ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನಮ್ಮೆಲ್ಲರಿಗೆ ಸಾಂತ್ವನ ಬೇಕೇಬೇಕು
    ಕಾವಲಿನಬುರುಜು (ಸಾರ್ವಜನಿಕ)—2016 | ನಂ. 4
    • ಮುಖಪುಟ ಲೇಖನ | ನಿಜ ಸಾಂತ್ವನ ಯಾರಿಂದ ಸಿಗುತ್ತದೆ?

      ನಮ್ಮೆಲ್ಲರಿಗೆ ಸಾಂತ್ವನ ಬೇಕೇಬೇಕು

      ತಾಯಿ ತನ್ನ ಮಗನನ್ನು ಸಂತೈಸುತ್ತಿದ್ದಾಳೆ

      ನೀವು ಚಿಕ್ಕವರಾಗಿದ್ದಾಗ ಬಿದ್ದು ಕೈಗೋ ಕಾಲಿಗೋ ಗಾಯ ಆಗಿದ್ದು ನಿಮಗೆ ನೆನಪಿದೆಯಾ? ಆಗ ನಿಮ್ಮ ಅಮ್ಮ ಹೇಗೆ ಸಂತೈಸಿ ಸಮಾಧಾನ ಮಾಡಿದರಂತ ನಿಮ್ಮ ನೆನಪಿನ ಪುಟಗಳನ್ನು ಸ್ವಲ್ಪ ಹಿಂದೆ ತಿರುಗಿಸಿ ನೋಡಿ. ಅಮ್ಮ ಓಡಿ ಬಂದು ಗಾಯಕ್ಕೆ ಊದುತ್ತಾ ಔಷಧಿ ಹಚ್ಚಿ, ನಿಮ್ಮ ತಲೆ ಸವರಿ, ‘ಅಳಬೇಡ ಪುಟ್ಟಾ’ ಅಂತ ಪ್ರೀತಿಯಿಂದ ಅಪ್ಪಿಕೊಂಡಾಗ ನಿಮ್ಮ ಅಳು, ನೋವು ಎಲ್ಲಾ ಕ್ಷಣದಲ್ಲೇ ಮಾಯವಾಗುತ್ತಿತ್ತು. ಚಿಕ್ಕಂದಿನಲ್ಲಿ ಸಾಂತ್ವನ ಬೇಕಾದಾಗೆಲ್ಲಾ ಅದು ತಕ್ಷಣ ಸಿಗುತ್ತಿತ್ತು. ಆದರೆ ಈಗ?

      ದೊಡ್ಡವರಾಗುತ್ತಾ ಹೋದಂತೆ ಸಮಸ್ಯೆಗಳು ಜಾಸ್ತಿಯಾಗುತ್ತವೆ. ಎಷ್ಟು ದೊಡ್ಡ ಸಮಸ್ಯೆಗಳು ಎದುರಾಗುತ್ತವೆಂದರೆ ಸಾಂತ್ವನ ಸಿಗೋದೇ ಕಷ್ಟ. ದೊಡ್ಡವರಾದ ಮೇಲೆ ಬರುವ ಈ ಸಮಸ್ಯೆಗಳು ಯಾವುದೇ ಔಷಧಿ ಅಥವಾ ಅಮ್ಮನ ಅಪ್ಪುಗೆಯಿಂದ ಸರಿಹೋಗಲ್ಲ. ಅಂಥ ಕೆಲವು ಉದಾಹರಣೆಗಳು ಇಲ್ಲಿವೆ ನೋಡಿ:

      • ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡಿದ್ದೀರಾ? ಹೂಲ್ಯಾನ್‌ ಎಂಬ ವ್ಯಕ್ತಿಯನ್ನು ಕೆಲಸದಿಂದ ತೆಗೆದುಹಾಕಿದಾಗ ಅವನಿಗೆ ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ. ‘ನನ್‌ ಜೀವ್ನನೇ ಈ ಕಂಪೆನಿಗೋಸ್ಕರ ಸವ್ಸಿದ್ದೀನಿ. ಈಗ ಇದ್ದಕ್ಕಿದ್ದಂತೆ ಕೆಲ್ಸದಿಂದ ತೆಗ್ದಾಕಿದ್ರೆ ನನ್‌ ಕುಟುಂಬಾನ ಹೇಗ್‌ ನೋಡ್ಕೊಳ್ಲಿ?’ ಅಂತಾನೆ ಹೂಲ್ಯಾನ್‌.

      • ಮದುವೆ ಮುರಿದುಬಿದ್ದು ದಿಕ್ಕೇ ತೋಚದಂತೆ ಆಗಿದೆಯಾ? “ಒಂದುವರೆ ವರ್ಷದ ಹಿಂದೆ ನನ್ನ ಗಂಡ ಇದ್ದಕ್ಕಿದ್ದಂತೆ ನನ್ನನ್ನ ಬಿಟ್ಟುಹೋದಾಗ ನನಗಾದ ನೋವು ಅಷ್ಟಿಷ್ಟಲ್ಲ. ಹೃದಯ ಒಡೆದು ನುಚ್ಚುನೂರಾಯ್ತು. ನಾನು ಶಾರೀರಿಕವಾಗಿ, ಮಾನಸಿಕವಾಗಿ ನೋವು ಅನುಭವಿಸಿದೆ. ನನಗೆ ತುಂಬ ಭಯ ಆಯ್ತು” ಎನ್ನುತ್ತಾಳೆ ರಾಕೆಲ್‌.

      • ಗಂಭೀರ ಕಾಯಿಲೆ ಇದ್ದು ಗುಣ ಆಗೋ ಥರ ಕಾಣಿಸ್ತಾ ಇಲ್ವಾ? ಇಂಥ ಪರಿಸ್ಥಿತಿಯಲ್ಲಿ ಬೈಬಲಿನಲ್ಲಿ ತಿಳಿಸಲಾಗಿರುವ ಯೋಬನಂತೆ ನಿಮಗನಿಸಬಹುದು. ಅವನು ಹೇಳಿದ್ದು, “ನಾನು ಬೇಸರಗೊಂಡಿದ್ದೇನೆ, ಬದುಕುವದಕ್ಕೆ ಇಷ್ಟವಿಲ್ಲ.” (ಯೋಬ 7:16) 80⁠ರ ಪ್ರಾಯದ ಲೂಯೀಸ್‌ ಹೀಗನ್ನುತ್ತಾನೆ: “ನನ್‌ ಜೀವನದಲ್ಲಿ ಎಲ್ಲಾ ಮುಗ್ದೋಯ್ತು. ನಾನ್‌ ಕಾದಿರೋದು ಸಾವು ಒಂದಕ್ಕೇ ಅಂತ ನನಗನಿಸುತ್ತೆ.” ನಿಮಗೂ ಹೀಗನಿಸಬಹುದು.

      • ಪ್ರಿಯರ ಮರಣದಿಂದಾಗಿ ತತ್ತರಿಸಿಹೋಗಿದ್ದೀರಾ? “ನನ್‌ ಮಗ ವಿಮಾನ ಅಪಘಾತದಲ್ಲಿ ತೀರ್ಕೊಂಡ ಅಂತ ಕೇಳಿದಾಗ ನಂಗ್‌ ನಂಬೋಕೇ ಆಗ್ಲಿಲ್ಲ. ಆದ್ರೆ ಅದೇ ನಿಜ ಅಂತ ಗೊತ್ತಾದಾಗ ಎಷ್ಟು ನೋವಾಯ್ತಂದ್ರೆ ಬೈಬಲಿನಲ್ಲಿ ಹೇಳೋ ಥರ ದೊಡ್ಡ ಕತ್ತಿಯಿಂದ ಇರಿದ ಹಾಗಾಯ್ತು” ಎನ್ನುತ್ತಾರೆ ರಾಬರ್ಟ್‌.—ಲೂಕ 2:35.

      ಇಂಥ ಕಷ್ಟದ ಪರಿಸ್ಥಿತಿಯಲ್ಲೂ ರಾಬರ್ಟ್‌, ಲೂಯೀಸ್‌, ರಾಕೆಲ್‌ ಮತ್ತು ಹೂಲ್ಯಾನ್‌ ಸಾಂತ್ವನ ಪಡೆದುಕೊಂಡರು. ಯಾರಿಂದ ಗೊತ್ತಾ? ಸರ್ವಶಕ್ತ ದೇವರಿಂದ. ಹಾಗಾದರೆ, ದೇವರು ಹೇಗೆ ಸಂತೈಸುತ್ತಾನೆ? ಆತನು ನಿಮ್ಮನ್ನೂ ಸಂತೈಸುತ್ತಾನಾ? ಮುಂದಿನ ಲೇಖನ ಓದಿ. (wp16-E No. 5)

  • ದೇವರು ಸಂತೈಸುವ ವಿಧಗಳು
    ಕಾವಲಿನಬುರುಜು (ಸಾರ್ವಜನಿಕ)—2016 | ನಂ. 4
    • ಯೇಸು ಕುಷ್ಠರೋಗಿಯನ್ನು ವಾಸಿಮಾಡುವ ಮುಂಚೆ ಮುಟ್ಟುತ್ತಿದ್ದಾನೆ

      ಮುಖಪುಟ ಲೇಖನ | ನಿಜ ಸಾಂತ್ವನ ಯಾರಿಂದ ಸಿಗುತ್ತದೆ?

      ದೇವರು ಸಂತೈಸುವ ವಿಧಗಳು

      ‘ಯೆಹೋವನುa ಸಕಲ ಸಾಂತ್ವನದ ದೇವರೂ ನಮ್ಮ ಎಲ್ಲ ಸಂಕಟಗಳಲ್ಲಿ ನಮ್ಮನ್ನು ಸಾಂತ್ವನಗೊಳಿಸುವವನೂ ಆಗಿದ್ದಾನೆ’ ಎಂದು ಅಪೊಸ್ತಲ ಪೌಲನು ವರ್ಣಿಸಿದ್ದಾನೆ. (2 ಕೊರಿಂಥ 1:3, 4) ಯಾವುದೇ ವ್ಯಕ್ತಿಗೆ, ಅದೆಷ್ಟೇ ದೊಡ್ಡ ಸಮಸ್ಯೆ ಇದ್ದರೂ ಯೆಹೋವನು ಸಂತೈಸಬಲ್ಲನು ಎಂದು ಬೈಬಲ್‌ ಭರವಸೆ ಕೊಡುತ್ತದೆ.

      ನಾವು ಕಾಯಿಲೆಬಿದ್ದಾಗ ವೈದ್ಯರ ಸಹಾಯ ಪಡೆಯಬೇಕೆಂದರೆ ಮೊದಲು ವೈದ್ಯರ ಹತ್ತಿರ ಹೋಗಬೇಕು. ಅದೇ ರೀತಿ, ದೇವರಿಂದ ಸಾಂತ್ವನ ಪಡೆಯಬೇಕೆಂದರೆ ನಾವೂ ಒಂದು ಕೆಲಸ ಮಾಡಬೇಕು. ಅದೇನೆಂದರೆ, ನಾವು ದೇವರಿಗೆ ಹತ್ತಿರ ಆಗಬೇಕು. ಆದ್ದರಿಂದ, “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಬೈಬಲ್‌ ಹೇಳುತ್ತದೆ.—ಯಾಕೋಬ 4:8.

      ದೇವರು ನಿಜವಾಗಿಯೂ ನಮಗೆ ಹತ್ತಿರ ಆಗುತ್ತಾನಾ? ಆಗ್ತಾನೆ ಅಂತ ನಂಬೋದಕ್ಕೆ ಕಾರಣಗಳಿವೆ. ಮೊದಲನೇ ಕಾರಣ, ನಮಗೆ ಸಹಾಯ ಮಾಡಲು ಇಷ್ಟ ಇದೆ ಅಂತ ಸ್ವತಃ ದೇವರೇ ತುಂಬ ಸಾರಿ ಹೇಳಿದ್ದಾನೆ. (ಇದರ ಜೊತೆಯಲ್ಲಿರುವ ಚೌಕವನ್ನು ನೋಡಿ.) ಎರಡನೇ ಕಾರಣ, ಹಿಂದಿನ ಕಾಲದಲ್ಲೂ ನಮ್ಮ ಕಾಲದಲ್ಲೂ ದೇವರಿಂದ ಸಾಂತ್ವನ ಪಡೆದುಕೊಂಡವರ ಅನೇಕ ಉದಾಹರಣೆಗಳಿವೆ.

      ದೇವರಿಂದ ಸಹಾಯ ಪಡೆದ ಕೆಲವರಲ್ಲಿ ದಾವೀದನೂ ಒಬ್ಬನು. ಅವನು ಅನೇಕ ಕಷ್ಟಗಳನ್ನು ಅನುಭವಿಸಿದನು. ಆಗ “ನನ್ನ ವಿಜ್ಞಾಪನೆಯನ್ನು ಲಾಲಿಸು” ಎಂದು ಪ್ರಾರ್ಥಿಸಿದನು. ಇದಕ್ಕೆ ದೇವರು ಉತ್ತರ ಕೊಟ್ಟನಾ? ಹೌದು, ಕೊಟ್ಟನು. “ನನಗೆ ಸಹಾಯವು ಉಂಟಾಯಿತು. ಆದಕಾರಣ ನನ್ನ ಹೃದಯವು ಹರ್ಷಿಸುವದು” ಎಂದು ದಾವೀದನೇ ಹೇಳಿದ್ದಾನೆ.—ಕೀರ್ತನೆ 28:2, 7.

      ದುಃಖದಲ್ಲಿದ್ದವರನ್ನು ಯೇಸು ಸಂತೈಸಿದ ವಿಧ

      ಸಂತೈಸುವುದರಲ್ಲಿ ಯೇಸುವಿಗೆ ಪ್ರಮುಖ ಪಾತ್ರ ಇರಬೇಕೆನ್ನುವುದು ದೇವರ ಉದ್ದೇಶ. ಆದ್ದರಿಂದ ಆತನು ಯೇಸುವಿಗೆ ಬೇರೆಲ್ಲಾ ಕೆಲಸಗಳ ಜೊತೆಯಲ್ಲಿ “ಮನಮುರಿದವರನ್ನು ಕಟ್ಟಿ ವಾಸಿಮಾಡುವ” ಮತ್ತು “ದುಃಖಿತರೆಲ್ಲರನ್ನು ಸಂತೈಸುವ” ಕೆಲಸವನ್ನೂ ಕೊಟ್ಟನು. (ಯೆಶಾಯ 61:1, 2) ಹೀಗೆ, ಯೇಸು ‘ಕಷ್ಟದಲ್ಲಿರುವವರಿಗೆ’ ಹೆಚ್ಚಿನ ಕಾಳಜಿ ತೋರಿಸಿದನು.—ಮತ್ತಾಯ 11:28-30.

      ಯೇಸು ವಿವೇಕಯುತ ಸಲಹೆ ಕೊಡುವ ಮೂಲಕ, ಜನರನ್ನು ದಯೆಯಿಂದ ಉಪಚರಿಸುವ ಮೂಲಕ ಮತ್ತು ಅವರ ಕಾಯಿಲೆಗಳನ್ನು ಗುಣಪಡಿಸುವ ಮೂಲಕ ಸಂತೈಸಿದನು. ಒಂದು ಸಲ ಒಬ್ಬ ಕುಷ್ಠರೋಗಿ ಯೇಸುವಿಗೆ, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು. ಆಗ ಯೇಸು ಕನಿಕರಪಟ್ಟು, “ನನಗೆ ಮನಸ್ಸುಂಟು. ಶುದ್ಧನಾಗು” ಅಂದನು. (ಮಾರ್ಕ 1:40, 41) ಕೂಡಲೇ, ಅವನ ಕುಷ್ಠ ವಾಸಿವಾಯಿತು.

      ನಮ್ಮನ್ನು ಸಂತೈಸಲು ಈಗ ಯೇಸು ಭೂಮಿಯಲ್ಲಿಲ್ಲ. ಆದರೆ ಅವನ ತಂದೆಯಾದ ಯೆಹೋವನು ‘ಸಕಲ ಸಾಂತ್ವನದ ದೇವರಾಗಿದ್ದಾನೆ.’ ಸಹಾಯದ ಅಗತ್ಯ ಇರುವವರಿಗೆ ಆತನು ಯಾವಾಗಲೂ ಸಹಾಯ ಮಾಡುತ್ತಾನೆ. (2 ಕೊರಿಂಥ 1:3) ಆತನು ಜನರನ್ನು ಸಂತೈಸುವ ನಾಲ್ಕು ವಿಧಗಳನ್ನು ನೋಡಿ:

      • ಬೈಬಲ್‌. “ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳು ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟವು; ನಮ್ಮ ತಾಳ್ಮೆಯಿಂದಲೂ ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನದಿಂದಲೂ ನಾವು ನಿರೀಕ್ಷೆಯುಳ್ಳವರಾಗುವಂತೆ ಅವು ಬರೆಯಲ್ಪಟ್ಟವು.”—ರೋಮನ್ನರಿಗೆ 15:4.

      • ದೇವರ ಪವಿತ್ರಾತ್ಮ. ಯೇಸು ಸತ್ತ ಸ್ವಲ್ಪ ಸಮಯದ ನಂತರ ಕ್ರೈಸ್ತ ಸಭೆಯು ‘ಯೆಹೋವನ ಪವಿತ್ರಾತ್ಮದಿಂದ ಸಾಂತ್ವನವನ್ನು’ ಪಡೆಯಿತು. (ಅಪೊಸ್ತಲರ ಕಾರ್ಯಗಳು 9:31) ಇದರಿಂದಾಗಿ ಸಭೆಯಲ್ಲಿ ಶಾಂತಿ ನೆಲೆಸಿತು. ದೇವರ ಶಕ್ತಿಯಾದ ಪವಿತ್ರಾತ್ಮವು ತುಂಬ ಪ್ರಭಾವಶಾಲಿಯಾಗಿದೆ. ದೇವರು ಇದನ್ನು ಉಪಯೋಗಿಸಿ ಯಾರನ್ನು ಬೇಕಾದರೂ, ಅವರು ಎಂಥದ್ದೇ ಕಷ್ಟದಲ್ಲಿದ್ದರೂ ಸಂತೈಸಬಲ್ಲನು.

      • ಪ್ರಾರ್ಥನೆ. “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ.” ಬದಲಿಗೆ “ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ . . . ಕಾಯುವುದು” ಎಂದು ಉತ್ತೇಜಿಸುತ್ತದೆ ಬೈಬಲ್‌.—ಫಿಲಿಪ್ಪಿ 4:6, 7.

      • ಜೊತೆ ಕ್ರೈಸ್ತರು. ಅವರು ನಮಗೆ ಕಷ್ಟದಲ್ಲಿರುವಾಗ ಸಾಂತ್ವನದ ಆಸರೆ ನೀಡುತ್ತಾರೆ. ‘ಕೊರತೆಯಲ್ಲಿ, ಸಂಕಟದಲ್ಲಿದ್ದಾಗ’ ತನ್ನ ಜೊತೆಯಲ್ಲಿರುವವರು ‘ಬಲವರ್ಧಕ ಸಹಾಯ ಕೊಟ್ಟರು’ ಎಂದು ಅಪೊಸ್ತಲ ಪೌಲ ಹೇಳಿದನು.—ಕೊಲೊಸ್ಸೆ 4:11; 1 ಥೆಸಲೊನೀಕ 3:7.

      ಜೊತೆ ಕ್ರೈಸ್ತನನ್ನು ಸಂತೈಸುತ್ತಿರುವ ಇಬ್ಬರು ಯೆಹೋವನ ಸಾಕ್ಷಿಗಳು

      ಇದರಿಂದ ನಿಜವಾಗಿಯೂ ಸಾಂತ್ವನ ಸಿಗುತ್ತಾ ಅಂತ ನೀವು ಯೋಚಿಸಬಹುದು. ಈಗ ನಾವು ಮೊದಲನೇ ಲೇಖನದಲ್ಲಿ ತಿಳಿಸಲಾದ ವ್ಯಕ್ತಿಗಳ ಬಗ್ಗೆ ಇನ್ನೂ ಸ್ವಲ್ಪ ತಿಳಿದುಕೊಳ್ಳೋಣ. ದೇವರು ಈಗಲೂ ತನ್ನ ಮಾತಿನಂತೆಯೇ ನಡೆದುಕೊಳ್ಳುತ್ತಾನೆ ಎಂದು ಇದರಿಂದ ನಿಮಗೆ ಗೊತ್ತಾಗುತ್ತದೆ. ಆತನು ಹೀಗೆ ಮಾತು ಕೊಟ್ಟಿದ್ದಾನೆ: “ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು.”—ಯೆಶಾಯ 66:13. (wp16-E No. 5)

      a ಬೈಬಲಿನಲ್ಲಿ ಯೆಹೋವ ಎನ್ನುವುದು ದೇವರ ಹೆಸರು.

      ದೇವರು ನಮ್ಮನ್ನು ಸಂತೈಸಲು ಇಷ್ಟಪಡುತ್ತಾನೆ ಎನ್ನಲು ಆಧಾರಗಳು

      • “ಯೆಹೋವನೇ, ನೀನು ನನಗೆ ಸಹಾಯಮಾಡಿ ನನ್ನನ್ನು ಆದರಿಸಿದ್ದೀ.”—ಕೀರ್ತನೆ 86:17, ಪವಿತ್ರ ಗ್ರಂಥ ಬೈಬಲ್‌.

      • “ನನ್ನ ಜನರನ್ನು ಸಂತೈಸಿರಿ, ಸಂತೈಸಿರಿ. . .ಇದೇ ನಿಮ್ಮ ದೇವರ ಆಜ್ಞೆ.”—ಯೆಶಾಯ 40:1, 2.

      • “ಯೆಹೋವನು ಹೀಗನ್ನುತ್ತಾನೆ . . . ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು.”—ಯೆಶಾಯ 66:12, 13.

      • “ದುಃಖಿಸುವವರು ಸಂತೋಷಿತರು. ಅವರಿಗೆ ಸಾಂತ್ವನ ದೊರೆಯುವುದು.”—ಮತ್ತಾಯ 5:4.

      • “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7.

  • ಸಂಕಷ್ಟದಲ್ಲಿರುವವರಿಗೆ ಸಾಂತ್ವನ
    ಕಾವಲಿನಬುರುಜು (ಸಾರ್ವಜನಿಕ)—2016 | ನಂ. 4
    • ಮುಖಪುಟ ಲೇಖನ | ನಿಜ ಸಾಂತ್ವನ ಯಾರಿಂದ ಸಿಗುತ್ತದೆ?

      ಸಂಕಷ್ಟದಲ್ಲಿರುವವರಿಗೆ ಸಾಂತ್ವನ

      ನಮಗೆ ನೂರಾರು ಸಮಸ್ಯೆಗಳು ಬರುತ್ತವೆ. ಆ ಎಲ್ಲಾ ಸಮಸ್ಯೆಗಳಿಗೆ ಸಾಂತ್ವನ ಪಡೆಯೋದು ಹೇಗಂತ ಇಲ್ಲಿ ತಿಳಿಸಲು ಆಗುವುದಿಲ್ಲ. ಆದ್ದರಿಂದ ಆರಂಭದ ಲೇಖನದಲ್ಲಿ ಹೇಳಿದ ನಾಲ್ಕು ಸಮಸ್ಯೆಗಳ ಬಗ್ಗೆ ನೋಡೋಣ. ಇಂಥ ಕಷ್ಟಕರ ಸಮಸ್ಯೆಗಳನ್ನು ಎದುರಿಸುತ್ತಿದ್ದವರು ದೇವರಿಂದ ಹೇಗೆ ಸಾಂತ್ವನ ಪಡೆದರು ಎಂದು ತಿಳಿಯೋಣ.

      ಕೆಲಸ ಕಳೆದುಕೊಂಡಾಗ

      ಕಿಟಕಿಯನ್ನು ಶುಚಿಮಾಡುತ್ತಿರುವ ಜೊನಾತಾನ್‌

      “ಚಿಕ್ಕ ಪುಟ್ಟ ಕೆಲ್ಸ ಅಂತ ನೋಡದೆ ಎಲ್ಲಾ ರೀತಿಯ ಕೆಲಸ ಮಾಡಲು ಕಲಿತೆ. ನಾವು ಅನಾವಶ್ಯಕ ಖರ್ಚು ಮಾಡೋದನ್ನ ನಿಲ್ಲಿಸಿದ್ವಿ.”—ಜೊನಾತಾನ್‌

      ಸೆತ್‌a ಹೀಗನ್ನುತ್ತಾರೆ: “ನಾನೂ ನನ್‌ ಹೆಂಡ್ತಿ, ಇಬ್ರೂ ಒಂದೇ ಸಲ ಕೆಲ್ಸ ಕಳ್ಕೊಂಡ್ವಿ. ಕೆಲ್ಸ ಇಲ್ಲದವರಿಗೆ ಸರಕಾರ ಕೊಡೋ ಸ್ವಲ್ಪ ಹಣದಿಂದ ಮತ್ತು ಚಿಕ್ಕ ಪುಟ್ಟ ಕೂಲಿ ಕೆಲ್ಸ ಮಾಡಿ ಎರಡು ವರ್ಷ ತಳ್ಳಿದ್ವಿ. ಕೆಲ್ಸ ಇಲ್ದೆ ನನ್‌ ಹೆಂಡ್ತಿ ಪ್ರಿಸಿಲ್ಲ ಕುಗ್ಗಿ ಹೋದಳು. ‘ಏನೂ ಪ್ರಯೋಜನಕ್ಕೆ ಬಾರದವನು’ ಅನ್ನೋ ಭಾವನೆ ನನ್ನಲ್ಲಿ ಮನೆ ಮಾಡಿತು.”

      “ಅಂಥ ಸಮಯದಲ್ಲೂ ನಮ್ಗೆ ಸಾಂತ್ವನ ಸಿಕ್ತು. ಮತ್ತಾಯ 6:34⁠ರಲ್ಲಿರುವ ಯೇಸುವಿನ ಮಾತನ್ನ ಪ್ರಿಸಿಲ್ಲ ಯಾವಾಗ್ಲೂ ನೆನಪಿಸಿಕೊಳ್ತಿದ್ದಳು. ಪ್ರತಿ ದಿನ ಆಯಾ ದಿನದ ಚಿಂತೆ ಇರೋದ್ರಿಂದ ನಾವು ನಾಳೆ ಬಗ್ಗೆ ಚಿಂತೆ ಮಾಡಬಾರದು ಅಂತ ಯೇಸು ಅಲ್ಲಿ ಹೇಳಿದ್ದಾರೆ. ಅವಳು ಮನಸ್ಸುಬಿಚ್ಚಿ ಪ್ರಾರ್ಥನೆ ಮಾಡುತ್ತಾ ಇದ್ದದರಿಂದ ಈ ಸಮಸ್ಯೆಯನ್ನು ಎದುರಿಸಲಿಕ್ಕೆ ಅವಳಿಗೆ ಬಲ ಸಿಕ್ತು. ನನಗೆ, ಕೀರ್ತನೆ 55:22⁠ನೇ ವಚನದಿಂದ ಸಾಂತ್ವನ ಸಿಕ್ತು. ಕೀರ್ತನೆಗಾರನ ಹಾಗೆ ನಾನೂ ನನ್‌ ಚಿಂತೆನೆಲ್ಲಾ ಯೆಹೋವನ ಮೇಲೆ ಹಾಕಿದೆ. ಆಗ ಯೆಹೋವನೇ ನನ್ನ ಕೈ ಹಿಡಿದು ನಡೆಸಿದ್ರು. ನನಗೀಗ ಕೆಲ್ಸ ಸಿಕ್ಕಿದೆ. ಆದ್ರೂ ನಾವು ಮತ್ತಾಯ 6:20-22⁠ರಲ್ಲಿ ಕೊಟ್ಟಿರೋ ಸಲಹೆ ಪ್ರಕಾರ ಸರಳ ಜೀವನ ಮಾಡ್ತಿದ್ದೀವಿ. ಇದ್ರಿಂದ ಒಬ್ಬರಿಗೊಬ್ಬರು ಹತ್ರ ಆಗಿದ್ದೀವಿ. ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನಿಗೆ ಆಪ್ತರಾಗಿದ್ದೀವಿ.”

      ಜೊನಾತಾನ್‌ ಹೀಗನ್ನುತ್ತಾರೆ: “ನಾವು ಚಿಕ್ಕದೊಂದು ವ್ಯಾಪಾರ ಮಾಡ್ತಿದ್ವಿ. ಅದು ನಷ್ಟದಲ್ಲಿ ಮುಳ್ಗೋದಾಗ ‘ಮುಂದೇನಪ್ಪಾ ಮಾಡೋದು’ ಅಂತ ತುಂಬ ಭಯ ಆಯ್ತು. ಆರ್ಥಿಕ ಮುಗ್ಗಟ್ಟಿಂದಾಗಿ ನಾವು 20 ವರ್ಷ ಕಷ್ಟಪಟ್ಟು ಮಾಡಿದ ಕೆಲ್ಸ ಎಲ್ಲಾ ವ್ಯರ್ಥ ಆಗೋಯ್ತು. ನನಗೂ ನನ್‌ ಹೆಂಡ್ತಿಗೂ ಹಣದ್‌ ವಿಷ್ಯದಲ್ಲಿ ಜಗಳ ಆಗೋಕೆ ಶುರು ಆಯ್ತು. ನಷ್ಟ ಆಗಿದ್ರಿಂದ ಕ್ರೆಡಿಟ್‌ ಕಾರ್ಡಿಂದನೂ ಏನೂ ತೆಗೆದುಕೊಳ್ಳೋಕೆ ಆಗ್ಲಿಲ್ಲ.”

      “ಇಂಥ ಪರಿಸ್ಥಿತಿಯಲ್ಲಿ ಸರಿಯಾದ ನಿರ್ಣಯಗಳನ್ನು ಮಾಡಲು ದೇವರ ವಾಕ್ಯ ಮತ್ತು ಪವಿತ್ರಾತ್ಮ ಸಹಾಯ ಮಾಡಿತು. ಚಿಕ್ಕ ಪುಟ್ಟ ಕೆಲ್ಸ ಅಂತ ನೋಡದೆ ಎಲ್ಲಾ ರೀತಿಯ ಕೆಲಸ ಮಾಡಲು ಕಲಿತೆ. ನಾವು ಅನಾವಶ್ಯಕ ಖರ್ಚು ಮಾಡೋದನ್ನ ನಿಲ್ಲಿಸಿದ್ವಿ. ನಮ್ಮ ಜೊತೆ ಸಾಕ್ಷಿಗಳು ಸಹ ಸಹಾಯ ಮಾಡಿದ್ರು. ನಮ್ಮ ಆತ್ಮ ವಿಶ್ವಾಸ ಹೆಚ್ಚಿಸಿದ್ರು. ಕಷ್ಟದಲ್ಲಿದ್ದಾಗ ಕೈ ಹಿಡಿದ್ರು.”

      ಮದುವೆ ಮುರಿದುಬಿದ್ದಾಗ

      ರಾಕೆಲ್‌ ಹೀಗನ್ನುತ್ತಾರೆ: “ಇದ್ದಕ್ಕಿಂದ್ದಂತೆ ನನ್‌ ಗಂಡ ನನ್ನ ಬಿಟ್ಟುಹೋದಾಗ ನನಗೆ ತುಂಬ ನೋವಾಯ್ತು. ಜೊತೆಗೆ ಕೋಪಾನೂ ಬಂತು. ಆದ್ರೆ ದೇವರಿಗೆ ಆಪ್ತಳಾಗಲು ಪ್ರಯತ್ನಿಸಿದಾಗ ನನಗೆ ಸಾಂತ್ವನ ಸಿಕ್ತು. ಪ್ರತಿದಿನ ದೇವ್ರಿಗೆ ಪ್ರಾರ್ಥನೆ ಮಾಡಿದಾಗ ನೆಮ್ಮದಿ ಸಿಗ್ತಿತ್ತು. ಒಡೆದು ನುಚ್ಚುನೂರಾದ ನನ್ನ ಹೃದಯಾನ ದೇವ್ರೇ ಸರಿ ಮಾಡಿದ್ರು.”

      “ಬೈಬಲನ್ನು ಕೊಟ್ಟಿದ್ದಕ್ಕೆ ದೇವ್ರಿಗೆ ತುಂಬ ಥ್ಯಾಂಕ್ಸ್‌ ಹೇಳ್ತೀನಿ. ಅದ್ರಿಂದ ನನ್ನ ಕೋಪಾನ ಕಡಿಮೆ ಮಾಡೋಕಾಯ್ತು. ಅಪೊಸ್ತಲ ಪೌಲ ರೋಮನ್ನರಿಗೆ 12:21⁠ರಲ್ಲಿ ಹೇಳಿದ ಈ ಮಾತನ್ನ ನಾನು ನೆನಪಿನಲ್ಲಿಟ್ಕೊಂಡೆ: ‘ಕೆಟ್ಟದ್ದು ನಿನ್ನನ್ನು ಜಯಿಸುವಂತೆ ಬಿಡಬೇಡ, ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರು.’”

      ಬೈಬಲನ್ನು ಉಪಯೋಗಿಸಿ ರಾಕೆಲ್‌ರನ್ನು ಸಂತೈಸುತ್ತಿರುವ ಒಬ್ಬ ಯೆಹೋವನ ಸಾಕ್ಷಿ

      “ಆಗಿ ಹೋಗಿರುವುದರ ಬಗ್ಗೆ ಚಿಂತೆ ಮಾಡೋದ್ರಿಂದ ಏನೂ ಪ್ರಯೋಜ್ನ ಇಲ್ಲ . . . ಈಗ ನಾನು ನೋವನ್ನು ಮರೆತು ಸಂತೋಷ ಕೊಡೋ ವಿಷಯಗಳನ್ನು ಮಾಡ್ತೀನಿ.”—ರಾಕೆಲ್‌

      “ನಡೆದದ್ದನ್ನೆಲ್ಲಾ ಮರೆತು ಮುಂದೆ ಹೋಗೋಕೆ ಒಬ್ಬ ಒಳ್ಳೇ ಫ್ರೆಂಡ್‌ ನನ್ಗೆ ಸಹಾಯ ಮಾಡಿದ್ರು. ಅವ್ರು ನನಗೆ ಪ್ರಸಂಗಿ 3:6⁠ನ್ನು ತೋರಿಸುತ್ತಾ, ಆಗಿ ಹೋಗಿರುವುದರ ಬಗ್ಗೆ ಚಿಂತೆ ಮಾಡೋದ್ರಿಂದ ಏನೂ ಪ್ರಯೋಜ್ನ ಇಲ್ಲ ಅಂತ ಹೇಳಿದ್ರು. ಇದನ್ನ ಮಾಡೋದು ಅಷ್ಟೇನೂ ಸುಲಭ ಆಗಿರಲ್ಲಿಲ್ಲ. ಈಗ ನಾನು ನೋವನ್ನು ಮರೆತು ಸಂತೋಷ ಕೊಡೋ ವಿಷಯಗಳನ್ನು ಮಾಡ್ತೀನಿ.”

      “ಮದುವೆ ಮುರಿದಾಗ ಸಹಾಯದ ಅವಶ್ಯಕತೆ ತುಂಬ ಇರುತ್ತೆ. ಇಂಥ ಪರಿಸ್ಥಿತಿಯಲ್ಲಿದ್ದ ನನಗೆ ನನ್ನ ಫ್ರೆಂಡ್‌ ಪ್ರತಿದಿನ ಸಹಾಯ ಮಾಡಿದಳು. ನಾನ್‌ ಅಳುವಾಗ ಅವಳೂ ಅಳುತ್ತಿದ್ದಳು, ನನ್ನನ್ನ ಸಂತೈಸಿದಳು, ನನ್ನ ಮೇಲೆ ತುಂಬ ಪ್ರೀತಿ ಇದೆ ಅಂತ ತೋರಿಸಿಕೊಟ್ಲು. ನನ್ನ ಮನಸ್ಸಿಗಾದ ಗಾಯವನ್ನ ಗುಣಮಾಡೋಕೆ ಯೆಹೋವ ದೇವ್ರು ಅವಳನ್ನ ಉಪಯೋಗಿಸಿದ್ರು.”

      ಕಾಯಿಲೆಬಿದ್ದಾಗ ಅಥವಾ ವೃದ್ಧಾಪ್ಯದಲ್ಲಿದ್ದಾಗ

      ಆಮ್ಲಜನಕ ಕೃತಕವಾಗಿ ಪೂರೈಸಲಾಗುತ್ತಿರುವ ಲೂಯೀಸ್‌, ಯೆಹೋವನಿಗೆ ಪ್ರಾರ್ಥಿಸಿದ ನಂತರ ತಲೆಯನ್ನು ಮೇಲಕ್ಕೆ ಎತ್ತಿದ್ದಾರೆ

      “ಪ್ರಾರ್ಥಿಸಿದ ನಂತರ, ಆತನು ತನ್ನ ಪವಿತ್ರಾತ್ಮದಿಂದ ಬಲಪಡಿಸ್ತಾನೆ.”—ಲೂಯೀಸ್‌

      ಮೊದಲನೇ ಲೇಖನದಲ್ಲಿ ತಿಳಿಸಲಾದ ಲೂಯೀಸ್‌ರಿಗೆ ತುಂಬ ಗಂಭೀರವಾದ ಹೃದಯದ ಸಮಸ್ಯೆ ಇದೆ. ಅವರು ಎರಡು ಸಾರಿ ಸಾವಿನಂಚಿಗೆ ಬಂದಿದ್ದರು. ಈಗ ಅವರಿಗೆ ದಿನಕ್ಕೆ 16 ತಾಸು ಆಮ್ಲಜನಕವನ್ನು ಕೃತಕವಾಗಿ ಪೂರೈಸಬೇಕಾಗುತ್ತದೆ. ಅವರು ಹೇಳುವುದು: “ನಾನು ಯೆಹೋವನಿಗೆ ಯಾವಾಗ್ಲೂ ಪ್ರಾರ್ಥಿಸ್ತೇನೆ. ಪ್ರಾರ್ಥಿಸಿದ ನಂತರ, ಆತನು ತನ್ನ ಪವಿತ್ರಾತ್ಮದಿಂದ ಬಲಪಡಿಸ್ತಾನೆ. ದೇವ್ರಿಗೆ ನನ್ನ ಬಗ್ಗೆ ಕಾಳಜಿ ಇದೆ ಅಂತ ನನಗೆ ನಂಬಿಕೆ ಇದೆ. ಆದ್ದರಿಂದ ಸಮಸ್ಯೆ ಇದ್ದರೂ ಮುಂದೆ ಹೋಗುತ್ತಿರಲು ಪ್ರಾರ್ಥನೆ ನನಗೆ ಧೈರ್ಯ ಕೊಡುತ್ತೆ.”

      80⁠ರ ಪ್ರಾಯದಲ್ಲಿರುವ ಪೇಟ್ರ ಎಂಬಾಕೆ ಹೇಳುವುದು: “ನನಗೆ ತುಂಬ ವಿಷಯಗಳನ್ನ ಮಾಡ್ಬೇಕಂತ ಅನ್ಸುತ್ತೆ. ಆದ್ರೆ ಅದು ನನ್‌ ಕೈಲಾಗಲ್ಲ. ದಿನದಿಂದ ದಿನಕ್ಕೆ ನನ್ನ ಶಕ್ತಿ ಕುಂದೋದನ್ನು ನೋಡುವಾಗ ತುಂಬ ಬೇಜಾರಾಗುತ್ತೆ. ಔಷಧಿ ಮೇಲೆನೇ ಅವಲಂಭಿಸಬೇಕಾಗಿದೆ. ಯೇಸು ತನಗೆ ಬಂದ ಕಷ್ಟದ ಬಗ್ಗೆ ತನ್ನ ತಂದೆ ಹತ್ರ, ‘ಸಾಧ್ಯವಾದರೆ ಇದನ್ನ ತೆಗೆದುಹಾಕು’ ಅಂತ ಕೇಳಿದ್ದರ ಬಗ್ಗೆ ನಾನು ಆಗಾಗ ಯೋಚಿಸ್ತೀನಿ. ಆ ಸಮಯದಲ್ಲಿ, ಯೆಹೋವ ದೇವ್ರು ಯೇಸುವಿಗೆ ಬಲ ಕೊಟ್ಟರು, ನನಗೂ ಅದೇ ರೀತಿ ಬಲ ಕೊಡ್ತಾರೆ. ಪ್ರತಿದಿನ ಪ್ರಾರ್ಥನೆ ಮಾಡೋದೇ ನನ್ನ ಔಷಧಿ. ದೇವ್ರ ಹತ್ರ ಮಾತಾಡಿದ ನಂತರ ನನಗೆ ತುಂಬ ಬಲ ಸಿಗುತ್ತೆ.”—ಮತ್ತಾಯ 26:39.

      30 ವರ್ಷಗಳಿಂದ ನರಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಹೂಲ್ಯಾನ್‌ಗೂ ಅದೇ ರೀತಿ ಅನಿಸುತ್ತದೆ. “ನನಗಿದ್ದ ಒಳ್ಳೇ ಕೆಲ್ಸ ಕಳ್ಕೊಂಡು ನಾನೀಗ ಗಾಲಿ ಕುರ್ಚಿಯಲ್ಲಿದ್ದೀನಿ. ಆದ್ರೂ ನನ್‌ ಜೀವನ ವ್ಯರ್ಥ ಅಂತ ನನಗನಿಸಲ್ಲ, ಯಾಕೆಂದ್ರೆ ನಾನ್‌ ಬೇರೆಯವ್ರಿಗೆ ಸಹಾಯ ಮಾಡ್ತಾ ಇರ್ತೀನಿ. ಇದ್ರಿಂದ ನನ್‌ ಕಷ್ಟಾನ ಮರೀತೀನಿ. ತುಂಬ ಕಷ್ಟ ಅನಿಸಿದಾಗ ಯೆಹೋವನು ಬಲ ಕೊಡ್ತಾನೆ. ಅಪೊಸ್ತಲ ಪೌಲನು ಹೇಳಿದಂತೆ, ‘ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ’ ಅಂತ ನಾನೂ ಹೇಳಬಲ್ಲೆ.”—ಫಿಲಿಪ್ಪಿ 4:13.

      ಪ್ರಿಯರು ಸಾವನ್ನಪ್ಪಿದಾಗ

      ಆಂಟೋನ್ಯೋ ಹೇಳುವುದು: “ನಮ್‌ ಅಪ್ಪ ರಸ್ತೆ ಅಪಘಾತದಲ್ಲಿ ತೀರಿಕೊಂಡಾಗ ನನಗದನ್ನು ನಂಬಲಿಕ್ಕೇ ಆಗಲಿಲ್ಲ. ಇದು ತುಂಬ ಅನ್ಯಾಯ ಅಂತ ನನಗನಿಸಿತು. ಯಾಕೆಂದರೆ ಅವರದ್ದೇನೂ ತಪ್ಪಿರಲಿಲ್ಲ. ಅವ್ರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು ಅಷ್ಟೇ. ಅವರು ಐದು ದಿನ ಕೋಮಾದಲ್ಲಿದ್ದು ನಂತರ ತೀರಿಕೊಂಡರು. ಆ ಸಮಯದಲ್ಲಿ ಏನ್‌ ಮಾಡಬೇಕು ಅಂತ ನನಗೆ ಗೊತ್ತಾಗಲಿಲ್ಲ. ಅಮ್ಮನ ಮುಂದೆ ಅಳಬಾರದು ಅಂತ ನನ್ನ ದುಃಖನ ನುಂಗಿಕೊಂಡಿದ್ದೆ, ಆದ್ರೆ ಒಬ್ಬನೇ ಇದ್ದಾಗ ತಡೆಯೋಕಾಗದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ‘ಯಾಕೆ ಹೀಗಾಯ್ತು’ ಅಂತ ನನಗೆ ನಾನೇ ಕೇಳ್ಕೊಳ್ತಿದ್ದೆ.”

      “ಆ ನೋವಿನ ದಿನಗಳಲ್ಲಿ ನನ್ನ ಭಾವನೆಗಳನ್ನು ಹಿಡಿತದಲ್ಲಿ ಇಡಲಿಕ್ಕೆ ಸಹಾಯ ಮಾಡುವಂತೆ ಮತ್ತು ಮನಸ್ಸಿಗೆ ಸಮಾಧಾನ ಕೊಡುವಂತೆ ಯೆಹೋವನಿಗೆ ಪ್ರಾರ್ಥಿಸ್ತಿದ್ದೆ. ನಿಧಾನಕ್ಕೆ ನನ್‌ ಮನಸ್ಸು ಹಗುರ ಆಯ್ತು. ಇಂಥ ವಿಷಯಗಳು ಅನಿರೀಕ್ಷಿತ, ಯಾರಿಗೆ ಬೇಕಾದ್ರೂ ಸಂಭವಿಸಬಹುದು ಎಂಬ ಬೈಬಲಿನಲ್ಲಿರುವ ಮಾತು ನನಗೆ ನೆನಪಾಯಿತು. ದೇವರು ಸುಳ್ಳಾಡುವುದಿಲ್ಲ, ಆದ್ದರಿಂದ ದೇವ್ರು ನಮ್ಮ ಅಪ್ಪನ್ನ ಜೀವಂತವಾಗಿ ಎಬ್ಬಿಸುವಾಗ ನಾನವರನ್ನ ಪುನಃ ನೋಡ್ತೀನಿ ಅನ್ನೋ ಭರವಸೆ ನನಗಿದೆ.”—ಪ್ರಸಂಗಿ 9:11; ಯೋಹಾನ 11:25; ತೀತ 1:2.

      ರಾಬರ್ಟ್‌ ಮತ್ತವರ ಪತ್ನಿ ಫೋಟೋಗಳನ್ನು ನೋಡುತ್ತಿದ್ದಾರೆ

      “ವಿಮಾನ ಅಪಘಾತದಲ್ಲಿ ನಮ್ಮ ಮಗ ತೀರಿಕೊಂಡರೂ ಅವನ ಜೊತೆ ಸಂತೋಷದಿಂದ ಕಳೆದ ಕ್ಷಣಗಳ ಸವಿನೆನಪು ನಮಗಿದೆ.”—ರಾಬರ್ಟ್‌

      ಮೊದಲನೇ ಲೇಖನದಲ್ಲಿ ತಿಳಿಸಲಾದ ರಾಬರ್ಟ್‌ಗೂ ಇದೇ ರೀತಿ ಅನಿಸಿತು. ಅವರು ಹೇಳಿದ್ದು, “ನನಗೂ ನನ್‌ ಹೆಂಡ್ತಿಗೂ ಫಿಲಿಪ್ಪಿ 4:6, 7⁠ರಲ್ಲಿ ತಿಳಿಸಲಾಗಿರುವ ದೇವಶಾಂತಿ ಸಿಕ್ಕಿತು. ನಾವು ಯೆಹೋವನಿಗೆ ಪ್ರಾರ್ಥಿಸಿದಾಗ ಈ ಶಾಂತಿ ಸಿಕ್ಕಿತು. ಇದರಿಂದಾಗಿ ವಾರ್ತಾ ವರದಿಗಾರರಿಗೆ ಪುನರುತ್ಥಾನದ ನಿರೀಕ್ಷೆಯ ಬಗ್ಗೆ ತಿಳಿಸಲು ಸಾಧ್ಯವಾಯಿತು. ವಿಮಾನ ಅಪಘಾತದಲ್ಲಿ ನಮ್ಮ ಮಗ ತೀರಿಕೊಂಡರೂ ಅವನ ಜೊತೆ ಸಂತೋಷದಿಂದ ಕಳೆದ ಕ್ಷಣಗಳ ಸವಿನೆನಪು ನಮಗಿದೆ. ನಾವು ಅದನ್ನು ನೆನಪಿಸಿಕೊಳ್ತಾ ಇರ್ತೀವಿ.”

      “ನಮ್ಮ ಜೊತೆ ಸಾಕ್ಷಿಗಳು ನಮಗೆ, ‘ನೀವು ಸಮಾಧಾನದಿಂದ ನಂಬಿಕೆ ಬಗ್ಗೆ ಮಾತಾಡಿದ್ದನ್ನ ಟಿ.ವಿ.ಯಲ್ಲಿ ನೋಡಿದ್ವಿ’ ಅಂತ ಹೇಳಿದ್ರು. ಆಗ ನಾವು, ‘ನಮಗೋಸ್ಕರ ಪ್ರಾರ್ಥಿಸಿದ್ದಕ್ಕಾಗಿ ಥ್ಯಾಂಕ್ಸ್‌, ಅದ್ರಿಂದನೇ ಆ ರೀತಿ ಮಾತಾಡಲು ಸಾಧ್ಯ ಆಯ್ತು’ ಅಂತ ಹೇಳಿದ್ವಿ. ಅವರು ಕಳಿಸಿದ ಸಂತೈಸುವ ಪತ್ರ ಮತ್ತು ಮೆಸೇಜ್‌ಗಳ ಮೂಲಕ ಯೆಹೋವನು ನಮಗೆ ಬೆಂಬಲ ಕೊಡುತ್ತಿದ್ದಾನೆ ಅಂತ ನಮಗನಿಸಿತು.”

      ಮೇಲೆ ತಿಳಿಸಲಾಗಿರುವ ಉದಾಹರಣೆಗಳಲ್ಲಿ ನೋಡಿದ ಪ್ರಕಾರ, ಯಾವುದೇ ಸಮಸ್ಯೆ ಅಥವಾ ಕಷ್ಟಗಳನ್ನು ಎದುರಿಸುತ್ತಿದ್ದರೂ ಯೆಹೋವನು ಸಾಂತ್ವನ ಕೊಡಬಲ್ಲನು. ನಿಮಗೂ ಕೊಡುತ್ತಾನಾ? ಖಂಡಿತ ಕೊಡುತ್ತಾನೆ.b ಆದ್ದರಿಂದ ಸಹಾಯಕ್ಕಾಗಿ ಯೆಹೋವನ ಹತ್ರ ಕೇಳಿ. ಆತನು ‘ಸಕಲ ಸಾಂತ್ವನದ ದೇವರು’ ಆಗಿದ್ದಾನೆ.—2 ಕೊರಿಂಥ 1:3. ▪ (wp16-E No. 5)

      a ಕೆಲವು ಹೆಸರುಗಳನ್ನು ಬದಲಿಸಲಾಗಿದೆ.

      b ದೇವರಿಗೆ ಆಪ್ತರಾಗಿ ಆತನಿಂದ ಸಾಂತ್ವನ ಪಡೆಯಬೇಕೆಂದು ಬಯಸುತ್ತೀರಾ? ಹಾಗಾದರೆ, ನಿಮಗೆ ಹತ್ತಿರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ ಅಥವಾ ನಿಮಗೆ ಹತ್ತಿರದಲ್ಲಿರುವ ನಮ್ಮ ಶಾಖಾ ವಿಳಾಸಕ್ಕೆ ಬರೆದು ಕಳುಹಿಸಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ