ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 9/1 ಪು. 30-31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1996
  • ಅನುರೂಪ ಮಾಹಿತಿ
  • ಮಾನಸಿಕ ತೊಂದರೆಗಳ ಬಗ್ಗೆ ಒಂದಿಷ್ಟು ಮಾಹಿತಿ
    ಎಚ್ಚರ!—2015
  • ಲೋಕದಲ್ಲಿರೋ ಮಾನಸಿಕ ಆರೋಗ್ಯದ ಬಿಕ್ಕಟ್ಟು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
  • 4 | ಬೈಬಲ್‌ನಲ್ಲಿರೋ ಸಲಹೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
  • ಪರಿಪೂರ್ಣ ಮಾನಸಿಕ ಆರೋಗ್ಯ—ದೇವರ ಆಶೀರ್ವಾದ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
ಇನ್ನಷ್ಟು
ಕಾವಲಿನಬುರುಜು—1996
w96 9/1 ಪು. 30-31

ವಾಚಕರಿಂದ ಪ್ರಶ್ನೆಗಳು

ಕ್ರೈಸ್ತನೊಬ್ಬನಿಗೆ ಒಬ್ಬ ಮಾನಸಿಕ ಆರೋಗ್ಯ ವೈದ್ಯನನ್ನು ವಿಚಾರಿಸುವುದು ವಿವೇಕಯುತವಾಗಿರುವುದೊ?

ಈ “ಕಡೇ ದಿವಸಗಳ”ಲ್ಲಿ ಭಾವನಾತ್ಮಕ ಹಾಗೂ ಮಾನಸಿಕ ಅಸ್ವಸ್ಥತೆಗಳಲ್ಲಿ ವೃದ್ಧಿಯಿದೆಯೆಂದು ಕೆಲವು ದೇಶಗಳಿಂದ ಬಂದ ವರದಿಗಳು ಸೂಚಿಸುತ್ತವೆ. (2 ತಿಮೊಥೆಯ 3:1) ಜೊತೆ ವಿಶ್ವಾಸಿಗಳು ಬಾಧಿಸಲ್ಪಡುವಾಗ ಕ್ರೈಸ್ತರಿಗೆ ತೀವ್ರವಾದ ಸಹಾನುಭೂತಿಯ ಅನಿಸಿಕೆಯಾಗುತ್ತದೆ, ಆದರೆ ತಮ್ಮ ಅಸ್ವಸ್ಥತೆಗೆ ಚಿಕಿತ್ಸೆಯನ್ನು ಪಡೆಯಬೇಕೊ ಮತ್ತು, ಹಾಗಿರುವಲ್ಲಿ, ಯಾವ ರೀತಿಯ ಚಿಕಿತ್ಸೆಯನ್ನು ಪಡೆಯಬೇಕೆಂಬುದನ್ನು ಪ್ರತಿಯೊಬ್ಬರು ಸ್ವತಃ ನಿರ್ಣಯಿಸಬೇಕೆಂದು ಅವರು ಅಂಗೀಕರಿಸುತ್ತಾರೆ.a “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.” (ಗಲಾತ್ಯ 6:5) ಸ್ಕಿಟ್ಸಫ್ರೀನಿಯ, ಬೈಪೋಲರ್‌ ವ್ಯಾಧಿ, ತೀವ್ರವಾದ ರೋಗಶಯ್ಯೆಯ ಖಿನ್ನತೆ, ಆಂತರಿಕ ನಿರ್ಬಂಧ ವರ್ತನೆ, ಆತ್ಮವಿಕಲಾಂಗತೆ, ಮತ್ತು ಇತರ ಸಂಕಟಕರವಾದ ವ್ಯಾಧಿಗಳಿಂದ ಅತಿಯಾಗಿ ಕಷ್ಟಾನುಭವಿಸುತ್ತಿರುವ ಕೆಲವರು, ಸರಿಯಾದ ವೈದ್ಯಕೀಯ ಸಹಾಯವನ್ನು ಪಡೆದುಕೊಂಡ ತರುವಾಯ ಪೂರಾ ಸಾಮಾನ್ಯ ಜೀವಿತಗಳನ್ನು ಜೀವಿಸಲು ಶಕ್ತರಾಗಿದ್ದಾರೆ.

ಕೆಲವು ಸ್ಥಳಗಳಲ್ಲಿ ಚಿಕಿತ್ಸೆಯನ್ನು ಪಡೆಯುವುದು ಬಹಳ ಜನಪ್ರಿಯವಾಗಿ ಪರಿಣಮಿಸಿದೆ. ಅನೇಕ ವಿದ್ಯಮಾನಗಳಲ್ಲಿ, ರೋಗಿಗೊಂದು ತೀವ್ರವಾದ ಮಾನಸಿಕ ವ್ಯಾಧಿಯಿರುವುದಿಲ್ಲ, ಆದರೆ ಜೀವನದಲ್ಲಿನ ಯಾವುದೊ ಸನ್ನಿವೇಶವನ್ನು ನಿಭಾಯಿಸುವುದರಲ್ಲಿ ತೊಂದರೆಯಿರುತ್ತದೆ. ಹಾಗಿದ್ದರೂ, ಜೀವನದ ಕಷ್ಟಕರ ಸಮಸ್ಯೆಗಳನ್ನು ನಿರ್ವಹಿಸುವುದರಲ್ಲಿ ಅತ್ಯಂತ ಕಾರ್ಯಸಾಧಕವಾದ ಸಹಾಯವನ್ನು ನೀಡುವಂತಹದ್ದು ಬೈಬಲೇ. (ಕೀರ್ತನೆ 119:28, 143) ಬೈಬಲಿನ ಮುಖಾಂತರ ಯೆಹೋವನು, ನಮ್ಮನ್ನು ಮಾನಸಿಕವಾಗಿಯೂ ಭಾವನಾತ್ಮಕವಾಗಿಯೂ ಬಲಪಡಿಸುವ ವಿಷಯಗಳನ್ನು—ವಿವೇಕ, ಯೋಚನಾ ಸಾಮರ್ಥ್ಯ, ಮತ್ತು ನಿಜ ಜ್ಞಾನವನ್ನು—ಒದಗಿಸುತ್ತಾನೆ. (ಜ್ಞಾನೋಕ್ತಿ 2:1-11; ಇಬ್ರಿಯ 13:6) ತೀವ್ರವಾದ ಆಂತರಿಕ ಸಂಕ್ಷೋಭೆಯ ಕಾರಣ, ದೇವರ ನಂಬಿಗಸ್ತ ಸೇವಕರು ತಮ್ಮ ಅಭಿಪ್ರಾಯವನ್ನು ಕೆಲವೊಮ್ಮೆ ಅಸಂಬದ್ಧವಾಗಿ ವ್ಯಕ್ತಪಡಿಸಬಹುದು. (ಯೋಬ 6:2, 3) ಸಹಾಯ ಮತ್ತು ಸಲಹೆಗಾಗಿ ಹಿರಿಯರನ್ನು ಭೇಟಿಮಾಡುವಂತೆ ಯಾಕೋಬ 5:13-16 ಇಂತಹವರನ್ನು ಉತ್ತೇಜಿಸುತ್ತದೆ. ಕ್ರೈಸ್ತನೊಬ್ಬನು ಆತ್ಮಿಕವಾಗಿ ಅಸ್ವಸ್ಥನಾಗಿರಬಹುದು, ಅಥವಾ ಬದಲಾಯಿಸಲಾಗದ ಒಂದು ಪರಿಸ್ಥಿತಿಯಿಂದ ಇಲ್ಲವೆ ನಿರ್ಬಂಧಕ ಒತ್ತಡಗಳಿಂದ ಅವನು ಕಷ್ಟಕ್ಕೀಡಾಗಿರಬಹುದು, ಅಥವಾ ತಾನು ಅನ್ಯಾಯದ ಬಲಿಪಶುವಾಗಿದ್ದೇನೆಂದು ಅವನಿಗೆ ಅನಿಸಬಹುದು. (ಪ್ರಸಂಗಿ 7:7; ಯೆಶಾಯ 32:2; 2 ಕೊರಿಂಥ 12:7-10) ಇಂತಹ ಒಬ್ಬ ವ್ಯಕ್ತಿಯು ಹಿರಿಯರಲ್ಲಿ ಸಹಾಯವನ್ನು ಕಂಡುಕೊಳ್ಳಬಲ್ಲನು, ಇವರು “ಅವನಿಗೆ ಎಣ್ಣೆಹಚ್ಚಿ”—ಅಂದರೆ, ಸಂತೈಸುವ ಬೈಬಲ್‌ ಸಲಹೆಯನ್ನು ಕುಶಲಪೂರ್ಣವಾಗಿ ನೀಡಿ—ಮತ್ತು ‘ಅವನಿಗೋಸ್ಕರ . . . ಪ್ರಾರ್ಥಿಸುವರು’ ಸಹ. ಫಲಿತಾಂಶವು ಏನಾಗಿರುವುದು? “ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವದು; ಕರ್ತನು ಅವನನ್ನು [ತನ್ನ ಹತಾಶೆ ಅಥವಾ ದೇವರಿಂದ ತೊರೆಯಲ್ಪಟ್ಟಿರುವ ತನ್ನ ಅನಿಸಿಕೆಯಿಂದ] ಎಬ್ಬಿಸುವನು.”

ಆತ್ಮಿಕ ಕುರುಬರ ಕುಶಲ ಸಹಾಯದ ಹೊರತೂ ವ್ಯಕ್ತಿಯೊಬ್ಬನ ಮಾನಸಿಕ ಸಂಕಟ ಹಾಗೂ ಗಲಿಬಿಲಿಯು ಮುಂದುವರಿಯುವುದಾದರೆ ಆಗೇನು? ಈ ಸನ್ನಿವೇಶದಲ್ಲಿರುವ ಕೆಲವರು ಸಂಪೂರ್ಣವಾದೊಂದು ಶಾರೀರಿಕ ಪರೀಕ್ಷೆಗೆ ಒಳಗಾಗಲು ಆರಿಸಿಕೊಂಡಿದ್ದಾರೆ. (ಹೋಲಿಸಿ ಜ್ಞಾನೋಕ್ತಿ 14:30; 16:24; 1 ಕೊರಿಂಥ 12:26.) ಶಾರೀರಿಕ ಸಮಸ್ಯೆಯೊಂದು ಭಾವನಾತ್ಮಕ ಅಥವಾ ಮಾನಸಿಕ ಸಂಕಟದ ಕಾರಣವಾಗಿರಬಹುದು. ಇಂತಹ ಒಂದು ಸಮಸ್ಯೆಗೆ ಚಿಕಿತ್ಸೆಮಾಡುವುದು, ಕೆಲವು ವಿದ್ಯಮಾನಗಳಲ್ಲಿ ಭಾವನಾತ್ಮಕವಾಗಿ ಅಸ್ವಸ್ಥನಾಗಿರುವ ವ್ಯಕ್ತಿಗೆ ಉಪಶಮನವನ್ನು ನೀಡಿದೆ.b ಯಾವ ಶಾರೀರಿಕ ಸಮಸ್ಯೆಯೂ ಕಂಡುಕೊಳ್ಳಲ್ಪಡದಿದ್ದಲ್ಲಿ, ವೈದ್ಯನು, ರೋಗಿಯ ಅಥವಾ ಅವನ ಪ್ರತಿನಿಧಿಯ ವಿನಂತಿಯ ಮೇಲೆ, ಒಬ್ಬ ಮಾನಸಿಕ ಆರೋಗ್ಯ ವೈದ್ಯನನ್ನು ಶಿಫಾರಸ್ಸು ಮಾಡಬಹುದು. ಆಗ ನೀವೇನು ಮಾಡಬೇಕು? ಈಗಾಗಲೇ ಹೇಳಿದಂತೆ, ಇದು ಪ್ರತಿಯೊಬ್ಬ ವ್ಯಕ್ತಿಯು ಸ್ವತಃ ತೂಗಿನೋಡಬೇಕಾದ ಒಂದು ನಿರ್ಣಯವಾಗಿದೆ. ಇತರರು ಟೀಕಿಸಬಾರದು ಇಲ್ಲವೆ ತೀರ್ಮಾನಿಸಬಾರದು.—ರೋಮಾಪುರ 14:4.

ಆದರೂ, ಪ್ರಾಯೋಗಿಕ ವಿವೇಕವನ್ನು ಉಪಯೋಗಿಸಬೇಕು ಮತ್ತು ಬೈಬಲ್‌ ಮೂಲತತ್ವಗಳನ್ನು ಮರೆಯದಿರುವಂತೆ ಜಾಗ್ರತೆವಹಿಸಬೇಕು. (ಜ್ಞಾನೋಕ್ತಿ 3:21; ಪ್ರಸಂಗಿ 12:13) ಶಾರೀರಿಕ ಅನಾರೋಗ್ಯದ ವಿಷಯದಲ್ಲಿ, ರೋಗಿಗಳು ಸಾಂಪ್ರದಾಯಿಕ ಔಷಧದಿಂದ ನಿಸರ್ಗ ಚಿಕಿತ್ಸೆ, ಸೂಜಿ ಚಿಕಿತ್ಸೆ, ಮತ್ತು ಹೋಮಿಯೊ ಚಿಕಿತ್ಸೆಯಂತಹ ಚಿಕಿತ್ಸಾಕ್ರಮದ ಆಯ್ಕೆಗಳ ವೈವಿಧ್ಯವನ್ನು ಎದುರಿಸುತ್ತಾರೆ. ವಿಭಿನ್ನ ರೀತಿಯ ಮಾನಸಿಕ ಆರೋಗ್ಯ ವೈದ್ಯರೂ ಇದ್ದಾರೆ. ಇವರಲ್ಲಿ, ಅವ್ಯವಸ್ಥಿತ ವರ್ತನೆ ಅಥವಾ ವೇದನಾಮಯ ಭಾವನೆಗಳಿಗೆ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನಿಸಲಿಕ್ಕಾಗಿ, ರೋಗಿಯ ವೈಯಕ್ತಿಕ ಇತಿಹಾಸವನ್ನು ಪರಿಶೀಲಿಸಬಹುದಾದ ವಿಶ್ಲೇಷಣಶೀಲ ಮನೋಚಿಕಿತ್ಸಕರು ಮತ್ತು ಇತರರು ಇದ್ದಾರೆ. ವರ್ತನಾ ಮನೋಚಿಕಿತ್ಸಕರು, ಹೊಸ ವರ್ತನಾ ನಮೂನೆಗಳನ್ನು ರೋಗಿಯು ಕಲಿಯುವಂತೆ ಸಹಾಯ ಮಾಡಲು ಪ್ರಯತ್ನಿಸಬಹುದು. ಹೆಚ್ಚಿನ ಮಾನಸಿಕ ಅಸ್ವಸ್ಥತೆಗಳು ಔಷಧಗಳಿಂದ ಉಪಚರಿಸಲ್ಪಡಬೇಕೆಂದು ಕೆಲವು ಮಾನಸಿಕ ಆರೋಗ್ಯ ವೈದ್ಯರು ನಂಬುತ್ತಾರೆ.c ವರದಿಗನುಸಾರವಾಗಿ, ಇತರರು ಆಹಾರ ಪಥ್ಯ ಮತ್ತು ಜೀವಸ್ವತಗಳನ್ನು ಶಿಫಾರಸ್ಸುಮಾಡುತ್ತಾರೆ.

ಈ ಆಯ್ಕೆಗಳನ್ನು ಪರಿಗಣಿಸುವಾಗ ರೋಗಿಗಳು ಮತ್ತು ಅವರ ಕುಟುಂಬಗಳು ಎಚ್ಚರವಹಿಸಬೇಕು. (ಜ್ಞಾನೋಕ್ತಿ 14:15) ಗಮನಾರ್ಹವಾಗಿ, ಜಾನ್‌ ಹಾಪ್ಕಿನ್ಸ್‌ ಯುನಿವರ್ಸಿಟಿ ಸ್ಕೂಲ್‌ ಆಫ್‌ ಮೆಡಿಸಿನ್‌ನಲ್ಲಿ ಸೈಕಿಆ್ಯಟ್ರಿ ಮತ್ತು ಬಿಹೇವಿಯರಲ್‌ ಸೈಎನ್ಸ್‌ಸ್‌ ವಿಭಾಗದ ನಿರ್ದೇಶಕರಾದ ಪ್ರೊಫೆಸರ್‌ ಪೌಲ್‌ ಮೆಕ್‌ಹ್ಯೂ ಹೇಳಿದ್ದೇನೆಂದರೆ, ಮಾನಸಿಕ ಆರೋಗ್ಯ ವೃತ್ತಿಯು “ಒಂದು ಪ್ರಾರಂಭಾವಸ್ಥೆಯ ವೈದ್ಯಕೀಯ ಕಲೆಯಾಗಿದೆ. ಮಾನಸಿಕ ಆರೋಗ್ಯ ವೃತ್ತಿಯು ಮಾನವ ಜೀವನದ ಅತಿ ಜಟಿಲವಾದ ವೈಶಿಷ್ಟ್ಯ—ಮನಸ್ಸು ಮತ್ತು ವರ್ತನೆ—ಗಳ ಅವ್ಯವಸ್ಥತೆಯೊಂದಿಗೆ ವ್ಯವಹರಿಸುವಾಗಲೂ, ಅದರ ಪ್ರಸ್ತಾವನೆಗಳ ಪ್ರಮಾಣ ಸಾಕ್ಷ್ಯವನ್ನು ಪಡೆಯುವುದು ಸುಲಭವಾಗಿರುವುದಿಲ್ಲ.” ಈ ಸನ್ನಿವೇಶವು ವಕ್ರತೆ ಹಾಗೂ ವಂಚನೆಗೆ, ಅಷ್ಟೇ ಅಲ್ಲದೆ ಒಳಿತಿಗಿಂತ ಅಧಿಕ ಹಾನಿಯನ್ನುಂಟು ಮಾಡಬಹುದಾದ ಸದುದ್ದೇಶದ ಚಿಕಿತ್ಸಾಕ್ರಮಗಳಿಗೆ ಅವಕಾಶವನ್ನು ಒದಗಿಸುತ್ತದೆ.

ಮನೋಚಿಕಿತ್ಸಕರು ಹಾಗೂ ಮನೋಶಾಸ್ತ್ರಜ್ಞರಿಗೆ ವೃತ್ತಿಪರ, ಸ್ನಾತಕೋತ್ತರ ಪದವಿಗಳು ಇರುವಾಗ, ಯಾವುದೇ ವೃತ್ತಿಪರ ಅರ್ಹತೆಗಳಿರದ ಅನೇಕ ಇತರರು, ಸಲಹೆಗಾರರು ಅಥವಾ ಚಿಕಿತ್ಸಕರಾಗಿ ಮೇಲ್ವಿಚಾರಣೆಯಿಲ್ಲದೆ ಕಾರ್ಯಮಾಡುತ್ತಾರೆಂಬುದನ್ನೂ ಉಲ್ಲೇಖಿಸತಕ್ಕದ್ದು. ಇಂತಹ ಅನರ್ಹ ವ್ಯಕ್ತಿಗಳನ್ನು ವಿಚಾರಿಸುತ್ತಾ, ಕೆಲವರು ಬಹಳಷ್ಟು ಹಣವನ್ನು ಖರ್ಚುಮಾಡಿದ್ದಾರೆ.

ತರಬೇತಿ ಪಡೆದ, ಅರ್ಹನಾದ ಮಾನಸಿಕ ಆರೋಗ್ಯ ವೈದ್ಯನ ವಿಷಯದಲ್ಲೂ, ಪರಿಗಣಿಸಬೇಕಾದ ವಿಷಯಗಳಿವೆ. ಒಬ್ಬ ವೈದ್ಯಕೀಯ ವೈದ್ಯನನ್ನು ಅಥವಾ ಶಸ್ತ್ರಚಿಕಿತ್ಸಕನನ್ನು ಆರಿಸಿಕೊಳ್ಳುವಾಗ, ಅವನು ನಮ್ಮ ಬೈಬಲಾಧಾರಿತ ದೃಷ್ಟಿಕೋನಗಳನ್ನು ಗೌರವಿಸುವನೆಂಬ ವಿಷಯದಲ್ಲಿ ನಾವು ಖಚಿತರಾಗಿರಬೇಕು. ತದ್ರೀತಿಯಲ್ಲಿ, ನಮ್ಮ ಧಾರ್ಮಿಕ ಹಾಗೂ ನೈತಿಕ ದೃಷ್ಟಿಕೋನಗಳನ್ನು ಗೌರವಿಸದ ಒಬ್ಬ ಮಾನಸಿಕ ಆರೋಗ್ಯ ವೈದ್ಯನನ್ನು ವಿಚಾರಿಸುವುದು ಅಪಾಯಕಾರಿಯಾಗಿರುವುದು. ಅನೇಕ ಕ್ರೈಸ್ತರು ಮಾನಸಿಕ ಹಾಗೂ ಭಾವನಾತ್ಮಕ ಸಮಸ್ಯೆಗಳ ಹೊರತೂ, “ಕ್ರಿಸ್ತ ಯೇಸುವಿಗಿದ್ದ ಅದೇ ಮಾನಸಿಕ ಮನೋಭಾವವನ್ನು” ಪಡೆದಿರಲು ಕಷ್ಟಪಟ್ಟು ಶ್ರಮಿಸುತ್ತಾರೆ. (ರೋಮಾಪುರ 15:5, NW) ಇಂತಹ ಕ್ರೈಸ್ತರು, ತಮ್ಮ ಯೋಚನೆ ಅಥವಾ ವರ್ತನೆಯನ್ನು ಪ್ರಭಾವಿಸಬಹುದಾದ ಯಾವುದೇ ವ್ಯಕ್ತಿಯ ಮನೋಭಾವಗಳ ಕುರಿತು ಸೂಕ್ತವಾಗಿಯೇ ಚಿಂತಿತರಾಗಿದ್ದಾರೆ. ಶಾಸ್ತ್ರೀಯ ನಂಬಿಕೆಗಳಿಂದ ಹೇರಲ್ಪಡುವ ಯಾವುದೇ ನಿರ್ಬಂಧಗಳನ್ನು ಕೆಲವು ವೃತ್ತಿಗಾರರು, ಅನಾವಶ್ಯಕವೆಂದು ಹಾಗೂ ಮಾನಸಿಕ ಆರೋಗ್ಯಕ್ಕೆ ಬಹುಶಃ ಹಾನಿಕಾರಕವೆಂದು ವೀಕ್ಷಿಸುತ್ತಾರೆ. ಅವರು ಬೈಬಲಿನಲ್ಲಿ ಖಂಡಿಸಲ್ಪಟ್ಟ, ಸಲಿಂಗಿ ಕಾಮ ಅಥವಾ ದಾಂಪತ್ಯ ದ್ರೋಹದಂತಹ ಆಚರಣೆಗಳನ್ನು ಅನುಮೋದಿಸಬಹುದು, ಅವುಗಳ ಶಿಫಾರಸ್ಸನ್ನೂ ಮಾಡಬಹುದು.

ಈ ವಿಚಾರಗಳು, “ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳುಕೊಳ್ಳುವ . . . ವಿವಾದ”ಗಳೆಂದು ಅಪೊಸ್ತಲ ಪೌಲನು ಕರೆದಂತಹ ವಿಷಯದಲ್ಲಿ ಸೇರಿವೆ. (1 ತಿಮೊಥೆಯ 6:20) ಕ್ರಿಸ್ತನ ಕುರಿತಾದ ಸತ್ಯಕ್ಕೆ ಅವು ವಿರುದ್ಧವಾಗಿವೆ ಮತ್ತು ಈ ಲೋಕದ “ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆ”ಯ ಭಾಗವಾಗಿವೆ. (ಕೊಲೊಸ್ಸೆ 2:8) ಬೈಬಲಿನ ಮಾನದಂಡವು ಸ್ಪಷ್ಟವಾಗಿದೆ: “ಯಾವ ಜ್ಞಾನವೂ ಯಾವ ವಿವೇಕವೂ ಯಾವ ಆಲೋಚನೆಯೂ ಯೆಹೋವನೆದುರಿಗೆ ನಿಲ್ಲುವದಿಲ್ಲ.” (ಜ್ಞಾನೋಕ್ತಿ 21:30) “ಕೆಟ್ಟದ್ದನ್ನು ಒಳ್ಳೇದೆಂದೂ ಒಳ್ಳೇದನ್ನು ಕೆಟ್ಟದ್ದೆಂದೂ” ಹೇಳುವ ಮಾನಸಿಕ ಆರೋಗ್ಯ ವೈದ್ಯರು, “ದುಸ್ಸಹವಾಸ” ಆಗಿದ್ದಾರೆ. ಅಸ್ಥಿರ ಮನಸ್ಸುಗಳನ್ನು ಗುಣಪಡಿಸಲು ಸಹಾಯ ಮಾಡುವ ಬದಲಿಗೆ, ಅವರು “ಸದಾಚಾರವನ್ನು ಕೆಡಿಸು”ವರು.—ಯೆಶಾಯ 5:20; 1 ಕೊರಿಂಥ 15:33.

ಆದುದರಿಂದ ಒಬ್ಬ ಮಾನಸಿಕ ಆರೋಗ್ಯ ವೈದ್ಯನನ್ನು ವಿಚಾರಿಸುವುದು ಅಗತ್ಯವೆಂದು ಅನಿಸುವ ಕ್ರೈಸ್ತನೊಬ್ಬನು, ವೃತ್ತಿಗಾರನ ಅರ್ಹತೆಗಳು, ಮನೋಭಾವ, ಮತ್ತು ಖ್ಯಾತಿಯನ್ನು ಹಾಗೂ ಶಿಫಾರಸ್ಸುಮಾಡಲ್ಪಟ್ಟ ಯಾವುದೇ ಚಿಕಿತ್ಸಾಕ್ರಮದ ಸಂಭವನೀಯ ಪರಿಣಾಮವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಸಂಕಟಕ್ಕೀಡಾದ ಒಬ್ಬ ಕ್ರೈಸ್ತನು ಇದನ್ನು ತಾನಾಗಿಯೇ ಮಾಡಲು ಸಾಧ್ಯವಾಗದಿದ್ದಲ್ಲಿ, ಬಹುಶಃ ಒಬ್ಬ ಪ್ರೌಢ, ಆಪ್ತ ಸ್ನೇಹಿತನು ಅಥವಾ ಸಂಬಂಧಿಯು ಸಹಾಯ ಮಾಡಲು ಶಕ್ತನಾಗಿರಬಹುದು. ಪ್ರತ್ಯೇಕವಾದೊಂದು ಚಿಕಿತ್ಸಾಕ್ರಮದ ವಿವೇಕದ ವಿಷಯವಾಗಿ ಅನಿಶ್ಚಿತನಾಗಿರುವ ಕ್ರೈಸ್ತನೊಬ್ಬನು, ಸಭೆಯಲ್ಲಿರುವ ಹಿರಿಯರೊಂದಿಗೆ ಮಾತಾಡುವುದನ್ನು ಸಹಾಯಕಾರಿಯಾಗಿ ಕಂಡುಕೊಳ್ಳಬಹುದು—ಆದರೂ ಅಂತಿಮ ನಿರ್ಣಯವು ಅವನ ಸ್ವಂತ ನಿರ್ಣಯ (ಅಥವಾ ಅವನ ಹೆತ್ತವರದ್ದು, ಅಥವಾ ಪತಿಪತ್ನಿಯರ ಕೂಡುನಿರ್ಣಯ)ವಾಗಿದೆ.d

ಕಷ್ಟಾನುಭವವನ್ನು ಕಡಮೆಮಾಡಲು ಗತಕಾಲಗಳಿಗಿಂತಲೂ ಹೆಚ್ಚಿನ ವಿಷಯವನ್ನು ಇಂದು ವಿಜ್ಞಾನಕ್ಕೆ ಮಾಡಸಾಧ್ಯವಿದೆ. ಆದರೂ, ಪ್ರಸ್ತುತದಲ್ಲಿ ವಾಸಿಮಾಡಲಾಗದ ಮತ್ತು ವಿಷಯಗಳ ಈ ವ್ಯವಸ್ಥೆಯ ಆದ್ಯಂತ ತಾಳಿಕೊಳ್ಳಲ್ಪಡಬೇಕಾದ ಅನೇಕ ರೋಗಗಳು—ಶಾರೀರಿಕ ಹಾಗೂ ಮಾನಸಿಕ ಎರಡೂ—ಇವೆ. (ಯಾಕೋಬ 5:11) ಈ ನಡುವೆ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” ಹಿರಿಯರು, ಮತ್ತು ಸಭೆಯಲ್ಲಿರುವ ಇತರ ಎಲ್ಲರೂ ಅಸ್ವಸ್ಥರಿಗೆ ಸಹಾನುಭೂತಿ ಹಾಗೂ ಬೆಂಬಲದ ಹಸ್ತವನ್ನು ಚಾಚುತ್ತಾರೆ. ಮತ್ತು ಅನಾರೋಗ್ಯವು ಇನ್ನಿಲ್ಲದಿರುವ ಆ ಮಹಿಮಾಭರಿತ ಸಮಯದ ತನಕ ತಾಳಿಕೊಳ್ಳುವಂತೆ ಸ್ವತಃ ಯೆಹೋವನೇ ಅವರನ್ನು ಬಲಪಡಿಸುತ್ತಾನೆ.—ಮತ್ತಾಯ 24:45; ಕೀರ್ತನೆ 41:1-3; ಯೆಶಾಯ 33:24.

[ಅಧ್ಯಯನ ಪ್ರಶ್ನೆಗಳು]

a  ಕೆಲವೊಮ್ಮೆ ವ್ಯಕ್ತಿಯೊಬ್ಬನು, ಬಹುಶಃ ಉಚ್ಚ ಮಟ್ಟದ ಉದ್ಯೋಗಕ್ಕಾಗಿ ಪರಿಗಣಿಸಲ್ಪಡುವಾಗ, ಮನೋರೋಗ ಮೌಲ್ಯಮಾಪನಕ್ಕೆ ಒಳಗಾಗುವಂತೆ ಕೇಳಿಕೊಳ್ಳಲ್ಪಡಬಹುದು. ವ್ಯಕ್ತಿಯೊಬ್ಬನು ಇಂತಹ ಒಂದು ಮೌಲ್ಯಮಾಪನಕ್ಕೆ ಸಮ್ಮತಿಸುತ್ತಾನೊ ಇಲ್ಲವೊ ಎಂಬುದು ಒಂದು ವೈಯಕ್ತಿಕ ನಿರ್ಣಯವಾಗಿದೆ, ಆದರೆ ಒಂದು ಮನೋರೋಗ ಮೌಲ್ಯಮಾಪನವು, ಮನೋರೋಗ ಚಿಕಿತ್ಸೆಯಾಗಿರುವುದಿಲ್ಲ ಎಂಬುದನ್ನು ಗಮನಿಸತಕ್ಕದ್ದು.

b  ದ ವಾಚ್‌ಟವರ್‌ ಪತ್ರಿಕೆಯ ಮಾರ್ಚ್‌ 1, 1990ರ ಸಂಚಿಕೆಯಲ್ಲಿ, “ಖಿನ್ನತೆಯ ವಿರುದ್ಧವಿರುವ ಹೋರಾಟವನ್ನು ಜಯಿಸುವುದು,” ಎಂಬ ವಿಷಯವನ್ನು ನೋಡಿರಿ.

c  ಕೆಲವು ಮಾನಸಿಕ ಅಸ್ವಸ್ಥತೆಗಳು ಸರಿಯಾದ ಔಷಧಗಳಿಗೆ ಚೆನ್ನಾಗಿ ಪ್ರತಿಕ್ರಿಯಿಸುವಂತೆ ತೋರುತ್ತವೆ. ಆದರೆ ಈ ಔಷಧಗಳು ಎಚ್ಚರಿಕೆಯಿಂದ, ಕುಶಲ ಹಾಗೂ ಅನುಭವಸ್ಥ ವೈದ್ಯಕೀಯ ವೈದ್ಯರ ಮತ್ತು ಮನೋಶಾಸ್ತ್ರಜ್ಞರ ಮಾರ್ಗದರ್ಶನೆಯ ಕೆಳಗೆ ಉಪಯೋಗಿಸಲ್ಪಡಬೇಕು, ಏಕೆಂದರೆ ಔಷಧದ ಪರಿಮಾಣಗಳು ಸರಿಯಾಗಿ ಹೊಂದಿಸಲ್ಪಡದಿರುವಲ್ಲಿ, ತೀಕ್ಷ್ಣವಾದ ಪಕ್ಕ ಪರಿಣಾಮಗಳಿರಸಾಧ್ಯವಿದೆ.

d  ದ ವಾಚ್‌ಟವರ್‌ ಪತ್ರಿಕೆಯ ಅಕ್ಟೋಬರ್‌ 15, 1988ರ ಸಂಚಿಕೆಯಲ್ಲಿ, “ಮಾನಸಿಕ ಸಂಕಟ—ಅದು ಒಬ್ಬ ಕ್ರೈಸ್ತನನ್ನು ಬಾಧಿಸುವಾಗ” ಎಂಬ ಲೇಖನವನ್ನು ನೋಡಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ