ಅಗತ್ಯದಲ್ಲಿರುವವರಿಗೆ ಪ್ರೀತಿಯನ್ನು ತೋರಿಸುವುದು
ಅಗತ್ಯದಲ್ಲಿರುವ ತಮ್ಮ ಸಹೋದರ ಸಹೋದರಿಯರಿಗೆ ಪ್ರೀತಿಯನ್ನು ತೋರಿಸುವ ಹಂಗು ಹಾಗೂ ಸುಯೋಗವು—ಎರಡೂ—ಕ್ರೈಸ್ತರಿಗಿದೆ. (1 ಯೋಹಾನ 3:17, 18) ಅಪೊಸ್ತಲ ಪೌಲನು ಬರೆದುದು: “ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” (ಗಲಾತ್ಯ 6:10) ಬಹುಮಟ್ಟಿಗೆ ನಾಲ್ಕು ದಶಕಗಳಿಂದ ಯೆಹೋವನನ್ನು ಸೇವಿಸುತ್ತಿರುವ ಸಹೋದರನೊಬ್ಬನು, ತನ್ನ ಹೆಂಡತಿಯ ಅನಾರೋಗ್ಯ ಹಾಗೂ ತರುವಾಯದ ಮರಣದ ಸಮಯದಲ್ಲಿ ಕ್ರೈಸ್ತ ಸಹೋದರತ್ವದ ಪ್ರೀತಿಯನ್ನು ಇತ್ತೀಚಿಗೆ ಅನುಭವಿಸಿದನು. ಅವನು ಬರೆಯುವುದು:
“ನನ್ನ ಹೆಂಡತಿಯ ಅನಾರೋಗ್ಯದ ಸಮಯದಲ್ಲಿ ನಾನು ಮನೆಯಲ್ಲೇ ಅವಳ ಆರೈಕೆಯನ್ನು ಮಾಡುತ್ತಿದ್ದ ಕಾರಣ, ಸುಮಾರು ಎರಡು ತಿಂಗಳುಗಳ ವರೆಗೆ ನಾನು ಐಹಿಕವಾಗಿ ಕೆಲಸಮಾಡಲು ಅಶಕ್ತನಾಗಿದ್ದೆ. ಸಭೆಯಲ್ಲಿನ ಸ್ನೇಹಿತರು ಮನಃಪೂರ್ವಕವಾಗಿ ನಮ್ಮ ಸಹಾಯಕ್ಕೆ ಬಂದಾಗ, ನನಗೆಷ್ಟು ಉಪಶಮನವಾಯ್ತು! ‘ಹೆಚ್ಚುವರಿಯ ಖರ್ಚಿನ ಸಹಾಯಾರ್ಥವಾಗಿ’ ಎಂದು ಹೇಳುವ ಚೊತೆಗೂಡಿದ ಕಾರ್ಡುಗಳಿದ್ದ ಡಸನುಗಟ್ಟಲೆ ಹಣಕಾಸಿನ ಕೊಡುಗೆಗಳು, ಮಾಸಿಕ ಅಡವಿನ ಹಣವನ್ನು, ಸೌಕರ್ಯಗಳ ಹಣವನ್ನು, ಮತ್ತಿತರ ಖರ್ಚುಗಳನ್ನು ಪಾವತಿಮಾಡಿದವು.
“ನನ್ನ ಹೆಂಡತಿಯ ಮರಣಕ್ಕೆ ಎರಡು ವಾರಗಳ ಮೊದಲು, ನಮ್ಮ ಸರ್ಕಿಟ್ ಮೇಲ್ವಿಚಾರಕರು ನಮಗೆ ಪ್ರೋತ್ಸಾಹದಾಯಕವಾದ ಒಂದು ಭೇಟಿಯನ್ನಿತ್ತರು. ಸಭೆಯು ಆ ವಾರದ ಅಂತ್ಯದಲ್ಲಿ ನೋಡಲಿಕ್ಕಿದ್ದಂತಹ ಸ್ಲೈಡ್ಗಳನ್ನು ಸಹ ಅವರು ತೋರಿಸಿದರು. ಟೆಲಿಫೋನಿನ ಮೂಲಕ ನಾವು ಕೂಟಗಳಿಗೆ—ಸರ್ಕಿಟ್ ಮೇಲ್ವಿಚಾರಕರಿಂದ ನಡೆಸಲ್ಪಟ್ಟ ಕ್ಷೇತ್ರ ಸೇವೆಗಾಗಿರುವ ಕೂಟಗಳನ್ನೂ ಒಳಗೊಂಡು—ಕಿವಿಗೊಡಲು ಶಕ್ತರಾಗಿದ್ದೆವು. ಈ ಕೂಟಗಳಲ್ಲಿ ಒಂದರಲ್ಲಿ ಸರ್ಕಿಟ್ ಮೇಲ್ವಿಚಾರಕರು, ಕ್ಷೇತ್ರ ಸೇವೆಗಾಗಿ ಅಲ್ಲಿ ಉಪಸ್ಥಿತರಿದ್ದವರೆಲ್ಲರು ಒಂದು ಗುಂಪಿನೋಪಾದಿ ಒಟ್ಟಿಗೆ ನನ್ನ ಹೆಂಡತಿಗೆ ‘ಹಲೋ’ ಹೇಳುವಂತೆ ಮಾಡಿದರು. ಹೀಗೆ, ಅವಳು ಶಾರೀರಿಕವಾಗಿ ಪ್ರತ್ಯೇಕವಾಗಿದ್ದಳಾದರೂ, ಅವಳಿಗೆ ಎಂದೂ ಏಕಾಂತವಾಗಿದ್ದ ಅನಿಸಿಕೆಯಾಗಲಿಲ್ಲ.
“ಅವಳ ಮರಣದ ಅನಂತರ ಒಂದು ತಾಸಿನೊಳಗೆ, ಬಹುಮಟ್ಟಿಗೆ ಎಲ್ಲ ಹಿರಿಯರು ನನ್ನ ಮನೆಯಲ್ಲಿದ್ದರು. ಆ ದಿನವೇ ನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರ ಸಹೋದರಿಯರು ನಮ್ಮ ಮನೆಗೆ ಭೇಟಿಯನ್ನಿತ್ತರು. ಉಪಸ್ಥಿತರಿದ್ದವರೆಲ್ಲರಿಗಾಗಿ ಆಹಾರವು ಮೇಜಿನ ಮೇಲೆ ‘ಅದ್ಭುತಕರವಾಗಿ’ ಕಾಣಿಸಿಕೊಂಡಿತು. ಎಲ್ಲ ಉಡುಗೊರೆಗಳು, ಅನುಕಂಪದ ಅಭಿವ್ಯಕ್ತಿಗಳು, ಸಾಂತ್ವನದಾಯಕ ಮಾತುಗಳು, ಹಾಗೂ ನನ್ನ ಪರವಾಗಿ ಸಲ್ಲಿಸಲ್ಪಟ್ಟ ಪ್ರಾರ್ಥನೆಗಳನ್ನು ನಾನು ವಿಸ್ತಾರವಾಗಿ ವರ್ಣಿಸಲಾರಂಭಿಸಲಾರೆ. ಅವು ಎಷ್ಟು ಬಲದಾಯಕವಾಗಿದ್ದವು! ಅಂತಿಮವಾಗಿ ನಾನು ಸಹೋದರರಿಗೆ, ಊಟಗಳನ್ನು ಒದಗಿಸುವುದನ್ನು ಹಾಗೂ ಮನೆಯನ್ನು ಸ್ವಚ್ಛಗೊಳಿಸುವುದರಲ್ಲಿ ನೆರವು ನೀಡುವುದನ್ನು ನಿಲ್ಲಿಸುವಂತೆ ಕೇಳಿಕೊಳ್ಳಬೇಕಾಯಿತು!
“ಯೆಹೋವನ ಸಂಸ್ಥೆಯನ್ನು ಬಿಟ್ಟು, ಸಹಾನುಭೂತಿ, ಚಿಂತೆ, ಹಾಗೂ ಪ್ರೀತಿಯ ಅಂತಹ ನಿಸ್ವಾರ್ಥ ಅಭಿವ್ಯಕ್ತಿಗಳನ್ನು ನಾವು ಬೇರೆಲ್ಲಿ ಕಂಡುಕೊಳ್ಳಸಾಧ್ಯವಿದೆ? ಇಂದು ಅಧಿಕಾಂಶ ಜನರು ತಮಗಿರುವ ನೈಜ ಸ್ನೇಹಿತರ ಸಂಖ್ಯೆಯನ್ನು ಕೈಬೆರಳುಗಳಲ್ಲಿ ಎಣಿಸಬಲ್ಲರು. ಆತ್ಮಿಕ ಸಹೋದರ ಸಹೋದರಿಯರ ಒಂದು ದೊಡ್ಡ ವಿಸ್ತೃತ ಕುಟುಂಬದಿಂದ ಯೆಹೋವನು ನಮ್ಮನ್ನು ಆಶೀರ್ವದಿಸಿದ್ದಾನೆ!”—ಮಾರ್ಕ 10:29, 30.