ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • fy ಅಧ್ಯಾ. 8 ಪು. 90-102
  • ನಿಮ್ಮ ಕುಟುಂಬವನ್ನು ನಾಶಕಾರಕ ಪ್ರಭಾವಗಳಿಂದ ಸಂರಕ್ಷಿಸಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಕುಟುಂಬವನ್ನು ನಾಶಕಾರಕ ಪ್ರಭಾವಗಳಿಂದ ಸಂರಕ್ಷಿಸಿರಿ
  • ಕುಟುಂಬ ಸಂತೋಷದ ರಹಸ್ಯ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಮ್ಮ ಮಕ್ಕಳಿಗೆ ಯಾರು ಕಲಿಸುವರು?
  • ಕಾಮದ ವಿಷಯದಲ್ಲಿ ದೇವರ ವೀಕ್ಷಣ
  • ಹೆತ್ತವರಿಗಿರುವ ಮನೆಗೆಲಸ
  • ನಿಮ್ಮ ಮಕ್ಕಳ ಸ್ನೇಹಿತರು
  • ಯಾವ ರೀತಿಯ ವಿನೋದ?
  • ನಿಮ್ಮ ಕುಟುಂಬವು ಜಗತ್ತನ್ನು ಜಯಿಸಬಲ್ಲದು
  • ನಿಮ್ಮ ಮಕ್ಕಳನ್ನು ತರಬೇತುಗೊಳಿಸಲು ಬೈಬಲ್‌ ನಿಮಗೆ ಸಹಾಯಮಾಡಬಲ್ಲದೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಸುಖ ಸಂಸಾರ ಸಾಧ್ಯ!—ಭಾಗ 2
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಹೆತ್ತವರೇ, ಯೆಹೋವನನ್ನು ಪ್ರೀತಿಸೋಕೆ ಮಕ್ಕಳಿಗೆ ಸಹಾಯ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಹೆತ್ತವರೇ ನಿಮ್ಮ ಮಕ್ಕಳಿಗೆ ಉತ್ತಮ ಮಾದರಿಯಾಗಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ಕುಟುಂಬ ಸಂತೋಷದ ರಹಸ್ಯ
fy ಅಧ್ಯಾ. 8 ಪು. 90-102

ಅಧ್ಯಾಯ ಎಂಟು

ನಿಮ್ಮ ಕುಟುಂಬವನ್ನು ನಾಶಕಾರಕ ಪ್ರಭಾವಗಳಿಂದ ಸಂರಕ್ಷಿಸಿರಿ

ಪುಟ 91ರಲ್ಲಿರುವ ಚಿತ್ರ

1-3. (ಎ) ಕುಟುಂಬವನ್ನು ಬೆದರಿಸುವ ನಾಶಕಾರಕ ಪ್ರಭಾವಗಳು ಯಾವ ಮೂಲಗಳಿಂದ ಬರುತ್ತವೆ? (ಬಿ) ತಮ್ಮ ಕುಟುಂಬವನ್ನು ಸಂರಕ್ಷಿಸುವುದರಲ್ಲಿ ಹೆತ್ತವರಿಗೆ ಯಾವ ಸಮತೆಯು ಬೇಕು?

ನೀವು ನಿಮ್ಮ ಚಿಕ್ಕ ಹುಡುಗನನ್ನು ಶಾಲೆಗೆ ಕಳುಹಿಸುವುದರಲ್ಲಿದ್ದೀರಿ, ಮತ್ತು ಮಳೆ ಸುರಿಯುತ್ತಿದೆ. ಸನ್ನಿವೇಶವನ್ನು ನೀವು ಹೇಗೆ ನಿರ್ವಹಿಸುತ್ತೀರಿ? ಮಳೆಯ ಯಾವುದೇ ಉಡಿಗೆತೊಡಿಗೆ ಇಲ್ಲದೆ ಅವನು ಬಾಗಿಲಿಂದ ಹೊರಗೆ ನೆಗೆಯುತ್ತ ಹೋಗುವಂತೆ ನೀವು ಬಿಡುತ್ತೀರೊ? ಅಥವಾ ಅವನಿಗೆ ಚಲಿಸಲು ಕಷ್ಟವಾಗುವಷ್ಟೂ ಹೆಚ್ಚು ಪದರಗಳ ರಕ್ಷಕ ಬಟ್ಟೆಗಳನ್ನು ಅವನ ಮೇಲೆ ಹೇರುತ್ತೀರೊ? ಇವೆರಡನ್ನೂ ಮಾಡುವುದಿಲ್ಲವೆಂಬುದು ನಿಶ್ಚಯ. ಅವನು ಒಣಗಿದಂತಿರಲು ಅವನಿಗೆ ಏನು ಅಗತ್ಯವಾಗಿದೆಯೊ ಅಷ್ಟನ್ನೇ ನೀವು ಕೊಡುತ್ತೀರಿ.

2 ತದ್ರೀತಿ, ತಮ್ಮ ಕುಟುಂಬವನ್ನು ಅದರ ಮೇಲೆ ಅನೇಕ ಮೂಲಗಳಿಂದ—ಮನೋರಂಜನೆಯ ಉದ್ಯಮ, ವಾರ್ತಾಮಾಧ್ಯಮಗಳು, ಸಮಾನಸ್ಥರು ಮತ್ತು ಆಗಾಗ ಶಾಲೆಗಳಿಂದ ಕೂಡ—ಸುರಿಯುವ ನಾಶಕಾರಕ ಪ್ರಭಾವಗಳಿಂದ ರಕ್ಷಿಸಲು ಒಂದು ಸಮತೆಯ ಮಾರ್ಗವನ್ನು ಹೆತ್ತವರು ಕಂಡುಹಿಡಿಯಬೇಕು. ಕೆಲವು ಹೆತ್ತವರು ತಮ್ಮ ಕುಟುಂಬವನ್ನು ಸಂರಕ್ಷಿಸಲು ಕೊಂಚವನ್ನು ಅಥವಾ ಏನನ್ನೂ ಮಾಡುತ್ತಿಲ್ಲವೆಂದೇ ಹೇಳಬೇಕು. ಇತರರಾದರೊ, ಸಕಲ ಬಾಹ್ಯ ಪ್ರಭಾವಗಳು ಹಾನಿಕರವೆಂದು ವೀಕ್ಷಿಸುತ್ತ ಎಷ್ಟು ನಿರ್ಬಂಧಗಳನ್ನು ಹಾಕುತ್ತಾರೆಂದರೆ ಮಕ್ಕಳಿಗೆ ಉಸಿರು ಕಟ್ಟಿಹೋಗುವ ಅನಿಸಿಕೆಯಾಗುತ್ತದೆ. ಸಮತೆಯು ಸಾಧ್ಯವೊ?

3 ಹೌದು, ಸಾಧ್ಯ. ಅತಿ ಗಾಮಿಯಾಗಿರುವುದು ಪರಿಣಾಮಕಾರಕವಲ್ಲ ಮತ್ತು ಅದು ವಿಪತ್ತನ್ನು ಆಹ್ವಾನಿಸಬಲ್ಲದು. (ಪ್ರಸಂಗಿ 7:16, 17) ಆದರೆ ತಮ್ಮ ಕುಟುಂಬವನ್ನು ಸಂರಕ್ಷಿಸುವುದರಲ್ಲಿ ಕ್ರೈಸ್ತ ಹೆತ್ತವರು ಯೋಗ್ಯವಾದ ಸಮತೆಯನ್ನು ಹೇಗೆ ಕಂಡುಕೊಳ್ಳುತ್ತಾರೆ? ಮೂರು ಕ್ಷೇತ್ರಗಳನ್ನು ಪರಿಗಣಿಸಿರಿ: ವಿದ್ಯಾಭ್ಯಾಸ, ಸಹವಾಸ, ಮತ್ತು ವಿನೋದ.

ನಿಮ್ಮ ಮಕ್ಕಳಿಗೆ ಯಾರು ಕಲಿಸುವರು?

4. ಕ್ರೈಸ್ತ ಹೆತ್ತವರು ವಿದ್ಯಾಭ್ಯಾಸವನ್ನು ಹೇಗೆ ವೀಕ್ಷಿಸಬೇಕು?

4 ಕ್ರೈಸ್ತ ಹೆತ್ತವರು ವಿದ್ಯೆಗೆ ಉನ್ನತ ಮೌಲ್ಯವನ್ನು ಕಟ್ಟುತ್ತಾರೆ. ಶಾಲಾ ಶಿಕ್ಷಣವು ಮಕ್ಕಳಿಗೆ ಓದಲು, ಬರೆಯಲು, ಸಂವಾದಿಸಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುತ್ತದೆಂದು ಅವರಿಗೆ ತಿಳಿದಿದೆ. ಅದು ಕಲಿಯುವ ವಿಧಾನವನ್ನೂ ಅವರಿಗೆ ಕಲಿಸಬೇಕು. ಮಕ್ಕಳು ಶಾಲೆಯಲ್ಲಿ ಸಂಪಾದಿಸುವ ಕೌಶಲಗಳು, ಇಂದಿನ ಜಗತ್ತಿನ ಪಂಥಾಹ್ವಾನಗಳ ಎದುರಿನಲ್ಲೂ ಅವರು ಯಶಸ್ಸನ್ನು ಹೊಂದುವಂತೆ ಸಾಧ್ಯಮಾಡಬಲ್ಲದು. ಕೂಡಿಕೆಯಾಗಿ, ಒಂದು ಒಳ್ಳೆಯ ವಿದ್ಯಾಭ್ಯಾಸವು ಅವರು ಶ್ರೇಷ್ಠ ರೀತಿಯ ಕೆಲಸವನ್ನು ನಿರ್ವಹಿಸುವಂತೆ ಅವರಿಗೆ ಸಹಾಯ ಮಾಡಬಹುದು.—ಜ್ಞಾನೋಕ್ತಿ 22:29.

5, 6. ಮಕ್ಕಳು ಶಾಲೆಯಲ್ಲಿ ಲೈಂಗಿಕ ವಿಷಯಗಳ ಕುರಿತು ವಿಕೃತ ಮಾಹಿತಿಗೆ ಹೇಗೆ ಒಡ್ಡಲ್ಪಡಬಹುದು?

5 ಆದರೂ, ಶಾಲೆಯು ಮಕ್ಕಳನ್ನು, ಯಾರಲ್ಲಿ ಅನೇಕರಿಗೆ ಕೊಂಕಿಸಲ್ಪಟ್ಟ ವೀಕ್ಷಣಗಳು ಇವೆಯೊ ಅಂತಹ ಬೇರೆ ಮಕ್ಕಳ ಜೊತೆಗೆ ಸಹ ಸೇರಿಸುತ್ತದೆ. ಉದಾಹರಣೆಗಾಗಿ, ಕಾಮ ಮತ್ತು ನೀತಿತತ್ವಗಳ ಕುರಿತ ಅವರ ವೀಕ್ಷಣಗಳನ್ನು ಪರಿಗಣಿಸಿರಿ. ನೈಜೀರಿಯದ ಒಂದು ಮಾಧ್ಯಮಿಕ ಶಾಲೆಯಲ್ಲಿ ಲೈಂಗಿಕವಾಗಿ ಸ್ವೇಚ್ಛಾಸಂಪರ್ಕಿಯಾದ ಒಬ್ಬ ಹುಡುಗಿಯು ತನ್ನ ಜೊತೆ ವಿದ್ಯಾರ್ಥಿಗಳಿಗೆ ಕಾಮದ ವಿಷಯವಾಗಿ ಬುದ್ಧಿವಾದವನ್ನು ಕೊಡುತ್ತಿದ್ದಳು. ಅವಳ ಕಲ್ಪನೆಗಳು ಆಕೆ ವಿಷಯಲಂಪಟ ಸಾಹಿತ್ಯದಿಂದ ಸಂಗ್ರಹಿಸಿದ ಅವಿವೇಕದಿಂದ ತುಂಬಿದ್ದವಾದರೂ, ಅವರು ಆಕೆಗೆ ಅತ್ಯಾಸಕ್ತಿಯಿಂದ ಕಿವಿಗೊಟ್ಟರು. ಹುಡುಗಿಯರಲ್ಲಿ ಕೆಲವರು ಆಕೆಯ ಬುದ್ಧಿವಾದವನ್ನು ಪ್ರಯೋಗಿಸಿ ನೋಡಿದರು. ತತ್ಪರಿಣಾಮ ವಾಗಿ, ದಾಂಪತ್ಯದ ಹೊರಗೆ ಒಬ್ಬ ಹುಡುಗಿಯು ಗರ್ಭಿಣಿಯಾಗಿ, ತಾನೇ ಚೋದಿಸಿದ ಗರ್ಭಪಾತದಿಂದಾಗಿ ಸತ್ತಳು.

6 ವಿಷಾದಕರವಾಗಿ, ಶಾಲೆಯಲ್ಲಿ ಕೆಲವು ಲೈಂಗಿಕ ತಪ್ಪು ಮಾಹಿತಿಯು ಮಕ್ಕಳಿಂದಲ್ಲ, ಅಧ್ಯಾಪಕರಿಂದ ಬರುತ್ತದೆ. ಶಾಲೆಯು ಮಕ್ಕಳಿಗೆ ಕಾಮದ ವಿಷಯವನ್ನು ಕಲಿಸಿ, ನೈತಿಕ ಮಟ್ಟಗಳು ಮತ್ತು ಜವಾಬ್ದಾರಿಯ ವಿಷಯ ಏನೂ ಹೇಳದಿರುವಾಗ ಅನೇಕ ಹೆತ್ತವರು ಹುಮ್ಮಸ್ಸುಗೆಡುತ್ತಾರೆ. ಒಬ್ಬ 12 ವರ್ಷ ವಯಸ್ಸಿನ ಹುಡುಗಿಯ ತಾಯಿ ಹೇಳಿದ್ದು: “ನಾವು ಒಂದು ಅತಿ ಧಾರ್ಮಿಕವೂ ಸಂಪ್ರದಾಯ ಪಾಲಕವೂ ಆದ ಪ್ರದೇಶದಲ್ಲಿ ವಾಸಿಸುತ್ತೇವಾದರೂ ಸ್ಥಳಿಕ ಹೈಸ್ಕೂಲಿನಲ್ಲೇ ಅವರು ಮಕ್ಕಳಿಗೆ ಶಿಶ್ನಕವಚಗಳನ್ನು ಕೊಡುತ್ತಿದ್ದಾರೆ!” ತಮ್ಮ ಮಗಳಿಗೆ ಆಕೆಯಷ್ಟೇ ಪ್ರಾಯದ ಹುಡುಗರಿಂದ ಲೈಂಗಿಕ ಪ್ರಸ್ತಾಪಗಳು ಬರುತ್ತಿರುವುದರ ಕುರಿತು ಅರಿತಾಗ ಆಕೆಯೂ ಆಕೆಯ ಗಂಡನೂ ಚಿಂತಿತರಾದರು. ಇಂತಹ ಕೆಟ್ಟ ಪ್ರಭಾವಗಳಿಂದ ಹೆತ್ತವರು ತಮ್ಮ ಕುಟುಂಬವನ್ನು ಹೇಗೆ ಸಂರಕ್ಷಿಸಬಲ್ಲರು?

7. ಲೈಂಗಿಕ ತಪ್ಪು ಮಾಹಿತಿಯನ್ನು ಅತ್ಯುತ್ತಮವಾಗಿ ಹೇಗೆ ಪ್ರತಿಭಟಿಸಬಹುದು?

7 ಲೈಂಗಿಕ ವಿಷಯಗಳ ಯಾವುದೇ ಪ್ರಸ್ತಾಪದಿಂದ ಮಕ್ಕಳನ್ನು ಕಾಪಾಡುವುದು ಅತ್ಯುತ್ತಮವೊ? ಇಲ್ಲ. ಕಾಮದ ವಿಷಯ ನಿಮ್ಮ ಮಕ್ಕಳಿಗೆ ನೀವೇ ಕಲಿಸುವುದು ಹೆಚ್ಚು ಉತ್ತಮ. (ಜ್ಞಾನೋಕ್ತಿ 5:1) ಯೂರೋಪ್‌ ಮತ್ತು ಉತ್ತರ ಅಮೆರಿಕದ ಕೆಲವು ಭಾಗಗಳಲ್ಲಿ ಅನೇಕ ಹೆತ್ತವರು ಈ ವಿಷಯದಲ್ಲಿ ಮಾತಾಡುವುದಕ್ಕೆ ನಾಚಿಕೊಳ್ಳುತ್ತಾರೆಂಬುದು ನಿಜ. ಇದೇ ರೀತಿ, ಆಫ್ರಿಕದ ಕೆಲವು ದೇಶಗಳಲ್ಲಿ, ಹೆತ್ತವರು ತಮ್ಮ ಮಕ್ಕಳೊಂದಿಗೆ ಕಾಮದ ಕುರಿತಾಗಿ ವಿರಳವಾಗಿ ಚರ್ಚಿಸುತ್ತಾರೆ. “ಹಾಗೆ ಮಾಡುವುದು ಆಫ್ರಿಕನ್‌ ಸಂಸ್ಕೃತಿಯ ಭಾಗವಲ್ಲ” ಎನ್ನುತ್ತಾನೆ ಸೀಯರ ಲೀಯೋನ್‌ನಲ್ಲಿರುವ ಒಬ್ಬ ತಂದೆ. ಮಕ್ಕಳಿಗೆ ಕಾಮದ ಕುರಿತು ಕಲಿಸುವುದೆಂದರೆ, ಅವರು ದುರಾಚಾರ ಮಾಡುವಂತೆ ನಡಸುವ ಕಲ್ಪನೆಗಳನ್ನು ಅವರಿಗೆ ಕೊಡುವುದೇ ಎಂದು ಕೆಲವು ಹೆತ್ತವರು ಅಭಿಪ್ರಯಿಸುತ್ತಾರೆ! ಆದರೆ ದೇವರ ವೀಕ್ಷಣವೇನು?

ಕಾಮದ ವಿಷಯದಲ್ಲಿ ದೇವರ ವೀಕ್ಷಣ

8, 9. ಬೈಬಲಿನಲ್ಲಿ ಲೈಂಗಿಕ ವಿಷಯಗಳ ಮೇಲೆ ಯಾವ ಉತ್ತಮ ಮಾಹಿತಿಯು ಕಂಡುಬರುತ್ತದೆ?

8 ಯೋಗ್ಯ ಸನ್ನಿವೇಶದಲ್ಲಿ ಕಾಮದ ವಿಷಯ ಚರ್ಚಿಸುವುದರಲ್ಲಿ ಲಜ್ಜಾಸ್ಪದವಾದ ಯಾವುದೂ ಇಲ್ಲವೆಂದು ಬೈಬಲು ಸ್ಪಷ್ಟಪಡಿಸುತ್ತದೆ. ಇಸ್ರಾಯೇಲಿನಲ್ಲಿ ಮೋಶೆಯ ಧರ್ಮಶಾಸ್ತ್ರವು ಗಟ್ಟಿಯಾಗಿ ಓದಲ್ಪಡುವಾಗ ಅದಕ್ಕೆ ಕಿವಿಗೊಡಲು ದೇವಜನರು “ಮಕ್ಕಳ” ಸಹಿತ ಕೂಡಿಬರಬೇಕೆಂದು ಅವರಿಗೆ ಹೇಳಲಾಯಿತು. (ಧರ್ಮೋಪದೇಶಕಾಂಡ 31:10-12; ಯೆಹೋಶುವ 8:35) ಧರ್ಮಶಾಸ್ತ್ರವು ಮುಚ್ಚುಮರೆಯಿಲ್ಲದೆ ಮುಟ್ಟು, ವೀರ್ಯ ವಿಸರ್ಜನೆಗಳು, ಜಾರತ್ವ, ವ್ಯಭಿಚಾರ, ಸಲಿಂಗೀ ಕಾಮ, ಅಗಮ್ಯಗಮನ ಮತ್ತು ಪಶು ಸಂಭೋಗವು ಸೇರಿರುವ ಅನೇಕ ಲೈಂಗಿಕ ವಿಷಯಗಳನ್ನು ತಿಳಿಸಿತು. (ಯಾಜಕಕಾಂಡ 15:16, 19; 18:6, 22, 23; ಧರ್ಮೋಪದೇಶಕಾಂಡ 22:22) ಇಂತಹ ವಾಚನಗಳಾದ ಮೇಲೆ ತಮ್ಮ ಕುತೂಹಲಿಗಳಾದ ಎಳೆಯರಿಗೆ ವಿವರಿಸಲು ಹೆತ್ತವರಿಗೆ ಹೇರಳವಾದ ವಿಷಯಗಳಿದ್ದವೆಂಬುದು ನಿಸ್ಸಂದೇಹ.

9 ಜ್ಞಾನೋಕ್ತಿ ಐದು, ಆರು ಮತ್ತು ಏಳನೆಯ ಅಧ್ಯಾಯಗಳಲ್ಲಿ ಲೈಂಗಿಕ ದುರಾಚಾರದ ಅಪಾಯಗಳ ಕುರಿತು ಪ್ರೀತಿಯುಳ್ಳ ಪಿತೃ ಸಲಹೆಯನ್ನು ವ್ಯಕ್ತಪಡಿಸುವ ಭಾಗಗಳಿವೆ. ಲೈಂಗಿಕ ದುರಾಚಾರವು ಕೆಲವು ಬಾರಿ ಮನಸ್ಸನ್ನು ಸೆಳೆಯಬಹುದೆಂದು ಈ ವಚನಗಳು ತೋರಿಸುತ್ತವೆ. (ಜ್ಞಾನೋಕ್ತಿ 5:3; 6:24, 25; 7:14-21) ಆದರೆ ಅದು ತಪ್ಪೆಂದೂ ವಿಪತ್ಕಾರಕ ಪರಿಣಾಮಗಳು ಅದರಲ್ಲಿವೆಯೆಂದೂ ಅವು ಕಲಿಸುತ್ತವೆ, ಮತ್ತು ಯುವ ಜನರು ದುರಾಚಾರದ ಮಾರ್ಗಗಳಿಂದ ತಪ್ಪಿಸಿಕೊಳ್ಳುವಂತೆ ಸಹಾಯ ಮಾಡಲು ಅವು ಮಾರ್ಗದರ್ಶನವನ್ನು ನೀಡುತ್ತವೆ. (ಜ್ಞಾನೋಕ್ತಿ 5:1-14, 21-23; 6:27-35; 7:22-27) ಅದಲ್ಲದೆ, ದುರಾಚಾರವನ್ನು ಅದರ ಯೋಗ್ಯ ಹಿನ್ನೆಲೆಯಲ್ಲಿ, ವಿವಾಹದೊಳಗೆ ಲೈಂಗಿಕಾನಂದದ ತೃಪ್ತಿಯೊಂದಿಗೆ ವೈದೃಶ್ಯವಾಗಿರಿಸಲಾಗಿದೆ. (ಜ್ಞಾನೋಕ್ತಿ 5:15-20) ಕಲಿಸುವಿಕೆಯಲ್ಲಿ ಹೆತ್ತವರಿಗೆ ಅನುಸರಿಸಲು ಎಷ್ಟು ಉತ್ತಮವಾದ ಆದರ್ಶ!

10. ಮಕ್ಕಳಿಗೆ ಲೈಂಗಿಕತೆಯ ಕುರಿತಾದ ದಿವ್ಯಜ್ಞಾನವನ್ನು ಕೊಡುವುದು ಅವರು ದುರಾಚಾರ ಮಾಡುವಂತೆ ಏಕೆ ನಡಸಬಾರದು?

10 ಇಂತಹ ಕಲಿಸುವಿಕೆಯು ಮಕ್ಕಳನ್ನು ದುರಾಚಾರಕ್ಕೆ ನಡಸುತ್ತದೊ? ಅದಕ್ಕೆ ಪ್ರತಿಯಾಗಿ, “ಶಿಷ್ಟನು ತಿಳುವಳಿಕೆಯಿಂದ ಉದ್ಧಾರವಾಗುವನು,” ಎಂದು ಬೈಬಲು ಬೋಧಿಸುತ್ತದೆ. (ಜ್ಞಾನೋಕ್ತಿ 11:9) ನೀವು ನಿಮ್ಮ ಮಕ್ಕಳನ್ನು ಈ ಲೋಕದ ಪ್ರಭಾವಗಳಿಂದ ರಕ್ಷಿಸಲು ಬಯಸುವುದಿಲ್ಲವೊ? ಒಬ್ಬ ತಂದೆ ಹೇಳಿದ್ದು: “ಮಕ್ಕಳು ಅತಿ ಚಿಕ್ಕವರಿದ್ದಾಗಲೇ ಕಾಮದ ವಿಷಯದಲ್ಲಿ ನಾವು ಪೂರ್ತಿ ಮುಚ್ಚುಮರೆಯಿಲ್ಲದೆ ಮಾತಾಡಲು ಪ್ರಯತ್ನಿಸಿದ್ದೇವೆ. ಆ ಕಾರಣ, ಬೇರೆ ಮಕ್ಕಳು ಕಾಮದ ವಿಷಯ ಮಾತಾಡುವುದನ್ನು ಕೇಳುವಾಗ, ಅವರು ಕುತೂಹಲಿಗಳಾಗಿರುವುದಿಲ್ಲ. ಇದರಲ್ಲಿ ದೊಡ್ಡ ರಹಸ್ಯವಿಲ್ಲ.”

11. ಜೀವನದ ಆಪ್ತ ವಿಷಯಗಳನ್ನು ಮಕ್ಕಳಿಗೆ ಪ್ರಗತಿಪರವಾಗಿ ಹೇಗೆ ಕಲಿಸಸಾಧ್ಯವಿದೆ?

11 ಮೊದಲ ಅಧ್ಯಾಯಗಳಲ್ಲಿ ಗಮನಿಸಿರುವಂತೆ, ಲೈಂಗಿಕ ಶಿಕ್ಷಣವು ಚಿಕ್ಕಂದಿನಲ್ಲೇ ಆರಂಭಗೊಳ್ಳಬೇಕು. ಚಿಕ್ಕ ಮಕ್ಕಳಿಗೆ ದೇಹದ ಅಂಗಾಂಗಗಳನ್ನು ಹೆಸರಿಸಲು ಕಲಿಸುವಾಗ, ಅವರ ರಹಸ್ಯಾಂಗಗಳನ್ನು, ಅವು ಲಜ್ಜಾಸ್ಪದವೊ ಎಂಬಂತೆ, ಬಿಟ್ಟುಬಿಡಬೇಡಿರಿ. ಇವುಗಳ ನಿಜವಾದ ಹೆಸರುಗಳನ್ನು ಅವರಿಗೆ ಕಲಿಸಿರಿ. ಸಮಯ ದಾಟಿದಂತೆ, ಏಕಾಂತತೆ ಮತ್ತು ಮೇರೆಗಳ ವಿಷಯದಲ್ಲಿ ಪಾಠಗಳು ಆವಶ್ಯಕ. ಈ ದೇಹಭಾಗಗಳು ಪ್ರತ್ಯೇಕವೆಂದೂ, ಸಾಮಾನ್ಯವಾಗಿ ಬೇರೆಯವರು ಮುಟ್ಟುವಂತಹವುಗಳೂ ಬೇರೆಯವರಿಗೆ ತೋರಿಸಲ್ಪಡುವಂತಹವುಗಳೂ ಆಗಿಲ್ಲವೆಂದೂ, ಮತ್ತು ಅವುಗಳು ಎಂದಿಗೂ ಕೆಟ್ಟ ರೀತಿಯಲ್ಲಿ ಚರ್ಚಿಸಲ್ಪಡುವ ವಿಷಯಗಳಾಗಿರಬಾರದೆಂದೂ ಹೆತ್ತವರಲ್ಲಿ ಇಬ್ಬರೂ ಮಕ್ಕಳಿಗೆ ಕಲಿಸುವುದು ಹೆಚ್ಚು ಉತ್ತಮ. ಮಕ್ಕಳು ದೊಡ್ಡವರಾದಂತೆ, ಒಂದು ಮಗು ಗರ್ಭತಾಳುವಂತೆ ಪುರುಷನೂ ಸ್ತ್ರೀಯೂ ಹೇಗೆ ಕೂಡುತ್ತಾರೆಂಬುದನ್ನು ತಿಳಿಸಬೇಕು. ತಮ್ಮ ಸ್ವಂತ ಶರೀರಗಳು ಪ್ರಾಯಕ್ಕೆ ಬರುವುದರೊಳಗೆ, ನಿರೀಕ್ಷಿಸಬೇಕಾದ ಬದಲಾವಣೆಗಳ ಕುರಿತು ಅವರು ಆಗಲೇ ಚೆನ್ನಾಗಿ ತಿಳಿದಿರಬೇಕು. 5ನೆಯ ಅಧ್ಯಾಯದಲ್ಲಿ ಚರ್ಚಿಸಲಾಗಿರುವಂತೆ, ಇಂತಹ ಶಿಕ್ಷಣವು ಮಕ್ಕಳನ್ನು ಲೈಂಗಿಕ ದುರುಪಯೋಗದಿಂದ ಸಂರಕ್ಷಿಸಲ್ಪಡುವಂತೆಯೂ ಸಹಾಯ ಮಾಡಬಲ್ಲದು.—ಜ್ಞಾನೋಕ್ತಿ 2:10-14.

ಹೆತ್ತವರಿಗಿರುವ ಮನೆಗೆಲಸ

12. ಶಾಲೆಗಳಲ್ಲಿ ಅನೇಕ ವೇಳೆ ಯಾವ ವಿಕೃತ ಅಭಿಪ್ರಾಯಗಳು ಕಲಿಸಲ್ಪಡುತ್ತವೆ?

12 ಶಾಲೆಯಲ್ಲಿ ಕಲಿಸಲ್ಪಡಬಹುದಾದ ಬೇರೆ ಸುಳ್ಳು ಕಲ್ಪನೆಗಳನ್ನು—ವಿಕಾಸವಾದ, ರಾಷ್ಟ್ರೀಯತೆಯಂತಹ ಲೌಕಿಕ ತತ್ವಜ್ಞಾನಗಳನ್ನು ಅಥವಾ ಯಾವ ಸತ್ಯಗಳೂ ಪರಮವಲ್ಲವೆಂಬ ವಿಚಾರವನ್ನು ಪ್ರತೀಕರಿಸಲು ಹೆತ್ತವರು ಸಿದ್ಧರಾಗಿರುವುದು ಆವಶ್ಯಕ. (1 ಕೊರಿಂಥ 3:19; ಹೋಲಿಸಿ ಆದಿಕಾಂಡ 1:27; ಯಾಜಕಕಾಂಡ 26:1; ಯೋಹಾನ 4:24; 17:17.) ಅನೇಕ ಯಥಾರ್ಥ ಶಾಲಾ ಅಧಿಕಾರಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಚಿತ ಪ್ರಾಮುಖ್ಯವನ್ನು ಹಚ್ಚುತ್ತಾರೆ. ಸಂಪೂರಕ ಶಿಕ್ಷಣದ ವಿಷಯವು ವೈಯಕ್ತಿಕ ಆಯ್ಕೆಯಾಗಿದೆಯಾದರೂ, ಕೆಲವು ಅಧ್ಯಾಪಕರು, ಯಾವುದೇ ವೈಯಕ್ತಿಕ ಯಶಸ್ಸಿಗೆ ಅದೊಂದೇ ಮಾರ್ಗವೆಂದು ಭಾವಿಸುತ್ತಾರೆ.a—ಕೀರ್ತನೆ 146:3-6.

13. ಶಾಲೆಗೆ ಹಾಜರಾಗುತ್ತಿರುವ ಮಕ್ಕಳು ತಪ್ಪು ಕಲ್ಪನೆಗಳಿಂದ ಹೇಗೆ ಸಂರಕ್ಷಿಸಲ್ಪಡಬಲ್ಲರು?

13 ಹೆತ್ತವರು ತಪ್ಪಾದ ಅಥವಾ ವಿಕೃತ ಬೋಧನೆಗಳನ್ನು ಪ್ರತೀಕರಿಸಬೇಕಾದರೆ, ತಮ್ಮ ಮಕ್ಕಳು ಯಾವ ಮಾಹಿತಿಯನ್ನು ಪಡೆಯುತ್ತಿದ್ದಾರೆಂದು ಅವರಿಗೆ ತಿಳಿದಿರಬೇಕು. ಆದುದರಿಂದ, ಹೆತ್ತವರೇ, ನಿಮಗೂ ಮನೆಗೆಲಸವಿದೆಯೆಂಬುದನ್ನು ನೆನಪಿನಲ್ಲಿಡಿರಿ! ನಿಮ್ಮ ಮಕ್ಕಳ ಶಾಲಾಶಿಕ್ಷಣದಲ್ಲಿ ಅಪ್ಪಟವಾದ ಆಸಕ್ತಿಯನ್ನು ತೋರಿಸಿರಿ. ಶಾಲೆಯ ಬಳಿಕ ಅವರೊಂದಿಗೆ ಮಾತಾಡಿರಿ. ಅವರೇನು ಕಲಿಯುತ್ತಿದ್ದಾರೆಂದೂ, ಯಾವುದು ಅವರಿಗೆ ಅತಿ ಇಷ್ಟವೆಂದೂ, ಯಾವುದು ಅವರಿಗೆ ಅತ್ಯಂತ ಪಂಥಾಹ್ವಾನಕರವಾಗಿದೆಯೆಂದೂ ಕೇಳಿರಿ. ಮನೆಗೆಲಸದ ನೇಮಕಗಳು, ನೋಟ್ಸ್‌ಗಳು ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ನೋಡಿರಿ. ಅವರ ಅಧ್ಯಾಪಕರ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಿರಿ. ಅವರ ಕೆಲಸವನ್ನು ಗುಣಗ್ರಹಣ ಮಾಡುತ್ತೀರಿ ಮತ್ತು ಸಾಧ್ಯವಿರುವ ಯಾವುದೇ ವಿಧದಲ್ಲಿ ನೀವು ಸಹಾಯವನ್ನು ಕೊಡಬಯಸುತ್ತೀರೆಂದು ಅಧ್ಯಾಪಕರು ತಿಳಿಯಲಿ.

ನಿಮ್ಮ ಮಕ್ಕಳ ಸ್ನೇಹಿತರು

14. ದಿವ್ಯಭಕ್ತಿಯುಳ್ಳ ಮಕ್ಕಳು ಒಳ್ಳೆಯ ಸ್ನೇಹಿತರನ್ನು ಆಯ್ದುಕೊಳ್ಳುವುದು ಮಹತ್ವದ್ದೇಕೆ?

14 “ನೀನು ಅದನ್ನು ಎಲ್ಲಿ ತಾನೇ ಕಲಿತೆ?” ತಮ್ಮ ಹುಡುಗನು ಹೇಳಿದ ಅಥವಾ ಮಾಡಿದ ಮತ್ತು ಪೂರ್ತಿ ಪಾತ್ರೋಚಿತವಲ್ಲವೆಂದು ಕಂಡುಬಂದ ಯಾವುದರಿಂದಲೊ ದಿಗಿಲುಗೊಂಡು, ಎಷ್ಟು ಮಂದಿ ಹೆತ್ತವರು ಆ ಪ್ರಶ್ನೆಯನ್ನು ಕೇಳಿದ್ದಾರೆ? ಮತ್ತು ಉತ್ತರವು ಎಷ್ಟು ಸಲ ಶಾಲೆಯಲ್ಲಿ ಅಥವಾ ನೆರೆಹೊರೆಯಲ್ಲಿ ಒಬ್ಬ ಹೊಸ ಸ್ನೇಹಿತನನ್ನು ಒಳಗೊಂಡಿರುತ್ತದೆ? ಹೌದು, ನಾವು ಎಳೆಯರಾಗಿರಲಿ, ವಯಸ್ಸಾದವರಾಗಿರಲಿ, ಸಂಗಡಿಗರು ನಮ್ಮನ್ನು ಗಾಢವಾಗಿ ಪ್ರಭಾವಿಸುತ್ತಾರೆ. ಅಪೊಸ್ತಲ ಪೌಲನು ಎಚ್ಚರಿಸಿದ್ದು: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” (1 ಕೊರಿಂಥ 15:33; ಜ್ಞಾನೋಕ್ತಿ 13:20) ಯುವ ಜನರು ವಿಶೇಷವಾಗಿ ಸಮಾನಸ್ಥರ ಒತ್ತಡಕ್ಕೆ ವಶವಾಗುತ್ತಾರೆ. ಅವರು ತಮ್ಮ ಕುರಿತು ಅನಿಶ್ಚಿತರಾಗಿರುವ ಪ್ರವೃತ್ತಿಯವರಾಗಿದ್ದು, ಕೆಲವು ಬಾರಿ ತಮ್ಮ ಸಂಗಡಿಗರನ್ನು ಮೆಚ್ಚಿಸಿ ಪರಿಣಾಮ ಬೀರುವ ಬಯಕೆಯಿಂದ ಪರವಶರಾಗಬಹುದು. ಆದುದರಿಂದ, ಅವರು ಒಳ್ಳೆಯ ಸ್ನೇಹಿತರನ್ನು ಆರಿಸಿಕೊಳ್ಳುವುದು ಎಷ್ಟು ಮಹತ್ವದ್ದು!

15. ಸ್ನೇಹಿತರನ್ನು ಆಯ್ದುಕೊಳ್ಳುವುದರಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಹೇಗೆ ಮಾರ್ಗದರ್ಶಿಸಬಲ್ಲರು?

15 ಪ್ರತಿಯೊಬ್ಬ ಹೆತ್ತವರು ತಿಳಿದಿರುವಂತೆ, ಮಕ್ಕಳು ಸದಾ ಒಳ್ಳೆಯದನ್ನು ಆಯ್ದುಕೊಳ್ಳರು; ಅವರಿಗೆ ತುಸು ಮಾರ್ಗದರ್ಶನ ಅಗತ್ಯ. ಅವರಿಗಾಗಿ ಅವರ ಸ್ನೇಹಿತರನ್ನು ಆರಿಸಬೇಕೆಂಬ ವಿಷಯ ಇದರಲ್ಲಿರುವುದಿಲ್ಲ. ಬದಲಿಗೆ, ಅವರು ಬೆಳೆಯುವಾಗ, ಅವರಿಗೆ ವಿವೇಚನಾ ಶಕ್ತಿಯನ್ನು ಕಲಿಸಿ ಅವರು ತಮ್ಮ ಮಿತ್ರರಲ್ಲಿ ಯಾವ ಗುಣಗಳನ್ನು ಬೆಲೆಯುಳ್ಳದ್ದೆಂದು ಎಣಿಸಬೇಕೆಂದು ನೋಡಲು ಅವರಿಗೆ ಸಹಾಯ ಮಾಡಿರಿ. ಮುಖ್ಯ ಗುಣವು ಯೆಹೋವನ ಪ್ರೀತಿ ಮತ್ತು ಆತನ ದೃಷ್ಟಿಯಲ್ಲಿ ಸರಿಯಾದುದನ್ನು ಮಾಡುವುದೇ. (ಮಾರ್ಕ 12:28-30) ಪ್ರಾಮಾಣಿಕತೆ, ದಯೆ, ಉದಾರತೆ, ಶ್ರದ್ಧೆ—ಇವುಗಳಿರುವವರನ್ನು ಪ್ರೀತಿಸಿ ಗೌರವಿಸುವಂತೆ ಅವರಿಗೆ ಕಲಿಸಿರಿ. ಕುಟುಂಬ ಅಧ್ಯಯನದ ಸಮಯದಲ್ಲಿ ಬೈಬಲ್‌ ಪಾತ್ರಧಾರಿಗಳಲ್ಲಿ ಅಂತಹ ಗುಣಗಳನ್ನು ಗುರುತಿಸುವಂತೆಯೂ, ಬಳಿಕ ಸಭೆಯಲ್ಲಿ ಇತರರಲ್ಲಿ ಅದೇ ಲಕ್ಷಣಗಳನ್ನು ಹುಡುಕುವಂತೆಯೂ ಮಕ್ಕಳಿಗೆ ಸಹಾಯ ಮಾಡಿರಿ. ನಿಮ್ಮ ಸ್ವಂತ ಸ್ನೇಹಿತರನ್ನು ಆಯ್ದುಕೊಳ್ಳುವಾಗಲೂ ಅದೇ ಅಳತೆಗಳನ್ನು ಉಪಯೋಗಿಸುವ ಮೂಲಕ ಮಾದರಿಯನ್ನಿಡಿರಿ.

16. ಸ್ನೇಹಿತರ ಆಯ್ಕೆಯ ವಿಷಯದಲ್ಲಿ ಹೆತ್ತವರು ಮಕ್ಕಳನ್ನು ಹೇಗೆ ಗಮನಿಸಬಹುದು?

16 ನಿಮ್ಮ ಮಕ್ಕಳ ಸ್ನೇಹಿತರು ಯಾರೆಂಬುದು ನಿಮಗೆ ಗೊತ್ತೊ? ನೀವು ಅವರನ್ನು ಭೇಟಿಯಾಗುವಂತೆ ನಿಮ್ಮ ಮಕ್ಕಳು ಅವರನ್ನು ಏಕೆ ಮನೆಗೆ ತರುವಂತೆ ಏರ್ಪಡಿಸಬಾರದು? ಈ ಸ್ನೇಹಿತರ ಕುರಿತು ಬೇರೆ ಮಕ್ಕಳು ಏನು ಯೋಚಿಸುತ್ತಾರೆಂದು ಸಹ ನೀವು ನಿಮ್ಮ ಮಕ್ಕಳೊಂದಿಗೆ ಕೇಳಬಹುದು. ಅವರು ವ್ಯಕ್ತಿಪರವಾದ ಸಮಗ್ರತೆಯನ್ನು ಪ್ರದರ್ಶಿಸುವುದಕ್ಕಾಗಿ ಜ್ಞಾತರೊ, ಇಬ್ಬಗೆಯ ಜೀವನಕ್ಕೊ? ಈ ಕೊನೆಯದ್ದು ಸತ್ಯವಾಗಿರುವುದಾದರೆ, ಅಂತಹ ಸಹವಾಸವು ಅವರಿಗೆ ಏಕೆ ಘಾಸಿಗೊಳಿಸಬಲ್ಲದೆಂಬುದನ್ನು ತರ್ಕಿಸಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಿರಿ. (ಕೀರ್ತನೆ 26:4, 5, 9-12) ನಿಮ್ಮ ಮಗುವಿನ ವರ್ತನೆ, ಉಡುಪು, ಮನೋಭಾವ ಅಥವಾ ಮಾತಿನಲ್ಲಿ ಅನಪೇಕ್ಷಿತವಾದ ಬದಲಾವಣೆಗಳನ್ನು ನೀವು ಗಮನಿಸುವಲ್ಲಿ ನೀವು ಅವನ ಅಥವಾ ಅವಳ ಸ್ನೇಹಿತರ ಕುರಿತು ಮಾತನಾಡುವುದು ಆವಶ್ಯಕವಾಗಿದ್ದೀತು. ನಿಮ್ಮ ಮಗನು, ಯಾರು ನಕಾರಾತ್ಮಕ ಪ್ರಭಾವವನ್ನು ಬೀರುತ್ತಿದ್ದಾನೊ ಅಂತಹ ಸ್ನೇಹಿತನೊಂದಿಗೆ ಸಮಯವನ್ನು ಕಳೆಯುತ್ತಿರಬಹುದು.—ಹೋಲಿಸಿ ಆದಿಕಾಂಡ 34:1, 2.

17, 18. ಕೆಟ್ಟ ಸಹವಾಸಿಗಳ ವಿರುದ್ಧವಾದ ಎಚ್ಚರಿಕೆಯನ್ನು ನೀಡುವುದಲ್ಲದೆ, ಹೆತ್ತವರು ಯಾವ ಪ್ರಾಯೋಗಿಕ ಸಹಾಯವನ್ನು ಕೊಡಬಲ್ಲರು?

17 ಆದರೂ ಕೆಟ್ಟ ಸಹವಾಸಿಗಳನ್ನು ವರ್ಜಿಸಬೇಕೆಂದು ಮಕ್ಕಳಿಗೆ ಕಲಿಸುವುದಷ್ಟೇ ಸಾಲದು. ಒಳ್ಳೆಯವರನ್ನು ಕಂಡುಕೊಳ್ಳಲು ಅವರಿಗೆ ನೆರವಾಗಿರಿ. ಒಬ್ಬ ತಂದೆ ಹೇಳುವುದು: “ನಾವು ಯಾವಾಗಲೂ ಬದಲಿಗೆ ಪ್ರಯತ್ನಿಸುತ್ತಿದ್ದೆವು. ಹೀಗೆ ಫುಟ್‌ಬಾಲ್‌ ತಂಡದಲ್ಲಿ ನಮ್ಮ ಮಗನಿರಬೇಕೆಂದು ಶಾಲೆಯು ಬಯಸಿದಾಗ, ನನ್ನ ಹೆಂಡತಿಯೂ ನಾನೂ ಅವನೊಂದಿಗೆ ಕುಳಿತು, ಅದು ಹೊಸ ಒಡನಾಡಿಗಳನ್ನು ಒಳಗೊಳ್ಳುವ ಕಾರಣ ಏಕೆ ಒಳ್ಳೆಯ ಸಂಗತಿಯಲ್ಲವೆಂದು ಚರ್ಚಿಸಿದೆವು. ಆದರೆ ಬಳಿಕ ನಾವು ಸಭೆಯ ಬೇರೆ ಕೆಲವು ಮಕ್ಕಳನ್ನು ಕರೆದು ಫುಟ್‌ಬಾಲ್‌ ಆಡಲು ಅವರೆಲ್ಲರನ್ನು ಪಾರ್ಕ್‌ಗೆ ತೆಗೆದುಕೊಂಡು ಹೋಗುವುದನ್ನು ಸೂಚಿಸಿದೆವು. ಮತ್ತು ಅದು ತೃಪ್ತಿಕರವಾಗಿ ಕೆಲಸ ನಡೆಸಿತು.”

18 ವಿವೇಕಿಗಳಾದ ಹೆತ್ತವರು ತಮ್ಮ ಮಕ್ಕಳು ಒಳ್ಳೆಯ ಸ್ನೇಹಿತರನ್ನು ಕಂಡುಹಿಡಿಯಲು ಮತ್ತು ಆ ಬಳಿಕ ಅವರೊಂದಿಗೆ ಹಿತಕರವಾದ ವಿನೋದದಲ್ಲಿ ಆನಂದಿಸಲು ಸಹಾಯಿಸುತ್ತಾರೆ. ಆದರೆ ಅನೇಕ ಹೆತ್ತವರಿಗೊ, ವಿನೋದದ ಈ ಸಂಗತಿಯು ತನ್ನ ಖುದ್ದಾದ ಪಂಥಾಹ್ವಾನಗಳನ್ನು ನೀಡುತ್ತದೆ.

ಯಾವ ರೀತಿಯ ವಿನೋದ?

19. ಮನೋರಂಜನೆಯು ಕುಟುಂಬಗಳಿಗೆ ಪಾಪಭರಿತವಾಗಿಲ್ಲ ಎಂಬುದನ್ನು ಯಾವ ಬೈಬಲ್‌ ಉದಾಹರಣೆಗಳು ತೋರಿಸುತ್ತವೆ?

19 ಮನೋರಂಜನೆಯನ್ನು ಬೈಬಲು ಖಂಡಿಸುತ್ತದೊ? ನಿಶ್ಚಯವಾಗಿಯೂ ಇಲ್ಲ! “ನಗುವ ಸಮಯ . . . ಕುಣಿದಾಡುವ ಸಮಯ”ಗಳಿವೆಯೆಂದು ಬೈಬಲು ಹೇಳುತ್ತದೆ.b (ಪ್ರಸಂಗಿ 3:4) ಪುರಾತನ ಇಸ್ರಾಯೇಲಿನಲ್ಲಿ ದೇವರ ಜನರು ಸಂಗೀತ ಮತ್ತು ಕುಣಿತದಲ್ಲಿ, ಆಟ ಮತ್ತು ಒಗಟುಗಳಲ್ಲಿ ಸಂತೋಷಿಸಿದರು. ಯೇಸು ಕ್ರಿಸ್ತನು ಒಂದು ದೊಡ್ಡ ವಿವಾಹದ ಔತಣದಲ್ಲಿ ಮತ್ತು ಮತ್ತಾಯ ಲೇವಿಯು ಅವನಿಗಾಗಿ ಮಾಡಿಸಿದ “ಒಂದು ದೊಡ್ಡ ಔತಣ”ದಲ್ಲಿ ಹಾಜರಿದ್ದನು. (ಲೂಕ 5:29; ಯೋಹಾನ 2:1, 2) ಯೇಸುವು ಉತ್ಸಾಹಕ್ಕೆ ಭಂಗತರುವವನಾಗಿರಲಿಲ್ಲವೆಂಬುದು ಸ್ಪಷ್ಟ. ನಗೆ ಮತ್ತು ಹಾಸ್ಯಗಳು ನಿಮ್ಮ ಮನೆವಾರ್ತೆಯಲ್ಲಿ ಪಾಪಗಳಾಗಿ ಎಂದಿಗೂ ವೀಕ್ಷಿಸಲ್ಪಡದಿರುವಂತಾಗಲಿ!

[ಪುಟ 99ರಲ್ಲಿರುವ ಚಿತ್ರ]

ಕುಟುಂಬದ ಈ ತಾತ್ಕಾಲಿಕ ಶಿಬಿರವಾಸ ಸಂಚಾರದಂತಹ ಚೆನ್ನಾಗಿ ಆಯ್ದ ವಿನೋದವು, ಮಕ್ಕಳಿಗೆ ಕಲಿಯಲು ಮತ್ತು ಆತ್ಮಿಕವಾಗಿ ಬೆಳೆಯಲು ಸಹಾಯ ಮಾಡಬಲ್ಲದು

20. ಕುಟುಂಬಕ್ಕಾಗಿ ವಿನೋದವನ್ನು ಒದಗಿಸುವುದರಲ್ಲಿ ಹೆತ್ತವರು ಏನನ್ನು ಮನಸ್ಸಿನಲ್ಲಿಡತಕ್ಕದ್ದು?

20 ಯೆಹೋವನು “ಸಂತೋಷವುಳ್ಳ ದೇವರು.” (1 ತಿಮೊಥೆಯ 1:11, NW) ಆದಕಾರಣ ಯೆಹೋವನ ಆರಾಧನೆಯು ಸಂತೋಷದ ಆಕರವಾಗಿರಬೇಕು, ಜೀವನದ ಮೇಲೆ ಆನಂದರಾಹಿತ್ಯದ ನೆರಳನ್ನು ಬೀಳಿಸುವ ಯಾವುದೊ ವಿಷಯವಾಗಿರಬಾರದು. (ಧರ್ಮೋಪದೇಶಕಾಂಡ 16:15ನ್ನು ಹೋಲಿಸಿರಿ.) ಮಕ್ಕಳು ಸ್ವಾಭಾವಿಕವಾಗಿ ಉತ್ಸಾಹಪೂರಿತರೂ ಯಾವುದನ್ನು ಆಟ ಮತ್ತು ವಿನೋದಗಳಲ್ಲಿ ಬಿಡುಗಡೆ ಮಾಡಸಾಧ್ಯವಿದೆಯೊ ಅಂತಹ ಶಕ್ತಿಭರಿತರೂ ಆಗಿದ್ದಾರೆ. ಚೆನ್ನಾಗಿ ಆಯ್ದ ವಿನೋದವು ಹಾಸ್ಯಕ್ಕಿಂತ ಹೆಚ್ಚಿನದ್ದಾಗಿದೆ. ಒಂದು ಮಗುವು ಕಲಿತು ಪಕ್ವತೆಯನ್ನು ಪಡೆಯುವ ಮಾರ್ಗವು ಅದಾಗಿದೆ. ಎಲ್ಲದರಲ್ಲಿ—ವಿನೋದವನ್ನು ಸೇರಿಸಿ—ತನ್ನ ಮನೆವಾರ್ತೆಯ ಆವಶ್ಯಕತೆಗಳಿಗೆ ಒದಗಿಸಲು ಕುಟುಂಬದ ತಲೆಯು ಜವಾಬ್ದಾರನು. ಆದರೂ, ಸಮತೆಯು ಅಗತ್ಯ.

21. ಇಂದು ವಿನೋದದಲ್ಲಿ ಯಾವ ಅಪಾಯಗಳು ಅಸ್ತಿತ್ವದಲ್ಲಿವೆ?

21 ಈ ಕ್ಲಿಷ್ಟಕರವಾದ “ಕಡೇ ದಿವಸಗಳಲ್ಲಿ” ಮಾನವ ಸಮಾಜವು ಬೈಬಲಿನಲ್ಲಿ ಪ್ರವಾದಿಸಿರುವಂತೆಯೇ, “ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವ” ಜನರಿಂದ ತುಂಬಿದೆ. (2 ತಿಮೊಥೆಯ 3:1-5) ಅನೇಕರಿಗೆ, ವಿನೋದವು ಜೀವನದಲ್ಲಿ ಮುಖ್ಯ ವಿಷಯವಾಗಿದೆ. ಲಭ್ಯವಿರುವ ಮನೋರಂಜನೆಯು ಎಷ್ಟಿದೆಯೆಂದರೆ ಅದು ಹೆಚ್ಚು ಪ್ರಾಮುಖ್ಯ ವಿಷಯಗಳನ್ನು ಸುಲಭವಾಗಿ ಸ್ಥಾನಚ್ಯುತಿ ಮಾಡಬಲ್ಲದು. ಅಲ್ಲದೆ, ಹೆಚ್ಚಿನ ಆಧುನಿಕ ಮನೋರಂಜನೆಯು ಲೈಂಗಿಕ ದುರಾಚಾರ, ಹಿಂಸಾಚಾರ, ಅಮಲೌಷಧದ ದುರುಪಯೋಗ ಮತ್ತು ಇತರ ಘೋರವಾಗಿ ಹಾನಿಕರವಾಗಿರುವ ಆಚಾರಗಳಿಗೆ ಹೆಚ್ಚು ಪ್ರಾಧಾನ್ಯವನ್ನು ಕೊಡುತ್ತದೆ. (ಜ್ಞಾನೋಕ್ತಿ 3:31) ಹಾನಿಕರ ಮನೋರಂಜನೆಯಿಂದ ಯುವ ಜನರನ್ನು ಕಾಪಾಡಲು ಏನು ಮಾಡಸಾಧ್ಯವಿದೆ?

22. ವಿನೋದದ ವಿಷಯದಲ್ಲಿ ವಿವೇಕಪೂರ್ಣ ನಿರ್ಧಾರಗಳನ್ನು ಮಾಡುವಂತೆ, ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ತರಬೇತು ನೀಡಬಲ್ಲರು?

22 ಹೆತ್ತವರು ಮೇರೆಗಳನ್ನು ಮತ್ತು ನಿರ್ಬಂಧಗಳನ್ನು ಇಡುವುದು ಆವಶ್ಯಕ. ಆದರೆ ಅದಕ್ಕಿಂತಲೂ ಹೆಚ್ಚಾಗಿ, ಅವರು ತಮ್ಮ ಮಕ್ಕಳಿಗೆ ಯಾವ ವಿನೋದವು ಹಾನಿಕರವೆಂದು ತೀರ್ಮಾನಿಸಲು ಮತ್ತು ಎಷ್ಟು ವಿನೋದವು ತೀರ ಅತಿಯೆಂದು ತಿಳಿಯಲು ಕಲಿಸುವುದು ಆವಶ್ಯಕ. ಅಂತಹ ತರಬೇತಿಗೆ ಸಮಯ ಮತ್ತು ಪ್ರಯತ್ನವು ಹಿಡಿಯುತ್ತದೆ. ಒಂದು ಉದಾಹರಣೆಯನ್ನು ಪರಿಗಣಿಸಿರಿ. ತನ್ನ ಹಿರಿಯ ಮಗನು ಒಂದು ಹೊಸ ರೇಡಿಯೊ ಪ್ರಸಾರ ಕೇಂದ್ರಕ್ಕೆ ತೀರ ಪದೇ ಪದೇ ಕಿವಿಗೊಡುತ್ತಾನೆಂದು ಇಬ್ಬರು ಗಂಡುಮಕ್ಕಳ ತಂದೆಯು ಗಮನಿಸಿದನು. ಒಂದು ದಿನ ಕೆಲಸಕ್ಕೆ ತನ್ನ ಟ್ರಕ್ಕನ್ನು ನಡೆಸುತ್ತಿದ್ದಾಗ, ಆ ತಂದೆ ಅದೇ ಪ್ರಸಾರ ಕೇಂದ್ರಕ್ಕೆ ಅಳವಡಿಸಿದನು. ಆಗಾಗ ಅವನು ನಿಂತು ನಿರ್ದಿಷ್ಟ ಹಾಡುಗಳ ಲಹರಿಗಳನ್ನು ಬರೆದಿಟ್ಟನು. ಆಮೇಲೆ ಅವನು ತನ್ನ ಗಂಡುಮಕ್ಕಳ ಸಂಗಡ ಕುಳಿತುಕೊಂಡು ತಾನು ಕೇಳಿದ್ದುದನ್ನು ಚರ್ಚಿಸಿದನು. ಅವನು “ನೀನು ಏನು ನೆನಸುತ್ತೀ?” ಎಂಬುದರಿಂದ ಆರಂಭವಾದ ದೃಷ್ಟಿಕೋನ ಪ್ರಶ್ನೆಗಳನ್ನು ಕೇಳಿ, ಅವರ ಉತ್ತರಗಳಿಗೆ ತಾಳ್ಮೆಯಿಂದ ಕಿವಿಗೊಟ್ಟನು. ಬೈಬಲನ್ನು ಉಪಯೋಗಿಸುತ್ತ ಆ ವಿಷಯವನ್ನು ಚರ್ಚಿಸಿದ ಬಳಿಕ, ಆ ಹುಡುಗರು, ತಾವು ಇನ್ನು ಮುಂದೆ ಆ ಪ್ರಸಾರ ಕೇಂದ್ರಕ್ಕೆ ಕಿವಿಗೊಡದಿರಲು ಸಮ್ಮತಿಸಿದರು.

23. ಅಹಿತಕರವಾದ ಮನೋರಂಜನೆಯಿಂದ ಹೆತ್ತವರು ತಮ್ಮ ಮಕ್ಕಳನ್ನು ಹೇಗೆ ಸಂರಕ್ಷಿಸಬಹುದು?

23 ವಿವೇಕಿಗಳಾದ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ರುಚಿಸುವ ಸಂಗೀತ, ಟಿವಿ ಕಾರ್ಯಕ್ರಮಗಳು, ವಿಡಿಯೊ ಟೇಪ್‌ಗಳು, ಕಾಮಿಕ್‌ ಪುಸ್ತಕಗಳು, ವಿಡಿಯೊ ಆಟಗಳು ಮತ್ತು ಚಲನಚಿತ್ರಗಳನ್ನು ಪರೀಕ್ಷಿಸುತ್ತಾರೆ. ಅವರು ಹೊದಿಕೆಯಲ್ಲಿರುವ ಚಿತ್ರ, ಲಹರಿಗಳು ಮತ್ತು ಪ್ಯಾಕೆಜಿಂಗ್‌ಗಳನ್ನು ನೋಡಿ, ವಾರ್ತಾಪತ್ರ ವಿಮರ್ಶೆಗಳನ್ನು ಓದಿ, ಉದ್ಧರಿಸಿದ ಭಾಗಗಳನ್ನು ಪ್ರೇಕ್ಷಿಸುತ್ತಾರೆ. ಅನೇಕರು ಇಂದು ಮಕ್ಕಳ ಕಡೆಗೆ ನಿರ್ದೇಶಿಸಿರುವ “ಮನೋರಂಜನೆ”ಯಿಂದ ತಲ್ಲಣಗೊಳ್ಳುತ್ತಾರೆ. ಅಶುದ್ಧ ಪ್ರಭಾವಗಳಿಂದ ತಮ್ಮ ಮಕ್ಕಳನ್ನು ಸಂರಕ್ಷಿಸಲಿಚ್ಛಿಸುವವರು, ತಮ್ಮ ಕುಟುಂಬದೊಂದಿಗೆ ಕುಳಿತುಕೊಂಡು, ಬೈಬಲನ್ನೂ ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್‌) ಎಂಬ ಪುಸ್ತಕದಂತಹ ಮತ್ತು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಲೇಖನಗಳಂತಹ ಬೈಬಲಾಧಾರಿತ ಪ್ರಕಾಶನಗಳನ್ನೂ ಉಪಯೋಗಿಸಿ ಅಪಾಯಗಳನ್ನು ಚರ್ಚಿಸುತ್ತಾರೆ.c ಹೆತ್ತವರು ದೃಢವಾದ ಮೇರೆಗಳನ್ನು ಇಟ್ಟು, ಸುಸಂಗತರೂ ನ್ಯಾಯಸಮ್ಮತರೂ ಆಗಿರುವಾಗ, ಅವರು ಸಾಧಾರಣವಾಗಿ ಉತ್ತಮ ಫಲಿತಾಂಶಗಳನ್ನು ನೋಡುತ್ತಾರೆ.—ಮತ್ತಾಯ 5:37; ಫಿಲಿಪ್ಪಿ 4:5.

24, 25. ಕುಟುಂಬಗಳು ಒಂದುಗೂಡಿ ಆನಂದಿಸಸಾಧ್ಯವಿರುವ ವಿನೋದದ ಕೆಲವು ಹಿತರಕವಾದ ರೂಪಗಳಾವುವು?

24 ವಿನೋದದ ಹಾನಿಕರ ರೂಪಗಳನ್ನು ನಿರ್ಬಂಧಿಸುವುದು ಕದನದ ಒಂದು ಅಂಶ ಮಾತ್ರ ಎಂಬುದು ನಿಶ್ಚಯ. ಕೆಟ್ಟದ್ದನ್ನು ಒಳ್ಳೆಯದರಿಂದ ಪ್ರತಿರೋಧಿಸಲೇಬೇಕು, ಇಲ್ಲವಾದರೆ ಮಕ್ಕಳು ಕೆಟ್ಟ ಪಥಕ್ಕೆ ತೇಲಿಕೊಂಡು ಹೋದಾರು. ಅನೇಕ ಕ್ರೈಸ್ತ ಕುಟುಂಬಗಳಿಗೆ ಕೂಡಿ ಆನಂದಿಸಿದ ವಿನೋದವು—ವನ ಭೋಜನ, ನಾಡು ಸುತ್ತುವುದು, ಬೀಡು ಬಿಡುವುದು, ಆಟ ಮತ್ತು ಕ್ರೀಡೆಗಳನ್ನು ಆಡುವುದು ಮತ್ತು ಸಂಬಂಧಿಗಳನ್ನು ಅಥವಾ ಸ್ನೇಹಿತರನ್ನು ಭೇಟಿಮಾಡುವುದು—ಅಗಣಿತ ಹೃದಯೋಲ್ಲಾಸದ ಮತ್ತು ಸಂತೋಷದ ಸ್ಮರಣೆಗಳಿವೆ. ಮನೋರಂಜನೆಗಾಗಿ ಕೇವಲ ಗಟ್ಟಿಯಾಗಿ ಕೂಡಿ ಓದುವುದು ಸುಖಾನುಭವ ಮತ್ತು ಸಾಂತ್ವನದ ಮಹಾ ಮೂಲವೆಂದು ಕೆಲವರು ಕಂಡುಕೊಂಡಿದ್ದಾರೆ. ಇತರರು ಹಾಸ್ಯರಸದ ಅಥವಾ ಅಭಿರುಚಿಯ ಕಥೆಗಳನ್ನು ಹೇಳುವುದರಲ್ಲಿ ಸಂತೋಷಿಸುತ್ತಾರೆ. ಇನ್ನಿತರರು ಒಟ್ಟುಗೂಡಿ ಹವ್ಯಾಸಗಳನ್ನು, ಉದಾಹರಣೆಗಾಗಿ, ಮರಗೆಲಸ ಮತ್ತು ಬೇರೆ ವೃತ್ತಿಗಳು ಹಾಗೂ ಸಂಗೀತ ಉಪಕರಣಗಳನ್ನು ನುಡಿಸುವುದು, ವರ್ಣಚಿತ್ರ ಬರೆಯುವುದು ಅಥವಾ ದೇವರ ಸೃಷ್ಟಿಗಳನ್ನು ಅಧ್ಯಯನ ಮಾಡುವುದನ್ನು ವಿಕಸಿಸಿಕೊಂಡಿದ್ದಾರೆ. ಇಂತಹ ಮನೋರಂಜನೆಗಳಲ್ಲಿ ಆನಂದಿಸಲು ಕಲಿಯುವ ಮಕ್ಕಳು ಹೆಚ್ಚಿನ ಅಶುದ್ಧ ಮನೋರಂಜನೆಗಳಿಂದ ಸಂರಕ್ಷಿಸಲ್ಪಡುತ್ತಾರೆ ಮತ್ತು ವಿನೋದಕ್ಕೆ ಕೇವಲ ಜಡವಾಗಿ ಕುಳಿತು ಮನೋರಂಜಿಸಲ್ಪಡುವುದಕ್ಕಿಂತ ಹೆಚ್ಚಿನದಿದೆಯೆಂದು ಅವರು ಕಲಿಯುತ್ತಾರೆ. ಅನೇಕ ವೇಳೆ, ಭಾಗವಹಿಸುವುದು ಅವಲೋಕಿಸುವುದಕ್ಕಿಂತ ಹೆಚ್ಚು ಮನೋರಂಜಕವಾಗಿದೆ.

25 ಸಾಮಾಜಿಕ ನೆರವಿಗಳೂ ವಿನೋದದ ಪ್ರತಿಫಲದಾಯಕ ರೂಪವಾಗಿರಬಲ್ಲವು. ಅವುಗಳಿಗೆ ಒಳ್ಳೆಯ ಮೇಲ್ವಿಚಾರಣೆಯಿರುವಾಗ ಮತ್ತು ಅವು ವಿಪರೀತ ದೊಡ್ಡವು ಅಥವಾ ಸಮಯ ವ್ಯಯಿಸುವಂತಹವುಗಳು ಆಗಿರದಿರುವಾಗ, ಅವು ನಿಮ್ಮ ಮಕ್ಕಳಿಗೆ ಕೇವಲ ಮನೋರಂಜನೆಗಿಂತ ಹೆಚ್ಚಿನದನ್ನು ಕೊಡಬಲ್ಲವು. ಅವು ಸಭೆಯಲ್ಲಿ ಪ್ರೀತಿಯ ಬಂಧಗಳನ್ನು ಅಗಾಧವಾಗಿಸಲು ಸಹಾಯ ಮಾಡಬಲ್ಲವು.—ಹೋಲಿಸಿ ಲೂಕ 14:13, 14; ಯೂದ 12.

ನಿಮ್ಮ ಕುಟುಂಬವು ಜಗತ್ತನ್ನು ಜಯಿಸಬಲ್ಲದು

26. ಕುಟುಂಬವನ್ನು ಅಹಿತಕರವಾದ ಪ್ರಭಾವಗಳಿಂದ ಸಂರಕ್ಷಿಸುವ ಸಂಬಂಧದಲ್ಲಿ, ಅತ್ಯಂತ ಪ್ರಮುಖ ಗುಣವು ಯಾವುದಾಗಿದೆ?

26 ನಿಮ್ಮ ಕುಟುಂಬವನ್ನು ಜಗತ್ತಿನ ನಾಶಕಾರಕ ಪ್ರಭಾವಗಳಿಂದ ಸಂರಕ್ಷಿಸಲು ಹೆಚ್ಚು ಶ್ರಮದ ಕೆಲಸವು ಆವಶ್ಯಕವೆಂಬುದು ನಿಸ್ಸಂದೇಹ. ಆದರೆ ಬೇರೆ ಯಾವುದಕ್ಕಿಂತಲೂ ಹೆಚ್ಚಾಗಿ, ಯಶಸ್ವಿಯನ್ನು ಸಾಧ್ಯಮಾಡುವ ಒಂದು ವಿಷಯವಿದೆ. ಅದು ಪ್ರೀತಿಯೇ! ನಿಕಟವಾದ ಪ್ರೀತಿಯ ಕುಟುಂಬ ಬಂಧಗಳು ನಿಮ್ಮ ಮನೆಯನ್ನು ಒಂದು ಸುಭದ್ರ ಆಶ್ರಯಸ್ಥಾನವಾಗಿ ಮಾಡಿ, ಕೆಟ್ಟ ಪ್ರಭಾವಗಳಿಂದ ರಕ್ಷಿಸುವ ಒಂದು ಮಹಾ ಸಂರಕ್ಷಣೆಯಾಗಿರುವ ಸಂವಾದವನ್ನು ಪ್ರವರ್ಧಿಸುವವು. ಅಲ್ಲದೆ, ಇನ್ನೊಂದು ರೀತಿಯ ಪ್ರೀತಿ—ಯೆಹೋವನ ಪ್ರೀತಿ—ಯನ್ನು ಬೆಳೆಸುವುದು ಇನ್ನೂ ಹೆಚ್ಚು ಪ್ರಾಮುಖ್ಯ. ಇಂತಹ ಪ್ರೀತಿಯು ಕುಟುಂಬದಲ್ಲಿ ವ್ಯಾಪಿಸುವಾಗ, ಮಕ್ಕಳು ಲೌಕಿಕ ಪ್ರಭಾವಗಳ ವಶವಾಗುವ ಮೂಲಕ ಯೆಹೋವನನ್ನು ಅಪ್ರಸನ್ನಗೊಳಿಸುವ ಆ ಕಲ್ಪನೆಯನ್ನೇ ದ್ವೇಷಿಸುವವರಾಗಿ ಬೆಳೆಯುವುದು ಹೆಚ್ಚು ಸಂಭವನೀಯ. ಮತ್ತು ಯೆಹೋವನನ್ನು ಹೃದಯದಿಂದ ಪ್ರೀತಿಸುವ ಹೆತ್ತವರು ಆತನ ಪ್ರೀತಿಯ, ನ್ಯಾಯಸಮ್ಮತವಾದ, ಸಮತೆಯ ವ್ಯಕ್ತಿತ್ವವನ್ನು ಅನುಕರಿಸಲು ಪ್ರಯತ್ನಿಸುವರು. (ಎಫೆಸ 5:1; ಯಾಕೋಬ 3:17) ಹೆತ್ತವರು ಅದನ್ನು ಮಾಡುವುದಾದರೆ, ಅವರ ಮಕ್ಕಳು ಯೆಹೋವನ ಆರಾಧನೆಯನ್ನು, ಅದು ಮಾಡಲು ಅನುಮತಿಯಿಲ್ಲದ ವಿಷಯಗಳ ಕೇವಲ ಒಂದು ಪಟ್ಟಿಯಾಗಿದೆ ಎಂಬುದಾಗಿ ವೀಕ್ಷಿಸಲು ಅಥವಾ ತಾವು ಆದಷ್ಟು ಬೇಗನೆ ಯಾವುದರಿಂದ ಓಡಿಹೋಗಲು ಬಯಸುತ್ತೇವೊ ಆ ಮನೋರಂಜನೆ ಮತ್ತು ನಗೆರಹಿತವಾದ ಜೀವನ ರೀತಿಯೆಂದು ವೀಕ್ಷಿಸಲು ಯಾವ ಕಾರಣವೂ ಇಲ್ಲದಿರುವುದು. ಬದಲಿಗೆ, ದೇವರನ್ನು ಆರಾಧಿಸುವುದು ಸಾಧ್ಯವಿರುವುದರಲ್ಲಿ ಅತಿ ಸಂತೋಷದ, ಅತ್ಯಂತ ಪೂರ್ತಿಯ ಜೀವನ ರೀತಿಯೆಂದು ಅವರು ನೋಡುವರು.

27. ಒಂದು ಕುಟುಂಬವು ಲೋಕವನ್ನು ಹೇಗೆ ಜಯಿಸಬಲ್ಲದು?

27 ದೇವರಿಗೆ ಸಂತೋಷದ, ಸಮತೆಯ ಸೇವೆಯಲ್ಲಿ ಐಕ್ಯರಾಗಿದ್ದು, ಈ ಲೋಕದ ಭ್ರಷ್ಟಗೊಳಿಸುವ ಪ್ರಭಾವಗಳಿಂದ “ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ” ಉಳಿಯಲು ಪೂರ್ಣಹೃದಯದಿಂದ ಪ್ರಯತ್ನಿಸುವ ಕುಟುಂಬಗಳು ಯೆಹೋವನಿಗೆ ಒಂದು ಆನಂದದ ಆಕರವಾಗಿವೆ. (2 ಪೇತ್ರ 3:14; ಜ್ಞಾನೋಕ್ತಿ 27:11) ಇಂತಹ ಕುಟುಂಬಗಳು, ಮಲಿನಗೊಳಿಸಲು ಸೈತಾನನ ಲೋಕದಿಂದ ಬಂದ ಪ್ರತಿಯೊಂದು ಪ್ರಯತ್ನವನ್ನು ಯಾರು ಪ್ರತಿಭಟಿಸಿದನೊ ಆ ಯೇಸು ಕ್ರಿಸ್ತನ ಹೆಜ್ಜೆಜಾಡುಗಳನ್ನು ಅನುಸರಿಸುತ್ತವೆ. ತನ್ನ ಮಾನವ ಜೀವಿತದ ಅಂತ್ಯದಲ್ಲಿ ಯೇಸುವು, “ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಹೇಳಶಕ್ತನಾದನು. (ಯೋಹಾನ 16:33) ನಿಮ್ಮ ಕುಟುಂಬವೂ ಲೋಕವನ್ನು ಜಯಿಸಿ ನಿತ್ಯವಾದ ಜೀವವನ್ನು ಅನುಭವಿಸುವಂತಾಗಲಿ!

a ಸಂಪೂರಕ ವಿದ್ಯಾಭ್ಯಾಸದ ಕುರಿತ ಚರ್ಚೆಗಾಗಿ, ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಪ್ರಕಾಶಿತವಾದ, ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ (ಇಂಗ್ಲಿಷ್‌) ಎಂಬ ಬ್ರೋಷರ್‌ನ 4-7ನೆಯ ಪುಟಗಳನ್ನು ನೋಡಿ.

b “ನಗುವ” ಎಂದು ಇಲ್ಲಿ ಭಾಷಾಂತರಿಸಲಾಗಿರುವ ಹೀಬ್ರು ಪದವನ್ನು, ಬೇರೆ ರೂಪಗಳಲ್ಲಿ, “ಆಡುವ,” “ವಿನೋದಪಡಿಸುವ,” “ಆಚರಿಸುವ,” ಅಥವಾ “ಹಾಸ್ಯವಾಡುವ” ಎಂದೂ ಭಾಷಾಂತರಿಸಸಾಧ್ಯವಿದೆ.

c ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಪ್ರಕಾಶಿತ.

ನಿಮ್ಮ ಕುಟುಂಬವನ್ನು ಸಂರಕ್ಷಿಸಲಿಕ್ಕಾಗಿ . . . ಈ ಬೈಬಲ್‌ ಮೂಲತತ್ವಗಳು ಹೇಗೆ ಸಹಾಯ ಮಾಡಬಲ್ಲವು?

ಜ್ಞಾನವು ವಿವೇಕಕ್ಕೆ ನಡೆಸುತ್ತದೆ, ಇದು ವ್ಯಕ್ತಿಯೊಬ್ಬನನ್ನು ಜೀವಂತವಾಗಿ ಉಳಿಸಬಲ್ಲದು.—ಪ್ರಸಂಗಿ 7:12.

“ಇಹಲೋಕ ಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ.”—1 ಕೊರಿಂಥ 3:19.

ಕೆಟ್ಟ ಸಹವಾಸವನ್ನು ವರ್ಜಿಸತಕ್ಕದ್ದು.—1 ಕೊರಿಂಥ 15:33.

ವಿನೋದಕ್ಕೆ ಅದರದ್ದೇ ಆದ ಸ್ಥಾನವಿರುವಾಗ, ಅದು ನಿಯಂತ್ರಿಸಲ್ಪಡಬೇಕು.—ಪ್ರಸಂಗಿ 3:4.

ಅವನಿಗೆ ವಂಚಿತನಾದ ಅನಿಸಿಕೆ ಆಗಲಿಲ್ಲ

ಕ್ರೈಸ್ತ ಹೆತ್ತವರಾದ ಪಾಲ್‌ ಮತ್ತು ಅವನ ಹೆಂಡತಿಯಾದ ಲೂಆ್ಯನ್‌, ತಮ್ಮ ಮನೆಯಲ್ಲಿ ಆಗಿಂದಾಗ್ಗೆ ಗೋಷ್ಠಿಗಳನ್ನು ಏರ್ಪಡಿಸುತ್ತಾರೆ. ಆ ಗೋಷ್ಠಿಗಳು ಒಳ್ಳೆಯ ಮೇಲ್ವಿಚಾರಣೆಯನ್ನು ಪಡೆದವುಗಳಾಗಿದ್ದು, ನಿಭಾಯಿಸಸಾಧ್ಯವಿರುವಷ್ಟು ಗಾತ್ರದವುಗಳಾಗಿವೆಯೆಂಬುದನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ. ತಮ್ಮ ಮಕ್ಕಳು ಪ್ರಯೋಜನ ಪಡೆಯುತ್ತಾರೆಂಬುದನ್ನು ನಂಬಲು ಅವರಿಗೆ ಸಕಾರಣವಿದೆ.

ಲೂಆ್ಯನ್‌ ಹೇಳುವುದು: “ಎರಿಕ್‌ ಪ್ರತ್ಯೇಕವಾಗಿ ಕುಳಿತುಕೊಂಡು, ತರಗತಿಯ ಜನ್ಮದಿನಾಚರಣೆಯ ಪಾರ್ಟಿಗಳಲ್ಲಿ ಜೊತೆಗೂಡದ ಕಾರಣದಿಂದ ತಾನು ಅವನ ಕುರಿತಾಗಿ ಮರುಕಪಟ್ಟೆನೆಂದು ಹೇಳಲಿಕ್ಕಾಗಿ, ನನ್ನ ಆರು ವರ್ಷ ಪ್ರಾಯದ ಮಗನಾದ ಎರಿಕ್‌ನ ಶಾಲಾ ಸಹಪಾಠಿಯೊಬ್ಬನ ತಾಯಿಯು ನನ್ನನ್ನು ಸಮೀಪಿಸಿದಳು. ನಾನು ಅವಳಿಗೆ ಹೇಳಿದ್ದು: ‘ಆ ರೀತಿಯಲ್ಲಿ ನೀವು ನನ್ನ ಮಗನ ಕುರಿತಾಗಿ ಕಾಳಜಿ ವಹಿಸುತ್ತೀರೆಂಬುದನ್ನು ನಾನು ನಿಜವಾಗಿಯೂ ಗಣ್ಯಮಾಡುತ್ತೇನೆ. ನೀವು ಯಾವ ರೀತಿಯ ವ್ಯಕ್ತಿಯಾಗಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ. ಮತ್ತು ತಾನು ವಂಚಿತನಾಗಿದ್ದೇನೆಂದು ಎರಿಕ್‌ ಭಾವಿಸುವುದಿಲ್ಲ ಎಂಬುದನ್ನು ನಿಮಗೆ ಮನಗಾಣಿಸುವಂತೆ ನಾನು ಹೇಳಸಾಧ್ಯವಿರುವ ಯಾವುದೇ ವಿಷಯವು ಬಹುಶಃ ಇಲ್ಲ.’ ಅವಳು ಒಪ್ಪಿಕೊಂಡಳು. ಆದುದರಿಂದ ನಾನು ಹೇಳಿದ್ದು: ‘ಹಾಗಾದರೆ ದಯವಿಟ್ಟು, ನಿಮಗೋಸ್ಕರವಾಗಿಯೇ ನಿಮ್ಮ ಮನಸ್ಸನ್ನು ಸಮಾಧಾನಗೊಳಿಸಿಕೊಳ್ಳಿ ಮತ್ತು ಅವನಿಗೆ ಹೇಗನಿಸುತ್ತದೆಂಬುದನ್ನು ನೀವೇ ಎರಿಕ್‌ನೊಂದಿಗೆ ಕೇಳಿರಿ.’ ನಾನು ಅಲ್ಲಿರದಿದ್ದಾಗ ಅವಳು ಎರಿಕ್‌ಗೆ ಕೇಳಿದ್ದು, ‘ಈ ಒಳ್ಳೆಯ ಜನ್ಮದಿನಾಚರಣೆಯ ಗೋಷ್ಠಿಗಳಿಗೆ ತಪ್ಪುವುದರಿಂದ ನಿನಗೆ ಅಭ್ಯಂತರವಿಲ್ಲವೆ?’ ಅವನು ಅವಳ ಕಡೆಗೆ ನೋಡಿ ಆಶ್ಚರ್ಯಗೊಂಡು ಹೇಳಿದ್ದು: ‘ಹತ್ತು ನಿಮಿಷಗಳು, ಕೆಲವೊಂದು ಕೇಕ್‌ಗಳು, ಮತ್ತು ಒಂದು ಹಾಡು ಒಂದು ಪಾರ್ಟಿಯನ್ನು ರೂಪಿಸುತ್ತವೆಂದು ನೀವು ಆಲೋಚಿಸುತ್ತೀರೊ? ನೀವು ನಮ್ಮ ಮನೆಗೆ ಬಂದು, ನಿಜವಾದ ಒಂದು ಪಾರ್ಟಿಯು ಹೇಗಿರುತ್ತದೆಂಬುದನ್ನು ನೋಡಬೇಕು!’” ತಾನು ವಂಚಿತನು ಅಥವಾ ನಷ್ಟಪಟ್ಟೆನೆಂಬ ಅನಿಸಿಕೆ ಅವನಿಗೆ ಆಗಲಿಲ್ಲ ಎಂಬುದನ್ನು, ಆ ಹುಡುಗನ ಮುಗ್ಧ ಹುರುಪು ಸ್ಪಷ್ಟಪಡಿಸಿತು!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ