ಮದ್ಯಪಾನೀಯಗಳ ವಿಷಯದಲ್ಲಿ ನಿಮಗೆ ದೈವಿಕವಾದ ನೋಟವಿದೆಯೊ?
ಸುಮಾರು 20 ವರ್ಷಗಳ ಹಿಂದೆ, ಅಗೆತಶಾಸ್ತ್ರಜ್ಞರು, ಇರಾನಿನ ಉರ್ಮೀಯಾ ಎಂಬ ಪಟ್ಟಣದ ಹತ್ತಿರದಲ್ಲಿದ್ದ ಒಂದು ಹಳೆಯ ಮಣ್ಣಿಟ್ಟಿಗೆಯ ಕಟ್ಟಡವನ್ನು ಅಗೆದು ತೆಗೆದರು. ವಿಜ್ಞಾನಿಗಳಿಗನುಸಾರ, ಸಾವಿರಾರು ವರ್ಷ ಹಳೆಯದ್ದಾಗಿರುವ, ತೀರ ಆರಂಭದ ಮಾನವ ನೆಲಸುನಾಡುಗಳು ಸ್ಥಾಪಿಸಲ್ಪಟ್ಟ ಸಮಯಕ್ಕೆ ನಿರ್ದೇಶಿಸುವ, ಒಂದು ಕುಂಭಕಲೆಯ ಪಾತ್ರೆಯನ್ನು ಅವರು ಅದರಲ್ಲಿ ಕಂಡುಹಿಡಿದರು. ಇತ್ತೀಚೆಗೆ, ಆ ಪಾತ್ರೆಯನ್ನು ವಿಶ್ಲೇಷಿಸುವುದರಲ್ಲಿ ಅತ್ಯಾಧುನಿಕ ತಂತ್ರಜ್ಞಾನವು ಉಪಯೋಗಿಸಲ್ಪಟ್ಟಿತು. ಅದರೊಳಗೆ ದ್ರಾಕ್ಷಾಮದ್ಯ ತಯಾರಿಸುವಿಕೆಯ ಅತ್ಯಂತ ಹಳೆಯದಾದ ರಸಾಯನಿಕ ಪುರಾವೆಯನ್ನು ಕಂಡುಹಿಡಿದಾಗ ವಿಜ್ಞಾನಿಗಳು ಆಶ್ಚರ್ಯಪಟ್ಟರು.
ಪುರಾತನ ಸಮಯಗಳಿಂದಲೂ, ದ್ರಾಕ್ಷಾಮದ್ಯ, ಬಿಯರ್, ಮತ್ತು ಇತರ ಮದ್ಯಪಾನೀಯಗಳು ಬಳಸಲ್ಪಟ್ಟಿವೆಯೆಂಬುದನ್ನು ಬೈಬಲ್ ಕೂಡ ಸ್ಪಷ್ಟವಾಗಿ ಸ್ಥಾಪಿಸುತ್ತದೆ. (ಆದಿಕಾಂಡ 27:25; ಪ್ರಸಂಗಿ 9:7; ನಹೂಮ 1:10) ಇತರ ಆಹಾರಗಳ ವಿಷಯದಲ್ಲಿರುವಂತೆ, ಯೆಹೋವನು ವ್ಯಕ್ತಿಗಳಿಗೆ—ಮದ್ಯಪಾನೀಯಗಳನ್ನು ಕುಡಿಯುವ ಅಥವಾ ಕುಡಿಯದೆ ಇರುವ—ಒಂದು ಆಯ್ಕೆಯನ್ನು ಕೊಡುತ್ತಾನೆ. ಯೇಸು ಅನೇಕ ವೇಳೆ ತನ್ನ ಊಟಗಳೊಂದಿಗೆ ದ್ರಾಕ್ಷಾಮದ್ಯವನ್ನು ಕುಡಿದನು. ಸ್ನಾನಿಕನಾದ ಯೋಹಾನನು ಮದ್ಯವನ್ನು ವರ್ಜಿಸಿದನು.—ಮತ್ತಾಯ 11:18, 19.
ಕುಡಿಯುವುದರಲ್ಲಿ ಮಿತಿಮೀರಿದ ಲೋಲುಪತೆಯನ್ನು ಬೈಬಲ್ ನಿಷೇಧಿಸುತ್ತದೆ. ಕುಡುಕತನವು ದೇವರ ವಿರುದ್ಧ ಗೈಯುವ ಒಂದು ಪಾಪವಾಗಿದೆ. (1 ಕೊರಿಂಥ 6:9-11) ಇದಕ್ಕೆ ಹೊಂದಿಕೆಯಲ್ಲಿ, ಯೆಹೋವನ ಸಾಕ್ಷಿಗಳು ಪಶ್ಚಾತ್ತಾಪರಹಿತ ಕುಡುಕರಾಗುವ ಯಾರನ್ನೂ ಕ್ರೈಸ್ತ ಸಭೆಯೊಳಗಿರಲು ಅನುಮತಿಸುವುದಿಲ್ಲ. ಸಭೆಯಲ್ಲಿ ಮದ್ಯಪಾನೀಯಗಳನ್ನು ಕುಡಿಯಲು ಆರಿಸಿಕೊಳ್ಳುವವರು ಅದನ್ನು ಮಿತಭಾವದಿಂದ ಮಾಡತಕ್ಕದ್ದು.—ತೀತ 2:2, 3.
ದೈವಿಕವಲ್ಲದ ಒಂದು ನೋಟ
ಇಂದು ಅನೇಕ ಜನರಿಗೆ ಮದ್ಯಪಾನೀಯಗಳ ಕುರಿತಾಗಿ ಒಂದು ದೈವಿಕ ನೋಟವಿರುವುದಿಲ್ಲ. ಈ ಪುರಾತನ ಉತ್ಪಾದನೆಯ ದುರುಪಯೋಗವನ್ನು ಸೈತಾನನು ಪ್ರವರ್ಧಿಸುತ್ತಿದ್ದಾನೆಂಬುದನ್ನು ನೋಡುವುದು ಸುಲಭ. ಉದಾಹರಣೆಗಾಗಿ, ದಕ್ಷಿಣ ಪೆಸಿಫಿಕ್ನ ಕೆಲವು ದ್ವೀಪಗಳಲ್ಲಿ, ಗೃಹತಯಾರಿಕೆಯ ಹುದುಗೆಬ್ಬಿಸಲ್ಪಟ್ಟ ಪಾನೀಯವೊಂದರ ದೊಡ್ಡ ಪರಿಮಾಣಗಳನ್ನು ಕುಡಿಯಲು ಪುರುಷರು ಒಟ್ಟುಸೇರುವುದು ವಾಡಿಕೆಯಾಗಿದೆ. ಈ ಗೋಷ್ಠಿಗಳು ಹಲವಾರು ತಾಸುಗಳ ವರೆಗೆ ನಡೆಯಬಹುದು ಮತ್ತು ಪದೇ ಪದೇ ನಡೆಸಲ್ಪಡುತ್ತವೆ—ಅನೇಕ ಪುರುಷರು ಈ ಪರಿಪಾಠದಲ್ಲಿ ದಿನನಿತ್ಯವೂ ಲೋಲುಪರಾಗುತ್ತಾರೆ. ಕೆಲವರು ಅದನ್ನು ಬರೇ ಸಂಸ್ಕೃತಿಯ ಭಾಗದೋಪಾದಿ ಪರಿಗಣಿಸುತ್ತಾರೆ. ಕೆಲವೊಮ್ಮೆ, ಸ್ಥಳಿಕವಾದ ಗೃಹತಯಾರಿಕೆಯ ಪಾನೀಯದ ಬದಲಿಗೆ—ಅಥವಾ ಅದಕ್ಕೆ ಕೂಡಿಸಿ—ಬಿಯರ್ ಮತ್ತು ಸಾರಾಯಿ ಸೇವಿಸಲ್ಪಡುತ್ತದೆ. ಅನೇಕ ವೇಳೆ ಕುಡುಕತನವು ಪರಿಣಮಿಸುತ್ತದೆ.
ಇನ್ನೊಂದು ಪೆಸಿಫಿಕ್ ದೇಶದಲ್ಲಿ, ಪುರುಷರಿಂದ ಮದ್ಯಸಾರದ ಮಿತಭಾವದ ಸೇವನೆಯು ಹೆಚ್ಚುಕಡಿಮೆ ಕೇಳಿರದ ಸಂಗತಿಯಾಗಿದೆ. ಸಾಮಾನ್ಯವಾಗಿ, ಅವರು ಕುಡಿಯುವುದೇ ಮತ್ತೇರಲಿಕ್ಕಾಗಿ. ಸಂಬಳದ ದಿನದಂದು ಪುರುಷರ ಒಂದು ಗುಂಪು ಜೊತೆಸೇರಿ, ಬಿಯರ್ನ ಹಲವಾರು ಕಾರ್ಟನ್ಗಳನ್ನು—ಒಂದರಲ್ಲಿ 24 ಬಾಟಲಿಗಳು ಇರುತ್ತವೆ—ಖರೀದಿಸುತ್ತಾರೆ. ಬಿಯರ್ ಮುಗಿದುಹೋದಾಗಲೇ ಅವರು ಕುಡಿಯುವುದನ್ನು ನಿಲ್ಲಿಸುತ್ತಾರೆ. ಪರಿಣಾಮವಾಗಿ, ಸಾರ್ವಜನಿಕ ಕುಡುಕತನವು ತೀರ ಸಾಮಾನ್ಯವಾಗಿದೆ.
ಹೆಂಡ ಮತ್ತು ಇತರ ಸ್ಥಳಿಕ ಮದ್ಯಗಳಂತಹ, ಹುದುಗೆಬ್ಬಿಸಿರುವ ಪಾನೀಯಗಳು ಸಾಂಪ್ರದಾಯಿಕವಾಗಿ ಆಫ್ರಿಕನ್ ದೇಶಗಳಲ್ಲಿ ಉಪಯೋಗಿಸಲ್ಪಡುತ್ತವೆ. ಅತಿಥಿಗಳು ಸತ್ಕರಿಸಲ್ಪಡುವಾಗ ಮದ್ಯಸಾರವು ನೀಡಲ್ಪಡಲೇಬೇಕೆಂದು ಕೆಲವು ಸಮುದಾಯಗಳಲ್ಲಿನ ಸಂಪ್ರದಾಯವು ವಿಧಿಸುತ್ತದೆ. ಸತ್ಕರಿಸುವ ಆತಿಥೇಯನು ವಾಡಿಕೆಗನುಸಾರ, ತನ್ನ ಭೇಟಿಕಾರನು ಸೇವಿಸಸಾಧ್ಯವಿರುವದಕ್ಕಿಂತ ಹೆಚ್ಚನ್ನು ಒದಗಿಸುತ್ತಾನೆ. ಒಂದು ಕ್ಷೇತ್ರದಲ್ಲಿ, ಪ್ರತಿಯೊಬ್ಬ ಭೇಟಿಕಾರನ ಮುಂದೆ 12 ಬಿಯರ್ ಬಾಟಲಿಗಳನ್ನು ಇಡುವುದು ಪದ್ಧತಿಯಾಗಿದೆ.
ಅನೇಕ ಜ್ಯಾಪನೀಸ್ ಕಂಪೆನಿಗಳು ತಮ್ಮ ಉದ್ಯೋಗಿಗಳಿಗಾಗಿ ಬಸ್ ಪ್ರಯಾಣಗಳನ್ನು ವ್ಯವಸ್ಥಾಪಿಸುತ್ತವೆ. ಮದ್ಯಪಾನೀಯಗಳ ದೊಡ್ಡ ಮೊತ್ತಗಳು ಜೊತೆಯಲ್ಲಿ ತರಲ್ಪಡುತ್ತವೆ, ಮತ್ತು ಕುಡುಕತನವು ಮನ್ನಿಸಲ್ಪಡುತ್ತದೆ. ಈ ಕಂಪೆನಿ ಸಂತೋಷಸಂಚಾರಗಳಲ್ಲಿ ಕೆಲವು ಎರಡು ಅಥವಾ ಮೂರು ದಿನಗಳದ್ದಾಗಿರುತ್ತವೆ. ಏಷಿಯಾವೀಕ್ ಎಂಬ ಪತ್ರಿಕೆಗನುಸಾರ, ಜಪಾನಿನಲ್ಲಿ, “ಅಕ್ಕಿ ರೈತರಿಂದ ಹಿಡಿದು ಧನಿಕ ರಾಜಕಾರಣಿಗಳ ವರೆಗೆ, ಪರಂಪರೆಗನುಸಾರ ಪೌರುಷತ್ವದ ಮಟ್ಟವು, ಒಬ್ಬ ಮನುಷ್ಯನು ತಾನು ಎಷ್ಟು ಸಾರಾಯಿಯನ್ನು ಸೇವಿಸಸಾಧ್ಯವಿದೆಯೊ ಅದರಿಂದ ಅಳೆಯಲ್ಪಡುತ್ತದೆ.” ತದ್ರೀತಿಯ ಪ್ರವೃತ್ತಿಗಳನ್ನು ಇತರ ಏಷಿಯನ್ ದೇಶಗಳಲ್ಲಿ ಅವಲೋಕಿಸಲಾಗುತ್ತಿದೆ. ಏಷಿಯಾವೀಕ್ ತಿಳಿಸುವುದೇನಂದರೆ, “ದಕ್ಷಿಣ ಕೊರಿಯ ಜನರು ಈಗ ತಲಾ ಕುಡಿಯುವವರು ಪ್ರಪಂಚದಲ್ಲಿ ಇನ್ನೆಲ್ಲಿಯೂ ಸೇವಿಸುವುದಕ್ಕಿಂತಲೂ ಹೆಚ್ಚು ಮದ್ಯವನ್ನು ಕುಡಿಯುತ್ತಾರೆ.”
ಅಮೆರಿಕದಲ್ಲಿನ ಕಾಲೇಜ್ ಆವರಣಗಳಲ್ಲಿ ಪಾನಕೇಳಿಯು ಒಂದು ವ್ಯಾಪಕವಾದ ಆಚಾರವಾಗಿದೆ. ದ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಎಸೋಸಿಯೇಷನ್ಗನುಸಾರ, “ಹೆಚ್ಚಿನ ಪಾನಕೇಳಿ ಕುಡುಕರು ತಮ್ಮನ್ನು ಸಮಸ್ಯೆಯುಕ್ತ ಕುಡುಕರನ್ನಾಗಿ ಪರಿಗಣಿಸಿಕೊಳ್ಳುವುದಿಲ್ಲ.”a ಇದು ಆಶ್ಚರ್ಯಗೊಳಿಸುವಂತಹ ವಿಷಯವಾಗಿರಬಾರದು ಯಾಕಂದರೆ ಅನೇಕ ದೇಶಗಳಲ್ಲಿ ವಾರ್ತಾ ಮಾಧ್ಯಮವು ಕುಡಿಯುವುದನ್ನು ಒಂದು ಸಾಹಸಮಯ, ಫ್ಯಾಶನೆಬಲ್ ಮತ್ತು ಚಾತುರ್ಯದ ಚಟುವಟಿಕೆಯೋಪಾದಿ ಪ್ರವರ್ಧಿಸುತ್ತದೆ. ಅನೇಕ ವೇಳೆ ಈ ಪ್ರಚಾರವು ನಿರ್ದಿಷ್ಟವಾಗಿ ಯುವ ಜನರನ್ನು ಗುರಿಹಲಗೆಯನ್ನಾಗಿ ಮಾಡುತ್ತದೆ.
ಬ್ರಿಟನಿನಲ್ಲಿ, ಬಿಯರ್ನ ಸೇವನೆಯು 20 ವರ್ಷದ ಅವಧಿಯೊಂದರಲ್ಲಿ ಇಮ್ಮಡಿಯಾಗಿದೆ ಮತ್ತು ತೀಕ್ಷ್ಣವಾದ ಸಾರಾಯಿಯ ಸೇವನೆಯು ತ್ರಿಗುಣಿಸಿದೆ. ಕುಡಿಯುವವರು ತೀರ ಎಳೆಯ ಪ್ರಾಯದಲ್ಲೇ ಕುಡಿಯುವುದನ್ನು ಆರಂಭಿಸುತ್ತಿದ್ದಾರೆ, ಮತ್ತು ಹೆಚ್ಚು ಸ್ತ್ರೀಯರು ಕುಡಿಯುತ್ತಿದ್ದಾರೆ. ಪೂರ್ವ ಯೂರೋಪಿಯನ್ ಮತ್ತು ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ತದ್ರೀತಿಯ ಪ್ರವೃತ್ತಿಗಳು ಅವಲೋಕಿಸಲ್ಪಟ್ಟಿವೆ. ಮದ್ಯವ್ಯಸನದ ಮತ್ತು ಮದ್ಯಸಾರ ಸಂಬಂಧಿತ ವಾಹನಸಂಚಾರ ಮರಣಗಳ ಅನುಗುಣವಾಗಿ ಏರುತ್ತಿರುವ ಪ್ರಮಾಣಗಳಿಂದ ಇದು ಎತ್ತಿತೋರಿಸಲ್ಪಟ್ಟಿದೆ. ಸ್ಪಷ್ಟವಾಗಿ, ಲೋಕವ್ಯಾಪಕವಾಗಿ ಮದ್ಯಸಾರದ ದುರ್ಬಳಕೆಯಲ್ಲಿ ಸುಸ್ಪಷ್ಟವಾದ ವೃದ್ಧಿಯಿದೆ.
ತೀರ ಹೆಚ್ಚೆಂದರೆ ಎಷ್ಟು?
ಮದ್ಯಪಾನೀಯಗಳ ಕುರಿತಾದ ಬೈಬಲಿನ ನೋಟವು ಸಮತೋಲನದ್ದಾಗಿದೆ. ಒಂದು ಕಡೆಯಲ್ಲಿ ಶಾಸ್ತ್ರಗಳು ದ್ರಾಕ್ಷಾಮದ್ಯವನ್ನು “ಮರ್ತ್ಯ ಮನುಷ್ಯನ ಹೃದಯವನ್ನು ಉಲ್ಲಾಸಿಸುವಂತೆ ಮಾಡುವ” (NW) ಯೆಹೋವ ದೇವರ ಒಂದು ಕೊಡುಗೆಯೆಂದು ಹೇಳುತ್ತವೆ. (ಕೀರ್ತನೆ 104:1, 15) ಇನ್ನೊಂದು ಕಡೆ, ಅತಿಯಾದ ಲೋಲುಪತೆಯನ್ನು ಖಂಡಿಸುವಾಗ ಬೈಬಲ್, “ಭಾರಿ ಕುಡಿತ,” (NW) “ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ,” “ತುಂಬ ದ್ರಾಕ್ಷಾಮದ್ಯಕ್ಕೆ ವಶವಾದವನು,” (NW) ಮತ್ತು “ತುಂಬ ದ್ರಾಕ್ಷಾಮದ್ಯಕ್ಕೆ ದಾಸನಾಗಿರುವವನು” (NW) ಎಂಬಂತಹ ಅಭಿವ್ಯಕ್ತಿಗಳನ್ನು ಉಪಯೋಗಿಸುತ್ತದೆ. (ಲೂಕ 21:34; 1 ಪೇತ್ರ 4:3; 1 ತಿಮೊಥೆಯ 3:8; ತೀತ 2:3) ಆದರೆ “ತುಂಬ ದ್ರಾಕ್ಷಾಮದ್ಯ”ವು ಎಷ್ಟು ಆಗಿರುತ್ತದೆ? ಮದ್ಯಪಾನೀಯಗಳ ವಿಷಯದಲ್ಲಿ ದೈವಿಕವಾದ ನೋಟದಲ್ಲಿ ಏನು ಅಡಕವಾಗಿದೆಯೆಂಬುದನ್ನು ಒಬ್ಬ ಕ್ರೈಸ್ತನು ಹೇಗೆ ನಿರ್ಧರಿಸಬಲ್ಲನು?
ಕುಡುಕತನವನ್ನು ಗುರುತಿಸುವುದು ಕಷ್ಟಕರವಲ್ಲ. ಅದರ ಫಲಿತಾಂಶಗಳು ಬೈಬಲಿನಲ್ಲಿ ಈ ಮಾತುಗಳೊಂದಿಗೆ ವರ್ಣಿಸಲ್ಪಟ್ಟಿವೆ: “ಅಯ್ಯಯ್ಯೋ ಅನ್ನುವವರು ಯಾರು? ಅಕಟಾ ಎಂದು ಕೂಗಿಕೊಳ್ಳುವವರು ಯಾರು? ಯಾರು ಜಗಳವಾಡುತ್ತಾರೆ? ಯಾರು ಗೋಳಾಡುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯಪಡುತ್ತಾರೆ? ಕೆಂಪೇರಿದ ಕಣ್ಣುಳ್ಳವರು ಯಾರು? ಮಿಶ್ರಮದ್ಯಪಾನಾಸಕ್ತರಾಗಿ ದ್ರಾಕ್ಷಾರಸವನ್ನು ಕುಡಿಯುತ್ತಾ ಕಾಲಹರಣಮಾಡುವವರೇ. . . . ನಿನ್ನ ಕಣ್ಣು ಇಲ್ಲದ್ದನ್ನೇ ಕಾಣುವದು, ಮನಸ್ಸು ವಿಪರೀತಗಳನ್ನು ಹೊರಪಡಿಸುವದು.”—ಜ್ಞಾನೋಕ್ತಿ 23:29-33.
ತೀರ ಹೆಚ್ಚು ಮದ್ಯಸಾರವು ಗಲಿಬಿಲಿಯನ್ನು, ಭ್ರಾಂತಿಗಳನ್ನು, ಪ್ರಜ್ಞೆಯಿಲ್ಲದಿರುವಿಕೆಯನ್ನು, ಮತ್ತು ಮನಸ್ಸು ಹಾಗೂ ದೇಹದ ಇತರ ಅಸ್ವಸ್ಥತೆಗಳನ್ನು ಉಂಟುಮಾಡಬಲ್ಲದು. ಮದ್ಯಸಾರದ ಪ್ರಭಾವದ ಕೆಳಗೆ, ಒಬ್ಬ ವ್ಯಕ್ತಿಯು ತನ್ನ ನಡವಳಿಕೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾ, ತನಗೇ ಅಥವಾ ಇತರರಿಗೆ ಹಾನಿಯನ್ನುಂಟುಮಾಡಬಲ್ಲನು. ಕುಡುಕರು, ನಗೆಗೀಡಾದ, ಜುಗುಪ್ಸೆಹುಟ್ಟಿಸುವ ಅಥವಾ ಅನೈತಿಕ ನಡತೆಯಲ್ಲಿ ಒಳಗೂಡಿರುವುದಕ್ಕಾಗಿ ಜ್ಞಾತರಾಗಿದ್ದಾರೆ.
ಮೇಲೆ ತಿಳಿಸಲ್ಪಟ್ಟಿರುವ ಫಲಿತಾಂಶಗಳೊಂದಿಗೆ, ಕುಡುಕತನದ ಹಂತದ ವರೆಗೆ ಕುಡಿಯುವುದು, ಖಂಡಿತವಾಗಿಯೂ ತೀರ ಹೆಚ್ಚು ಕುಡಿಯುವಿಕೆಯಾಗಿದೆ. ಆದಾಗಲೂ, ಒಬ್ಬ ವ್ಯಕ್ತಿಯು, ಕುಡುಕತನದ ಎಲ್ಲಾ ಲಾಕ್ಷಣಿಕ ಸೂಚನೆಗಳನ್ನು ಪ್ರದರ್ಶಿಸದೇ, ಮಿತಭಾವದ ಒಂದು ಕೊರತೆಯನ್ನು ತೋರಿಸಬಲ್ಲನು. ಹೀಗಿರುವುದರಿಂದ, ಒಬ್ಬನು ತೀರ ಹೆಚ್ಚು ಕುಡಿದಿದ್ದಾನೊ ಎಂಬ ಪ್ರಶ್ನೆಯು ಅನೇಕ ವೇಳೆ ವಾದಾಸ್ಪದವಾಗಿದೆ. ಮಿತಭಾವ ಮತ್ತು ಮಿತಿಮೀರಿದ ಲೋಲುಪತೆಯ ನಡುವಿನ ಮೇರೆಯೆಲ್ಲಿದೆ?
ನಿಮ್ಮ ಯೋಚನಾ ಸಾಮರ್ಥ್ಯಗಳನ್ನು ರಕ್ಷಿಸಿಕೊಳ್ಳಿರಿ
ಬ್ಲಡ್-ಆಲ್ಕಹಾಲ್ನ ಸಾರತೆಗಳ ಪ್ರತಿಶತಗಳನ್ನು ಅಥವಾ ಬೇರೆ ಯಾವುದೊ ಮಟ್ಟವನ್ನು ಒದಗಿಸುವ ಮೂಲಕ ಬೈಬಲ್ ಮಿತಿಗಳನ್ನು ಇಡುವುದಿಲ್ಲ. ಮದ್ಯಸಾರದ ಸೈರಣೆಯು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಆದರೂ, ಬೈಬಲ್ ತತ್ತ್ವಗಳು ಎಲ್ಲಾ ಕ್ರೈಸ್ತರಿಗೆ ಅನ್ವಯಿಸುತ್ತವೆ ಮತ್ತು ಮದ್ಯಪಾನೀಯಗಳ ಕುರಿತಾದ ಒಂದು ದೈವಿಕ ನೋಟವನ್ನು ಬೆಳೆಸಿಕೊಳ್ಳಲು ನಮಗೆ ಸಹಾಯ ಮಾಡಸಾಧ್ಯವಿದೆ.
“ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು” ಎಂಬುದೇ ಪ್ರಥಮ ಆಜ್ಞೆ ಎಂದು ಯೇಸು ಹೇಳಿದನು. (ಮತ್ತಾಯ 22:37, 28) ಮದ್ಯಸಾರವು ಮನಸ್ಸಿನ ಮೇಲೆ ಒಂದು ನೇರವಾದ ಪರಿಣಾಮವನ್ನು ಬೀರುತ್ತದೆ, ಮತ್ತು ಅದರಲ್ಲಿ ಮಿತಿಮೀರಿದ ಲೋಲುಪತೆಯು, ಎಲ್ಲಾ ಆಜ್ಞೆಗಳಲ್ಲಿ ಅತಿ ಮಹತ್ತಾಗಿರುವ ಈ ಆಜ್ಞೆಯ ನಿಮ್ಮ ವಿಧೇಯತೆಗೆ ಅಡ್ಡಬರುವುದು. ಅದು ಒಳ್ಳೆಯ ವಿಮರ್ಶನಾಶಕ್ತಿಯೊಂದಿಗೆ, ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ, ಸ್ವನಿಯಂತ್ರಣದ ಅಭ್ಯಸಿಸುವಿಕೆ, ಮತ್ತು ಮನಸ್ಸಿನ ಇತರ ಪ್ರಾಮುಖ್ಯ ಕಾರ್ಯಗಳನ್ನು ಗಂಭೀರವಾಗಿ ಅಡ್ಡೈಸಬಲ್ಲದು. ಶಾಸ್ತ್ರಗಳು ನಮಗೆ ಬುದ್ಧಿಹೇಳುವುದು: “ಸುಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿಟ್ಟುಕೋ, ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದೇ ಇರಲಿ. ಅವು ನಿನಗೆ ಜೀವವೂ ನಿನ್ನ ಕೊರಳಿಗೆ ಭೂಷಣವೂ ಆಗಿರುವವು.”—ಜ್ಞಾನೋಕ್ತಿ 3:21, 22.
ಅಪೊಸ್ತಲ ಪೌಲನು ಕ್ರೈಸ್ತರಿಗೆ ಮೊರೆಯಿಡುವುದು: “ನಿಮ್ಮ ದೇಹಗಳನ್ನು ತ್ಯಾಗ ಜೀವನವಾಗಿ, ಪರಿಶುದ್ಧವಾಗಿ, ದೇವರಿಗೆ ಸ್ವೀಕರಣೀಯವಾಗಿ, ನಿಮ್ಮ ವಿವೇಚನಾಶಕ್ತಿಯೊಂದಿಗೆ ಪವಿತ್ರ ಸೇವೆಯಾಗಿ ಸಮರ್ಪಿಸಿರಿ.” (ರೋಮಾಪುರ 12:1, NW) ಕ್ರೈಸ್ತನೊಬ್ಬನು, ತನ್ನ “ವಿವೇಚನಾಶಕ್ತಿ”ಯನ್ನು ತೊರೆಯುವಷ್ಟರ ಮಟ್ಟಿಗೆ ಮದ್ಯಸಾರವನ್ನು ಕುಡಿಯುವಲ್ಲಿ ಅವನು “ದೇವರಿಗೆ ಸ್ವೀಕರಣೀಯ”ವಾಗಿರುವನೊ? ಸಾಮಾನ್ಯವಾಗಿ, ಮಿತಭಾವವಿಲ್ಲದ ಒಬ್ಬ ಕುಡುಕನು ಕ್ರಮೇಣವಾಗಿ ಮದ್ಯಸಾರಕ್ಕಾಗಿ ಸೈರಣೆಯನ್ನು ಬೆಳೆಸಿಕೊಳ್ಳುತ್ತಾನೆ. ತನ್ನ ಭಾರಿ ಕುಡಿಯುವಿಕೆಯು ಕುಡುಕತನದ ಹೊಸ್ತಿಲಿಗಿಂತ ಕಡಮೆ ಸ್ಥಾನದಲ್ಲಿದೆಯೆಂದು—ಅವನಿಗೆ—ಅನಿಸಬಹುದು. ಆದರೂ, ಅವನು ಮದ್ಯಸಾರದ ಮೇಲಿನ ಒಂದು ಅಹಿತಕರವಾದ ಅವಲಂಬನೆಯನ್ನು ಬೆಳೆಸಿಕೊಳ್ಳುತ್ತಿರಬಹುದು. ಅಂತಹ ವ್ಯಕ್ತಿಯೊಬ್ಬನು ತನ್ನ ದೇಹವನ್ನು ‘ತ್ಯಾಗ ಜೀವನವಾಗಿಯೂ, ಪರಿಶುದ್ಧವಾಗಿಯೂ’ ಅರ್ಪಿಸುವುದು ಸಾಧ್ಯವೊ?
ಒಬ್ಬ ಕ್ರೈಸ್ತರೋಪಾದಿ ನಿಮ್ಮ “ಸುಜ್ಞಾನವನ್ನೂ ಬುದ್ಧಿಯನ್ನೂ” ಕುಗ್ಗಿಸುವ ಮದ್ಯಸಾರದ ಯಾವುದೇ ಮೊತ್ತವು, ನಿಮಗೆ ತೀರ ಹೆಚ್ಚಾದ ಮದ್ಯಸಾರವಾಗಿದೆ.
ಮದ್ಯಸಾರದ ವಿಷಯದಲ್ಲಿ ನಿಮ್ಮ ನೋಟವನ್ನು ಯಾವುದು ರೂಪಿಸುತ್ತದೆ?
ಕುಡಿಯುವುದರ ಕಡೆಗಿನ ತನ್ನ ಮನೋಭಾವವು ಸದ್ಯದ ಪ್ರವೃತ್ತಿಗಳು ಅಥವಾ ಸಂಪ್ರದಾಯಗಳಿಂದ ಪ್ರಭಾವಿಸಲ್ಪಡುತ್ತಿದೆಯೊ ಎಂಬುದನ್ನು ಒಬ್ಬ ಕ್ರೈಸ್ತನು ಅಳೆಯಬೇಕು. ಮದ್ಯಪಾನೀಯಗಳ ವಿಷಯದಲ್ಲಿ, ಸಾಂಸ್ಕೃತಿಕ ಪ್ರವೃತ್ತಿಗಳು ಅಥವಾ ವಾರ್ತಾಮಾಧ್ಯಮದ ಪ್ರಚಾರದ ಮೇಲೆ ಆಧಾರಿಸಲ್ಪಟ್ಟಿರುವ ಆಯ್ಕೆಗಳನ್ನು ಮಾಡಲು ನೀವು ನಿಶ್ಚಯವಾಗಿಯೂ ಬಯಸಲಾರಿರಿ. ನಿಮ್ಮ ಸ್ವಂತ ಮನೋಭಾವವನ್ನು ಅಳೆಯುವುದರಲ್ಲಿ, ನಿಮ್ಮನ್ನೇ ಕೇಳಿಕೊಳ್ಳಿ, ‘ಸಮುದಾಯದಲ್ಲಿ ಏನು ಸ್ವೀಕಾರಾರ್ಹವೊ ಅದರಿಂದ ನನ್ನ ಮನೋಭಾವವು ಪ್ರಭಾವಿಸಲ್ಪಟ್ಟಿದೆಯೊ? ಅಥವಾ ನನ್ನ ಕುಡಿಯುವಿಕೆಯು ಬೈಬಲ್ ತತ್ತ್ವಗಳಿಂದ ನಿಯಂತ್ರಿಸಲ್ಪಟ್ಟಿದೆಯೊ?’
ಯೆಹೋವನ ಸಾಕ್ಷಿಗಳು ಸಂಸ್ಕೃತಿವಿರೋಧಿಗಳಾಗಿರದಿದ್ದರೂ, ಇಂದು ವ್ಯಾಪಕವಾಗಿ ಸ್ವೀಕರಿಸಲ್ಪಟ್ಟಿರುವ ಅನೇಕ ಆಚಾರಗಳನ್ನು ಯೆಹೋವನು ದ್ವೇಷಿಸುತ್ತಾನೆಂಬುದನ್ನು ಅವರು ಅರಿಯುತ್ತಾರೆ. ಕೆಲವು ಸಮುದಾಯಗಳು, ಗರ್ಭಪಾತ, ರಕ್ತ ಪೂರಣಗಳು, ಸಲಿಂಗಿಕಾಮ, ಅಥವಾ ಬಹುಪತ್ನೀತ್ವವನ್ನು ಮನ್ನಿಸುತ್ತವೆ. ಕ್ರೈಸ್ತರಾದರೊ, ಈ ವಿಷಯಗಳ ಕುರಿತಾದ ದೇವರ ನೋಟಕ್ಕೆ ಹೊಂದಿಕೆಯಲ್ಲಿ ವರ್ತಿಸುತ್ತಾರೆ. ಹೌದು, ಒಂದು ದೈವಿಕ ನೋಟವು, ಇಂತಹ ಆಚಾರಗಳು ಸಾಂಸ್ಕೃತಿಕವಾಗಿ ಸ್ವೀಕರಣೀಯವಾಗಿರಲಿ ಇಲ್ಲದಿರಲಿ, ಅವುಗಳನ್ನು ದ್ವೇಷಿಸುವಂತೆ ಒಬ್ಬ ಕ್ರೈಸ್ತನನ್ನು ಪ್ರಚೋದಿಸುವುದು.—ಕೀರ್ತನೆ 97:10.
“ದುಂದೌತನ” ಮತ್ತು “ಮದ್ಯಪಾನಗೋಷ್ಠಿ”ಗಳನ್ನು ಒಳಗೂಡಿರುವಂತಹ “ಜನಾಂಗಗಳ ಇಚ್ಛೆ”ಯ (NW) ಕುರಿತಾಗಿ ಬೈಬಲ್ ಮಾತಾಡುತ್ತದೆ. “ಮದ್ಯಪಾನಗೋಷ್ಠಿ”ಗಳು ಎಂಬ ಪದವು, ಮದ್ಯಸಾರದ ದೊಡ್ಡ ಪ್ರಮಾಣಗಳನ್ನು ಸೇವನೆಮಾಡುವ ನಿರ್ದಿಷ್ಟ ಉದ್ದೇಶದೊಂದಿಗೆ ಏರ್ಪಡಿಸಲ್ಪಟ್ಟಿರುವ ನೆರವಿಗಳ ಅಭಿಪ್ರಾಯವನ್ನು ಕೊಡುತ್ತದೆ. ಬೈಬಲ್ ಸಮಯಗಳಲ್ಲಿ, ತುಂಬ ಸಾರಾಯಿಯನ್ನು, ಅದರ ಪರಿಣಾಮಗಳು ತಟ್ಟದೆ ಕುಡಿಯುವುದರ ವಿಷಯದಲ್ಲಿ ತಮ್ಮ ಊಹಿತ ಸಾಮರ್ಥ್ಯದ ಕುರಿತಾಗಿ ಹೆಮ್ಮೆಯುಳ್ಳವರಾಗಿದ್ದ ಕೆಲವರು, ಇತರರಿಗಿಂತ ಹೆಚ್ಚನ್ನು ಕುಡಿಯಲು ಪ್ರಯತ್ನಿಸಿದರು, ಅಥವಾ ಯಾರು ಹೆಚ್ಚನ್ನು ಕುಡಿಯಬಲ್ಲರೆಂಬುದನ್ನು ನೋಡಲು ಪ್ರಯತ್ನಿಸಿದರೆಂದು ತೋರುತ್ತದೆ. ಅಪೊಸ್ತಲ ಪೇತ್ರನು ಈ ರೀತಿಯ ನಡತೆಯನ್ನು, ಯಾವುದರಲ್ಲಿ ಪಶ್ಚಾತ್ತಾಪಿಗಳಾದ ಕ್ರೈಸ್ತರು ಇನ್ನು ಮುಂದೆ ಪಾಲಿಗರಾಗುವುದಿಲ್ಲವೊ, ಆ “ಅಪರಿಮಿತವಾದ ಪಟಿಂಗತನ”ವೆಂದು ಸೂಚಿಸಿದನು.—1 ಪೇತ್ರ 4:3, 4.
ಒಬ್ಬ ಕ್ರೈಸ್ತನು, ತಾನು ಎಷ್ಟರ ವರೆಗೆ ಮತ್ತನಾಗುವುದಿಲ್ಲವೊ ಅಲ್ಲಿಯ ವರೆಗೆ, ಅವನು ಎಲ್ಲಿ, ಯಾವಾಗ, ಅಥವಾ ಎಷ್ಟು ಕುಡಿಯುತ್ತಾನೊ ಅದು ನಿಜವಾಗಿ ಪ್ರಾಮುಖ್ಯವಾದ ವಿಷಯವಲ್ಲವೆಂಬ ನೋಟವನ್ನು ಸ್ವೀಕರಿಸುವುದು ಸಮಂಜಸವೊ? ಅದು ದೈವಿಕವಾದ ನೋಟವೊ? ಎಂದು ನಾವು ಕೇಳಿಕೊಳ್ಳಬಹುದು. ಬೈಬಲ್ ಹೇಳುವುದು: “ಹೀಗಿರಲಾಗಿ ನೀವು ಉಂಡರೂ ಕುಡಿದರೂ ಇನ್ನೇನೂ ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.” (1 ಕೊರಿಂಥ 10:31) ಬಹಿರಂಗವಾಗಿ ದೊಡ್ಡ ಪ್ರಮಾಣದಲ್ಲಿ ಮದ್ಯಸಾರವನ್ನು ಕುಡಿಯಲು ಒಟ್ಟುಸೇರುವ ಪುರುಷರ ಒಂದು ಗುಂಪಲ್ಲಿ ಎಲ್ಲರೂ ಮತ್ತರಾಗಲಿಕ್ಕಿಲ್ಲ, ಆದರೆ ಅವರ ನಡತೆಯು ಯೆಹೋವನಿಗೆ ಮಹಿಮೆಯನ್ನು ತರುವುದೊ? ಬೈಬಲ್ ಬುದ್ಧಿಹೇಳುವುದು: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.”—ರೋಮಾಪುರ 12:2.
ಇತರರನ್ನು ಎಡವುವುದಕ್ಕೆ ಆಸ್ಪದ ಕೊಡದಿರಿ
ಆಸಕ್ತಿಕರವಾಗಿ, ಮಿತಿಮೀರಿದ ಲೋಲುಪತೆಯನ್ನು ಸಹಿಸುವ ಸಂಸ್ಕೃತಿಗಳೇ, ಒಬ್ಬ ಭಾರಿ ಕುಡುಕನು ತಾನು ದೇವರ ಪುರುಷನೆಂದು ಹೇಳಿಕೊಳ್ಳುವಾಗ ಅದನ್ನು ಮೆಚ್ಚುವುದಿಲ್ಲ. ದಕ್ಷಿಣ ಪೆಸಿಫಿಕ್ನ ಒಂದು ಚಿಕ್ಕ ಸಮುದಾಯದಲ್ಲಿ, ಒಬ್ಬ ಪ್ರೇಕ್ಷಕನು ಹೇಳಿದ್ದು: “ನಾನು ನಿಮ್ಮನ್ನು ಮೆಚ್ಚುತ್ತೇನೆ. ನೀವು ಸತ್ಯವನ್ನು ಸಾರುತ್ತೀರಿ. ಆದರೆ ನಾವು ನೋಡುವ ಸಮಸ್ಯೆಯೇನೆಂದರೆ ನಿಮ್ಮ ಪುರುಷರು ತೀರ ಹೆಚ್ಚು ಮದ್ಯಸಾರವನ್ನು ಕುಡಿಯುತ್ತಾರೆ.” ಆ ವ್ಯಕ್ತಿಗಳು ಮತ್ತರಾಗಲಿಲ್ಲ, ಆದರೂ ಆ ವಾಸ್ತವಾಂಶವು ಸಮುದಾಯದಲ್ಲಿನ ಹೆಚ್ಚಿನವರಿಗೆ ಅಷ್ಟು ವ್ಯಕ್ತವಾಗಿರಲಿಲ್ಲ ಎಂಬ ವರದಿಯಿದೆ. ಕುಡಿಯುವ ಗೋಷ್ಠಿಗಳಲ್ಲಿ ಒಳಗೂಡುವ ಹೆಚ್ಚಿನ ಇತರ ಪುರುಷರಂತೆ, ಸಾಕ್ಷಿಗಳೂ ಮತ್ತರಾಗುತ್ತಾರೆಂದು ಪ್ರೇಕ್ಷಕರು ಸುಲಭವಾಗಿ ತೀರ್ಮಾನಿಸಸಾಧ್ಯವಿತ್ತು. ದೀರ್ಘವಾದ ಕುಡಿಯುವ ಗೋಷ್ಠಿಗಳಲ್ಲಿ ಒಳಗೂಡುವ ಕ್ರೈಸ್ತ ಶುಶ್ರೂಷಕನೊಬ್ಬನು, ಒಂದು ಒಳ್ಳೆಯ ಹೆಸರನ್ನು ಕಾಪಾಡಿಕೊಂಡು, ತನ್ನ ಸಾರ್ವಜನಿಕ ಶುಶ್ರೂಷೆಯನ್ನು ವಾಕ್ ಸ್ವಾತಂತ್ರ್ಯದೊಂದಿಗೆ ಪೂರೈಸಸಾಧ್ಯವೊ?—ಅ. ಕೃತ್ಯಗಳು 28:31.
ಕೆಲವೊಮ್ಮೆ ಕೆಲವು ಸಹೋದರ ಸಹೋದರಿಯರು, ತಮ್ಮ ಉಸಿರಿನಲ್ಲಿ ಮದ್ಯಸಾರದ ಬಲವಾದ ವಾಸನೆಯೊಂದಿಗೆ ರಾಜ್ಯ ಸಭಾಗೃಹಕ್ಕೆ ಆಗಮಿಸುತ್ತಾರೆಂದು, ಒಂದು ಯೂರೋಪಿಯನ್ ದೇಶದಿಂದ ಬಂದ ವರದಿಯು ಸೂಚಿಸುತ್ತದೆ. ಇದು ಇತರರ ಮನಸ್ಸಾಕ್ಷಿಗಳನ್ನು ಕಲಕಿಸಿದೆ. ಬೈಬಲ್ ಬುದ್ಧಿಹೇಳುವುದು: “ಮಾಂಸ ತಿನ್ನುವದನ್ನಾಗಲಿ ದ್ರಾಕ್ಷಾರಸ ಕುಡಿಯುವದನ್ನಾಗಲಿ ನಿನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವ ಬೇರೆ ಯಾವದನ್ನಾಗಲಿ ಬಿಟ್ಟುಬಿಡುವದೇ ಒಳ್ಳೇದು.” (ರೋಮಾಪುರ 14:21) ಮದ್ಯಪಾನೀಯಗಳ ಕುರಿತಾದ ಒಂದು ದೈವಿಕವಾದ ನೋಟವು, ಕೆಲವೊಂದು ಪರಿಸ್ಥಿತಿಗಳಡಿಯಲ್ಲಿ ಮದ್ಯಸಾರದಿಂದ ದೂರವಿರುವುದನ್ನು ಅರ್ಥೈಸುವುದಾದರೂ, ಇತರರ ಮನಸ್ಸಾಕ್ಷಿಗಳ ಕಡೆಗೆ ಸೂಕ್ಷ್ಮಸಂವೇದಿಯಾಗಿರುವಂತೆ ಒಬ್ಬ ಪ್ರೌಢ ಕ್ರೈಸ್ತನನ್ನು ಪ್ರೇರಿಸುವುದು.
ಕ್ರೈಸ್ತರು ಸುಸ್ಪಷ್ಟವಾಗಿ ಭಿನ್ನರಾಗಿದ್ದಾರೆ
ವಿಷಾದಕರವಾಗಿ, ಮದ್ಯಪಾನೀಯಗಳನ್ನು ಸೇರಿಸಿ, ಯೆಹೋವನು ಮಾನವಕುಲಕ್ಕೆ ಕೊಟ್ಟಿರುವ ಒಳ್ಳೆಯ ಸಂಗತಿಗಳನ್ನು ದುರುಪಯೋಗಿಸುವ ಮೂಲಕ ಆತನನ್ನು ರೇಗಿಸಲು ಈ ಲೋಕವು ಹೆಚ್ಚನ್ನು ಮಾಡಿದೆ. ಸಮರ್ಪಿತನಾದ ಪ್ರತಿಯೊಬ್ಬ ಕ್ರೈಸ್ತನು, ಚಾಲ್ತಿಯಲ್ಲಿರುವ ದೈವಿಕವಲ್ಲದ ನೋಟಗಳನ್ನು ಹೋಗಲಾಡಿಸಲು ಶ್ರಮಿಸತಕ್ಕದ್ದು. ಹೀಗೆ ಜನರು “ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು ಮತ್ತೆ ಕಾಣು”ವರು.—ಮಲಾಕಿಯ 3:18.
ಮದ್ಯಪಾನೀಯಗಳ ವಿಷಯದಲ್ಲಿ, ಯೆಹೋವನ ಸಾಕ್ಷಿಗಳು ಮತ್ತು ಲೋಕದ ನಡುವಿನ “ತಾರತಮ್ಯ”ವು ಸುಸ್ಪಷ್ಟವಾಗಿರಲೇಬೇಕು. ಮದ್ಯಪಾನೀಯಗಳನ್ನು ಕುಡಿಯುವುದು, ನಿಜ ಕ್ರೈಸ್ತರ ಜೀವಿತಗಳಲ್ಲಿ ಕೇಂದ್ರ ವಿಷಯವಾಗಿರುವುದಿಲ್ಲ. ಕುಡುಕತನಕ್ಕೆ ಅಪಾಯಕರವಾಗಿ ತೀರ ಹತ್ತಿರ ಬರುತ್ತಾ, ತಮ್ಮ ಮದ್ಯಸಾರದ ಸೈರಣೆಯ ಮಿತಿಗಳೊಂದಿಗೆ ಅವರು ಪ್ರಯೋಗನಡಿಸುವುದಿಲ್ಲ; ಅಥವಾ ಮದ್ಯಪಾನೀಯಗಳು ಅವರು ತಮ್ಮ ಪೂರ್ಣ ಪ್ರಾಣ ಮತ್ತು ಒಂದು ಸ್ವಚ್ಛ ಮನಸ್ಸಿನಿಂದ ದೇವರನ್ನು ಸೇವಿಸುವುದನ್ನು ಕುಗ್ಗಿಸಲು ಅಥವಾ ಯಾವುದೇ ರೀತಿಯಲ್ಲಿ ಅದನ್ನು ಅಡ್ಡೈಸಲು ಅವರು ಅನುಮತಿಸುವುದಿಲ್ಲ.
ಒಂದು ಗುಂಪಿನೋಪಾದಿ, ಯೆಹೋವನ ಸಾಕ್ಷಿಗಳಿಗೆ ಮದ್ಯಪಾನೀಯಗಳ ವಿಷಯದಲ್ಲಿ ಒಂದು ದೈವಿಕವಾದ ನೋಟವಿದೆ. ನಿಮ್ಮ ಕುರಿತಾಗಿ ಏನು? “ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ವಿಸರ್ಜಿಸಿ ಭಾಗ್ಯಕರವಾದ ನಿರೀಕ್ಷೆಯನ್ನು . . . ಎದುರುನೋಡುತ್ತಾ ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕ”ಬೇಕೆಂಬ ಬೈಬಲಿನ ಉಪದೇಶವನ್ನು ನಾವು ಅನುಸರಿಸುತ್ತಿರುವಾಗ, ನಮ್ಮಲ್ಲಿ ಪ್ರತಿಯೊಬ್ಬರು ಯೆಹೋವನ ಆಶೀರ್ವಾದಗಳ ವಿಷಯದಲ್ಲಿ ಭರವಸೆ ಇಟ್ಟುಕೊಂಡಿರಬಲ್ಲೆವು.—ತೀತ 2:12.
[ಅಧ್ಯಯನ ಪ್ರಶ್ನೆಗಳು]
a “ಪಾನಕೇಳಿ ಕುಡಿಯುವಿಕೆಯು, ಪುರುಷರಿಗೆ ಅನುಕ್ರಮವಾಗಿ ಐದು ಅಥವಾ ಹೆಚ್ಚು ಪಾನಗಳು ಮತ್ತು ಸ್ತ್ರೀಯರಿಗೆ ಅನುಕ್ರಮವಾಗಿ ನಾಲ್ಕು ಅಥವಾ ಹೆಚ್ಚು ಪಾನಗಳ ಸೇವನೆಯಾಗಿ ಅರ್ಥನಿರೂಪಿಸಲ್ಪಟ್ಟಿತು.”—ದ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಎಸೋಸಿಯೇಷನ್.
[ಪುಟ 28 ರಲ್ಲಿರುವ ಚೌಕ/ಚಿತ್ರಗಳು]
ನಿಮ್ಮ ಪ್ರಿಯ ಜನರಿಗೆ ಕಿವಿಗೊಡಿರಿ
ಮಿತಭಾವವಿಲ್ಲದ ಒಬ್ಬ ಕುಡುಕನು, ತನಗೊಂದು ಸಮಸ್ಯೆಯಿದೆಯೆಂಬುದನ್ನು ಗ್ರಹಿಸಲು ಅನೇಕವೇಳೆ ಕೊನೆಯವನಾಗಿರುತ್ತಾನೆ. ಮಿತಭಾವದ ಕೊರತೆಯುಳ್ಳ ಪ್ರಿಯ ಜನರಿಗೆ ಸಹಾಯವನ್ನು ನೀಡಲು ಸಂಬಂಧಿಕರು, ಸ್ನೇಹಿತರು ಮತ್ತು ಕ್ರೈಸ್ತ ಹಿರಿಯರು ಹಿಂಜರಿಯಬಾರದು. ಇನ್ನೊಂದು ಕಡೆ, ಮದ್ಯಸಾರ ಕುಡಿಯುವ ನಿಮ್ಮ ಹವ್ಯಾಸಗಳ ಕುರಿತಾಗಿ ಪ್ರಿಯ ಜನರು ಇರುಸುಮುರುಸನ್ನು ವ್ಯಕ್ತಪಡಿಸುವಲ್ಲಿ, ಬಹುಶಃ ಅದಕ್ಕಾಗಿ ಅವರಿಗೊಂದು ಸಕಾರಣವಿದೆ. ಅವರೇನು ಹೇಳುತ್ತಾರೊ ಅದನ್ನು ಪರಿಗಣಿಸಿರಿ.—ಜ್ಞಾನೋಕ್ತಿ 19:20; 27:6.