ಹೆತ್ತವರೇ, ನಿಮ್ಮ ಮಕ್ಕಳಿಗೆ ವಿಶಿಷ್ಟೇಕರಿಸಿದ ಗಮನವು ಅವಶ್ಯ
“ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕೂತುಕೊಳ್ಳುವ ನಿನ್ನ ಮಕ್ಕಳು ಎಣ್ಣೇಮರದ ಸಸಿಗಳಂತಿರುವರು.”—ಕೀರ್ತನೆ 128:3.
1. ಗಿಡಗಳನ್ನು ಬೆಳೆಸುವುದು ಮತ್ತು ಮಕ್ಕಳನ್ನು ಬೆಳೆಸುವುದು—ಇವುಗಳನ್ನು ಹೇಗೆ ಹೋಲಿಸಬಹುದು?
ಅನೇಕ ವಿಧಗಳಲ್ಲಿ, ಮಕ್ಕಳು ಗಿಡಗಳಂತೆ ಬೆಳೆದು ವಿಕಾಸಗೊಳ್ಳುತ್ತಾರೆ. ಆದುದರಿಂದ ಬೈಬಲು ಒಬ್ಬ ಪುರುಷನ ಪತ್ನಿಯನ್ನು “ಫಲಭರಿತವಾದ ದ್ರಾಕ್ಷಾಲತೆ” ಎಂದು ಹೇಳಿ, ಅವನ ಮಕ್ಕಳನ್ನು, “[ಅವನ] ಊಟದ ಮಣೆಯ ಸುತ್ತಲೂ . . . ಎಣ್ಣೇಮರದ ಸಸಿ” ಗಳಿಗೆ ಹೋಲಿಸುವುದು ಆಶ್ಚರ್ಯವಲ್ಲ. (ಕೀರ್ತನೆ 128:3) ಚಿಕ್ಕ ಸಸಿಗಳನ್ನು, ವಿಶೇಷವಾಗಿ ಹವಾಮಾನ ಮತ್ತು ಮಣ್ಣಿನ ಗುಣ ಪ್ರತಿಕೂಲವಾಗಿರುವಾಗ, ಬೆಳೆಸುವುದು ಸುಲಭವಲ್ಲವೆಂದು ಒಬ್ಬ ರೈತನು ನಿಮಗೆ ಹೇಳುವನು. ತದ್ರೀತಿ, ಈ ಕಠಿನವಾದ “ಕಡೇ ದಿವಸಗಳಲ್ಲಿ,” ಮಕ್ಕಳನ್ನು ಸರಿಯಾಗಿ ಹೊಂದಿಸಿಕೊಳ್ಳುವ, ದೇವಭಯವುಳ್ಳ ವಯಸ್ಕರಾಗುವಂತೆ ಬೆಳೆಸುವುದು ಅತಿ ಕಷ್ಟಕರ.—2 ತಿಮೊಥೆಯ 3:1-5.
2. ಒಂದು ಉತ್ತಮ ಸುಗ್ಗಿಯನ್ನು ಉತ್ಪಾದಿಸಲು ಸಾಧಾರಣ ಏನು ಅಗತ್ಯ?
2 ಒಂದು ಉತ್ತಮ ಬೆಳೆಯನ್ನು ಕೊಯ್ಯಬೇಕಾದರೆ, ರೈತನಿಗೆ ಫಲವತ್ತಾದ ಮಣ್ಣು, ಸುಖೋಷ್ಣವಿರುವ ಬಿಸಿಲು, ಮತ್ತು ನೀರು ಅಗತ್ಯ. ವ್ಯವಸಾಯ ಮಾಡಿ ಕಳೆಯನ್ನು ಕೀಳುವುದಲ್ಲದೆ, ಅವನು ಕೀಟ ನಿಯಂತ್ರಣವನ್ನೂ ಬೇರೆ ವಿಧದ ರಕ್ಷಣಾತ್ಮಕ ಕಾಳಜಿಯನ್ನೂ ಒದಗಿಸಬೇಕು. ಹೀಗೆ ಸಾಗುವಾಗ ಕೊಯ್ಲಿನ ತನಕವೂ ಕಷ್ಟಕಾಲಗಳು ಬರಬಹುದು. ಬೆಳೆಯು ಕೆಟ್ಟದ್ದಾಗಿ ಪರಿಣಮಿಸುವುದು ಎಷ್ಟು ದುಃಖಕರ! ಆದರೂ, ತೀರ ಕಷ್ಟದ ಕೆಲಸವನ್ನು ಮಾಡಿ, ಉತ್ತಮ ಬೆಳೆಯು ಕೊಯ್ಯಲ್ಪಡುವಾಗ ಆ ಬೇಸಾಯಗಾರನು ಅದೆಷ್ಟು ತೃಪ್ತನಾಗಿರಬಲ್ಲನು!—ಯೆಶಾಯ 60:20-22; 61:3.
3. ಪ್ರಮುಖತೆಯಲ್ಲಿ ಗಿಡಗಳೂ ಮಕ್ಕಳೂ ಹೇಗೆ ಹೋಲುತ್ತಾರೆ, ಮತ್ತು ಮಕ್ಕಳು ಯಾವ ರೀತಿಯ ಗಮನವನ್ನು ಪಡೆಯಬೇಕು?
3 ಒಂದು ಯಶಸ್ವಿಯಾದ, ಉತ್ಪನ್ನಕಾರಕ ಮಾನವ ಜೀವವು ಒಬ್ಬ ರೈತನ ಸುಗ್ಗಿಗಿಂತ ಹೆಚ್ಚು ಅಮೂಲ್ಯವೆಂಬುದು ನಿಶ್ಚಯ. ಆದುದರಿಂದ, ಒಂದು ಮಗುವನ್ನು ಯಶಸ್ವಿಯಾಗಿ ಬೆಳೆಸುವುದು, ಒಂದು ಧಾರಾಳ ಬೆಳೆಯನ್ನು ಬೆಳೆಸುವುದಕ್ಕೆ ತೆಗೆದುಕೊಳ್ಳುವುದಕ್ಕಿಂತಲೂ ಹೆಚ್ಚು ಸಮಯ ಮತ್ತು ಪ್ರಯತ್ನವನ್ನು ತೆಗೆದುಕೊಳ್ಳಸಾಧ್ಯವಿರುವುದರಲ್ಲಿ ಆಶ್ಚರ್ಯವಿಲ್ಲ. (ಧರ್ಮೋಪದೇಶಕಾಂಡ 11:18-21) ಜೀವನದ ತೋಟದಲ್ಲಿ ನೆಡಲ್ಪಟ್ಟ ಒಂದು ಚಿಕ್ಕ ಮಗುವಿಗೆ ಪ್ರೀತಿಯಿಂದ ನೀರು ಹೊಯಿದು ಪೋಷಿಸಿ, ಆರೋಗ್ಯಕರವಾದ ಮೇರೆಗಳನ್ನು ಕೊಡುವಲ್ಲಿ, ಅದು ವ್ಯಾಧಿ ಹಿಡಿದು ಕೆಟ್ಟಿರುವ ನೈತಿಕ ಮೌಲ್ಯಗಳು ತುಂಬಿದ ಜಗತ್ತಿನಲ್ಲಿಯೂ ಆತ್ಮಿಕವಾಗಿ ಬೆಳೆದು ಅರಳಬಲ್ಲದು. ಆದರೆ ಮಗುವನ್ನು ಕೆಟ್ಟ ರೀತಿಯಲ್ಲಿ ನೋಡಿಕೊಂಡರೆ ಯಾ ಅದು ಪೀಡಿಸಲ್ಪಟ್ಟರೆ, ಅದು ಒಳಗಿಂದ ಬಾಡಿಹೋಗಿ, ಆತ್ಮಿಕವಾಗಿ ಸಾಯುವ ಸಾಧ್ಯತೆಯಿದೆ. (ಕೊಲೊಸ್ಸೆ 3:21; ಹೋಲಿಸಿ ಯೆರೆಮೀಯ 2:21; 12:2) ಹೌದು, ಎಲ್ಲ ಮಕ್ಕಳಿಗೂ ವಿಶಿಷ್ಟೀಕರಿಸಿದ ಗಮನವು ಅಗತ್ಯ!
ಶೈಶವದಿಂದ ದೈನಿಕ ಗಮನ
4. ಮಕ್ಕಳಿಗೆ ‘ಶೈಶವದಿಂದ’ ಯಾವ ರೀತಿಯ ಗಮನ ಅವಶ್ಯ?
4 ನವಜನಿತನೊಬ್ಬನಿಗೆ ಹೆತ್ತವರು ಬಹುಮಟ್ಟಿಗೆ ಸಂತತವಾದ ಗಮನವನ್ನು ಕೊಡಬೇಕಾಗುತ್ತದೆ. ಆದರೂ, ಮಗುವಿಗೆ ದೈನಿಕವಾಗಿ ಬೇಕಾಗುವುದು ಶಾರೀರಿಕ ಮತ್ತು ಐಹಿಕ ಗಮನ ಮಾತ್ರವೊ? ದೇವರ ಸೇವಕನಾಗಿದ್ದ ತಿಮೊಥೆಯನಿಗೆ ಅಪೊಸ್ತಲ ಪೌಲನು ಬರೆದುದು: “ಚಿಕ್ಕಂದಿನಿಂದಲೂ [ಶೈಶವ, NW] ನಿನಗೆ ಪರಿಶುದ್ಧಗ್ರಂಥಗಳ ಪರಿಚಯವಾಯಿತಲ್ಲಾ. ಆ ಗ್ರಂಥಗಳು . . . ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕವ್ತಾಗಿವೆ.” (2 ತಿಮೊಥೆಯ 3:15) ಹೀಗೆ, ತಿಮೊಥೆಯನು ಹೆತ್ತವರಿಂದ ಶೈಶವದಿಂದಲೂ ಪಡೆದ ಗಮನವು ಆತ್ಮಿಕ ರೀತಿಯದ್ದೂ ಆಗಿತ್ತು. ಆದರೆ ಶೈಶವ ಯಾವಾಗ ಆರಂಭವಾಗುತ್ತದೆ?
5, 6. (ಎ) ಅಜನಿತರ ಕುರಿತು ಬೈಬಲು ಏನನ್ನುತ್ತದೆ? (ಬಿ) ಅಜನಿತ ಮಗುವಿನ ಕ್ಷೇಮದ ಕುರಿತು ಹೆತ್ತವರು ಚಿಂತಿತರಾಗಬೇಕೆಂದು ಯಾವುದು ಸೂಚಿಸುತ್ತದೆ?
5 ಪೌಲನು ಇಲ್ಲಿ ಉಪಯೋಗಿಸಿದ (ಬ್ರಿಫಾಸ್) ಎಂಬ ಗ್ರೀಕ್ ಪದವನ್ನು ಜನಿಸದ ಒಂದು ಮಗುವಿಗೂ ಉಪಯೋಗಿಸಲಾಗುತ್ತದೆ. ಸ್ನಾನಿಕ ಯೋಹಾನನ ತಾಯಿ, ಆಕೆಯ ಸಂಬಂಧಿಯಾದ ಮರಿಯಳಿಗೆ ಹೇಳಿದ್ದು: “ಇಗೋ, ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು [ಬ್ರಿಫಾಸ್] ನನ್ನ ಗರ್ಭದಲ್ಲಿ ಉಲ್ಲಾಸದಿಂದ ಹಾರಾಡಿತು.” (ಲೂಕ 1:44) ಹೀಗೆ ಅಜನಿತರನ್ನೂ ಶಿಶುಗಳೆಂದು ಕರೆಯಲಾಗುತ್ತದೆ, ಮತ್ತು ಅವು ಗರ್ಭದ ಹೊರಗಿನ ಚಟುವಟಿಕೆಗೆ ಪ್ರತಿವರ್ತನೆ ತೋರಿಸಬಲ್ಲವೆಂದು ಬೈಬಲು ತೋರಿಸುತ್ತದೆ. ಹಾಗಾದರೆ ಇಂದು ಯಾವುದನ್ನು ಅನೇಕ ವೇಳೆ ಪ್ರೋತ್ಸಾಹಿಸಲಾಗುತ್ತಿದೆಯೋ ಅಂತಹ ಜನನ ಪೂರ್ವದ ಪೋಷಣೆಯು ಅಜನಿತ ಶಿಶುವಿನ ಆತ್ಮಿಕ ಕ್ಷೇಮಕ್ಕೆ ಕೊಡುವ ಗಮನವನ್ನು ಒಳಗೊಳ್ಳಬೇಕೊ?
6 ಅಜನಿತ ಶಿಶುಗಳು ತಾವು ಆಲಿಸುವ ವಿಷಯಗಳಿಂದ ಒಂದೇ ಪ್ರಯೋಜನ ಪಡೆಯಬಲ್ಲವು ಇಲ್ಲವೆ ಪ್ರತಿಕೂಲವಾಗಿ ಪ್ರಭಾವಿಸಲ್ಪಡಬಲ್ಲವೆಂದು ರುಜುವಾತು ತೋರಿಸುವುದರಿಂದ, ಇದು ಪರಿಗಣಿಸತಕ್ಕ ಸಂಗತಿಯಾಗಿದೆ. ತಾನು ಪೂರ್ವಾಭ್ಯಾಸ ಮಾಡುತ್ತಿದ್ದ ವಿವಿಧ ಸಂಗೀತರಚನೆಗಳು, ಅದರಲ್ಲೂ ಚೆಲೋ ವಾದ್ಯಭಾಗ, ತನಗೆ ವಿಚಿತ್ರವಾಗಿ ಪರಿಚಿತವಾದವುಗಳಂತೆ ಕೇಳಿಬರುತ್ತಿದ್ದವೆಂದು ಒಬ್ಬ ಸಂಗೀತ ನಿರ್ದೇಶಕನು ಕಂಡುಹಿಡಿದನು. ಆ ಸಂಗೀತ ಕೃತಿಗಳ ಹೆಸರುಗಳನ್ನು ಅವನು ತನ್ನ ತಾಯಿಗೆ ತಿಳಿಸಲಾಗಿ, ಅವನ ಗರ್ಭವತಿಯಾಗಿದ್ದಾಗ ಅವೇ ಸಂಗೀತರಚನೆಗಳನ್ನು ಆಕೆ ಪೂರ್ವಾಭ್ಯಾಸ ಮಾಡುತ್ತಿದ್ದಳೆಂದು ಆಕೆ ತಿಳಿಸಿದಳು. ಇದೇ ರೀತಿ, ಅಜನಿತರ ತಾಯಂದಿರು ರೂಢಿಯಾಗಿ ಟಿವಿ ಸೋಪ್ ಧಾರಾವಾಹಿಗಳನ್ನು ಪ್ರೇಕ್ಷಿಸುವಾಗ, ಅವುಗಳು ನಿಷೇಧಾರ್ಥಕವಾಗಿ ಪ್ರಭಾವಿಸಲ್ಪಡಬಹುದು. ಹೀಗೆ, ಒಂದು ವೈದ್ಯಕೀಯ ಪತ್ರಿಕೆ, “ಭ್ರೂಣದ ಸೋಪ್ ದುಶ್ಚಟ”ದ ವಿಷಯ ಮಾತಾಡಿತು.
7. (ಎ)ಅನೇಕ ಹೆತ್ತವರು ತಮ್ಮ ಅಜನಿತರ ಕ್ಷೇಮಕ್ಕೆ ಹೇಗೆ ಗಮನ ಕೊಟ್ಟಿದ್ದಾರೆ? (ಬಿ) ಒಂದು ಮಗುವಿಗೆ ಯಾವ ಸಾಮರ್ಥ್ಯಗಳಿವೆ?
7 ಶಿಶುಗಳಿಗೆ ಸಕಾರಾತ್ಮಕ ಪ್ರಚೋದನೆಯ ಪ್ರಯೋಜನವನ್ನು ಗ್ರಹಿಸಿದವರಾಗುತ್ತಾ, ಅನೇಕ ಹೆತ್ತವರು ತಮ್ಮ ಮಗುವಿಗೆ, ಅದು ಹುಟ್ಟುವ ಮೊದಲೇ ಓದಲು, ಮಾತಾಡಲು ಮತ್ತು ಹಾಡಲು ಆರಂಭಿಸುತ್ತಾರೆ. ನೀವೂ ಅದನ್ನು ಮಾಡಬಲ್ಲಿರಿ. ನಿಮ್ಮ ಶಿಶು ಮಾತುಗಳನ್ನು ತಿಳಿಯದೆ ಇರಬಹುದಾದರೂ ನಿಮ್ಮ ಸಂತೈಸುವ ಧ್ವನಿ ಮತ್ತು ಅದರ ಪ್ರೀತಿಯ ಸ್ವರದಿಂದ ಪ್ರಾಯಶಃ ಪ್ರಯೋಜನ ಪಡೆಯಬಹುದು. ಹುಟ್ಟಿದ ಮೇಲೆ, ಮಗು ನಿಮ್ಮ ಮಾತುಗಳನ್ನು, ಪ್ರಾಯಶಃ ನೀವು ಯೋಚಿಸುವುದಕ್ಕಿಂತ ಬೇಗನೆ ಗ್ರಹಿಸಲಾರಂಭಿಸುವುದು. ಎರಡು ಅಥವಾ ಮೂರು ವರ್ಷಗಳಲ್ಲಿಯೇ, ಒಂದು ಮಗು ಕೇವಲ ಒಂದು ಜಟಿಲ ಭಾಷೆಗೆ ಒಡ್ಡಲ್ಪಡುವುದರಿಂದ ಅದನ್ನು ಕಲಿಯುತ್ತದೆ. ಬೈಬಲ್ ಸತ್ಯದ “ಶುದ್ಧ ಭಾಷೆ” ಯನ್ನು ಒಂದು ಮಗು ಸಹ ಕಲಿಯಲಾರಂಭಿಸಬಲ್ಲದು.—ಚೆಫನ್ಯ 3:9, NW.
8. (ಎ) ತಿಮೊಥೆಯನಿಗೆ ‘ಶೈಶವದಿಂದ’ ಪವಿತ್ರ ಗ್ರಂಥಗಳು ತಿಳಿದಿದ್ದವೆಂದು ಹೇಳಿದಾಗ ಬೈಬಲು ಹೇಗೆ ಅರ್ಥೈಸಿ ಹೇಳುತ್ತದೆಂಬುದು ಸ್ಪಷ್ಟ? (ಬಿ) ತಿಮೊಥೆಯನ ಸಂಬಂಧದಲ್ಲಿ ಯಾವುದು ಸತ್ಯವಾಗಿ ಪರಿಣಮಿಸಿತು?
8 ತಿಮೊಥೆಯನು ‘ಶೈಶವದಿಂದ ಪರಿಶುದ್ಧ ಗ್ರಂಥಗಳನ್ನು ತಿಳಿದಿದ್ದನು’ ಎಂದು ಪೌಲನಂದಾಗ, ಅವನು ಏನು ಅರ್ಥೈಸಿದನು? ತಿಮೊಥೆಯನು ಶೈಶವದಿಂದ—ಬಾಲ್ಯಾವಸ್ಥೆಯಿಂದ ಮಾತ್ರವಲ್ಲ—ಆತ್ಮಿಕ ತರಬೇತನ್ನು ಪಡೆದಿದ್ದನೆಂದು ಅರ್ಥೈಸಿದನೆಂಬುದು ಸ್ಪಷ್ಟ. ಇದು, ಸಾಮಾನ್ಯವಾಗಿ ನವಜನಿತ ಶಿಶುವನ್ನು ಸೂಚಿಸುವ ಗ್ರೀಕ್ ಪದವಾದ ಬ್ರಿಫಾಸ್ನ ಅರ್ಥಕ್ಕೆ ಹೊಂದಿಕೆಯಾಗಿದೆ. (ಲೂಕ 2:12, 16; ಅ. ಕೃತ್ಯಗಳು 7:19) ತಿಮೊಥೆಯನು ತನ್ನ ತಾಯಿ ಯೂನೀಕೆ ಮತ್ತು ಅಜ್ಜಿ ಲೋವಿಯಿಂದ, ಅವನ ಜ್ಞಾಪಕ ಎಷ್ಟು ಹಿಂದೆ ಹೋಗಿ ತಲಪಬಹುದಿತ್ತೋ ಅಷ್ಟರ ವರೆಗಿನಿಂದ, ಆತ್ಮಿಕ ಶಿಕ್ಷಣವನ್ನು ಪಡೆದನು. (2 ತಿಮೊಥೆಯ 1:5) ‘ಒಂದು ಎಳೆಯ ಕುಡಿಯನ್ನು ಹೇಗೆ ರೂಪಿಸಲಾಗುತ್ತದೋ ಹಾಗೆಯೇ ಮರ ಬೆಳೆಯುತ್ತದೆ,’ ಎಂಬ ಹೇಳಿಕೆ ತಿಮೊಥೆಯನಿಗೆ ನಿಶ್ಚಯವಾಗಿಯೂ ಅನ್ವಯಿಸಿತು. ‘ನಡೆಯಬೇಕಾದ ಮಾರ್ಗಕ್ಕೆ’ ತಕ್ಕಂತೆ ಅವನು ತರಬೇತು ಹೊಂದಿದ್ದನು, ಮತ್ತು, ಇದರ ಪರಿಣಾಮವಾಗಿ ಅವನೊಬ್ಬ ಉತ್ತಮ ತೆರದ ದೇವರ ಸೇವಕನಾದನು.—ಜ್ಞಾನೋಕ್ತಿ 22:6; ಫಿಲಿಪ್ಪಿ 2:19-22.
ಅಗತ್ಯವಾಗಿರುವ ವಿಶಿಷ್ಟೀಕೃತ ಪರಾಮರಿಕೆ
9. (ಎ) ಹೆತ್ತವರು ಏನು ಮಾಡುವುದನ್ನು ತಪ್ಪಿಸಬೇಕು, ಮತ್ತು ಏಕೆ? (ಬಿ) ಮಗು ವಿಕಾಸಗೊಳ್ಳುವಾಗ, ಹೆತ್ತವರು ಏನು ಮಾಡುವುದು ಅವಶ್ಯ, ಮತ್ತು ಯಾವ ಮಾದರಿಗೆ ಅವರು ಗಮನ ಕೊಡಬೇಕು?
9 ಎಲ್ಲ ಗಿಡಗಳಿಗೆ ಒಂದೇ ವೈಲಕ್ಷಣ್ಯ ಹೇಗೆ ಇರುವುದಿಲ್ಲವೋ, ಒಂದೇ ವಿಧದ ಪರಾಮರಿಕೆಗೆ ಹೇಗೆ ಎಲ್ಲವೂ ಪ್ರತಿಕ್ರಿಯೆ ತೋರಿಸುವುದಿಲ್ಲವೋ, ಹಾಗೆಯೆ ಮಕ್ಕಳು ಕೂಡ. ವಿವೇಕಿಗಳಾದ ಹೆತ್ತವರು ಈ ವ್ಯತ್ಯಾಸಗಳನ್ನು ಗೌರವಿಸಿ, ಒಂದು ಮಗುವನ್ನು ಇನ್ನೊಂದರೊಂದಿಗೆ ಹೋಲಿಸುವುದನ್ನು ತಪ್ಪಿಸುವರು. (ಗಲಾತ್ಯ 6:4 ಹೋಲಿಸಿ.) ನಿಮ್ಮ ಮಕ್ಕಳು ಹಿತಕರವಾದ ವಯಸ್ಕರಾಗಿ ಅರಳಬೇಕಾದರೆ, ಅವರ ವೈಲಕ್ಷಣ್ಯವಾದ ವ್ಯಕ್ತಿಗುಣಗಳನ್ನು ನೀವು ಗಮನಿಸಿ, ಒಳ್ಳೆಯವುಗಳನ್ನು ಬೆಳೆಸುತ್ತಾ, ಕೆಟ್ಟವುಗಳನ್ನು ಕೀಳುತ್ತಾ ಇರುವುದು ಅವಶ್ಯ. ನೀವು, ಪ್ರಾಯಶಃ ಅಪ್ರಾಮಾಣಿಕತೆ, ಪ್ರಾಪಂಚಿಕತೆ, ಯಾ ಸ್ವಾರ್ಥಪರತೆಯ ಒಂದು ಬಲಹೀನತೆಯನ್ನು, ಯಾ ಅಯೋಗ್ಯ ಪ್ರವೃತ್ತಿಯನ್ನು ಕಂಡುಹಿಡಿಯುವುದಾದರೆ ಆಗೇನು? ದಯಾಭಾವದಿಂದ, ಯೇಸು ತನ್ನ ಅಪೊಸ್ತಲರ ಬಲಹೀನತೆಗಳನ್ನು ತಿದ್ದಿದಂತೆಯೇ, ಅದನ್ನು ತಿದ್ದಿರಿ. (ಮಾರ್ಕ 9:33-37) ಪ್ರತ್ಯೇಕವಾಗಿ, ಪ್ರತಿಯೊಂದು ಮಗುವನ್ನು ನಿಯಮಿತವಾಗಿ, ಅದರ ಸಾಮರ್ಥ್ಯಗಳು ಮತ್ತು ಉತ್ತಮ ಗುಣಗಳಿಗಾಗಿ ಪ್ರಶಂಸಿಸಿರಿ.
10. ಮಕ್ಕಳಿಗೆ ವಿಶೇಷವಾಗಿ ಯಾವುದು ಅಗತ್ಯ, ಮತ್ತು ಅದನ್ನು ಹೇಗೆ ಒದಗಿಸಸಾಧ್ಯವಿದೆ?
10 ಮಕ್ಕಳಿಗೆ ವಿಶೇಷವಾಗಿ ಬೇಕಾಗಿರುವುದು ವ್ಯಕ್ತಿಪರವಾದ ಗಮನ. ಯೇಸು, ತನ್ನ ಶುಶ್ರೂಷೆಯ ಅಂತಿಮ ಕಾರ್ಯಮಗ್ನ ದಿನಗಳಲ್ಲಿಯೂ ಚಿಕ್ಕವರಿಗೆ ಇಂತಹ ವಿಶೇಷ ಗಮನವನ್ನು ಕೊಡಲು ಸಮಯವನ್ನು ತೆಗೆದುಕೊಂಡನು. (ಮಾರ್ಕ 10:13-16, 32) ಹೆತ್ತವರೇ, ಆ ಮಾದರಿಯನ್ನು ಅನುಸರಿಸಿರಿ! ನಿಮ್ಮ ಮಕ್ಕಳೊಂದಿಗಿರಲು ನಿಸ್ವಾರ್ಥಭಾವದಿಂದ ಸಮಯವನ್ನು ತೆಗೆದುಕೊಳ್ಳಿ. ಮತ್ತು ಅಪ್ಪಟ ಪ್ರೀತಿಯನ್ನು ಅವರಿಗೆ ತೋರಿಸಲು ನಾಚಿಕೆಪಡಬೇಡಿರಿ. ಯೇಸು ಮಾಡಿದಂತೆ, ಅವರನ್ನು ಅಪ್ಪಿಕೊಳ್ಳಿರಿ. ಅವರಿಗೆ ಅನುರಾಗದ, ಮಮತೆಯ ಅಪ್ಪುಗೆ ಮತ್ತು ಮುದ್ದುಗಳನ್ನು ಕೊಡಿರಿ. ಉತ್ತಮವಾಗಿ ಹೊಂದಿಕೊಂಡಿರುವ ಯುವ ವಯಸ್ಕರುಗಳ ಹೆತ್ತವರೊಂದಿಗೆ, ಅವರು ಇತರ ಹೆತ್ತವರಿಗೆ ಯಾವ ಸಲಹೆಯನ್ನು ಕೊಡಬಲ್ಲರೆಂದು ಕೇಳಿದಾಗ, ಅತಿ ಸಾಧಾರಣವಾದ ಉತ್ತರಗಳು ಹೀಗಿದ್ದವು: ‘ಹೇರಳವಾಗಿ ಪ್ರೀತಿಸಿ,’ ‘ಕೂಡಿ ಸಮಯವನ್ನು ಕಳೆಯಿರಿ,’ ‘ಪರಸ್ಪರ ಗೌರವವನ್ನು ಬೆಳೆಸಿ,’ ‘ಅವರಿಗೆ ನಿಜವಾಗಿಯೂ ಕಿವಿಗೊಡಿರಿ,’ ‘ಭಾಷಣದ ಬದಲು ಮಾರ್ಗದರ್ಶನ ನೀಡಿ,’ ಮತ್ತು ‘ವಸ್ತು ಸ್ಥಿತಿ ಜ್ಞಾನವುಳ್ಳವರಾಗಿರಿ.’
11. (ಎ) ತಮ್ಮ ಮಕ್ಕಳಿಗೆ ವಿಶಿಷ್ಟೀಕರಿಸಿದ ಗಮನವನ್ನು ಒದಗಿಸುವುದನ್ನು ಹೆತ್ತವರು ಹೇಗೆ ವೀಕ್ಷಿಸಬೇಕು? (ಬಿ) ಹೆತ್ತವರು ತಮ್ಮ ಮಕ್ಕಳೊಂದಿಗೆ ಬೆಲೆಬಾಳುವ ಸಂಸರ್ಗವನ್ನು ಯಾವಾಗ ಅನುಭವಿಸಬಹುದು?
11 ಇಂತಹ ವಿಶಿಷ್ಟೀಕರಿಸಿದ ಗಮನವನ್ನು ಒದಗಿಸುವುದು ಸಂತೋಷಕರವಾಗಿರಬಲ್ಲದು. ಒಬ್ಬ ಯಶ್ವಸೀ ತಂದೆ ಬರೆದುದು: “ನಮ್ಮ ಇಬ್ಬರು ಹುಡುಗರು ಚಿಕ್ಕವರಾಗಿದ್ದಾಗ, ಅವರನ್ನು ಮಲಗಿಸಲು ತಯಾರಿಸುವುದು, ಅವರಿಗೆ ಓದುವುದು, ಅವರನ್ನು ಮಲಗಿಸಿ ಹೊದಿಸುವುದು ಮತ್ತು ಅವರೊಂದಿಗೆ ಪ್ರಾರ್ಥಿಸುವುದು ಆನಂದಕರವಾಗಿತ್ತು.” ಇಂತಹ ಕೂಡಿ ಬರುವ ಸಮಯಗಳು, ಹೆತ್ತವರಿಗೂ ಮಗುವಿಗೂ ಪ್ರೋತ್ಸಾಹದಾಯಕವಾಗಬಲ್ಲ ಸಂಸರ್ಗಕ್ಕೆ ಸಂದರ್ಭವನ್ನು ಒದಗಿಸುತ್ತವೆ. (ರೋಮಾಪುರ 1:11, 12 ಹೋಲಿಸಿ.) ಒಬ್ಬ ದಂಪತಿಗಳು ತಮ್ಮ ಮೂರು ವಯಸ್ಸಿನ ಹುಡುಗನು “ವಾಲಿ” ಯನ್ನು ಆಶೀರ್ವದಿಸುವಂತೆ ದೇವರನ್ನು ಕೇಳಿಕೊಂಡದ್ದನ್ನು ಕೇಳಿದರು. ಮುಂದಿನ ರಾತ್ರಿಗಳಲ್ಲಿಯೂ ಅವನು “ವಾಲಿ” ಗಾಗಿ ಪ್ರಾರ್ಥಿಸಿದನು, ಮತ್ತು ಆಗ ಹಿಂಸೆಯನ್ನು ಅನುಭವಿಸುತ್ತಿದ್ದ ಮಲಾವಿಯ ಸಹೋದರರನ್ನು ಅವನು ಅರ್ಥೈಸಿದನೆಂದು ಹೆತ್ತವರು ಗ್ರಹಿಸಿದಾಗ, ಅವರು ಬಹು ಪ್ರೋತ್ಸಾಹಿತರಾದರು. ಒಬ್ಬಾಕೆ ಸ್ತ್ರೀಯು ಹೇಳಿದ್ದು: ‘ನಾನು ಕೇವಲ ನಾಲ್ಕು ವಯಸ್ಸಿನವಳಾಗಿದ್ದಾಗ, ನನ್ನ ತಾಯಿ ಶಾಸ್ತ್ರವಚನಗಳನ್ನು ಕಂಠಪಾಠ ಮಾಡಲು ಮತ್ತು ರಾಜ್ಯ ಗೀತಗಳನ್ನು ಹಾಡಲು ನನಗೆ ಸಹಾಯ ಮಾಡಿದಳು. ಇದು ಆಕೆ ಪಾತ್ರೆಗಳನ್ನು ತೊಳೆಯುತ್ತಿದ್ದಾಗ ಮತ್ತು ನಾನು ಕುರ್ಚಿಯ ಮೇಲೆ ನಿಂತು ಅವನ್ನು ಒರಸಿ ಒಣಗಿಸುತ್ತಿದ್ದಾಗ ನಡೆಯಿತು.’ ನಿಮ್ಮ ಎಳೆಯರೊಂದಿಗೆ ಬೆಲೆಬಾಳುವ ಸಂಸರ್ಗದಲ್ಲಿ ಆನಂದಿಸಬಲ್ಲ ಸಮಯಗಳನ್ನು ನೀವು ಯೋಚಿಸಬಲ್ಲಿರೊ?
12. ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ವಿವೇಕದಿಂದ ಏನನ್ನು ಒದಗಿಸುವರು, ಮತ್ತು ಯಾವ ವಿಧಾನಗಳನ್ನು ಉಪಯೋಗಿಸಸಾಧ್ಯವಿದೆ?
12 ವಿವೇಕಿಗಳಾದ ಕ್ರೈಸ್ತ ಹೆತ್ತವರು ಒಂದು ಕ್ರಮದ ಅಧ್ಯಯನ ಕಾರ್ಯಕ್ರಮಕ್ಕಾಗಿ ಏರ್ಪಡಿಸುತ್ತಾರೆ. ನೀವು ಔಪಚಾರಿಕ ಪ್ರಶ್ನೋತ್ತರ ವಿಧಾನವನ್ನು ಬಳಸಬಹುದಾದರೂ, ವಿಶೇಷವಾಗಿ ಚಿಕ್ಕ ಮಕ್ಕಳಿಗಾಗಿ ಅಧ್ಯಯನಾವಧಿಗಳನ್ನು ಹೊಂದಿಸಿಕೊಂಡು ಹಿತಕರವಾದ ಸಂಸರ್ಗಗಳಿಗೆ ನೀವು ಸಹಾಯಮಾಡಬಲ್ಲಿರೊ? ಬೈಬಲ್ ದೃಶ್ಯಗಳ ಚಿತ್ರ ಬರೆಯುವುದು, ಬೈಬಲ್ ಕಥೆಗಳನ್ನು ಹೇಳುವುದು ಅಥವಾ ತಯಾರಿಸಲು ನೀವು ಕೇಳಿಕೊಂಡಿದ್ದ ಮಗುವಿನ ವರದಿಗೆ ಕಿವಿಗೊಡುವುದು—ಇವನ್ನು ನೀವು ಅದರಲ್ಲಿ ಸೇರಿಸಬಹುದು. ಮಕ್ಕಳು ದೇವರ ವಾಕ್ಯಕ್ಕೆ ಬಯಕೆಯನ್ನು ರೂಪಿಸುವಂತೆ, ನಿಮ್ಮ ಮಕ್ಕಳಿಗೆ ದೇವರ ವಾಕ್ಯವನ್ನು ನಿಮ್ಮಿಂದಾಗುವಷ್ಟು ರುಚಿಕರವಾಗಿ ಮಾಡಿರಿ. (1 ಪೇತ್ರ 2:2, 3) ಒಬ್ಬ ತಂದೆ ಹೇಳಿದ್ದು: ‘ಮಕ್ಕಳು ಚಿಕ್ಕವರಾಗಿದ್ದಾಗ, ನಾವು ಅವರೊಂದಿಗೆ ನೆಲದಲ್ಲಿ ಹರಿದಾಡಿ, ಪ್ರಸಿದ್ಧ ಬೈಬಲ್ ವ್ಯಕ್ತಿಗಳು ಸೇರಿದ್ದ ಐತಿಹಾಸಿಕ ಘಟನೆಗಳನ್ನು ನಟಿಸುತ್ತಿದ್ದೆವು. ಮಕ್ಕಳು ಬಹಳ ಇಷ್ಟಪಟ್ಟರು.’
13. ಅಭ್ಯಾಸಾವಧಿಗಳ ಉಪಯುಕ್ತತೆ ಏನು, ಮತ್ತು ಈ ಸಮಯದಲ್ಲಿ ನೀವು ಏನನ್ನು ಪೂರ್ವಾಭ್ಯಾಸ ಮಾಡಬಹುದು?
13 ಅಭ್ಯಾಸ ಅವಧಿಗಳು ಸಹ ಬೆಲೆಬಾಳುವ ಸಂಸರ್ಗವನ್ನು ಫಲಿಸುತ್ತವೆ, ಏಕೆಂದರೆ ಅವು ವಾಸ್ತವ ಜೀವನದ ಪರಿಸ್ಥಿತಿಗಳಿಗಾಗಿ ತಯಾರಿಸಲು ಎಳೆಯರಿಗೆ ಸಹಾಯ ಮಾಡುತ್ತವೆ. ನಾಜಿ ಹಿಂಸೆಯ ಸಮಯದಲ್ಲಿ ಎಲ್ಲ 11 ಮಂದಿಯೂ ದೇವರಿಗೆ ನಂಬಿಗಸ್ತರಾಗಿದ್ದ ಕುಸರೊ ಮಕ್ಕಳಲ್ಲಿ ಒಬ್ಬಳು, ತನ್ನ ಹೆತ್ತವರ ಕುರಿತು ಹೇಳಿದ್ದು: “ನಾವು ಹೇಗೆ ವರ್ತಿಸಬೇಕು ಮತ್ತು ಬೈಬಲಿನಿಂದ ಹೇಗೆ ಪ್ರತಿವಾದವನ್ನು ಮಾಡಬೇಕೆಂದು ಅವರು ನಮಗೆ ತೋರಿಸಿದರು. [1 ಪೇತ್ರ 3:15] ಅನೇಕ ವೇಳೆ ನಾವು ಅಭ್ಯಾಸ ಅವಧಿಗಳನ್ನು, ಪ್ರಶ್ನೆಗಳನ್ನು ಕೇಳುತ್ತಾ, ಉತ್ತರಗಳನ್ನು ಕೊಡುತ್ತಾ, ನಡೆಸಿದೆವು.” ಹಾಗೆಯೇ ಏಕೆ ಮಾಡಬಾರದು? ಹೆತ್ತವರು ಮನೆಯವರಂತೆ ವರ್ತಿಸುತ್ತಾ, ಶುಶ್ರೂಷೆಗಾಗಿ ನೀಡಿಕೆಗಳನ್ನು ನಾವು ಅಭ್ಯಾಸ ಮಾಡಸಾಧ್ಯವಿದೆ. ಅಥವಾ ಅಭ್ಯಾಸ ಅವಧಿ ವಾಸ್ತವ ಜೀವನದ ಒಂದು ಶೋಧನೆಯನ್ನು ಒಳಗೊಳ್ಳಬಹುದು. (ಜ್ಞಾನೋಕ್ತಿ 1:10-15) ಒಬ್ಬ ವ್ಯಕ್ತಿಯು ವಿವರಿಸಿದ್ದು: “ಕಷ್ಟದ ಪರಿಸ್ಥಿತಿಗಾಗಿ ಪೂರ್ವಾಭ್ಯಾಸ, ಒಂದು ಮಗುವಿನ ಕೌಶಲಗಳನ್ನು ಮತ್ತು ಭರವಸೆಯನ್ನು ಕಟ್ಟಬಲ್ಲದು. ಈ ಅಭ್ಯಾಸದಲ್ಲಿ, ನಿಮ್ಮ ಮಗುವಿಗೆ ಸಿಗರೇಟು, ಮದ್ಯ ಯಾ ಅಮಲೌಷಧವನ್ನು ಕೊಡುವ ಒಬ್ಬ ಮಿತ್ರನ ಪಾತ್ರವಹಿಸುವಿಕೆಯು ಒಳಗೂಡಿರಬಹುದು.” ಇಂತಹ ಪರಿಸ್ಥಿತಿಗಳಲ್ಲಿ ನಿಮ್ಮ ಮಗು ಹೇಗೆ ಪ್ರತಿವರ್ತಿಸುವುದೆಂದು ವಿವೇಚಿಸುವಂತೆ ಈ ಅವಧಿಗಳು ನಿಮಗೆ ಸಹಾಯ ಮಾಡಬಲ್ಲವು.
14. ನಿಮ್ಮ ಮಕ್ಕಳೊಂದಿಗೆ ಪ್ರೀತಿಯ ಮತ್ತು ಸಹಾನುಭೂತಿಯ ಚರ್ಚೆಗಳು ಏಕೆ ಅಷ್ಟು ಪ್ರಾಮುಖ್ಯ?
14 ನಿಮ್ಮ ಮಗುವಿನೊಡನೆ ಸಂಸರ್ಗ ಮಾಡುವಾಗ, ಈ ಮಾತುಗಳ ಲೇಖಕನು ಸಹಾನುಭೂತಿಯ ರೀತಿಯಿಂದ ಮಾಡಿದಂತೆಯೇ, ಅವನಿಗೆ ಹಿಡಿಸುವಂತೆ ಕೇಳಿಕೊಳ್ಳಿರಿ: “ಕಂದಾ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ನಡಿಸು. ಅವು ನಿನ್ನ ದಿನಗಳನ್ನು ಹೆಚ್ಚಿಸಿ ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ ನಿನಗೆ ಸುಕ್ಷೇಮವನ್ನುಂಟು ಮಾಡುವವು.” (ಜ್ಞಾನೋಕ್ತಿ 3:1, 2) ನೀವು ಪ್ರೀತಿಯಿಂದ ನಿಮ್ಮ ಮಗನಿಗೆ, ಅವನು ಶಾಂತಿ ಮತ್ತು ದೀರ್ಘಾಯುಷ್ಯ—ವಾಸ್ತವದಲ್ಲಿ, ದೇವರ ಶಾಂತಿಭರಿತ ನೂತನ ಲೋಕದಲ್ಲಿ ನಿತ್ಯಜೀವ—ವನ್ನು ಪಡೆಯುವ ಕಾರಣದಿಂದ ವಿಧೇಯತೆಯನ್ನು ನೀವು ಕೇಳಿಕೊಳ್ಳುತ್ತೀರೆಂದು ವಿವರಿಸಿದರೆ, ಅದು ಅವನ ಹೃದಯವನ್ನು ಸ್ಪರ್ಷಿಸಲಿಕ್ಕಿಲ್ಲವೆ? ನೀವು ದೇವರ ವಾಕ್ಯದಿಂದ ತರ್ಕಿಸುವಾಗ, ನಿಮ್ಮ ಎಳೆಯವನ ವ್ಯಕ್ತಿತ್ವವನ್ನು ಲೆಕ್ಕಕ್ಕೆ ತೆಗೆದುಕೊಳ್ಳಿರಿ. ಇದನ್ನು ಪ್ರಾರ್ಥನಾಪೂರ್ವಕವಾಗಿ ಮಾಡಿರಿ, ಮತ್ತು ಆಗ ಯೆಹೋವನು ನಿಮ್ಮ ಪ್ರಯತ್ನಗಳನ್ನು ಹರಸುವನು. ಇಂತಹ ಪ್ರೀತಿಯ ಮತ್ತು ಸಹಾನುಭೂತಿಯ ಬೈಬಲಾಧಾರಿತ ಚರ್ಚೆಗಳು ಉತ್ಕೃಷ್ಟ ಪರಿಣಾಮಗಳನ್ನು ಮತ್ತು ಬಾಳಿಕೆ ಬರುವ ಪ್ರಯೋಜನಗಳನ್ನು ತರುವುದು ಸಂಭವನೀಯ.—ಜ್ಞಾನೋಕ್ತಿ 22:6.
15. ಸಮಸ್ಯೆಗಳನ್ನು ಬಗೆಹರಿಸಲು ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯ ಮಾಡಬಲ್ಲರು?
15 ಇಂಥ ಸಂಸರ್ಗವು ನಿಮ್ಮ ಯೋಜಿತ ಅಧ್ಯಯನ ಅವಧಿಯಲ್ಲಿ ನಡೆಯದಿದ್ದರೂ, ಇತರ ವಿಚಾರಗಳಿಂದಾಗಿ ಅಪಕರ್ಷಿತರಾಗಬೇಡಿ. ನಿಮ್ಮ ಮಗನು ಹೇಳುವ ವಿಚಾರಗಳಿಗೆ ಮಾತ್ರವಲ್ಲ, ಆ ಆಲೋಚನೆ ವ್ಯಕ್ತಪಡಿಸಲಾದ ವಿಧಕ್ಕೂ ಜಾಗ್ರತೆಯಿಂದ ಕಿವಿಗೊಡಿರಿ. “ನಿಮ್ಮ ಮಗನನ್ನು ನೋಡಿರಿ,” ಎಂಬುದಾಗಿ ಒಬ್ಬ ಪರಿಣತನು ಹೇಳಿದನು. “ಅವನಿಗೆ ನಿಮ್ಮ ಪೂರ್ತಿ ಗಮನವನ್ನು ಕೊಡಿ. ಕೇಳುವುದು ಮಾತ್ರವಲ್ಲ, ತಿಳಿಯುವ ಅವಶ್ಯ ನಿಮಗಿದೆ. ಈ ಹೆಚ್ಚಿನ ಪ್ರಯತ್ನವನ್ನು ಮಾಡುವ ಹೆತ್ತವರು, ಅವರ ಮಕ್ಕಳ ಜೀವಿತದಲ್ಲಿ ದೊಡ್ಡ ವ್ಯತ್ಯಾಸವನ್ನು ಮಾಡಬಲ್ಲರು.” ಮಕ್ಕಳು ಇಂದು ಶಾಲೆಗಳಲ್ಲಿಯೂ ಬೇರೆಡೆಗಳಲ್ಲಿಯೂ ಅನೇಕ ವೇಳೆ ಗುರುತರವಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೆತ್ತವರೋಪಾದಿ, ಮಗನು ಮಾತಾಡುವಂತೆ ಅವನನ್ನು ಪ್ರಶ್ನಿಸಿ, ಅವನು ದೇವರ ವೀಕ್ಷಣದಲ್ಲಿ ವಿಷಯಗಳನ್ನು ನೋಡುವಂತೆ ಸಹಾಯ ಮಾಡಿರಿ. ಸಮಸ್ಯೆಯನ್ನು ಬಗೆಹರಿಸುವ ವಿಧ ನಿಮಗೆ ನಿಶ್ಚಯವಿಲ್ಲವಾದರೆ, ಶಾಸ್ತ್ರಗ್ರಂಥದಲ್ಲಿಯೂ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸಿರುವ ಸಾಹಿತ್ಯಗಳಲ್ಲಿಯೂ ಸಂಶೋಧನೆ ಮಾಡಿರಿ. (ಮತ್ತಾಯ 24:45) ಸರ್ವ ಪ್ರಕಾರದಿಂದಲೂ, ಆ ಸಮಸ್ಯೆಯನ್ನು ಬಗೆಹರಿಸಲು ಅವಶ್ಯವಿರುವ ವಿಶಿಷ್ಟೀಕರಿಸಿದ ಗಮನವನ್ನು ನಿಮ್ಮ ಮಗನಿಗೆ ಕೊಡಿರಿ.
ಒಡನಾಟದ ಸಮಯವನ್ನು ಮಾನ್ಯ ಮಾಡಿರಿ
16, 17. (ಎ) ಇಂದು ಎಳೆಯ ಜನರಿಗೆ ವಿಶಿಷ್ಟೀಕರಿಸಿದ ಗಮನ ಮತ್ತು ಶಿಕ್ಷಣ ಏಕೆ ವಿಶೇಷವಾಗಿ ಅವಶ್ಯ? (ಬಿ) ತಮ್ಮ ಹೆತ್ತವರಿಂದ ಶಿಸ್ತಿಗೊಳಗಾದಾಗ ಮಕ್ಕಳು ಏನನ್ನು ತಿಳಿಯುವುದು ಅಗತ್ಯ?
16 ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿರುವುದರಿಂದ ಮತ್ತು ಇವು “ಕಠಿನ ಕಾಲಗಳು” ಆಗಿರುವುದರಿಂದ ಎಳೆಯ ಜನರಿಗೆ ಇಂದು ಹಿಂದೆಂದಿಗಿಂತಲೂ ಹೆಚ್ಚಾದ ವಿಶಿಷ್ಟ ಗಮನ ಅಗತ್ಯ. (2 ತಿಮೊಥೆಯ 3:1-5; ಮತ್ತಾಯ 24:3-14) “ತನ್ನನ್ನು ಹೊಂದಿದವನಿಗೆ . . . ಜೀವದಾಯಕ” ವಾಗಿರುವ ನಿಜ ವಿವೇಕವು ಒದಗಿಸುವ ಸಂರಕ್ಷಣೆ ಹೆತ್ತವರಿಗೂ ಮಕ್ಕಳಿಗೂ ಒಂದೇ ಸಮನಾಗಿ ಬೇಕಾಗಿದೆ. (ಪ್ರಸಂಗಿ 7:12) ದಿವ್ಯ ವಿವೇಕದಲ್ಲಿ ಬೈಬಲಾಧಾರಿತ ಜ್ಞಾನದ ಯೋಗ್ಯ ಅನ್ವಯವು ಸೇರಿರುವುದರಿಂದ, ದೇವರ ವಾಕ್ಯದಿಂದ ಕ್ರಮದ ಶಿಕ್ಷಣವು ಮಕ್ಕಳಿಗೆ ಅವಶ್ಯ. ಆದುದರಿಂದ, ನಿಮ್ಮ ಎಳೆಯರೊಂದಿಗೆ ಶಾಸ್ತ್ರಗ್ರಂಥವನ್ನು ಅಭ್ಯಸಿಸಿರಿ. ಅವರಿಗೆ ಯೆಹೋವನ ಕುರಿತು ಹೇಳಿರಿ, ಆತನ ಆವಶ್ಯಕತೆಗಳನ್ನು ಜಾಗರೂಕತೆಯಿಂದ ವಿವರಿಸಿ, ಆತನ ಮಹಾ ವಾಗ್ದಾನಗಳ ನೆರವೇರಿಕೆಗೆ ಆನಂದಕರವಾದ ನಿರೀಕ್ಷೆಯನ್ನು ಅವರಲ್ಲಿ ಉಂಟುಮಾಡಿರಿ. ಇಂತಹ ವಿಷಯಗಳ ಕುರಿತು ಮನೆಯಲ್ಲಿ, ಪಕ್ಕದಲ್ಲಿರುವ ಮಕ್ಕಳೊಂದಿಗೆ ನಡೆದಾಡುವಾಗ—ಹೌದು, ಪ್ರತಿಯೊಂದು ಉಚಿತ ಸಂದರ್ಭದಲ್ಲಿಯೂ ಮಾತಾಡಿರಿ.—ಧರ್ಮೋಪದೇಶಕಾಂಡ 6:4-7.
17 ಸಮನಾದ ಪರಿಸ್ಥಿತಿಗಳಡಿಯಲ್ಲಿ ಎಲ್ಲ ಸಸಿಗಳೂ ಹಸನಾಗಿ ಬೆಳೆಯುವುದಿಲ್ಲವೆಂಬುದು ರೈತರಿಗೆ ಗೊತ್ತು. ಸಸಿಗಳಿಗೆ ವಿಶಿಷ್ಟೀಕರಿಸಿದ ಪರಾಮರಿಕೆ ಅಗತ್ಯ. ತದ್ರೀತಿ, ಪ್ರತಿಯೊಂದು ಮಗು ವಿಭಿನ್ನವಾಗಿದ್ದು, ಅದಕ್ಕೆ ವಿಶಿಷ್ಟೀಕರಿಸಿದ ಗಮನ, ಶಿಕ್ಷಣ ಮತ್ತು ಶಿಸ್ತು ಅಗತ್ಯ. ಉದಾಹರಣೆಗೆ, ಒಬ್ಬ ಹುಡುಗನ ತಪ್ಪು ಮಾರ್ಗವನ್ನು ನಿಲ್ಲಿಸಲು ಒಬ್ಬ ಹೆತ್ತವರ ಅಸಮ್ಮತಿಯ ನೋಟವಷ್ಟೇ ಸಾಕಾಗುವಲ್ಲಿ, ಇನ್ನೊಂದು ಮಗುವಿಗೆ ಹೆಚ್ಚು ಬಲವಾದ ಶಿಸ್ತಿನ ಅಗತ್ಯವಿದ್ದೀತು. ಆದರೆ, ಕೆಲವು ನಿರ್ದಿಷ್ಟ ಮಾತುಗಳಿಂದ ಮತ್ತು ವರ್ತನೆಗಳಿಂದ ನೀವೇಕೆ ಅಸಂತೊಷಪಟ್ಟಿದ್ದೀರೆಂದು ನಿಮ್ಮ ಎಲ್ಲ ಮಕ್ಕಳೂ ತಿಳಿಯುವುದು ಅಗತ್ಯ, ಮತ್ತು ಈ ಶಿಸ್ತು ಸುಸಂಗತವಾಗಿರುವಂತೆ ಇಬ್ಬರು ಹೆತ್ತವರೂ ಸಹಕರಿಸಬೇಕು. (ಎಫೆಸ 6:4) ಕ್ರೈಸ್ತ ಹೆತ್ತವರು ಶಾಸ್ತ್ರದೊಂದಿಗೆ ಸಾಮರಸ್ಯವಿರುವ ಸ್ಪಷ್ಟವಾಗಿದ ಮಾರ್ಗದರ್ಶನೆ ನೀಡುವುದು ವಿಶೇಷವಾಗಿ ಪ್ರಾಮುಖ್ಯ.
18, 19. ಕ್ರೈಸ್ತ ಹೆತ್ತವರಿಗೆ ತಮ್ಮ ಮಕ್ಕಳ ಕಡೆಗೆ ಯಾವ ಜವಾಬ್ದಾರಿಯಿದೆ?
18 ಒಬ್ಬ ರೈತನು ನೆಡುವ ಮತ್ತು ವ್ಯವಸಾಯ ಮಾಡುವ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡಬೇಕು. ಅವನು ತಡಮಾಡುವುದಾದರೆ ಯಾ ಬೆಳೆಯನ್ನು ಅಸಡ್ಡೆ ಮಾಡುವುದಾದರೆ, ಅವನು ಕೊಂಚವನ್ನು ಯಾ ಶೂನ್ಯವನ್ನು ಕೊಯ್ಯುವನು. ನಿಮ್ಮ ಚಿಕ್ಕ ಮಕ್ಕಳು, ಈಗಲೇ,—ಮುಂದಿನ ತಿಂಗಳು ಅಥವಾ ಮುಂದಿನ ವರ್ಷವಲ್ಲ—ವಿಶಿಷ್ಟೀಕರಿಸಿದ ಗಮನ ಬೇಕಾಗುವ, ಬೆಳೆಯುವ “ಗಿಡಗಳು.” ದೇವರ ವಾಕ್ಯಕ್ಕೆ ಹೊಂದಿಕೆಯಾಗಿ, ಅವರ ಆತ್ಮಿಕ ಬೆಳವಣಿಗೆಯನ್ನು ಪ್ರವರ್ತಿಸಲು ಮತ್ತು ಅವರು ಆತ್ಮಿಕವಾಗಿ ಬಾಡಿಹೋಗಿ ಸಾಯುವಂತೆ ಮಾಡುವ ಲೌಕಿಕ ಯೋಚನೆಗಳನ್ನು ಕೀಳಲು ಇರುವ ಅಮೂಲ್ಯವಾದ ಸಂದರ್ಭಗಳನ್ನು ಕಳೆದುಕೊಳ್ಳಬೇಡಿರಿ. ನಿಮ್ಮ ಮಕ್ಕಳೊಂದಿಗೆ ಕಳೆಯಲು ನಿಮಗೆ ದೊರೆಯುವ ತಾಸುಗಳು ಮತ್ತು ದಿನಗಳ ಸುಯೋಗವನ್ನು ಮಾನ್ಯಮಾಡಿರಿ. ಏಕೆಂದರೆ ಈ ಸಮಯಗಳು ಬೇಗನೆ ದಾಟಿಹೋಗುತ್ತವೆ. ಯೆಹೋವನ ನಂಬಿಗಸ್ತ ಸೇವಕರಾಗಿ ಸಂತುಷ್ಟ ಜೀವನಕ್ಕೆ ಬೇಕಾಗುವ ದಿವ್ಯ ಗುಣಗಳನ್ನು ಬೆಳೆಸಲು ಕಠಿನವಾಗಿ ಕೆಲಸ ಮಾಡಿರಿ. (ಗಲಾತ್ಯ 5:22, 23; ಕೊಲೊಸ್ಸೆ 3:12-14) ಇದು ಯಾವನೋ ಇನ್ನೊಬ್ಬನ ಕೆಲಸವಲ್ಲ; ಇದು ನಿಮ್ಮ ಕೆಲಸ ಮತ್ತು ಇದನ್ನು ಮಾಡುವಂತೆ ದೇವರು ನಿಮಗೆ ಸಹಾಯ ಮಾಡಬಲ್ಲನು.
19 ನಿಮ್ಮ ಮಕ್ಕಳಿಗೆ ಒಂದು ಶ್ರೀಮಂತಿಕೆಯ ಆತ್ಮಿಕ ಪರಂಪರೆಯನ್ನು ಕೊಡಿರಿ. ಅವರೊಂದಿಗೆ ದೇವರ ವಾಕ್ಯವನ್ನು ಅಭ್ಯಸಿಸಿ, ಆರೋಗ್ಯಕರವಾದ ವಿನೋದವನ್ನು ಕೂಡಿ ಅನುಭವಿಸಿರಿ. ನಿಮ್ಮ ಚಿಕ್ಕವರನ್ನು ಕ್ರೈಸ್ತ ಕೂಟಗಳಿಗೆ ತೆಗೆದುಕೊಂಡು ಹೋಗಿ, ರಾಜ್ಯ ಸಾರುವ ಕೆಲಸದಲ್ಲಿ ಅವರನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ನಿಮ್ಮ ಪ್ರಿಯ ಮಕ್ಕಳೊಳಗೆ ಯೆಹೋವನ ಮೆಚ್ಚಿಕೆಯನ್ನು ಅನುಭವಿಸುವ ರೀತಿಯ ವ್ಯಕ್ತಿತ್ವವನ್ನು ಕಟ್ಟಿರಿ. ಮತ್ತು ಅವರು ನಿಮಗೆ ಮುಂದಣ ಜೀವನದಲ್ಲಿ ಮಹಾ ಸಂತೋಷವನ್ನು ತರುವುದು ಹೆಚ್ಚು ಸಂಭವನೀಯ. ವಾಸ್ತವವಾಗಿ, “ಧರ್ಮಿಯ ತಂದೆಯು ಅತಿ ಸಂತೋಷಪಡುವನು; ಜ್ಞಾನಿಯನ್ನು ಹೆತ್ತವನು ಅವನಲ್ಲಿ ಆನಂದಿಸುವನು. ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ, ನಿನ್ನನ್ನು ಹೆತ್ತವಳು ಆನಂದಪಡಲಿ.”—ಜ್ಞಾನೋಕ್ತಿ 23:24, 25.
ಒಂದು ಸಮೃದ್ಧ ಪ್ರತಿಫಲ
20. ಹದಿಹರೆಯದವರ ಯಶಸ್ವಿಯಾದ ಹೆತ್ತವರಾಗಿರುವುದಕ್ಕೆ ಕೀಲಿ ಕೈ ಯಾವುದು?
20 ಮಕ್ಕಳನ್ನು ಬೆಳೆಸುವುದು ಒಂದು ಜಟಿಲವಾದ, ದೀರ್ಘಾವಧಿಯ ನೇಮಕ. ‘ನಿಮ್ಮ ಮೇಜಿನ ಸುತ್ತಲೂ ಇರುವ ಎಣ್ಣೇಮರದ ಸಸಿಗಳಾದ’ ಇವರನ್ನು, ರಾಜ್ಯ ಫಲವನ್ನು ಫಲಿಸುವ ದೇವಭಯವಿರುವ ವಯಸ್ಕರಾಗುವಂತೆ ಬೆಳೆಸುವುದನ್ನು 20 ವರ್ಷಗಳ ಯೋಜನೆಯೆಂದು ಕರೆಯಲಾಗಿದೆ. (ಕೀರ್ತನೆ 128:3; ಯೋಹಾನ 15:8) ಈ ಯೋಜನೆಯು ಸಾಮಾನ್ಯವಾಗಿ, ಮಕ್ಕಳು ಹದಿಹರೆಯವನ್ನು ತಲಪುವಾಗ, ಅನೇಕ ವೇಳೆ ಅವರ ಮೇಲೆ ಒತ್ತಡವು ಹೆಚ್ಚುವಾಗ ಮತ್ತು ಹೆತ್ತವರು ತಮ್ಮ ಪ್ರಯತ್ನವನ್ನು ತೀವ್ರಗೊಳಿಸುವ ಅವಶ್ಯವೆಂದು ಕಂಡುಹಿಡಿಯುವಾಗ ಹೆಚ್ಚು ಕಠಿನವಾಗುತ್ತದೆ. ಆದರೆ ಯಶಸ್ವಿಗಿರುವ ಕೀಲಿ ಕೈ ಏಕರೀತಿಯದ್ದು—ಗಮನ ಕೊಡುತ್ತಿರುವುದು, ಅನುರಾಗ ಮತ್ತು ಗ್ರಹಿಕೆಯನ್ನು ತೋರಿಸುವುದು. ನಿಮ್ಮ ಚಿಕ್ಕವರಿಗೆ ನಿಜವಾಗಿಯೂ, ವೈಯಕ್ತಿಕ ಗಮನದ ಅವಶ್ಯವಿದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ಅವರ ಕ್ಷೇಮಕ್ಕೆ ಅಪ್ಪಟವಾದ ಪ್ರೀತಿಯ ಚಿಂತೆಯನ್ನು ತೋರಿಸುವ ಮೂಲಕ ನೀವು ಇಂತಹ ಗಮನಮ್ನ ಅವರಿಗೆ ನೀಡಬಲ್ಲಿರಿ. ಅವರಿಗೆ ಸಹಾಯ ಮಾಡಲು, ನಿಜವಾಗಿಯೂ ಬೇಕಾಗಿರುವ ಸಮಯ, ಪ್ರೀತಿ, ಮತ್ತು ಚಿಂತೆ—ಇವುಗಳನ್ನು ಒದಗಿಸುವ ಮೂಲಕ ನೀವು ನಿಮ್ಮನ್ನು ವ್ಯಯಿಸಿಕೊಳ್ಳತಕ್ಕದ್ದು.
21. ಮಕ್ಕಳಿಗೆ ವಿಶಿಷ್ಟೀಕರಿಸಿದ ಗಮನವನ್ನು ಕೊಡುವುದಕ್ಕಾಗಿ ಪ್ರತಿಫಲವು ಯಾವುದಾಗಿರಸಾಧ್ಯವಿದೆ?
21 ಯೆಹೋವನು ನಿಮಗೆ ಕೊಟ್ಟಿರುವ ಈ ಅಮೂಲ್ಯ ಫಲವನ್ನು ಪರಾಮರಿಸಲು ನಿಮ್ಮ ಪ್ರಯತ್ನಗಳಿಗಾಗಿ ದೊರೆಯುವ ಪ್ರತಿಫಲವು, ಯಾವನೇ ರೈತನ ಹೇರಳವಾದ ಸುಗ್ಗಿಗಿಂತಲೂ ಎಷ್ಟೋ ಹೆಚ್ಚು ತೃಪ್ತಿಕರವಾಗಿರಬಲ್ಲದು. (ಕೀರ್ತನೆ 127:3-5) ಆದುದರಿಂದ ಹೆತ್ತವರೇ, ನಿಮ್ಮ ಮಕ್ಕಳಿಗೆ ವಿಶಿಷ್ಟೀಕರಿಸಿದ ಗಮನವನ್ನು ಕೊಡಿರಿ. ಇದನ್ನು ಅವರ ಒಳಿತಿಗಾಗಿ ಮತ್ತು ನಮ್ಮ ಸ್ವರ್ಗೀಯ ಪಿತನಾದ ಯೆಹೋವನ ಮಹಿಮೆಗಾಗಿ ಮಾಡಿರಿ.
ನೀವು ಹೇಗೆ ಉತ್ತರಿಸುವಿರಿ?
▫ ಗಿಡಗಳನ್ನು ಮತ್ತು ಮಕ್ಕಳನ್ನು ಬೆಳೆಸುವುದನ್ನು ಹೇಗೆ ಹೋಲಿಸಬಹುದು?
▫ ಒಂದು ಮಗುವು ಶೈಶವದಿಂದ ಹಿಡಿದು ದಿನಾಲೂ ಯಾವ ರೀತಿಯ ಗಮನವನ್ನು ಪಡೆಯಬೇಕು?
▫ ಮಕ್ಕಳಿಗೆ ಯಾವ ವಿಶಿಷ್ಟೀಕರಿಸಿದ ಪರಾಮರಿಕೆ ಅಗತ್ಯ, ಮತ್ತು ಅದನ್ನು ಕೊಡುವುದು ಹೇಗೆ ಸಾಧ್ಯ?
▫ ನಿಮ್ಮ ಮಕ್ಕಳಿಗೆ ವಿಶಿಷ್ಟೀಕರಿಸಿದ ಗಮನವನ್ನು ಏಕೆ ಕೊಡಬೇಕು?