‘ನಾನು ದೀಕ್ಷಾಸ್ನಾನ ಪಡಕೊಳ್ಳಬೇಕೋ?’
ಜೀವಿತದಲ್ಲಿ ನಾವು ಮಾಡುವಂತೆ ಕೇಳಲ್ಪಡುವ ಎಲ್ಲಾ ನಿರ್ಣಯಗಳಲ್ಲಿ, ಪ್ರಾಯಶಃ ಒಂದಾದರೂ ಇದಕ್ಕಿಂತ ಹೆಚ್ಚು ಪ್ರಾಮುಖ್ಯದ್ದಾಗಿರದು: ‘ನಾನು ದೀಕ್ಷಾಸ್ನಾನ ಪಡಕೊಳ್ಳಬೇಕೋ?’ ಅದು ಅಷ್ಟು ಪ್ರಾಮುಖ್ಯವೇಕೆ? ಏಕೆಂದರೆ ಈ ಪ್ರಶ್ನೆಯ ಸಂಬಂಧದಲ್ಲಿ ನಮ್ಮ ನಿರ್ಣಯವು ನಮ್ಮ ಈಗಿನ ಜೀವನ ಕ್ರಮದ ಮೇಲೆ ಮಾತ್ರವೇ ಅಲ್ಲ, ನಮ್ಮ ನಿತ್ಯ ಸುಕ್ಷೇಮದ ಮೇಲೆ ಸಹ ನೇರವಾದ ಪರಿಣಾಮ ಬೀರುತ್ತದೆ.
ಈ ನಿರ್ಣಯದಿಂದ ನೀವು ಎದುರಿಸಲ್ಪಟ್ಟಿದ್ದೀರೋ? ಪ್ರಾಯಶಃ ನೀವು ಯೆಹೋವನ ಸಾಕ್ಷಿಗಳೊಂದಿಗೆ ಕೆಲವು ಸಮಯದಿಂದ ಬೈಬಲಧ್ಯಯನ ಮಾಡುತ್ತಿದ್ದೀರಿ. ಅಥವಾ ನಿಮ್ಮ ಹೆತ್ತವರು ಬಾಲ್ಯದಿಂದ ನಿಮಗೆ ಶಾಸ್ತ್ರವಚನಗಳನ್ನು ಕಲಿಸುತ್ತಿರಬಹುದು. ಏನು ಮಾಡಬೇಕೆಂಬ ವಿಷಯದಲ್ಲಿ ನಿರ್ಣಯವನ್ನು ಮಾಡಲೇ ಬೇಕಾದ ಬಿಂದುವನ್ನು ನೀವು ಈಗ ಮುಟ್ಟಿರಬಹುದು. ಯೋಗ್ಯ ನಿರ್ಣಯವನ್ನು ನೀವು ಮಾಡುವಂತೆ, ದೀಕ್ಷಾಸ್ನಾನದಲ್ಲಿ ಏನು ಒಳಗೂಡಿದೆ ಮತ್ತು ಯಾರು ದೀಕ್ಷಾಸ್ನಾನ ಪಡೆಯಬೇಕು ಎಂಬದನ್ನು ನೀವು ತಿಳುಕೊಳ್ಳುವ ಅಗತ್ಯವಿದೆ.
ದೀಕ್ಷಾಸ್ನಾನದಲ್ಲಿ ಒಳಗೂಡಿರುವ ವಿಷಯಗಳು
ಕೊಂಚಮಟ್ಟಿಗೆ ಒಂದು ಮದುವೆಯಂತೆ, ದೀಕ್ಷಾಸ್ನಾನವು ಒಂದು ಸಂಬಂಧವನ್ನು ಗಂಭೀರಗೊಳಿಸುವ ಒಂದು ಆಚರಣೆಯಾಗಿದೆ. ಒಂದು ಮದುವೆಯ ಸಂದರ್ಭದಲ್ಲಿ, ಒಳಗೂಡಿರುವ ಪುರುಷ ಮತ್ತು ಸ್ತ್ರೀಯು ಆ ಮೊದಲೇ ಒಂದು ಆಪ್ತ ಸಂಬಂಧವನ್ನು ಬೆಳೆಸಿಕೊಂಡವರಾಗಿದ್ದಾರೆ. ಯಾವುದು ಖಾಸಗಿಯಲ್ಲಿ ಒಪ್ಪಲ್ಪಟ್ಟಿದೆಯೇ ಅಂದರೆ, ಅವರಿಬ್ಬರು ಈಗ ಒಂದು ಸಾಕ್ಷಾತ್ ವಿವಾಹ ಸಂಬಂಧದೊಳಗೆ ಪ್ರವೇಶಿಸುತ್ತಿದ್ದಾರೆ ಎಂಬದನ್ನು, ವಿವಾಹ ಸಮಾರಂಭವು ಕೇವಲ ಬಹಿರಂಗ ಮಾಡುತ್ತದೆ. ದಂಪತಿಗಳಿಂದ ಆನಂದಿಸಲ್ಪಡುವ ಸುಯೋಗಗಳನ್ನು ಸಹ ಅದು ತೆರೆಯುತ್ತದೆ ಮತ್ತು ಅವರ ಕೂಡಿದ ಬಾಳಿನಲ್ಲಿ ಅವರು ನಡಿಸಲೇಬೇಕಾದ ಜವಾಬ್ದಾರಿಕೆಗಳನ್ನು ತರುತ್ತದೆ.
ದೀಕ್ಷಾಸ್ನಾನದಲ್ಲಿ ಪರಿಸ್ಥಿತಿಯು ಇದೇ ರೀತಿ ಇದೆ. ಬೈಬಲನ್ನು ನಾವು ಅಧ್ಯಯನ ಮಾಡುವಾಗ, ಯೆಹೋವನು ನಮಗಾಗಿ ಮಾಡಿರುವ ಪ್ರೀತಿಯುಳ್ಳ ವಿಷಯಗಳ ಕುರಿತು ನಾವು ಕಲಿಯುತ್ತೇವೆ. ಆತನು ನಮಗಾಗಿ ನಮ್ಮ ಜೀವವನ್ನು ಮತ್ತು ಅದರ ಪೋಷಣೆಗಾಗಿ ನಮಗೆ ಬೇಕಾದ ಎಲ್ಲವನ್ನು ಮಾತ್ರವೇ ಅಲ್ಲ, ಪಾಪಿಗಳಾದ ಮಾನವ ಕುಲವು ಆತನೊಂದಿಗೆ ಒಂದು ಸಂಬಂಧದೊಳಗೆ ಬರುವಂತೆ ಮತ್ತು ಪರದೈಸ ಭೂಮಿಯ ಮೇಲೆ ನಿತ್ಯಜೀವವನ್ನು ಪಡೆಯುವಂತೆ ಮಾರ್ಗ ತೆರೆಯಲಿಕ್ಕಾಗಿ ತನ್ನ ಏಕಜಾತ ಪುತ್ರನನ್ನೂ ಕೊಟ್ಟಿದ್ದಾನೆ. ಇದೆಲ್ಲದರ ಕುರಿತು ನಾವು ಯೋಚಿಸುವಾಗ, ನಾವು ಕ್ರಿಯೆನಡಿಸಲು ಪ್ರೇರೇಪಿಸಲ್ಪಡಲಾರೆವೇ?
ನಾವೇನು ಮಾಡ ಸಾಧ್ಯವಿದೆ? ದೇವರ ಕುಮಾರನಾದ ಯೇಸು ಕ್ರಿಸ್ತನು ನಮಗೆ ಹೇಳುವುದು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ.” (ಮತ್ತಾಯ 16:24) ಹೌದು, ಅವನ ತಂದೆಯಾದ ಯೆಹೋವನ ಅಭಿರುಚಿಗಳನ್ನು ಸೇವಿಸುವುದರಲ್ಲಿ ಅವನ ಮಾದರಿಯನ್ನು ಅನುಸರಿಸುವ ಮೂಲಕ ನಾವು ಯೇಸು ಕ್ರಿಸ್ತನ ಶಿಷ್ಯರಾಗಿರ ಸಾಧ್ಯವಿದೆ. ಆದರೂ ಆದನ್ನು ಮಾಡುವಂತೆ ನಮ್ಮನ್ನು ‘ನಿರಾಕರಿಸಿಕೊಳ್ಳುವ’ ಆವಶ್ಯಕತೆ ಇದೆ ಅಂದರೆ, ದೇವರ ಚಿತ್ತವನ್ನು ನಮ್ಮದಕ್ಕಿಂತ ಮುಂದಿಡಲು ಸ್ವಯಂಪೂರ್ವಕವಾಗಿ ನಿರ್ಧಾರವನ್ನು ಮಾಡುವುದಾಗಿದೆ; ಇದರಲ್ಲಿ ದೇವರ ಚಿತ್ತವನ್ನು ಮಾಡುವುದಕ್ಕಾಗಿ ನಮ್ಮ ಜೀವಿತವನ್ನು ನೀಡಿಕೊಳ್ಳುವುದು, ಅಥವಾ ಸಮರ್ಪಿಸಿಕೊಳ್ಳುವುದು ಸೇರಿರುತ್ತದೆ. ಈ ಸ್ವಯಂಪೂರ್ವಕವಾದ ಮತ್ತು ಖಾಸಗಿ ನಿರ್ಧಾರವನ್ನು ತಿಳಿಯಪಡಿಸಲು, ಒಂದು ಬಹಿರಂಗ ಆಚರಣೆಯು ನಡಿಯುತ್ತದೆ. ದೇವರಿಗೆ ನಮ್ಮ ಸಮರ್ಪಣೆಯನ್ನು ಬಹಿರಂಗವಾಗಿ ಸೂಚಿಸುವುದಕ್ಕೆ ಇರುವ ಆ ಆಚರಣೆಯೇ ನೀರಿನ ದೀಕ್ಷಾಸ್ನಾನವು.
ಯಾರಿಗೆ ದೀಕ್ಷಾಸ್ನಾನ ಮಾಡಲ್ಪಡಬೇಕು?
‘ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಉಪದೇಶಮಾಡಿರಿ’ ಎಂದು ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಅಪ್ಪಣೆಕೊಟ್ಟನು. (ಮತ್ತಾಯ 28:19, 20) ಯಾರು ದೀಕ್ಷಾಸ್ನಾನ ಪಡೆಯಲಿದ್ದಾರೋ ಅವರಿಂದ ಮನಸ್ಸು ಮತ್ತು ಹೃದಯದ ಪಕ್ವತೆಯ ಒಂದು ಪ್ರಮಾಣವನ್ನು ಕೇಳಲಾಗುತ್ತದೆ ಎಂಬದು ಸ್ಫುಟ. ದೇವರ ವಾಕ್ಯದ ಅವರ ವೈಯಕ್ತಿಕ ಅಭ್ಯಾಸದ ಮೂಲಕ, ತಮ್ಮ ಹಿಂದಣ ಜೀವಿತ ಮಾರ್ಗದಿಂದ ‘ಪಶ್ಚಾತ್ತಾಪಪಟ್ಟು . . . ತಿರುಗಿಕೊಳ್ಳುವ’ ಅಗತ್ಯವನ್ನು ಅವರು ಗಣ್ಯಮಾಡಲು ತೊಡಗಿದ್ದಾರೆ. (ಅ.ಕೃತ್ಯಗಳು 3:19) ಅನಂತರ, ಯೇಸು ಕ್ರಿಸ್ತನಿಂದ ಮಾಡಲ್ಪಟ್ಟ ಸೌವಾರ್ತಿಕ ಕೆಲಸವನ್ನು ತಕ್ಕೊಳ್ಳುವ, ಆತನ ಶಿಷ್ಯರಾಗಿ ಪರಿಣಮಿಸುವ ಅಗತ್ಯವನ್ನು ಅವರು ಕಂಡಿದ್ದಾರೆ. ಇದೆಲ್ಲವೂ ದೀಕ್ಷಾಸ್ನಾನದ ಹೆಜ್ಜೆಯನ್ನು ತಕ್ಕೊಳ್ಳುವ ಮುಂಚೆ ಸಂಭವಿಸಿರುತ್ತದೆ.
ನಿಮ್ಮ ಆತ್ಮಿಕ ಬೆಳವಣಿಗೆಯಲ್ಲಿ ಈ ಹಂತಕ್ಕೆ ನೀವು ಬಂದಿರುತ್ತೀರೋ? ದೇವರನ್ನು ಸೇವಿಸಲು ನೀವು ಬಯಸುತ್ತೀರೋ? ಬಯಸುವುದಾದರೆ, ಅಪೊಸ್ತಲರ ಕೃತ್ಯಗಳು 8 ನೆಯ ಅಧ್ಯಾಯದಲ್ಲಿ ದಾಖಲೆಯಾದ ಐಥಿಯೋಪ್ಯದ ಕಂಚುಕಿಯ ಬೈಬಲ್ ವೃತ್ತಾಂತವನ್ನು ಪ್ರಾರ್ಥನಾಪೂರ್ವಕವಾಗಿ ಗಮನಿಸಿರಿ. ಮೆಸ್ಸೀಯನಾದ ಯೇಸುವಿನ ಕುರಿತಾದ ಪ್ರವಾದನೆಗಳು ಈ ಮನುಷ್ಯನಿಗೆ ವಿವರಿಸಲ್ಪಟ್ಟಾಗ, ಅವನು ತನ್ನ ಮನಸ್ಸು ಮತ್ತು ಹೃದಯವನ್ನು ಶೋಧಿಸಿ, ಮತ್ತು ಅನಂತರ ಕೇಳಿದ್ದು: “ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು?” ಅವನಿಗೆ ಅಡಿಮ್ಡಾಡುವಂಥದ್ದು ಯಾವುದೂ ಇರಲಿಲ್ಲವೆಂಬದು ವ್ಯಕ್ತ; ಹೀಗೆ ಅವನಿಗೆ ದೀಕ್ಷಾಸ್ನಾನ ಮಾಡಲ್ಪಟ್ಟಿತು.—ಅ.ಕೃತ್ಯಗಳು 8:26-38.
ಇಂದು ಅನೇಕರು ಇದೇ ಪ್ರಶ್ನೆಯನ್ನು ಕೇಳುತ್ತಾ ಇದ್ದಾರೆ: “ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು?” ಫಲಿತಾಂಶವಾಗಿ, ಹೊಸತಾಗಿ ಸಮರ್ಪಿತರಾದ 3,00,945 ಮಂದಿ 1991 ರಲ್ಲಿ ದೀಕ್ಷಾಸ್ನಾನ ಪಡಕೊಂಡರು. ಇದು ಯೆಹೋವನ ಜನರೆಲ್ಲರಿಗೆ ಮಹಾ ಸಂತೋಷವನ್ನು ತಂದಿತು, ಮತ್ತು ಸಭೆಗಳಲ್ಲಿರುವ ಹಿರಿಯರು ಇತರ ಸುಹೃದಯದ ಜನರಿಗೆ ಪ್ರಗತಿ ಮಾಡಲು ಮತ್ತು ದೀಕ್ಷಾಸ್ನಾನಕ್ಕಾಗಿ ಯೋಗ್ಯತೆಗಳನ್ನು ತಲಪಲು ಸಹಾಯ ಕೊಡಲು ಸಂತೋಷಿಸುತ್ತಾರೆ.
ಆದರೂ, ನೀವು ಕಾಯುವಂತೆ ನಿಮ್ಮ ಸಭೆಯ ಹಿರಿಯರು ನಿಮಗೆ ಸೂಚಿಸ್ಯಾರು. ಅಥವಾ, ನೀವು ಎಳೆಯರಾಗಿದ್ದಲ್ಲಿ, ತುಸು ಸಮಯ ಕಾಯುವಂತೆ ನಿಮ್ಮ ಹೆತ್ತವರು ನಿಮ್ಮನ್ನು ಮಾರ್ಗದರ್ಶಿಸ್ಯಾರು. ಆಗ ಏನು? ನಿರಾಶೆ ಹೊಂದಬೇಡಿರಿ. ಮಹೋನ್ನತನೊಂದಿಗೆ ಒಂದು ವೈಯಕ್ತಿಕ ಸಂಬಂಧದೊಳಗೆ ಪ್ರವೇಶಿಸುವುದು ಒಂದು ಅತಿ ಗಂಭೀರವಾದ ವಿಷಯವೆಂಬದನ್ನು ಮನಸ್ಸಿನಲ್ಲಿಡಿರಿ. ಉನ್ನತ ಗುಣಮಟ್ಟಗಳು ಮುಟ್ಟಲ್ಪಡಬೇಕು ಮತ್ತು ಕಾಪಾಡಲ್ಪಡಬೇಕು. ಆದುದರಿಂದ ನೀಡಲ್ಪಡುವ ಸಲಹೆಗಳಿಗೆ ಕಿವಿಗೊಡಿರಿ ಮತ್ತು ಹೃದಯಪೂರ್ವಕವಾಗಿ ಅವನ್ನು ಅನ್ವಯಿಸಿಕೊಳ್ಳಿರಿ. ಕೊಡಲ್ಪಟ್ಟ ಕಾರಣಗಳು ನಿಮಗೆ ಪೂರ್ಣವಾಗಿ ತಿಳಿಯದಿದ್ದರೆ, ಸಂಕೋಚ ಪಡಬೇಡಿರಿ, ಯಾವ ಸಿದ್ಧತೆಯನ್ನು ಮಾಡುವ ಅಗತ್ಯ ನಿಮಗಿದೆ ಎಂಬದು ನಿಜವಾಗಿ ತಿಳಿಯುವ ತನಕ ಪ್ರಶ್ನೆಗಳನ್ನು ಕೇಳಿರಿ.
ಇನ್ನೊಂದು ಕಡೆ, ಅವರು ಕರೆಯುವ ಪ್ರಕಾರ, ಈ ದೊಡ್ಡ ಹೆಜ್ಜೆಯನ್ನು ತಕ್ಕೊಳ್ಳಲು ಕೆಲವರು ಹಿಂಜರಿಯುತ್ತಾರೆ. ಅವರಲ್ಲಿ ನೀವು ಒಬ್ಬರೋ? ಸಮರ್ಪಣೆ ಮತ್ತು ದೀಕ್ಷಾಸ್ನಾನವನ್ನು ನೀವೇಕೆ ಮುಂದಕ್ಕೆ ತಳ್ಳುತ್ತೀರಿ ಎಂಬದಕ್ಕೆ ನಿಶ್ಚಿತ ಕಾರಣಗಳು ನಿಮಗಿರಬಹುದು ನಿಶ್ಚಯ. ಆದರೆ ನೀವು ಯೋಗ್ಯತೆ ಪಡೆದಿದ್ದರೂ ಮತ್ತೂ ಹಿಂಜರಿಯುತ್ತಿದ್ದರೆ, ನಿಮ್ಮನ್ನು ಹೀಗೆ ಕೇಳಿಕೊಳ್ಳುವುದು ಒಳ್ಳೆಯದು: “ದೀಕ್ಷಾಸ್ನಾನವಾಗುವದಕ್ಕೆ ನನಗೆ ಅಡ್ಡಿ ಏನು?” ನಿಮ್ಮ ಪರಿಸ್ಥಿತಿಯನ್ನು ಪ್ರಾರ್ಥನಾಪೂರ್ವಕವಾಗಿ ವಿಶೇಷ್ಲಿಸಿಕೊಳ್ಳಿರಿ ಮತ್ತು ಯೆಹೋವನೊಂದಿಗೆ ಒಂದು ವೈಯಕ್ತಿಕ ಸಂಬಂಧದೊಳಗೆ ಪ್ರವೇಶಿಸಲು ಆತನ ಆಮಂತ್ರಣಕ್ಕೆ ಪ್ರತಿಕ್ರಿಯೆ ತೋರಿಸುವುದನ್ನು ಮುಂದೆ ತಳ್ಳಲು ಒಂದು ಯೋಗ್ಯ ಕಾರಣವು ನಿಮಗೆ ನಿಜವಾಗಿಯೂ ಇದೆಯೇ ಎಂದು ನೋಡಿರಿ.
‘ನಾನು ಇನ್ನೂ ಚಿಕ್ಕವನು’
ಒಂದುವೇಳೆ ನೀವು ಚಿಕ್ಕವರಾಗಿದ್ದರೆ, ಹೀಗೆ ಯೋಚಿಸುತ್ತಿರಬಹುದು, ‘ನಾನಿನ್ನೂ ಚಿಕ್ಕವನು.’ ಎಷ್ಟರ ತನಕ ಎಳೆಯರು ತಮ್ಮ ಕ್ರೈಸ್ತ ಹೆತ್ತವರಿಗೆ ವಿಧೇಯರೂ ಪ್ರತಿಕ್ರಿಯೆ ತೋರಿಸುವವರೂ ಆಗಿದ್ದಾರೋ ಮತ್ತು ತಮ್ಮ ಶಕ್ತ್ಯಾನುಸಾರ ಶಾಸ್ತ್ರವಚನಗಳನ್ನು ಅನ್ವಯಿಸುತ್ತಾರೋ ಆ ತನಕ ಯೆಹೋವನು ಅವರನ್ನು “ಪವಿತ್ರರಾಗಿ” ಪರಿಗಣಿಸುವನೆಂಬ ಭರವಸೆಯನ್ನಿಡ ಸಾಧ್ಯವಿದೆ ಎಂಬದು ನಿಜ. ವಾಸ್ತವದಲ್ಲಿ, ನೀತಿವಂತರಾದ ಹೆತ್ತವರೆಡೆಗಿನ ದೈವಿಕ ಅನುಗ್ರಹವು ಆಶ್ರಿತರಾದ ಮಕ್ಕಳ ಕಡೆಗೆ ವಿಸ್ತರಿಸುತ್ತದೆಂದು ಬೈಬಲು ನಮಗೆ ತಿಳಿಸುತ್ತದೆ. (1 ಕೊರಿಂಥ 7:14) ಆದರೂ, ಈ ಆಶ್ರಿತ ಅವಧಿಯು ಯಾವಾಗ ಕೊನೆಗೊಳ್ಳುವದೆಂಬ ಯಾವ ಪ್ರಾಯ ಸೀಮಿತವೂ ಬೈಬಲಿನಲ್ಲಿ ಕೊಡಲ್ಪಟ್ಟಿಲ್ಲ. ಆದುದರಿಂದ, ಕ್ರೈಸ್ತ ಯುವಕರು ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸುವುದು ಪ್ರಾಮುಖ್ಯವಾಗಿದೆ: ‘ನಾನು ದೀಕ್ಷಾಸ್ನಾನ ಪಡಕೊಳ್ಳಬೇಕೋ?’
‘ಯೌವನದಲ್ಲಿಯೇ ತಮ್ಮ ಸೃಷ್ಟಿಕರ್ತನನ್ನು ಸ್ಮರಿಸು’ ವಂತೆ ಬೈಬಲ್ ಯುವಕರನ್ನು ಪ್ರೋತ್ಸಾಹಿಸುತ್ತದೆ. (ಪ್ರಸಂಗಿ 12:1) ಈ ವಿಷಯದಲ್ಲಿ, ಎಳೆಯ ಸಮುವೇಲನು ಬಾಲಕನಾಗಿದ್ದಾಗಲೇ “ಯೆಹೋವನ ಸಾನ್ನಿಧ್ಯ ಸೇವೆ” ಮಾಡಿದ್ದ ಉದಾಹರಣೆ ನಮಗಿದೆ. ಬಾಲ್ಯದಿಂದಲೇ ತನ್ನ ತಾಯಿ ಮತ್ತು ಅಜ್ಜಿ ಕಲಿಸಿದ ಸತ್ಯವನ್ನು ಹೃದಯಕ್ಕೆ ತಕ್ಕೊಂಡ ತಿಮೊಥೆಯನ ಉದಾಹರಣೆಯೂ ನಮಗಿದೆ.—1 ಸಮುವೇಲ 2:18; 2 ತಿಮೊಥೆಯ 1:5; 3:14, 15.
ತದ್ರೀತಿ ಇಂದು, ಅನೇಕ ಯುವಕರು ಯೆಹೋವನ ಸೇವೆಗಾಗಿ ತಮ್ಮ ಜೀವಿತಗಳನ್ನು ಸಮರ್ಪಿಸಿಕೊಂಡಿರುತ್ತಾರೆ. ಹದಿನೈದು ವರ್ಷ ವಯಸ್ಸಿನ ಅಕಿಫ್ಯೂಸ್ ಹೇಳಿದ್ದೇನಂದರೆ ದೀಕ್ಷಾಸ್ನಾನ ಪಡಕೊಳ್ಳುವಂತೆ ತನ್ನ ನಿರ್ಣಯವನ್ನು ಮಾಡಲು ಸೇವಾ ಕೂಟದ ಒಂದು ಭಾಗವು ಅವನಿಗೆ ಸಹಾಯಮಾಡಿತು. ಅಯ್ಯೂಮಿ ಹತ್ತು ವರ್ಷ ಪ್ರಾಯದಲ್ಲಿ ದೀಕ್ಷಾಸ್ನಾನ ಪಡೆದಳು. ಆಕೆ ಯೆಹೋವನನ್ನು ಸೇವಿಸ ಬಯಸಿದ್ದಳು ಯಾಕಂದರೆ ಆಕೆ ನಿಜವಾಗಿ ಆತನನ್ನು ಪ್ರೀತಿಸುವವಳಾದಳು. ಆಕೆಗೀಗ 13 ವರ್ಷ ಮತ್ತು ಯಾರು ಸಹ ಯೆಹೋವನನ್ನು ಪ್ರೀತಿಸುವವಳಾದಳೋ ಆ ತನ್ನ ಬೈಬಲ್ ವಿದ್ಯಾರ್ಥಿನಿ ಅವಳ 12 ನೆಯ ವಯಸ್ಸಿನಲ್ಲಿ ದೀಕ್ಷಾಸ್ನಾನವಾಗುವುದನ್ನು ಕಾಣುವ ಅನುಭವವನ್ನು ಈವಾಗಲೇ ಪಡೆದಿದ್ದಾಳೆ. ಅಯ್ಯೂಮಿಯ ತಮ್ಮನಾದ ಹಿಕರು ಸಹ ತನ್ನ ಹತ್ತು ವರ್ಷ ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡಕೊಂಡನು. “ನಾನು ತೀರಾ ಚಿಕ್ಕವನು ಎಂದು ಕೆಲವರಂದರು” ಎಂದು ನೆನಪಿಸುತ್ತಾನೆ ಅವನು, “ಆದರೆ ನನಗೆ ಹೇಗೆನಿಸಿತ್ತೆಂದು ಯೆಹೋವನಿಗೆ ಗೊತ್ತಿತ್ತು, ನನಗಿದ್ದ ಎಲ್ಲದರ್ದಿಂದ ಆತನ ಸೇವೆ ಮಾಡುವುದಕ್ಕಾಗಿ ನನ್ನ ಜೀವವನ್ನು ಸಮರ್ಪಿಸಲು ನಾನು ನಿರ್ಣಯವನ್ನು ಮಾಡಿದಾಗ, ದೀಕ್ಷಾಸ್ನಾನ ಪಡಕೊಳ್ಳಲೇಬೇಕೆಂದು ನಿಷ್ಕರ್ಷಿಸಿಕೊಂಡೆನು.”
ಹೆತ್ತವರ ಮಾದರಿ ಸಹ ಕಾರಣೀಭೂತವೆಂದು ಒಬ್ಬ ಯುವ ಸಹೋದರಿಯ ಅನುಭವದಿಂದ ಕಾಣ ಸಾಧ್ಯವಿದೆ. ಅವಳ ತಾಯಿ ಅವಳೊಂದಿಗೆ ಮತ್ತು ಅವಳ ತಮ್ಮ ಮತ್ತು ತಂಗಿಯೊಂದಿಗೆ ಬೈಬಲ್ ಅಭ್ಯಾಸ ನಡಿಸುವುದನ್ನು ಅವಳ ತಂದೆ ಪ್ರತಿಬಂಧಿಸಿದ್ದನು. ಅವನು ಅವರಿಗೆ ಹೊಡೆಯುತ್ತಿದ್ದನು ಮತ್ತು ಅವರ ಪುಸ್ತಕಗಳನ್ನು ಸುಟ್ಟುಹಾಕುತ್ತಿದ್ದನು. ಆದರೆ ತಾಯಿಯ ತಾಳ್ಮೆ ಮತ್ತು ನಂಬಿಕೆಯ ಕಾರಣದಿಂದ, ಮಕ್ಕಳು ಯೆಹೋವನನ್ನು ಸೇವಿಸುವ ಮಹತ್ವವನ್ನು ಕಾಣಶಕ್ತರಾದರು. ಈ ಎಳೆಯ ಹುಡುಗಿ 13 ವರ್ಷದಲ್ಲಿ ದೀಕ್ಷಾಸ್ನಾನ ಪಡೆದಳು, ಮತ್ತು ಅವಳ ತಮ್ಮ ಮತ್ತು ತಂಗಿ ಅವಳ ಮಾದರಿಯನ್ನು ಅನುಸರಿಸಿದ್ದಾರೆ.
‘ನಾನು ತೀರಾ ಮುದುಕನು’
ಕೀರ್ತನೆಗಾರನು ಅಂದದ್ದು: “ಮುದುಕರೂ ಹುಡುಗರೂ ಯೆಹೋವನನ್ನು ಕೊಂಡಾಡಲಿ.” (ಕೀರ್ತನೆ 148:12, 13) ಹೌದು, ಪ್ರಾಯಸ್ಥರು ಸಹ ಯೆಹೋವನ ಪಕ್ಕದಲ್ಲಿ ತಮ್ಮ ಸ್ಥಾನವನ್ನು ತಕ್ಕೊಳ್ಳುವ ಅಗತ್ಯವನ್ನು ಮನಗಾಣತಕ್ಕದ್ದು. ಕೆಲವು ಮುದುಕರಾದರೋ ಬದಲಾವಣೆಗಳನ್ನು ಮಾಡುವುದರಿಂದ ದೂರವಿರುವ ಪ್ರವೃತ್ತಿಯುಳ್ಳವರಾಗಿದ್ದಾರೆ. “ಹಳೆ ನಾಯಿಗೆ ಹೊಸ ಚೇಷ್ಟೆಗಳನ್ನು ಕಲಿಸಲಾಗದು” ಎಂದವರ ಅನಿಸಿಕೆ. ಆದರೂ, ಅಬ್ರಹಾಮನು 75 ವರ್ಷ ಪ್ರಾಯದವನಾಗಿದ್ದಾಗ ಯೆಹೋವನು ಅವನಿಗೆ ಹೀಗಂದಿದ್ದನೆಂದು ನೆನಪಿನಲ್ಲಿಡಿರಿ: “ನಿನ್ನ ಸ್ವದೇಶವನ್ನೂ ಬಂಧುಬಳಗವನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು.” (ಅ.ಕೃತ್ಯಗಳು 7:3; ಆದಿಕಾಂಡ 12:1, 4) ಮೋಶೆಯು 80 ವರ್ಷದವನಾಗಿದ್ದಾಗ ದೇವರು ಅವನಿಗೆ ಈ ನಿಯೋಗವನ್ನು ಕೊಟ್ಟನು: “ನನ್ನ ಜನರನ್ನು . . . ಐಗುಪ್ತದೇಶದಿಂದ ಹೊರಗೆ ತಾ.” (ವಿಮೋಚನಕಾಂಡ 3:10) ಯೆಹೋವನಿಗೆ ಅವರ ಪ್ರೀತಿ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಲು ಅವರಿಂದ ಕೇಳಲ್ಪಟ್ಟಾಗ, ಈ ಪುರುಷರು ಮತ್ತು ಬೇರೆ ಎಲ್ಲರೂ ತಮ್ಮ ಜೀವನಕ್ರಮದಲ್ಲಿ ಒಳ್ಳೇದಾಗಿ ತಳವೂರಿದವರಾಗಿದ್ದರು. ಯೆಹೋವನ ಕರೆಗೆ ಪ್ರತಿವರ್ತನೆ ತೋರಿಸಲು ಅವರು ಅನುಮಾನಿಸಲಿಲ್ಲ.
ಇಂದಿನ ಕುರಿತೇನು? ಶಿಜುಮು ಬೈಬಲಿನ ಒಂದು ಅಧ್ಯಯನ ಪ್ರಾರಂಭಿಸಿದಾಗ 78 ವರ್ಷಗಳಿಂದ ಒಬ್ಬ ಬೌದ್ಧನಾಗಿದ್ದನು. ಅವನ ಕುಟುಂಬವು ಅವನನ್ನು ವಿರೋಧಿಸಿತು, ಅವನ ಸ್ವಂತ ಮನೆಯಲ್ಲಿ ಸಹ ಅವನನ್ನು ಅಧ್ಯಯನ ಮಾಡಲು ಬಿಡಲಿಲ್ಲ. ಒಂದೇ ವರ್ಷದ ಅನಂತರ, ಯೆಹೋವನಿಗೆ ತನ್ನನ್ನು ಸಮರ್ಪಿಸುವ ಅಗತ್ಯವನ್ನು ಅವನು ಕಂಡುಕೊಂಡನು, ಮತ್ತು ದೀಕ್ಷಾಸ್ನಾನ ಪಡಕೊಂಡನು. ಅವನು ಈ ಬದಲಾವಣೆಯನ್ನು ಮಾಡಿದ್ದೇಕೆ? ಅವನಂದದ್ದು: “ಸುಳ್ಳು ಧರ್ಮದಿಂದ ನಾನು ಅನೇಕ ವರ್ಷಗಳಿಂದ ಮೋಸ ಹೋಗಿದ್ದೆನು, ಮತ್ತು ಯೆಹೋವನಿಂದ ಸದಾ ಸತ್ಯವನ್ನು ಪಡೆಯುತ್ತಾ ಇರಲು ನಾನು ಬಯಸಿದೆ.”
‘ಈಗ ನಮ್ಮನ್ನು ರಕ್ಷಿಸುತ್ತದೆ’
ವೇಳೆ ಮೀರುತ್ತಾ ಹೋಗುತ್ತಿದೆ. ಜೀವಗಳು, ನಿಮ್ಮದೂ ಸೇರಿ, ಗಂಡಾಂತರದಲ್ಲಿವೆ. ಯೆಹೋವನಿಗೆ ಸಮರ್ಪಣೆಯನ್ನು ಮತ್ತು ಅದನ್ನು ನೀರಿನ ದೀಕ್ಷಾಸ್ನಾನದಿಂದ ಸೂಚಿಸುವ ವಿಷಯವನ್ನು ನೀವು ಗಂಭೀರವಾಗಿ ತಕ್ಕೊಳ್ಳುವುದು ತುರ್ತಿನದ್ದಾಗಿದೆ. ಅಪೊಸ್ತಲ ಪೇತ್ರನು ಇದನ್ನು ಒತ್ತಿಹೇಳುತ್ತಾ, ಅಂದದ್ದು: “ದೀಕ್ಷಾಸ್ನಾನವು . . . ಈಗ ನಮ್ಮನ್ನು ರಕ್ಷಿಸುತ್ತದೆ.” ಅವನು ಮತ್ತೂ ಅಂದದ್ದೇನಂದರೆ ದೀಕ್ಷಾಸ್ನಾನವು “ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ” (ದೀಕ್ಷಾಸ್ನಾನಕ್ಕಾಗಿ ಯೋಗ್ಯತೆ ಪಡೆಯುವ ಮುಂಚೆ ಒಬ್ಬ ವ್ಯಕ್ತಿಯು ಈ ಮೊದಲೇ ಅದನ್ನು ಮಾಡಿರುತ್ತಾನೆ) “ಒಳ್ಳೇ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದೇ.”—1 ಪೇತ್ರ 3:21.
ಯೆಹೋವನ ಆವಶ್ಯಕತೆಗಳಿಗೆ ತಕ್ಕಂತೆ ಹೊಂದಿಸಿಕೊಂಡ ಮೇಲೆ, ದೀಕ್ಷಾಸ್ನಾನಿತ ಶಿಷ್ಯನು ಒಳ್ಳೇ ಮನಸ್ಸಾಕ್ಷಿಯನ್ನು ಪಡೆದವನಾಗುತ್ತಾನೆ. ಯೆಹೋವನನ್ನು ಸೇವಿಸುವುದರಲ್ಲಿ ತನ್ನ ಕೈಯಲಾಗುವಷ್ಟನ್ನು ಮಾಡುತ್ತಾ ಇರುವ ಮೂಲಕ ಅವನು ಮನೋಶಾಂತಿ ಮತ್ತು ಸಂತೃಪ್ತಿಯನ್ನು ಆನಂದಿಸುವನು. (ಯಾಕೋಬ 1:25) ಎಲ್ಲಾದಕ್ಕಿಂತ ಹೆಚ್ಚಾಗಿ, ಬರಲಿರುವ ಹೊಸ ವ್ಯವಸ್ಥೆಯಲ್ಲಿ ಯೆಹೋವನಿಂದ ಅನಂತ ಆಶೀರ್ವಾದಗಳಿಗಾಗಿ ಅವನು ಭರವಸೆಯಿಂದ ಮುನ್ನೋಡ ಸಾಧ್ಯವಿದೆ. ಹೀಗೆ, ‘ನಾನು ದೀಕ್ಷಾಸ್ನಾನ ಪಡಕೊಳ್ಳಬೇಕೋ?’ ಎಂಬ ಪ್ರಶ್ನೆಗೆ ನೀವು ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೋರಿಸುತ್ತಾ ಇರುವಾಗ, ಅದು ನಿಮ್ಮ ಪಾಲಾಗಿ ಇರಲಿ.
[ಪುಟ 25 ರಲ್ಲಿರುವ ಚಿತ್ರ]
ಹುಡುಗನಾಗಿದ್ದ ಸಮುವೇಲನು ಯೆಹೋವನ ಸನ್ನಿಧಿ ಸೇವೆ ಮಾಡಿದನು
[ಪುಟ 26 ರಲ್ಲಿರುವ ಚಿತ್ರ]
ಮೋಶೆಯು ಯೆಹೋವನಿಂದ ನಿಯೋಗವನ್ನು ಪಡೆದಾಗ 80 ವರ್ಷದವನಾಗಿದ್ದನು
[ಪುಟ 27 ರಲ್ಲಿರುವ ಚಿತ್ರಗಳು]
ಇಂದು ದೀಕ್ಷಾಸ್ನಾನ ಪಡೆಯುವ ಯುವಕರೂ ವೃದ್ಧರೂ ದೇವರ ಹೊಸ ವ್ಯವಸ್ಥೆಯಲ್ಲಿ ಅನಂತ ಆಶೀರ್ವಾದಗಳನ್ನು ಮುನ್ನೋಡಬಲ್ಲರು