ನಂಬಿಕೆ ಮತ್ತು ವಿವೇಕ ನಮಗೆ ಬೇಕಿರುವ ಕಾರಣ
ಯಾಕೋಬನ ಪತ್ರದಿಂದ ಅತ್ಯುಜ್ವಲ ಭಾಗಗಳು
ಯೆಹೋವನ ಸೇವಕರಿಗೆ ಶೋಧನೆಯ ಸಮಯದಲ್ಲಿ ಸೈರಣೆಯ ಜರೂರಿಯಿದೆ. ದೈವಿಕ ಅಪ್ರಸನ್ನತೆಗೆ ಬಲಿಯಾಗಬಹುದಾದ ಪಾಪಗಳನ್ನು ಅವರು ಹೋಗಲಾಡಿಸತಕ್ಕದ್ದು. ಯಾಕೋಬನ ಪತ್ರದಲ್ಲಿ ಅಂಥಾ ವಿಷಯಗಳು ಒತ್ತಿ ಹೇಳಲಾಗಿವೆ ಮತ್ತು ಅವುಗಳ ಕುರಿತು ಸಕಾರಾತ್ಮಕ ಕ್ರಿಯೆಗೈಯಲು ಕ್ರಿಯಾತ್ಮಕ ನಂಬಿಕೆ ಮತ್ತು ಸ್ವರ್ಗೀಯ ವಿವೇಕ ಬೇಕಾಗಿರುತ್ತದೆ.
ಈ ಪತ್ರದ ಲೇಖಕನು ಯಾಕೋಬ ಹೆಸರಿನ ಯೇಸುವಿನ ಇಬ್ಬರು ಅಪೊಸ್ತಲರಲ್ಲಿ ತನ್ನನ್ನು ಒಬ್ಬನಾಗಿ ಗುರುತಿಸಿಕೊಳ್ಳುವುದಿಲ್ಲ, ಬದಲಿಗೆ ‘ದೇವರಿಗೂ ಯೇಸು ಕ್ರಿಸ್ತನಿಗೂ ದಾಸನಾಗಿರುವವನು’ ಎಂದು ಹೇಳುತ್ತಾನೆ. ತದ್ರೀತಿಯಲ್ಲಿ, ಯೇಸುವಿನ ಮಲತಮ್ಮನಾದ ಯೂದನು, ತಾನು “ಯೇಸು ಕ್ರಿಸ್ತನ ದಾಸನೂ ಯಾಕೋಬನ ತಮ್ಮನೂ ಆಗಿದ್ದೇನೆ” ಎಂದು ಹೇಳಿದ್ದಾನೆ. (ಯಾಕೋಬ 1:1; ಯೂದ 1; ಮತ್ತಾಯ 10:2, 3) ಆದಕಾರಣ, ತನ್ನ ಹೆಸರಿನಲ್ಲಿ ಯೇಸುವಿನ ಮಲತಮ್ಮನಾದ ಯಾಕೋಬನು ಈ ಪತ್ರವನ್ನು ಬರೆದನು ಎಂದು ರುಜುವಾಗುತ್ತದೆ.—ಮಾರ್ಕ 6:3.
ಈ ಪತ್ರವು ಸಾ.ಶ. 70ರ ಯೆರೂಸಲೇಮಿನ ನಾಶನವನ್ನು ಕುರಿತು ತಿಳಿಸುವದಿಲ್ಲ ಮತ್ತು ಸಾ.ಶ. 62ರ ಸುಮಾರಿಗೆ ರೋಮೀಯ ದೇಶಾಧಿಪತಿ ಫೆಸ್ತನ ಮರಣದ ನಂತರ ಕೊಂಚ ಸಮಯದೊಳಗೆ ಯಾಕೋಬನು ಕೊಲ್ಲಲ್ಪಟ್ಟಿದ್ದನು ಎಂದು ಇತಿಹಾಸಕಾರ ಜೊಸೀಫಸನು ಸೂಚಿಸುತ್ತಾನೆ. ಹಾಗಾದರೆ, ಈ ಪತ್ರವು ಸಾ.ಶ. 62ರ ಮೊದಲು ಪ್ರಾಯಶಃ ಬರೆಯಲ್ಪಟ್ಟಿರಬೇಕು. ಇದು ಆತ್ಮಿಕ ಇಸ್ರಾಯೇಲ್ಯರ “ಹನ್ನೆರಡು ಕುಲದವರಿಗೆ” ಸಂಬೋಧಿಸಲ್ಪಟ್ಟಿದೆ, ಯಾಕಂದರೆ “ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆ” ಇಟ್ಟವರಿಗಾಗಿ ಇದು ನಿರ್ದೇಶಿಸಲ್ಪಟ್ಟಿದೆ.—ಯಾಕೋಬ 1:1; 2:1; ಗಲಾತ್ಯ 6:16.
ಅವನ ಬುದ್ಧಿವಾದವನ್ನು ನೆನಪಿನಲ್ಲಿಡಲು ನಮಗೆ ಸಹಾಯವಾಗುವಂತಹ ನಿದರ್ಶನಗಳನ್ನು ಯಾಕೋಬನು ಉಪಯೋಗಿಸುತ್ತಾನೆ. ಉದಾಹರಣೆಗೆ, ವಿವೇಕಕ್ಕಾಗಿ ದೇವರಿಗೆ ಪ್ರಾರ್ಥನೆ ಮಾಡುವ ವ್ಯಕ್ತಿಯು ಸಂದೇಹ ಪಡಲೇಬಾರದು, “ಸಂದೇಹ ಪಡುವವನೋ ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆಯುತ್ತಿರುವನು.” (1:5-8) ನಮ್ಮ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು, ಯಾಕಂದರೆ ಹಡಗುಗಳಿಗೆ ಚುಕ್ಕಾಣಿಯಿರುವಂತೆ ಅದು ನಮ್ಮ ಪಥವನ್ನು ನಿರ್ದೇಶಿಸಬಹುದು. (3:1, 4) ಮತ್ತು ಪರಿಶೋಧನೆಗಳನ್ನು ನಿಭಾಯಿಸುವಂತೆ, ಫಲಕ್ಕಾಗಿ ವ್ಯವಸಾಯಗಾರನು ದೀರ್ಘಶಾಂತಿಯಿಂದ ಕಾದುಕೊಂಡಿರುವಂತೆ ನಾವು ತಾಳ್ಮೆಯ ಸೈರಣೆಯನ್ನು ಪ್ರದರ್ಶಿಸುವ ಜರೂರಿಯಿದೆ.—5:7, 8.
ನಂಬಿಕೆ, ಪರಿಶೋಧನೆಗಳು, ಮತ್ತು ಕ್ರಿಯೆಗಳು
ನಮ್ಮ ಪರಿಶೋಧನೆಗಳ ನಡುವೆಯೂ ನಾವು ಆನಂದಿತರಾಗಿರಸಾಧ್ಯವಿದೆ ಎಂದು ಯಾಕೋಬನು ಮೊದಲು ತೋರಿಸುತ್ತಾನೆ. (1:1-18) ಅನಾರೋಗ್ಯಗಳಂತಹ ಶೋಧನೆಗಳು ಎಲ್ಲಾ ಮಾನವರಿಗೆ ಸರ್ವಸಾಮಾನ್ಯವಾಗಿವೆ, ಆದರೆ ದೇವರ ಮತ್ತು ಕ್ರಿಸ್ತನ ದಾಸರಾಗಿರುವ ಕಾರಣದಿಂದಲೂ ಕ್ರೈಸ್ತರು ಬಾಧೆಗೊಳಗಾಗುತ್ತಾರೆ. ತಾಳಿಕೊಳ್ಳಲು ಬೇಕಾದ ವಿವೇಕಕ್ಕಾಗಿ, ನಂಬಿಕೆಯಿಂದ ನಾವು ಬೇಡುತ್ತಾ ಇರುವುದಾದರೆ, ಯೆಹೋವನು ನಮಗದನ್ನು ಒದಗಿಸುತ್ತಾನೆ. ಅವನೆಂದೂ ಕೆಟ್ಟತನದಿಂದ ನಮ್ಮನ್ನು ಪರೀಕ್ಷಿಸುವದಿಲ್ಲ, ಮತ್ತು ಒಳ್ಳೆಯದ್ದು ಏನಿದೆಯೋ ಅದನ್ನು ಒದಗಿಸುವದಕ್ಕೆ ನಾವು ಆತನ ಮೇಲೆ ಆತುಕೊಂಡಿರಸಾಧ್ಯವಿದೆ.
ದೇವರ ಸಹಾಯವನ್ನು ಪಡೆಯಲು, ನಮ್ಮ ನಂಬಿಕೆಯನ್ನು ಪ್ರದರ್ಶಿಸುವ ಕ್ರಿಯೆಗಳ ಮೂಲಕ ನಾವಾತನಿಗೆ ಆರಾಧನೆಯನ್ನು ಸಲ್ಲಿಸತಕ್ಕದ್ದು. (1:19-2:26) ಇದು ಕೇವಲ ಕೇಳುವವರಾಗಿರದೆ, “ವಾಕ್ಯದ ಪ್ರಕಾರ ನಡೆಯುವವರಾಗಿರು”ವಂತೆ ಅದು ನಮ್ಮಿಂದ ಕೇಳಿಕೊಳ್ಳುತ್ತದೆ. ನಾವು ನಮ್ಮ ನಾಲಿಗೆಯನ್ನು ಸ್ವಾಧೀನದಲ್ಲಿಟ್ಟುಕೊಳ್ಳಬೇಕು, ಅನಾಥರನ್ನೂ ವಿಧವೆಯರನ್ನೂ ಪರಾಮರಿಸಬೇಕು ಮತ್ತು ಪ್ರಪಂಚದ ದೋಷವೂ ತಗಲದಂತೆ ನೋಡಿಕೊಂಡಿರಬೇಕು. ನಾವು ಶ್ರೀಮಂತರಿಗೆ ಮರ್ಯಾದೆ ತೋರಿಸಿ ಮತ್ತು ಬಡವರಿಗೆ ಅಲಕ್ಷ್ಯ ತೋರಿಸುವುದಾದರೆ, ನಾವು ಪ್ರೀತಿಯ ‘ರಾಜಾಜ್ಞೆಯನ್ನು’ ಭಂಗಗೊಳಿಸುತ್ತೇವೆ. ಅಬ್ರಹಾಮ ಮತ್ತು ರಹಾಬಳ ಉದಾಹರಣೆಗಳು ಉತ್ತಮ ರೀತಿಯಲ್ಲಿ ತೋರಿಸಿದಂತೆ, ನಂಬಿಕೆಯನ್ನು ಕ್ರಿಯೆಗಳ ಮೂಲಕ ತೋರಿಸಬೇಕೆಂಬುದನ್ನು ನಾವು ನೆನಪಿನಲ್ಲಿಡತಕ್ಕದ್ದು. ಖಂಡಿತವಾಗಿಯೂ “ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದೇ.”
ಸ್ವರ್ಗೀಯ ವಿವೇಕ ಮತ್ತು ಪ್ರಾರ್ಥನೆ
ಬೋಧಕರಿಗೆ ಅವರ ಜವಾಬ್ದಾರಿಗಳನ್ನು ಪೂರೈಸಲು ನಂಬಿಕೆಯೂ, ವಿವೇಕವೂ ಎರಡೂ ಬೇಕಾಗಿವೆ. (3:1-8) ಉಪದೇಶಕರೋಪಾದಿ ಅವರಿಗೆ ಅತಿ ಘನತಮವಾದ ಜವಾಬ್ದಾರಿ ಇರುತ್ತದೆ. ಅವರಂತೆ, ನಾವೂ ಕೂಡಾ, ನಮ್ಮ ನಾಲಿಗೆಯನ್ನು ಹತೋಟಿಯಲ್ಲಿಡತಕ್ಕದ್ದು—ಇದನ್ನು ಮಾಡಲು ಸ್ವರ್ಗೀಯ ವಿವೇಕವು ನಮಗೆ ಸಹಾಯ ನೀಡುತ್ತದೆ.
ಲೌಕಿಕ ಮನೋಪ್ರವೃತ್ತಿಗಳಿಗೆ ಶರಣಾಗತರಾಗುವುದರಿಂದ ದೇವರೊಂದಿಗಿನ ನಮ್ಮ ಸಂಬಂಧಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ತಿಳಿದು ಕೊಳ್ಳಲು ವಿವೇಕವು ನಮಗೆ ಸಾಧ್ಯ ಮಾಡುತ್ತದೆ. (4:1-5:12) ಸ್ವಾರ್ಥಭರಿತ ಗುರಿಗಳನ್ನು ಪಡೆಯಲು ನಾವು ಕಾದಾಡಿರುವುದಾದರೆ ಇಲ್ಲವೇ ನಮ್ಮ ಸಹೋದರರನ್ನು ಖಂಡಿಸಿರುವುದಾದರೆ, ನಾವು ಪಶ್ಚಾತ್ತಾಪ ಪಡಬೇಕಾಗಿದೆ. ಮತ್ತು ಈ ಲೋಕದ ಸ್ನೇಹವನ್ನು ಹೋಗಲಾಡಿಸುವುದು ಎಷ್ಟೊಂದು ಜರೂರಿಯದ್ದು, ಯಾಕಂದರೆ ಇದು ಆತ್ಮಿಕ ವ್ಯಭಿಚಾರವಾಗಿರುತ್ತದೆ! ಪ್ರಾಪಂಚಿಕ ಯೋಜನೆಗಳಿಂದ ನಾವೆಂದೂ ದೇವರ ಚಿತ್ತವನ್ನು ಅಲಕ್ಷ್ಯಿಸದಿರೋಣ, ಮತ್ತು ಅಸೈರಣೆಯ ಮತ್ತು ಒಬ್ಬರು ಇನ್ನೊಬ್ಬರ ವಿರುದ್ಧ ಗುಣುಗುಟ್ಟುವ ಆತ್ಮದ ವಿರುದ್ಧ ಜಾಗ್ರತೆಯಲ್ಲಿರೋಣ
ಆತ್ಮಿಕವಾಗಿ ಅಸ್ವಸ್ಥನಾಗಿರುವ ಯಾವನೇ ಒಬ್ಬನು ಸಭಾ ಹಿರಿಯರ ಸಹಾಯವನ್ನು ಪಡೆದು ಕೊಳ್ಳತಕ್ಕದ್ದು. (5:13-20) ಪಾಪಗಳು ಗೈಯಲ್ಪಟ್ಟಿದ್ದರೆ, ಪಶ್ಚಾತ್ತಾಪ ಪಟ್ಟ ಪಾಪಿಯ ಆತ್ಮಿಕ ಸ್ವಸ್ಥತೆಯು ಪುನಃ ಸ್ಥಾಪಿಸಲ್ಪಡಲು ಅವರ ಪ್ರಾರ್ಥನೆಗಳು ಮತ್ತು ವಿವೇಕದ ಬುದ್ಧಿವಾದವು ಸಹಾಯ ಮಾಡುತ್ತದೆ. ವಾಸ್ತವದಲ್ಲಿ “ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದವನು ಅವನ (ತಪ್ಪಿತಸ್ಥನ) ಪ್ರಾಣವನ್ನು (ಆತ್ಮಿಕ ಮತ್ತು ನಿತ್ಯ) ಮರಣದಿಂದ ತಪ್ಪಿಸುತ್ತಾನೆ.” (w91 3/15)
[ಪುಟ 29 ರಲ್ಲಿರುವ ಚೌಕ]
ವಾಕ್ಯದ ಪ್ರಕಾರ ಮಾಡುವವರು: ನಾವು “ಕೇವಲ ಕೇಳುವವರಾಗಿರದೆ, ಅದರ ಪ್ರಕಾರ ಮಾಡುವವರು” ಆಗಿರತಕ್ಕದ್ದು. (ಯಾಕೋಬ 1:22-25, NW) ಕೇವಲ ಕೇಳುವವನೊಬ್ಬನು “ಕನ್ನಡಿಯಲ್ಲಿ ತನ್ನ ಹುಟ್ಟುಮುಖವನ್ನು ನೋಡಿದ ಮನುಷ್ಯನಂತಿರುವನು.” ಚುಟುಕಾಗಿ ಪರೀಕ್ಷಣೆ ಮಾಡಿದ ನಂತರ, ಅವನು “ತಾನು ಹೇಗಿದ್ದೇನೆಂದು ಆ ಕ್ಷಣವೇ ಮರೆತು ಬಿಡುತ್ತಾನೆ.” ಆದರೆ, ‘ವಾಕ್ಯದ ಪ್ರಕಾರ ಮಾಡುವವನು’ ದೇವರ ಪರಿಪೂರ್ಣ, ಯಾ ಸಮಗ್ರ ನಿಯಮದಲ್ಲಿ ಜಾಗ್ರತೆಯಿಂದ ನೋಡುತ್ತಾ, ಕ್ರೈಸ್ತನಿಂದ ಕೇಳಲ್ಪಟ್ಟಿರುವ ಎಲ್ಲವನ್ನು ಅವಲಂಬಿಸುತ್ತಾನೆ. ಅವನು “ಅದರಲ್ಲಿ ಇನ್ನೂ ಲಕ್ಷ್ಯ ಕೊಟ್ಟು ನೋಡುತ್ತಲೇ ಇರುತ್ತಾನೆ,” ಅದಕ್ಕನುಸಾರವಾಗಿ ಬಹಳ ನಿಕಟರೀತಿಯಲ್ಲಿ ಹೊಂದಿಸಿಕೊಳ್ಳಲು ಬೇಕಾದ ಸರಿಪಡಿಸುವಿಕೆಯ ನೋಟದಲ್ಲಿ ಆ ನಿಯಮವನ್ನು ಪರೀಕ್ಷಿಸುವನು. (ಕೀರ್ತನೆ 119:16) “ವಾಕ್ಯದ ಪ್ರಕಾರ ಮಾಡುವವನು”, ಕನ್ನಡಿಯಲ್ಲಿ ಒಮ್ಮೆ ನೋಡಿ ಅದೇನು ತೋರಿಸುತ್ತದೆ ಎಂಬುದನ್ನು ಮರೆತು ಬಿಡುವ ಮನುಷ್ಯನಿಗಿಂತ ಹೇಗೆ ಭಿನ್ನನಾಗಿದ್ದಾನೆ? ಯಾಕೆ, ಮಾಡುವವನು ಯೆಹೋವನ ವಾಕ್ಯವನ್ನು ಕ್ರಿಯೆಗಿಳಿಸುತ್ತಾನೆ ಮತ್ತು ಅವನ ಪ್ರಸನ್ನತೆಯಲ್ಲಿ ಆನಂದಿಸುತ್ತಾನೆ!—ಕೀರ್ತನೆ 19:7-11.