-
‘ನಾನ್ಯಾಕೆ ಬದುಕಿರಬೇಕು?’ಎಚ್ಚರ!—2014 | ಜುಲೈ
-
-
ಮುಖಪುಟ ಲೇಖನ
‘ನಾನ್ಯಾಕೆ ಬದುಕಿರಬೇಕು?’
ಡಯಾನa ತುಂಬ ಜಾಣೆ. ಸ್ನೇಹಮಯಿ. ನಗು ನಗುತ್ತಾ ಎಲ್ಲರೊಂದಿಗೆ ಬೆರೆಯುವಂಥವಳು. ಆದರೆ ಈ ತರುಣಿಯ ನಗುಮುಖದ ಹಿಂದೆ ಒಳಗೊಳಗೆ ಕಿತ್ತು ತಿನ್ನುವ ಹತಾಶೆ. ‘ನಾನಿದ್ದು ಏನೂ ಪ್ರಯೋಜನವಿಲ್ಲ’ ಎಂಬ ಭಾವನೆಯಿಂದ ಕುಗ್ಗಿಹೋಗುತ್ತಾಳೆ. ದಿನಗಳಾದರೂ ವಾರಗಳಾದರೂ ಕೆಲವೊಮ್ಮೆ ತಿಂಗಳುಗಳಾದರೂ ಆ ಒಳಮನಸ್ಸಿನ ತಾಕಲಾಟದಿಂದ ಹೊರಬರಲು ಆಗುವುದಿಲ್ಲ. “ ‘ನನಗೆ ಸಾವಾದರೂ ಬರಬಾರದಾ?’ ಎಂದು ಯೋಚಿಸದ ದಿನವೇ ಇಲ್ಲ. ನಾನು ಸತ್ತರೆ ಭೂಮಿಗೆ ಭಾರ ಕಡಿಮೆ ಆಗುತ್ತೆ ಎಂದು ಅನಿಸುತ್ತದೆ” ಅನ್ನುತ್ತಾಳವಳು.
‘ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ವರದಿಸಿದ ಪ್ರಕಾರ, 2012ರಲ್ಲಿ ಭಾರತದಲ್ಲಿ 1,35,445 ಜನ ಆತ್ಮಹತ್ಯೆ ಮಾಡಿಕೊಂಡರು. ಸರಾಸರಿ ಪ್ರತಿ ತಾಸಿಗೆ 15 ಜನ, ದಿನಕ್ಕೆ 371 ಜನ. ಇವರಲ್ಲಿ 242 ಪುರುಷರು, 129 ಸ್ತ್ರೀಯರು.’—ದ ಹಿಂದು ವಾರ್ತಾಪತ್ರಿಕೆ, 26 ಜೂನ್ 2013.
ತಾನೆಂದೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಆದರೆ, ತಾನು ಬದುಕಿರುವುದರಲ್ಲಿ ಯಾವ ಅರ್ಥವೂ ಇಲ್ಲವೆಂದು ಆಗಾಗ ಅನಿಸುತ್ತದೆ ಎನ್ನುತ್ತಾಳೆ ಡಯಾನ. “ಯಾವುದಾದರೂ ಅಪಘಾತದಲ್ಲಿ ಸತ್ತುಹೋದರೆ ಸಾಕಪ್ಪ ಅಂದುಕೊಳ್ತೇನೆ. ಸಾವು ನನಗೆ ಶತ್ರುವಲ್ಲ, ಮಿತ್ರ ಎಂದನಿಸುತ್ತದೆ.”
ಇದೇ ರೀತಿಯ ತೊಳಲಾಟದಿಂದ ಅನೇಕ ಜನರು ಬೆಂದು ನೊಂದು ಹೋಗಿದ್ದಾರೆ. ಇಂಥ ಸಮಯದಲ್ಲಿ ಕೆಲವರಿಗೆ ಆತ್ಮಹತ್ಯೆಯ ಯೋಚನೆ ಮನದೊಳಗೆ ಸುಳಿದಿದೆ. ಇನ್ನು ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಕೂಡ. ಪರಿಣತರು ಹೇಳುವ ಪ್ರಕಾರ, ಅಂಥವರಲ್ಲಿ ಹೆಚ್ಚಿನವರಿಗೆ ತಮ್ಮ ಜೀವನಕ್ಕೆ ಅಂತ್ಯ ಹಾಡಲು ಇಷ್ಟವಿರುವುದಿಲ್ಲ ಬದಲಿಗೆ ತಮಗಿರುವ ಸಂಕಷ್ಟವನ್ನು ಕೊನೆಗಾಣಿಸಲು ಬಯಸುತ್ತಾರೆ. ಸರಳವಾಗಿ ಹೇಳುವುದಾದರೆ, ಸಾಯಲು ತಮಗೆ ಕಾರಣ ಇದೆಯೆಂದು ಅನಿಸುವ ಅವರಿಗೆ ನಿಜವಾಗಿ ಬೇಕಿರುವುದು ಬದುಕಲಿಕ್ಕೊಂದು ಕಾರಣ.
ಸಾಯಲು ನೂರು ಕಾರಣಗಳಿರಬಹುದು. ಆದರೆ ಬದುಕಲಿಕ್ಕೆ ಇರುವ ಮೂರು ಕಾರಣಗಳನ್ನು ಮುಂದೆ ಗಮನಿಸಿ.
a ಹೆಸರನ್ನು ಬದಲಾಯಿಸಲಾಗಿದೆ.
-
-
1 ಸನ್ನಿವೇಶ ಬದಲಾಗುತ್ತದೆಎಚ್ಚರ!—2014 | ಜುಲೈ
-
-
ಮುಖಪುಟ ಲೇಖನ | ‘ನಾನ್ಯಾಕೆ ಬದುಕಿರಬೇಕು?’
1 ಸನ್ನಿವೇಶ ಬದಲಾಗುತ್ತದೆ
“ನಾವು ಎಲ್ಲ ವಿಧಗಳಲ್ಲಿ ಅದುಮಲ್ಪಟ್ಟಿದ್ದೇವೆ, ಆದರೆ ಅಲುಗಾಡಲು ಸಾಧ್ಯವಿಲ್ಲದಷ್ಟು ನಿರ್ಬಂಧಿಸಲ್ಪಟ್ಟಿಲ್ಲ; ನಾವು ದಿಕ್ಕುಕಾಣದವರಾಗಿದ್ದೇವೆ, ಆದರೆ ಸಂಪೂರ್ಣವಾಗಿ ದಾರಿಕಾಣದವರಲ್ಲ.”—2 ಕೊರಿಂಥ 4:8.
ತಲೆನೋವು ಬಂತು ಅಂತ ತಲೆ ಹಾರಿಸುವುದು ಎಷ್ಟು ಸರಿ? ಅದೇ ರೀತಿ ತಾತ್ಕಾಲಿಕ ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಂದುಕೊಳ್ಳುವುದು ಸರಿಯೇ? ನೀವಿರುವ ಸನ್ನಿವೇಶ ತುಂಬ ನಿರಾಶಾದಾಯಕವಾಗಿ ಕಾಣಬಹುದು, ಕೈಮೀರಿ ಹೋಗಿದೆ ಎಂದನಿಸಬಹುದು. ಆದರೆ ಸನ್ನಿವೇಶ ಇದ್ದ ಹಾಗೆ ಇರುವುದಿಲ್ಲ, ಮುಂದೆ ಖಂಡಿತ ಬದಲಾಗುತ್ತದೆ. ಇದನ್ನು ನಂಬಲು ನಿಮಗೆ ಕಷ್ಟವಾಗಬಹುದು. ಆದರೂ ಇದು ನಿಜ. ನೀವು ನೆನಸದಿರುವಷ್ಟು ಒಳ್ಳೇದಾಗುವ ಸಾಧ್ಯತೆಯೂ ಇದೆ.—ಕೆಳಗಿರುವ ಚೌಕ ನೋಡಿ.
ಒಂದುವೇಳೆ ಸನ್ನಿವೇಶ ಬದಲಾಗದಿದ್ದರೆ? ಸಮಸ್ಯೆ ನಿಭಾಯಿಸಲು ಇವತ್ತು ಏನು ಮಾಡಲಿಕ್ಕಾಗುತ್ತದೋ ಅದನ್ನು ಮಾಡಿ. ಯೇಸು ಹೀಗಂದನು: “ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವು ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು. ಪ್ರತಿದಿನಕ್ಕೆ ಅದಕ್ಕಿರುವ ಕೆಡುಕೇ ಸಾಕು.”—ಮತ್ತಾಯ 6:34.
ಬದಲಾಗಲು ಸಾಧ್ಯವೇ ಇಲ್ಲದ ಸನ್ನಿವೇಶದಿಂದ ನೀವು ಹತಾಶರಾಗಿದ್ದರೆ ಆಗೇನು? ಉದಾಹರಣೆಗೆ, ದೀರ್ಘಕಾಲದ ಕಾಯಿಲೆ, ಮುರಿದುಹೋದ ವಿವಾಹ, ಪ್ರಿಯರೊಬ್ಬರ ಮರಣ ಇತ್ಯಾದಿ.
ಅಂಥ ಸಮಯಗಳಲ್ಲೂ ಬದಲಾಯಿಸಲು ಆಗುವ ವಿಷಯವೊಂದಿದೆ. ಅದು ಆ ಸನ್ನಿವೇಶದ ಬಗ್ಗೆ ನಿಮಗಿರುವ ಮನೋಭಾವವೇ. ಅದನ್ನು ಮಾಡುವುದು ಹೇಗೆ? ಸನ್ನಿವೇಶವನ್ನು ಬದಲಾಯಿಸಲು ಅಸಾಧ್ಯ ಎನ್ನುವುದನ್ನು ಒಪ್ಪಿಕೊಳ್ಳಿ. ಆಗ ಸಕಾರಾತ್ಮಕವಾಗಿ ಯೋಚಿಸಲು ನಿಮ್ಮಿಂದಾಗುವುದು. (ಜ್ಞಾನೋಕ್ತಿ 15:15) ಮಾತ್ರವಲ್ಲ ನಿಮ್ಮ ಸಮಸ್ಯೆಗೆ ‘ಸಾವು’ ಪರಿಹಾರವೆಂದು ಯೋಚಿಸದೆ ಅದನ್ನು ನಿಭಾಯಿಸಲು ಮಾರ್ಗಗಳನ್ನು ಹುಡುಕುವಿರಿ. ಫಲಿತಾಂಶ? ಸನ್ನಿವೇಶ ಹತೋಟಿಯಲ್ಲಿ ಇಲ್ಲದಿರಬಹುದಾದರೂ ಆ ಸನ್ನಿವೇಶದ ಕುರಿತ ನಿಮ್ಮ ಮನೋಭಾವ ನಿಮ್ಮ ಹತೋಟಿಗೆ ಬರುತ್ತದೆ.—ಯೋಬ 2:10.
ನೆನಪಿಡಿ: ಒಂದೇ ಹೆಜ್ಜೆಯಲ್ಲಿ ಬೆಟ್ಟ ಹತ್ತಲು ಆಗುವುದಿಲ್ಲ. ಆದರೆ ಒಂದೊಂದೇ ಹೆಜ್ಜೆ ಇಟ್ಟು ಮುಂದೆ ಸಾಗುವಲ್ಲಿ ಅದು ಸಾಧ್ಯ. ನೀವು ಎದುರಿಸುತ್ತಿರುವ ಕಷ್ಟಗಳು ಸಹ ಬೆಟ್ಟದಂತೆ ಎಷ್ಟೇ ದೊಡ್ಡದಾಗಿರಲಿ ಆ ಮಾತು ನಿಜ.
ಇವತ್ತು ನೀವೇನು ಮಾಡಬಹುದು? ನಿಮ್ಮ ಒಬ್ಬ ಸ್ನೇಹಿತನೊಟ್ಟಿಗೆ ಅಥವಾ ಮನೆಯಲ್ಲಿ ಯಾರೊಟ್ಟಿಗಾದರೂ ನಿಮ್ಮ ಸನ್ನಿವೇಶದ ಬಗ್ಗೆ ಮಾತಾಡಿ. ನಿಮ್ಮ ಸನ್ನಿವೇಶದ ಬಗ್ಗೆ ಸರಿಯಾದ ನೋಟವನ್ನಿಡಲು ಅವರು ನಿಮಗೆ ಸಹಾಯ ಮಾಡಬಲ್ಲರು.—ಜ್ಞಾನೋಕ್ತಿ 11:14.
-
-
2 ಸಹಾಯ ಇದೆಎಚ್ಚರ!—2014 | ಜುಲೈ
-
-
ಮುಖಪುಟ ಲೇಖನ | ‘ನಾನ್ಯಾಕೆ ಬದುಕಿರಬೇಕು?’
2 ಸಹಾಯ ಇದೆ
“ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7.
ಪರಿಸ್ಥಿತಿಯನ್ನು ಸುಧಾರಿಸಲು ನಿಮ್ಮ ಕೈಯಿಂದ ಏನೂ ಮಾಡಲಿಕ್ಕಾಗುವುದಿಲ್ಲ ಎಂದನಿಸಿದಾಗ ಬದುಕು ಭಾರವೆನಿಸಿ ಸಾಯೋದೇ ಮೇಲು ಎಂಬ ಯೋಚನೆ ಬರಬಹುದು. ಆದರೆ ಅಂಥ ಸನ್ನಿವೇಶವನ್ನು ನಿಭಾಯಿಸಲು ನಿಮಗೆ ಸಿಗುವ ಕೆಲವು ಸಹಾಯಗಳನ್ನು ಗಮನಿಸಿ.
ಪ್ರಾರ್ಥನೆ. ಪ್ರಾರ್ಥನೆ ಅನ್ನೋದು ಮನಸ್ಸಿನ ನೆಮ್ಮದಿಗಾಗಿಯೋ ಬೇರಾವ ದಾರಿ ಇಲ್ಲದಿರುವಾಗಲೋ ಮಾಡುವಂಥದ್ದಲ್ಲ. ಅದು, ನಿಮ್ಮ ಬಗ್ಗೆ ಕಳಕಳಿಯಿರುವ ಯೆಹೋವ ದೇವರೊಂದಿಗೆ ನೀವು ಮಾಡುವ ಸಂವಾದ. ನಿಮ್ಮ ಮನಸ್ಸಿನ ನೋವು, ತಳಮಳಗಳನ್ನು ತನ್ನಲ್ಲಿ ತೋಡಿಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ. ಬೈಬಲ್ ಏನೆಂದು ಉತ್ತೇಜಿಸುತ್ತದೆ ಗಮನಿಸಿ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು.”—ಕೀರ್ತನೆ 55:22.
ಆದ್ದರಿಂದ ಇವತ್ತೇ ದೇವರ ಹತ್ತಿರ ಮಾತಾಡಿ. ‘ಯೆಹೋವ’ ಎಂಬ ಆತನ ಹೆಸರು ಹಿಡಿದು ಕರೆಯಿರಿ. ಹೃದಯಬಿಚ್ಚಿ ಮಾತಾಡಿರಿ. (ಕೀರ್ತನೆ 62:8) ನೀವು ಆತನನ್ನು ಸ್ನೇಹಿತನಾಗಿ ಮಾಡಿಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ. (ಯೆಶಾಯ 55:6; ಯಾಕೋಬ 2:23) ಯಾವುದೇ ಸಮಯದಲ್ಲಿ ಯಾವುದೇ ಸ್ಥಳದಲ್ಲಿ ನಿಮಗಿರುವ ಸಂವಾದ ಮಾಧ್ಯಮ ಪ್ರಾರ್ಥನೆಯೊಂದೇ.
“ಆತ್ಮಹತ್ಯೆ ಮಾಡಿಕೊಂಡವರಲ್ಲಿ 90% ಅಥವಾ ಅದಕ್ಕಿಂತಲೂ ಹೆಚ್ಚಿನವರಿಗೆ ಸಾಯುವ ಸಂದರ್ಭದಲ್ಲಿ ಮಾನಸಿಕ ಸಮಸ್ಯೆಯಿತ್ತು. ಹಾಗಿದ್ದರೂ ಹೆಚ್ಚಿನ ಪ್ರಕರಣಗಳಲ್ಲಿ ಅದನ್ನು ಗುರುತಿಸಲಾಗಿರಲಿಲ್ಲ, ವೈದಕೀಯ ಪರೀಕ್ಷೆ ಮಾಡಿರಲಿಲ್ಲ ಅಥವಾ ಅಗತ್ಯವಿದ್ದ ಚಿಕಿತ್ಸೆಯನ್ನೂ ಕೊಟ್ಟಿರಲಿಲ್ಲ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.”—ಅಮೆರಿಕನ್ ಫೌಂಡೇಷನ್ ಫಾರ್ ಸೂಸೈಡ್ ಪ್ರಿವೆನ್ಷನ್.
ನಿಮ್ಮ ಬಗ್ಗೆ ಕಾಳಜಿವಹಿಸುವ ಜನರು. ನೀವು ಬದುಕಿರುವುದು ಇತರರಿಗೆ ಅದರಲ್ಲೂ ನಿಮ್ಮ ಕಾಳಜಿವಹಿಸುವ ಮನೆಮಂದಿಗೆ ಅಥವಾ ಸ್ನೇಹಿತರಿಗೆ ಮುಖ್ಯ. ನಿಮ್ಮ ಕಾಳಜಿವಹಿಸುವವರಲ್ಲಿ ನೀವೆಂದೂ ಭೇಟಿಮಾಡಿರದ ಜನರೂ ಸೇರಿದ್ದಾರೆ. ಯೆಹೋವನ ಸಾಕ್ಷಿಗಳ ಕುರಿತು ಗಮನಿಸಿ. ಅವರು ಸೇವೆ ಮಾಡುವ ಸಂದರ್ಭದಲ್ಲಿ ನಿಮ್ಮಂತೆ ಹತಾಶೆಗೊಂಡಿರುವ ಜನರನ್ನು ಕೆಲವೊಮ್ಮೆ ಭೇಟಿಯಾಗಿದ್ದಾರೆ. ಅವರಲ್ಲಿ ಕೆಲವರು, ತಾವು ಸಹಾಯಕ್ಕಾಗಿ ಹಾತೊರೆಯುತ್ತಿದ್ದೆವು ಮತ್ತು ದಿಕ್ಕುಕಾಣದೆ ಸಾಯುವ ನಿರ್ಧಾರಕ್ಕೆ ಬಂದಿದ್ದೆವು ಎಂದು ಒಪ್ಪಿಕೊಂಡಿದ್ದಾರೆ. ಸಾಕ್ಷಿಗಳು ಮನೆಯಿಂದ ಮನೆಗೆ ಭೇಟಿ ಮಾಡುವುದು ನೊಂದ ಜನರಿಗೆ ಸಹಾಯ, ಸಾಂತ್ವನ ನೀಡಲು ಒಳ್ಳೇ ಸಂದರ್ಭ ಒದಗಿಸಿದೆ. ಹೌದು, ಯೇಸುವಿನ ಮಾದರಿಯನ್ನು ಅನುಕರಿಸುವ ಅವರಿಗೆ ಇತರರ ಬಗ್ಗೆ ಕಾಳಜಿಯಿದೆ. ನಿಮ್ಮ ಬಗ್ಗೆ ಕೂಡ.—ಯೋಹಾನ 13:35.
ಪರಿಣತರ ಸಹಾಯ. ಆತ್ಮಹತ್ಯೆಯ ಯೋಚನೆ ಬರಲು ಒಂದು ವಿಧದ ‘ಮೂಡ್ ಡಿಸಾರ್ಡರ್’ ಅಂದರೆ ಮನಸ್ಥಿತಿಯಲ್ಲಿ ಏರುಪೇರು ಕಾರಣವಾಗಿರಬಹುದು. ಉದಾಹರಣೆಗೆ ಚಿಕಿತ್ಸೆ ಅಗತ್ಯವಿರುವ ಖಿನ್ನತೆ. ಇಂಥ ಒಂದು ಸಮಸ್ಯೆ ನಿಮ್ಮನ್ನು ಕಾಡುತ್ತಿರುವುದಾದರೆ ನಾಚಿಕೆಪಡಬೇಕಾಗಿಲ್ಲ. ಅದೂ ಒಂದು ರೀತಿಯ ಅಸ್ವಸ್ಥತೆ ಅಷ್ಟೇ. ಖಿನ್ನತೆಗಿರುವ ಇನ್ನೊಂದು ಹೆಸರು “ಮನಸ್ಸಿಗೆ ಬರುವಂಥ ಸಾಮಾನ್ಯ ನೆಗಡಿ.” ಹೇಗೆ ನೆಗಡಿ ಬರುವುದು ಸಾಮಾನ್ಯವೋ ಹಾಗೆಯೇ ಖಿನ್ನತೆ ಕೂಡ. ಅದಕ್ಕೆ ಮದ್ದು ಖಂಡಿತ ಇದೆ.a
ನೆನಪಿಡಿ: ಖಿನ್ನತೆಯೆಂಬ ಆಳವಾದ ಗುಂಡಿಯೊಳಗಿಂದ ನಿಮ್ಮಷ್ಟಕ್ಕೆ ನೀವು ಹೊರಬರಲು ಸಾಧ್ಯವಿಲ್ಲ. ಬೇರೆಯವರ ಸಹಾಯ ಬೇಕು. ಸಹಾಯ ಹಸ್ತವನ್ನು ನೀವು ಹಿಡಿದಾಗ ಹೊರಬರಲು ಖಂಡಿತ ಆಗುತ್ತದೆ.
ಇವತ್ತು ನೀವೇನು ಮಾಡಬಹುದು? ಖಿನ್ನತೆಯಂಥ ಮೂಡ್ ಡಿಸಾರ್ಡರ್‌ಗಳಿಗೆ ಚಿಕಿತ್ಸೆ ನೀಡುವ ಒಳ್ಳೇ ವೈದ್ಯರು ಎಲ್ಲಿದ್ದಾರೆಂದು ತಿಳಿದುಕೊಳ್ಳಿ.
a ಸಾಯಬೇಕೆಂಬ ಯೋಚನೆ ಪದೇಪದೇ ಬರುತ್ತಿರುವಲ್ಲಿ ಅಥವಾ ತೀವ್ರವಾಗಿರುವಲ್ಲಿ ನಿಮಗೆ ಯಾವ ಸಹಾಯ ಲಭ್ಯವಿದೆಯೆಂದು ತಿಳಿಯಲು ಪ್ರಯತ್ನಿಸಿರಿ. ಕೆಲವೆಡೆ ಸಹಾಯವಾಣಿ ಕೇಂದ್ರಗಳಿವೆ. ಇನ್ನೂ ಕೆಲವು ಸ್ಥಳಗಳಲ್ಲಿ ಮಾನಸಿಕ ಆರೋಗ್ಯ ಕೇಂದ್ರಗಳಿವೆ. ಸಹಾಯ ನೀಡಲು ತರಬೇತಿ ಪಡೆದಿರುವ ಸಿಬ್ಬಂದಿ ಅಲ್ಲಿರುತ್ತಾರೆ.
-
-
3 ನಿರೀಕ್ಷೆಯೆಂಬ ಹೊಂಗಿರಣ ಇದೆಎಚ್ಚರ!—2014 | ಜುಲೈ
-
-
ಮುಖಪುಟ ಲೇಖನ | ‘ನಾನ್ಯಾಕೆ ಬದುಕಿರಬೇಕು?’
3 ನಿರೀಕ್ಷೆಯೆಂಬ ಹೊಂಗಿರಣ ಇದೆ
“ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11.
ಜೀವನ ‘ಕಳವಳದಿಂದ ತುಂಬಿದೆ’ ಎಂದು ಬೈಬಲ್ ಒಪ್ಪುತ್ತದೆ. (ಯೋಬ 14:1) ಇಂದು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಸಂಕಷ್ಟದಿಂದ ನೋವುಣ್ಣುತ್ತಿದ್ದಾರೆ. ಕೆಲವರಂತೂ ಜೀವನದಲ್ಲಿ ನಿರೀಕ್ಷೆ ಕಳೆದುಕೊಂಡಿರುತ್ತಾರೆ. ಎಷ್ಟೆಂದರೆ ತಮ್ಮ ಕತ್ತಲೆಯ ಬಾಳಲ್ಲಿ ಬೆಳಕಿನ ಕಿರಣ ಎಂದೂ ಉದಯಿಸದು ಅಂದುಕೊಳ್ಳುತ್ತಾರೆ. ಅವರಿಗೆ ಜೀವನವೇ ಜಿಗುಪ್ಸೆ. ನಿಮಗೂ ಹಾಗನಿಸುತ್ತದಾ? ಹೌದಾದರೆ, ಬೈಬಲ್ ನಿಜ ನಿರೀಕ್ಷೆಯನ್ನು ಕೊಡುತ್ತದೆಂಬ ಆಶ್ವಾಸನೆ ನಿಮಗಿರಲಿ. ನಿಮಗೆ ಮಾತ್ರವಲ್ಲ ಎಲ್ಲ ಜನರಿಗೆ ಬೈಬಲ್ ಯಾವ ಆಶ್ವಾಸನೆ ಕೊಡುತ್ತದೆ ಎಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ:
ಯೆಹೋವ ದೇವರು ನಮಗಾಗಿ ತುಂಬ ಒಳ್ಳೇ ಜೀವನವನ್ನು ಉದ್ದೇಶಿಸಿದ್ದನು ಎಂದು ಬೈಬಲ್ ಕಲಿಸುತ್ತದೆ.—ಆದಿಕಾಂಡ 1:28.
ಈ ಭೂಮಿಯನ್ನು ಒಂದು ಸುಂದರ ತೋಟವಾಗಿ ಮಾಡುತ್ತೇನೆಂದು ಯೆಹೋವ ದೇವರು ಮಾತುಕೊಟ್ಟಿದ್ದಾನೆ.—ಯೆಶಾಯ 65:21-25.
ಈ ಮಾತು ನಿಜವಾಗುವುದು ನಿಶ್ಚಯ. ಪ್ರಕಟನೆ 21:3, 4 ಹೀಗನ್ನುತ್ತದೆ:
“ದೇವರ ಗುಡಾರವು ಮಾನವಕುಲದೊಂದಿಗೆ ಇದೆ; ಆತನು ಅವರೊಂದಿಗೆ ವಾಸಮಾಡುವನು ಮತ್ತು ಅವರು ಆತನ ಜನರಾಗಿರುವರು. ದೇವರು ತಾನೇ ಅವರೊಂದಿಗಿರುವನು. ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.”
ಇದು ಭ್ರಮೆಯಲ್ಲ. ಯೆಹೋವ ದೇವರು ಈ ಮಾತನ್ನು ನಿಜವಾಗಿಸುತ್ತಾನೆ. ಆತನಿಗೆ ತನ್ನ ಮಾತನ್ನು ನೆರವೇರಿಸುವ ಶಕ್ತಿಯಿದೆ. ಆಸೆಯೂ ಇದೆ. ಬೈಬಲ್ ಕೊಡುವ ಈ ನಿರೀಕ್ಷೆ ಭರವಸಾರ್ಹ. ಮಾತ್ರವಲ್ಲ ‘ಏಕೆ ಬದುಕಿರಬೇಕು?’ ಎಂಬ ಪ್ರಶ್ನೆಗೆ ಇದು ಪ್ರಬಲ ಉತ್ತರವನ್ನು ಕೊಡುತ್ತದೆ. (g14-E 04)
ನೆನಪಿಡಿ: ಅಲ್ಲಕಲ್ಲೋಲವಾದ ಸಮುದ್ರದಲ್ಲಿರುವ ದೋಣಿಯಂತೆ ನಿಮ್ಮ ಭಾವನೆಗಳು ಕೂಡ ಅತ್ತಿಂದಿತ್ತ ಹೊಯ್ದಾಡಬಹುದು. ಆದರೆ ಬೈಬಲ್ ತಿಳಿಸುವ ನಿರೀಕ್ಷೆಯ ಸಂದೇಶವು ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಡುವ ಲಂಗರದಂತಿದೆ.
ಇವತ್ತು ನೀವೇನು ಮಾಡಬಹುದು? ಭವಿಷ್ಯತ್ತಿಗಾಗಿರುವ ನಿಜ ನಿರೀಕ್ಷೆಯ ಬಗ್ಗೆ ಬೈಬಲ್ ಏನು ಕಲಿಸುತ್ತದೆಂದು ತಿಳಿದುಕೊಳ್ಳಲು ಆರಂಭಿಸಿ. ನಿಮಗೆ ಸಹಾಯ ಮಾಡಲು ಯೆಹೋವನ ಸಾಕ್ಷಿಗಳು ತುಂಬ ಸಂತೋಷಪಡುತ್ತಾರೆ. ನೀವು ವಾಸವಿರುವ ನಗರದಲ್ಲಿ ಅವರನ್ನು ಭೇಟಿ ಮಾಡಬಹುದು ಅಥವಾ jw.org ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.a
a ನಿಮಗೊಂದು ಸಲಹೆ: jw.org ಗೆ ಹೋಗಿ PUBLICATIONS > ONLINE LIBRARY ನೋಡಿ. ಅಲ್ಲಿ “depression” (ಖಿನ್ನತೆ) ಅಥವಾ “suicide” (ಆತ್ಮಹತ್ಯೆ) ಎಂಬ ಮುಖ್ಯ ಪದಗಳನ್ನು ಟೈಪ್ ಮಾಡುವಲ್ಲಿ ಹೆಚ್ಚಿನ ಮಾಹಿತಿ ಸಿಗುತ್ತದೆ.
-