-
ಒಂದು ನಿರ್ಣಾಯಾತ್ಮಕ ದಿನದ ಆರಂಭಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 105
ಒಂದು ನಿರ್ಣಾಯಾತ್ಮಕ ದಿನದ ಆರಂಭ
ಯೇಸುವು ಸೋಮವಾರ ಸಾಯಂಕಾಲ ಯೆರೂಸಲೇಮನ್ನು ಬಿಟ್ಟು ಎಣ್ಣೇಮರಗಳ ಪೂರ್ವ ಇಳಿಜಾರಿನಲ್ಲಿರುವ ಬೇಥಾನ್ಯಕ್ಕೆ ಹಿಂತೆರಳುತ್ತಾನೆ. ಯೆರೂಸಲೇಮಿನ ಅವನ ಎರಡು ದಿನಗಳ ಶುಶ್ರೂಷೆಯು ಮುಗಿಯುತ್ತದೆ. ಅವನ ಗೆಳೆಯನಾದ ಲಾಜರನೊಂದಿಗೆ ಯೇಸುವು ಆ ರಾತ್ರಿಯನ್ನು ಪುನಃ ಕಳೆದನು ಎಂಬುದರಲ್ಲಿ ಸಂದೇಹವಿಲ್ಲ. ಶುಕ್ರವಾರ ಯೆರಿಕೋವಿನಿಂದ ಬಂದಂದಿನಿಂದ ಅವನು ಬೇಥಾನ್ಯದಲ್ಲಿ ಕಳೆಯುವದು ಇದು ನಾಲ್ಕನೆಯ ರಾತ್ರಿ.
ಈಗ, ನೈಸಾನ್ 11ರ ಮಂಗಳವಾರ ಬಹಳ ಬೆಳಿಗ್ಗೆಯೇ, ಅವನೂ ಶಿಷ್ಯರೂ ಪುನಃ ಮಾರ್ಗದಲ್ಲಿದ್ದಾರೆ. ಯೇಸುವಿನ ಶುಶ್ರೂಷೆಯಲ್ಲಿ ಇದೊಂದು ನಿರ್ಣಾಯಾತ್ಮಕ ದಿನವಾಗಲಿಕ್ಕಿತ್ತು, ಇಷ್ಟರ ತನಕದ ಅತಿ ಹೆಚ್ಚು ಕಾರ್ಯಮಗ್ನ ದಿನವದಾಗಿತ್ತು. ಅವನು ದೇವಾಲಯದಲ್ಲಿ ಹಾಜರಾಗುವ ಕಡೆಯ ದಿನವಾಗಿತ್ತು. ಮತ್ತು ಅವನ ವಿಚಾರಣೆ ಮತ್ತು ವಧೆಯ ಮೊದಲು ಅವನ ಬಹಿರಂಗ ಶುಶ್ರೂಷೆಯ ಕಡೆಯ ದಿನವದಾಗಿತ್ತು.
ಯೇಸುವೂ, ಅವನ ಶಿಷ್ಯರೂ ಯೆರೂಸಲೇಮಿಗೆ ನಡಿಸುವ ಎಣ್ಣೇಮರಗಳ ಮಾರ್ಗವಾಗಿ ಹೋಗುತ್ತಿದ್ದರು. ಬೇಥಾನ್ಯದಿಂದ ದಾರಿಯಲ್ಲಿ ಪೇತ್ರನು ಮುಂಚಿನ ದಿನ ಬೆಳಿಗ್ಗೆ ಯೇಸುವು ಶಪಿಸಿದ ಮರವನ್ನು ನೋಡುತ್ತಾನೆ. “ಗುರುವೇ, ಇಗೋ!” ಅವನು ಉದ್ಗರಿಸುವದು, “ನೀನು ಶಾಪಕೊಟ್ಟ ಅಂಜೂರದ ಮರವು ಒಣಗಿಹೋಗಿದೆ.”
ಆದರೆ ಯೇಸುವು ಮರವನ್ನು ಕೊಂದದ್ದು ಏಕೆ? ಯಾಕೆಂದು ಅವನು ಸೂಚಿಸುತ್ತಾ ಅನ್ನುವುದು: “ನಿಮಗೆ ಸತ್ಯವಾಗಿ ಹೇಳುತ್ತೇನೆ ನೀವು ಸಂಶಯ ಪಡದೆ ನಂಬಿದರೆ ನಾನು ಅಂಜೂರದ ಮರಕ್ಕೆ ಮಾಡಿದಂಥದನ್ನು ನೀವು ಮಾಡುವಿರಿ. ಇದು ಮಾತ್ರವಲ್ಲದೆ ಈ ಬೆಟ್ಟಕ್ಕೆ [ಅವರು ನಿಂತಿರುವ ಎಣ್ಣೇಮರಗಳ ಗುಡ್ಡಕ್ಕೆ] —ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು ಎಂದು ಹೇಳಿದರೆ ಅದೂ ಆಗುವದು. ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ.”
ಮರವು ಒಣಗಿಹೋಗುವಂತೆ ಮಾಡುವದರ ಮೂಲಕ, ದೇವರಲ್ಲಿ ಅವರಿಗೆ ನಂಬಿಕೆ ಇರಬೇಕಾದ ಆವಶ್ಯಕತೆಯ ಪ್ರತ್ಯಕ್ಷ ನಿದರ್ಶನವೊಂದನ್ನು ಯೇಸುವು ತನ್ನ ಶಿಷ್ಯರಿಗೆ ಒದಗಿಸುತ್ತಾನೆ. ಅವನು ಹೇಳಿದಂತೆ ಹೀಗಿದೆ: “ಆದಕಾರಣ ನೀವು ಪ್ರಾರ್ಥನೆ ಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವದು.” ವಿಶೇಷವಾಗಿ ಬಲುಬೇಗನೆ ಬರಲಿರುವ ಭಯಂಕರ ಪರೀಕ್ಷೆಗಳ ಎದುರಿನಲ್ಲಿ, ಎಂಥಾ ಪ್ರಾಮುಖ್ಯವಾದ ಪಾಠವನ್ನು ಅವರು ಕಲಿಯಲಿಕ್ಕಿತ್ತು! ಆದರೂ, ಅಂಜೂರದ ಮರದ ಒಣಗಿಹೋಗುವಿಕೆ ಮತ್ತು ನಂಬಿಕೆಯ ಗುಣಮಟ್ಟದ ನಡುವೆ ಇನ್ನೊಂದು ಸಂಬಂಧವಿತ್ತು.
ಈ ಅಂಜೂರ ಮರದಂತೆ, ಇಸ್ರಾಯೇಲ್ ಜನಾಂಗಕ್ಕೆ ಒಂದು ಮೋಸಕರ ಹೊರ ತೋರಿಕೆ ಇತ್ತು. ದೇವರೊಂದಿಗೆ ಜನಾಂಗವು ಒಂದು ಒಡಂಬಡಿಕೆಯ ಸಂಬಂಧದಲ್ಲಿ ಇದ್ದಿತ್ತಾದರೂ ಮತ್ತು ಹೊರಗಿನಿಂದ ಅವನ ನಿಯಮಗಳನ್ನು ಪಾಲಿಸುತ್ತದೆಂದು ತೋರುತ್ತಿದ್ದರೂ, ಅದರಲ್ಲಿ ನಂಬಿಕೆ ಇದ್ದಿರಲಿಲ್ಲ, ಒಳ್ಳೆಯ ಫಲವಿಲ್ಲದ್ದಾಗಿತ್ತು ಎಂದು ರುಜುವಾಯಿತು. ನಂಬಿಕೆಯ ಕೊರತೆಯ ಕಾರಣ, ದೇವರ ಸ್ವಂತ ಮಗನನ್ನೂ ಕೂಡ ಅದು ನಿರಾಕರಿಸುವ ಹಂತದಲ್ಲಿತ್ತು! ಆದಕಾರಣ, ಫಲಕೊಡದ ಅಂಜೂರದ ಮರವು ಒಣಗಿ ಹೋಗುವಂತೆ ಮಾಡುವದರ ಮೂಲಕ, ಈ ಫಲವಿಲ್ಲದ, ನಂಬಿಕೆಯಿಲ್ಲದ ಮರದ ಅಂತ್ಯ ಫಲಿತಾಂಶವೇನು ಎಂದು ಯೇಸುವು ನಿಖರವಾಗಿ ಪ್ರದರ್ಶಿಸಿ ತೋರಿಸಿದನು.
ಕೊಂಚ ಸಮಯದ ನಂತರ, ಯೇಸುವೂ ಅವನ ಶಿಷ್ಯರೂ ಯೆರೂಸಲೇಮನ್ನು ಪ್ರವೇಶಿಸುತ್ತಾರೆ ಮತ್ತು ವಾಡಿಕೆಯ ಪ್ರಕಾರ, ಅವರು ದೇವಾಲಯಕ್ಕೆ ಹೋದಾಗ, ಅಲ್ಲಿ ಯೇಸುವು ಉಪದೇಶಿಸಲಾರಂಭಿಸುತ್ತಾನೆ. ಮಹಾಯಾಜಕರೂ, ಪ್ರಜೆಯ ಹಿರೀ ಪುರುಷರೂ, ಹಿಂದಿನ ದಿನ ಯೇಸುವು ಚಿನಿವಾರರ ವಿರುದ್ಧ ಕೈಗೊಂಡ ಕೃತ್ಯವನ್ನು ನಿಸ್ಸಂದೇಹವಾಗಿ ತಮ್ಮ ಮನಸ್ಸಿನಲ್ಲಿಟ್ಟುಕೊಂಡಿದ್ದು, ಅವನನ್ನು ವಿವಾದಕ್ಕೆಳೆಯುವದು: “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಈ ಅಧಿಕಾರ ನಿನಗೆ ಯಾರು ಕೊಟ್ಟರು?”
ಅದಕ್ಕುತ್ತರವಾಗಿ ಯೇಸುವು ಹೇಳುವದು: “ನಾನು ಸಹ ನಿಮ್ಮನ್ನು ಒಂದು ಮಾತು ಕೇಳುತ್ತೇನೆ; ಅದನ್ನು ನೀವು ನನಗೆ ಹೇಳಿದರೆ ನಾನೂ ಯಾವ ಅಧಿಕಾರದಿಂದ ಇವನ್ನು ಮಾಡುತ್ತೇನೆಂಬದನ್ನು ನಿಮಗೆ ಹೇಳುತ್ತೇನೆ. ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಎಲ್ಲಿಂದ ಬಂತು? ಪರಲೋಕದಿಂದಲೋ? ಮನುಷ್ಯರಿಂದಲೋ?”
ಯಾಜಕರೂ, ಪ್ರಜೆಯ ಹಿರೀ ಪುರುಷರೂ ಇದಕ್ಕೆ ಉತ್ತರ ಹೇಗೆ ನೀಡುವದು ಎಂದು ತಮ್ಮತಮ್ಮೊಳಗೆ ಮಾತಾಡಿಕೊಳ್ಳಲು ಆರಂಭಿಸಿದರು. “ಪರಲೋಕದಿಂದ ಬಂತೆಂದು ನಾವು ಹೇಳಿದರೆ ಹಾಗಾದರೆ ನೀವು ಯಾಕೆ ನಂಬಲಿಲ್ಲ ಎಂದು ನಮಗೆ ಹೇಳಾನು; ಮನುಷ್ಯರಿಂದ ಬಂತೆಂದು ಹೇಳಿದರೆ ನಮಗೆ ಜನರ ಭಯವದೆ; ಯೋಹಾನನು ಪ್ರವಾದಿಯೆಂದು ಎಲ್ಲರೂ ಎಣಿಸಿದ್ದಾರಲ್ಲಾ.”
ಏನು ಉತ್ತರಿಸುವದು ಎಂದು ಮುಖಂಡರಿಗೆ ತಿಳಿಯಲಿಲ್ಲ. ಆದುದರಿಂದ ಅವರು ಯೇಸುವಿಗೆ ಹೇಳುವದು: “ನಾವರಿಯೆವು.”
ಯೇಸುವು, ಪ್ರತಿಯಾಗಿ ಉತ್ತರಿಸುವದು: “ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೋ ಅದನ್ನು ನಾನೂ ನಿಮಗೆ ಹೇಳುವದಿಲ್ಲ.” ಮತ್ತಾಯ 21:19-27; ಮಾರ್ಕ 11:19-33; ಲೂಕ 20:1-8.
▪ ನೈಸಾನ್ 11, ಮಂಗಳವಾರದ ವೈಶಿಷ್ಟತೆಯೇನು?
▪ ಅಂಜೂರದ ಮರವನ್ನು ಒಣಗಿಹೋಗುವಂತೆ ಮಾಡುವದರ ಮೂಲಕ ಯೇಸುವು ಯಾವ ಪಾಠಗಳನ್ನು ಒದಗಿಸಿದನು?
▪ ಯೇಸುವು ಅವೆಲ್ಲಾ ಸಂಗತಿಗಳನ್ನು ಯಾವ ಅಧಿಕಾರದಿಂದ ಮಾಡುತ್ತಾನೆ ಎಂದು ಕೇಳಿದವರಿಗೆ ಅವನು ಹೇಗೆ ಉತ್ತರಿಸುತ್ತಾನೆ?
-
-
ದ್ರಾಕ್ಷೇ ತೋಟಗಳ ಸಾಮ್ಯಗಳಿಂದ ಬಯಲು ಮಾಡಲ್ಪಟ್ಟದ್ದುಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 106
ದ್ರಾಕ್ಷೇ ತೋಟಗಳ ಸಾಮ್ಯಗಳಿಂದ ಬಯಲು ಮಾಡಲ್ಪಟ್ಟದ್ದು
ಯೇಸುವು ದೇವಾಲಯದಲ್ಲಿ ಇದ್ದಾನೆ. ಅವನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಾನೆ ಎಂದು ತಿಳಿಯಲು ಅಪೇಕ್ಷಿಸಿದ ಧಾರ್ಮಿಕ ಮುಖಂಡರುಗಳನ್ನು ಈಗಲೇ ಗೊಂದಲದಲ್ಲಿ ಹಾಕಿದ್ದನು. ಅವರ ಗೊಂದಲದಿಂದ ಅವರು ಪುನಃ ಚೇತರಿಸಿಕೊಳ್ಳುವ ಮೊದಲೇ, ಯೇಸುವು ಕೇಳುವದು: “ಆದರೆ ನಿಮಗೆ ಹೇಗೆ ತೋರುತ್ತದೆ?” ಅನಂತರ ಸಾಮ್ಯಗಳ ಮೂಲಕ ಅವರು ನಿಜವಾಗಿ ಎಂಥಾ ವಿಧದ ವ್ಯಕ್ತಿಗಳಾಗಿದ್ದಾರೆಂದು ಅವನು ಅವರಿಗೆ ತೋರಿಸುತ್ತಾನೆ.
“ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು” ಯೇಸುವು ಹೇಳುತ್ತಾನೆ. “ಅವನು ಮೊದಲನೆಯವನ ಬಳಿಗೆ ಬಂದು—ಮಗನೇ, ಹೋಗಿ ಈ ಹೊತ್ತು ದ್ರಾಕ್ಷೇತೋಟದಲ್ಲಿ ಕೆಲಸಮಾಡು ಅಂದಾಗ ಅವನು—ನಾನು ಹೋಗುತ್ತೇನಪ್ಪಾ ಅಂದಾಗ್ಯೂ ಹೋಗಲೇ ಇಲ್ಲ. ಆ ಮೇಲೆ ಎರಡನೆಯವನ ಬಳಿಗೆ ಬಂದು ಅದೇ ಮಾತನ್ನು ಹೇಳಿದಾಗ—ನಾನು ಹೋಗುವದಿಲ್ಲ ಎಂದು ಹೇಳಿದಾಗ್ಯೂ ತರುವಾಯ ಪಶ್ಚಾತ್ತಾಪಪಟ್ಟು ತೋಟಕ್ಕೆ ಹೋದನು. ಅವರಿಬ್ಬರಲ್ಲಿ ತಂದೆಯ ಚಿತ್ತದಂತೆ ನಡೆದವನು ಯಾರು?” ಎಂದು ಯೇಸುವು ಕೇಳುತ್ತಾನೆ.
“ಕಡೆಯವನು” ಎಂದು ಅವನ ವಿರೋಧಿಗಳು ಉತ್ತರಿಸುತ್ತಾರೆ.
ಆದುದರಿಂದ ಯೇಸುವು ಉತ್ತರಿಸುವದು: “ಭ್ರಷ್ಟರೂ [ಸುಂಕದವರು, NW] ಸೂಳೆಯರೂ ನಿಮಗಿಂತ ಮೊದಲು ದೇವರ ರಾಜ್ಯವನ್ನು ಸೇರುವರು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” ಸುಂಕದವರು ಮತ್ತು ಸೂಳೆಯರು, ಆರಂಭಿಕ ಹಂತದಲ್ಲಿ ದೇವರನ್ನು ಸೇವಿಸಲು ನಿರಾಕರಿಸಿದವರಂತೆ ಇದ್ದರು. ಆದರೆ ಎರಡನೆಯ ಮಗನಂತೆ, ಅವರು ಪಶ್ಚಾತ್ತಾಪ ಪಟ್ಟರು ಮತ್ತು ಅವನ ಸೇವೆ ಮಾಡಿದರು. ಇನ್ನೊಂದು ಪಕ್ಕದಲ್ಲಿ ಧಾರ್ಮಿಕ ಮುಖಂಡರುಗಳು, ಮೊದಲನೆಯ ಮಗನಂತೆ, ದೇವರನ್ನು ಸೇವಿಸುತ್ತೇವೆಂದು ಹೇಳಿಕೊಳ್ಳುವದಾದರೂ, ಯೇಸುವು ಗಮನಿಸಿದಂತೆ ಇದ್ದರು: “ಯೋಹಾನನು [ಸ್ನಾನಿಕನು] ಧರ್ಮ ಮಾರ್ಗವನ್ನು ಬೋಧಿಸುವವನಾಗಿ ನಿಮ್ಮ ಬಳಿಗೆ ಬಂದನು. ನೀವು ಅವನನ್ನು ನಂಬಲಿಲ್ಲ; ಸುಂಕದವರೂ ಸೂಳೆಯರೂ ಅವನನ್ನು ನಂಬಿದರು; ನೀವು ಇದನ್ನು ನೋಡಿದಾಗ್ಯೂ ಪಶ್ಚಾತ್ತಾಪ ಪಡಲಿಲ್ಲ, ಅವನನ್ನು ನಂಬಲಿಲ್ಲ.”
ಈ ಧಾರ್ಮಿಕ ಮುಖಂಡರುಗಳ ತಪ್ಪಿಹೋಗುವಿಕೆಯು ದೇವರನ್ನು ಸೇವಿಸಲು ಅವರು ಕೇವಲ ತಾತ್ಸಾರಮಾಡಿದ್ದರಿಂದ ಅಲ್ಲ ಎಂದು ಯೇಸುವು ಮುಂದಕ್ಕೆ ತೋರಿಸುತ್ತಾನೆ. ಅಲ್ಲ, ಅವರು ನಿಜವಾಗಿ ಕೆಟ್ಟವರೂ, ದುಷ್ಟ ಜನರೂ ಆಗಿದ್ದರು. “ಒಬ್ಬ ಮನೆಯ ಯಜಮಾನನಿದ್ದನು,” ಯೇಸುವು ತಿಳಿಸುವದು, “ಅವನು ಒಂದು ದ್ರಾಕ್ಷೇತೋಟವನ್ನು ಮಾಡಿ ಅದರ ಸುತ್ತಲೂ ಬೇಲಿಹಾಕಿಸಿ ಅದರಲ್ಲಿ ದ್ರಾಕ್ಷೆಯ ಆಲೆಯನ್ನು ಮಾಡಿಸಿ ಹೂಡೆಯನ್ನು ಕಟ್ಟಿಸಿ ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ಬೇರೊಂದು ದೇಶಕ್ಕೆ ಹೋದನು. ಫಲಕಾಲ ಹತ್ತರವಾದಾಗ, ತನಗೆ ಬರಬೇಕಾದ ಹಣ್ಣುಗಳನ್ನು ತೆಗೆದುಕೊಂಡು ಬರುವದಕ್ಕಾಗಿ ಆ ಒಕ್ಕಲಿಗರ ಬಳಿಗೆ ತನ್ನ ಆಳುಗಳನ್ನು ಕಳುಹಿಸಲು ಒಕ್ಕಲಿಗರು ಅವನ ಆಳುಗಳನ್ನು ಹಿಡುಕೊಂಡು ಒಬ್ಬನನ್ನು ಹೊಡೆದರು, ಒಬ್ಬನನ್ನು ಕಡಿದು ಹಾಕಿದರು, ಒಬ್ಬನನ್ನು ಕಲ್ಲಿಸೆದು ಕೊಂದರು. ಪುನಃ ಮೊದಲಿನವರಿಗಿಂತ ಹೆಚ್ಚು ಮಂದಿ ಆಳುಗಳನ್ನು ಕಳುಹಿಸಿದನು. ಅವರಿಗೂ ಹಾಗೆಯೇ ಮಾಡಿದನು.”
“ಮನೆಯ ಯಜಮಾನನಾದ” ಯೆಹೋವ ದೇವರು ಅವನ “ದ್ರಾಕ್ಷೇತೋಟದ” “ಒಕ್ಕಲಿಗರಿಗೆ” ಕಳುಹಿಸಿದ “ಆಳುಗಳು” ಪ್ರವಾದಿಗಳಾಗಿದ್ದರು. ಇಸ್ರಾಯೇಲ್ ಜನಾಂಗದ ಮುಖ್ಯ ಪ್ರತಿನಿಧಿಗಳು ಈ ಒಕ್ಕಲಿಗರಾಗಿದ್ದರು, ಈ ಜನಾಂಗವನ್ನು ದೇವರ “ದ್ರಾಕ್ಷೇತೋಟ” ಎಂದು ಬೈಬಲು ಗುರುತಿಸುತ್ತದೆ.
“ಒಕ್ಕಲಿಗರು” “ಆಳುಗಳನ್ನು” ಕೆಟ್ಟದ್ದಾಗಿ ಉಪಚರಿಸಿ, ಕೊಲ್ಲುವದರಿಂದ, ಯೇಸುವು ವಿವರಿಸುವದು: “ಕಡೆಯಲ್ಲಿ [ದ್ರಾಕ್ಷೇತೋಟದ ಧನಿಯು] ನನ್ನ ಮಗನಿಗಾದರೂ ಮರ್ಯಾದೆ ತೋರಿಸಾರು ಅಂದುಕೊಂಡು ತನ್ನ ಮಗನನ್ನು ಕಳುಹಿಸಿದನು. ಆದರೆ ಒಕ್ಕಲಿಗರು ಅವನ ಮಗನನ್ನು ಕಂಡು—ಇವನೇ ಬಾಧ್ಯಸ್ಥನು, ಬನ್ನಿ ಇವನನ್ನು ಕೊಂದುಹಾಕೋಣ, ಇವನ ಸ್ವಾಸ್ಥ್ಯವನ್ನು ನಾವೇ ತೆಗೆದುಕೊಳ್ಳೋಣ ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡು ಅವನನ್ನು ಹಿಡಿದು ದ್ರಾಕ್ಷೇತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು.”
ಈಗ ಧಾರ್ಮಿಕ ಮುಖಂಡರುಗಳನ್ನು ಸಂಬೋಧಿಸುತ್ತಾ, ಯೇಸುವು ವಿಚಾರಿಸುವದು: “ಹಾಗಾದರೆ ದ್ರಾಕ್ಷೇತೋಟದ ಧಣಿಯು ಬಂದಾಗ ಆ ಒಕ್ಕಲಿಗರಿಗೆ ಏನು ಮಾಡುವನು?”
“ಆ ಕೆಡುಕರನ್ನು” ಧಾರ್ಮಿಕ ಮುಖಂಡರುಗಳು ಉತ್ತರಿಸುವದು, “ಕ್ರೂರವಾಗಿ ಸಂಹರಿಸಿ ಕಾಲಕಾಲಕ್ಕೆ ಹಣ್ಣುಗಳನ್ನು ತನಗೆ ಸಲ್ಲಿಸುವಂಥ ಬೇರೆ ಒಕ್ಕಲಿಗರಿಗೆ ತನ್ನ ತೋಟವನ್ನು ವಾರಕ್ಕೆ ಕೊಡುವನು.”
ಈ ರೀತಿಯಲ್ಲಿ, ಅವರಿಗೆ ಅರಿವಿಲ್ಲದೆ ಸ್ವತಃ ತಮ್ಮ ಮೇಲೆ ಅವರು ನ್ಯಾಯತೀರ್ಪನ್ನು ಮಾಡಿಕೊಳ್ಳುತ್ತಾರೆ, ಯಾಕಂದರೆ ಯೆಹೋವನ ಇಸ್ರಾಯೇಲ್ ಎಂಬ ರಾಷ್ಟ್ರೀಯ “ದ್ರಾಕ್ಷೇತೋಟದ” ಇಸ್ರಾಯೇಲ್ “ಒಕ್ಕಲಿಗರಲ್ಲಿ” ಅವರೂ ಸೇರಿರುತ್ತಾರೆ. ಆ ಒಕ್ಕಲಿಗರಿಂದ ಯೆಹೋವನು ನಿರೀಕ್ಷಿಸುವ ಫಲವು ನಿಜ ಮೆಸ್ಸೀಯನಾದ ಅವನ ಮಗನ ಮೇಲೆ ನಂಬಿಕೆಯನ್ನಿಡುವದಾಗಿದೆ. ಅಂಥಹ ಫಲಗಳನ್ನು ಒದಗಿಸಲು ಅವರು ಸೋತ ಕಾರಣ, ಯೇಸುವು ಎಚ್ಚರಿಸುವದು: “ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು, ಇದು ಕರ್ತನಿಂದಲೇ [ಯೆಹೋವನಿಂದಲೇ, NW] ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ ಎಂಬುವ ಮಾತನ್ನು ಶಾಸ್ತ್ರದಲ್ಲಿ (ಕೀರ್ತನೆ 118:22, 23 ರಲ್ಲಿ) ಎಂದಾದರೂ ಓದಲಿಲ್ಲವೋ? ಆದದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು. ಈ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು; ಇದು ಯಾರ ಮೇಲೆ ಬೀಳುತ್ತದೋ ಅವನನ್ನು ಪುಡಿಪುಡಿಮಾಡುವದು.”
ಯೇಸುವು ತಮ್ಮ ಕುರಿತೇ ಮಾತಾಡುತ್ತಾನೆಂದು ಶಾಸ್ತ್ರಿಗಳೂ ಮಹಾಯಾಜಕರೂ ಈಗ ತಿಳಿದುಕೊಳ್ಳುತ್ತಾರೆ ಮತ್ತು ನ್ಯಾಯಬದ್ಧ “ಬಾಧ್ಯಸ್ಥ”ನಾದ ಅವನನ್ನು ಕೊಲ್ಲಲು ಅವರು ಬಯಸುತ್ತಾರೆ. ಒಂದು ಜನಾಂಗದೋಪಾದಿ ದೇವರ ರಾಜ್ಯದಲ್ಲಿ ಅರಸರಾಗಿರುವ ಸುಯೋಗವು ಅವರಿಂದ ತೆಗೆಯಲ್ಪಡುವದು ಮತ್ತು ‘ದ್ರಾಕ್ಷೇತೋಟದ ಒಕ್ಕಲಿಗರಾಗಿ’ ತಕ್ಕದ್ದಾದ ಫಲಗಳನ್ನು ಉತ್ಪಾದಿಸುವ ಒಂದು ಹೊಸ ಜನಾಂಗವನ್ನು ರಚಿಸಲಾಗುವದು.
ಯೇಸುವು ಒಬ್ಬ ಪ್ರವಾದಿಯೆಂದು ಜನರು ಎಣಿಸಿದ್ದರಿಂದ, ಧಾರ್ಮಿಕ ಮುಂದಾಳುಗಳು ಜನರಿಗೆ ಭಯಪಟ್ಟು, ಆ ಸಂದರ್ಭದಲ್ಲಿ ಯೇಸುವನ್ನು ಕೊಲ್ಲಲು ಪ್ರಯತ್ನಿಸಲಿಲ್ಲ. ಮತ್ತಾಯ 21:28-46; ಮಾರ್ಕ 12:1-12; ಲೂಕ 20:9-19; ಯೆಶಾಯ 5:1-7.
▪ ಯೇಸುವಿನ ಮೊದಲ ಸಾಮ್ಯದಲ್ಲಿನ ಇಬ್ಬರು ಮಕ್ಕಳು ಯಾರನ್ನು ಪ್ರತಿನಿಧಿಸುತ್ತಾರೆ?
▪ ಎರಡನೆಯ ಸಾಮ್ಯದಲ್ಲಿ “ಮನೆಯ ಯಜಮಾನನು,” “ದ್ರಾಕ್ಷೇತೋಟ,” “ಒಕ್ಕಲಿಗರು,” “ಆಳುಗಳು,” ಮತ್ತು “ಬಾಧ್ಯಸ್ಥನು” ಯಾರನ್ನು ಪ್ರತಿನಿಧಿಸುತ್ತಾರೆ?
▪ ‘ದ್ರಾಕ್ಷೇತೋಟದ ಒಕ್ಕಲಿಗರು’ ಯಾರು ಆಗಲಿದ್ದರು, ಮತ್ತು ಅವರನ್ನು ಯಾರು ಸ್ಥಾನಪಲ್ಲಟ ಮಾಡುವರು?
-
-
ಮದುವೆ ಊಟದ ಸಾಮ್ಯಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 107
ಮದುವೆ ಊಟದ ಸಾಮ್ಯ
ಎರಡು ಸಾಮ್ಯಗಳ ಮೂಲಕ ಯೇಸುವು ಶಾಸ್ತ್ರಿಗಳ ಮತ್ತು ಮಹಾ ಯಾಜಕರುಗಳ ಮೋಸವನ್ನು ಬಯಲುಗೊಳಿಸಿದನು, ಇದರಿಂದ ಅವರು ಇವನನ್ನು ಕೊಲ್ಲಲು ಬಯಸಿದರು. ಆದರೆ ಯೇಸುವು ಅವರನ್ನು ಪೂರ್ತಿಯಾಗಿ ಭೇದಿಸಲಿದ್ದನು. ಅವರಿಗೆ ಇನ್ನೂ ಒಂದು ಸಾಮ್ಯವನ್ನು ಅವನು ತಿಳಿಸುತ್ತಾ ಅಂದದ್ದು:
“ಪರಲೋಕ ರಾಜ್ಯವು ಮಗನಿಗೆ ಮದುವೆ ಮಾಡಿದ [ಮದುವೆ ಊಟ ಮಾಡಿಸಿದ, NW] ಒಬ್ಬ ಅರಸನಿಗೆ ಹೋಲಿಕೆಯಾಗಿದೆ. ಅವನು ಮದುವೆಗೆ [ಊಟಕ್ಕೆ] ಹೇಳಿಸಿಕೊಂಡವರನ್ನು ಕರೆಯುವದಕ್ಕೆ ತನ್ನ ಆಳುಗಳನ್ನು ಕಳುಹಿಸಲು, ಬರುವದಕ್ಕೆ ಅವರಿಗೆ ಮನಸ್ಸಿರಲಿಲ್ಲ.”
ಯೆಹೋವ ದೇವರು ಅರಸನಾಗಿದ್ದು ಅವನ ಮಗನಾದ ಯೇಸು ಕ್ರಿಸ್ತನ ಮದುವೆ ಊಟವನ್ನು ಸಿದ್ಧಗೊಳಿಸುತ್ತಾನೆ. ಕಟ್ಟಕಡೆಗೆ 1,44,000 ಅಭಿಷಿಕ್ತ ಹಿಂಬಾಲಕರಿರುವ ಮದಲಗಿತ್ತಿಯು ಪರಲೋಕದಲ್ಲಿ ಯೇಸುವಿನೊಂದಿಗೆ ಐಕ್ಯಗೊಳ್ಳುವದು. ಅರಸನ ಪ್ರಜೆಗಳು ಇಸ್ರಾಯೇಲ್ ಜನರಾಗಿದ್ದರು, ಅವರು ಸಾ.ಶ.ಪೂ. 1513ರಲ್ಲಿ ನಿಯಮದೊಡಂಬಡಿಕೆಯೊಳಗೆ ತರಲ್ಪಟ್ಟು, “ಯಾಜಕರಾಜ್ಯ” ಆಗುವ ಒಂದು ಅವಕಾಶವನ್ನು ಪಡೆದರು. ಹೀಗೆ ಆ ಸಂದರ್ಭದಲ್ಲಿ ಮದುವೆಯ ಊಟಕ್ಕೆ ಆಮಂತ್ರಣವು ಮೂಲದಲ್ಲಿ ಅವರಿಗೆ ನೀಡಲ್ಪಟ್ಟಿತು.
ಆದಾಗ್ಯೂ, ಯೇಸುವೂ ಅವನ ಶಿಷ್ಯರೂ (ಅರಸನ ಆಳುಗಳು) ರಾಜ್ಯದ ಸಾರುವಿಕೆಯನ್ನು ಆರಂಭಿಸುವ ತನಕ ಅಂದರೆ ಸಾ.ಶ. 29ರ ಮಾಗಿ ಕಾಲದ ತನಕ ಆಮಂತ್ರಿತರಿಗೆ ಮೊದಲ ಕರೆಯು ಕೊಡಲ್ಪಡಲಿಲ್ಲ. ಆದರೆ ಸಾ.ಶ. 29 ರಿಂದ ಸಾ.ಶ. 33ರ ತನಕ ಆಳುಗಳಿಂದ ಕೊಡಲ್ಪಟ್ಟ ಈ ಕರೆಯನ್ನು ಪಡೆದ ಮಾಂಸಿಕ ಇಸ್ರಾಯೇಲ್ಯರು ಬರುವದಕ್ಕೆ ಮನಸ್ಸಿಲ್ಲದವರಾಗಿದ್ದರು. ಆದುದರಿಂದ ದೇವರು ಅಮಂತ್ರಿತರ ಜನಾಂಗಕ್ಕೆ ಇನ್ನೊಂದು ಸಂದರ್ಭವನ್ನು ಕೊಡುತ್ತಾನೆ, ಯೇಸುವು ವರ್ಣಿಸುವದು:
“ತಿರಿಗಿ ಬೇರೆ ಆಳುಗಳನ್ನು ಕರೆದು—ನೀವು ಊಟಕ್ಕೆ ಹೇಳಿಸಿಕೊಂಡವರ ಬಳಿಗೆ ಹೋಗಿ—ಇಗೋ, ಅಡಿಗೆ ಸಿದ್ಧವಾಗಿದೆ; ನನ್ನ ಹೋರಿಗಳನ್ನೂ ಕೊಬ್ಬಿದ ಪಶುಗಳನ್ನೂ ಕೊಯಿಸಿದ್ದೇನೆ; ಎಲ್ಲಾ ಸಿದ್ಧವಾಗಿದೆ; ಮದುವೆಯ ಊಟಕ್ಕೆ ಬನ್ನಿರೆಂದು ಅವರಿಗೆ ಹೇಳಿರೆಂದು ಅಪ್ಪಣೆಕೊಟ್ಟು ಕಳುಹಿಸಿದನು.” ಆಮಂತ್ರಿತರಿಗೆ ಎರಡನೆಯ ಹಾಗೂ ಕೊನೆಯ ಕರೆಯನ್ನು ಸಾ.ಶ. 33ರ ಪಂಚಾಶತ್ತಮದಲ್ಲಿ ಕೊಡಲು ಆರಂಭವಾಯಿತು, ಆಗ ಯೇಸುವಿನ ಹಿಂಬಾಲಕರ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಿತು. ಈ ಕರೆಯು ಸಾ.ಶ. 36ರ ತನಕ ಮುಂದುವರಿಯಿತು.
ಆದರೂ, ಇಸ್ರಾಯೇಲ್ಯರ ಅಧಿಕಾಂಶ ಜನರು ಈ ಕರೆಯನ್ನು ಸಹ ತಿರಸ್ಕರಿಸಿದರು. “ಆದರೆ ಅವರು ಅಲಕ್ಷ್ಯಮಾಡಿ,” ಯೇಸುವು ಹೇಳುವದು, “ಒಬ್ಬನು ತನ್ನ ಹೊಲಕ್ಕೆ ಒಬ್ಬನು ತನ್ನ ವ್ಯಾಪಾರಕ್ಕೆ ಹೋಗಿಬಿಟ್ಟರು; ಉಳಿದವರು ಅವನ ಆಳುಗಳನ್ನು ಹಿಡಿದು ಬೈದು ಕೊಂದುಹಾಕಿದರು.” “ಆದರೆ” ಯೇಸುವು ಮುಂದರಿಸುವದು, “ಅರಸನು ಸಿಟ್ಟುಗೊಂಡು ತನ್ನ ದಂಡುಗಳನ್ನು ಕಳುಹಿಸಿ ಆ ಕೊಲೆಗಾರರನ್ನು ನಾಶಮಾಡಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.” ಇದು ಸಾ.ಶ. 70 ರಲ್ಲಿ ಸಂಭವಿಸಿತು, ಆಗ ಯೆರೂಸಲೇಮ್ ರೋಮನರಿಂದ ನೆಲಸಮಗೊಳಿಸಲ್ಪಟ್ಟಿತು ಮತ್ತು ಆ ಕೊಲೆಗಾರರು ಕೊಲ್ಲಲ್ಪಟ್ಟರು.
ಅನಂತರ ಯೇಸುವು ತನ್ಮಧ್ಯೆ ಏನು ಸಂಭವಿಸಿತು ಎನ್ನುವದನ್ನು ವಿವರಿಸುತ್ತಾನೆ: “ಆಗ [ಅರಸನು] ತನ್ನ ಆಳುಗಳಿಗೆ—ಮದುವೆಗೆ ಸಿದ್ಧವಾಗಿದೆ ಸರಿ, ಆದರೆ ಕರೆಯಲ್ಪಟ್ಟವರು ಯೋಗ್ಯರಾಗಿರಲಿಲ್ಲ. ನೀವು ಈಗ ನಾಲ್ಕು ಹಾದಿಗಳು ಕೂಡುವ ಸ್ಥಳಗಳಿಗೆ ಹೋಗಿ ಕಂಡವರನ್ನೆಲ್ಲಾ ಮದುವೆಯ ಊಟಕ್ಕೆ ಕರೆಯಿರಿ ಎಂದು ಹೇಳಿದನು. ಆ ಆಳುಗಳು ಇದನ್ನು ಮಾಡಿದರು, ಮತ್ತು “ಮೇಜಿನ ಮೇಲೆ ಊಟಕ್ಕೆ ಕೂತವರಿಂದ ಮದುವೆಯ ಸಂಭ್ರಮದ ಕೋಣೆಯು ತುಂಬಿಕೊಂಡಿತು.” (NW)
ಆಮಂತ್ರಿತರ ಪಟ್ಟಣದ ಹೊರಗೆ ಹಾದಿಗಳಿಂದ ಅತಿಥಿಗಳನ್ನು ಒಟ್ಟುಗೂಡಿಸುವ ಕಾರ್ಯವು ಸಾ.ಶ. 36 ರಿಂದ ಆರಂಭಗೊಂಡಿತು. ರೋಮೀಯ ಸೇನಾಧಿಕಾರಿಯಾದ ಕೊರ್ನೇಲ್ಯನೂ, ಅವನ ಕುಟುಂಬವೂ, ಸುನ್ನತಿಯಾಗದ ಯೆಹೂದ್ಯೇತರರು ಒಟ್ಟುಗೂಡಿಸಲ್ಪಟ್ಟವರಲ್ಲಿ ಮೊದಲನೆಯವರು. ಈ ಯೆಹೂದ್ಯೇತರರ ಒಟ್ಟುಗೂಡಿಸುವಿಕೆಯು, ಎಲ್ಲರೂ ಮೂಲ ಕರೆಗೆ ಓಗೊಡಲು ನಿರಾಕರಿಸಿದವರ ಸ್ಥಾನದಲ್ಲಿ ಬದಲಿಯಾಗಿ ಬಂದವರಾಗಿದ್ದು, ಅದು ಈ 20-ನೆಯ ಶತಮಾನದ ತನಕ ಮುಂದುವರಿದದೆ.
ಈ 20-ನೆಯ ಶತಮಾನದಲ್ಲಿ ಮದುವೆಯ ಸಂಭ್ರಮದ ಕೋಣೆಯು ತುಂಬಿಕೊಳ್ಳುತ್ತದೆ. ಅನಂತರ ಏನಾಯಿತು ಎಂದು ಯೇಸುವು ಹೇಳುತ್ತಾನೆ: “ಆ ಮೇಲೆ ಅರಸನು ಕೂತವರನ್ನು ನೋಡುವದಕ್ಕೆ ಒಳಕ್ಕೆ ಬರಲಾಗಿ ಮದುವೇಬಟ್ಟೆಯನ್ನು ಹಾಕಿಕೊಳ್ಳದ ಒಬ್ಬನನ್ನು ಕಂಡು ಅವನನ್ನು—ಏನಪ್ಪಾ, ಮದುವೆಯ ಬಟ್ಟೆ ಇಲ್ಲದೆ ನೀನಿಲ್ಲಿ ಹೇಗೆ ಒಳಕ್ಕೆ ಬಂದಿ ಎಂದು ಕೇಳಲು ಅವನು ಸುಮ್ಮನಿದ್ದನು. ಆ ಮೇಲೆ ಅರಸನು ಸೇವಕರಿಗೆ—ಅವನ ಕೈಕಾಲು ಕಟ್ಟಿ ಅವನನ್ನು ಹೊರಗೆ ಕತ್ತಲೆಗೆ ನೂಕಿರಿ ಎಂದು ಹೇಳಿದನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.”
ಮದುವೆಯ ಬಟ್ಟೆಯಿಲ್ಲದ ವ್ಯಕ್ತಿಯು ಕ್ರೈಸ್ತ ಧರ್ಮದ ಖೋಟಾ ಕ್ರೈಸ್ತರನ್ನು ಚಿತ್ರಿಸುತ್ತಾನೆ. ಆತ್ಮಿಕ ಇಸ್ರಾಯೇಲ್ಯರೋಪಾದಿ ಯೋಗ್ಯವಾದ ಗುರುತು ಇವರಿಗಿದೆ ಎಂದು ದೇವರು ಅವರನ್ನು ಎಂದಿಗೂ ಅಂಗೀಕರಿಸಿರಲಿಲ್ಲ. ರಾಜ್ಯದ ಬಾಧ್ಯಸ್ಥರನ್ನಾಗಿ ದೇವರು ಅವರನ್ನು ಎಂದಿಗೂ ಪವಿತ್ರಾತ್ಮದಿಂದ ಅಭಿಪಷೇಕ ಮಾಡಿರಲಿಲ್ಲ. ಆದುದರಿಂದ ನಾಶನವನ್ನು ಹೊಂದುವ ಕತ್ತಲೆಯೊಳಗೆ ಅವರು ನೂಕಲ್ಪಟ್ಟರು.
ಯೇಸುವು ತನ್ನ ಸಾಮ್ಯವನ್ನು ಹೀಗನ್ನುತ್ತಾ ಸಮಾಪ್ತಿಗೊಳಿಸುತ್ತಾನೆ: “ಹೀಗೆ ಕರೆಯಲ್ಪಟ್ಟವರು ಬಹು ಜನ, ಆಯಲ್ಪಟ್ಟವರು ಸ್ವಲ್ಪ ಜನ.” ಹೌದು, ಕ್ರಿಸ್ತನ ಮದಲಗಿತ್ತಿಯ ಸದಸ್ಯರಾಗಲು ಇಸ್ರಾಯೇಲ್ ಜನಾಂಗದಿಂದ ಬಹುಮಂದಿಯನ್ನು ಕರೆಯಲಾಗಿತ್ತು, ಆದರೆ ಕೆಲವೇ ಮಾಂಸಿಕ ಇಸ್ರಾಯೇಲ್ಯರು ಆರಿಸಲ್ಪಟ್ಟರು. ಸ್ವರ್ಗೀಯ ಬಹುಮಾನ ಪಡೆಯುವ 1,44,000 ಮಂದಿ ಅತಿಥಿಗಳಲ್ಲಿ ಅಧಿಕ ಸಂಖ್ಯಾತರು ಇಸ್ರಾಯೇಲ್ಯರಲ್ಲದವರಾಗಿರುತ್ತಾರೆಂದು ರುಜುವಾಯಿತು. ಮತ್ತಾಯ 22:1-14; ವಿಮೋಚನಕಾಂಡ 19:1-6; ಪ್ರಕಟನೆ 14:1-3.
▪ ಮದುವೆಯ ಊಟಕ್ಕೆ ಮೂಲದಲ್ಲಿ ಆಮಂತ್ರಿಸಲ್ಪಟ್ಟವರು ಯಾರು, ಮತ್ತು ಅವರಿಗೆ ಈ ಆಮಂತ್ರಣವು ನೀಡಲ್ಪಟ್ಟದ್ದು ಯಾವಾಗ?
▪ ಆಮಂತ್ರಿತರಿಗೆ ಮೊದಲ ಕರೆಯು ಯಾವಾಗ ಕೊಡಲ್ಪಟ್ಟಿತು, ಮತ್ತು ಇದನ್ನು ಕೊಡಲು ಉಪಯೋಗಿಸಲ್ಪಟ್ಟ ಆಳುಗಳು ಯಾರು?
▪ ಎರಡನೆಯ ಕರೆಯು ಯಾವಾಗ ಕೊಡಲ್ಪಟ್ಟಿತು, ಮತ್ತು ಅನಂತರ ಯಾರನ್ನು ಅಮಂತ್ರಿಸಲಾಯಿತು?
▪ ಮದುವೆಯ ಬಟ್ಟೆಯಿಲ್ಲದ ವ್ಯಕ್ತಿಯಿಂದ ಯಾರು ಚಿತ್ರಿಸಲ್ಪಟ್ಟಿರುತ್ತಾನೆ?
▪ ಕರೆಯಲ್ಪಟ್ಟ ಬಹುಮಂದಿ ಮತ್ತು ಆಯಲ್ಪಟ್ಟ ಸ್ವಲ್ಪ ಜನ ಯಾರು?
-
-
ಯೇಸುವನ್ನು ಸಿಕ್ಕಿಸಿಹಾಕುವದರಲ್ಲಿ ಅವರು ಸೋತುಹೋಗುತ್ತಾರೆಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 108
ಯೇಸುವನ್ನು ಸಿಕ್ಕಿಸಿಹಾಕುವದರಲ್ಲಿ ಅವರು ಸೋತುಹೋಗುತ್ತಾರೆ
ಯೇಸುವು ದೇವಾಲಯದಲ್ಲಿ ಉಪದೇಶಿಸುತ್ತಿದ್ದನು ಮತ್ತು ಅವನ ಧಾರ್ಮಿಕ ಶತ್ರುಗಳಿಗೆ, ಅವರ ದುಷ್ಟತನವನ್ನು ಬಯಲುಗೊಳಿಸುವ ಮೂರು ಸಾಮ್ಯಗಳ ತಿಳಿಸಿದ್ದರ ಕಾರಣ, ಫರಿಸಾಯರು ಸಿಟ್ಟುಗೊಂಡು, ಅವನನ್ನು ದಸ್ತಗಿರಿ ಮಾಡಲು ಸಾಧ್ಯವಾಗುವಂತೆ ಏನಾದರೂ ಒಂದು ವಿಷಯದಲ್ಲಿ ಅವನನ್ನು ಸಿಕ್ಕಿಸಿಹಾಕಲು ಆಲೋಚನೆ ಮಾಡಿದರು. ಅವರೊಂದು ಹಂಚಿಕೆಯನ್ನು ಹೂಡಿ, ಅವನನ್ನು ಸಿಕ್ಕಿಸಿ ಹಾಕಲು ತಮ್ಮ ಶಿಷ್ಯರನ್ನು ಹೆರೋದಿಯರ ಕೂಡ ಕಳುಹಿಸಿದರು.
“ಗುರುವೇ,” ಈ ಮನುಷ್ಯರು ಹೇಳುವದು, “ನೀನು ಸತ್ಯವಂತನು, ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನು, ಯಾರಿಗೂ ಹೆದರದವನು; ನೀನು ಜನರ ಮುಖದಿಚ್ಛೆಗೆ ಮಾತಾಡುವವನಲ್ಲ ಎಂದು ಬಲ್ಲೆವು. ಹೀಗಿರಲಾಗಿ ಕೈಸರನಿಗೆ ತೆರಿಗೆ ಕೊಡುವದು ಸರಿಯೋ ಸರಿಯಲ್ಲವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು.”
ಮುಖಸುತ್ತಿಯಿಂದ ಯೇಸುವು ಮರುಳಾಗಲಿಲ್ಲ. ‘ಅಲ್ಲ, ಈ ತೆರಿಗೆಯನ್ನು ಕೊಡುವದು ಕಾನೂನುಬದ್ಧವಲ್ಲ ಯಾ ಸರಿಯಲ್ಲ’ ಎಂದು ಅವನು ಹೇಳಿದರೆ, ರೋಮಿನ ವಿರುದ್ಧ ದೇಶದ್ರೋಹಕ್ಕೆ ದೋಷಿಯಾಗುತ್ತಿದ್ದನು ಎಂದು ತಿಳಿದು ಕೊಂಡನು. ಆದರೂ, ಅವನು ‘ಹೌದು, ನೀವು ತೆರಿಗೆ ಕೊಡತಕ್ಕದ್ದು’ ಎಂದು ಹೇಳಿದರೆ, ರೋಮಿನ ಅಡಿಯಾಳಾಗಿ ಇರುವದನ್ನು ಧಿಕ್ಕರಿಸುತ್ತಿದ್ದ ಯೆಹೂದ್ಯರು ಅವನನ್ನು ದ್ವೇಷಿಸಾರು. ಆದುದರಿಂದ ಅವನು ಉತ್ತರಿಸುವದು: “ಕಪಟಿಗಳೇ, ನನ್ನನ್ನು ಯಾಕೆ ಪರೀಕ್ಷೆ ಮಾಡುತ್ತೀರಿ? ತೆರಿಗೆಗೆ ಕೊಡುವ ನಾಣ್ಯವನ್ನು ನನಗೆ ತೋರಿಸಿರಿ.”
ಅವರು ಆತನಿಗೆ ಒಂದು ನಾಣ್ಯವನ್ನು ತಂದಾಗ, ಅವನು ವಿಚಾರಿಸುವದು: “ಈ ತಲೆಯೂ ಈ ಮುದ್ರೆಯೂ ಯಾರದು?”
“ಕೈಸರನದು” ಎಂದವರು ಉತ್ತರಿಸಿದರು.
“ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ; ಆದರೆ ದೇವರದನ್ನು ದೇವರಿಗೆ ಕೊಡಿರಿ.” ಒಳ್ಳೇದು, ಯೇಸುವಿನ ಕೌಶಲ್ಯತೆಯ ಉತ್ತರವನ್ನು ಈ ಮನುಷ್ಯರು ಕೇಳಿದಾಗ, ಅವರು ಆಶ್ಚರ್ಯ ಪಡುತ್ತಾರೆ. ಅವರು ಅವನನ್ನು ಏಕಾಂಗಿಯಾಗಿ ಬಿಟ್ಟು ತೆರಳುತ್ತಾರೆ.
ಯೇಸುವಿನ ವಿರುದ್ಧವಾಗಿ ಯಾವದನ್ನಾದರೂ ಕಂಡುಕೊಳ್ಳಲು ಫರಿಸಾಯರು ಸೋತದ್ದನ್ನು ಕಂಡು, ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅವನನ್ನು ಸಮೀಪಿಸಿ ಕೇಳುವದು: “ಬೋಧಕನೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದನಷ್ಟೇ. ಆದರೆ ನಮ್ಮಲ್ಲಿ ಏಳು ಮಂದಿ ಅಣ್ಣತಮ್ಮಂದಿರಿದ್ದರು. ಮೊದಲನೆಯವನು ಮದುವೆಯಾಗಿ ತೀರಿಹೋದನು. ಅವನಿಗೆ ಸಂತಾನವಿಲ್ಲದ ಕಾರಣ ಹೆಂಡತಿಯನ್ನು ತನ್ನ ತಮ್ಮನಿಗೆ ಬಿಟ್ಟನು; ಅದರಂತೆ ಎರಡನೆಯವನೂ ಮೂರನೆಯವನೂ ಮುಂತಾದವರು ಏಳನೆಯವನ ವರೆಗೂ ಮಾಡಿದರು. ಅವರೆಲ್ಲರು ಸತ್ತ ಮೇಲೆ ಆ ಹೆಂಗಸೂ ಸತ್ತಳು. ಹಾಗಾದರೆ ಪುನರುತ್ಥಾನದಲ್ಲಿ ಆಕೆ ಆ ಏಳು ಮಂದಿಯಲ್ಲಿ ಯಾರ ಹೆಂಡತಿಯಾಗಿರುವಳು? ಆಕೆಯನ್ನು ಅವರೆಲ್ಲರೂ ಮದುವೆಮಾಡಿ ಕೊಂಡಿದ್ದರಲ್ಲಾ.”
ಉತ್ತರವಾಗಿ ಯೇಸುವು ಹೇಳಿದ್ದು: “ನೀವು ಶಾಸ್ತ್ರವನ್ನಾದರೂ ದೇವರ ಶಕ್ತಿಯನ್ನಾದರೂ ತಿಳಿಯದೆ ತಪ್ಪುವವರಾಗಿದ್ದೀರಿ; ಸತ್ತವರು ಬದುಕಿ ಎದ್ದ ಮೇಲೆ ಮದುವೆ ಮಾಡಿ ಕೊಳ್ಳುವದೂ ಇಲ್ಲ, ಮಾಡಿ ಕೊಡುವದೂ ಇಲ್ಲ; ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ. ಆದರೆ ಸತ್ತವರು ಬದುಕಿ ಏಳುತ್ತಾರೆಂಬ ವಿಷಯದಲ್ಲಿ ಹೇಳಬೇಕಾದರೆ—ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ದೇವರು ಮೋಶೆಗೆ ನುಡಿದದ್ದನ್ನು ನೀವು ಮೋಶೆಯ ಗ್ರಂಥದಲ್ಲಿ ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿ ಓದಲಿಲ್ಲವೇ? ಆತನು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ; ನೀವು ಹಿಡಿದ ಅಭಿಪ್ರಾಯವು ಬಹು ತಪ್ಪಾಗಿದೆ.”
ಯೇಸುವಿನ ಉತ್ತರದಿಂದ ಜನರ ಗುಂಪು ಪುನಃ ಅತ್ಯಾಶ್ಚರ್ಯ ಪಟ್ಟಿತು. ಶಾಸ್ತ್ರಿಗಳಲ್ಲಿ ಕೂಡ ಕೆಲವರು ಇದನ್ನು ಅಂಗೀಕರಿಸಿದರು: “ಬೋಧಕನೇ, ಚೆನ್ನಾಗಿ ಹೇಳಿದಿ.”
ಯೇಸುವು ಸದ್ದುಕಾಯರ ಬಾಯಿ ಕಟ್ಟಿದನೆಂದು ಫರಿಸಾಯರು ನೋಡಿದಾಗ, ಅವರು ಒಂದು ಗುಂಪಾಗಿ ಅವನ ಬಳಿಗೆ ಬಂದರು. ಅವನನ್ನು ಇನ್ನಷ್ಟು ಪರೀಕ್ಷಿಸಲು ಅವರಲ್ಲಿ ಒಬ್ಬ ಶಾಸ್ತ್ರಿಯು ಕೇಳುವದು: “ಗುರುವೇ, ಧರ್ಮಶಾಸ್ತ್ರದಲ್ಲಿ ಯಾವ ಆಜ್ಞೆ ಮುಖ್ಯವಾದದ್ದು?”
ಯೇಸುವು ಉತ್ತರಿಸುವದು: “ಇಸ್ರಾಯೇಲ್ ಜನವೇ ಕೇಳು, ನಮ್ಮ ದೇವರಾದ ಕರ್ತನು [ಯೆಹೋವನು] ಒಬ್ಬನೇ ದೇವರು [ಯೆಹೋವನು]; ನಿನ್ನ ದೇವರಾದ ಕರ್ತನನ್ನು [ಯೆಹೋವನನ್ನು] ಪೂರ್ಣ ಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣ ಬುದ್ಧಿಯಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು ಎಂಬದೇ ಮೊದಲನೆಯ ಆಜ್ಞೆ; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ ಎರಡನೆಯ ಆಜ್ಞೆ; ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ.” ವಾಸ್ತವದಲ್ಲಿ ಯೇಸುವು ಕೂಡಿಸುವದು: “ಈ ಎರಡು ಆಜ್ಞೆಗಳು ಎಲ್ಲಾ ಧರ್ಮಶಾಸ್ತ್ರಕ್ಕೂ ಪ್ರವಾದನಗ್ರಂಥಕ್ಕೂ ಆಧಾರವಾಗಿವೆ.”
“ಬೋಧಕನೇ, ಚೆನ್ನಾಗಿ ಹೇಳಿದೆ” ಆ ಶಾಸ್ತ್ರಿಯು ಒಪ್ಪುತ್ತಾನೆ. “ಒಬ್ಬನೇ ಇದ್ದಾನೆ, ಆತನ ಹೊರತು ಮತ್ತೊಬ್ಬ ದೇವರಿಲ್ಲ ಎಂದು ನೀನು ಹೇಳಿದ್ದು ಸತ್ಯ. ಆತನನ್ನು ಪೂರ್ಣ ಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣ ಬುದ್ಧಿಯಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸುವದು ಮತ್ತು ತನ್ನನ್ನು ಪ್ರೀತಿಸಿಕೊಳ್ಳುವಂತೆ ತನ್ನ ನೆರೆಯವನನ್ನು ಪ್ರೀತಿಸುವದು ಇವೆರಡೂ ಎಲ್ಲಾ ಸರ್ವಾಂಗಹೋಮಗಳಿಗಿಂತಲೂ ಎಲ್ಲಾ ಯಜ್ಞಗಳಿಗಿಂತಲೂ ಹೆಚ್ಚಿನವು.”
ಶಾಸ್ತ್ರಿಯು ಬುದ್ಧಿಯಿಂದ ಉತ್ತರಕೊಟ್ಟದ್ದನ್ನು ಯೇಸುವು ವಿವೇಚಿಸಿ, ಅವನಂದದ್ದು: “ನೀನು ದೇವರ ರಾಜ್ಯದಿಂದ ದೂರವಾದವನಲ್ಲ.”
ಈಗ ಮೂರು ದಿನಗಳಿಂದ—ಆದಿತ್ಯವಾರ, ಸೋಮವಾರ ಮತ್ತು ಮಂಗಳವಾರ—ಯೇಸುವು ದೇವಾಲಯದಲ್ಲಿ ಉಪದೇಶಿಸುತ್ತಾ ಇದ್ದನು. ಜನರು ಅವನ ಉಪದೇಶವನ್ನು ಸಂತೋಷದಿಂದ ಆಲಿಸುತ್ತಿದ್ದರಾದರೂ ಧಾರ್ಮಿಕ ಮುಖಂಡರು ಅವನನ್ನು ಕೊಲ್ಲಲು ಹವಣಿಸುತ್ತಿದ್ದರು, ಆದರೆ ಇಷ್ಟರ ತನಕ ಅವರ ಪ್ರಯತ್ನಗಳು ಹತಾಶಕರವಾಗಿದ್ದವು. ಮತ್ತಾಯ 22:15-40;ಮಾರ್ಕ 12:13-34; ಲೂಕ 20:20-40.
▪ ಯೇಸುವನ್ನು ಸಿಕ್ಕಿಸಿಹಾಕಲು ಫರಿಸಾಯರು ಯಾವ ತಂತ್ರವನ್ನು ಹೂಡಿದರು, ಮತ್ತು ಅವನು ಸರಿ ಅಥವಾ ಸರಿಯಲ್ಲ ಎಂಬ ಉತ್ತರ ಕೊಟ್ಟಿದ್ದರೆ ಏನು ಸಂಭವಿಸುವ ಸಂದರ್ಭವಿತ್ತು?
▪ ಅವನನ್ನು ಸಿಕ್ಕಿಸಿಹಾಕಲು ಸದ್ದುಕಾಯರು ಮಾಡಿದ ಯಾವ ಪ್ರಯತ್ನಗಳನ್ನು ಯೇಸುವು ನಿಷ್ಫಲಗೊಳಿಸಿದನು?
▪ ಯೇಸುವನ್ನು ಸಿಕ್ಕಿಸಿಹಾಕಲು ಫರಿಸಾಯರು ಯಾವ ಹೆಚ್ಚಿನ ಪ್ರಯತ್ನ ಮಾಡಿದರು ಮತ್ತು ಅದರ ಫಲಿತಾಂಶವೇನಾಗಿತ್ತು?
▪ ಯೆರೂಸಲೇಮಿನಲ್ಲಿ ಅವನ ಕೊನೆಯ ಶುಶ್ರೂಷೆಯ ಸಮಯದಲ್ಲಿ, ಎಷ್ಟು ದಿನ ಯೇಸುವು ದೇವಾಲಯದಲ್ಲಿ ಕಲಿಸಿದನು ಮತ್ತು ಯಾವ ಪರಿಣಾಮದೊಂದಿಗೆ?
-
-
ತನ್ನ ವಿರೋಧಿಗಳನ್ನು ಯೇಸುವು ಖಂಡಿಸುತ್ತಾನೆಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 109
ತನ್ನ ವಿರೋಧಿಗಳನ್ನು ಯೇಸುವು ಖಂಡಿಸುತ್ತಾನೆ
ಯೇಸುವು ಅವನ ಧಾರ್ಮಿಕ ವಿರೋಧಿಗಳನ್ನು ಎಷ್ಟೊಂದು ದಿಕ್ಕು ತೋಚದಂತೆ ಮಾಡಿದ್ದನೆಂದರೆ ಅಂದಿನಿಂದ ಆತನನ್ನು ಪ್ರಶ್ನೆ ಮಾಡುವದಕ್ಕೆ ಅವರು ಅಂಜಿದರು. ಆದುದರಿಂದ ಅವರ ಅಜ್ಞಾನವನ್ನು ಬಯಲು ಪಡಿಸಲು ಅವನು ತಾನೇ ಮೊದಲ ಹೆಜ್ಜೆಯನ್ನು ತೆಗೆದು ಕೊಳ್ಳುತ್ತಾನೆ. “ಬರಬೇಕಾದ ಕ್ರಿಸ್ತನ ವಿಷಯವಾಗಿ ನಿಮಗೆ ಹೇಗೆ ತೋರುತ್ತದೆ?” ಅವನು ವಿಚಾರಿಸುತ್ತಾನೆ. “ಅವನು ಯಾರ ಮಗನು?”
“ದಾವೀದನ ಮಗನು” ಎಂದು ಫರಿಸಾಯರು ಉತ್ತರಿಸುತ್ತಾರೆ.
ದಾವೀದನು ಕ್ರಿಸ್ತನ ಯಾ ಮೆಸ್ಸೀಯನ ಮಾಂಸಿಕ ಪೂರ್ವಜನಾಗಿದ್ದನು ಎಂಬದನ್ನು ಯೇಸುವು ನಿರಾಕರಿಸದಿದ್ದರೂ, ಅವನು ಕೇಳುವದು: “ಹಾಗಾದರೆ ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ಕರ್ತನು [ಯೆಹೋವನು] ನನ್ನ ಒಡೆಯನಿಗೆ ನುಡಿದನು ಎಂಬ ಮಾತಿನಲ್ಲಿ ದಾವೀದನು ಪವಿತ್ರಾತ್ಮಪ್ರೇರಿತನಾಗಿ [ಕೀರ್ತನೆ 110ರಲ್ಲಿ] ಆತನನ್ನು ಒಡೆಯನು ಅನ್ನುವದು ಹೇಗೆ? ದಾವೀದನು ಆತನನ್ನು ಒಡೆಯನೆಂದು ಹೇಳಿದ ಮೇಲೆ ಆತನು ಅವನಿಗೆ ಮಗನಾಗುವದು ಹೇಗೆ?”
ಫರಿಸಾಯರು ಈಗ ಸುಮ್ಮಗಾಗಿದ್ದರು, ಯಾಕಂದರೆ ಕ್ರಿಸ್ತನ ಅಥವಾ ಅಭಿಷಿಕ್ತನ ನಿಜ ಗುರುತು ಅವರಿಗೆ ತಿಳಿದಿರಲಿಲ್ಲ. ಫರಿಸಾಯರು ಪ್ರಾಯಶಃ ನಂಬುವಂತೆ, ಮೆಸ್ಸೀಯನು ಕೇವಲ ದಾವೀದನ ಮಾನವ ಸಂತಾನದವನಾಗಿರಲಿಲ್ಲ, ಬದಲು ಅವನು ಪರಲೋಕದಲ್ಲಿ ಇದ್ದನು ಮತ್ತು ದಾವೀದನಿಗಿಂತ ಶ್ರೇಷ್ಠನು ಯಾ ಒಡೆಯನು ಆಗಿದ್ದನು.
ಈಗ ಯೇಸು ಜನರ ಗುಂಪಿನ ಮತ್ತು ತನ್ನ ಶಿಷ್ಯರ ಕಡೆಗೂ ತಿರಿಗಿ, ಶಾಸ್ತ್ರಿಗಳ ಮತ್ತು ಫರಿಸಾಯರ ಕುರಿತು ಎಚ್ಚರಿಸುತ್ತಾನೆ. ಇವರು ದೇವರ ನಿಯಮಗಳನ್ನು ಬೋಧಿಸುವವರಾಗಿರುವದರಿಂದ, “ಮೋಶೆಯ ಪೀಠದಲ್ಲಿ ಕೂತುಕೊಂಡಿರುವದರಿಂದ” ಯೇಸುವು ಪ್ರೇರಿಸುವದು: “ಆದದರಿಂದ ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ.” ಆದರೆ ಅವನು ಕೂಡಿಸಿದ್ದು: “ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೇ ಹೊರತು ನಡೆಯುವದಿಲ್ಲ.”
ಅವರು ಕಪಟಿಗಳಾಗಿದ್ದರು ಮತ್ತು ಕೆಲವು ತಿಂಗಳುಗಳ ಹಿಂದೆ ಫರಿಸಾಯನೊಬ್ಬನ ಮನೆಯಲ್ಲಿ ಊಟಮಾಡುತ್ತಿರುವಾಗ ತಾನು ಬಳಸಿದ ಅದೇ ಭಾಷೆಯಿಂದ ಅವರನ್ನು ಯೇಸುವು ಖಂಡಿಸುತ್ತಾನೆ. “ಅವರ ತಮ್ಮ ಕೆಲಸಗಳನ್ನೆಲ್ಲಾ” ಅವನು ಹೇಳುವದು, “ಜನರಿಗೆ ಕಾಣಬೇಕೆಂದು ಮಾಡುತ್ತಾರೆ.” ಮತ್ತು ಅವನು ಅವರಿಗೆ ಉದಾಹರಣೆಗಳನ್ನು ಒದಗಿಸುತ್ತಾ, ಗಮನಿಸಿದ್ದು:
“ತಾವು ಕಟ್ಟಿಕೊಳ್ಳುವ ಜ್ಞಾಪಕಪಟ್ಟಗಳನ್ನು ಅಗಲಮಾಡುತ್ತಾರೆ.” ಈ ಜ್ಞಾಪಕಪಟ್ಟಿಗಳು ಚಿಕ್ಕ ಚಿಕ್ಕ ಪೆಟ್ಟಿಗೆಗಳಾಗಿದ್ದು, ಅವುಗಳನ್ನು ಹಣೆಯ ಇಲ್ಲವೆ ಭುಜದ ಮೇಲೆ ಧರಿಸುತ್ತಿದ್ದರು, ಅದರಲ್ಲಿ ನಿಯಮಶಾಸ್ತ್ರದ ನಾಲ್ಕು ವಿಭಾಗಗಳು ಇರುತ್ತವೆ: ವಿಮೋಚನಕಾಂಡ 13:1-10, 11-16; ಮತ್ತು ಧರ್ಮೋಪದೇಶಕಾಂಡ 6:4-9; 11:13-21. ಆದರೆ ಫರಿಸಾಯರು ನಿಯಮಶಾಸ್ತ್ರದ ಕುರಿತು ತಾವು ಬಹಳ ಹುರುಪುಳ್ಳವರಾಗಿದ್ದಾರೆ ಎಂಬ ಭಾವನೆಯನ್ನು ಕೊಡಲು ಈ ಪೆಟ್ಟಿಗೆಯ ಗಾತ್ರವನ್ನು ಹೆಚ್ಚಿಸುತ್ತಿದ್ದರು.
ಯೇಸುವು ಮುಂದುವರಿಸುತ್ತಾ ಅವರು “ಗೊಂಡೆಗಳನ್ನು ಉದ್ದಮಾಡುತ್ತಾರೆ” ಎಂದು ಹೇಳುತ್ತಾನೆ. ಅರಣ್ಯಕಾಂಡ 15:38-40ರಲ್ಲಿ ತಮ್ಮ ಉಡುಪುಗಳ ಮೇಲೆ ಗೊಂಡೆಗಳನ್ನು ಮಾಡುವಂತೆ ಇಸ್ರಾಯೇಲ್ಯರಿಗೆ ತಿಳಿಸಲ್ಪಟ್ಟಿತ್ತು, ಆದರೆ ಫರಿಸಾಯರು ತಮ್ಮದನ್ನು ಬೇರೆಲ್ಲರಿಗಿಂತ ದೊಡ್ಡದಾಗಿ ಮಾಡುತ್ತಿದ್ದರು. ಪ್ರತಿಯೊಂದನ್ನು ಪ್ರದರ್ಶನಕ್ಕಾಗಿ ಮಾಡಲಾಗುತ್ತಿತ್ತು! “ಅವರಿಗೆ ಪ್ರಥಮ ಸ್ಥಾನಗಳೆಂದರೆ ಇಷ್ಟ” ಎಂದು ಯೇಸುವು ತಿಳಿಸುತ್ತಾನೆ.
ದುಃಖಕರವಾಗಿಯೇ, ಪ್ರಮುಖ ಸ್ಥಾನದ ಈ ಆಶೆಯಿಂದ ಅವನ ಸ್ವಂತ ಶಿಷ್ಯರು ಕೂಡ ಬಾಧಿತರಾಗಿದ್ದರು. ಆದುದರಿಂದ ಅವನು ಬುದ್ಧಿವಾದವನ್ನೀಯುವದು: “ಆದರೆ ನೀವು ಬೋಧಕ [ರಬ್ಬಿ] ರೆನಿಸಿಕೊಳ್ಳಬೇಡಿರಿ; ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರು ಸಹೋದರರು. ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಿಮ್ಮ ತಂದೆ ಎಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮ್ಮ ತಂದೆ. ಮತ್ತು ಗುರುಗಳು [ನಾಯಕರು, NW] ಅನ್ನಿಸಿಕೊಳ್ಳಬೇಡಿರಿ; ಕ್ರಿಸ್ತನೊಬ್ಬನೇ ನಿಮಗೆ ಗುರುವು.” ಪ್ರಥಮನಾಗಬೇಕೆಂಬ ಆಶೆಯನ್ನು ಶಿಷ್ಯರು ಸ್ವತಃ ತಮ್ಮಿಂದ ಹೋಗಲಾಡಿಸಬೇಕು! “ನಿಮ್ಮಲ್ಲಿ ಹೆಚ್ಚಿನವನು ನಿಮ್ಮ ಸೇವಕನಾಗಿರಬೇಕು,” ಎಂದು ಯೇಸುವು ಎಚ್ಚರಿಸುತ್ತಾನೆ.
ಅನಂತರ ಅವನು ಶಾಸ್ತ್ರಿಗಳನ್ನೂ, ಫರಿಸಾಯರನ್ನೂ ಕಪಟಿಗಳೆಂದು ಪುನಃ ಪುನಃ ಕರೆಯುತ್ತಾ, ಅವರ ಮೇಲೆ ಬರುವ ಅನೇಕ ದುರ್ಗತಿಗಳನ್ನು [ಅಯ್ಯೋ] ಉಚ್ಛರಿಸುತ್ತಾನೆ. ಅವರು “ಪರಲೋಕ ರಾಜ್ಯದ ಬಾಗಲನ್ನು ಮನುಷ್ಯರ ಎದುರಿಗೆ ಮುಚ್ಚಿಬಿಡುತ್ತಾರೆ,” ಎಂದವನು ಹೇಳುತ್ತಾನೆ, ಮತ್ತು “ವಿಧವೆಯರ ಮನೆಗಳನ್ನು ನುಂಗಿ ನಟನೆಗಾಗಿ ದೇವರಿಗೆ ಉದ್ದವಾದ ಪ್ರಾರ್ಥನೆಗಳನ್ನು ಮಾಡುವವರಾಗಿದ್ದಾರೆ.”
“ಅಯ್ಯೋ, ದಾರಿ ತೋರಿಸುವ ಕುರುಡರೇ,” ಎಂದು ಯೇಸು ಹೇಳುತ್ತಾನೆ. ಅವರು ಸ್ವೇಚ್ಛಾನುಸಾರವಾಗಿ ಮಾಡುವ ವ್ಯತ್ಯಾಸಗಳ ಮೂಲಕ ರುಜುವಾಗುವ ಫರಿಸಾಯರ ಆತ್ಮಿಕ ಮೌಲ್ಯತೆಗಳ ಲೋಪಗಳನ್ನು ಅವನು ಖಂಡಿಸುತ್ತಾನೆ. ಉದಾಹರಣೆಗೆ, ಅವರು ಹೇಳುವದು, ‘ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ, ಆದರೆ ಒಬ್ಬನು ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು.” ಆರಾಧನೆಯ ಸ್ಥಳದ ಆತ್ಮಿಕ ಮೌಲ್ಯತೆಗಳ ಮೇಲೆ ಹೆಚ್ಚು ಒತ್ತರ ಹಾಕುವ ಬದಲು ದೇವಾಲಯದ ಚಿನ್ನದ ಮೇಲೆ ಹೆಚ್ಚು ಒತ್ತರವನ್ನು ಹಾಕುವದರ ಮೂಲಕ, ಅವರ ನೈತಿಕ ಕುರುಡುತನವನ್ನು ಅವರು ಪ್ರಕಟಿಸುತ್ತಾರೆ.
ಅನಂತರ, ಅವನು ಮೊದಲು ಮಾಡಿದಂತೆ, ಫರಿಸಾಯರು ನಗಣ್ಯವಾದ ಗಿಡಮೂಲಿಕೆಗಳ ಹತ್ತರಲ್ಲೊಂದು ಪಾಲು ಇಲ್ಲವೆ ದಶಮಾಂಶ ಕೊಡುವದರ ಕಡೆಗೆ ಹೆಚ್ಚು ಗಮನವನ್ನು ನೀಡುತ್ತಿರುವದರಿಂದ, “ಧರ್ಮ ಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ, ಕರುಣೆಯನ್ನೂ, ನಂಬಿಕೆಯನ್ನೂ” ಅಲಕ್ಷ್ಯ ಮಾಡುತ್ತಿದ್ದರು.
ಯೇಸುವು ಫರಿಸಾಯರನ್ನು “ದಾರಿ ತೋರಿಸುವ ಕುರುಡರು, ನೀವು ಸೊಳ್ಳೇ ಸೋಸುವವರು, ಒಂಟೇ ನುಂಗುವವರು” ಎಂದು ಕರೆಯುತ್ತಾನೆ! ಅವರು ತಮ್ಮ ದ್ರಾಕ್ಷಾರಸದಿಂದ ಸೊಳ್ಳೆಯನ್ನು ಸೋಸುತ್ತಾರೆ, ಕೇವಲ ಅದೊಂದು ಕ್ರಿಮಿಯಾಗಿರುವ ಕಾರಣದಿಂದಲ್ಲ, ಬದಲು ಅದು ಸಂಪ್ರದಾಯಬದ್ಧವಾಗಿ ಅಶುದ್ಧವಾಗಿರುವದರಿಂದ. ಆದರೂ, ಧರ್ಮ ಶಾಸ್ತ್ರದ ಘನವಾದ ಸಂಗತಿಗಳನ್ನು ಅವರು ಅಲಕ್ಷ್ಯಿಸುವದು, ಸಂಪ್ರದಾಯಬದ್ಧವಾಗಿ ಅಶುದ್ಧವಾಗಿರುವ ಒಂಟೆಯೊಂದನ್ನು ನುಂಗುವದಕ್ಕೆ ಸರಿಸಮಾನವಾಗಿರುತ್ತದೆ. ಮತ್ತಾಯ 22:41—23:24; ಮಾರ್ಕ 12:35-40; ಲೂಕ 20:41-47; ಯಾಜಕಕಾಂಡ 11:4, 21-24.
▪ ಕೀರ್ತನೆ 110 ರಲ್ಲಿ ದಾವೀದನು ಏನು ಹೇಳಿದ್ದನೋ ಅದರ ಕುರಿತು ಯೇಸುವು ಫರಿಸಾಯರನ್ನು ಪ್ರಶ್ನಿಸಿದಾಗ ಅವರು ಯಾಕೆ ಸುಮ್ಮಗಿದ್ದರು?
▪ ಶಾಸ್ತ್ರ-ವಚನಗಳಿರುವ ಜ್ಞಾಪಕ ಪಟ್ಟಿಗಳನ್ನು ಮತ್ತು ಅವರ ಉಡುಪುಗಳ ಗೊಂಡೆಗಳನ್ನು ಅವರು ಯಾಕೆ ದೊಡ್ಡದು ಮಾಡುತ್ತಿದ್ದರು?
▪ ತನ್ನ ಶಿಷ್ಯರಿಗೆ ಯೇಸುವು ಯಾವ ಬುದ್ಧಿವಾದವನ್ನು ಕೊಡುತ್ತಾನೆ?
▪ ಫರಿಸಾಯರು ಸ್ವೇಚ್ಛಾನುಸಾರ ಹೇಗೆ ವ್ಯತ್ಯಾಸಗಳನ್ನು ಮಾಡುತ್ತಿದ್ದರು, ಮತ್ತು ಘನವಾದ ಸಂಗತಿಗಳನ್ನು ಅಲಕ್ಷ್ಯ ಮಾಡಿರುವದಕ್ಕಾಗಿ ಯೇಸುವು ಅವರನ್ನು ಹೇಗೆ ಖಂಡಿಸುತ್ತಾನೆ?
-
-
ದೇವಾಲಯದಲ್ಲಿನ ಶುಶ್ರೂಪಷೆಯು ಮುಕ್ತಾಯಗೊಂಡದ್ದುಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 110
ದೇವಾಲಯದಲ್ಲಿನ ಶುಶ್ರೂಪಷೆಯು ಮುಕ್ತಾಯಗೊಂಡದ್ದು
ಯೇಸುವು ದೇವಾಲಯದಲ್ಲಿ ತನ್ನ ಕೊನೆಯ ದರ್ಶನವನ್ನು ಮಾಡುತ್ತಾನೆ. ವಾಸ್ತವದಲ್ಲಿ, ಭವಿಷ್ಯದ ಮೂರು ದಿನಗಳಲ್ಲಿ ಅವನ ವಿಚಾರಣೆ ಮತ್ತು ವಧಿಸುವಿಕೆಯ ಹೊರತಾಗಿ, ಯೇಸುವು ತನ್ನ ಬಹಿರಂಗ ಶುಶ್ರೂಪಷೆಯನ್ನು ಮುಕ್ತಾಯಗೊಳಿಸುತ್ತಾ ಇದ್ದಾನೆ. ಈಗ ಅವನು ಶಾಸ್ತ್ರಿಗಳಿಗೆ ಮತ್ತು ಫರಿಸಾಯರಿಗೆ ಛೀಮೊರೆ ಹಾಕುವದನ್ನು ಮುಂದುವರಿಸುತ್ತಾನೆ.
ಇನ್ನು ಮೂರು ಬಾರಿ “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ,” ಅವನು ಉದ್ಗರಿಸುತ್ತಾನೆ! ಮೊದಲು, ಅವನು ಅವರಿಗೆ ದುರ್ಗತಿಯನ್ನು ಘೋಷಿಸುವದು ಯಾಕಂದರೆ ಅವರು “ಪಂಚಪಾತ್ರೆ ಬಟ್ಟಲು ಇವುಗಳ ಹೊರ ಭಾಗವನ್ನು” ಶುಚಿಮಾಡುತ್ತಿದ್ದರು, “ಆದರೆ ಅವು ಒಳಗೆ ಸುಲುಕೊಂಡವುಗಳಿಂದಲೂ ಇಹಭೋಗ ಪದಾರ್ಥಗಳಿಂದಲೂ ತುಂಬಿರುತ್ತವೆ.” ಆದುದರಿಂದ ಅವನು ಎಚ್ಚರಿಸುವದು: “ಮೊದಲು ಪಂಚಪಾತ್ರೆ ಬಟ್ಟಲುಗಳ ಒಳಭಾಗವನ್ನು ಶುಚಿಮಾಡು. ಆಗ ಅವುಗಳ ಹೊರಭಾಗವೂ ಶುಚಿಯಾಗುವದು.”
ಅನಂತರ, ಹೊರಗಿನ ದೇವಭಕ್ತಿಯ ಮೂಲಕ ಒಳಗಿನ ಕೊಳೆಯುವಿಕೆ ಮತ್ತು ಹೊಲಸನ್ನು ಅಡಗಿಸಲು ಅವರು ಮಾಡುವ ಪ್ರಯತ್ನಕ್ಕಾಗಿ ಶಾಸ್ತ್ರಿಗಳ ಮತ್ತು ಫರಿಸಾಯರ ಮೇಲೆ ಅವನು ದುರ್ಗತಿಯನ್ನು ಉಚ್ಛರಿಸುತ್ತಾನೆ. “ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ,” ಅವನು ಹೇಳುವದು, “ಇವು ಹೊರಗೆ ಚಂದವಾಗಿ ಕಾಣುತ್ತವೆ, ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ.”
ಕೊನೆಗೆ, ಅವರ ಸ್ವಂತ ಧರ್ಮಕಾರ್ಯಗಳ ಕಡೆಗೆ ಗಮನ ಸೆಳೆಯಲು, ಪ್ರವಾದಿಗಳ ಸಮಾಧಿಯನ್ನು ಕಟ್ಟಿ, ಅವುಗಳನ್ನು ಅಲಂಕರಿಸಲು ಅವರು ಇಚ್ಛೆಯುಳ್ಳವರಾಗಿರುವದರಿಂದ ಅವರ ಕಪಟತನವು ಪ್ರಕಟವಾಗುತ್ತದೆ. ಆದರೂ, ಅವರು “ಪ್ರವಾದಿಗಳನ್ನು ಕೊಂದವರ ಮಕ್ಕಳೇ ಹೌದು” ಎಂದು ಯೇಸುವು ತಿಳಿಸುತ್ತಾನೆ. ಖಂಡಿತವಾಗಿ, ಅವರ ಕಪಟತನವನ್ನು ಯಾವನಾದರೊಬ್ಬನು ಬಯಲು ಪಡಿಸಲು ಧೈರ್ಯ ತಾಳಿದರೆ ಅವನು ಅಪಾಯದಲ್ಲಿರುತ್ತಾನೆ!
ಮುಂದುವರಿಸುತ್ತಾ, ಖಂಡನೆಯ ಅತಿ ಕಠಿಣವಾದ ಶಬ್ದಗಳನ್ನು ಯೇಸುವು ಉಚ್ಛರಿಸುತ್ತಾನೆ. “ಹಾವುಗಳೇ, ಸರ್ಪಜಾತಿಯವರೇ,”ಅವನು ಹೇಳುವದು, “ನರಕದಂಡನೆಗೆ [ಗೆಹೆನ್ನಾದ ದಂಡನೆ] ಹೇಗೆ ತಪ್ಪಿಸಿಕೊಂಡೀರಿ?” ಗೆಹೆನ್ನಾವು ಯೆರೂಸಲೇಮಿನ ಕಸದ ಕೊಂಪೆಯಾಗಿ ಉಪಯೋಗಿಸಲ್ಪಡುತ್ತಿದ್ದ ಒಂದು ಕಣಿವೆಯಾಗಿತ್ತು. ಆದುದರಿಂದ ತಮ್ಮ ದುಷ್ಟ ನಡತೆಯನ್ನು ಬೆನ್ನಟ್ಟುವದರ ಮೂಲಕ, ಶಾಸ್ತ್ರಿಗಳು ಮತ್ತು ಫರಿಸಾಯರು ನಿತ್ಯ ನಾಶನದ ದಂಡನೆಯನ್ನು ಅನುಭವಿಸುವರೆಂದು ಯೇಸುವು ಹೇಳುತ್ತಾನೆ.
ತನ್ನ ಪ್ರತಿನಿಧಿಗಳೋಪಾದಿ ಯಾರನ್ನು ಅವನು ಕಳುಹಿಸಿದನೋ ಅವರ ಕುರಿತಾಗಿ ಯೇಸುವು ಹೇಳುವದು: “ಅವರಲ್ಲಿ ಕೆಲವರನ್ನು ಕೊಲ್ಲುವಿರಿ, ಶಿಲುಬೆಗೆ [ವಧಸ್ತಂಭ] ಹಾಕುವಿರಿ; ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಊರಿನಿಂದ ಊರಿಗೆ ಅಟ್ಟಿಕೊಂಡು ಹೋಗುವಿರಿ. ಹೀಗೆ ನೀತಿವಂತನಾದ ಹೇಬೆಲನ ರಕ್ತವು ಮೊದಲುಗೊಂಡು ನೀವು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ಕೊಂದು ಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದ ವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತದಿಂದುಂಟಾಗುವ ಅಪರಾಧವು ನಿಮ್ಮ ತಲೆಯ ಮೇಲೆ ಬರುವದು. ಅದೆಲ್ಲಾ ಈ ಸಂತತಿಯವರ ಮೇಲೆ ಬರುವದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”
ಜಕರೀಯನು ಇಸ್ರಾಯೇಲ್ಯರ ಅಧಿಪತಿಗಳನ್ನು ಖಂಡಿಸಿದ್ದರಿಂದ, “ಅವರು ಅವನಿಗೆ ಒಳಸಂಚು ಮಾಡಿ ಯೆಹೋವನ ಆಲಯದ ಪ್ರಾಕಾರದಲ್ಲಿ ಅರಸನ ಅಪ್ಪಣೆಯಿಂದಲೇ ಅವನನ್ನು ಕಲ್ಲೆಸೆದು ಕೊಂದರು.” ಆದರೆ, ಯೇಸುವು ಮುಂತಿಳಿಸಿದಂತೆ, ಅಂಥ ಎಲ್ಲಾ ನೀತಿವಂತ ರಕ್ತ ಸುರಿಯುವಿಕೆಗಾಗಿ ಬೆಲೆ ತೆರಬೇಕಾಗಿತ್ತು. ಅದನ್ನು 37 ವರುಷಗಳ ನಂತರ ಸಾ.ಶ. 70ರಲ್ಲಿ ಅಂದರೆ ರೋಮೀಯ ಸೇನೆಗಳು ಯೆರೂಸಲೇಮನ್ನು ನಾಶಮಾಡಿದಾಗ ಮತ್ತು ಹತ್ತು ಲಕ್ಷಕ್ಕಿಂತಲೂ ಯೆಹೂದ್ಯರು ನಾಶವಾದಾಗ ಅವರು ತೆತ್ತರು.
ಈ ಭಯಾನಕ ಸನ್ನಿವೇಶವನ್ನು ಯೇಸು ಪರಿಗಣಿಸುವಾಗ, ಅವನು ಸಂಕಟ ಪಟ್ಟನು. “ಯೆರೂಸಲೇಮೇ, ಯೆರೂಸಲೇಮೇ,” ಅವನು ಪುನಃ ಹೇಳುವದು, “ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿ ಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು! ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು. ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.”
ಯೇಸುವು ಅನಂತರ ಕೂಡಿಸುವದು: “ಈಗಿನಿಂದ—ಕರ್ತನ [ಯೆಹೋವನ] ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ ಎಂದು ನೀವು ಹೇಳುವ ತನಕ ನೀವು ನನ್ನನ್ನು ನೋಡುವದೇ ಇಲ್ಲವೆಂದು ನಿಮಗೆ ಹೇಳುತ್ತೇನೆ.” ತನ್ನ ಸ್ವರ್ಗೀಯ ರಾಜ್ಯದೊಳಗೆ ಅವನು ಬಂದಾಗ ಮತ್ತು ಜನರು ತಮ್ಮ ನಂಬಿಕೆಯ ಕಣ್ಣುಗಳಿಂದ ಅವನನ್ನು ನೋಡುವಾಗ, ಆ ದಿನವು ಕ್ರಿಸ್ತನ ಸಾನಿಧ್ಯತೆಯ ದಿನವಾಗಿರುವದು.
ಈಗ ಯೇಸುವು ದೇವಾಲಯದಲ್ಲಿರುವ ಬೊಕ್ಕಸದ ಮನೆಗೆ ಎದುರಾಗಿರುವ ಒಂದು ಸ್ಥಳದಲ್ಲಿ ಕೂತುಕೊಂಡು ಜನರು ಬೊಕ್ಕಸದಲ್ಲಿ ಹಣ ಹಾಕುವದನ್ನು ನೋಡುತ್ತಿದ್ದನು. ಅನೇಕ ಮಂದಿ ಐಶ್ವರ್ಯವಂತರು ಬಹಳ ಹಣ ಹಾಕುತ್ತಿದ್ದರು. ಆದರೆ ಅನಂತರ ಒಬ್ಬ ಬಡ ವಿಧವೆ ಬಂದಳು ಮತ್ತು ಅತಿ ಚಿಕ್ಕ ಬೆಲೆಯ ಎರಡು ಚಿಕ್ಕ ಕಾಸುಗಳನ್ನು ಹಾಕಿದಳು.
ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು, ಯೇಸುವು ಹೇಳುವದು: “ನಿಮಗೆ ನಿಜವಾಗಿ ಹೇಳುತ್ತೇನೆ, ಬೊಕ್ಕಸದಲ್ಲಿ ಹಾಕಿದವರೆಲ್ಲರಲ್ಲಿ ಈ ಬಡ ವಿಧವೆ ಎಲ್ಲರಿಗಿಂತ ಹೆಚ್ಚು ಹಾಕಿದ್ದಾಳೆ.” ಇದು ಹೇಗೆ ಸಾಧ್ಯ ಎಂದು ಅವರು ಬೆರಗಾಗಿರಬೇಕು. ಆದುದರಿಂದ ಯೇಸುವು ವಿವರಿಸುವದು: “ಹೇಗಂದರೆ ಎಲ್ಲರು ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಹಾಕಿದರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಹಾಕಿದಳು, ತನ್ನ ಜೀವನವನ್ನೇ ಕೊಟ್ಟುಬಿಟ್ಟಳು.” ಈ ಸಂಗತಿಗಳನ್ನು ಹೇಳಿಯಾದ ನಂತರ, ಯೇಸುವು ದೇವಾಲಯವನ್ನು ಕೊನೆಯ ಬಾರಿ ಬಿಟ್ಟು ಬರುತ್ತಾನೆ.
ದೇವಾಲಯದ ಗಾತ್ರ ಮತ್ತು ಸೌಂದರ್ಯವನ್ನು ನೋಡಿ, ಆಶ್ಚರ್ಯಪಡುತ್ತಾ, ಅವನ ಶಿಷ್ಯರಲ್ಲಿ ಒಬ್ಬನು ಘೋಷಿಸುವದು: “ಗುರುವೇ, ನೋಡು, ಎಂಥಾ ಕಲ್ಲುಗಳು! ಎಂಥಾ ಕಟ್ಟಣಗಳು!” ನಿಶ್ಚಯವಾಗಿ ಆ ಕಲ್ಲುಗಳು ಸುಮಾರು 11 ಮೀಟರ್‌ಗಳಿಗಿಂತಲೂ ಉದ್ದ ಮತ್ತು 5 ಮೀಟರ್‌ಗಳಿಗಿಂತಲೂ ಅಗಲ ಮತ್ತು 3 ಮೀಟರ್‌ಗಳಿಗಿಂತಲೂ ಎತ್ತರವಾಗಿದ್ದವೆಂದು ವರದಿಯಾಗಿದೆ!
“ಈ ದೊಡ್ಡ ಕಟ್ಟಣಗಳನ್ನು ನೋಡುತ್ತೀಯಾ?” ಯೇಸುವು ಉತ್ತರಿಸುವದು. “ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವದಿಲ್ಲ; ಎಲ್ಲಾ ಕೆಡವಲ್ಪಡುವದು.”
ಈ ಸಂಗತಿಗಳನ್ನು ಹೇಳಿದ ನಂತರ, ಯೇಸುವೂ, ಅವನ ಅಪೊಸ್ತಲರೂ ಕಿದ್ರೋನ್ ಕಣಿವೆಯನ್ನು ದಾಟಿ, ಎಣ್ಣೇಮರಗಳ ಗುಡ್ಡವನ್ನು ಹತ್ತುತ್ತಾರೆ. ಇಲ್ಲಿಂದ ಅವರು ಕೆಳಗಡೆ ಭವ್ಯವಾದ ದೇವಾಲಯವನ್ನು ಕಾಣಬಹುದಿತ್ತು. ಮತ್ತಾಯ 23:25—24:3; ಮಾರ್ಕ 12:41—13:3; ಲೂಕ 21:1-6; 2 ಪೂರ್ವಕಾಲವೃತ್ತಾಂತ 24:20-22.
▪ ದೇವಾಲಯಕ್ಕೆ ಕೊನೆಯ ಬಾರಿ ಭೇಟಿ ನೀಡಿದ ಸಮಯದಲ್ಲಿ ಯೇಸುವು ಏನು ಮಾಡಿದನು?
▪ ಶಾಸ್ತ್ರಿಗಳ ವತ್ತು ಫರಿಸಾಯರ ಕಪಟತನವು ಹೇಗೆ ಪ್ರಕಟವಾಯಿತು?
▪ “ಗೆಹೆನ್ನಾದ ದಂಡನೆ” ಎಂದರೆ ಅರ್ಥವೇನು?
▪ ಐಶ್ವರ್ಯವಂತರಿಗಿಂತ ವಿಧವೆಯು ಹೆಚ್ಚು ಕಾಣಿಕೆ ಹಾಕಿದಳು ಎಂದು ಯೇಸುವು ಯಾಕೆ ಹೇಳಿದನು?
-
-
ಕಡೇ ದಿನಗಳ ಸೂಚನೆಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 111
ಕಡೇ ದಿನಗಳ ಸೂಚನೆ
ಇಷ್ಟರೊಳಗೆ ಮಂಗಳವಾರದ ಮಧ್ಯಾಹ್ನವಾಗಿತ್ತು. ಎಣ್ಣೇಮರಗಳ ಗುಡ್ಡದ ಮೇಲೆ ಕೂತುಕೊಂಡು ಯೇಸುವು ಕೆಳಗಡೆ ಇರುವ ದೇವಾಲಯವನ್ನು ನೋಡುತ್ತಿದ್ದಾಗ, ಪೇತ್ರ, ಯಾಕೋಬ, ಯೋಹಾನ ಮತ್ತು ಆಂದ್ರೆಯ ಅವನೊಡನೆ ಪ್ರತ್ಯೇಕವಾಗಿ ಬಂದರು. ದೇವಾಲಯದ ಕಲ್ಲಿನ ಮೇಲೆ ಕಲ್ಲು ಉಳಿಯುವದಿಲ್ಲ ಎಂದು ಯೇಸು ಮುನ್ನುಡಿದ್ದರಿಂದ, ಅವರಿಗೆ ಅದರ ಬಗ್ಗೆ ಚಿಂತೆ ಇತ್ತು.
ಆದರೆ ಅವರು ಯೇಸುವನ್ನು ಸಮೀಪಿಸಿದಾಗ, ಅವರ ಮನಸ್ಸುಗಳಲ್ಲಿ ಅದಕ್ಕಿಂತಲೂ ಹೆಚ್ಚಿನದು ಇತ್ತು ಎಂದು ಭಾಸವಾಗುತ್ತದೆ. “ಮನುಷ್ಯ ಕುಮಾರನು ಪ್ರತ್ಯಕ್ಷನಾಗುವ” ಸಮಯದಲ್ಲಿ ಅವನ “ಸಾನಿಧ್ಯತೆಯ” ಕುರಿತು ಕೆಲವು ವಾರಗಳ ಹಿಂದೆ ಅವನು ಮಾತಾಡಿದ್ದನು. ಮತ್ತು ಇದರ ಮುಂಚಿನ ಒಂದು ಸಂದರ್ಭದಲ್ಲಿ, ಅವನು ಅವರಿಗೆ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” ಕುರಿತು ಹೇಳಿದ್ದನು. ಆದುದರಿಂದ ಅಪೊಸ್ತಲರು ಕುತೂಹಲಿಗಳಾಗಿದ್ದರು.
“ನಮಗೆ ಹೇಳು,” ಅವರು ಹೇಳುವದು, “ಅದು ಯಾವಾಗ [ಇದರ ಫಲಿತಾಂಶವಾಗಿ ಯೆರೂಸಲೇಮಿನ ಮತ್ತು ಅದರ ದೇವಾಲಯದ ನಾಶನವು] ಆಗುವದು, ನಿನ್ನ ಸಾನಿಧ್ಯತೆಯ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಸೂಚನೆಯೇನು?” ವಾಸ್ತವದಲ್ಲಿ ಅವರದ್ದು ಮೂರು-ಭಾಗಗಳಿರುವ ಒಂದು ಪ್ರಶ್ನೆಯಾಗಿತ್ತು. ಮೊದಲನೆಯದಾಗಿ, ಯೆರೂಸಲೇಮ್ ಮತ್ತು ಅದರ ದೇವಾಲಯದ ನಾಶನದ ಕುರಿತು, ಅನಂತರ ರಾಜ್ಯದ ಶಕ್ತಿಯಿಂದ ಯೇಸುವಿನ ಸಾನಿಧ್ಯತೆಯ ಕುರಿತು, ಮತ್ತು ಕೊನೆಗೆ ವಿಷಯಗಳ ಇಡೀ ವ್ಯವಸ್ಥೆಯ ಅಂತ್ಯದ ಕುರಿತು ಅವರು ತಿಳಿಯಲು ಬಯಸಿದ್ದರು.
ಅವನ ದೀರ್ಘವಾದ ಪ್ರತಿವರ್ತನೆಯಲ್ಲಿ, ಯೇಸುವು ಪ್ರಶ್ನೆಯ ಮೂರು ಭಾಗಗಳಿಗೂ ಉತ್ತರ ನೀಡುತ್ತಾನೆ. ಯೆಹೂದಿ ವಿಷಯಗಳ ವ್ಯವಸ್ಥೆಯು ಯಾವಾಗ ಅಂತ್ಯಗೊಳ್ಳುತ್ತದೆಂದು ಸೂಚನೆಯೊಂದನ್ನು ಅವನು ಒದಗಿಸುತ್ತಾನೆ; ಆದರೆ ಅವನು ಅದಕ್ಕಿಂತಲೂ ಹೆಚ್ಚಿನದ್ದನ್ನು ಒದಗಿಸುತ್ತಾನೆ. ಅವನ ಸಾನಿಧ್ಯತೆಯ ಸಮಯಾವಧಿಯಲ್ಲಿ ಮತ್ತು ವಿಷಯಗಳ ಇಡೀ ವ್ಯವಸ್ಥೆಯ ಅಂತ್ಯಕ್ಕೆ ಸಮೀಪದಲ್ಲಿ ಅವರು ಜೀವಿಸುತ್ತಿದ್ದಾರೆ ಎಂದು ಅವನ ಭಾವೀ ಶಿಷ್ಯರು ತಿಳಿದುಕೊಳ್ಳಲಾಗುವಂತೆ, ಅವರನ್ನು ಎಚ್ಚರಿಸುವ ಒಂದು ಸೂಚನೆಯನ್ನು ಕೂಡ ಅವನು ಕೊಡುತ್ತಾನೆ.
ವರುಷಗಳು ಗತಿಸಿದಷ್ಟಕ್ಕೆ, ಅಪೊಸ್ತಲರು ಯೇಸುವಿನ ಪ್ರವಾದನೆಯ ನೆರವೇರಿಕೆಯನ್ನು ಅವಲೋಕಿಸುತ್ತಾರೆ. ಹೌದು, ಅವನು ಮುಂತಿಳಿಸಿದ ಸಂಗತಿಗಳೇ ಅವರ ದಿನಗಳಲ್ಲಿ ಸಂಭವಿಸಲು ತೊಡಗುತ್ತವೆ. ಈ ರೀತಿಯಲ್ಲಿ 37 ವರ್ಷಗಳ ನಂತರ, ಸಾ.ಶ. 70ರಲ್ಲಿ ಜೀವಂತರಿದ್ದ ಕ್ರೈಸ್ತರು, ಯೆಹೂದಿ ವ್ಯವಸ್ಥೆಯು ಅದರ ದೇವಾಲಯದೊಂದಿಗೆ ನಾಶಗೊಳ್ಳುವಾಗ ಆ ವಿಷಯ ತಿಳಿಯದೇ ಇದ್ದವರಾಗಿರಲಿಲ್ಲ.
ಆದಾಗ್ಯೂ, ಕ್ರಿಸ್ತನ ಸಾನಿಧ್ಯತೆಯು ಮತ್ತು ವಿಷಯಗಳ ವ್ಯವಸ್ಥೆಯು ಸಾ.ಶ. 70 ರಲ್ಲಿ ನಡೆಯುವದಿಲ್ಲ. ರಾಜ್ಯಾಧಿಕಾರದಲ್ಲಿ ಅವನ ಬರುವಿಕೆಯು ಬಹು ಸಮಯದ ನಂತರ ನಡೆಯಲಿತ್ತು. ಆದರೆ ಯಾವಾಗ ? ಯೇಸುವಿನ ಪ್ರವಾದನೆಯನ್ನು ಪರಿಗಣಿಸುವದರಿಂದ ಇದು ಪ್ರಕಟವಾಗುತ್ತದೆ.
“ಯುದ್ಧಗಳಾಗುವದೂ ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳೂ” ಅಲ್ಲಿರುವವು ಎಂದು ಯೇಸುವು ಮುನ್ನುಡಿದಿದ್ದಾನೆ. “ಜನಾಂಗಕ್ಕೆ ವಿರುದ್ಧವಾಗಿ ಜನಾಂಗವು ಏಳುವವು” ಎಂದವನು ಹೇಳುತ್ತಾನೆ, ಮತ್ತು ಅಲ್ಲಿ ಆಹಾರದ ಕ್ಷಾಮವು, ಭೂಕಂಪಗಳು ಮತ್ತು ಅಂಟುರೋಗಗಳು ಇರುವವು. ಅವನ ಶಿಷ್ಯರನ್ನು ದ್ವೇಷಿಸುವರು ಮತ್ತು ಕೊಲ್ಲುವರು. ಸುಳ್ಳು ಪ್ರವಾದಿಗಳು ಏಳುವರು ಮತ್ತು ಅನೇಕರನ್ನು ಮೋಸಗೊಳಿಸುವರು. ನಿಯಮಾರಾಹಿತ್ಯತೆಯು ಹೆಚ್ಚಾಗುವದು ಮತ್ತು ಬಹುಮಂದಿಯ ಪ್ರೀತಿಯು ತಣ್ಣಗಾಗಿ ಹೋಗುವದು. ಆದರೆ ಅದೇ ಸಮಯದಲ್ಲಿ, ದೇವರ ರಾಜ್ಯದ ಸುವಾರ್ತೆಯು ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು.
ಸಾ.ಶ. 70 ರಲ್ಲಿ ಯೆರೂಸಲೇಮ್ ನಾಶನವಾಗುವ ಮೊದಲು ಯೇಸುವಿನ ಪ್ರವಾದನೆಯ ನೆರವೇರಿಕೆಯು ಸೀಮಿತ ರೀತಿಯಲ್ಲಿ ನೆರವೇರಿದರೂ, ಅದರ ಪ್ರಮುಖ ನೆರವೇರಿಕೆಯು ಅವನ ಸಾನಿಧ್ಯತೆ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ ನಡೆಯಲಿರುವದು. ಯೇಸುವಿನ ಬಹು ಪರಿಣಾಮಕಾರಿಯಾದ ಪ್ರವಾದನೆಯು ಆ ವರ್ಷದಿಂದ ಅದರ ಪ್ರಮುಖ ನೆರವೇರಿಕೆಯನ್ನು ಹೊಂದುತ್ತಾ ಇದೆ ಎಂದು 1914 ರಿಂದೀಚಿಗಿನ ಲೋಕ ಘಟನೆಗಳ ಒಂದು ಜಾಗರೂಕ ಪರೀಕ್ಷಣೆಯ ಪ್ರಕಟಿಸುತ್ತದೆ.
ಯೇಸುವು ಕೊಟ್ಟ ಸೂಚನೆಯ ಇನ್ನೊಂದು ಭಾಗವು “ಹಾಳು ಮಾಡುವ ಅಸಹ್ಯ ವಸ್ತುವಿನ” ಗೋಚರಿಸುವಿಕೆಯಾಗಿದೆ. ಸಾ.ಶ. 66 ರಲ್ಲಿ ಈ ಅಸಹ್ಯ ವಸ್ತುವು, ಯೆರೂಸಲೇಮನ್ನೂ, ಅದರ ದೇವಾಲಯದ ಗೋಡೆಗಳನ್ನೂ ಸುತ್ತುಗಟ್ಟಿದ್ದ ರೋಮೀಯ “ಮುತ್ತಿಗೆ ಹಾಕಿರುವ ಸೇನೆಯ” ರೂಪದಲ್ಲಿ ಗೋಚರಿಸಿತು. ಎಲ್ಲಿ ಅದು ನಿಲ್ಲಕೂಡದೋ ಅಲ್ಲಿ ಅದು ನಿಂತಿತ್ತು.
ಈ ಸೂಚನೆಯ ಪ್ರಮುಖ ನೆರವೇರಿಕೆಯಲ್ಲಿ, ಅಸಹ್ಯ ವಸ್ತುವು ಜನಾಂಗ ಸಂಘ ಮತ್ತು ಅದರ ಉತ್ತರಾಧಿಕಾರಿಯಾದ ಸಂಯುಕ್ತ ರಾಷ್ಟ್ರ ಸಂಘವಾಗಿರುತ್ತದೆ. ಲೋಕ ಶಾಂತಿಗಾಗಿರುವ ಈ ಸಂಸ್ಥೆಯು ದೇವರ ರಾಜ್ಯದ ಒಂದು ಬದಲಿಯೋಪಾದಿ ಕ್ರೈಸ್ತಧರ್ಮಗಳಿಂದ ವೀಕ್ಷಿಸಲ್ಪಟ್ಟಿದೆ. ಎಂಥಾ ಒಂದು ಅಸಹ್ಯತೆ! ಆದಕಾರಣ, ತಕ್ಕ ಸಮಯದಲ್ಲಿ, ಸಂಯುಕ್ತ ರಾಷ್ಟ್ರ ಸಂಘದೊಂದಿಗೆ ಜೊತೆಯಾಗಿರುವ ರಾಜಕೀಯ ಶಕ್ತಿಗಳು ಕ್ರೈಸ್ತ ಧರ್ಮಗಳ (ಯೆರೂಸಲೇಮಿನ ಪಡಿರೂಪ) ಮೇಲೆ ತಿರುಗಿ ಬೀಳುವವು ಮತ್ತು ಅವಳನ್ನು ಧ್ವಂಸಗೊಳಿಸುವವು.
ಈ ರೀತಿಯಲ್ಲಿ ಯೇಸುವು ಮುನ್-ನುಡಿದದ್ದು: “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನು ಮೇಲೆಯೂ ಆಗುವದಿಲ್ಲ.” ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಕೊಲ್ಲಲ್ಪಟ್ಟರೆಂದು ವರದಿಯಾಗಿದ್ದ ಸಾ.ಶ. 70 ರಲ್ಲಿ ಸಂಭವಿಸಿದ ಯೆರೂಸಲೇಮಿನ ನಾಶನವು ಖಂಡಿತವಾಗಿಯೂ ಒಂದು ಮಹಾ ಸಂಕಟವಾಗಿತ್ತು. ಯೇಸುವಿನ ಪ್ರವಾದನೆಯ ಈ ಭಾಗದ ಪ್ರಮುಖ ನೆರವೇರಿಕೆಯು ಇನ್ನೂ ಹೆಚ್ಚು ವಿಸ್ತಾರತೆಯದ್ದಾಗಲಿರುವುದು.
ಕಡೇ ದಿನಗಳಲ್ಲಿ ಭರವಸ
ನೈಸಾನ್ 11, ಮಂಗಳವಾರವು ಅಂತ್ಯಗೊಳ್ಳುತ್ತಿದ್ದಂತೆ, ಯೇಸುವು ಅವನ ಅಪೊಸ್ತಲರೊಂದಿಗಿನ ರಾಜ್ಯ ಶಕ್ತಿಯಲ್ಲಿ ಅವನ ಸಾನಿಧ್ಯತೆ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾಗಿರುವ ಸಂಭಾಷಣೆಯನ್ನು ಮುಂದುವರಿಸುತ್ತಾನೆ. ಸುಳ್ಳು ಕ್ರಿಸ್ತರುಗಳನ್ನು ಹಿಂಬಾಲಿಸುವದರ ಕುರಿತು ಅವನು ಅವರನ್ನು ಎಚ್ಚರಿಸುತ್ತಾನೆ. “ಸಾಧ್ಯವಾದರೆ ಆದುಕೊಂಡವರನ್ನು ಸಹ ಮೋಸಗೊಳಿಸುವದಕ್ಕೋಸ್ಕರ” ಪ್ರಯತ್ನಗಳು ಮಾಡಲ್ಪಡುವವು ಎಂದು ಅವನು ಹೇಳುತ್ತಾನೆ. ಆದರೆ ದೂರದೃಷ್ಟಿಯ ಹದ್ದುಗಳಂತೆ ಆದುಕೊಳ್ಳಲ್ಪಟ್ಟವರು ಎಲ್ಲಿ ನಿಜವಾದ ಆತ್ಮಿಕ ಆಹಾರವು ಕಾಣಸಿಗುತ್ತದೋ ಅಲ್ಲಿ, ವಿಶೇಷವಾಗಿ ಅವನ ಅದೃಶ್ಯ ಸಾನಿಧ್ಯತೆಯಲ್ಲಿ ನಿಜ ಕ್ರಿಸ್ತನೊಂದಿಗೆ ಅವರು ಒಟ್ಟಾಗಿ ಸೇರುವರು. ಅವರು ತಪ್ಪು ದಾರಿಗೆಳೆಯಲ್ಪಡರು ಮತ್ತು ಸುಳ್ಳು ಕ್ರಿಸ್ತನೊಂದಿಗೆ ಒಟ್ಟು ಸೇರಿಸಲ್ಪಡಲಾರರು.
ಸುಳ್ಳು ಕ್ರಿಸ್ತರು ದೃಶ್ಯವಾಗಿ ಮಾತ್ರ ತೋರಿಬರಶಕ್ತರಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಯೇಸುವಿನ ಸಾನಿಧ್ಯತೆಯು ಅದೃಶ್ಯವಾಗಿರುವದು. ಯೇಸುವು ಹೇಳುವಂತೆ, ಸಂಕಟವು ಥಟ್ಟನೆ ವ್ಯಾಪಕವಾಗಿ ಕಾಣಿಸಿಕೊಂಡಾದ ನಂತರ: “ಸೂರ್ಯನು ಕತ್ತಲಾಗಿ ಹೋಗುವನು, ಚಂದ್ರನು ಬೆಳಕು ಕೊಡದೆ ಇರುವನು.” ಹೌದು, ಮಾನವ ಕುಲದ ಅಸ್ತಿತ್ವದಲ್ಲಿಯೇ ಇದು ಅತಿ ಅಂಧಕಾರದ ಸಮಯಾವಧಿಯಾಗಿರುವದು. ಹಗಲುಹೊತ್ತಿನಲ್ಲಿ ಸೂರ್ಯನು ಕತ್ತಲಾಗಿ ಹೋಗುವದಕ್ಕೆ ಮತ್ತು ರಾತ್ರಿಯಲ್ಲಿ ಬೆಳಕು ಕೊಡಬೇಕಾದ ಚಂದ್ರನು ಅದನ್ನು ಕೊಡದೆ ಇರುವದಕ್ಕೆ ಸಮಾನವಾಗಿರುವದು.
“ಆಕಾಶದ ಶಕ್ತಿಗಳು ಕದಲುವವು,” ಯೇಸುವು ಮುಂದರಿಸುವದು. ಭೌತಿಕ ಆಕಾಶವು ಒಂದು ಕೇಡಿನ ಮುನ್-ಸೂಚಕ ಕಾಣಿಸುವಿಕೆಯನ್ನು ತೋರ್ಪಡಿಸುವವು ಎಂಬದನ್ನು ಯೇಸುವು ಈ ರೀತಿಯಲ್ಲಿ ಸೂಚಿಸಿದ್ದಾನೆ. ಗತಕಾಲದ ಮಾನವ ಇತಿಹಾಸದಲ್ಲಿ ಎಂದೂ ಅನುಭವಿಸದ ಭಯ ಮತ್ತು ಹಿಂಸಾಚಾರವು ಮಿತಿಮೀರುವದು.
ಇದರ ಫಲಿತಾಂಶವಾಗಿ, ಯೇಸುವು ಹೇಳುವದು, “ಭೂಮಿಯ ಮೇಲೆ ಸಮುದ್ರದ ಮತ್ತು ತೆರೆಗಳ ಘೋಷದ ನಿಮಿತ್ತವಾಗಿ ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವದು. ಆಕಾಶದ ಶಕ್ತಿಗಳು ಕದಲುವದರಿಂದ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.” ಖಂಡಿತವಾಗಿಯೂ, ಮಾನವ ಅಸ್ತಿತ್ವದ ಈ ಕರಾಳ ಅಂಧಕಾರದ ಸಮಯಾವಧಿಯು ಅದರ ಮುಕ್ತಾಯಘಟ್ಟಕ್ಕೆ ಸಮೀಪಿಸುತ್ತಿದ್ದಂತೆ, “ಆಗ ಮನುಷ್ಯ ಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವದು. ಆಗ ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು.”
ಆದರೆ ಈ ವಿಷಯಗಳ ವ್ಯವಸ್ಥೆಯನ್ನು ‘ಮನುಷ್ಯ ಕುಮಾರನು ಬಲದಿಂದ’ ನಾಶ ಮಾಡುವಾಗ ಎಲ್ಲರೂ ಗೋಳಾಡುವದಿಲ್ಲ. “ಆದುಕೊಂಡವರು,” ಅವನ ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಭಾಗಿಗಳಾಗುವ 1,44,000 ಮಂದಿಗಳಾಗಲಿ, ಅವನ “ಬೇರೆ ಕುರಿಗಳು” ಎಂದು ಯೇಸುವು ಈ ಮುಂಚೆ ಕರೆದಿರುವ ಅವರ ಸಂಗಾತಿಗಳಾಗಲಿ ಎದೆಬಡಕೊಳ್ಳುವದಿಲ್ಲ. ಮಾನವ ಇತಿಹಾಸದ ಅತಿ ಕರಾಳ ಅಂಧಕಾರದ ಸಮಯಾವಧಿಯಲ್ಲಿ ಜೀವಿಸುತ್ತಿರುವದಾದರೂ, ಅವರು ಯೇಸುವಿನ ಉತ್ತೇಜನೆಗೆ ಪ್ರತಿಸ್ಪಂದಿಸುತ್ತಾರೆ: “ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ; ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ.”
ಕಡೇ ದಿನಗಳಲ್ಲಿ ಜೀವಿಸುತ್ತಿರುವ ಅವನ ಶಿಷ್ಯರು ಅಂತ್ಯದ ಸಮೀಪಿಸುವಿಕೆಯನ್ನು ಗೊತ್ತುಮಾಡಿ ಕೊಳ್ಳಲು ಶಕ್ತರಾಗುವಂತೆ, ಯೇಸುವು ಈ ದೃಷ್ಟಾಂತವನ್ನು ಕೊಡುತ್ತಾನೆ: “ಅಂಜೂರ ಮುಂತಾದ ಮರಗಳನ್ನೂ ನೋಡಿರಿ. ಅವು ಚಿಗುರಿದ ಕೂಡಲೇ ನೀವು ಅದನ್ನು ಕಂಡು ಈಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿ ತಿಳುಕೊಳ್ಳುತ್ತೀರಲ್ಲಾ. ಹಾಗೆಯೇ ನೀವು ಸಹ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವದೆ ಎಂದು ತಿಳುಕೊಳ್ಳಿರಿ. ಎಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”
ಈ ರೀತಿಯಲ್ಲಿ, ಸೂಚನೆಯ ಅನೇಕ ವಿವಿಧ ಲಕ್ಷಣಗಳು ನೆರವೇರುವದನ್ನು ಅವನ ಶಿಷ್ಯರು ಕಾಣುವಾಗ, ವಿಷಯಗಳ ವ್ಯವಸ್ಥೆಯ ಅಂತ್ಯವು ಸಮೀಪಿಸಿದೆ ಮತ್ತು ದೇವರ ರಾಜ್ಯವು ಬಲುಬೇಗನೆ ಎಲ್ಲಾ ದುಷ್ಟತನವನ್ನು ಅಳಿಸಿಹಾಕಲಿರುವದು ಎಂದು ಅವರು ತಿಳಿದು ಕೊಳ್ಳತಕ್ಕದ್ದು. ವಾಸ್ತವದಲ್ಲಿ, ಯೇಸುವು ಮುಂತಿಳಿಸಿದ ಎಲ್ಲಾ ಸಂಗತಿಗಳ ನೆರವೇರಿಕೆಯನ್ನು ನೋಡುವ ಜನರ ಜೀವಮಾನಕಾಲದಲ್ಲಿ ಇದು ಸಂಭವಿಸಲಿದೆ! ಈ ಬಹು ಪರಿಣಾಮಕಾರಿಯಾದ ಕಡೇ ದಿನಗಳಲ್ಲಿ ಜೀವಿಸುವ ಆ ಶಿಷ್ಯರಿಗೆ ಎಚ್ಚರಿಕೆಯನ್ನೀಯುತ್ತಾ, ಯೇಸುವು ಹೇಳುವದು:
“ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿ ಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು. ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ.”
ಬುದ್ಧಿವತೆಯರಾದ ಮತ್ತು ಬುದ್ಧಿಯಿಲ್ಲದವರಾದ ಕನ್ಯೆಯರು
ರಾಜ್ಯದ ಬಲದಲ್ಲಿ ಅವನ ಸಾನಿಧ್ಯತೆಯ ಒಂದು ಸೂಚನೆಗಾಗಿ ಅವನ ಅಪೊಸ್ತಲರ ಕೋರಿಕೆಗೆ ಯೇಸುವು ಉತ್ತರವನ್ನೀಯುತ್ತಿದ್ದನು. ಈಗ ಅವನು ಮೂರು ಸಾಮ್ಯಗಳ ಅಥವಾ ದೃಷ್ಟಾಂತಗಳ ಮೂಲಕ ಸೂಚನೆಯ ಇನ್ನು ಅಧಿಕ ಲಕ್ಷಣಗಳನ್ನು ಒದಗಿಸುತ್ತಾನೆ.
ಪ್ರತಿಯೊಂದು ದೃಷ್ಟಾಂತದ ನೆರವೇರಿಕೆಯು ಅವನ ಸಾನಿಧ್ಯತೆಯ ಸಮಯದಲ್ಲಿ ಜೀವಿಸುವವರಿಂದ ಅವಲೋಕಿಸಲ್ಪಡಲು ಶಕ್ಯವಿತ್ತು. ಅವನು ಮೊದಲನೆಯದನ್ನು ಈ ಮಾತುಗಳಿಂದ ಪ್ರಸ್ತಾಪಿಸುತ್ತಾನೆ: “ಆಗ ಪರಲೋಕ ರಾಜ್ಯವು ಆರತಿಗಳನ್ನು ತೆಗೆದುಕೊಂಡು ಮದಲಿಂಗನನ್ನು ಎದುರುಗೊಳ್ಳುವದಕ್ಕೆ ಹೊರಟಂಥ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿದೆ. ಅವರಲ್ಲಿ ಐದು ಮಂದಿ ಬುದ್ಧಿಯಿಲ್ಲದವರು, ಐದು ಮಂದಿ ಬುದ್ಧಿವಂತೆಯರು.”
“ಪರಲೋಕ ರಾಜ್ಯವು ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿದೆ” ಎಂಬ ವಾಕ್ಸರಣಿಯಿಂದ, ಸ್ವರ್ಗೀಯ ರಾಜ್ಯಕ್ಕೆ ಬಾಧ್ಯಸ್ಥರಾಗುವವರಲ್ಲಿ ಅರ್ಧದಷ್ಟು ಮಂದಿ ಬುದ್ಧಿಯಿಲ್ಲವದರೆಂದೂ, ಅರ್ಧದಷ್ಟು ಬುದ್ಧಿವಂತರೆಂದೂ ಯೇಸುವಿನ ಅರ್ಥವಾಗಿರಲಿಲ್ಲ! ಇಲ್ಲ, ಅದರೆ ಸ್ವರ್ಗೀಯ ರಾಜ್ಯದ ಸಂಬಂಧದಲ್ಲಿ, ಇಂಥಾ ಒಂದು ಲಕ್ಷಣ ಇರುವದು ಅಥವಾ ಇರುವದಿಲ್ಲ ಅಥವಾ ರಾಜ್ಯದ ಸಂಬಂಧದ ವಿಷಯಗಳು ಹೀಗೆ ಇರುವವು ಅಥವಾ ಇರುವದಿಲ್ಲ ಎಂದವನ ಅರ್ಥವಾಗಿತ್ತು.
ಸ್ವರ್ಗೀಯ ರಾಜ್ಯಕ್ಕಾಗಿ ಸಾಲಿನಲ್ಲಿರುವ ಯಾ ಸಾಲಿನಲ್ಲಿದ್ದೇವೆ ಎಂದು ಹೇಳಿ ಕೊಳ್ಳುವ ಎಲ್ಲಾ ಕ್ರೈಸ್ತರು ಸಾಂಕೇತಿಕವಾಗಿ ಹತ್ತು ಕನ್ಯೆಯರಿಂದ ಸೂಚಿಸಲ್ಪಟ್ಟಿದ್ದಾರೆ. ಸಾ.ಶ. 33ರ ಪಂಚಾಶತ್ತಮದಲ್ಲಿ, ಪುನರುತಿತ್ಥ, ಮಹಿಮೆಗೇರಿಸಲ್ಪಟ್ಟ ಮದಲಿಂಗನಾದ ಯೇಸು ಕ್ರಿಸ್ತನಿಗೆ ಕ್ರೈಸ್ತ ಸಭೆಯು ವಿವಾಹದಲ್ಲಿ ವಾಗ್ದಾನಿಸಲ್ಪಟ್ಟಿತ್ತು. ಆದರೆ ವಿವಾಹವು ಭವಿಷ್ಯದಲ್ಲಿ ಒಂದು ಅನಿರ್ದಿತ ಸಮಯದಲ್ಲಿ ಪರಲೋಕದಲ್ಲಿ ಜರುಗಲಿತ್ತು.
ಸಾಮ್ಯದಲ್ಲಿ, ಮದಲಿಂಗನನ್ನು ಸುಸ್ವಾಗತಿಸುವ ಮತ್ತು ವಿವಾಹದ ಮೆರವಣಿಗೆಯಲ್ಲಿ ಸೇರುವ ಉದ್ದೇಶದಿಂದ ಹತ್ತು ಮಂದಿ ಕನ್ಯೆಯರು ಹೊರಡುತ್ತಾರೆ. ಅವನು ಬರುವಾಗ, ಅವರು ಆರತಿಗಳನ್ನು ಹೊತ್ತಿಸಿ ಮೆರವಣಿಗೆಯ ಮಾರ್ಗವನ್ನು ಬೆಳಗಿಸುತ್ತಾರೆ, ಈ ಮೂಲಕ ಅವಳಿಗಾಗಿ ಸಿದ್ಧ ಮಾಡಿದ ಮನೆಯಲ್ಲಿ ಮದಲಗಿತ್ತಿಯನ್ನು ಅವನು ತರುವಾಗ ಅವನನ್ನು ಗೌರವಿಸುತ್ತಾರೆ. ಆದಾಗ್ಯೂ, ಯೇಸುವು ವಿವರಿಸುವದು: “ಬುದ್ಧಿಯಿಲ್ಲದವರು ತಮ್ಮ ಆರತಿಯನ್ನು ತಕ್ಕೊಂಡರು, ಆದರೆ ಎಣ್ಣೆ ತಕ್ಕೊಳ್ಳಲಿಲ್ಲ. ಬುದ್ಧಿವಂತೆಯರು ತಮ್ಮ ಆರತಿಗಳ ಕೂಡ ಪಾತ್ರೆಗಳಲ್ಲಿ ಎಣ್ಣೆ ತಕ್ಕೊಂಡರು. ಮದಲಿಂಗನು ಬರುವದಕ್ಕೆ ತಡಮಾಡಲು ಅವರೆಲ್ಲರೂ ತೂಕಡಿಸಿ ಮಲಗಿದರು.”
ಆಳುವ ರಾಜನಾದ ಕ್ರಿಸ್ತನ ಸಾನಿಧ್ಯತೆಯು ದೂರದ ಭವಿಷ್ಯದಲ್ಲಿ ಇರುತ್ತದೆ ಎಂದು ಮದಲಿಂಗನು ತಡವಾಗಿ ಬರುವದು ಸೂಚಿಸುತ್ತದೆ. ಕೊನೆಗೆ 1914 ನೆಯ ವರ್ಷದಲ್ಲಿ ತನ್ನ ಸಿಂಹಾಸನಕ್ಕೆ ಅವನು ಬರುತ್ತಾನೆ. ಇದಕ್ಕೆ ಮೊದಲಿನ ದೀರ್ಘಕಾಲದ ರಾತ್ರಿಯ ಸಮಯದಲ್ಲಿ ಎಲ್ಲಾ ಕನ್ಯೆಯರು ಮಲಗುತ್ತಾರೆ. ಆದರೆ ಇದಕ್ಕಾಗಿ ಅವರನ್ನು ಖಂಡಿಸುವದಿಲ್ಲ. ಅವರ ಪಾತ್ರೆಗಳಲ್ಲಿ ಎಣ್ಣೆಯಿಲ್ಲದಿರುವದಕ್ಕಾಗಿ ಬುದ್ಧಿಯಿಲ್ಲದ ಕನ್ಯೆಯರನ್ನು ಖಂಡಿಸಲಾಗುತ್ತದೆ. ಮದಲಿಂಗನು ಬರುವ ಮೊದಲು ಕನ್ಯೆಯರು ಎಚ್ಚರವಾದದ್ದು ಹೇಗೆ ಎಂಬುದನ್ನು ಯೇಸುವು ವಿವರಿಸುತ್ತಾನೆ: “ಅರ್ಧ ರಾತ್ರಿಯಲ್ಲಿ—ಇಗೋ, ಮದಲಿಂಗನು! ಅವನನ್ನು ಎದುರುಗೊಳ್ಳುವದಕ್ಕೆ ಹೊರಡಿರಿ ಎಂಬ ಕೂಗಾಯಿತು. ಆಗ ಆ ಕನ್ಯೆಯರೆಲ್ಲರು ಎಚ್ಚತ್ತು ತಮ್ಮ ಆರತಿಗಳನ್ನು ನೆಟ್ಟಗೆ ಮಾಡಿದರು. ಆಗ್ಗೆ ಬುದ್ಧಿಯಿಲ್ಲದವರು ಬುದ್ಧಿವಂತೆಯರಿಗೆ—ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿರಿ; ನಮ್ಮ ಆರತಿಗಳು ಆರಿಹೋಗುತ್ತವೆ ಎಂದು ಹೇಳಿದರು. ಅದಕ್ಕೆ ಬುದ್ಧಿವಂತೆಯರು—ನಿಮಗೆ ಕೊಟ್ಟರೆ ನಮಗೂ ನಿಮಗೂ ಕೂಡ ಸಾಲದೆ ಹೋದೀತು; ನೀವು ಮಾರುವವರ ಬಳಿಗೆ ಹೋಗಿ ಕೊಂಡುಕೊಂಡರೆ ಒಳ್ಳೇದು ಅಂದರು.”
ಜ್ಯೋತಿರ್ಮಂಡಲಗಳಂತೆ ನಿಜ ಕ್ರೈಸ್ತರು ಪ್ರಕಾಶಿಸಲು ಸಾಧ್ಯಮಾಡುವದನ್ನು ಎಣ್ಣೆಯು ಸೂಚಿಸುತ್ತದೆ. ಇದು ದೇವರ ಪ್ರೇರಿತ ವಾಕ್ಯವಾಗಿದೆ, ವಾಕ್ಯವನ್ನು ತಿಳಿಯಲು ಅವರಿಗೆ ಸಹಾಯ ಮಾಡುವ ಪವಿತ್ರಾತ್ಮದ ಸಹಿತ ಕ್ರೈಸ್ತರು ವಾಕ್ಯದ ಮೇಲೆ ಬಿಗಿಹಿಡಿತವನ್ನು ಇಟ್ಟುಕೊಳ್ಳುತ್ತಾರೆ. ಮದುವೆಯ ಊಟದ ಮೆರವಣಿಗೆಯ ಸಮಯದಲ್ಲಿ ಮದಲಿಂಗನನ್ನು ಸುಸ್ವಾಗತಿಸುವದರಲ್ಲಿ ಅವರ ಪ್ರಕಾಶವನ್ನು ಬೆಳಗಿಸಲು ಬುದ್ಧಿವಂತೆಯರಾದ ಕನ್ಯೆಯರಿಗೆ ಆತ್ಮಿಕ ಎಣ್ಣೆಯು ಸಾಧ್ಯಮಾಡುತ್ತದೆ. ಆದರೆ ಬುದ್ಧಿಯಿಲ್ಲದ ಕನ್ಯೆಯ ವರ್ಗದವರಿಗೆ ಸ್ವತಃ ತಮ್ಮಲ್ಲಿ, ಅವರ ಪಾತ್ರೆಗಳಲ್ಲಿ ಆವಶ್ಯಕವಾದ ಆತ್ಮಿಕ ಎಣ್ಣೆಯಿರಲಿಲ್ಲ. ಆದುದರಿಂದ ಏನು ಸಂಭವಿಸಿತು ಎನ್ನುವದನ್ನು ಯೇಸುವು ವಿವರಿಸುತ್ತಾನೆ:
“ಅವರು [ಬುದ್ಧಿಯಿಲ್ಲದ ಕನ್ಯೆಯರು] ಕೊಂಡುಕೊಳ್ಳಲಿಕ್ಕೆ ಹೋದಾಗ ಮದಲಿಂಗನು ಬಂದನು. ಸಿದ್ಧವಾಗಿದ್ದವರು ಅವನ ಸಂಗಡ ಮದುವೆಯ ಮನೆಯೊಳಕ್ಕೆ ಹೋದರು. ಬಾಗಲು ಮುಚ್ಚಲಾಯಿತು. ತರುವಾಯ ಉಳಿದ ಕನ್ಯೆಯರು ಸಹ ಬಂದು—ಸ್ವಾಮೀ, ಸ್ವಾಮೀ, ನಮಗೆ ತೆರೆಯಿರಿ ಅಂದರು. ಆತನು—ನಿಮ್ಮನ್ನು ನಾನರಿಯೆನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.”
ಯೇಸು ತನ್ನ ಸ್ವರ್ಗೀಯ ರಾಜ್ಯಕ್ಕೆ ಬಂದಾದ ಮೇಲೆ, ಹಿಂತೆರಳಿದ ಮದಲಿಂಗನನ್ನು ಹೊಗಳುವದರಲ್ಲಿ, ಈ ಅಂಧಕಾರಮಯ ಲೋಕದಲ್ಲಿ ಪ್ರಕಾಶವನ್ನು ಬೀರುವ ಅವರ ಸುಯೋಗಗಳಿಗೆ ನಿಜಾಭಿಷಿಕ್ತ ಕ್ರೈಸ್ತರ ಬುದ್ಧಿವಂತೆ ಕನ್ಯೆಯರ ವರ್ಗವು ಎಚ್ಚರವಾಗಿತ್ತು. ಆದರೆ ಈ ಸುಸ್ವಾಗತಿಸುವ ಹೊಗಳುವಿಕೆಯನ್ನು ಮಾಡಲು ಸಿದ್ಧರಾಗಿರದೆ ಇರುವದನ್ನು ಬುದ್ಧಿಯಿಲ್ಲದ ಕನ್ಯೆಯರಿಂದ ಚಿತ್ರಿಸಲಾಗಿದೆ. ಸಮಯವು ಬಂದಾಗ, ಪರಲೋಕದಲ್ಲಿನ ಮದುವೆಯ ಊಟಕ್ಕೆ ಅವರಿಗಾಗಿ ಬಾಗಲನ್ನು ಕ್ರಿಸ್ತನು ತೆರೆಯುವದಿಲ್ಲ. ಲೋಕದ ಕರಾಳ ರಾತ್ರಿಯ ಅಂಧಕಾರದಲ್ಲಿ ಹೊರಗೆ, ಇತರ ಎಲ್ಲಾ ನಿಯಮರಾಹಿತ್ಯ ಕೆಲಸಗಾರರೊಂದಿಗೆ ನಾಶವಾಗಲಿಕ್ಕಾಗಿ ಅವರನ್ನು ಬಿಡುತ್ತಾನೆ. “ಆದಕಾರಣ ಆ ದಿನವಾದರೂ ಗಳಿಗೆಯಾದರೂ ಗೊತ್ತಿಲ್ಲವಾದದರಿಂದ” ಯೇಸುವು ಕೊನೆಗೊಳಿಸುವದು “ಎಚ್ಚರವಾಗಿರ್ರಿ.”
ತಲಾಂತುಗಳ ಸಾಮ್ಯ
ಇನ್ನೊಂದು ಸಾಮ್ಯವನ್ನು ಅವರಿಗೆ ಹೇಳುವದರ ಮೂಲಕ ಎಣ್ಣೇಮರಗಳ ಗುಡ್ಡದ ಮೇಲೆ ಅವನ ಅಪೊಸ್ತಲರೊಂದಿಗಿನ ಚರ್ಚೆಯನ್ನು ಯೇಸುವು ಮುಂದುವರಿಸುತ್ತಾನೆ, ಇದು ಮೂರರ ಸರಣಿಯಲ್ಲಿ ಎರಡನೆಯದು. ಕೆಲವು ದಿನಗಳ ಹಿಂದೆ ಅವನು ಯೆರಿಕೋವಿನಲ್ಲಿರುವಾಗ, ಬಹಳ ದೂರದ ಭವಿಷ್ಯದಲ್ಲಿ ರಾಜ್ಯವು ಬರಲಿದೆ ಎಂದು ತೋರಿಸಲು ಮೊಹರಿಗಳ ಸಾಮ್ಯವನ್ನು ಕೊಟ್ಟನು. ಈಗ ಅವನು ವಿವರಿಸುವ ಸಾಮ್ಯದಲ್ಲಿ, ತದ್ರೀತಿಯ ಹಲವಾರು ಲಕ್ಷಣಗಳು ಇರುವದಾದರೂ, ರಾಜ್ಯದ ಬಲದಲ್ಲಿ ಕ್ರಿಸ್ತನ ಸಾನಿಧ್ಯತೆಯ ಸಮಯದಲ್ಲಿ ನೆರವೇರುವ ಕಾರ್ಯಗಳನ್ನು ವಿವರಿಸುತ್ತದೆ. “ಅವನ ಆಸ್ತಿಯನ್ನು” ವೃದ್ಧಿ ಪಡಿಸಲು ಅವನ ಶಿಷ್ಯರು ಭೂಮಿಯಲ್ಲಿರುವಷ್ಟು ಕಾಲ ಕೆಲಸ ಮಾಡತಕ್ಕದ್ದು ಎಂದು ಉದಾಹರಿಸುತ್ತದೆ.
ಯೇಸುವು ಆರಂಭಿಸುವದು: “ದೇಶಾಂತರಕ್ಕೆ ಹೋಗುವ ಒಬ್ಬ ಮನುಷ್ಯನು ತನ್ನ ಆಳುಗಳನ್ನು ಕರೆದು ಅವರಿಗೆ ಆಸ್ತಿಯನ್ನು ಒಪ್ಪಿಸಿಕೊಟ್ಟಂತಿರುವದು, [ರಾಜ್ಯದೊಂದಿಗೆ ಜೋಡಿಸಲ್ಪಟ್ಟಿರುವ ಸನ್ನಿವೇಶಗಳು].” ದೇಶಾಂತರಕ್ಕೆ ಹೋಗುವ ಮೊದಲು ತನ್ನ ಸೇವಕರಿಗೆ—ಪರಲೋಕ ರಾಜ್ಯಕ್ಕಾಗಿ ಸಾಲಿನಲ್ಲಿರುವ ಶಿಷ್ಯರಿಗೆ—ಅವನ ಆಸ್ತಿಯನ್ನು ಒಪ್ಪಿಸಿಕೊಡುವ ಮನುಷ್ಯನು ಯೇಸುವಾಗಿದ್ದಾನೆ. ಈ ಆಸ್ತಿಯು ಯಾವುದೇ ಪ್ರಾಪಂಚಿಕ ಸ್ವತ್ತುಗಳಾಗಿರುವದಿಲ್ಲ, ಆದರೆ ಅದು ಇನ್ನಷ್ಟು ಅಧಿಕ ಶಿಷ್ಯರನ್ನು ತರಲು ಸಾಮರ್ಥ್ಯವಿರುವಂತೆ ಅವನು ಈಗಾಗಲೇ ಬೆಳಸಿ ಹದಮಾಡಿದ ಕಾರ್ಯ ಕ್ಷೇತ್ರವಾಗಿದೆ.
ಯೇಸುವು ತನ್ನ ಆಸ್ತಿಯನ್ನು ಅವನು ಪರಲೋಕಕ್ಕೆ ಹೋಗುವ ಸ್ವಲ್ಪ ಮುಂಚಿತವಾಗಿ ಅವನ ಆಳುಗಳಿಗೆ ಒಪ್ಪಿಸುತ್ತಾನೆ. ಅವನದನ್ನು ಮಾಡುವದು ಹೇಗೆ? ಭೂಲೋಕದ ಕಟ್ಟಕಡೆಯ ವರೆಗೂ ರಾಜ್ಯದ ಸಂದೇಶವನ್ನು ಸಾರುವದರ ಮೂಲಕ ಈಗಾಗಲೇ ಬೆಳಸಲ್ಪಟ್ಟ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಅವರಿಗೆ ಅಪ್ಪಣೆಯನ್ನೀಯುವದರ ಮೂಲಕವೇ. ಯೇಸುವು ಹೇಳುವದು: “ಅವನು ಒಬ್ಬನಿಗೆ ಐದು ತಲಾಂತು, ಒಬ್ಬನಿಗೆ ಎರಡು ಒಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ಬೇರೊಂದು ದೇಶಕ್ಕೆ ಹೋದನು.”
ಹೀಗೆ ಎಂಟು ತಲಾಂತುಗಳನ್ನು—ಕ್ರಿಸ್ತನ ಆಸ್ತಿಯನ್ನು—ಅವರವರ ಸಾಮರ್ಥ್ಯಕ್ಕನುಗುಣವಾಗಿ ಅಥವಾ ಆಳುಗಳ ಆತ್ಮಿಕ ಸಾಧ್ಯತೆಗಳಿಗನುಗುಣವಾಗಿ ಹಂಚಲಾಯಿತು. ಆಳುಗಳು ಶಿಷ್ಯರುಗಳ ವರ್ಗಗಳನ್ನು ಸೂಚಿಸುತ್ತಾರೆ. ಮೊದಲನೆಯ ಶತಮಾನದಲ್ಲಿ, ಅಪೊಸ್ತಲರನ್ನು ಒಡಗೂಡಿ, ಆ ವರ್ಗವು ಐದು ತಲಾಂತುಗಳನ್ನು ಪಡೆಯಿತು. ಐದು ಮತ್ತು ಎರಡು ತಲಾಂತುಗಳನ್ನು ಪಡೆದ ಆಳುಗಳು, ತಮ್ಮ ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದ ಮೂಲಕ ಅವನ್ನು ಎರಡು ಪಟ್ಟು ಹೆಚ್ಚಿಸಿದರು. ಆದಾಗ್ಯೂ, ಒಂದು ತಲಾಂತನ್ನು ಪಡೆದ ಆಳು ಅದನ್ನು ಭೂಮಿಯನ್ನು ಅಗಿದು ಬಚ್ಚಿಟ್ಟನು.
“ಬಹುಕಾಲದ ಮೇಲೆ” ಯೇಸುವು ಮುಂದುವರಿಸುವದು, “ಆ ಆಳುಗಳ ಧಣಿಯು ಅವರಿಂದ ಲೆಕ್ಕ ತೆಗೆದು ಕೊಳ್ಳಲು ಬಂದನು.” ಅದು ಈ 20-ನೆಯ ಶತಮಾನದಲ್ಲಿ, ಸುಮಾರು 1,900 ವರ್ಷಗಳ ನಂತರ ಲೆಕ್ಕವನ್ನು ತೆಗೆದುಕೊಳ್ಳಲು ಬಂದನು, ಆದದರಿಂದ ಅದು ಖಂಡಿತವಾಗಿಯೂ “ಬಹು ಕಾಲದ ಮೇಲೆ” ಎನ್ನುವದು ಸರಿಯಾಗಿದೆ. ಅನಂತರ ಯೇಸುವು ವಿವರಿಸುವದು:
“ಐದು ತಲಾಂತು ಹೊಂದಿದವನು ಮುಂದೆ ಬಂದು ಇನ್ನೂ ಐದು ತಲಾಂತು ತಂದು—ಸ್ವಾಮೀ, ನೀನು ಐದು ತಲಾಂತನ್ನು ನನಗೆ ಕೊಟ್ಟಿದ್ದಿಯಲ್ಲಾ, ಇಗೋ, ಇನ್ನು ಐದು ತಲಾಂತು ಸಂಪಾದಿಸಿದ್ದೇನೆ ಅಂದನು. ಅವನ ಧಣಿಯು—ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು; ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದೀ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು ಅಂದನು.” ಅದೇ ರೀತಿ ಎರಡು ತಲಾಂತು ಹೊಂದಿದವನು ಅವನ ತಲಾಂತುಗಳನ್ನು ಎರಡು ಪಟ್ಟು ಮಾಡಿದ್ದರಿಂದ ಅದೇ ರೀತಿಯ ಶಿಫಾರಸನ್ನೂ, ಬಹುಮಾನವನ್ನೂ ಪಡೆದನು.
ಆದರೆ ಅವರ ಧಣಿಯ ಸೌಭಾಗ್ಯದಲ್ಲಿ ಈ ನಂಬಿಗಸ್ತ ಆಳುಗಳು ಸೇರುವದು ಹೇಗೆ? ಒಳ್ಳೇದು, ಅವರ ಧಣಿಯಾದ ಯೇಸು ಕ್ರಿಸ್ತನು ದೇಶಾಂತರಕ್ಕೆ ಅಂದರೆ ಪರಲೋಕದಲ್ಲಿರುವ ಅವನ ತಂದೆಯ ಮನೆಗೆ ಹೋದಾಗ ರಾಜ್ಯದ ಅಧಿಕಾರವನ್ನು ಪಡೆಯುವದೇ ಆ ಸೌಭಾಗ್ಯದಲ್ಲಿ ಸೇರುವದಾಗಿದೆ. ಆಧುನಿಕ ಸಮಯಗಳಲ್ಲಿ ನಂಬಿಗಸ್ತ ಆಳುಗಳಿಗೆ, ರಾಜ್ಯದ ಜವಾಬ್ದಾರಿಕೆಗಳನ್ನು ಅವರ ವಶಕ್ಕೆ ಒಪ್ಪಿಸಿದಾಗ, ಅವರಿಗೆ ಮಹಾ ಸಂತೋಷವುಂಟಾಯಿತು ಮತ್ತು ಅವರು ತಮ್ಮ ಐಹಿಕ ಜೀವಿತವನ್ನು ಮುಗಿಸಿ, ಸ್ವರ್ಗೀಯ ರಾಜ್ಯಕ್ಕೆ ಪುನರುತ್ಥಾನಗೊಳಿಸಲ್ಪಡುವಾಗ ಆ ಸಂತೋಷವು ಶಿಕರವನ್ನೇರುವುದು. ಆದರೆ ಮೂರನೆಯ ಆಳಿನ ಕುರಿತೇನು?
“ಸ್ವಾಮೀ, ನೀನು ಕಠಿಣ ಮನುಷ್ಯನು,” ಈ ಆಳು ದೂರುವದು, “ನೀನು ಬಿತ್ತದಿರುವಲ್ಲಿ ಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿ ಮಾಡಿಕೊಳ್ಳುವವನು ಎಂದು ತಿಳಿದು ಹೆದರಿ ಕೊಂಡು ಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು; ಇಗೋ, ನಿನ್ನದು ನಿನಗೆ ಸಂದಿದೆ ಅಂದನು.” ಬೇಕುಬೇಕೆಂದೇ ಈ ಆಳು ಹದಗೊಳಿಸಲ್ಪಟ್ಟ ಕ್ಷೇತ್ರದಲ್ಲಿ ಸಾರಲು ಮತ್ತು ಶಿಷ್ಯರನ್ನು ಮಾಡಲು ನಿರಾಕರಿಸಿದನು. ಆದುದರಿಂದ ಧಣಿಯು ಅವನನ್ನು “ಮೈಗಳ್ಳನಾದ ಕೆಟ್ಟ ಆಳು” ಎಂದು ಕರೆಯುತ್ತಾನೆ ಮತ್ತು ಅವನ ಮೇಲೆ ನ್ಯಾಯತೀರ್ಪನ್ನು ವಿಧಿಸುತ್ತಾನೆ: “ಅವನಿಂದ ತಲಾಂತನ್ನು ತೆಗೆದು ಕೊಳ್ಳಿರಿ. . . . ಮತ್ತು ಕೆಲಸಕ್ಕೆ ಬಾರದ ಈ ಆಳನ್ನು ಹೊರಗೆ ಕತ್ತಲೆಗೆ ಹಾಕಿಬಿಡಿರಿ. ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.” ಈ ಕೆಟ್ಟ ಆಳಿನ ವರ್ಗದವರು, ಹೊರಗೆ ಹಾಕಲ್ಪಡುವದರಿಂದ, ಅವರು ಯಾವುದೇ ರೀತಿಯ ಆತ್ಮಿಕ ಸಂತೋಷದಿಂದ ವಂಚಿತರಾಗುತ್ತಾರೆ.
ಕ್ರಿಸ್ತನ ಹಿಂಬಾಲಕರಾಗಿದ್ದೇವೆ ಎಂದು ಹೇಳಿಕೊಳ್ಳುವ ಎಲ್ಲರಿಗೆ ಒಂದು ಗಂಭೀರವಾದ ಪಾಠವು ಇದರಲ್ಲಿ ಇದೆ. ಅವನ ಮೆಚ್ಚುಗೆಯಲ್ಲಿ ಮತ್ತು ಬಹುಮಾನದಲ್ಲಿ ಆನಂದಿಸಬೇಕಾದರೆ ಮತ್ತು ಹೊರಗೆ ಕತ್ತಲೆಯಲ್ಲಿ ನೂಕಲ್ಪಡದೆ ಕಟ್ಟಕಡೆಗೆ ನಾಶನವಾಗದೆ ಇರಬೇಕಾದರೆ, ಸಾರುವ ಕೆಲಸದಲ್ಲಿ ಪೂರ್ಣ ಭಾಗವಹಿಸುವ ಮೂಲಕ ಅವರ ಸ್ವರ್ಗೀಯ ಧಣಿಯ ಆಸ್ತಿಗಳನ್ನು ವೃದ್ಧಿಸಲು ನಾವು ಕೆಲಸ ಮಾಡತಕ್ಕದ್ದು. ಈ ಕೆಲಸದಲ್ಲಿ ನೀವು ಶೃದ್ಧಾಪೂರ್ವಕರಾಗಿದ್ದೀರೋ?
ರಾಜ್ಯದ ಬಲದೊಂದಿಗೆ ಕ್ರಿಸ್ತನು ಬರುವಾಗ
ಯೇಸುವು ಇನ್ನೂ ಅವನ ಅಪೊಸ್ತಲರೊಂದಿಗೆ ಎಣ್ಣೇಮರಗಳ ಗುಡ್ಡದ ಮೇಲೆ ಇದ್ದಾನೆ. ಅವನ ಸಾನಿಧ್ಯತೆಯ ಮತ್ತು ವಿಷಯಗಳ ವ್ಯವಸ್ಥೆಯ ಅಂತ್ಯದ ಒಂದು ಸೂಚನೆಯ ಅವರ ವಿನಂತಿಗೆ ಉತ್ತರವಾಗಿ, ಈಗ ಅವನ ಮೂರು ಸಾಮ್ಯಗಳ ಸರಣಿಯಲ್ಲಿ ಕೊನೆಯದ್ದನ್ನು ಯೇಸುವು ಅವರಿಗೆ ಹೇಳುತ್ತಾನೆ. “ಇದಲ್ಲದೆ ಮನುಷ್ಯ ಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ,” ಯೇಸುವು ಆರಂಭಿಸುವದು, “ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು.”
ಅವರ ಸ್ವರ್ಗೀಯ ಮಹಿಮೆಯಲ್ಲಿ ದೇವದೂತರನ್ನು ಮಾನವರು ನೋಡಶಕ್ತರಲ್ಲ. ಆದುದರಿಂದ ದೇವದೂತರೊಂದಿಗೆ ಕೂಡಿ ಮನುಷ್ಯ ಕುಮಾರನಾದ ಯೇಸು ಕ್ರಿಸ್ತನ ಆಗಮನವು ಮಾನವ ಕಣ್ಣುಗಳಿಗೆ ಅದೃಶ್ಯವಾಗಿರಬೇಕು. ಈ ಆಗಮನವು 1914ನೆಯ ವರ್ಷದಲ್ಲಿ ನಡೆಯಿತು. ಆದರೆ ಯಾವ ಉದ್ದೇಶಕ್ಕಾಗಿ? ಯೇಸುವು ವಿವರಿಸುವದು: “ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಕುರಿಗಳನ್ನು ಬಲಗಡೆಯಲ್ಲಿ ಆಡುಗಳನ್ನು ಎಡಗಡೆಯಲ್ಲಿ ನಿಲ್ಲಿಸುವನು.”
ಮೆಚ್ಚಿಕೆಯ ಪಕ್ಕದಲ್ಲಿರುವಂತೆ ಪ್ರತ್ಯೇಕಿಸಲ್ಪಟ್ಟವರಿಗೆ ಏನು ಸಂಭವಿಸುತ್ತದೆ ಎಂದು ವಿವರಿಸುತ್ತಾ ಯೇಸುವು ಹೇಳುವದು: “ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ—ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ಥ್ಯವಾಗಿ ತೆಗೆದುಕೊಳ್ಳಿರಿ.” ಈ ಸಾಮ್ಯದ ಕುರಿಗಳು ಕ್ರಿಸ್ತನೊಂದಿಗೆ ಆಳುವದಿಲ್ಲ, ಆದರೆ ಅದರ ಐಹಿಕ ಪ್ರಜೆಗಳಾಗಿ ಅವರು ರಾಜ್ಯವನ್ನು ಸ್ವಾಸ್ಥ್ಯವಾಗಿ ಪಡೆಯುತ್ತಾರೆ. ಮಾನವ ಕುಲವನ್ನು ವಿಮೋಚಿಸಲು ದೇವರ ಒದಗಿಸುವಿಕೆಯಿಂದ ಪ್ರಯೋಜನ ಪಡೆಯಬಹುದಾದ ಮಕ್ಕಳನ್ನು ಆದಾಮ ಹವ್ವರು ಮೊದಲ ಬಾರಿ ಪಡೆದಾಗ, “ಲೋಕಾದಿಯಿಂದ ಸಿದ್ಧಮಾಡುವಿಕೆ” ನಡೆಯಿತು.
ಆದರೆ ರಾಜನ ಮೆಚ್ಚಿಕೆಯ ಬಲಗಡೆಯಲ್ಲಿ ಪ್ರತ್ಯೇಕಿಸಲ್ಪಟ್ಟ ಕುರಿಗಳು ಇರುವದು ಯಾಕೆ? “ನಾನು ಹಸಿದಿದ್ದೆನು,” ಅರಸನು ಉತ್ತರಿಸುವದು, “ನನಗೆ ಊಟಕ್ಕೆ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನ್ನನ್ನು ಸೇರಿಸಿಕೊಂಡಿರಿ; ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವದಕ್ಕೆ ಕೊಟ್ಟಿರಿ; ರೋಗದಲ್ಲಿ ಬಿದ್ದಿದ್ದೆನ್ದು, ನನ್ನನ್ನು ಆರೈಕೆ ಮಾಡುವದಕ್ಕೆ ಬಂದಿರಿ. ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವದಕ್ಕೆ ಬಂದಿರಿ.”
ಕುರಿಗಳು ಈ ಭೂಮಿಯ ಮೇಲಿದ್ದುದರಿಂದ, ಅವರ ಸ್ವರ್ಗೀಯ ಅರಸನಿಗೆ ಅವರು ಅಂಥ ಉತ್ತಮ ಕೃತ್ಯಗಳನ್ನು ಹೇಗೆ ಮಾಡಸಾಧ್ಯವಿದೆ ಎಂದು ಅವರು ತಿಳಿಯಲು ಬಯಸಿದರು. “ಸ್ವಾಮೀ, ಯಾವಾಗ ನೀನು ಹಸಿದ್ದದನ್ನು ಕಂಡು ನಿನಗೆ ಊಟಕ್ಕೆ ಕೊಟ್ಟೆವು?” ಅವರು ಕೇಳಿದರು, “ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವದಕ್ಕೆ ಕೊಟ್ಟೆವು? ಯಾವಾಗ ನೀನು ಪರದೇಶಿಯಾಗಿರುವದನ್ನು ಕಂಡು ಸೇರಿಸಿಕೊಂಡೆವು? ಇಲ್ಲವೆ ನಿನಗೆ ಬಟ್ಟೆಯಿಲ್ಲದ್ದನ್ನು ಕಂಡು ಉಡುವದಕ್ಕೆ ಕೊಟ್ಟೆವು? ಯಾವಾಗ ನೀನು ರೋಗದಲ್ಲಿ ಬಿದ್ದದ್ದನ್ನು ಅಥವಾ ಸೆರೆಮನೆಯಲ್ಲಿ ಇದ್ದದ್ದನ್ನು ಕಂಡು ನೋಡುವದಕ್ಕೆ ಬಂದೆವು?”
“ನಿಮಗೆ ಸತ್ಯವಾಗಿ ಹೇಳುತ್ತೇನೆ,” ಅರಸನು ಉತ್ತರಿಸುವದು, “ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು.” ಅವನೊಂದಿಗೆ ಪರಲೋಕದಲ್ಲಿ ಆಳುವ 1,44,000 ಮಂದಿಯಲ್ಲಿ ಭೂಮಿಯಲ್ಲಿ ಉಳಿದವರು ಕ್ರಿಸ್ತನ ಸಹೋದರರಾಗಿರುತ್ತಾರೆ. ಮತ್ತು ಅವರಿಗೆ ಒಳಿತನ್ನು ಮಾಡುವದು, ಯೇಸುವು ಹೇಳಿದಂತೆ, ಅವನಿಗೆ ಮಾಡಿದಂತೆ ಆಗುತ್ತದೆ.
ಅನಂತರ, ಅರಸನು ಆಡುಗಳನ್ನು ಸಂಬೋಧಿಸುತ್ತಾನೆ. “ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚನಿಗೂ ಅವನ ದೂತರಿಗೂ ಸಿದ್ಧ ಮಾಡಿರುವ ನಿತ್ಯ ಬೆಂಕಿಯೊಳಗೆ ಹೋಗಿರಿ. ನಾನು ಹಸಿದಿದ್ದೆನು, ನೀವು ನನಗೆ ಊಟಕ್ಕೆ ಕೊಡಲಿಲ್ಲ; ನಾನು ಬಾಯಾರಿದ್ದೆನು, ನನಗೆ ಕುಡಿಯುವದಕ್ಕೆ ಕೊಡಲಿಲ್ಲ; ಪರದೇಶಿಯಾಗಿದ್ದೆನು, ನನ್ನನ್ನು ಸೇರಿಸಿಕೊಳ್ಳಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವದಕ್ಕೆ ಕೊಡಲಿಲ್ಲ; ರೋಗದಲ್ಲಿ ಬಿದ್ದಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆ ಮಾಡಲಿಕ್ಕೆ ಬರಲಿಲ್ಲ.”
ಆದಾಗ್ಯೂ ಆಡುಗಳು ದೂರುವದು: “ಸ್ವಾಮೀ, ಯಾವಾಗ ನೀನು ಹಸಿದದ್ದನ್ನೂ, ನೀನು ಬಾಯಾರಿದ್ದನ್ನೂ, ನೀನು ಪರದೇಶಿಯಾದದ್ದನ್ನೂ, ಬಟ್ಟೆಯಿಲ್ಲದವನಾಗಿದ್ದದ್ದನ್ನೂ, ರೋಗದಲ್ಲಿ ಬಿದ್ದದ್ದನ್ನೂ ಸೆರೆಮನೆಯಲ್ಲಿದ್ದದ್ದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು?” ಯಾವ ಆಧಾರದ ಮೇಲೆ ಕುರಿಗಳಿಗೆ ಅನುಕೂಲ ರೀತಿಯ ತೀರ್ಪು ಮಾಡಲಾಗಿದೆಯೋ ಅದೇ ಆಧಾರದ ಮೇಲೆ ಆಡುಗಳಿಗೆ ಪ್ರತಿಕೂಲ ರೀತಿಯ ತೀರ್ಪನ್ನು ಕೊಡಲಾಗಿದೆ. “ನೀವು ಈ [ನನ್ನ ಸಹೋದರರಲ್ಲಿ] ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡದೆ ಹೋದಿರೋ,” ಯೇಸುವು ಉತ್ತರಿಸುವದು, “ಅದನ್ನು ನನಗೂ ಮಾಡದೆ ಹೋದ ಹಾಗಾಯಿತು.”
ಆದುದರಿಂದ ಮಹಾ ಸಂಕಟದಲ್ಲಿ ಈ ವಿಷಯಗಳ ದುಷ್ಟ ವ್ಯವಸ್ಥೆಯ ಅಂತ್ಯದ ಕೊಂಚ ಮೊದಲು, ರಾಜ್ಯದ ಬಲದಲ್ಲಿ ಕ್ರಿಸ್ತನ ಸಾನಿಧ್ಯತೆಯು ನ್ಯಾಯತೀರ್ಪಿನ ಒಂದು ಸಮಯವಾಗಲಿರುವದು. ಆಡುಗಳು “ನಿತ್ಯಶಿಕ್ಷೆಗೂ, ನೀತಿವಂತರು [ಕುರಿಗಳು] ನಿತ್ಯ ಜೀವಕ್ಕೂ ಹೋಗುವರು.” ಮತ್ತಾಯ 24:2—25:46; 13:40, 49; ಮಾರ್ಕ 13:3-37; ಲೂಕ 21:7-36; 19:43, 44; 17:20-30; 2 ತಿಮೊಥಿ 3:1-5; ಯೋಹಾನ 10:16; ಪ್ರಕಟನೆ 14:1-3.
▪ ಅಪೊಸ್ತಲರ ಪ್ರಶ್ನೆಯನ್ನು ಪ್ರಚೋದಿಸಿದ್ದು ಯಾವುದು, ಆದರೆ ಅವರ ಮನಸ್ಸಿನಲ್ಲಿ ಪ್ರಾಯಶಃ ಬೇರೆ ಯಾವದು ಇದ್ದಿರಬಹುದು?
▪ ಸಾ.ಶ.70ರಲ್ಲಿ ಯೇಸುವಿನ ಪ್ರವಾದನೆಯ ಯಾವ ಭಾಗವು ನೆರವೇರಿತು, ಆದರೆ ಆಗ ಏನು ಸಂಭವಿಸಲಿಲ್ಲ?
▪ ಯೇಸುವಿನ ಪ್ರಥಮ ನೆರವೇರಿಕೆಯು ಯಾವಾಗ ಆಯಿತು, ಆದರೆ ಅದರ ಕೊನೆಯ ನೆರವೇರಿಕೆ ಯಾವಾಗ ಆಗುತ್ತದೆ?
▪ ಅದರ ಪ್ರಥಮ ಮತ್ತು ಕೊನೆಯ ನೆರವೇರಿಕೆಗಳಲ್ಲಿ ಅಸಹ್ಯ ವಸ್ತು ಯಾವದು?
▪ ಯೆರೂಸಲೇಮಿನ ನಾಶನದೊಂದಿಗೆ ಮಹಾ ಸಂಕಟದ ಕೊನೆಯ ನೆರವೇರಿಕೆಯು ಯಾಕೆ ಆಗಲಿಲ್ಲ?
▪ ಕ್ರಿಸ್ತನ ಸಾನಿಧ್ಯತೆಯು ಯಾವ ಲೋಕ ಘಟನೆಗಳಿಂದ ಗುರುತಿಸಲ್ಪಟ್ಟಿದೆ?
▪ ‘ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವದು’ ಯಾವಾಗ, ಆದರೆ ಕ್ರಿಸ್ತನ ಹಿಂಬಾಲಕರು ಏನು ಮಾಡುವರು?
▪ ಅಂತ್ಯವು ಯಾವಾಗ ಸಮೀಪವೆಂಬದನ್ನು ಅವನ ಭಾವೀ ಶಿಷ್ಯರು ತಿಳಿಯುವಂತೆ, ಸಹಾಯಕ್ಕಾಗಿ ಯೇಸುವು ಯಾವ ದೃಷ್ಟಾಂತವನ್ನು ಒದಗಿಸಿದನು?
▪ ಕಡೇ ದಿನಗಳಲ್ಲಿ ಜೀವಿಸುವ ಅವನ ಶಿಷ್ಯರಿಗೆ ಯೇಸುವು ಯಾವ ಎಚ್ಚರಿಕೆಯನ್ನು ಒದಗಿಸಿದನು?
▪ ಹತ್ತು ಕನ್ಯೆಯರಿಂದ ಯಾರು ಸೂಚಿಸಲ್ಪಟ್ಟಿದ್ದಾರೆ?
▪ ಮದಲಿಂಗನಿಗೆ ಕ್ರೈಸ್ತ ಸಭೆಯು ವಿವಾಹದಲ್ಲಿ ಯಾವಾಗ ವಾಗ್ದಾನಿಸಲ್ಪಟ್ಟಿತ್ತು, ಆದರೆ ಮದುವೆಯ ಊಟಕ್ಕೆ ತನ್ನ ಮದಲಗಿತ್ತಿಯನ್ನು ಕೊಂಡೊಯ್ಯಲು ಮದಲಿಂಗನು ಯಾವಾಗ ಬರುತ್ತಾನೆ?
▪ ಎಣ್ಣೆಯು ಏನನ್ನು ಪ್ರತಿನಿಧಿಸುತ್ತದೆ, ಮತ್ತು ಬುದ್ಧಿವಂತೆಯರಾದ ಕನ್ಯೆಯರ ಹತ್ತಿರ ಅದು ಇದ್ದುದರಿಂದ ಏನನ್ನು ಮಾಡಲು ಅವರಿಗೆ ಸಾಧ್ಯ ಮಾಡಿತು?
▪ ಮದುವೆಯ ಊಟವು ಎಲ್ಲಿ ನಡೆಯುತ್ತದೆ?
▪ ಬುದ್ಧಿಯಿಲ್ಲದ ಕನ್ಯೆಯರು ಯಾವ ಮಹಾ ಬಹುಮಾನವನ್ನು ಕಳೆದು ಕೊಳ್ಳುತ್ತಾರೆ ಮತ್ತು ಅವರ ಅಂತ್ಯಗತಿಯೇನು?
▪ ತಲಾಂತುಗಳ ಸಾಮ್ಯವು ಯಾವ ಪಾಠವನ್ನು ಕಲಿಸುತ್ತದೆ?
▪ ಆಳುಗಳು ಯಾರು, ಮತ್ತು ಅವರ ವಶಕ್ಕೆ ಕೊಡಲ್ಪಟ್ಟ ಆಸ್ತಿಯು ಯಾವುದು?
▪ ಧಣಿಯು ಲೆಕ್ಕ ತೆಗೆದು ಕೊಳ್ಳಲು ಯಾವಾಗ ಬರುತ್ತಾನೆ, ಮತ್ತು ಅವನು ಏನನ್ನು ಕಂಡುಕೊಳ್ಳುತ್ತಾನೆ?
▪ ನಂಬಿಗಸ್ತ ಆಳುಗಳು ಯಾವ ಸೌಭಾಗ್ಯದಲ್ಲಿ ಸೇರುತ್ತಾರೆ, ಮತ್ತು ಮೂರನೆಯ ಕೆಟ್ಟ ಆಳಿಗೆ ಏನು ಸಂಭವಿಸುತ್ತದೆ?
▪ ಕ್ರಿಸ್ತನ ಸಾನಿಧ್ಯತೆಯು ಯಾಕೆ ಅದೃಶ್ಯವಾಗಿರುವದು, ಮತ್ತು ಆ ಸಮಯದಲ್ಲಿ ಅವನು ಯಾವ ಕೆಲಸವನ್ನು ಮಾಡುವನು?
▪ ಕುರಿಗಳು ರಾಜ್ಯವನ್ನು ಸ್ವಾಸ್ಥ್ಯವಾಗಿ ಪಡೆಯುವದು ಯಾವ ಅರ್ಥದಲ್ಲಿ?
▪ “ಲೋಕಾದಿಯಿಂದ ಸಿದ್ಧಮಾಡುವಿಕೆಯು” ಯಾವಾಗ ನಡೆಯುತ್ತದೆ?
▪ ಕುರಿಗಳಾಗಿ ಅಥವಾ ಆಡುಗಳಾಗಿ ಜನರು ಯಾವುದರ ಅಧಾರದ ಮೇಲೆ ನ್ಯಾಯತೀರ್ಪು ಹೊಂದುವರು?
-
-
ಯೇಸುವಿನ ಕೊನೆಯ ಪಸ್ಕ ಹಬ್ಬ ಸಮೀಪಿಸಿದೆಅತ್ಯಂತ ಮಹಾನ್ ಪುರುಷ
-
-
ಅಧ್ಯಾಯ 112
ಯೇಸುವಿನ ಕೊನೆಯ ಪಸ್ಕ ಹಬ್ಬ ಸಮೀಪಿಸಿದೆ
ನೈಸಾನ್ 11, ಮಂಗಳವಾರವು ಮುಕ್ತಾಯಗೊಳ್ಳುತ್ತಿದ್ದಂತೆಯೇ, ಯೇಸುವು ಎಣ್ಣೇ ಮರಗಳ ಗುಡ್ಡದ ಮೇಲೆ ಅಪೊಸ್ತಲರಿಗೆ ಬೋಧಿಸುವದನ್ನು ಕೊನೆಗೊಳಿಸಿದನು. ಅದೆಂಥಾ ಒಂದು ಕಾರ್ಯಮಗ್ನ ಹಾಗೂ ಶ್ರಮಭರಿತ ದಿನವಾಗಿತ್ತು! ಈಗ ರಾತ್ರಿಯಲ್ಲಿ ಬೇಥಾನ್ಯದಲ್ಲಿ ಉಳುಕೊಳ್ಳಲಿಕ್ಕಾಗಿ ಅವರು ಪ್ರಾಯಶಃ ಹಿಂದಿರುಗುತ್ತಿರುವಾಗ, ಅವನು ಅಪೊಸ್ತಲರಿಗೆ ಹೇಳುವದು: “ಎರಡು ದಿವಸಗಳಾದ ಮೇಲೆ ಪಸ್ಕ ಹಬ್ಬ ಬರುತ್ತದೆಂದು ಬಲ್ಲಿರಿ; ಆಗ ಮನುಷ್ಯ ಕುಮಾರನನ್ನು ವಧಾಸ್ತಂಭಕ್ಕೆ ಹಾಕುವದಕ್ಕೆ ಒಪ್ಪಿಸಿಕೋಡೋಣವಾಗುವದು.”
-