ಯೆಹೋವನ ಜೀವನ ಮಾರ್ಗವನ್ನು ಬೆನ್ನಟ್ಟುವುದೇ ನಮ್ಮ ದೃಢಸಂಕಲ್ಪ
1 “ದೇವರ ಜೀವನ ಮಾರ್ಗ” ಅಧಿವೇಶನಗಳ ಒಂದು ಮುಖ್ಯ ಭಾಗವು, ಮುಕ್ತಾಯದ ಭಾಷಣದಲ್ಲಿ ಸ್ವೀಕರಿಸಲ್ಪಟ್ಟ ಠರಾವು ಆಗಿತ್ತು. ಅದು “ನಾವು, ದೇವರ ಜೀವನ ಮಾರ್ಗವು ಅತ್ಯುತ್ತಮ ಮಾರ್ಗವಾಗಿದೆ ಎಂದು ಹೃತ್ಪೂರ್ವಕವಾಗಿ ಸಮ್ಮತಿಸುತ್ತೇವೆ” ಎಂಬ ಘೋಷಣೆಯಿಂದ ಆರಂಭವಾಯಿತು. ನಾವು “ಹೌದು!” ಎಂದು ಹೇಳಿದ ಠರಾವಿನ ಕೆಲವೊಂದು ಅತಿ ಪ್ರಾಮುಖ್ಯವಾದ ಅಂಶಗಳನ್ನು ಪುನಃ ಜ್ಞಾಪಿಸಿಕೊಳ್ಳಿರಿ.
2 ಯೆಹೋವನ ಮುಂದೆ ಶುದ್ಧರಾಗಿಯೂ, ಈ ಪ್ರಪಂಚದ ದೋಷವು ಹತ್ತದಂತೆಯೂ ಉಳಿಯುವುದೇ ನಮ್ಮ ನಿರ್ಣಯವಾಗಿದೆ. ನಾವು ದೇವರ ಚಿತ್ತವನ್ನು ನಮ್ಮ ಜೀವಿತಗಳಲ್ಲಿ ಪ್ರಥಮವಾಗಿಡುವುದನ್ನು ಮುಂದುವರಿಸುತ್ತಾ ಹೋಗುವೆವು. ಆತನ ವಾಕ್ಯವಾದ ಬೈಬಲನ್ನು ನಮ್ಮ ಮಾರ್ಗದರ್ಶಿಯಾಗಿ ಬಳಸುತ್ತಾ, ನಾವು ಬಲಕ್ಕಾಗಲಿ ಎಡಕ್ಕಾಗಲಿ ಅಡ್ಡತಿರುಗೆವು. ಹೀಗೆ ಲೋಕದ ಮಾರ್ಗಗಳಿಗಿಂತ ದೇವರ ಮಾರ್ಗವು ಎಷ್ಟೋ ಉತ್ಕೃಷ್ಟವೆಂಬುದನ್ನು ದೃಢೀಕರಿಸಿ ತೋರಿಸುವೆವು.
3 ಸಾಮಾನ್ಯವಾಗಿ ಲೋಕವು ದೇವರ ಜೀವನ ಮಾರ್ಗವನ್ನು ಕಡೆಗಣಿಸುತ್ತದೆ ಮತ್ತು ಅದರ ಪರಿಣಾಮಗಳನ್ನು ಅನುಭವಿಸುತ್ತದೆ. (ಯೆರೆ. 10:23) ಆದುದರಿಂದ ನಾವು ನಮ್ಮ ಮಹಾನ್ ಉಪದೇಶಕನಾದ ಯೆಹೋವನಿಂದ ಕಲಿತುಕೊಳ್ಳುತ್ತಾ ಮುಂದುವರಿಯಬೇಕು. ಆತನು ಹೇಳುವುದು: “ಇದೇ ಮಾರ್ಗ, ಇದರಲ್ಲೇ ನಡೆಯಿರಿ.” (ಯೆಶಾ 30:21) ಶಾಸ್ತ್ರಗಳಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ, ಯೆಹೋವನ ಜೀವನ ಮಾರ್ಗವು ಪ್ರತಿಯೊಂದು ವಿಧದಲ್ಲಿಯೂ ಅತಿ ಶ್ರೇಷ್ಠ ಮಟ್ಟದ್ದಾಗಿದೆ. ಆ ಮಾರ್ಗವನ್ನು ಬೆನ್ನಟ್ಟಬೇಕಾದರೆ, ಯೆಹೋವನು ನಮಗೆ ಕಲಿಸುವ ಎಲ್ಲ ವಿಷಯಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವುದು ತುಂಬ ಅಗತ್ಯ.
4 ಯೆಹೋವನ ಶ್ರೇಷ್ಠಮಟ್ಟದ ಬೋಧನಾ ಕಾರ್ಯಕ್ರಮ: ಯೆಹೋವನು ಜೀವಿತದ ನಿಜವಾದ ಉದ್ದೇಶವನ್ನು ಹಾಗೂ ನಮ್ಮ ಜೀವಿತಗಳನ್ನು ನಾವು ಹೇಗೆ ಸಾರ್ಥಕಗೊಳಿಸಬೇಕೆಂಬುದನ್ನು ನಮಗೆ ಕಲಿಸುತ್ತಾನೆ. ಮಾನಸಿಕವಾಗಿ, ನೈತಿಕವಾಗಿ ಹಾಗೂ ಆತ್ಮಿಕವಾಗಿ ನಮ್ಮ ಜೀವಿತಗಳ ಗುಣಮಟ್ಟವನ್ನು ನಾವು ಹೇಗೆ ಸುಧಾರಿಸಿಕೊಳ್ಳಬೇಕೆಂಬುದನ್ನು ಆತನು ನಮಗೆ ಕಲಿಸುತ್ತಾನೆ. ನಮ್ಮ ಸಹೋದರರೊಂದಿಗೆ, ಕುಟುಂಬದೊಂದಿಗೆ ಹಾಗೂ ನಮ್ಮ ಜೊತೆಮಾನವರೊಂದಿಗೆ ಹೇಗೆ ಶಾಂತಿಯಿಂದ ಬಾಳುವುದೆಂಬುದನ್ನು ಆತನು ನಮಗೆ ಕಲಿಸುತ್ತಾನೆ. ಇದನ್ನು ಆತನು ತನ್ನ ಪಠ್ಯಪುಸ್ತಕವಾದ ಬೈಬಲಿನ ಮೂಲಕ ಮತ್ತು ತನ್ನ ಸಂಸ್ಥೆಯ ಮೂಲಕ ಕಲಿಸುತ್ತಾನೆ.
5 ಈ ವಿಷಯದಲ್ಲಿ ನಮ್ಮ ಸಭಾ ಕೂಟಗಳು ತುಂಬ ಪ್ರಾಮುಖ್ಯವಾಗಿವೆ. ನಾವು ಕ್ರಮವಾಗಿ ಎಲ್ಲ ಐದು ಕೂಟಗಳಲ್ಲಿ ಹಾಜರಾಗಿ, ಭಾಗವಹಿಸುವಾಗ, ಸುವಾರ್ತೆಯ ಶುಶ್ರೂಷಕರೋಪಾದಿ ಸಮಗ್ರ ತರಬೇತಿಯನ್ನು ಮತ್ತು ಕ್ರೈಸ್ತ ಜೀವಿತದ ಕುರಿತು ಸ್ಥಿರವಾದ ಶಿಕ್ಷಣವನ್ನು ಪಡೆದುಕೊಳ್ಳುತ್ತೇವೆ. (2 ತಿಮೊ. 3:16, 17) ನಮ್ಮ ಮಹಾನ್ ಉಪದೇಶಕನು ಹೆಚ್ಚಿನ ದೇವಪ್ರಭುತ್ವ ಶಿಕ್ಷಣವನ್ನು ಸಮ್ಮೇಳನಗಳು ಹಾಗೂ ಅಧಿವೇಶನಗಳ ಮುಖಾಂತರವೂ ಒದಗಿಸುತ್ತಾನೆ. ಆದುದರಿಂದ ನಮ್ಮ ಆರೋಗ್ಯ ಇಲ್ಲವೇ ಪರಿಸ್ಥಿತಿಗಳು ಕೂಟಗಳನ್ನು ಹಾಜರಾಗಲು ಅನುಮತಿಸುವುದಾದರೆ, ನಾವು ಒಂದು ಕೂಟವನ್ನೂ ಎಂದೂ ತಪ್ಪಿಸಿಕೊಳ್ಳಬಾರದು ಎಂಬುದೇ ನಮ್ಮ ಗುರಿಯಾಗಿರಬೇಕು.
6 ನಾವು ಮುಂದಿನ ದಿನಗಳಲ್ಲಿಯೂ ದೇವರ ಜೀವನ ಮಾರ್ಗವನ್ನು ಶ್ರದ್ಧೆಯಿಂದ ಬೆನ್ನಟ್ಟುತ್ತಾ ಇರುವಂತಾಗಲಿ. ಇದು ಯೆಹೋವನಿಗೆ ಸ್ತುತಿಯನ್ನು ಮತ್ತು ನಮಗೆ ಅನಂತ ಪ್ರಯೋಜನವನ್ನು ತರುವುದು!—ಯೆಶಾ. 48:17.