ಹೆತ್ತವರೇ, ನಿಮ್ಮ ಮಕ್ಕಳಲ್ಲಿ ಆನಂದವನ್ನು ಕಂಡುಕೊಳ್ಳಿರಿ
“ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ.”—ಜ್ಞಾನೋಕ್ತಿ 23:25.
1. ಹೆತ್ತವರಿಗೆ ತಮ್ಮ ಮಕ್ಕಳಲ್ಲಿ ಆನಂದವನ್ನು ಕಂಡುಕೊಳ್ಳುವಂತೆ ಯಾವುದು ಮಾಡುತ್ತದೆ?
ಸಸಿಯೊಂದು ಬೆಳೆದು, ಸೌಂದರ್ಯ ಹಾಗೂ ನೆರಳನ್ನು ಒದಗಿಸುವ ಒಂದು ಭವ್ಯವಾದ ಮರವಾಗುವುದನ್ನು—ವಿಶೇಷವಾಗಿ ನೀವು ಅದನ್ನು ನೆಟ್ಟು, ಅದರ ಕಾಳಜಿ ವಹಿಸಿದ್ದರೆ—ನೋಡುವುದು, ಎಷ್ಟು ಉತ್ತಮವಾಗಿದೆ! ತದ್ರೀತಿಯಲ್ಲಿ, ದೇವರ ಪಕ್ವವಾದ ಸೇವಕರಾಗಿ ಬೆಳೆಯುವ ಮಕ್ಕಳಿಗಾಗಿ ಕಾಳಜಿ ವಹಿಸುವ ಹೆತ್ತವರು, ಅವರಲ್ಲಿ ಮಹಾ ಆನಂದವನ್ನು ಕಂಡುಕೊಳ್ಳುತ್ತಾರೆ. ಅದು ಬೈಬಲಿನ ಈ ಜ್ಞಾನೋಕ್ತಿಯು ಹೇಳುವಂತಿದೆ: “ಧರ್ಮಿಯ [“ನೀತಿವಂತನ,” NW] ತಂದೆಯು ಅತಿ ಸಂತೋಷಪಡುವನು; ಜ್ಞಾನಿಯನ್ನು ಹೆತ್ತವನು ಅವನಲ್ಲಿ ಆನಂದಿಸುವನು. ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ, ನಿನ್ನನ್ನು ಹೆತ್ತವಳು ಆನಂದಪಡಲಿ.”—ಜ್ಞಾನೋಕ್ತಿ 23:24, 25.
2, 3. (ಎ) ಹೆತ್ತವರು ವ್ಯಥೆ ಮತ್ತು ಕರಕರೆಯನ್ನು ಹೇಗೆ ದೂರವಿರಿಸಬಲ್ಲರು? (ಬಿ) ಆನಂದದ ಒಂದು ಮೂಲವಾಗುವ ಸಲುವಾಗಿ, ಸಸಿಗಳಿಗೆ ಮತ್ತು ಮಕ್ಕಳಿಗೆ—ಇಬ್ಬರಿಗೂ—ಯಾವುದರ ಅಗತ್ಯವಿದೆ?
2 ಆದರೂ, ಮಗುವೊಂದು ಅಪ್ರಯತ್ನವಾಗಿ “ನೀತಿವಂತ” ಹಾಗೂ “ಜ್ಞಾನಿ” ಆಗುವುದಿಲ್ಲ. ಸಸಿಯೊಂದನ್ನು ಭವ್ಯವಾದ ಮರವಾಗಿ ಪರಿವರ್ತಿಸುವುದರಲ್ಲಿ ಪರಿಶ್ರಮವು ಒಳಗೂಡಿರುವಂತೆಯೇ, ಎಳೆಯ ಮಕ್ಕಳನ್ನು “ವ್ಯಥೆ” ಮತ್ತು “ಕರಕರೆ”ಯ ಮೂಲವಾಗುವುದರಿಂದ ತಡೆಯಲು ಬಹಳಷ್ಟು ಪ್ರಯತ್ನವು ಅಗತ್ಯವಾಗಿದೆ. (ಜ್ಞಾನೋಕ್ತಿ 17:21, 25) ಉದಾಹರಣೆಗೆ, ಎಳೆಯ ಸಸಿಯು ನೇರವಾಗಿ ಮತ್ತು ಬಲಿಷ್ಠವಾಗಿ ಬೆಳೆಯುವಂತೆ ಆಧಾರ ಗೂಟಗಳು ನಿಯಂತ್ರಿಸಬಲ್ಲವು. ಕ್ರಮವಾದ ನೀರಿನ ಸರಬರಾಯಿಯು ಅತ್ಯಾವಶ್ಯಕವಾಗಿದೆ, ಮತ್ತು ಸಸಿಯೊಂದನ್ನು ಕೀಟಗಳಿಂದ ರಕ್ಷಿಸಬೇಕಾಗಬಹುದು. ಅಂತಿಮವಾಗಿ, ಸೌಂದರ್ಯದ ಒಂದು ಮರವನ್ನು ಬೆಳೆಸಲು ಸವರುವಿಕೆಯು ಸಹಾಯಮಾಡುತ್ತದೆ.
3 ಮಕ್ಕಳಿಗೆ ದೈವಭಕ್ತಿಯ ತರಬೇತು, ಬೈಬಲ್ ಸತ್ಯದ ನೀರಿನಿಂದ ನೆನೆಯಿಸುವಿಕೆ, ನೈತಿಕ ಅಪಪ್ರಯೋಗಗಳಿಂದ ಸಂರಕ್ಷಣೆ, ಮತ್ತು ಅನಪೇಕ್ಷಣೀಯ ಗುಣಗಳನ್ನು ಕತ್ತರಿಸಿ ಹಾಕಲು ಪ್ರೀತಿಪರ ಶಿಸ್ತಿನಂತಹ ವಿಷಯಗಳು ಅಗತ್ಯವೆಂಬುದಾಗಿ ದೇವರ ವಾಕ್ಯವು ಪ್ರಕಟಿಸುತ್ತದೆ. ಈ ಆವಶ್ಯಕತೆಗಳನ್ನು ಪೂರೈಸಲು, ತಮ್ಮ ಮಕ್ಕಳನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” (NW) ಬೆಳೆಸುವಂತೆ, ವಿಶೇಷವಾಗಿ ತಂದೆಗಳು ಪ್ರೇರೇಪಿಸಲ್ಪಡುತ್ತಾರೆ. (ಎಫೆಸ 6:4) ಇದು ಏನನ್ನು ಒಳಗೊಳ್ಳುತ್ತದೆ?
ಯೆಹೋವನ ಮಾತುಗಳ ಮೇಲೆ ಒತ್ತು
4. ತಮ್ಮ ಮಕ್ಕಳ ಕಡೆಗೆ ಹೆತ್ತವರಿಗೆ ಯಾವ ಜವಾಬ್ದಾರಿಯಿದೆ, ಮತ್ತು ಅದನ್ನು ಅವರು ನೆರವೇರಿಸುವ ಮೊದಲು ಏನು ಆವಶ್ಯಕವಾಗಿದೆ?
4 “ಯೆಹೋವನ ವಿಷಯವಾದ ಮಾನಸಿಕ ಕ್ರಮಪಡಿಸುವಿಕೆ” ಎಂದರೆ, ಯೆಹೋವನ ಚಿತ್ತಕ್ಕೆ ಅನುಗುಣವಾಗುವಂತೆ ನಮ್ಮ ಆಲೋಚನೆಯನ್ನು ಕ್ರಮಪಡಿಸುವುದು. ಹಾಗಾದರೆ, ಹೆತ್ತವರು ತಮ್ಮ ಚಿಕ್ಕ ಮಕ್ಕಳ ಮನಸ್ಸುಗಳಲ್ಲಿ, ವಿಷಯಗಳ ಕುರಿತು ಯೆಹೋವನ ಆಲೋಚನೆಯನ್ನು ತುಂಬಿಸಬೇಕು. ಮತ್ತು ಅವರು ಸಹಾನುಭೂತಿಯುಳ್ಳ ಶಿಸ್ತು, ಅಥವಾ ಸರಿಪಡಿಸುವ ತರಬೇತಿಯನ್ನು ಒದಗಿಸುವ ದೇವರ ಮಾದರಿಯನ್ನೂ ಅನುಕರಿಸಬೇಕು. (ಕೀರ್ತನೆ 103:10, 11; ಜ್ಞಾನೋಕ್ತಿ 3:11, 12) ಆದರೆ ಹೆತ್ತವರು ಇದನ್ನು ಮಾಡಸಾಧ್ಯವಿರುವ ಮೊದಲು, ಸ್ವತಃ ಅವರು ಯೆಹೋವನ ಮಾತುಗಳನ್ನು ಅಂತರ್ಗತಮಾಡಿಕೊಳ್ಳಬೇಕು. ಅದು ಪ್ರಾಚೀನ ಇಸ್ರಾಯೇಲ್ಯರಿಗೆ ದೇವರ ಪ್ರವಾದಿಯಾದ ಮೋಶೆಯು ಬುದ್ಧಿಹೇಳಿದಂತಿದೆ: “ನಾನು ಈಗ ನಿಮಗೆ ತಿಳಿಸುವ [ಯೆಹೋವನಿಂದ ಬಂದ] ಮಾತುಗಳು ನಿಮ್ಮ ಹೃದಯದಲ್ಲಿರಬೇಕು.” (ಓರೆಅಕ್ಷರಗಳು ನಮ್ಮವು.)—ಧರ್ಮೋಪದೇಶಕಾಂಡ 6:6.
5. ಯಾವಾಗ ಮತ್ತು ಯಾವ ವಿಧದಲ್ಲಿ ಇಸ್ರಾಯೇಲ್ಯ ಹೆತ್ತವರು ತಮ್ಮ ಮಕ್ಕಳಿಗೆ ಉಪದೇಶ ನೀಡಬೇಕಿತ್ತು, ಮತ್ತು ‘ಬೇರೂರಿಸು’ವುದರ ಅರ್ಥವೇನು?
5 ಮೋಶೆ ಮುಂದೆ ಆಜ್ಞಾಪಿಸಿದ್ದನ್ನು ಮಾಡುವಂತೆ, ಬೈಬಲಿನ ಕ್ರಮವಾದ ಅಧ್ಯಯನ, ಮನನ, ಮತ್ತು ಪ್ರಾರ್ಥನೆ ಹೆತ್ತವರನ್ನು ಸಜ್ಜುಗೊಳಿಸುತ್ತವೆ: “ಇವುಗಳನ್ನು [ಯೆಹೋವನ ಮಾತುಗಳನ್ನು] ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ [“ಬೇರೂರಿಸಿ,” NW] ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” ‘ಬೇರೂರಿಸು’ ಎಂಬುದಾಗಿ ಭಾಷಾಂತರಿಸಲ್ಪಟ್ಟ ಹೀಬ್ರು ಪದದ ಅರ್ಥವು, “ಪುನರಾವೃತ್ತಿಸು,” “ಪದೇ ಪದೇ ಹೇಳು,” “ಸ್ಪಷ್ಟವಾಗಿ ಅಚ್ಚೊತ್ತು” ಎಂದಾಗಿದೆ. ಯೆಹೋವನ ಮಾತುಗಳನ್ನು ಎದ್ದುಕಾಣುವಂತೆ ಇಡುವ ಅಗತ್ಯವನ್ನು ಮೋಶೆ ಇನ್ನೂ ಹೆಚ್ಚಾಗಿ ಒತ್ತಿಹೇಳಿದ್ದು ಹೇಗೆಂದು ಗಮನಿಸಿರಿ: “ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು; ಇವು ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತೆ ಇರಬೇಕು. ನಿಮ್ಮ ಮನೆಬಾಗಲಿನ ನಿಲುವು ಪಟ್ಟಿಗಳಲ್ಲಿಯೂ ತಲೆಬಾಗಲುಗಳ ಮೇಲೆಯೂ ಇವುಗಳನ್ನು ಬರೆಯಬೇಕು.” ಸ್ಪಷ್ಟವಾಗಿಯೇ, ತಮ್ಮ ಮಕ್ಕಳಿಗೆ ಕ್ರಮವಾದ, ಪ್ರೀತಿಪರ ಗಮನವನ್ನು ಹೆತ್ತವರು ಕೊಡುವಂತೆ ಯೆಹೋವನು ಅವಶ್ಯಪಡುತ್ತಾನೆ!—ಧರ್ಮೋಪದೇಶಕಾಂಡ 6:7-9.
6. ಹೆತ್ತವರು ತಮ್ಮ ಮಕ್ಕಳಲ್ಲಿ ಏನನ್ನು ಬೇರೂರಿಸಬೇಕಿತ್ತು, ಮತ್ತು ಯಾವ ಪ್ರಯೋಜನದೊಂದಿಗೆ?
6 ಹೆತ್ತವರು ತಮ್ಮ ಮಕ್ಕಳಲ್ಲಿ ಬೇರೂರಿಸಬೇಕಿದ್ದ ಯೆಹೋವನ ‘ಈ ಮಾತುಗಳು’ ಯಾವುವು? ಕೊಲೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕಳ್ಳತನ ಮಾಡಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮತ್ತು ಅತ್ಯಾಶೆ ಪಡಬಾರದೆಂಬ ಆಜ್ಞೆಗಳನ್ನು ಸೇರಿಸಿ, ದಶಾಜ್ಞೆಗಳು ಎಂಬುದಾಗಿ ಸಾಮಾನ್ಯವಾಗಿ ಕರೆಯಲ್ಪಡುವ ವಿಷಯವನ್ನು ಮೋಶೆ ಆಗ ತಾನೇ ಪುನರಾವೃತ್ತಿಸಿದ್ದನು. ಇಂತಹ ನೈತಿಕ ಆವಶ್ಯಕತೆಗಳು, ಅಷ್ಟೇ ಅಲ್ಲದೆ “ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು” ಎಂಬ ಆಜ್ಞೆಯು, ಇಸ್ರಾಯೇಲ್ಯ ಹೆತ್ತವರು ತಮ್ಮ ಎಳೆಯ ಮಕ್ಕಳಲ್ಲಿ ವಿಶೇಷವಾಗಿ ಬೇರೂರಿಸಬೇಕಿದ್ದ ವಿಷಯಗಳಾಗಿದ್ದವು. (ಧರ್ಮೋಪದೇಶಕಾಂಡ 5:6-21; 6:1-5) ಇಂದು ಮಕ್ಕಳಿಗೆ ಬೇಕಾಗಿರುವುದು ಈ ರೀತಿಯ ಬೋಧನೆಯೇ ಎಂಬುದನ್ನು ನೀವು ಒಪ್ಪುವುದಿಲ್ಲವೇ?
7. (ಎ) ಬೈಬಲಿನಲ್ಲಿ ಮಕ್ಕಳು ಯಾವುದಕ್ಕೆ ಹೋಲಿಸಲ್ಪಟ್ಟಿದ್ದರು? (ಬಿ) ಈಗ ನಾವು ಏನನ್ನು ಪರೀಕ್ಷಿಸುವೆವು?
7 ಇಸ್ರಾಯೇಲ್ಯ ತಂದೆಗೆ ಹೀಗೆ ಹೇಳಲಾಗಿತ್ತು: “ಅಂತಃಪುರದಲ್ಲಿರುವ ನಿನ್ನ ಹೆಂಡತಿಯು ಫಲಭರಿತವಾದ ದ್ರಾಕ್ಷಾಲತೆಯಂತಿರುವಳು; ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕೂತುಕೊಳ್ಳುವ ನಿನ್ನ ಮಕ್ಕಳು ಎಣ್ಣೇಮರದ ಸಸಿಗಳಂತಿರುವರು.” (ಕೀರ್ತನೆ 128:3) ಆದರೂ, ಹೆತ್ತವರು ವ್ಯಥೆಯನ್ನು ಅನುಭವಿಸುವುದಕ್ಕಿಂತ ತಮ್ಮ “ಸಸಿ”ಗಳಲ್ಲಿ ಆನಂದವನ್ನು ಕಂಡುಕೊಳ್ಳಲಿಕ್ಕಾಗಿ, ಅವರು ತಮ್ಮ ಮಕ್ಕಳಲ್ಲಿ ಒಂದು ವೈಯಕ್ತಿಕ, ದೈನಿಕ ಆಸಕ್ತಿಯನ್ನು ತೆಗೆದುಕೊಳ್ಳಬೇಕು. (ಜ್ಞಾನೋಕ್ತಿ 10:1; 13:24; 29:15, 17) ಹೆತ್ತವರು ತಮ್ಮ ಮಕ್ಕಳಲ್ಲಿ ನಿಜವಾದ ಆನಂದವನ್ನು ಕಂಡುಕೊಳ್ಳುವಂತಹ ಒಂದು ವಿಧದಲ್ಲಿ ಹೇಗೆ ಅವರಿಗೆ ತರಬೇತು ನೀಡಿ, ಆತ್ಮಿಕವಾಗಿ ನೀರೆರೆದು, ಸಂರಕ್ಷಿಸಿ, ಪ್ರೀತಿಪೂರ್ವಕವಾಗಿ ಶಿಸ್ತುನೀಡಬಲ್ಲರೆಂಬುದನ್ನು ನಾವು ಪರೀಕ್ಷಿಸೋಣ.
ಶೈಶವಾವಸ್ಥೆಯಿಂದ ತರಬೇತು
8. (ಎ) ತಿಮೊಥೆಯನಿಗೆ ತರಬೇತು ಗೂಟಗಳಂತೆ ಯಾರು ಕಾರ್ಯಮಾಡಿದರು? (ಬಿ) ತರಬೇತಿಯು ಯಾವಾಗ ಆರಂಭಿಸಿತು, ಮತ್ತು ಯಾವ ಫಲಿತಾಂಶದೊಂದಿಗೆ?
8 ಸಾಂಕೇತಿಕವಾಗಿ ಹೇಳುವುದಾದರೆ, ದೃಢವಾಗಿ ನೆಲೆಗೊಂಡಿದ್ದ ಎರಡು ತರಬೇತು ಗೂಟಗಳಿಂದ—ತನ್ನ ತಾಯಿ ಮತ್ತು ಅಜ್ಜಿಯಿಂದ—ಬೆಂಬಲವನ್ನು ಪಡೆದ ತಿಮೊಥೆಯನನ್ನು ಪರಿಗಣಿಸಿರಿ. ತಿಮೊಥೆಯನ ತಂದೆ ಗ್ರೀಕನಾಗಿದ್ದು, ಸ್ಪಷ್ಟವಾಗಿ ಒಬ್ಬ ಅವಿಶ್ವಾಸಿಯಾಗಿದ್ದ ಕಾರಣ, ಹುಡುಗನನ್ನು ‘ಶೈಶವಾವಸ್ಥೆಯಿಂದ ಪವಿತ್ರ ಬರಹಗಳಲ್ಲಿ’ ತರಬೇತುಗೊಳಿಸಿದ್ದು ಅವನ ಯೆಹೂದಿ ತಾಯಿ ಯೂನೀಕೆ ಮತ್ತು ಆಕೆಯ ತಾಯಿಯಾದ ಲೋವಿ. (ಓರೆಅಕ್ಷರಗಳು ನಮ್ಮವು.) (2 ತಿಮೊಥೆಯ 1:5; 3:15; ಅ. ಕೃತ್ಯಗಳು 16:1) “ಯೆಹೋವನ . . . ಅದ್ಭುತಕೃತ್ಯಗಳನ್ನು” ತಿಮೊಥೆಯನಿಗೆ—ಅವನೊಂದು ಮಗುವಾಗಿರುವಾಗಲೂ—ಕಲಿಸುವುದರಲ್ಲಿ ಅವರು ತೋರಿಸಿದ ಶ್ರದ್ಧೆಯು ಸಮೃದ್ಧವಾಗಿ ಬಹುಮಾನಿಸಲ್ಪಟ್ಟಿತು. (ಕೀರ್ತನೆ 78:1, 3, 4) ತಿಮೊಥೆಯನು ಬಹುಶಃ ಅವನಿನ್ನೂ ಒಬ್ಬ ಹದಿವಯಸ್ಕನಾಗಿದ್ದಾಗಲೇ ದೂರದ ದೇಶಗಳಲ್ಲಿ ಒಬ್ಬ ಮಿಷನೆರಿಯಾದನು, ಮತ್ತು ಆರಂಭದ ಕ್ರೈಸ್ತ ಸಭೆಗಳನ್ನು ಬಲಗೊಳಿಸುವುದರಲ್ಲಿ ಅವನಿಗೊಂದು ಪ್ರಧಾನ ಪಾತ್ರವಿತ್ತು.—ಅ. ಕೃತ್ಯಗಳು 16:2-5; 1 ಕೊರಿಂಥ 4:17; ಫಿಲಿಪ್ಪಿ 2:19-23.
9. ಎಳೆಯ ಮಕ್ಕಳು ಪ್ರಾಪಂಚಿಕತೆಯ ಪಾಶಗಳನ್ನು ದೂರಮಾಡಲು ಹೇಗೆ ಕಲಿಯಬಲ್ಲರು?
9 ಹೆತ್ತವರೇ, ನೀವು ಯಾವ ಪ್ರಕಾರದ ತರಬೇತು ಗೂಟಗಳಾಗಿದ್ದೀರಿ? ಉದಾಹರಣೆಗೆ, ನಿಮ್ಮ ಮಕ್ಕಳು ಪ್ರಾಪಂಚಿಕ ವಿಷಯಗಳ ಕುರಿತು ಒಂದು ಸಮತೂಕದ ದೃಷ್ಟಿಕೋನವನ್ನು ವಿಕಸಿಸಿಕೊಳ್ಳುವಂತೆ ನೀವು ಬಯಸುತ್ತೀರೊ? ಹಾಗಾದರೆ, ಇತ್ತೀಚಿನ ಸಕಲ ಸಾಧನಗಳನ್ನು ಅಥವಾ ನಿಮಗೆ ನಿಜವಾಗಿಯೂ ಬೇಕಾಗಿರದ ಇತರ ವಸ್ತುಗಳನ್ನು ಬೆನ್ನಟ್ಟದಿರುವ ಮೂಲಕ ನೀವು ಸರಿಯಾದ ಮಾದರಿಯನ್ನು ಇಡಬೇಕು. ಪ್ರಾಪಂಚಿಕ ಅನುಕೂಲತೆಗಳನ್ನು ಬೆನ್ನಟ್ಟಲು ನೀವು ಆರಿಸಿಕೊಳ್ಳುವಲ್ಲಿ, ನಿಮ್ಮ ಮಕ್ಕಳು ನಿಮ್ಮನ್ನು ಅನುಕರಿಸುವಾಗ ಆಶ್ಚರ್ಯಪಡಬೇಡಿರಿ. (ಮತ್ತಾಯ 6:24; 1 ತಿಮೊಥೆಯ 6:9, 10) ನಿಶ್ಚಯವಾಗಿಯೂ, ತರಬೇತು ಗೂಟಗಳು ನೇರವಾಗಿರದಿದ್ದಲ್ಲಿ, ಸಸಿಯು ಹೇಗೆ ನೇರವಾಗಿ ಬೆಳೆದೀತು?
10. ಯಾರ ಮಾರ್ಗದರ್ಶನವನ್ನು ಹೆತ್ತವರು ಯಾವಾಗಲೂ ಕೋರಬೇಕು, ಮತ್ತು ಯಾವ ಮನೋಭಾವವು ಅವರಿಗಿರಬೇಕು?
10 ತಮ್ಮ ಮಕ್ಕಳಲ್ಲಿ ಆನಂದವನ್ನು ಕಂಡುಕೊಳ್ಳುವ ಹೆತ್ತವರು, ತಮ್ಮ ಮಕ್ಕಳ ಆತ್ಮಿಕ ಹಿತಾಸಕ್ತಿಗಳನ್ನು ಯಾವಾಗಲೂ ಪರಿಗಣಿಸುತ್ತಾ, ಅವರನ್ನು ತರಬೇತುಗೊಳಿಸಲು ಸತತವಾಗಿ ದೈವಿಕ ಸಹಾಯವನ್ನು ಕೋರುತ್ತಾರೆ. ನಾಲ್ಕು ಮಕ್ಕಳ ತಾಯಿಯೊಬ್ಬಳು ಹೇಳಿದ್ದು: “ನಮ್ಮ ಮಕ್ಕಳು ಜನಿಸುವ ಮುಂಚೆಯೇ, ನಾವು ಒಳ್ಳೆಯ ಹೆತ್ತವರಾಗಿರಲು, ಆತನ ವಾಕ್ಯದ ಮೂಲಕ ಮಾರ್ಗದರ್ಶಿಸಲ್ಪಡಲು, ಮತ್ತು ಅದನ್ನು ನಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳಲು ಸಹಾಯ ಮಾಡುವಂತೆ ನಾವು ಯೆಹೋವನಿಗೆ ಕ್ರಮವಾಗಿ ಪ್ರಾರ್ಥಿಸಿದೆವು.” ಆಕೆ ಕೂಡಿಸಿದ್ದು: “‘ಯೆಹೋವನು ಪ್ರಥಮನಾಗಿದ್ದಾನೆ’ ಎಂಬುದು ಒಂದು ಸಾಮಾನ್ಯ ವಾಕ್ಸರಣಿ ಮಾತ್ರವಲ್ಲ, ಬದಲಿಗೆ ನಾವು ನಮ್ಮ ಜೀವಿತಗಳನ್ನು ಜೀವಿಸಿದ ರೀತಿಯಾಗಿತ್ತು.”—ನ್ಯಾಯಸ್ಥಾಪಕರು 13:8.
ಕ್ರಮವಾಗಿ “ನೀರನ್ನು” ಪೂರೈಸುವುದು
11. ಬೆಳವಣಿಗೆಗಾಗಿ ಸಸಿಗಳಿಗೆ ಮತ್ತು ಮಕ್ಕಳಿಗೆ—ಇಬ್ಬರಿಗೂ—ಏನು ಆವಶ್ಯಕ?
11 ನದಿಯೊಂದರ ಪಕ್ಕದಲ್ಲಿ ಮರಗಳು ಎಷ್ಟು ಚೆನ್ನಾಗಿ ಬೆಳೆಯುತ್ತವೆ ಎಂಬ ವಿಷಯದಿಂದ ಸೂಚಿಸಲ್ಪಟ್ಟಿರುವಂತೆ, ವಿಶೇಷವಾಗಿ ಸಸಿಗಳಿಗೆ ಸತತವಾದ ನೀರಿನ ಪೂರೈಕೆ ಅಗತ್ಯ. (ಹೋಲಿಸಿ ಪ್ರಕಟನೆ 22:1, 2.) ಶಿಶುಗಳಿಗೆ ಬೈಬಲ್ ಸತ್ಯದ ನೀರನ್ನು ಕ್ರಮವಾಗಿ ಒದಗಿಸುವಲ್ಲಿ ಅವು ಕೂಡ ಆತ್ಮಿಕವಾಗಿ ಹಸನಾಗಿ ಬೆಳೆಯುವವು. ಆದರೆ ಹೆತ್ತವರು ತಮ್ಮ ಮಗುವಿನ ಗಮನಾವಧಿಯನ್ನು ಪರಿಗಣಿಸುವ ಅಗತ್ಯವಿದೆ. ಕೆಲವು ದೀರ್ಘವಾದ ಉಪದೇಶಾವಧಿಗಳಿಗಿಂತಲೂ ಬಹುಶಃ ಅಡಿಗಡಿಗೆಯ ಸಂಕ್ಷೇಪಿತ ಅಭ್ಯಾಸಾವಧಿಗಳು ಹೆಚ್ಚು ಪರಿಣಾಮಕಾರಿಯಾಗಿರುವವು. ಇಂತಹ ಚಿಕ್ಕದಾದ ಅಭ್ಯಾಸಾವಧಿಗಳ ಮೌಲ್ಯವನ್ನು ನಿಕೃಷ್ಟಮಾಡಬೇಡಿ. ಒಟ್ಟಿಗೆ ಸಮಯವನ್ನು ಕಳೆಯುವುದು, ಹೆತ್ತವರ ಮತ್ತು ಮಗುವಿನ ನಡುವೆ ಒಂದು ಬಂಧವನ್ನು—ಶಾಸ್ತ್ರವಚನಗಳಲ್ಲಿ ಅನೇಕಾವರ್ತಿ ಉತ್ತೇಜಿಸಲ್ಪಟ್ಟ ಒಂದು ಆಪ್ತತೆ—ಸೃಷ್ಟಿಸಲು ಆವಶ್ಯಕವಾಗಿದೆ.—ಧರ್ಮೋಪದೇಶಕಾಂಡ 6:6-9; 11:18-21; ಜ್ಞಾನೋಕ್ತಿ 22:6.
12. ಚಿಕ್ಕ ಮಕ್ಕಳೊಂದಿಗೆ ಪ್ರಾರ್ಥಿಸುವುದರ ಮಹತ್ವವೇನು?
12 ಎಳೆಯ ಮಕ್ಕಳೊಂದಿಗಿನ ಅಭ್ಯಾಸಾವಧಿಗಳಲ್ಲೊಂದು, ದಿನದ ಕೊನೆಯಲ್ಲಿರಸಾಧ್ಯವಿದೆ. ಯುವತಿಯೊಬ್ಬಳು ಜ್ಞಾಪಿಸಿಕೊಳ್ಳುವುದು: “ನನ್ನ ಹೆತ್ತವರು ಪ್ರತಿ ರಾತ್ರಿ ನಮ್ಮ ಮಂಚದ ತುದಿಯಲ್ಲಿ ಕುಳಿತುಕೊಂಡು, ನಾವು ನಮ್ಮ ಸ್ವಂತ ಪ್ರಾರ್ಥನೆಗಳನ್ನು ಹೇಳುವುದನ್ನು ಆಲಿಸಿದರು.” ಇದನ್ನು ಮಾಡುವುದರ ಮಹತ್ವದ ಕುರಿತು, ಮತ್ತೊಬ್ಬಳು ಹೇಳಿದ್ದು: “ಅದು, ಪ್ರತಿ ರಾತ್ರಿ ನಾನು ಮಲಗುವ ಮುಂಚೆ ಯೆಹೋವನಿಗೆ ಪ್ರಾರ್ಥಿಸುವ ರೂಢಿಯನ್ನು ಬೆಳೆಸಿಕೊಳ್ಳುವಂತೆ ಮಾಡಿತು.” ತಮ್ಮ ಹೆತ್ತವರು ಯೆಹೋವನ ಕುರಿತು ಮಾತಾಡುವುದನ್ನು ಮತ್ತು ಆತನಿಗೆ ಪ್ರಾರ್ಥಿಸುವುದನ್ನು ಮಕ್ಕಳು ದಿನನಿತ್ಯ ಕೇಳುವಾಗ, ಆತನು ಅವರಿಗೆ ವಾಸ್ತವವಾದ ವ್ಯಕ್ತಿಯಾಗುತ್ತಾನೆ. ಒಬ್ಬ ಯುವ ಪುರುಷನು ಹೇಳಿದ್ದು: “ನಾನು ಯೆಹೋವನಿಗೆ ಪ್ರಾರ್ಥನೆಯಲ್ಲಿ ನನ್ನ ಕಣ್ಣುಗಳನ್ನು ಮುಚ್ಚಿ, ನಿಜವಾದ ಅಜ್ಜನಂತಹ ಒಬ್ಬ ವ್ಯಕ್ತಿಯನ್ನು ನೋಡಸಾಧ್ಯವಿತ್ತು. ನಾವು ಮಾಡುವ ಮತ್ತು ಹೇಳುವ ಪ್ರತಿಯೊಂದು ವಿಷಯದಲ್ಲಿ ಯೆಹೋವನು ಒಂದು ಪಾತ್ರವಹಿಸುತ್ತಾನೆಂಬುದನ್ನು ನೋಡುವಂತೆ ನನ್ನ ಹೆತ್ತವರು ನನಗೆ ಸಹಾಯ ಮಾಡಿದರು.”
13. ಕ್ರಮವಾದ ಉಪದೇಶಾವಧಿಗಳು ಏನನ್ನು ಒಳಗೊಳ್ಳಬಲ್ಲವು?
13 ಬೈಬಲ್ ಸತ್ಯದ ನೀರನ್ನು ಚಿಕ್ಕ ಮಕ್ಕಳು ಹೀರಿಕೊಳ್ಳುವಂತೆ ಸಹಾಯ ಮಾಡಲು, ಹೆತ್ತವರು ಕ್ರಮವಾದ ಉಪದೇಶಾವಧಿಗಳಲ್ಲಿ ಅನೇಕ ಪ್ರಾಯೋಗಿಕ ವಿಷಯಗಳನ್ನು ಸೇರಿಸಬಲ್ಲರು. ಇಬ್ಬರು ಎಳೆಯ ಮಕ್ಕಳ ಹೆತ್ತವರು ಹೇಳಿದ್ದು: “ಮಕ್ಕಳಿಬ್ಬರೂ ರಾಜ್ಯ ಸಭಾಗೃಹದಲ್ಲಿ ಶಾಂತರಾಗಿ ಕುಳಿತುಕೊಳ್ಳುವ ತರಬೇತನ್ನು, ತಮ್ಮ ಜೀವನದ ಮೊದಲಿನ ಕೆಲವು ವಾರಗಳಿಂದ ಪಡೆಯತೊಡಗಿದರು.” ತನ್ನ ಕುಟುಂಬವು ಏನು ಮಾಡಿತೆಂಬುದನ್ನು ಒಬ್ಬ ತಂದೆಯು ವರ್ಣಿಸಿದನು: “ಬೈಬಲಿನ ಎಲ್ಲ ಪುಸ್ತಕಗಳನ್ನು ನಾವು ಸೂಚಿ ಕಾರ್ಡು (ಇಂಡೆಕ್ಸ್ ಕಾರ್ಡ್)ಗಳ ಮೇಲೆ ಪಟ್ಟಿಮಾಡಿದೆವು ಮತ್ತು ನಾವೆಲ್ಲರೂ ಸರದಿಯ ಪ್ರಕಾರ ಅವನ್ನು ಕ್ರಮವಾಗಿಡುವುದನ್ನು ಅಭ್ಯಾಸಿಸಿದೆವು. ಮಕ್ಕಳು ಯಾವಾಗಲೂ ಇದಕ್ಕಾಗಿ ಎದುರುನೋಡುತ್ತಿದ್ದರು.” ಅನೇಕ ಕುಟುಂಬಗಳು ಒಂದು ಊಟದ ಮೊದಲು ಅಥವಾ ಆಮೇಲೆ ಸಂಕ್ಷಿಪ್ತವಾದೊಂದು ಉಪದೇಶಾವಧಿಯನ್ನು ಒಳಗೂಡಿಸುತ್ತವೆ. ಒಬ್ಬ ತಂದೆಯು ಹೇಳಿದ್ದು: “ದೈನಿಕ ಬೈಬಲ್ ವಚನವನ್ನು ಚರ್ಚಿಸಲು, ಸಂಜೆಯ ಊಟದ ಸಮಯವು ನಮಗೆ ಒಳ್ಳೆಯ ಸಮಯವಾಗಿ ಪರಿಣಮಿಸಿದೆ.”
14. (ಎ) ಆತ್ಮಿಕವಾಗಿ ಪ್ರತಿಫಲನೀಡುವ ಯಾವ ಚಟುವಟಿಕೆಗಳಲ್ಲಿ ನೀವು ಚಿಕ್ಕ ಮಕ್ಕಳೊಂದಿಗೆ ಭಾಗಿಯಾಗಬಹುದು? (ಬಿ) ಕಲಿಯಲಿಕ್ಕಾಗಿ ಯಾವ ಸಾಮರ್ಥ್ಯವು ಮಕ್ಕಳಲ್ಲಿದೆ?
14 ಚಿಕ್ಕ ಮಕ್ಕಳು ಬೈಬಲ್ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್)ದಲ್ಲಿರುವ ಸಜೀವವಾದ ಬೈಬಲ್ ವೃತ್ತಾಂತಗಳಿಗೆ ಕಿವಿಗೊಡುವುದನ್ನೂ ಆನಂದಿಸುತ್ತಾರೆ.a “ಮಕ್ಕಳು ಎಳೆಯವರಾಗಿದ್ದಾಗ, ಬೈಬಲ್ ಕಥೆಗಳ ಪುಸ್ತಕದಿಂದ ಒಂದು ಪಾಠವು ಆವರಿಸಲ್ಪಡುತ್ತಿತ್ತು, ಮತ್ತು ಅನಂತರ ಮಕ್ಕಳು ಪೋಷಾಕುಗಳನ್ನು ಧರಿಸಿ, ಒಂದು ಸಂಕ್ಷಿಪ್ತ ನಾಟಕದ ರೀತಿಯಲ್ಲಿ ಪಾತ್ರಗಳನ್ನು ನಟಿಸುತ್ತಿದ್ದರು. ಇದನ್ನು ಅವರು ಇಷ್ಟಪಟ್ಟರು ಮತ್ತು ಅನೇಕ ವೇಳೆ ಪ್ರತಿಯೊಂದು ಅಭ್ಯಾಸದ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕಥೆಯನ್ನು ಆವರಿಸಬೇಕೆಂದು ಪಟ್ಟುಹಿಡಿದರು,” ಎಂಬುದಾಗಿ ಒಬ್ಬ ದಂಪತಿಗಳು ಗಮನಿಸಿದರು. ಕಲಿಯಲಿಕ್ಕಾಗಿರುವ ನಿಮ್ಮ ಮಗುವಿನ ಸಾಮರ್ಥ್ಯವನ್ನು ಅಲ್ಪವಾಗಿ ತಿಳಿಯಬೇಡಿ! ನಾಲ್ಕು ವರ್ಷ ಪ್ರಾಯದ ಮಕ್ಕಳು, ಬೈಬಲ್ ಕಥೆಗಳ ಪುಸ್ತಕದ ಇಡೀ ಅಧ್ಯಾಯಗಳನ್ನು ಕಂಠಪಾಠಮಾಡಿದ್ದಾರೆ ಮತ್ತು ಬೈಬಲನ್ನೂ ಓದಲು ಕಲಿತಿದ್ದಾರೆ! ತಾನು ಸುಮಾರು ಮೂರುವರೆ ವರ್ಷ ಪ್ರಾಯದವಳಾಗಿದ್ದಾಗ, ಮತ್ತೆ ಮತ್ತೆ “ಜುಡಿಷಲ್ ಡಿಸಿಷನ್ಸ್” ಎಂಬ ಇಂಗ್ಲಿಷ್ ಪದಗಳನ್ನು ತಪ್ಪಾಗಿ ಉಚ್ಚರಿಸುತ್ತಿದ್ದೆನೆಂದೂ, ಆದರೆ ಸರಿಯಾದ ಉಚ್ಚಾರವನ್ನು ಅಭ್ಯಾಸಿಸುವುದನ್ನು ಮುಂದುವರಿಸುವಂತೆ ತನ್ನ ತಂದೆ ತನಗೆ ಉತ್ತೇಜಿಸುತ್ತಿದ್ದರೆಂದೂ ಯುವತಿಯೊಬ್ಬಳು ಜ್ಞಾಪಿಸಿಕೊಳ್ಳುತ್ತಾಳೆ.
15. ಮಕ್ಕಳೊಂದಿಗಿನ ಚರ್ಚೆಗಳಲ್ಲಿ ಯಾವ ವಿಷಯಗಳು ಸೇರಿಸಲ್ಪಡಬಲ್ಲವು, ಮತ್ತು ಅಂತಹ ಚರ್ಚೆಗಳು ಮಹತ್ವವೆಂಬುದಕ್ಕೆ ಯಾವ ಪ್ರಮಾಣವಿದೆ?
15 ನಿಮ್ಮ ಚಿಕ್ಕ ಮಕ್ಕಳೊಂದಿಗಿನ ಅಭ್ಯಾಸಾವಧಿಗಳು, ಕೂಟಗಳಲ್ಲಿ ಹೇಳಿಕೆಗಳನ್ನು ಮಾಡುವ ಮೂಲಕ ಇತರರೊಂದಿಗೆ ಸತ್ಯದ ನೀರನ್ನು ಹಂಚಿಕೊಳ್ಳುವಂತೆ ಅವರನ್ನು ತಯಾರಿಸಲೂ ಉಪಯೋಗಿಸಲ್ಪಡಸಾಧ್ಯವಿದೆ. (ಇಬ್ರಿಯ 10:24, 25) “ನಮ್ಮ ಅಭ್ಯಾಸಾವಧಿಗಳಲ್ಲಿ, ನಾನು ನನ್ನ ಸ್ವಂತ ಮಾತುಗಳಲ್ಲಿ ಹೇಳಿಕೆಯನ್ನು ನೀಡಬೇಕಿತ್ತು,” ಎಂಬುದಾಗಿ ಯುವತಿಯೊಬ್ಬಳು ಜ್ಞಾಪಿಸಿಕೊಳ್ಳುತ್ತಾಳೆ. “ಅರ್ಥಮಾಡಿಕೊಳ್ಳದೆ ಕೇವಲ ಓದುವ ಅನುಮತಿ ನನಗಿರಲಿಲ್ಲ.” ಇದಕ್ಕೆ ಕೂಡಿಸಿ, ಕ್ಷೇತ್ರ ಶುಶ್ರೂಷೆಯಲ್ಲಿ ಒಂದು ಅರ್ಥಗರ್ಭಿತವಾದ ಪಾಲನ್ನು ಪಡೆದಿರುವಂತೆ ಮಕ್ಕಳು ತರಬೇತುಗೊಳಿಸಲ್ಪಡಬಲ್ಲರು. ದೇವಭಯವುಳ್ಳ ಹೆತ್ತವರಿಂದ ಬೆಳೆಸಲ್ಪಟ್ಟ ಸ್ತ್ರೀಯೊಬ್ಬಳು ವಿವರಿಸುವುದು: “ನಾವು ಎಂದೂ ನಮ್ಮ ಹೆತ್ತವರನ್ನು ಅವರ ಕೆಲಸದಲ್ಲಿ ಜೊತೆಗೂಡಿದ ಹಿಂಬಾಲಕರು ಮಾತ್ರವೇ ಆಗಿರಲಿಲ್ಲ. ಅದು ಬಾಗಿಲ ಗಂಟೆಯನ್ನು ಬಾರಿಸಿ, ಒಂದು ಕರಪತ್ರವನ್ನು ಬಿಟ್ಟುಬರುವುದನ್ನು ಮಾತ್ರ ಒಳಗೊಂಡಿದ್ದರೂ, ನಮಗೊಂದು ಪಾಲಿತ್ತೆಂದು ನಮಗೆ ಗೊತ್ತಿತ್ತು. ಪ್ರತಿ ವಾರಾಂತ್ಯದ ಚಟುವಟಿಕೆಗಳ ಮುಂಚಿನ ಜಾಗರೂಕ ತಯಾರಿಯಿಂದಾಗಿ, ನಾವು ಹೇಳಲಿದ್ದ ವಿಷಯವು ನಮಗೆ ತಿಳಿದಿತ್ತು. ನಾವೆಂದೂ ಶನಿವಾರ ಬೆಳಗ್ಗೆ ಎದ್ದು, ಶುಶ್ರೂಷೆಯಲ್ಲಿ ನಾವು ಹೋಗಲಿದ್ದೆವೊ ಎಂದು ಕೇಳಲಿಲ್ಲ. ನಾವು ಹೋಗಲಿದ್ದೆವೆಂದು ನಮಗೆ ಗೊತ್ತಿತ್ತು.”
16. ಮಕ್ಕಳೊಂದಿಗೆ ಒಂದು ಕುಟುಂಬ ಅಧ್ಯಯನವನ್ನು ನಡೆಸುವುದರಲ್ಲಿನ ಕ್ರಮಬದ್ಧತೆಯು ಏಕೆ ಪ್ರಾಮುಖ್ಯವಾಗಿದೆ?
16 ಚಿಕ್ಕ ಮಕ್ಕಳಿಗೆ ಬೈಬಲ್ ಸತ್ಯದ ನೀರನ್ನು ಕ್ರಮವಾಗಿ ಪೂರೈಸುವ ಅಗತ್ಯವು ಬಹಳ ಪ್ರಾಮುಖ್ಯವಾಗಿದೆ, ಇದರ ಅರ್ಥ ಒಂದು ಸಾಪ್ತಾಹಿಕ ಕುಟುಂಬ ಬೈಬಲ್ ಅಧ್ಯಯನವು ಆವಶ್ಯಕವಾಗಿದೆ ಎಂಬುದೇ. ಇಬ್ಬರು ಮಕ್ಕಳ ತಂದೆಯೊಬ್ಬನು ಪ್ರತಿಪಾದಿಸುವುದೇನೆಂದರೆ, “ಮಕ್ಕಳನ್ನು ರೇಗಿಸುವುದರಲ್ಲಿನ ಒಂದು ಪ್ರಧಾನ ಅಂಶವು ಅಸಂಬದ್ಧತೆಯಾಗಿದೆ.” (ಎಫೆಸ 6:4) ಅವನು ಹೇಳಿದ್ದು: “ನನ್ನ ಹೆಂಡತಿ ಮತ್ತು ನಾನು ಒಂದು ದಿನ ಹಾಗೂ ಸಮಯವನ್ನು ಆರಿಸಿಕೊಂಡು, ಆ ವೇಳಾಪಟ್ಟಿಗನುಸಾರ ಕುಟುಂಬ ಅಧ್ಯಯನವನ್ನು ನಂಬಿಗಸ್ತಿಕೆಯಿಂದ ನಡೆಸಿದೆವು. ಮಕ್ಕಳು ಅಧ್ಯಯನವನ್ನು ಆ ಸಮಯದಲ್ಲಿ ನಿರೀಕ್ಷಿಸಲಾರಂಭಿಸಲು ಬಹಳ ಸಮಯ ಹಿಡಿಯಲಿಲ್ಲ.” ‘ಒಂದು ಎಳೆಯ ಕುಡಿಯನ್ನು ಹೇಗೆ ರೂಪಿಸಲಾಗುತ್ತದೋ ಹಾಗೆಯೇ ಮರ ಬೆಳೆಯುತ್ತದೆ,’ ಎಂಬ ಸ್ವತಸ್ಸಿದ್ಧ ಸತ್ಯಕ್ಕೆ ಹೊಂದಿಕೆಯಾಗಿ, ಶೈಶವಾವಸ್ಥೆಯಿಂದ ಇಂತಹ ಎಲ್ಲ ತರಬೇತಿಯು ಪ್ರಾಮುಖ್ಯವಾಗಿದೆ.
17. ಯಾವ ವಿಷಯವು ಚಿಕ್ಕ ಮಕ್ಕಳಿಗೆ ಬೈಬಲ್ ಸತ್ಯಗಳನ್ನು ಪೂರೈಸುವಷ್ಟು ಪ್ರಾಮುಖ್ಯವಾಗಿದೆ?
17 ಚಿಕ್ಕ ಮಕ್ಕಳಿಗೆ ಬೈಬಲ್ ಸತ್ಯಗಳನ್ನು ಪೂರೈಸುವುದು ಪ್ರಾಮುಖ್ಯವಾಗಿದೆ, ಆದರೆ ಹೆತ್ತವರ ಮಾದರಿಯು ಸಮಾನವಾಗಿ ಪ್ರಾಮುಖ್ಯ. ನೀವು ಅಭ್ಯಾಸಿಸುತ್ತಾ, ಕ್ರಮವಾಗಿ ಕೂಟಗಳಿಗೆ ಹಾಜರಾಗುತ್ತಾ, ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುತ್ತಾ, ಹೌದು ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ಹರ್ಷವನ್ನು ಕಂಡುಕೊಳ್ಳುತ್ತಾ ಇರುವುದನ್ನು ನಿಮ್ಮ ಮಕ್ಕಳು ನೋಡುತ್ತಾರೊ? (ಕೀರ್ತನೆ 40:8) ಅವರು ನೋಡುವುದು ಆವಶ್ಯಕ. ಅರ್ಥವತ್ತಾಗಿ, ಆಕೆಯ ಗಂಡನ ವಿರೋಧವನ್ನು ತಾಳಿಕೊಂಡು, ನಂಬಿಗಸ್ತ ಸಾಕ್ಷಿಗಳಾಗುವಂತೆ ಆರು ಮಕ್ಕಳನ್ನು ಬೆಳೆಸಿದ್ದ ತನ್ನ ತಾಯಿಯ ಕುರಿತು ಮಗಳೊಬ್ಬಳು ಹೇಳಿದ್ದು: “ನಮ್ಮನ್ನು ಬಹಳಷ್ಟು ಪ್ರಭಾವಿಸಿದ್ದು ತಾಯಿಯ ಸ್ವಂತ ಮಾದರಿಯೇ—ಅದು ಶಬ್ದಗಳಿಗಿಂತ ಗಟ್ಟಿಯಾಗಿ ಮಾತಾಡಿತು.”
ಚಿಕ್ಕ ಮಕ್ಕಳಿಗೆ ಸಂರಕ್ಷಣೆಯನ್ನು ಒದಗಿಸುವುದು
18. (ಎ) ಮಕ್ಕಳಿಗೆ ಬೇಕಾದ ಸಂರಕ್ಷಣೆಯನ್ನು ಹೆತ್ತವರು ಹೇಗೆ ಒದಗಿಸಬಲ್ಲರು? (ಬಿ) ದೇಹದ ಪುನರುತ್ಪತ್ತಿಮಾಡುವ ಅಂಗಗಳ ಕುರಿತು ಇಸ್ರಾಯೇಲಿನಲ್ಲಿದ್ದ ಚಿಕ್ಕ ಮಕ್ಕಳು ಯಾವ ಪ್ರಕಾರದ ಉಪದೇಶವನ್ನು ಪಡೆದುಕೊಂಡರು?
18 ಸಸಿಗಳಿಗೆ ಅನೇಕ ವೇಳೆ ಅಪಾಯಕಾರಿ ಕೀಟಗಳಿಂದ ಸಂರಕ್ಷಣೆಯು ಬೇಕಾಗಿರುವಂತೆಯೇ, ಈ ದುಷ್ಟ ವಿಷಯಗಳ ವ್ಯವಸ್ಥೆಯಲ್ಲಿ ಚಿಕ್ಕ ಮಕ್ಕಳಿಗೆ “ದುಷ್ಟ”ರಿಂದ ಸಂರಕ್ಷಣೆಯು ಅಗತ್ಯವಾಗಿದೆ. (2 ತಿಮೊಥೆಯ 3:1-5, 13) ಈ ಸಂರಕ್ಷಣೆಯನ್ನು ಹೆತ್ತವರು ಹೇಗೆ ಕೊಡಬಲ್ಲರು? ದೈವಿಕ ವಿವೇಕವನ್ನು ಪಡೆದುಕೊಳ್ಳುವಂತೆ ಅವರಿಗೆ ಸಹಾಯ ಮಾಡುವ ಮೂಲಕವೇ! (ಪ್ರಸಂಗಿ 7:12) ಯೆಹೋವನು ಇಸ್ರಾಯೇಲ್ಯರಿಗೆ—ತಮ್ಮ ‘ಚಿಕ್ಕ ಮಕ್ಕಳನ್ನು’ ಸೇರಿಸಿ—ತನ್ನ ಧರ್ಮಶಾಸ್ತ್ರದ ಓದುವಿಕೆಗೆ ಕಿವಿಗೊಡುವಂತೆ ಆಜ್ಞಾಪಿಸಿದನು. ಅದರಲ್ಲಿ ಯೋಗ್ಯವಾದ ಹಾಗೂ ಅಯೋಗ್ಯವಾದ ಲೈಂಗಿಕ ನಡತೆಯ ಗುರುತಿಸುವಿಕೆ ಒಳಗೊಂಡಿತ್ತು. (ಧರ್ಮೋಪದೇಶಕಾಂಡ 31:12; ಯಾಜಕಕಾಂಡ 18:6-24) ದೇಹದ ಪುನರುತ್ಪತ್ತಿಮಾಡುವ ಅಂಗಗಳು—“ಬೀಜ” ಮತ್ತು “ರಹಸ್ಯಾಂಗ”ಗಳನ್ನು ಸೇರಿಸಿ—ಹಲವಾರು ಸಲ ಉಲ್ಲೇಖಿಸಲ್ಪಟ್ಟಿವೆ. (ಯಾಜಕಕಾಂಡ 15:1-3, 16; 21:20; 22:24; ಅರಣ್ಯಕಾಂಡ 25:8; ಧರ್ಮೋಪದೇಶಕಾಂಡ 23:10) ಇಂದಿನ ಲೋಕದ ವಿಪರೀತ ಭ್ರಷ್ಟತೆಯಿಂದಾಗಿ, ದೇವರು “ಬಹು ಒಳ್ಳೇ”ದೆಂದು ಕರೆದ ಸೃಷ್ಟಿಯಲ್ಲಿ ಒಳಗೊಂಡಿರುವ ಇಂತಹ ದೇಹದ ಭಾಗಗಳ ಯೋಗ್ಯ ಹಾಗೂ ಅಯೋಗ್ಯ ಉಪಯೋಗದ ಕುರಿತು ಚಿಕ್ಕ ಮಕ್ಕಳಿಗೆ ತಿಳಿದುಕೊಳ್ಳುವ ಅಗತ್ಯವಿದೆ.—ಆದಿಕಾಂಡ 1:31; 1 ಕೊರಿಂಥ 12:21-24.
19. ತಮ್ಮ ದೇಹದ ಗೋಪ್ಯಾಂಗಗಳ ಕುರಿತು ಚಿಕ್ಕ ಮಕ್ಕಳಿಗೆ ಒದಗಿಸಬೇಕಾದ ಸೂಕ್ತವಾದ ಉಪದೇಶವು ಏನಾಗಿದೆ?
19 ಆದರ್ಶಪ್ರಾಯವಾಗಿ ಇಬ್ಬರೂ ಹೆತ್ತವರು ಜೊತೆಯಾಗಿ, ಇಲ್ಲವೆ ಪ್ರತಿಯೊಬ್ಬ ವಯಸ್ಕ ಪೋಷಕನು, ಮಗುವಿಗೆ ಅದರ ದೇಹದ ಗೋಪ್ಯಾಂಗಗಳನ್ನು ಗುರುತಿಸಿ ಹೇಳಬೇಕು. ಬೇರೆ ಯಾವ ವ್ಯಕ್ತಿಯೂ ಈ ಭಾಗಗಳನ್ನು ಮುಟ್ಟುವಂತೆ ಅನುಮತಿಸಲ್ಪಡಬಾರದೆಂದು ಅವರು ಅನಂತರ ವಿವರಿಸಬೇಕು. ನವಿರಾದ ಲೈಂಗಿಕ ಪ್ರಯತ್ನಗಳಿಗೆ ಎಳೆಯರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ಶಿಶುಪೀಡಕರು ಅನೇಕ ವೇಳೆ ಪರೀಕ್ಷಿಸುವುದರಿಂದ, ದೃಢವಾಗಿ ಪ್ರತಿರೋಧಿಸುವಂತೆ ಮತ್ತು “ನಿನ್ನ ಕೃತ್ಯಗಳ ಕುರಿತು ನಾನು ವರದಿಸಲಿದ್ದೇನೆ!” ಎಂಬುದಾಗಿ ಹೇಳುವಂತೆ ಮಗುವೊಂದು ಕಲಿಸಲ್ಪಡಬೇಕು. ಭಯಪಡಿಸುವ ಯಾವುದೇ ಬೆದರಿಕೆಗಳು ಮಾಡಲ್ಪಡಲಿ, ತಮಗೆ ಹಿತಕರವೆನಿಸದ ರೀತಿಯಲ್ಲಿ ತಮ್ಮನ್ನು ಮುಟ್ಟಲು ಪ್ರಯತ್ನಿಸುವ ಯಾವನೇ ವ್ಯಕ್ತಿಯ ಕುರಿತು ಅವರು ಯಾವಾಗಲೂ ಹೇಳಬೇಕೆಂದು ನಿಮ್ಮ ಚಿಕ್ಕ ಮಕ್ಕಳಿಗೆ ಕಲಿಸಿರಿ.
ಪ್ರೀತಿಪರ ಶಿಸ್ತನ್ನು ಪೂರೈಸುವುದು
20. (ಎ) ಶಿಸ್ತು ನೀಡುವಿಕೆಯು ಸವರುವಿಕೆಯಂತಿದೆ ಹೇಗೆ? (ಬಿ) ಶಿಸ್ತಿನ ಆರಂಭಿಕ ಪರಿಣಾಮವು ಏನಾಗಿರುತ್ತದೆ, ಆದರೆ ಫಲಿತಾಂಶವು ಏನಾಗಿರುತ್ತದೆ?
20 ಸವರುವಿಕೆಯಿಂದ ಮರವೊಂದು ಪ್ರಯೋಜನಪಡೆಯುವಂತೆಯೇ ಚಿಕ್ಕ ಮಕ್ಕಳು ಪ್ರೀತಿಪರ ಶಿಸ್ತಿನಿಂದ ಪ್ರಯೋಜನಪಡೆಯುತ್ತಾರೆ. (ಜ್ಞಾನೋಕ್ತಿ 1:8, 9; 4:13; 13:1) ಅನಪೇಕ್ಷಣೀಯ ಕೊಂಬೆಗಳು ಕತ್ತರಿಸಿಹಾಕಲ್ಪಡುವಾಗ, ಇತರ ಕೊಂಬೆಗಳ ಬೆಳವಣಿಗೆಯು ಉತ್ತೇಜಿಸಲ್ಪಡುತ್ತದೆ. ಆದುದರಿಂದ ನಿಮ್ಮ ಮಕ್ಕಳು ವಿಶೇಷವಾಗಿ ಪ್ರಾಪಂಚಿಕ ಸ್ವತ್ತುಗಳ ಮೇಲೆ ಕೇಂದ್ರೀಕರಿಸುತ್ತಿರುವುದಾದರೆ ಅಥವಾ ಕೆಟ್ಟ ಸಹವಾಸ ಅಥವಾ ಅಹಿತಕರವಾದ ಮನೋರಂಜನೆಯ ಕಡೆಗೆ ಬಾಗುತ್ತಿರುವುದಾದರೆ, ಈ ತಪ್ಪಾದ ಪ್ರವೃತ್ತಿಗಳು ಕಡಿದುಹಾಕಲ್ಪಡಬೇಕಾದ ಕೊಂಬೆಗಳಂತಿವೆ. ಅವು ತೆಗೆದುಹಾಕಲ್ಪಡುವುದಾದರೆ, ನಿಮ್ಮ ಮಕ್ಕಳು ಒಂದು ಆತ್ಮಿಕ ದಿಕ್ಕಿನಲ್ಲಿ ಬೆಳೆಯಲು ಸಹಾಯಿಸಲ್ಪಡುತ್ತಾರೆ. ಸವರುವಿಕೆಯು ಒಂದು ಮರಕ್ಕೆ ಒಂದಿಷ್ಟು ಆಘಾತವನ್ನು ಉಂಟುಮಾಡಬಹುದಾದ ರೀತಿಯಲ್ಲಿಯೇ, ಆರಂಭದಲ್ಲಿ ಇಂತಹ ಶಿಸ್ತು ಸಂತೋಷಕರವಾಗಿ ತೋರದಿರಬಹುದು. ಆದರೆ ಶಿಸ್ತಿನ ಉತ್ತಮ ಫಲಿತಾಂಶವು, ನಿಮ್ಮ ಮಗುವು ಬೆಳೆಯಬೇಕೆಂದು ನೀವು ಬಯಸುವ ದಿಕ್ಕಿನಲ್ಲಿ ನವೀಕರಿಸಲ್ಪಟ್ಟ ಬೆಳವಣಿಗೆಯಾಗಿದೆ.—ಇಬ್ರಿಯ 12:5-11.
21, 22. (ಎ) ಶಿಸ್ತನ್ನು ನೀಡುವುದಾಗಲಿ ಪಡೆದುಕೊಳ್ಳುವುದಾಗಲಿ ಆನಂದಕರವಲ್ಲವೆಂಬುದನ್ನು ಯಾವುದು ಸೂಚಿಸುತ್ತದೆ? (ಬಿ) ಹೆತ್ತವರು ಶಿಸ್ತನ್ನು ನೀಡುವುದರಿಂದ ಹಿಂದೇಟು ಹಾಕಬಾರದೇಕೆ?
21 ಶಿಸ್ತನ್ನು ನೀಡುವುದು ಅಥವಾ ಪಡೆದುಕೊಳ್ಳುವುದು ಸಂತೋಷಕರವಾಗಿರುವುದಿಲ್ಲ ಎಂಬುದು ಒಪ್ಪತಕ್ಕ ಮಾತು. ಒಬ್ಬ ತಂದೆಯು ಗಮನಿಸಿದ್ದು: “ಒಳ್ಳೆಯ ಸಹವಾಸವಲ್ಲವೆಂದು ಹಿರಿಯರು ನನಗೆ ಎಚ್ಚರಿಕೆ ನೀಡಿದ್ದ ಒಬ್ಬ ಯೌವನಸ್ಥನೊಂದಿಗೆ ನನ್ನ ಮಗನು ಬಹಳಷ್ಟು ಸಮಯವನ್ನು ಕಳೆಯುತ್ತಿದ್ದನು. ನಾನು ಕ್ರಿಯೆಗೈದುದಕ್ಕಿಂತ ಹೆಚ್ಚು ಕ್ಷಿಪ್ರವಾಗಿ ಕ್ರಿಯೆಗೈದಿರಬೇಕಾಗಿತ್ತು. ನನ್ನ ಮಗನು ಯಾವುದೇ ಉಗ್ರವಾದ ತಪ್ಪುಮಾಡುವಿಕೆಯಲ್ಲಿ ಒಳಗೊಳ್ಳದಿದ್ದರೂ, ಅವನ ಆಲೋಚನೆಯನ್ನು ಮತ್ತೆ ಸರಿಹೊಂದಿಸಲು ಒಂದಿಷ್ಟು ಸಮಯವು ಬೇಕಾಯಿತು.” ಮಗನು ಗಮನಿಸಿದ್ದು: “ನನ್ನ ಪರಮ ಮಿತ್ರನಿಂದ ನಾನು ದೂರಮಾಡಲ್ಪಟ್ಟಾಗ, ನಾನು ಜಜ್ಜಲ್ಪಟ್ಟೆ.” ಆದರೆ ಅವನು ಕೂಡಿಸಿದ್ದು: “ಅದೊಂದು ಒಳ್ಳೆಯ ನಿರ್ಣಯವಾಗಿತ್ತು, ಏಕೆಂದರೆ ಅದಾದ ಸ್ವಲ್ಪದರಲ್ಲೇ ನನ್ನ ಮಿತ್ರನು ಬಹಿಷ್ಕರಿಸಲ್ಪಟ್ಟನು.”
22 ದೇವರ ವಾಕ್ಯವು ಹೇಳುವುದು, “ಶಿಕ್ಷಣಪೂರ್ವಕವಾದ ಬೋಧನೆಯೇ ಜೀವದ ಮಾರ್ಗ.” ಆದುದರಿಂದ ಶಿಸ್ತನ್ನು ನೀಡುವುದು ಎಷ್ಟೇ ಕಷ್ಟಕರವಾಗಿರಲಿ, ನಿಮ್ಮ ಮಕ್ಕಳಿಂದ ಅದನ್ನು ತಡೆದಿಡಿಯಬೇಡಿ. (ಜ್ಞಾನೋಕ್ತಿ 6:23; 23:13; 29:17) ಸಕಾಲದಲ್ಲಿ, ನೀವು ಅವರನ್ನು ಸರಿಪಡಿಸಿದಿರೆಂಬ ವಿಷಯಕ್ಕಾಗಿ ಅವರು ಕೃತಜ್ಞರಾಗಿರುವರು. “ನನಗೆ ಶಿಸ್ತು ನೀಡಲ್ಪಟ್ಟಾಗ ನನ್ನ ಹೆತ್ತವರ ಮೇಲೆ ಬಹಳಷ್ಟು ಕೋಪಗೊಂಡದ್ದು ನನಗೆ ಜ್ಞಾಪಕವಿದೆ,” ಎಂಬುದಾಗಿ ಒಬ್ಬ ಯೌವನಸ್ಥನು ಜ್ಞಾಪಿಸಿಕೊಳ್ಳುತ್ತಾನೆ. “ಈಗ, ಆ ಶಿಸ್ತನ್ನು ನನ್ನ ಹೆತ್ತವರು ನನಗೆ ಕೊಟ್ಟಿರದಿದ್ದರೆ ನಾನು ಇನ್ನೂ ಹೆಚ್ಚು ಕೋಪಗೊಳ್ಳುತ್ತಿದ್ದೆ.”
ಪ್ರಯತ್ನಕ್ಕೆ ಯೋಗ್ಯವಾಗಿರುವ ಪ್ರತಿಫಲ
23. ಎಳೆಯ ಮಕ್ಕಳಲ್ಲಿ ವಿನಿಯೋಗಿಸಲ್ಪಟ್ಟ ಎಲ್ಲ ಪ್ರೀತಿಪರ ಗಮನವು, ಮಾಡಲ್ಪಟ್ಟ ಪ್ರಯತ್ನಕ್ಕೆ ಯೋಗ್ಯವಾಗಿದೆ ಏಕೆ?
23 ಅದರ ಬಗ್ಗೆ ಯಾವ ಸಂದೇಹವೂ ಇರಸಾಧ್ಯವಿಲ್ಲ, ಹೆತ್ತವರು ಅಷ್ಟೇ ಅಲ್ಲದೆ ಇತರರು ಆನಂದವನ್ನು ಕಂಡುಕೊಳ್ಳುವಂತಹ ಮಕ್ಕಳು, ಬಹಳಷ್ಟು ದೈನಿಕ, ಪ್ರೀತಿಪರ ಗಮನದ ಉತ್ಪನ್ನವಾಗಿದ್ದಾರೆ. ಹಾಗಿದ್ದರೂ, ಅವರಲ್ಲಿ ವಿನಿಯೋಗಿಸಲ್ಪಡುವ ಸಕಲ ಪ್ರಯತ್ನವು—ಅವರು ಶಾರೀರಿಕ ಮಕ್ಕಳಾಗಿರಲಿ ಇಲ್ಲವೆ ಆತ್ಮಿಕ ಮಕ್ಕಳಾಗಿರಲಿ—ಅನುಭವಿಸಲ್ಪಡಸಾಧ್ಯವಿರುವ ಪ್ರತಿಫಲಕ್ಕೆ ಯೋಗ್ಯವಾಗಿದೆ. ವೃದ್ಧ ಅಪೊಸ್ತಲ ಯೋಹಾನನು ಹೀಗೆ ಬರೆದಾಗ ಇದನ್ನು ತೋರಿಸಿದನು: “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.”—3 ಯೋಹಾನ 4.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಅವರಿಂದ ಪ್ರಕಾಶಿತ.
ನಿಮಗೆ ನೆನಪಿದೆಯೆ?
◻ ಪ್ರಶಂಸಾರ್ಹರಾಗುವ ಸಲುವಾಗಿ ಸಸಿಗಳಿಗೆ ಮತ್ತು ಮಕ್ಕಳಿಗೆ—ಇಬ್ಬರಿಗೂ—ಯಾವುದರ ಅಗತ್ಯವಿದೆ?
◻ ಹೆತ್ತವರು ಕಾರ್ಯತಃ ಪರಿಣಾಮಕಾರಿ ತರಬೇತು ಗೂಟಗಳಾಗಿ ಹೇಗೆ ಕಾರ್ಯನಡಿಸಬಲ್ಲರು?
◻ ಚಿಕ್ಕ ಮಕ್ಕಳೊಂದಿಗಿನ ಉಪದೇಶಾವಧಿಗಳಲ್ಲಿ ಏನನ್ನು ಸೇರಿಸಸಾಧ್ಯವಿದೆ, ಮತ್ತು ಏನನ್ನು ಪ್ರತಿರೋಧಿಸುವಂತೆ ಅವರು ಕಲಿಸಲ್ಪಡಬೇಕು?
◻ ಒಂದು ಮರಕ್ಕೆ ಸವರುವಿಕೆಯು ಪ್ರಯೋಜನಕಾರಿಯಾಗಿರುವಂತೆಯೇ, ಒಂದು ಮಗುವಿಗೆ ಶಿಸ್ತು ಹೇಗೆ ಪ್ರಯೋಜನಕಾರಿಯಾಗಿದೆ?
[ಪುಟ 10 ರಲ್ಲಿರುವ ಚಿತ್ರ ಕೃಪೆ]
Courtesy of Green Chimney’s Farm