಿದ್ದ ಜನರು ಏನು ಮಾಡಿದರು?

2 ಇಂದು ದೇವರ ವಾಕ್ಯದ ಅಧ್ಯಯನ ಮಾಡಿದ ಮೇಲೆ ಅನೇಕರು ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿರುವುದು ಆಶ್ಚರ್ಯದ ವಿಷಯವಲ್ಲ. ಒಂದನೇ ಶತಮಾನದಲ್ಲಿ ಸ್ವರ್ಗೀಯ ನಿರೀಕ್ಷೆ ಇದ್ದ ಸಹೋದರ ಸಹೋದರಿಯರು ಕೂಡ ಇಂಥ ಬದಲಾವಣೆಗಳನ್ನು ಮಾಡಿದ್ದರು. (1 ಕೊರಿಂಥ 6:9-11 ಓದಿ.) ದೇವರ ರಾಜ್ಯಕ್ಕೆ ಯಾರು ಬಾಧ್ಯರಾಗುವುದಿಲ್ಲ ಎಂದು ಪೌಲ ಹೇಳುತ್ತಾ “ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ” ಎಂದನು. ದೇವರ ವಾಕ್ಯ ಮತ್ತು ಪವಿತ್ರಾತ್ಮವು ಇವರಿಗೆ ಬದಲಾಗಲು ಸಹಾಯಮಾಡಿತು. ಆದರೆ ಕೆಲವರು ಕ್ರೈಸ್ತರಾದ ಮೇಲೆ ಗಂಭೀರ ತಪ್ಪುಗಳನ್ನು ಮಾಡಿದರು. ಇದರಿಂದಾಗಿ ಯೆಹೋವನ ಜೊತೆ ಇದ್ದ ಒಳ್ಳೇ ಸಂಬಂಧವನ್ನು ಕಳಕೊಂಡರು. ಉದಾಹರಣೆಗೆ, ಒಬ್ಬ ಅಭಿಷಿಕ್ತ ಸಹೋದರನನ್ನು ಬಹಿಷ್ಕರಿಸಲಾಯಿತೆಂದು ಬೈಬಲ್‌ ಹೇಳುತ್ತದೆ. ನಂತರ ಅವನು ತನ್ನ ನಡತೆಯನ್ನು ಬದಲಾಯಿಸಿಕೊಂಡು ಪುನಃ ಕ್ರೈಸ್ತ ಸಭೆಯ ಭಾಗವಾದನು. (1 ಕೊರಿಂ. 5:1-5; 2 ಕೊರಿಂ. 2:5-8) ಹೀಗೆ ದೇವರ ವಾಕ್ಯದ ಶಕ್ತಿಯಿಂದಾಗಿ ನಮ್ಮ ಅನೇಕ ಸಹೋದರ ಸಹೋದರಿಯರು ತಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಈ ಸಂಗತಿ ನಮಗೆ ಪ್ರೋತ್ಸಾಹ ಕೊಡುತ್ತದೆ.

3. ಈ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?

3 ದೇವರ ವಾಕ್ಯಕ್ಕೆ ತುಂಬ ಶಕ್ತಿಯಿದೆ. ಈ ವಾಕ್ಯವನ್ನು ಯೆಹೋವನು ನಮಗೆ ಕೊಟ್ಟಿರುವುದರಿಂದ ಅದನ್ನು ಚೆನ್ನಾಗಿ ಬಳಸಬೇಕು. (2 ತಿಮೊ. 2:15) ಬೈಬಲಿನ ಶಕ್ತಿಯನ್ನು (1) ನಮ್ಮ ಜೀವನದಲ್ಲಿ, (2) ಸೇವೆಯಲ್ಲಿ ಮತ್ತು (3) ವೇದಿಕೆಯಿಂದ ಕಲಿಸುವಾಗ ಬಳಸಲು ಏನು ಮಾಡಬೇಕು ಎಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ನಾವು ಚರ್ಚಿಸುವ ವಿಷಯಗಳು ನಮಗೆ ಪ್ರಯೋಜನವಾಗುವಂತೆ ಕಲಿಸುವ ನಮ್ಮ ಸ್ವರ್ಗೀಯ ತಂದೆಯನ್ನು ಪ್ರೀತಿಸಲು, ಮಾನ್ಯಮಾಡಲು ಸಹಾಯ ಮಾಡುತ್ತವೆ.—ಯೆಶಾ. 48:17.

ನಿಮ್ಮ ಜೀವನದಲ್ಲಿ

4. (ಎ) ದೇವರ ವಾಕ್ಯ ನಮ್ಮನ್ನು ಪ್ರಭಾವಿಸಬೇಕಾದರೆ ನಾವೇನು ಮಾಡಬೇಕು? (ಬಿ) ಬೈಬಲ್‌ ಓದಲು ನೀವು ಹೇಗೆ ಸಮಯ ಮಾಡಿಕೊಳ್ಳುತ್ತೀರಿ?

4 ದೇವರ ವಾಕ್ಯ ನಮ್ಮನ್ನು ಪ್ರಭಾವಿಸಬೇಕಾದರೆ ನಾವು ಅದನ್ನು ತಪ್ಪದೇ ಓದಬೇಕು. ಪ್ರತಿದಿನ ಓದಲು ಪ್ರಯತ್ನಿಸಬೇಕು. (ಯೆಹೋ. 1:8) ನಮ್ಮಲ್ಲಿ ಹೆಚ್ಚಿನವರಿಗೆ ಮಾಡಲು ತುಂಬ ಕೆಲಸಗಳಿರುತ್ತವೆ. ಅದೇನೇ ಇರಲಿ, ಎಷ್ಟೇ ಜವಾಬ್ದಾರಿಗಳಿರಲಿ ಇದರಿಂದಾಗಿ ಬೈಬಲ್‌ ಓದುವ ನಮ್ಮ ರೂಢಿಯನ್ನು ತಪ್ಪಿಸಬಾರದು. (ಎಫೆಸ 5:15, 16 ಓದಿ.) ಯೆಹೋವನ ಜನರು ಬೈಬಲನ್ನು ಓದಲು ಸಮಯ ಮಾಡಿಕೊಳ್ಳಲಿಕ್ಕಾಗಿ ತಮಗೆ ಸೂಕ್ತವಾಗಿರುವ ಹೊಸಹೊಸ ವಿಧಾನಗಳನ್ನು ಕಂಡುಹಿಡಿದಿದ್ದಾರೆ. ಅವರು ಬಹುಶಃ ಮುಂಜಾನೆ ಓದುತ್ತಾರೆ. ಹಗಲು ಹೊತ್ತಿನಲ್ಲಿ ಯಾವಾಗಾದರೂ ಸಮಯ ಮಾಡಿಕೊಂಡು ಓದುತ್ತಾರೆ. ರಾತ್ರಿ ಹೊತ್ತಿನಲ್ಲಿ ಬೈಬಲ್‌ ಓದುತ್ತಾರೆ. ಕೀರ್ತನೆಗಾರನ ಮಾತನ್ನು ಅವರೂ ಒಪ್ಪಿಕೊಳ್ಳುತ್ತಾರೆ. ಅವನು ಬರೆದದ್ದು: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.”—ಕೀರ್ತ. 119:97.

5, 6. (ಎ) ನಾವು ಧ್ಯಾನಿಸಬೇಕು ಯಾಕೆ? (ಬಿ) ಪ್ರಯೋಜನ ಆಗುವಂಥ ರೀತಿಯಲ್ಲಿ ಬೈಬಲ್‌ ಬಗ್ಗೆ ಧ್ಯಾನಿಸುವುದು ಹೇಗೆ? (ಸಿ) ಬೈಬಲನ್ನು ತಪ್ಪದೇ ಓದುವುದರಿಂದ, ಧ್ಯಾನಿಸುವುದರಿಂದ ನಿಮಗೆ ಹೇಗೆ ಪ್ರಯೋಜನವಾಗಿದೆ?

5 ಆದರೆ ಬೈಬಲನ್ನು ಓದುವುದು ಮಾತ್ರ ಸಾಕಾಗುವುದಿಲ್ಲ. ಓದಿದ ವಿಷಯದ ಬಗ್ಗೆ ಧ್ಯಾನಿಸುವುದು ಕೂಡ ಮುಖ್ಯ. ಅಂದರೆ ನಾವು ಓದಿದ್ದರ ಬಗ್ಗೆ ಸೂಕ್ಷ್ಮವಾಗಿ ಮತ್ತು ಗಾಢವಾಗಿ ಯೋಚಿಸಬೇಕು. (ಕೀರ್ತ. 1:1-3) ಆಗಮಾತ್ರ ಬೈಬಲಲ್ಲಿರುವ ವಿವೇಕವನ್ನು ನಮ್ಮ ಜೀವನದಲ್ಲಿ ಅನ್ವಯಿಸಲು ಸಾಧ್ಯ. ನಾವು ದೇವರ ವಾಕ್ಯವನ್ನು ಮುದ್ರಿತರೂಪದಲ್ಲಿ ಓದಲಿ ಅಥವಾ ಎಲೆಕ್ಟ್ರಾನಿಕ್‌ ಸಾಧನದಲ್ಲಿ ಓದಲಿ ಅದು ನಮ್ಮನ್ನು ಬದಲಾಯಿಸಬೇಕು, ಪ್ರೇರಿಸಬೇಕು ಎಂಬ ಉದ್ದೇಶ ನಮಗಿರಬೇಕು.

ಒಬ್ಬ ಯೆಹೋವನ ಸಾಕ್ಷಿ ಬೈಬಲ್‌ ಓದುತ್ತಿದ್ದಾಳೆ

6 ಪ್ರಯೋಜನ ಆಗುವಂಥ ರೀತಿಯಲ್ಲಿ ಬೈಬಲ್‌ ಬಗ್ಗೆ ಧ್ಯಾನಿಸುವುದು ಹೇಗೆ? ನಾವು ಅದನ್ನು ಓದುತ್ತಿರುವಾಗ ಆಗಾಗ ನಿಲ್ಲಿಸಿ, ‘ಇದು ನನಗೆ ಯೆಹೋವನ ಬಗ್ಗೆ ಏನು ತಿಳಿಸುತ್ತದೆ? ನಾನೀಗ ಓದಿದ ವಿಷಯದಂತೆ ನನ್ನ ಜೀವನದಲ್ಲಿ ಈಗಾಗಲೇ ನಡೆಯುತ್ತಾ ಇದ್ದೇನಾ? ನಾನಿನ್ನೂ ಯಾವ ಬದಲಾವಣೆಗಳನ್ನು ಮಾಡಬೇಕಿದೆ?’ ಎಂದು ಯೋಚಿಸಬೇಕು. ಹೀಗೆ ದೇವರ ವಾಕ್ಯದಲ್ಲಿ ನಾವು ಓದಿದ ವಿಷಯದ ಬಗ್ಗೆ ಧ್ಯಾನಿಸುವುದಾದರೆ ಮತ್ತು ಅದರ ಬಗ್ಗೆ ಪ್ರಾರ್ಥಿಸುವುದಾದರೆ ಅದನ್ನು ನಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳಲು ಪ್ರೇರಣೆ ಸಿಗುತ್ತದೆ. ಆಗ ದೇವರ ವಾಕ್ಯಕ್ಕೆ ಶಕ್ತಿಯಿದೆ ಎಂದು ನಮ್ಮ ಜೀವನದಲ್ಲೇ ಅನುಭವವಾಗುತ್ತದೆ.—2 ಕೊರಿಂ. 10:4, 5.

ಸೇವೆಯಲ್ಲಿ

7. ನಾವು ಸೇವೆಯಲ್ಲಿ ದೇವರ ವಾಕ್ಯವನ್ನು ಹೇಗೆ ಚೆನ್ನಾಗಿ ಬಳಸಬಹುದು?

7 ನಾವು ಸಾರುವಾಗ ಮತ್ತು ಬೋಧಿಸುವಾಗ ದೇವರ ವಾಕ್ಯವನ್ನು ಹೆಚ್ಚೆಚ್ಚು ಬಳಸುವುದು ತುಂಬ ಪ್ರಾಮುಖ್ಯ. ಒಬ್ಬ ಸಹೋದರ ಹೇಳುವುದು: “ನೀವು ಯೆಹೋವನ ಜೊತೆ ಸೇವೆಗೆ ಹೋಗಿದ್ದೀರಿ ಎಂದು ನೆನಸಿ. ಮನೆಯವರ ಹತ್ತಿರ ಮಾತಾಡುವಾಗ ನೀವೇ ಮಾತಾಡುತ್ತಾ ಇರುತ್ತೀರಾ ಅಥವಾ ಯೆಹೋವನಿಗೂ ಮಾತಾಡುವಂತೆ ಬಿಡುತ್ತೀರಾ?” ನಾವು ಸೇವೆಯಲ್ಲಿ ಬೈಬಲಿನಿಂದ ವಚನ ಓದುವಾಗ ಯೆಹೋವನು ಮನೆಯವರೊಟ್ಟಿಗೆ ಮಾತಾಡುವಂತೆ ಬಿಡುತ್ತೇವೆ. ಚೆನ್ನಾಗಿ ಯೋಚಿಸಿ ಆಯ್ಕೆ ಮಾಡಿದ ಒಂದು ವಚನ ನಾವಾಡುವ ಯಾವುದೇ ಮಾತಿಗಿಂತ ಹೆಚ್ಚು ಶಕ್ತಿಯುತ. (1 ಥೆಸ. 2:13) ನೀವು ಸೇವೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಸಾರಿ ಬೈಬಲ್‌ ವಚನಗಳನ್ನು ಓದುತ್ತೀರಾ?

8. ನಾವು ಸೇವೆಯಲ್ಲಿ ವಚನಗಳನ್ನು ಓದಿದರೆ ಮಾತ್ರ ಸಾಕಾಗುವುದಿಲ್ಲ ಯಾಕೆ?

8 ಆದರೆ ನಾವು ಸೇವೆಯಲ್ಲಿ ಬೈಬಲ್‌ ವಚನಗಳನ್ನು ಓದುವುದು ಮಾತ್ರ ಸಾಕಾಗುವುದಿಲ್ಲ. ಹೆಚ್ಚಿನ ಜನರಿಗೆ ಬೈಬಲ್‌ ಬಗ್ಗೆ ಅಲ್ಪಸ್ವಲ್ಪ ಗೊತ್ತಿರುತ್ತದೆ ಅಥವಾ ಏನೂ ಗೊತ್ತಿರುವುದಿಲ್ಲ. ಒಂದನೇ ಶತಮಾನದ ಜನರು ಹೀಗೇ ಇದ್ದರು, ಇಂದು ಕೂಡ ಹಾಗೇ ಇದ್ದಾರೆ. (ರೋಮ. 10:2) ಆದ್ದರಿಂದ ನಾವು ಓದಿರುವ ವಚನ ಮನೆಯವರಿಗೆ ಅರ್ಥವಾಗಿದೆ ಎಂದು ನಾವು ಅಂದುಕೊಳ್ಳಬಾರದು. ಬದಲಿಗೆ ಅದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಬೇಕು. ಒಂದು ವಚನ ಓದಿದ ಮೇಲೆ ಅದರಲ್ಲಿರುವ ಮುಖ್ಯ ಪದಗಳನ್ನು ಪುನಃ ಹೇಳಬಹುದು. ನಂತರ ಅವುಗಳ ಅರ್ಥವೇನೆಂದು ವಿವರಿಸಬಹುದು. ಆಗ ದೇವರ ವಾಕ್ಯವು ಜನರ ಹೃದಯ ಮತ್ತು ಮನಸ್ಸನ್ನು ತಲಪುತ್ತದೆ.—ಲೂಕ 24:32 ಓದಿ.

9. ಒಂದು ವಚನ ಓದುವ ಮುಂಚೆ ನಾವು ಹೇಳುವ ಮಾತುಗಳಿಂದ ಜನರಲ್ಲಿ ಬೈಬಲಿನ ಬಗ್ಗೆ ಹೇಗೆ ಗೌರವ ಮೂಡಿಸಬಹುದು? ಉದಾಹರಣೆ ಕೊಡಿ.

9 ಮನೆಯವರಿಗೆ ಬೈಬಲ್‌ ವಚನವನ್ನು ಓದಿಹೇಳುವ ಮುಂಚೆ ನಾವು ಹೇಳುವ ಮಾತುಗಳ ಮೂಲಕವೂ ಅವರಲ್ಲಿ ಬೈಬಲಿನ ಬಗ್ಗೆ ಗೌರವ ಮೂಡಿಸಬಹುದು. ಉದಾಹರಣೆಗೆ, ನಾವು ಹೀಗೆ ಹೇಳಬಹುದು: “ಈ ವಿಷಯದ ಬಗ್ಗೆ ನಮ್ಮ ಸೃಷ್ಟಿಕರ್ತ ಏನು ಹೇಳುತ್ತಾನೆ ಅಂತ ನೋಡೋಣ.” ಕ್ರೈಸ್ತರಲ್ಲದ ವ್ಯಕ್ತಿಯ ಜೊತೆ ನಾವು ಮಾತಾಡುತ್ತಿರುವಲ್ಲಿ, “ಪವಿತ್ರ ಗ್ರಂಥ ಏನು ಹೇಳುತ್ತದೆ ಅಂತ ನೋಡೋಣ” ಎಂದು ಹೇಳಬಹುದು. ಧರ್ಮದ ವಿಷಯದಲ್ಲಿ ಆಸಕ್ತಿ ಇಲ್ಲದ ವ್ಯಕ್ತಿಗೆ, “ಹಳೇಕಾಲದ ಈ ಗಾದೆಮಾತು ಕೇಳಿದ್ದೀರಾ?” ಎಂದು ಪ್ರಶ್ನೆ ಹಾಕಿ ವಚನ ಓದಬಹುದು. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಹಿನ್ನೆಲೆ, ನಂಬಿಕೆಗಳಿವೆ ಎಂದು ನಾವು ನೆನಪಿಡುವುದಾದರೆ ನಮ್ಮ ಪೀಠಿಕೆಯನ್ನು ಆಸಕ್ತಿಭರಿತವಾಗಿ ಮಾಡಲು ಕೈಲಾದದ್ದೆಲ್ಲ ಮಾಡುತ್ತೇವೆ.—1 ಕೊರಿಂ. 9:22, 23.

ಸೇವೆಯಲ್ಲಿ ಯೆಹೋವನ ಸಾಕ್ಷಿಗಳು ಬೈಬಲನ್ನು ಉಪಯೋಗಿಸುತ್ತಿದ್ದಾರೆ

10. (ಎ) ಒಬ್ಬ ಸಹೋದರನಿಗಾದ ಅನುಭವ ಹೇಳಿ. (ಬಿ) ನೀವು ಜನರಿಗೆ ಸಾರುವಾಗ ದೇವರ ವಾಕ್ಯಕ್ಕಿರುವ ಶಕ್ತಿಯನ್ನು ನೋಡಿದ್ದೀರಾ?

10 ದೇವರ ವಾಕ್ಯವನ್ನು ಬಳಸುವುದು ಮನೆಯವರ ಮೇಲೆ ತುಂಬ ಪ್ರಭಾವ ಬೀರುತ್ತದೆ ಎಂದು ಅನೇಕರು ತಿಳಿದುಕೊಂಡಿದ್ದಾರೆ. ಉದಾಹರಣೆಗೆ, ತುಂಬ ವರ್ಷಗಳಿಂದ ನಮ್ಮ ಪತ್ರಿಕೆಗಳನ್ನು ಓದುತ್ತಿದ್ದ ವಯಸ್ಸಾದ ಒಬ್ಬ ವ್ಯಕ್ತಿಯನ್ನು ಒಬ್ಬ ಸಹೋದರ ಭೇಟಿ ಮಾಡಲು ಹೋದನು. ಕಾವಲಿನಬುರುಜುವಿನ ಹೊಸ ಸಂಚಿಕೆಯನ್ನು ಅವನು ಸುಮ್ಮನೆ ಕೊಟ್ಟು ಬರಬಹುದಿತ್ತು. ಆದರೆ ಅದರ ಜೊತೆಗೆ ಆ ಪತ್ರಿಕೆಯಲ್ಲಿದ್ದ ಒಂದು ವಚನವನ್ನು ಓದಿಹೇಳಲೂ ತೀರ್ಮಾನಿಸಿದನು. ಅವನು 2 ಕೊರಿಂಥ 1:3, 4​ನ್ನು ಓದಿದನು. ಆ ವಚನದಲ್ಲಿ ಹೀಗಿದೆ: ‘ಕೋಮಲ ಕರುಣೆಯ ತಂದೆಯೂ ಸಕಲ ಸಾಂತ್ವನದ ದೇವರೂ ಆಗಿರುವಾತನು ನಮ್ಮ ಎಲ್ಲ ಸಂಕಟಗಳಲ್ಲಿ ನಮ್ಮನ್ನು ಸಾಂತ್ವನಗೊಳಿಸುತ್ತಾನೆ.’ ಈ ವಚನ ವಯಸ್ಸಾದ ಆ ವ್ಯಕ್ತಿಯ ಮನಮುಟ್ಟಿತು. ಎಷ್ಟೆಂದರೆ ಅದನ್ನು ಪುನಃ ಓದುವಂತೆ ಸಹೋದರನ ಹತ್ತಿರ ಹೇಳಿದರು. ನಿಜವಾಗಲೂ ತನಗೂ ತನ್ನ ಹೆಂಡತಿಗೂ ಸಾಂತ್ವನದ ಅಗತ್ಯ ಇತ್ತು ಎಂದು ಆ ವ್ಯಕ್ತಿ ಹೇಳಿದರು. ಈ ವಚನದಿಂದಾಗಿ ಅವರು ಬೈಬಲಿನ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳಲು ಬಯಸಿದರು. ಸೇವೆಯಲ್ಲಿ ದೇವರ ವಾಕ್ಯವನ್ನು ಬಳಸಿದರೆ ಅದು ನಿಜವಾಗಲೂ ಜನರನ್ನು ಪ್ರಭಾವಿಸುತ್ತದೆ!—ಅ. ಕಾ. 19:20.

ವೇದಿಕೆಯಿಂದ ಕಲಿಸುವಾಗ

11. ವೇದಿಕೆಯಿಂದ ಕಲಿಸುವ ಸಹೋದರರಿಗೆ ಯಾವ ಜವಾಬ್ದಾರಿ ಇದೆ?

11 ಕೂಟಗಳಿಗೆ, ಸಮ್ಮೇಳನಗಳಿಗೆ, ಅಧಿವೇಶನಗಳಿಗೆ ಹಾಜರಾಗುವುದೆಂದರೆ ನಮಗೆ ತುಂಬ ಇಷ್ಟ. ನಾವು ಹಾಜರಾಗಲು ಮುಖ್ಯ ಕಾರಣ ಅಲ್ಲಿ ಯೆಹೋವನನ್ನು ಆರಾಧಿಸುವುದೇ. ನಾವು ಅಲ್ಲಿ ಕಲಿಯುವ ವಿಷಯಗಳಿಂದ ನಮಗೆ ಪ್ರಯೋಜನವೂ ಇದೆ. ಹಾಗಾಗಿ ವೇದಿಕೆಯಿಂದ ಕಲಿಸುವುದು ಸಹೋದರರಿಗಿರುವ ಒಂದು ಸುಯೋಗವಾಗಿದೆ. ಆದರೆ ಅವರಿಗೆ ಒಂದು ದೊಡ್ಡ ಜವಾಬ್ದಾರಿ ಕೂಡ ಇದೆ. (ಯಾಕೋ. 3:1) ಅದೇನೆಂದರೆ, ಅವರು ಕಲಿಸುವ ವಿಷಯಗಳು ದೇವರ ವಾಕ್ಯದ ಮೇಲೆ ಆಧರಿತವಾಗಿರಬೇಕು. ನಿಮಗೆ ವೇದಿಕೆಯಿಂದ ಕಲಿಸುವ ನೇಮಕ ಇದ್ದರೆ, ದೇವರ ವಾಕ್ಯಕ್ಕಿರುವ ಶಕ್ತಿಯನ್ನು ನಿಮ್ಮ ಸಭಿಕರಿಗೆ ಪ್ರಯೋಜನವಾಗುವಂತೆ ಹೇಗೆ ಬಳಸಬಹುದು?

ವೇದಿಕೆಯಿಂದ ಕಲಿಸುವಾಗ ಒಬ್ಬ ಸಹೋದರ ಬೈಬಲನ್ನು ಬಳಸುತ್ತಿದ್ದಾನೆ

12. ಒಬ್ಬ ಭಾಷಣಗಾರನು ಬೈಬಲನ್ನು ತನ್ನ ಭಾಷಣದ ಬೆನ್ನೆಲುಬಾಗಿ ಮಾಡುವುದು ಹೇಗೆ?

12 ಬೈಬಲ್‌ ನಿಮ್ಮ ಭಾಷಣದ ಬೆನ್ನೆಲುಬು ಆಗಿರಬೇಕು. (ಯೋಹಾ. 7:16) ಹಾಗಾಗಿ ಯಾವುದೇ ವಿಷಯ ಬೈಬಲ್‌ ವಚನಗಳಿಗಿಂತ ಹೆಚ್ಚು ಗಮನ ಸೆಳೆಯಬಾರದು. ಅದು ನೀವು ಭಾಷಣ ಕೊಡುವ ರೀತಿಯಾಗಿರಬಹುದು, ಭಾಷಣದಲ್ಲಿ ನೀವು ಹೇಳುವ ಅನುಭವಗಳಾಗಿರಬಹುದು, ದೃಷ್ಟಾಂತಗಳಾಗಿರಬಹುದು. ಇದ್ಯಾವುದೂ ಹೆಚ್ಚು ಮುಖ್ಯವಾಗಬಾರದು. ಅಲ್ಲದೆ ನೆನಪಿಡಿ, ವಚನಗಳನ್ನು ಬರೀ ಓದಿದರೆ ನೀವು ಬೈಬಲಿನಿಂದ ಕಲಿಸಿದ್ದೀರಿ ಎಂದಾಗುವುದಿಲ್ಲ. ತೀರ ಹೆಚ್ಚು ವಚನಗಳನ್ನು ಓದಿದರೆ ಸಹ ಸಭಿಕರಲ್ಲಿ ಹೆಚ್ಚಿನವರಿಗೆ ಅವು ಮನಸ್ಸಿನಲ್ಲಿ ಉಳಿಯುವುದಿಲ್ಲ. ಆದ್ದರಿಂದ ಯಾವ ವಚನಗಳನ್ನು ಬಳಸಬೇಕು ಎಂದು ಮೊದಲೇ ಚೆನ್ನಾಗಿ ಯೋಚಿಸಿ ಆಯ್ಕೆ ಮಾಡಿ. ಆಮೇಲೆ ಭಾಷಣದಲ್ಲಿ ಅವನ್ನು ಓದಿರಿ, ವಿವರಿಸಿರಿ, ವಚನಕ್ಕೆ ಸಂಬಂಧಪಟ್ಟ ತಕ್ಕ ದೃಷ್ಟಾಂತ ಬಳಸಿರಿ, ಚೆನ್ನಾಗಿ ಅನ್ವಯ ಮಾಡಿರಿ. ಇದಕ್ಕೆಲ್ಲ ಸಾಕಷ್ಟು ಸಮಯ ಕೊಡಿ. (ನೆಹೆ. 8:8) ಭಾಷಣಕ್ಕೆ ಸಂಘಟನೆ ಒಂದು ಹೊರಮೇರೆಯನ್ನು ಕೊಟ್ಟಿರುವಾಗ ಅದರಲ್ಲಿರುವ ವಿಷಯಗಳನ್ನು ಮತ್ತು ವಚನಗಳನ್ನು ಚೆನ್ನಾಗಿ ಅಧ್ಯಯನ ಮಾಡಿ. ಕೊಡಲ್ಪಟ್ಟಿರುವ ವಿಷಯ ಮತ್ತು ವಚನ ಹೇಗೆ ಒಂದಕ್ಕೊಂದು ಸಂಬಂಧಿಸಿದೆ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಆಮೇಲೆ ಹೊರಮೇರೆಯ ವಿಷಯಗಳನ್ನು ಸಭಿಕರಿಗೆ ವಿವರಿಸಲು ಅದರಲ್ಲಿರುವ ಕೆಲವು ವಚನಗಳನ್ನು ಆರಿಸಿಕೊಳ್ಳಿ. (ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕದ 21-23​ನೇ ಅಧ್ಯಾಯಗಳಲ್ಲಿ ಒಳ್ಳೇ ಸಲಹೆಗಳಿವೆ.) ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನ ಸಹಾಯ ಬೇಡಿಕೊಳ್ಳಿ. ಆಗ ಬೈಬಲಿನಲ್ಲಿರುವ ಆತನ ಅಮೂಲ್ಯ ವಿಚಾರಗಳನ್ನು ವಿವರಿಸಲು ನಿಮಗೆ ಆತನು ಸಹಾಯ ಮಾಡುವನು.—ಎಜ್ರ 7:10; ಜ್ಞಾನೋಕ್ತಿ 3:13, 14 ಓದಿ.

13. (ಎ) ಕೂಟದಲ್ಲಿ ಓದಲಾದ ಒಂದು ವಚನ ಹೇಗೆ ಒಬ್ಬ ಸಹೋದರಿಯ ಮನಸ್ಪರ್ಶಿಸಿತು? (ಬಿ) ನಮ್ಮ ಕೂಟಗಳಲ್ಲಿ ಬೈಬಲಿನಿಂದ ಕಲಿಸಲಾಗುವ ರೀತಿ ನಿಮ್ಮನ್ನು ಹೇಗೆ ಪ್ರಭಾವಿಸಿದೆ?

13 ಆಸ್ಟ್ರೇಲಿಯದಲ್ಲಿರುವ ಒಬ್ಬ ಸಹೋದರಿಯನ್ನು ಕ್ರೈಸ್ತ ಕೂಟಗಳಲ್ಲಿ ಬಳಸಲಾದ ವಚನಗಳು ಪ್ರಭಾವಿಸಿದವು. ಆಕೆಯ ಬಾಲ್ಯದಲ್ಲಿ ಹಲವಾರು ಕೆಟ್ಟ ವಿಷಯಗಳು ನಡೆದಿದ್ದವು. ಮುಂದೆ ಅವರು ಯೆಹೋವನ ಬಗ್ಗೆ ಕಲಿತು ತನ್ನ ಜೀವನವನ್ನು ಆತನಿಗೆ ಸಮರ್ಪಿಸಿದರು. ಹೀಗಿದ್ದರೂ ಯೆಹೋವನು ತನ್ನನ್ನು ಪ್ರೀತಿಸುತ್ತಾನೆ ಎಂದು ಅವರಿಗೆ ಪೂರ್ತಿ ನಂಬಿಕೆ ಬಂದಿರಲಿಲ್ಲ. ಒಂದು ದಿನ ಕೂಟದಲ್ಲಿ ಓದಲಾದ ವಚನವೊಂದು ಅವರ ಮನಸ್ಪರ್ಶಿಸಿತು. ಅವರು ಆ ವಚನದ ಬಗ್ಗೆ ಧ್ಯಾನಿಸಿದರು, ಸಂಶೋಧನೆ ಮಾಡಿದರು. ಆಗ ಇನ್ನೂ ಹಲವಾರು ವಚನಗಳು ಸಿಕ್ಕಿದವು. ಹೀಗೆ ಯೆಹೋವನು ನಿಜವಾಗಲೂ ತನ್ನನ್ನು ಪ್ರೀತಿಸುತ್ತಾನೆ ಎಂದು ಅವರಿಗೆ ಪೂರ್ತಿ ಮನವರಿಕೆಯಾಯಿತು.a ಈ ರೀತಿ ನಿಮಗೂ ಕೂಟದಲ್ಲಿ, ಸಮ್ಮೇಳನದಲ್ಲಿ ಅಥವಾ ಅಧಿವೇಶನದಲ್ಲಿ ಓದಲಾದ ಯಾವುದಾದರೂ ವಚನ ಮನಸ್ಪರ್ಶಿಸಿದೆಯಾ?—ನೆಹೆ. 8:12.

14. ಯೆಹೋವನ ವಾಕ್ಯವನ್ನು ನಾವು ಮಾನ್ಯಮಾಡುತ್ತೇವೆ, ಪ್ರೀತಿಸುತ್ತೇವೆ ಎಂದು ಹೇಗೆ ತೋರಿಸಬಹುದು?

14 ಯೆಹೋವನು ತನ್ನ ವಾಕ್ಯವಾದ ಬೈಬಲನ್ನು ಕೊಟ್ಟಿರುವುದಕ್ಕೆ ನಾವು ಆತನಿಗೆ ಚಿರಋಣಿಗಳು ಅಲ್ಲವೇ? ತನ್ನ ವಾಕ್ಯ ಸದಾಕಾಲ ಇರುವುದು ಎಂದು ಆತನು ಮಾತುಕೊಟ್ಟಿದ್ದನು ಮತ್ತು ಆ ಮಾತನ್ನು ಉಳಿಸಿಕೊಂಡಿದ್ದಾನೆ. (1 ಪೇತ್ರ 1:24, 25) ಹೀಗಿರುವಾಗ ನಾವು ಬೈಬಲನ್ನು ತಪ್ಪದೇ ಓದಬೇಕು, ನಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು ಮತ್ತು ಬೇರೆಯವರಿಗೆ ಸಹಾಯ ಮಾಡಲು ಅದನ್ನು ಬಳಸಬೇಕು. ಹೀಗೆ ಮಾಡಿದರೆ ಈ ಅಮೂಲ್ಯ ನಿಕ್ಷೇಪವನ್ನು ಮಾತ್ರವಲ್ಲ ಮುಖ್ಯವಾಗಿ ಅದರ ಲೇಖಕನಾದ ಯೆಹೋವ ದೇವರನ್ನು ನಿಜವಾಗಲೂ ಪ್ರೀತಿಸುತ್ತೇವೆ, ಮಾನ್ಯಮಾಡುತ್ತೇವೆ ಎಂದು ತೋರಿಸಿಕೊಡುತ್ತೇವೆ.

a “ಬದುಕಿನ ತಿರುಗುಬಿಂದು” ಎಂಬ ಚೌಕ ನೋಡಿ.

ದೇವರ ವಾಕ್ಯಕ್ಕಿರುವ ಶಕ್ತಿಯನ್ನು ಹೇಗೆ ಬಳಸಬೇಕು?

ನಿಮ್ಮ ಜೀವನದಲ್ಲಿ:

  • ಬೈಬಲನ್ನು ತಪ್ಪದೇ ಓದಿ

  • ಓದಿದ್ದನ್ನು ಧ್ಯಾನಿಸಿ

  • ಕಲಿತದ್ದನ್ನು ಅನ್ವಯಿಸಿಕೊಳ್ಳಿ

ಸೇವೆಯಲ್ಲಿ:

  • ಹೆಚ್ಚೆಚ್ಚು ವಚನಗಳನ್ನು ಬಳಸಿ

  • ನೀವು ಓದಿದ ವಚನದ ಮುಖ್ಯ ಪದಗಳನ್ನು ಪುನಃ ಹೇಳಿ, ಮುಖ್ಯ ವಿಷಯವನ್ನು ವಿವರಿಸಿ

  • ಜನರು ದೇವರ ವಾಕ್ಯವನ್ನು ಗೌರವಿಸುವ ರೀತಿಯಲ್ಲಿ ವಚನಗಳನ್ನು ಪರಿಚಯಿಸಿ

ವೇದಿಕೆಯಿಂದ ಕಲಿಸುವಾಗ:

  • ಬೈಬಲ್‌ ನಿಮ್ಮ ಭಾಷಣದ ಬೆನ್ನೆಲುಬು ಆಗಿರಬೇಕು

  • ಅನುಭವಗಳು, ದೃಷ್ಟಾಂತಗಳು, ನಿಮ್ಮ ಮಾತಿನ ಶೈಲಿ ಬೈಬಲಿಗಿಂತ ಹೆಚ್ಚು ಗಮನ ಸೆಳೆಯಬಾರದು

  • ನೀವು ಓದಿದ ವಚನವನ್ನು ವಿವರಿಸಲು, ದೃಷ್ಟಾಂತಿಸಲು, ಅನ್ವಯಿಸಲು ಸಾಕಷ್ಟು ಸಮಯ ಕೊಡಿ

“ಬದುಕಿನ ತಿರುಗುಬಿಂದು”

ವಿಕ್ಟೋರಿಯ ಸತ್ಯ ಕಲಿತು ಎಷ್ಟೋ ವರ್ಷಗಳಾಗಿದ್ದರೂ ‘ದೇವರು ನನ್ನನ್ನು ಪ್ರೀತಿಸಲು ಸಾಧ್ಯವಿಲ್ಲ’ ಎಂಬ ಭಾವನೆ ಅವರನ್ನು ಕಾಡುತ್ತಿತ್ತು. ದೇವರು ನಿಜವಾಗಿಯೂ ತನ್ನನ್ನು ಪ್ರೀತಿಸುತ್ತಾನೆ ಎಂದು ಒಪ್ಪಿಕೊಳ್ಳಲು ಅವರಿಗೆ ಯಾವುದು ಸಹಾಯಮಾಡಿತು? ಆಕೆಯ ಕಥೆಗೆ ಗಮನ ಕೊಡಿ:

“ನನ್ನ ಬದುಕಿನ ತಿರುಗುಬಿಂದು ಬಂದದ್ದು ನಾನು ದೀಕ್ಷಾಸ್ನಾನ ಪಡೆದು 15 ವರ್ಷಗಳಾದ ನಂತರ. ಅಂದು ರಾಜ್ಯ ಸಭಾಗೃಹದಲ್ಲಿ ಕೊಡಲಾದ ಒಂದು ಭಾಷಣದಲ್ಲಿ . . . ಭಾಷಣಗಾರ ಯಾಕೋಬ 1:23, 24​ರ ಬಗ್ಗೆ ಮಾತಾಡಿದರು. ಆ ವಚನಗಳಲ್ಲಿ ದೇವರ ವಾಕ್ಯವನ್ನು ಒಂದು ಕನ್ನಡಿಗೆ ಹೋಲಿಸಲಾಗಿದೆ. ಅದರಲ್ಲಿ ನಮ್ಮನ್ನೇ ನೋಡುವಾಗ, ಯೆಹೋವನಿಗೆ ನಮ್ಮ ಬಗ್ಗೆ ಇರುವ ದೃಷ್ಟಿಕೋನ ಗೊತ್ತಾಗುತ್ತದೆ. ನನ್ನ ಬಗ್ಗೆ ಯೆಹೋವನಿಗಿರುವ ಅಭಿಪ್ರಾಯಕ್ಕೂ ನನಗಿರುವ ಅಭಿಪ್ರಾಯಕ್ಕೂ ವ್ಯತ್ಯಾಸ ಇದೆಯಲ್ಲಾ ಎಂದು ಯೋಚಿಸಲು ಆರಂಭಿಸಿದೆ. ನನಗೆ ಹೊಸದಾಗಿದ್ದ ಈ ವಿಚಾರವನ್ನು ಒಪ್ಪಿಕೊಳ್ಳಲು ಮೊದಮೊದಲು ಕಷ್ಟವಾಯಿತು. ಏಕೆಂದರೆ ಯೆಹೋವನು ನನ್ನನ್ನು ಪ್ರೀತಿಸುತ್ತಾನೆಂದು ನೆನಸುವುದು ಸ್ವಲ್ಪ ಅತಿಯಾಯಿತೆಂದು ಅನಿಸಿತು.

“ಕೆಲವು ದಿನಗಳ ನಂತರ, ನಾನು ಓದಿದ ಒಂದು ವಚನವು ನನ್ನ ಜೀವನವನ್ನು ಬದಲಾಯಿಸಿತು. ಯೆಶಾಯ 1:18​ರಲ್ಲಿ ಯೆಹೋವನು ‘ಬನ್ನಿರಿ ವಾದಿಸುವ . . . ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು’ ಎಂದು ಹೇಳುತ್ತಾನೆ. ಯೆಹೋವನೇ ನನ್ನೊಂದಿಗೆ ಮಾತಾಡುತ್ತಾ ಹೀಗಂದಂತೆ ಅನಿಸಿತು: ‘ಬಾ ವಿಕ್ಕಿ, ಮಾತಾಡಿ ಬಗೆಹರಿಸೋಣ. ನಿನ್ನ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ನೀನು ಮಾಡಿರುವ ಪ್ರತಿಯೊಂದು ಪಾಪವು ನನಗೆ ಚೆನ್ನಾಗಿ ಗೊತ್ತಿದೆ. ನಿನ್ನ ಹೃದಯದಲ್ಲೇನಿದೆ ಅಂತ ನನಗೆ ತಿಳಿದಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ.’

“ಅಂದು ರಾತ್ರಿ ನನಗೆ ನಿದ್ರೆಯೇ ಬರಲಿಲ್ಲ. ಯೆಹೋವನು ನನ್ನನ್ನು ಪ್ರೀತಿಸುತ್ತಾನಾ ಎಂಬ ಸಂಶಯ ಇನ್ನೂ ಇತ್ತು. ಆಗ ಯೇಸುವಿನ ವಿಮೋಚನಾ ಯಜ್ಞದ ಬಗ್ಗೆ ಯೋಚಿಸಲಾರಂಭಿಸಿದೆ. ಯೆಹೋವನು ಎಷ್ಟೊಂದು ಸಮಯದಿಂದ ನನ್ನ ವಿಷಯದಲ್ಲಿ ತಾಳ್ಮೆ ತೋರಿಸಿದ್ದಾನೆ, ಎಷ್ಟೊಂದು ವಿಧಗಳಲ್ಲಿ ನನಗೆ ಪ್ರೀತಿ ತೋರಿಸಿದ್ದಾನೆ ಎಂಬ ವಿಷಯ ಇದ್ದಕ್ಕಿದ್ದಂತೆ ಮನಸ್ಸಿಗೆ ಹೊಳೆಯಿತು. ಆದರೆ ನಾನು ಒಂದು ರೀತಿಯಲ್ಲಿ ಆತನಿಗೆ ‘ನನ್ನಂಥವಳನ್ನು ಪ್ರೀತಿಸುವಷ್ಟು ಅಪಾರ ಪ್ರೀತಿ ನಿನ್ನಲ್ಲಿಲ್ಲ. ನನ್ನ ಪಾಪಗಳು ಎಷ್ಟಿವೆಯೆಂದರೆ ನಿನ್ನ ಮಗನ ಯಜ್ಞ ಅವುಗಳನ್ನು ಮುಚ್ಚಿಸಲು ಸಾಕಾಗುವುದಿಲ್ಲ’ ಎಂದು ಹೇಳಿದಂತಿತ್ತು. ವಿಮೋಚನಾ ಯಜ್ಞವನ್ನು ಎತ್ತಿ ಯೆಹೋವನ ಕಡೆಗೆ ವಾಪಸ್‌ ಎಸೆದಂತೆ ಇತ್ತು. ಆದರೆ, ಆ ವಿಮೋಚನಾ ಮೌಲ್ಯ ಎಂಬ ಉಡುಗೊರೆಯ ಬಗ್ಗೆ ಧ್ಯಾನಿಸುವ ಮೂಲಕ ಯೆಹೋವನು ನನ್ನನ್ನು ಪ್ರೀತಿಸುತ್ತಾನೆ ಎಂಬ ಭಾವನೆ ಕೊನೆಗೂ ಈಗ ಮೂಡಿದೆ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ