ಪ್ರೀತಿ ಅಯೋಗ್ಯ ಈರ್ಷ್ಯೆಯನ್ನು ಜಯಿಸುತ್ತದೆ
“ಪ್ರೀತಿ ಈರ್ಷ್ಯೆಪಡುವುದಿಲ್ಲ.”—1 ಕೊರಿಂಥ 13:4, NW.
1, 2. (ಎ) ಪ್ರೀತಿಯ ಕುರಿತು ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನು? (ಬಿ) ಪ್ರೀತಿಸುವುದೂ ಈರ್ಷ್ಯೆಪಡುವುದೂ ಎರಡೂ ಶಕ್ಯವೂ, ಮತ್ತು ನೀವು ಹಾಗೇಕೆ ಉತ್ತರಿಸುತ್ತೀರಿ?
ಪ್ರೀತಿ ನಿಜ ಕ್ರೈಸ್ತತ್ವದ ಪರಿಚಯ ಗುರುತಾಗಿದೆ. “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು,” ಎಂದು ಯೇಸು ಕ್ರಿಸ್ತನು ಹೇಳಿದನು. (ಯೋಹಾನ 13:35) ಕ್ರೈಸ್ತ ಸಂಬಂಧಗಳನ್ನು ಪ್ರೀತಿಯು ಹೇಗೆ ಪ್ರಭಾವಿಸಬೇಕೆಂದು ವಿವರಿಸುವುದಕ್ಕೆ ಅಪೊಸ್ತಲ ಪೌಲನು ಪ್ರೇರಿಸಲ್ಪಟ್ಟನು. ಬೇರೆ ವಿಷಯಗಳೊಂದಿಗೆ, ಅವನು ಬರೆದದ್ದು: “ಪ್ರೀತಿ ಈರ್ಷ್ಯೆಪಡುವುದಿಲ್ಲ.”—1 ಕೊರಿಂಥ 13:4.
2 ಪೌಲನು ಆ ಮಾತುಗಳನ್ನು ಬರೆದಾಗ, ಅವನು ಅಯೋಗ್ಯವಾದ ಈರ್ಷ್ಯೆಗೆ ನಿರ್ದೇಶಿಸುತ್ತಿದ್ದನು. ಇಲ್ಲವಾದರೆ ಅವನು ಅದೇ ಸಭೆಗೆ ಹೀಗನ್ನುತ್ತಿರಲಿಲ್ಲ: “ದಿವ್ಯಭಕ್ತಿಯ ಈರ್ಷ್ಯೆಯಿಂದ (godly jealousy) ನಾನು ನಿಮ್ಮ ಮೇಲೆ ಈರ್ಷ್ಯೆಪಡುತ್ತೇನೆ.” (2 ಕೊರಿಂಥ 11:2, NW) ಅವನ “ದಿವ್ಯಭಕ್ತಿಯ ಈರ್ಷ್ಯೆ”ಯು ಕೆರಳಿಸಲ್ಪಟ್ಟದ್ದು ಸಭೆಯಲ್ಲಿ ಭ್ರಷ್ಟ ಪ್ರಭಾವವಾಗಿದ್ದ ಮನುಷ್ಯರ ಕಾರಣದಿಂದಲೇ. ಇದು ಪೌಲನನ್ನು, ಅಧಿಕ ಪ್ರೀತಿಯುಳ್ಳ ಸಲಹೆಯು ಕೂಡಿದ್ದ ಎರಡನೆಯ ಪ್ರೇರಿತ ಪತ್ರವನ್ನು ಕೊರಿಂಥದ ಕ್ರೈಸ್ತರಿಗೆ ಬರೆಯುವಂತೆ ಪ್ರೇರೇಪಿಸಿತು.—2 ಕೊರಿಂಥ 11:3-5.
ಕ್ರೈಸ್ತರೊಳಗೆ ಈರ್ಷ್ಯೆ
3. ಕೊರಿಂಥದ ಕ್ರೈಸ್ತರ ನಡುವೆ ಈರ್ಷ್ಯೆಯನ್ನು ಒಳಗೊಂಡಿರುವ ಒಂದು ಸಮಸ್ಯೆಯು ವಿಕಸಿಸಿದ್ದು ಹೇಗೆ?
3 ಕೊರಿಂಥದವರಿಗೆ ಬರೆದ ತನ್ನ ಮೊದಲನೆಯ ಪತ್ರದಲ್ಲಿ, ಪೌಲನಿಗೆ, ಈ ಹೊಸ ಕ್ರೈಸ್ತರು ಒಬ್ಬರೊಂದಿಗೊಬ್ಬರು ಹೊಂದಿಕೊಂಡು ಹೋಗುವುದನ್ನು ತಡೆಯುತ್ತಿದ್ದ ಒಂದು ಸಮಸ್ಯೆಯನ್ನು ನಿರ್ವಹಿಸಲಿಕ್ಕಿತ್ತು. ಅವರು ನಿರ್ದಿಷ್ಟ ಮನುಷ್ಯರನ್ನು ಮೇಲ್ಪಡಿಸುತ್ತಾ, ‘ಒಬ್ಬನನ್ನು ವಿರೋಧಿಸಿ ಮತ್ತೊಬ್ಬನ ಪಕ್ಷವನ್ನು ಹಿಡಿದು ಉಬ್ಬಿ’ ಕೊಂಡಿದ್ದರು. ಇದು ಸಭೆಯಲ್ಲಿ ಪಕ್ಷಬೇಧಗಳನ್ನು ಮಾಡಿ ವಿವಿಧ ವ್ಯಕ್ತಿಗಳು, “ನಾನು ಪೌಲನವನು,” “ನಾನು ಅಪೊಲ್ಲೋಸನವನು,” “ನಾನು ಕೇಫನವನು,” ಎಂದು ಹೇಳುವಂತೆ ನಡೆಸಿತು. (1 ಕೊರಿಂಥ 1:12; 4:6) ಪವಿತ್ರಾತ್ಮದ ಮಾರ್ಗದರ್ಶನೆಯ ಕೆಳಗೆ, ಅಪೊಸ್ತಲ ಪೌಲನು ಸಮಸ್ಯೆಯ ಬುಡಕ್ಕೆ ತಲಪಲು ಶಕ್ತನಾಗಿದ್ದನು. ಕೊರಿಂಥದವರು “ಆತ್ಮಿಕ ಭಾವದ ಮನುಷ್ಯ” (NW) ರಂತಲ್ಲ, ಶರೀರ ಭಾವದ ಜನರಂತೆ ವರ್ತಿಸುತ್ತಿದ್ದರು. ಹೀಗೆ, ಪೌಲನು ಬರೆದದ್ದು: “ನೀವು ಇನ್ನೂ ಶರೀರಾಧೀನಸ್ವಭಾವವುಳ್ಳವರಾಗಿದ್ದೀರಿ. ನಿಮ್ಮೊಳಗೆ ಈರ್ಷ್ಯೆ ಮತ್ತು ಜಗಳಗಳು ಇರುವಲ್ಲಿ ನೀವು ಶರೀರಾಧೀನಸ್ವಭಾವವುಳ್ಳವರಾಗಿದ್ದು ಕೇವಲ ನರಪ್ರಾಣಿಗಳಂತೆ ನಡೆಯುತ್ತೀರಲ್ಲವೆ?”—1 ಕೊರಿಂಥ 3:1-3, NW.
4. ಒಬ್ಬರು ಇನ್ನೊಬ್ಬರ ಕುರಿತಾಗಿ ಯೋಗ್ಯ ನೋಟಕ್ಕೆ ಬರುವಂತೆ ತನ್ನ ಸಹೋದರರಿಗೆ ಸಹಾಯ ಮಾಡಲು ಪೌಲನು ಯಾವ ದೃಷ್ಟಾಂತವನ್ನು ಉಪಯೋಗಿಸಿದನು, ಮತ್ತು ಇದರಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?
4 ಸಭೆಯಲ್ಲಿರುವ ವಿವಿಧ ವ್ಯಕ್ತಿಗಳ ಕೌಶಲಗಳು ಮತ್ತು ಸಾಮರ್ಥ್ಯಗಳ ಸರಿಯಾದ ನೋಟವನ್ನು ಗಣ್ಯಮಾಡುವಂತೆ ಕೊರಿಂಥದವರಿಗೆ ಪೌಲನು ಸಹಾಯ ಮಾಡಿದನು. ಅವನು ಕೇಳಿದ್ದು: “ನಿನಗೂ ಇತರರಿಗೂ ತಾರತಮ್ಯ ಮಾಡಿದವರು ಯಾರು? ದೇವರಿಂದ ಹೊಂದದೆ ಇರುವಂಥದು ನಿನ್ನಲ್ಲಿ ಒಂದಾದರೂ ಉಂಟೋ? ಹೊಂದಿದ ಮೇಲೆ ಹೊಂದದವನಂತೆ ನೀನು ಯಾಕೆ ಹಿಗ್ಗಿಕೊಳ್ಳುತ್ತೀ?” (1 ಕೊರಿಂಥ 4:7) 1 ಕೊರಿಂಥ 12 ನೆಯ ಅಧ್ಯಾಯದಲ್ಲಿ ಪೌಲನು ವಿವರಿಸಿದ್ದೇನಂದರೆ, ಸಭೆಯ ಭಾಗವಾಗಿದ್ದವರು, ಮಾನವ ದೇಹದ ಕೈ, ಕಣ್ಣು, ಮತ್ತು ಕಿವಿಯಂತಹ ವಿವಿಧ ಅಂಗಗಳಂತಿದ್ದರು. ದೇವರು ದೇಹದ ಅಂಗಗಳನ್ನು ಅವು ಒಂದನ್ನೊಂದು ಲಕ್ಷಿಸುವಂತಹ ರೀತಿಯಲ್ಲಿ ಮಾಡಿದ್ದಾನೆಂದು ಪೌಲನು ಸ್ಪಷ್ಟಪಡಿಸಿದನು. ಪೌಲನು ಇದನ್ನೂ ಬರೆದನು: “ಒಂದು ಅಂಗಕ್ಕೆ ಮರ್ಯಾದೆ ಬಂದರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.” (1 ಕೊರಿಂಥ 12:26) ಇಂದು ದೇವರ ಸೇವಕರೆಲ್ಲರು ಒಬ್ಬರೊಂದಿಗೊಬ್ಬರ ತಮ್ಮ ಸಂಬಂಧದಲ್ಲಿ ಈ ಮೂಲಸೂತ್ರವನ್ನು ಅನ್ವಯಿಸಿಕೊಳ್ಳಬೇಕು. ದೇವರ ಸೇವೆಯಲ್ಲಿ ಇನೊಬ್ಬ ವ್ಯಕ್ತಿಯ ನೇಮಕ ಅಥವಾ ಸಾಧನೆಗಳ ಕಾರಣ ಅವನ ಮೇಲೆ ಈರ್ಷ್ಯೆಪಡುವ ಬದಲಿಗೆ, ಆ ವ್ಯಕ್ತಿಯೊಂದಿಗೆ ನಾವು ಸಂತೋಷಪಡಬೇಕು.
5. ಯಾಕೋಬ 4:5 ರಲ್ಲಿ ಏನನ್ನು ಪ್ರಕಟಿಸಲಾಗಿದೆ, ಮತ್ತು ಈ ಮಾತುಗಳ ಸತ್ಯತೆಯನ್ನು ಶಾಸ್ತ್ರಗಳು ಹೇಗೆ ಎತ್ತಿಹೇಳುತ್ತವೆ?
5 ಇದನ್ನು ಹೇಳುವುದು ಸುಲಭ, ಮಾಡುವುದು ಕಷ್ಟವೆಂಬುದು ಒಪ್ಪತಕ್ಕದ್ದೇ. “ಅಸೂಯೆಪಡುವ ಪ್ರವೃತಿಯು,” ಪಾಪಿಯಾದ ಪ್ರತಿಯೊಬ್ಬ ಮನುಷ್ಯನಲ್ಲಿ ನೆಲೆಸಿರುತ್ತದೆಂದು ಬೈಬಲ್ ಬರಹಗಾರನಾದ ಯಾಕೋಬನು ನಮಗೆ ಮರುಜ್ಞಾಪನ ಕೊಡುತ್ತಾನೆ. (ಯಾಕೋಬ 4:5, NW) ಕಾಯಿನನು ಅಯೋಗ್ಯವಾದ ಈರ್ಷ್ಯೆಗೆ ಎಡೆಕೊಟ್ಟ ಕಾರಣ ಮೊದಲನೆಯ ಮಾನುಷ ಮರಣವು ಸಂಭವಿಸಿತು. ಫಿಲಿಷ್ಟಿಯರು ಇಸಾಕನನ್ನು ಹಿಂಸಿಸಿದ್ದು ಅವನ ಸಮೃದ್ಧಿಯ ಏಳಿಗೆಯನ್ನು ಕಂಡು ಅಸೂಯೆಪಟ್ಟದ್ದರಿಂದಲೇ. ಮಕ್ಕಳನ್ನು ಹಡೆಯುವುದರಲ್ಲಿ ತನ್ನ ಸಹೋದರಿಯ ಫಲಪ್ರಾಪ್ತಿಯನ್ನು ಕಂಡು ರಾಹೇಲಳು ಈರ್ಷ್ಯೆಪಟ್ಟಳು. ತಮ್ಮ ಕಿರಿಯ ತಮ್ಮನಾದ ಯೋಸೇಫನೆಡೆಗೆ ತೋರಿಸಲ್ಪಟ್ಟ ಅನುಗ್ರಹವು ಯಾಕೋಬನ ಮಕ್ಕಳನ್ನು ಈರ್ಷ್ಯೆಪಡಿಸಿತು. ಮಿರ್ಯಾಮಳು ತನ್ನ ಇಸ್ರಾಯೇಲ್ಯೇತರ ಅತಿಗ್ತೆಯ ಮೇಲೆ ಹೊಟ್ಟೆಕಿಚ್ಚುಪಟ್ಟಳೆಂಬುದು ಸುವ್ಯಕ್ತ. ಕೋರಹ, ದಾತಾನ್ ಮತ್ತು ಅಬೀರಾಮರು ಈರ್ಷ್ಯೆಯಿಂದ ಮೋಶೆ ಮತ್ತು ಆರೋನರ ವಿರುದ್ಧ ಒಂದು ಒಳಸಂಚನ್ನು ಹೂಡಿದರು. ಅರಸ ಸೌಲನು ದಾವೀದನ ಯುದ್ಧ ವಿಜಯಗಳಿಂದಾಗಿ ಈರ್ಷ್ಯೆಪಟ್ಟನು. ಯೇಸುವಿನ ಶಿಷ್ಯರನ್ನು, ತಮ್ಮಲ್ಲಿ ಯಾರು ದೊಡ್ಡವರೆಂಬುದರ ಕುರಿತು ಪದೇ ಪದೇ ವಾಗ್ವಾದ ಮಾಡುವಂತೆ ನಡೆಸಲು ಈರ್ಷ್ಯೆಯೇ ಒಂದು ಕಾರಣವಾಗಿತ್ತೆಂಬುದು ನಿಸ್ಸಂಶಯ. ನಿಜ ಸಂಗತಿಯೇನಂದರೆ, ಅಪರಿಪೂರ್ಣನಾದ ಯಾವನೇ ಮಾನವನು ಪಾಪಪೂರ್ಣವಾದ “ಅಸೂಯೆಪಡುವ ಪ್ರವೃತ್ತಿ” ಯಿಂದ ಪೂರ್ಣವಾಗಿ ಮುಕ್ತನಲ್ಲ.—ಆದಿಕಾಂಡ 4:4-8; 26:14; 30:1; 37:11; ಅರಣ್ಯಕಾಂಡ 12:1, 2; 16:1-3; ಕೀರ್ತನೆ 106:16; 1 ಸಮುವೇಲ 18:7-9; ಮತ್ತಾಯ 20:21, 24; ಮಾರ್ಕ 9:33, 34; ಲೂಕ 22:24.
ಸಭೆಯಲ್ಲಿ
6. ಅಸೂಯೆಯ ಪ್ರವೃತ್ತಿಯನ್ನು ಹಿರಿಯರು ಹೇಗೆ ನಿಯಂತ್ರಿಸಬಲ್ಲರು?
6 ಕ್ರೈಸ್ತರೆಲ್ಲರು ಅಸೂಯೆ ಮತ್ತು ಅಯೋಗ್ಯ ಈರ್ಷ್ಯೆಯ ವಿರುದ್ಧ ಎಚ್ಚರವುಳ್ಳವರಾಗುವ ಅಗತ್ಯವಿದೆ. ಇದರಲ್ಲಿ ದೇವಜನರ ಸಭೆಗಳನ್ನು ಪರಿಪಾಲಿಸಲಿಕ್ಕಾಗಿ ನೇಮಿತರಾದ ಹಿರಿಯರ ಮಂಡಲಿಗಳೂ ಸೇರಿರುತ್ತವೆ. ಹಿರಿಯನೊಬ್ಬನಲ್ಲಿ ಸೌಮ್ಯ ಭಾವವು ಇರುವುದಾದರೆ, ಅವನು ಹೆಬ್ಬಯಕೆಯಿಂದ ಇತರರಿಗಿಂತ ಅತಿಶಯಿಸಿ ಬೆಳಗಲು ಪ್ರಯತ್ನಿಸನು. ಇನ್ನೊಂದು ಕಡೆ, ನಿರ್ದಿಷ್ಟ ಹಿರಿಯನಿಗೆ ಸಂಘಟನೆಗಾರನಾಗಿ ಇಲ್ಲವೇ ಸಾರ್ವಜನಿಕ ಭಾಷಣಕರ್ತನೋಪಾದಿ ಮಹತ್ತಾದ ಸಾಮರ್ಥ್ಯಗಳಿದ್ದಲ್ಲಿ, ಸಭೆಗೆ ಅದು ಒಂದು ಆಶೀರ್ವಾದವೆಂದು ವೀಕ್ಷಿಸುತ್ತಾ, ಇತರರು ಅದರಲ್ಲಿ ಸಂತೋಷಪಡುವರು. (ರೋಮಾಪುರ 12:15, 16) ಒಬ್ಬ ಸಹೋದರನು ತನ್ನ ಜೀವನದಲ್ಲಿ ದೇವರಾತ್ಮದ ಫಲಗಳನ್ನು ಫಲಿಸುವ ಪುರಾವೆಯನ್ನು ಕೊಡುತ್ತಾ, ಒಳ್ಳೇ ಪ್ರಗತಿಯನ್ನು ಮಾಡುತ್ತಿರಬಹುದು. ಹಿರಿಯರು ಅವನ ಯೋಗ್ಯತೆಗಳನ್ನು ಪರಿಗಣಿಸುವಾಗ, ಅವನನ್ನು ಶುಶ್ರೂಷಾ ಸೇವಕನಾಗಿ ಅಥವಾ ಹಿರಿಯನಾಗಿ ಶಿಫಾರಸ್ಸು ಮಾಡದೆ ಇರುವುದನ್ನು ಸಮರ್ಥಿಸಿಕೊಳ್ಳಲು, ಅವನ ಚಿಕ್ಕಪುಟ್ಟ ತಪ್ಪನ್ನು ದೊಡ್ಡದು ಮಾಡದಂತೆ ಜಾಗ್ರತೆ ವಹಿಸಬೇಕು. ಇದು ಪ್ರೀತಿ ಮತ್ತು ವಿವೇಚನೆಯ ಒಂದು ನ್ಯೂನತೆಯನ್ನು ಹೊರಗೆಡಹುವುದು.
7. ಒಬ್ಬ ಕ್ರೈಸ್ತನಿಗೆ ಯಾವುದೊ ದೇವಪ್ರಭುತ್ವ ನೇಮಕವು ದೊರೆಯುವಾಗ, ಯಾವ ಸಮಸ್ಯೆಯು ವಿಕಸಿಸಬಹುದು?
7 ಯಾರಾದರೊಬ್ಬನು ಒಂದು ದೇವಪ್ರಭುತ್ವ ನೇಮಕ ಇಲ್ಲವೇ ಒಂದು ಆತ್ಮಿಕ ಆಶೀರ್ವಾದವನ್ನು ಪಡೆದಲ್ಲಿ, ಸಭೆಯಲ್ಲಿರುವ ಇತರರು ಅಸೂಯೆಪಡುವ ವಿರುದ್ಧ ತಮ್ಮನ್ನು ಕಾದುಕೊಳ್ಳುವ ಅಗತ್ಯವಿದೆ. ದೃಷ್ಟಾಂತಕ್ಕೆ, ಕ್ರೈಸ್ತ ಕೂಟಗಳಲ್ಲಿ ಪ್ರತ್ಯಕ್ಷಾಭಿನಯಗಳನ್ನು ಮಾಡಲು ಒಬ್ಬ ನುರಿತ ಸಹೋದರಿಯು ಇನ್ನೊಬ್ಬಳಿಗಿಂತ ಹೆಚ್ಚು ಬಾರಿ ಬಳಸಲ್ಪಟ್ಟಾಳು. ಇದು ಕೆಲವು ಸಹೋದರಿಯರಲ್ಲಿ ಈರ್ಷ್ಯೆಯನ್ನು ಹುಟ್ಟಿಸಬಹುದು. ತದ್ರೀತಿಯ ಒಂದು ಸಮಸ್ಯೆಯು ಫಿಲಿಪ್ಪಿ ಸಭೆಯ ಯುವೊದ್ಯ ಮತ್ತು ಸಂತುಕೆಯ ನಡುವೆ ಅಸ್ತಿತ್ವದಲ್ಲಿದ್ದಿರಬಹುದು. ಇಂದಿನ ದಿನದ ಅಂತಹ ಸ್ತ್ರೀಯರಿಗೆ, ನಮ್ರರಾಗಿರಲು ಮತ್ತು “ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿ” ರಲು ಹಿರಿಯರಿಂದ ದಯಾಪರ ಉತ್ತೇಜನದ ಅಗತ್ಯವಿರಬಹುದು.—ಫಿಲಿಪ್ಪಿ 2:2, 3; 4:2, 3.
8. ಈರ್ಷ್ಯೆಯು ಯಾವ ಪಾಪಪೂರ್ಣ ಕೃತ್ಯಗಳಿಗೆ ನಡಿಸಬಲ್ಲದು?
8 ಸಭೆಯಲ್ಲಿ ಈಗ ಸುಯೋಗಗಳಿಂದ ಆಶೀರ್ವದಿಸಲ್ಪಟ್ಟಿರುವ ಒಬ್ಬನ ಪೂರ್ವದ ನ್ಯೂನತೆಯ ಕುರಿತು ಒಬ್ಬ ಕ್ರೈಸ್ತನಿಗೆ ತಿಳಿದಿರಬಹುದು. (ಯಾಕೋಬ 3:2) ಈರ್ಷ್ಯೆಯಿಂದ, ಅದರ ಕುರಿತು ಇತರರಿಗೆ ಹೇಳುತ್ತಾ, ಸಭೆಯಲ್ಲಿ ಅವನ ನೇಮಕದ ಕುರಿತು ಆಕ್ಷೇಪವನ್ನು ಸೂಚಿಸುವ ಶೋಧನೆಯು ಬಂದೀತು. ಇದು, “ಬಹು ಪಾಪಗಳನ್ನು ಮುಚ್ಚು”ವ ಪ್ರೀತಿಗೆ ವಿರೋಧವಾಗಿರುವುದು. (1 ಪೇತ್ರ 4:8) ಈರ್ಷ್ಯೆಯ ಮಾತು ಒಂದು ಸಭೆಯ ಶಾಂತಿಯನ್ನು ಭಂಗಗೊಳಿಸಬಲ್ಲದು. “ಆದರೆ ತೀಕ್ಷ್ಣವಾದ ಮತ್ಸರವೂ [“ಈರ್ಷ್ಯೆ,” NW] ಪಕ್ಷಭೇದವೂ ನಿಮ್ಮ ಹೃದಯದೊಳಗೆ ಇರುವಲ್ಲಿ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ. ಅದು ಮೇಲಣಿಂದ ಬಂದ ಜ್ಞಾನವಲ್ಲ; ಅದು ಭೂಸಂಬಂಧವಾದದ್ದು, ಪ್ರಾಕೃತಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು,” ಎಂದು ಶಿಷ್ಯನಾದ ಯಾಕೋಬನು ಎಚ್ಚರಿಸಿದನು.—ಯಾಕೋಬ 3:14, 15.
ನಿಮ್ಮ ಕುಟುಂಬದಲ್ಲಿ
9. ವಿವಾಹ ಸಂಗಾತಿಗಳು ಈರ್ಷ್ಯೆಯ ಭಾವನೆಗಳನ್ನು ಹೇಗೆ ನಿಯಂತ್ರಿಸಬಲ್ಲರು?
9 ಅಯೋಗ್ಯವಾದ ಈರ್ಷ್ಯೆಯಿಂದಾಗಿ ಅನೇಕ ಮದುವೆಗಳು ಮುರಿದುಬೀಳುತ್ತವೆ. ಒಬ್ಬನು ವಿವಾಹದ ಸಂಗಾತಿಯಲ್ಲಿ ಭರವಸೆಯ ಕೊರತೆ ತೋರಿಸುವುದು ಪ್ರೀತಿಯುಳ್ಳದ್ದಲ್ಲ. (1 ಕೊರಿಂಥ 13:7) ಇನ್ನೊಂದು ಕಡೆ, ಒಬ್ಬ ವಿವಾಹ ಸಂಗಾತಿಯು ಇನ್ನೊಬ್ಬನಲ್ಲಿರುವ ಈರ್ಷ್ಯೆಯ ಭಾವನೆಗಳನ್ನು ಗ್ರಹಿಸಲಾರದೆ ಹೋಗಬಹುದು. ದೃಷ್ಟಾಂತಕ್ಕೆ, ತನ್ನ ಗಂಡನು ವಿರುದ್ಧಲಿಂಗದ ಬೇರೊಬ್ಬಳ ಕಡೆಗೆ ಗಮನಕೊಡುವ ಕಾರಣ ಹೆಂಡತಿಯು ಈರ್ಷ್ಯೆಪಟ್ಟಾಳು. ಇಲ್ಲವೇ, ಕೊರತೆಯುಳ್ಳ ಸಂಬಂಧಿಕರೊಬ್ಬರ ಆರೈಕೆಗಾಗಿ ಹೆಂಡತಿಯು ವಿನಿಯೋಗಿಸುವ ಸಮಯದ ಮೊತ್ತದ ವಿಷಯದಲ್ಲಿ ಗಂಡನೊಬ್ಬನು ಈರ್ಷ್ಯೆಗೊಳ್ಳಬಹುದು. ಅಂತಹ ಭಾವನೆಗಳಿಂದಾಗಿ ಪೇಚಾಟಪಟವ್ಟರಾಗಿ, ವಿವಾಹದ ಸಂಗಾತಿಗಳು ಮಾತುಕತೆ ಬಿಟ್ಟು, ಸಮಸ್ಯೆಯನ್ನು ಜಟಿಲಗೊಳಿಸುವ ವಿಧಗಳಲ್ಲಿ ತಮ್ಮ ಹತಾಶೆಯನ್ನು ತೋರಿಸಬಹುದು. ಬದಲಾಗಿ, ಈರ್ಷ್ಯೆಯುಳ್ಳ ವಿವಾಹದ ಸಂಗಾತಿಗೆ ಸಂಭಾಷಿಸುವ ಅಗತ್ಯವಿದೆ ಮತ್ತು ಅವನ ಅಥವಾ ಅವಳ ಭಾವನೆಗಳ ಕುರಿತು ಪ್ರಾಮಾಣಿಕರಾಗಿರುವ ಅಗತ್ಯವಿದೆ. ಪ್ರತಿಯಾಗಿ, ಇನ್ನೊಬ್ಬ ಸಂಗಾತಿಗೆ ತಿಳಿವಳಿಕೆಯನ್ನು ತೋರಿಸುವ ಅಗತ್ಯವಿದೆ ಮತ್ತು ಅವನಿಗೆ ಅಥವಾ ಅವಳಿಗೆ ತನ್ನ ಪ್ರೀತಿಯ ಆಶ್ವಾಸನೆಯನ್ನು ಕೊಡುವ ಅಗತ್ಯವಿದೆ. (ಎಫೆಸ 5:28, 29) ಈರ್ಷ್ಯೆಯನ್ನೆಬ್ಬಿಸುವ ಸನ್ನಿವೇಶಗಳನ್ನು ವರ್ಜಿಸುವ ಮೂಲಕ ಅವರಿಬ್ಬರೂ ಆ ಭಾವನೆಗಳನ್ನು ಶಮನಗೊಳಿಸುವ ಅಗತ್ಯವಿದ್ದೀತು. ಕೆಲವು ಸಾರಿ ಕ್ರೈಸ್ತ ಮೇಲ್ವಿಚಾರಕನೊಬ್ಬನಿಗೆ, ತಾನು ದೇವರ ಮಂದೆಯ ಕುರುಬನೋಪಾದಿ ತನ್ನ ಜವಾಬ್ದಾರಿಯನ್ನು ನೆರವೇರಿಸಲು ವಿರುದ್ಧಲಿಂಗದ ಸದಸ್ಯರಿಗೆ ಸೀಮಿತವಾದ, ಯೋಗ್ಯ ಗಮನವನ್ನು ಕೊಡುತ್ತಿದ್ದೇನೆಂಬುದನ್ನು ತನ್ನ ಪತ್ನಿಯು ತಿಳಿದುಕೊಳ್ಳುವಂತೆ ಸಹಾಯ ಮಾಡುವ ಅಗತ್ಯವಿರಬಹುದು. (ಯೆಶಾಯ 32:2) ನಿಶ್ಚಯವಾಗಿಯೂ ಹಿರಿಯನೊಬ್ಬನು ಈರ್ಷ್ಯೆಗೆ ಯಾವುದೇ ಸಮಂಜಸವಾದ ಕಾರಣವನ್ನು ಎಂದೂ ಕೊಡದಂತೆ ಜಾಗ್ರತೆ ವಹಿಸಬೇಕು. ತನ್ನ ಸ್ವಂತ ವೈವಾಹಿಕ ಸಂಬಂಧವನ್ನು ಬಲಪಡಿಸುವುದಕ್ಕೆ ಸಮಯ ವಿನಿಯೋಗಿಸುತ್ತೇನೆಂದು ನಿಶ್ಚಯಪಡಿಸುತ್ತಾ, ಅವನಿಂದ ಸಮತೆಯನ್ನು ಇದು ಕೇಳಿಕೊಳ್ಳುತ್ತದೆ.—1 ತಿಮೊಥೆಯ 3:5; 5:1, 2.
10. ಈರ್ಷ್ಯೆಯ ಭಾವನೆಗಳನ್ನು ನಿಭಾಯಿಸಲು ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ನೆರವಾಗಬಲ್ಲರು?
10 ಅಯೋಗ್ಯವಾದ ಈರ್ಷ್ಯೆಯ ಕಲ್ಪನೆಯನ್ನು ಗ್ರಹಿಸಿಕೊಳ್ಳಲು ಹೆತ್ತವರು ತಮ್ಮ ಮಕ್ಕಳಿಗೂ ಸಹಾಯ ಮಾಡಬೇಕು. ಆಗಾಗ್ಗೆ ಜಗಳಗಳಾಗಿ ಪರಿಣಮಿಸುವ ಕಚ್ಚಾಟಗಳಲ್ಲಿ ಮಕ್ಕಳು ಒಳಗೂಡುತ್ತಾರೆ. ಅನೇಕಸಾರಿ ಅದರ ಮೂಲಕಾರಣವು ಈರ್ಷ್ಯೆಯಾಗಿರುತ್ತದೆ. ಪ್ರತಿಯೊಂದು ಮಗುವಿನ ಅಗತ್ಯಗಳು ಅಸದೃಶವಾಗಿರುವುದರಿಂದ, ಮಕ್ಕಳನ್ನು ಏಕರೂಪವಾಗಿ ಉಪಚರಿಸಲು ಸಾಧ್ಯವಿಲ್ಲ. ಅದಲ್ಲದೆ, ತಮ್ಮಲ್ಲಿ ಪ್ರತಿಯೊಬ್ಬನಲ್ಲಿ ಬೇರೆ ಬೇರೆ ಸಾಮರ್ಥ್ಯಗಳು ಮತ್ತು ಬಲಹೀನತೆಗಳು ಇವೆಯೆಂದು ತಿಳಿದುಕೊಳ್ಳುವ ಅಗತ್ಯ ಮಕ್ಕಳಿಗಿದೆ. ಒಂದು ಮಗುವನ್ನು ಯಾವಾಗಲೂ ಬೇರೊಂದು ಮಗುವಿನಷ್ಟೇ ಚೆನ್ನಾಗಿ ಮಾಡುವಂತೆ ಪ್ರೋತ್ಸಾಹಿಸಿದಲ್ಲಿ, ಅದು ಒಬ್ಬನಲ್ಲಿ ಅಸೂಯೆಯನ್ನೂ ಇನ್ನೊಬ್ಬನಲ್ಲಿ ಜಂಬವನ್ನೂ ಬೆಳೆಸಬಹುದು. ಆದುದರಿಂದ, ಹೆತ್ತವರು ತಮ್ಮ ಮಕ್ಕಳ ಪ್ರಗತಿಯನ್ನು ಒಬ್ಬರೊಂದಿಗೊಬ್ಬರು ಪ್ರತಿಸ್ಪರ್ಧಿಸುವ ಮೂಲಕವಲ್ಲ, ಬದಲಾಗಿ ದೇವರ ವಾಕ್ಯದ ಮಾದರಿಗಳನ್ನು ಪರಿಗಣಿಸುವ ಮೂಲಕ ಅಳೆಯಲು ತರಬೇತು ಮಾಡಬೇಕು. ಬೈಬಲ್ ಹೇಳುವುದು: “ಅಹಂಕಾರಿಗಳೂ ಒಬ್ಬರನ್ನೊಬ್ಬರು ಕೆಣಕುವವರೂ [“ಪ್ರತಿಸ್ಪರ್ಧೆಯನ್ನೆಬ್ಬಿಸುವವರೂ,” NW] ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೆ ಇರೋಣ.” ಬದಲಾಗಿ, “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ.” (ಗಲಾತ್ಯ 5:26; 6:4) ಹೆಚ್ಚು ಪ್ರಾಮುಖ್ಯವಾಗಿ, ಕ್ರೈಸ್ತ ಹೆತ್ತವರು ದೇವರ ವಾಕ್ಯದಲ್ಲಿ ಅಡಕವಾಗಿರುವ ಒಳ್ಳೆಯ ಮತ್ತು ಕೆಟ್ಟ ಮಾದರಿಗಳನ್ನು ಎತ್ತಿಹೇಳುತ್ತಾ, ಕ್ರಮದ ಬೈಬಲಧ್ಯಯನದ ಮೂಲಕ ತಮ್ಮ ಮಕ್ಕಳಿಗೆ ಸಹಾಯ ಮಾಡುವ ಅಗತ್ಯವಿದೆ.—2 ತಿಮೊಥೆಯ 3:15.
ಈರ್ಷ್ಯೆಯನ್ನು ಹತೋಟಿಯಲ್ಲಿಡುವ ಮಾದರಿಗಳು
11. ಈರ್ಷ್ಯೆಯ ನಿರ್ವಹಣೆಯಲ್ಲಿ ಮೋಶೆ ಹೇಗೆ ಒಂದು ಉತ್ತಮ ಮಾದರಿಯಾಗಿದ್ದನು?
11 ಅಧಿಕಾರಕ್ಕಾಗಿ ಹಸಿದ ಈ ಲೋಕದ ಮುಖಂಡರಿಗೆ ಅಸದೃಶವಾಗಿ, “ಮೋಶೆ ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕ” ನಾಗಿದ್ದನು. (ಅರಣ್ಯಕಾಂಡ 12:3) ಇಸ್ರಾಯೇಲ್ಯರ ಮೇಲಿನ ನಾಯಕತ್ವವನ್ನು ಒಬ್ಬಂಟಿಗನಾಗಿ ಹೊರಲು ಮೋಶೆಗೆ ಭಾರವಾದಾಗ, ಯೆಹೋವನು ಬೇರೆ 70 ಮಂದಿ ಇಸ್ರಾಯೇಲ್ಯರ ಮೇಲೆ ತನ್ನ ಆತ್ಮವು ಕಾರ್ಯನಡಿಸುವಂತೆ ಮಾಡಿ, ಅವರು ಮೋಶೆಗೆ ನೆರವಾಗುವಂತೆ ಶಕಿಕ್ತೊಟ್ಟನು. ಈ ಪುರುಷರಲ್ಲಿ ಇಬ್ಬರು ಪ್ರವಾದಿಗಳಂತೆ ವರ್ತಿಸಲು ತೊಡಗಿದಾಗ, ಇದು ಮೋಶೆಯ ನಾಯಕತ್ವವನ್ನು ಅಯೋಗ್ಯವಾಗಿ ಕಡಿಮೆಗೊಳಿಸಿತೆಂದು ಯೆಹೋಶುವನು ಭಾವಿಸಿದನು. ಆ ಪುರುಷರನ್ನು ನಿರ್ಬಂಧಿಸಲು ಯೆಹೋಶುವನು ಬಯಸಿದನು, ಆದರೆ ಮೋಶೆ ದೀನತೆಯಿಂದ ವಿವೇಚಿಸಿದ್ದು: “ನೀನು ನನಗಾಗಿ ಈರ್ಷ್ಯೆಪಡುತ್ತಿಯೋ? ಇಲ್ಲ, ಯೆಹೋವನ ಜನರೆಲ್ಲರು ಪ್ರವಾದಿಗಳಾಗಿದ್ದರೆ ಒಳ್ಳೇದಿತ್ತೆಂದು ನಾನು ಹಾರೈಸುತ್ತೇನೆ, ಯಾಕೆಂದರೆ ಯೆಹೋವನು ತನ್ನಾತ್ಮವನ್ನು ಅವರ ಮೇಲೆ ಹಾಕುವನು!” (ಅರಣ್ಯಕಾಂಡ 11:29, NW) ಹೌದು, ಇತರರು ಸೇವಾ ಸುಯೋಗಗಳನ್ನು ಪಡೆದಾಗ ಮೋಶೆಯು ಸಂತೋಷಪಟ್ಟನು. ಈರ್ಷ್ಯೆಯಿಂದ ಮಹಿಮೆಯು ತನಗೇ ಸಿಗಬೇಕೆಂದು ಅವನು ಬಯಸಲಿಲ್ಲ.
12. ಈರ್ಷ್ಯೆಯ ಭಾವನೆಗಳನ್ನು ವರ್ಜಿಸಲು ಯೋನಾತಾನನನ್ನು ಯಾವುದು ಶಕ್ತಗೊಳಿಸಿತು?
12 ಈರ್ಷ್ಯೆಯ ಕುರಿತ ಸಾಧ್ಯವಿರುವ ಅಯೋಗ್ಯ ಭಾವನೆಗಳ ವಿರುದ್ಧ ಪ್ರೀತಿಯು ಹೇಗೆ ಜಯಶಾಲಿಯಾಗುತ್ತದೆಂಬ ಒಂದು ಉತ್ತಮ ಮಾದರಿಯು, ಇಸ್ರಾಯೇಲ್ಯ ಅರಸನಾದ ಸೌಲನ ಮಗ ಯೋನಾತಾನನಿಂದ ಒದಗಿಸಲ್ಪಟ್ಟಿತು. ತನ್ನ ತಂದೆಯ ಸಿಂಹಾಸನಕ್ಕೆ ಬಾಧ್ಯಸ್ಥನಾಗಲು ಯೋನಾತಾನನು ಸಾಲಿನಲ್ಲಿ ಮುಂದಿನವನಾಗಿದ್ದನು, ಆದರೆ ಯೆಹೋವನು ಇಶಯನ ಮಗನಾದ ದಾವೀದನನ್ನು ಮುಂದಿನ ಅರಸನಾಗಿ ಆರಿಸಿಕೊಂಡಿದ್ದನು. ಯೋನಾತಾನನ ಸನ್ನಿವೇಶದಲ್ಲಿ ಅನೇಕರು ದಾವೀದನನ್ನು ತಮ್ಮ ಪ್ರತಿಸ್ಪರ್ಧಿಯಾಗಿ ವೀಕ್ಷಿಸುತ್ತಾ, ಅವನ ಮೇಲೆ ಈರ್ಷ್ಯೆಪಡುತ್ತಿದ್ದರು. ಹಾಗಿದ್ದರೂ, ಯೋನಾತಾನನಲ್ಲಿ ದಾವೀದನೆಡೆಗಿದ್ದ ಪ್ರೀತಿಯು, ಅಂತಹ ಭಾವನೆಗಳು ಅವನ ಮೇಲೆ ಎಂದಿಗೂ ಅಧಿಕಾರ ನಡೆಸದಂತೆ ತಡೆಯಿತು. ಯೋನಾತಾನನ ಮರಣದ ಸುದ್ದಿ ತಿಳಿದಾಗ, ದಾವೀದನು ಹೀಗೆ ಹೇಳಶಕ್ತನಾದನು: “ಯೋನಾತಾನನೇ, ನನ್ನ ಸಹೋದರನೇ, ನಿನಗೋಸ್ಕರ ನನ್ನಲ್ಲಿ ಬಹು ಸಂಕಟವುಂಟಾಗಿದೆ; ನೀನು ನನಗೆ ಬಹುಮನೋಹರನಾಗಿದ್ದಿ. ನನ್ನ ಮೇಲಿದ್ದ ನಿನ್ನ ಪ್ರೀತಿಯು ಆಶ್ಚರ್ಯಕರವಾದದ್ದೇ ಸರಿ; ಅದು ಸತೀಪ್ರೇಮಕ್ಕಿಂತ ಶ್ರೇಷ್ಠವಾದದ್ದು.”—2 ಸಮುವೇಲ 1:26.
ಅತ್ಯಂತ ಗಮನಾರ್ಹವಾದ ಮಾದರಿಗಳು
13. ಈರ್ಷ್ಯೆಯ ವಿಷಯದಲ್ಲಿ ಯಾರು ಉತ್ತಮ ಮಾದರಿ, ಮತ್ತು ಯಾಕೆ?
13 ಯೋಗ್ಯ ಈರ್ಷ್ಯೆಯ ಮೇಲೆ ಸಹ ಹತೋಟಿಯಿರುವ ಒಬ್ಬಾತನ ಅತಿ ಮಹತ್ತಾದ ಮಾದರಿಯು ಯೆಹೋವ ದೇವರದ್ದು. ಅಂತಹ ಭಾವನೆಗಳನ್ನು ಅವನು ಪರಿಪೂರ್ಣ ಅಂಕೆಯಲಿಡ್ಲುತ್ತಾನೆ. ದೈವಿಕ ಈರ್ಷ್ಯೆಯ ಯಾವುದೇ ಶಕ್ತಿಯುತ ಪ್ರಕಟನೆಯು ದೇವರ ಪ್ರೀತಿ, ನ್ಯಾಯ, ಮತ್ತು ವಿವೇಕಕ್ಕೆ ಯಾವಾಗಲೂ ಹೊಂದಿಕೆಯಲ್ಲಿದೆ.—ಯೆಶಾಯ 42:13, 14.
14. ಸೈತಾನನಿಗೆ ವೈದೃಶ್ಯವಾಗಿ, ಯೇಸು ಯಾವ ಮಾದರಿಯನ್ನು ಇಟ್ಟನು?
14 ಈರ್ಷ್ಯೆಯ ವಿರುದ್ಧವಾಗಿ ಹತೋಟಿಯನ್ನು ತೋರಿಸುವಂತಹ ಎರಡನೆಯ ಪ್ರಧಾನ ಮಾದರಿಯು, ದೇವರ ಪ್ರಿಯ ಕುಮಾರನಾದ ಯೇಸು ಕ್ರಿಸ್ತನದ್ದು. “ಅವನು ದೇವರ ರೂಪದಲ್ಲಿ ಅಸ್ತಿತ್ವದಲ್ಲಿರುತ್ತಿದ್ದರೂ,” ಯೇಸುವು “ಸ್ವಾಧೀನಪಡಿಸಿಕೊಳ್ಳುವುದಕ್ಕೆ, ಅಂದರೆ ತಾನು ದೇವರಿಗೆ ಸಮಾನನಾಗಿರಬೇಕೆಂಬುದಕ್ಕೆ ಯಾವುದೇ ಪರಿಗಣನೆಯನ್ನು ಕೊಡಲಿಲ್ಲ.” (ಫಿಲಿಪ್ಪಿ 2:6, NW) ಪಿಶಾಚನಾದ ಸೈತಾನನಾಗಿ ಪರಿಣಮಿಸಿದ ಹೆಬ್ಬಯಕೆಯ ದೇವದೂತನಿಂದ ತೆಗೆದುಕೊಳ್ಳಲ್ಪಟ್ಟ ಮಾರ್ಗಕ್ಕೆ ಎಂತಹ ತೀವ್ರ ವೈದೃಶ್ಯ! “ಬಾಬೆಲಿನ ರಾಜ” ನಂತೆ, ಸೈತಾನನು ತನ್ನನ್ನು ಯೆಹೋವನ ವಿರುದ್ಧ ಪ್ರತಿಸ್ಪರ್ಧಿಯಾದ ದೇವರಾಗಿ ಇಟ್ಟುಕೊಂಡ ಮೂಲಕ, ಈರ್ಷ್ಯೆಯಿಂದ “ಉನ್ನತೋನ್ನತನಿಗೆ ಸರಿಸಮಾನ” ನಾಗಲು ಅಪೇಕ್ಷಿಸಿದನು. (ಯೆಶಾಯ 14:4, 14; 2 ಕೊರಿಂಥ 4:4) ಯೇಸು, ತನಗೆ “ಸಾಷ್ಟಾಂಗನಮಸ್ಕಾರ ಮಾಡಿ ಒಂದು ಭಕ್ತಿಯ ಕ್ರಿಯೆಯನ್ನು ನಡೆಸು” ವಂತೆಯೂ ಸೈತಾನನು ಪ್ರಯತ್ನಿಸಿದನು. (ಮತ್ತಾಯ 4:9, NW) ಆದರೆ ಯೇಸುವನ್ನು ಯೆಹೋವನ ಪರಮಾಧಿಕಾರಕ್ಕೆ ತನ್ನ ಅಧೀನತೆಯ ನಮ್ರ ಮಾರ್ಗದಿಂದ ತಿರುಗಿಸಲು ಯಾವುದೂ ಶಕವ್ತಾಗಲಿಲ್ಲ. ಸೈತಾನನಿಗೆ ವೈದೃಶ್ಯವಾಗಿ, ಯೇಸು “ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆ [“ಯಾತನಾಕಂಭ,” NW]ಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” ಪಿಶಾಚನ ಬಿಂಕ ಮತ್ತು ಈರ್ಷ್ಯೆಯ ಮಾರ್ಗವನ್ನು ಪೂರ್ತಿಯಾಗಿ ನಿರಾಕರಿಸುತ್ತಾ, ತನ್ನ ತಂದೆಯ ಆಳಿಕೆಯ ನ್ಯಾಯವಾದ ಹಕ್ಕನ್ನು ಯೇಸು ಸಮರ್ಥಿಸಿದನು. ಯೇಸುವಿನ ನಂಬಿಗಸ್ತಿಕೆಗಾಗಿ, “ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಆದದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡಬ್ಡಿದ್ದು ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು.”—ಫಿಲಿಪ್ಪಿ 2:7-11.
ನಿಮ್ಮ ಈರ್ಷ್ಯೆಯನ್ನು ಹತೋಟಿಯಲ್ಲಿಡುವುದು
15. ಈರ್ಷ್ಯೆಯ ಭಾವನೆಗಳನ್ನು ನಿಗ್ರಹಿಸಲು ನಾವು ಜಾಗರೂಕರಾಗಿರಬೇಕು ಏಕೆ?
15 ದೇವರು ಮತ್ತು ಕ್ರಿಸ್ತನಿಗೆ ಅಸದೃಶವಾಗಿ, ಕ್ರೈಸ್ತರು ಅಪರಿಪೂರ್ಣರು. ಪಾಪಿಗಳಾಗಿರುವುದರಿಂದ ಕೆಲವೊಮ್ಮೆ ಅವರು ಪಾಪಪೂರ್ಣ ಈರ್ಷ್ಯೆಯಿಂದ ಪ್ರೇರಿಸಲ್ಪಡಬಹುದು. ಆದುದರಿಂದ, ಒಂದು ಚಿಕ್ಕ ಕುಂದಿಗಾಗಿ ಇಲ್ಲವೇ ಕಲ್ಪಿಸಿಕೊಂಡ ತಪ್ಪಿಗಾಗಿ ಜೊತೆ ವಿಶ್ವಾಸಿಯನ್ನು ಟೀಕಿಸಲು ಈರ್ಷ್ಯೆಯು ನಮ್ಮನ್ನು ಪ್ರೇರಿಸುವಂತೆ ಬಿಡುವ ಬದಲಿಗೆ, ಈ ಪ್ರೇರಿತ ಮಾತುಗಳನ್ನು ಮನನ ಮಾಡುವುದು ನಮಗೆ ಪ್ರಾಮುಖ್ಯವು: “ಧರ್ಮವನ್ನು ಅತಿಯಾಗಿ ಆಚರಿಸದಿರು; ಜ್ಞಾನವನ್ನು ಅಧಿಕವಾಗಿ ಆರ್ಜಿಸಬೇಡ; ನಿನ್ನನ್ನು ನೀನೇ ನಾಶನಕ್ಕೆ ಏಕೆ ಗುರಿಮಾಡಿಕೊಳ್ಳುವಿ?”—ಪ್ರಸಂಗಿ 7:16.
16. ಈ ಪತ್ರಿಕೆಯ ಹಿಂದಿನ ಸಂಚಿಕೆಯಲ್ಲಿ ಈರ್ಷ್ಯೆಯ ಕುರಿತು ಯಾವ ಉತ್ತಮ ಸಲಹೆಯನ್ನು ಕೊಡಲಾಗಿತ್ತು?
16 ಈರ್ಷ್ಯೆಯ ವಿಷಯದಲ್ಲಿ, ಮಾರ್ಚ್ 15, 1911ರ ದ ವಾಚ್ ಟವರ್ ಎಚ್ಚರಿಸಿದ್ದು: “ಕರ್ತನ ಉದ್ದೇಶದಲ್ಲಿ ನಾವು ಅತ್ಯಂತ ಹುರುಪಿನವರೂ, ಅತ್ಯಂತ ಈರ್ಷ್ಯೆಯುಳ್ಳವರೂ ಆಗಿರಬೇಕಾದರೂ, ಇನ್ನೊಬ್ಬ ಕ್ರೈಸ್ತನ ಬಲಹೀನತೆಯು ಒಂದು ಖಾಸಗಿ ವಿಷಯವಲ್ಲವೆಂಬುದರ ಕುರಿತು ಅತಿ ನಿಶ್ಚಿತರಾಗಿರಬೇಕು; ಮತ್ತು ನಾವು ‘ಪರರ ಕೆಲಸದಲ್ಲಿ ಕೈಹಾಕುವವರು’ ಆಗಿದ್ದೇವೊ ಇಲ್ಲವೋ ಎಂಬುದನ್ನು ಪರಿಗಣಿಸಬೇಕು. ಹಾಗಿದ್ದರೂ, ಅದು ಹಿರಿಯರು ವ್ಯವಹರಿಸತಕ್ಕ ಯೋಗ್ಯ ವಿಷಯವಾಗಿರಬಹುದೋ ಅಥವಾ ಹಿರಿಯರ ಬಳಿಗೆ ಹೋಗುವ ಕರ್ತವ್ಯವು ನಮ್ಮದೋ, ಅಲ್ಲವೋ, ಎಂಬುದನ್ನೂ ನಾವು ಪರಿಗಣಿಸತಕ್ಕದ್ದು. ಕರ್ತನ ಉದ್ದೇಶಕ್ಕಾಗಿ ಮತ್ತು ಕರ್ತನ ಕಾರ್ಯಕ್ಕಾಗಿ ನಮಗೆಲ್ಲರಿಗೆ ಯಥೇಷ್ಟವಾದ ಈರ್ಷ್ಯೆ ಇರಬೇಕು, ಆದರೆ ಅದು ಕಹಿ ತೆರನಾದದ್ದಲ್ಲವೆಂಬ ವಿಷಯದಲ್ಲಿ ಅತಿ ಜಾಗ್ರತೆ ವಹಿಸಬೇಕು . . . ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಅದು ಇನ್ನೊಬ್ಬನ ಮೇಲಿನ ಈರ್ಷ್ಯೆಯಲ್ಲ, ಇನ್ನೊಬ್ಬನಿಗಾಗಿ ಈರ್ಷ್ಯೆ, ಅವನ ಹಿತಾಸಕ್ತಿಗಳಿಗಾಗಿ ಮತ್ತು ಸುಕ್ಷೇಮಕ್ಕಾಗಿ ಈರ್ಷ್ಯೆ ಎಂದು ನಾವು ಅತಿ ನಿಶ್ಚಿತರಾಗಿರಬೇಕು.”—1 ಪೇತ್ರ 4:15.
17. ಈರ್ಷ್ಯೆಯ ಪಾಪಪೂರ್ಣ ಕೃತ್ಯಗಳನ್ನು ನಾವು ಹೇಗೆ ವರ್ಜಿಸಬಲ್ಲೆವು?
17 ಕ್ರೈಸ್ತರಾದ ನಾವು ಜಂಬ, ಈರ್ಷ್ಯೆ ಮತ್ತು ಅಸೂಯೆಯನ್ನು ಹೇಗೆ ವರ್ಜಿಸಬಲ್ಲೆವು? ನಮ್ಮ ಜೀವನದಲ್ಲಿ ದೇವರ ಪವಿತ್ರಾತ್ಮವನ್ನು ಸರಾಗವಾಗಿ ಪ್ರವಹಿಸುವಂತೆ ಬಿಡುವುದರಲ್ಲಿ ಪರಿಹಾರವು ನೆಲೆಸಿರುತ್ತದೆ. ದೃಷ್ಟಾಂತಕ್ಕಾಗಿ, ದೇವರಾತ್ಮಕ್ಕಾಗಿ ಪ್ರಾರ್ಥಿಸಿ, ಅದರ ಒಳ್ಳೆಯ ಫಲವನ್ನು ಪ್ರದರ್ಶಿಸಲು ಸಹಾಯಕ್ಕಾಗಿ ನಾವು ಪ್ರಾರ್ಥನೆಮಾಡುವ ಅಗತ್ಯವಿದೆ. (ಲೂಕ 11:13) ಯಾವುವು ಪ್ರಾರ್ಥನೆಯಿಂದ ಪ್ರಾರಂಭಿಸಲ್ಪಡುತ್ತವೋ ಮತ್ತು ದೇವರಾತ್ಮವನ್ನೂ ಆಶೀರ್ವಾದವನ್ನೂ ಹೊಂದಿರುತ್ತವೊ ಆ ಕ್ರೈಸ್ತ ಕೂಟಗಳಿಗೆ ನಾವು ಉಪಸ್ಥಿತರಾಗುವ ಅಗತ್ಯವಿದೆ. ಅದಲ್ಲದೆ, ದೇವರಿಂದ ಪ್ರೇರಿತವಾದ ಬೈಬಲನ್ನು ನಾವು ಅಧ್ಯಯನಿಸುವುದು ಆವಶ್ಯಕ. (2 ತಿಮೊಥೆಯ 3:16) ಮತ್ತು ಯೆಹೋವನ ಪವಿತ್ರಾತ್ಮದ ಶಕಿಯ್ತಿಂದ ನಡಿಸಲ್ಪಡುತ್ತಿರುವ ರಾಜ್ಯ ಸಾರುವ ಕಾರ್ಯದಲ್ಲಿ ನಾವು ಪಾಲಿಗರಾಗುವ ಅಗತ್ಯವಿದೆ. (ಅ. ಕೃತ್ಯಗಳು 1:8) ದೇವರಾತ್ಮದ ಸುಪ್ರಭಾವಕ್ಕೆ ಒಳಗಾಗಿರುವ ಇನ್ನೊಂದು ಮಾರ್ಗವು, ಯಾವುದೊ ಕೆಟ್ಟ ಅನುಭವದಿಂದಾಗಿ ಜಜ್ಜಲ್ಪಟ್ಟಿರುವ ನಮ್ಮ ಜೊತೆ ಕ್ರೈಸ್ತರಿಗೆ ಸಹಾಯ ಮಾಡುವುದೇ. (ಯೆಶಾಯ 57:15; 1 ಯೋಹಾನ 3:15-17) ಈ ಎಲ್ಲ ಕ್ರೈಸ್ತ ಹಂಗುಗಳನ್ನು ಹುರುಪಿನಿಂದ ಪೂರೈಸುವುದು, ಈರ್ಷ್ಯೆಯ ಪಾಪಪೂರ್ಣ ಹವ್ಯಾಸಗಳಿಂದ ನಮ್ಮನ್ನು ಕಾಪಾಡಿಕೊಳ್ಳಲು ನೆರವಾಗುವುದು, ಯಾಕೆಂದರೆ ದೇವರ ವಾಕ್ಯವು ಅನ್ನುವುದು: “ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ.”—ಗಲಾತ್ಯ 5:16.
18. ಈರ್ಷ್ಯೆಯ ಅಯೋಗ್ಯ ಭಾವನೆಗಳ ವಿರುದ್ಧ ನಮಗೆ ಯಾವಾಗಲೂ ಹೋರಾಡಲಿಕ್ಕಿರದೇಕೆ?
18 ದೇವರಾತ್ಮದ ಫಲಗಳಲ್ಲಿ ಪ್ರೀತಿ ಮೊದಲಾಗಿ ನಮೂದಿಸಲ್ಪಟ್ಟಿದೆ. (ಗಲಾತ್ಯ 5:22, 23) ಪ್ರೀತಿಯನ್ನು ಅಭ್ಯಸಿಸುವುದು ನಮ್ಮ ಈಗಿನ ಪಾಪಪೂರ್ಣ ಪ್ರವೃತ್ತಿಗಳನ್ನು ಅಂಕೆಯಲ್ಲಿಡಲು ನಮಗೆ ನೆರವನ್ನೀಯುವುದು. ಆದರೆ ಭವಿಷ್ಯತ್ತಿನ ಕುರಿತೇನು? ಲಕ್ಷಾಂತರ ಯೆಹೋವನ ಸೇವಕರಿಗೆ ಬರಲಿರುವ ಭೂಪರದೈಸದಲ್ಲಿ ಜೀವದ ನಿರೀಕ್ಷೆಯಿದೆ. ಅಲ್ಲಿ ಅವರು ಮಾನವ ಪರಿಪೂರ್ಣತೆಗೆ ಎತ್ತಲ್ಪಡುವುದನ್ನು ಮುನ್ನೋಡಬಲ್ಲರು. ಆ ಹೊಸ ಲೋಕದಲ್ಲಿ ಪ್ರೀತಿಯು ನೆಲೆಸುವುದು ಮತ್ತು ಯಾರೂ ಈರ್ಷ್ಯೆಯ ಅಯೋಗ್ಯ ಭಾವನೆಗಳಿಗೆ ಬಲಿಯಾಗರು, ಏಕೆಂದರೆ “ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವ”ದು.—ರೋಮಾಪುರ 8:21.
ಮನನಕ್ಕಾಗಿ ವಿಷಯಗಳು
▫ ಈರ್ಷ್ಯೆಯನ್ನು ಪ್ರತಿರೋಧಿಸಲು ಸಹಾಯಕ್ಕಾಗಿ ಪೌಲನು ಯಾವ ಉದಾಹರಣೆಯನ್ನು ಬಳಸಿದನು?
▫ ಸಭೆಯ ಶಾಂತಿಯನ್ನು ಈರ್ಷ್ಯೆಯು ಹೇಗೆ ಭಂಗಗೊಳಿಸಬಹುದು?
▫ ಈರ್ಷ್ಯೆಯನ್ನು ನಿಭಾಯಿಸಲಿಕ್ಕೆ ಹೆತ್ತವರು ತಮ್ಮ ಮಕ್ಕಳನ್ನು ಹೇಗೆ ತರಬೇತಿಗೊಳಿಸಬಲ್ಲರು?
▫ ಈರ್ಷ್ಯೆಯ ಪಾಪಪೂರ್ಣ ಕೃತ್ಯಗಳ್ನು ನಾವು ಹೇಗೆ ವರ್ಜಿಸಬಲ್ಲೆವು?
[ಪುಟ 16 ರಲ್ಲಿರುವ ಚಿತ್ರ]
ಈರ್ಷ್ಯೆಯು ಸಭೆಯ ಶಾಂತಿಯನ್ನು ಭಂಗಗೊಳಿಸುವಂತೆ ಬಿಡಬೇಡಿರಿ
[ಪುಟ 17 ರಲ್ಲಿರುವ ಚಿತ್ರ]
ಈರ್ಷ್ಯೆಯ ಭಾವನೆಗಳನ್ನು ನಿಭಾಯಿಸಲು ಹೆತ್ತವರು ತಮ್ಮ ಮಕ್ಕಳನ್ನು ತರಬೇತುಗೊಳಿಸಬಲ್ಲರು