ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w03 7/15 ಪು. 10-15
  • ನಿಮಗೆ “ಕಾಯುವ ಮನೋಭಾವ” ಇದೆಯೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮಗೆ “ಕಾಯುವ ಮನೋಭಾವ” ಇದೆಯೊ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ನಡವಳಿಕೆಯ ಪವಿತ್ರ ಕೃತ್ಯ”ಗಳೊಂದಿಗೆ ಕಾಯಿರಿ
  • “ದೇವಭಕ್ತಿಯ ಕ್ರಿಯೆ”ಗಳೊಂದಿಗೆ ಕಾಯಿರಿ
  • ನಾವು “ನಿರ್ಮಲ”ರಾಗಿರಬೇಕು
  • ನಾವು ‘ನಿರ್ದೋಷಿ’ಗಳಾಗಿರಬೇಕು
  • ನಾವು “ಶಾಂತರಾಗಿ”ರಬೇಕು
  • ನೀವು ಯಾವ ವಿಧದ ವ್ಯಕ್ತಿಗಳಾಗಿರತಕ್ಕದ್ದು?
    1995 ನಮ್ಮ ರಾಜ್ಯದ ಸೇವೆ
  • “ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು!”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ನಿಮ್ಮ ತಾಳ್ಮೆಗೆ ಭಕ್ತಿಯನ್ನು ಕೂಡಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ದೀಕ್ಷಾಸ್ನಾತ ಕ್ರೈಸ್ತರಾಗಿ ದಿವ್ಯಭಕ್ತಿಯನ್ನು ಬಿಡದೆ ಅನುಸರಿಸಿರಿ
    ಕಾವಲಿನಬುರುಜು—1990
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
w03 7/15 ಪು. 10-15

ನಿಮಗೆ “ಕಾಯುವ ಮನೋಭಾವ” ಇದೆಯೊ?

“ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ.”​—2 ಪೇತ್ರ 3:​11, 12.

1, 2. ಯೆಹೋವನ ದಿನದ ಸಂಬಂಧದಲ್ಲಿ “ಕಾಯುವ ಮನೋಭಾವ” ಹೊಂದಿರುವುದನ್ನು ನಾವು ಹೇಗೆ ದೃಷ್ಟಾಂತಿಸಬಹುದು?

ಸ್ವಲ್ಪ ಹೊತ್ತು ಮನಸ್ಸಿನಲ್ಲಿ ಇದನ್ನು ಚಿತ್ರಿಸಿಕೊಳ್ಳಿ: ಒಂದು ಕುಟುಂಬವು ರಾತ್ರಿಯೂಟಕ್ಕಾಗಿ ಅತಿಥಿಗಳನ್ನು ಆಮಂತ್ರಿಸಿದೆ. ಅವರು ಬರಬೇಕಾದ ಸಮಯವು ಸಮೀಪಿಸುತ್ತಾ ಇದೆ. ಹೆಂಡತಿಯು, ಊಟದ ಕೊನೆಯ ಸಿದ್ಧತೆಗಳನ್ನು ಮಾಡುವುದರಲ್ಲಿ ತಲ್ಲೀನಳಾಗಿದ್ದಾಳೆ. ಗಂಡ ಮತ್ತು ಮಕ್ಕಳು, ಎಲ್ಲವೂ ಒಪ್ಪಓರಣವಾಗಿದೆಯೊ ಎಂಬದನ್ನು ನೋಡುತ್ತಿದ್ದಾರೆ. ಎಲ್ಲರೂ ಸಡಗರದಿಂದಿದ್ದಾರೆ. ಹೌದು, ಇಡೀ ಕುಟುಂಬವು ಅತಿಥಿಗಳ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಾ ಇದೆ ಮತ್ತು ರುಚಿಕರವಾದ ಭೋಜನ ಹಾಗೂ ಉತ್ತಮವಾದ ಸಾಹಚರ್ಯದಲ್ಲಿ ಆನಂದಿಸಲು ಎದುರುನೋಡುತ್ತಿದೆ.

2 ಕ್ರೈಸ್ತರೋಪಾದಿ ನಾವಾದರೊ ಇದಕ್ಕಿಂತಲೂ ಎಷ್ಟೊ ಹೆಚ್ಚು ಪ್ರಾಮುಖ್ಯವಾದ ವಿಷಯಕ್ಕಾಗಿ ಕಾಯುತ್ತಾ ಇದ್ದೇವೆ. ಅದೇನು? ನಾವೆಲ್ಲರೂ ‘ಯೆಹೋವನ ದಿನ’ಕ್ಕಾಗಿ ಕಾಯುತ್ತಾ ಇದ್ದೇವೆ! ಆದರೆ ಅದು ಆಗಮಿಸುವ ವರೆಗೂ ನಾವು ಪ್ರವಾದಿಯಾದ ಮೀಕನಂತಿರಬೇಕು. ಅವನಂದದ್ದು: “ನಾನಂತು ಯೆಹೋವನನ್ನು ಎದುರುನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು [“ದೇವರ ಕಡೆಗೆ ಕಾಯುವ ಮನೋಭಾವವನ್ನು ತೋರಿಸುವೆನು,” NW].” (ಮೀಕ 7:7) ನಾವೇನೂ ಮಾಡದೆ ನಿಷ್ಕ್ರಿಯರಾಗಿರುವುದನ್ನು ಇದು ಸೂಚಿಸುತ್ತದೊ? ಇಲ್ಲ. ಮಾಡಲು ಬಹಳಷ್ಟು ಕೆಲಸವಿದೆ.

3. ಎರಡನೆಯ ಪೇತ್ರ 3:​11, 12ಕ್ಕನುಸಾರ, ಕ್ರೈಸ್ತರಿಗೆ ಯಾವ ಮನೋಭಾವವಿರಬೇಕು?

3 ಕಾಯುತ್ತಿರುವಾಗ ಇರಬೇಕಾದ ಸರಿಯಾದ ಮನೋಭಾವವನ್ನು ಇಟ್ಟುಕೊಳ್ಳುವಂತೆ ಅಪೊಸ್ತಲ ಪೇತ್ರನು ನಮಗೆ ಸಹಾಯಮಾಡುತ್ತಾನೆ. ಅವನನ್ನುವುದು: “ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ [“ನಡವಳಿಕೆಯ ಪವಿತ್ರ ಕೃತ್ಯಗಳು ಹಾಗೂ ದೇವಭಕ್ತಿಯ ಕ್ರಿಯೆಗಳು,” NW] ಉಳ್ಳವರಾಗಿರಬೇಕಲ್ಲಾ.” (2 ಪೇತ್ರ 3:11, 12) ಗಮನಿಸಿರಿ, ಪೇತ್ರನು ತನ್ನ ಈ ಹೇಳಿಕೆಯ ಮೂಲಕ, ನಾವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದರ ಕುರಿತು ಸಂದೇಹವನ್ನೆಬ್ಬಿಸುತ್ತಿಲ್ಲ. ವಾಸ್ತವದಲ್ಲಿ ಅವನು ದೈವಪ್ರೇರಣೆಯಿಂದ ಬರೆದ ಎರಡು ಪತ್ರಗಳಲ್ಲಿ, ಕ್ರೈಸ್ತರು ಯಾವ ರೀತಿಯ ವ್ಯಕ್ತಿಗಳಾಗಿರಬೇಕೆಂಬುದನ್ನು ವರ್ಣಿಸಿದನು. ಅವರು “ನಡವಳಿಕೆಯ ಪವಿತ್ರ ಕೃತ್ಯಗಳು ಹಾಗೂ ದೇವಭಕ್ತಿಯ ಕ್ರಿಯೆಗಳ”ನ್ನು ಮಾಡುತ್ತಾ ಇರುವಂತೆಯೂ ಅವನು ಉತ್ತೇಜಿಸಿದನು. ಯೇಸು ಕ್ರಿಸ್ತನು ‘ಯುಗದ ಸಮಾಪ್ತಿಯ’ ಸೂಚನೆಯನ್ನು ಕೊಟ್ಟು ಸುಮಾರು 30 ವರ್ಷಗಳು ಕಳೆದಿದ್ದರೂ, ಕ್ರೈಸ್ತರು ಎಚ್ಚರವಾಗಿರುವುದನ್ನು ನಿಲ್ಲಿಸಬಾರದಿತ್ತು. (ಮತ್ತಾಯ 24:3) ಅವರು ಯೆಹೋವನ ದಿನದ ಪ್ರತ್ಯಕ್ಷತೆಯನ್ನು “ಎದುರುನೋಡುತ್ತಾ ಹಾರೈಸುತ್ತಾ” ಇರಬೇಕಾಗಿತ್ತು.

4. ‘ಯೆಹೋವನ ದಿನದ ಪ್ರತ್ಯಕ್ಷತೆಯನ್ನು ಹಾರೈಸುವುದರಲ್ಲಿ’ ಏನೆಲ್ಲಾ ಒಳಗೂಡಿದೆ?

4 “ಹಾರೈಸುತ್ತಾ” ಎಂದು ಇಲ್ಲಿ ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದದ ಅಕ್ಷರಾರ್ಥವು “ವೇಗವನ್ನು ಹೆಚ್ಚಿಸು” ಎಂದಾಗಿದೆ. ನಿಜ, ನಾವಂತೂ ಅಕ್ಷರಾರ್ಥಕವಾಗಿ ಯೆಹೋವನ ದಿನದ ‘ವೇಗವನ್ನು ಹೆಚ್ಚಿಸ’ಲಾರೆವು. ಅಷ್ಟೇಕೆ, ಯೇಸು ಕ್ರಿಸ್ತನು ತನ್ನ ತಂದೆಯ ವೈರಿಗಳ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸಲಿಕ್ಕಾಗಿ ಬರಲಿರುವ ‘ದಿನ ಮತ್ತು ಗಳಿಗೆಯೇ’ ನಮಗೆ ತಿಳಿದಿಲ್ಲ! (ಮತ್ತಾಯ 24:36; 25:13) ಇಲ್ಲಿ “ವೇಗವನ್ನು ಹೆಚ್ಚಿಸು”ವುದು ಎಂಬ ಪದಗುಚ್ಛದ ಮೂಲ ಕ್ರಿಯಾಪದದ ಅರ್ಥವು “‘ತ್ವರೆಮಾಡು’” ಎಂದಾಗಿದ್ದು, “ಈ ಕಾರಣದಿಂದ ‘ಯಾವುದೊ ಸಂಗತಿಯ ಬಗ್ಗೆ ಹುರುಪುಳ್ಳವರು, ಸಕ್ರಿಯರು, ಚಿಂತಿತರು ಆಗಿರುವುದಕ್ಕೆ’ ಸಂಬಂಧಿಸಿದೆ.” ಆದುದರಿಂದ ಪೇತ್ರನು ಜೊತೆ ವಿಶ್ವಾಸಿಗಳಿಗೆ, ಯೆಹೋವನ ದಿನದ ಪ್ರತ್ಯಕ್ಷತೆಯನ್ನು ಉತ್ಸುಕತೆಯಿಂದ ಆಶಿಸುವಂತೆ ಉತ್ತೇಜಿಸುತ್ತಿದ್ದನು. ಇದನ್ನು ಅವರು, ಆ ದಿನವನ್ನು ಸದಾ ತಮ್ಮ ಮನಸ್ಸಿನಲ್ಲಿಡುವ ಮೂಲಕ ಮಾಡಸಾಧ್ಯವಿತ್ತು. (2 ಪೇತ್ರ 3:12) “ಯೆಹೋವನ ಆಗಮನದ ಭಯಂಕರವಾದ ಮಹಾದಿನವು” ಇಷ್ಟೊಂದು ಹತ್ತಿರವಾಗಿರುವುದರಿಂದ, ನಮಗೂ ಅದೇ ರೀತಿಯ ಮನೋಭಾವವಿರಬೇಕು.​—ಯೋವೇಲ 2:30.

“ನಡವಳಿಕೆಯ ಪವಿತ್ರ ಕೃತ್ಯ”ಗಳೊಂದಿಗೆ ಕಾಯಿರಿ

5. ನಾವು ‘ಯೆಹೋವನ ದಿನ’ಕ್ಕಾಗಿ ಉತ್ಸುಕತೆಯಿಂದ ಆಶಿಸುತ್ತಾ ಇದ್ದೇವೆಂದು ಹೇಗೆ ತೋರಿಸಬಹುದು?

5 ನಾವು ಯೆಹೋವನ ದಿನವನ್ನು ಪಾರಾಗಿ ಉಳಿಯಲು ಉತ್ಸುಕತೆಯಿಂದ ಆಶಿಸುತ್ತಿರುವಲ್ಲಿ, ನಾವದನ್ನು ನಮ್ಮ ‘ನಡವಳಿಕೆಯ ಪವಿತ್ರ ಕೃತ್ಯಗಳ’ ಮೂಲಕ ತೋರಿಸುವೆವು. ‘ನಡವಳಿಕೆಯ ಪವಿತ್ರ ಕೃತ್ಯಗಳು’ ಎಂಬ ವಾಕ್ಸರಣಿಯು, ನಮಗೆ ಪೇತ್ರನ ಈ ಬುದ್ಧಿವಾದವನ್ನು ಜ್ಞಾಪಕಕ್ಕೆ ತರಬಹುದು: “ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆಯುವವರಾಗಿರದೆ ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಿಗೆ ತಕ್ಕಂತೆ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ. ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು ಎಂದು ಬರೆದದೆಯಲ್ಲಾ.”​—1 ಪೇತ್ರ 1:14-16.

6. ಪವಿತ್ರರಾಗಿರಲು ನಾವೇನು ಮಾಡಬೇಕು?

6 ಪವಿತ್ರರಾಗಿರಲು, ನಾವು ಶಾರೀರಿಕ, ಮಾನಸಿಕ, ನೈತಿಕ ಹಾಗೂ ಆಧ್ಯಾತ್ಮಿಕ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು. ಯೆಹೋವನ ನಾಮವನ್ನು ಹೊತ್ತಿರುವ ವ್ಯಕ್ತಿಗಳೋಪಾದಿ ನಮ್ಮನ್ನೇ ಪವಿತ್ರರಾಗಿರಿಸಿಕೊಳ್ಳುವ ಮೂಲಕ ನಾವು ‘ಯೆಹೋವನ ದಿನಕ್ಕಾಗಿ’ ಸಿದ್ಧರಾಗುತ್ತಿದ್ದೇವೊ? ಇಂಥ ಶುದ್ಧತೆಯನ್ನು ಇಂದು ಕಾಪಾಡಿಕೊಳ್ಳುವುದು ಸುಲಭವಲ್ಲ, ಏಕೆಂದರೆ ಲೋಕದ ನೈತಿಕ ಮಟ್ಟಗಳು ಒಂದೇ ಸಮನೆ ಅವನತಿಹೊಂದುತ್ತಾ ಇವೆ. (1 ಕೊರಿಂಥ 7:31; 2 ತಿಮೊಥೆಯ 3:13) ನಮ್ಮ ಮತ್ತು ಲೋಕದ ನೈತಿಕ ಮಟ್ಟಗಳ ನಡುವಿನ ಅಂತರವು ಹೆಚ್ಚಾಗುತ್ತಾ ಇದೆಯೊ? ಇಲ್ಲದಿರುವಲ್ಲಿ, ಇದು ಚಿಂತೆಯ ವಿಷಯವಾಗಿದೆ. ನಮ್ಮ ವೈಯಕ್ತಿಕ ಮಟ್ಟಗಳು ಲೋಕದ ಮಟ್ಟಗಳಿಗಿಂತ ಉನ್ನತವಾಗಿರುವುದಾದರೂ, ಅವು ಶಿಥಿಲವಾಗುತ್ತಿವೆಯೊ? ಹಾಗಿರುವಲ್ಲಿ, ದೇವರನ್ನು ಸಂತೋಷಪಡಿಸಲಿಕ್ಕೋಸ್ಕರ ವಿಷಯಗಳನ್ನು ಸರಿಪಡಿಸಲು ನಾವು ಸಕಾರಾತ್ಮಕ ಕ್ರಿಯೆಯನ್ನು ಕೈಕೊಳ್ಳಬೇಕು.

7, 8. (ಎ) ‘ನಡವಳಿಕೆಯ ಪವಿತ್ರ ಕೃತ್ಯಗಳಲ್ಲಿ’ ತಲ್ಲೀನರಾಗಿರುವುದರ ಮಹತ್ವವನ್ನು ನಾವು ಹೇಗೆ ಮರೆಯಬಹುದು? (ಬಿ) ತಿದ್ದುವಿಕೆಯ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕಾದೀತು?

7 ಇಂಟರ್‌ನೆಟ್‌ ಮೇಲೆ ಅಶ್ಲೀಲ ಸಾಹಿತ್ಯದ ಆಗಮನವಾದಂದಿನಿಂದ ಮತ್ತು ಅದರಿಂದಾಗಿ ಸಿಗುವ ಏಕಾಂತತೆಯ ಕಾರಣದಿಂದ, ಒಂದು ಸಮಯದಲ್ಲಿ ಇಂಥ ಅನೈತಿಕ ಸಾಮಗ್ರಿಯು ಕೈಗೆಟುಕದಿದ್ದಂಥ ಕೆಲವರಿಗೆ, “ಲೈಂಗಿಕ ಅವಕಾಶಗಳ ಅಮಿತ ಸರಬರಾಯಿ” ಸಿಗುತ್ತಿದೆಯೆಂದು ಒಬ್ಬ ವೈದ್ಯನು ಹೇಳುತ್ತಾನೆ. ಇಂಥ ಅಶುದ್ಧವಾದ ಇಂಟರ್‌ನೆಟ್‌ ಸೈಟ್‌ಗಳನ್ನು ನಾವು ಹುಡುಕಿ ನೋಡುತ್ತಿರುವಲ್ಲಿ, “ಅಶುದ್ಧವಾದ ಯಾವದನ್ನೂ ಮುಟ್ಟದಿರಿ” ಎಂಬ ಬೈಬಲಿನ ಆಜ್ಞೆಯನ್ನು ನಾವು ಖಂಡಿತವಾಗಿಯೂ ಅಲಕ್ಷಿಸುತ್ತಿರುವೆವು. (ಯೆಶಾಯ 52:11) ನಾವು ನಿಜವಾಗಿಯೂ, ‘ಯೆಹೋವನ ದಿನವನ್ನು ಹಾರೈಸುತ್ತಿದ್ದೇವೆ’ ಎಂದು ಹೇಳಬಹುದೊ? ಇಲ್ಲವೆ ನಮ್ಮ ಮನಸ್ಸನ್ನು ಹೊಲಸಾದ ವಿಷಯಗಳಿಂದ ಮಲಿನಗೊಳಿಸಿದರೂ, ನಮ್ಮನ್ನೇ ಶುದ್ಧಪಡಿಸಿಕೊಳ್ಳಲು ನಮಗಿನ್ನೂ ಸಮಯವಿದೆಯೆಂದು ತರ್ಕಿಸುತ್ತಾ, ನಮ್ಮ ಮನಸ್ಸಿನಲ್ಲೇ ಆ ದಿನವನ್ನು ಮುಂದೂಡುತ್ತಾ ಇದ್ದೇವೊ? ಈ ವಿಷಯಗಳಲ್ಲಿ ನಮಗೊಂದು ಸಮಸ್ಯೆಯಿರುವಲ್ಲಿ, ‘ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ಕಾಪಾಡಿ, ಆತನ ಮಾರ್ಗದಲ್ಲಿ ನಡೆಯುವಂತೆ ಚೈತನ್ಯಗೊಳಿಸಲು’ ಯೆಹೋವನ ಬಳಿ ಬೇಡಿಕೊಳ್ಳುವುದು ಎಷ್ಟು ತುರ್ತಿನ ಸಂಗತಿಯಾಗಿದೆ!​—ಕೀರ್ತನೆ 119:37.

8 ಯೆಹೋವನ ಸಾಕ್ಷಿಗಳಲ್ಲಿ ಅಧಿಕಾಂಶ ಮಂದಿ, ಆಬಾಲವೃದ್ಧರೆಲ್ಲರೂ ದೇವರ ಉಚ್ಚ ನೈತಿಕ ಮಟ್ಟಗಳಿಗೆ ಅಂಟಿಕೊಂಡು, ಈ ಲೋಕದ ಅನೈತಿಕ ಸೆಳೆತಗಳಿಂದ ದೂರವಿದ್ದಾರೆ. ನಾವು ಜೀವಿಸುತ್ತಿರುವ ಈ ಸಮಯಗಳ ತುರ್ತಿನ ಬಗ್ಗೆ ಹಾಗೂ ‘ಯೆಹೋವನ ದಿನವು ಕಳ್ಳನು ಬರುವಂತೆ ಬರುತ್ತದೆ’ ಎಂಬ ಪೇತ್ರನ ಎಚ್ಚರಿಕೆಯ ಬಗ್ಗೆ ಅರಿವುಳ್ಳವರಾಗಿ, ಅವರು ‘ನಡವಳಿಕೆಯ ಪವಿತ್ರ ಕೃತ್ಯಗಳನ್ನು’ ಮಾಡುತ್ತಾ ಇದ್ದಾರೆ. (2 ಪೇತ್ರ 3:10) ಅವರು ‘ಯೆಹೋವನ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ’ ಇದ್ದಾರೆಂಬುದನ್ನು ಅವರ ಕಾರ್ಯಗಳು ಸಾಬೀತುಪಡಿಸುತ್ತವೆ.a

“ದೇವಭಕ್ತಿಯ ಕ್ರಿಯೆ”ಗಳೊಂದಿಗೆ ಕಾಯಿರಿ

9. ದೇವಭಕ್ತಿಯು ನಾವೇನನ್ನು ಮಾಡುವಂತೆ ಪ್ರಚೋದಿಸಬೇಕು?

9 ನಾವು ಯೆಹೋವನ ದಿನವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದರೆ “ದೇವಭಕ್ತಿಯ ಕ್ರಿಯೆಗಳು” ಕೂಡ ಅತ್ಯಾವಶ್ಯಕವಾಗಿವೆ. “ದೇವಭಕ್ತಿ”ಯಲ್ಲಿ, ದೇವರಿಗಾಗಿ ಪೂಜ್ಯಭಾವನೆಯು ಒಳಗೂಡಿರುತ್ತದೆ. ಮತ್ತು ಇದು ತಾನೇ, ನಾವಾತನಿಗೆ ಸಂತೋಷವನ್ನು ತರುವಂಥ ಕೆಲಸಗಳನ್ನು ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತದೆ. ದೇವಭಕ್ತಿಯ ಅಂಥ ಕ್ರಿಯೆಗಳ ಹಿಂದಿರುವ ಪ್ರಚೋದಕ ಶಕ್ತಿಯು ಯೆಹೋವನೊಂದಿಗಿನ ನಿಷ್ಠಾಭರಿತ ಅಂಟಿಕೆಯಾಗಿದೆ. ಏಕೆಂದರೆ “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.” (1 ತಿಮೊಥೆಯ 2:4) ದೇವರು, ‘ಯಾವನಾದರೂ ನಾಶವಾಗುವದರಲ್ಲಿ ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದಾನೆ.’ (2 ಪೇತ್ರ 3:9) ಹೀಗಿರುವುದರಿಂದ, ನಮ್ಮ ದೇವಭಕ್ತಿಯು, ಯೆಹೋವನ ಕುರಿತಾಗಿ ಕಲಿತು ಆತನನ್ನು ಅನುಕರಿಸುವಂತೆ ಜನರಿಗೆ ಸಹಾಯಮಾಡುವ ನಮ್ಮ ಪ್ರಯತ್ನಗಳನ್ನು ಇನ್ನೂ ಹೆಚ್ಚು ತೀವ್ರಗೊಳಿಸುವಂತೆ ಪ್ರಚೋದಿಸಬಾರದೊ?​—ಎಫೆಸ 5:1.

10. ‘ಐಶ್ವರ್ಯದಿಂದುಂಟಾಗುವ ಮೋಸದ’ ವಿರುದ್ಧ ನಾವೇಕೆ ಎಚ್ಚರದಿಂದಿರಬೇಕು?

10 ನಾವು ದೇವರ ರಾಜ್ಯವನ್ನು ಪ್ರಥಮವಾಗಿ ಹುಡುಕುವುದಾದರೆ, ನಮ್ಮ ಜೀವನವು ದೇವಭಕ್ತಿಯ ಕ್ರಿಯೆಗಳಿಂದ ತುಂಬಿತುಳುಕುವುದು. (ಮತ್ತಾಯ 6:33) ಇದರಲ್ಲಿ, ಭೌತಿಕ ವಿಷಯಗಳ ಕುರಿತಾದ ಸಮತೂಕ ದೃಷ್ಟಿಕೋನವನ್ನು ಹೊಂದುವುದೂ ಒಳಗೂಡಿದೆ. ಯೇಸು ಎಚ್ಚರಿಸಿದ್ದು: “ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.” (ಲೂಕ 12:15) ಹಣದ ವ್ಯಾಮೋಹದಿಂದ ನಾವು ಕುರುಡರಾಗುವೆವು ಎಂಬುದನ್ನು ನಮಗೆ ಊಹಿಸಿಕೊಳ್ಳಲೂ ಸಾಧ್ಯವಿರಲಿಕ್ಕಿಲ್ಲ. ಹಾಗಿದ್ದರೂ, “ಪ್ರಪಂಚದ ಚಿಂತೆಯೂ ಐಶ್ವರ್ಯದಿಂದುಂಟಾಗುವ ಮೋಸವೂ” ದೇವರ ‘ವಾಕ್ಯವನ್ನು ಅಡಗಿಸಬಲ್ಲದು’ ಎಂಬದನ್ನು ನಾವು ಗಮನಿಸತಕ್ಕದ್ದು. (ಮತ್ತಾಯ 13:​22, ಓರೆಅಕ್ಷರಗಳು ನಮ್ಮವು.) ಹೊಟ್ಟೆಪಾಡಿಗಾಗಿ ದುಡಿಯುವುದು ಸುಲಭವಾಗಿರಲಿಕ್ಕಿಲ್ಲ. ಆದುದರಿಂದ ಲೋಕದ ಕೆಲವೊಂದು ಭಾಗಗಳಲ್ಲಿ, ಅನೇಕರು ತಾವೊಂದು ಉತ್ತಮ ಜೀವನವನ್ನು ಹೊಂದಬೇಕಾದರೆ ಹೆಚ್ಚು ಧನಿಕವಾಗಿರುವ ದೇಶವೊಂದಕ್ಕೆ ಹೋಗಲೇಬೇಕೆಂದು ತರ್ಕಿಸುತ್ತಾರೆ. ಇದಕ್ಕಾಗಿ ಅವರು, ಕೆಲವು ವರ್ಷಗಳ ವರೆಗೆ ತಮ್ಮ ಕುಟುಂಬದಿಂದಲೂ ದೂರವಿರಬೇಕಾಗಬಹುದು. ದೇವಜನರಲ್ಲೂ ಕೆಲವರು ಇದೇ ರೀತಿಯ ವಿವರಣೆಯನ್ನು ಕೊಡುತ್ತಾರೆ. ಇನ್ನೊಂದು ದೇಶಕ್ಕೆ ಹೋಗುವುದರಿಂದ ಅವರು ತಮ್ಮ ಕುಟುಂಬಕ್ಕೆ ಅತ್ಯಾಧುನಿಕವಾದ ಸೌಕರ್ಯಗಳನ್ನು ಒದಗಿಸಲು ಶಕ್ತರಾಗಬಹುದು ನಿಜ. ಆದರೆ, ತಮ್ಮ ದೇಶದಲ್ಲಿ ಅವರು ಬಿಟ್ಟುಬಂದಿರುವ ಪ್ರಿಯ ಜನರ ಆತ್ಮಿಕ ಸ್ಥಿತಿ ಏನಾಗಬಹುದು? ಮನೆಯಲ್ಲಿ ಸರಿಯಾದ ಶಿರಸ್ಸುತನ ಇಲ್ಲದೇ ಹೋಗುವುದರಿಂದ, ಯೆಹೋವನ ದಿನವನ್ನು ಪಾರಾಗಲು ಬೇಕಾಗಿರುವಂಥ ಆಧ್ಯಾತ್ಮಿಕತೆ ಅವರಿಗಿರುವುದೊ?

11. ದೇವಭಕ್ತಿಯ ಕ್ರಿಯೆಗಳು ಐಶ್ವರ್ಯಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿವೆ ಎಂಬದನ್ನು ಒಬ್ಬ ವಲಸಿಗ ಕಾರ್ಮಿಕನು ಹೇಗೆ ತೋರಿಸಿದನು?

11 ಫಿಲಿಪ್ಪೀನ್ಸ್‌ ದೇಶದವನಾಗಿದ್ದ ಒಬ್ಬ ವಲಸಿಗ ಕಾರ್ಮಿಕನು, ಜಪಾನಿನಲ್ಲಿದ್ದ ಯೆಹೋವನ ಸಾಕ್ಷಿಗಳಿಂದ ಬೈಬಲ್‌ ಸತ್ಯವನ್ನು ಕಲಿತುಕೊಂಡನು. ಶಿರಸ್ಸುತನಕ್ಕೆ ಸೇರಿರುವ ಶಾಸ್ತ್ರೀಯ ಜವಾಬ್ದಾರಿಗಳ ಕುರಿತಾಗಿ ಕಲಿತ ನಂತರ, ತನ್ನ ಕುಟುಂಬದವರು ಸಹ ಯೆಹೋವನ ಆರಾಧಕರಾಗುವಂತೆ ಅವರಿಗೆ ಸಹಾಯಮಾಡುವ ಅಗತ್ಯವಿದೆಯೆಂಬುದನ್ನು ಅವನು ಮನಗಂಡನು. (1 ಕೊರಿಂಥ 11:3) ಸ್ವದೇಶದಲ್ಲಿದ್ದ ಅವನ ಹೆಂಡತಿಯು ಅವನ ಈ ಹೊಸ ಧರ್ಮವನ್ನು ತುಂಬ ವಿರೋಧಿಸಿದಳು. ಮತ್ತು ಅವನು ಕುಟುಂಬಕ್ಕೆ ತನ್ನ ಬೈಬಲ್‌ ಆಧಾರಿತ ನಂಬಿಕೆಗಳನ್ನು ಕಲಿಸಲಿಕ್ಕಾಗಿ ಮನೆಗೆ ಹಿಂದಿರುಗುವ ಬದಲು, ಅಲ್ಲಿಂದ ಹಣವನ್ನು ಕಳುಹಿಸುತ್ತಾ ಇರುವಂತೆ ಅವಳು ಬಯಸಿದಳು. ಆದರೆ ಸಮಯದ ತುರ್ತು ಮತ್ತು ತನ್ನ ಪ್ರಿಯ ವ್ಯಕ್ತಿಗಳಿಗಾಗಿರುವ ಕಳಕಳಿಯಿಂದ ಪ್ರಚೋದಿಸಲ್ಪಟ್ಟು, ಅವನು ಸ್ವದೇಶಕ್ಕೆ ಹಿಂದಿರುಗಿದನು. ಕುಟುಂಬ ಸದಸ್ಯರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವುದರಲ್ಲಿ ಅವನು ತೋರಿಸಿದ ತಾಳ್ಮೆಗಾಗಿ ಅವನಿಗೆ ಪ್ರತಿಫಲ ಸಿಕ್ಕಿತು. ಕಾಲಾನಂತರ, ಅವನ ಕುಟುಂಬವು ಸತ್ಯಾರಾಧನೆಯಲ್ಲಿ ಐಕ್ಯವಾಯಿತು, ಮತ್ತು ಅವನ ಹೆಂಡತಿಯು ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದಳು.

12. ನಾವು ಜೀವನದಲ್ಲಿ ಆತ್ಮಿಕ ಅಭಿರುಚಿಗಳನ್ನು ಏಕೆ ಪ್ರಥಮವಾಗಿಡಬೇಕು?

12 ನಮ್ಮ ಸನ್ನಿವೇಶವನ್ನು, ಬೆಂಕಿಯಿಂದ ಉರಿಯುತ್ತಿರುವ ಒಂದು ಕಟ್ಟಡದಲ್ಲಿರುವ ವ್ಯಕ್ತಿಗಳ ಸನ್ನಿವೇಶಕ್ಕೆ ಹೋಲಿಸಸಾಧ್ಯವಿದೆ. ಕುಸಿದುಬೀಳಲಿರುವ ಆ ಉರಿಯುತ್ತಿರುವ ಕಟ್ಟಡದಿಂದ, ಸಾಮಾನುಗಳನ್ನು ಹೊರತರುವ ಪ್ರಯತ್ನದಲ್ಲಿ ಆಚೀಚೆ ಹುಚ್ಚುಹುಚ್ಚಾಗಿ ಓಡಾಡುವುದು ಬುದ್ಧಿವಂತಿಕೆಯ ಕೆಲಸವೊ? ಅದಕ್ಕೆ ಬದಲಾಗಿ, ನಮ್ಮ ಮತ್ತು ನಮ್ಮ ಕುಟುಂಬದವರ ಹಾಗೂ ಕಟ್ಟಡದಲ್ಲಿರುವ ಇತರರ ಜೀವಗಳನ್ನು ರಕ್ಷಿಸುವುದು ಹೆಚ್ಚು ಮಹತ್ವಪೂರ್ಣವಲ್ಲವೊ? ಹಾಗೆಯೇ, ಈ ದುಷ್ಟ ವಿಷಯಗಳ ವ್ಯವಸ್ಥೆಯು ಕುಸಿದುಬೀಳುವ ಹಂತದಲ್ಲಿದೆ, ಮತ್ತು ಜೀವಗಳು ಗಂಡಾಂತರದಲ್ಲಿವೆ. ಇದನ್ನು ಗ್ರಹಿಸಿದವರಾಗಿ, ನಾವು ನಿಶ್ಚಯವಾಗಿಯೂ ಆತ್ಮಿಕ ಅಭಿರುಚಿಗಳನ್ನು ಪ್ರಥಮವಾಗಿಟ್ಟು, ಜೀವರಕ್ಷಕ ರಾಜ್ಯ ಸಾರುವಿಕೆಯ ಕೆಲಸದ ಮೇಲೆ ಹುರುಪಿನಿಂದ ಗಮನವನ್ನು ಕೇಂದ್ರೀಕರಿಸಬೇಕು.​—1 ತಿಮೊಥೆಯ 4:16.

ನಾವು “ನಿರ್ಮಲ”ರಾಗಿರಬೇಕು

13. ಯೆಹೋವನ ದಿನವು ಬಂದೆರಗುವಾಗ, ನಾವು ಯಾವ ಸ್ಥಿತಿಯಲ್ಲಿರಲು ಬಯಸಬೇಕು?

13 ಕಾಯುವ ಮನೋಭಾವವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಒತ್ತಿಹೇಳುತ್ತಾ, ಪೇತ್ರನನ್ನುವುದು: “ಆದಕಾರಣ ಪ್ರಿಯರೇ, ನೀವು ಇವುಗಳನ್ನು ಎದುರುನೋಡುವವರಾಗಿರುವದರಿಂದ ಶಾಂತರಾಗಿದ್ದು ಆತನೆದುರಿನಲ್ಲಿ ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡಿರಿ.” (2 ಪೇತ್ರ 3:14) ಪೇತ್ರನು, ನಡವಳಿಕೆಯ ಪವಿತ್ರ ಕೃತ್ಯಗಳು ಹಾಗೂ ದೇವಭಕ್ತಿಯ ಕ್ರಿಯೆಗಳಲ್ಲಿ ತಲ್ಲೀನರಾಗಿರುವಂತೆ ಕೊಟ್ಟ ಬುದ್ಧಿವಾದದೊಂದಿಗೆ ಇನ್ನೊಂದು ವಿಷಯವನ್ನೂ ಕೂಡಿಸುತ್ತಾನೆ. ಕಟ್ಟಕಡೆಗೆ ಯೆಹೋವನ ದೃಷ್ಟಿಯಲ್ಲಿ ಯೇಸುವಿನ ಅಮೂಲ್ಯ ರಕ್ತದಿಂದ ಶುದ್ಧೀಕರಿಸಲ್ಪಟ್ಟ ವ್ಯಕ್ತಿಗಳೋಪಾದಿ ಇರುವ ಮಹತ್ವವನ್ನು ಅವನು ಒತ್ತಿಹೇಳುತ್ತಾನೆ. (ಪ್ರಕಟನೆ 7:​9, 14) ಅದಕ್ಕಾಗಿ ಒಬ್ಬ ವ್ಯಕ್ತಿಯು ಯೇಸುವಿನ ಯಜ್ಞದಲ್ಲಿ ನಂಬಿಕೆಯನ್ನಿಟ್ಟು, ಯೆಹೋವನ ಸಮರ್ಪಿತ ಹಾಗೂ ದೀಕ್ಷಾಸ್ನಾನ ಹೊಂದಿದ ಸೇವಕನಾಗುವುದು ಆವಶ್ಯಕ.

14. ‘ನಿರ್ಮಲ’ರಾಗಿರುವುದರಲ್ಲಿ ಏನೆಲ್ಲಾ ಒಳಗೂಡಿದೆ?

14 ‘ನಿರ್ಮಲರಾಗಿರಲು’ ಪ್ರಯಾಸಪಡುವಂತೆ ಪೇತ್ರನು ನಮ್ಮನ್ನು ಉತ್ತೇಜಿಸುತ್ತಾನೆ. ಲೋಕದಿಂದ ಕಳಂಕಿತರಾಗದೆ, ನಮ್ಮ ಕ್ರೈಸ್ತ ನಡತೆ ಹಾಗೂ ವ್ಯಕ್ತಿತ್ವಗಳೆಂಬ ಉಡುಪುಗಳನ್ನು ನಾವು ನಿರ್ಮಲವಾಗಿಡುತ್ತಿದ್ದೇವೊ? ನಮ್ಮ ಬಟ್ಟೆಗಳ ಮೇಲೆ ನಾವು ಯಾವುದಾದರೊಂದು ಕಲೆಯನ್ನು ನೋಡುವಲ್ಲಿ, ನಾವು ಕೂಡಲೇ ಅದನ್ನು ತೆಗೆಯಲಿಕ್ಕೆ ಪ್ರಯತ್ನಿಸುತ್ತೇವೆ. ಮತ್ತು ಅದು ನಮ್ಮ ಅಚ್ಚುಮೆಚ್ಚಿನ ಉಡುಪಾಗಿರುವಾಗಲಂತೂ, ಅದನ್ನು ಶುಚಿಗೊಳಿಸಲು ವಿಶೇಷ ಕಾಳಜಿಯನ್ನು ವಹಿಸುವೆವು. ನಮ್ಮ ವ್ಯಕ್ತಿತ್ವ ಇಲ್ಲವೆ ನಡತೆಯಲ್ಲಿನ ಯಾವುದೋ ದೋಷದಿಂದಾಗಿ ನಮ್ಮ ಕ್ರೈಸ್ತ ಉಡುಪುಗಳಿಗೆ ಕಲೆಯಾಗುವಲ್ಲಿಯೂ ನಮಗೆ ಅದೇ ರೀತಿಯ ಭಾವನೆಯಿರುತ್ತದೊ?

15. (ಎ) ಇಸ್ರಾಯೇಲ್ಯರು ತಮ್ಮ ವಸ್ತ್ರಗಳ ಮೂಲೆಗಳಲ್ಲಿ ಏಕೆ ಗೊಂಡೆಗಳನ್ನು ಕಟ್ಟಿಕೊಳ್ಳಬೇಕಾಗಿತ್ತು? (ಬಿ) ಯೆಹೋವನ ಸದ್ಯದ ದಿನದ ಸೇವಕರು ಏಕೆ ಭಿನ್ನರಾಗಿ ಎದ್ದುಕಾಣುತ್ತಾರೆ?

15 ಇಸ್ರಾಯೇಲ್ಯರು “ತಮ್ಮ ವಸ್ತ್ರಗಳ ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳ”ಬೇಕಾಗಿತ್ತು ಮತ್ತು “ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿದಾರದಿಂದ ಕೂಡಿರ”ಬೇಕಿತ್ತು. ಏಕೆ? ಅವರು ಯೆಹೋವನ ಆಜ್ಞೆಗಳನ್ನು ನೆನಪಿನಲ್ಲಿಟ್ಟುಕೊಂಡು, ಅವುಗಳನ್ನು ಪಾಲಿಸಿ, ತಮ್ಮ ದೇವರಿಗೆ “ಪವಿತ್ರರಾಗಿರ”ಲಿಕ್ಕಾಗಿಯೇ. (NW) (ಅರಣ್ಯಕಾಂಡ 15:​38-40) ಯೆಹೋವನ ಸದ್ಯದ ದಿನದ ಸೇವಕರಂತೆ, ನಾವು ಲೋಕದಿಂದ ಭಿನ್ನರಾಗಿ ಎದ್ದುಕಾಣುತ್ತೇವೆ, ಏಕೆಂದರೆ ನಾವು ದೈವಿಕ ನಿಯಮಗಳನ್ನೂ ಮೂಲತತ್ತ್ವಗಳನ್ನೂ ಪಾಲಿಸುತ್ತೇವೆ. ಉದಾಹರಣೆಗಾಗಿ, ನಾವು ನೈತಿಕ ಶುದ್ಧತೆಯನ್ನು ಕಾಪಾಡಿಕೊಳ್ಳುತ್ತೇವೆ, ರಕ್ತದ ಪಾವಿತ್ರ್ಯವನ್ನು ಗೌರವಿಸುತ್ತೇವೆ, ಮತ್ತು ಎಲ್ಲಾ ವಿಧದ ವಿಗ್ರಹಾರಾಧನೆಯಿಂದ ದೂರವಿರುತ್ತೇವೆ. (ಅ. ಕೃತ್ಯಗಳು 15:​28, 29) ನಮ್ಮನ್ನೇ ನಿರ್ಮಲರಾಗಿಟ್ಟುಕೊಳ್ಳುವ ನಮ್ಮ ದೃಢಸಂಕಲ್ಪಕ್ಕಾಗಿ ಅನೇಕರು ನಮ್ಮನ್ನು ಗೌರವಿಸುತ್ತಾರೆ.​—ಯಾಕೋಬ 1:27.

ನಾವು ‘ನಿರ್ದೋಷಿ’ಗಳಾಗಿರಬೇಕು

16. ನಮ್ಮನ್ನೇ ‘ನಿರ್ದೋಷಿ’ಗಳಾಗಿರಿಸುವುದರಲ್ಲಿ ಏನು ಒಳಗೂಡಿದೆ?

16 ನಾವು ‘ನಿರ್ದೋಷಿ’ಗಳಾಗಿರಬೇಕೆಂತಲೂ ಪೇತ್ರನು ಹೇಳುತ್ತಾನೆ. ಅದು ಹೇಗೆ ಸಾಧ್ಯ? ಒಂದು ಕಲೆಯನ್ನು ಸಾಮಾನ್ಯವಾಗಿ ಶುಚಿಮಾಡಿ ತೆಗೆಯಬಹುದು, ಆದರೆ ಒಂದು ದೋಷವನ್ನಲ್ಲ. ಒಂದು ದೋಷವು, ಒಳಗೆ ಏನೋ ತಪ್ಪಿದೆ, ಲೋಪವಿದೆ ಎಂಬದನ್ನು ಸೂಚಿಸುತ್ತದೆ. ಫಿಲಿಪ್ಪಿಯದಲ್ಲಿದ್ದ ಜೊತೆ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬುದ್ಧಿಹೇಳಿದ್ದು: “ಗುಣುಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ. ಹೀಗೆ ನೀವು ನಿರ್ದೋಷಿಗಳೂ ಯಥಾರ್ಥ ಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ.” (ಫಿಲಿಪ್ಪಿ 2:14, 15) ನಾವು ಆ ಬುದ್ಧಿವಾದವನ್ನು ಅನುಸರಿಸುವಲ್ಲಿ, ಗುಣುಗುಟ್ಟುವುದರಿಂದ, ವಾದತರ್ಕಗಳಿಂದ ದೂರವಿದ್ದು, ದೇವರನ್ನು ಶುದ್ಧ ಉದ್ದೇಶದಿಂದ ಸೇವಿಸುತ್ತಿರುವೆವು. “ರಾಜ್ಯದ ಈ ಸುವಾರ್ತೆಯನ್ನು” ಸಾರಲಿಕ್ಕಾಗಿ, ಯೆಹೋವನ ಹಾಗೂ ನೆರೆಯವರಿಗಾಗಿರುವ ಪ್ರೀತಿಯು ನಮ್ಮನ್ನು ಪ್ರಚೋದಿಸುವುದು. (ಮತ್ತಾಯ 22:​35-40; 24:14) ಅದಲ್ಲದೆ, ದೇವರ ಬಗ್ಗೆ ಹಾಗೂ ಆತನ ವಾಕ್ಯವಾದ ಬೈಬಲಿನ ಬಗ್ಗೆ ಇತರರಿಗೆ ಸಹಾಯಮಾಡುವ ಪ್ರಯತ್ನದಲ್ಲಿ ನಾವು ನಮ್ಮ ಸಮಯವನ್ನು ಏಕೆ ಇಷ್ಟಪೂರ್ವಕವಾಗಿ ಕೊಡುತ್ತೇವೆಂಬುದು ಹೆಚ್ಚಿನ ಜನರಿಗೆ ಅರ್ಥವಾಗದಿದ್ದರೂ, ನಾವು ಸುವಾರ್ತೆಯನ್ನು ಘೋಷಿಸುತ್ತಾ ಇರುವೆವು.

17. ಕ್ರೈಸ್ತ ಸಭೆಯಲ್ಲಿ ಸುಯೋಗಗಳಿಗಾಗಿ ಪ್ರಯತ್ನಿಸುತ್ತಿರುವಾಗ ನಮ್ಮ ಉದ್ದೇಶ ಏನಾಗಿರಬೇಕು?

17 ‘ನಿರ್ದೋಷಿಗಳಾಗಿ’ ಕಂಡುಬರುವ ಅಪೇಕ್ಷೆ ನಮಗಿರುವುದರಿಂದ, ನಮ್ಮ ಎಲ್ಲಾ ಕೆಲಸಗಳ ಹಿಂದಿರುವ ನಮ್ಮ ಉದ್ದೇಶಗಳನ್ನು ನಾವು ಪರೀಕ್ಷಿಸಿ ನೋಡಬೇಕು. ಐಶ್ವರ್ಯ ಇಲ್ಲವೆ ಅಧಿಕಾರವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುವುದರಂಥ, ಸ್ವಾರ್ಥ ಕಾರಣಗಳಿಗಾಗಿ ಕೆಲಸಗಳನ್ನು ಮಾಡುವ ಲೋಕದ ರೀತಿಯನ್ನು ನಾವು ಬಿಟ್ಟುಬಂದಿದ್ದೇವೆ. ಆದುದರಿಂದ ಕ್ರೈಸ್ತ ಸಭೆಯಲ್ಲಿ ನಾವು ಒಂದುವೇಳೆ ಸೇವಾ ಸುಯೋಗಗಳಿಗಾಗಿ ಪ್ರಯತ್ನಿಸುತ್ತಾ ಇರುವಲ್ಲಿ, ನಮ್ಮ ಉದ್ದೇಶಗಳು ಯಾವಾಗಲೂ ಶುದ್ಧವಾಗಿರಲಿ, ಮತ್ತು ಯೆಹೋವನಿಗಾಗಿಯೂ ಇತರರಿಗಾಗಿಯೂ ಇರುವ ಪ್ರೀತಿಯಿಂದ ಸದಾ ಪ್ರಚೋದಿಸಲ್ಪಟ್ಟಿರಲಿ. ಆಧ್ಯಾತ್ಮಿಕ ಪುರುಷರು “ಸಭಾಧ್ಯಕ್ಷನ ಉದ್ಯೋಗವನ್ನು” ಪಡೆದುಕೊಳ್ಳಬೇಕೆಂದಿರುವುದನ್ನು ನೋಡುವುದು ಉಲ್ಲಾಸಕರ ಸಂಗತಿಯಾಗಿದೆ. ಅವರಿದನ್ನು, ಆನಂದದಿಂದ ಮತ್ತು ಯೆಹೋವನಿಗಾಗಿಯೂ ತಮ್ಮ ಜೊತೆ ವಿಶ್ವಾಸಿಗಳಿಗಾಗಿಯೂ ದುಡಿಯಬೇಕೆಂಬ ದೀನ ಅಭಿಲಾಷೆಯಿಂದ ಮಾಡುತ್ತಾರೆ. (1 ತಿಮೊಥೆಯ 3:1; 2 ಕೊರಿಂಥ 1:24) ಹೌದು, ಹಿರಿಯರೋಪಾದಿ ಸೇವೆಸಲ್ಲಿಸಲು ಅರ್ಹರಾಗಿರುವವರು ‘ದೇವರ ಮಂದೆಯನ್ನು ಬಲಾತ್ಕಾರದಿಂದಲ್ಲ ದೇವರ ಚಿತ್ತದ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚವಾದ ದ್ರವ್ಯಾಶೆಯಿಂದಲ್ಲ ಸಿದ್ಧಮನಸ್ಸಿನಿಂದಲೂ, ಮೇಲ್ವಿಚಾರಣೆಮಾಡುತ್ತಾರೆ. ದೇವರು ಅವರ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನಮಾಡುವವರಂತೆ ನಡೆಯದೆ ಅವರು ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳುತ್ತಾರೆ.’​—1 ಪೇತ್ರ 5:1-4.

ನಾವು “ಶಾಂತರಾಗಿ”ರಬೇಕು

18. ಯೆಹೋವನ ಸಾಕ್ಷಿಗಳು ಯಾವ ಗುಣಗಳಿಗಾಗಿ ಸುಪ್ರಸಿದ್ಧರಾಗಿದ್ದಾರೆ?

18 ನಾವು “ಶಾಂತರಾಗಿ”ರಬೇಕೆಂದೂ ಪೇತ್ರನು ಹೇಳುತ್ತಾನೆ. ಈ ಷರತ್ತಿಗನುಗುಣವಾಗಿ ಜೀವಿಸಲಿಕ್ಕಾಗಿ, ನಾವು ಯೆಹೋವನೊಂದಿಗೂ ನಮ್ಮ ನೆರೆಯವರೊಂದಿಗೂ ಶಾಂತಿಯಿಂದಿರಬೇಕು. ‘ನಮ್ಮೊಳಗೆ ಯಥಾರ್ಥವಾದ ಪ್ರೀತಿ’ ಇರುವ ಮತ್ತು ನಮ್ಮ ಜೊತೆ ಕ್ರೈಸ್ತರೊಂದಿಗೆ ಶಾಂತಿಯನ್ನು ಕಾಪಾಡಿಕೊಳ್ಳುವುದರ ಮಹತ್ವವನ್ನು ಪೇತ್ರನು ಒತ್ತಿಹೇಳುತ್ತಾನೆ. (1 ಪೇತ್ರ 2:17; 3:​10, 11; 4:8; 2 ಪೇತ್ರ 1:​5-7) ನಮ್ಮ ಶಾಂತಿಯನ್ನು ಕಾಪಾಡಿಕೊಳ್ಳಲಿಕ್ಕಾಗಿ ನಮ್ಮೊಳಗೆ ಪ್ರೀತಿಯಿರಬೇಕು. (ಯೋಹಾನ 13:​34, 35; ಎಫೆಸ 4:​1, 2) ನಮ್ಮ ಅಂತಾರಾಷ್ಟ್ರೀಯ ಅಧಿವೇಶನಗಳು ನಡೆಯುವಾಗ ನಮ್ಮ ಪ್ರೀತಿ ಹಾಗೂ ಶಾಂತಿಯು ವಿಶೇಷವಾಗಿ ವ್ಯಕ್ತವಾಗುತ್ತದೆ. 1999ರಲ್ಲಿ ಕಾಸ್ಟರೀಕದಲ್ಲಿ ಜರುಗಿದ ಅಧಿವೇಶನದ ಸಮಯದಲ್ಲಿ, ಸ್ಥಳಿಕ ಸಾಕ್ಷಿಗಳು ವಿಮಾನನಿಲ್ದಾಣದಲ್ಲಿ ಅಧಿವೇಶನಕ್ಕಾಗಿ ಆಗಮಿಸುತ್ತಿದ್ದ ಪ್ರತಿನಿಧಿಗಳನ್ನು ಸ್ವಾಗತಿಸುತ್ತಿದ್ದರು. ಇದರಿಂದಾಗಿ ಅವರಿಗರಿವಿಲ್ಲದೆ ಅವರು ಸರಕು ಮಾರುವವನೊಬ್ಬನ ವ್ಯಾಪಾರದ ಸ್ಥಳವನ್ನು ಮರೆಮಾಡುತ್ತಿದ್ದರು. ಇದರಿಂದಾಗಿ ಆ ವ್ಯಾಪಾರಿಗೆ ಸಿಟ್ಟುಬಂತು. ಆದರೆ ಎರಡನೆಯ ದಿನದಂದು ಅವನು, ಆ ಸ್ಥಳಿಕ ಸಾಕ್ಷಿಗಳಿಗೆ ಆಗಮಿಸುತ್ತಿದ್ದ ಪ್ರತಿನಿಧಿಗಳ ವೈಯಕ್ತಿಕ ಪರಿಚಯವಿಲ್ಲದಿದ್ದರೂ ಅವರಿಗೆ ಕೊಡುತ್ತಿದ್ದ ಉತ್ಸುಕ ಸ್ವಾಗತದಿಂದ ಪ್ರದರ್ಶಿಸಲ್ಪಟ್ಟ ಪ್ರೀತಿ ಹಾಗೂ ಸಮಾಧಾನವನ್ನು ಗಮನಿಸಿದನು. ಕೊನೆ ದಿನದಂದು, ಆ ವ್ಯಾಪಾರಿಯು ಸಹ ಸ್ವಾಗತಿಸುವ ಕೆಲಸದಲ್ಲಿ ಜೊತೆಗೂಡಿದನು ಮತ್ತು ಒಂದು ಬೈಬಲ್‌ ಅಧ್ಯಯನಕ್ಕಾಗಿ ಕೇಳಿಕೊಂಡನು.

19. ಜೊತೆ ವಿಶ್ವಾಸಿಗಳೊಂದಿಗೆ ಶಾಂತಿಯನ್ನು ಬೆನ್ನಟ್ಟುವುದು ಏಕೆ ಅತ್ಯಾವಶ್ಯಕವಾಗಿದೆ?

19 ನಮ್ಮ ಆತ್ಮಿಕ ಸಹೋದರ ಸಹೋದರಿಯರೊಂದಿಗೆ ಶಾಂತಿಯನ್ನು ಬೆನ್ನಟ್ಟಲು ನಮಗಿರುವ ಪ್ರಾಮಾಣಿಕ ಮನಸ್ಸು, ನಾವು ಯೆಹೋವನ ದಿನಕ್ಕಾಗಿಯೂ ಆತನ ವಾಗ್ದತ್ತ ಹೊಸ ಲೋಕಕ್ಕಾಗಿಯೂ ಎಷ್ಟೊಂದು ಶ್ರದ್ಧೆಯಿಂದ ಕಾಯುತ್ತಿದ್ದೇವೆಂಬುದರ ಮೇಲೆ ಪ್ರಭಾವಬೀರಬಹುದು. (ಕೀರ್ತನೆ 37:11; 2 ಪೇತ್ರ 3:13) ಒಬ್ಬ ನಿರ್ದಿಷ್ಟ ಜೊತೆ ವಿಶ್ವಾಸಿಯೊಂದಿಗೆ ನಮಗೆ ಶಾಂತಿಯನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತಿರಬಹುದು. ನಾವು ಅವನೊಂದಿಗೆ ಪರದೈಸಿನಲ್ಲಿ ಶಾಂತಿಯಿಂದ ವಾಸಿಸುತ್ತಿರುವುದನ್ನು ಕಲ್ಪಿಸಿಕೊಳ್ಳಬಲ್ಲೆವೊ? ಒಬ್ಬ ಸಹೋದರನಿಗೆ ನಮ್ಮ ವಿರುದ್ಧ ಮನಸ್ಸಿನಲ್ಲಿ ಏನಾದರೂ ಇರುವಲ್ಲಿ, ನಾವು ತಡಮಾಡದೆ ‘ಅವನೊಂದಿಗೆ ಶಾಂತಿಯನ್ನು ಸ್ಥಾಪಿಸಬೇಕು.’ (ಮತ್ತಾಯ 5:​23, 24, NW) ನಾವು ಯೆಹೋವನೊಂದಿಗೆ ಶಾಂತಿಯಿಂದಿರಬೇಕಾದರೆ ಹೀಗೆ ಮಾಡುವುದು ಅತ್ಯಾವಶ್ಯಕ.​—ಕೀರ್ತನೆ 35:27; 1 ಯೋಹಾನ 4:20.

20. ‘ಕಾಯುವ ಮನೋಭಾವವು’ ಯಾವ ವಿಧಗಳಲ್ಲಿ ತೋರಿಸಲ್ಪಡಬೇಕು?

20 ನಾವು ವೈಯಕ್ತಿಕವಾಗಿ ‘ಯೆಹೋವನ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ’ ಇದ್ದೇವೊ? ಈ ಅನೈತಿಕ ಲೋಕದಲ್ಲಿ ಪವಿತ್ರರಾಗಿ ಉಳಿಯುವ ಮೂಲಕ, ದುಷ್ಟತನದ ಅಂತ್ಯವನ್ನು ನೋಡಲು ನಮಗಿರುವ ತೀವ್ರ ಹಂಬಲವನ್ನು ನಾವು ತೋರಿಸಬಲ್ಲೆವು. ಅದಲ್ಲದೆ, ಯೆಹೋವನ ದಿನದ ಆಗಮನಕ್ಕಾಗಿ ಮತ್ತು ರಾಜ್ಯದಾಳಿಕೆಯ ಕೆಳಗಿನ ಜೀವನಕ್ಕಾಗಿ ನಾವು ಹಾತೊರೆಯುತ್ತಿದ್ದೇವೆ ಎಂಬದನ್ನು ನಾವು ನಮ್ಮ ದೇವಭಕ್ತಿಯ ಕ್ರಿಯೆಗಳಿಂದ ವ್ಯಕ್ತಪಡಿಸುತ್ತೇವೆ. ಮತ್ತು ಶಾಂತಿಭರಿತ ಹೊಸ ಲೋಕದಲ್ಲಿ ಜೀವಿಸಲು ನಮಗಿರುವ ನಿರೀಕ್ಷೆಯು, ಈಗ ನಮ್ಮ ಜೊತೆ ಆರಾಧಕರೊಂದಿಗೆ ನಾವು ಶಾಂತಿಯನ್ನು ಕಾಪಾಡಿಕೊಳ್ಳುವುದರಲ್ಲಿ ಪ್ರತಿಬಿಂಬಿಸಲ್ಪಡುತ್ತದೆ. ಈ ಎಲ್ಲಾ ವಿಧಗಳಲ್ಲಿ, ನಮಗೆ “ಕಾಯುವ ಮನೋಭಾವ”ವಿದೆ ಮತ್ತು ನಾವು ‘ಯೆಹೋವನ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ’ ಇದ್ದೇವೆಂಬದನ್ನು ನಾವು ತೋರಿಸುತ್ತೇವೆ.

[ಪಾದಟಿಪ್ಪಣಿ]

a ಉದಾಹರಣೆಗಳಿಗಾಗಿ, 2000, ಜನವರಿ 1ರ ಕಾವಲಿನಬುರುಜು ಪತ್ರಿಕೆಯ ಪುಟ 16 ಮತ್ತು 1997 ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್‌)ದ ಪುಟ 51ನ್ನು ನೋಡಿ.

ನಿಮಗೆ ಜ್ಞಾಪಕವಿದೆಯೊ?

• ‘ಯೆಹೋವನ ದಿನದ ಪ್ರತ್ಯಕ್ಷತೆಯನ್ನು ಹಾರೈಸುತ್ತಾ’ ಇರುವುದರ ಅರ್ಥವೇನು?

• ನಮ್ಮ ನಡತೆಯ ಸಂಬಂಧದಲ್ಲಿ “ಕಾಯುವ ಮನೋಭಾವವನ್ನು” ಹೇಗೆ ಪ್ರದರ್ಶಿಸಲಾಗುತ್ತದೆ?

• ‘ದೇವಭಕ್ತಿಯ ಕ್ರಿಯೆಗಳು’ ಏಕೆ ಅತ್ಯಾವಶ್ಯಕವಾಗಿವೆ?

• ಯೆಹೋವನೆದುರಿನಲ್ಲಿ ನಾವು “ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳುವದಕ್ಕೆ” ಏನು ಮಾಡತಕ್ಕದ್ದು?

[ಪುಟ 11ರಲ್ಲಿರುವ ಚಿತ್ರ]

‘ಕಾಯುವ ಮನೋಭಾವವು’ ನಡವಳಿಕೆಯ ಪವಿತ್ರ ಕೃತ್ಯಗಳಲ್ಲಿ ಪ್ರತಿಬಿಂಬಿಸಲ್ಪಡುತ್ತದೆ

[ಪುಟ 12ರಲ್ಲಿರುವ ಚಿತ್ರಗಳು]

ರಾಜ್ಯ ಸಾರುವಿಕೆಯ ಕೆಲಸವು ಜೀವರಕ್ಷಕವಾಗಿದೆ

[ಪುಟ 14ರಲ್ಲಿರುವ ಚಿತ್ರ]

ನಾವು ಯೆಹೋವನ ದಿನಕ್ಕಾಗಿ ಕಾಯುತ್ತಾ ಇರುವಾಗ, ಇತರರೊಂದಿಗೆ ಶಾಂತಿಯನ್ನು ಕಾಪಾಡಿಕೊಳ್ಳೋಣ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ