ನಿಮ್ಮ ನಂಬಿಕೆಯ ಗುಣಮಟ್ಟ—ಈಗ ಪರೀಕ್ಷಿಸಲ್ಪಡುತ್ತದೆ
“ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ.”—ಯಾಕೋಬ 1:2, 3.
1. ಕ್ರೈಸ್ತರು ನಂಬಿಕೆಯ ಪರೀಕ್ಷೆಗಳನ್ನು ಏಕೆ ನಿರೀಕ್ಷಿಸಬೇಕು?
ನಿಜ ಕ್ರೈಸ್ತರು ಕಷ್ಟಾನುಭವಿಸಲು ಬಯಸುವುದಿಲ್ಲ, ಮತ್ತು ಅವರು ವೇದನೆ ಇಲ್ಲವೆ ಅಪಮಾನದಿಂದ ಸಂತೋಷವನ್ನೂ ಅನುಭವಿಸುವುದಿಲ್ಲ. ಆದರೂ, ಯೇಸುವಿನ ಮಲತಮ್ಮನಾದ ಯಾಕೋಬನಿಂದ ಬರೆಯಲ್ಪಟ್ಟ ಈ ಮೇಲಿನ ಮಾತುಗಳನ್ನು ಅವರು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ. ದೇವರ ಮಟ್ಟಗಳಿಗೆ ತಾವು ಅಂಟಿಕೊಳ್ಳುವುದರಿಂದ, ಶಿಷ್ಯರು ಹಿಂಸೆ ಮತ್ತು ಇತರ ತೊಂದರೆಗಳನ್ನು ನಿರೀಕ್ಷಿಸಸಾಧ್ಯವಿತ್ತೆಂದು ಕ್ರಿಸ್ತನು ಅವರಿಗೆ ಸ್ಪಷ್ಟಪಡಿಸಿದನು. (ಮತ್ತಾಯ 10:34; 24:9-13; ಯೋಹಾನ 16:33) ಹಾಗಿದ್ದರೂ, ಅಂತಹ ಪರೀಕ್ಷೆಗಳಿಂದ ಆನಂದವು ಫಲಿಸಸಾಧ್ಯವಿತ್ತು. ಅದು ಹೇಗೆ?
2. (ಎ) ನಮ್ಮ ನಂಬಿಕೆಯ ಪರೀಕ್ಷೆಗಳು ಹೇಗೆ ಆನಂದದಲ್ಲಿ ಪರಿಣಮಿಸಬಲ್ಲವು? (ಬಿ) ನಮ್ಮ ವಿಷಯದಲ್ಲಿ ತಾಳ್ಮೆಯು ಅದರ ಕೆಲಸವನ್ನು ಹೇಗೆ ಪೂರ್ಣಗೊಳಿಸಸಾಧ್ಯವಿದೆ?
2 ಕಷ್ಟಗಳು ಇಲ್ಲವೆ ನಂಬಿಕೆಯ ಪರೀಕ್ಷೆಗಳ ಕೆಳಗಿರುವಾಗ ನಾವು ಆನಂದವನ್ನು ಕಂಡುಕೊಳ್ಳುವ ಒಂದು ಕಾರಣವೇನೆಂದರೆ, ಅವು ಒಳ್ಳೆಯ ಫಲಿತಾಂಶವನ್ನು ಉತ್ಪಾದಿಸಸಾಧ್ಯವಿದೆ. ಯಾಕೋಬನು ಹೇಳುವಂತೆ, ಪರೀಕ್ಷೆಗಳು ಇಲ್ಲವೆ ಕಷ್ಟಗಳ ಎದುರಿನಲ್ಲಿ ತಾಳಿಕೊಳ್ಳುವುದು, “ತಾಳ್ಮೆಯನ್ನುಂಟುಮಾಡುತ್ತದೆ.” ಆ ಅಮೂಲ್ಯವಾದ ಕ್ರೈಸ್ತ ಗುಣವನ್ನು ವಿಕಸಿಸಿಕೊಳ್ಳುವುದರಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ. ಯಾಕೋಬನು ಬರೆದುದು: “ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ.” (ಯಾಕೋಬ 1:4) ತಾಳ್ಮೆಗೆ ಒಂದು ಕಾರ್ಯವನ್ನು, ‘ಕೆಲಸವನ್ನು’ ಮಾಡಲಿಕ್ಕಿದೆ. ಅದರ ನೇಮಕವು, ನಾವು ಸಮತೆಯುಳ್ಳ ಹಾಗೂ ಪ್ರೌಢರಾದ ಕ್ರೈಸ್ತರಾಗುವಂತೆ ಸಹಾಯ ಮಾಡುತ್ತಾ, ನಮ್ಮನ್ನು ಎಲ್ಲ ರೀತಿಯಲ್ಲೂ ಸಂಪೂರ್ಣರನ್ನಾಗಿ ಮಾಡುವುದೇ ಆಗಿದೆ. ಹೀಗೆ, ಕಷ್ಟಗಳನ್ನು ಬೇಗನೆ ಕೊನೆಗೊಳಿಸಲು ಅಶಾಸ್ತ್ರೀಯ ವಿಧಾನಗಳನ್ನು ಉಪಯೋಗಿಸುವ ಯಾವ ಪ್ರಯತ್ನಗಳನ್ನೂ ಮಾಡದೆ, ತಮ್ಮ ಅವಧಿಯನ್ನು ಅವು ಪೂರ್ಣಗೊಳಿಸುವಂತೆ ಬಿಡುವ ಮೂಲಕ, ನಮ್ಮ ನಂಬಿಕೆಯು ಪರೀಕ್ಷಿಸಲ್ಪಡುತ್ತದೆ ಮತ್ತು ಪರಿಷ್ಕರಿಸಲ್ಪಡುತ್ತದೆ. ಸನ್ನಿವೇಶಗಳೊಂದಿಗೆ ಇಲ್ಲವೆ ಜೊತೆ ಮಾನವರೊಂದಿಗೆ ವ್ಯವಹರಿಸುವಾಗ, ನಾವು ತಾಳ್ಮೆ, ಸಹಾನುಭೂತಿ, ದಯೆ, ಇಲ್ಲವೆ ಪ್ರೀತಿಯ ಕೊರತೆಯನ್ನು ತೋರಿಸುವವರಾಗಿರುವಲ್ಲಿ, ತಾಳ್ಮೆಯು ನಮ್ಮ ಕ್ರೈಸ್ತ ಗುಣಗಳನ್ನು ಸುಧಾರಿಸಬಲ್ಲದು. ಹೌದು, ಕ್ರಮಾನುಗತಿಯು ಹೀಗಿದೆ: ಪರೀಕ್ಷೆಗಳು ತಾಳ್ಮೆಯನ್ನು ಉತ್ಪಾದಿಸುತ್ತವೆ; ತಾಳ್ಮೆಯು ಕ್ರೈಸ್ತ ಗುಣಗಳನ್ನು ಹೆಚ್ಚಿಸುತ್ತದೆ; ಇವು ಆನಂದಕ್ಕೆ ಕಾರಣವಾಗಿವೆ.—1 ಪೇತ್ರ 4:14; 2 ಪೇತ್ರ 1:5-8.
3. ಕಷ್ಟಗಳ ಇಲ್ಲವೆ ನಂಬಿಕೆಯ ಪರೀಕ್ಷೆಗಳ ಭಯದಿಂದ ನಾವು ಏಕೆ ಹಿಮ್ಮೆಟ್ಟಬಾರದು?
3 ನಮ್ಮ ನಂಬಿಕೆಯ ಪರೀಕ್ಷೆಗಳ ಕಾರಣ ನಾವು ಏಕೆ ಭಯಪಡಬಾರದು ಇಲ್ಲವೆ ಹಿಮ್ಮೆಟ್ಟಬಾರದು ಎಂಬುದನ್ನು ಸಹ ಅಪೊಸ್ತಲ ಪೇತ್ರನು ಎತ್ತಿತೋರಿಸಿದನು. ಅವನು ಬರೆದುದು: “ನೀವು ಸದ್ಯಕ್ಕೆ ಸ್ವಲ್ಪಕಾಲ ದೇವರ ಚಿತ್ತಾನುಸಾರ ನಾನಾ ಕಷ್ಟಗಳಲ್ಲಿದ್ದು ದುಃಖಿಸುವವರಾಗಿದ್ದರೂ ಆ ಪದವಿಯನ್ನು ಆಲೋಚಿಸಿ ಹರ್ಷಿಸುವವರಾಗಿದ್ದೀರಿ. ಭಂಗಾರವು ನಾಶವಾಗುವಂಥದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟಾಹಾಕಿ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು.” (1 ಪೇತ್ರ 1:6, 7) ಈ ಮಾತುಗಳು ವಿಶೇಷವಾಗಿ ಈಗ ಉತ್ತೇಜನದಾಯಕವಾಗಿವೆ, ಏಕೆಂದರೆ ಆ “ಮಹಾ ಸಂಕಟವು”—ಸ್ತುತಿ, ಮಹಿಮೆ, ಘನತೆ, ಮತ್ತು ಪಾರಾಗುವಿಕೆಯ ಸಮಯವು—ಕೆಲವರು ನೆನಸುವುದಕ್ಕಿಂತಲೂ ಹೆಚ್ಚು ಸಮೀಪವಾಗಿದೆ, ಮತ್ತು ನಾವು ನಂಬಿಗಸ್ತರಾದ ಸಮಯಕ್ಕಿಂತಲೂ ಹೆಚ್ಚು ನಿಕಟವಾಗಿದೆ.—ಮತ್ತಾಯ 24:21; ರೋಮಾಪುರ 13:11, 12.
4. ತಾನು ಮತ್ತು ಇತರ ಅಭಿಷಿಕ್ತ ಕ್ರೈಸ್ತರು ಅನುಭವಿಸಿದ್ದ ಪರೀಕ್ಷೆಗಳ ಕುರಿತು ಒಬ್ಬ ಸಹೋದರನಿಗೆ ಹೇಗನಿಸಿತು?
4 ಹಿಂದಿನ ಲೇಖನದಲ್ಲಿ, 1914ರಂದಿನಿಂದ ಅಭಿಷಿಕ್ತ ಉಳಿಕೆಯವರು ಎದುರಿಸಿದ ಪರೀಕ್ಷೆಗಳನ್ನು ನಾವು ಪರಿಗಣಿಸಿದೆವು. ಇವು ಆನಂದಕ್ಕೆ ಆಧಾರವಾಗಿದ್ದವೊ? ಏ. ಏಚ್. ಮ್ಯಾಕ್ಮಿಲನ್ ಈ ಹಿನ್ನೋಟವನ್ನು ನೀಡಿದರು: “ಸಂಸ್ಥೆಯ ಮೇಲೆ ಅನೇಕ ಗಂಭೀರವಾದ ಕಷ್ಟಗಳು ಮತ್ತು ಅದರಲ್ಲಿರುವವರ ಮೇಲೆ ನಂಬಿಕೆಯ ಪರೀಕ್ಷೆಗಳು ಬರುವುದನ್ನು ನಾನು ನೋಡಿದ್ದೇನೆ. ದೇವರ ಆತ್ಮದ ಸಹಾಯದಿಂದ ಸಂಸ್ಥೆಯು ಪಾರಾಗಿ ಉಳಿದಿದೆ ಮತ್ತು ಏಳಿಗೆ ಹೊಂದುತ್ತಾ ಮುಂದುವರಿಯುತ್ತಿದೆ. ಒಂದು ಹೊಸ ವಿಚಾರದ ಕುರಿತು ತಲೆಕೆಡಿಸಿಕೊಳ್ಳುವ ಬದಲಿಗೆ, ಶಾಸ್ತ್ರೀಯ ವಿಷಯಗಳ ಕುರಿತಾದ ನಮ್ಮ ತಿಳಿವಳಿಕೆಯನ್ನು ಸ್ಪಷ್ಟಪಡಿಸಲು ಯೆಹೋವನ ಮೇಲೆ ತಾಳ್ಮೆಯಿಂದ ಕಾಯುವ ವಿವೇಕವನ್ನು ನಾನು ಕಂಡಿದ್ದೇನೆ. . . . ನಮ್ಮ ದೃಷ್ಟಿಕೋನಗಳಲ್ಲಿ ಆಗಾಗ್ಗೆ ನಾವು ಮಾಡಬೇಕಾದ ಹೊಂದಾಣಿಕೆಗಳು ಯಾವುವೇ ಆಗಿರಲಿ, ಅವು ಪ್ರಾಯಶ್ಚಿತ್ತದ ದಯಾಭರಿತ ಒದಗಿಸುವಿಕೆಯನ್ನು ಮತ್ತು ಅನಂತ ಜೀವನದ ಕುರಿತಾದ ದೇವರ ವಾಗ್ದಾನವನ್ನು ಬದಲಾಯಿಸುವುದಿಲ್ಲ. ಆದುದರಿಂದ, ನೆರವೇರದ ನಿರೀಕ್ಷಣೆಗಳು ಇಲ್ಲವೆ ದೃಷ್ಟಿಕೋನಗಳಲ್ಲಿ ಆದ ಬದಲಾವಣೆಗಳಿಂದ ನಮ್ಮ ನಂಬಿಕೆಯು ಬಲಹೀನಗೊಳ್ಳುವಂತೆ ನಾವು ಬಿಡುವ ಅಗತ್ಯವಿರಲಿಲ್ಲ.”—ದ ವಾಚ್ಟವರ್, ಆಗಸ್ಟ್ 15, 1966, ಪುಟ 504.
5. (ಎ) ಉಳಿಕೆಯವರು ಪರೀಕ್ಷೆಗಳನ್ನು ಅನುಭವಿಸಿದ ಕಾರಣ ಯಾವ ಪ್ರಯೋಜನಗಳು ಫಲಿಸಿದವು? (ಬಿ) ಪರೀಕ್ಷೆ ಮಾಡುವುದರ ಕುರಿತಾದ ವಿಷಯವು ಈಗ ನಮಗೆ ಆಸಕ್ತಿಕರವಾಗಿರಬೇಕು ಏಕೆ?
5 ಅಭಿಷಿಕ್ತ ಕ್ರೈಸ್ತರು 1914-19ರ ಪರೀಕ್ಷಾ ಕಾಲವನ್ನು ಪಾರಾಗಿ, ಈ ಲೋಕದ ಪ್ರಬಲವಾದ ಪ್ರಭಾವದಿಂದ ಮತ್ತು ಅನೇಕ ಬಬಿಲೋನ್ಯ ಧಾರ್ಮಿಕ ಆಚರಣೆಗಳಿಂದ ಬಿಡುಗಡೆ ಹೊಂದಿದರು. ಉಳಿಕೆಯವರು ಶುದ್ಧ ಹಾಗೂ ಪರಿಷ್ಕೃತ ಜನರಾಗಿ, ಸಿದ್ಧಮನಸ್ಸಿನಿಂದ ದೇವರಿಗೆ ಸ್ತುತಿಯ ಬಲಿಗಳನ್ನು ಅರ್ಪಿಸುತ್ತಾ, ಒಂದು ಜನಾಂಗದೋಪಾದಿ ತಾವು ಆತನಿಗೆ ಸ್ವೀಕಾರಯೋಗ್ಯರಾಗಿದ್ದೇವೆಂಬ ಆಶ್ವಾಸನೆಯುಳ್ಳವರಾಗಿ ಮುಂದೆ ಸಾಗಿದರು. (ಯೆಶಾಯ 52:11; 2 ಕೊರಿಂಥ 6:14-18) ನ್ಯಾಯತೀರ್ಪು ದೇವರ ಮನೆಯಿಂದ ಆರಂಭವಾಗಿತ್ತು, ಆದರೆ ಅದು ಒಂದೇ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತಹದ್ದಾಗಿರಲಿಲ್ಲ. ದೇವರ ಜನರ ಪರೀಕ್ಷಿಸುವಿಕೆ ಹಾಗೂ ಪ್ರತ್ಯೇಕಿಸುವಿಕೆ ಇನ್ನೂ ಮುಂದುವರಿಯುತ್ತದೆ. “ಮಹಾ ಸಮೂಹ”ದ ಭಾಗದೋಪಾದಿ ಸಮೀಪಿಸುತ್ತಿರುವ “ಮಹಾ ಸಂಕಟ”ವನ್ನು ಪಾರಾಗಲು ನಿರೀಕ್ಷಿಸುತ್ತಿರುವವರ ನಂಬಿಕೆಯೂ ಪರೀಕ್ಷಿಸಲ್ಪಡುತ್ತಿದೆ. (ಪ್ರಕಟನೆ 7:9, 14) ಇದು ಅಭಿಷಿಕ್ತ ಉಳಿಕೆಯವರು ಎದುರಿಸಿದಂತಹದ್ದೇ ವಿಧಗಳಲ್ಲಿ ಅಲ್ಲದೆ ಇತರ ವಿಧಗಳಲ್ಲಿಯೂ ಮಾಡಲ್ಪಡುತ್ತಿದೆ.
ನೀವು ಹೇಗೆ ಪರೀಕ್ಷಿಸಲ್ಪಡಬಹುದು?
6. ಅನೇಕರು ಅನುಭವಿಸಿರುವ ಒಂದು ಬಗೆಯ ತೀವ್ರವಾದ ಪರೀಕ್ಷೆಯು ಯಾವುದಾಗಿದೆ?
6 ನೇರವಾದ ಮುಖಾಕ್ರಮಣದ ರೂಪದಲ್ಲಿ ಬರುವ ಪರೀಕ್ಷೆಗಳನ್ನು ಎದುರಿಸುವ ಪಂಥಾಹ್ವಾನದ ಕುರಿತು ಅನೇಕ ಕ್ರೈಸ್ತರು ಆಲೋಚಿಸಿದ್ದಾರೆ. ಅವರು ಈ ವರದಿಯನ್ನು ಜ್ಞಾಪಿಸಿಕೊಳ್ಳುತ್ತಾರೆ: “[ಯೆಹೂದಿ ನಾಯಕರು] ಅಪೊಸ್ತಲರನ್ನು ಕರೆಸಿ ಹೊಡಿಸಿ ಯೇಸುವಿನ ಹೆಸರನ್ನು ಹೇಳಿ ಮಾತಾಡಬಾರದೆಂದು ಅಪ್ಪಣೆಕೊಟ್ಟು ಅವರನ್ನು ಬಿಟ್ಟುಬಿಟ್ಟರು. ಅಪೊಸ್ತಲರು ತಾವು ಆ ಹೆಸರಿನ ನಿಮಿತ್ತವಾಗಿ ಅವಮಾನಪಡುವದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಿಸುತ್ತಾ ಹಿರೀಸಭೆಯ ಎದುರಿನಿಂದ ಹೊರಟು”ಹೋದರು. (ಅ. ಕೃತ್ಯಗಳು 5:40, 41) ಮತ್ತು ದೇವರ ಜನರ ಆಧುನಿಕ ಇತಿಹಾಸವು, ವಿಶೇಷವಾಗಿ ಜಾಗತಿಕ ಯುದ್ಧಗಳ ಸಮಯದಲ್ಲಿ ಸ್ಪಷ್ಟಪಡಿಸುವುದೇನೆಂದರೆ, ಯೆಹೋವನ ಸಾಕ್ಷಿಗಳಲ್ಲಿ ಅನೇಕರು, ಹಿಂಸಕರಿಂದ ಹೊಡೆತಗಳನ್ನು ಮತ್ತು ಇನ್ನೂ ಕೆಟ್ಟದಾದ ಉಪಚಾರವನ್ನು ವಾಸ್ತವವಾಗಿ ಅನುಭವಿಸಿದರು.
7. ನಂಬಿಕೆಯನ್ನು ಪ್ರದರ್ಶಿಸುವ ವಿಷಯದಲ್ಲಿ, ಆಧುನಿಕ ದಿನದ ಕೆಲವು ಕ್ರೈಸ್ತರು ಯಾವ ಮಟ್ಟವನ್ನೂ ತಲಪಿದ್ದಾರೆ?
7 ಕ್ರೈಸ್ತರು ಹಿಂಸೆಯ ಗುರಿಯಾಗಿರುವುದರ ಸಂಬಂಧದಲ್ಲಿ, ಲೋಕವು ಅಭಿಷಿಕ್ತ ಉಳಿಕೆಯವರ ಮತ್ತು “ಬೇರೆ ಕುರಿಗಳ” ಮಹಾ ಸಮೂಹದವರ ನಡುವೆ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. (ಯೋಹಾನ 10:16) ಅನೇಕ ವರ್ಷಗಳಿಂದ, ಎರಡೂ ಗುಂಪುಗಳ ಸದಸ್ಯರು, ದೇವರಿಗಾಗಿರುವ ಪ್ರೀತಿ ಮತ್ತು ಆತನಲ್ಲಿನ ನಂಬಿಕೆಯ ಕಾರಣ ಸೆರೆಮನೆವಾಸದಿಂದ ಮತ್ತು ಮರಣದಿಂದಲೂ ತೀವ್ರವಾಗಿ ಪರೀಕ್ಷಿಸಲ್ಪಟ್ಟಿದ್ದಾರೆ. ತಮ್ಮ ನಿರೀಕ್ಷೆಯು ಏನೇ ಆಗಿರಲಿ, ಎರಡೂ ಗುಂಪಿನವರಿಗೆ ಅಗತ್ಯವಾದ ದೇವರ ಆತ್ಮವಿದೆ. (ಹೋಲಿಸಿ ಕಾವಲಿನಬುರುಜು, ಜೂನ್ 15, 1996, ಪುಟ 31.) ನಾಸಿ ಜರ್ಮನಿಯಲ್ಲಿ, 1930ಗಳು ಹಾಗೂ 1940ಗಳ ಸಮಯದಲ್ಲಿ, ಮಕ್ಕಳನ್ನೂ ಸೇರಿಸಿ ಯೆಹೋವನ ಸೇವಕರಲ್ಲಿ ಅನೇಕರು, ಅಸಾಧಾರಣವಾದ ನಂಬಿಕೆಯನ್ನು ಪ್ರದರ್ಶಿಸಿದರು, ಮತ್ತು ಅನೇಕರು ಗರಿಷ್ಠ ಮಟ್ಟದ ವರೆಗೆ ಪರೀಕ್ಷಿಸಲ್ಪಟ್ಟರು. ಇತ್ತೀಚೆಗಿನ ಸಮಯಗಳಲ್ಲಿ ಯೆಹೋವನ ಜನರು, ಇಥಿಯೋಪಿಯ, ಎರಿಟ್ರೀಅ, ಬುರುಂಡಿ, ಮಲಾವಿ, ಮೋಸಾಂಬೀಕ್, ರುಆಂಡ, ಸಿಂಗಾಪುರ, ಮತ್ತು ಸಾಯೀರ್ ಎಂಬಂತಹ ದೇಶಗಳಲ್ಲಿ ಹಿಂಸೆಯ ಪರೀಕ್ಷೆಯನ್ನು ಎದುರಿಸಿದ್ದಾರೆ. ಮತ್ತು ಈ ರೀತಿಯ ಪರೀಕ್ಷೆಗಳು ಮುಂದುವರಿಯುತ್ತಿವೆ.
8. ನಮ್ಮ ನಂಬಿಕೆಯ ಪರೀಕ್ಷೆಯಲ್ಲಿ, ಹೊಡೆತಗಳ ರೂಪದಲ್ಲಿ ಹಿಂಸೆಯನ್ನು ತಾಳಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ ಎಂಬುದನ್ನು, ಒಬ್ಬ ಆಫ್ರಿಕನ್ ಸಹೋದರನ ಹೇಳಿಕೆಗಳು ಹೇಗೆ ತೋರಿಸುತ್ತವೆ?
8 ಆದರೆ ಈಗಾಗಲೇ ಗಮನಿಸಲ್ಪಟ್ಟಂತೆ, ನಮ್ಮ ನಂಬಿಕೆಯು ಹೆಚ್ಚು ನವಿರಾದ ವಿಧಗಳಲ್ಲಿಯೂ ಪರೀಕ್ಷಿಸಲ್ಪಡುತ್ತಿದೆ. ಕೆಲವೊಂದು ಪರೀಕ್ಷೆಗಳು ಅಷ್ಟೊಂದು ನೇರವಾಗಿರುವುದಿಲ್ಲ ಮತ್ತು ಅವುಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಈ ಕೆಳಗಿನವುಗಳಲ್ಲಿ ಕೆಲವೊಂದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುವಿರಿ ಎಂಬುದನ್ನು ಪರಿಗಣಿಸಿರಿ. ಅಂಗೋಲದಲ್ಲಿ, ಹತ್ತು ಮಕ್ಕಳಿದ್ದ ಒಬ್ಬ ಸಹೋದರನು, ಹೊಣೆಹೊತ್ತ ಸಹೋದರರ ಸಂಪರ್ಕವು ಸ್ವಲ್ಪ ಸಮಯಕ್ಕಾಗಿ ಕಡಿಯಲ್ಪಟ್ಟಿದ್ದ ಒಂದು ಸಭೆಯಲ್ಲಿದ್ದನು. ತದನಂತರ ಇತರರಿಗೆ ಆ ಸಭೆಯನ್ನು ಸಂದರ್ಶಿಸಲು ಸಾಧ್ಯವಾಯಿತು. ಅವನು ತನ್ನ ಕುಟುಂಬಕ್ಕೆ ಆಹಾರವನ್ನು ಒದಗಿಸಲು ಹೇಗೆ ಶಕ್ತನಾಗಿದ್ದನೆಂದು ಅವನನ್ನು ಕೇಳಲಾಯಿತು. ಉತ್ತರ ಕೊಡುವುದು ಅವನಿಗೆ ಸುಲಭವಾಗಿರಲಿಲ್ಲ; ಆದಕಾರಣ ಸನ್ನಿವೇಶವು ತೊಂದರೆದಾಯಕವಾಗಿತ್ತೆಂದು ಮಾತ್ರ ಅವನು ಹೇಳುತ್ತಿದ್ದನು. ದಿನಕ್ಕೆ ಒಂದು ಊಟವನ್ನಾದರೂ ತನ್ನ ಮಕ್ಕಳಿಗೆ ಒದಗಿಸಲು ಅವನು ಶಕ್ತನಾಗಿದ್ದನೊ? ಅವನು ಉತ್ತರಿಸಿದ್ದು: “ಇಲ್ಲ. ನಮ್ಮಲ್ಲಿ ಎಷ್ಟಿದೆಯೊ ಅದರಲ್ಲಿಯೇ ಜೀವನ ನಡೆಸಲು ನಾವು ಕಲಿತುಕೊಂಡಿದ್ದೇವೆ.” ತರುವಾಯ ದೃಢವಿಶ್ವಾಸ ತುಂಬಿದ ಧ್ವನಿಯಲ್ಲಿ ಅವನು ಹೇಳಿದ್ದು: “ಆದರೆ ಈ ಕಡೇ ದಿವಸಗಳಲ್ಲಿ ನಾವು ಇದನ್ನೇ ನಿರೀಕ್ಷಿಸುವುದಿಲ್ಲವೊ?” ಲೋಕದಲ್ಲಿ ಇಂತಹ ನಂಬಿಕೆಯು ಗಮನಾರ್ಹವಾದದ್ದಾಗಿದೆ, ಆದರೆ ರಾಜ್ಯದ ವಾಗ್ದಾನಗಳು ನೆರವೇರುವವು ಎಂಬ ಪೂರ್ಣ ಭರವಸೆಯಿರುವ ನಿಷ್ಠಾವಂತ ಕ್ರೈಸ್ತರಲ್ಲಿ ಇದು ಅಸಾಮಾನ್ಯವಾದದ್ದೇನೂ ಅಲ್ಲ.
9. ಒಂದು ಕೊರಿಂಥ 11:3ರ ಸಂಬಂಧದಲ್ಲಿ ನಾವು ಹೇಗೆ ಪರೀಕ್ಷಿಸಲ್ಪಡುತ್ತಾ ಇದ್ದೇವೆ?
9 ದೇವಪ್ರಭುತ್ವ ಕಾರ್ಯವಿಧಾನಗಳ ಸಂಬಂಧದಲ್ಲೂ ಮಹಾ ಸಮೂಹದವರು ಪರೀಕ್ಷಿಸಲ್ಪಡುತ್ತಿದ್ದಾರೆ. ಲೋಕವ್ಯಾಪಕವಾಗಿರುವ ಕ್ರೈಸ್ತ ಸಭೆಯು, ದೈವಿಕ ತತ್ವಗಳು ಮತ್ತು ದೇವಪ್ರಭುತ್ವ ಮಟ್ಟಗಳಿಗನುಸಾರ ನಿರ್ದೇಶಿಸಲ್ಪಡುತ್ತದೆ. ಇದು ಯೇಸುವನ್ನು ನಾಯಕನಾಗಿ, ಸಭೆಯ ಶಿರಸ್ಸಾಗಿ ನೇಮಿಸಲ್ಪಟ್ಟ ವ್ಯಕ್ತಿಯಾಗಿ ಗುರುತಿಸುವುದನ್ನು ಪ್ರಥಮವಾಗಿ ಅರ್ಥೈಸುತ್ತದೆ. (1 ಕೊರಿಂಥ 11:3) ಯೆಹೋವನ ಚಿತ್ತವನ್ನು ನಾವು ಐಕ್ಯವಾಗಿ ಮಾಡುವುದಕ್ಕೆ ಸಂಬಂಧಿಸಿದ ದೇವಪ್ರಭುತ್ವ ನೇಮಕಾತಿಗಳು ಮತ್ತು ನಿರ್ಣಯಗಳಲ್ಲಿನ ನಮ್ಮ ನಂಬಿಕೆಯ ಮುಖಾಂತರ, ಅವನಿಗೆ ಮತ್ತು ಅವನ ತಂದೆಗೆ ಮನಃಪೂರ್ವಕವಾದ ಅಧೀನತೆಯು ಪ್ರದರ್ಶಿಸಲ್ಪಡುತ್ತದೆ. ಇನ್ನೂ ಹೆಚ್ಚಾಗಿ, ಪ್ರತಿಯೊಂದು ಸ್ಥಳಿಕ ಸಭೆಯಲ್ಲಿ, ನಾಯಕತ್ವವನ್ನು ವಹಿಸಿಕೊಳ್ಳಲು ನೇಮಿಸಲ್ಪಟ್ಟ ಪುರುಷರಿದ್ದಾರೆ. ಅವರು ಅಪರಿಪೂರ್ಣ ಪುರುಷರಾಗಿದ್ದು, ಅವರ ತಪ್ಪುಗಳನ್ನು ನಾವು ಸುಲಭವಾಗಿ ನೋಡಬಹುದು; ಆದರೂ ಅಂತಹ ಮೇಲ್ವಿಚಾರಕರನ್ನು ಗೌರವಿಸಿ, ಅವರಿಗೆ ಅಧೀನರಾಗಿರುವಂತೆ ನಾವು ಪ್ರೇರಿಸಲ್ಪಡುತ್ತೇವೆ. (ಇಬ್ರಿಯ 13:7, 17) ಅದು ಕೆಲವೊಮ್ಮೆ ಕಷ್ಟಕರವಾಗಿರುವುದನ್ನು ನೀವು ಕಂಡುಕೊಳ್ಳುತ್ತೀರೊ? ಇದು ನಿಜವಾಗಿಯೂ ನಿಮಗೊಂದು ಪರೀಕ್ಷೆಯಾಗಿದೆಯೊ? ಹಾಗಿರುವಲ್ಲಿ, ನಿಮ್ಮ ನಂಬಿಕೆಯ ಈ ಪರೀಕ್ಷೆಯಿಂದ ನೀವು ಪ್ರಯೋಜನ ಪಡೆಯುತ್ತಿದ್ದೀರೊ?
10. ಕ್ಷೇತ್ರ ಶುಶ್ರೂಷೆಯ ಸಂಬಂಧದಲ್ಲಿ ನಾವು ಯಾವ ಪರೀಕ್ಷೆಯನ್ನು ಎದುರಿಸುತ್ತೇವೆ?
10 ಕ್ಷೇತ್ರ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವ ಸುಯೋಗ ಮತ್ತು ಆವಶ್ಯಕತೆಯ ಸಂಬಂಧದಲ್ಲೂ ನಾವು ಪರೀಕ್ಷಿಸಲ್ಪಡುತ್ತೇವೆ. ನಾವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ, ಶುಶ್ರೂಷೆಯಲ್ಲಿ ಒಂದು ಪೂರ್ಣ ಪಾಲನ್ನು ಪಡೆದಿರುವುದೆಂದರೆ, ಕನಿಷ್ಠಮಟ್ಟದ ಇಲ್ಲವೆ ನಾಮಮಾತ್ರದ ಸಾರುವಿಕೆಗಿಂತಲೂ ಹೆಚ್ಚಿನದ್ದು ಒಳಗೂಡಿರುತ್ತದೆ ಎಂಬುದನ್ನು ನಾವು ಗ್ರಹಿಸಬೇಕು. ತನ್ನ ಸರ್ವಸ್ವವನ್ನೂ ಕೊಟ್ಟ ಆ ಬಡ ವಿಧವೆಯ ವಿಷಯದಲ್ಲಿ ಯೇಸುವಿನ ಸಮ್ಮತಿಸೂಚಕ ಹೇಳಿಕೆಯನ್ನು ಜ್ಞಾಪಿಸಿಕೊಳ್ಳಿರಿ. (ಮಾರ್ಕ 12:41-44) ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬಹುದು, ‘ಕ್ಷೇತ್ರ ಶುಶ್ರೂಷೆಯ ಸಂಬಂಧದಲ್ಲಿ, ನಾನು ತದ್ರೀತಿಯಲ್ಲಿ ನನ್ನ ಸರ್ವಸ್ವವನ್ನೂ ಕೊಡುತ್ತಿದ್ದೇನೊ?’ ನಾವೆಲ್ಲರೂ ಎಲ್ಲ ಸಮಯಗಳಲ್ಲಿ ಯೆಹೋವನ ಸಾಕ್ಷಿಗಳಾಗಿರಬೇಕು, ನಮ್ಮ ಬೆಳಕನ್ನು ಪ್ರಕಾಶಿಸುವಂತೆ ಬಿಡಲು ಪ್ರತಿಯೊಂದು ಸಂದರ್ಭದಲ್ಲಿ ಸಿದ್ಧರಾಗಿರಬೇಕು.—ಮತ್ತಾಯ 5:16.
11. ತಿಳಿವಳಿಕೆಯಲ್ಲಿನ ಬದಲಾವಣೆಗಳು ಇಲ್ಲವೆ ನಡತೆಯ ಕುರಿತಾದ ಸಲಹೆಯು ಹೇಗೆ ಒಂದು ಪರೀಕ್ಷೆಯಾಗಿರಬಲ್ಲದು?
11 ನಾವು ಎದುರಿಸಬಹುದಾದ ಮತ್ತೊಂದು ಪರೀಕ್ಷೆಯು, ಬೈಬಲ್ ಸತ್ಯದ ಮೇಲೆ ಹರಿಸಲ್ಪಡುತ್ತಿರುವ ಹೆಚ್ಚಾದ ಬೆಳಕಿಗಾಗಿ ಮತ್ತು ನಂಬಿಗಸ್ತ ಆಳು ವರ್ಗದಿಂದ ಒದಗಿಸಲ್ಪಡುತ್ತಿರುವ ಸಲಹೆಗಾಗಿ ನಮ್ಮಲ್ಲಿರುವ ಗಣ್ಯತಾಮಟ್ಟಕ್ಕೆ ಸಂಬಂಧಿಸುತ್ತದೆ. (ಮತ್ತಾಯ 24:45) ಇದು ಕೆಲವೊಮ್ಮೆ ವೈಯಕ್ತಿಕ ನಡತೆಯಲ್ಲಿ—ಉದಾಹರಣೆಗೆ, ತಂಬಾಕು ಉಪಯೋಗಿಸುವವರು ಸಭೆಯಲ್ಲಿ ಉಳಿಯಲು ಬಯಸುವುದಾದರೆ ಅದನ್ನು ಬಿಡಬೇಕೆಂಬುದು ಸ್ಪಷ್ಟವಾದಾಗ—ಹೊಂದಾಣಿಕೆಗಳಿಗಾಗಿ ಕರೆನೀಡುತ್ತದೆ.a (2 ಕೊರಿಂಥ 7:1) ಅಥವಾ ಸಂಗೀತದಲ್ಲಿನ ಇಲ್ಲವೆ ಮನೋರಂಜನೆಯ ಇನ್ನಿತರ ವಿಧಗಳಲ್ಲಿನ ನಮ್ಮ ಅಭಿರುಚಿಯನ್ನು ಬದಲಾಯಿಸುವ ಅಗತ್ಯವನ್ನು ಮನಗಾಣುವುದರಲ್ಲಿ ಪರೀಕ್ಷೆಯು ಒಳಗೂಡಿರಬಹುದು.b ನೀಡಲ್ಪಟ್ಟ ಸಲಹೆಯ ವಿವೇಕವನ್ನು ನಾವು ಪ್ರಶ್ನಿಸುವೆವೊ? ಇಲ್ಲವೆ ದೇವರ ಆತ್ಮವು ನಮ್ಮ ಆಲೋಚನೆಯನ್ನು ಪ್ರಭಾವಿಸುವಂತೆ ಮತ್ತು ಕ್ರೈಸ್ತ ವ್ಯಕ್ತಿತ್ವವನ್ನು ನಾವು ಧರಿಸಿಕೊಳ್ಳಲು ನಮಗೆ ಸಹಾಯ ಮಾಡುವಂತೆ ನಾವು ಬಿಡುವೆವೊ?—ಎಫೆಸ 4:20-24; 5:3-5.
12. ಒಬ್ಬನು ದೀಕ್ಷಾಸ್ನಾನ ಪಡೆದುಕೊಂಡ ಮೇಲೆ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಏನು ಅಗತ್ಯವಾಗಿದೆ?
12 ದಶಕಗಳಿಂದ, ಮಹಾ ಸಮೂಹದವರ ಸಂಖ್ಯೆಯು ಹೆಚ್ಚಾಗುತ್ತಿದೆ, ಮತ್ತು ತಮ್ಮ ದೀಕ್ಷಾಸ್ನಾನದ ತರುವಾಯ ಯೆಹೋವನೊಂದಿಗಿನ ತಮ್ಮ ಸಂಬಂಧವನ್ನು ಅವರು ಬಲಪಡಿಸಿಕೊಳ್ಳುತ್ತಾ ಇದ್ದಾರೆ. ಇದು ಒಂದು ಕ್ರೈಸ್ತ ಸಮ್ಮೇಳನಕ್ಕೆ ಹಾಜರಾಗುವುದು, ರಾಜ್ಯ ಸಭಾಗೃಹದಲ್ಲಿನ ಕೆಲವೊಂದು ಕೂಟಗಳಿಗೆ ಹೋಗುವುದು, ಇಲ್ಲವೆ ಆಗಾಗ ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೊಳ್ಳುತ್ತದೆ. ದೃಷ್ಟಾಂತಕ್ಕೆ: ವ್ಯಕ್ತಿಯೊಬ್ಬನು ಶಾರೀರಿಕವಾಗಿ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಹೊರಗೆ ಇರಬಹುದು, ಆದರೆ ಅವನು ನಿಜವಾಗಿಯೂ ಅದನ್ನು ಬಿಟ್ಟುಬಂದಿದ್ದಾನೊ? ಮಹಾ ಬಾಬೆಲಿನ ಆತ್ಮ—ದೇವರ ನೀತಿಯ ಮಟ್ಟಗಳನ್ನು ಕಡೆಗಣಿಸುವ ಒಂದು ಆತ್ಮ—ವನ್ನು ಪ್ರತಿಬಿಂಬಿಸುವ ಆ ವಿಷಯಗಳಿಗೆ ಅವನಿನ್ನೂ ಅಂಟಿಕೊಂಡಿದ್ದಾನೊ? ಅವನು ನೈತಿಕತೆಯನ್ನು ಮತ್ತು ವೈವಾಹಿಕ ನಂಬಿಗಸ್ತಿಕೆಯನ್ನು ಹಗುರವಾಗಿ ಎಣಿಸುತ್ತಾನೊ? ಆತ್ಮಿಕ ಅಭಿರುಚಿಗಳಿಗಿಂತ ಅವನು ವೈಯಕ್ತಿಕ ಹಾಗೂ ಭೌತಿಕ ಅಭಿರುಚಿಗಳಿಗೆ ಒತ್ತುನೀಡುತ್ತಾನೊ? ಹೌದು, ಅವನು ಲೋಕದಿಂದ ನಿರ್ದೋಷಿಯಾಗಿ ಉಳಿದಿದ್ದಾನೊ?—ಯಾಕೋಬ 1:27.
ಪರೀಕ್ಷಿಸಲ್ಪಟ್ಟ ನಂಬಿಕೆಯಿಂದ ಪ್ರಯೋಜನಪಡೆಯಿರಿ
13, 14. ಸತ್ಯಾರಾಧನೆಯ ಮಾರ್ಗದಲ್ಲಿ ತೊಡಗಿದ ನಂತರ ಕೆಲವರು ಏನು ಮಾಡಿದ್ದಾರೆ?
13 ನಾವು ಮಹಾ ಬಾಬೆಲಿನಿಂದ ನಿಜವಾಗಿಯೂ ಪಲಾಯನಗೈದಿರುವುದಾದರೆ ಮತ್ತು ಈ ಲೋಕದಿಂದಲೂ ಹೊರಬಂದಿರುವುದಾದರೆ, ಬಿಟ್ಟುಬಂದಿರುವ ವಿಷಯಗಳಿಗೆ ನಾವು ಹಿಂದಿರುಗದಿರೋಣ. ಲೂಕ 9:62ರಲ್ಲಿ ಕಂಡುಕೊಳ್ಳಲ್ಪಡುವ ತತ್ವಕ್ಕನುಗುಣವಾಗಿ, ನಮ್ಮಲ್ಲಿ ಯಾರಾದರೂ ಹಿಂದಿರುಗಿ ನೋಡುವುದಾದರೆ, ದೇವರ ರಾಜ್ಯದ ಪ್ರಜೆಯಾಗಿರುವ ಅವಕಾಶವನ್ನು ಕಳೆದುಕೊಳ್ಳುವುದನ್ನು ಅದು ಅರ್ಥೈಸಬಹುದು. ಯೇಸು ಹೇಳಿದ್ದು: “ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನು ಹಾಕಿ ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲ.”
14 ಆದರೆ ಗತಕಾಲದಲ್ಲಿ ಕ್ರೈಸ್ತರಾದ ಕೆಲವರು, ಅಂದಿನಿಂದ ವಿಷಯಗಳ ಈ ವ್ಯವಸ್ಥೆಯು ತಮ್ಮನ್ನು ರೂಪಿಸುವಂತೆ ಬಿಟ್ಟುಕೊಟ್ಟಿದ್ದಾರೆ. ಈ ಲೋಕದ ಆತ್ಮವನ್ನು ಅವರು ಪ್ರತಿರೋಧಿಸಿರುವುದಿಲ್ಲ. (2 ಪೇತ್ರ 2:20-22) ಲೌಕಿಕ ಅಪಕರ್ಷಣೆಗಳು ಅವರ ಆಸಕ್ತಿ ಹಾಗೂ ಸಮಯವನ್ನು ಹೀರಿಕೊಳ್ಳುತ್ತಾ, ಅವರ ಪ್ರಗತಿಯನ್ನು ತಡೆದಿವೆ. ದೇವರ ರಾಜ್ಯ ಮತ್ತು ಆತನ ನೀತಿಯ ಮೇಲೆ ತಮ್ಮ ಹೃದಮನಗಳನ್ನು ದೃಢವಾಗಿ ಕೇಂದ್ರೀಕರಿಸಿ, ಅಂತಹವುಗಳನ್ನು ಜೀವಿತದಲ್ಲಿ ಪ್ರಥಮವಾಗಿಡುವ ಬದಲು, ಪ್ರಾಪಂಚಿಕ ಗುರಿಗಳನ್ನು ಬೆನ್ನಟ್ಟಲು ಅವರು ಬೇರೆ ಕಡೆಗೆ ತಿರುಗಿದ್ದಾರೆ. ತಮ್ಮ ದುರ್ಬಲವಾದ ನಂಬಿಕೆ ಹಾಗೂ ಉಗುರುಬೆಚ್ಚಗಿನ ಸ್ಥಿತಿಯನ್ನು ಒಪ್ಪಿಕೊಂಡು, ದೈವಿಕ ಸಲಹೆಯನ್ನು ಕೋರುವ ಮೂಲಕ ತಮ್ಮ ಮಾರ್ಗವನ್ನು ಬದಲಾಯಿಸಿಕೊಳ್ಳುವಂತೆ ಅವರು ಪ್ರೇರೇಪಿಸಲ್ಪಡುವ ತನಕ, ಯೆಹೋವನೊಂದಿಗಿನ ಮತ್ತು ಆತನ ಸಂಸ್ಥೆಯೊಂದಿಗಿನ ತಮ್ಮ ಅಮೂಲ್ಯವಾದ ಸಂಬಂಧವನ್ನು ಕಳೆದುಕೊಳ್ಳುವ ಅಪಾಯದಲ್ಲಿ ಅವರಿದ್ದಾರೆ.—ಪ್ರಕಟನೆ 3:15-19.
15. ದೇವರಿಗೆ ಸ್ವೀಕಾರಯೋಗ್ಯವಾಗಿ ಉಳಿಯಲು ಯಾವುದರ ಅಗತ್ಯವಿದೆ?
15 ನಾವು ಅಂಗೀಕರಿಸಲ್ಪಡುವುದು ಹಾಗೂ ವೇಗವಾಗಿ ಸಮೀಪಿಸುತ್ತಿರುವ ಮಹಾ ಸಂಕಟದಿಂದ ಬದುಕಿ ಉಳಿಯುವವರ ಸಾಲಿನಲ್ಲಿರುವುದು, ನಾವು ಶುದ್ಧರಾಗಿಯೂ ನಮ್ಮ ನಿಲುವಂಗಿಗಳು ‘ಕುರಿಮರಿಯ ರಕ್ತದಲ್ಲಿ ತೊಳೆಯಲ್ಪಟ್ಟವುಗಳೂ’ ಆಗಿರುವುದರ ಮೇಲೆ ಅವಲಂಬಿಸುತ್ತದೆ. (ಪ್ರಕಟನೆ 7:9-14; 1 ಕೊರಿಂಥ 6:11) ನಾವು ದೇವರ ಮುಂದೆ ಶುದ್ಧವಾದ ಹಾಗೂ ನೀತಿಯ ನಿಲುವನ್ನು ಕಾಪಾಡಿಕೊಳ್ಳದಿದ್ದರೆ, ನಮ್ಮ ಪವಿತ್ರ ಸೇವೆ ಸ್ವೀಕಾರಯೋಗ್ಯವಾಗಿರುವುದಿಲ್ಲ. ಖಂಡಿತವಾಗಿಯೂ, ನಂಬಿಕೆಯ ಪರೀಕ್ಷಿಸಲ್ಪಟ್ಟ ಗುಣಮಟ್ಟವು, ನಾವು ತಾಳಿಕೊಳ್ಳುವಂತೆ ಹಾಗೂ ದೇವರ ಅಪ್ರಸನ್ನತೆಗೆ ಗುರಿಯಾಗುವುದರಿಂದ ದೂರವಿರುವಂತೆ ಸಹಾಯ ಮಾಡುವುದು ಎಂಬುದನ್ನು ನಮ್ಮಲ್ಲಿ ಪ್ರತಿಯೊಬ್ಬರೂ ಗ್ರಹಿಸಿಕೊಳ್ಳಬೇಕು.
16. ಸುಳ್ಳುಗಳು ಯಾವ ವಿಧದಲ್ಲಿ ನಮ್ಮ ನಂಬಿಕೆಯ ಪರೀಕ್ಷೆಯಾಗಿರಬಹುದು?
16 ಕೆಲವೊಮ್ಮೆ, ವಾರ್ತಾ ಮಾಧ್ಯಮವು ಮತ್ತು ಐಹಿಕ ಅಧಿಕಾರಿಗಳು, ನಮ್ಮ ಕ್ರೈಸ್ತ ನಂಬಿಕೆಗಳನ್ನು ಹಾಗೂ ಜೀವನ ರೀತಿಯನ್ನು ತಪ್ಪಾಗಿ ಪ್ರತಿನಿಧಿಸುತ್ತಾ, ದೇವರ ಜನರ ಮೇಲೆ ಸುಳ್ಳಾರೋಪಗಳನ್ನು ಹೊರಿಸುತ್ತಾರೆ. ಇದು ನಮ್ಮನ್ನು ಆಶ್ಚರ್ಯಗೊಳಿಸಬಾರದು, ಏಕೆಂದರೆ ‘ನಾವು ಲೋಕದ ಭಾಗವಾಗಿರದ ಕಾರಣ ಲೋಕವು ನಮ್ಮನ್ನು ದ್ವೇಷಿಸುವುದು’ ಎಂದು ಯೇಸು ಸ್ಪಷ್ಟವಾಗಿ ತೋರಿಸುತ್ತಾನೆ. (ಯೋಹಾನ 17:14) ಸೈತಾನನಿಂದ ಕುರುಡಾಗಿಸಲ್ಪಟ್ಟ ಜನರು ನಮ್ಮನ್ನು ಹೆದರಿಸಿ, ಎದೆಗುಂದಿಸುವಂತೆ ಮತ್ತು ಸುವಾರ್ತೆಯ ಕಾರಣ ನಾವು ಲಜ್ಜಿತರಾಗುವಂತೆ ಮಾಡಲು ನಾವು ಬಿಡುವೆವೊ? ಸತ್ಯದ ಕುರಿತಾದ ಸುಳ್ಳುಗಳು, ನಮ್ಮ ಕ್ರಮವಾದ ಕೂಟದ ಹಾಜರಿ ಮತ್ತು ನಮ್ಮ ಸಾರುವ ಚಟುವಟಿಕೆಯನ್ನು ಬಾಧಿಸುವಂತೆ ನಾವು ಅನುಮತಿಸುವೆವೊ? ಅಥವಾ ಯೆಹೋವನ ಕುರಿತು ಮತ್ತು ಆತನ ರಾಜ್ಯದ ಕುರಿತು ಪ್ರಕಟಿಸುತ್ತಾ ಇರಲು ನಾವು ಹಿಂದೆಂದಿಗಿಂತಲೂ ಹೆಚ್ಚು ದೃಢರಾಗಿ ನಿಂತು, ಧೈರ್ಯವಂತರೂ ದೃಢಸಂಕಲ್ಪವುಳ್ಳವರೂ ಆಗಿರುವೆವೊ?
17. ಯಾವ ಆಶ್ವಾಸನೆಯು ನಂಬಿಕೆಯನ್ನು ತೋರಿಸುತ್ತಾ ಇರುವಂತೆ ನಮ್ಮನ್ನು ಪ್ರಚೋದಿಸಬಲ್ಲದು?
17 ನೆರವೇರಿರುವ ಬೈಬಲ್ ಪ್ರವಾದನೆಗನುಸಾರ, ನಾವು ಈಗ ಅಂತ್ಯದ ಸಮಯದಲ್ಲಿ ಜೀವಿಸುತ್ತಾ ಇದ್ದೇವೆ. ನೀತಿಯ ಒಂದು ಹೊಸ ಲೋಕಕ್ಕಾಗಿರುವ ನಮ್ಮ ಬೈಬಲ್ ಆಧಾರಿತ ನಿರೀಕ್ಷಣೆಗಳು ಖಂಡಿತವಾಗಿಯೂ ಒಂದು ಹರ್ಷಮಯ ವಾಸ್ತವಿಕತೆಯಾಗುವವು. ಆ ದಿನವು ಬರುವ ತನಕ, ನಮ್ಮಲ್ಲಿ ಎಲ್ಲರೂ ದೇವರ ವಾಕ್ಯದಲ್ಲಿ ಅಚಲವಾದ ನಂಬಿಕೆಯಿಟ್ಟು, ರಾಜ್ಯದ ಸುವಾರ್ತೆಯನ್ನು ಲೋಕವ್ಯಾಪಕವಾಗಿ ಸಾರುವುದನ್ನು ಬಿಟ್ಟುಬಿಡದಿರುವ ಮೂಲಕ, ನಮ್ಮ ನಂಬಿಕೆಯನ್ನು ರುಜುಪಡಿಸೋಣ. ಪ್ರತಿ ವಾರ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿರುವ ಸಾವಿರಾರು ಹೊಸ ಶಿಷ್ಯರ ಕುರಿತು ಯೋಚಿಸಿರಿ. ತನ್ನ ನ್ಯಾಯತೀರ್ಪಿನ ಸಂಬಂಧದಲ್ಲಿ ಯೆಹೋವನು ತೋರಿಸಿರುವ ತಾಳ್ಮೆಯು, ಇನ್ನೂ ಹೆಚ್ಚಿನ ಜನರ ರಕ್ಷಣೆಯಲ್ಲಿ ಫಲಿಸಬಲ್ಲದು ಎಂಬುದನ್ನು ನಾವು ಗಣ್ಯಮಾಡಲು ಈ ಕಾರಣವು ಸಾಲದೊ? ಜೀವರಕ್ಷಕವಾದ ರಾಜ್ಯ ಸಾರುವಿಕೆಯ ಚಟುವಟಿಕೆಯು ಮುಂದುವರಿಯುವಂತೆ ದೇವರು ಅನುಮತಿಸಿರುವುದಕ್ಕಾಗಿ ನಾವು ಸಂತೋಷಿಸುವುದಿಲ್ಲವೊ? ಮತ್ತು ಲಕ್ಷಾಂತರ ಜನರು ಸತ್ಯವನ್ನು ಸ್ವೀಕರಿಸಿ, ತಮ್ಮ ನಂಬಿಕೆಯನ್ನು ಪ್ರದರ್ಶಿಸುತ್ತಿರುವುದಕ್ಕಾಗಿ ನಾವು ಹರ್ಷಿಸುವುದಿಲ್ಲವೊ?
18. ಯೆಹೋವನಿಗೆ ಸೇವೆಸಲ್ಲಿಸುವ ವಿಷಯದಲ್ಲಿ ನಿಮ್ಮ ನಿರ್ಧಾರವೇನಾಗಿದೆ?
18 ನಮ್ಮ ನಂಬಿಕೆಯ ಈ ಪ್ರಚಲಿತ ಪರೀಕ್ಷೆಯು ಎಷ್ಟರ ವರೆಗೆ ಮುಂದುವರಿಯುವುದೆಂದು ನಮಗೆ ಹೇಳಲು ಸಾಧ್ಯವಿಲ್ಲ. ಆದರೆ ಒಂದು ವಿಷಯ ಮಾತ್ರ ಖಂಡಿತ: ಪ್ರಚಲಿತ ದುಷ್ಟ ಆಕಾಶಗಳು ಹಾಗೂ ಭೂಮಿಗಾಗಿ ಯೆಹೋವನು ಮುಯ್ಯಿ ತೀರಿಸುವ ದಿನವನ್ನು ಗೊತ್ತುಮಾಡಿದ್ದಾನೆ. ಈ ಮಧ್ಯೆ, ನಮ್ಮ ನಂಬಿಕೆಯನ್ನು ಪರಿಪೂರ್ಣಮಾಡುವವನಾದ ಯೇಸುವಿನಿಂದ ಪ್ರದರ್ಶಿಸಲ್ಪಟ್ಟ, ಪರೀಕ್ಷಿಸಲಾದ ನಂಬಿಕೆಯ ಎದ್ದುಕಾಣುವ ಗುಣವನ್ನು ಅನುಕರಿಸಲು ನಾವು ದೃಢನಿಶ್ಚಿತರಾಗಿರೋಣ. ಮತ್ತು ವೃದ್ಧರಾಗುತ್ತಿರುವ ಅಭಿಷಿಕ್ತ ಉಳಿಕೆಯವರು ಹಾಗೂ ನಮ್ಮ ಮಧ್ಯೆ ಧೈರ್ಯದಿಂದ ಸೇವೆಸಲ್ಲಿಸುತ್ತಿರುವ ಇತರರ ಮಾದರಿಯನ್ನು ನಾವು ಅನುಕರಿಸೋಣ.
19. ನಿಮ್ಮ ಅಭಿಪ್ರಾಯಕ್ಕನುಸಾರ, ಯಾವುದು ಈ ಲೋಕವನ್ನು ಜಯಿಸುವುದೆಂದು ನೀವು ಖಚಿತರಾಗಿರಬಲ್ಲಿರಿ?
19 ಆಕಾಶದ ಮಧ್ಯದಲ್ಲಿ ಹಾರುತ್ತಿರುವ ದೇವದೂತನೊಂದಿಗೆ ಸಹಕರಿಸುತ್ತಾ, ಪ್ರತಿಯೊಂದು ಜನಾಂಗ, ಜಾತಿ, ಭಾಷೆ, ಮತ್ತು ಜನಾಂಗಕ್ಕೆ ಸತತವಾಗಿ ಅನಂತ ಸುವಾರ್ತೆಯನ್ನು ಪ್ರಕಟಿಸಲು ನಾವು ನಿಶ್ಚಿತರಾಗಿರಬೇಕು. ಅವರು ದೇವದೂತನ ಪ್ರಕಟನೆಯನ್ನು ಕೇಳಲಿ: “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ.” (ಪ್ರಕಟನೆ 14:6, 7) ಆ ದೈವಿಕ ನ್ಯಾಯತೀರ್ಪು ನೀಡಲ್ಪಡುವಾಗ, ನಮ್ಮ ನಂಬಿಕೆಯ ಪರೀಕ್ಷಿಸಲ್ಪಟ್ಟ ಗುಣಮಟ್ಟದ ಸಂಬಂಧದಲ್ಲಿ ಫಲಿತಾಂಶವು ಏನಾಗಿರುವುದು? ಅದೊಂದು ಮಹಿಮಾಭರಿತವಾದ ವಿಜಯ—ಪ್ರಚಲಿತ ವಿಷಯಗಳ ವ್ಯವಸ್ಥೆಯಿಂದ ದೇವರ ನೀತಿಯ ಹೊಸ ಲೋಕದೊಳಗೆ ಪಾರಾಗುವುದು—ವಾಗಿರುವುದಿಲ್ಲವೊ? ನಮ್ಮ ನಂಬಿಕೆಯ ಪರೀಕ್ಷೆಗಳನ್ನು ತಾಳಿಕೊಳ್ಳುವ ಮೂಲಕ, ನಾವು ಅಪೊಸ್ತಲ ಯೋಹಾನನಂತೆ ಹೀಗೆ ಹೇಳಶಕ್ತರಾಗಿರುವೆವು: “ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ.”—1 ಯೋಹಾನ 5:4.
[ಅಧ್ಯಯನ ಪ್ರಶ್ನೆಗಳು]
a ದ ವಾಚ್ಟವರ್, ಜೂನ್ 1, 1973, 336-43ನೇ ಪುಟಗಳು, ಮತ್ತು ಜುಲೈ 1, 1973, 409-11ನೇ ಪುಟಗಳನ್ನು ನೋಡಿ.
b ದ ವಾಚ್ಟವರ್, ಜುಲೈ 15, 1983, ಪುಟಗಳು 27-31ನ್ನು ನೋಡಿ.
ನೀವು ಜ್ಞಾಪಿಸಿಕೊಳ್ಳುತ್ತೀರೊ?
◻ ನಮ್ಮ ನಂಬಿಕೆಯ ಪರೀಕ್ಷೆಗಳು ಹೇಗೆ ಆನಂದಕ್ಕೆ ಕಾರಣವಾಗಿರಬಲ್ಲವು?
◻ ಸುಲಭವಾಗಿ ಗುರುತಿಸಲು ಅಸಾಧ್ಯವಾದ ನಮ್ಮ ನಂಬಿಕೆಯ ಪರೀಕ್ಷೆಗಳಲ್ಲಿ ಕೆಲವು ಯಾವುವು?
◻ ನಮ್ಮ ನಂಬಿಕೆಯ ಪರೀಕ್ಷೆಗಳನ್ನು ಯಶಸ್ವಿಯಾಗಿ ತಾಳಿಕೊಳ್ಳುವ ಮೂಲಕ ನಾವು ಹೇಗೆ ಪ್ರಯೋಜನ
[ಪುಟ 17 ರಲ್ಲಿರುವ ಚಿತ್ರ]
ಏ. ಏಚ್. ಮ್ಯಾಕ್ಮಿಲನ್ (ಮುಂದೆ ಎಡಭಾಗದಲ್ಲಿ) ಅವರು ಹಾಗೂ ವಾಚ್ ಟವರ್ ಸೊಸೈಟಿಯ ಅಧಿಕಾರಿಗಳು ಅನ್ಯಾಯವಾಗಿ ಬಂಧಿಸಲ್ಪಟ್ಟ ಸಮಯದಲ್ಲಿ
ಅವರು 1928, ಡಿಟ್ರಾಯಟ್, ಮಿಷಿಗನ್ನಲ್ಲಿನ ಅಧಿವೇಶನಕ್ಕೆ ಒಬ್ಬ ಪ್ರತಿನಿಧಿಯಾಗಿದ್ದರು
ತಮ್ಮ ಅಂತಿಮ ವರ್ಷಗಳಲ್ಲಿ, ಸಹೋದರ ಮ್ಯಾಕ್ಮಿಲನ್ ಇನ್ನೂ ನಂಬಿಕೆಯನ್ನು ಪ್ರದರ್ಶಿಸುತ್ತಾ ಇದ್ದರು
[ಪುಟ 18 ರಲ್ಲಿರುವ ಚಿತ್ರ]
ಈ ಕುಟುಂಬದಂತೆ, ಆಫ್ರಿಕದಲ್ಲಿರುವ ಅನೇಕ ಕ್ರೈಸ್ತರು, ನಂಬಿಕೆಯ ಪರೀಕ್ಷಿಸಲ್ಪಟ್ಟ ಗುಣವನ್ನು ಪ್ರದರ್ಶಿಸಿದ್ದಾರೆ