ಪ್ರೀತಿಯಿಂದ ಬಲಗೊಳಿಸಲ್ಪಡುವ ಧೈರ್ಯ
“ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ [“ಸ್ವಸ್ಥಚಿತ್ತದ,” NW] ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ.”—2 ತಿಮೊಥೆಯ 1:7.
1, 2. (ಎ) ಪ್ರೀತಿಯು ಏನು ಮಾಡುವಂತೆ ಒಬ್ಬನನ್ನು ಪ್ರಚೋದಿಸಬಲ್ಲದು? (ಬಿ) ಯೇಸುವಿನ ಧೈರ್ಯ ಏಕೆ ವಿಶಿಷ್ಟ ರೀತಿಯದ್ದಾಗಿತ್ತು?
ಆಸ್ಟ್ರೇಲಿಯದ ಪೂರ್ವ ಕರಾವಳಿಯ ನಗರವೊಂದರ ಬಳಿ ನವದಂಪತಿಗಳು ಸ್ಕೂಬ ಡೈವಿಂಗ್ (ಅಂತರ್ಜಲ ಶ್ವಾಸೋಪಕರಣ ಬಳಸಿ ಈಜುವುದು) ಮಾಡುತ್ತಿದ್ದರು. ಅವರು ಇನ್ನೇನು ನೀರಿನಿಂದ ಮೇಲೆ ಬರುವಷ್ಟರಲ್ಲಿ ಒಂದು ದೊಡ್ಡ ಬಿಳಿ ಷಾರ್ಕ್ ಮೀನು (ಗ್ರೇಟ್ ವೈಟ್ ಷಾರ್ಕ್) ಆ ಹೆಂಗಸಿನ ಕಡೆ ನುಗ್ಗಿ ಬಂದಿತು. ಆಗ ಆ ಪುರುಷನು ಧೀರತನದಿಂದ ತನ್ನ ಪತ್ನಿಯನ್ನು ಬದಿಗೆ ತಳ್ಳಿ ಆ ಮೀನು ತನ್ನನ್ನೇ ಹಿಡಿದುಕೊಂಡು ಹೋಗುವಂತೆ ಬಿಟ್ಟನು. ವಿಧವೆಯಾದ ಹೆಂಡತಿ ಶವಸಂಸ್ಕಾರದ ಸಮಯದಲ್ಲಿ ಹೇಳಿದ್ದು: “ನನ್ನ ಗಂಡ ನನಗಾಗಿ ತನ್ನ ಜೀವವನ್ನೇ ತೆತ್ತನು.”
2 ಹೌದು, ಪ್ರೀತಿಯು ಮನುಷ್ಯರು ಗಮನಾರ್ಹವಾದ ಧೈರ್ಯವನ್ನು ತೋರಿಸುವಂತೆ ಪ್ರಚೋದಿಸಬಲ್ಲದು. ಯೇಸು ಕ್ರಿಸ್ತನು ತಾನೇ ಹೇಳಿದ್ದು: “ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ.” (ಯೋಹಾನ 15:13) ಯೇಸು ಈ ಮಾತುಗಳನ್ನು ಹೇಳಿ 24 ತಾಸುಗಳು ಕಳೆಯುವುದರೊಳಗಾಗಿ ಅವನು ತನ್ನ ಜೀವವನ್ನೇ, ಕೇವಲ ಒಬ್ಬ ವ್ಯಕ್ತಿಗಾಗಿ ಅಲ್ಲ, ಇಡೀ ಮಾನವಕುಲಕ್ಕಾಗಿ ಕೊಟ್ಟನು. (ಮತ್ತಾಯ 20:28) ಇದಲ್ಲದೆ, ಯೇಸು ತನ್ನ ಜೀವವನ್ನು ಯಾವುದೇ ಪೂರ್ವಾಲೋಚನೆಯಿಲ್ಲದೆ ಧೀರ ಕೃತ್ಯದೋಪಾದಿ ಥಟ್ಟನೆ ಅರ್ಪಿಸಲಿಲ್ಲ. ತನ್ನನ್ನು ಮೂದಲಿಸಲಾಗುವುದು, ದೂಷಿಸಲಾಗುವುದು, ಅನ್ಯಾಯದಿಂದ ಶಿಕ್ಷಿಸಲಾಗುವುದು ಮತ್ತು ಯಾತನಾಕಂಬದಲ್ಲಿ ವಧಿಸಲಾಗುವುದೆಂದು ಅವನಿಗೆ ಮೊದಲೇ ಗೊತ್ತಿತ್ತು. ಅವನು ತನ್ನ ಶಿಷ್ಯರನ್ನು ಇದಕ್ಕಾಗಿ ಸಜ್ಜುಗೊಳಿಸಿದನು ಸಹ. ಅವನಂದದ್ದು: “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ. ಮತ್ತು ಮನುಷ್ಯಕುಮಾರನನ್ನು ಮಹಾಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಹಿಡುಕೊಡುವರು. ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಅನ್ಯರ ಕೈಗೆ ಒಪ್ಪಿಸುವರು. ಇವರು ಅವನನ್ನು ಅಪಹಾಸ್ಯಮಾಡುವರು, ಅವನ ಮೇಲೆ ಉಗುಳುವರು, ಅವನನ್ನು ಕೊರಡೆಗಳಿಂದ ಹೊಡೆಯುವರು, ಕೊಂದುಹಾಕುವರು.”—ಮಾರ್ಕ 10:33, 34.
3. ಯೇಸುವಿನ ಮಹಾಧೈರ್ಯಕ್ಕೆ ಯಾವುದು ನೆರವಾಯಿತು?
3 ಯೇಸುವಿನ ಅಸಾಧಾರಣ ಧೈರ್ಯಕ್ಕೆ ಯಾವುದು ನೆರವಾಯಿತು? ನಂಬಿಕೆ ಮತ್ತು ದೇವಭಯವು ಪ್ರಮುಖ ಪಾತ್ರವನ್ನು ವಹಿಸಿತು. (ಇಬ್ರಿಯ 5:7; 12:2) ಆದರೂ, ಎಲ್ಲಕ್ಕೂ ಮಿಗಿಲಾಗಿ, ಯೇಸುವಿನಲ್ಲಿದ್ದ ಧೈರ್ಯವು ದೇವರ ಮತ್ತು ಜೊತೆ ಮಾನವರ ಮೇಲೆ ಅವನಿಗಿದ್ದ ಪ್ರೀತಿಯಿಂದ ಹುಟ್ಟಿಬಂದಿತ್ತು. (1 ಯೋಹಾನ 3:16) ನಂಬಿಕೆ ಮತ್ತು ದೈವಿಕ ಭಯದೊಂದಿಗೆ ನಾವು ಇಂಥ ಪ್ರೀತಿಯನ್ನು ಬೆಳೆಸಿಕೊಳ್ಳುವಲ್ಲಿ, ನಾವೂ ಕ್ರಿಸ್ತಸದೃಶ ಧೈರ್ಯವನ್ನು ಪ್ರದರ್ಶಿಸಶಕ್ತರಾಗುವೆವು. (ಎಫೆಸ 5:2) ಈ ಪ್ರೀತಿಯನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು? ಇದಕ್ಕಾಗಿ ನಾವು ಅದರ ಮೂಲವನ್ನು ಒಪ್ಪಿಕೊಳ್ಳಬೇಕು.
‘ಪ್ರೀತಿಯು ದೇವರಿಂದ’
4. ಯೆಹೋವನು ಪ್ರೀತಿಯ ಮೂಲನೆಂದು ಏಕೆ ಹೇಳಸಾಧ್ಯವಿದೆ?
4 ಯೆಹೋವನು ಪ್ರೀತಿಯ ಸ್ವರೂಪನು ಮತ್ತು ಅದರ ಮೂಲನೂ ಆಗಿದ್ದಾನೆ. ಅಪೊಸ್ತಲ ಯೋಹಾನನು ಬರೆದುದು: “ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿಯು ದೇವರಿಂದಾಗಿದೆ, ಮತ್ತು ಪ್ರೀತಿ ಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ. ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು.” (1 ಯೋಹಾನ 4:7, 8) ಆದಕಾರಣ, ಒಬ್ಬ ವ್ಯಕ್ತಿಯು ನಿಷ್ಕೃಷ್ಟ ಜ್ಞಾನದ ಮೂಲಕ ಯೆಹೋವನ ಬಳಿ ಸರಿದು, ಆ ಜ್ಞಾನಕ್ಕನುಸಾರ ಹೃತ್ಪೂರ್ವಕವಾದ ವಿಧೇಯತೆಯಿಂದ ವರ್ತಿಸುವಲ್ಲಿ ಮಾತ್ರ ದೇವಸದೃಶ ಪ್ರೀತಿಯು ಅವನಲ್ಲಿ ಬೆಳೆಯುವುದು.—ಫಿಲಿಪ್ಪಿ 1:9; ಯಾಕೋಬ 4:8; 1 ಯೋಹಾನ 5:3.
5, 6. ಯೇಸುವಿನ ಆದಿ ಹಿಂಬಾಲಕರು ಕ್ರಿಸ್ತಸದೃಶ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಯಾವುದು ಸಹಾಯಮಾಡಿತು?
5 ಯೇಸು ತನ್ನ 11 ಮಂದಿ ನಂಬಿಗಸ್ತ ಅಪೊಸ್ತಲರೊಂದಿಗೆ ಮಾಡಿದ ಕೊನೆಯ ಪ್ರಾರ್ಥನೆಯಲ್ಲಿ, ದೇವರನ್ನು ತಿಳಿದುಕೊಳ್ಳುವುದರ ಮತ್ತು ಪ್ರೀತಿಯಲ್ಲಿ ಬೆಳೆಯುವುದರ ಮಧ್ಯೆ ಇರುವ ಸಂಬಂಧವನ್ನು ಹೀಗೆ ಹೇಳುತ್ತ ತೋರಿಸಿದನು: “ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ, ಇನ್ನೂ ತಿಳಿಸುವೆನು. ನೀನು ನನ್ನ ಮೇಲೆ ಇಟ್ಟಂಥ ಪ್ರೀತಿಯು ಅವರಲ್ಲಿ ಇರಬೇಕೆಂದೂ ನಾನೂ ಅವರಲ್ಲಿ ಇರಬೇಕೆಂದೂ ಪ್ರಾರ್ಥಿಸುತ್ತೇನೆ.” (ಯೋಹಾನ 17:26) ಯೇಸು ತನ್ನ ಮತ್ತು ತನ್ನ ತಂದೆಯ ಮಧ್ಯೆಯಿದ್ದಂಥ ರೀತಿಯ ಪ್ರೀತಿಯನ್ನು ತನ್ನ ಶಿಷ್ಯರು ಬೆಳೆಸಿಕೊಳ್ಳುವಂತೆ ಸಹಾಯಮಾಡಿದನು. ದೇವರ ಹೆಸರು ಯಾವುದನ್ನು ಪ್ರತಿನಿಧೀಕರಿಸುತ್ತದೆಯೊ ಅದನ್ನು ಅಂದರೆ, ದೇವರ ಆಶ್ಚರ್ಯಕರವಾದ ಗುಣಲಕ್ಷಣಗಳನ್ನು ಮಾತಿನಲ್ಲೂ ಮಾದರಿಯಲ್ಲೂ ತಿಳಿಯಪಡಿಸುತ್ತ ಇದನ್ನು ಮಾಡಿದನು. ಈ ಕಾರಣದಿಂದ, “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ” ಎಂದು ಹೇಳಲು ಯೇಸುವಿಗೆ ಸಾಧ್ಯವಾಯಿತು.—ಯೋಹಾನ 14:9, 10; 17:8.
6 ಕ್ರಿಸ್ತಸದೃಶ ಪ್ರೀತಿಯು ದೇವರ ಪವಿತ್ರಾತ್ಮದ ಫಲವಾಗಿದೆ. (ಗಲಾತ್ಯ 5:22) ಸಾ.ಶ. 33ರ ಪಂಚಾಶತ್ತಮದಲ್ಲಿ ಆದಿಕ್ರೈಸ್ತರು ವಾಗ್ದಾನಿಸಲ್ಪಟ್ಟಿದ್ದ ಪವಿತ್ರಾತ್ಮವನ್ನು ಪಡೆದಾಗ, ಅವರು ಯೇಸು ತಮಗೆ ಕಲಿಸಿದ್ದನ್ನು ಮರುಜ್ಞಾಪಿಸಿಕೊಂಡದ್ದು ಮಾತ್ರವಲ್ಲ, ಶಾಸ್ತ್ರದ ಅರ್ಥವನ್ನೂ ಹೆಚ್ಚು ಪೂರ್ಣವಾಗಿ ಗ್ರಹಿಸಿಕೊಂಡರು. ಈ ಹೆಚ್ಚು ಗಾಢವಾದ ಒಳನೋಟವು ದೇವರ ಮೇಲಿನ ಅವರ ಪ್ರೀತಿಯನ್ನು ವರ್ಧಿಸಿತೆಂಬುದು ವ್ಯಕ್ತ. (ಯೋಹಾನ 14:26; 15:26) ಪರಿಣಾಮವೇನಾಯಿತು? ಅವರ ಜೀವವು ಅಪಾಯಕ್ಕೊಡ್ಡಲ್ಪಟ್ಟಾಗಲೂ, ಅವರು ಸುವಾರ್ತೆಯನ್ನು ಧೈರ್ಯದಿಂದ ಮತ್ತು ಹುರುಪಿನಿಂದ ಸಾರಿದರು.—ಅ. ಕೃತ್ಯಗಳು 5:28, 29.
ಕ್ರಿಯೆಯಲ್ಲಿ ತೋರಿಸಲ್ಪಟ್ಟ ಧೈರ್ಯ ಮತ್ತು ಪ್ರೀತಿ
7. ಪೌಲ ಬಾರ್ನಬರು ತಮ್ಮ ಮಿಷನೆರಿ ಸೇವೆಯಲ್ಲಿ ಯಾವುದನ್ನು ತಾಳಿಕೊಳ್ಳಬೇಕಾಗಿ ಬಂತು?
7 “ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ [“ಸ್ವಸ್ಥಚಿತ್ತದ,” NW] ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ” ಎಂದು ಅಪೊಸ್ತಲ ಪೌಲನು ಬರೆದನು. (2 ತಿಮೊಥೆಯ 1:7) ಇದನ್ನು ಪೌಲನು ತನ್ನ ಸ್ವಂತ ಅನುಭವದಿಂದ ಹೇಳುತ್ತಿದ್ದನು. ಅವನು ಮತ್ತು ಬಾರ್ನಬನು ತಮ್ಮ ಮಿಷನೆರಿ ಸೇವೆಯಲ್ಲಿ ಅನುಭವಿಸಿದ ವಿಷಯಗಳನ್ನು ಪರಿಗಣಿಸಿರಿ. ಅವರು ಅಂತಿಯೋಕ್ಯ, ಇಕೋನ್ಯ, ಲುಸ್ತ್ರಗಳನ್ನು ಸೇರಿಸಿ, ಅನೇಕ ನಗರಗಳಲ್ಲಿ ಸಾರಿದರು. ಪ್ರತಿ ನಗರದಲ್ಲಿ ಕೆಲವರು ವಿಶ್ವಾಸಿಗಳಾದರೂ ಇತರರು ಎದುರುಬಿದ್ದು ವಿರೋಧಿಗಳಾದರು. (ಅ. ಕೃತ್ಯಗಳು 13:2, 14, 45, 50; 14:1, 5) ಲುಸ್ತ್ರದಲ್ಲಿ ಕುಪಿತರಾದ ಜನರ ಗುಂಪು ಪೌಲನಿಗೆ ಕಲ್ಲೆಸೆದು ಕೊಲ್ಲಲು ಸಹ ಪ್ರಯತ್ನಿಸಿದರು, ಬಳಿಕ ಅವನು ಸತ್ತನೆಂದು ಭಾವಿಸಿ ಅವನನ್ನು ಬಿಟ್ಟುಹೋದರು! “ಆದರೆ ಶಿಷ್ಯರು ಅವನ ಸುತ್ತಲು ನಿಂತುಕೊಂಡಿರುವಾಗ ಅವನು ಎದ್ದು ಊರೊಳಕ್ಕೆ ಹೋದನು. ಮರುದಿನ ಬಾರ್ನಬನ ಜೊತೆಯಲ್ಲಿ ದೆರ್ಬೆಗೆ ಹೊರಟನು.”—ಅ. ಕೃತ್ಯಗಳು 14:6, 19, 20.
8. ಪೌಲ ಬಾರ್ನಬರು ತೋರಿಸಿದ ಧೈರ್ಯವು ಜನರ ಮೇಲೆ ಅವರಿಗಿದ್ದ ಆಳವಾದ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಿತು?
8 ಪೌಲನನ್ನು ಕೊಲ್ಲಲು ಮಾಡಿದ ಆ ಪ್ರಯತ್ನವು ಅವನನ್ನು ಮತ್ತು ಬಾರ್ನಬನನ್ನು ಭಯಭೀತರಾಗಿಸಿ ಸಾರುವ ಕೆಲಸವನ್ನು ಅವರು ನಿಲ್ಲಿಸಿಬಿಡುವಂತೆ ಮಾಡಿತೊ? ಇಲ್ಲವೇ ಇಲ್ಲ! ಇವರಿಬ್ಬರು ದೆರ್ಬೆಯಲ್ಲಿ, ‘ಅನೇಕರನ್ನು ಶಿಷ್ಯರಾಗಿ ಮಾಡಿದ ಮೇಲೆ ಹಿಂತಿರುಗಿ ಲುಸ್ತ್ರಕ್ಕೂ ಇಕೋನ್ಯಕ್ಕೂ ಅಂತಿಯೋಕ್ಯಕ್ಕೂ ಬಂದರು.’ ಏಕೆ? ಹೊಸಬರು ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲುವಂತೆ ಪ್ರೋತ್ಸಾಹಿಸಲಿಕ್ಕಾಗಿಯೇ. ಪೌಲ ಮತ್ತು ಬಾರ್ನಬರು ಹೇಳಿದ್ದು; ‘ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕು.’ ಕ್ರಿಸ್ತನ “ಕುರಿಮರಿ”ಗಳ ಮೇಲೆ ಅವರಿಗಿದ್ದ ಆಳವಾದ ಪ್ರೀತಿಯಿಂದಲೇ ಅವರ ಧೈರ್ಯವು ಹುಟ್ಟಿಬಂತ್ತೆಂಬುದು ಸ್ಪಷ್ಟ. (ಅ. ಕೃತ್ಯಗಳು 14:21-23; ಯೋಹಾನ 21:15-17) ಹೊಸದಾಗಿ ರಚಿಸಲ್ಪಟ್ಟ ಪ್ರತಿಯೊಂದು ಸಭೆಯಲ್ಲಿ ಹಿರಿಯರನ್ನು ನೇಮಿಸಿಯಾದ ಬಳಿಕ, ಆ ಇಬ್ಬರು ಸಹೋದರರು ಪ್ರಾರ್ಥನೆ ಮಾಡಿ “ಅವರು ನಂಬಿದ್ದ [ಯೆಹೋವನ] ಕೈಗೆ ಅವರನ್ನು ಒಪ್ಪಿಸಿದರು.”
9. ಪೌಲನು ತೋರಿಸಿದ ಪ್ರೀತಿಗೆ ಎಫೆಸದ ಹಿರಿಯರು ಯಾವ ವಿಧದಲ್ಲಿ ಪ್ರತಿವರ್ತಿಸಿದರು?
9 ಪೌಲನು ಎಷ್ಟು ಪ್ರೀತಿಪರನೂ ಧೈರ್ಯವಂತನೂ ಆದ ವ್ಯಕ್ತಿಯಾಗಿದ್ದನೆಂದರೆ ಅನೇಕ ಮಂದಿ ಆದಿಕ್ರೈಸ್ತರು ಅವನನ್ನು ಬಹಳವಾಗಿ ಪ್ರೀತಿಸತೊಡಗಿದರು. ಪೌಲನು ಎಫೆಸದ ಹಿರಿಯರೊಂದಿಗೆ ನಡೆಸಿದ ಕೂಟವೊಂದರಲ್ಲಿ ಏನು ಸಂಭವಿಸಿತೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಅಲ್ಲಿ ಅವನು ಮೂರು ವರುಷಗಳನ್ನು ಕಳೆದು ತುಂಬ ವಿರೋಧಗಳನ್ನು ಅನುಭವಿಸಿದ್ದನು. (ಅ. ಕೃತ್ಯಗಳು 20:17-31) ಅವರ ವಶಕ್ಕೆ ಕೊಡಲ್ಪಟ್ಟಿದ್ದ ದೇವರ ಮಂದೆಯನ್ನು ಪಾಲಿಸುವಂತೆ ಅವರನ್ನು ಪ್ರೋತ್ಸಾಹಿಸಿದ ಬಳಿಕ, ಪೌಲನು ಅವರೊಂದಿಗೆ ಮೊಣಕಾಲೂರಿ ಪ್ರಾರ್ಥಿಸಿದನು. “ಆಗ ಅವರೆಲ್ಲರು ಬಹಳವಾಗಿ ಅತ್ತರು. ನೀವು ಇನ್ನು ಮೇಲೆ ನನ್ನ ಮುಖವನ್ನು ಕಾಣುವದಿಲ್ಲವೆಂದು ಪೌಲನು ಹೇಳಿದ ಮಾತಿಗೆ ಅವರು ವಿಶೇಷವಾಗಿ ವ್ಯಥೆಪಟ್ಟು ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು.” ಪೌಲನನ್ನು ಈ ಸಹೋದರರು ಎಷ್ಟೊಂದು ಪ್ರೀತಿಸಿದ್ದರು! ಹೌದು, ಬೀಳ್ಕೊಡುವ ಸಮಯ ಬಂದಾಗ, ಪೌಲನೂ ಅವನ ಪಯಣಸಂಗಾತಿಗಳೂ ‘ಪ್ರಯಾಸದಿಂದ ಅವರನ್ನು ಬಿಟ್ಟುಹೋಗಬೇಕಾಯಿತು’. ಸ್ಥಳಿಕ ಹಿರಿಯರಿಗೆ ಅವರನ್ನು ಹೋಗುವಂತೆ ಬಿಡಲು ಮನಸ್ಸೇ ಇರಲಿಲ್ಲ.—ಅ. ಕೃತ್ಯಗಳು 20:36–21:1.
10. ಯೆಹೋವನ ಆಧುನಿಕ ದಿನದ ಸಾಕ್ಷಿಗಳು ಪರಸ್ಪರರಿಗಾಗಿ ಧೈರ್ಯಭರಿತ ಪ್ರೀತಿಯನ್ನು ಹೇಗೆ ತೋರಿಸಿದ್ದಾರೆ?
10 ಇಂದು ಸಂಚರಣ ಮೇಲ್ವಿಚಾರಕರು, ಸಭಾಹಿರಿಯರು, ಮತ್ತು ಇತರರು ಯೆಹೋವನ ಕುರಿಗಳ ಪರವಾಗಿ ತೋರಿಸುವ ಧೈರ್ಯದ ಕಾರಣ ಅತಿಯಾಗಿ ಪ್ರೀತಿಸಲ್ಪಡುತ್ತಾರೆ. ದೃಷ್ಟಾಂತಕ್ಕೆ, ಆಂತರಿಕ ಯುದ್ಧ ನಡೆಯುತ್ತಿರುವ ಅಥವಾ ಸಾರುವ ಕೆಲಸವು ನಿಷೇಧಿಸಲ್ಪಟ್ಟಿರುವ ದೇಶಗಳಲ್ಲಿ, ಸಭೆಗಳನ್ನು ಭೇಟಿಮಾಡುವ ಸಲುವಾಗಿ ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರು ತಮ್ಮ ಜೀವ ಹಾಗೂ ಸ್ವಾತಂತ್ರ್ಯವನ್ನು ಅಪಾಯಕ್ಕೊಡ್ಡಿರುತ್ತಾರೆ. ಅದೇ ರೀತಿ, ಅನೇಕಮಂದಿ ಸಾಕ್ಷಿಗಳು, ತಮ್ಮ ಜೊತೆಸಾಕ್ಷಿಗಳ ಬಗ್ಗೆ ಮಾಹಿತಿ ಕೊಟ್ಟು ಅವರಿಗೆ ದ್ರೋಹ ಬಗೆಯದ ಕಾರಣ ಅಥವಾ ತಾವು ಆಧ್ಯಾತ್ಮಿಕ ಆಹಾರವನ್ನು ಎಲ್ಲಿಂದ ಪಡೆಯುತ್ತಿದ್ದೇವೆಂಬುದನ್ನು ತಿಳಿಯಪಡಿಸದಿರುವ ಕಾರಣ, ವಿರೋಧ ಮಾಡುವ ಪ್ರಭುಗಳಿಂದ ಮತ್ತು ಅವರ ಅನುಚರರಿಂದ ಕಷ್ಟಾನುಭವಿಸಿರುತ್ತಾರೆ. ಇತರ ಸಾವಿರಾರು ಮಂದಿ ಸಾಕ್ಷಿಗಳು ಸುವಾರ್ತೆ ಸಾರುವುದನ್ನು ಇಲ್ಲವೆ ಕ್ರೈಸ್ತ ಕೂಟಗಳಲ್ಲಿ ಜೊತೆವಿಶ್ವಾಸಿಗಳೊಂದಿಗೆ ಕೂಡಿಬರುವುದನ್ನು ನಿಲ್ಲಿಸದಿರುವ ಕಾರಣ ಹಿಂಸೆ, ಯಾತನೆ ಮತ್ತು ಸಾವನ್ನೂ ಅನುಭವಿಸಿರುತ್ತಾರೆ. (ಅ. ಕೃತ್ಯಗಳು 5:28, 29; ಇಬ್ರಿಯ 10:24, 25) ನಾವು ಇಂತಹ ಧೈರ್ಯಶಾಲಿಗಳಾದ ಸಹೋದರಸಹೋದರಿಯರ ನಂಬಿಕೆಯನ್ನೂ ಪ್ರೀತಿಯನ್ನೂ ಅನುಕರಿಸುವಂತಾಗಲಿ!—1 ಥೆಸಲೊನೀಕ 1:6.
ನಿಮ್ಮ ಪ್ರೀತಿ ತಣ್ಣಗಾಗುವಂತೆ ಬಿಡಬೇಡಿ
11. ಸೈತಾನನು ಯೆಹೋವನ ಸೇವಕರ ವಿರುದ್ಧ ಯಾವ ವಿಧಗಳಲ್ಲಿ ಆಧ್ಯಾತ್ಮಿಕ ಹೋರಾಟವನ್ನು ಮಾಡುತ್ತಾನೆ, ಮತ್ತು ಅವರೇನು ಮಾಡುವ ಆವಶ್ಯಕತೆಯಿದೆ?
11 ಸೈತಾನನು ಭೂಮಿಗೆ ದೊಬ್ಬಲ್ಪಟ್ಟಾಗ, ಅವನ ಇಂಗಿತವು ಯೆಹೋವನ ಸೇವಕರ ಮೇಲೆ ಕೋಪವನ್ನು ಕಾರುವುದೇ ಆಗಿತ್ತು. ಏಕೆಂದರೆ ಅವರು “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು” ಹೇಳುತ್ತಿದದ್ದರಿಂದಲೇ. (ಪ್ರಕಟನೆ 12:9, 17) ಇದಕ್ಕಾಗಿ ಪಿಶಾಚನು ಉಪಯೋಗಿಸುವ ಕುಂತತ್ರಗಳಲ್ಲಿ ಒಂದು ಹಿಂಸೆಯಾಗಿದೆ. ಆದರೆ ಅನೇಕ ಬಾರಿ ಈ ತಂತ್ರವು ಹಿಂದೇಟು ಕೊಡುತ್ತದೆ. ಹೇಗೆಂದರೆ, ಇದು ದೇವಜನರನ್ನು ಕ್ರೈಸ್ತ ಪ್ರೀತಿಯ ಬಂಧದಲ್ಲಿ ಹೆಚ್ಚು ಆಪ್ತರನ್ನಾಗಿಸಿ, ಅನೇಕರನ್ನು ಹೆಚ್ಚು ಹುರುಪುಳ್ಳವರನ್ನಾಗಿ ಮಾಡುತ್ತದೆ. ಸೈತಾನನ ಇನ್ನೊಂದು ತಂತ್ರವು ದೇವಜನರನ್ನು ಪಾಪಕರ ಪ್ರವೃತ್ತಿಗೆ ಒಳಗಾಗಿಸುವುದೇ. ಈ ಕುಯುಕ್ತಿಯನ್ನು ಪ್ರತಿಭಟಿಸಲು ನಮಗೆ ಬೇರೆ ರೀತಿಯ ಧೈರ್ಯ ಅಗತ್ಯ. ಕಾರಣವೇನೆಂದರೆ, ‘ವಂಚಕವಾಗಿರುವ ಮತ್ತು ಗುಣವಾಗದ ರೋಗಕ್ಕೆ ಒಳಗಾಗಿರುವ’ ನಮ್ಮ ಸ್ವಂತ ಹೃದಯದೊಳಗಿನ ಅನುಚಿತ ಆಶೆಗಳ ವಿರುದ್ಧ ನಡೆಯುವ ಆಂತರಿಕ ಹೋರಾಟ ಇದಾಗಿದೆ.—ಯೆರೆಮೀಯ 17:9; ಯಾಕೋಬ 1:14, 15.
12. ದೇವರ ಮೇಲೆ ನಮಗಿರುವ ಪ್ರೀತಿಯನ್ನು ಕ್ಷೀಣಿಸಲು ಸೈತಾನನು “ಪ್ರಾಪಂಚಿಕ ಆತ್ಮ”ವನ್ನು ಹೇಗೆ ಬಳಸುತ್ತಾನೆ?
12 ಸೈತಾನನ ಯುದ್ಧಾಯುಧಗಳಲ್ಲಿ ಇನ್ನೊಂದು ಶಕ್ತಿಯುತವಾದ ಆಯುಧವಿದೆ. ಅದು “ಪ್ರಾಪಂಚಿಕ ಆತ್ಮ” ಅಂದರೆ ಪ್ರಪಂಚದ ಪ್ರಧಾನವಾಗಿ ಎದ್ದುಕಾಣುವ ಪ್ರವೃತ್ತಿ ಅಥವಾ ಪ್ರೇರಕಶಕ್ತಿಯಾಗಿದೆ. ಇದು ದೇವರ ಪವಿತ್ರಾತ್ಮಕ್ಕೆ ತದ್ವಿರುದ್ಧವಾದದ್ದು. (1 ಕೊರಿಂಥ 2:12) ಈ ಪ್ರಾಪಂಚಿಕ ಆತ್ಮವು ದುರಾಶೆ ಮತ್ತು ಪ್ರಾಪಂಚಿಕತೆಯನ್ನು—ಅಂದರೆ “ಕಣ್ಣಿನಾಶೆ”ಯನ್ನು—ಪ್ರವರ್ಧಿಸುತ್ತದೆ. (1 ಯೋಹಾನ 2:16; 1 ತಿಮೊಥೆಯ 6:9, 10) ಪ್ರಾಪಂಚಿಕ ವಸ್ತುಗಳು ಮತ್ತು ಹಣ, ಇವುಗಳೇ ಹಾನಿಕರವಾಗಿರುವುದಿಲ್ಲವೆಂಬುದು ನಿಜವಾದರೂ, ಅವುಗಳ ಮೇಲೆ ನಮಗಿರುವ ಪ್ರೀತಿ ದೇವರ ಮೇಲೆ ನಮಗಿರುವ ಪ್ರೀತಿಯ ಸ್ಥಾನವನ್ನಾಕ್ರಮಿಸುವಲ್ಲಿ ಸೈತಾನನು ಜಯಗಳಿಸಿದ್ದಾನೆಂದು ಇದರರ್ಥ. ಲೋಕದ ಆತ್ಮಕ್ಕಿರುವ ಶಕ್ತಿ ಅಥವಾ “ಅಧಿಕಾರ,” ಪಾಪಪೂರ್ಣ ಶರೀರವನ್ನು ಆಕರ್ಷಿಸುವುದರಲ್ಲಿ, ಅದರ ಕುಶಾಗ್ರತೆಯಲ್ಲಿ, ಅದರ ಕಠೋರತೆಯಲ್ಲಿ, ಮತ್ತು ಗಾಳಿಯ ಹಾಗೆ ಅದಕ್ಕಿರುವ ವ್ಯಾಪಕತೆಯಲ್ಲಿ ತೋರಿಬರುತ್ತದೆ. ಆದುದರಿಂದ ಈ ಪ್ರಾಪಂಚಿಕ ಆತ್ಮ ನಿಮ್ಮ ಹೃದಯವನ್ನು ಕಲುಷಿತಗೊಳಿಸುವಂತೆ ಬಿಡಲೇಬೇಡಿ!—ಎಫೆಸ 2:2, 3; ಜ್ಞಾನೋಕ್ತಿ 4:23.
13. ನಮ್ಮ ನೈತಿಕ ಧೈರ್ಯವು ಹೇಗೆ ಪರೀಕ್ಷಿಸಲ್ಪಡಬಹುದು?
13 ಆದರೂ, ಈ ಪ್ರಪಂಚದ ದುಷ್ಟ ಆತ್ಮವನ್ನು ಪ್ರತಿಭಟಿಸಿ, ತೊರೆಯಲು ನೈತಿಕ ಧೈರ್ಯ ಅತ್ಯಗತ್ಯ. ಉದಾಹರಣೆಗೆ, ಅಸಭ್ಯ ರೀತಿಯ ಚಿತ್ರಗಳು ಕಾಣಿಸಿಕೊಂಡಾಗ, ಒಂದು ಚಲನಚಿತ್ರ ಮಂದಿರದಿಂದ ಎದ್ದು ಹೊರಗೆ ಬರಲು ಅಥವಾ ಕಂಪ್ಯೂಟರ್ ಇಲ್ಲವೆ ಟೀವಿಯನ್ನು ಮುಚ್ಚಿಬಿಡಲು ಧೈರ್ಯ ಬೇಕಾಗುತ್ತದೆ. ಸಮಾನಸ್ಕರ ನಕಾರಾತ್ಮಕ ಒತ್ತಡವನ್ನು ಎದುರಿಸಲು ಮತ್ತು ದುಸ್ಸಹವಾಸವನ್ನು ತ್ಯಜಿಸಲು ಧೈರ್ಯದ ಅಗತ್ಯವಿರುತ್ತದೆ. ಅದೇ ರೀತಿ, ಸಹಪಾಠಿಗಳಿಂದಲೇ ಆಗಲಿ, ಸಹೋದ್ಯೋಗಿಗಳು, ನೆರೆಯವರು ಅಥವಾ ಸಂಬಂಧಿಕರಿಂದಲೇ ಆಗಲಿ ಬರುವ ಕುಚೋದ್ಯಗಳ ಎದುರಿನಲ್ಲಿ ದೇವರ ನಿಯಮಗಳನ್ನು ಮತ್ತು ಮೂಲತತ್ತ್ವಗಳನ್ನು ಎತ್ತಿಹಿಡಿಯಲು ಧೈರ್ಯವು ಅತ್ಯಗತ್ಯ.—1 ಕೊರಿಂಥ 15:33; 1 ಯೋಹಾನ 5:19.
14. ಪ್ರಾಪಂಚಿಕ ಆತ್ಮ ನಮಗೆ ಸೋಂಕಿರುವಲ್ಲಿ ನಾವೇನು ಮಾಡಬೇಕು?
14 ಹೀಗಿರುವುದರಿಂದ, ದೇವರ ಮೇಲೆ ಮತ್ತು ನಮ್ಮ ಆಧ್ಯಾತ್ಮಿಕ ಸಹೋದರಸಹೋದರಿಯರ ಮೇಲೆ ನಮಗಿರುವ ಪ್ರೀತಿಯನ್ನು ಬಲಗೊಳಿಸುವುದು ಅದೆಷ್ಟು ಪ್ರಾಮುಖ್ಯ! ಪ್ರಾಪಂಚಿಕ ಆತ್ಮವು ಯಾವ ವಿಧದಲ್ಲಾದರೂ ನಿಮಗೆ ಸೋಂಕಿದೆಯೊ ಎಂದು ನೋಡಲು ನಿಮ್ಮ ಗುರಿಗಳನ್ನು ಮತ್ತು ಜೀವನಶೈಲಿಯನ್ನು ಪರೀಕ್ಷಿಸಿರಿ. ಒಂದುವೇಳೆ ಸೋಂಕಿರುವಲ್ಲಿ—ಎಳ್ಳಷ್ಟಾದರೂ ಸಹ—ಅದನ್ನು ಬೇರುಸಹಿತ ಕಿತ್ತೆಸೆಯುವ ಧೈರ್ಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಅಂಥ ಬೇಡಿಕೆಗಳನ್ನು ಯೆಹೋವನು ಅಸಡ್ಡೆಮಾಡನು. (ಕೀರ್ತನೆ 51:17) ಅದಲ್ಲದೆ, ಆತನ ಆತ್ಮವು ಪ್ರಾಪಂಚಿಕ ಆತ್ಮಕ್ಕಿಂತ ಎಷ್ಟೋ ಹೆಚ್ಚು ಬಲಾಢ್ಯವಾಗಿದೆ.—1 ಯೋಹಾನ 4:4.
ವೈಯಕ್ತಿಕ ಕಷ್ಟಗಳನ್ನು ಧೈರ್ಯದಿಂದ ಎದುರಿಸುವುದು
15, 16. ಕ್ರಿಸ್ತಸದೃಶ ಪ್ರೀತಿಯು ನಾವು ವೈಯಕ್ತಿಕ ಕಷ್ಟಗಳನ್ನು ನಿಭಾಯಿಸುವಂತೆ ಹೇಗೆ ಸಹಾಯಮಾಡಬಲ್ಲದು? ಒಂದು ಉದಾಹರಣೆ ಕೊಡಿ.
15 ಯೆಹೋವನ ಸೇವಕರು ಹೋರಾಡಬೇಕಾದ ಇತರ ಸವಾಲುಗಳಲ್ಲಿ ಅಪರಿಪೂರ್ಣತೆ ಮತ್ತು ವೃದ್ಧಾಪ್ಯದ ಪರಿಣಾಮಗಳು ಸೇರಿವೆ. ಇದರಿಂದ ಅನೇಕವೇಳೆ ರೋಗ, ದುರ್ಬಲತೆ, ಖಿನ್ನತೆ ಮತ್ತು ಬೇರೆ ಅನೇಕ ಸಮಸ್ಯೆಗಳು ಎದ್ದೇಳುತ್ತವೆ. (ರೋಮಾಪುರ 8:22) ಈ ಪರೀಕ್ಷೆಗಳನ್ನು ನಿಭಾಯಿಸಲು ಕ್ರಿಸ್ತಸದೃಶ ಪ್ರೀತಿ ಸಹಾಯಮಾಡಬಲ್ಲದು. ಉದಾಹರಣೆಗೆ, ಸಾಂಬಿಯ ದೇಶದ ಒಂದು ಕ್ರೈಸ್ತ ಕುಟುಂಬದಲ್ಲಿ ಬೆಳೆದುಬಂದ ನಾಮಾಂಗಾಲ್ವಾ ಎಂಬಾಕೆಯನ್ನು ಪರಿಗಣಿಸಿರಿ. ನಾಮಾಂಗಾಲ್ವಾ ಎರಡು ವಯಸ್ಸಿನವಳಾಗಿದ್ದಾಗ ಅಂಗವಿಕಲೆಯಾದಳು. ಆಕೆ ಹೇಳುವುದು: “ನನ್ನ ತೋರಿಕೆಯಿಂದ ಜನರು ಗಾಬರಿಗೊಂಡಾರೆಂಬ ಸ್ವಪ್ರಜ್ಞೆ ನನಗಿತ್ತು. ಆದರೆ ನನ್ನ ಆಧ್ಯಾತ್ಮಿಕ ಸಹೋದರರು, ನಾನು ವಿಷಯಗಳನ್ನು ಭಿನ್ನ ರೀತಿಯಲ್ಲಿ ನೋಡುವಂತೆ ಸಹಾಯಮಾಡಿದರು. ಇದರ ಪರಿಣಾಮವಾಗಿ, ನಾನು ನನ್ನ ಸ್ವಪ್ರಜ್ಞೆಯ ಮನೋಭಾವವನ್ನು ಜಯಿಸಿ, ಸಕಾಲದಲ್ಲಿ ದೀಕ್ಷಾಸ್ನಾನ ಪಡೆದೆ.”
16 ನಾಮಾಂಗಾಲ್ವಾಳಿಗೆ ಒಂದು ಗಾಲಿಕುರ್ಚಿ ಇದೆಯಾದರೂ, ಮರಳಿನ ಮಣ್ಣುರಸ್ತೆಯಲ್ಲಿ ಆಕೆ ತನ್ನ ಕೈಗಳನ್ನು ಬಳಸಿ, ಮಂಡಿಗಳನ್ನು ಊರಿಕೊಂಡು ನಡೆಯಬೇಕಾಗುತ್ತದೆ. ಹೀಗಿದ್ದರೂ, ಆಕೆ ಪ್ರತಿ ವರ್ಷ ಎರಡು ತಿಂಗಳಾದರೂ ಆಕ್ಸಿಲಿಯರಿ ಪಯನೀಯರಾಗಿ ಶುಶ್ರೂಷೆಯಲ್ಲಿ ಪಾಲಿಗಳಾಗುತ್ತಾಳೆ. ನಾಮಾಂಗಾಲ್ವಾ ಸಾಕ್ಷಿ ನೀಡುವಾಗ ಒಬ್ಬ ಮನೆಯಾಕೆ ಅತ್ತಬಿಟ್ಟಳು. ಏಕೆ? ಏಕೆಂದರೆ, ಈ ಸಹೋದರಿಯ ನಂಬಿಕೆ ಮತ್ತು ಧೈರ್ಯವನ್ನು ಕಂಡು ಆಕೆ ಆಳವಾಗಿ ಸ್ಪರ್ಶಿತಳಾದಳು. ಯೆಹೋವನ ಹೇರಳ ಆಶೀರ್ವಾದದ ಸಾಕ್ಷ್ಯವಾಗಿ, ನಾಮಾಂಗಾಲ್ವಾಳ ಐವರು ಬೈಬಲ್ ವಿದ್ಯಾರ್ಥಿಗಳು ದೀಕ್ಷಾಸ್ನಾನಪಡೆದಿದ್ದಾರೆ ಮತ್ತು ಒಬ್ಬನು ಸಭಾ ಹಿರಿಯನಾಗಿ ಸೇವೆಸಲ್ಲಿಸುತ್ತಿದ್ದಾನೆ. ಆಕೆ ಹೇಳುವುದು: “ನನ್ನ ಕಾಲುಗಳು ಅನೇಕ ಬಾರಿ ಬಹಳ ನೋಯುತ್ತವೆ. ಆದರೆ ಅದು ನನ್ನನ್ನು ತಡೆಯುವಂತೆ ನಾನು ಬಿಡುವುದಿಲ್ಲ.” ಬಲಹೀನ ಶರೀರವಿದ್ದರೂ, ದೇವರ ಮತ್ತು ನೆರೆಯವರ ಮೇಲೆ ತಮಗಿರುವ ಪ್ರೀತಿಯ ಕಾರಣ ಬಲಾಢ್ಯ ಮನೋಭಾವವಿರುವಂಥ ಲೋಕವ್ಯಾಪಕವಾಗಿರುವ ಅನೇಕಮಂದಿ ಸಾಕ್ಷಿಗಳಲ್ಲಿ ಈ ಸಹೋದರಿಯು ಕೇವಲ ಒಬ್ಬಳಾಗಿದ್ದಾಳೆ. ಇಂಥವರು ಯೆಹೋವನಿಗೆಷ್ಟು ಇಷ್ಟ!—ಹಗ್ಗಾಯ 2:7.
17, 18. ಕಾಯಿಲೆ ಮತ್ತು ಇತರ ಕಷ್ಟಗಳನ್ನು ತಾಳಿಕೊಳ್ಳಲು ಅನೇಕರಿಗೆ ಯಾವುದು ಸಹಾಯಮಾಡುತ್ತದೆ? ಕೆಲವು ಸ್ಥಳಿಕ ಉದಾಹರಣೆಗಳನ್ನು ಕೊಡಿ.
17 ದೀರ್ಘಕಾಲಿಕ ಕಾಯಿಲೆ ಸಹ ನಿರಾಶೆಯನ್ನು ಅಲ್ಲದೆ ಖಿನ್ನತೆಯನ್ನೂ ಉಂಟುಮಾಡಬಲ್ಲದು. ಸಭಾ ಹಿರಿಯನೊಬ್ಬನು ಹೇಳುವುದು: “ನಾನು ಹಾಜರಾಗುವ ಪುಸ್ತಕ ಅಧ್ಯಯನ ಗುಂಪಿನಲ್ಲಿ ಒಬ್ಬ ಸಹೋದರಿ ಮಧುಮೇಹ ಮತ್ತು ಮೂತ್ರಪಿಂಡ ಸ್ತಂಭನ (ಕಿಡ್ನಿ ಫೇಲ್ಯರ್)ದಿಂದ ಬಳಲುತ್ತಿದ್ದಾರೆ, ಇನ್ನೊಬ್ಬ ಸಹೋದರಿಗೆ ಕ್ಯಾನ್ಸರ್ ರೋಗವಿದೆ, ಮತ್ತಿಬ್ಬರು ಸಹೋದರಿಯರು ಕಠಿನ ಸಂಧಿವಾತ (ಆರ್ತ್ರೈಟಿಸ್)ದಿಂದಲೂ ಇನ್ನೊಬ್ಬ ಸಹೋದರಿಯು ತಂತೂತಕ ಸ್ನಾಯುಶೂಲೆ (ಫೈಬ್ರೋಮೈಆ್ಯಲ್ಜ)ಯಿಂದಲೂ ಬಳಲುತ್ತಿದ್ದಾರೆ. ಕೆಲವೊಮ್ಮೆ ಅವರು ನಿರಾಶರಾಗುತ್ತಾರೆ. ಹೀಗಿದ್ದರೂ, ಅವರು ಕೂಟಗಳಿಗೆ ತಪ್ಪುವುದು ತೀರಾ ಅಸ್ವಸ್ಥರಾಗಿರುವಾಗ ಇಲ್ಲವೆ ಆಸ್ಪತ್ರೆಯಲ್ಲಿರುವಾಗ ಮಾತ್ರ. ಇವರೆಲ್ಲರೂ ಕ್ಷೇತ್ರ ಸೇವೆಯಲ್ಲಿ ಕ್ರಮಬದ್ಧರಾಗಿದ್ದಾರೆ. ಅವರು, ‘ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ’ ಎಂದು ಹೇಳಿದ ಪೌಲನನ್ನು ನನ್ನ ಮನಸ್ಸಿಗೆ ತರುತ್ತಾರೆ. ಅವರ ಪ್ರೀತಿ ಮತ್ತು ಧೈರ್ಯವನ್ನು ನಾನು ಮೆಚ್ಚುತ್ತೇನೆ. ಪ್ರಾಯಶಃ ಅವರ ದೇಹಸ್ಥಿತಿ ಅವರಿಗೆ ಜೀವನದ ಮೇಲೆ ಮತ್ತು ಯಾವುದು ಪ್ರಾಮುಖ್ಯವೆಂಬುದರ ಮೇಲೆ ಹೆಚ್ಚು ಸ್ಪಷ್ಟವಾದ ಕೇಂದ್ರೀಕರಣವನ್ನು ಕೊಡುತ್ತದೆ.”—2 ಕೊರಿಂಥ 12:10.
18 ನಿರ್ಬಲತೆ, ಕಾಯಿಲೆ ಇಲ್ಲವೆ ಬೇರೆ ಕೆಲವು ಸಮಸ್ಯೆಗಳೊಂದಿಗೆ ನೀವು ಹೋರಾಡುವಾಗ ನಿರಾಶೆಗೆ ಬಲಿಯಾಗದಂತೆ ಸಹಾಯಕ್ಕಾಗಿ “ಎಡೆಬಿಡದೆ ಪ್ರಾರ್ಥನೆ ಮಾಡಿರಿ.” (1 ಥೆಸಲೊನೀಕ 5:14, 17) ಭಾವನಾತ್ಮಕವಾಗಿ ನಿಮಗೆ ಏಳುಬೀಳುಗಳಿರುವುದು ಸಂಭವನೀಯವಾದರೂ ಸಕಾರಾತ್ಮಕವಾದ, ಆಧ್ಯಾತ್ಮಿಕ ವಿಷಯಗಳ ಮೇಲೆ, ವಿಶೇಷವಾಗಿ ನಮ್ಮ ಅಮೂಲ್ಯವಾದ ರಾಜ್ಯ ನಿರೀಕ್ಷೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಪ್ರಯತ್ನಿಸಿರಿ. “ನನ್ನ ವಿಷಯದಲ್ಲಿ ಹೇಳುವುದಾದರೆ ಇದಕ್ಕಿರುವ ಔಷಧಿ ಕ್ಷೇತ್ರ ಶುಶ್ರೂಷೆಯೇ” ಎಂದರು ಒಬ್ಬ ಸಹೋದರಿ. ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವುದು ಆಕೆಗೆ ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ.
ತಪ್ಪಿತಸ್ಥರು ಯೆಹೋವನ ಬಳಿ ಹಿಂದಿರುಗುವಂತೆ ಪ್ರೀತಿಯು ಸಹಾಯಮಾಡುತ್ತದೆ
19, 20. (ಎ) ಪಾಪದಲ್ಲಿ ಸಿಕ್ಕಿಬಿದ್ದಿರುವವರಿಗೆ ಯೆಹೋವನ ಬಳಿಗೆ ಹಿಂದಿರುಗಲಿಕ್ಕಾಗಿ ಬೇಕಾಗುವ ಧೈರ್ಯವನ್ನು ತಂದುಕೊಳ್ಳಲು ಯಾವುದು ಸಹಾಯಮಾಡಬಹುದು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?
19 ಆಧ್ಯಾತ್ಮಿಕವಾಗಿ ಬಲಹೀನರಾಗಿರುವ ಅಥವಾ ಪಾಪದಲ್ಲಿ ಸಿಕ್ಕಿಬಿದ್ದಿರುವ ಅನೇಕರಿಗೆ ಯೆಹೋವನ ಬಳಿಗೆ ಹಿಂದಿರುಗಿ ಬರುವುದು ಸುಲಭವಾಗಿರುವುದಿಲ್ಲ. ಆದರೆ ಅಂಥವರು ನಿಜವಾಗಿಯೂ ಪಶ್ಚಾತ್ತಾಪಪಟ್ಟು ತಮಗೆ ದೇವರಲ್ಲಿರುವ ಪ್ರೀತಿಯನ್ನು ಪುನಃ ಹೊತ್ತಿಸುವುದಾದರೆ, ಅಗತ್ಯವಿರುವ ಧೈರ್ಯ ಬಂದೇ ಬರುವುದು. ಅಮೆರಿಕದಲ್ಲಿ ಜೀವಿಸುತ್ತಿರುವ ಮಾರ್ಯೋa ಎಂಬವನನ್ನು ತೆಗೆದುಕೊಳ್ಳಿರಿ. ಈ ಮಾರ್ಯೋ ಕ್ರೈಸ್ತ ಸಭೆಯನ್ನು ತೊರೆದು, ಮದ್ಯಪಾನ ಮತ್ತು ಮಾದಕದ್ರವ್ಯದ ವ್ಯಸನಿಯಾದನು ಮತ್ತು 20 ವರುಷಗಳ ಬಳಿಕ ಸೆರೆವಾಸಿಯಾದನು. ಮಾರ್ಯೋ ಹೇಳುವುದು: “ನಾನು ನನ್ನ ಭವಿಷ್ಯದ ಕುರಿತು ಆಳವಾಗಿ ಚಿಂತಿಸಿ, ಬೈಬಲನ್ನು ಪುನಃ ಓದತೊಡಗಿದೆ. ಸಕಾಲದಲ್ಲಿ, ನಾನು ಯೆಹೋವನ ಗುಣಗಳನ್ನು, ವಿಶೇಷವಾಗಿ ಕರುಣೆಯನ್ನು ಮಾನ್ಯಮಾಡತೊಡಗಿ ಅದಕ್ಕಾಗಿ ಅನೇಕ ಬಾರಿ ಪ್ರಾರ್ಥಿಸಿದೆ. ಸೆರೆಯಿಂದ ಬಿಡುಗಡೆಯಾದ ಮೇಲೆ ನಾನು ನನ್ನ ಹಳೆಯ ಒಡನಾಡಿಗಳಿಂದ ದೂರವಿದ್ದು, ಕ್ರೈಸ್ತ ಕೂಟಗಳಿಗೆ ಹೋಗಲಾಗಿ ಕ್ರಮೇಣ ಸಭೆಯಲ್ಲಿ ಪುನಃಸ್ಥಾಪಿಸಲ್ಪಟ್ಟೆ. ನನ್ನ ಶರೀರದಲ್ಲಿ ನಾನು ಬಿತ್ತಿದ್ದನ್ನು ಕೊಯ್ಯುವುದು ನಿಜವಾದರೂ, ಈಗ ನನಗೆ ಕಡಮೆಪಕ್ಷ ಆಶ್ಚರ್ಯಕರವಾದ ನಿರೀಕ್ಷೆಯಾದರೂ ಇದೆ. ಯೆಹೋವನ ಅನುಕಂಪ ಮತ್ತು ಕ್ಷಮಾಪಣೆಗಾಗಿ ನಾನು ಆತನಿಗೆ ಎಷ್ಟು ಉಪಕಾರ ಹೇಳಿದರೂ ಸಾಲದು.”—ಕೀರ್ತನೆ 103:9-13; 130:3, 4; ಗಲಾತ್ಯ 6:7, 8.
20 ಮಾರ್ಯೋ ಇದ್ದಂತಹ ಸನ್ನಿವೇಶದಲ್ಲಿರುವವರು ಯೆಹೋವನ ಬಳಿ ಹಿಂದಿರುಗಿ ಬರಲು ಕಠಿಣ ಪ್ರಯತ್ನ ಮಾಡಬೇಕೆಂಬುದೇನೋ ನಿಶ್ಚಯ. ಆದರೆ ಬೈಬಲ್ ಅಧ್ಯಯನ, ಪ್ರಾರ್ಥನೆ ಮತ್ತು ಧ್ಯಾನದ ಮೂಲಕ ಪುನಃ ಹೊತ್ತಿಸಲ್ಪಟ್ಟ ಅವರ ಪ್ರೀತಿಯು ಅವರಿಗೆ ಬೇಕಾಗಿರುವ ಧೈರ್ಯ ಮತ್ತು ದೃಢಸಂಕಲ್ಪವನ್ನು ಕೊಡುವುದು. ಮಾರ್ಯೋಗೆ ರಾಜ್ಯ ನಿರೀಕ್ಷೆಯೂ ಬಲವನ್ನು ಕೊಟ್ಟಿತು. ಹೌದು, ಪ್ರೀತಿ, ನಂಬಿಕೆ, ಮತ್ತು ದೇವಭಯದೊಂದಿಗೆ ನಿರೀಕ್ಷೆಯೂ ನಮ್ಮ ಜೀವನದಲ್ಲಿ ಒಳ್ಳೇದನ್ನು ಮಾಡುವ ಬಲಾಢ್ಯ ಶಕ್ತಿಯಾಗಿರಬಲ್ಲದು. ಮುಂದಿನ ಲೇಖನದಲ್ಲಿ, ಈ ಅಮೂಲ್ಯವಾದ ಆಧ್ಯಾತ್ಮಿಕ ಉಡುಗೊರೆಯ ಬಗ್ಗೆ ನಾವು ಹೆಚ್ಚು ಕೂಲಂಕಷವಾಗಿ ಪರೀಕ್ಷಿಸುವೆವು. (w06 10/1)
[ಪಾದಟಿಪ್ಪಣಿ]
a ಹೆಸರನ್ನು ಬದಲಾಯಿಸಲಾಗಿದೆ.
ಉತ್ತರಿಸಬಲ್ಲಿರಾ?
• ಯೇಸುವಿನ ಗಮನಾರ್ಹ ಧೈರ್ಯಕ್ಕೆ ಪ್ರೀತಿ ಹೇಗೆ ನೆರವಾಯಿತು?
• ಸಹೋದರರ ಮೇಲಣ ಪ್ರೀತಿಯು ಪೌಲ ಬಾರ್ನಬರಿಗೆ ವಿಶಿಷ್ಟ ಧೈರ್ಯವನ್ನು ಕೊಟ್ಟದ್ದು ಹೇಗೆ?
• ಕ್ರೈಸ್ತ ಪ್ರೀತಿಯನ್ನು ಸೈತಾನನು ಸವೆಯಿಸಲು ಪ್ರಯತ್ನಿಸುವುದು ಯಾವುದರ ಮೂಲಕ?
• ಯೆಹೋವನ ಮೇಲಣ ಪ್ರೀತಿಯು ಯಾವ ಕಷ್ಟಗಳನ್ನು ತಾಳಿಕೊಳ್ಳಲು ನಮಗೆ ಧೈರ್ಯವನ್ನು ಕೊಡಬಲ್ಲದು?
[ಪುಟ 23ರಲ್ಲಿರುವ ಚಿತ್ರ]
ಜನರ ಮೇಲೆ ಪೌಲನಿಗಿದ್ದ ಪ್ರೀತಿಯು ಪಟ್ಟುಹಿಡಿದು ಮುಂದುವರಿಯುವಂತೆ ಅವನಿಗೆ ಧೈರ್ಯವನ್ನು ಕೊಟ್ಟಿತು
[ಪುಟ 25ರಲ್ಲಿರುವ ಚಿತ್ರ]
ದೇವರ ಮಟ್ಟಗಳನ್ನು ಎತ್ತಿಹಿಡಿಯಲು ಧೈರ್ಯ ಬೇಕು
[ಪುಟ 25ರಲ್ಲಿರುವ ಚಿತ್ರ]
ನಾಮಾಂಗಾಲ್ವಾ ಸುಟೂಟೂ