ಬೈಬಲಿನ ದೃಷ್ಟಿಕೋನ
ಬೈಬಲು ಯೋಚನಾ ಸ್ವಾತಂತ್ರ್ಯವನ್ನು ನಿರುತ್ತೇಜಿಸುತ್ತದೊ?
ಜರ್ಮನ್ ಅಧಿಕಾರಿಗಳಿಂದ ಬೆಂಕಿಯೊಳಗೆ ಎಸೆಯಲ್ಪಟ್ಟ ಅಮೂಲ್ಯ ಪುಸ್ತಕಗಳನ್ನು ಬಯಲುರಿಯು ಕಬಳಿಸಿದಂತೆ ಅದರ ಜ್ವಾಲೆಗಳು ಆಕಾಶದ ಕಡೆಗೆ ಹಾರುತ್ತವೆ. ನಾಜಿ ಜರ್ಮನಿಯ ಒಂದು ದೃಶ್ಯವೊ? ಹೌದು, ಆದರೆ ಇದು 1199ರ ವರ್ಷದಿಂದ ಒಂದು ದೃಶ್ಯವಾಗಿರಲೂಬಹುದು, ಆಗ ರೋಮನ್ ಕ್ಯಾತೊಲಿಕ್ ಪ್ರಧಾನ ಬಿಷಪರು ಜರ್ಮನ್ ಭಾಷೆಯ ಎಲ್ಲಾ ಬೈಬಲುಗಳನ್ನು ಸುಟ್ಟುಬಿಡುವಂತೆ ಆಜ್ಞಾಪಿಸಿದರು.
ವಾಸ್ತವವಾಗಿ, ಪುಸ್ತಕ ಸುಡುವಿಕೆಯ ಪ್ರಸಂಗಗಳು—ಯೋಚನಾ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯದ ನಿಗ್ರಹಿಸುವಿಕೆಯ ಒಂದು ಸಾರ್ವತ್ರಿಕ ಸಂಕೇತ—ಅನೇಕ ದೇಶಗಳಲ್ಲಿ ಮತ್ತು ಅನೇಕ ಶತಮಾನಗಳಲ್ಲಿ ಸಂಭವಿಸಿವೆ. ಅನೇಕವೇಳೆ, ಸಾಮಾನ್ಯ ಮನುಷ್ಯನ ಮೇಲೆ ಯೋಚನಾ ಸ್ವಾತಂತ್ರವು ಹಾಕುವ ಪರಿಣಾಮದ ಕುರಿತು ಭಯಪಟ್ಟ ಧಾರ್ಮಿಕ ಮುಖಂಡರಿಂದ ಅದು ಪ್ರೇರಿಸಲ್ಪಟ್ಟಿದೆ.
ಬಹಿರಂಗವಾದ ಪ್ರಜ್ಞಾಶಾಲಿ ವಿಚಾರಣೆಯ ವಿರುದ್ಧ ಬೈಬಲು ನಿಷ್ಠುರವಾದ ನಿರ್ಬಂಧಗಳನ್ನು ನಿಯೋಗಿಸುತ್ತದೆಂದು ಇಂದು ಅನೇಕರು ಊಹಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆದರೆ ಅದು ನಿಜವಾಗಿ ಹಾಗೆ ಮಾಡುತ್ತದೊ? ಯೋಚನಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳನ್ನು ಬೈಬಲು ಉತ್ತೇಜಿಸುತ್ತದೊ?
‘ಯೆಹೋವನನ್ನು ನಿನ್ನ ಪೂರ್ಣ ಮನಸ್ಸಿನಿಂದ ಪ್ರೀತಿಸು’
ಬೈಬಲು ಮನಸ್ಸಿನ ಉಪಯೋಗವನ್ನು ನಿರುತ್ತೇಜಿಸುವುದಿಲ್ಲ. ವಾಸ್ತವವಾಗಿ, ನಾವು ಪ್ರತಿಯೊಬ್ಬರು ‘ನಮ್ಮ ಪೂರ್ಣ ಮನಸ್ಸಿನಿಂದ ಯೆಹೋವನನ್ನು ಪ್ರೀತಿಸು’ವಂತೆ ಯೇಸು ಉತ್ತೇಜಿಸಿದ್ದಾನೆ. (ಮಾರ್ಕ 12:30, NW) ಪ್ರಚಲಿತ ಘಟನೆಗಳು (ಲೂಕ 13:1-5), ಜೀವವಿಜ್ಞಾನ ಶಾಸ್ತ್ರ (ಮತ್ತಾಯ 6:26, 28; ಮಾರ್ಕ 7:18, 19), ವ್ಯವಸಾಯ (ಮತ್ತಾಯ 13:31, 32), ಮತ್ತು ಮಾನವ ಸ್ವಭಾವದ (ಮತ್ತಾಯ 5:28; 6:22-24) ಕುರಿತು ಆತನಿಗೆ ಆಳವಾದ ಆಸಕ್ತಿಯಿತ್ತು ಎಂಬುದನ್ನು ಆತನ ಶುಶ್ರೂಷೆಯು ತೋರಿಸುತ್ತದೆ. ದೇವರ ವಾಕ್ಯದಲ್ಲಿನ ನಿಯಮಗಳನ್ನು ಹಾಗೂ ಅದರ ಹಿನ್ನೆಲೆಯನ್ನು ಮತ್ತು ತನ್ನ ಜನರ ಅಭಿಪ್ರಾಯಗಳನ್ನು ಆತನು ಸ್ಪಷ್ಟವಾಗಿಗಿ ತಿಳಿದಿದ್ದನು ಮತ್ತು ಆದುದರಿಂದ ಬೈಬಲನ್ನು ಮತ್ತು ತನ್ನ ಕೇಳುಗರನ್ನು ಹೇಗೆ ಒಟ್ಟುಗೂಡಿಸುವುದು ಎಂಬುದರ ಕುರಿತು ಆತನು ಜಾಗರೂಕತೆಯಿಂದ ಆಲೋಚಿಸಿದನು ಎಂಬುದನ್ನು ಆತನ ದೃಷ್ಟಾಂತಗಳು ಸೂಚಿಸುತ್ತವೆ.
ಎಲ್ಲಾ ಕ್ರೈಸ್ತರು ದೇವರಿಗೆ ತಮ್ಮ ಸೇವೆಯನ್ನು ತಮ್ಮ “ವಿವೇಚನಾ ಶಕ್ತಿ”ಯಿಂದ ಸಲ್ಲಿಸುವಂತೆ ಪೌಲನು ಬೇಡಿಕೊಂಡನು. (ರೋಮಾಪುರ 12:1) ‘ಪ್ರೇರಿತ ಅಭಿವ್ಯಕ್ತಿಗಳು ಅವರ ವಿವೇಚನೆಯನ್ನು ಕಲಕುವುದರಿಂದ’ ತಪ್ಪುದಾರಿಗೆ ಎಳೆಯಲ್ಪಡುವಂತೆ ಬಿಟ್ಟುಕೊಡಬಾರದೆಂದು ಅವನು ಥೆಸಲೊನೀಕದವರನ್ನು ಪ್ರೋತ್ಸಾಹಿಸಿದನು. (2 ಥೆಸಲೊನೀಕ 2:2, NW) ಗ್ರೀಕ್ ಮತ್ತು ಕ್ರೇತದ ಕಾವ್ಯ (ಅ. ಕೃತ್ಯಗಳು 17:28; ತೀತ 1:12) ಹಾಗೂ ಮಿಲಿಟರಿ ಉಪಕರಣಗಳ ಮತ್ತು ಕಾರ್ಯವಿಧಾನಗಳ (ಎಫೆಸ 6:14-17; 2 ಕೊರಿಂಥ 2:14-16) ಕುರಿತು ಸ್ವಲ್ಪ ಜ್ಞಾನವು ಆತನಿಗಿತ್ತು. ಮತ್ತು ಸ್ಥಳಿಕ ಸಂಪ್ರದಾಯಗಳ ಪರಿಶೀಲಕನು ಆತನಾಗಿದ್ದನು.—ಅ. ಕೃತ್ಯಗಳು 17:22, 23.
ಯೇಸು ಮತ್ತು ಪೌಲರು ಅಷ್ಟೊಂದು ಯೋಚನಾ ಸ್ವಾತಂತ್ರ್ಯವನ್ನು ಅನುಭವಿಸಿದರೂ, ಒಳ್ಳೇದು ಮತ್ತು ಕೆಟ್ಟದರ ಮೇಲೆ ತಾವು ಏಕಮಾತ್ರ ಅಧಿಕಾರವಿದ್ದವರಂತೆ ಅವರು ತಮ್ಮನ್ನು ವೀಕ್ಷಿಸಿಕೊಳ್ಳಲಿಲ್ಲ. ತನ್ನ ಸ್ವಂತ ವಿವೇಚನಾ ಶಕ್ತಿಯ ಪರವಾಗಿ ಬೈಬಲನ್ನು ತಿರಸ್ಕರಿಸುವ ಬದಲಾಗಿ, ಯೇಸು ಶಾಸ್ತ್ರವಚನಗಳಿಂದ ಪುನಃ ಪುನಃ ಉದ್ಧರಿಸಿದನು. ಆತನ ಕುರಿತಾದ ದೇವರ ಚಿತ್ತವಾದ ಯಜ್ಞಾರ್ಪಿತ ಮರಣದಿಂದ ಬೇರೆಯಾದ ಒಂದು ಜೀವನಪಥವನ್ನು ಪರಿಗಣಿಸುವಂತೆ ಪೇತ್ರನು ಯೇಸುವನ್ನು ಒತ್ತಾಯಿಸಿದಾಗ, ಆತನು ಕೊಟ್ಟ ಶೀಘ್ರ ಮತ್ತು ಗಂಭೀರವಾದ ಉತ್ತರವು ತೋರಿಸುತ್ತದೇನಂದರೆ ಅಂತಹ ಆಲೋಚನೆಯನ್ನು ಆಲೋಚಿಸಲಿಕ್ಕೂ ಅವನು ಸಿದ್ಧನಾಗಿರಲಿಲ್ಲ. (ಮತ್ತಾಯ 16:22, 23) ತದ್ರೀತಿಯಲ್ಲಿ ಪೌಲನು ಕೊರಿಂಥದವರಿಗೆ ಹೇಳಿದ್ದು: “ನಾನಂತೂ ದೇವರು ಹೇಳಿಕೊಟ್ಟ ಮಾತನ್ನು ತಿಳಿಸುವವನಾಗಿ ನಿಮ್ಮ ಬಳಿಗೆ ಬಂದಾಗ ವಾಕ್ಜಾತುರ್ಯದಿಂದಾಗಲಿ ಜ್ಞಾನಾಡಂಬರದಿಂದಾಗಲಿ ಬರಲಿಲ್ಲ.” (1 ಕೊರಿಂಥ 2:1, ದ ಜೆರೂಸಲೇಮ್ ಬೈಬಲ್) ಯೇಸುವಿನಂತೆ, ಆತನ ವಿವೇಚನೆಯು ಶಾಸ್ತ್ರವಚನಗಳ ಮೇಲೆ ಬಲವಾಗಿ ಆಧಾರಿಸಿತ್ತು.—ಅ. ಕೃತ್ಯಗಳು 17:2.
ಒಬ್ಬನ ಮಾನಸಿಕ ಸಾಮರ್ಥ್ಯಗಳ ಸಂಪೂರ್ಣ ಉಪಯೋಗವನ್ನು ಬೈಬಲು ಪ್ರೋತ್ಸಾಹಿಸುತ್ತದೆ, ಆದರೆ ಸ್ವೇಚ್ಛೆಯಿಂದಲ್ಲ. ಆದಾಗ್ಯೂ, ನಮ್ಮ ಆಲೋಚನೆಗಳನ್ನು ಯೆಹೋವನ ಯೋಚನೆಗಳೊಂದಿಗೆ ಹೊಂದಿಕೆಯಲ್ಲಿ ಇಡುವುದರ ಜವಾಬ್ದಾರಿಯ ಹೊರೆಯನ್ನು ಸಭೆಯ ಮೇಲಲ್ಲ, ವೈಯಕ್ತಿಕ ಕ್ರೈಸ್ತರ ಮೇಲೆ ಇಡಲಾಗುತ್ತದೆ. ಹೀಗೆ, ಎಫೆಸದ ಅನೇಕ ಜನರು ಪ್ರೇತವ್ಯವಹಾರದ ತಮ್ಮ ಪದ್ಧತಿಯನ್ನು ಸಾರ್ವಜನಿಕವಾಗಿ ಪರಿತ್ಯಜಿಸಿ ಕ್ರೈಸ್ತರಾಗಿ ಪರಿಣಮಿಸಿದಾಗ, ಅವರ ಪುಸ್ತಕಗಳನ್ನು ಸುಡುವ ಜವಾಬ್ದಾರಿಯನ್ನು ಪೌಲನು ಸ್ವತಃ ತೆಗೆದುಕೊಳ್ಳಲಿಲ್ಲ, ಆದರೆ “ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು.” (ಅ. ಕೃತ್ಯಗಳು 19:19, JB) ತಮ್ಮ ಸ್ವಂತ ಪುಸ್ತಕಗಳನ್ನು ಸುಡುವ ಆವಶ್ಯಕತೆಯ ಭಾವನೆಯು ಈ ಕ್ರೈಸ್ತರಿಗೆ ಯಾಕೆ ಬಂತು?
ರಕ್ಷಣೆಯ ಪ್ರಥಮ ಸಾಲು
ಈ ದೃಷ್ಟಾಂತವನ್ನು ಪರಿಗಣಿಸಿ. ಒಂದು ಯಶಸ್ವಿಯಾದ ಮಿಲಿಟರಿ ಆಕ್ರಮಣ ನಿರೋಧದಲ್ಲಿ ಅನೇಕ ವೇಳೆ ರಕ್ಷಣಾತ್ಮಕ ಆಳುವೇರಿಗಳ ಅನೇಕ ರಕ್ಷಣಾಸಾಲುಗಳು ಸೇರಿರುತ್ತವೆ. ಇವುಗಳಲ್ಲಿ ಯಾವುದಾದರೂ ಒಂದು ಅಪ್ರಾಮುಖ್ಯವಾಗಿದೆಯೆಂದು ಯಾವ ಯಶಸ್ವಿ ಸೇನಾಪತಿಯೂ ಭಾವಿಸುವುದಿಲ್ಲ. ಒಬ್ಬ ಕ್ರೈಸ್ತನ ಪಾಪದ ವಿರುದ್ಧ ಹೋರಾಟದಲ್ಲಿ ತದ್ರೀತಿಯ ಅನೇಕ ರಕ್ಷಣಾಸಾಲುಗಳು ಇವೆ.
ಯಾಕೋಬ 1:14, 15 ಹೇಳುವುದೇನಂದರೆ “ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ.” ಮನಸ್ಸಿನಲ್ಲಿ ಕೆಟ್ಟ ಅಪೇಕ್ಷೆಯೊಂದರ ಬೆಳೆಸುವಿಕೆಯೇ ಪಾಪದ ಕಡೆಗಿನ ಪ್ರಥಮ ಹೆಜ್ಜೆಯಾಗಿದೆ. ಹೀಗೆ, ಅಪೇಕ್ಷೆಯನ್ನು ಬೆಳೆಸುವುದರಿಂದ ದೂರವಿರುವುದು—ಒಬ್ಬನ ಆಲೋಚನೆಯನ್ನು ನಿಯಂತ್ರಿಸುವುದು—ರಕ್ಷಣೆಯ ಪ್ರಥಮ ಸಾಲಾಗಿದೆ.
ಆಲೋಚನೆಗಳ ಮತ್ತು ಕ್ರಿಯೆಗಳ ಮಧ್ಯೆ ಇರುವ ಈ ಸಂಬಂಧದ ಕಾರಣದಿಂದ ಬೈಬಲು ನಮ್ಮನ್ನು ಎಚ್ಚರಿಸುವುದು: “ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ.” (ಕೊಲೊಸ್ಸೆ 3:2) ಅನೈತಿಕತೆ, ಪ್ರೇತವ್ಯವಹಾರವಾದ, ಅಥವಾ ಧರ್ಮಭ್ರಷ್ಟತೆಯ ಮೇಲೆ ಮಾನಸಿಕವಾಗಿ ಲಕ್ಷ್ಯವಿಡಲು ಕ್ರೈಸ್ತರು ನಿರಾಕರಿಸುವಾಗ, ಈ ಕಲ್ಪನೆಗಳು ಬೈಬಲ್ ಸತ್ಯತೆಗಳಿಗಿಂತ ಉತ್ಕೃಷ್ಟವಾಗಿ ಪರಿಣಮಿಸಬಹುದೆಂದು ಅವರು ಭಯಪಡುವ ಕಾರಣದಿಂದಲ್ಲ, ಆದರೆ ಒಂದು ಪಾಪಪೂರ್ಣ ಜೀವನಪಥಕ್ಕೆ ಅವರನ್ನು ಸೆಳೆಯಬಹುದಾದ ಯಾವುದೇ ವಿಷಯವನ್ನು ತೊರೆಯಲು ಅವರು ಅಪೇಕ್ಷಿಸುವುದರಿಂದ ಈ ನಿರ್ಧಾರವನ್ನು ಮಾಡುತ್ತಾರೆ.
‘ಸಮಸ್ತ ವಿಷಯಗಳು ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅವೆ’
ಯೆಹೋವನಿಗಾಗಿ ನಮ್ಮ ಪ್ರೀತಿ ಮತ್ತು ನಮ್ಮ ಯೋಚನೆಗಳನ್ನು ತಿಳಿಯಲಿಕ್ಕಾಗಿರುವ ಆತನ ಸಾಮರ್ಥ್ಯಕ್ಕಾಗಿ ಗೌರವವು, ನಾವು ಯಾಕೆ ನಮ್ಮ ಆಲೋಚನೆಗಳನ್ನು ನಿಯಂತ್ರಿಸಬೇಕು ಎಂಬುದಕ್ಕೆ ಇನ್ನೊಂದು ಕಾರಣವಾಗಿದೆ. ನಿರ್ದಿಷ್ಟವಾಗಿ ಧೂಳು ಮತ್ತು ಕೊಳೆಗೆ ಸೂಕ್ಷ್ಮಗ್ರಾಹಿಯಾಗಿರುವ ಒಬ್ಬ ಮೆಚ್ಚಿನ ಸ್ನೇಹಿತ ಅಥವಾ ಸಮೀಪ ಸಂಬಂಧಿಯೊಬ್ಬನು ನಿಮಗಿದ್ದಾನೆಂದು ಊಹಿಸಿಕೊಳ್ಳಿ. ನಿಮ್ಮ ಮನೆಗೆ ಅಗತ್ಯವಿರುವ ಹೆಚ್ಚಿನ ಸ್ವಚ್ಛತೆಯನ್ನು ಮಾಡಲು ಇಷ್ಟಪಡದ ಕಾರಣದಿಂದ, ನಿಮ್ಮ ಸ್ನೇಹಿತನನ್ನು ನಿಮ್ಮ ಮನೆಯೊಳಗೆ ಆಮಂತ್ರಿಸುವುದನ್ನು ನೀವು ನಿಲ್ಲಿಸುವಿರೊ? ವಸ್ತುಗಳನ್ನು ಸ್ವಚ್ಛಗೊಳಿಸಲು ಅಗತ್ಯವಿರುವ ಹೆಚ್ಚಿನ ಪ್ರಯತ್ನವನ್ನು ನೀವು ಮಾಡುವಂತೆ ಪ್ರೀತಿಯು ನಿಮ್ಮನ್ನು ಪ್ರೇರೇಪಿಸುವುದಿಲ್ಲವೊ? ನಮ್ಮ ಆಂತರಿಕ ಯೋಚನೆಗಳಿಗೆ ಯೆಹೋವನ ಸಂವೇದನಾಶೀಲತೆಯು ಕೀರ್ತನೆ 44:21, NWರಲ್ಲಿ ತೋರಿಸಲ್ಪಟ್ಟಿದೆ: “ಆತನು ಹೃದಯದ ರಹಸ್ಯಗಳನ್ನು ಬಲ್ಲವನಾಗಿದ್ದಾನೆ.” ಈ ಯೋಚನೆಗಳಿಗಾಗಿ ನಾವು ಹೊಣೆಗಾರರಾಗಿದ್ದೇವೆಂದು ಪೌಲನು ಹೇಳಿದನು: “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ. ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.”—ಇಬ್ರಿಯ 4:13; ಕೀರ್ತನೆ 10:4; ಜ್ಞಾನೋಕ್ತಿ 6:16, 18.
ತನ್ನ ಆಲೋಚನೆಗಳಿಗಾಗಿ ದೇವರಿಗೆ ಮಾನವನ ಜವಾಬ್ದಾರಿಯನ್ನು ಯೋಬನು ಅಂಗೀಕರಿಸಿದನು. “ಯೋಬನು ತನ್ನ ಮಕ್ಕಳು ಒಂದು ವೇಳೆ ಹೃದಯದಲ್ಲಿ ದೇವರನ್ನು ದೂಷಿಸಿ ಪಾಪಮಾಡಿರಬಹುದು ಎಂದು . . . ಹೋಮಗಳನ್ನು ಅರ್ಪಿಸುತ್ತಿದ್ದನು.” (ಯೋಬ 1:5) ಕೆಟ್ಟ ಮಾರ್ಗದ ಇಚ್ಛಾಪೂರ್ಣವಾದ ಅವಲೋಕನವು ಸ್ವತಃ ತನ್ನಲ್ಲಿ ಒಂದು ಪಾಪದೋಪಾದಿ ಯೆಹೋವನಿಂದ ವೀಕ್ಷಿಸಲ್ಪಡಬಹುದು.—ಹೋಲಿಸಿ ವಿಮೋಚನಕಾಂಡ 20:17.
ನಿಜವಾದ ಯೋಚನಾ ಸ್ವಾತಂತ್ರ್ಯ
“ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿ”ಯುವ ಒಂದು ಗುರಿಯನ್ನು ಇಡುವಂತೆ ಬೈಬಲು ಪ್ರತಿಯೊಬ್ಬ ಕ್ರೈಸ್ತನನ್ನು ಉತ್ತೇಜಿಸುತ್ತದೆ. (2 ಕೊರಿಂಥ 10:5) ಧಾರ್ಮಿಕ ಮುಖಂಡರಿಂದ ಹೇರಲ್ಪಡುವ ನಿರ್ಬಂಧಗಳಿಂದ ಅಲ್ಲ, ಆದರೆ ವೈಯಕ್ತಿಕವಾಗಿ ಆತ್ಮನಿಯಂತ್ರಣವನ್ನು ಅಭ್ಯಸಿಸುವ ಮೂಲಕ ಮತ್ತು ಯೆಹೋವನ ಮತ್ತು ಆತನ ಮೂಲಸೂತ್ರಗಳ ಕುರಿತಾದ ಅವನ ತಿಳಿವಳಿಕೆ ಹಾಗೂ ಪ್ರೀತಿಯ ಮೂಲಕ ಇದನ್ನು ಸಾಧಿಸಸಾಧ್ಯವಿದೆ. ಈ ಗುರಿಯ ಸಾಧನೆಯಿಂದ ನಿಜವಾದ ಯೋಚನಾ ಸ್ವಾತಂತ್ರ್ಯವು ಬರುತ್ತದೆ, ಇದು ದಿವ್ಯ ಮಟ್ಟಗಳಿಂದ ಮಾತ್ರ ನಿಯಂತ್ರಿಸಲ್ಪಟ್ಟು, ನಮ್ಮ ಆಲೋಚನೆಗಳಲ್ಲಿ ಸಹ ನಾವು ಯೆಹೋವನಿಗೆ ಮೆಚ್ಚಿಕೆಯವರಾಗಿದ್ದೇವೆ ಎಂಬುದನ್ನು ತಿಳಿಯುವ ಸಂತೋಷದಿಂದ ವರ್ಧಿಸಲ್ಪಡುತ್ತದೆ. (g94 6/8)
[ಪುಟ 20 ರಲ್ಲಿರುವ ಚಿತ್ರ ಕೃಪೆ]
From the book Bildersaal deutscher Geschichte