ಒಬ್ಬರನ್ನೊಬ್ಬರು ಭಕ್ತಿವೃದ್ಧಿಪಡಿಸುತ್ತಾ ಇರ್ರಿ
“ನಿಮ್ಮ ಬಾಯೊಳಗಿಂದ ಯಾವ ಕೆಟ್ಟ (ದುರ್ನಾತದ, NW ) ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ . . . ಆಡಿರಿ.”—ಎಫೆಸ 4:29.
1, 2. (ಎ) ಮಾತುಕತೆಯು ಒಂದು ಅದ್ಭುತವೆಂದು ಯಾಕೆ ಯೋಗ್ಯವಾಗಿ ಹೇಳಬಹುದು? (ಬಿ) ನಮ್ಮ ನಾಲಗೆಯನ್ನು ನಾವು ಉಪಯೋಗಿಸುವುದು ಹೇಗೆ ಎಂಬುದರ ಕುರಿತು ಯಾವ ಎಚ್ಚರಿಕೆಯು ಸೂಕ್ತವಾಗಿದೆ?
“ಮಾತು ಸ್ನೇಹಿತರನ್ನು, ಕುಟುಂಬಗಳನ್ನು ಮತ್ತು ಸಮಾಜಗಳನ್ನು ಒಂದಾಗಿ ಕಟ್ಟುವ ಮೋಡಿಯ ದಾರವಾಗಿದೆ . . . ಮಾನವ ಮನಸ್ಸು ಮತ್ತು [ನಾಲಗೆಯ] ಸ್ನಾಯುಗಳ ಜೋಡಿಗಳ ಸಹಕಾರದ ಸಂಕೋಚನಗಳ ಮೂಲಕ, ಪ್ರೀತಿ, ಈರ್ಷ್ಯೆ, ಗೌರವ—ವಾಸ್ತವವಾಗಿ ಯಾವುದೇ ಮಾನವ ಭಾವನೆಗಳನ್ನು ಪ್ರಚೋದಿಸುವ ಶಬ್ದಗಳನ್ನು ನಾವು ಮಾಡುತ್ತೇವೆ.”—ಹಿಯರಿಂಗ್, ಟೇಸ್ಟ್ ಆ್ಯಂಡ್ ಸ್ಮೆಲ್.
2 ನಮ್ಮ ನಾಲಗೆಯು ನುಂಗುವ ಯಾ ರುಚಿನೋಡುವ ಅಂಗವಾಗಿರುವದಕ್ಕಿಂತಲೂ ಎಷ್ಟೋ ಹೆಚ್ಚಿನದ್ದಾಗಿದೆ; ನಾವೇನನ್ನು ಯೋಚಿಸುತ್ತೇವೊ ಮತ್ತು ಭಾವಿಸುತ್ತೇವೊ ಅದನ್ನು ಹಂಚಿಕೊಳ್ಳಲು ನಮಗಿರುವ ಸಾಮರ್ಥ್ಯದ ಒಂದು ಭಾಗವಾಗಿದೆ. “ನಾಲಿಗೆಯು ಕೂಡ ಚಿಕ್ಕ ಅಂಗವಾಗಿದೆ,” ಎಂದು ಬರೆಯುತ್ತಾನೆ ಯಾಕೋಬನು. “ನಾಲಿಗೆಯಿಂದ ತಂದೆಯಾದ ಕರ್ತನನ್ನು ಕೊಂಡಾಡುತ್ತೇವೆ; ಅದರಿಂದಲೆ ದೇವರ ಹೋಲಿಕೆಗೆ ಸರಿಯಾಗಿ ಉಂಟುಮಾಡಲ್ಪಟ್ಟ ಮನುಷ್ಯರನ್ನು ಶಪಿಸುತ್ತೇವೆ.” (ಯಾಕೋಬ 3:5, 9) ಹೌದು, ಯೆಹೋವನನ್ನು ಸ್ತುತಿಸುವಂಥ ಉತ್ತಮ ರೀತಿಗಳಲ್ಲಿ ನಮ್ಮ ನಾಲಗೆಯನ್ನು ನಾವು ಉಪಯೋಗಿಸ ಸಾಧ್ಯವಿದೆ. ಆದರೆ ಅಪರಿಪೂರ್ಣರಾಗಿರುವದರಿಂದ, ನಾವು ಸುಲಭವಾಗಿಯೇ ನಮ್ಮ ನಾಲಗೆಗಳನ್ನು ಹಾನಿಕರ ಯಾ ನಕಾರಾತ್ಮಕ ಸಂಗತಿಗಳನ್ನು ಮಾತಾಡಲು ಬಳಸಬಲ್ಲೆವು. ಯಾಕೋಬನು ಬರೆದದ್ದು: “ನನ್ನ ಸಹೋದರರೇ, ಹೀಗಿರುವದು ಯೋಗ್ಯವಲ್ಲ.”—ಯಾಕೋಬ 3:10.
3. ನಮ್ಮ ಮಾತುಕತೆಯ ಯಾವ ಎರಡು ರೂಪಗಳಿಗೆ ನಾವು ಗಮನವನ್ನೀಯತಕ್ಕದ್ದು?
3 ಯಾವನೇ ಮಾನವನು ತನ್ನ ನಾಲಗೆಯನ್ನು ಪರಿಪೂರ್ಣವಾಗಿ ಹತೋಟಿಯಲ್ಲಿಡಶಕನ್ತಲವ್ಲಾದರೂ, ಪ್ರಗತಿಯನ್ನು ಮಾಡಲು ನಾವು ಖಂಡಿತವಾಗಿಯೂ ಹೆಣಗಾಡಬೇಕು. ಅಪೊಸ್ತಲ ಪೌಲನು ನಮಗೆ ಬುದ್ಧಿವಾದವನ್ನೀಯುವುದು: “ನಿಮ್ಮ ಬಾಯೊಳಗಿಂದ ಕೆಟ್ಟ (ದುರ್ನಾತದ, NW ) ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.” (ಎಫೆಸ 4:29) ಯಾವುದನ್ನು ನಾವು ವರ್ಜಿಸಲು ಹೆಣಗಬೇಕು ಮತ್ತು ಯಾವುದನ್ನು ಮಾಡಲು ನಾವು ಪ್ರಯತ್ನಿಸತಕ್ಕದ್ದು ಎಂಬ ಎರಡು ರೂಪಗಳು ಈ ಆಜ್ಞೆಯಲ್ಲಿ ಇರುವದನ್ನು ಅವಲೋಕಿಸಿರಿ. ಇವೆರಡನ್ನೂ ನಾವೀಗ ಗಮನಿಸೋಣ.
ಕೆಟ್ಟಮಾತನ್ನು ವರ್ಜಿಸುವದು
4, 5. (ಎ) ಕೆಟ್ಟ ಭಾಷೆಯ ಕುರಿತಾಗಿ ಕ್ರೈಸ್ತರಿಗೆ ಯಾವ ಹೋರಾಟವಿದೆ? (ಬಿ) “ಕೆಟ್ಟ ಮಾತು” ಎಂಬ ಪದಪುಂಜಕ್ಕೆ ಯಾವ ಚಿತ್ರಣವು ಹೊಂದಿಕೆಯಾಗಬಲ್ಲದು?
4 ಎಫೆಸ 4:29 ಮೊದಲಾಗಿ ನಮಗೆ ಪ್ರೇರೇಪಿಸುವದು: “ನಿಮ್ಮ ಬಾಯೊಳಗಿಂದ ಕೆಟ್ಟ (ದುರ್ನಾತದ, NW ) ಮಾತೂ ಹೊರಡಬಾರದು.” ಅದೇನೂ ಅಷ್ಟು ಸುಲಭವಾಗಿರಲಿಕ್ಕಿಲ್ಲ. ಒಂದು ಕಾರಣವೇನಂದರೆ ಲೋಕದಲ್ಲಿ ಅಶ್ಲೀಲತೆಯು ನಮ್ಮ ಸುತ್ತಲೂ ಅಷ್ಟು ಸಾಮಾನ್ಯವಾಗಿದೆ. ಅನೇಕ ಕ್ರೈಸ್ತ ಯುವಕರು ಪ್ರತಿ ದಿನ ಶಪಿಸುವಿಕೆಯನ್ನು ಕೇಳುತ್ತಾರೆ, ಯಾಕಂದರೆ ಅದು ಒತ್ತರವನ್ನು ಕೂಡಿಸುತ್ತದೆ ಯಾ ಅವರನ್ನು ಗಡುಸಾಗಿ ಮಾಡುತ್ತದೆ ಎಂದು ಶಾಲಾಸಂಗಾತಿಗಳು ಎಣಿಸಬಹುದು. ಕೊಳಕು ಮಾತುಗಳನ್ನು ಕೇಳದೆ ಇರುವದನ್ನು ನಾವು ಪೂರ್ಣವಾಗಿ ತೊಲಗಿಸಲಾರೆವು, ಆದರೂ ಅವುಗಳು ಗ್ರಾಹ್ಯವಾಗದಂತೆ ಮಾಡಲು ಬುದ್ಧಿಪೂರ್ವಕವಾಗಿ ಪ್ರಯತ್ನವನ್ನು ಮಾಡತಕ್ಕದ್ದು. ಅವುಗಳಿಗೆ ನಮ್ಮ ಮನಸ್ಸುಗಳಲ್ಲಿ ಯಾ ಬಾಯಿಗಳಲ್ಲಿ ಯಾವುದೆ ಸ್ಥಾನವಿಲ್ಲ.
5 ಪೌಲನ ಎಚ್ಚರಿಕೆಯ ಆಧಾರವಾಗಿ, ಹಾಳಾದ ಮೀನಿಗೆ ಯಾ ಕೊಳೆತ ಹಣ್ಣಿಗೆ ಸಂಬಂಧಿಸಿರುವ ಒಂದು ಗ್ರೀಕ್ ಶಬ್ದವಿದೆ. ಇದನ್ನು ಚಿತ್ರಿಸಿಕೊಳ್ಳಿರಿ: ಒಬ್ಬ ಮನುಷ್ಯನು ತಾಳ್ಮೆಯಿಲ್ಲದವನಾಗುತ್ತಾನೆ, ತದನಂತರ ಪೂರ್ಣ ರೋಷಾವೇಶಭರಿತನಾಗುತ್ತಾನೆ. ಫಕ್ಕನೆ ಅವನ ಕೋಪವು ಸ್ಫೋಟಿಸುತ್ತದೆ, ಆಗ ಅವನ ಬಾಯಿಂದ ಕೊಳೆತು ನಾರುವಂಥ ಮೀನು ಹೊರಬರುವದನ್ನು ನೀವು ನೋಡುವಿರಿ. ಆಗ ದುರ್ವಾಸನೆಯ, ಕೊಳೆತ ಹಣ್ಣು ಹೊರಬೀಳುವದನ್ನು, ಪಕ್ಕದಲ್ಲಿದ್ದ ಎಲ್ಲಾ ಜನರ ಮೇಲೆ ಅದು ಸಿಡಿಯಲ್ಪಡುವದನ್ನು ನೀವು ಕಾಣುವಿರಿ. ಅವನು ಯಾರು? ಅವನು ನಮ್ಮಲ್ಲಿ ಯಾರಾದರೊಬ್ಬನಾಗಿರುವದಾದಲ್ಲಿ, ಅದೆಂತಹ ಭಯಂಕರ ಸಂಗತಿ! ಆದರೂ, ಒಂದು ವೇಳೆ ನಾವು ‘ಕೆಟ್ಟ ಮಾತುಗಳು ನಮ್ಮ ಬಾಯಿಂದ ಹೊರಡುವಂತೆ ಬಿಡುವದಾದರೆ’ ಅಂಥ ಚಿತ್ರಣವು ಹೊಂದಿಕೆಯಾಗಬಲ್ಲದು.
6. ಎಫೆಸ 4:29 ಹುಳುಕು ಹುಡುಕುವ, ನಕಾರಾತ್ಮಕ ಮಾತುಕತೆಗೆ ಹೇಗೆ ಅನ್ವಯಿಸುತ್ತದೆ?
6 ಎಫೆಸ 4:29 ರ ಇನ್ನೊಂದು ಅನ್ವಯವು ನಾವು ನಿರಂತರವೂ ಹುಳುಕು ಹುಡುಕುವವರಾಗಿರುವದನ್ನು ವರ್ಜಿಸುವುದಾಗಿದೆ. ವಿಷಯಗಳ ಕುರಿತ ನಾವು ಮೆಚ್ಚದಿರುವ ಯಾ ಸ್ವೀಕರಿಸದಿರುವ ಅಭಿಪ್ರಾಯಗಳು ಮತ್ತು ಇಷ್ಟಗಳು ನಮಗೆಲ್ಲರಿಗೂ ಇವೆ ಎಂದು ತೆಗೆದುಕೊಳ್ಳೋಣ, ಆದರೆ ಹೇಳಲ್ಪಡುವ ಎಲ್ಲಾ ವ್ಯಕ್ತಿಗಳ, ಸ್ಥಳಗಳ, ಯಾ ವಿಷಯಗಳ ಕುರಿತು ನಕಾರಾತ್ಮಕ ಹೇಳಿಕೆಯಿರುವ (ಯಾ ಅನೇಕ ಹೇಳಿಕೆಗಳಿರುವ) ಯಾರಾದರೊಬ್ಬನ ಸಮೀಪದಲ್ಲಿ ನೀವು ಎಂದಾದರೋ ಇದ್ದುದ್ದುಂಟೊ? (ಹೋಲಿಸಿರಿ ರೋಮಾಪುರ 12:9; ಇಬ್ರಿಯ 1:9.) ಅವನ ಮಾತುಕತೆಯು ಕೆಡವಿಹಾಕುತ್ತದೆ, ಖಿನ್ನನಾಗಿಸುತ್ತದೆ, ಯಾ ನಾಶಮಾಡುತ್ತದೆ. (ಕೀರ್ತನೆ 10:7; 64:2-4; ಜ್ಞಾನೋಕ್ತಿ 16:27; ಯಾಕೋಬ 4:11, 12) ಮಲಾಕಿಯನು ವರ್ಣಿಸಿದ ಠೀಕಿಸುವವರನ್ನು ಅವನು ಎಷ್ಟೊಂದು ಹೋಲುತ್ತಾನೆಂದು ಅವನಿಗೆ ಗೊತ್ತಾಗದಿರಬಹುದು. (ಮಲಾಕಿಯ 3:13-15) ಕೊಳೆತು ನಾರುವ ಮೀನೊಂದು ಯಾ ಕೊಳೆತಿರುವ ಹಣ್ಣೊಂದು ಅವನ ಬಾಯಿಂದ ಜಾರಿ ಹೊರಬರುತ್ತಾ ಇದೆ ಎಂದು ಅವನಿಗೆ ಪಕ್ಕದಲ್ಲಿ ನಿಂತವನು ಹೇಳಿದರೆ ಅವನಿಗೆ ಎಂಥ ಧಕ್ಕೆ ತಗಲಬಹುದು!
7. ನಮ್ಮಲ್ಲಿ ಪ್ರತಿಯೊಬ್ಬನು ಯಾವ ಸ್ವಪರೀಕ್ಷಣೆಯನ್ನು ಮಾಡತಕ್ಕದ್ದು?
7 ಬೇರೊಬ್ಬನು ಯಾವಾಗಲೂ ನಕಾರಾತ್ಮಕ ಯಾ ಹುಳುಕು ಹುಡುಕುವ ಹೇಳಿಕೆಗಳನ್ನು ಮಾಡುವಾಗ ಗುರುತಿಸುವದು ಸುಲಭವಾಗಿರುವಾಗ, ನಿಮ್ಮನ್ನೇ ಕೇಳಿಕೊಳ್ಳಿರಿ: ‘ನಾನು ಅಂಥ ಪ್ರವೃತ್ತಿಯುಳ್ಳವನೋ? ನಿಜವಾಗಿಯೂ, ನಾನು ಅಂಥವನೋ?’ ಸಂದರ್ಭಾನುಸಾರ ನಮ್ಮ ಮಾತುಗಳ ಭಾವಗಳ ಮೇಲೆ ಚಿಂತನೆ ಮಾಡುವುದು ವಿವೇಕತನದ್ದಾಗಿರಬಲ್ಲದು. ಮೂಲದಲ್ಲಿ ಅವು ನಕಾರಾತ್ಮಕವೂ, ಠೀಕಾತ್ಮಕವೂ ಆಗಿರುತ್ತವೊ? ಯೋಬನ ಮೂವರು ಸುಳ್ಳು ಸಂತೈಸುವವರಂತೆ ನಮ್ಮ ಮಾತುಗಳು ಧ್ವನಿಸುತ್ತವೊ? (ಯೋಬ 2:11; 13:4, 5; 16:2; 19:2) ಹೇಳಲು ಒಂದು ಸಕಾರಾತ್ಮಕ ವಿಷಯವನ್ನು ಯಾಕೆ ಕಂಡುಕೊಳ್ಳಬಾರದು? ಸಂಭಾಷಣೆಯೊಂದು ಮುಖ್ಯವಾಗಿ ಠೀಕಾತ್ಮಕವಾಗಿರುವದಾದರೆ, ಅದನ್ನು ಭಕ್ತಿ ವೃದ್ಧಿಯನ್ನುಂಟುಮಾಡುವ ಸಂಗತಿಗಳ ಕಡೆಗೆ ಯಾಕೆ ತಿರುಗಿಸಬಾರದು?
8. ಮಾತುಕತೆಯ ಕುರಿತು ಮಲಾಕಿಯ 3:16 ಯಾವ ಪಾಠವನ್ನು ಒದಗಿಸುತ್ತದೆ, ಮತ್ತು ಆ ಪಾಠವನ್ನು ನಾವು ಅನ್ವಯಿಸುತ್ತೇವೆ ಎಂದು ಹೇಗೆ ತೋರಿಸಸಾಧ್ಯವಿದೆ?
8 ಮಲಾಕಿಯನು ಈ ವಿಪರ್ಯಸತ್ತೆಯನ್ನು ನಿರೂಪಿಸಿದನು: “ಇಂಥ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.” (ಮಲಾಕಿಯ 3:16) ಭಕ್ತಿ ವೃದ್ಧಿಯನ್ನುಂಟುಮಾಡುವ ಮಾತುಕತೆಗೆ ದೇವರು ಹೇಗೆ ಪ್ರತಿವರ್ತಿಸಿದನು ಎಂದು ನೀವು ಗಮನಿಸಿದಿರೋ? ಸಂಗಾತಿಗಳ ಮೇಲೆ ಅಂಥ ಸಂಭಾಷಣೆಯು ಯಾವ ರೀತಿಯ ಪ್ರಭಾವ ಬೀರಿದಿರ್ದಬಹುದು? ನಮ್ಮ ದೈನಂದಿನ ಮಾತುಕತೆಯ ಕುರಿತಾಗಿ ಒಂದು ಪಾಠವನ್ನು ನಾವು ವೈಯಕ್ತಿಕವಾಗಿ ಕಲಿಯಸಾಧ್ಯವಿದೆ. ಒಂದು ವೇಳೆ ಆದರ್ಶ ಸ್ವರೂಪದ ನಮ್ಮ ಸಂಭಾಷಣೆಯು ‘ದೇವರಿಗೆ’ ನಮ್ಮ ‘ಸ್ತೋತ್ರಯಜ್ಞ’ಗಳನ್ನು ಪ್ರತಿಬಿಂಬಿಸುವದಾದರೆ ನಮಗೂ, ಇತರರಿಗೂ ಎಷ್ಟೊಂದು ಅತ್ಯುತ್ತಮ.—ಇಬ್ರಿಯ 13:15.
ಇತರರ ಭಕ್ತಿವೃದ್ಧಿಯನ್ನುಂಟುಮಾಡಲು ಕ್ರಿಯೆಗೈಯುವದು
9. ಇನ್ನೊಬ್ಬರ ಭಕ್ತಿವೃದ್ಧಿಯನ್ನುಂಟುಮಾಡಲು ಕ್ರೈಸ್ತ ಕೂಟಗಳು ಯಾಕೆ ಉತ್ತಮ ಸಂದರ್ಭಗಳಾಗಿರುತ್ತವೆ?
9 ‘ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು’ ಆಡಲು ಸಭಾಕೂಟಗಳು ಉತ್ಕೃಷ್ಟ ಸಂದರ್ಭಗಳಾಗಿರುತ್ತವೆ. (ಎಫೆಸ 4:29) ಬೈಬಲಿನ ಸಮಾಚಾರದ ಮೇಲೆ ಭಾಷಣವೊಂದನ್ನು ನಾವು ನೀಡುವಾಗ, ತೋರಿಸುವಿಕೆಯೊಂದರಲ್ಲಿ ಪಾಲುತಕ್ಕೊಳ್ಳುವಾಗ, ಯಾ ಪ್ರಶ್ನೋತ್ತರ ಭಾಗಗಳಲ್ಲಿ ಹೇಳಿಕೆಗಳನ್ನೀಯುವಾಗ ನಾವಿದನ್ನು ಮಾಡಸಾಧ್ಯವಿದೆ. ಹೀಗೆ ನಾವು ಜ್ಞಾನೋಕ್ತಿ 20:15 ನ್ನು ಸಮರ್ಥಿಸುತ್ತೇವೆ: “ಜ್ಞಾನದ ತುಟಿಗಳೇ ಅಮೂಲ್ಯಾಭರಣ.” ಮತ್ತು ಎಷ್ಟೊಂದು ಹೃದಯಗಳನ್ನು ನಾವು ಸ್ಪರ್ಶಿಸುತ್ತೇವೆ ಯಾ ಕಟ್ಟುತ್ತೇವೆಂದು ಯಾರು ಬಲ್ಲರು?
10. ಯಾರೊಂದಿಗೆ ನಾವು ಸಾಮಾನ್ಯವಾಗಿ ಸಂಭಾಷಿಸುತ್ತೇವೋ ಅದರ ಮೇಲೆ ಪ್ರತಿಬಿಂಬಿಸಿದ ನಂತರ, ಯಾವ ಅಳವಡಿಸುವಿಕೆಯು ಯುಕ್ತವಾಗಿರಬಹುದು? (2 ಕೊರಿಂಥ 6:12, 13)
10 ಕೇಳುವವರ ಹಿತಕ್ಕಾಗಿರುವ ಸಂಭಾಷಣೆಯಿಂದ ಇತರರ ಭಕ್ತಿವೃದ್ಧಿಯನ್ನುಂಟು ಮಾಡಲು ಕೂಟಗಳ ಮೊದಲು ಮತ್ತು ಅನಂತರ ಇರುವ ಸಮಯವು ಅನುಕೂಲದ್ದಾಗಿರುತ್ತದೆ. ನಮ್ಮ ಸಂಬಂಧಿಕರೊಂದಿಗೆ ಮತ್ತು ಯಾರೊಂದಿಗೆ ನಾವು ಹೆಚ್ಚು ಹಿತಕರವುಳ್ಳವರಾಗಿದ್ದೇವೊ ಆ ಮಿತ್ರರ ಸಣ್ಣ ಗುಂಪಿನೊಂದಿಗೆ ಆಹ್ಲಾದಕರ ಮಾತುಕತೆ ನಡಿಸಿ ಈ ಸಮಯಾವಧಿಗಳನ್ನು ವ್ಯಯಿಸುವದು ಸುಲಭವಾಗಿರಬಹುದು. (ಯೋಹಾನ 13:23; 19:26) ಆದಾಗ್ಯೂ, ಎಫೆಸ 4:29ರ ಸಹಮತದಲ್ಲಿ, ಇತರರೊಂದಿಗೆ ಮಾತಾಡಲು ಯಾಕೆ ಹುಡುಕಬಾರದು? (ಹೋಲಿಸಿರಿ ಲೂಕ 14:12-14.) ಕೆಲವು ನಿರ್ದಿಷ್ಟ ಹೊಸಬರಿಗೆ, ವಯಸ್ಸಾದವರಿಗೆ ಯಾ ಎಳೆಯರಿಗೆ ಕೇವಲ ಅನೌಪಚಾರಿಕವಾಗಿ ಯಾ ಕಣ್ಷಿಕವಾಗಿ ಶುಭದಿನಗಳನ್ನು ಹಾರೈಸುವದಕ್ಕಿಂತಲೂ ಮುಂದಕ್ಕೆ ದಾಟುವಂತೆ, ಅವರ ಮಟ್ಟದಲ್ಲಿ ಹೆಚ್ಚು ಇರುವಂತೆ ಎಳೆಯರೊಂದಿಗೆ ಕುಳಿತುಕೊಳ್ಳುವದಕ್ಕೂ ನಾವು ಮೊದಲೇ ನಿರ್ಧರಿಸಬಹುದು. ನಮ್ಮ ಅಪ್ಪಟವಾದ ಅಭಿರುಚಿ ಮತ್ತು ಭಕ್ತಿ ವೃದ್ಧಿಯನ್ನುಂಟುಮಾಡುವ ಸಮಯಾವಧಿಗಳು, ಕೀರ್ತನೆ 122:1 ರಲ್ಲಿರುವ ದಾವೀದನ ಮನೋಭಾವಗಳನ್ನು ವ್ಯಕ್ತಪಡಿಸಲು ಇತರರಿಗೆ ಇನ್ನೂ ಹೆಚ್ಚು ಸಾಧ್ಯಮಾಡುವುದು.
11. (ಎ) ಆಸೀನರಾಗುವದರ ಕುರಿತು ಯಾವ ಹವ್ಯಾಸವನ್ನು ಅನೇಕರು ಬೆಳೆಸಿಕೊಂಡಿದ್ದಾರೆ? (ಬಿ) ತಾವು ಕುಳಿತುಕೊಳ್ಳುವದರಲ್ಲಿ ಬದಲಾವಣೆಯನ್ನು ಕೆಲವರು ಉದ್ದೇಶಪೂರ್ವಕವಾಗಿ ಯಾಕೆ ಮಾಡುತ್ತಾರೆ?
11 ಭಕ್ತಿ ವೃದ್ಧಿಯನ್ನುಂಟುಮಾಡುವ ಸಂಭಾಷಣೆಗೆ ಇನ್ನೊಂದು ಸಹಾಯಕವು ಕೂಟದಲ್ಲಿ ನಾವು ಕುಳಿತುಕೊಳ್ಳುವ ಆಸನಗಳನ್ನು ಬದಲಾಯಿಸುತ್ತಿರುವದಾಗಿದೆ. ಹಾಲುಣಿಸುವ ತಾಯಿಯು ವಿಶ್ರಾಂತಿಕೋಣೆಯ ಹತ್ತಿರ ಕುಳಿತುಕೊಳ್ಳಲು ಯಾ ನಿಶ್ಶಕ್ತನೊಬ್ಬನು ಸಾಲುಗಳ ಪಕ್ಕದಲ್ಲಿನ ಆಸನದಲ್ಲಿ ಕುಳಿತುಕೊಳ್ಳುವ ಜರೂರಿಯಿರುತ್ತದೆ, ಆದರೆ ನಮ್ಮಲ್ಲಿ ಉಳಿದವರ ಕುರಿತೇನು? ಹವ್ಯಾಸವು ತಾನೇ ಒಂದು ನಿರ್ದಿಷ್ಟ ಆಸನಕ್ಕೆ ಯಾ ಜಾಗಕ್ಕೆ ಪುನಃ ನಮ್ಮನ್ನು ನಡಿಸಬಹುದು; ಒಂದು ಪಕ್ಷಿಯು ಸಹ ಸಹಜಪ್ರವೃತ್ತಿಯಿಂದಾಗಿಯೇ ಅದರ ಗೂಡಿಗೆ ಹಿಂತೆರಳುತ್ತದೆ. (ಯೆಶಾಯ 1:3; ಮತ್ತಾಯ 8:20) ಆದರೂ ಸರಳವಾಗಿಯೇ, ನಾವು ಎಲ್ಲಿಯೂ ಕುಳಿತುಕೊಳ್ಳಶಕ್ತರಾಗಿರುವದರಿಂದ, ನಮ್ಮ ಸ್ಥಾನಗಳನ್ನು ನಾವು ಯಾಕೆ ಬದಲಾಯಿಸಬಾರದು—ಬಲಬದಿಗೆ, ಎಡಬದಿಗೆ, ಮುಂದಕ್ಕೆ ಹತ್ತಿರದಲ್ಲಿ, ಮತ್ತು ಹಾಗೆಯೆ—ಮತ್ತು ಹೀಗೆ ಬೇರೆಬೇರೆಯವರೊಂದಿಗೆ ಯಾಕೆ ಹೆಚ್ಚು ಪರಿಚಯಸ್ಥರಾಗಕೂಡದು? ಇದನ್ನು ನಾವು ಮಾಡಬೇಕೆಂದು ಯಾವುದೇ ನಿಯಮವಿಲ್ಲದಿರುವುದಾದರೂ, ತಾವು ಕುಳಿತುಕೊಳ್ಳುವ ಸ್ಥಾನವನ್ನು ಬದಲಾಯಿಸುವ ಹಿರಿಯರು ಮತ್ತು ಇತರ ಬಲಿತವರು, ಸಂಬಂಧಿಕವಾಗಿ ಕೇವಲ ಕೊಂಚವೆ ಹತ್ತಿರದ ಸ್ನೇಹಿತರಿಗೆ ಮಾತ್ರವಲ್ಲದೆ, ಇತರ ಅನೇಕರಿಗೆ ಕಾಲೋಚಿತವಾದ ಮಾತುಗಳನ್ನು ಆಡಲು ಹೆಚ್ಚು ಸುಲಭವಾಗಿರುವದನ್ನು ಕಂಡುಕೊಂಡಿರುತ್ತಾರೆ.
ದೈವಿಕ ರೀತಿಯಲ್ಲಿ ಭಕ್ತಿವೃದ್ಧಿಯನ್ನುಂಟುಮಾಡಿರಿ
12. ಇತಿಹಾಸದಲ್ಲಿಲ್ಲಾ ಯಾವ ಅನಾಪೇಕ್ಷಿತ ಪ್ರವೃತ್ತಿಯೊಂದು ವ್ಯಕ್ತವಾಗಿದೆ?
12 ಇತರರ ಭಕ್ತಿವೃದ್ಧಿಯನ್ನುಂಟುಮಾಡುವ ಕ್ರೈಸ್ತನೊಬ್ಬನ ಆಶೆಯು, ಬಹು ಸಂಖ್ಯಾತ ನಿಯಮಗಳನ್ನು ಮಾಡುವ ಮಾನವ ಪ್ರವೃತ್ತಿಯನ್ನು ಹಿಂಬಾಲಿಸುವ ಬದಲಿಗೆ ಈ ವಿಷಯದಲ್ಲಿ ದೇವರನ್ನು ಅನುಕರಿಸಲು ಅವನನ್ನು ನಡಿಸತಕ್ಕದ್ದು.a ತಮ್ಮ ಸುತ್ತಲಿರುವ ಜನರನ್ನು ಆಳಲು ಅಪರಿಪೂರ್ಣ ಮಾನವರು ಬಹುಕಾಲದಿಂದ ಒಲವು ಉಳ್ಳವರಾಗಿದ್ದಾರೆ, ಮತ್ತು ಈ ಪ್ರವೃತ್ತಿಗೆ ದೇವರ ಸೇವಕರಲ್ಲಿ ಕೆಲವರು ತುತ್ತಾಗಿದ್ದಾರೆ. (ಆದಿಕಾಂಡ 3:16; ಪ್ರಸಂಗಿ 8:9) ಯೇಸುವಿನ ದಿನಗಳಲ್ಲಿ ಯೆಹೂದಿ ಮುಂದಾಳುಗಳು ‘ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲಿನ ಮೇಲೆ ಹೊರಿಸಿದರು; ತಾವಾದರೋ ಬೆರಳಿನಿಂದಲಾದರೂ ಅವುಗಳನ್ನು ಮುಟ್ಟಲೊಲ್ಲರು.’ (ಮತ್ತಾಯ 23:4) ಅವರು ನಿರುಪದ್ರವಿ ಪದ್ಧತಿಗಳನ್ನು ಆಜ್ಞಾಪಕ ಸಂಪ್ರದಾಯಗಳನ್ನಾಗಿ ಪರಿವರ್ತಿಸಿದ್ದರು. ಮಾನವ ನಿಯಮಗಳಿಗೆ ಅವರಿಗಿದ್ದ ಅತ್ಯಾಸಕಿಯ್ತಿಂದಾಗಿ, ಅಧಿಕ ಪ್ರಾಮುಖ್ಯತೆಯದ್ದು ಎಂದು ದೇವರು ಸಮೀಕರಿಸಿದ್ದನ್ನು ಅವರು ಉಪೇಕ್ಷಿಸಿದರು. ಅವರು ಮಾಡಿದ್ದ ಅನೇಕ ಅಶಾಸ್ತ್ರೀಯ ನಿಯಮಗಳಿಂದ ಯಾರೊಬ್ಬರಿಗೂ ಭಕ್ತಿವೃದ್ಧಿಯನ್ನುಂಟುಮಾಡಲಿಲ್ಲ; ಅವರ ಮಾರ್ಗವು ನಿಜವಾಗಿಯೂ ದೇವರ ಮಾರ್ಗವಾಗಿರಲಿಲ್ಲ.—ಮತ್ತಾಯ 23:23, 24; ಮಾರ್ಕ 7:1-13.
13. ಸಹ ಕ್ರೈಸ್ತರಿಗಾಗಿ ಬಹುಸಂಖ್ಯಾತ ನಿಯಮಗಳನ್ನು ರಚಿಸುವದು ಯಾಕೆ ಅನುಚಿತವಾಗಿದೆ?
13 ದೈವಿಕ ನಿಯಮಗಳಿಗೆ ಅಂಟಿಕೊಂಡಿರಲು ಕ್ರೈಸ್ತರು ಯಥಾರ್ಥವಾಗಿ ಬಯಸುತ್ತಾರೆ. ಆದರೂ ಕೂಡ ನಾವು, ಹೊರೆಯಾದ ಬಹುಸಂಖ್ಯಾತ ನಿಯಮಗಳನ್ನು ಮಾಡುವ ಪ್ರವೃತ್ತಿಗೆ ಆಹುತಿಯಾಗುವ ಸಾಧ್ಯತೆಯಿದೆ. ಯಾಕೆ? ಒಂದು ಕಾರಣವೇನಂದರೆ, ಇಷ್ಟಗಳು ಯಾ ಆದ್ಯತೆಗಳು ಭಿನ್ನವಾಗಿರುತ್ತವೆ, ಆದುದರಿಂದ ತಮಗೆ ಸ್ವೀಕಾರಾರ್ಹವೆಂದು ಕಂಡುಕೊಳ್ಳುವದನ್ನು ಇತರರು ಮೆಚ್ಚದಿರಬಹುದು ಮತ್ತು ಅದನ್ನು ತಳ್ಳಿಹಾಕಲು ನಿರ್ಣಯಿಸಬೇಕೆಂದು ಭಾವಿಸಬಹುದು. ಆತ್ಮಿಕ ಪ್ರೌಢಾವಸ್ಥೆಯ ಅವರ ಪ್ರಗತಿಯ ದಿಸೆಯಲ್ಲಿ ಕ್ರೈಸ್ತರು ಕೂಡ ಭಿನ್ನರಾಗಿರುತ್ತಾರೆ. ಆದರೆ ಪ್ರೌಢಾವಸ್ಥೆಗೆ ಪ್ರಗತಿ ಮಾಡಲು ಒಬ್ಬರನ್ನೊಬ್ಬರು ಸಹಾಯ ಮಾಡುವುದರಲ್ಲಿ, ಅನೇಕ ನಿಯಮಗಳನ್ನು ಮಾಡುವುದು ದೈವಿಕ ರೀತಿಯಾಗಿರುತದ್ತೊ? (ಫಿಲಿಪ್ಪಿ 3:15; 1 ತಿಮೊಥೆಯ 1:19; ಇಬ್ರಿಯ 5:14) ವ್ಯಕ್ತಿಯೊಬ್ಬನು ನಿಜವಾಗಿಯೂ ಒಂದು ಅತಿರೇಕದ ಯಾ ವಿನಾಶಕಾರಿ ಪಥವನ್ನು ಬೆನ್ನಟ್ಟುತ್ತಿದ್ದಾನೆಂದು ತೋರಿದರೂ, ನಿಷೇಧಿತ ನಿಯಮವೊಂದು ಅತ್ಯುತ್ತಮ ಪರಿಹಾರವೇ? ಆ ತಪ್ಪಿತಸ್ಥ ವ್ಯಕ್ತಿಯೊಂದಿಗೆ ಶಾಂತಭಾವದಿಂದ ವಿವೇಚಿಸುವ ಮೂಲಕ ಅವನನ್ನು ಪುನಃ ಸ್ಥಾಪಿಸಲು ಯೋಗ್ಯತೆ ಪಡೆದವರು ಪ್ರಯತ್ನಿಸುವುದು ದೇವರ ಮಾರ್ಗವಾಗಿದೆ.—ಗಲಾತ್ಯ 6:1.
14. ಇಸ್ರಾಯೇಲಿಗೆ ದೇವರು ಕೊಟ್ಟ ನಿಯಮಗಳಿಂದ ಯಾವ ಉದ್ದೇಶಗಳು ನೇರವೇರಲ್ಪಟ್ಟವು?
14 ಇಸ್ರಾಯೇಲ್ಯರನ್ನು ತನ್ನ ಜನಾಂಗವಾಗಿ ಉಪಚರಿಸುತ್ತಿದ್ದಾಗ, ದೇವಾಲಯ ಆರಾಧನೆ, ಯಜ್ಞಗಳು, ನಿರ್ಮಲೀಕರಣದ ಕುರಿತಾಗಿ ನೂರಾರು ನಿಯಮಗಳನ್ನು ದೇವರು ನಿರ್ದೇಶಿಸಿದ್ದನು ಎಂಬದು ದಿಟವೇ. ಒಂದು ವಿಶಿಷ್ಟ ಜನಾಂಗಕ್ಕೆ ಇದು ತಕ್ಕದ್ದಾಗಿಯೇ ಇತ್ತು, ಮತ್ತು ಅನೇಕ ನಿಯಮಗಳಿಗೆ ಪ್ರವಾದನಾ ಪ್ರಾಮುಖ್ಯತೆ ಇತ್ತು, ಮತ್ತು ಮೆಸ್ಸೀಯನೆಡೆಗೆ ಯೆಹೂದ್ಯರನ್ನು ನಡಿಸಲು ಸಹಾಯ ಮಾಡಿತು. ಪೌಲನು ಬರೆದದ್ದು: “ಧರ್ಮಶಾಸ್ತ್ರವು ನಮ್ಮನ್ನು ಕಾಯುವ ಆಳಿನಂತಾಗಿದೆ; ನಾವು ನಂಬಿಕೆಯಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದುವದಕ್ಕಾಗಿ ಕ್ರಿಸ್ತನಲಿಗ್ಲೆ ಸೇರುವ ತನಕ ಅದು ನಮ್ಮನ್ನು ಕಾಯುತ್ತದೆ. ಆದರೆ ಕ್ರಿಸ್ತ ನಂಬಿಕೆಯು ಬಂದಿರಲಾಗಿ ನಾವಿನ್ನು ಕಾಯುವವನ ಕೈಕೆಳಗಿರುವವರಲ್ಲ.” (ಗಲಾತ್ಯ 3:19, 23-25) ಯಾತನಾ ಸ್ತಂಭದ ಮೇಲೆ ನಿಯಮಶಾಸ್ತ್ರವನ್ನು ರದ್ದುಪಡಿಸಿದ ನಂತರ, ನಂಬಿಕೆಯಲ್ಲಿ ಕಟ್ಟಲ್ಪಡುವಂತೆ ಅವರನ್ನು ಇಡಲು ಅದೊಂದು ರೀತಿಯೋ ಎಂಬಂತೆ, ಕ್ರೈಸ್ತರಿಗೆ ನಿಯಮಗಳ ಒಂದು ವ್ಯಾಪಕ ಪಟ್ಟಿಯನ್ನು ದೇವರು ಕೊಡಲಿಲ್ಲ.
15. ಕ್ರೈಸ್ತ ಆರಾಧಕರಿಗೆ ದೇವರು ಯಾವ ಮಾರ್ಗದರ್ಶನವನ್ನು ಒದಗಿಸಿದ್ದಾನೆ?
15 ನಾವು ನಿಯಮವಿಲ್ಲದವರೇನೂ ಅಲ್ಲವೆಂದು ನಿಶ್ಚಯ. ವಿಗ್ರಹಾರಾಧನೆ, ಹಾದರ ಮತ್ತು ವ್ಯಭಿಚಾರ, ಮತ್ತು ರಕ್ತದ ದುರುಪಯೋಗವನ್ನು ವರ್ಜಿಸಬೇಕೆಂದು ದೇವರು ನಮಗೆ ಅಪ್ಪಣೆಯನ್ನಿತ್ತಿದ್ದಾನೆ. ಕೊಲೆ, ಸುಳ್ಳಾಡುವಿಕೆ, ಪ್ರೇತಾಚಾರ, ಮತ್ತು ಇತರ ವಿವಿಧ ಪಾಪಗಳನ್ನು ಅವನು ನಿಷ್ಕೃಷ್ಟವಾಗಿ ನಿಷೇಧಿಸಿರುತ್ತಾನೆ. (ಅ.ಕೃತ್ಯಗಳು 15:28, 29; 1 ಕೊರಿಂಥ 6:9, 10; ಪ್ರಕಟನೆ 21:8) ಮತ್ತು ಅವನು ತನ್ನ ವಾಕ್ಯದಲ್ಲಿ ಅನೇಕ ವಿಷಯಗಳ ಮೇಲೆ ಸ್ಪಷ್ಟವಾಗಿದ ಬುದ್ಧಿವಾದವನ್ನು ಕೊಡುತ್ತಾನೆ. ಆದರೂ, ಇಸ್ರಾಯೇಲ್ಯರಿಗಿಂತ ಹೆಚ್ಚಿನ ಮಟ್ಟದಲ್ಲಿ ಬೈಬಲ್ ಸೂತ್ರಗಳನ್ನು ಕಲಿಯಲು ಮತ್ತು ಅನ್ವಯಿಸಲು ನಾವು ಜವಾಬ್ದಾರರಾಗಿದ್ದೇವೆ. ಕೇವಲ ನಿಯಮಗಳಿಗಾಗಿ ನೋಡುವದರ ಯಾ ನಿಯಮಗಳನ್ನು ಮಾಡುವ ಬದಲಾಗಿ, ಈ ಸೂತ್ರಗಳನ್ನು ಕಂಡುಹಿಡಿಯಲು ಮತ್ತು ಪರಿಗಣಿಸಲು ಅವರಿಗೆ ಸಹಾಯ ಮಾಡುವದರಿಂದ, ಹಿರಿಯರು ಇತರರ ಭಕ್ತಿವೃದ್ಧಿಯನ್ನು ಮಾಡಶಕ್ತರು.
ಭಕ್ತಿವೃದ್ಧಿಯನ್ನುಂಟುಮಾಡುವ ಹಿರಿಯರು
16, 17. ಜತೆ ಕ್ರೈಸ್ತರಿಗಾಗಿ ನಿಯಮಗಳನ್ನು ಮಾಡುವುದರ ಸಂಬಂಧದಲ್ಲಿ ಅಪೊಸ್ತಲರು ಯಾವ ಉತ್ತಮ ನಮೂನೆಯನ್ನು ಇಟ್ಟಿರುತ್ತಾರೆ?
16 ಪೌಲನು ಬರೆದದ್ದು: “ಆದರೆ ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ.” (ಫಿಲಿಪ್ಪಿ 3:16) ಆ ದೈವಿಕ ದೃಷ್ಟಿಕೋನದೊಂದಿಗೆ ಸಹಮತದಲ್ಲಿ, ಭಕ್ತಿವೃದ್ಧಿಯನ್ನುಂಟುಮಾಡುವ ವಿಧದಲ್ಲಿ ಅಪೊಸ್ತಲನು ಇತರರೊಂದಿಗೆ ವ್ಯವಹರಿಸಿದನು. ಉದಾಹರಣೆಗೆ, ವಿಗ್ರಹಾಲಯದಿಂದ ಬಂದ ಮಾಂಸವನ್ನು ತಿನ್ನಬಹುದೋ ಎಂಬ ಪ್ರಶ್ನೆಯೊಂದು ಮೇಲೆಬಂತು. ಪ್ರಾಯಶಃ ಸಮಂಜಸತೆಯ ಯಾ ಸರಳತೆಯ ಹೆಸರಿನಲ್ಲಿ ಈ ಹಿರಿಯನು ಆರಂಭದ ಸಭೆಗಳಲ್ಲಿ ಎಲ್ಲರಿಗೋಸ್ಕರ ಒಂದು ನಿಯಮವನ್ನು ಸ್ಥಾಪಿಸಿದನೋ? ಇಲ್ಲ. ಜ್ಞಾನದಲ್ಲಿ ವೈವಿಧ್ಯತೆಯು ಮತ್ತು ಬಲಿತಾವಸ್ಥೆಯೆಡೆಗೆ ಮಾಡುವ ಪ್ರಗತಿಯು ಆ ಕ್ರೈಸ್ತರನ್ನು ಭಿನ್ನವಾದ ಆಯ್ಕೆಗಳನ್ನು ಮಾಡುವಂತೆ ನಡಿಸಬಹುದು ಎಂಬುದನ್ನು ಅವನು ಅಂಗೀಕರಿಸಿದನು. ಅವನಾದರೋ, ಒಂದು ಉತ್ತಮ ಮಾದರಿಯನ್ನಿಡಲು ನಿಶ್ಚಯಿಸಿದ್ದನು.—ರೋಮಾಪುರ 14:1-4; 1 ಕೊರಿಂಥ 8:4-13.
17 ಉಡುಪು ಮತ್ತು ಕೇಶಾಲಂಕಾರದಂಥ ಕೆಲವು ವೈಯಕ್ತಿಕ ಸಂಗತಿಗಳಲ್ಲಿ ಸಹಾಯಕರ ಸಲಹೆಗಳನ್ನು ಅಪೊಸ್ತಲರು ನೀಡಿದ್ದರು ಎಂದು ಕ್ರೈಸ್ತ ಗ್ರೀಕ್ ಶಾಸ್ತ್ರಬರಹಗಳು ತೋರಿಸುತ್ತವೆ, ಆದರೂ ಅವರು ಸರ್ವಾನಯ್ವದ ನಿಯಮಗಳನ್ನು ಮಾಡಲು ಪ್ರಯತ್ನಿಸಲಿಲ್ಲ. ಇಂದು ಮಂದೆಯ ಭಕ್ತಿವೃದ್ಧಿಯನ್ನುಂಟುಮಾಡಲು ಆಸಕ್ತಿಯಿರುವ ಕ್ರೈಸ್ತ ಮೇಲ್ವಿಚಾರಕರಿಗೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಮತ್ತು ಪುರಾತನ ಇಸ್ರಾಯೇಲಿನಲ್ಲಿ ಕೂಡ ದೇವರು ಅನುಸರಿಸಿದ ಮೂಲ ವ್ಯವಹಾರಮಾರ್ಗವನ್ನು ಅದು ನಿಜವಾಗಿಯೂ ವಿಸ್ತರಿಸುತ್ತದೆ.
18. ವಸ್ತ್ರಧಾರಣೆಯ ಕುರಿತು ಇಸ್ರಾಯೇಲಿಗೆ ಯೆಹೋವನು ಯಾವ ನಿಯಮಗಳನ್ನು ಕೊಟ್ಟನು?
18 ಇಸ್ರಾಯೇಲ್ಯರಿಗೆ ಉಡುಪಿನ ಬಗ್ಗೆ ದೇವರು ಬಹಳ ವಿವರವಾಗಿರುವ ನಿಯಮಗಳನ್ನು ಕೊಡಲಿಲ್ಲ. ಪುರುಷರು ಮತ್ತು ಸ್ತ್ರೀಯರು ಒಂದೇ ರೀತಿಯ ಮೇಲಂಗಿಗಳನ್ನು ಯಾ ಹೊರಗಿನ ವಸ್ತ್ರಗಳನ್ನು ಬಳಸುತ್ತಿದ್ದರೆಂದು ವ್ಯಕ್ತವಾಗುತ್ತದೆ, ಆದರೂ ಹೆಂಗಸೊಬ್ಬಳದ್ದು ಕಸೂತಿ ಕೆಲಸವಿದದ್ದಾಗಿದ್ದಿರಬಹುದು ಯಾ ಹೆಚ್ಚು ವರ್ಣಭರಿತವಾಗಿದ್ದಿರಬಹುದು. ಎರಡು ಲಿಂಗ ಜಾತಿಯವರೂ ಒಂದು ಸಾ-ಧೀನ್, ಯಾ ಒಳಉಡುಪನ್ನು ಕೂಡ ಧರಿಸುತ್ತಿದ್ದರು. (ನ್ಯಾಯಸ್ಥಾಪಕರು 14:12; ಜ್ಞಾನೋಕ್ತಿ 31:24; ಯೆಶಾಯ 3:23) ವಸ್ತ್ರಧಾರಣೆಯ ಕುರಿತಾಗಿ ದೇವರು ಯಾವ ನಿಯಮಗಳನ್ನು ಕೊಟ್ಟನು? ವಿರುದ್ಧ ಲಿಂಗದ ಬಟ್ಟೆಗೆಳನ್ನು ಪುರುಷರಾಗಲಿ, ಸ್ತ್ರೀಯರಾಗಲಿ ಧರಿಸಕೂಡದು, ಸಲಿಂಗಕಾಮದ ಉದ್ದೇಶದಿಂದ ಅದಾಗಿರಬಹುದು ಎಂದು ವ್ಯಕ್ತವಾಗುತ್ತದೆ. (ಧರ್ಮೋಪದೇಶಕಾಂಡ 22:5) ಸುತ್ತಲಿನ ಜನಾಂಗಗಳಿಂದ ಅವರು ಪ್ರತ್ಯೇಕರೆಂದು ತೋರಿಸಲು, ಇಸ್ರಾಯೇಲ್ಯರು ಅವರ ಉಡುಪುಗಳಲ್ಲಿ ನೀಲಿದಾರದಿಂದ ಕೂಡಿದ ಹೆಣೆದ ಮೂಲೆಗಳನ್ನು ಕಟ್ಟಿಕೊಳ್ಳಬೇಕು, ಮತ್ತು ಇವು ಮೇಲಂಗಿಯ ಮೂಲೆಗಳಲ್ಲಿನ ಗೊಂಡೆಗಳಾಗಿದ್ದಿರಬಹುದು. (ಅರಣ್ಯಕಾಂಡ 15:38-41) ವಸ್ತ್ರಧಾರಣೆಯ ವಿನ್ಯಾಸಗಳ ಕುರಿತು ನಿಯಮಶಾಸ್ತ್ರವು ಮೂಲತಃ ಕೊಟ್ಟ ಮಾರ್ಗದರ್ಶನ ಅಷ್ಟೇ ಆಗಿದೆ.
19, 20. (ಎ) ಉಡುಪು ಮತ್ತು ಕೇಶಾಲಂಕಾರದ ಮೇಲೆ ಕ್ರೈಸ್ತರಿಗೆ ಬೈಬಲು ಯಾವ ಮಾರ್ಗದರ್ಶನವನ್ನು ಕೊಡುತ್ತದೆ? (ಬಿ) ವೈಯಕ್ತಿಕ ತೋರಿಕೆಯ ಕುರಿತಾಗಿ ನಿಯಮಗಳನ್ನು ಮಾಡುವಾಗ ಹಿರಿಯರಲ್ಲಿ ಯಾವ ನೋಟ ಇರತಕ್ಕದ್ದು?
19 ನಿಯಮಶಾಸ್ತ್ರದ ಕೆಳಗೆ ಕ್ರೈಸ್ತರು ಇಲ್ಲವಾದರೂ ಕೂಡ, ನಮಗಾಗಿ ಉಡುಪು ಯಾ ಭೂಷಣದ ಸವಿವರವಾದ ಇತರ ನಿಯಮಗಳು ಬೈಬಲಿನಲ್ಲಿ ಇವೆಯೇ? ನಿಜವಾಗಿಯೂ ಇಲ್ಲ. ನಾವು ಅನ್ವಯಿಸಬಹುದಾದ ಸಮತೂಕದ ಸೂತ್ರಗಳನ್ನು ದೇವರು ಒದಗಿಸಿದ್ದಾನೆ. ಪೌಲನು ಬರೆದದ್ದು: “ಸ್ತ್ರೀಯರು ಮಾನಸ್ಥೆಯರಾಗಿಯೂ (ಹಾಳತವಿದ್ದವರಾಗಿಯೂ, NW ) ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸದೆ . . . ಇರಬೇಕು.” (1 ತಿಮೊಥೆಯ 2:9, 10ಎ) ಶಾರೀರಿಕ ಭೂಷಣದ ಮೇಲೆ ಕೇಂದ್ರೀಕರಿಸುವ ಬದಲಾಗಿ ಕ್ರೈಸ್ತ ಸ್ತ್ರೀಯರು “ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರು”ವದರ ಮೇಲೆ ಕೇಂದ್ರೀಕರಿಸತಕ್ಕದ್ದು ಎಂದು ಪೇತ್ರನು ಒತ್ತಾಯಿಸಿದ್ದಾನೆ. (1 ಪೇತ್ರ 3:3, 4) ಮೊದಲನೆಯ ಶತಮಾನದ ಕೆಲವು ಕ್ರೈಸ್ತರು ಹೆಚ್ಚು ಹಾಳತವಿದ್ದವರಾಗಿ ಇರುವ ಮತ್ತು ಅವರ ಉಡುಪು ಮತ್ತು ಕೇಶಾಲಂಕಾರದಲ್ಲಿ ಅಂಕೆಯನ್ನಿಡುವ ಆವಶ್ಯಕತೆ ಇತ್ತು ಎಂದು ದಾಖಲಿಸಲ್ಪಟ್ಟ ಅಂಥ ಹಿತೋಪದೇಶವು ಸೂಚಿಸುತ್ತದೆ. ಆದರೂ, ನಿರ್ದಿಷ್ಟ ಶೈಲಿಗಳ ಆವಶ್ಯಕತೆಯನ್ನು—ಯಾ ನಿಷೇಧಿಸುವಿಕೆಯನ್ನು—ಮಾಡುವ ಬದಲಿಗೆ, ಅಪೊಸ್ತಲರು ಭಕ್ತಿವೃದ್ಧಿಯ ಹಿತೋಪದೇಶವನ್ನು ಸರಳವಾಗಿ ಒದಗಿಸಿದರು.
20 ಅವರ ಹಾಳತವಾದ ತೋರಿಕೆಗಾಗಿ ಯೆಹೋವನ ಸಾಕ್ಷಿಗಳು ಗೌರವಿಸಲ್ಪಡಬೇಕು ಮತ್ತು ಸಾಮಾನ್ಯವಾಗಿ ಗೌರವಿಸಲ್ಪಡುತ್ತಾರೆ. ಆದಾಗ್ಯೂ, ದೇಶದಿಂದ ದೇಶಕ್ಕೆ, ಮತ್ತು ಒಂದು ಪ್ರದೇಶ ಯಾ ಸಭೆಯೊಳಗೆ ಕೂಡ ಶೈಲಿಯು ಭಿನ್ನವಾಗಿರುತ್ತದೆ. ಸಹಜವಾಗಿಯೇ, ಉಡುಪಿನಲ್ಲಿ ಯಾ ಕೇಶಾಲಂಕಾರದ ಕುರಿತು ಬಲವಾದ ಅಭಿಪ್ರಾಯಗಳು ಯಾ ನಿರ್ದಿಷ್ಟ ಇಷ್ಟ ಇರುವ ಹಿರಿಯನೊಬ್ಬನು ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ಅದಕ್ಕನುಸಾರ ನಿರ್ಣಯಿಸಬಹುದು. ಆದರೆ ಮಂದೆಯ ವಿಷಯದಲ್ಲಾದರೋ, ಅವನು ಪೌಲನ ಹೇಳಿಕೆಯನ್ನು ಮನಸ್ಸಿನಲ್ಲಿಡುವ ಆವಶ್ಯಕತೆಯಿದೆ: “ನಾವು ನಂಬಿಕೆಯ ವಿಷಯದಲ್ಲಿಯೂ ನಿಮ್ಮ ಮೇಲೆ ದೊರೆತನಮಾಡುವವರೆಂದು ನನ್ನ ತಾತ್ಪರ್ಯವಲ್ಲ; ನಿಮ್ಮ ಸಂತೋಷಕ್ಕೆ ನಾವು ಸಹಾಯಕರಾಗಿದ್ದೇವೆ; ನಂಬಿಕೆಯ ವಿಷಯದಲ್ಲಿ ದೃಢನಿಂತಿದ್ದೀರಿ.” (2 ಕೊರಿಂಥ 1:24) ಹೌದು, ಸಭೆಗಾಗಿ ನಿಯಮಗಳನ್ನು ಸ್ಥಾಪಿಸಲು ಯಾವುದೇ ಪ್ರೇರಣೆಯನ್ನು ಪ್ರತಿರೋಧಿಸಿ, ಇತರರ ನಂಬಿಕೆಯನ್ನು ಕಟ್ಟಲು ಹಿರಿಯರು ಕೆಲಸಮಾಡತಕ್ಕದ್ದು.
21. ಉಡುಪುಗಳಲ್ಲಿ ಒಬ್ಬನು ಅತಿರೇಕತೆಗೆ ಹೋಗುವುದಾದರೆ, ಭಕ್ತಿವೃದ್ಧಿಯ ಸಹಾಯವನ್ನು ಹಿರಿಯರು ಹೇಗೆ ಒದಗಿಸಬಲ್ಲರು?
21 ಮೊದಲನೆಯ ಶತಮಾನದಲ್ಲಿದ್ದಂತೆಯೇ, ಕೆಲವೊಮ್ಮೆ ಹೊಸಬನೊಬ್ಬನು, ಯಾ ಆತ್ಮಿಕವಾಗಿ ನಿರ್ಬಲನಾಗಿರುವವನೊಬ್ಬನು ಉಡುಪು ಯಾ ಶೃಂಗಾರಸಾಧನಗಳ ಯಾ ಆಭರಣಗಳ ಬಳಕೆಯಲ್ಲಿ ಆಕ್ಷೇಪಾರ್ಹವಾದ ಯಾ ಅವಿವೇಕತನದ ಪಥವನ್ನು ಅನುಸರಿಸಬಹುದು. ಆಗ ಏನು? ಪುನಃ, ಯಥಾರ್ಥವಾಗಿ ಸಹಾಯ ನೀಡಲು ಬಯಸುವ ಕ್ರೈಸ್ತ ಹಿರಿಯರಿಗೆ ಗಲಾತ್ಯ 6:1 ಮಾರ್ಗದರ್ಶನವನ್ನು ನೀಡುತ್ತದೆ. ಹಿತೋಪದೇಶವನ್ನು ನೀಡಲು ಹಿರಿಯನು ನಿರ್ಣಯಿಸುವ ಮೊದಲು, ಪ್ರಾಯಶಃ ಅವನ ಇಷ್ಟ ಯಾ ಆಲೋಚನೆಯನ್ನು ಸಹಮತಿಸುವ ಹಿರಿಯನೆಂದು ಅವನಿಗೆ ಗೊತ್ತಿರುವವನೊಂದಿಗೆ ಹೋಗದೇ, ಅವನು ಇನ್ನೊಬ್ಬ ಜತೆ ಹಿರಿಯನೊಂದಿಗೆ ವಿವೇಕಯುಕ್ತವಾಗಿ ಸಮಾಲೋಚಿಸುವನು. ಉಡುಪು ಯಾ ಕೇಶಾಲಂಕಾರದ ಒಂದು ಲೌಕಿಕ ಪ್ರವೃತ್ತಿಯು ಸಭೆಯಲ್ಲಿರುವ ಅನೇಕರನ್ನು ಬಾಧಿಸುತ್ತಿರುವುದಾದರೆ, ಕೂಟವೊಂದರಲ್ಲಿ ದಯಾಭರಿತ, ಭಕ್ತಿವೃದ್ಧಿಯ ಭಾಗದ ಯಾ ವೈಯಕ್ತಿಕ ಸಹಾಯ ನೀಡುವ ಮೂಲಕ, ಅತ್ಯುತ್ತಮವಾಗಿ ಸಹಾಯ ಹೇಗೆ ನೀಡಬಹುದು ಎಂದು ಹಿರಿಯ ಸಮೂಹವು ಚರ್ಚಿಸಬಹುದು. (ಜ್ಞಾನೋಕ್ತಿ 24:6; 27:17) ಅವರ ಧ್ಯೇಯವು 2 ಕೊರಿಂಥ 6:3 ರಲ್ಲಿ ಪ್ರತಿಬಿಂಬಿತವಾದ ಹೊರನೋಟವನ್ನು ಪ್ರೋತ್ಸಾಹಿಸುವುದಾಗಿರುತ್ತದೆ: “ನಿಂದೆಗೆ ಅವಕಾಶಕೊಡದೆ ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.”
22. (ಎ) ದೃಷ್ಟಿಕೋನದಲ್ಲಿ ಚಿಕ್ಕ ಭಿನ್ನತೆಗಳು ಇರುವಾಗ, ಅದು ಯಾಕೆ ನೆಮ್ಮದಿಗೆಡಿಸಬಾರದು? (ಬಿ) ಪೌಲನು ಎಂಥ ಉತ್ತಮ ಉದಾಹರಣೆಯನ್ನು ಒದಗಿಸಿದ್ದಾನೆ?
22 ‘ಅವರ ಪರಾಂಬರಿಕೆಯಲ್ಲಿರುವ ದೇವರ ಮಂದೆಯನ್ನು ಪಾಲನೆ ಮಾಡುವ’ ಕ್ರೈಸ್ತ ಹಿರಿಯರು ಪೇತ್ರನು ಸ್ಥೂಲ ವಿವರಣೆ ಮಾಡಿದಂತೆ ‘ದೇವರ ಸ್ವಾಸ್ತ್ಯದವರ ಮೇಲೆ ದೊರೆತನ’ ಮಾಡುವವರಾಗಿರಬಾರದು. (1 ಪೇತ್ರ 5:2, 3) ಅವರ ಪ್ರೀತಿಯ ಕಾರ್ಯದ ವೇಳೆಯಲ್ಲಿ, ಭಿನ್ನವಾದ ಇಷ್ಟೈಸುವಿಕೆಗಳು ಇರಬಹುದಾದ ವಿಷಯಗಳ ಮೇಲೆ ಪ್ರಶ್ನೆಗಳು ಏಳಬಹುದು. ಕಾವಲಿನಬುರುಜು ಅಭ್ಯಾಸದ ಸಮಯದಲ್ಲಿ, ಪ್ರಾಯಶಃ ಎದ್ದುನಿಂತು ಪ್ಯಾರಗ್ರಾಫ್ಗಳನ್ನು ಓದುವ ಒಂದು ಸ್ಥಳೀಯ ಪದ್ಧತಿ ಇದ್ದೀತು. ಕ್ಷೇತ್ರ ಸೇವೆಗಾಗಿ ಗುಂಪು ಏರ್ಪಾಡು ಮತ್ತು ಸ್ವತಃ ಶುಶ್ರೂಷೆಯ ಕುರಿತಾದ ಅನೇಕ ವಿವರಗಳನ್ನು ಒಂದು ರೂಢಿಯ ಪ್ರಕಾರ ನಿರ್ವಹಿಸಬಹುದು. ಆದರೂ, ಯಾರಾದರೊಬ್ಬರು ಸ್ವಲ್ಪ ಭಿನ್ನವಾದ ರೀತಿಯಲ್ಲಿ ಮಾಡಿದರೆ ಅದೊಂದು ದುರ್ಘಟನೆಯಾಗಬಹುದೇ? ಪ್ರೀತಿಯ ಹಿರಿಯರು “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲು” ಆಶಿಸುತ್ತಾರಾದರೂ, ಈ ವಾಕ್ಸರಣಿಯನ್ನು ಪೌಲನು ಅದ್ಭುತಕರ ವರದಾನಗಳ ಸಂಬಂಧದಲ್ಲಿ ಬಳಸುತ್ತಾನೆ. ಆದರೆ ಪೂರ್ವಾಪರವು ತೋರಿಸುವದೇನಂದರೆ ಪೌಲನ ಮುಖ್ಯ ಆಸಕ್ತಿಯು “ಸಭೆಗೆ ಭಕ್ತಿವೃದ್ಧಿ ಉಂಟಾಗುವ ಹಾಗೆ” ಮಾಡುವದಾಗಿತ್ತು. (1 ಕೊರಿಂಥ 14:12, 40) ಅವನ ಪ್ರಮುಖ ಧ್ಯೇಯವು ಸಮಗ್ರವಾದ ಏಕರೂಪತೆ ಯಾ ಪೂರ್ಣ ಕಾರ್ಯಸಮರ್ಥತೆಯೋ ಎಂಬಂತೆ ಮುಗಿಯದ ಅನೇಕ ನಿಯಮಗಳನ್ನು ಮಾಡುವ ಯಾವುದೇ ಪ್ರವೃತ್ತಿಯನ್ನು ಅವನು ತೋರಿಸಲಿಲ್ಲ. ಅವನು ಬರೆದದ್ದು: “ಆದರೆ ನಿಮ್ಮನ್ನು ಕೆಡವಿಹಾಕುವದಕ್ಕಲ್ಲ ಕಟ್ಟುವದಕ್ಕಾಗಿಯೇ ಕರ್ತನು ಈ ಅಧಿಕಾರವನ್ನು ನಮಗೆ ಕೊಟ್ಟನು.”—2 ಕೊರಿಂಥ 10:8.
23. ಇತರರ ಭಕ್ತಿವೃದ್ಧಿಯನ್ನುಂಟುಮಾಡುವ ಪೌಲನ ಮಾದರಿಯನ್ನು ನಾವು ಅನುಕರಿಸಬಹುದಾದ ಕೆಲವು ವಿಧಾನಗಳು ಯಾವುವು?
23 ಸಕಾರಾತ್ಮಕವಾಗಿರುವ ಮತ್ತು ಹುರಿದುಂಬಿಸುವ ಮಾತುಗಳಿಂದ ಇತರರ ಭಕ್ತಿವೃದ್ಧಿಯನ್ನುಂಟುಮಾಡಲು ಪೌಲನು ನಿರ್ವಿವಾದವಾಗಿ ದುಡಿದನು. ಕೇವಲ ಮಿತ್ರರ ಚಿಕ್ಕ ಬಳಗದೊಂದಿಗೆ ಮಾತ್ರವೇ ಸಹವಾಸ ಮಾಡುವುದರ ಬದಲಾಗಿ, ಆತ್ಮಿಕವಾಗಿ ಬಲವಾಗಿರುವ ಮತ್ತು ವಿಶೇಷವಾಗಿ ಭಕ್ತಿವೃದ್ಧಿಯಾಗುವ ಆವಶ್ಯಕತೆಯಿರುವ ಅನೇಕ ಸಹೋದರ, ಸಹೋದರಿಯರನ್ನು ಸಂದರ್ಶಿಸಲು ಅವನು ವಿಶೇಷ ಅಧಿಕ ಪ್ರಯತ್ನಗಳನ್ನು ಮಾಡಿದನು. ಮತ್ತು ಅವನು ಪ್ರೀತಿಯನ್ನು—ನಿಯಮಗಳ ಬದಲಾಗಿ—ಒತ್ತಿಹೇಳಿದನು, ಯಾಕಂದರೆ “ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.”—1 ಕೊರಿಂಥ 8:1.
[ಅಧ್ಯಯನ ಪ್ರಶ್ನೆಗಳು]
a ಸಂದರ್ಭಗಳಿಗೆ ತಕ್ಕಂತೆ ಕುಟುಂಬದೊಳಗೆ ವಿವಿಧ ನಿಯಮಗಳು ಇರುವುದು ಯೋಗ್ಯವೆಂದು ತೋರಬಹುದು. ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗಾಗಿ ವಿಷಯಗಳನ್ನು ನಿರ್ಧರಿಸಲು ಹೆತ್ತವರಿಗೆ ಬೈಬಲ್ ಅಧಿಕಾರವನ್ನೀಯುತ್ತದೆ.—ವಿಮೋಚನಕಾಂಡ 20:12; ಜ್ಞಾನೋಕ್ತಿ 6:20; ಎಫೆಸ 6:1-3.
ಪರಾಮರ್ಶೆಗಾಗಿ ವಿಷಯಗಳು
▫ ನಾವು ನಕಾರಾತ್ಮಕ ಯಾ ಠೀಕಾತ್ಮಕ ಮಾತುಕತೆಯ ಪ್ರವೃತ್ತಿಯುಳ್ಳವರಾಗಿರುವದಾದರೆ ಬದಲಾವಣೆ ಯಾಕೆ ಯುಕ್ತವಾಗಿದೆ?
▫ ಸಭೆಯಲ್ಲಿ ಹೆಚ್ಚು ಭಕ್ತಿವೃದ್ಧಿಯನ್ನುಂಟುಮಾಡಲು ನಾವೇನು ಮಾಡಸಾಧ್ಯವಿದೆ?
▫ ಇತರರಿಗೆ ಅನೇಕ ನಿಯಮಗಳನ್ನು ಮಾಡುವುದರ ಕುರಿತು ದೈವಿಕ ನಮೂನೆ ಯಾವುದಾಗಿದೆ?
▫ ಮಂದೆಗಾಗಿ ಮಾನವ ನಿಯಮಗಳನ್ನು ಮಾಡುವದನ್ನು ವರ್ಜಿಸಲು ಹಿರಿಯರಿಗೆ ಯಾವುದು ಸಹಾಯ ಮಾಡುವುದು?