ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wt ಅಧ್ಯಾ. 20 ಪು. 175-183
  • ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿ ಇಟ್ಟುಕೊಳ್ಳಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿ ಇಟ್ಟುಕೊಳ್ಳಿರಿ
  • ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸೂಚನೆಗೆ ಎಚ್ಚರವಾಗಿರಿ
  • ಜನರ ಪ್ರತ್ಯೇಕಿಸುವಿಕೆ
  • ಮುಂದೆ ಏನಾಗಲಿದೆ?
  • ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೊ?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ದೇವರ ಉದ್ದೇಶವು ಬೇಗನೆ ಕೈಗೂಡಲಿದೆ
    ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?
  • “ಎಚ್ಚರಿಕೆಯಿಂದಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
wt ಅಧ್ಯಾ. 20 ಪು. 175-183

ಅಧ್ಯಾಯ ಇಪ್ಪತ್ತು

ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿ ಇಟ್ಟುಕೊಳ್ಳಿರಿ

1. ಈ ಹಳೇ ವ್ಯವಸ್ಥೆಯ ಹೃದ್ವೇದನೆಗಳಿಂದ ಬಿಡುಗಡೆಯು ಸಮೀಪಿಸಿದೆಯೆಂದು ನೀವು ಪ್ರಥಮವಾಗಿ ಕಲಿತುಕೊಂಡಾಗ, ನಿಮಗೆ ಹೇಗನಿಸಿತು?

ಬೈಬಲಿನಿಂದ ನೀವು ಕಲಿತುಕೊಂಡ ಪ್ರಥಮ ವಿಷಯಗಳಲ್ಲಿ ಒಂದು, ಯೆಹೋವನ ಉದ್ದೇಶವು ಇಡೀ ಭೂಮಿಯು ಪರದೈಸಾಗಿ ಪರಿಣಮಿಸಬೇಕೆಂಬುದಾಗಿತ್ತು. ಆ ಹೊಸ ಲೋಕದಲ್ಲಿ ಯುದ್ಧ, ಪಾತಕ, ಬಡತನ, ಅಸ್ವಸ್ಥತೆ, ಕಷ್ಟಾನುಭವ ಮತ್ತು ಮರಣಗಳು ಇಲ್ಲದೆ ಹೋಗುವವು. ಮೃತರೂ ಪುನಃ ಜೀವಿಸುವರು. ಎಷ್ಟು ಆಶ್ಚರ್ಯಕರವಾದ ಪ್ರತೀಕ್ಷೆಗಳು! ಈ ಎಲ್ಲಾ ವಿಷಯಗಳ ಸಾಮೀಪ್ಯವು, ಅರಸನಾಗಿ ಆಳುವ ಕ್ರಿಸ್ತನ ಅದೃಶ್ಯ ಸಾನ್ನಿಧ್ಯವು 1914ರಲ್ಲಿ ಆರಂಭವಾಯಿತು ಮತ್ತು ಅಂದಿನಿಂದ ನಾವು ಈ ದುಷ್ಟ ಲೋಕದ ಕಡೇ ದಿವಸಗಳಲ್ಲಿದ್ದೇವೆಂಬ ರುಜುವಾತಿನಿಂದ ಒತ್ತಿಹೇಳಲ್ಪಡುತ್ತದೆ. ಈ ಕಡೇ ದಿವಸಗಳ ಅಂತ್ಯದಲ್ಲಿ, ಯೆಹೋವನು ಈಗಿನ ದುಷ್ಟ ವಿಷಯಗಳ ವ್ಯವಸ್ಥೆಯನ್ನು ನಾಶಮಾಡಿ, ವಾಗ್ದಾನಿಸಿರುವ ನೂತನ ಲೋಕವನ್ನು ಒಳತರುವನು!

2. “ಯೆಹೋವನ ದಿನ” ಎಂದರೇನು?

2 ಹೀಗೆ ಬರಲಿರುವ ನಾಶನದ ಸಮಯವನ್ನು ಬೈಬಲು “ಕರ್ತನ [“ಯೆಹೋವನ,” NW] ದಿನ”ವೆಂದು ಕರೆಯುತ್ತದೆ. (2 ಪೇತ್ರ 3:10) ಇದು ಸೈತಾನನ ಇಡೀ ಲೋಕದ ಎದುರಾಗಿ ಬರುವ “ಯೆಹೋವನ ಸಿಟ್ಟಿನ ದಿನ” ಆಗಿದೆ. (ಚೆಫನ್ಯ 2:⁠3) ಇದು ಅದರ ಪರಮಾವಧಿಯನ್ನು, “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ”ದಲ್ಲಿ ತಲಪುವುದು. ಇದನ್ನು “ಇಬ್ರಿಯ ಭಾಷೆಯಲ್ಲಿ ಹರ್ಮಗೆದೋನ್‌” ಎಂದು ಕರೆಯಲಾಗಿದ್ದು, ಇದರಲ್ಲಿ ‘ಭೂಲೋಕದಲ್ಲೆಲ್ಲೆಲ್ಲಿಯೂ ಇರುವ ರಾಜರು’ ನಿರ್ನಾಮಹೊಂದುವರು. (ಪ್ರಕಟನೆ 16:​14, 16) “ಯೆಹೋವನ ದಿನ”ವು ಹತ್ತಿರವಿದೆಯೆಂಬ ದೃಢಭರವಸೆ ನಿಮಗಿದೆಯೆಂಬುದನ್ನು ನಿಮ್ಮ ಜೀವನರೀತಿಯು ತೋರಿಸುತ್ತದೆಯೆ?​—⁠ಚೆಫನ್ಯ 1:14-18; ಯೆರೆಮೀಯ 25:33.

3. (ಎ) ಯೆಹೋವನ ದಿನವು ಯಾವಾಗ ಬರುವುದು? (ಬಿ) “ಆ ದಿನದ ವಿಷಯವಾಗಲಿ ಆ ಗಳಿಗೆಯ ವಿಷಯವಾಗಲಿ” ಯೆಹೋವನು ತಿಳಿಸದೆ ಇದ್ದದ್ದು ಪ್ರಯೋಜನಕರವಾಗಿ ಪರಿಣಮಿಸಿದ್ದು ಹೇಗೆ?

3 ಸೈತಾನನ ವಿಷಯಗಳ ವ್ಯವಸ್ಥೆಯ ವಿರುದ್ಧ ಯೆಹೋವನ ವಧಕಾರನಾಗಿ ಯೇಸು ಕ್ರಿಸ್ತನು ಯಾವ ದಿನದಂದು ಬರುವನೆಂದು ಬೈಬಲು ನಿರ್ದಿಷ್ಟ ತಾರೀಖನ್ನು ಕೊಡುವುದಿಲ್ಲ. ಯೇಸು ಹೇಳಿದ್ದು: “ಆ ದಿನದ ವಿಷಯವಾಗಲಿ ಆ ಗಳಿಗೆಯ ವಿಷಯವಾಗಲಿ ನನ್ನ ತಂದೆಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.” (ಮಾರ್ಕ 13:32) ಯಾರಾದರೂ ಯೆಹೋವನನ್ನು ನಿಜವಾಗಿಯೂ ಪ್ರೀತಿಸದಿರುವಲ್ಲಿ, ಅವರು ತಮ್ಮ ಮನಸ್ಸುಗಳಲ್ಲಿ ಯೆಹೋವನ ದಿನವನ್ನು ಮುಂದಕ್ಕೆ ದೂಡಿ, ಪ್ರಾಪಂಚಿಕ ಬೆನ್ನಟ್ಟುವಿಕೆಗಳಿಗೆ ತಿರುಗುವರು. ಆದರೆ ಯಾರು ಯೆಹೋವನನ್ನು ನಿಜವಾಗಿಯೂ ಪ್ರೀತಿಸುತ್ತಾರೊ ಅವರು, ಈ ದುಷ್ಟ ವ್ಯವಸ್ಥೆಯ ಅಂತ್ಯವು ಯಾವಾಗ ಬರುವುದೆಂದು ಯೋಚಿಸದೆ, ಯೆಹೋವನನ್ನು ಪೂರ್ಣ ಪ್ರಾಣದಿಂದ ಸೇವಿಸುವರು.​—⁠ಕೀರ್ತನೆ 37:4; 1 ಯೋಹಾನ 5:⁠3.

4. ಯೇಸು ಎಚ್ಚರಿಕೆಯೋಪಾದಿ ಏನು ಹೇಳಿದನು?

4 ಯೆಹೋವನನ್ನು ಪ್ರೀತಿಸುವವರಿಗೆ ಎಚ್ಚರಿಕೆಯೋಪಾದಿ ಯೇಸು ಹೇಳುವುದು: “ಆ ಕಾಲವು ಯಾವಾಗ ಬರುವದೋ ನಿಮಗೆ ಗೊತ್ತಿಲ್ಲವಾದ್ದರಿಂದ ನೋಡಿಕೊಳ್ಳಿರಿ, ಜಾಗರೂಕರಾಗಿರಿ.” (ಮಾರ್ಕ 13:33-37) ತಿನ್ನುವುದು, ಕುಡಿಯುವುದು ಅಥವಾ ‘ಪ್ರಪಂಚದ ಚಿಂತೆಗಳು,’ ನಾವು ಕಾಲದ ಗಂಭೀರತೆಯನ್ನು ಅಲಕ್ಷಿಸುವಷ್ಟು ನಮ್ಮನ್ನು ಅಪಕರ್ಷಿಸಲು ಬಿಡಬಾರದೆಂದು ಅವನು ಪ್ರೋತ್ಸಾಹಿಸುತ್ತಾನೆ.​—⁠ಲೂಕ 21:34-36; ಮತ್ತಾಯ 24:37-42.

5. ಪೇತ್ರನು ವಿವರಿಸಿದಂತೆ, ಯೆಹೋವನ ದಿನವು ಏನನ್ನು ತರುವುದು?

5 ಅದೇ ರೀತಿ, ಪೇತ್ರನು “ಕರ್ತನ [“ಯೆಹೋವನ,” NW] ದಿನ”ವನ್ನು ಮನಸ್ಸಿನಲ್ಲಿ ನಿಕಟವಾಗಿ ಇಟ್ಟುಕೊಳ್ಳಬೇಕೆಂದು ಬುದ್ಧಿ ಹೇಳುತ್ತಾ, “ಆ ದಿನದಲ್ಲಿ ಆಕಾಶಮಂಡಲವು ಬೆಂಕಿ ಹತ್ತಿ ಲಯವಾಗಿ ಹೋಗುವದು, ಸೂರ್ಯ ಚಂದ್ರ ನಕ್ಷತ್ರಗಳು [“ಮೂಲವಸ್ತುಗಳು,” NW] ಉರಿದು ಕರಗಿ ಹೋಗುವವು,” ಎಂದು ಹೇಳುತ್ತಾನೆ. ಸಕಲ ಮಾನವ ಸರಕಾರಗಳು​—⁠“ಆಕಾಶಮಂಡಲವು”​—⁠ನಾಶಗೊಳ್ಳುವುದು. ಹಾಗೆಯೇ ದುಷ್ಟ ಮಾನವ ಸಮಾಜ​—⁠“ಭೂಮಿ”​—⁠ಮತ್ತು ಅದರ “ಮೂಲವಸ್ತುಗಳು,” ಅಂದರೆ ದೇವರಿಂದ ಸ್ವತಂತ್ರವಾಗಿರಬೇಕೆಂಬ ದುಷ್ಟ ಲೋಕದ ಮನೋಭಾವ ಮತ್ತು ಅದರ ಅನೈತಿಕ ಹಾಗೂ ಪ್ರಾಪಂಚಿಕ ಜೀವನ ರೀತಿಯಂತಹ ವಿಚಾರಗಳು ಮತ್ತು ಕಾರ್ಯಗಳು ನಾಶವಾಗುವವು. ಇದರ ಸ್ಥಾನದಲ್ಲಿ, ‘ನೀತಿಯು ವಾಸವಾಗಿರುವ ನೂತನಾಕಾಶಮಂಡಲ [ದೇವರ ಸ್ವರ್ಗೀಯ ರಾಜ್ಯ] ಮತ್ತು ನೂತನಭೂಮಂಡಲವು [ಒಂದು ಹೊಸ ಭೌಮಿಕ ಸಮಾಜ]’ ಸ್ಥಾಪಿಸಲ್ಪಡುವುದು. (2 ಪೇತ್ರ 3:​10-13) ಈ ಲೋಕ ವಿಚ್ಛೇದಕ ಸಂಭವಗಳು, ಫಕ್ಕನೆ ಮತ್ತು ಅನಿರೀಕ್ಷಿತವಾದ ದಿನ ಮತ್ತು ಗಳಿಗೆಯಲ್ಲಿ ಸಂಭವಿಸುವವು.​—⁠ಮತ್ತಾಯ 24:44.

ಸೂಚನೆಗೆ ಎಚ್ಚರವಾಗಿರಿ

6. (ಎ) ಶಿಷ್ಯರ ಪ್ರಶ್ನೆಗೆ ಯೇಸು ಕೊಟ್ಟ ಉತ್ತರವು ಯೆಹೂದಿ ವ್ಯವಸ್ಥೆಯ ಅಂತ್ಯಕ್ಕೆ ಎಷ್ಟರ ಮಟ್ಟಿಗೆ ಅನ್ವಯಿಸುತ್ತದೆ? (ಬಿ) ಯೇಸು ಕೊಟ್ಟ ಉತ್ತರದ ಯಾವ ಭಾಗಗಳು 1914ರ ಬಳಿಕ ನಡೆಯುತ್ತಿರುವ ಸಂಭವ ಮತ್ತು ಮನೋಭಾವಗಳಿಗೆ ಗಮನ ಸೆಳೆಯುತ್ತವೆ?

6 ನಾವು ಜೀವಿಸುತ್ತಿರುವ ಸಮಯಗಳ ವೀಕ್ಷಣದಲ್ಲಿ, ಕಡೇ ದಿವಸಗಳನ್ನು ಅಂದರೆ “ಯುಗದ [“ವಿಷಯಗಳ ವ್ಯವಸ್ಥೆಯ,” NW] ಸಮಾಪ್ತಿ”ಯನ್ನು ಗುರುತಿಸುವ ಸಂಯುಕ್ತ ಸೂಚನೆಯ ವಿವರಗಳ ಬಗ್ಗೆ ನಾವು ಸುಪರಿಚಿತರಾಗಿರಬೇಕು. ಮತ್ತಾಯ 24:3ರಲ್ಲಿ ದಾಖಲಿಸಲ್ಪಟ್ಟಿರುವಂತೆ ತನ್ನ ಶಿಷ್ಯರ ಪ್ರಶ್ನೆಯನ್ನು ಯೇಸು ಉತ್ತರಿಸಿದಾಗ, ವಚನ 4ರಿಂದ 22ರ ವರೆಗೆ ಅವನು ವರ್ಣಿಸಿದ ಕೆಲವು ಸಂಗತಿಗಳು, ಸಾ.ಶ. 33ರಿಂದ 70ರ ವರೆಗಿದ್ದ ಯೆಹೂದಿ ವ್ಯವಸ್ಥೆಯ ಮೇಲೆ ಚಿಕ್ಕ ಪ್ರಮಾಣದಲ್ಲಿ ನೆರವೇರಿದವೆಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ಆದರೆ ಆ ಪ್ರವಾದನೆಯ ಪ್ರಧಾನ ನೆರವೇರಿಕೆಯು 1914ರಿಂದ ಈಚೆಗಿನ ಸಮಯದಲ್ಲಿ, ಕ್ರಿಸ್ತನ “ಸಾನ್ನಿಧ್ಯ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯ (NW) ಸಮಯದಲ್ಲಿ ನಡೆಯುತ್ತದೆ. ಮತ್ತಾಯ 24:​23-28, ಸಾ.ಶ. 70ರಿಂದ ಕ್ರಿಸ್ತನ ಸಾನ್ನಿಧ್ಯದ ಸಮಯದ ವರೆಗೆ ಏನು ಸಂಭವಿಸಲಿದೆಯೆಂದು ಹೇಳುತ್ತದೆ. ಮತ್ತಾಯ 24:29–25:46ರಲ್ಲಿ ವರ್ಣಿಸಲ್ಪಟ್ಟಿರುವ ವಿಕಸನಗಳು ಅಂತ್ಯಕಾಲದ ಸಮಯದಲ್ಲಿ ನೆರವೇರುತ್ತವೆ.

7. (ಎ) ಈಗಿನ ಪರಿಸ್ಥಿತಿಗಳು ಆ ಸೂಚನೆಯನ್ನು ಹೇಗೆ ನೆರವೇರಿಸುತ್ತವೆಂಬುದರ ಬಗ್ಗೆ ನಾವು ಸ್ವತಃ ಏಕೆ ಎಚ್ಚರವಾಗಿರಬೇಕು? (ಬಿ) ಆ ಸೂಚನೆಯು 1914ರಿಂದೀಚೆಗೆ ಹೇಗೆ ನೆರವೇರಿದೆ ಎಂದು ತೋರಿಸುತ್ತಾ, ಈ ಪರಿಚ್ಛೇದದ ಕೆಳಗಿರುವ ಪ್ರಶ್ನೆಗಳನ್ನು ಉತ್ತರಿಸಿರಿ.

7 ಈ ಸೂಚನೆಯನ್ನು ನೆರವೇರಿಸುವ ಸಂಭವಗಳನ್ನೂ ಮನೋಭಾವಗಳನ್ನೂ ನಾವು ಸ್ವತಃ ಅವಲೋಕಿಸುವುದು ಅಗತ್ಯ. ಈ ವಿಷಯಗಳನ್ನು ಬೈಬಲ್‌ ಪ್ರವಾದನೆಗೆ ಜೋಡಿಸುವುದು ನಾವು ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿ ಇಟ್ಟುಕೊಳ್ಳುವಂತೆ ಸಹಾಯಮಾಡುವುದು. ಅಲ್ಲದೆ, ಆ ದಿನದ ಸಾಮೀಪ್ಯದ ಬಗ್ಗೆ ಇತರರಿಗೆ ಎಚ್ಚರಿಕೆಯನ್ನು ಕೊಡುವಾಗ ನಾವು ಒಡಂಬಡಿಸುವವರಾಗಿ ಮಾತಾಡುವಂತೆಯೂ ಇದು ಸಾಧ್ಯಗೊಳಿಸುವುದು. (ಯೆಶಾಯ 61:​1, 2) ನಾವು ಈ ಧ್ಯೇಯಗಳುಳ್ಳವರಾಗಿ, ಮತ್ತಾಯ 24:7 ಮತ್ತು ಲೂಕ 21:​10, 11ರಲ್ಲಿ ಬರೆದಿರುವ ಆ ಸೂಚನೆಯ ಭಾಗಗಳನ್ನು ಎತ್ತಿ ತೋರಿಸುವ ಈ ಕೆಳಗಿನ ಪ್ರಶ್ನೆಗಳನ್ನು ಪುನರ್ವಿಮರ್ಶಿಸೋಣ.

ಮುಂತಿಳಿಸಲ್ಪಟ್ಟಂತೆ, 1914ರಿಂದ ಆರಂಭಗೊಂಡು, ‘ಜನಕ್ಕೆ ವಿರೋಧವಾಗಿ ಜನ ರಾಜ್ಯಕ್ಕೆ ವಿರೋಧವಾಗಿ ರಾಜ್ಯದ’ ಏಳುವಿಕೆಯು ಯಾವ ಅಸಾಧಾರಣ ವಿಧದಲ್ಲಿ ನೆರವೇರಿತು? ಯುದ್ಧಗಳ ವಿಷಯದಲ್ಲಿ ಅಂದಿನಿಂದ ಏನು ಸಂಭವಿಸಿದೆ?

ಇಸವಿ 1918ರಲ್ಲಿ ಯಾವ ವ್ಯಾಧಿಯು Iನೆಯ ಲೋಕ ಯುದ್ಧಕ್ಕಿಂತ ಹೆಚ್ಚು ಜೀವಗಳನ್ನು ಆಹುತಿ ತೆಗೆದುಕೊಂಡಿತು? ಮನುಷ್ಯನ ವೈದ್ಯಕೀಯ ಜ್ಞಾನದ ಎದುರಿನಲ್ಲಿಯೂ, ಯಾವ ರೋಗಗಳು ಇನ್ನೂ ಕೋಟಿಗಟ್ಟಲೆ ಜನರನ್ನು ಕೊಲ್ಲುತ್ತಿವೆ?

ಕಳೆದ ಶತಮಾನದ ವೈಜ್ಞಾನಿಕ ಪ್ರಗತಿಯ ಎದುರಿನಲ್ಲಿಯೂ, ಆಹಾರದ ಅಭಾವಗಳು ಭೂಮಿಯನ್ನು ಎಷ್ಟರ ಮಟ್ಟಿಗೆ ತಟ್ಟಿವೆ?

ಎರಡನೆಯ ತಿಮೊಥೆಯ 3:​1-5, 13, ಹಿಂದಿನಿಂದಲೂ ಸದಾ ನಡೆಯುತ್ತಾ ಬಂದಿದ್ದ ಜೀವನರೀತಿಯನ್ನಲ್ಲ, ನಾವು ಕಡೇ ದಿವಸಗಳ ಅಂತ್ಯದ ಕಡೆಗೆ ಸಾಗುತ್ತಿರುವಾಗ ದುಷ್ಟ ಪರಿಸ್ಥಿತಿಗಳಲ್ಲಿ ಆಗಿರುವ ತೀಕ್ಷ್ಣತೆಯನ್ನು ವರ್ಣಿಸುತ್ತಿದೆಯೆಂಬುದನ್ನು ನಿಮಗೆ ಯಾವುದು ದೃಢಪಡಿಸುತ್ತದೆ?

ಜನರ ಪ್ರತ್ಯೇಕಿಸುವಿಕೆ

8. (ಎ) ಮತ್ತಾಯ 13:​24-30, 36-43ರಲ್ಲಿ ವರ್ಣಿಸಿರುವ ಇನ್ನಾವುದನ್ನು ಯೇಸು ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಯೊಂದಿಗೆ ಜೋಡಿಸಿದನು? (ಬಿ) ಯೇಸುವಿನ ದೃಷ್ಟಾಂತದ ಅರ್ಥವೇನು?

8 ವಿಷಯಗಳ ವ್ಯವಸ್ಥೆಯ ಸಮಾಪ್ತಿಯೊಂದಿಗೆ ಯೇಸು ಜೋಡಿಸಿದ ಬೇರೆ ಗಮನಾರ್ಹ ವಿಕಸನಗಳೂ ಇವೆ. ಇವುಗಳಲ್ಲಿ ಒಂದು, “ಸೈತಾನನವರು [“ಕೆಡುಕನ ಪುತ್ರರು,” NW]” ಯಾರೋ ಅವರಿಂದ “ಪರಲೋಕರಾಜ್ಯದವರು [“ರಾಜ್ಯದ ಪುತ್ರರು,” NW]” ಆಗಿರುವವರನ್ನು ಪ್ರತ್ಯೇಕಿಸುವುದೇ ಆಗಿದೆ. ಯೇಸು ಈ ವಿಷಯದಲ್ಲಿ, ಗೋಧಿಯ ಹೊಲದಲ್ಲಿ ವೈರಿಯು ಹಣಜಿಯನ್ನು ಬಿತ್ತಿದ ದೃಷ್ಟಾಂತವನ್ನು ಕೊಟ್ಟು ಮಾತಾಡಿದನು. ಈ ದೃಷ್ಟಾಂತದಲ್ಲಿರುವ “ಗೋದಿ” ನಿಜ ಅಭಿಷಿಕ್ತ ಕ್ರೈಸ್ತರನ್ನು ಪ್ರತಿನಿಧಿಸುತ್ತದೆ. “ಹಣಜಿಯು” ಕ್ರೈಸ್ತರೆಂದು ಹೇಳಿಕೊಂಡರೂ, ಸೈತಾನನು ಪ್ರಭುವಾಗಿರುವ ಲೋಕಕ್ಕೆ ಅಂಟಿಕೊಳ್ಳುವ “ಕೆಡುಕನ ಪುತ್ರ”ರನ್ನು ಸೂಚಿಸುತ್ತದೆ. ಇವರನ್ನು ‘[ದೇವರ] ರಾಜ್ಯದ ಪುತ್ರರಿಂದ’ ಪ್ರತ್ಯೇಕಿಸಿ ನಾಶನಕ್ಕಾಗಿ ಇಡಲಾಗುತ್ತದೆ. (ಮತ್ತಾಯ 13:24-30, 36-43) ಇದು ಈಗಾಗಲೇ ನೆರವೇರಿದೆಯೆ?

9. (ಎ) ಒಂದನೇ ಲೋಕ ಯುದ್ಧದ ಬಳಿಕ ಕ್ರೈಸ್ತರೆಂದು ಹೇಳಿಕೊಂಡವರೆಲ್ಲರ ಯಾವ ಮಹಾ ಪ್ರತ್ಯೇಕಿಸುವಿಕೆಯು ಸಂಭವಿಸಿತು? (ಬಿ) ರಾಜ್ಯದ ನಿಜ ಸೇವಕರು ತಾವಾಗಿದ್ದೇವೆಂಬುದಕ್ಕೆ ಅಭಿಷಿಕ್ತ ಕ್ರೈಸ್ತರು ಹೇಗೆ ರುಜುವಾತನ್ನು ಕೊಟ್ಟರು?

9 ಒಂದನೇ ಲೋಕ ಯುದ್ಧದ ಬಳಿಕ, ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದ ಎಲ್ಲರನ್ನೂ ಎರಡು ವರ್ಗಗಳಾಗಿ ಪ್ರತ್ಯೇಕಿಸಲಾಯಿತು: (1) ತಮ್ಮ ರಾಷ್ಟ್ರೀಯ ನಿಷ್ಠೆಗಳಿಗೆ ಅಂಟಿಕೊಂಡಿದ್ದರೂ ಜನಾಂಗ ಸಂಘ (ಈಗ ವಿಶ್ವ ಸಂಸ್ಥೆ)ಕ್ಕೆ ಬಲವಾದ ಬೆಂಬಲವನ್ನು ಕೊಟ್ಟ ಕ್ರೈಸ್ತ ಪ್ರಪಂಚದ ಪಾದ್ರಿವರ್ಗ ಮತ್ತು ಅವರ ಹಿಂಬಾಲಕರು, ಹಾಗೂ (2) ಆ ಯುದ್ಧಾನಂತರದ ಸಮಯದಲ್ಲಿ ಲೋಕದ ರಾಷ್ಟ್ರಗಳಿಗಲ್ಲ, ದೇವರ ಮೆಸ್ಸೀಯನ ರಾಜ್ಯಕ್ಕೆ ಪೂರ್ಣ ಬೆಂಬಲವನ್ನು ಕೊಟ್ಟ ಸತ್ಯ ಕ್ರೈಸ್ತರು. (ಯೋಹಾನ 17:16) ಇವರು, “ರಾಜ್ಯದ ಈ ಸುವಾರ್ತೆ”ಯನ್ನು ಭೂವ್ಯಾಪಕವಾಗಿ ಸಾರುವ ಕಾರ್ಯವನ್ನು ಕೈಕೊಂಡ ದೇವರ ರಾಜ್ಯದ ನಿಜ ಸೇವಕರಾಗಿ ಪರಿಣಮಿಸಿದರು. (ಮತ್ತಾಯ 24:14) ಫಲಿತಾಂಶವೇನಾಯಿತು?

10. ರಾಜ್ಯ ಸಾರುವ ಕಾರ್ಯದ ಪ್ರಥಮ ಫಲವೇನಾಗಿತ್ತು?

10 ಪ್ರಥಮವಾಗಿ, ಕ್ರಿಸ್ತನೊಂದಿಗೆ ಸ್ವರ್ಗೀಯ ರಾಜ್ಯದ ಭಾಗವಾಗುವ ನಿರೀಕ್ಷೆಯಿರುವ ದೇವರಾತ್ಮಾಭಿಷಿಕ್ತರಲ್ಲಿ ಉಳಿದವರನ್ನು ಒಟ್ಟುಗೂಡಿಸಲಾಯಿತು. ಇಂಥವರು ಜನಾಂಗಗಳಲ್ಲಿ ಚದರಿಹೋಗಿದ್ದರೂ ಅವರನ್ನು ಸಂಸ್ಥಾಪನಾ ಐಕ್ಯಕ್ಕೆ ತರಲಾಯಿತು. ಈ ಅಭಿಷಿಕ್ತರ ಅಂತಿಮ ಮುದ್ರೆ ಒತ್ತುವಿಕೆಯ ಪೂರ್ಣಗೊಳಿಸುವಿಕೆಯು ಸಮೀಪಿಸುತ್ತಿದೆ.​—⁠ಪ್ರಕಟನೆ 7:​3, 4.

11. (ಎ) ಯಾವ ಒಟ್ಟುಗೂಡಿಸುವ ಕೆಲಸವು ಮುಂದುವರಿಯುತ್ತಿದೆ, ಮತ್ತು ಯಾವ ಪ್ರವಾದನೆಗೆ ಹೊಂದಿಕೆಯಲ್ಲಿ? (ಬಿ) ಈ ಪ್ರವಾದನೆಯ ನೆರವೇರಿಕೆಯು ಏನನ್ನು ಸೂಚಿಸುತ್ತದೆ?

11 ಬಳಿಕ, ಕ್ರಿಸ್ತನ ಮೇಲ್ವಿಚಾರಣೆಯಲ್ಲಿ, ‘ಸಕಲ ಜನಾಂಗ ಕುಲ ಪ್ರಜೆ ಭಾಷೆಗಳಿಂದ ಬರಲಿದ್ದ ಮಹಾ ಸಮೂಹ’ವನ್ನು ಒಟ್ಟುಗೂಡಿಸುವ ಕೆಲಸವು ಆರಂಭವಾಯಿತು. ಇವರು “ಮಹಾ ಸಂಕಟವನ್ನು” (NW) ಪಾರಾಗಿ ದೇವರ ನೂತನ ಲೋಕಕ್ಕೆ ಹೋಗಲಿರುವ “ಬೇರೆ ಕುರಿಗಳು” ಆಗಿದ್ದಾರೆ. (ಪ್ರಕಟನೆ 7:9, 14; ಯೋಹಾನ 10:16) ಅಂತ್ಯವು ಬರುವ ಮೊದಲು ದೇವರ ರಾಜ್ಯವನ್ನು ಸಾರುವ ಈ ಕೆಲಸವು ಇಂದಿನ ತನಕವೂ ಮುಂದುವರಿಯುತ್ತಾ ಇದೆ. ಈಗ ಲಕ್ಷಾಂತರ ಜನರಾಗಿರುವ ಬೇರೆ ಕುರಿಗಳ ಮಹಾ ಸಮೂಹವು ನಿಷ್ಠೆಯಿಂದ, ರಾಜ್ಯದ ಮಹತ್ವಪೂರ್ಣ ಸಂದೇಶವನ್ನು ಅಭಿಷಿಕ್ತ ಉಳಿಕೆಯವರು ಪ್ರಕಟಿಸುವಂತೆ ಸಹಾಯಮಾಡುತ್ತದೆ. ಈ ಸಂದೇಶವು ಸಕಲ ಜನಾಂಗಗಳಲ್ಲಿ ಕೇಳಿಬರುತ್ತದೆ.

ಮುಂದೆ ಏನಾಗಲಿದೆ?

12. ಯೆಹೋವನ ದಿನವು ಬರುವ ಮೊದಲು ಇನ್ನೆಷ್ಟು ಸಾರುವ ಕೆಲಸವನ್ನು ಮಾಡಲಿಕ್ಕಿದೆ?

12 ಮೇಲೆ ಕೊಟ್ಟಿರುವ ಸಕಲ ರುಜುವಾತುಗಳು, ನಾವು ಕಡೇ ದಿವಸಗಳ ಅಂತ್ಯದಲ್ಲಿದ್ದೇವೆಂದೂ ಯೆಹೋವನ ದಿನವು ನಿಕಟವಾಗಿದೆಯೆಂದೂ ತೋರಿಸುತ್ತವೆ. ಆದರೆ ಆ ಭಯೋತ್ಪಾದಕ ದಿನವು ಆರಂಭವಾಗುವ ಮೊದಲು ಇನ್ನೂ ನೆರವೇರಬೇಕಾದ ಪ್ರವಾದನೆಗಳಿವೆಯೊ? ಹೌದು. ಏಕೆಂದರೆ, ರಾಜ್ಯ ವಿವಾದಾಂಶದ ಮೇಲೆ ಜನರನ್ನು ಪ್ರತ್ಯೇಕಿಸುವ ಕೆಲಸವು ಇನ್ನೂ ಮುಗಿದಿರುವುದಿಲ್ಲ. ಅನೇಕ ವರ್ಷಕಾಲ ತೀಕ್ಷ್ಣ ವಿರೋಧವಿದ್ದ ಕೆಲವು ಪ್ರದೇಶಗಳಲ್ಲಿ, ಈಗ ಹೊಸ ಶಿಷ್ಯರಲ್ಲಿ ಅಭಿವೃದ್ಧಿಯಿದೆ. ಜನರು ಸುವಾರ್ತೆಯನ್ನು ನಿರಾಕರಿಸುವ ಪ್ರದೇಶಗಳಲ್ಲಿಯೂ ನಮ್ಮ ಸಾಕ್ಷಿ ನೀಡುವಿಕೆಯಿಂದ ಯೆಹೋವನ ಕರುಣೆಯು ತೋರಿಸಲ್ಪಡುತ್ತದೆ. ಆದಕಾರಣ, ನಿಮ್ಮ ಕಾರ್ಯವನ್ನು ಮುಂದುವರಿಸಿರಿ! ಏಕೆಂದರೆ ನಮ್ಮ ಕೆಲಸವು ಮುಗಿದಾಗ ಅಂತ್ಯವು ಬರುವುದೆಂದು ಯೇಸು ಭರವಸೆ ಕೊಡುತ್ತಾನೆ.

13. ಒಂದನೇ ಥೆಸಲೊನೀಕ 5:​2, 3ರಲ್ಲಿ ದಾಖಲೆಯಾಗಿರುವಂತೆ, ಯಾವ ಗಮನಾರ್ಹ ಸಂಭವವು ಮುಂದಕ್ಕೆ ನಡೆಯಲಿದೆ, ಮತ್ತು ಅದು ನಮಗೆ ಯಾವ ಅರ್ಥದಲ್ಲಿರುವುದು?

13 ಇನ್ನೊಂದು ತೀರ ವಿಶಿಷ್ಟವಾದ ಬೈಬಲ್‌ ಪ್ರವಾದನೆ ಹೀಗೆನ್ನುತ್ತದೆ: “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.” (1 ಥೆಸಲೊನೀಕ 5:2, 3) ‘ಸಮಾಧಾನ ಮತ್ತು ನಿರ್ಭಯತೆಯ’ ಆ ಘೋಷಣೆಯು ಯಾವ ರೂಪವನ್ನು ತಾಳುತ್ತದೆಂದು ನೋಡುವ ಸಮಯವು ಮುಂದಿದೆ. ಆದರೆ, ಲೋಕ ನಾಯಕರು ಆಗ ಮಾನವರ ಸಮಸ್ಯೆಗಳನ್ನು ನಿಜವಾಗಿಯೂ ಬಗೆಹರಿಸಿರುವರು ಎಂಬುದನ್ನು ಇದು ಖಂಡಿತವಾಗಿಯೂ ಅರ್ಥೈಸುವುದಿಲ್ಲ. ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿ ಇಟ್ಟುಕೊಂಡಿರುವವರು ಆ ಘೋಷಣೆಯಿಂದ ವಂಚಿತರಾಗುವುದಿಲ್ಲ. ಏಕೆಂದರೆ, ಇದಾದ ಕೂಡಲೆ, ನಾಶನವು ಥಟ್ಟನೆ ಬರುತ್ತದೆಂದು ಅವರಿಗೆ ತಿಳಿದದೆ.

14. ಮಹಾ ಸಂಕಟದ ಸಮಯದಲ್ಲಿ ಯಾವ ಘಟನೆಗಳು ನಡೆಯುವವು, ಮತ್ತು ಯಾವ ಕ್ರಮದಲ್ಲಿ?

14 ಮಹಾ ಸಂಕಟದ ಆರಂಭದಲ್ಲಿ, ಪ್ರಭುಗಳು ಸುಳ್ಳುಧರ್ಮಗಳ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಮೇಲೆ ತಿರುಗಿ ಬಿದ್ದು, ಆಕೆಯನ್ನು ನಿರ್ನಾಮಮಾಡುವರು. (ಮತ್ತಾಯ 24:21; ಪ್ರಕಟನೆ 17:15, 16) ಆ ಬಳಿಕ, ಜನಾಂಗಗಳು ಯೆಹೋವನ ಪರಮಾಧಿಕಾರವನ್ನು ಸಮರ್ಥಿಸುವವರ ಮೇಲೆ ಬೀಳಲಾಗಿ, ಯೆಹೋವನ ಕೋಪವು ರಾಜಕೀಯ ಸರಕಾರಗಳ ಮೇಲೆಯೂ ಅವರ ಬೆಂಬಲಿಗರ ಮೇಲೆಯೂ ಬಂದೆರಗುವಾಗ ಅವರು ಪೂರ್ಣವಾಗಿ ನಾಶಗೊಳ್ಳುವರು. ಅದು ಮಹಾ ಸಂಕಟದ ಅರ್ಮಗೆದೋನ್‌ ಪರಾಕಾಷ್ಠೆಯಾಗಿರುವುದು. ತದನಂತರ ಸೈತಾನನನ್ನೂ ದೆವ್ವಗಳನ್ನೂ ಅಧೋಲೋಕಕ್ಕೆ ದೊಬ್ಬಲಾಗಿ, ಅವರು ಆ ಬಳಿಕ ಮಾನವಕುಲವನ್ನು ಪ್ರಭಾವಿಸರು. ಯೆಹೋವನ ನಾಮವು ಹೀಗೆ ಉನ್ನತಕ್ಕೇರಿಸಲ್ಪಟ್ಟಾಗ, ಯೆಹೋವನ ದಿನವು ಸಮಾಪ್ತಿಗೊಳ್ಳುವುದು.​—⁠ಯೆಹೆಜ್ಕೇಲ 38:18, 22, 23; ಪ್ರಕಟನೆ 19:11-20:⁠3.

15. ಯೆಹೋವನ ದಿನವು ಇನ್ನೂ ದೂರದಲ್ಲಿದೆ ಎಂದು ತರ್ಕಿಸುವುದು ಅವಿವೇಕತನವೇಕೆ?

15 ಯೆಹೋವನ ವೇಳಾಪಟ್ಟಿಗನುಸಾರವಾಗಿ, ಈ ವ್ಯವಸ್ಥೆಯ ಅಂತ್ಯವು ಸಮಯಕ್ಕೆ ಸರಿಯಾಗಿ ಬರುವುದು. ಅದು ತಡವಾಗದು. (ಹಬಕ್ಕೂಕ 2:⁠3) ಸಾ.ಶ. 70ರಲ್ಲಿ ಯೆರೂಸಲೇಮಿನ ನಾಶನವು ಥಟ್ಟನೆ, ಯೆಹೂದ್ಯರು ನಿರೀಕ್ಷಿಸದೆ ಇದ್ದಾಗ, ಅಪಾಯವು ದಾಟಿಹೋಯಿತೆಂದು ಅವರು ನೆನಸಿದಾಗ ಬಂತೆಂಬುದು ನೆನಪಿನಲ್ಲಿರಲಿ. ಮತ್ತು ಪುರಾತನ ಬಾಬೆಲಿನ ಸಂಗತಿಯೇನು? ಅದು ಬಲಾಢ್ಯವಾಗಿತ್ತು, ಸ್ವಭರವಸೆಯುಳ್ಳದ್ದಾಗಿತ್ತು, ಮತ್ತು ಸುದೃಢವಾದ ಗೋಡೆಗಳುಳ್ಳದ್ದಾಗಿತ್ತು. ಆದರೆ ಅದು ಒಂದೇ ರಾತ್ರಿಯಲ್ಲಿ ಪತನಗೊಂಡಿತು. ಅದೇ ರೀತಿ, ಈಗಿನ ದುಷ್ಟ ವ್ಯವಸ್ಥೆಯ ಮೇಲೆ ಇದ್ದಕ್ಕಿದ್ದ ಹಾಗೆ ನಾಶನವು ಬರುವುದು. ಹಾಗೆ ಆಗುವಾಗ, ನಾವು ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿ ಇಟ್ಟುಕೊಂಡಿರುವ ಕಾರಣ ಸತ್ಯಾರಾಧನೆಯಲ್ಲಿ ಐಕ್ಯರಾಗಿ ಕಂಡುಬರೋಣ.

ಪುನರ್ವಿಮರ್ಶೆಯ ಚರ್ಚೆ

• ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿ ಇಟ್ಟುಕೊಳ್ಳುವುದು ಮಹತ್ವಪೂರ್ಣವೇಕೆ? ನಾವು ಅದನ್ನು ಹೇಗೆ ಮಾಡಬಲ್ಲೆವು?

• ಈಗ ನಡೆಯುತ್ತಿರುವ ಜನರನ್ನು ಪ್ರತ್ಯೇಕಿಸುವ ಕೆಲಸವು ನಮ್ಮನ್ನು ವೈಯಕ್ತಿಕವಾಗಿ ಹೇಗೆ ಬಾಧಿಸುತ್ತದೆ?

• ಯೆಹೋವನ ದಿನವು ಆರಂಭವಾಗುವುದಕ್ಕೆ ಮೊದಲು ಇನ್ನೂ ಏನು ನೆರವೇರಲಿದೆ? ಆದುದರಿಂದ ನಾವು ಸ್ವತಃ ಏನು ಮಾಡುತ್ತಿರಬೇಕು?

[ಪುಟ 180, 181ರಲ್ಲಿರುವ ಚಿತ್ರಗಳು]

ಬೇಗನೆ, ಸೈತಾನನ ವ್ಯವಸ್ಥೆಯ ನಾಶನದೊಂದಿಗೆ ಕಡೇ ದಿವಸಗಳು ಅಂತ್ಯಗೊಳ್ಳುವವು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ