ತಪ್ಪಾದ ಹೇತುಗಳನ್ನು ಆರೋಪಿಸುವುದರ ವಿರುದ್ಧ ಎಚ್ಚರವಾಗಿರಿ
ಒಬ್ಬ ಪ್ರಸಿದ್ಧ ಟೆಲಿವಿಷನ್ ಸೌವಾರ್ತಿಕನು, ತನ್ನ ಜೊತೆಸೌವಾರ್ತಿಕನು ವ್ಯಭಿಚಾರವನ್ನು ನಡಿಸಿದ್ದಕ್ಕಾಗಿ ಅವನ ಕುರಿತಾಗಿ ಗಾಸಿಗೊಳಿಸುವ ದೂಷಣೆಯನ್ನು ಹೊರಡಿಸಿದನು. ಆದರೆ ಒಂದೇ ವರ್ಷದೊಳಗೆ, ಆ ಆರೋಪಹೊರಿಸಿದ ಸೌವಾರ್ತಿಕನನ್ನೇ ಒಬ್ಬ ವೇಶ್ಯೆಯೊಂದಿಗೆ ಹಿಡಿಯಲಾಯಿತು.
ಇನ್ನೊಂದು ವಿದ್ಯಮಾನದಲ್ಲಿ, ಒಂದು ಅಗ್ರಗಣ್ಯ ಲೋಕ ಶಕ್ತಿಯು, ಯುದ್ಧಮಾಡುತ್ತಿರುವ ಪಕ್ಷಗಳು ಶಾಂತಿಸಂಧಾನಗಳನ್ನು ಮಾಡುವಂತೆ ಬೇಹುಗಾರರನ್ನು ಕಳುಹಿಸಿತು. ಅದೇ ಸಮಯದಲ್ಲಿ, ಅದೇ ರಾಷ್ಟ್ರವು, ಕೋಟಿಗಟ್ಟಲೆ ಬೆಲೆಯ ಆಯುಧಗಳನ್ನು ಮಾರಲಿಕ್ಕಾಗಿ ವಿದೇಶೀ ರಾಷ್ಟ್ರಗಳಿಗೆ ತನ್ನ ಶಸ್ತ್ರಾಸ್ತ್ರ ವ್ಯಾಪಾರಿಗಳನ್ನು ಕಳುಹಿಸಿತು.
ಎದ್ದುಕಾಣುವ ಕಪಟಾಚಾರವು ಇಷ್ಟು ಸಾಮಾನ್ಯವಾಗಿರುವುದರಿಂದ, ಸಂದೇಹವಾದವು ಭರವಸೆಯನ್ನು ಅತಿಯಾಗಿ ಸ್ಥಾನಲ್ಲಟಗೊಳಿಸಿರುವುದು ಆಶ್ಚರ್ಯದ ಸಂಗತಿಯೊ? ಅನೇಕರಿಗೆ, ಇತರರ ಹೇತುಗಳನ್ನು ಪ್ರಶ್ನಿಸುವುದು ಅಭ್ಯಾಸವಾಗಿಬಿಟ್ಟಿದೆ.
ಕ್ರೈಸ್ತರೋಪಾದಿ, ಅಂತಹ ಮನೋಭಾವಗಳು ನಂಬಿಗಸ್ತ ಜೊತೆ ವಿಶ್ವಾಸಿಗಳೊಂದಿಗಿನ ನಮ್ಮ ಸಂಬಂಧವನ್ನು ಬಾಧಿಸಲು ಅನುಮತಿಸದಿರುವಂತೆ ನಾವು ಜಾಗರೂಕರಾಗಿರಬೇಕು. ನಮ್ಮ ಶತ್ರುಗಳ ನಡುವೆ ಇರುವಾಗ, ನಾವು “ಸರ್ಪಗಳಂತೆ ಜಾಣರೂ” ಆಗಿರುವಂತೆ ಯೇಸು ಕ್ರಿಸ್ತನು ನಮ್ಮನ್ನು ಪ್ರೇರಿಸಿದರೂ, ನಾವು ಅವನ ನಿಜ ಹಿಂಬಾಲಕರ ಕುರಿತಾಗಿ ಶಂಕಿಸುವವರಾಗಿರಬೇಕೆಂದು ಅವನು ಹೇಳಲಿಲ್ಲ. (ಮತ್ತಾಯ 10:16) ಹಾಗಾದರೆ, ಇತರರಿಗೆ ತಪ್ಪಾದ ಹೇತುಗಳನ್ನು ಆರೋಪಿಸುವುದರ ಅಪಾಯಗಳು ಯಾವುವು? ಯಾವ ಕ್ಷೇತ್ರಗಳಲ್ಲಿ ಅಂತಹ ಒಂದು ಒಲವನ್ನು ದೂರಮಾಡಲು ನಾವು ವಿಶೇಷವಾಗಿ ಜಾಗರೂಕರಾಗಿರಬೇಕು? ಮತ್ತು ಜೊತೆ ಕ್ರೈಸ್ತರೊಂದಿಗಿನ ನಮ್ಮ ಅಮೂಲ್ಯವಾದ ಸಂಬಂಧವನ್ನು ನಾವು ಹೇಗೆ ರಕ್ಷಿಸಿಕೊಳ್ಳಸಾಧ್ಯವಿದೆ?
ಗತಕಾಲದಿಂದ ಒಂದು ಪಾಠ
ವಾಸ್ತವಿಕವಾದ ಕಾರಣವಿಲ್ಲದೆ ಇತರರ ಮೇಲೆ ತಪ್ಪಾದ ಹೇತುಗಳನ್ನು ಆರೋಪಿಸುವುದು, ಅವರಿಗೆ ತೀರ್ಪು ಮಾಡುವುದಕ್ಕೆ ಸಮಾನವಾಗಿದೆ. ಅದು, ಅವರ ಮಾತುಗಳು ಅಥವಾ ಕೃತ್ಯಗಳು, ಯಾವುದೊ ವಂಚನೆಯನ್ನು ಅಥವಾ ದ್ವೇಷಕಾರ್ಯವನ್ನು ಮರೆಮಾಚುತ್ತಿರುವ ಬರಿಯ ಮೋಸವಾಗಿವೆಯೆಂಬ ತೀರ್ಮಾನಕ್ಕೆ ಬಂದಂತೆ ಇದೆ. ಅನೇಕ ವೇಳೆ ಸಮಸ್ಯೆಯ ಕಾರಣವು, ವಿಷಯಗಳ ಕುರಿತಾದ ತಪ್ಪಾದ ನೋಟವಾಗಿದೆ. ಇದನ್ನು ಯೆಹೋಶುವ ಅಧ್ಯಾಯ 22ರಲ್ಲಿ ಕಂಡುಬರುವ ಬೈಬಲ್ ವೃತ್ತಾಂತದಲ್ಲಿ ನೋಡಸಾಧ್ಯವಿದೆ.
ಇಸ್ರಾಯೇಲ್ಯರು ವಾಗ್ದತ್ತ ದೇಶದ ತಮ್ಮ ವಿಜಯವನ್ನು ಪೂರ್ಣಗೊಳಿಸಿದ್ದರು ಮತ್ತು ಆಗ ತಾನೇ ತಮ್ಮ ಕುಲಸಂಬಂಧಿತ ಕ್ಷೇತ್ರಗಳನ್ನು ಪಡೆದಿದ್ದರು. ರೂಬೆನ್ ಮತ್ತು ಗಾದ್ ಕುಲಗಳು, ಹಾಗೂ ಮನಸ್ಸೆಯ ಅರ್ಧ ಕುಲವು, ಯೊರ್ದಾನ್ ನದಿಯ ಪಕ್ಕದಲ್ಲಿ “ಒಂದು ಮಹಾವೇದಿಯನ್ನು” ಕಟ್ಟಿತು. ಇದು ಧರ್ಮಭ್ರಷ್ಟತೆಯ ಒಂದು ಕೃತ್ಯವಾಗಿದೆಯೆಂದು ಇತರ ಕುಲಗಳು ತಪ್ಪಾಗಿ ಊಹಿಸಿಕೊಂಡವು. ಆ ಮೂರು ಕುಲಗಳು, ಆರಾಧನೆಗಾಗಿರುವ ನೇಮಿತ ಸ್ಥಳವಾದ ಶೀಲೋವಿನಲ್ಲಿರುವ ದೇವದರ್ಶನದ ಗುಡಾರಕ್ಕೆ ಹೋಗುವ ಬದಲಿಗೆ, ಈ ಬೃಹತ್ತಾದ ಕಟ್ಟೋಣವನ್ನು ಯಜ್ಞಕ್ಕಾಗಿ ಉಪಯೋಗಿಸಲಿವೆಯೆಂದು ಎಣಿಸಲಾಯಿತು. ಆರೋಪಹೊರಿಸಿದಂತಹ ಕುಲಗಳು ತತ್ಕ್ಷಣ ಮಿಲಿಟರಿ ಕಾರ್ಯಾಚರಣೆಗಾಗಿ ಸಿದ್ಧತೆಗಳನ್ನು ನಡಿಸಿದವು.—ಯೆಹೋಶುವ 22:10-12.
ಫಿನೇಹಾಸನ ಮುಂದಾಳುತ್ವದಲ್ಲಿ ಒಂದು ಅಧಿಕೃತ ಪ್ರತಿನಿಧಿತಂಡವನ್ನು ಕಳುಹಿಸುವ ಮೂಲಕ, ತಮ್ಮ ಇಸ್ರಾಯೇಲ್ಯ ಸಹೋದರರೊಂದಿಗೆ ಅವರು ಸಂವಾದಮಾಡಿದ್ದು ಪ್ರಶಂಸಾರ್ಹ. ಅಪನಂಬಿಗಸ್ತಿಕೆ, ದಂಗೆ, ಮತ್ತು ಯೆಹೋವನ ವಿರುದ್ಧವಾದ ಧರ್ಮಭ್ರಷ್ಟತೆಯ ಆರೋಪಗಳನ್ನು ಕೇಳಿದ ಬಳಿಕ, ತಪ್ಪುಮಾಡುತ್ತಿವೆಯೆಂದು ಎಣಿಸಲಾದಂತಹ ಕುಲಗಳು, ಈ ಮಹಾವೇದಿಯನ್ನು ಕಟ್ಟಿದಂತಹ ಕಾರಣವನ್ನು ವಿವರಿಸಿದವು. ಯಜ್ಞಕ್ಕಾಗಿ ಒಂದು ವೇದಿಯಾಗಿರುವ ಬದಲಿಗೆ, ಅದು ಯೆಹೋವನನ್ನು ಆರಾಧಿಸುವುದರಲ್ಲಿ ಇಸ್ರಾಯೇಲ್ಯ ಕುಲಗಳ ಐಕ್ಯದ ಒಂದು “ಸಾಕ್ಷಿಯಾಗಿ”ರಲಿತ್ತು. (ಯೆಹೋಶುವ 22:26, 27) ತಮ್ಮ ಸಹೋದರರು ಯಾವ ತಪ್ಪನ್ನೂ ಮಾಡಿಲ್ಲ ಎಂಬ ತೃಪ್ತಿಯೊಂದಿಗೆ ಆ ಪ್ರತಿನಿಧಿತಂಡವು ಮನೆಗೆ ಹಿಂದಿರುಗಿತು. ಈ ರೀತಿಯಲ್ಲಿ ಒಂದು ಪೌರ ಯುದ್ಧ ಮತ್ತು ಘೋರವಾದ ರಕ್ತಪಾತವು ತಪ್ಪಿಸಲ್ಪಟ್ಟಿತು.
ಇತರರ ಮೇಲೆ ತಪ್ಪಾದ ಹೇತುಗಳನ್ನು ಆರೋಪಿಸುವುದರಲ್ಲಿ ಎಂದೂ ತ್ವರಿತರಾಗಿರದಿರಲು ನಮಗೆ ಎಂತಹ ಒಂದು ಪಾಠ! ಬರಿಯ ಹೊರಗಿನ ಅವಲೋಕನೆಯಿಂದ ಯಾವುದು ಸತ್ಯವೆಂದು ತೋರುತ್ತದೊ ಅದು, ಹೆಚ್ಚು ನಿಕಟವಾದ ಪರಿಶೀಲನೆಯ ಸಮಯದಲ್ಲಿ ಪೂರ್ತಿಯಾಗಿ ಭಿನ್ನವಾಗಿ ಕಂಡುಬರುತ್ತದೆ. ಇದು ಒಬ್ಬ ಕ್ರೈಸ್ತನ ಜೀವಿತದ ಅನೇಕ ಭಾಗಗಳಲ್ಲಿ ಸತ್ಯವಾಗಿರುತ್ತದೆ.
ಹಿರಿಯರ ಕುರಿತಾದ ನಮ್ಮ ನೋಟ
ಹಿರಿಯರು “ಸಭೆಯನ್ನು ಪರಿಪಾಲಿಸುವದಕ್ಕಾಗಿ”ರುವ ತಮ್ಮ ಜವಾಬ್ದಾರಿಯನ್ನು ಪೂರೈಸುವಾಗ, ಸಭೆಯಲ್ಲಿರುವ ವಿಭಿನ್ನ ವ್ಯಕ್ತಿಗಳಿಗೆ ಕೆಲವೊಮ್ಮೆ ಸಲಹೆಯನ್ನು ಕೊಡುವುದು ಅವಶ್ಯವೆಂಬುದನ್ನು ಕಂಡುಕೊಳ್ಳುತ್ತಾರೆ. (ಅ. ಕೃತ್ಯಗಳು 20:28) ದೃಷ್ಟಾಂತಕ್ಕಾಗಿ, ಒಬ್ಬ ಹಿರಿಯನು, ಕೆಟ್ಟ ಸಹವಾಸ ಅಥವಾ ವಿರುದ್ಧ ಲಿಂಗಜಾತಿಯ ಒಬ್ಬರೊಂದಿಗೆ ಅಯೋಗ್ಯವಾದ ನಡತೆಯಂತಹ ವಿಷಯದಲ್ಲಿ, ನಮ್ಮ ಮಕ್ಕಳ ಕುರಿತಾಗಿ ನಮ್ಮೊಂದಿಗೆ ಮಾತಾಡುವಾಗ ನಾವು ಹೇಗೆ ಪ್ರತಿಕ್ರಿಯೆ ತೋರಿಸುತ್ತೇವೆ? ಅವನಿಗೆ ಒಂದು ಗುಪ್ತವಾದ ಹೇತುವಿದೆಯೆಂದು ನಾವು ಊಹಿಸಿಕೊಂಡು, ‘ಅವನು ಎಂದೂ ನಮ್ಮ ಕುಟುಂಬವನ್ನು ಇಷ್ಟಪಡಲಿಲ್ಲ’ ಎಂದು ನಮ್ಮಷ್ಟಕ್ಕೇ ಹೇಳಿಕೊಳ್ಳುತ್ತೇವೊ? ಅಂತಹ ಅನಿಸಿಕೆಗಳು ನಮ್ಮನ್ನು ಪ್ರಭಾವಿಸುವಂತೆ ನಾವು ಅನುಮತಿಸುವಲ್ಲಿ, ನಾವು ಅನಂತರ ವಿಷಾದಿಸಬೇಕಾಗಬಹುದು. ನಮ್ಮ ಮಕ್ಕಳ ಆತ್ಮಿಕ ಹಿತವು ಗಂಡಾಂತರದಲ್ಲಿರಬಹುದು, ಮತ್ತು ನಾವು ಸಹಾಯಕಾರಿ ಶಾಸ್ತ್ರೀಯ ಸಲಹೆಯನ್ನು ಗಣ್ಯಮಾಡಬೇಕು.—ಜ್ಞಾನೋಕ್ತಿ 12:15.
ಒಬ್ಬ ಸಭಾ ಹಿರಿಯನು ನಮಗೆ ಸಲಹೆ ಕೊಡುವಾಗ, ನಾವು ಒಂದು ಗುಪ್ತ ಹೇತುವಿಗಾಗಿ ಹುಡುಕದಿರೋಣ. ಬದಲಾಗಿ, ನಾವು ಅವನ ಬೈಬಲಾಧಾರಿತ ಸಲಹೆಯಿಂದ ಪ್ರಯೋಜನವನ್ನು ಪಡೆಯಸಾಧ್ಯವಿರುವ ಯಾವುದೇ ಮಾರ್ಗವಿದೆಯೊ ಎಂದು ನಮ್ಮನ್ನೇ ಕೇಳಿಕೊಳ್ಳೋಣ. ಅಪೊಸ್ತಲ ಪೌಲನು ಬರೆದುದು: “ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ.” (ಇಬ್ರಿಯ 12:11) ಆದುದರಿಂದ ನಾವು ಕೃತಜ್ಞಭಾವದವರಾಗಿರೋಣ ಮತ್ತು ವಿಷಯಗಳ ಕುರಿತಾಗಿ ವಾಸ್ತವಿಕ ನೋಟದಿಂದ ಯೋಚಿಸೋಣ. ನಮಗೆ ಸಲಹೆಯನ್ನು ಸ್ವೀಕರಿಸುವುದು ಎಷ್ಟು ಕಷ್ಟಕರವೊ, ಅನೇಕವೇಳೆ ಹಿರಿಯರಿಗೂ ಸಲಹೆ ಕೊಡುವುದು ಅಷ್ಟೇ ಕಷ್ಟಕರವಾಗಿರುತ್ತದೆಂಬುದನ್ನು ನೆನಪಿನಲ್ಲಿಡಿರಿ.
ಹೆತ್ತವರ ಕುರಿತಾದ ಅನಿಸಿಕೆಗಳು
ಹೆತ್ತವರ ನಿರ್ದಿಷ್ಟ ನಿರ್ಬಂಧಗಳನ್ನು ಎದುರಿಸುವಾಗ, ಕೆಲವು ಯುವ ಜನರು ತಮ್ಮ ಹೆತ್ತವರ ಹೇತುಗಳನ್ನು ಪ್ರಶ್ನಿಸುತ್ತಾರೆ. ಕೆಲವು ಯುವ ಜನರು ಹೀಗೆ ಹೇಳಬಹುದು: ‘ನನ್ನ ಹೆತ್ತವರು ಇಷ್ಟೊಂದು ನಿಯಮಗಳನ್ನು ಏಕೆ ಮಾಡುತ್ತಾರೆ? ನಾನು ಜೀವನದಲ್ಲಿ ಆನಂದಿಸಬೇಕೆಂಬುದನ್ನು ಅವರು ಖಂಡಿತವಾಗಿಯೂ ಬಯಸುವುದಿಲ್ಲ.’ ಅಂತಹ ಒಂದು ತೀರ್ಮಾನಕ್ಕೆ ಬರುವ ಬದಲಿಗೆ, ಯುವ ವ್ಯಕ್ತಿಗಳು ಸನ್ನಿವೇಶವನ್ನು ವಾಸ್ತವಿಕ ನೋಟದಿಂದ ವಿಶ್ಲೇಷಿಸಬೇಕು.
ಹೆತ್ತವರು ತಮ್ಮ ಮಕ್ಕಳನ್ನು ಪರಾಮರಿಸುವುದರಲ್ಲಿ ಅನೇಕ ವರ್ಷಗಳನ್ನು ವ್ಯಯಿಸಿದ್ದಾರೆ. ಇದನ್ನು ಮಾಡಲು ಅವರು, ಭೌತಿಕವಾಗಿ ಮತ್ತು ಬೇರೆ ರೀತಿಯಲ್ಲೂ ದೊಡ್ಡ ತ್ಯಾಗವನ್ನು ಮಾಡಿದ್ದಾರೆ. ಈಗ ಅವರು ತಮ್ಮ ಹದಿವಯಸ್ಕ ಮಕ್ಕಳ ಜೀವನವನ್ನು ಸಂಕಟಕರಗೊಳಿಸಲು ದೃಢನಿಶ್ಚಯವುಳ್ಳವರಾಗಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಯಾವುದೇ ಕಾರಣವಿದೆಯೊ? ಇಂತಹ ಹೆತ್ತವರು ತಮ್ಮ ಮಕ್ಕಳನ್ನು ಸಂರಕ್ಷಿಸಲು ಮತ್ತು ಪರಾಮರಿಸಲು, ಪ್ರೀತಿಯು ಪ್ರಚೋದಿಸುತ್ತದೆಂಬುದು ಹೆಚ್ಚು ವಿವೇಚನೆಯ ಸಂಗತಿಯಲ್ಲವೊ? ಜೀವನದಲ್ಲಿ ಈಗ ಹೊಸ ಪಂಥಾಹ್ವಾನಗಳನ್ನು ಎದುರಿಸುತ್ತಿರುವ ತಮ್ಮ ಮಕ್ಕಳ ಮೇಲೆ ನಿರ್ದಿಷ್ಟ ನಿರ್ಬಂಧಗಳನ್ನು ಇಡುವಂತೆ ಅದೇ ಪ್ರೀತಿಯು ಅವರನ್ನು ಪ್ರಚೋದಿಸಿರದೇ? ಪ್ರೀತಿಯ ಹೆತ್ತವರ ಮೇಲೆ ತಪ್ಪಾದ ಹೇತುಗಳನ್ನು ಆರೋಪಿಸುವುದು ಎಷ್ಟು ಕ್ರೂರವೂ ಕೃತಘ್ನವೂ ಆಗಿರುವುದು!—ಎಫೆಸ 6:1-3.
ಜೊತೆ ಕ್ರೈಸ್ತರ ಕಡೆಗೆ ನಮ್ಮ ಮನೋಭಾವ
ಅನೇಕರು ಇತರರ ಕುರಿತು ಪೂರ್ವಕಲ್ಪಿತ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮತ್ತು ಅವರನ್ನು ವರ್ಗೀಕರಿಸುವ ಪ್ರವೃತ್ತಿಯವರಾಗಿರುತ್ತಾರೆ. ಸ್ವತಃ ನಮಗೆ ಅಂತಹ ಒಂದು ಮನೋಭಾವವಿದ್ದು, ನಿರ್ದಿಷ್ಟ ಜನರ ಕುರಿತಾಗಿ ಸ್ವಲ್ಪ ಶಂಕಿಸುವವರಾಗಿದ್ದಲ್ಲಿ ಆಗೇನು? ಈ ಸಂಬಂಧದಲ್ಲಿ ನಾವು ಲೋಕದಿಂದ ಪ್ರಭಾವಿಸಲ್ಪಟ್ಟಿರುವ ಸಾಧ್ಯತೆಯಿದೆಯೊ?
ಉದಾಹರಣೆಗಾಗಿ, ನಮ್ಮ ಆತ್ಮಿಕ ಸಹೋದರರಲ್ಲಿ ಒಬ್ಬನಿಗೆ ಒಂದು ಒಳ್ಳೆಯ ಮನೆ ಮತ್ತು ಒಂದು ದುಬಾರಿ ವಾಹನವಿದೆಯೆಂದು ಎಣಿಸಿರಿ. ಅವನು ಜೀವನದಲ್ಲಿ ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡದ, ಪ್ರಾಪಂಚಿಕ ಸ್ವಭಾವದವನು ಎಂದು ನಾವು ಅಪ್ರಜ್ಞಾಪೂರ್ವಕವಾಗಿ ತೀರ್ಮಾನಿಸಬೇಕೊ? ಕೆಲವು ಕ್ರೈಸ್ತರು ಉತ್ತಮ ವಸ್ತುಗಳನ್ನು ಪಡೆಯಲು ಸಮರ್ಥರಾಗಿರಬಹುದು, ಆದರೆ ಇದು ಅವರಿಗೆ ಕೆಟ್ಟ ಹೇತುಗಳಿವೆ ಅಥವಾ ಅವರು ‘ದೇವರ ರಾಜ್ಯಕ್ಕಾಗಿ ತವಕಪಡು’ವುದಿಲ್ಲವೆಂಬುದನ್ನು ಅರ್ಥೈಸುವುದಿಲ್ಲ. ರಾಜ್ಯಾಭಿರುಚಿಗಳನ್ನು ಪ್ರವರ್ಧಿಸಲು ಅವರು ಪ್ರಾಯಶಃ ಎದ್ದುಕಾಣದ ರೀತಿಯಲ್ಲಿ ತಮ್ಮ ಭೌತಿಕ ಸಂಪತ್ತುಗಳನ್ನು ಉದಾರವಾಗಿ ಉಪಯೋಗಿಸುತ್ತಾ, ಆತ್ಮಿಕ ಚಟುವಟಿಕೆಗಳಲ್ಲಿ ತುಂಬ ಕಾರ್ಯಮಗ್ನರಾಗಿರಬಹುದು.—ಮತ್ತಾಯ 6:1-4, 33.
ಪ್ರಥಮ ಶತಮಾನದ ಕ್ರೈಸ್ತ ಸಭೆಯು, ಎಲ್ಲಾ ವಿಧಗಳ—ಐಶ್ವರ್ಯವಂತ ಹಾಗೂ ಬಡ—ಜನರಿಂದ ರಚಿತವಾಗಿತ್ತು. (ಅ. ಕೃತ್ಯಗಳು 17:34; 1 ತಿಮೊಥೆಯ 2:3, 4; 6:17; ಯಾಕೋಬ 2:5) ದೇವರು ಜನರನ್ನು ಅವರ ಹಣಕಾಸಿನ ನಿಲುವಿನ ಆಧಾರದ ಮೇಲೆ ಮೌಲ್ಯಮಾಪನ ಮಾಡುವುದಿಲ್ಲ, ಮತ್ತು ನಾವೂ ಹಾಗೆ ಮಾಡಬಾರದು. “ವಿಚಾರಿಸುವದಕ್ಕೆ ಮೊದಲೇ ತಪ್ಪುಹೊರಿಸದೆ,” ನಮ್ಮ ಪರೀಕ್ಷಿಸಲ್ಪಟ್ಟ ಮತ್ತು ನಂಬಿಗಸ್ತ ಜೊತೆವಿಶ್ವಾಸಿಗಳನ್ನು ನಾವು ಪ್ರೀತಿಸಬೇಕು.—1 ತಿಮೊಥೆಯ 5:21.
ಸೈತಾನನ ಅಧಿಕಾರದ ಕೆಳಗಿರುವ ಈ ಲೋಕದಲ್ಲಿ, ವರ್ಗೀಕರಿಸುವಿಕೆ ಮತ್ತು ಶಂಕೆಯು, ವಿಭಿನ್ನ ರೂಪಗಳಲ್ಲಿ ವ್ಯಕ್ತಪಡಿಸಲ್ಪಡುತ್ತದೆ. ಉದಾಹರಣೆಗಾಗಿ, ಒಬ್ಬ ವ್ಯಕ್ತಿಯು ಕೇವಲ ತನ್ನ ಹಿನ್ನೆಲೆಯಿಂದಾಗಿ, ಹಿಂಸಾಚಾರಿಯಾಗಿ ಅಥವಾ ಪ್ರಾಪಂಚಿಕ ಸ್ವಭಾವದವನಾಗಿ ದೃಷ್ಟಿಸಲ್ಪಡಬಹುದು. ಆದಾಗಲೂ ಕ್ರೈಸ್ತರೋಪಾದಿ, ನಾವು ಅಂತಹ ಮನೋಭಾವಗಳಿಗೆ ಬಲಿಬೀಳಬಾರದು. ಯೆಹೋವನ ಸಂಸ್ಥೆಯು ಅಂಧಾಭಿಮಾನ ಮತ್ತು ಶಂಕೆಯ ಸ್ಥಳವಾಗಿರುವುದಿಲ್ಲ. ಎಲ್ಲಾ ನಿಜ ಕ್ರೈಸ್ತರು, “ಅನೀತಿಯೂ ಪಕ್ಷಪಾತವೂ ಇಲ್ಲದ” ಯೆಹೋವ ದೇವರನ್ನು ಅನುಕರಿಸುವ ಅಗತ್ಯವಿದೆ.—2 ಪೂರ್ವಕಾಲವೃತ್ತಾಂತ 19:7; ಅ. ಕೃತ್ಯಗಳು 10:34, 35.
ಪ್ರೀತಿಯಿಂದ ಪ್ರೇರಿಸಲ್ಪಟ್ಟವರಾಗಿರಿ
“ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ” ಎಂದು ಶಾಸ್ತ್ರಗಳು ಸ್ಪಷ್ಟವಾಗಿ ಹೇಳುತ್ತವೆ. (ರೋಮಾಪುರ 3:23) ಆದುದರಿಂದ ನಾವು ನಮ್ಮ ಜೊತೆ ಆರಾಧಕರನ್ನು, ಯೆಹೋವನಿಗೆ ಸ್ವೀಕಾರಾರ್ಹವಾದ ಸೇವೆಯನ್ನು ಸಲ್ಲಿಸಲು ಶ್ರಮಿಸುವುದರಲ್ಲಿ ನಮ್ಮೊಂದಿಗೆ ಐಕ್ಯರಾಗಿರುವವರೋಪಾದಿ ದೃಷ್ಟಿಸುವ ಅಗತ್ಯವಿದೆ. ಶಂಕೆ ಅಥವಾ ಇತರ ನಕಾರಾತ್ಮಕ ಅನಿಸಿಕೆಗಳು, ಒಬ್ಬ ಆತ್ಮಿಕ ಸಹೋದರ ಅಥವಾ ಸಹೋದರಿಯೊಂದಿಗಿನ ನಮ್ಮ ಸಂಬಂಧವನ್ನು ಬಾಧಿಸುವಂತೆ ನಾವು ಅನುಮತಿಸಿರುವಲ್ಲಿ, ನಾವು ಸೈತಾನನಿಗೆ ಆಹಾರವಾಗದಂತೆ ಅಂತಹ ಒಂದು ಮನೋಭಾವವನ್ನು ಪ್ರತಿಭಟಿಸುವಂತೆ ದೇವರ ಸಹಾಯಕ್ಕಾಗಿ ಪ್ರಾರ್ಥಿಸೋಣ. (ಮತ್ತಾಯ 6:13) ಯೆಹೋವನಿಗೆ ಕೆಟ್ಟ ಹೇತುಗಳಿವೆ, ಆಕೆಯ ಹಿತಾರ್ಥದ ಕುರಿತಾಗಿ ಆತನು ಚಿಂತಿಸುವುದಿಲ್ಲ, ಮತ್ತು ಅವಳನ್ನು ನಿಜವಾಗಿಯೂ ಸಂತೋಷಪಡಿಸುವ ಸ್ವಾತಂತ್ರ್ಯಗಳನ್ನು ತಡೆಹಿಡಿಯುತ್ತಿದ್ದಾನೆಂದು ಸೈತಾನನು ಹವ್ವಳಿಗೆ ಮನಗಾಣಿಸಿದನು. (ಆದಿಕಾಂಡ 3:1-5) ನಮ್ಮ ಸಹೋದರರ ಮೇಲೆ ತಪ್ಪಾದ ಹೇತುಗಳನ್ನು ಆರೋಪಿಸುವುದು, ಅವನ ಉದ್ದೇಶಗಳನ್ನು ಪೂರೈಸುತ್ತದೆ.—2 ಕೊರಿಂಥ 2:11; 1 ಪೇತ್ರ 5:8.
ಇತರರ ಮೇಲೆ ತಪ್ಪಾದ ಹೇತುಗಳನ್ನು ಆರೋಪಿಸುವ ಒಂದು ಒಲವು ನಮ್ಮಲ್ಲಿದೆಯೆಂಬುದನ್ನು ನಾವು ಕಂಡುಕೊಳ್ಳುವಲ್ಲಿ, ಯೇಸು ಕ್ರಿಸ್ತನ ಮಾದರಿಯನ್ನು ಪರಿಗಣಿಸಿರಿ. ಅವನು ದೇವರ ಪರಿಪೂರ್ಣ ಪುತ್ರನಾಗಿದ್ದರೂ, ಅವನು ತನ್ನ ಶಿಷ್ಯರಲ್ಲಿ ಕೆಟ್ಟ ಹೇತುಗಳನ್ನು ಹುಡುಕಲಿಲ್ಲ. ಬದಲಾಗಿ, ಯೇಸು ಅವರಲ್ಲಿದ್ದ ಒಳಿತನ್ನು ಹುಡುಕಿದನು. ತನ್ನ ಶಿಷ್ಯರು ಪ್ರಖ್ಯಾತಿಯ ಒಂದು ಸ್ಥಾನಕ್ಕಾಗಿ ಕಾದಾಡುತ್ತಿದ್ದಾಗ, ಅವರಿಗೆ ಭ್ರಷ್ಟವಾದ ಹೇತುಗಳಿವೆಯೆಂದು ಊಹಿಸಿ, 12 ಮಂದಿ ಹೊಸ ಅಪೊಸ್ತಲರಿಂದ ಅವರ ಸ್ಥಾನಭರ್ತಿಮಾಡಲಿಲ್ಲ. (ಮಾರ್ಕ 9:34, 35) ಅಪರಿಪೂರ್ಣರಾಗಿರಲಾಗಿ, ಗರ್ವ ಮತ್ತು ಜಾತಿಭೇದಗಳ ಮೇಲಿನ ಒತ್ತು ಇದ್ದಂತಹ ಧರ್ಮಭ್ರಷ್ಟ ಯೂದಾಯಮತದ ಸಂಸ್ಕೃತಿಯಿಂದ ಅವರು ಯಾವುದೊ ರೀತಿಯಲ್ಲಿ ಪ್ರಭಾವಿಸಲ್ಪಟ್ಟಿದ್ದಿರಬಹುದು. ತನ್ನ ಹಿಂಬಾಲಕರ ಮೂಲಭೂತ ಪ್ರಚೋದನೆಯು, ಯೆಹೋವನಿಗಾಗಿರುವ ಪ್ರೀತಿಯಾಗಿತ್ತೆಂಬುದು ಯೇಸುವಿಗೆ ತಿಳಿದಿತ್ತು. ಅಂತಹ ಪ್ರೀತಿಯನ್ನು ಪ್ರದರ್ಶಿಸಿದ್ದಕ್ಕಾಗಿ ಮತ್ತು ಯೇಸುವಿನೊಂದಿಗೆ ಅಂಟಿಕೊಂಡಿದ್ದುದಕ್ಕಾಗಿ, ಅವರು ಬಹಳವಾಗಿ ಬಹುಮಾನಿಸಲ್ಪಟ್ಟರು.—ಲೂಕ 22:28-30.
ನಾವು ನಮ್ಮ ನಂಬಿಗಸ್ತ ಜೊತೆ ವಿಶ್ವಾಸಿಗಳನ್ನು ಶಂಕಾಸ್ಪದವಾಗಿ ನೋಡುವಲ್ಲಿ, ಇದು ವಿಷಯಗಳನ್ನು ಒಂದು ವಿಕೃತವಾದ ಲೆನ್ಸ್ಗಳ ಮೂಲಕ ನೋಡಿದಂತೆ ಇರುವುದು. ಯಾವುದೇ ವಿಷಯವು ಅದು ನಿಜವಾಗಿ ಇರುವಂತಹ ರೀತಿಯಲ್ಲಿ ತೋರಿಬರಲಿಕ್ಕಿಲ್ಲ. ಆದುದರಿಂದ ನಾವು ಪ್ರೀತಿಯ ಲೆನ್ಸ್ಗಳ ಮೂಲಕ ನೋಡೋಣ. ನಿಷ್ಠಾವಂತ ಜೊತೆ ಕ್ರೈಸ್ತರು ನಮ್ಮನ್ನು ಪ್ರೀತಿಸುತ್ತಾರೆ ಮತ್ತು ನಮ್ಮ ದಯಾಪರ ಪರಿಗಣನೆಗೆ ಅರ್ಹರಾಗಿದ್ದಾರೆಂಬುದಕ್ಕೆ ಹೇರಳವಾದ ರುಜುವಾತಿದೆ. (1 ಕೊರಿಂಥ 13:4-8) ಆದುದರಿಂದ, ನಾವು ಅವರಿಗೆ ಪ್ರೀತಿಯನ್ನು ತೋರಿಸಿ, ತಪ್ಪು ಹೇತುಗಳನ್ನು ಆರೋಪಿಸುವುದರ ವಿರುದ್ಧ ಎಚ್ಚರವಿರುವಂತಾಗಲಿ.
[ಪುಟ 26 ರಲ್ಲಿರುವ ಚಿತ್ರ]
ದೇವರನ್ನು ನಂಬಿಗಸ್ತಿಕೆಯಿಂದ ಆರಾಧಿಸುವ ಇತರರನ್ನು ನೀವು ಹೇಗೆ ವೀಕ್ಷಿಸುತ್ತೀರಿ?
[ಪುಟ 27 ರಲ್ಲಿರುವ ಚಿತ್ರ]
ಭರವಸೆ ಮತ್ತು ಗೌರವವು, ಯೆಹೋವನ ಸಾಕ್ಷಿಗಳನ್ನು ಒಂದು ಸಂತೋಷದ ಕುಟುಂಬವನ್ನಾಗಿ ಮಾಡುತ್ತದೆ