ದೇವದೂತರು ನಮ್ಮ ಮೇಲೆ ಪರಿಣಾಮಬೀರುವ ವಿಧ
ಪ್ರವಾದಿಯಾದ ದಾನಿಯೇಲನು ಕಂಡ ದರ್ಶನದಲ್ಲಿ ದೇವದೂತರಿಂದ ಕೂಡಿರುವ ದೇವರ ಕುಟುಂಬವು ಸಹ ಇತ್ತು. ಅದನ್ನು ವರ್ಣಿಸುತ್ತಾ ಅವನು ಬರೆದುದು: “ಲಕ್ಷೋಪಲಕ್ಷ ದೂತರು [ದೇವರನ್ನು] ಸೇವಿಸುತ್ತಿದ್ದರು, ಕೋಟ್ಯನುಕೋಟಿ ಕಿಂಕರರು ಆತನ ಮುಂದೆ ನಿಂತುಕೊಂಡಿದ್ದರು.” (ದಾನಿಯೇಲ 7:10) ದೇವರು ಯಾವ ಉದ್ದೇಶದಿಂದ ದೇವದೂತರನ್ನು ಸೃಷ್ಟಿಸಿದನು ಎಂಬುದನ್ನು ಈ ವಚನವು ಪ್ರಕಟಪಡಿಸುತ್ತದೆ. ಅವರು ಆತನ ಸೇವೆಮಾಡಲಿಕ್ಕಾಗಿ ಮತ್ತು ಆತನ ಅಪ್ಪಣೆಗಳನ್ನು ಪೂರೈಸಲಿಕ್ಕಾಗಿ ಸಿದ್ಧರಾಗಿ ನಿಂತುಕೊಂಡಿರಬೇಕು.
ದೇವರು ಕೆಲವೊಮ್ಮೆ ತನ್ನ ದೂತರನ್ನು ಮಾನವರ ಸಂಬಂಧದಲ್ಲಿ ಕೆಲವೊಂದು ವಿಷಯಗಳನ್ನು ಮಾಡಲಿಕ್ಕಾಗಿ ಉಪಯೋಗಿಸುತ್ತಾನೆ. ಆತನು ತನ್ನ ಜನರನ್ನು ಬಲಪಡಿಸಲು ಹಾಗೂ ಸಂರಕ್ಷಿಸಲು, ಮಾನವರಿಗೆ ಸಂದೇಶಗಳನ್ನು ತಲಪಿಸಲು ಮತ್ತು ದುಷ್ಟರ ಮೇಲೆ ತನ್ನ ನ್ಯಾಯದಂಡನೆಯನ್ನು ಜಾರಿಗೊಳಿಸಲು ಅವರನ್ನು ಹೇಗೆ ಉಪಯೋಗಿಸುತ್ತಾನೆ ಎಂಬುದನ್ನು ನಾವು ಪರಿಗಣಿಸಲಿರುವೆವು.
ದೇವದೂತರು ಬಲಪಡಿಸುತ್ತಾರೆ ಮತ್ತು ಸಂರಕ್ಷಿಸುತ್ತಾರೆ
ಈ ಆತ್ಮಜೀವಿಗಳು, ಭೂಮಿ ಹಾಗೂ ಪ್ರಥಮ ಮಾನವರು ಸೃಷ್ಟಿಯಾಗುವುದನ್ನು ನೋಡಿದಂದಿನಿಂದ ಮಾನವಕುಲದಲ್ಲಿ ತೀವ್ರಾಸಕ್ತಿಯನ್ನು ತೋರಿಸಿರುತ್ತಾರೆ. ಮಾನವನಾಗಿ ಹುಟ್ಟುವ ಮುಂಚೆ ಸ್ವರ್ಗದಲ್ಲಿ ಅಸ್ತಿತ್ವದಲ್ಲಿದ್ದ ಯೇಸು ಕ್ರಿಸ್ತನು, ವಿವೇಕದ ಸಾಕಾರರೂಪವಾಗಿ ಮಾತಾಡುತ್ತಾ ಹೀಗೆ ಹೇಳಿದನು: “[ನಾನು] ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದೆನು.” (ಜ್ಞಾನೋಕ್ತಿ 8:31) ದೇವದೂತರಿಗೆ, ಕ್ರಿಸ್ತನ ಹಾಗೂ ಭವಿಷ್ಯತ್ತಿನ ಕುರಿತಾಗಿ ದೇವರ ಪ್ರವಾದಿಗಳಿಗೆ ಪ್ರಕಟಿಸಲ್ಪಟ್ಟಿರುವ ಸಂಗತಿಗಳನ್ನು “ಲಕ್ಷ್ಯವಿಟ್ಟು ನೋಡಬೇಕೆಂಬ ಅಪೇಕ್ಷೆ ಉಂಟು” ಎಂದು ಸಹ ಬೈಬಲ್ ನಮಗೆ ತಿಳಿಸುತ್ತದೆ.—1 ಪೇತ್ರ 1:11, 12.
ಸಮಯವು ದಾಟಿದಂತೆ, ಮಾನವ ಕುಟುಂಬದಲ್ಲಿ ಅಧಿಕಾಂಶ ಮಂದಿ ತಮ್ಮ ಪ್ರೀತಿಭರಿತ ಸೃಷ್ಟಿಕರ್ತನನ್ನು ಸೇವಿಸುತ್ತಿಲ್ಲ ಎಂಬುದನ್ನು ದೇವದೂತರು ಗಮನಿಸಿದರು. ಇದನ್ನು ನೋಡಿ ಆ ನಂಬಿಗಸ್ತ ದೇವದೂತರಿಗೆ ಎಷ್ಟು ದುಃಖವಾಗಿರಬೇಕು! ಇನ್ನೊಂದು ಬದಿಯಲ್ಲಿ, ಒಬ್ಬ ಪಾಪಿಯು ಸಹ ಪಶ್ಚಾತ್ತಾಪಪಟ್ಟು ಯೆಹೋವನ ಕಡೆಗೆ ತಿರುಗಿಕೊಳ್ಳುವಾಗ ‘ದೇವದೂತರಿಗೆ ಸಂತೋಷವಾಗುತ್ತದೆ.’ (ಲೂಕ 15:10) ದೇವರ ಸೇವೆಮಾಡುವವರ ಹಿತಕ್ಷೇಮದ ಬಗ್ಗೆ ದೇವದೂತರಿಗೆ ಗಾಢವಾದ ಚಿಂತೆಯಿದೆ, ಮತ್ತು ಯೆಹೋವನು ಭೂಮಿಯ ಮೇಲಿರುವ ತನ್ನ ನಂಬಿಗಸ್ತ ಸೇವಕರನ್ನು ಬಲಪಡಿಸಲು ಹಾಗೂ ಸಂರಕ್ಷಿಸಲು ಅವರನ್ನೇ ಪದೇ ಪದೇ ಉಪಯೋಗಿಸಿದ್ದಾನೆ. (ಇಬ್ರಿಯ 1:14) ಕೆಲವೊಂದು ಉದಾಹರಣೆಗಳನ್ನು ಪರಿಗಣಿಸಿರಿ.
ಇಬ್ಬರು ದೇವದೂತರು, ಸೊದೋಮ್ ಗೊಮೋರ ಎಂಬ ದುಷ್ಟ ಪಟ್ಟಣಗಳ ನಾಶನದಿಂದ ಲೋಟ ಮತ್ತು ಅವನ ಪುತ್ರಿಯರು ಪಾರಾಗುವಂತೆ ಸಹಾಯಮಾಡುತ್ತಾ, ಅವರಿಗೆ ಬೆಂಗಾವಲಾಗಿದ್ದು ಅವರನ್ನು ಆ ಕ್ಷೇತ್ರದಿಂದ ಹೊರತಂದರು.a (ಆದಿಕಾಂಡ 19:1, 15-26) ಶತಮಾನಗಳ ನಂತರ ಪ್ರವಾದಿಯಾದ ದಾನಿಯೇಲನು ಸಿಂಹಗಳ ಗವಿಯಲ್ಲಿ ಎಸೆಯಲ್ಪಟ್ಟಿದ್ದರೂ ಅವನಿಗೆ ಸ್ವಲ್ಪವೂ ಹಾನಿಯಾಗಲಿಲ್ಲ. ಏಕೆ? “ನನ್ನ ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು” ಎಂದವನು ಹೇಳಿದನು. (ದಾನಿಯೇಲ 6:22) ದೇವದೂತರು ಯೇಸುವನ್ನು ಅವನ ಶುಶ್ರೂಷೆಯ ಆರಂಭದಲ್ಲಿ ಬೆಂಬಲಿಸಿದರು. (ಮಾರ್ಕ 1:13) ಮತ್ತು ಯೇಸುವಿನ ಮರಣಕ್ಕಿಂತ ಸ್ವಲ್ಪ ಮುಂಚೆ ಒಬ್ಬ ದೇವದೂತನು ಬಂದು ಅವನನ್ನು “ಬಲಪಡಿಸಿದನು.” (ಲೂಕ 22:43) ತನ್ನ ಜೀವನದ ನಿರ್ಣಾಯಕ ಸಮಯಗಳಲ್ಲಿ ದೇವದೂತರಿಂದ ಸಿಕ್ಕಿದಂಥ ಆ ಬೆಂಬಲವು ಯೇಸುವಿಗೆಷ್ಟು ಪ್ರೋತ್ಸಾಹವನ್ನು ನೀಡಿರಬೇಕು! ಅಪೊಸ್ತಲ ಪೇತ್ರನನ್ನು ಸೆರೆಮನೆಯಿಂದ ಬಿಡಿಸಿದವನು ಸಹ ಒಬ್ಬ ದೇವದೂತನೇ.—ಅ. ಕೃತ್ಯಗಳು 12:6-11.
ದೇವದೂತರು ಇಂದು ನಮ್ಮನ್ನು ಸಂರಕ್ಷಿಸುತ್ತಾರೊ? ನಾವು ಯೆಹೋವನನ್ನು ಆತನ ವಾಕ್ಯಕ್ಕನುಸಾರ ಆರಾಧಿಸುವುದಾದರೆ, ಆತನ ಬಲಿಷ್ಠ, ಅದೃಶ್ಯ ದೇವದೂತರು ನಮಗೆ ಸಂರಕ್ಷಣೆ ಕೊಡುವರೆಂಬ ಆಶ್ವಾಸನೆ ನಮಗಿದೆ. “ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ” ಎಂದು ಬೈಬಲ್ ವಾಗ್ದಾನಿಸುತ್ತದೆ.—ಕೀರ್ತನೆ 34:7.
ಆದರೆ ದೇವದೂತರು ಪ್ರಧಾನವಾಗಿ ದೇವರ ಸೇವೆಗಾಗಿ ಇದ್ದಾರೆಯೇ ಹೊರತು ಮಾನವರ ಸೇವೆಗಾಗಿ ಅಲ್ಲ ಎಂಬುದನ್ನು ನಾವು ತಿಳಿದಿರಬೇಕು. (ಕೀರ್ತನೆ 103:20, 21) ಅವರು ಮಾನವರ ಕರೆಗಳಿಗಾಗಲಿ ವಿನಂತಿಗಳಿಗಾಗಲಿ ಅಲ್ಲ ಬದಲಾಗಿ ದೇವರು ಕೊಡುವ ನಿರ್ದೇಶನಗಳಿಗೆ ಪ್ರತಿಕ್ರಿಯೆ ತೋರಿಸುತ್ತಾರೆ. ಆದುದರಿಂದ ನಮಗೆ ಸಹಾಯದ ಅಗತ್ಯವಿರುವಾಗ ನಾವು ಯೆಹೋವ ದೇವರಿಗೆ ಬೇಡಿಕೊಳ್ಳಬೇಕು, ದೇವದೂತರಿಗಲ್ಲ. (ಮತ್ತಾಯ 26:53) ನಮಗೆ ದೇವದೂತರನ್ನು ನೋಡಲು ಆಗದಿರುವುದರಿಂದ, ಜನರಿಗೆ ವಿಭಿನ್ನ ವಿಷಯಗಳಲ್ಲಿ ಸಹಾಯಮಾಡಲು ದೇವರು ಅವರನ್ನು ಎಷ್ಟರ ಮಟ್ಟಿಗೆ ಉಪಯೋಗಿಸುತ್ತಾನೆಂದು ನಾವು ತಿಳಿದುಕೊಳ್ಳಲಾರೆವು. ಆದರೆ ಯೆಹೋವನು ನಿಶ್ಚಯವಾಗಿಯೂ “ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ” ಎಂದು ನಮಗೆ ತಿಳಿದಿದೆ. (2 ಪೂರ್ವಕಾಲವೃತ್ತಾಂತ 16:9; ಕೀರ್ತನೆ 91:11) ಮತ್ತು “ನಾವು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬ” ಆಶ್ವಾಸನೆಯು ನಮಗಿದೆ.—1 ಯೋಹಾನ 5:14.
ನಮ್ಮ ಪ್ರಾರ್ಥನೆಗಳು ಮತ್ತು ಆರಾಧನೆಯು ದೇವರಿಗೊಬ್ಬನಿಗೆ ಮಾತ್ರ ಸಲ್ಲತಕ್ಕದ್ದೆಂದು ಸಹ ಶಾಸ್ತ್ರವಚನಗಳು ನಮಗೆ ಹೇಳುತ್ತವೆ. (ವಿಮೋಚನಕಾಂಡ 20:3-5; ಕೀರ್ತನೆ 5:1, 2; ಮತ್ತಾಯ 6:9) ಅದನ್ನೇ ಮಾಡುವಂತೆ ನಂಬಿಗಸ್ತ ದೇವದೂತರು ನಮಗೆ ಪ್ರೋತ್ಸಾಹಿಸುತ್ತಾರೆ. ಉದಾಹರಣೆಗಾಗಿ, ಅಪೊಸ್ತಲ ಯೋಹಾನನು ದೇವದೂತನೊಬ್ಬನಿಗೆ ಅಡ್ಡಬೀಳಲಿದ್ದಾಗ, ಆ ಆತ್ಮಜೀವಿಯು ಅದನ್ನು ಆಕ್ಷೇಪಿಸುತ್ತಾ ಅವನಿಗೆ ಹೇಳಿದ್ದು: “ಹಾಗೆ ಮಾಡಬೇಡ, . . . ದೇವರನ್ನೇ ಆರಾಧಿಸು.”—ಪ್ರಕಟನೆ 19:10, NIBV.
ದೇವದೂತರು ದೇವರ ಸಂದೇಶಗಳನ್ನು ರವಾನಿಸುತ್ತಾರೆ
“ದೇವದೂತ” ಎಂಬ ಪದದ ಅರ್ಥ “ದೇವರ ದೂತ” ಎಂದಾಗಿದೆ. ದೇವರು ಮಾನವರ ಬಳಿಗೆ ಕಳುಹಿಸುವ ದೂತರು ಇಲ್ಲವೆ ಸಂದೇಶವಾಹಕರು ಅವರಾಗಿದ್ದಾರೆ. ಇದು ಅವರು ದೇವರಿಗೆ ಸೇವೆಸಲ್ಲಿಸುವ ಇನ್ನೊಂದು ವಿಧವಾಗಿದೆ. ದೃಷ್ಟಾಂತಕ್ಕಾಗಿ, ‘ದೇವರು ಗಬ್ರಿಯೇಲನೆಂಬ ತನ್ನ ದೂತನನ್ನು ಗಲಿಲಾಯ ಸೀಮೆಗೆ’ ಕಳುಹಿಸಿದನು. ಏಕೆ? ಮರಿಯ ಎಂಬ ಹೆಸರಿನ ಒಬ್ಬ ಯುವ ಸ್ತ್ರೀಗೆ, ಅವಳು ಕನ್ಯೆಯಾಗಿದ್ದರೂ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಳೆಂದು ಮತ್ತು ಅವನಿಗೆ ಯೇಸು ಎಂದು ಹೆಸರಿಡಬೇಕೆಂದು ತಿಳಿಸಲಿಕ್ಕಾಗಿಯೇ. (ಲೂಕ 1:26-31) ‘ಕರ್ತನಾಗಿರುವ ಕ್ರಿಸ್ತನು’ ಹುಟ್ಟಿದ್ದಾನೆಂದು ಹೊಲಗಳಲ್ಲಿದ್ದ ಕುರುಬರಿಗೆ ಸುದ್ದಿಕೊಡಲಿಕ್ಕಾಗಿಯೂ ಒಬ್ಬ ದೇವದೂತನನ್ನು ಕಳುಹಿಸಲಾಯಿತು. (ಲೂಕ 2:8-11) ಅದೇ ರೀತಿಯಲ್ಲಿ ದೇವದೂತರು ಅಬ್ರಹಾಮ, ಮೋಶೆ, ಯೇಸು ಮತ್ತು ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಇತರರಿಗೆ ದೇವರ ಸಂದೇಶಗಳನ್ನು ತಲಪಿಸಿದರು.—ಆದಿಕಾಂಡ 18:1-5, 10; ವಿಮೋಚನಕಾಂಡ 3:1, 2; ಲೂಕ 22:39-43.
ದೇವದೂತರು ಇಂದು ಹೇಗೆ ದೂತರಾಗಿ ಇಲ್ಲವೆ ದೇವರ ಸಂದೇಶವಾಹಕರಾಗಿ ಸೇವೆಸಲ್ಲಿಸುತ್ತಾರೆ? ಈ ವಿಷಯಗಳ ವ್ಯವಸ್ಥೆಯ ಅಂತ್ಯಕ್ಕೆ ಮುಂಚೆ ತನ್ನ ಹಿಂಬಾಲಕರು ಮಾಡುವರೆಂದು ಯೇಸು ಮುಂತಿಳಿಸಿದ ಕೆಲಸದ ಕುರಿತು ಯೋಚಿಸಿರಿ. ಅವನಂದದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:3, 14) ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಪ್ರತಿ ವರ್ಷ ನೂರು ಕೋಟಿಗಿಂತಲೂ ಹೆಚ್ಚು ತಾಸುಗಳನ್ನು ವ್ಯಯಿಸುತ್ತಾರೆ. ಆದರೆ ಈ ಕೆಲಸದಲ್ಲಿ ದೇವದೂತರು ಸಹ ಒಳಗೂಡಿದ್ದಾರೆಂದು ನಿಮಗೆ ಗೊತ್ತಿದೆಯೊ? ಅಪೊಸ್ತಲ ಯೋಹಾನನು ತಾನು ಕಂಡ ಒಂದು ದರ್ಶನಕ್ಕೆ ಸೂಚಿಸಿ ಹೇಳಿದ್ದು: ‘ಮತ್ತೊಬ್ಬ ದೇವದೂತನನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು.’ (ಪ್ರಕಟನೆ 14:6, 7) ದೇವದೂತರು ಇಂದು ಮಾನವರ ಪರವಾಗಿ ಮಾಡುತ್ತಿರುವ ಅಗ್ರಗಣ್ಯ ಕೆಲಸವನ್ನು ಆ ವಚನವು ಎತ್ತಿತೋರಿಸುತ್ತದೆ.
ಯೆಹೋವನ ಸಾಕ್ಷಿಗಳು ತಮ್ಮ ಮನೆಯಿಂದ ಮನೆಯ ಸಾರುವ ಕೆಲಸವನ್ನು ನಡೆಸುತ್ತಿರುವಾಗ ದೇವದೂತರು ತಮ್ಮನ್ನು ನಿರ್ದೇಶಿಸುವುದರ ಪುರಾವೆಯನ್ನು ನೋಡುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ಅವರು, ದೇವರ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲು ತಮಗೆ ಸಹಾಯ ನೀಡುವಂತೆ ದೇವರ ಬಳಿ ಪ್ರಾರ್ಥಿಸುತ್ತಾ ಇದ್ದ ವ್ಯಕ್ತಿಗಳನ್ನು ಸಂಪರ್ಕಿಸಿದ್ದಾರೆ. ದೇವದೂತರ ಮಾರ್ಗದರ್ಶನದಿಂದಾಗಿ ಮತ್ತು ಸಾಕ್ಷಿಗಳ ಚಟುವಟಿಕೆಯಿಂದಾಗಿಯೂ, ಪ್ರತಿ ವರ್ಷ ಲಕ್ಷಗಟ್ಟಲೆ ಜನರು ಯೆಹೋವನ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ದೇವದೂತರ ನಿರ್ದೇಶನದ ಕೆಳಗೆ ನಡೆಯುತ್ತಿರುವ ಈ ಜೀವರಕ್ಷಕ ಕೆಲಸದಿಂದ ನೀವು ಸಹ ಪ್ರಯೋಜನಹೊಂದುವಂತಾಗಲಿ.
ದೇವದೂತರು ದೇವರ ನ್ಯಾಯದಂಡನೆಯನ್ನು ಜಾರಿಗೊಳಿಸುತ್ತಾರೆ
ಮಾನವರಿಗೆ ತೀರ್ಪುಮಾಡುವ ಅಧಿಕಾರ ದೇವದೂತರಿಗಿಲ್ಲದಿದ್ದರೂ, ಅವರು ಸುಮ್ಮನೆ ನೋಡುತ್ತಾ ಇರುವ ಪ್ರೇಕ್ಷಕರಾಗಿರುವುದಿಲ್ಲ. (ಯೋಹಾನ 5:22; ಇಬ್ರಿಯ 12:22, 23) ಗತಕಾಲಗಳಲ್ಲಿ ಅವರು ದಂಡನೆಗಾರರಾಗಿ ಸೇವೆಸಲ್ಲಿಸುತ್ತಾ ದೇವರ ನ್ಯಾಯದಂಡನೆಗಳನ್ನು ಜಾರಿಗೊಳಿಸಿದ್ದಾರೆ. ಉದಾಹರಣೆಗಾಗಿ, ದೇವರ ಜನರನ್ನು ಬಂಧಿಗಳಾಗಿಟ್ಟಿದ್ದ ಪ್ರಾಚೀನಕಾಲದ ಐಗುಪ್ತ್ಯರ ವಿರುದ್ಧ ನಡೆಸಲ್ಪಟ್ಟ ತನ್ನ ಹೋರಾಟದಲ್ಲಿ ಆತನು ದೇವದೂತರನ್ನು ಉಪಯೋಗಿಸಿದನು. (ಕೀರ್ತನೆ 78:49) ಮತ್ತು ‘ಯೆಹೋವನ ದೂತನು’ ದೇವಜನರ ವೈರಿಯೊಬ್ಬನ ಪಾಳೆಯದಲ್ಲಿ ಒಂದು ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಒಂದೇ ರಾತ್ರಿಯಲ್ಲಿ ಹತಿಸಿದನು.—2 ಅರಸುಗಳು 19:35.
ಭವಿಷ್ಯದಲ್ಲೂ ದೇವದೂತರು ದೇವರ ಪ್ರತಿಕೂಲ ನ್ಯಾಯದಂಡನೆಯನ್ನು ಜಾರಿಗೊಳಿಸಲಿದ್ದಾರೆ. “ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು” ಸಲ್ಲಿಸುವುದಕ್ಕಾಗಿ ಯೇಸು “ದೇವದೂತರಿಂದ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷ”ನಾಗುವನು. (2 ಥೆಸಲೊನೀಕ 1:7, 8) ಆದರೆ ಆ ನಾಶನವು, ಈಗ ಭೂವ್ಯಾಪಕವಾಗಿ ದೇವದೂತರ ಬೆಂಬಲದಿಂದ ಸಾರಲ್ಪಡುತ್ತಿರುವ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸದವರ ಮೇಲೆ ಮಾತ್ರ ತರಲ್ಪಡುವುದು. ದೇವರಿಗಾಗಿ ಹುಡುಕುವವರಿಗೂ ಶಾಸ್ತ್ರಾಧಾರಿತವಾದ ಬೋಧನೆಗಳಿಗೆ ಹೊಂದಿಕೆಯಲ್ಲಿ ನಡೆದುಕೊಳ್ಳುವವರಿಗೂ ಯಾವುದೇ ಹಾನಿಯಾಗದು.—ಚೆಫನ್ಯ 2:3.
ದೇವರ ಅಪ್ಪಣೆಗಳನ್ನು ಯಾವಾಗಲೂ ಪೂರೈಸುವ ನಂಬಿಗಸ್ತ ದೇವದೂತರಿಗಾಗಿ ನಾವೆಷ್ಟು ಆಭಾರಿಗಳಾಗಿರಬೇಕು! ಯೆಹೋವನು ಭೂಮಿಯ ಮೇಲಿರುವ ತನ್ನ ನಿಷ್ಠಾವಂತ ಸೇವಕರಿಗೆ ನೆರವು ಮತ್ತು ಸಂರಕ್ಷಣೆಯನ್ನು ನೀಡಲಿಕ್ಕಾಗಿ ದೇವದೂತರನ್ನು ಉಪಯೋಗಿಸುತ್ತಾನೆ. ಈ ವಿಚಾರವು ನಮಗೆ ವಿಶೇಷವಾಗಿ ನೆಮ್ಮದಿಯನ್ನು ಕೊಡುತ್ತದೆ, ಏಕೆಂದರೆ ನಮಗೆ ಹಾನಿಮಾಡಲು ಬಯಸುವ ದೆವ್ವಗಳೆಂಬ ಅಪಾಯಕರ ಆತ್ಮಜೀವಿಗಳು ಇವೆ.
ದೆವ್ವಗಳು ಯಾರಾಗಿದ್ದಾರೆ?
ಸೈತಾನನು ಏದೆನಿನಲ್ಲಿ ಹವ್ವಳಿಗೆ ಮೋಸಮಾಡಿದ ಬಳಿಕ ಗತಿಸಿದ 15 ಶತಮಾನಗಳಲ್ಲಿ ಹೇಬೆಲ, ಹನೋಕ, ನೋಹರಂಥ ಕೆಲವು ಮಂದಿ ನಂಬಿಗಸ್ತ ವ್ಯಕ್ತಿಗಳನ್ನು ಬಿಟ್ಟರೆ ಎಲ್ಲ ಮಾನವರನ್ನು ದೇವರಿಂದ ದೂರಸರಿಸುವುದರಲ್ಲಿ ಪಿಶಾಚನಾದ ಸೈತಾನನು ಯಶಸ್ವಿಯಾಗಿರುವುದನ್ನು ದೇವದೂತರಿಂದ ಕೂಡಿರುವ ದೇವರ ಕುಟುಂಬವು ಗಮನಿಸಿದೆ. (ಆದಿಕಾಂಡ 3:1-7; ಇಬ್ರಿಯ 11:4, 5, 7) ದೇವದೂತರಲ್ಲೂ ಕೆಲವರು ಸೈತಾನನ ಪ್ರಭಾವಕ್ಕೆ ಶರಣಾದರು. ಅವರ ಬಗ್ಗೆ ತಿಳಿಸುವಾಗ ಬೈಬಲು, “ನೋಹನ ದಿನಗಳಲ್ಲಿ” (NIBV) ಅವಿಧೇಯರಾಗಿದ್ದ ಆತ್ಮಗಳೆಂದು ಸೂಚಿಸುತ್ತದೆ. (1 ಪೇತ್ರ 3:19, 20) ಅವರ ಅವಿಧೇಯತೆಯು ಹೇಗೆ ವ್ಯಕ್ತವಾಯಿತು?
ನೋಹನ ಸಮಯದಲ್ಲಿ ದಂಗೆಯೆದ್ದ ಅನಿರ್ದಿಷ್ಟ ಸಂಖ್ಯೆಯ ದೇವದೂತರು, ದೇವರ ಸ್ವರ್ಗೀಯ ಕುಟುಂಬದಲ್ಲಿ ತಮಗಿದ್ದ ಸ್ಥಾನವನ್ನು ಬಿಟ್ಟು ಭೂಮಿಗೆ ಬಂದು, ರಕ್ತಮಾಂಸದ ದೇಹಗಳನ್ನು ಧರಿಸಿಕೊಂಡರು. ಏಕೆ? ಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವ ಆಸೆಯನ್ನು ಅವರು ಬೆಳೆಸಿಕೊಂಡಿದ್ದರು. ಸ್ತ್ರೀಯರೊಂದಿಗಿನ ಅವರ ಈ ಸಂಬಂಧದ ಫಲವಾಗಿ ನೆಫೀಲಿಯರು ಎಂದು ಕರೆಯಲ್ಪಟ್ಟ ಸಂತಾನವು ಹುಟ್ಟಿಕೊಂಡಿತು. ಆ ನೆಫೀಲಿಯರು ಹಿಂಸಾತ್ಮಕ ದೈತ್ಯರಾದರು. ಅಷ್ಟುಮಾತ್ರವಲ್ಲದೆ, ‘ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಯಿತು ಮತ್ತು ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿತ್ತು.’ ಆದರೆ ಮಾನವಕುಲದ ಈ ಭ್ರಷ್ಟಾಚಾರವು ಮುಂದುವರಿಯುತ್ತಾ ಹೋಗುವಂತೆ ಯೆಹೋವ ದೇವರು ಬಿಡಲಿಲ್ಲ. ಆತನು ಜಲಪ್ರಳಯವನ್ನು ಬರಮಾಡಿದನು ಮತ್ತು ಇದು ಎಲ್ಲ ದುಷ್ಟ ಮಾನವರೊಂದಿಗೆ ನೆಫೀಲಿಯರನ್ನು ಸಹ ಅಳಿಸಿಹಾಕಿತು. ಜೀವಂತವಾಗಿ ಉಳಿಸಲ್ಪಟ್ಟ ಮಾನವರು, ದೇವರ ನಂಬಿಗಸ್ತ ಸೇವಕರು ಮಾತ್ರವೇ ಆಗಿದ್ದರು.—ಆದಿಕಾಂಡ 6:1-7, 17; 7:23.
ಆದರೆ ದಂಗೆಕೋರರಾದ ದೇವದೂತರು ಜಲಪ್ರಳಯದ ಸಮಯದಲ್ಲಿನ ನಾಶನದಿಂದ ತಪ್ಪಿಸಿಕೊಂಡರು. ಏಕೆಂದರೆ ಅವರು ತಮ್ಮ ಮಾನವ ಶರೀರಗಳನ್ನು ಕಳಚಿ, ಆತ್ಮಜೀವಿಗಳಾಗಿ ಆತ್ಮಜೀವಿಗಳ ಕ್ಷೇತ್ರಕ್ಕೆ ಹಿಂದೆರಳಿದರು. ಅಂದಿನಿಂದ ಅವರನ್ನು ದೆವ್ವಗಳೆಂದು ಕರೆಯಲಾಗಿದೆ. ಯಾರನ್ನು “ದೆವ್ವಗಳ ಒಡೆಯ” ಎಂದು ಕರೆಯಲಾಗಿದೆಯೊ ಆ ಪಿಶಾಚನಾದ ಸೈತಾನನ ಪಕ್ಷಕ್ಕೆ ಅವರು ಸೇರಿಕೊಂಡರು. (ಮತ್ತಾಯ 12:24-27) ತಮ್ಮ ಒಡೆಯನಂತೆಯೇ ಈ ದೆವ್ವಗಳು ಮಾನವರಿಂದ ಆರಾಧನೆಯನ್ನು ಪಡೆಯಲು ಹಾತೊರೆಯುತ್ತವೆ.
ದೆವ್ವಗಳು ಅಪಾಯಕಾರಿಯಾಗಿವೆ ನಿಜ, ಆದರೆ ನಾವು ಅವುಗಳಿಗೆ ಹೆದರಬೇಕಾಗಿಲ್ಲ. ಅವುಗಳಿಗಿರುವ ಶಕ್ತಿಯು ಸೀಮಿತ. ಆ ಅವಿಧೇಯ ದೂತರು ಸ್ವರ್ಗಕ್ಕೆ ಹಿಂದೆರಳಿದಾಗ, ಅವರನ್ನು ನಂಬಿಗಸ್ತ ದೇವದೂತರಿಂದ ಕೂಡಿದ ದೇವರ ಕುಟುಂಬದೊಳಕ್ಕೆ ಪುನಃ ಸೇರಿಸಿಕೊಳ್ಳಲಾಗಲಿಲ್ಲ. ಬದಲಿಗೆ, ಅವರನ್ನು ದೇವರಿಂದ ಬರುವ ಆಧ್ಯಾತ್ಮಿಕ ಜ್ಞಾನೋದಯದಿಂದ ಕಡಿದುಹಾಕಲಾಯಿತು. ಭವಿಷ್ಯಕ್ಕಾಗಿದ್ದ ಅವರ ಹೊರನೋಟವು ಅಂಧಕಾರಮಯವಾಯಿತು. ಹೌದು, ಮೂಲ ಗ್ರೀಕ್ ಪದಕ್ಕನುಸಾರ ಅವರನ್ನು “ಟಾರ್ಟರಸ್” ಅಂದರೆ ಆಧ್ಯಾತ್ಮಿಕ ಅಂಧಕಾರದ ಸ್ಥಿತಿಯಲ್ಲಿ ನಿರ್ಬಂಧಿಸಿಡಲಾಗಿದೆ. (2 ಪೇತ್ರ 2:4, NW) ಯೆಹೋವನು ಅವರನ್ನು “ನಿತ್ಯವಾದ ಬೇಡಿ”ಗಳಿಂದ ನಿರ್ಬಂಧಿಸಿರುವುದರಿಂದ ಅವರು ಆಧ್ಯಾತ್ಮಿಕ ಅಂಧಕಾರದಲ್ಲಿದ್ದಾರೆ. ಅಷ್ಟುಮಾತ್ರವಲ್ಲದೆ, ಅವರೀಗ ಮಾನವ ದೇಹಧಾರಣೆಯನ್ನು ಮಾಡಲು ಶಕ್ತರಾಗಿರುವುದಿಲ್ಲ.—ಯೂದ 6.
ನೀವೇನು ಮಾಡತಕ್ಕದ್ದು?
ದೆವ್ವಗಳು ಈಗಲೂ ಮಾನವರ ಮೇಲೆ ಪ್ರಭಾವಬೀರುತ್ತವೊ? ಹೌದು. ಅವುಗಳ ಒಡೆಯನಾದ ಪಿಶಾಚನಾದ ಸೈತಾನನು ಉಪಯೋಗಿಸುವಂಥ ರೀತಿಯ “ತಂತ್ರೋಪಾಯಗಳು,” ಇಲ್ಲವೆ ‘ಕುತಂತ್ರಗಳನ್ನು’ (NIBV) ಬಳಸುವ ಮೂಲಕ ಅವು ಮಾನವರ ಮೇಲೆ ಪ್ರಭಾವಬೀರುತ್ತವೆ. (ಎಫೆಸ 6:11, 12) ಹೀಗಿದ್ದರೂ, ದೇವರ ವಾಕ್ಯದ ಸಲಹೆಯನ್ನು ಅನ್ವಯಿಸುವ ಮೂಲಕ ನಾವು ದೆವ್ವಗಳ ವಿರುದ್ಧ ದೃಢವಾಗಿ ನಿಲ್ಲಬಹುದು. ಅಷ್ಟುಮಾತ್ರವಲ್ಲದೆ, ದೇವರನ್ನು ಪ್ರೀತಿಸುವವರು ಶಕ್ತಿಶಾಲಿಯಾದ ದೇವದೂತರ ಸಂರಕ್ಷಣೆಯೊಳಗೆ ಬರುತ್ತಾರೆ.
ಶಾಸ್ತ್ರವಚನಗಳಲ್ಲಿ ತಿಳಿಸಲ್ಪಟ್ಟಿರುವಂತೆ, ದೇವರು ಅವಶ್ಯಪಡಿಸುವಂಥ ವಿಷಯಗಳ ಬಗ್ಗೆ ನೀವು ಕಲಿತು ಅದಕ್ಕನುಸಾರ ಕ್ರಿಯೆಗೈಯುವುದು ಎಷ್ಟು ಅತ್ಯಾವಶ್ಯಕ! ನಿಮ್ಮ ಕ್ಷೇತ್ರದಲ್ಲಿನ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸುವ ಮೂಲಕ ಇಲ್ಲವೆ ಈ ಪತ್ರಿಕೆಯ ಪ್ರಕಾಶಕರಿಗೆ ಪತ್ರವನ್ನು ಬರೆಯುವ ಮೂಲಕ ನೀವು ಬೈಬಲ್ ಬೋಧನೆಗಳ ಬಗ್ಗೆ ಹೆಚ್ಚನ್ನು ಕಲಿಯಬಲ್ಲಿರಿ. ಉಚಿತವಾಗಿ ಮತ್ತು ನಿಮಗೆ ಅನುಕೂಲವಾಗಿರುವ ಸಮಯದಲ್ಲಿ ನಿಮ್ಮೊಂದಿಗೆ ಬೈಬಲನ್ನು ಅಧ್ಯಯನಮಾಡಲು ಯೆಹೋವನ ಸಾಕ್ಷಿಗಳು ಸಂತೋಷಪಡುವರು.
[ಪಾದಟಿಪ್ಪಣಿ]
a ಬೈಬಲಿನಲ್ಲಿ, ದೇವದೂತರನ್ನು ವಯಸ್ಕ ಪುರುಷರಾಗಿ ಚಿತ್ರಿಸಲಾಗಿದೆ. ಅವರು ಮಾನವರ ಮುಂದೆ ಪ್ರತ್ಯಕ್ಷವಾದಾಗಲೆಲ್ಲಾ ಪುರುಷರಾಗಿ ತೋರಿಬಂದಿದ್ದಾರೆ.
[ಪುಟ 6ರಲ್ಲಿರುವ ಚೌಕ]
ದೇವದೂತರು ಹೀಗೆ ಸಂಘಟಿಸಲ್ಪಟ್ಟಿದ್ದಾರೆ
ಯೆಹೋವನು ದೇವದೂತರಿಂದ ಕೂಡಿರುವ ತನ್ನ ದೊಡ್ಡ ಕುಟುಂಬವನ್ನು ಈ ರೀತಿ ಸಂಘಟಿಸಿದ್ದಾನೆ:
ಶಕ್ತಿ ಮತ್ತು ಅಧಿಕಾರದಲ್ಲಿ ಅಗ್ರಗಣ್ಯನಾಗಿರುವವನು ಮೀಕಾಯೇಲನು ಅಂದರೆ ಯೇಸು ಕ್ರಿಸ್ತನು. (1 ಥೆಸಲೊನೀಕ 4:16; ಯೂದ 9) ಅವನ ಕೆಳಗೆ ಸೆರಾಫಿಯರು, ಕೆರೂಬಿಯರು ಮತ್ತು ಬೇರೆ ದೇವದೂತರು ಇದ್ದಾರೆ.
ದೇವರ ಏರ್ಪಾಡಿನಲ್ಲಿ ಸೆರಾಫಿಯರಿಗೆ ಅತ್ಯುಚ್ಚವಾದ ಸ್ಥಾನವಿದೆ. ಅವರು ದೇವರ ಸಿಂಹಾಸನದ ಬಳಿಯಿರುವ ಸೇವಕರಾಗಿರುತ್ತಾರೆ. ಅವರ ನೇಮಕದಲ್ಲಿ, ದೇವರ ಪಾವಿತ್ರ್ಯವನ್ನು ಘೋಷಿಸುವುದು ಮತ್ತು ಆತನ ಜನರನ್ನು ಆಧ್ಯಾತ್ಮಿಕವಾಗಿ ಶುದ್ಧವಾಗಿರಿಸುವುದು ಸೇರಿದೆ.—ಯೆಶಾಯ 6:1-3, 6, 7.
ಕೆರೂಬಿಯರನ್ನು ದೇವರ ಸಿಂಹಾಸನದೊಂದಿಗೆ ಜತೆಗೂಡಿಸಿ ಮಾತಾಡಲಾಗುತ್ತದೆ ಮತ್ತು ಅವರು ಯೆಹೋವನ ಘನತೆಯನ್ನು ಎತ್ತಿಹಿಡಿಯುತ್ತಾರೆ.—ಕೀರ್ತನೆ 80:1; 99:1; ಯೆಹೆಜ್ಕೇಲ 10:1, 2.
ಇತರ ದೇವದೂತರು ಯೆಹೋವನ ಪ್ರತಿನಿಧಿಗಳಾಗಿದ್ದಾರೆ ಮತ್ತು ಆತನ ಚಿತ್ತವನ್ನು ಪೂರೈಸುತ್ತಾರೆ.
[ಪುಟ 4ರಲ್ಲಿರುವ ಚಿತ್ರ]
ಲೋಟ ಮತ್ತು ಅವನ ಪುತ್ರಿಯರಿಗೆ ದೇವದೂತರು ಬೆಂಗಾವಲಾಗಿದ್ದು ಅವರನ್ನು ಸುರಕ್ಷಿತ ಸ್ಥಳಕ್ಕೆ ತಲಪಿಸಿದರು
[ಪುಟ 5ರಲ್ಲಿರುವ ಚಿತ್ರ]
ಅಪೊಸ್ತಲ ಯೋಹಾನನು ದೇವದೂತನಿಗೆ ಅಡ್ಡಬೀಳಲಿದ್ದಾಗ, “ಹಾಗೆ ಮಾಡಬೇಡ” ಎಂದು ಅವನಿಗೆ ಹೇಳಲಾಯಿತು
[ಪುಟ 6ರಲ್ಲಿರುವ ಚಿತ್ರ]
ದೇವದೂತರು ದೇವರ ನ್ಯಾಯದಂಡನೆಯನ್ನು ಜಾರಿಗೊಳಿಸುತ್ತಾರೆ
[ಪುಟ 7ರಲ್ಲಿರುವ ಚಿತ್ರ]
ದೇವದೂತರ ನಿರ್ದೇಶನದ ಕೆಳಗೆ ಮಾಡಲ್ಪಡುತ್ತಿರುವ ಸಾರುವ ಕೆಲಸದಿಂದ ನೀವು ಪ್ರಯೋಜನಹೊಂದುತ್ತಿದ್ದೀರೊ?