“ಒಬ್ಬರಿಗೋಸ್ಕರ ಒಬ್ಬರು ದೇವರನ್ನು ಪ್ರಾರ್ಥಿಸಿರಿ”
ಯೆಹೋವನು “ಪ್ರಾರ್ಥನೆಯನ್ನು ಕೇಳುವವನು.” (ಕೀರ್ತನೆ 65:2) ಆತನು ಹೃತ್ಪೂರ್ವಕ ಭಕ್ತಿ ತೋರಿಸುವವರ ಪ್ರಾರ್ಥನೆಗಳನ್ನು ಸದಾ ಆಲಿಸುತ್ತಾನೆ. ಮತ್ತು ನಾವು ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸುವಾಗ ಆತನು ಕೇಳುತ್ತಾನೆಂದೂ ನಮಗೆ ಖಾತ್ರಿ ಇರಬಲ್ಲದು.
ಆದರೆ ಒಬ್ಬರಿಗೋಸ್ಕರ ಒಬ್ಬರು ಏಕೆ ಪ್ರಾರ್ಥಿಸಬೇಕು? ಯಾವ ವಿಷಯದಲ್ಲಿ ಆ ಪ್ರಾರ್ಥನೆಗಳನ್ನು ಮಾಡಬೇಕು? ಮತ್ತು ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸುವಾಗ ಯಾವ ದಿವ್ಯ ಗುಣಗಳು ವರ್ಧಿಸಲ್ಪಡುವುವು?
ಒಬ್ಬರಿಗೋಸ್ಕರ ಒಬ್ಬರು ಏಕೆ ಪ್ರಾರ್ಥಿಸಬೇಕು?
ಯೆಹೋವನ ಜನರು ಒಬ್ಬರ ಪರವಾಗಿ ಒಬ್ಬರು ಪ್ರಾರ್ಥಿಸುವಂತೆ ಶಾಸ್ತ್ರಗಳು ಪ್ರೋತ್ಸಾಹ ನೀಡುತ್ತವೆ. ಅಪೊಸ್ತಲ ಪೌಲನ ಪ್ರಾರ್ಥನೆಗಳಲ್ಲಿ ಇತರರ ಪರವಾಗಿ ಮಾಡಿದ ಪ್ರಾರ್ಥನೆಗಳಿದ್ದವು. (ಕೊಲೊಸ್ಸೆ 1:3; 2 ಥೆಸಲೊನೀಕ 1:11) ಇದಲ್ಲದೆ, ಶಿಷ್ಯ ಯಾಕೋಬನು “ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ” ಎಂದು ಬರೆದನು.—ಯಾಕೋಬ 5:16.
ದೇವರ ಇತರ ಸೇವಕರುಗಳ ಪರವಾಗಿ ಮಾಡಿದ ಪ್ರಾರ್ಥನೆಗಳು ಕಾರ್ಯಸಾಧಕ. ಇದು ಯಾಕೋಬ 5:13-18ರಲ್ಲಿ ತೋರಿಸಲ್ಪಟ್ಟಿದೆ. ಅಲ್ಲಿ, ಆತ್ಮಿಕವಾಗಿ ರೋಗಿಯಾದ ಕ್ರೈಸ್ತನು, ಸಭಾ ಹಿರಿಯರ ಬಳಿಗೆ ಹೋಗಿ, ಅವರು “ಕರ್ತ [ಯೆಹೋವ, NW]ನ ಹೆಸರಿನಿಂದ ಅವನಿಗೆ ಎಣ್ಣೆ ಹಚ್ಚಿ ಅವನಿಗೋಸ್ಕರ ದೇವರನ್ನು” ಪ್ರಾರ್ಥಿಸುವಂತೆ ಪ್ರೋತ್ಸಾಹಿಸಲ್ಪಡುತ್ತಾನೆ. ಅವರ ಪ್ರಾರ್ಥನೆಯನ್ನು ಕೇಳಿ ಈ ವ್ಯಥಿತನು ಬಲಹೊಂದಿ ದೇವರು ತನ್ನ ಸ್ವಂತ ಪ್ರಾರ್ಥನೆಯನ್ನು ಕೇಳುವನೆಂಬ ದೃಢ ನಿಶ್ಚಯಕ್ಕೆ ಬರಬಹುದು. (ಕೀರ್ತನೆ 23:5; 34:18) ಆ ವ್ಯಕ್ತಿಯೊಂದಿಗೆ ಪ್ರಾರ್ಥಿಸುವುದಲ್ಲದೆ ಹಿರಿಯರು ಉಪಶಮನ ನೀಡಲು ತೈಲಸದೃಶವಾದ ಶಾಸ್ತ್ರದ ವಿಚಾರಗಳನ್ನು ಮಾತಾಡಿ ಅವನನ್ನು ಆತ್ಮಿಕಾರೋಗ್ಯಕ್ಕೆ ಪುನಃ ತರಲು ಪ್ರಯತ್ನಿಸುತ್ತಾರೆ.
ಯಾಕೋಬನು ಮುಂದುವರಿಸುವುದು: “ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವುದು. ಕರ್ತ [ಯೆಹೋವ, NW]ನು ಅವನನ್ನು ಎಬ್ಬಿಸುವನು. ಹೌದು, ಆತ್ಮಿಕ ರೋಗಿಗೆ ಹಿರಿಯರ “ನಂಬಿಕೆಯಿಂದ ಮಾಡಿದ ಪ್ರಾರ್ಥನೆ” ಸಹಾಯ ನೀಡುವ ಸಂಭವವಿದೆ. ಮತ್ತು ಶಾಸ್ತ್ರದ ಸಹಾಯವನ್ನು ಇಷ್ಟಪಡುವುದಾದರೆ ದೇವರು ಆತ್ಮಿಕಾರೋಗ್ಯಕ್ಕೆ “ಅವನನ್ನು ಎಬ್ಬಿಸುವನು.” ಆದರೆ ಗುರುತರದ ಪಾಪದ ಕಾರಣ ಆತ್ಮಿಕ ರೋಗ ಬಂದಿರುವಲ್ಲಿ ಏನು? ಆ ವ್ಯಕ್ತಿ ಪಶ್ಚಾತ್ತಾಪ ಪಡುವುದಾದರೆ ಯೆಹೋವನು ಅವನನ್ನು ಕ್ಷಮಿಸುವನು.
ಯಾಕೋಬನು ಹೇಳುವುದು: “ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ ಒಬ್ಬರಿಗೋಸ್ಕರ ಒಬ್ಬರು ದೇವರನ್ನು ಪ್ರಾರ್ಥಿಸಿರಿ; ನೀತಿವಂತರ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹುಬಲವಾಗಿದೆ. ಎಲೀಯನು. . . ಮಳೆ ಬರಬಾರದೆಂದು ಬಹಳವಾಗಿ ಪ್ರಾರ್ಥಿಸಲು ಮೂರು ವರುಷ ಆರು ತಿಂಗಳ ವರೆಗೂ ಮಳೆ ಬೀಳಲಿಲ್ಲ. ತಿರಿಗಿ ಅವನು ಪ್ರಾರ್ಥನೆ ಮಾಡಲು ಮಳೆಗರೆಯಿತು. ಭೂಮಿಯು ಬೆಳೆಯಿತು.” (1 ಅರಸು 17:1-7; 18:1,42-45) ನೀತಿವಂತನ ದೇವರ ಚಿತ್ತಾನುಸಾರವಾದ ಪ್ರಾರ್ಥನೆಯಲ್ಲಿ ಶಕ್ತಿಯಿದೆ.—1 ಯೋಹಾನ 5:14,15.
ಯಾವುದರ ಕುರಿತು ಪ್ರಾರ್ಥಿಸಬೇಕು?
ಒಬ್ಬ ಸಹವಿಶ್ವಾಸಿಯ ಪರವಾಗಿ ಯಾವ ವಿಷಯದಲ್ಲೂ ಪ್ರಾರ್ಥಿಸಸಾಧ್ಯವಿದೆ. ಉದಾಹರಣೆಗೆ, ಸುವಾರ್ತೆ ಸಾರುವ ಸಾಮರ್ಥ್ಯವು ತನಗೆ ಬರುವಂತೆ ಇತರರು ಪ್ರಾರ್ಥಿಸಬೇಕೆಂದು ಪೌಲನು ಕೇಳಿಕೊಂಡನು. (ಎಫೆಸ 6:17-20) ಯಾವನಾದರೂ ಶೋಧಿಸಲ್ಪಡುತ್ತಿದ್ದಾನೆಂದು ನಮಗೆ ತಿಳಿದರೆ? ಆಗ, ‘ಅವನು ತಪ್ಪುಮಾಡದಂತೆ’ ಮತ್ತು ಯೆಹೋವನು ಅವನನ್ನು ಶೋಧನೆಗೆ ಬಿಡದೆ ಪಿಶಾಚನೂ ಸೈತಾನನೂ ಆದ ಕೆಡುಕನಿಂದ ರಕ್ಷಿಸುವಂತೆ ಪ್ರಾರ್ಥಿಸಬಹುದು. (2 ಕೊರಿಂಥ 13:7; ಮತ್ತಾಯ 6:13) ಮತ್ತು ಯಾರಾದರೂ ಶಾರೀರಿಕ ರೋಗಿಯಾಗಿರುವಲ್ಲಿ, ಯೆಹೋವನು ಅವನಿಗೆ ಆ ರೋಗವನ್ನು ತಾಳಿಕೊಳ್ಳುವ ಸ್ಥೈರ್ಯವನ್ನು ಕೊಡುವಂತೆ ನಾವು ಬೇಡಿಕೊಳ್ಳಬಹುದು.—ಕೀರ್ತನೆ 41:1-3.
ಹಿಂಸೆಗೊಳಗಾಗಿರುವ ಸಹವಿಶ್ವಾಸಿಗಳಿಗೋಸ್ಕರ ಪ್ರಾರ್ಥಿಸುವುದು ಸದಾ ಯೋಗ್ಯ. ಪೌಲನೂ ಜೊತೆಗಾರರೂ ತೀವ್ರ ಹಿಂಸೆಯನ್ನು ಅನುಭವಿಸಿದರು. ಮತ್ತು ಅವನು ಕೊರಿಂಥದ ಕ್ರೈಸ್ತರಿಗೆ ಹೇಳಿದ್ದು: “ನೀವು ನಮಗೋಸ್ಕರ ಪ್ರಾರ್ಥನೆ ಮಾಡುವವರಾಗಿ ಸಹಕಾರಿಗಳಾಗಿರುವದರಿಂದ. . . ಹೀಗೆ ಅನೇಕರ ವಿಜ್ಞಾಪನೆಗಳಿಂದ ನಮಗೆ ದೊರಕುವ ಉಪಕಾರಕ್ಕಾಗಿ ನಮ್ಮ ನಿಮಿತ್ತ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿ ಉಂಟಾಗುವದು.” (2 ಕೊರಿಂಥ 1:8-11; 11:23-27) ನಾವು ಸೆರೆವಾಸದಲ್ಲಿರುವಾಗಲೂ ಹಿಂಸೆಗೊಳಗಾಗಿರುವ ಇತರ ಸಹೋದರರಿಗೋಸ್ಕರ, ಯೆಹೋವನು ‘ಶಿಷ್ಯರ ಬಿನ್ನಹ’ವನ್ನು ಕೇಳುತ್ತಾನೆಂದು ನೆನಪಿಸಿಕೊಂಡು ಪ್ರಾರ್ಥಿಸಬಹುದು.—ಜ್ಞಾನೋಕ್ತಿ 15:29.
ಯೆಹೋವನ ಸಂಸ್ಥೆಯೊಳಗೆ ಮಹಾ ಜವಾಬ್ದಾರಿಗಳನ್ನು ಹೊತ್ತಿರುವವರಿಗಾಗಿ ನಾವು ವಿಶೇಷವಾಗಿ ಪ್ರಾರ್ಥಿಸಬೇಕು. ಇದರಲ್ಲಿ ಸಂಸ್ಥೆಯನ್ನು ನಡೆಸುವ ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು, ಕೊಡುವ ಆತ್ಮಿಕಾಹಾರವನ್ನು ತಯಾರಿಸುವವರು ಸೇರಿದ್ದಾರೆ. (ಮತ್ತಾಯ 24:45-47) ಉದಾಹರಣೆಗೆ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಿಗೆ ನಮ್ಮ ಪ್ರಾರ್ಥನೆ ಸಮಂಜಸ. ದೇವರು ಅವರಿಗೆ “ಜ್ಞಾನವುಳ್ಳ ಆತ್ಮ”ವನ್ನು ಒದಗಿಸಲಿ ಎಂದು ನಾವು ಪ್ರಾರ್ಥಿಸಬಹುದು.—ಎಫೆಸ 1:16,17.
ಕ್ರೈಸ್ತ ಗುಣಗಳು ವರ್ಧಿಸಲ್ಪಡುವುದು
ಸಹವಿಶ್ವಾಸಿಗಳಿಗೋಸ್ಕರ ಪ್ರಾರ್ಥಿಸುವ ಮೂಲಕ ನಾವು ಚಿಂತಿತರು, ನಿಸ್ವಾರ್ಥಿಗಳು ಮತ್ತು ಪ್ರೀತಿಸುವವರು ಎಂದು ತೋರಿಸಿಕೊಳ್ಳುತ್ತೇವೆ. ನಮ್ಮ ಆತ್ಮಿಕ ಸಹೋದರ, ಸಹೋದರಿಯರಿಗೆ ನಾವು ತೋರಿಸುವ ನಿಸ್ವಾರ್ಥವಾದ ಪ್ರೀತಿಯ ಚಿಂತೆಯು, “ಪ್ರೀತಿಯು ಸ್ವಪ್ರಯೇಜನವನ್ನು ಚಿಂತಿಸುವದಿಲ್ಲ” ಎಂಬ ಪೌಲನ ಮಾತಿಗೆ ಹೊಂದಿಕೆಯಾಗುತ್ತದೆ. (1 ಕೊರಿಂಥ 13:4, 5) “ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತ” ನೋಡುವ ಒಂದು ವಿಧವು ಇತರರಿಗೋಸ್ಕರ ಪ್ರಾರ್ಥಿಸುವುದೇ. (ಫಿಲಿಪ್ಪಿ 2:4) ಇತರರ ಆತ್ಮ ಹಿತಚಿಂತನೆಯನ್ನು ನಾವು ನಮ್ಮ ಪ್ರಾರ್ಥನಾ ವಿಷಯವಾಗಿ ಮಾಡುವಾಗ ಯೇಸುವಿನ ಶಿಷ್ಯರನ್ನು ಗುರುತಿಸುವ ಭಾತೃಪ್ರೇಮದಲ್ಲಿ ನಾವು ಅವರ ಸನಿಹಕ್ಕೆ ಎಳೆಯಲ್ಪಡುತ್ತಿದ್ದೇವೆಂದೂ ತಿಳಿದುಕೊಳ್ಳುವೆವು.—ಯೋಹಾನ 13:34, 35.
ನಾವು ಯಾರಿಗೋಸ್ಕರ ಪ್ರಾರ್ಥಿಸುತ್ತೇವೊ ಅವರ ಕಡೆಗೆ ನಮ್ಮ ಸಹಾನುಭೂತಿಯ ಗುಣ ಬೆಳೆಯುತ್ತದೆ. (1 ಪೇತ್ರ 3:8) ನಮಗೆ ಅವರ ಮೇಲೆ ಅನುಭೂತಿ ಇದೆ. ಅವರ ಅಭಿರುಚಿ ಮತ್ತು ಸಂಕಟಗಳಲ್ಲಿ ನಾವು ಪಾಲಿಗರಾಗುತ್ತೇವೆ. ಮಾನವ ದೇಹದಲ್ಲಿ ಒಂದು ಕೈಗೆ ಗಾಯವಾಗುವುದಾದರೆ ಇನ್ನೊಂದು ಕೈ ಅದನ್ನು ಪರಾಮರಿಸಿ ಗಾಯದ ಬಾಧೆಯನ್ನು ಶಮನಗೊಳಿಸಲು ಪ್ರಯತ್ನಿಸುತ್ತದೆ. (1 ಕೊರಿಂಥ 12:12, 26, ಹೋಲಿಸಿ.) ತದ್ರೀತಿ, ಕಷ್ಟಾನುಭವಿಸುತ್ತಿರುವ ನಮ್ಮ ಸಹೋದರ, ಸಹೋದರಿಯರಿಗಾಗಿ ಪ್ರಾರ್ಥಿಸುವುದು ನಮ್ಮಲ್ಲಿ ಅನುಭೂತಿಯನ್ನು ಬೆಳೆಸಿ ಅವರನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ಸಹಾಯ ಮಾಡುತ್ತದೆ. ದೇವರೂ ಕ್ರಿಸ್ತನೂ ಅವರನ್ನು ತ್ಯಜಿಸುವುದಿಲ್ಲವಾದ ಕಾರಣ, ನಾವು ನಮ್ಮ ನಂಬಿಗಸ್ತ ಜೊತೆಕ್ರೈಸ್ತರನ್ನು ನಮ್ಮ ಪ್ರಾರ್ಥನೆಗಳಲ್ಲಿ ಅಸಡ್ಡೆ ಮಾಡುವುದು ನಮ್ಮ ನಷ್ಟವೇ ಆಗಿರುವುದು.—1 ಪೇತ್ರ 5:6,7.
ನಾವು ಇತರರಿಗೋಸ್ಕರ ಪ್ರಾರ್ಥಿಸುವಾಗ ವಿಭಿನ್ನ ದಿವ್ಯಗುಣಗಳು ವರ್ಧಿಸುತ್ತವೆ. ನಾವು ಇತರರ ಕಡೆ ಹೆಚ್ಚು ತಿಳಿವಳಿಕೆ ತೋರಿಸುವವರೂ ತಾಳ್ಮೆಯುಳ್ಳವರೂ ಆಗುತ್ತೇವೆ. ನಿಷ್ಠುರ ಮನೋಭಾವವಿರುವಲ್ಲಿ ಅದು ಕಿತ್ತೊಗೆಯಲ್ಪಟ್ಟು ನಮ್ಮನ್ನು ಪ್ರೀತಿಯುಳ್ಳವರೂ ಹರ್ಷಚಿತ್ತರೂ ಆಗಿ ಮಾಡುವ ಭಕ್ತಿವೃದ್ಧಿಯ ಆಲೋಚನೆಗಳಿಗೆ ಸ್ಥಳ ದೊರೆಯುತ್ತದೆ. ಇತರರಿಗೋಸ್ಕರ ಪ್ರಾರ್ಥಿಸುವುದು ಯೆಹೋವನ ಜನರ ಮಧ್ಯೆ ಶಾಂತಿ ಮತ್ತು ಏಕತೆಯನ್ನೂ ವರ್ಧಿಸುತ್ತದೆ.—2 ಕೊರಿಂಥ 9:13,14.
ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸುತ್ತಾ ಮುಂದುವರಿಯಿರಿ
ಪೌಲನಂತೆ ನಾವೂ, ಇತರರು ನಮಗಾಗಿ ಪ್ರಾರ್ಥಿಸುವಂತೆ ಕೇಳಿಕೊಳ್ಳಬಹುದು. ನಮ್ಮೊಂದಿಗಲ್ಲದೆ ನಮ್ಮ ಮಿತ್ರರು ನಮಗಾಗಿ, ಖಾಸಗಿಯಾಗಿ ನಮ್ಮ ಹೆಸರೆತ್ತಿ ನಮ್ಮ ಸಮಸ್ಯೆಗಳನ್ನು ಹೇಳಿ ದೇವರು ಸಹಾಯ ಮಾಡುವಂತೆ ಪ್ರಾರ್ಥಿಸಬಹುದು. ಮತ್ತು ಸಹಾಯ ಬಂದೇ ಬರುವುದು. ಏಕೆಂದರೆ, “ಕರ್ತ [ಯೆಹೋವ, NW]ನು ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೆ” ಬಲ್ಲನು.—2 ಪೇತ್ರ 2:9.
ತಮ್ಮ ಪ್ರಾರ್ಥನೆಗಳಲ್ಲಿ ನಮ್ಮನ್ನು ಹೆಸರಿಸುವ ಯೆಹೋವನ ಸಾಕ್ಷಿಗಳಿಗೆ ತಮ್ಮದೇ ಆದ—ನಮಗಿಂತಲೂ ಹೆಚ್ಚು ಸಂಕಟಕರವಾದ ಕಷ್ಟಗಳಿರುವ ಸಾಧ್ಯತೆ ಇದೆ. ಆದರೂ ಅವರು ಶಾಶ್ವತ ರಾಜನ ಮುಂದೆ ನಮ್ಮ ಚಿಂತೆಗಳನ್ನು ನಮ್ಮ ಪರವಾಗಿ ಕಣ್ಣೀರು ಸುರಿಸಿಯೂ ನಿವೇದನೆ ಮಾಡುತ್ತಾರೆ. (2 ಕೊರಿಂಥ 2:4; 2 ತಿಮೊಥಿ 1:3, 4, ಹೋಲಿಸಿ.) ನಾವಿದಕ್ಕೆ ಎಷ್ಟು ಕೃತಜ್ಞರಾಗಿರಬೇಕು! ಇದನ್ನು ಗಣ್ಯ ಮಾಡುತ್ತಾ ಮತ್ತು ಆಗಲೆ ಚರ್ಚಿಸಿರುವ ಇತರ ಕಾರಣಗಳಿಗಾಗಿ ನಾವು ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸೋಣ. (w90 11/15)