ಬೈಬಲಿನ ದೃಷ್ಟಿ ಕೋನ
ಭೂಮಿಯು ಬೆಂಕಿಯಿಂದ ನಾಶವಾಗುವುದೊ?
ನ್ಯೂಕ್ಲಿಯರ್ ಸರ್ವನಾಶದಲ್ಲಿ ಇದ್ದಲಾಗುವುದು, ಉಬ್ಬಿದ ಸೂರ್ಯನಿಂದ ಸುಟ್ಟು ಬೂದಿಯಾಗುವುದು ಅಥವಾ ರೇಗಿರುವ ಒಬ್ಬ ದೇವನಿಂದ ಕಿಚ್ಚಿಡಲ್ಪಡುವುದು—ಹೀಗೆ ನಾಶನದ ರೀತಿಯು ಭಿನ್ನವಾಗಿರಬಹುದು, ಆದರೆ ಅನೇಕ ಜನರು, ಮಾನವಕುಲದ ಮನೆಯಾದ ಭೂಗ್ರಹವು ಸಕಲ ನಾಶಕ ನರಕದಲ್ಲಿ, ಮಹಾ ಪ್ರಮಾಣದ ನಾಶನದಲ್ಲಿ ತನ್ನ ಅಂತ್ಯವನ್ನು ಮುಟ್ಟುವುದೆಂದು ಮನಗಾಣಿಸಲ್ಪಟ್ಟಿದ್ದಾರೆ.
ಕೆಲವರು, ಭೂಮಿಗೆ ವಿರುದ್ಧವಾದ ಮಾನವನ ಅತಿಕ್ರಮಣಕ್ಕೆ ಪ್ರತೀಕಾರವಾಗಿ, ದೈವಿಕವಾಗಿ ನಿರ್ದೇಶಿತವಾದ ನಾಶನದ ಮುನ್ನೆಚ್ಚರಿಕೆಯ ಬೈಬಲ್ ವಚನಗಳನ್ನು ಸೂಚಿಸುತ್ತಾರೆ. ಇತರರು, ಯಾರು ಅಗ್ನಿನಾಶನಕ್ಕೆ ಭೂಮಿಯ ಅನಿವಾರ್ಯ ಬೀಳುವಿಕೆಯ ನಿರೀಕ್ಷೆಯ ಕುರಿತು ಬರೆಯುತ್ತಾರೊ, ಆ ಆಸ್ಟ್ರೇಲಿಯದ ಆ್ಯಡಲೇಡ್ ವಿಶ್ವವಿದ್ಯಾನಿಲಯದ ಒಬ್ಬ ಪ್ರೊಫೆಸರರಾದ ಪೌಲ್ ಡೇವೀಸ್ರ ಅಭಿಪ್ರಾಯವನ್ನು ಪ್ರತಿಧ್ವನಿಸುತ್ತಾರೆ. ಕೊನೆಯ ಮೂರು ನಿಮಿಷಗಳು (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಅವರು ಪ್ರತಿಪಾದಿಸುವುದು: “ಸೂರ್ಯನು ಹೆಚ್ಚು ಉಬ್ಬುತ್ತಾ ಬಂದಂತೆ, ಅದು ತನ್ನ ಬೆಂಕಿಯುಳ್ಳ ಆವರಣದಿಂದ ಭೂಮಿಯನ್ನು . . . ನುಂಗಿಬಿಡುವುದು. ನಮ್ಮ ಭೂಗ್ರಹವು ಸುಟ್ಟು ಬೂದಿಯಾಗುವುದು.” ಭೂಮಿಯ ವಿಧಿಯ ಕುರಿತಾದ ಸತ್ಯವು ಏನಾಗಿದೆ? ಬೆಂಕಿಯ ಮೂಲಕ ನಾಶನವನ್ನು ಮುನ್ಸೂಚಿಸುವಂತೆ ತೋರುವ ಬೈಬಲ್ ವಚನಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು?
ದೇವರು ಚಿಂತಿಸುತ್ತಾನೋ?
ಯೆರೆಮೀಯ 10:10-12ರಲ್ಲಿ, ನಮಗೆ ತಿಳಿಸಲ್ಪಡುವುದು: “ಯೆಹೋವನಾದರೋ ಸತ್ಯದೇವರು; . . . ಆತನು ತನ್ನ ಶಕ್ತಿಯಿಂದ ಭೂಮಿಯನ್ನು ನಿರ್ಮಿಸಿ ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ ತನ್ನ ವಿವೇಕದಿಂದ ಆಕಾಶಮಂಡಲವನ್ನು ಹರಡಿದ್ದಾನೆ.” ದೇವರು ಭೂಮಿಯನ್ನು ನಿರ್ಮಿಸಿ, ಅದನ್ನು ಸ್ಥಿರವಾಗಿ ಸ್ಥಾಪಿಸಿದನು. ಆದುದರಿಂದ ಆತನು ಜ್ಞಾನ, ಪ್ರೀತಿ, ಮತ್ತು ವಿವೇಕದಿಂದ, ಭೂಮಿಯನ್ನು ಮಾನವಕುಲದ ಒಂದು ಸುಂದರವಾದ ಬೀಡಾಗಿ ಸದಾ ಇರುವಂತೆ ಜಾಗರೂಕತೆಯಿಂದ ತಯಾರಿಸಿದನು.
ಮಾನವಕುಲದ ದೇವರ ಸೃಷ್ಟಿಯ ಕುರಿತಾಗಿ ಬೈಬಲ್ ತಿಳಿಸುವುದು: “ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು. ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ—ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ . . . ಅಂದನು.” (ಆದಿಕಾಂಡ 1:27, 28) ಆತನು ತನ್ನ ಸೃಷ್ಟಿ ಕೆಲಸವನ್ನು ಪೂರ್ಣಗೊಳಿಸಿದಾಗ, “ಅದು ಬಹು ಒಳ್ಳೇದಾಗಿತ್ತು” ಎಂಬುದಾಗಿ ನಿಸ್ಸಂದಿಗ್ಧವಾಗಿ ಪ್ರಕಟಿಸಸಾಧ್ಯವಿತ್ತು. (ಆದಿಕಾಂಡ 1:31) ಅದು ಅದೇ ರೀತಿಯಲ್ಲಿ ಉಳಿಯಬೇಕೆಂದು ಆತನು ಬಯಸಿದನು. ಕೆಲವು ಭಾವಿ ಹೆತ್ತವರು ತಮ್ಮ ನಿರೀಕ್ಷಿತ ನವಜಾತ ಮಗುವಿಗಾಗಿ ಒಂದು ಕೂಸುಕೋಣೆಯನ್ನು ರೂಪಿಸಿ, ಸ್ಥಾಪಿಸುವಂತೆ, ದೇವರು ಒಂದು ಸುಂದರವಾದ ತೋಟವನ್ನು ಸ್ಥಾಪಿಸಿದನು ಮತ್ತು ಅದನ್ನು ವಿಕಸಿಸುವಂತೆಯೂ, ನೋಡಿಕೊಳ್ಳುವಂತೆಯೂ, ಮನುಷ್ಯನಾದ ಆದಾಮನನ್ನು ಅಲ್ಲಿ ಇಟ್ಟನು.—ಆದಿಕಾಂಡ 2:15.
ಆದಾಮನು ಪರಿಪೂರ್ಣತೆಯನ್ನೂ, ಭೂಮಿಯನ್ನು ನೋಡಿಕೊಳ್ಳುವ ತನ್ನ ಜವಾಬ್ದಾರಿಯನ್ನೂ ತ್ಯಜಿಸಿಬಿಟ್ಟನು. ಆದರೆ ಸೃಷ್ಟಿಕರ್ತನು ತನ್ನ ಉದ್ದೇಶವನ್ನು ತ್ಯಜಿಸಿದನೋ? ಯೆಶಾಯ 45:18 ಇಲ್ಲವೆಂದು ವ್ಯಕ್ತಪಡಿಸುತ್ತದೆ: “ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ; . . . ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.” (ಯೆಶಾಯ 55:10, 11ನ್ನೂ ನೋಡಿರಿ.) ಮನುಷ್ಯನು ತನ್ನ ವಶಕ್ಕೆ ಸಂಬಂಧಿಸಿದ ಕೆಲಸವನ್ನು ಅಲಕ್ಷ್ಯಮಾಡಿದರೂ, ದೇವರು ಭೂಮಿಯ ಮತ್ತು ಅದರಲ್ಲಿನ ಜೀವಿಗಳ ಕಡೆಗಿನ ತನ್ನ ಒಪ್ಪಂದವನ್ನು ನೆರವೇರಿಸುತ್ತಾ ಮುಂದುವರಿದನು. ಪುರಾತನ ಇಸ್ರಾಯೇಲ್ ರಾಷ್ಟ್ರಕ್ಕೆ ಕೊಡಲ್ಪಟ್ಟ ಧರ್ಮಶಾಸ್ತ್ರವು, ಪ್ರತಿ ಏಳನೆಯ ವರುಷದಲ್ಲಿ ‘ದೇಶಕ್ಕೆ ಸಂಪೂರ್ಣ ವಿಶ್ರಾಂತಿಯ ಒಂದು ಸಬ್ಬತ್ಕಾಲ’ಕ್ಕಾಗಿ ಏರ್ಪಾಡನ್ನು ಮಾಡಿತು. ಪ್ರಾಣಿಗಳಿಗೆ ರಕ್ಷಣೆಯನ್ನು ಒದಗಿಸಿದ ದಯಾಮಯ ನಿಯಮಗಳನ್ನು ಅದು ಒಳಗೊಂಡಿತ್ತು. (ಯಾಜಕಕಾಂಡ 25:4; ವಿಮೋಚನಕಾಂಡ 23:4, 5; ಧರ್ಮೋಪದೇಶಕಾಂಡ 22:1, 2, 6, 7, 10; 25:4; ಲೂಕ 14:5) ಇವು, ದೇವರು ಮಾನವಕುಲದ ಹಾಗೂ ಆತನು ಮಾನವನಿಗೆ ನೋಡಿಕೊಳ್ಳಲೊಪ್ಪಿಸಿದ ಪ್ರತಿಯೊಂದು ವಿಷಯದ ಕುರಿತು ಚಿಂತಿಸುತ್ತಾನೆ ಎಂದು ಸ್ಪಷ್ಟವಾಗಿ ತೋರಿಸುವ ಬೈಬಲಿನ ಕೇವಲ ಕೆಲವೇ ಉದಾಹರಣೆಗಳಾಗಿವೆ.
“ಮೊದಲಿದ್ದ ಭೂಮಂಡಲ”
ಹಾಗಾದರೆ ಒಂದನ್ನೊಂದು ವಿರೋಧಿಸುವ ಬೈಬಲ್ ವಚನಗಳನ್ನು ನಾವು ಹೇಗೆ ಸರಿಹೊಂದಿಸುತ್ತೇವೆ? ಅಂತಹ ಒಂದು ವಚನವಾದ 2 ಪೇತ್ರ 3:7—ಕಿಂಗ್ ಜೇಮ್ಸ್ ವರ್ಶನ್ಗನುಸಾರ—ಹೇಳುವುದು: “ಈಗಿರುವ ಭೂಮ್ಯಾಕಾಶಗಳು ಅದೇ ವಾಕ್ಯದ ಬಲದಿಂದ ಬೆಂಕಿಯ ಮೂಲಕ ನಾಶವಾಗುವುದಕ್ಕೆ ಇಡಲ್ಪಟ್ಟಿವೆ; ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ.” ಇನ್ನೊಂದು ವಚನವು ಪ್ರಕಟನೆ 21:1. ಅದು ಹೇಳುವುದು: “ತರುವಾಯ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಕಂಡೆನು. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಇಲ್ಲದೆ ಹೋದವು.”
ಪೇತ್ರನ ಮಾತುಗಳನ್ನು ಅಕ್ಷರಾರ್ಥಕವಾಗಿ ತೆಗೆದುಕೊಳ್ಳುವುದಾದರೆ ಮತ್ತು ಭೂಗ್ರಹವು ನಿಜವಾದ ಬೆಂಕಿಯಿಂದ ನಾಶಮಾಡಲ್ಪಡುವುದಾದರೆ, ಅಕ್ಷರಾರ್ಥಕವಾದ ಆಕಾಶವೂ—ನಕ್ಷತ್ರಗಳು ಮತ್ತು ಇತರ ಆಕಾಶಸ್ಥ ಕಾಯಗಳು—ಬೆಂಕಿಯಿಂದ ನಾಶವಾಗಲಿರುವುದು. ಆದರೂ, ಈ ವಿವರಣೆಯು, ಮತ್ತಾಯ 6:10: “ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ,” ಮತ್ತು ಕೀರ್ತನೆ 37:29: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು,” ಎಂಬಂತಹ ವಚನಗಳಲ್ಲಿ ಕಂಡುಬರುವ ಆಶ್ವಾಸನೆಗೆ ವಿರುದ್ಧವಾಗಿದೆ. ಇನ್ನೂ ಹೆಚ್ಚಾಗಿ, ನ್ಯೂಕ್ಲಿಯರ್ ಸ್ಫೋಟನಗಳನ್ನು ನಿರಂತರವಾಗಿ ಉಂಟುಮಾಡುವ, ಈಗಾಗಲೇ ತೀಕ್ಷ್ಣವಾಗಿ ಬಿಸಿಯಾಗಿರುವ ಸೂರ್ಯ ಹಾಗೂ ನಕ್ಷತ್ರಗಳ ಮೇಲೆ ಬೆಂಕಿಯು ಯಾವ ಪರಿಣಾಮವನ್ನು ಬೀರಬಹುದು?
ಇನ್ನೊಂದು ಬದಿಯಲ್ಲಿ, ಬೈಬಲ್ “ಭೂಮಿ” ಎಂಬ ಪದವನ್ನು ಅನೇಕ ವೇಳೆ ಸೂಚಕಾರ್ಥದಲ್ಲಿ ಉಪಯೋಗಿಸುತ್ತದೆ. ಉದಾಹರಣೆಗಾಗಿ, ಆದಿಕಾಂಡ 11:1 (NW) ಹೇಳುವುದು: “ಭೂಮಿಯಲ್ಲೆಲ್ಲಾ ಒಂದೇ ಭಾಷೆ ಇತ್ತು.” ಇಲ್ಲಿ, “ಭೂಮಿ” ಎಂಬ ಪದವು, ಸರ್ವಸಾಮಾನ್ಯವಾಗಿ ಮಾನವಕುಲಕ್ಕೆ ಅಥವಾ ಮಾನವ ಸಮಾಜಕ್ಕೆ ಸೂಚಿತವಾಗಿದೆ. (1 ಅರಸು 2:1, 2; 1 ಪೂರ್ವಕಾಲವೃತ್ತಾಂತ 16:31ದನ್ನೂ ನೋಡಿರಿ.) 2 ಪೇತ್ರ 3:5, 6ರ ಸಂದರ್ಭವು, “ಭೂಮಿ”ಯ ಅದೇ ಸೂಚಕಾರ್ಥವನ್ನು ಸೂಚಿಸುತ್ತದೆ. ಅದು, ಜಲಪ್ರಳಯದಲ್ಲಿ ದುಷ್ಟ ಮಾನವ ಸಮಾಜವು ನಾಶಗೊಳಿಸಲ್ಪಟ್ಟ, ಆದರೆ ನೋಹ ಮತ್ತು ಅವನ ಮನೆಯವರು ಹಾಗೂ ಭೂಗೋಳವು ತಾನೇ ರಕ್ಷಿಸಲ್ಪಟ್ಟ ನೋಹನ ದಿನವನ್ನು ಸೂಚಿಸುತ್ತದೆ. (ಆದಿಕಾಂಡ 9:11) ಅಂತೆಯೇ, 2 ಪೇತ್ರ 3:7ರಲ್ಲಿ, ನಾಶಗೊಳಿಸಲ್ಪಡಲಿರುವವರು “ಭಕ್ತಿಹೀನರು” ಎಂದು ಅದು ಹೇಳುತ್ತದೆ. ಈ ದೃಷ್ಟಿಕೋನವು ಉಳಿದ ಬೈಬಲ್ ವಚನಗಳಿಗೆ ಹೊಂದಿಕೆಯಲ್ಲಿದೆ. ನಾಶನಕ್ಕಾಗಿ ಇಡಲ್ಪಟ್ಟಿರುವ ದುಷ್ಟ ಸಮಾಜವು, ಮೊದಲು ಉಲ್ಲೇಖಿಸಲಾದ, ಪ್ರಕಟನೆ 21:1ರಲ್ಲಿ ಸೂಚಿಸಲ್ಪಟ್ಟಿರುವ “ಮೊದಲಿದ್ದ ಭೂಮಂಡಲ”ವೂ ಆಗಿದೆ.
ನಿಶ್ಚಯವಾಗಿ, ಚಿಂತೆ ವಹಿಸುವ ಭೂಮಿಯ ತಂದೆಯು, ತನ್ನ ಮನೆ ಹಾಳಾಗದಂತೆ ಸಾಧ್ಯವಾಗುವ ಎಲ್ಲಾ ವಿಷಯಗಳನ್ನು ಮಾಡುವಂತೆಯೇ, ಯೆಹೋವ ದೇವರು ತನ್ನ ಸೃಷ್ಟಿಯ ಕುರಿತು ಬಹಳವಾಗಿ ಆಸಕ್ತನಾಗಿದ್ದಾನೆ. ಆತನು ಒಮ್ಮೆ ಅನೈತಿಕ ಹಾಗೂ ದುಷ್ಟ ಜನರನ್ನು ಫಲವತ್ತಾದ ಯೊರ್ದನ್ ಪ್ರದೇಶದಿಂದ ತಳ್ಳಿಬಿಟ್ಟನು ಮತ್ತು ತನ್ನೊಂದಿಗೆ ಒಡಂಬಡಿಕೆಯ ಸಂಬಂಧದಲ್ಲಿದ್ದ ಹೊಸ ಪಾಲಕರಿಗೆ, ಅವರು ಆತನ ಆಜ್ಞೆಗಳನ್ನು ಕೈಕೊಂಡು ನಡೆದರೆ, ‘ಆ ದೇಶವು ನಿಮಗಿಂತ ಮುಂಚೆ ಇದ್ದ ಜನಾಂಗಗಳನ್ನು ಕಾರಿಬಿಟ್ಟ ಪ್ರಕಾರವೇ ನಿಮ್ಮಿಂದ ಅಶುದ್ಧವಾಗಿ ನಿಮ್ಮನ್ನು ಕಾರಿಬಿಡುವುದಿಲ್ಲ’ ಎಂಬ ಆಶ್ವಾಸನೆಕೊಟ್ಟನು.—ಯಾಜಕಕಾಂಡ 18:24-28.
“ಒಂದು ನೂತನಭೂಮಂಡಲ”
ಇಂದು, ಲೈಂಗಿಕವಾಗಿ ಕೆಟ್ಟುಹೋದ, ಹಿಂಸಾತ್ಮಕವಾಗಿ ಪಶುಸ್ವಭಾವದ ಮತ್ತು ರಾಜಕೀಯವಾಗಿ ಭ್ರಷ್ಟವಾದ ಒಂದು ಸಮಾಜವು, ಭೂಮಿಯನ್ನು ಮಲಿನಮಾಡಿದೆ. ಕೇವಲ ದೇವರು ಮಾತ್ರ ಅದನ್ನು ಕಾಪಾಡಸಾಧ್ಯವಿದೆ. ಆತನು ಅದನ್ನೇ ಮಾಡುವನು. ಪ್ರಕಟನೆ 11:18ರಲ್ಲಿ ಆತನು “ಲೋಕನಾಶಕರನ್ನು ನಾಶಮಾಡು”ವುದಾಗಿ ವಾಗ್ದಾನಿಸುತ್ತಾನೆ. ಪುನಸ್ಸ್ಥಾಪಿತ ಹಾಗೂ ನವೀಕರಿಸಲ್ಪಟ್ಟ ಭೂಮಿಯು, ದೇವರಿಗೆ ಭಯಪಡುವ ಮತ್ತು ತಮ್ಮ ಜೊತೆಮಾನವರನ್ನು ನಿಜವಾಗಿಯೂ ಪ್ರೀತಿಸುವ ಜನರಿಂದ ತುಂಬಿರುವುದು. (ಇಬ್ರಿಯ 2:5; ಲೂಕ 10:25-28ನ್ನು ಹೋಲಿಸಿರಿ.) ದೇವರ ಸ್ವರ್ಗೀಯ ರಾಜ್ಯದ ಕೆಳಗೆ ಆಗಲಿರುವ ಬದಲಾವಣೆಯು ಎಷ್ಟು ಅಗಾಧವಾಗಿರುತ್ತದೆಂದರೆ, ಬೈಬಲ್ ಒಂದು “ನೂತನಭೂಮಂಡಲ”ದ ಕುರಿತು ಮಾತಾಡುತ್ತದೆ, ಅಂದರೆ ಒಂದು ಹೊಸ ಮಾನವ ಸಮಾಜ.
ಕೀರ್ತನೆ 37:29ರಂತಹ ವಚನಗಳನ್ನು ನಾವು ಓದುವಾಗ, ಮತ್ತು ಮತ್ತಾಯ 6:10ರಲ್ಲಿರುವ ಯೇಸುವಿನ ಹೇಳಿಕೆಯನ್ನು ಗ್ರಹಿಸುವಾಗ, ಅನಿಯಂತ್ರಿತ ನೈಸರ್ಗಿಕ ಶಕ್ತಿಗಳಾಗಲಿ ಅಥವಾ ತನ್ನ ಎಲ್ಲಾ ನಾಶಕಾರಿ ಶಕ್ತಿಯಿಂದ ಮನುಷ್ಯನೇ ಆಗಲಿ, ನಮ್ಮ ಭೂಗ್ರಹವನ್ನು ಅಂತ್ಯಗೊಳಿಸುವುದಿಲ್ಲ ಎಂದು ನಮಗೆ ಮನವರಿಕೆಯಾಗುತ್ತದೆ. ಅವರು ದೇವರ ಉದ್ದೇಶವನ್ನು ಭಂಗಪಡಿಸರು. (ಕೀರ್ತನೆ 119:90; ಯೆಶಾಯ 40:15, 26) ನಂಬಿಗಸ್ತ ಮಾನವಕುಲವು, ಅಪಾರ ಸೌಂದರ್ಯ ಹಾಗೂ ಅಂತ್ಯವಿಲ್ಲದ ಸಂತೋಷದ ಪರಿಸ್ಥಿತಿಗಳ ಮಧ್ಯೆ ಭೂಮಿಯಲ್ಲಿ ಜೀವಿಸುವುದು. ಅದು ಭೂಮಿಯ ವಿಧಿಯ ಕುರಿತಾದ ಸತ್ಯ, ಏಕೆಂದರೆ ಮಾನವಕುಲದ ಪ್ರೀತಿಪೂರ್ಣ ಸೃಷ್ಟಿಕರ್ತನ ಉದ್ದೇಶವು ಯಾವಾಗಲೂ ಇದೇ ಆಗಿತ್ತು ಹಾಗೂ ಆಗಿದೆ.—ಆದಿಕಾಂಡ 2:7-9, 15; ಪ್ರಕಟನೆ 21:1-5.