ಈರ್ಷ್ಯೆಯ—ಕುರಿತು ನೀವು ತಿಳಿದಿರಬೇಕಾದ ವಿಷಯ
ಈರ್ಷ್ಯೆ ಎಂದರೇನು? ಒಬ್ಬ ವ್ಯಕ್ತಿಯನ್ನು ಚಿಂತಿತನನ್ನಾಗಿ, ದುಃಖಿಯನ್ನಾಗಿ, ಅಥವಾ ಕುಪಿತನನ್ನಾಗಿ ಮಾಡಬಲ್ಲ ಒಂದು ತೀವ್ರ ಭಾವೋದ್ರೇಕವದು. ಒಂದು ಕೆಲಸದಲ್ಲಿ ನಮಗಿಂತ ಬೇರೊಬ್ಬನು ಹೆಚ್ಚು ಸಾಫಲ್ಯವುಳ್ಳವನಾಗಿ ಕಂಡುಬರುವಾಗ ನಾವು ಈರ್ಷ್ಯೆಪಡಬಹುದು. ಅಥವಾ, ಒಬ್ಬ ಮಿತ್ರನು ನಮಗಿಂತ ಹೆಚ್ಚು ಹೊಗಳಿಕೆಯನ್ನು ಪಡೆಯುವಾಗ ನಮಗೆ ಈರ್ಷ್ಯೆಯಾಗಬಹುದು. ಆದರೆ ಈರ್ಷ್ಯೆಪಡುವುದು ಯಾವಾಗಲೂ ತಪ್ಪೋ?
ಈರ್ಷ್ಯೆ ತುಂಬಿದ ಜನರು ಸಂಭಾವ್ಯ ಪ್ರತಿಸ್ಪರ್ಧಿಗಳ ಕುರಿತು ಸಂದೇಹಾಸ್ಪದವಾದ ಪ್ರವೃತ್ತಿಯುಳ್ಳವರಾಗುತ್ತಾರೆ. ಇದಕ್ಕೆ ಪುರಾತನ ಇಸ್ರಾಯೇಲಿನ ಅರಸ ಸೌಲನು ದೃಷ್ಟಾಂತವಾಗಿದ್ದನು. ಮೊದಮೊದಲು ಅವನು ತನ್ನ ಶಸ್ತ್ರವಾಹಕನಾದ ದಾವೀದನನ್ನು ಪ್ರೀತಿಸಿದನು, ಸೇನಾನಾಯಕನ ಹುದ್ದೆಗೂ ಅವನನ್ನು ಬಡತಿ ಮಾಡಿದನು. (1 ಸಮುವೇಲ 16:21; 18:5) ಬಳಿಕ ಒಂದು ದಿನ ಸ್ತ್ರೀಯರು ದಾವೀದನನ್ನು ಈ ರೀತಿಯಾಗಿ ಸುತ್ತಿಸುವುದನ್ನು ಸೌಲನು ಕೇಳಿದನು: “ಸೌಲನು ಸಾವಿರಗಟ್ಟಳೆಯಾಗಿ ಕೊಂದನು; ದಾವೀದನು ಹತ್ತುಸಾವಿರಗಟ್ಟಳೆಯಾಗಿ ಕೊಂದನು.” (1 ಸಮುವೇಲ 18:7) ಇದು ದಾವೀದನೊಂದಿಗಿನ ತನ್ನ ಸುಸಂಬಂಧವನ್ನು ಪ್ರಭಾವಿಸುವಂತೆ ಸೌಲನು ಬಿಡಬಾರದಿತ್ತು. ಆದರೂ, ಅವನು ಕುಪಿತನಾದನು. “ಅಂದಿನಿಂದ ಸೌಲನು ಸತತವಾಗಿ ದಾವೀದನನ್ನು ಸಂದೇಹಾಸ್ಪದವಾಗಿ ನೋಡುತ್ತಿದ್ದನು.”—1 ಸಮುವೇಲ 18:9, NW.
ಈರ್ಷ್ಯೆಯ ವ್ಯಕ್ತಿಯೊಬ್ಬನು ಇನ್ನೊಬ್ಬನಿಗೆ ಕೇಡನ್ನು ಬಯಸಲಿಕ್ಕಿಲ್ಲ. ಅವನು ಅಥವಾ ಅವಳು ಸಂಗಡಿಗನೊಬ್ಬನ ಸಾಫಲ್ಯಕ್ಕಾಗಿ ಕೇವಲ ಮುನಿಯಬಹುದು ಮತ್ತು ಅವೇ ಗುಣಗಳನ್ನು ಅಥವಾ ಪರಿಸ್ಥಿತಿಗಳನ್ನು ಪಡೆದುಕೊಳ್ಳಲಿಕ್ಕಾಗಿ ಹಾತೊರೆಯಬಹುದು. ಇನ್ನೊಂದು ಕಡೆ, ಒಬ್ಬ ವ್ಯಕ್ತಿಯಲ್ಲಿ ವಿಶೇಷವಾಗಿ ಈರ್ಷ್ಯೆ ಇರುವಲ್ಲಿ, ತನ್ನ ಈರ್ಷ್ಯೆಯನ್ನೆಬ್ಬಿಸುವ ವ್ಯಕ್ತಿಯಿಂದ ಒಳಿತನ್ನು ಗುಪ್ತವಾಗಿ ತಡೆಯಬಹುದು ಅಥವಾ ಅವನಿಗೆ ಹಾನಿಬರಲೆಂದು ಹಾರೈಸಬಹುದು. ಕೆಲವೊಮ್ಮೆ ಅಸೂಯೆಯುಳ್ಳ ವ್ಯಕ್ತಿಯು ತನ್ನ ಭಾವನೆಗಳನ್ನು ಅಡಗಿಸಿಡಶಕ್ತನಲ್ಲ. ಅರಸ ಸೌಲನು ದಾವೀದನನ್ನು ಕೊಲ್ಲಲು ಪ್ರಯತ್ನಿಸಿದ ಪ್ರಕಾರ, ಇನ್ನೊಬ್ಬನಿಗೆ ಬಹಿರಂಗವಾಗಿ ಹಾನಿಗೈಯಲು ಅವನು ಪ್ರೇರಿಸಲ್ಪಟ್ಟಾನು. ಒಂದಕ್ಕಿಂತಲೂ ಹೆಚ್ಚುಸಾರಿ, ಸೌಲನು “ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವಂತೆ ತಿವಿ” ಯುವ ಒಂದು ಪ್ರಯತ್ನದಲ್ಲಿ ಈಟಿಯೊಂದನ್ನು ಎಸೆದನು.—1 ಸಮುವೇಲ 18:11; 19:10.
‘ಆದರೆ ನಾನೇನು ಈರ್ಷ್ಯೆಪಡುವ ವ್ಯಕ್ತಿಯಲ್ಲ,’ ಎಂದು ನೀವು ಪ್ರತಿಕ್ರಿಯಿಸೀರಿ. ನಿಜ, ಈರ್ಷ್ಯೆಯು ನಿಮ್ಮ ಜೀವನವನ್ನು ನಿಯಂತ್ರಿಸಲಿಕ್ಕಿಲ್ಲ. ಆದರೂ, ಸ್ವಲ್ಪಮಟ್ಟಿಗೆ ನಾವೆಲ್ಲರೂ ಈರ್ಷ್ಯೆಯಿಂದ—ನಮ್ಮ ಸ್ವಂತ ಮತ್ತು ಇತರರ ಈರ್ಷ್ಯೆಯ ಭಾವನೆಗಳಿಂದ ಬಾಧಿತರಾಗುತ್ತೇವೆ. ನಾವು ಬೇರೆಯವರಲ್ಲಿ ಈರ್ಷ್ಯೆಯನ್ನು ಗಮನಿಸಲು ಚುರುಕಾಗಿದ್ದರೂ, ನಮ್ಮಲ್ಲಿ ಅದನ್ನು ಕಾಣಲು ಮಾತ್ರ ನಿಧಾನಿಗಳಾಗಿರಬಹುದು.
“ಅಸೂಯೆಪಡುವ ಪ್ರವೃತ್ತಿ”
ದೇವರ ವಾಕ್ಯವಾದ ಬೈಬಲಿನಲ್ಲಿ ಪ್ರಕಟಿಸಲ್ಪಟ್ಟ ಪ್ರಕಾರ ಪಾಪಪೂರ್ಣ ಮನುಷ್ಯ ಸ್ವಭಾವದ ದಾಖಲೆಯು, ಅಸೂಯೆಯ ಪಾಪಗಳನ್ನು ಆಗಿಂದಾಗ್ಗೆ ಎತ್ತಿತೋರಿಸುತ್ತದೆ. ಕಾಯಿನ ಮತ್ತು ಹೇಬೆಲನ ವೃತ್ತಾಂತವನ್ನು ನೀವು ನೆನಪಿಸಿಕೊಳ್ಳುತ್ತೀರೊ? ಆದಾಮ ಮತ್ತು ಹವ್ವರ ಇವರಿಬ್ಬರು ಪುತ್ರರು ದೇವರಿಗೆ ಯಜ್ಞಗಳನ್ನು ಅರ್ಪಿಸಿದರು. ಹೇಬೆಲನು ಹಾಗೆ ಮಾಡಿದ್ದು ಅವನು ನಂಬಿಕೆಯ ಮನುಷ್ಯನಾಗಿದುದ್ದರಿಂದ. (ಇಬ್ರಿಯ 11:4) ಭೂಮಿಯ ಸಂಬಂಧದಲ್ಲಿ ಆತನ ಮಹಾ ಉದ್ದೇಶಗಳನ್ನು ನೆರವೇರಿಸಲು ದೇವರಿಗಿರುವ ಶಕ್ತಿಯಲ್ಲಿ ಹೇಬೆಲನಿಗೆ ನಂಬಿಕೆಯಿತ್ತು. (ಆದಿಕಾಂಡ 1:28; 3:15; ಇಬ್ರಿಯ 11:1) ಬರಲಿರುವ ಭೂಪ್ರಮೋದವನದಲ್ಲಿ ದೇವರು ನಂಬಿಗಸ್ತ ಮಾನವರಿಗೆ ಜೀವವನ್ನು ಬಹುಮಾನವಾಗಿ ಕೊಡಲಿರುವನೆಂದೂ ಹೇಬೆಲನು ನಂಬಿದನು. (ಇಬ್ರಿಯ 11:6) ಹೀಗೆ, ದೇವರು ಹೇಬೆಲನ ಯಜ್ಞದಲ್ಲಿ ತನ್ನ ಮೆಚ್ಚಿಗೆಯನ್ನು ತೋರಿಸಿದನು. ಕಾಯಿನನು ತನ್ನ ಸೋದರನನ್ನು ನಿಜವಾಗಿ ಪ್ರೀತಿಸಿರುತ್ತಿದ್ದರೆ, ದೇವರು ಹೇಬೆಲನನ್ನು ಆಶೀರ್ವದಿಸಿದುದಕ್ಕಾಗಿ ಸಂತೋಷಪಡುತ್ತಿದ್ದನು. ಅದಕ್ಕೆ ಬದಲಾಗಿ ಕಾಯಿನನು, “ಬಹು ಕೋಪಗೊಂಡನು.”—ಆದಿಕಾಂಡ 4:5.
ಅವನೂ ಒಂದು ಆಶೀರ್ವಾದವನ್ನು ಹೊಂದಲು ಸಾಧ್ಯವಾಗುವಂತೆ ಒಳ್ಳೇದನ್ನು ಮಾಡಲು ದೇವರು ಕಾಯಿನನನ್ನು ಪ್ರಚೋದಿಸಿದನು. ಬಳಿಕ ದೇವರು ಎಚ್ಚರಿಸಿದ್ದು: “ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನು ಅದನ್ನು ವಶಮಾಡಿಕೊಳ್ಳಬೇಕು.” (ಆದಿಕಾಂಡ 4:7) ಶೋಚನೀಯವಾಗಿ, ಕಾಯಿನನು ತನ್ನ ಈರ್ಷ್ಯೆಯ ಕೋಪವನ್ನು ವಶಮಾಡಿಕೊಳ್ಳದೆ ಹೋದನು. ಅದು ಅವನನ್ನು ತನ್ನ ನೀತಿವಂತ ಸೋದರನನ್ನು ಕೊಲ್ಲುವುದಕ್ಕೆ ಪ್ರೇರೇಪಿಸಿತು. (1 ಯೋಹಾನ 3:12) ಅಂದಿನಿಂದ ಹೋರಾಟಗಳು ಮತ್ತು ಯುದ್ಧಗಳು ಕೋಟ್ಯಂತರ ಜೀವಗಳನ್ನು ಬಲಿತೆತ್ತಿರುತ್ತವೆ. “ಯುದ್ಧದ ಕೆಲವು ಮೂಲಭೂತ ಕಾರಣಗಳು—ಅಧಿಕ ಭೂಮಿಗಾಗಿ ಅಪೇಕ್ಷೆ, ಅಧಿಕ ಐಶ್ವರ್ಯದ ಅಪೇಕ್ಷೆ, ಹೆಚ್ಚು ಅಧಿಕಾರಕ್ಕಾಗಿ ಅಪೇಕ್ಷೆ, ಅಥವಾ ಸುರಕ್ಷೆಗಾಗಿ ಅಪೇಕ್ಷೆಯಾಗಿರಬಹುದು,” ಎಂದು ವಿವರಿಸುತ್ತದೆ ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ.
ಸತ್ಯ ಕ್ರೈಸ್ತರು ಈ ಲೋಕದ ಯುದ್ಧಗಳಲ್ಲಿ ಪಾಲು ತೆಗೆದುಕೊಳ್ಳುವುದಿಲ್ಲ. (ಯೋಹಾನ 17:16) ಆದರೂ ವಿಷಾದಕರವಾಗಿ, ವ್ಯಕ್ತಿಪರ ಕ್ರೈಸ್ತರು ಕೆಲವು ಸಾರಿ ಮೌಖಿಕ ಹೋರಾಟಗಳಲ್ಲಿ ತೊಡಕಿಸಿಕೊಳ್ಳುತ್ತಾರೆ. ಸಭೆಯ ಇತರ ಸದಸ್ಯರು ಈ ಹೋರಾಟಗಳಲ್ಲಿ ಒಳಗೂಡುವಲ್ಲಿ, ಅವು ಹಾನಿಕರವಾದ ಮೌಖಿಕ ಕಾದಾಟಗಳಾಗಿ ಪರಿಣಮಿಸಬಲ್ಲವು. “ನಿಮ್ಮಲ್ಲಿ ಯುದ್ಧಗಳೂ ಕಾದಾಟಗಳೂ ಎಲ್ಲಿಂದ ಹುಟ್ಟುತ್ತವೆ?” ಎಂದು ಬೈಬಲ್ ಬರಹಗಾರನಾದ ಯಾಕೋಬನು ತನ್ನ ಜೊತೆ ವಿಶ್ವಾಸಿಗಳಿಗೆ ಕೇಳಿದನು. (ಯಾಕೋಬ 4:1) ಅವರ ಪ್ರಾಪಂಚಿಕ ದುರಾಶೆಯನ್ನು ಹೊರಗೆಡಹುವ ಮೂಲಕ ಅವನು ಆ ಪ್ರಶ್ನೆಯನ್ನು ಉತ್ತರಿಸಿದನು, ಮತ್ತು ಅವನು ಕೂಡಿಸಿದ್ದು: “ನೀವು ಆಶಿಸುತ್ತಾ . . . ಇರುತ್ತೀರಿ,” ಅಥವಾ “ಈರ್ಷ್ಯೆ” ಪಡುತ್ತೀರಿ. (ಯಾಕೋಬ 4:2, NW, ಪಾದಟಿಪ್ಪಣಿ) ಹೌದು, ಪ್ರಾಪಂಚಿಕತೆಯು, ಅತ್ಯಾಶೆಗೆ ಮತ್ತು ಹೆಚ್ಚು ಉತ್ತಮ ಪರಿಸ್ಥಿತಿಗಳನ್ನು ಅನುಭವಿಸುವಂತೆ ಕಾಣುವವರ ಕುರಿತಾಗಿ ಈರ್ಷ್ಯೆಪಡಲು ನಡಿಸಬಲ್ಲದು. ಈ ಕಾರಣಕ್ಕಾಗಿ ಯಾಕೋಬನು, ಮಾನವರ “ಅಸೂಯೆಪಡುವ ಪ್ರವೃತ್ತಿ”ಯ ವಿರುದ್ಧವಾಗಿ ಎಚ್ಚರಿಸಿದನು.—ಯಾಕೋಬ 4:5, NW.
ಈರ್ಷ್ಯೆಯ ಕಾರಣಗಳನ್ನು ವಿಶ್ಲೇಷಿಸುವುದರಲ್ಲಿ ಏನು ಪ್ರಯೋಜನವಿದೆ? ಒಳ್ಳೇದು, ಇದು ನಮಗೆ ಪ್ರಾಮಾಣಿಕರಾಗಿರುವಂತೆ ಮತ್ತು ಇತರರೊಂದಿಗೆ ಸುಸಂಬಂಧಗಳನ್ನು ಪ್ರವರ್ಧಿಸುವಂತೆ ಸಹಾಯ ಮಾಡಬಲ್ಲದು. ನಾವು ಹೆಚ್ಚು ತಿಳಿವಳಿಕೆ, ಸೈರಣೆ, ಮತ್ತು ಕ್ಷಮೆಯನ್ನು ತೋರಿಸುವವರಾಗುವಂತೆಯೂ ಇದು ನೆರವಾಗಬಲ್ಲದು. ಎಲ್ಲದಕ್ಕಿಂತ ಉತ್ತಮವಾಗಿ, ಪಾಪಪೂರ್ಣ ಮಾನವ ಪ್ರವೃತ್ತಿಗಳಿಂದ ಬಿಡುಗಡೆ ಮತ್ತು ದೇವರ ಪ್ರೀತಿಯುಳ್ಳ ರಕ್ಷಣಾ ಒದಗಿಸುವಿಕೆಗಾಗಿರುವ ಮನುಷ್ಯನ ತೀವ್ರ ಅಗತ್ಯವನ್ನು ಅದು ಎತ್ತಿಹೇಳುತ್ತದೆ.—ರೋಮಾಪುರ 7:24, 25.
ಪಾಪಪೂರ್ಣ ಈರ್ಷ್ಯೆರಹಿತವಾದ ಒಂದು ಲೋಕ
ಮಾನುಷ ದೃಷ್ಟಿಕೋನದಿಂದ, ಪಾಪಪೂರ್ಣ ಈರ್ಷ್ಯೆರಹಿತವಾದ ಒಂದು ಲೋಕವು ಅಸಾಧ್ಯವೆಂದು ಕಂಡೀತು. ಲೇಖಕರಾದ ರಾಮ್ ಲ್ಯಾಂಡೊ ಅಂಗೀಕರಿಸಿದ್ದು: “ತತ್ವಜ್ಞಾನಿಗಳು . . . ಮತ್ತು ಮನಶ್ಶಾಸ್ತ್ರಜ್ಞರು ಈ ವಿಷಯವಾಗಿ ಹೇಳಿರುವ ಸಕಲ ವಿಷಯದೊಂದಿಗೆ ಅನೇಕ ಯುಗಗಳ ಜ್ಞಾನಭಂಡಾರವು, ಈರ್ಷ್ಯೆಯಿಂದ ಯಾತನೆಪಡುವ ಮನುಷ್ಯನಿಗೆ ಯಾವ ಮಾರ್ಗದರ್ಶನವನ್ನೂ ನೀಡುವುದಿಲ್ಲ. . . . ಯಾವನೇ ವೈದ್ಯನು ಒಬ್ಬ ಈರ್ಷ್ಯೆಯ ಮನುಷ್ಯನನ್ನು ಎಂದಾದರೂ ವಾಸಿಮಾಡಿದ್ದುಂಟೋ?”
ಆದರೆ ದೇವರ ವಾಕ್ಯವು, ಎಲ್ಲಿ ಯಾರೊಬ್ಬನೂ ಪುನಃ ಎಂದಿಗೂ ಭಕ್ತಿಹೀನ ಈರ್ಷ್ಯೆಯಿಂದ ಅಥವಾ ಅಸೂಯೆಯಿಂದ ಬಾಧಿಸಲ್ಪಡನೋ, ಆ ಹೊಸ ಲೋಕವೊಂದರಲ್ಲಿ ಪರಿಪೂರ್ಣ ಮಾನವ ಜೀವವನ್ನು ಪಡೆದುಕೊಳ್ಳುವ ನಿರೀಕ್ಷೆಯನ್ನು ಕೊಡುತ್ತದೆ. ಅದಲ್ಲದೆ, ಆ ಹೊಸ ಲೋಕದ ಶಾಂತಿಯು, ಅಂತಹ ದುಷ್ಟ ಗುಣಲಕ್ಷಣಗಳನ್ನು ಪ್ರದರ್ಶಿಸುವ ಜನರಿಂದಲೂ ಭಂಗಗೊಳಿಸಲ್ಪಡದು.—ಗಲಾತ್ಯ 5:19-21; 2 ಪೇತ್ರ 3:13.
ಆದರೂ, ಎಲ್ಲ ತರದ ಈರ್ಷ್ಯೆಯು ಅಯೋಗ್ಯವಲ್ಲ. ನಕಾರಾತ್ಮಕ ಈರ್ಷ್ಯೆಯು ಅಯೋಗ್ಯವೂ ಹಾನಿಕರವೂ ಆಗಿರುವಾಗ, ಸಕಾರಾತ್ಮಕ ಈರ್ಷ್ಯೆಯು ಹಾನಿಕರವಲ್ಲ. ವಾಸ್ತವವಾಗಿ, ಯೆಹೋವನು “ಈರ್ಷ್ಯೆಯ ದೇವರಾಗಿದ್ದಾನೆ” ಎಂದು ಬೈಬಲು ಹೇಳುವಾಗ, ಎರಡೂ ವಿಧಗಳಲ್ಲಿ ಭಾಷಾಂತರಿಸಬಲ್ಲ ಒಂದು ಹೀಬ್ರು ಪದವನ್ನು ಅದು ಉಪಯೋಗಿಸುತ್ತದೆ. (ವಿಮೋಚನಕಾಂಡ 34:14, NW) ಅದರ ಅರ್ಥವೇನು? ಮತ್ತು ಯೋಗ್ಯವಾದ ಈರ್ಷ್ಯೆಯ ಕುರಿತು ಬೈಬಲು ಏನು ಹೇಳುತ್ತದೆ? ಅದೇ ಸಮಯದಲ್ಲಿ, ಅಯೋಗ್ಯ ಈರ್ಷ್ಯೆಯ ಮೇಲೆ ಒಬ್ಬನು ಮೇಲುಗೈಯನ್ನು ಹೇಗೆ ಗಳಿಸಬಲ್ಲನು? ಮುಂದಿನ ಲೇಖನಗಳನ್ನು ನೋಡಿರಿ.