ಯೆಹೋವನನ್ನು ಆರಿಸುವಂತೆ ನೀವು ನಿಮ್ಮ ಮಗುವಿಗೆ ಸಹಾಯ ಮಾಡುತ್ತಿದ್ದೀರೊ?
“ಬೈಬಲನ್ನು ಅಭ್ಯಸಿಸುವುದು ನಿಜವಾಗಿಯೂ ಬೇಸರ ಹಿಡಿಸುವಂಥದ್ದೂ ಆಯಾಸಗೊಳಿಸುವಂಥದ್ದೂ ಆಗಿತ್ತೆಂದು ನಾನು ಭಾವಿಸಿದೆ. ನಾನು ದೊಡ್ಡವನಾದಾಗ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರುವುದಿಲ್ಲವೆಂದು ನನ್ನ ಹೃದಯದಲ್ಲಿ ನಾನು ಗುಪ್ತವಾಗಿ ನಿರ್ಧರಿಸಿದೆ,” ಎಂದು ಒಬ್ಬ ಯೌವನಸ್ಥನು ಘೋಷಿಸಿದನು. ಆಶಾಜನಕವಾಗಿ ಕ್ರೈಸ್ತ ಕುಟುಂಬಗಳಲ್ಲಿರುವ ಹೆಚ್ಚಿನ ಮಕ್ಕಳು ಕಟ್ಟಕಡೆಗೆ ಯೆಹೋವನನ್ನು ಆರಾಧಿಸಲು ಆರಿಸುವುದಾದರೂ, ಇವನಂತಹ ಯುವ ಜನರು ಯೆಹೋವನನ್ನು ತಮ್ಮ ದೇವರಾಗಿ ಆರಿಸುವುದರಲ್ಲಿ ಒಂದು ಕಠಿನವಾದ ಸಮಯವನ್ನು ಅನುಭವಿಸಬಹುದು.
ತಮ್ಮ ಮಕ್ಕಳನ್ನು ಪರಿಣಾಮಕಾರಿಯಾಗಿ ಹೇಗೆ ಮಾರ್ಗದರ್ಶಿಸುವುದು ಎಂಬುದರ ಕುರಿತು, ಹೆತ್ತವರು ಕೆಲವೊಮ್ಮೆ ಅನಿಶ್ಚಿತರಾಗಿರುತ್ತಾರೆ. ಒಮ್ಮೆ ಹೀಗೆ ಹೇಳಿದ ಚಿಂತಾಜನಕ ತಂದೆಯೋಪಾದಿ ಅವರು ಅಧಿಕ ಆತ್ಮ ಅನ್ವೇಷಣೆಯನ್ನು ಅನುಭವಿಸುತ್ತಾರೆ: “ಪ್ರಾಮಾಣಿಕವಾಗಿ ಹೇಳುವುದಾದರೆ, ನನ್ನ ಮಕ್ಕಳ ಮಲಗಿರುವ ಮುಖಗಳನ್ನು, ಅವರ ಕೆನ್ನೆಯ ಮೇಲೆ ನಿರಾಶೆಯ ಕಣ್ಣೀರು ಇನ್ನೂ ಇರುವುದನ್ನು ಕಂಡು, ನಾನು ಹೆಚ್ಚು ಸೌಮ್ಯವಾಗಿರಬಾರದಿತ್ತೋ ಎಂದು ಯೋಚಿಸಿದ ಸಮಯಗಳಿದ್ದವು.” ಅವನ ಇಬ್ಬರು ಗಂಡು ಮಕ್ಕಳು ದೊಡ್ಡವರಾಗಿ, ಯೆಹೋವನನ್ನು ಸೇವಿಸಲು ಆರಿಸಿದರು.
ಆದರೂ ಯೆಹೋವನನ್ನು ತೊರೆದು, ಸೈತಾನನ ಲೋಕಕ್ಕಾಗಿ ಕ್ರೈಸ್ತ ಸಭೆಯನ್ನು ತ್ಯಜಿಸುವ ಯುವಕರಿದ್ದಾರೆ. ಆದುದರಿಂದ ಯೆಹೋವನನ್ನು ಆರಿಸುವಂತೆ ತಮ್ಮ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಹೆತ್ತವರು ಹೇಗೆ ತಾನೇ ಜಯಗಳಿಸುತ್ತಾರೆ? ಆ ಪ್ರಶ್ನೆಯನ್ನು ಉತ್ತರಿಸಲಿಕ್ಕಾಗಿ, ಯೆಹೋವನೊಂದಿಗೆ ಯುವ ಜನರು ಉಳಿಯಬೇಕೆಂದು ತಮ್ಮ ಹೆತ್ತವರು ಇಷ್ಟೊಂದು ತೀವ್ರವಾಗಿ ಬಯಸುವಾಗ, ಕೆಲವು ಯುವ ಜನರು ಆತನನ್ನು ಯಾಕೆ ತೊರೆಯುತ್ತಾರೆಂದು ನಾವು ಮೊದಲು ಕಂಡುಹಿಡಿಯೋಣ.
ಕೆಲವು ಯುವ ಜನರು ಯೆಹೋವನನ್ನು ತೊರೆಯುವ ಕಾರಣ
ಹೆಚ್ಚು ಸಾಮಾನ್ಯವಾದ ಒಂದು ಕಾರಣವು ಯಾವುದೆಂದರೆ, ಕೆಲವು ಯುವ ಜನರು ನಿಜವಾಗಿಯೂ ಯೆಹೋವನನ್ನು ಯಾ ಆತನ ಮಾರ್ಗಗಳನ್ನು ಎಂದಿಗೂ ಅರಿತಿರುವುದೇ ಇಲ್ಲ. ಬಾಲ್ಯಾವಸ್ಥೆಯಿಂದ ಕ್ರೈಸ್ತ ಕೂಟಗಳನ್ನು ಹಾಜರಾಗುತ್ತಿದ್ದರೂ, ಅವರು ಅದನ್ನು ಯಾಂತ್ರಿಕವಾಗಿ ಮಾಡುತ್ತಾರೆ, ಮತ್ತು ಯೆಹೋವನಿಗಾಗಿ ನಿಜವಾದ ಹುಡುಕಾಟವು ಇರುವುದಿಲ್ಲ. (ಯೆಶಾಯ 55:6; ಅ. ಕೃತ್ಯಗಳು 17:27) ಮೇಲೆ ಉಲ್ಲೇಖಿಸಲಾದ ಹುಡುಗನು ಕ್ರೈಸ್ತ ಕೂಟಗಳಲ್ಲಿ ಬೇಸರಗೊಂಡನು ಯಾಕೆಂದರೆ, ವೇದಿಕೆಯ ಮೇಲಿಂದ ಭಾಷಣಕರ್ತರಿಂದ ಹೇಳಲಾಗುತ್ತಿದ್ದ ವಿಷಯಗಳು ಅವನಿಗೆ ಅರ್ಥವಾಗುತ್ತಿರಲಿಲ್ಲ.
ಸತ್ಯದ ಬೀಜಗಳು ಕೆಲವು ಮಕ್ಕಳಲ್ಲಿ ನೆಡಲ್ಪಡುತ್ತವೆ, ಆದರೆ ತಮ್ಮ ಹೃದಯಗಳು ಸುವ್ಯಕ್ತವಾಗಿರುವ ಸೈತಾನನ ಲೋಕದ ನಿಶ್ಚಿಂತ, ಪ್ರಾಪಂಚಿಕ ಜೀವನ ಶೈಲಿಯಿಂದ ಆಕರ್ಷಿಸಲ್ಪಡುವಂತೆ ಅವರು ಅನುಮತಿಸುತ್ತಾರೆ. ತಮ್ಮ ಸಮಾನಸ್ಕಂಧರೊಂದಿಗೆ ಮತ್ತು ಅವರಂತೆ ಇರುವ ಅತಿ ಬಲವಾದ ಬಯಕೆಯೊಂದಿಗೆ ಕೆಲವರಿಗೆ ನಿಭಾಯಿಸಲಾಗುವುದಿಲ್ಲ.—1 ಪೂರ್ವಕಾಲವೃತ್ತಾಂತ 28:9; ಲೂಕ 8:12-14; 1 ಕೊರಿಂಥ 15:33.
ಆದರೂ, ಲೋಕದ ಉದ್ದಕ್ಕೂ, ಕ್ರೈಸ್ತ ಕುಟುಂಬಗಳಲ್ಲಿರುವ ಅನೇಕ ಮಕ್ಕಳು ಯೆಹೋವನ ಪಕ್ಷದಲ್ಲಿ ನಿಲ್ಲಲು ಆರಿಸಿದ್ದಾರೆ. ಅವರ ಹೆತ್ತವರು ತೆಗೆದುಕೊಂಡಂತಹ ಪರಿಣಾಮಕಾರಿ ಕ್ರಿಯೆಗಳಿಂದ ಏನನ್ನಾದರೂ ಕಲಿಯಸಾಧ್ಯವಿದೆಯೊ?
ಬೇಗನೆ ಆರಂಭಿಸಿರಿ
ಯೆಹೋವನನ್ನು ಆರಿಸುವಂತೆ ನಿಮ್ಮ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಒಂದು ಪ್ರಾಮುಖ್ಯವಾದ ಕೀಲಿ ಕೈ, ಬೇಗನೆ ಆರಂಭಿಸುವುದೇ ಆಗಿದೆ. ಅನೇಕ ವಿದ್ಯಮಾನಗಳಲ್ಲಿ, ಹೃದಯವು ಕೋಮಲವಾಗಿರುವಾಗ ಬೀರಲ್ಪಟ್ಟ ಪ್ರಭಾವಗಳು ಮತ್ತು ಕಲಿಯಲ್ಪಟ್ಟ ಪಾಠಗಳು, ಒಂದು ಜೀವಮಾನವಿಡೀ ಬಾಳುತ್ತವೆ. (ಜ್ಞಾನೋಕ್ತಿ 22:6) ಯೆಹೋವನು ಅವರಿಗಾಗಿ ಮಾಡಿರುವ ವಿಷಯಗಳಿಗಾಗಿ ಗಣ್ಯತೆಯನ್ನು ಮತ್ತು ಯೆಹೋವನಿಗಾಗಿ ಅವರ ಹೃದಯಗಳಲ್ಲಿ ಪ್ರೀತಿಯನ್ನು ಬೆಳೆಸಲು ಪ್ರಯತ್ನಿಸುತ್ತಾ, ಯೆಹೋವನ ಒಳ್ಳೆಯತನ, ಆತನ ಪ್ರೀತಿ ಮತ್ತು ವಿಸ್ಮಯತೆಯ ಕುರಿತು ನಿಮ್ಮ ಮಕ್ಕಳಿಗೆ ಹೇಳುವುದನ್ನು ಬೇಗನೆ ಆರಂಭಿಸಿರಿ. ಇದನ್ನು ಸಾಧಿಸಲು, ವಾಚ್ಟವರ್ ಸೊಸೈಟಿಯ ಪ್ರಕಾಶನಗಳಲ್ಲಿ ಕಂಡುಬರುವ ಯೆಹೋವನ ಸೃಷ್ಟಿಗಳ ಕುರಿತಾದ ಹೇರಳವಾದ ಲೇಖನಗಳನ್ನು ಅನೇಕ ಹೆತ್ತವರು ಯಶಸ್ವಿಯಾಗಿ ಉಪಯೋಗಿಸಿದ್ದಾರೆ.
ಜೀವನದಲ್ಲಿ ಮೊದಲೇ ಬೋಧಿಸಲ್ಪಡಬೇಕಾದ ಇತರ ಗುಣಗಳಲ್ಲಿ, ಯೆಹೋವನಿಗಾಗಿ ಮತ್ತು ಆತನ ಆರಾಧನೆಗಾಗಿ ವಿಧೇಯತೆ ಮತ್ತು ಗೌರವಗಳು ಸೇರಿವೆ. ಕ್ರೈಸ್ತ ಕೂಟಗಳಲ್ಲಿ ಶಾಲಾಪೂರ್ವ ಮಕ್ಕಳು ಸರಳವಾದ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಮತ್ತು ತಮ್ಮ ಸ್ವಂತ ಬೈಬಲ್ಗಳಲ್ಲಿ ವಚನಗಳನ್ನು ತೆಗೆದುನೋಡಲು ಕಷ್ಟಪಡುವುದನ್ನು ಯಾ ನಿದ್ದೆ ಬರುವಂತಾದಾಗ ತಣ್ಣೀರಿನಿಂದ ತಮ್ಮ ಮುಖಗಳನ್ನು ತೊಳೆಯಲು ತಮ್ಮ ಹೆತ್ತವರೊಂದಿಗೆ ಬಾತ್ರೂಮಿಗೆ ಹೋಗುವುದನ್ನು ನೋಡುವುದು ಹೃದಯೋತ್ತೇಜಕವಾಗಿದೆ. ಇವು ಸರಳ ವಿಷಯಗಳು, ಆದರೆ ಯೆಹೋವನಿಗೆ ಗೌರವ ಮತ್ತು ವಿಧೇಯತೆ ತೋರಿಸಲ್ಪಡಬೇಕೆಂದು ಯುವ ಮನಸ್ಸಿನ ಮೇಲೆ ಪ್ರಭಾವ ಬೀರುವುದರಲ್ಲಿ ಅವು ಎಷ್ಟು ಪ್ರಾಮುಖ್ಯವಾಗಿವೆ!
ಗಂಭೀರವಾದ ವೈಯಕ್ತಿಕ ಬೈಬಲ್ ಉಪದೇಶವೂ ಬೇಗನೆ ತೊಡಗಬೇಕು. ತಮ್ಮ ಹುಡುಗರು ಎರಡು ವರ್ಷ ಪ್ರಾಯದವರಾಗಿದ್ದಾಗ, ಒಬ್ಬ ದಂಪತಿಗಳು ಅವರೊಂದಿಗೆ ಮಹಾ ಬೋಧಕನಿಗೆ ಕಿವಿಗೊಡುವುದು ಎಂಬ ಪುಸ್ತಕದಿಂದ ಓದಲು ಆರಂಭಿಸಿದರು.a ತದನಂತರ, ಹುಡುಗರು ಶಾಲೆಗೆ ಹೋಗುವುದನ್ನು ಆರಂಭಿಸಿದಾಗ, ಬೇಗನೆ ಎದ್ದು ಪ್ರತಿದಿನ ಬೆಳಗ್ಗೆ ತಮ್ಮ ತಾಯಿಯೊಂದಿಗೆ ಬೈಬಲ್ ಕಥೆಗಳ ನನ್ನ ಪುಸ್ತಕ ಮತ್ತು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕಗಳಿಂದ ಅವರು ಅಭ್ಯಸಿಸಿದರು.* ಇದು ಹೊತ್ತರೂಟದ ಮುಂಚೆ ತಂದೆಯಿಂದ ನಡೆಸಲಾಗುತ್ತಿದ್ದ ದಿನದ ವಚನದ ಚರ್ಚೆಯಿಂದ ಹಿಂಬಾಲಿಸಲ್ಪಡುತ್ತಿತ್ತು. ಹತ್ತು ಮತ್ತು 11ರ ವಯಸ್ಸಿನಲ್ಲಿ ನೀರಿನ ದೀಕ್ಷಾಸ್ನಾನದ ಮೂಲಕ ತಮ್ಮ ಸಮರ್ಪಣೆಯನ್ನು ಸಂಕೇತಿಸುತ್ತಾ, ಯೆಹೋವನನ್ನು ಸೇವಿಸಲು ತಮ್ಮ ಗಂಡು ಮಕ್ಕಳು ಇತ್ತೀಚೆಗೆ ಆರಿಸಿದಾಗ, ಹೆತ್ತವರ ಪ್ರಯತ್ನಗಳು ಯಥೇಚ್ಛವಾಗಿ ಬಹುಮಾನಿಸಲ್ಪಟ್ಟವು.
ಜಪಾನಿನಲ್ಲಿರುವ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನಲ್ಲಿ ಸೇವೆ ಸಲ್ಲಿಸುತ್ತಿರುವ ಒಬ್ಬ ಒಳ್ಳೆಯ ಯೌವನಸ್ಥನು ಜ್ಞಾಪಿಸಿಕೊಳ್ಳುವುದೇನೆಂದರೆ, ತಾನು ಬಹಳ ಎಳೆಯವನಾಗಿದ್ದಾಗ, ಪ್ರಾರ್ಥಿಸಲು ತನಗೆ ಸಹಾಯ ಮಾಡುತ್ತಾ, ರಾತ್ರಿಯಲ್ಲಿ ತನ್ನ ಪಕ್ಕದಲ್ಲಿ ಕುಳಿತುಕೊಳ್ಳುವ ಮೂಲಕ ಯೆಹೋವನೊಂದಿಗೆ ಒಂದು ಸಂಬಂಧವನ್ನು ಬೆಳೆಸಲು ಅವನಿಗೆ ಅವನ ತಾಯಿ ಸಹಾಯ ಮಾಡಿದಳು. ಕಲಿಸಲ್ಪಟ್ಟ ಪಾಠವನ್ನು ಅವನು ಎಂದೂ ಮರೆಯಲಿಲ್ಲ—ಅವನು ಎಲ್ಲೇ ಹೋಗಲಿ ಯಾ ಏನೇ ಮಾಡಲಿ, ಯೆಹೋವನು ಯಾವಾಗಲೂ ಹತ್ತಿರವಿದ್ದನು ಮತ್ತು ಸಹಾಯ ಮಾಡಲು ಸಿದ್ಧನಿದ್ದನು.
ಪಿತ್ರಾರ್ಜಿತವಾಗಿ ಪಡೆದ ತಮ್ಮ ಮಕ್ಕಳ ಅಸಂಪೂರ್ಣತೆಯಿಂದಾಗಿ ಹುಟ್ಟುವ ತಪ್ಪಾದ ಪ್ರವೃತ್ತಿಗಳನ್ನು ಗುರುತಿಸಲು ಸಫಲರಾದ ಹೆತ್ತವರು ಕಲಿಯುತ್ತಾರೆ, ಮತ್ತು ಇದನ್ನು ಸರಿಪಡಿಸಲು ತಮ್ಮ ಮಕ್ಕಳಿಗೆ ಸಹಾಯ ಮಾಡಲಿಕ್ಕಾಗಿ ಹೆತ್ತವರು ಬೇಗನೆ ಆರಂಭಿಸುತ್ತಾರೆ. (ಜ್ಞಾನೋಕ್ತಿ 22:15) ಸ್ವಾರ್ಥ ಪ್ರವೃತ್ತಿಗಳು, ಹಠಮಾರಿತನ, ಗರ್ವ, ಇತರರ ಕುರಿತು ವಿಪರೀತ ಟೀಕಾತ್ಮಕವಾಗಿರುವುದು, ಇವನ್ನು ಬೇಗನೆ ಎದುರಿಸಬೇಕು. ಇಲ್ಲದಿದ್ದಲ್ಲ, ಇಂತಹ ಬೀಜಗಳು ತದನಂತರ ದೇವರ ಮತ್ತು ಆತನ ಮಾರ್ಗಗಳ ವಿರುದ್ಧ ದಂಗೆಯಾಗಿ ಬೆಳೆಯುವುವು. ಉದಾಹರಣೆಗೆ, ಸದುದ್ದೇಶವುಳ್ಳ ಆದರೆ ವಿಪರೀತ ಅತ್ಯಾಸಕಿಯ್ತಿರುವ ಹೆತ್ತವರು, ಅನೇಕ ವೇಳೆ ತಮ್ಮ ಮಕ್ಕಳು ಸ್ವವಿಚಾರಾಸಕ್ತ ಮನೋಭಾವಗಳನ್ನು ವಿಕಸಿಸುವಂತೆ ಬಿಡುತ್ತಾರೆ. ಈ ಮಕ್ಕಳು, ಬೈಬಲಿನಲ್ಲಿ ಉಲ್ಲೇಖಿಸಲಾದ ‘ಕೃತಜ್ಞತೆಯಿಲ್ಲದ’ ಮಕ್ಕಳಂತೆ ಆಗುತ್ತಾ, ತಮ್ಮ ಹೆತ್ತವರನ್ನಾಗಲಿ ಯೆಹೋವನನ್ನಾಗಲಿ ಗೌರವಿಸುವುದನ್ನು ಕಷ್ಟಕರವಾಗಿ ಕಾಣುತ್ತಾರೆ. (ಜ್ಞಾನೋಕ್ತಿ 29:21) ಇನ್ನೊಂದು ಕಡೆಯಲ್ಲಿ, ಮನೆಯ ಕೆಲಸಗಳು ಕೊಡಲ್ಪಡುವ ಮತ್ತು ಇತರರ ಅಗತ್ಯಗಳಿಗೆ ಎಚ್ಚರವುಳ್ಳವರಾಗಿರಬೇಕೆಂದು ಕಲಿಸಲ್ಪಟ್ಟಿರುವ ಮಕ್ಕಳು, ತಮ್ಮ ಹೆತ್ತವರಿಗೆ ಹಾಗೂ ಯೆಹೋವನಿಗೆ ಅಧಿಕ ಕೃತಜ್ಞರಾಗಿರುವ ಪ್ರವೃತ್ತಯುಳ್ಳವರಾಗಿರುತ್ತಾರೆ.
ಇನ್ನೊಂದು ಆವಶ್ಯಕತೆಯು, ಒಂದು ಮಗುವು ನ್ಯಾಯಸಮ್ಮತವಾಗಿ ಸಾಧಿಸಬಲ್ಲ ದೇವಪ್ರಭುತ್ವ ಗುರಿಗಳನ್ನು ಸ್ಥಾಪಿಸಲು ಬೇಗನೆ ಆರಂಭಿಸುವುದು ಆಗಿದೆ. ಇದನ್ನು ಬೇಗನೆ ಮತ್ತು ಸಮಂಜಸವಾಗಿ ಮಾಡದಿದ್ದಲ್ಲಿ, ಇತರರು ಅವನ ಮನಸ್ಸು ಮತ್ತು ಹೃದಯವನ್ನು ಇತರ ಗುರಿಗಳಿಂದ ತುಂಬಬಹುದು. ಬೈಬಲನ್ನು ಪೂರ್ತಿಯಾಗಿ ಓದುವುದು, ವಾಚ್ಟವರ್ ಸೊಸೈಟಿಯ ಪ್ರಕಾಶನಗಳಲ್ಲಿ ಒಂದನ್ನು ವೈಯಕ್ತಿಕವಾಗಿ ಅಭ್ಯಸಿಸುವುದು, ದೇವಪ್ರಭುತ್ವ ಶುಶ್ರೂಷಾ ಶಾಲೆಯನ್ನು ಸೇರುವುದು, ಸುವಾರ್ತೆಯ ಒಬ್ಬ ಘೋಷಕರಾಗುವುದು, ಮತ್ತು ದೀಕ್ಷಾಸ್ನಾನ ಪಡೆಯುವುದು, ಇವು ಈ ಗುರಿಗಳಲ್ಲಿ ಸೇರಿಸಲ್ಪಡಬೇಕು.
ಸರಳವಾದ ಪ್ರಶ್ನೆಗಳನ್ನು ತಯಾರಿಸುವ ಮೂಲಕ ಮತ್ತು ಶಾಲೆಯಿಂದ ತಾನು ಮನೆಗೆ ಬಂದ ಮೇಲೆ ಉತ್ತರಗಳನ್ನು ಕಂಡುಹಿಡಿಯುವಂತೆ ಅವುಗಳನ್ನು ಅಡುಗೆ ಮನೆಯ ಮೇಜಿನ ಮೇಲೆ ಬಿಟ್ಟುಹೋಗುವ ಮೂಲಕ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಓದುವುದರ ರೂಢಿಯನ್ನು ಅವನಲ್ಲಿ ವಿಕಸಿಸುವಂತೆ, ಅವನ ತಾಯಿ ಮಾಡಿದಳೆಂದು ಟಾಕಫೂಮಿ ಜ್ಞಾಪಿಸಿಕೊಳ್ಳುತ್ತಾನೆ. ಕ್ರೈಸ್ತ ಶುಶ್ರೂಷಕರಿಗಾಗಿ ಅಗತ್ಯವು ಹೆಚ್ಚಿರುವಲ್ಲಿ ಸೇವೆ ಸಲ್ಲಿಸುತ್ತಿದ್ದ ಪಯನೀಯರರೊಂದಿಗೆb ಸ್ಪಲ್ಪ ದಿನಗಳಿಗಾಗಿ ತಂಗುವುದು, ಅವರೊಂದಿಗೆ ಶುಶ್ರೂಷೆಯಲ್ಲಿ ಭಾಗವಹಿಸುವುದು, ಒಳ್ಳೆಯ ಊಟಗಳನ್ನು ಅವರು ತಯಾರಿಸುವುದನ್ನು ನೋಡುವುದು, ಮತ್ತು ಅವರ ಆನಂದ ಹಾಗೂ ಹುರುಪನ್ನು ಗಮನಿಸುವುದು, ಯೆಹೋವನನ್ನು ಅದೇ ರೀತಿಯಲ್ಲಿ ಸೇವಿಸುವ ಆಕೆಯ ಬಯಕೆಯನ್ನು ಬಹಳವಾಗಿ ಪ್ರಭಾವಿಸಿತೆಂದು ಯೂರಿ ಜ್ಞಾಪಿಸಿಕೊಳ್ಳುತ್ತಾಳೆ. ತಮ್ಮ ಹೆತ್ತವರು ತಮ್ಮನ್ನು, ಎಲ್ಲಿ ಇತರ ಯುವಕರು ಮತ್ತು ಯುವತಿಯರು ಯೆಹೋವನನ್ನು ಸಂತೋಷದಿಂದ ಸೇವಿಸುವುದನ್ನು ನೋಡಸಾಧ್ಯವಿತ್ತೋ ಅಂತಹ ಬೆತೆಲ್—ವಾಚ್ ಟವರ್ ಸೊಸೈಟಿಯ ಪ್ರಧಾನ ಕಾರ್ಯಾಲಯ ಮತ್ತು ಬ್ರಾಂಚ್ಗಳು ಹಾಗೆ ಕರೆಯಲ್ಪಡುತ್ತವೆ—ಗೆ ಕ್ರಮವಾಗಿ ತಂದದ್ದನ್ನು ಅನೇಕ ಯುವ ಜನರು ವಿವರಿಸುತ್ತಾರೆ. ಮಕ್ಕಳೋಪಾದಿ ಭೇಟಿ ನೀಡಿದ ಅನೇಕರು ಲೋಕದ ಸುತ್ತಲೂ ಇರುವ ಬೆತೆಲ್ಗಳಲ್ಲಿ ಈಗ ಸೇವೆ ಸಲ್ಲಿಸುತಾರ್ತೆ.
ನಿಮ್ಮ ಮಕ್ಕಳಿಗೆ ನಿಮ್ಮ ಸಮಯವನ್ನು ಕೊಡಿರಿ
ನಿಮ್ಮ ಮಕ್ಕಳೊಂದಿಗೆ ನೀವು ವ್ಯಯಿಸುವ ಸಮಯದ ಮೊತ್ತ ಹಾಗೂ ಗುಣಮಟ್ಟವು, ಬಹುಶಃ ಅವರು ಯೆಹೋವನನ್ನು ಸೇವಿಸಲು ಆರಿಸುವರೊ ಇಲ್ಲವೊ ಎಂಬ ವಿಷಯದ ಮೇಲೆ ನೇರವಾದ ಪ್ರಭಾವವನ್ನು ಬೀರುವುದು. ಅವರೊಂದಿಗೆ ನೀವು ನಡೆಸುವ ಬೈಬಲ್ ಅಧ್ಯಯನಕ್ಕಾಗಿ ಎಷ್ಟು ಸಮಯವನ್ನು ಮತ್ತು ಸಿದ್ಧತೆಯನ್ನು ನೀವು ಮಾಡುತ್ತೀರೆಂದು ಅವರು ಬೇಗನೆ ವಿವೇಚಿಸುತ್ತಾರೆ. ಕಳೆದ ಅಧ್ಯಯನವನ್ನು ಎಲ್ಲಿಗೆ ನಿಲ್ಲಿಸಿದಿರಿ ಎಂಬುದನ್ನು ಜ್ಞಾಪಿಸಿಕೊಳ್ಳುವುದು ನಿಮಗೆ ಸಾಧ್ಯವಾಗದಿದ್ದಲ್ಲಿ, ಯಾ ಕ್ಷುಲ್ಲಕ ಕಾರಣಗಳಿಗಾಗಿ ನೀವು ಅಧ್ಯಯನವನ್ನು ರದ್ದುಪಡಿಸಿದರೆ, ಅಧ್ಯಯನವು ಅಷ್ಟು ಪ್ರಾಮುಖ್ಯವಾದ ಸಂಗತಿಯಲ್ಲವೆಂಬ ಸಂದೇಶವನ್ನು ನೀವು ಸಾಗಿಸುತ್ತಿದ್ದೀರಿ. ಆದರೆ, ಹೆತ್ತವರು ಅಧ್ಯಯನಕ್ಕಾಗಿ ತ್ಯಾಗಗಳನ್ನು ಮಾಡುವುದನ್ನು, ಅದಕ್ಕಾಗಿ ಚೆನ್ನಾಗಿ ತಯಾರಿಸಿ, ಯಾವುದೇ ಅಪಕರ್ಷಣೆಗಳು ಏಳಲಿ ಅಧ್ಯಯನವನ್ನು ಕ್ರಮವಾಗಿ ನಡೆಸುವುದನ್ನು ಅವರು ನೋಡುವಾಗ, ಸಂಪೂರ್ಣವಾಗಿ ಭಿನ್ನವಾದೊಂದು ಸಂದೇಶವು ಸಾಗಿಸಲ್ಪಡುತ್ತದೆ. ಅದೊಂದು ಆವಶ್ಯಕತೆಯಾಗಿರದಿದ್ದರೂ, ಕೆಲವು ತಾಯಂದಿರು ಕೂಟಗಳಿಗೆ ಹೋಗುವಾಗ ಯಾ ನೆರೆಯವರೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ನಡೆಸುವಾಗ ಅಲಂಕರಿಸಿಕೊಳ್ಳುವಂತೆಯೇ, ತಮ್ಮ ಮಕ್ಕಳ ಅಧ್ಯಯನಕ್ಕಾಗಿ ಅಲಂಕರಿಸಿಕೊಳ್ಳುತ್ತಾರೆ. ಕೊಡಲ್ಪಡುವ ಭಾವನೆಯೇನೆಂದರೆ, ಯೆಹೋವನ ಆರಾಧನೆಯು ಪ್ರಾಮುಖ್ಯವಾದದ್ದು.
ನಿಮ್ಮ ಮಕ್ಕಳ ಬೈಬಲ್ ಶಿಕ್ಷಣವನ್ನು ಆನಂದದಾಯಕವಾಗಿ, ಅವರ ಹೃದಯವನ್ನು ಮುಟ್ಟುವಂಥದ್ದಾಗಿ ಮಾಡಲು, ಬಹಳಷ್ಟು ಸಮಯ ಮತ್ತು ಪ್ರಯತ್ನವು ಬೇಕಾಗುವುದು. ಅವರು ಕಲಿಯುತ್ತಿರುವ ಸಂಗತಿಗಳು ಅವರ ಮುಂದೆ ನಟಿಸಲ್ಪಟ್ಟಾಗ, ವಿಶೇಷವಾಗಿ ಚಿಕ್ಕ ಮಕ್ಕಳು ಪ್ರಭಾವಿತರಾಗುತ್ತಾರೆ. ಉದಾಹರಣೆಗೆ, ಒಬ್ಬ ತಂದೆಯು, ಲಾಜರನ ಪುನರುತ್ಥಾನದ ಕುರಿತಿರುವ ಬೈಬಲ್ ದಾಖಲೆಯನ್ನು ನಟಿಸುವ ಮೂಲಕ ಪುನರುತ್ಥಾನವನ್ನು ಚಿತ್ರಿಸಿಕೊಳ್ಳುವಂತೆ ತನ್ನ ಮಕ್ಕಳಿಗೆ ಸಹಾಯ ಮಾಡಿದನು. ಅವನು ಏಕಾಂತಕೋಣೆಯೊಳಗೆ ಹೋಗಿ ತದನಂತರ ಪುನರುತ್ಥಾನಗೊಂಡ ಲಾಜರನಂತೆ ಹೊರಬಂದನು.—ಯೋಹಾನ 11:17-44.
ಮಕ್ಕಳು ಪ್ರೌಢಾವಸ್ಥೆಯನ್ನು ಸಮೀಪಿಸಿದಂತೆ, ಅವರು ಎದುರಿಸುವ ಭಾವನೆಗಳ, ಸಂಶಯಗಳ, ಮತ್ತು ಚಿಂತೆಗಳ ಪ್ರವಾಹದೊಂದಿಗೆ ವ್ಯವಹರಿಸಲು, ಇನ್ನೂ ಹೆಚ್ಚಿನ ಸಮಯ ಮತ್ತು ಕೌಶಲದ ಅಗತ್ಯವಿರುತ್ತದೆ. ಯೆಹೋವನಲ್ಲಿ ಮಕ್ಕಳು ಭರವಸೆಯನ್ನು ವಿಕಸಿಸಬೇಕಾದರೆ, ಈ ಹಂತದಲ್ಲಿ ಪ್ರೀತಿಪರ ಹಾಗೂ ವಿವೇಚನಾಶಕ್ತಿಯುಳ್ಳ ಹೆತ್ತವರಿಂದ ಬದಿಗಿಡಲ್ಪಟ್ಟ ಸಮಯವು ಬಹಳ ಪ್ರಾಮುಖ್ಯವಾಗಿದೆ. ನಾಲ್ಕು ಮಕ್ಕಳ ಸಫಲನಾದ ತಂದೆಯೊಬ್ಬನು ಜ್ಞಾಪಿಸಿಕೊಂಡಿದ್ದೇನೆಂದರೆ, ತನ್ನ ಮಕ್ಕಳು ವಿಭಿನ್ನ ಸಮಸ್ಯೆಗಳನ್ನು ಎದುರಿಸುವಾಗ, ಸಂಕಟವು ಸಂಪೂರ್ಣವಾಗಿ ಜಯಿಸಲ್ಪಡುವ ತನಕ ಪ್ರತಿದಿನ ವಾಚ್ಟವರ್ ಪ್ರಕಾಶನಗಳಲ್ಲಿರುವ ಸಂಬಂಧಪಟ್ಟ ವಿಷಯವನ್ನು ಅವನು ತೆಗೆದುನೋಡಿ ಅವರೊಂದಿಗೆ ಚರ್ಚಿಸುತ್ತಿದ್ದನು.
ಇಬ್ಬರು ಮಕ್ಕಳ ಒಬ್ಬಾಕೆ ಕಾರ್ಯಮಗ್ನ ಪಯನೀಯರ್ ತಾಯಿಯು, ಆಕೆಯ ಮಗಳು ತನ್ನನ್ನು ಪ್ರತ್ಯೇಕಿಸಿಕೊಳ್ಳುವುದನ್ನು ಮತ್ತು ದೇವಪ್ರಭುತ್ವ ಚಟುವಟಿಕೆಗಳಲ್ಲಿ ಆನಂದದ ಕೊರತೆಯುಳ್ಳವಳಾಗಿ ಪರಿಣಮಿಸುವುದನ್ನು ಗಮನಿಸಿದಳು. ಇಬ್ಬರೂ ಚಹವನ್ನು ಕುಡಿಯುವಾಗ, ಮಗಳನ್ನು ಸಂಭಾಷಣೆಯಲ್ಲಿ ತೊಡಗಿಸುತ್ತಾ, ಪ್ರತಿ ಮಧ್ಯಾಹ್ನ ಮಗಳು ಶಾಲೆಯಿಂದ ಹಿಂದಿರುಗುವಾಗ ತಾಯಿ ಮನೆಯಲ್ಲಿರಲು ನಿರ್ಧರಿಸಿದಳು. ಆಪ್ತವಾದ ತಾಯಿ ಮಗಳ ಸಂಭಾಷಣೆಗಳ ಮುಖಾಂತರ, ಅವಳಿಗೆ ಬೇಕಾದ ಸಹಾಯವನ್ನು ಹುಡುಗಿಯು ಪಡೆದಳು. ಈಗ ಪ್ರೌಢ ಶಾಲೆಯಿಂದ ಪದವಿಯನ್ನು ಪಡೆದ ಬಳಿಕ, ಅವಳು ಪಯನೀಯರ್ ಸೇವೆಯಲ್ಲಿ ತನ್ನ ತಾಯಿಯ ಜೊತೆಸೇರಿದ್ದಾಳೆ.—ಜ್ಞಾನೋಕ್ತಿ 20:5.
ಒಳ್ಳೆಯ ಸಹವಾಸ ಮತ್ತು ಮಾದರಿ
ತಮ್ಮ ಸಮಯವನ್ನು ಕೊಡುವುದರ ಜೊತೆಗೆ, ತಮ್ಮ ಸಂತಾನಕ್ಕಾಗಿ ಹೆತ್ತವರು ಆರೋಗ್ಯಕರ ಸಹವಾಸವನ್ನು ಒದಗಿಸಬೇಕು. ಜ್ಞಾನೋಕ್ತಿ 13:20 ಹೇಳುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”
ಅನೇಕ ಸಫಲರಾದ ಹೆತ್ತವರು ಆ ಜ್ಞಾನೋಕ್ತಿಯ ಸತ್ಯತೆಯನ್ನು ಗುರುತಿಸುತ್ತಾರೆ. ನಾಲ್ಕು ಮಕ್ಕಳ ಒಬ್ಬ ತಂದೆ ಹೇಳುವುದು: “ಗತಕಾಲದ ಬಗ್ಗೆ ಯೋಚಿಸುವಾಗ, ನಮ್ಮ ಮಕ್ಕಳ ಸತ್ಯದಲ್ಲಿರುವ ಸ್ನೇಹಿತರ ದೊಡ್ಡ ಗುಂಪೇ, ಯೆಹೋವನನ್ನು ಸೇವಿಸುವಂತೆ ಅವರನ್ನು ಪ್ರೇರೇಪಿಸಲು ಸಹಾಯ ಮಾಡಿತೆಂದು ನಾನು ನೆನಸುತ್ತೇನೆ. ಇತರ ಸಭೆಗಳಲ್ಲಿ ಅಷ್ಟೇ ಅಲ್ಲದೆ ನಮ್ಮ ಸ್ವಂತ ಸಭೆಯಲ್ಲಿ ಗೆಳೆಯರನ್ನು ಪಡೆಯಲು ಮತ್ತು ಆ ಗೆಳೆತನಗಳನ್ನು ಪೋಷಿಸಲು ನಾನು ಅವರನ್ನು ಉತ್ತೇಜಿಸಿದೆ.” ಬೆತೆಲ್ನಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ಒಬ್ಬ ಕ್ರೈಸ್ತ ಹಿರಿಯನು, ಸ್ಮರಿಸಿಕೊಂಡಿದ್ದು: “ನಾನು ಎಳೆಯವನಾಗಿದ್ದಾಗ, ಒಂದು ಚಿಕ್ಕ ಮನೆಯಲ್ಲಿ ನಾವು ಜೀವಿಸಿದೆವು, ಆದರೆ ಅದನ್ನು ಯಾವಾಗಲೂ ಸರ್ಕಿಟ್ ಮೇಲ್ವಿಚಾರಕನಿಗೆ ವಸತಿಯೋಪಾದಿ ನೀಡಲಾಗುತ್ತಿತ್ತು. ಇದರೊಂದಿಗೆ, ನಮ್ಮ ಸಭೆಯಲ್ಲಿದ್ದ ವಿಶೇಷ ಪಯನೀಯರರು ಕ್ರಮವಾಗಿ ನಮ್ಮೊಂದಿಗೆ ಊಟ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಅವರು ಸ್ನಾನ ಮಾಡಿದರು ಮತ್ತು ನಮ್ಮೊಂದಿಗೆ ಸಹವಸಿಸಿದರು. ಅವರ ಅನುಭವಗಳನ್ನು ಕೇಳುವುದು ಮತ್ತು ಅವರ ಆನಂದವನ್ನು ನೋಡುವುದು, ಪೂರ್ಣ ಸಮಯದ ಸೇವೆಗಾಗಿ ಗಣ್ಯತೆಯನ್ನು ಬೆಳೆಸುವಂತೆ ನನಗೆ ಸಹಾಯ ಮಾಡಿತು.”
ಕಷ್ಟಗಳನ್ನು ಅನುಭವಿಸುತ್ತಿರುವವರಿಗೆ ಒಳ್ಳೆಯ ಸಹವಾಸವು ಸಹಾಯ ಮಾಡುತ್ತದೆ. ಯಾರ ಮಗನು ಗೊಂದಲಮಯ ಸಮಯವನ್ನು ಅನುಭವಿಸುತ್ತಿದ್ದನೊ, ಆ ತಾಯಿಯು ಸಮಸ್ಯೆಯನ್ನು ಯೆಹೋವನ ಸಾಕ್ಷಿಗಳ ಸಂಚರಣ ಮೇಲ್ವಿಚಾರಕನೊಂದಿಗೆ ಚರ್ಚಿಸಿದಳು. ಆಕೆಯೊಂದಿಗೆ ಕ್ಷೇತ್ರ ಸೇವೆಯಲ್ಲಿ ಹುಡುಗನನ್ನು ಕರೆದುಕೊಂಡು ಹೋಗುವಂತೆ ಅವನು ಶಿಫಾರಸ್ಸು ಮಾಡಿದನು. “ನೀನು ಹಾಗೆ ಮಾಡುವಲ್ಲಿ, ಅವನ ಆತ್ಮಿಕತೆ ಹಾಗೂ ಬೇರೆ ಎಲ್ಲವೂ ಉತ್ತಮಗೊಳ್ಳುವುದು,” ಎಂದು ಮೇಲ್ವಿಚಾರಕನು ಹೇಳಿದನು. ಆಕೆ ವರದಿಸುವುದು: “ನಮ್ಮ ಸಭೆಯಲ್ಲಿ ಸಂಜೆಯ ಸಾಕ್ಷಿಕಾರ್ಯದ ಏರ್ಪಾಡು ಮಾಡಲಾಗಿತ್ತು, ಮತ್ತು ಅನೇಕ ಶಾಲಾ ವಯಸ್ಸಿನ ಮಕ್ಕಳು, ಹಲವಾರು ವೃದ್ಧ ಕ್ರಮದ ಪಯನೀಯರರು, ಮತ್ತು ಕಡಿಮೆ ಪಕ್ಷ ಒಬ್ಬ ಹಿರಿಯನಾದರೂ ಅದರಲ್ಲಿ ಭಾಗವಹಿಸಿದನು. ಕ್ರಮವಾಗಿ ನನ್ನ ಮಗನನ್ನು ಹೊರಗೆ ಹೋಗುವಂತೆ ಮಾಡುವುದು ಆರಂಭದಲ್ಲಿ ಒಂದು ಹೋರಾಟವಾಗಿತ್ತು, ಆದರೆ ಇದು ಬೇಗನೆ ಬದಲಾಯಿತು ಯಾಕೆಂದರೆ ಅವನು ಆರೋಗ್ಯಕರ ಸಹವಾಸದಿಂದ ಉತ್ತೇಜನಗೊಂಡು ಯಾವಾಗಲೂ ಮನೆಗೆ ಅಧಿಕ ಹರ್ಷ ಚಿತನ್ತಾಗಿ ಬರುತ್ತಿದ್ದ. ಅವನಿನ್ನೂ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ, ದೀಕ್ಷಾಸ್ನಾನ ಪಡೆದುಕೊಂಡ ಮತ್ತು ಪ್ರತಿ ತಿಂಗಳು ಆಕ್ಸಿಲಿಯರಿ ಪಯನೀಯರನಂತೆ ಸೇವೆ ಸಲ್ಲಿಸಿದ, ಮತ್ತು ಪದವೀಧರನಾದಾಗ, ಅವನೊಬ್ಬ ಕ್ರಮದ ಪಯನೀಯರನಾದ.” ಯೆಹೋವನ ಚಿತ್ತವನ್ನು ಮಾಡುವುದರೊಂದಿಗೆ ಸೇರಿದ್ದ ಆರೋಗ್ಯಕರ ಸಹವಾಸವು ಒಳ್ಳೆಯ ಫಲಿತಾಂಶಗಳನ್ನು ತಂದಿತು.
ನಿಮ್ಮ ಮಗುವಿನ ಮೇಲೆ ಆರೋಗ್ಯಕರ ಪ್ರಭಾವವನ್ನು ಬೀರಬಲ್ಲ ಎಳೆಯರು ಸ್ಥಳೀಯವಾಗಿ ಇರಲಿಕ್ಕಿಲ್ಲ, ಆದರೆ ಯೆಹೋವನನ್ನು ಸೇವಿಸಲು ಆರಿಸಿದ ಅನೇಕ ಯುವ ಜನರಿಂದ ಸತತವಾಗಿ ಮಾಡಲ್ಪಟ್ಟ ವೀಕ್ಷಣೆಯು, ಅವರ ಹೆತ್ತವರ ಮಾದರಿಗಳಿಗೆ ಸಂಬಂಧಿಸಿದೆ. ಅನೇಕ ಯುವ ಜನರು ತಮ್ಮ ಹೆತ್ತವರನ್ನು ಮೆಚ್ಚಿದರು ಮತ್ತು ಅವರನ್ನು ಅನುಕರಿಸಲು ಬಯಸಿದರು. ತನ್ನ ತಾಯಿಯ ಆತಿಥ್ಯವನ್ನು ಮತ್ತು ಆಕೆ ಹೇಗೆ ಇತರರಿಗಾಗಿ ಕಾಳಜಿ ವಹಿಸಿದಳೆಂಬುದನ್ನು—ಅವರೊಂದಿಗೆ ಟೆಲಿಫೋನ್ನ ಮೂಲಕ ಮಾತಾಡುವುದನ್ನು ಮತ್ತು ರೋಗಿಗಳಿಗೆ ಊಟಗಳನ್ನು ಸಿದ್ಧಪಡಿಸುವುದನ್ನು—ಯೂರಿ ಜ್ಞಾಪಿಸಿಕೊಳ್ಳುತ್ತಾಳೆ. ಎಲ್ಲರೂ ಈಗ ಬೆಳೆದು ಯೆಹೋವನನ್ನು ಸೇವಿಸುತ್ತಿರುವ ನಾಲ್ಕು ಹುಡುಗರ ಒಂದು ಕುಟುಂಬದಿಂದ ಬರುವ ಟಾಟ್ಸುಓ, ಹೇಳಿದ್ದು: “ತಾಯಿಗೆ ನಮ್ಮೊಂದಿಗೆ ಕ್ರಮವಾಗಿ ಅಭ್ಯಸಿಸಲು ಸಾಧ್ಯವಾಗುತ್ತಿರಲಿಲ್ಲ ಯಾಕೆಂದರೆ ತಂದೆಯು ಅವಿಶ್ವಾಸಿಯಾಗಿದ್ದನು ಮತ್ತು ಸಂಬಂಧಿಕರಿಂದ ಬಹಳ ವಿರೋಧವನ್ನು ಆಕೆ ಎದುರಿಸಿದಳು. ಆದರೆ ಸತ್ಯಕ್ಕಾಗಿ ಆಕೆಯ ನಿಲುವನ್ನು ಮತ್ತು ಯೆಹೋವನನ್ನು ಸೇವಿಸುವುದರಲ್ಲಿ ಆಕೆಯ ಆನಂದವನ್ನು ಗಮನಿಸುವುದು ನನ್ನನ್ನು ಬಹಳವಾಗಿ ಪ್ರಭಾವಿಸಿತು. ನಮ್ಮ ಸಮಸ್ಯೆಗಳಲ್ಲಿ ನಮಗೆ ಸಹಾಯ ಮಾಡಲು ಹೊತ್ತಾರೆಯ ತನಕ ಮಲಗದೆ ಇರಲು ಸಹ ಆಕೆ ಸಿದ್ಧಳಾಗಿದ್ದಳು.” ಹೆತ್ತವರ ವಿವೇಕದ ಮಾತುಗಳು ನಂಬಿಗಸ್ತ ಕೆಲಸಗಳ ಮೂಲಕ ಬೆಂಬಲಿಸಲ್ಪಟ್ಟಾಗ, ಅವುಗಳಿಗೆ ಶಕ್ತಿಯಿದೆ. ಯೋಯಿಚೀರೊ ತನ್ನ ಹೆತ್ತವರ ಕುರಿತು ಹೀಗೆ ಹೇಳಿದನು: “ಸಭೆಯಲ್ಲಿರುವ ಇತರರ ಕುರಿತು ನಕಾರಾತ್ಮಕ ಆಲೋಚನೆಗಳನ್ನು ಅವರು ಎಂದಾದರೂ ವ್ಯಕ್ತಪಡಿಸಿದ್ದನ್ನು ಜ್ಞಾಪಿಸಿಕೊಳ್ಳುವುದು ನನಗೆ ಸಾಧ್ಯವಿಲ್ಲ; ಇತರರ ತಪ್ಪುಗಳ ಕುರಿತು ಮಕ್ಕಳಾದ ನಾವು ಹರಟೆ ಹೊಡೆಯಲೂ ಅವರು ಅನುಮತಿಸಲಿಲ್ಲ.”—ಲೂಕ 6:40-42.
ಮಕ್ಕಳು ಯೆಹೋವನನ್ನು ಆರಿಸುವುದನ್ನು ನೋಡುವುದರಲ್ಲಿ ಆನಂದ
ನಿಮ್ಮ ಮಕ್ಕಳು ಯೆಹೋವನನ್ನು ಆರಿಸುವಂತೆ ಸಹಾಯ ಮಾಡುವುದರಲ್ಲಿ ಯಾವುದೇ ತಪ್ಪು ಮಾಡಲು ಸಾಧ್ಯವಿಲ್ಲದ ಸೂತ್ರವಿರುವುದಿಲ್ಲ. ತಲ್ಲಣಗೊಳಿಸುವ ಅನೇಕ ಗಳಿಗೆಗಳು ಇರುವವು. ಮುಂಚೆ ಉಲ್ಲೇಖಿಸಲಾದ ಕಳವಳಗೊಂಡ ತಂದೆಯು ಹೇಳಿದ್ದು: “ಹೆತ್ತವರೋಪಾದಿ, ಯೆಹೋವನ ದೃಶ್ಯ ಸಂಸ್ಥೆಯ ಸೂಚನೆಗಳನ್ನು ಅನುಕರಿಸಲು ಯಾವಾಗಲೂ ನಾವು ಯಥಾರ್ಥವಾಗಿ ಪ್ರಯತ್ನಿಸಿದೆವು. ಸಮಸ್ಯೆಗಳನ್ನು ಜಯಿಸುವುದರಲ್ಲಿ ಇದೊಂದು ಮಹಾ ಸಹಾಯವಾಗಿತ್ತು.” ಅವರ ಪ್ರಯತ್ನಗಳು ಯಶಸ್ವಿಯಾಗಿದ್ದವು.
ಹೌದು, ಬೈಬಲ್ ಮಾರ್ಗದರ್ಶನಗಳನ್ನು ಅನುಕರಿಸುವುದರಲ್ಲಿ ನಿಮ್ಮ ಅತ್ಯುತ್ತಮವಾದದ್ದನ್ನು ಮಾಡುವ ಮೂಲಕ, ನಿಮ್ಮ ನಂಬಿಗಸ್ತ ಮಾದರಿ ಮತ್ತು ಸಹಾಯ ಮಾಡಲಿಕ್ಕಾಗಿರುವ ಯಥಾರ್ಥವಾದ ಪ್ರಯತ್ನಗಳ ಮೂಲಕ ಬೆಂಬಲಿಸಲ್ಪಡುವ, ಯೆಹೋವನನ್ನು ಪ್ರೀತಿಸಲಿಕ್ಕಾಗಿರುವ ಸಕಾರಣಗಳನ್ನು ನಿಮ್ಮ ಮಕ್ಕಳಿಗೆ ಕೊಡುವ ಮೂಲಕ, ನಿಮ್ಮ ಪ್ರಯತ್ನಗಳು ಕೂಡ ಕಟ್ಟಕಡೆಗೆ ಯಶಸ್ಸಿನಿಂದ ಬಹುಮಾನಿಸಲ್ಪಡುವುದನ್ನು ನೀವು ಕಾಣಬಹುದು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗದಿರಲು ಒಮ್ಮೆ ನಿರ್ಧರಿಸಿದ್ದ, ಆ ಮುಂಚೆ ಉಲ್ಲೇಖಿಸಲಾದ ಹುಡುಗನನ್ನು ಜ್ಞಾಪಿಸಿಕೊಳ್ಳಬಲ್ಲಿರೊ? ಒಳ್ಳೇದು, ತನ್ನ ಕಷ್ಟಕರ ವರ್ಷಗಳಿಂದ ಹೊರಬರಲು ಅವನಿಗೆ ಅವನ ತಾಯಿ ಯಶಸ್ವಿಯಾಗಿ ಸಹಾಯ ಮಾಡಿದ ಅನಂತರ, ಅವನಂದದ್ದು: “ಆಕೆ ಎಂದೂ ಪ್ರಯತ್ನವನ್ನು ಬಿಟ್ಟುಬಿಡಲಿಲ್ಲ ಎಂಬುದಕ್ಕೆ ನಾನು ಹರ್ಷಿತನಾಗಿದ್ದೇನೆ!” ನಿಮ್ಮ ಮಕ್ಕಳೊಂದಿಗೆ ನಿಮಗೆ ತದ್ರೀತಿಯ ಪರಿಣಾಮವಿರಬಹುದು.—ಗಲಾತ್ಯ 6:9.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯಾ ಇವರಿಂದ ಪ್ರಕಾಶಿಸಲ್ಪಟ್ಟದ್ದು.
b ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕರು ಪಯನೀಯರರೆಂದು ಕರೆಯಲ್ಪಡುತ್ತಾರೆ. ಒಬ್ಬ ಆಕ್ಸಿಲಿಯರಿ ಪಯನೀಯರನು, ಪ್ರತಿ ತಿಂಗಳು ಶುಶ್ರೂಷೆಯಲ್ಲಿ ಕಡಿಮೆ ಪಕ್ಷ 60 ತಾಸುಗಳನ್ನು, ಒಬ್ಬ ಕ್ರಮದ ಪಯನೀಯರನು 90 ತಾಸುಗಳನ್ನು, ಮತ್ತು ಒಬ್ಬ ವಿಶೇಷ ಪಯನೀಯರನು 140 ತಾಸುಗಳನ್ನು ವ್ಯಯಿಸುತ್ತಾನೆ.
[ಪುಟ 30 ರಲ್ಲಿರುವ ಚಿತ್ರ]
ಮಗು ಪೋಷಣೆಯನ್ನು ನೀವು ಸಂತೋಷದ ಸ್ಮರಣೆಗಳೊಂದಿಗೆ ಹಿಂದಿರುಗಿ ನೋಡಬಲ್ಲಿರೊ?