ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮೊದಲ ನೋಟಕ್ಕೂ ಬಳಿಕ ಎಂದೆಂದಿಗೂ ಪ್ರೇಮ!
    ಎಚ್ಚರ!—1992 | ಅಕ್ಟೋಬರ್‌ 8
    • ಆಗಸ್ಟ್‌ 7, 1989ರ ಯು.ಎಸ್‌. ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ ಸರಿಯಾಗಿಯೆ ಹೇಳಿದ್ದು: “ಕ್ರೂರ ಶಿಕ್ಷೆ ಕೊಡದ, ಆದರೂ ಸ್ಥಿರವಾದ ಮೇರೆಗಳನ್ನು ಕೊಟ್ಟು ಅವುಗಳಿಗೆ ಅಂಟುವ ಹೆತ್ತವರು ಹೆಚ್ಚು ಸಾಧಿಸುವ ಮತ್ತು ಇತರರೊಂದಿಗೆ ಹೊಂದಿಕೊಂಡು ಹೋಗುವ ಮಕ್ಕಳನ್ನು ಉತ್ಪಾದಿಸುವ ಗಮನಾರ್ಹ ಸಂಭವವಿದೆ.” ಅದರ ಸಮಾಪ್ತಿಯಲ್ಲಿ ಆ ಲೇಖನ ಹೇಳಿದ್ದು: “ಪ್ರಾಯಶಃ ವಿಜ್ಞಾನದ ಸಕಲ ಆಧಾರಾಂಶಗಳಿಂದ ಹೊರಬಂದ ಗಮನಾರ್ಹವಾದ ಮುಖ್ಯ ವಿಷಯವೇನಂದರೆ, ಪ್ರತಿ ಕುಟುಂಬದಲ್ಲಿ ಪ್ರೀತಿ, ಭರವಸೆ ಮತ್ತು ಸ್ವೀಕಾರಯೋಗ್ಯ ಮಿತಿಗಳ ನಮೂನೆಯನ್ನು ಸ್ಥಾಪಿಸುವುದು ಪ್ರಾಮುಖ್ಯ, ತುಂಬ ಯಾಂತ್ರಿಕ ವಿವರಗಳಲ್ಲ. ಶಿಷ್ಯ ಎಂಬ ಪದಕ್ಕಿರುವ ಲ್ಯಾಟಿನ್‌ ಮೂಲವೇ ಇರುವ ಶಿಸ್ತು ಎಂಬ ಪದದ ನಿಜ ಗುರಿಯು ನಿಯಮವನ್ನು ಅನುಸರಿಸದ ಮಕ್ಕಳನ್ನು ಶಿಕ್ಷಿಸುವುದಲ್ಲ, ಬದಲಿಗೆ ಅವರಿಗೆ ಕಲಿಸಿ, ಮಾರ್ಗದರ್ಶಿಸಿ, ಆಂತರಿಕ ನಿಯಂತ್ರಣಗಳನ್ನು ಹಾಕಲು ಸಹಾಯ ಮಾಡುವುದೇ ಆಗಿದೆ.”

      ನೀವು ಹೇಳುವುದನ್ನು ಅವರು ಕೇಳಿ ನೀವು ಮಾಡುವುದನ್ನು ನಕಲು ಮಾಡುತ್ತಾರೆ

      ದಿ ಆ್ಯಟ್ಲಾಂಟಿಕ್‌ ಮಂತ್ಲಿಯಲ್ಲಿ ಬಂದ ಶಿಸ್ತಿನ ಕುರಿತ ಒಂದು ಲೇಖನದ ಆರಂಭ ಹೀಗಿತ್ತು: “ತಾವು ಕಲಿಸುವ ಮೌಲ್ಯಗಳಿಗನುಸಾರ ಹೆತ್ತವರು ಜೀವಿಸುವಲ್ಲಿ ಮಾತ್ರ ಮಗುವಿನ ವರ್ತನೆ ಒಳ್ಳೆಯದಾಗಿರಬಹುದೆಂದು ನಿರೀಕ್ಷಿಸಬಹುದು.” ಆಂತರಿಕ ನಿಯಂತ್ರಣಗಳ ಮೌಲ್ಯವನ್ನು ಆ ಲೇಖನ ತೋರಿಸುತ್ತಾ ಹೇಳಿದ್ದು: “ಸ್ವದರ್ತನೆಯಿರುವ ಹದಿಪ್ರಾಯದವರಿಗೆ ಜವಾಬ್ದಾರಿಯ, ಪ್ರಾಮಾಣಿಕರಾದ ಮತ್ತು ಸ್ವಶಿಸ್ತಿನ—ತಾವು ಹೇಳುವ ಮೌಲ್ಯಗಳಂತೆ ತಾವೇ ಜೀವಿಸಿ ತಮ್ಮ ಮಕ್ಕಳೂ ಹಾಗೆ ಮಾಡುವಂತೆ ಪ್ರೋತ್ಸಾಹಿಸಿದ ಹೆತ್ತವರಿದ್ದರು. ಈ ಸಂಶೋಧನೆಯ ಭಾಗವಾಗಿ, ಈ ಒಳ್ಳೆಯ ಹದಿವಯಸ್ಸಿನವರನ್ನು ಸಮಸ್ಯೆಯಿದ್ದ ಹದಿಪ್ರಾಯದವರ ಜೊತೆಯಲ್ಲಿ ಬಿಟ್ಟಾಗ, ಇದು ಅವರ ವರ್ತನೆಯ ಮೇಲೆ ಕಾಯಂ ಪರಿಣಾಮವನ್ನು ಬೀಳಿಸಲಿಲ್ಲ. ಏಕೆಂದರೆ ಅವರು ತಮ್ಮ ಹೆತ್ತವರ ಮೌಲ್ಯಗಳನ್ನು ಆಂತರಿಕವಾಗಿ ಎಷ್ಟೊ ಹೆಚ್ಚು ಭದ್ರವಾಗಿ ಕಟ್ಟಿದ್ದರು.” ಇದು ಜ್ಞಾನೋಕ್ತಿ ಹೇಳಿರುವಂತೆಯೇ ಇದೆ: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.”—ಜ್ಞಾನೋಕ್ತಿ 22:6.

      ಆದರೆ, ತಮ್ಮ ಮಕ್ಕಳಲ್ಲಿ ನಿಜ ಮೌಲ್ಯಗಳನ್ನು ಹಾಕಲು ಪ್ರಯತ್ನಿಸಿ, ತಾವೇ ಹಾಗೆ ಮಾಡದ ಹೆತ್ತವರಿಗೆ ಸಾಫಲ್ಯ ದೊರೆಯಲಿಲ್ಲ. ಅವರ ಮಕ್ಕಳು “ಆ ಮೌಲ್ಯಗಳನ್ನು ಆಂತರಿಕವಾಗಿ ಇಟ್ಟುಕೊಳ್ಳಲು ಶಕ್ತರಾಗಲಿಲ್ಲ.” “ಇದ್ದ ವ್ಯತ್ಯಾಸವು, ಹೆತ್ತವರು ತಮ್ಮ ಮಕ್ಕಳಿಗೆ ಕಲಿಸಪ್ರಯತ್ನಿಸಿದ ಮೌಲ್ಯಗಳನ್ನು ತಾವೇ ಎಷ್ಟು ಒತ್ತಾಗಿ ಪಾಲಿಸಿದರು” ಎಂಬುದಾಗಿತ್ತು ಎಂದು ಆ ಅಧ್ಯಯನ ರುಜುಮಾಡಿತು.

      ಲೇಖಕ ಜೇಮ್ಸ್‌ ಬಾಲ್ಡ್‌ವಿನ್‌ ಹೇಳಿದಂತೆ ಇದಿದೆ: “ಮಕ್ಕಳು ದೊಡ್ಡವರ ಮಾತನ್ನು ಕೇಳುವುದರಲ್ಲಿ ಎಂದೂ ಹೆಚ್ಚು ಒಳ್ಳೆತನವನ್ನು ತೋರಿಸಿದ್ದಿಲ್ಲ, ಆದರೆ ಅವರನ್ನು ಅನುಕರಿಸಲು ಮಕ್ಕಳು ಎಂದೂ ತಪ್ಪಿದ್ದೂ ಇಲ್ಲ.” ನೀವು ನಿಮ್ಮ ಮಕ್ಕಳನ್ನು ಪ್ರೀತಿಸುವಲ್ಲಿ ಮತ್ತು ನಿಜ ಮೌಲ್ಯಗಳನ್ನು ಕಲಿಸಲು ಅಪೇಕ್ಷಿಸುವಲ್ಲಿ, ಸರ್ವೋತ್ತಮ ವಿಧಾನವನ್ನು ಉಪಯೋಗಿಸಿರಿ: ನಿಮ್ಮ ಸ್ವಂತ ಉಪದೇಶಕ್ಕೆ ನೀವೇ ಮಾದರಿಯಾಗಿರಿ. ಯೇಸು ಯಾರನ್ನು ಕಪಟಿಗಳೆಂದು ಕರೆದನೊ ಆ ಶಾಸ್ತ್ರಿ, ಫರಿಸಾಯರಂತೆ ನೀವಿರಬೇಡಿ: “ಆದದರಿಂದ ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ, ಕಾಪಾಡಿಕೊಳ್ಳಿರಿ; ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೇ ಹೊರತು ನಡೆಯುವದಿಲ್ಲ.” (ಮತ್ತಾಯ 23:3) ಅಪೊಸ್ತಲ ಪೌಲನು ಅಪವಾದ ಹೊರಿಸಿ ಪ್ರಶ್ನಿಸಿದವರಂತೆಯೂ ನೀವಿರಬೇಡಿ: “ಮತ್ತೊಬ್ಬನಿಗೆ ಉಪದೇಶ ಮಾಡುವ ನೀನು ನಿನಗೆ ಉಪದೇಶ ಮಾಡಿಕೊಳ್ಳದೆ ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನು ಕದಿಯುತ್ತೀಯೋ?”—ರೋಮಾಪುರ 2:21.

      ಇಂದು ಅನೇಕರು ಬೈಬಲನ್ನು ಅದು ಹಳೆಯ ರೀತಿಯದ್ದೆಂದೂ ಅದರ ಮಾರ್ಗದರ್ಶನಗಳು ಅಪ್ರಾಯೋಗಿಕವೆಂದೂ ಹೇಳಿ ತ್ಯಜಿಸುತ್ತಾರೆ. ಯೇಸು ಈ ನೆಲೆಯನ್ನು ಈ ಮಾತುಗಳಿಂದ ವಿವಾದಕ್ಕೆ ಕರೆಯುತ್ತಾನೆ: “ಆದರೆ ಜ್ಞಾನವು [ವಿವೇಕ, NW] ಸಕಲ ಜ್ಞಾನಾವಲಂಬಿಗಳ ಮೂಲಕ ಜ್ಞಾನವೇ ಎಂದು ಗೊತ್ತಾಗುವದು.” (ಲೂಕ 7:35) ಅನೇಕ ದೇಶಗಳ ಕುಟುಂಬಗಳಿಂದ ಬಂದಿರುವ ಈ ಕೆಳಗಿನ ಹೇಳಿಕೆಗಳು ಅವನ ಮಾತುಗಳ ನಿಜತ್ವವನ್ನು ರುಜುಪಡಿಸುತ್ತವೆ. (g91 9/22)

  • ಲೋಕವ್ಯಾಪಕವಾಗಿ ಕುಟುಂಬಗಳನ್ನು ಬೆಳೆಸುವುದು ಪ್ರೀತಿ, ಶಿಸ್ತು, ಮಾದರಿ, ಮತ್ತು ಆತ್ಮಿಕ ಮೌಲ್ಯಗಳಿಂದ ಪಾಲನೆ ಮಾಡುವುದು
    ಎಚ್ಚರ!—1992 | ಅಕ್ಟೋಬರ್‌ 8
    • ಲೋಕವ್ಯಾಪಕವಾಗಿ ಕುಟುಂಬಗಳನ್ನು ಬೆಳೆಸುವುದು ಪ್ರೀತಿ, ಶಿಸ್ತು, ಮಾದರಿ, ಮತ್ತು ಆತ್ಮಿಕ ಮೌಲ್ಯಗಳಿಂದ ಪಾಲನೆ ಮಾಡುವುದು

      ಅನೇಕ ದೇಶಗಳ ಹೆತ್ತವರು, ತಾವು ಮಕ್ಕಳನ್ನು ಶೈಶವದಿಂದ ಹದಿಪ್ರಾಯದ ವರೆಗೆ ಹೇಗೆ ಯಶಸ್ವಿಯಾಗಿ ಬೆಳೆಸಿದ್ದಾರೆಂಬ ಬಗೆಗೆ ವರದಿಗಳನ್ನು ಕಳುಹಿಸಿದ್ದಾರೆ. ಇವರೆಲ್ಲರೂ ಯೆಹೋವನ ಸಾಕ್ಷಿಗಳು, ಮತ್ತು ಈ ಕಾರಣದಿಂದ ಅವರ ವರದಿಗಳು ಮೇಲೆ ಶೀರ್ಷಿಕೆಯಲ್ಲಿ ಕೊಟ್ಟಿರುವ ನಾಲ್ಕು ವಿಷಯಕ್ಷೇತ್ರಗಳಲ್ಲಿ ಗಮನ ನೀಡುವ ಆವಶ್ಯಕತೆಯನ್ನು ಒತ್ತಿಹೇಳುತ್ತವೆ. ಇಲ್ಲಿ ಕೊಟ್ಟಿರುವ ಎತ್ತಿಕೆಗಳು ಅವರು ಅನುಸರಿಸಿದ ಕುಟುಂಬ ತರಬೇತಿನ ಕೇವಲ ಕೆಲವೇ ವಿಭಿನ್ನ ರೀತಿಗಳನ್ನು ಪ್ರತಿಬಿಂಬಿಸುತ್ತವೆ.

      ಹವಾಯಿಯಿಂದ

      “ಬೈಬಲು ನಮಗೆ ಹೇಳುವಂತೆ, ಪ್ರೀತಿ ‘ಅತಿ ದೊಡ್ಡ’ ಗುಣವಾಗಿದೆ. ಈ ಪ್ರೀತಿ ಅದರ ಸಮಸ್ತ ಅಮೂಲ್ಯ ರೂಪಗಳಲ್ಲಿ ಮನೆ ಮತ್ತು ಕುಟುಂಬದಲ್ಲೆಲ್ಲ ಹರಿಯಬೇಕು. ಈ ದೈವಿಕ ಗುಣದಲ್ಲಿ ಕ್ಯಾರಲ್‌ ಮತ್ತು ನಾನು ನಮ್ಮ ವಿವಾಹದಲ್ಲಿ ಪಾಲಿಗರಾಗಿದ್ದೇವೆ. ನಾವು ಆಪ್ತರು. ನಮಗೆ ಜೊತೆಯಾಗಿರುವುದು ಇಷ್ಟ. ಮಕ್ಕಳನ್ನು ಸಫಲ ರೀತಿಯಲ್ಲಿ ಬೆಳೆಸುವುದಕ್ಕಿರುವ ದೊಡ್ಡ ಕೀಲಿಕೈ ಸಂತುಷ್ಟ ವಿವಾಹಿತ ದಂಪತಿಗಳು ಎಂಬ ನನ್ನ ನಂಬಿಕೆಯನ್ನು ಹೆಚ್ಚು ಒತ್ತಿ ಹೇಳಲಾರೆ.

      “ನಮ್ಮ ಮೊದಲನೆಯ ಮಗು ಹುಟ್ಟಿದ ಅನಂತರದ ದಿನ, ವಾರಗಳಲ್ಲಿ ನನ್ನಲ್ಲಿ ಉಕ್ಕಿ ಬಂದ ಬಲಾಢ್ಯವಾದ ಅನಿಸಿಕೆಗಳನ್ನು ನಾನು ಇಂದು ಸಹ ನೆನಸುತ್ತೇನೆ. ಒಂದು ಹೊಸ ಜೀವಿಯ ಆರಂಭದ ವಿಷಯ ಸೋಜಿಗ ನನ್ನಲ್ಲಿತ್ತು. ರೇಚೆಲ್‌ ಮಗುವಿಗೆ ಕ್ಯಾರಲ್‌ ಮೊಲೆ ಕುಡಿಸುವಾಗ ಅವಳಲ್ಲಿದ್ದ ಸಂತೋಷ ಮತ್ತು ಸಂತೃಪ್ತಿಯನ್ನು ನೋಡಿದ ಜ್ಞಾಪಕ ನನಗಿದೆ. ಅವಳ ಸಂತೋಷದಲ್ಲಿ ನಾನು ಸಂತೋಷಿಸಿದೆನಾದರೂ, ತುಸು ಅಸಮಾಧಾನ, ಅಸೂಯೆ ನನ್ನಲ್ಲಿ ಉಂಟಾಯಿತು. ಕ್ಯಾರಲ್‌ ರೇಚೆಲಳೊಂದಿಗೆ ಒಂದಾಗಿದ್ದರೂ ನನ್ನ ಸಂಬಂಧವೆಲ್ಲಿದೆ? ನಾನು ಕುಟುಂಬ ಕೇಂದ್ರದಿಂದ ಹೊರತಳ್ಳಲ್ಪಟ್ಟೀದ್ದೇನೆ—ಮೃದುವಾಗಿ, ಆದರೂ ತಳ್ಳಲ್ಪಟ್ಟದ್ದು ನಿಜ—ಎಂಬ ಅನಿಸಿಕೆ ನನಗಾಯಿತು. ಯೆಹೋವನ ಸಹಾಯದಿಂದ, ನಾನು ನನ್ನ ಅನಿಸಿಕೆ ಮತ್ತು ಚಿಂತೆಗಳನ್ನು ಕ್ಯಾರಲಿಗೆ ವ್ಯಕ್ತಪಡಿಸಲಾಗಿ, ಅವಳು ನನಗೆ ಬಲು ಸಹಾನುಭೂತಿ ಮತ್ತು ಬೆಂಬಲವನ್ನು ಕೊಟ್ಟಳು.

      “ಆ ಬಳಿಕ ಮಗುವಿನ ಸಂಬಂಧದ ಕೆಲಸ ಕಾರ್ಯಗಳಲ್ಲಿ—ಅಹಿತಕರವಾದ ಕೆಲಸಗಳನ್ನು ಸಹ ಮಾಡಿ—ಹೊಸ ಕೂಸಿಗೆ ಹೆಚ್ಚು ಹತ್ತಿರ ಬರಲು ಸಾಧ್ಯವಾಯಿತು. ಹೊಲಸಾಗಿರುವ ಕೂಸಿನ ಚೌಕವನ್ನು ಶುಚಿ ಮಾಡುವುದು ಅದ್ವಿತೀಯ ಅನುಭವವೆಂದರೆ ಅದು ಅತಿಶಯೋಕ್ತಿಯಲ್ಲ! ರೇಚೆಲಳ ಬಳಿಕ ನಮಗೆ ಐದು ಮಕ್ಕಳಾದವು. ಕೊನೆಯವಳಾದ ರಿಬೆಕಗೆ ಈಗ ಎಂಟು ವರ್ಷ ವಯಸ್ಸು. ನಾವು ನಮ್ಮ ಪ್ರತಿಯೊಂದು ಮಗುವಿನೊಂದಿಗೆ ವೈಯಕ್ತಿಕವಾಗಿ ಬೈಬಲ್‌ ಅಧ್ಯಯನ ಮಾಡಿದ್ದೇವೆ.

      “ಮಕ್ಕಳ ಮೊದಲಣ ಬೆಳೆಸುವಿಕೆಯ ಸಂಬಂಧದಲ್ಲಿ ಇನ್ನೊಂದು ವಿಷಯ. ಕ್ಯಾರಲ್‌ ಮತ್ತು ನಾನು, ಮಕ್ಕಳು ಹುಟ್ಟಿದಂದಿನಿಂದ ಅವರೊಂದಿಗೆ ಮಾತಾಡಿದ್ದೇವೆ. ಸಕಲ ವಿಷಯಗಳ ಕುರಿತೂ ಮಾತಾಡಿದ್ದೇವೆ. ಯೆಹೋವ ಮತ್ತು ಆತನ ಸುಂದರವಾದ, ಅದ್ಭುತಕರವಾದ ಕಾರ್ಯಗಳ ಕುರಿತು ಕೆಲವು ಸಲ ಮಾತಾಡುತ್ತಿದ್ದೆವು. ಇನ್ನು ಕೆಲವು ಸಲ, ಬಾಲಲೀಲೆಯ ಮಾತು, ಆಟದ, ವಿನೋದ ಮಾತುಗಳನ್ನಾಡುತ್ತಿದ್ದೆವು. ನಾವು ಅವರಿಗೆ ಏನೋ ಕಲಿಸಲು ಪ್ರಯತ್ನಿಸುತ್ತಿದ್ದೆವು ಸರಿ, ಆದರೆ ಇದಕ್ಕಿಂತಲೂ ಹೆಚ್ಚಾಗಿ, ನಮಗೆ ಅವು ಕೇವಲ ಸುಖಕರವಾದ, ವಿಶ್ರಮದ, ಸರಳತೆಯ ಸಮಯಗಳಾಗಿದ್ದವು. ಇಂಥ ಸಲ್ಲಾಪಗಳು ಹೆತ್ತವರು ಮತ್ತು ಮಗುವಿನ ಅಂಟಿಕೆಗೆ ಹೆಚ್ಚು ಸಹಾಯ ಮಾಡಿದೆಯೆಂದು ನನ್ನ ನಂಬಿಕೆ. ನಮ್ಮ ಕುಟುಂಬದಲ್ಲಿದ್ದ ಉತ್ತಮ ಮಾತುಸಂಪರ್ಕಕ್ಕೆ ಇದು ಸಹಾಯ ಮಾಡಿದೆಯೆಂಬುದು ನಿಸ್ಸಂದೇಹ.

      “ಯೆಹೋವನು ನಮಗೆ ಆತ್ಮಿಕ ವಿಷಯಗಳ, ಸ್ವತ್ಯಾಗದ ಹೆಚ್ಚಿನ ಮೌಲ್ಯವನ್ನು ಕಲಿಸಿದ್ದಾನೆ. ಕ್ಯಾರಲ್‌ ಮತ್ತು ನನಗೆ ಪ್ರಾಪಂಚಿಕ ವಸ್ತುಗಳ ಸಮೃದ್ಧಿ ಎಂದೂ ಇದ್ದಿರಲಿಲವ್ಲಾದರೂ ನಾವು ಅವುಗಳ ಬೆನ್ನಟ್ಟಿರುವುದೂ ಇಲ್ಲ, ಅವುಗಳ ಕೊರತೆಯನ್ನು ಅನುಭವಿಸಿರುವುದೂ ಇಲ್ಲ. ನಮ್ಮ ಸಮಯದಲ್ಲಿ ಹೆಚ್ಚಿನದನ್ನು ಸಂಪತ್ತಿನ ಚಾಕರಿಯಲ್ಲಿ ಕಳೆಯುತ್ತಿದ್ದರೆ, ಯೆಹೋವನ ಮತ್ತು ನಮ್ಮ ಕುಟುಂಬದ ವಿನಿಯೋಗಕ್ಕಾಗಿ ನಮ್ಮಲ್ಲಿ ಸಾಕಷ್ಟು ಸಮಯವಿರುತ್ತಿರಲಿಲ್ಲ. ನಾವು ಸರಿಯಾದ ನಿರ್ಣಯ ಮಾಡಿದೆವು.” (ಕ್ಯಾರಲಳ ಹೇಳಿಕೆ ಈ ಕೆಳಗಿದೆ.)

      “ಮಗುವಿಗೆ ಮೊಲೆ ಕುಡಿಸುವುದು ತಾಯಿಗಳ ಮತ್ತು ಕೂಸುಗಳ ಅಂಟಿಕೆಗೆ ಹೆಚ್ಚು ಸಹಾಯ ಮಾಡುತ್ತದೆಂದು ನನ್ನ ಅಭಿಪ್ರಾಯ. ಮಗುವನ್ನು ಸದಾ ಮುದ್ದಿಸುತ್ತಾ ಹೊರುತ್ತಾ ಸಮಯ ಕಳೆಯುವಾಗ ಹತ್ತಿರ ಬರುವುದು ಅನಿವಾರ್ಯ. ಒಬ್ಬ ತಾಯಿ ತನ್ನ ಮಗುವಿನ ಮಗ್ಗುಲಿಂದ ಎರಡರಿಂದ ನಾಲ್ಕು ತಾಸುಗಳಿಗಿಂತ ಹೆಚ್ಚು ಕಾಲ ದೂರವಿರಲೇಬಾರದು. ಮಕ್ಕಳನ್ನು ಶಿಶುಪಾಲಕರೊಡನೆ ಬಿಡುವ ವಿಷಯ ಎಡ್‌ ಮತ್ತು ನಾನು ಸದಾ ಕಟ್ಟುನಿಟ್ಟಾಗಿದೆವ್ದು. ಮಕ್ಕಳು ಬೆಳೆಯುವಾಗ ಅವುಗಳಿಗೆ ಕಲಿಸಿ, ಪ್ರೇಕ್ಷಿಸುವುದು ಯಾವಾಗಲೂ ನನ್ನ ಅಪೇಕ್ಷೆಯಾಗಿತ್ತು. ಈ ಕಾರಣದಿಂದ, ಅವರು ಚಿಕ್ಕವರಾಗಿದ್ದಾಗ ನಾನು ಮನೆಯಿಂದ ಹೊರಗೆ ಉದ್ಯೋಗಕ್ಕೆ ಹೋಗಲಿಲ್ಲ. ತಾವು ಎಷ್ಟು ಪ್ರಾಮುಖ್ಯರೆಂದು ಅವರು ಗ್ರಹಿಸುವಂತೆ ಇದು ಸಹಾಯ ಮಾಡಿತೆಂದು ನನ್ನ ಅಭಿಪ್ರಾಯ. ನಿಮ್ಮ ಮಕ್ಕಳ ಸಮೀಪ ಬರಲು ಇರುವ ಮುಖ್ಯ ದಾರಿ ಅವರೊಂದಿಗೆ ಸಮಯವನ್ನು ಕಳೆಯುವುದೆ. ನೀವೇ ಶಾರೀರಿಕವಾಗಿ ಮನೆಯಲ್ಲಿರುವುದಕ್ಕೆ ಬದಲಾಗಿ ನಿಲ್ಲುವ ವಿಷಯವೇ ಇಲ್ಲ. ಮನೆಯ ಹೊರಗಿಂದ ಬರುವ ಯಾವ ಪ್ರಾಪಂಚಿಕ ವಸ್ತುವೂ ನಿಮ್ಮ ಸ್ಥಾನದಲ್ಲಿ ನಿಲ್ಲಲಾರದು.

      “ಹದಿಪ್ರಾಯದ ವರ್ಷಗಳು ಮಕ್ಕಳ ಬೆಳವಣಿಗೆಗೆ ನಾನು ಹೊಂದಿಕೊಳ್ಳಬೇಕಾಗಿದ್ದ ಕಾರಣದಿಂದ ಮಾತ್ರ ಕಷ್ಟಕರವಾಗಿದ್ದವು. ಅವರಿಗೆ ನನ್ನ ಅವಶ್ಯ ಹಿಂದೆ ಇದ್ದಷ್ಟು ಇಲ್ಲ ಮತ್ತು ಅವರು ಸ್ವತಂತ್ರರಾಗುತ್ತಿದ್ದಾರೆ ಎಂದು ತಿಳಿಯುವುದು ಅತಿ ಕಠಿಣವಾಗಿತ್ತು. ಇದು ಗಾಬರಿಗೊಳಿಸುವ ಸಮಯ, ಮತ್ತು ನೀವು ಮಾಡಿರುವ ಕಲಿಸುವಿಕೆ, ಶಿಸ್ತು, ಮತ್ತು ರೂಪಿಸುವ ಕೆಲಸವನ್ನೆಲ್ಲ ಇದು ಶೋಧಿಸುತ್ತದೆ. ಅವರ ಹದಿವಯಸ್ಸಿನಲ್ಲಿ ಇದನ್ನು ಆರಂಭಿಸುವುದು ಹೊತ್ತು ಮೀರಿದಂತೆಯೆ ಸರಿ. ಆಗ ನೈತಿಕತೆ, ಮಾನವ ಸಂತತಿಗೆ ತೋರಿಸಬೇಕಾದ ಪ್ರೀತಿ, ಮತ್ತು ವಿಶೇಷವಾಗಿ, ಯೆಹೋವನಿಗೆ ತೋರಿಸಬೇಕಾದ ಪ್ರೀತಿಯನ್ನು ಕಲಿಸ ಪ್ರಯತ್ನಿಸಲಿಕ್ಕೂ ಕಾಲ ವಿಳಂಬವಾಗಿ ಹೋಗಿರುತ್ತದೆ. ಇವುಗಳನ್ನು ಜನನದಿಂದಲೆ ಮನಸ್ಸಿಗೆ ಹತ್ತಿಸಲೇ ಬೇಕು.

      “ಆ ಕಷ್ಟಕರವಾದ ಹದಿ ವರ್ಷಗಳು ಬರುವ ಮೊದಲು ನಿಮ್ಮ ಕೆಲಸ ಮಾಡಿ ಮುಗಿಸಲು ನಿಮಗೆ ಹನ್ನೆರಡು ವರ್ಷಗಳಿವೆ. ಆದರೆ ಬೈಬಲ್‌ ಮೂಲಸೂತ್ರಗಳನ್ನು ಅನ್ವಯಿಸಲು ನೀವು ಕಠಿಣ ಪ್ರಯಾಸಪಟ್ಟಿರುವಲ್ಲಿ, ಅವರು ತಮ್ಮ ಹೃದಯದಿಂದ ತಮಗೆ ಯೆಹೋವನನ್ನು ಸೇವಿಸಲು ಮನಸ್ಸಿದೆ ಎಂದು ನಿರ್ಧರಿಸುವಾಗ, ಅದು ನೀವು ಸಂತೋಷ ಮತ್ತು ಶಾಂತಿಯನ್ನು ಕೊಯ್ಯುವ ಸಮಯ.”—ಎಡರ್ಡ್ವ್‌ ಮತ್ತು ಕ್ಯಾರಲ್‌ ಓಎನ್ಸ್‌.

      ಸಿಂಬಾಬೆಯ್ವಿಂದ

      “ಮಕ್ಕಳು ‘ಯೆಹೋವನಿಂದ ದೊರೆಯುವ ಸ್ವಾಸ್ತ್ಯ.’ ಹಾಗೆಂದು ಬೈಬಲು ಕೀರ್ತನೆ 127:3ರಲ್ಲಿ ಹೇಳುತ್ತದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡದ್ದರಿಂದ ಈ ಸ್ವಾಸ್ತ್ಯವನ್ನು ಪರಾಮರಿಸಲು ಹೆತ್ತವರಾಗಿರುವ ನಾವು ಸಾಧ್ಯವಾಗುವುದನ್ನೆಲ್ಲ ಮಾಡಲು ಸಹಾಯ ದೊರಕಿದೆ. ನಮ್ಮ ಕುಟುಂಬ ಪ್ರಯತ್ನಗಳಲ್ಲಿ ಪ್ರಾಥಮಿಕವಾಗಿದ್ದುದು ಜೊತೆಗೂಡಿ ಕೆಲಸ ಮಾಡುವುದೆ. ಪ್ರಾರ್ಥನೆ, ಬೈಬಲ್‌ ಅಧ್ಯಯನ, ಆರಾಧನೆ, ಕೆಲಸ, ಸ್ನೇಹಿತರ ಭೇಟಿ, ಮತ್ತು ಆಟ—ಇವೆಲ್ಲವನ್ನು ನಾವು ಕೂಡಿ ಮಾಡುತ್ತಿದ್ದೆವು.

      “ಕೆಲವು ಸಲ ಶಿಸ್ತು ಅಗತ್ಯವಿತ್ತು. ಒಂದು ದಿನ, ಹದಿಪ್ರಾಯದ ಆರಂಭದಲ್ಲಿದ್ದ ನಮ್ಮ ಮಗ ಮನೆಗೆ ಬಂದು ಸೇರುವಾಗ ತಡವಾಗಿತ್ತು. ನಮಗೆ ಚಿಂತೆಯಾಗಿತ್ತು. ಕೇಳಿದ ಪ್ರಶ್ನೆಗಳನ್ನು ತಪ್ಪಿಸಿಕೊಳ್ಳಲು ಅವನು ಪ್ರಯತ್ನಿಸಿದ. ಏನೋ ದೋಷವಾಗಿದೆ ಎಂದು ನಾವು ತಿಳಿದರೂ ಮರುದಿನ ಬೆಳಿಗ್ಗಿನ ತನಕ ಅದನ್ನು ಮುಂದೆ ದೂಡಲು ನಿರ್ಣಯಿಸಿದೆವು. ಸುಮಾರು ಮಧ್ಯರಾತ್ರಿಯಲ್ಲಿ ನಮ್ಮ ಮಲಗುವ ಕೋಣೆಯ ಬಾಗಿಲು ತಟ್ಟುವ ಸದ್ದು ಕೇಳಿಸಿತು. ನಮ್ಮ ಮಗನು ಕಣ್ಣೀರು ಸುರಿಸುತ್ತ ನಿಂತಿದ್ದನು.

      “‘ಅಪ್ಪಾ, ಅಮ್ಮಾ, ಕೆಟ್ಟ ಸಹವಾಸದ ವಿಷಯ ಬೈಬಲಿನಿಂದ ನೀವು ನನಗೆ ಬುದ್ಧಿ ಹೇಳಿದಾಗ ನಾನು ಕೇಳದಿದ್ದ ಕಾರಣ, ಕಳೆದ ನಾಲ್ಕು ತಾಸು ನನಗೆ ನಿದ್ದೆ ಬರಲಿಲ್ಲ. ಇಂದು ಶಾಲೆ ಮುಗಿದ ಬಳಿಕ ನಾನು ಈಜಲು ಹೋಗುವಂತೆ ಕೆಲವು ಹುಡುಗರು ಬಲಾತ್ಕರಿಸಿದರು, ಮತ್ತು ಅವರಲ್ಲಿ ಒಬ್ಬನು ನನ್ನನ್ನು ನೀರಿನೊಳಕ್ಕೆ ಎಳೆದನು. ಇನ್ನೊಬ್ಬ ಹುಡುಗ ನನಗೆ ಸಹಾಯ ಮಾಡದೆ ಇದ್ದಿದ್ದರೆ ನಾನು ಮುಳುಗಿ ಸಾಯುತ್ತಿದ್ದೆ. ಅವರು ನಗಾಡುತ್ತ ನನ್ನನ್ನು ಹೇಡಿಯೆಂದು ಕರೆದರು. ನಾನು ನೇರವಾಗಿ ಮನೆಗೆ ಬಂದರೂ ದೋಷಿ ಮನಸ್ಸಿನ ಕಾರಣ ಹೊರಗೆ ನಿಂತೆ. ಬೈಬಲು ತೋರಿಸಿರುವಂತೆ, ಕೆಟ್ಟ ಸಹವಾಸದ ಕುರಿತು ನೀವು ಎಚ್ಚರಿಸಿದಾಗ ನಾನು ಕಿವಿಗೊಡದೆ ಇದ್ದುದಕ್ಕೆ ನನಗೆ ದುಃಖವಿದೆ.’—1 ಕೊರಿಂಥ 15:33.

      “ಅವನು ಅತನ್ತು. ನಾವೂ ಅತ್ತೆವು. ಅವನು ಪಾಠ ಕಲಿತದ್ದು ನಮ್ಮನ್ನು ಸಂತೋಷಗೊಳಿಸಿದರೂ, ಅವನ ಮೇಲೆ ಹೆಚ್ಚು ಆಳವಾದ ಪರಿಣಾಮವಾಗುವಂತೆ ನಾವು ಅವನಿಗೆ ಶಿಕ್ಷೆ ಕೊಟ್ಟೆವು. ವಿಮೋಚನಕಾಂಡ 34:6, 7, ಯೆಹೋವನು ಕೃಪಾಪೂರ್ಣನಾಗಿದ್ದು ತಪ್ಪುಗಳನ್ನು ಕ್ಷಮಿಸುತ್ತಾನಾದರೂ ‘ಶಿಕ್ಷೆಯಿಂದ ವಿನಾಯಿತಿ ಕೊಡುವುದಿಲ್ಲ’ ಎಂದು ತೋರಿಸುತ್ತದೆ.”—ಡೇವಿಡ್‌ ಮತ್ತು ಬೆಟ್ಟಿ ಮುಪ್‌ಫುರುರೀರ್ವ.

      ಬ್ರೆಸೀಲ್‌ನಿಂದ

      “ನಾನೊಬ್ಬ ವಿಧವೆ; ನನ್ನ ಹುಡುಗನನ್ನು ನಾನೇ ಬೆಳೆಸಬೇಕು. ನಾನೊಬ್ಬ ಉಪಾಧ್ಯಾಯಿನಿ ಕೂಡ. ಮಕ್ಕಳಿಗೆ ಶಿಕ್ಷಣ ಕೊಟ್ಟು ಶಿಸ್ತಿಗೊಳಪಡಿಸುವುದು ಸುಲಭವಲ್ಲ. ಹೆತ್ತವರಿಂದ ಆವಶ್ಯಕವಾಗಿರುವುದು ಹೊಂದಿಕೆ ಇರುವ ಶಿಕ್ಷಣ, ಸಮತೆಯ ಶಿಸ್ತು ಮತ್ತು ಉತ್ತಮ ಮಾದರಿಯೆ. ದೃಢತೆ ಹಾಗೂ ಸಹಾನುಭೂತಿಯನ್ನು ಒಂದೇ ಸಲ ತೋರಿಸುವುದು ನನಗೆ ಕಷ್ಟವಾಗುತ್ತಿತ್ತು. ಕಿವಿಗೊಡುವ ಕಲೆಯನ್ನು, ಹೃದಯದಿಂದ ಕಿವಿಗೊಡುವ ಕಲೆಯನ್ನು ನನಗೆ ವಿಕಸಿಸಬೇಕಾಗಿ ಬಂತು. ಮಾತು ಸಂಪರ್ಕ ಪ್ರಾಮುಖ್ಯ, ಕೇವಲ ಮಾತಲ್ಲ, ಮಗುವನ್ನು ಮಾತಿನಲ್ಲಿ ಸೇರಿಸಿ ಅವನು ಭಾವಾತ್ಮಕವಾಗಿ ಪ್ರತಿವರ್ತನೆ ತೋರಿಸುವಂತೆ ಮಾಡುವುದು ಪ್ರಾಮುಖ್ಯ. ಕುಟುಂಬದ ಆಯವ್ಯಯದಲ್ಲಿ ಅವನನ್ನು ಸೇರಿಸಿ ಅವನೂ ಕುಟುಂಬದ ಭಾಗವೆಂದು ತಿಳಿಯುವಂತೆ ಮಾಡಲು ನಾನು ಪ್ರಯತ್ನಿಸಿದೆ. ಲೈಟ್‌ ಬಿಲ್‌ ಯಾ ನೀರಿನ ಬಿಲ್‌ ಬಂದಾಗ, ಅಥವಾ ಬಟ್ಟೆಯ ಯಾ ಪಾದರಕ್ಷೆಯ ಬೆಲೆ ಏರಿದಾಗ ನಾವು ಈ ವಿಷಯಗಳನ್ನು ಕೂಡಿ ಚರ್ಚಿಸಿದೆವು.

      “ಮಾಡಿದ ಒಳ್ಳೆಯ ಕೆಲಸಗಳಿಗಾಗಿ ಯಥಾರ್ಥತೆಯ ಪ್ರಶಂಸೆ ಕೊಡುವುದು ಪ್ರಾಮುಖ್ಯ. ಸಂದರ್ಭಗಳು ಎದ್ದಾಗ, ದೇವರ ನಿಯಮ ಮತ್ತು ಸೂತ್ರಗಳನ್ನು ಪಾಲಿಸುವುದರ ಬೆಲೆಯನ್ನು ನಾನು ಅವನಿಗೆ ತೋರಿಸುತ್ತಿದ್ದೆ. ಒಂದು ಸಲ, ಅವನಿಗೆ ಅನೇಕ ಬಾರಿ ಬುದ್ಧಿ ಹೇಳಿದ ಬಳಿಕ, ಅಕ್ಷರಶಃ ಬೆತ್ತವನ್ನು ಉಪಯೋಗಿಸಬೇಕಾಯಿತು. ಇದು ನನಗೆ ಎಷ್ಟು ಕಷ್ಟವಾಗಿತ್ತು, ಆದರೆ ಎಷ್ಟು ಸುಖದಾಯಕ ಪರಿಣಾಮ! ತರುಣಾವಸ್ಥೆಯ ಹಂತದಲ್ಲಿ ನಮಗೆ ಏರುತಗ್ಗುಗಳಿದ್ದವು. ಆದರೆ ಶಿಕ್ಷಣ ಮತ್ತು ಶಿಸ್ತಿನ ಬೆಲೆಯನ್ನು ನಾವು ನೋಡಸಾಧ್ಯವಿದೆ. ಅವನು ತನ್ನ ವ್ಯಕ್ತಿಪರವಾದ ಸಮಸ್ಯೆಗಳನ್ನು ನನಗೆ ಹೇಳಿ ತನ್ನ ಭಾವನೆಯನ್ನೂ ವ್ಯಕ್ತಪಡಿಸುತ್ತಾನೆ.

      “ಒಳ್ಳೆಯ ಮಾತು ಸಂಪರ್ಕವನ್ನು ಕಾಪಾಡಲು ನಾನು ಎಚ್ಚರಿಕೆಯಿಂದಿರಬೇಕಾಗುತ್ತದೆ. ಆದುದರಿಂದ, ನನ್ನ ಮಗನಿಗೆ ಸಮಯವನ್ನು ಕೊಡುವ ಉದ್ದೇಶದಿಂದ ನಾನು ನನ್ನ ಉದ್ಯೋಗದಲ್ಲಿ ತೀರಾ ಹೆಚ್ಚು ತೊಡರಿಸಿಕೊಳ್ಳದಂತೆ ಪ್ರಯತ್ನಿಸುತ್ತೇನೆ. ನಮಗೆ ಸಮಸ್ಯೆಗಳಿರುವಾಗ, ನಾನು ಕಿವಿಗೊಟ್ಟು ಕೇಳುತ್ತೇನೆ, ಮತ್ತು ಯೆಹೋವನ ಸಹಾಯದಿಂದ, ಅವನ್ನು ಬಗೆಹರಿಸುತ್ತೇವೆ. ನಾನೂ ತಪ್ಪುಗಳನ್ನು ಮಾಡುತ್ತೇನೆಂದು ಅವನಿಗೆ ತಿಳಿಯಪಡಿಸುತ್ತೇನೆ. ಒಂದು ಬಾರಿ ನನಗೆ ಜಾಸ್ತಿ ಸಿಟ್ಟು ಬರಲಾಗಿ, ‘ಬಾಯಿ ಮುಚ್ಚು’ ಎಂದು ಒದರಿದೆ. ‘ಬಾಯಿ ಮುಚ್ಚು’ ಎಂದು ಹೇಳುವುದು ಪ್ರೀತಿಯ ಕೊರತೆಯನ್ನು ತೋರಿಸುತ್ತದೆ ಎಂದು ಅವನು ಹೇಳಿದ, ಮತ್ತು ಅವನು ಹೇಳಿದ್ದು ಸರಿ. ಆ ಅಪರಾಹ್ಣ, ನಮ್ಮ ಮಾತುಕತೆ ದೀರ್ಘವಾಗಿತ್ತು.”—ಯೊಲಾಂಡ ಮೋರೆಸ್‌.

      ರಿಪಬ್ಲಿಕ್‌ ಆಫ್‌ ಕೊರಿಯದಿಂದ

      “ನಾನು ನನ್ನ ಕುಟುಂಬ ಜೀವನದಲ್ಲಿ ಬೈಬಲ್‌ ಸೂತ್ರಗಳನ್ನು ಆಸಕ್ತಿಯಿಂದ ಅನ್ವಯಿಸಿದೆ. ವಿಶೇಷವಾಗಿ ಧರ್ಮೋಪದೇಶಕಾಂಡ 6:6-9 ನನ್ನ ಹೃದಯದಲ್ಲಿ ಆಳವಾಗಿ ಬೇರೂರಿತ್ತು. ಆದುದರಿಂದ, ಅವರ ಹತ್ತಿರ ಸರಿಯುವಂತೆ ಮತ್ತು ದೇವರ ವಾಕ್ಯದ ಸೂತ್ರಗಳನ್ನು ಅವರ ಹೃದಮನಗಳಲ್ಲಿ ನೆಡುವಂತೆ, ಸಾಧ್ಯವಿರುವಷ್ಟು ಸಮಯ ಅವರೊಂದಿಗೆ ಕಳೆಯಲು ಪ್ರಯತ್ನಿಸಿದೆ. ನನ್ನ ಮಕ್ಕಳಿಗೆ ಪೂರ್ಣ ಸಮಯದ ಸೇವೆಯೇನೆಂದು ತಿಳಿಯುವಂತೆ ಮಾಡಲು ಮಿಶನೆರಿಗಳನ್ನು ಮತ್ತು ಬೆತೆಲ್‌ ಕುಟುಂಬದ ಸದಸ್ಯರುಗಳನ್ನು ಮನೆಗೆ ಆಮಂತ್ರಿಸಿದೆ.

      “ಮಕ್ಕಳು ಸಮಸ್ಯೆ ಎಬ್ಬಿಸುವಾಗ ಹೆತ್ತವರು ಮಾಡಬೇಕಾದ ಒಂದನೆಯ ವಿಷಯ ಆತ್ಮದ ಫಲಗಳ ಪ್ರದರ್ಶನವೆ. ಮಕ್ಕಳ ಮೇಲೆ ಕೆರಳಿ, ಸಿಡುಕು ತೋರುವುದು ಸುಲಭ. ಆದರೆ ಹೆತ್ತವರಾದ ನಾವು ತಾಳ್ಮೆಯನ್ನೂ ಮಾದರಿಯ ನಡತೆಯನ್ನೂ ತೋರಿಸಬೇಕು. ಮಕ್ಕಳನ್ನು ಗೌರವಿಸಿ, ಅವರು ಪರಿಸ್ಥಿತಿಯನ್ನು ವಿವರಿಸುವಂತೆ ಬಿಡುವುದು ಪ್ರಾಮುಖ್ಯ. ತಪ್ಪಿನ ಸ್ಪಷ್ಟವಾಗಿದ ರುಜುವಾತಿಲ್ಲದಿರುವಲ್ಲಿ ಅವರನ್ನು ನಂಬಿ ಸದಾ ಭಕ್ತಿವೃದ್ಧಿಗೊಳಿಸಿರಿ. ಮಗುವಿಗೆ ಶಿಕ್ಷೆ ಬೇಕಾಗುವಾಗ ಮೊದಲಾಗಿ ಅವನೊಂದಿಗೆ ನ್ಯಾಯಸಮ್ಮತವಾಗಿ ತರ್ಕಿಸಿ, ಅವನು ಏನು ತಪ್ಪು ಮಾಡಿದನು, ಅವನ ವರ್ತನೆ ಯೆಹೋವನಿಗೆ ಮತ್ತು ಹೆತ್ತವರಿಗೆ ಎಷ್ಟು ಅಸಮಾಧಾನ ಮಾಡಿತು ಎಂದು ತೋರಿಸಿ ಕೊಡಿರಿ. ಆ ಬಳಿಕವೆ ಶಿಕ್ಷೆ ಕೊಡಿರಿ. ನನ್ನ ಗಂಡುಮಕ್ಕಳು ಅನೇಕ ಸಲ, ಶಿಕ್ಷೆ ದೊರೆತ ಮೇಲೆ, “ಅಪ್ಪಾ, ನಾನು ಯಾಕೆ ಪ್ರತಿಭಟನೆ ತೋರಿಸಿದೆನೆಂದು ನನಗೇ ಅರ್ಥವಾಗುವುದಿಲ್ಲ. ನಾನು ಎಂಥ ಮೂರ್ಖತನ ತೋರಿಸಿದೆ,’ ಎಂದು ಹೇಳುತ್ತಿದ್ದರು. ಶಿಕ್ಷೆ ಕೊಡುವಷ್ಟು ಚಿಂತೆ ತೋರಿಸುವ ಹೆತ್ತವರನ್ನು ಅವರು ಗಣ್ಯ ಮಾಡುತ್ತಾರೆ.

      “ಕೆಟ್ಟ ನಡತೆಯ ಆರಂಭದ ವಿಷಯದಲ್ಲಿ ಹೆತ್ತವರು ಎಚ್ಚರಿಕೆಯಿಂದಿರಬೇಕು. ನನ್ನ ಹಿರಿಯ ಮಗ 9ನೆಯ ಕ್ಲಾಸಿನಲ್ಲಿದ್ದಾಗ, ಅವನ ಕೋಣೆಯಿಂದ ರಾಕ್‌ ಸಂಗೀತದ ಗದ್ದಲ ನನಗೆ ಕೇಳಿಸಿತು. ಅವನು ವಿದ್ಯಾರ್ಥಿ ಶಿಸ್ತು ತಂಡಕ್ಕೆ (ಇತರರಿಗೆ ಬುದ್ಧಿ ಹೇಳುವ ಹೆಚ್ಚು ವಯಸ್ಸಿನ, ಮಾದರಿ ವಿದ್ಯಾರ್ಥಿಗಳು) ಸೇರಿದ್ದಾನೆಂದೂ ಲೌಕಿಕ ಪ್ರಭಾವಗಳಿಗೆ ಒಳಗಾಗಿದ್ದಾನೆಂದೂ ತಿಳಿದುಬಂತು. ಅವನ ತಂಡದ ಸದಸ್ಯರ ಮುಂದುವರಿದ ಒತ್ತಡದ ಕಾರಣ ಮತ್ತು ಕುತೂಹಲದ ಕಾರಣ ಅವನು ಧೂಮಪಾನ ಮಾಡಿದ್ದಾನೆಂದೂ ಗೊತ್ತಾಯಿತು. ಧೂಮಪಾನದ ಅಪಾಯದ ಕುರಿತು ನಾವು ಕೂಡಿ ತರ್ಕಿಸಿದೆವು, ಮತ್ತು ಆಗ ತಾನು ತಂಡಕ್ಕೆ ರಾಜಿನಾಮೆ ಕೊಡಬೇಕೆಂದು ಅವನೇ ನಿರ್ಣಯಿಸಿ ಹಾಗೆ ಮಾಡಿದನು. ಇಂಥ ಆಕ್ಷೇಪಣೀಯ ಶಾಲಾ ಚಟುವಟಿಕೆಗಳನ್ನು ಬಿಟ್ಟುದರಿಂದ ಉಂಟಾದ ಸ್ಥಳವನ್ನು ಭರ್ತಿ ಮಾಡಲು ಕುಟುಂಬ ಮತ್ತು ಸಭಾ ಸದಸ್ಯರುಗಳೊಂದಿಗೆ ಹಿತಕರವಾದ ವಿನೋದ ವಿಹಾರಗಳಿಗಾಗಿ ನಾವು ಏರ್ಪಡಿಸಿದೆವು.

      “ಅಂತಿಮವಾಗಿ, ಅತಿ ಪ್ರಾಮುಖ್ಯ ವಿಷಯವು ಹೆತ್ತವರ ಉತ್ತಮ ಮಾದರಿಯೆ ಎಂದು ನಾನು ಹೇಳಬಯಸುತ್ತೇನೆ. ನಾನು ಯಾವಾಗಲೂ ನನ್ನ ಇಬ್ಬರು ಗಂಡು ಮಕ್ಕಳಿಗೆ ನನ್ನ ಮನಸ್ಸು ಪೂರ್ಣ ಸಮಯದ ಸುವಾರ್ತಾ ಶುಶ್ರೂಷಕನಾಗಿ ದೇವರನ್ನು ಸೇವಿಸುವುದೆ ಎಂದು ಹೇಳಿದ್ದೆ. ನನ್ನ ಎರಡನೆಯ ಮಗನು ಶಾಲೆ ಮುಗಿಸಿದಾಗ ನನಗೆ ರೇಶ್ಮೆ ಕಾರ್ಖಾನೆಯ ನನ್ನ ಕೆಲಸದಿಂದ ನಿವೃತ್ತಿ ಹೊಂದಿ ಪೂರ್ಣ ಸಮಯದ ಶುಶ್ರೂಷಕನಾಗಲು ಸಾಧ್ಯವಾಯಿತು. ನನ್ನ ಇಬ್ಬರು ಮಕ್ಕಳು ನನ್ನ ದೃಢತೆಯನ್ನು ನೋಡಿ ನನ್ನ ಮಾದರಿಯನ್ನು ಅನುಸರಿಸಿದರು. ತಾಟಸ್ಥ್ಯದ ಕಾರಣ ಸೆರೆವಾಸವನ್ನು ಅನುಭವಿಸಿದ ಬಳಿಕ ಇಬ್ಬರೂ ಪೂರ್ಣ ಸಮಯದ ಸೇವೆಗಿಳಿದು ಅದನ್ನು ಈ ದಿನದ ತನಕವೂ ಮುಂದುವರಿಸುತ್ತಿದ್ದಾರೆ.”—ಶಿಮ್‌ ಯೂ ಕೀ.

      ಸ್ವೀಡನ್‌ನಿಂದ

      “ನಾವು ಐದು ಗಂಡು, ಎರಡು ಹೆಣ್ಣು, ಹೀಗೆ ಏಳು ಮಕ್ಕಳನ್ನು ಬೆಳೆಸಿದ್ದೇವೆ. ಈಗ ದೊಡ್ಡವರಾಗಿರುವ ಅವರೆಲ್ಲರೂ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಅತಿ ಕ್ರಿಯಾಶೀಲರಾಗಿದ್ದಾರೆ. ಸಣ್ಣಂದಿನಿಂದಲೂ ನಮ್ಮ ಮಕ್ಕಳು ಸಭಾಕೂಟಗಳಿಗೆ ಹಾಜರಾಗಿ ನಮ್ಮೊಂದಿಗೆ ಕ್ಷೇತ್ರಸೇವೆಯಲ್ಲಿ ಹೋಗುತ್ತಿದ್ದರು. ಸಾರುವ ಕೆಲಸವನ್ನು ಮಾಡಲು ಅವರು ಒಂದೊಂದೇ ಹೆಜ್ಜೆಯನ್ನಿಟ್ಟು—ಬಾಗಿಲ ಗಂಟೆ ಬಾರಿಸಿ, ಹಲೋ ಹೇಳಿ, ತಮ್ಮ ಹೆಸರನ್ನು ಹೇಳಿ, ಕರಪತ್ರವನ್ನು, ಟ್ರ್ಯಾಕ್ಟನ್ನು ಮತ್ತು ಪತ್ರಿಕೆಯನ್ನು ಕೊಟ್ಟು—ಹೀಗೆ ಕಲಿತರು. ಇನ್ನೂ ಚಿಕ್ಕವರಾಗಿದ್ದಾಗ, ಅವರು ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಉಪನ್ಯಾಸಗಳನ್ನು ಕೊಟ್ಟರು.

      “ಕೆಲವು ಸಲ ಗುರುತರವಾದ ಸಮಸ್ಯೆಗಳು ವಿಶೇಷ ಗಮನವನ್ನು ಕೇಳಿಕೊಂಡವು. ಆಗ ಪ್ರೀತಿ ಮತ್ತು ತಾಳ್ಮೆ—ಕೂಗಾಟ ಮತ್ತು ಜಗಳಗಳಲ್ಲ—ತೋರಿಸುವುದು ಪ್ರಾಮುಖ್ಯ. ವಿಷಯಗಳನ್ನು ತರ್ಕಿಸಿ ಮತ್ತು ಯೆಹೋವನ ದೃಷ್ಟಿಕೋನಗಳಿಗೆ ಮಹತ್ವ ಕೊಟ್ಟು ಸಮಸ್ಯೆಗಳನ್ನು ಬಗೆಹರಿಸಲಾಯಿತು. ನಾವು ಅವರನ್ನು ಹಣದ ವಿಚಾರಗಳಲ್ಲಿ ತರಬೇತುಗೊಳಿಸಿದೆವು. ದೊಡ್ಡವರಾದಾಗ ಅವರು ವೃತ್ತಪತ್ರಕೆಯ ವಿತರಣೆ, ಪೀಟ್‌ ಹೆಂಟೆಯನ್ನು ಕತ್ತರಿಸುವುದು, ತೋಟಗಾರಿಕೆ, ಇತ್ಯಾದಿ., ಕೆಲಸಗಳನ್ನು ಮಾಡಿದರು. ಮನೆಯಿಂದ ದೂರದಲ್ಲಿದ್ದ ಅಜ್ಜಅಜಿಯ್ಜರಿಗೆ ಕೊಟ್ಟ ಭೇಟಿ, ವೃದ್ಧರ ಸಮಸ್ಯೆಗಳನ್ನು ಅವರು ಅರಿತು ಅವರಿಗೆ ಸಹಾನುಭೂತಿ ತೋರಿಸುವಂತೆ ಮಾಡಿತು.

      “ನಮ್ಮ 30ನೆಯ ವಿವಾಹ ವಾರ್ಷಿಕೋತ್ಸವದಲ್ಲಿ, ನಮಗೆ ಈ ಪತ್ರ ಬಂತು:

      “‘ನಮ್ಮ ಪ್ರಿಯ ಹೆತ್ತವರಿಗೆ:

      “‘ಎಲ್ಲ ವಿಷಯಗಳಿಗೂ ನಿಮಗೆ ಉಪಕಾರ! ನೀವು ನಮಗೆ ಕೊಟ್ಟಿರುವ ಧಾರಾಳ ಪ್ರೀತಿ, ನಮ್ಮಲ್ಲಿ ನೆಟ್ಟಿರುವ ಶುದ್ಧ ನಂಬುಗೆ, ನಮಗೆ ಕೊಟ್ಟಿರುವ ಆಶ್ಚರ್ಯಕರವಾದ ನಿರೀಕ್ಷೆ—ಇವುಗಳನ್ನು ಮಾತು ಯಾ ಹಣದಲ್ಲಿ ಮೌಲ್ಯಮಾಪನ ಮಾಡುವುದು ಅಸಾಧ್ಯ. ಆದರೂ ಈ ಚಿಕ್ಕ ಪ್ರೇಮದ ಕುರುಹಿನ ಮೂಲಕ, ಪ್ರಿಯ ಅಪ್ಪ, ಅಮ್ಮ, ನಮಗೆ ನಿಮ್ಮ ವಿಷಯ ಯಾವ ಅನಿಸಿಕೆ ಇದೆಯೆಂದು ನೀವು ತಿಳಿದುಕೊಳ್ಳುವಿರೆಂದು ನಾವು ನಿರೀಕ್ಷಿಸುತ್ತೇವೆ. [ಸಹಿ] ನಿಮ್ಮ ಮಕ್ಕಳು.’

      “ಈ ಎಲ್ಲ ‘20 ವರ್ಷಗಳ ಯೋಜನೆಗಳ’ ಕಡೆ ಹಿಂದಿರುಗಿ ನೋಡುವಾಗ, ನಮ್ಮಲ್ಲಿ ನಮಗೆ ಎಷ್ಟೋ ಕರುಣೆ ತೋರಿಸಿರುವ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರಿಗೆ ಆಳವಾದ ಕೃತಜ್ಞತೆ ಹುಟ್ಟುತ್ತದೆ.”—ಬರ್ಟಿಲ್‌ ಮತ್ತು ಬ್ರೀಟ ಓಸ್ಟ್‌ಬರ್ಗ್‌.

      ಹೆತ್ತವರಿಂದ ನಾನಾ ಬಗೆಯ ಸ್ವಾರಸ್ಯಕರ ಚುಟಿಕೆಗಳು

      “ಮೊಲೆಕೊಡುವ ತಾಯಿ, ಮಗುವನ್ನು ತಾಯಿಯ ಆಪ್ತ ಶಾರೀರಿಕ ಸಂಪರ್ಕಕ್ಕೆ ತರಲು ಇರುವ ಯೆಹೋವನ ವಿಧಾನವಾಗಿದೆ, ಆದರೆ ತಂದೆ ತೂಗುಕುರ್ಚಿಯ ಮೂಲಕ ಅದನ್ನು ಭರ್ತಿ ಮಾಡಬಹುದು. ನಾನು ಸರಿಸುಮಾರು ಪ್ರತಿ ರಾತ್ರಿ ನಮ್ಮ ಮಕ್ಕಳನ್ನು ತೋಳುಗಳಲ್ಲಿ ಹಿಡಿದು ಅವರನ್ನು ತೂಗಿ ನಿದ್ರಿಸುವಂತೆ ಮಾಡಲು ವೈಯಕ್ತಿಕವಾಗಿ ಸಂತೋಷಪಟ್ಟೆ.”

      “ತಂದೆಯಾದ ನಾನು ಅವರಿಗೆ ಮೊಲೆಯುಣಿಸಲು ಸಜ್ಜಿತನಾಗಿಲ್ಲದಿದ್ದರೂ ಪ್ರತಿ ರಾತ್ರಿ ಮಾಡಿಸುತ್ತಿದ್ದ ಸ್ನಾನದಲ್ಲಿ ನನಗೆ ಅವರ ಹತ್ತಿರದ ಶಾರೀರಿಕ ಸಂಪರ್ಕವಾಗುತ್ತಿತ್ತು. ನನಗೂ ಅವರಿಗೂ ಅದು ವಿನೋದದ ಸಮಯವಾಗಿತ್ತು!”

      “ನಾನು ಆಗಾಗ ನನ್ನ ಮಕ್ಕಳಲ್ಲಿ ಒಬ್ಬೊಬ್ಬರನ್ನು ಪ್ರತ್ಯೇಕವಾಗಿ ಊಟಮಾಡಲು ಹೊರಗೆ ಕರೆದುಕೊಂಡು ಹೋಗಿದ್ದೇನೆ. ಅವರಿಗೆ ಅಪ್ಪನೊಂದಿಗೆ ಒಬ್ಬೊಬ್ಬರಾಗಿರುವ ಈ ಸಂದರ್ಭ ಇಷ್ಟ.”

      “ವರ್ಷಗಳು ದಾಟಿದಷ್ಟಕ್ಕೆ, ನಾವು ಅವರಿಗೆ ಸ್ವಲ್ಪ ಸ್ವಲ್ಪವಾಗಿ ಹೆಚ್ಚು ಸ್ವಾತಂತ್ರ್ಯ ಮತ್ತು ಜವಾಬ್ದಾರಿಗಳನ್ನು ಕೊಟ್ಟೆವು. ಒಬ್ಬನ ಕೈಯಲ್ಲಿ ಒತ್ತಿ ಹಿಡಿದಿರುವ ಒಂದು ಸ್ಪ್ರಿಂಗನ್ನು ಅದು ಗೊತ್ತುಗುರಿಯಿಲ್ಲದೆ ಹಾರಿಹೋಗದಂತೆ ನಿಧಾನವಾಗಿ ಸಡಿಲ ಬಿಡಬೇಕು.”

      “ತುಂಬ ಮಮತೆ ತೋರಿಸಿರಿ. ಯಾವ ಮಗುವೂ ಅಪ್ಪಿಕೆ ಮತ್ತು ಚುಂಬನಗಳಿಂದ ಸತ್ತದ್ದಿಲ್ಲ—ಆದರೆ ಇವುಗಳಿಲದ್ಲಿರುವಲ್ಲಿ ಅವುಗಳ ಅನಿಸಿಕೆಗಳು ಸತೀತ್ತು.”

      “ತಾಳ್ಮೆಯಿರಲಿ, ಅವರ ಮನೋಭಾವವನ್ನು ಜಜ್ಜಿ ಬಿಡಬೇಡಿರಿ. ಸದಾ ಹಾಡಿದ್ದನ್ನೇ ಹಾಡಬೇಡಿ. ಅವರು ಆತ್ಮಗೌರವವನ್ನು ಬೆಳೆಸಲಿ. ಪ್ರತಿ ಟೀಕೆಗೆ ನಾಲ್ಕು ಶಹಭಾಸ್‌ಗಳನ್ನು ಕೊಡಿರಿ.”

      “ಅವರು ಅಧಿಕತಮ ಒಳ್ಳೆಯವರಾಗುವಂತೆ ಅವರ ಪರವಾಗಿ ಅಧಿಕತಮ ಪ್ರಯತ್ನ ಮಾಡಿರಿ.” (g91 9/22)

      [ಪುಟ 0 ರಲ್ಲಿರುವ ಚಿತ್ರ]

      ರಿಬೆಕಳಂಥ ಚಿಕ್ಕ ಮಕ್ಕಳಿಗೆ ಅಚ್ಚ ಒಲುಮೆ ಅಗತ್ಯ

      [ಪುಟ 21 ರಲ್ಲಿರುವ ಚಿತ್ರ]

      ಒಟ್ಟುಗೂಡಿ ಕಾರ್ಯಗಳನ್ನು ಮಾಡಲು ಸಮಯ ತೆಗೆದುಕೊಳ್ಳುವುದು ಬಲವಾದ ಕುಟುಂಬ ಬಂಧಕ್ಕೆ ಸಹಾಯ ನೀಡುವುದು

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ