ಬಹಿಷ್ಕರಿಸುವಿಕೆ—ಒಂದು ಪ್ರೀತಿಯ ಮುನ್ನೇರ್ಪಾಡೊ?
“ದೇವರಾದ ಕರ್ತನು [ಯೆಹೋವನು, NW] ಪರಿಶುದ್ಧನು, ಪರಿಶುದ್ಧನು ಪರಿಶುದ್ಧನು; ಆತನು ಸರ್ವಶಕ್ತನು.” (ಪ್ರಕಟನೆ 4:8) ಆ ವರ್ಣನೆಗೆ ಹೊಂದಿಕೆಯಲ್ಲಿ, ಯೆಹೋವನು ಪರಿಶುದ್ಧ ಮಟ್ಟಗಳ ಮೂಲನು. ಇವು “ಪರಿಶುದ್ಧಗ್ರಂಥಗಳಲ್ಲಿ” ಬರೆಯಲ್ಪಟ್ಟಿವೆ ಮತ್ತು ಕ್ರೈಸ್ತರು ಈ ಮಾರ್ಗದರ್ಶಕಗಳನ್ನು ಪಾಲಿಸುವ ಹಂಗಿಗೆ ಒಳಗಾಗಿದ್ದಾರೆ. ನಿಶ್ಚಯವಾಗಿ, ಯೆಹೋವನ ದೃಷ್ಟಿಯಲ್ಲಿ ಅಶುದ್ಧವಾದ ಯಾವುದೆ ವಿಷಯವನ್ನು ಅವರು ವರ್ಜಿಸಿಬಿಡಬೇಕು.—2 ತಿಮೊಥೆಯ 3:15; ಯೆಶಾಯ 52:11.
ಬೈಬಲ್ ಸ್ಪಷ್ಟವಾಗಿಗಿ ಆಜ್ಞಾಪಿಸುವುದು: “ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಿಗೆ ತಕ್ಕಂತೆ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ. ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು ಎಂದು ಬರೆದದೆಯಲ್ಲಾ.” (1 ಪೇತ್ರ 1:15, 16) ಕ್ರೈಸ್ತ ಸಭೆಯು 19 ಶತಮಾನಗಳ ಹಿಂದೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ, ಅದನ್ನು ಆತ್ಮಿಕ ಮತ್ತು ನೈತಿಕ ಅಶುದ್ಧತೆಯಿಂದ ರಕ್ಷಿಸಲು ಸತ್ಕ್ರೈಸ್ತರು ಕಟು ಹೋರಾಟವನ್ನು ನಡೆಸಿದ್ದಾರೆ.—ಯೂದ 3.
ಸುರಕ್ಷೆಯ ಆವಶ್ಯಕತೆಗೆ ಕಾರಣ
ದೇವರ ಸೇವಕರಲ್ಲಿ ಎಲ್ಲರೂ ನೈತಿಕವಾಗಿ ಮತ್ತು ಆತ್ಮಿಕವಾಗಿ ಶುದ್ಧರಾಗಿರುವ ಪಂಥಾಹ್ವಾನವನ್ನು ಎದುರಿಸುತ್ತಾರೆ. ಆ ಉದ್ದೇಶ ಪೂರ್ತಿಗಾಗಿ ಮೂರು ಪ್ರಬಲ ಶತ್ರುಗಳನ್ನು—ಸೈತಾನ, ಅವನ ಲೋಕ, ಮತ್ತು ನಮ್ಮ ಪಾಪಪೂರ್ಣ ಮಾಂಸಿಕ ಪ್ರವೃತ್ತಿಗಳನ್ನು ಎದುರಿಸಲಿಕ್ಕಿದೆ. (ರೋಮಾಪುರ 5:12; 2 ಕೊರಿಂಥ 2:11; 1 ಯೋಹಾನ 5:19) ಸೈತಾನನ ಜಗತ್ತು ನಿಮ್ಮನ್ನು ಅನೈತಿಕತೆಗೆ ಸೆಳೆಯುವುದು, ಅದರ ಮಾರ್ಗಗಳನ್ನು ಅವಲಂಬಿಸುವಂತೆ ಪ್ರೇರೇಪಿಸುವುದು, ಹಾಗೂ ಪ್ರಾಪಂಚಿಕ ಧನ, ಕೀರ್ತಿ, ಸ್ಥಾನ, ಪ್ರಾಧಾನ್ಯ ಮತ್ತು ಅಧಿಕಾರವನ್ನು ನಿಮಗೆ ನೀಡುವುದು. ಆದರೆ ಯಾರು ಸತ್ಯಾರಾಧನೆಯನ್ನು ಬೆನ್ನಟಲ್ಟು ದೃಢ ನಿಶ್ಚಯ ಮಾಡುತ್ತಾರೊ ಅವರು ಸೈತಾನನು ನೀಡುವುದನ್ನು ಪ್ರತಿರೋಧಿಸುತ್ತಾರೆ ಮತ್ತು “ಪ್ರಪಂಚದ ದೋಷವು ಹತ್ತ”ದೆ ಉಳಿಯುತ್ತಾರೆ. ಯಾಕೆ? ಯಾಕಂದರೆ ಯೆಹೋವನ ಶುದ್ಧ ಸಂಸ್ಥೆಯ ಸುರಕ್ಷೆಯ ಹಾಗೂ ಪ್ರೀತಿಯುಳ್ಳ ಪರಾಮರಿಕೆಯ ಕೆಳಗೆ ಉಳಿಯಲು ಅವರು ಬಯಸುತ್ತಾರೆ.—ಯಾಕೋಬ 1:27; 1 ಯೋಹಾನ 2:15-17.
ಮಾನುಷ ಬಲಹೀನತೆಯಿಂದಾಗಿ ಸೈತಾನನ ಶೋಧನೆಗಳಿಗೆ ಬಲಿಬೀಳುವ ಕ್ರೈಸ್ತ ಸಭೆಯ ಯಾವನೆ ಸದಸ್ಯನಿಗೆ ಯೆಹೋವನು ಸಹಾಯವನ್ನು ಒದಗಿಸಿದ್ದಾನೆ. ಸಭೆಯನ್ನು ಕಾಪಾಡಲು ಮತ್ತು ತಪ್ಪು ಮಾಡಿದವರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪ ಪಡುವಂತೆಯೂ ಮತ್ತು ಗುಣಹೊಂದಲು ಬೇಕಾದ ಸರಿಹೊಂದಿಸುವಿಕೆಗಳನ್ನು ಮಾಡುವಂತೆಯೂ ಪ್ರೀತಿಪೂರ್ವಕವಾಗಿ ಸಹಾಯ ಮಾಡಲು ಆತ್ಮಿಕ ಯೋಗ್ಯತೆಯುಳ್ಳ ಹಿರಿಯರು ನೇಮಿಸಲ್ಪಟ್ಟಿದ್ದಾರೆ. ಕೆಟ್ಟತನದಲ್ಲಿ ಒಳಗೊಳ್ಳುವ ಯಾವನೆ ಕ್ರೈಸ್ತನಿಗೆ, ಪಶ್ಚಾತ್ತಾಪ ಪಡುವಂತೆ ಮತ್ತು ತನ್ನ ಮಾರ್ಗಗಳನ್ನು ಬದಲಾಯಿಸುವಂತೆ ತಾಳ್ಮೆಯಿಂದ ಸಹಾಯ ನೀಡಲ್ಪಡಬೇಕು.—ಗಲಾತ್ಯ 6:1, 2; ಯಾಕೋಬ 5:13-16.
ಬಹಿಷ್ಕರಿಸುವಿಕೆ ಪ್ರೀತಿಯುಳ್ಳದ್ದಾಗಿರುವ ವಿಧ
ಯೆಹೋವನ ಸ್ನಾನಿತ ಸೇವಕರಲ್ಲಿ ಯಾರು ಬುದ್ಧಿಪೂರ್ವಕವಾಗಿ ದುಷ್ಟಮಾರ್ಗವನ್ನು ಅನುಸರಿಸುತ್ತಾ ಮಾರ್ಪಡಲು ನಿರಾಕರಿಸುತ್ತಾರೋ, ಅವರನ್ನು ಪಶ್ಚಾತ್ತಾಪಪಡದವರಾಗಿ ಮತ್ತು ಹೀಗೆ ಕ್ರೈಸ್ತ ಸಹವಾಸಕ್ಕೆ ಅಯೋಗ್ಯರಾಗಿ ವೀಕ್ಷಿಸಬೇಕು. (ಹೋಲಿಸಿ 1 ಯೋಹಾನ 2:19.) ಅಂಥ ವ್ಯಕ್ತಿಗಳು ಶುದ್ಧವಾದ ಕ್ರೈಸ್ತ ಸಭೆಯಲ್ಲಿ ಉಳಿಯಲು ಮತ್ತು ಆ ಮೂಲಕ ಅದನ್ನು ಅಶುದ್ಧಗೊಳಿಸಲು ಅನುಮತಿಸಲ್ಪಡಲಾರರು. ಅವರನ್ನು ಹೊರಹಾಕಲೇಬೇಕು.
ದುಷ್ಕೃತ್ಯಗಳನ್ನು ನಡಿಸುವವರನ್ನು ಹೊರಹಾಕುವ ಯುಕ್ತತೆಯನ್ನು ಕೆಳಗಿನ ಸನ್ನಿವೇಶದಿಂದ ದೃಷ್ಟಾಂತಿಸಸಾಧ್ಯವಿದೆ. ವಿದ್ಯಾರ್ಥಿಗಳ ವಿರುದ್ಧ ನಡಿಸಲ್ಪಡುವ ಆಕ್ರಮಣಗಳು ಮತ್ತು ಕ್ರೂರ ಪಾತಕಗಳ ವೃದ್ಧಿಯ ಕಾರಣ, ಕೆಲವು ಶಾಲೆಗಳು, “ಆಯುಧಗಳನ್ನು ಬಳಸುವ ಯಾ ಬಳಸುವ ಬೆದರಿಕೆ ಹಾಕುವ ವಿದ್ಯಾರ್ಥಿಗಳನ್ನು ಶಾಲೆಯಿಂದ ಖಾಯಂ ಆಗಿ ಹೊರಗಟ್ಟಲು ಕೇಳಿಕೊಳ್ಳುವ” ಕಾಯಿದೆಯನ್ನು ಆಯ್ದುಕೊಂಡಿವೆ ಎಂದು ಟೊರಾಂಟೊ, ಕೆನಡದ ವಾರ್ತಾಪತ್ರಿಕೆಯಾದ ದ ಗ್ಲೋಬ್ ಆ್ಯಂಡ್ ಮೆಯ್ಲ್ ವರದಿಸುತ್ತದೆ. ಈ ಹೊರಗಟ್ಟುವಿಕೆಯು, ಹಿಂಸಾತ್ಮಕ ಕೃತ್ಯಗಳಿಗೆ ಒಳಪಡದೆ ಇದ್ದು ಶೈಕ್ಷಣಿಕ ಕಾರ್ಯಕ್ರಮದಿಂದ ಪ್ರಯೋಜನ ಹೊಂದಬಯಸುವ ವಿದ್ಯಾರ್ಥಿಗಳನ್ನು ಕಾಪಾಡುವುದಕ್ಕಾಗಿ ಮಾಡಲಾಗುತ್ತದೆ.
ಪಶ್ಚಾತ್ತಾಪಪಡದ ತಪ್ಪುಗಾರನನ್ನು ಸಭೆಯಿಂದ ಹೊರಗೆ ಹಾಕುವುದು ಪ್ರೀತಿಯುಳ್ಳದ್ದು ಏಕೆ? ಹಾಗೆ ಮಾಡುವುದು ಯೆಹೋವನಿಗಾಗಿ ಮತ್ತು ಆತನ ಮಾರ್ಗಗಳಿಗಾಗಿ ಪ್ರೀತಿಯ ಒಂದು ಅಭಿವ್ಯಕ್ತಿಯಾಗಿರುತ್ತದೆ. (ಕೀರ್ತನೆ 97:10) ಈ ಕ್ರಿಯೆಯು ನೀತಿಯ ಪಥವನ್ನು ಬೆನ್ನಟ್ಟುವವರಿಗಾಗಿ ಪ್ರೀತಿಯನ್ನು ತೋರಿಸುತ್ತದೆ ಯಾಕಂದರೆ ಅವರ ಮೇಲೆ ಕೆಟ್ಟ ಪ್ರಭಾವವನ್ನು ಹಾಕಬಹುದಾದ ಒಬ್ಬನನ್ನು ಅದು ಅವರ ಮಧ್ಯದಿಂದ ತೆಗೆದು ಹಾಕುತ್ತದೆ. ಅದು ಸಭೆಯ ಶುದ್ಧತೆಯನ್ನು ಸಹ ಕಾಪಾಡುತ್ತದೆ. (1 ಕೊರಿಂಥ 5:1-13) ಸಭೆಯಲ್ಲಿ ಘೋರ ಅನೈತಿಕತೆ ಅಥವಾ ಆತ್ಮಿಕ ಅಶುದ್ಧತೆಯು ಉಳಿಯಲು ಅನುಮತಿಸಲ್ಪಟ್ಟಲ್ಲಿ, ಅದು ಅಶುದ್ಧಗೊಳ್ಳುವುದು ಮತ್ತು ಪರಿಶುದ್ಧನಾದ ಯೆಹೋವ ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸುವುದಕ್ಕೆ ಅಯೋಗ್ಯವಾಗಿರುವುದು. ಅದಲ್ಲದೆ, ತಪ್ಪುಗಾರನ ಬಹಿಷ್ಕಾರವು ಅವನು ತನ್ನ ಕೆಟ್ಟ ಮಾರ್ಗದ ತೀವ್ರತೆಯನ್ನು ಕಾಣಲು, ಪಶ್ಚಾತ್ತಾಪಪಡಲು, ಮತ್ತು ಆವಶ್ಯಕ ಬದಲಾವಣೆಗಳನ್ನು ಮಾಡಿ ಹೀಗೆ ಸಭೆಯೊಳಗೆ ತಿರುಗಿ ಸೇರಿಸಲ್ಪಡಲು ಸಹಾಯಮಾಡಬಹುದು.
ಇತರರ ಮೇಲೆ ಪರಿಣಾಮ
ಸಭೆಯ ಒಬ್ಬ ಸದಸ್ಯನು ವ್ಯಭಿಚಾರದಂತಹ ಒಂದು ಗಂಭೀರವಾದ ಪಾಪವನ್ನು ಮಾಡುವಾಗ, ಅವನು ಯೆಹೋವನ ಹೃದಯವು ಹರ್ಷಗೊಳ್ಳುವಂತೆ ಮಾಡುವುದಿಲ್ಲ. (ಜ್ಞಾನೋಕ್ತಿ 27:11) ಲೈಂಗಿಕ ಅನೈತಿಕತೆಗೆ ಬಲಿಬೀಳುವ ಯಾವನೇ ಕ್ರೈಸ್ತನು, ಪೋಟೀಫರನ ಪತ್ನಿಯು ಯೋಸೇಫನನ್ನು ತನ್ನೊಡನೆ ಸಂಗಮಕ್ಕೆ ಕರೆದಾಗ ಅವನು ಮಾಡಿದಂತೆ ನಿಶ್ಚಯವಾಗಿ ಯೋಚಿಸುವುದಿಲ್ಲ. ಯೋಸೇಫನ ಪ್ರತಿಕ್ರಿಯೆಯು ಹೀಗಿತ್ತು: “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರ ವಿರುದ್ಧವಾಗಿ ಹೇಗೆ ಪಾಪ ಮಾಡಲಿ?” (ಆದಿಕಾಂಡ 39:6-12) ಯೋಸೇಫನು ಯೆಹೋವನ ಪರಿಶುದ್ಧ ಮಟ್ಟಗಳನ್ನು ಗೌರವಿಸಿ, ಆ ಶೋಧನೆಯ ಸನ್ನಿವೇಶವನ್ನೆ ಬಿಟ್ಟು ಓಡಿಹೋದನು. ಇನ್ನೊಂದು ಕಡೆ, ಒಬ್ಬ ವ್ಯಭಿಚಾರಿಯು ತನ್ನ ಶರೀರದಾಶೆಯನ್ನು ತೃಪ್ತಿಗೊಳಿಸುವುದರಿಂದ ತಡೆದುಕೊಳ್ಳಲು, ದೇವರೆಡೆಗೆ ಸಾಕಷ್ಟು ಪ್ರೀತಿಯಿಲ್ಲದವನಾಗಿ ಕಂಡುಬರುತ್ತಾನೆ.—ಗಲಾತ್ಯ 5:19-21.
ದೇವರ ಆಜ್ಞೆಗಳನ್ನು ಉಲ್ಲಂಘಿಸುವ ಒಬ್ಬ ಸ್ನಾನಿತ ವ್ಯಕ್ತಿಯು ತನ್ನ ವಿಶ್ವಾಸಿ ಸಂಬಂಧಿಕರಿಗೆ ತಾನು ಉಂಟುಮಾಡುವ ಮಾನಸಿಕ ಹಾನಿ ಮತ್ತು ಬೇನೆಯ ಕುರಿತು ಚಿಂತೆಯನ್ನು ತೋರಿಸುವುದಿಲ್ಲ. ಈ ಮಾನಸಿಕ ಧಕ್ಕೆಯು ಕೆಲವರಿಗೆ ಸಹಿಸಲಸಾಧ್ಯವಾದಷ್ಟು ಹೆಚ್ಚಾಗುತ್ತದೆ. ತನ್ನ ಮಗನು ಅನೈತಿಕನಾಗಿದ್ದಾನೆಂದು ಕಂಡುಹಿಡಿದ ಮೇಲೆ ಒಬ್ಬ ಕ್ರೈಸ್ತ ಸ್ತ್ರೀ ಪ್ರಲಾಪಿಸಿದ್ದು: “ನಾವೆಷ್ಟು ನೋವನ್ನು ಮತ್ತು ಭಗ್ನತೆಯನ್ನು ಅನುಭವಿಸಿದೆವೆಂಬುದನ್ನು ಬರೇ ಕೆಲವೇ ಸಹೋದರ ಮತ್ತು ಸಹೋದರಿಯರು ಅರ್ಥಮಾಡಿಕೊಳ್ಳುವಂತೆ ಕಂಡುಬಂದರು. . . . ನಾವು ಎದೆಯೊಡೆದವರಾದೆವು.” ಒಂದು ಇಡೀ ಕುಟುಂಬದ ಸತ್ಕೀರ್ತಿಯು ಸಂದೇಹಕ್ಕೆ ಒಳಗಾದೀತು. ಖಿನ್ನತೆ ಮತ್ತು ದೋಷಿಭಾವನೆಯು ನಂಬಿಗಸ್ತ ಕುಟುಂಬ ಸದಸ್ಯರನ್ನು ಬಾಧಿಸಬಹುದು. ತಪ್ಪುಗಾರನ ದುಷಮ್ಟಾರ್ಗವು ಹೀಗೆ ಕುಟುಂಬಕ್ಕೆ ಹೃದಯ ವೇದನೆಯನ್ನು ತರುತ್ತದೆ.
ಕುಟುಂಬ ಸದಸ್ಯರಿಗೆ ಪ್ರೀತಿಯುಳ್ಳ ನೆರವು
ಬಹಿಷ್ಕರಿಸುವಿಕೆಯು ಪ್ರೀತಿಪರವೂ ಸುರಕ್ಷೆಯೂ ಆಗಿದೆ ಎಂಬುದನ್ನು ಬಹಿಷ್ಕೃತ ವ್ಯಕ್ತಿಗಳ ನಂಬಿಗಸ್ತ ಕುಟುಂಬ ಸದಸ್ಯರು ಜ್ಞಾಪಕದಲ್ಲಿಡುವ ಅಗತ್ಯವಿದೆ. ತಪ್ಪುಗಾರನಿಗೆ ನೆರವಾಗಲು ಸಾಧ್ಯವಾದ ಎಲ್ಲ ಪ್ರಯತ್ನವನ್ನು ಮಾಡಲಾಗುತ್ತದೆ. ಆದರೆ ಅವನು ದೇವರಿಗೆ ಅವಿಧೇಯನಾಗುತ್ತಾ, ಹಟಮಾರಿತನದಿಂದ ಪಶ್ಚಾತ್ತಾಪವನ್ನು ತೋರಿಸದವನಾಗಿ ಕಂಡುಬಂದಲ್ಲಿ, ಸಭೆಗೆ ಕೇಡಾಗದಂತೆ ಕಾಪಾಡುವ ಅಗತ್ಯವಿದೆ ಮತ್ತು ದೇವರ ವಾಕ್ಯವು ಮಾರ್ಗದರ್ಶಿಸುವಂತೆ ಮಾಡದ ಹೊರತು ಬೇರೆ ಯಾವ ಮಾರ್ಗವೂ ಇಲ್ಲ: “ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.” (1 ಕೊರಿಂಥ 5:13) ಒಬ್ಬ ಸಾಕ್ಷಿಯು ಹೇಳಿದ ಪ್ರಕಾರ, “ಬಹಿಷ್ಕಾರವು ಯೆಹೋವನಿಗೆ ಕರ್ತವ್ಯನಿಷ್ಠೆಯ ಒಂದು ವಿಷಯವಾಗಿದೆ.”
ಕುಟುಂಬ ಸದಸ್ಯನೊಬ್ಬನು ಬಹಿಷ್ಕರಿಸಲ್ಪಡುವಾಗ, ಕ್ರೈಸ್ತ ಸಂಬಂಧಿಕರು ನೋವನ್ನು ಅನುಭವಿಸುತ್ತಾರೆ. ಆದುದರಿಂದ ಅವರಿಗೆ ಆತ್ಮಿಕವಾಗಿ ಚೈತನ್ಯವನ್ನು ಕೊಡಲು ನಿಯುಕ್ತ ಹಿರಿಯರು ತಮ್ಮಿಂದಾದಷ್ಟನ್ನು ಮಾಡಬೇಕು. (1 ಥೆಸಲೊನೀಕ 5:14) ಹಿರಿಯರು ಅವರೊಂದಿಗೆ ಮತ್ತು ಅವರಿಗಾಗಿ ಪ್ರಾರ್ಥಿಸಬಲ್ಲರು. ಬಲವರ್ಧಕವಾದ ಶಾಸ್ತ್ರೀಯ ವಿಚಾರಗಳನ್ನು ಚರ್ಚಿಸಲು ಈ ನಂಬಿಗಸ್ತ ಕ್ರೈಸ್ತರನ್ನು ಆಗಿಂದಾಗ್ಗೆ ಸಂದರ್ಶಿಸಸಾಧ್ಯವಿದೆ. ಈ ಪ್ರಿಯರನ್ನು ಆತ್ಮಿಕವಾಗಿ ಬಲಪಡಿಸಲು ಕೂಟಗಳ ಮೊದಲು ಮತ್ತು ಅನಂತರ ದೊರೆಯುವ ಪ್ರತಿಯೊಂದು ಸಂಧಿಯನ್ನು ಹಿಂಡಿನ ಕುರುಬರು ಉಪಯೋಗಿಸಬೇಕು. ಕ್ಷೇತ್ರ ಶುಶ್ರೂಷೆಗೆ ಅವರೊಂದಿಗೆ ಹೋಗುವ ಮೂಲಕ ಅಧಿಕ ಉತ್ತೇಜನವನ್ನು ಕೊಡಸಾಧ್ಯವಿದೆ. (ರೋಮಾಪುರ 1:11, 12) ಆತ್ಮಿಕ ಕುರುಬರು ಈ ನಂಬಿಗಸ್ತ ಯೆಹೋವನ ಸೇವಕರಿಗೆ ಪ್ರೀತಿ ಮತ್ತು ಗಮನವನ್ನು ತೋರಿಸುವ ಅಗತ್ಯವಿದೆ.—1 ಥೆಸಲೊನೀಕ 2:7, 8.
ಒಬ್ಬ ವ್ಯಕ್ತಿಯ ಪಾಪಪೂರ್ಣ ಮಾರ್ಗವು, ಯೆಹೋವನಿಗೆ ನಂಬಿಗಸ್ತರಾಗಿರುವ ಅವನ ಕುಟುಂಬದ ಯಾವನೆ ವ್ಯಕ್ತಿಯನ್ನು ಸಭೆಯವರು ದುರ್ಲಕ್ಷದಿಂದ ಕಾಣುವುದಕ್ಕೆ ಯಾವ ಕಾರಣವೂ ಆಗಬಾರದು. ಇಸ್ರಾಯೇಲಿನ ದುಷ್ಟ ಅರಸ ಸೌಲನು ದೇವರಿಂದ ತಿರಿಸ್ಕರಿಸಲ್ಪಟ್ಟಿದ್ದನು, ಆದರೆ ಸೌಲನ ಪುತ್ರ ಯೋನಾತಾನನಲ್ಲಿ ತನಗಿದ್ದ ಪ್ರೀತಿಗೆ ಇದು ಅಡಿಮ್ಡಾಡುವಂತೆ ದಾವೀದನು ಬಿಡಲಿಲ್ಲ. ವಾಸ್ತವದಲ್ಲಿ, ದಾವೀದ ಮತ್ತು ಯೋನಾತಾನರ ನಡುವೆ ಇದ್ದ ಪ್ರೀತಿಯ ಬಂಧವು ಅತಿಯಾಗಿ ಬಲಗೊಂಡಿತು. (1 ಸಮುವೇಲ 15:22, 23; 18:1-3; 20:41) ಹೀಗೆ ಯಾರ ಸಂಬಂಧಿಕರು ಯೆಹೋವನ ವಿರುದ್ಧ ಪಾಪಮಾಡುತ್ತಾರೊ ಆ ಕ್ರೈಸ್ತರ ಕಡೆಗೆ ಸಭೆಯ ಎಲ್ಲರು ಪ್ರೀತಿಯನ್ನೂ ಬೆಂಬಲವನ್ನೂ ತೋರಿಸಬೇಕು.
ಅಂಥ ನಂಬಿಗಸ್ತರನ್ನು ದುರ್ಲಕ್ಷಿಸುವುದು ಅಥವಾ ದಯೆತೋರಿಸದೆ ಇರುವುದು ಅದೆಷ್ಟು ಪ್ರೀತಿರಹಿತವಾಗಿರುತ್ತದೆ! ಕರ್ತವ್ಯನಿಷ್ಠ ಕುಟುಂಬ ಸದಸ್ಯರಿಗೆ ಪ್ರೋತ್ಸಾಹನೆಯ ವಿಶೇಷ ಅಗತ್ಯವು ಇದೆ. ಅವರು ಒಂಟಿಗ ಭಾವನೆಯನ್ನು ಅನುಭವಿಸಾರು ಮತ್ತು ಸನ್ನಿವೇಶವನ್ನು ತೀರ ಕಷ್ಟಕರವಾಗಿ ಕಂಡಾರು. ಪ್ರಾಯಶಃ ಒಂದು ಆತ್ಮಿಕ ಚುಟಿಕೆಯಲ್ಲಿ ಅಥವಾ ಒಂದು ಬಲವರ್ಧಕ ಅನುಭವದಲ್ಲಿ ಅವರೊಂದಿಗೆ ಟೆಲಿಫೋನಿನ ಮೂಲಕ ನೀವು ಪಾಲಿಗರಾಗಬಲ್ಲಿರಿ. ಬಹಿಷ್ಕೃತ ವ್ಯಕ್ತಿಯು ಫೋನನ್ನು ಉತ್ತರಿಸಿದರೆ, ಅವನ ಕ್ರೈಸ್ತ ಸಂಬಂಧಿಕನೊಂದಿಗೆ ಮಾತಾಡಲಿದೆ ಎಂದು ಮಾತ್ರ ಹೇಳಿರಿ. ಅಂತಹ ಮನೆವಾರ್ತೆಯ ನಂಬಿಗಸ್ತ ಸದಸ್ಯರನ್ನು ಒಂದು ಸಾಮಾಜಿಕ ಪಾರ್ಟಿಗೆ ಯಾ ನಿಮ್ಮ ಮನೆಯಲ್ಲಿ ಒಂದು ಊಟಕ್ಕೆ ಆಮಂತ್ರಿಸಬಹುದು. ಶಾಪಿಂಗ್ನಲ್ಲಿ ಅವರು ಭೇಟಿಯಾದರೆ, ಆ ಸಂಧಿಯನ್ನು ಒಂದು ಬಲವರ್ಧಕ ಸಹವಾಸಕ್ಕಾಗಿ ನೀವು ಬಳಸಬಹುದು. ಬಹಿಷ್ಕೃತ ಸಂಬಂಧಿಕರುಳ್ಳ ಕರ್ತವ್ಯನಿಷ್ಠ ಕ್ರೈಸ್ತರು ಇನ್ನೂ ಯೆಹೋವನ ಶುದ್ಧ ಸಂಸ್ಥೆಯ ಭಾಗವಾಗಿದ್ದಾರೆ ಎಂಬುದನ್ನು ಜ್ಞಾಪಕದಲ್ಲಿಡಿರಿ. ಅವರು ಸುಲಭವಾಗಿಯೇ ಏಕಾಂತಕ್ಕೆ ಹಾಕಲ್ಪಟ್ಟು, ನಿರಾಶೆಗೊಳ್ಳಬಹುದು. ಆದುದರಿಂದ, ಅವರಿಗೆ ದಯೆ ಮತ್ತು ಪ್ರೀತಿಯನ್ನು ತೋರಿಸಲು ಎಚ್ಚರದಿಂದಿರ್ರಿ. ‘ನಂಬಿಕೆಯಲ್ಲಿ ನಿಮಗೆ ಸಂಬಂಧಿಗಳಾಗಿರುವ ಎಲ್ಲರ ಕಡೆಗೆ’ ಒಳ್ಳೇದನ್ನು ಮಾಡುತ್ತಾ ಮುಂದುವರಿಯಿರಿ.—ಗಲಾತ್ಯ 6:10.
ಯೆಹೋವನ ಮುನ್ನೇರ್ಪಾಡನ್ನು ಗಣ್ಯಮಾಡಿರಿ
ತನ್ನ ಆರಾಧಕರ ಲೋಕವ್ಯಾಪಕ ಕುಟುಂಬದಲ್ಲಿ ಪ್ರತಿಯೊಬ್ಬರಿಗಾಗಿ ಯೆಹೋವ ದೇವರು ಕೋಮಲ ಚಿಂತೆಯನ್ನು ತೋರಿಸುವುದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಬಲ್ಲೆವು. ನಾವು ಆತನ ಮುಂದೆ ನೀತಿಯ ದಾರಿಯಲ್ಲಿ ನಡೆಯಲು ಸಹಾಯಕ್ಕಾಗಿ ಆತನು ತನ್ನ ಸಂಸ್ಥೆಯ ಮೂಲಕ ಪ್ರೀತಿಯುಳ್ಳ ಒಂದು ಏರ್ಪಾಡನ್ನು ಒದಗಿಸಿದ್ದಾನೆ. ಕುಟುಂಬ ಸದಸ್ಯನೊಬ್ಬನು ಬುದ್ಧಿಪೂರ್ವಕವಾಗಿ ಪಾಪ ಮಾಡುತ್ತಾನಾದರೂ ಮತ್ತು ಸಭೆಯಿಂದ ಬಹಿಷ್ಕರಿಸಲ್ಪಡಬೇಕಾದರೂ, ಅವನು ನಿಜವಾಗಿ ಪಶ್ಚಾತ್ತಾಪಪಟ್ಟಲ್ಲಿ, ಸಭೆಗೆ ತಿರುಗಿ ಮರಳುವ ಹಾದಿಯಿದೆ. ಕೆಳಗಿನ ದೃಷ್ಟಾಂತದಿಂದ ಇದು ಉದಾಹರಿಸಲ್ಪಟ್ಟಿದೆ:
ನಾವು ಆ್ಯನ ಎಂದು ಕರೆಯುವ ಒಬ್ಬ ಸ್ತ್ರೀಗೆ, ಹಿರಿಯರು ಸಹಾಯಮಾಡಲು ಪ್ರಯತ್ನಿಸಿದ್ದರು, ಆದರೆ ಅವಳು ಧೂಮಪಾನ, ಶರಾಬು, ಮತ್ತು ಅಮಲೌಷಧಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗಿದಳು. ಅವಳು ಪಶ್ಚಾತ್ತಾಪಪಡಲಿಲ್ಲ ಮತ್ತು ಸಭೆಯಲ್ಲಿ ಉಳಿಯಲಿಲ್ಲ. ಆದರೆ ತುಸು ಸಮಯದೊಳಗೆ ಯೆಹೋವನ ಶುದ್ಧ ಸಭೆಯ ಪ್ರೀತಿಯ ಸಾಹಚರ್ಯವನ್ನು ಕಳೆದುಕೊಳ್ಳತೊಡಗಿದಳು ಮತ್ತು ಸಹಾಯಕ್ಕಾಗಿ ಆತನಿಗೆ ಪ್ರಾರ್ಥಿಸಿದಳು. ದಾರಿತಪ್ಪಿದವರ ಕುರಿತು ಹಿರಿಯರೆಷ್ಟು ಚಿಂತಿತರೆಂಬುದನ್ನು ತಾನು ಪೂರ್ಣ ಗಣ್ಯಮಾಡಲಿಲ್ಲವೆಂದು ಅವಳು ಒಪ್ಪುತ್ತಾಳೆ. ಆ್ಯನ ಪುನಃ ಕೂಟಗಳಿಗೆ ಉಪಸ್ಥಿತಳಾಗತೊಡಗಿದಳು, ಮತ್ತು ಇದು ಪಶ್ಚಾತ್ತಾಪಕ್ಕೆ ನಡಿಸಿತು. ತದನಂತರ, ಅವಳು ಪ್ರೀತಿಯುಳ್ಳ ಮತ್ತು ಸುರಕ್ಷೆಯ ಸಭೆಯೊಳಗೆ ತಿರಿಗಿ ಸ್ವೀಕರಿಸಲ್ಪಟ್ಟಳು. ಪುನಃ ಒಮ್ಮೆ, ಆ್ಯನ ಯೆಹೋವನ ನೈತಿಕತೆಯ ಅತ್ಯುನ್ನತ ಮಟ್ಟವನ್ನು ಎತ್ತಿಹಿಡಿದಿದ್ದಾಳೆ. ಹಿರಿಯರಿಂದ ತೋರಿಸಲ್ಪಟ್ಟ ಪ್ರೀತಿಗಾಗಿ ಅವಳು ಕೃತಜ್ಞಳು, ಮತ್ತೂ ಅವಳನ್ನುವುದು: “ಕ್ರೈಸ್ತ ಪ್ರಕಾಶನಗಳು ನನಗೆಷ್ಟು ಸಹಾಯವಾಗಿವೆಯೆಂಬುದನ್ನು ನೀವು ಊಹಿಸಲಾರಿರಿ. ಯೆಹೋವನು ನಿಶ್ಚಯವಾಗಿಯೂ ನಮ್ಮ ಅಗತ್ಯಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ.”
ಹೌದು, ಸಭೆಯಿಂದ ಬಹಿಷ್ಕೃತರಾದವರಿಗೆ ಮತ್ತು ಅನಂತರ ಪಶ್ಚಾತ್ತಾಪಡುವವರಿಗೆ ಪುನಃ ಹಿಂದೆ ಬರುವ ದಾರಿಯನ್ನು ದೇವರು ಒದಗಿಸಿದ್ದಾನೆ. ಬಹಿಷ್ಕರಿಸುವಿಕೆಯು ಕೂಡ ಒಂದು ಪ್ರೀತಿಯ ಮುನ್ನೇರ್ಪಾಡೆಂದು ನಾವು ಅವಲೋಕಿಸಿದ್ದೇವೆ. ಆದರೆ ನಮ್ಮ ಪರಿಶುದ್ಧ ದೇವರ ನೀತಿಯುಳ್ಳ ಮಾರ್ಗಕ್ಕೆ ಯಾವಾಗಲೂ ಅಂಟಿಕೊಳ್ಳುವ ಮೂಲಕ ಈ ಶೋಚನೀಯ ಅನುಭವವನ್ನು ವರ್ಜಿಸುವುದು ಅದೆಷ್ಟು ಉತ್ತಮ! ಆತನ ಶುದ್ಧವಾದ, ಪ್ರೀತಿಯುಳ್ಳ, ಮತ್ತು ಸುರಕ್ಷೆಯ ಸಂಸ್ಥೆಯ ಭಾಗವಾಗಿ ಯೆಹೋವನನ್ನು ಸುತ್ತಿಸುವ ಸುಯೋಗಕ್ಕಾಗಿ ನಾವು ಸದಾ ಕೃತಜ್ಞರಾಗಿರುವಂತಾಗಲಿ.
[ಪುಟ 26 ರಲ್ಲಿರುವ ಚಿತ್ರ]
ಸಭೆಯಿಂದ ಬಹಿಷ್ಕರಿಸಲ್ಪಟ್ಟಿರುವವರ ನಂಬಿಗಸ್ತ ಸಂಬಂಧಿಕರಿಗೆ ನೀವು ಪ್ರೀತಿಯನ್ನು ತೋರಿಸುತ್ತಿದ್ದೀರೊ?