ಆರ್‌ಏಚ್ ಫ್ಯಾಕ್ಟರ್ ಮತ್ತು ನೀವು
ತನ್ನ ತಾಯಿಯ ತೋಳ ತೆಕ್ಕೆಯಲ್ಲಿ ಪ್ರಶಾಂತವಾಗಿ ಮಲಗಿರುವ ತನ್ನ ನವಜಾತ ಶಿಶುವಿನ ಕಡೆಗೆ ಹೆಮ್ಮೆಯ ತಂದೆಯು ಸಂತೋಷದಿಂದ ನೋಡುತ್ತಾನೆ. ಹೆರಿಗೆ ಕೋಣೆಯಲ್ಲಿ ಅದೊಂದು ದೀರ್ಘ ರಾತ್ರಿಯಾಗಿತ್ತು, ಆದರೆ ಈಗ ಅದೆಲ್ಲವೂ ಗತಕಾಲದ್ದಾಗಿದೆ. ತನ್ನ ರೋಗಿಗಳನ್ನು ಪರೀಕ್ಷಿಸಲು ಮತ್ತು ಎಲ್ಲರನ್ನು ಅಭಿನಂದಿಸಲು ವೈದ್ಯರು ಒಳಗೆ ಬರುತ್ತಾರೆ. “ವಾಸ್ತವವಾಗಿ ಪ್ರಮಾಣಭೂತವಾದ ನಿಯತಕ್ರಮವಾಗಿರುವ ಒಂದು ವಿಷಯವನ್ನು ಹೇಳಲಿಕ್ಕಿದೆ” ಎಂದು ಅವರನ್ನುತ್ತಾರೆ.
ತಾಯಿಯ ರಕ್ತವು ಆರ್‌ಏಚ್-ನೆಗೆಟಿವ್, ಮತ್ತು ಮಗುವಿನ ರಕ್ತವು ಆರ್‌ಏಚ್-ಪಾಸಿಟಿವ್ ಎಂದು ಪರೀಕ್ಷೆಯೊಂದು ತೋರಿಸಿತು, ಆದುದರಿಂದ ತಾಯಿಗೆ ಸೋಂಕುರಕ್ಷೆಯ ಚುಚ್ಚುಮದ್ದನ್ನು ಕೊಡಬೇಕಾದ ಅಗತ್ಯವಿರುವುದು. “ಮಾನವ ಪ್ರತಿವಿಷ ವಸ್ತುಗಳಿಂದ ಮಾಡಲ್ಪಟ್ಟಿರುವ ಒಂದು ಸಣ್ಣ ಚುಚ್ಚುಮದ್ದು ಅದಾಗಿದೆ, ಆದರೆ ಭವಿಷ್ಯತ್ತಿನ ಗರ್ಭಧಾರಣೆಗಳ ಜಟಿಲತೆಗಳನ್ನು ತಡೆಗಟ್ಟಲಿಕ್ಕಾಗಿ ಬಹಳ ಪ್ರಾಮುಖ್ಯವಾದದ್ದಾಗಿದೆ” ಎಂದು ವೈದ್ಯರು ಅವರಿಗೆ ಭರವಸೆ ಕೊಡುತ್ತಾರೆ.
ಚುಚ್ಚುಮದ್ದು ನಿಯತಕ್ರಮದ್ದೆಂದು ವೈದ್ಯರು ಪರಿಗಣಿಸಬಹುದಾದರೂ, ಅದರ ಮತ್ತು ಸಾಧ್ಯವಿರುವ “ಜಟಿಲತೆಗಳ” ಪ್ರಸ್ತಾಪವು ಸಂಬಂಧಪಟ್ಟ ಹೆತ್ತವರ ಮನಸ್ಸುಗಳಲ್ಲಿ ಅನೇಕ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ವಾಸ್ತವವಾಗಿ ಈ ಚುಚ್ಚುಮದ್ದು ಏನು ಮಾಡುತ್ತದೆ? ಅದು ಎಷ್ಟು ಅಗತ್ಯವಾದದ್ದಾಗಿದೆ? ಹೆತ್ತವರು ಅದನ್ನು ಅಪೇಕ್ಷಿಸದಿದ್ದಲ್ಲಿ ಏನು ಸಂಭವಿಸಸಾಧ್ಯವಿದೆ? ಕ್ರೈಸ್ತರಿಗೆ ಇನ್ನೊಂದು ಪ್ರಶ್ನೆಯು ಉದ್ಭವಿಸುತ್ತದೆ. ‘ರಕ್ತವನ್ನು ವಿಸರ್ಜಿಸಿರಿ’ ಎಂದು ಬೈಬಲ್ ಹೇಳುವುದರಿಂದ, ಬೇರೊಬ್ಬರ ರಕ್ತದಿಂದ ತೆಗೆದ ಮಾನವ ಪ್ರತಿವಿಷ ವಸ್ತುಗಳನ್ನು ಅದು ಒಳಗೊಂಡಿರುವುದಾದರೆ ಕ್ರೈಸ್ತನು ಒಳ್ಳೇ ಮನಸ್ಸಾಕ್ಷಿಯಿಂದ ಚುಚ್ಚುಮದ್ದನ್ನು ಅಂಗೀಕರಿಸಬಲ್ಲನೊ?—ಅ. ಕೃತ್ಯಗಳು 15:20, 29.
ಆರ್‌ಏಚ್ ಸಮಸ್ಯೆಯ ಇತಿಹಾಸ
ದಶಕಗಳ ಹಿಂದೆ ಪ್ರತಿಯೊಬ್ಬ ವ್ಯಕ್ತಿಯ ರಕ್ತವನ್ನು ಅಪೂರ್ವವಾದದ್ದಾಗಿ ಮಾಡುವ ಅನೇಕ ಅಂಶಗಳನ್ನು ಅಥವಾ ಪ್ರತಿವಿಷಜನಕಗಳನ್ನು ಮಾನವ ರಕ್ತವು ಒಳಗೊಂಡಿದೆ ಎಂದು ವಿಜ್ಞಾನಿಗಳು ಕಂಡುಹಿಡಿದರು. ಒಬ್ಬ ವ್ಯಕ್ತಿಯ ರಕ್ತವನ್ನು ಇನ್ನೊಬ್ಬ ವ್ಯಕ್ತಿಯ ರಕ್ತದೊಂದಿಗೆ ಪರಸ್ಪರ ಒಡಗೂಡಿಸಿದ್ದಲ್ಲಿ, ಕೆಂಪು ರಕ್ತ ಕಣಗಳಲ್ಲಿರುವ ಎರಡು ಪ್ರತಿವಿಷಜನಕ ವ್ಯೂಹಗಳು ಅಧಿಕಾಂಶ ವೈದ್ಯಕೀಯ ಸಮಸ್ಯೆಗಳನ್ನು ಉಂಟುಮಾಡಿದವು ಎಂದು ಸಕಾಲದಲ್ಲಿ ಅವರು ತಿಳಿದುಕೊಂಡರು. ಈ ಪ್ರತಿವಿಷಜನಕಗಳಲ್ಲಿ ಒಂದು “ಎಬಿಓ (ABO)” ಎಂದು ಹೆಸರಿಸಲ್ಪಡುತ್ತದೆ; ಇನ್ನೊಂದು “ಆರ್‌ಏಚ್ (Rh)” ಎಂದು ಹೆಸರಿಸಲ್ಪಡುತ್ತದೆ. ಸಂಬಂಧಪಟ್ಟ ಈ ಹೆತ್ತವರಿಗಿರುವ ಪ್ರಶ್ನೆಗಳು ಮತ್ತು ನೀವು ಕೂಡ ಕುತೂಹಲಗೊಂಡಿರಬಹುದಾದ ಪ್ರಾಮುಖ್ಯ ಪ್ರಶ್ನೆಗಳ ಕುರಿತು ಉತ್ತರಿಸುವಂತೆ ಆರ್‌ಏಚ್ ವ್ಯೂಹದ ಒಂದು ಸಂಕ್ಷಿಪ್ತ ಪುನರ್ವಿಮರ್ಶೆಯು ನಮಗೆ ಸಹಾಯ ಮಾಡುತ್ತದೆ.
1939ರಲ್ಲಿ, ಗರ್ಭಧಾರಣೆಯ ಸಮಯದಲ್ಲಿ ಯಾರ ಎರಡನೆಯ ಮಗುವು ಸತ್ತಿತೊ ಆ 25 ವರ್ಷ ಪ್ರಾಯದ ಮಹಿಳೆಯ ಕುರಿತ ನಿಗೂಢ ಕೇಸನ್ನು ವೈದ್ಯರು ಪ್ರಕಟಿಸಿದರು. ಮೃತ ಶಿಶುವಿನ ಹೆರಿಗೆಯ ಬಳಿಕ, ಆ ಮಹಿಳೆಗೆ ರಕ್ತ ಪೂರಣಗಳು ಕೊಡಲ್ಪಟ್ಟವು ಮತ್ತು ರಕ್ತವು ಅವಳ ಗಂಡನದ್ದೂ ಮತ್ತು ಎಬಿಓ ಪ್ರತಿವಿಷಜನಕಗಳಿಗೆ ಸಂಬಂಧಿಸಿದಂತೆ ಅವಳ ಸ್ವಂತದ್ದರೊಂದಿಗೆ ಸ್ಪಷ್ಟವಾಗಿಗಿ ಹೊಂದಿಕೆಯುಳ್ಳದ್ದೂ ಆಗಿದ್ದಾಗ್ಯೂ, ವಿಪರೀತ ಪ್ರತಿಕ್ರಿಯೆಗಳು ಕಾಣಿಸಿಕೊಂಡವು. ಅವಳ ಮೊದಲ ಶಿಶುವಿನ ರಕ್ತದಿಂದ ಯಾವುದೋ ಅಜ್ಞಾತ ಫ್ಯಾಕ್ಟರ್ ಅವಳ ರಕ್ತದೊಂದಿಗೆ ಮಿಶ್ರವಾಗಿ, ಅದು ಅವಳ ರಕ್ತವನ್ನು “ಸೂಕ್ಷ್ಮಗ್ರಾಹಿ”ಯನ್ನಾಗಿ ಮಾಡಿ, ಅವಳ ಗಂಡನ ರಕ್ತಕ್ಕೆ ಅವಳ ಪ್ರತಿಕ್ರಿಯೆಯನ್ನು ಉಂಟುಮಾಡಿ ಅವಳ ಎರಡನೆಯ ಶಿಶುವಿನ ಮರಣಕ್ಕೆ ನಡೆಸಿದೆ ಎಂದು ವೈದ್ಯರು ತದನಂತರ ಶಂಕೆಪಟ್ಟರು.
ತದನಂತರ ರೀಸೆಸ್ ಕೋತಿಗಳನ್ನು ಒಳಗೊಂಡ ಪ್ರಯೋಗಗಳ ಮೂಲಕ ಈ ಅಜ್ಞಾತ ಫ್ಯಾಕ್ಟರ್ ಗುರುತಿಸಲ್ಪಟ್ಟಿತು, ಆದುದರಿಂದ ಅದು “ಆರ್‌ಏಚ್ ಫ್ಯಾಕ್ಟರ್” ಎಂದು ಹೆಸರಿಸಲ್ಪಟ್ಟಿತು. ಸ್ವಲ್ಪಮಟ್ಟಿಗೆ ಸಾಮಾನ್ಯವಾದ ಮತ್ತು ಅನೇಕವೇಳೆ ಶಿಶುಗಳ, ಇರಿತ್ರಬ್ಲಾಸ್ಟೋಸಿಸ್ ಫಿಟಾಲಿಸ್ ಎಂದು ಕರೆಯಲ್ಪಡುವ ಹೃದಯದ್ರಾವಕ ಅನಾರೋಗ್ಯಕ್ಕೆ ಇದು ಕಾರಣವಾಗಿದೆಯೆಂದು ಕಂಡುಕೊಳ್ಳಲ್ಪಟ್ಟದರ್ದಿಂದ 1960ಗಳಲ್ಲಿ ರಕ್ತದ ಈ ಫ್ಯಾಕ್ಟರ್, ವೈದ್ಯಕೀಯ ಆಸಕ್ತಿಯ ಅತಿಶಯವಾದ ವಿಷಯವಾಗಿತ್ತು. ಆರ್‌ಏಚ್ ಫ್ಯಾಕ್ಟರ್ ಮತ್ತು ಆ ರೋಗವನ್ನು ವೈದ್ಯರು ಅಧ್ಯಯನ ಮಾಡಿದಂತೆ, ಆಕರ್ಷಕವಾದ ವೈದ್ಯಕೀಯ ಕಥೆಯೊಂದು ಬಯಲುಮಾಡಲ್ಪಟ್ಟಿತು.
ಆರ್‌ಏಚ್, ತಳಿಶಾಸ್ತ್ರ, ಮತ್ತು ಅಸ್ವಸ್ಥ ಶಿಶುಗಳು
ನವಜಾತ ಶಿಶುವೊಂದು ಗಂಭೀರವಾಗಿ ಅಸ್ವಸ್ಥವಾಗಿರುವಾಗ ಅಥವಾ ಸಾಯುವಾಗ ಅಧಿಕಾಂಶ ಜನರು ಭಾವನಾತ್ಮಕವಾಗಿ ಪ್ರಭಾವಿಸಲ್ಪಡುತ್ತಾರೆ. ಕೇವಲ ಶಿಶುವು ಅಸ್ವಸ್ಥವಾಗಿರುವುದು ಅಥವಾ ಸಂಕಟದಲ್ಲಿರುವುದನ್ನು ನೋಡುವುದೇ ಅನೇಕರಿಗೆ ಬೇಗುದಿಗೊಳಿಸುವಂತಹದ್ದಾಗಿದೆ, ಮತ್ತು ವೈದ್ಯರು ಬೇರೆಯಾಗಿರುವುದಿಲ್ಲ. ಇತರ ಎರಡು ಕಾರಣಗಳು ವೈದ್ಯರಿಗೆ, ಶಿಶು-ಹತ್ಯೆಮಾಡುವ ಈ ಆರ್‌ಏಚ್ ಫ್ಯಾಕ್ಟರನ್ನು ವಿಶೇಷ ಆಸಕ್ತಿಯುಳ್ಳದ್ದಾಗಿ ಮಾಡಿದವು.
ಪ್ರಥಮವಾಗಿ, ರೋಗದಲ್ಲಿ ಒಂದು ಮಾದರಿಯನ್ನು ನೋಡಲು ಮತ್ತು ಅಸ್ವಸ್ಥತೆ ಮತ್ತು ಮರಣದಲ್ಲಿ ಆರ್‌ಏಚ್ ಫ್ಯಾಕ್ಟರ್ ಹೇಗೆ ಒಳಗೊಂಡಿತ್ತೆಂಬುದನ್ನು ತಿಳಿದುಕೊಳ್ಳಲು ವೈದ್ಯರು ಆರಂಭಿಸಿದರು. ಸುಮಾರು 85ರಿಂದ 95 ಪ್ರತಿಶತದಷ್ಟು ಜನರ—ಪುರುಷರು ಹಾಗೂ ಸ್ತ್ರೀಯರು—ಕೆಂಪು ರಕ್ತ ಕಣಗಳಲ್ಲಿ ಆರ್‌ಏಚ್ ಫ್ಯಾಕ್ಟರ್ ಇದೆ. ಅವರು “ಆರ್‌ಏಚ್-ಪಾಸಿಟಿವ್” ಎಂದು ಹೆಸರಿಸಲ್ಪಡುತ್ತಾರೆ. 5ರಿಂದ 15 ಪ್ರತಿಶತ ಜನರು ಆರ್‌ಏಚ್ ಫ್ಯಾಕ್ಟರ್ ರಹಿತರಾಗಿದ್ದು “ಆರ್‌ಏಚ್-ನೆಗೆಟಿವ್” ಎಂದು ಹೆಸರಿಸಲ್ಪಡುತ್ತಾರೆ. ಆರ್‌ಏಚ್-ನೆಗೆಟಿವ್ ವ್ಯಕ್ತಿಯೊಬ್ಬನು ಆರ್‌ಏಚ್-ಪಾಸಿಟಿವ್ ವ್ಯಕ್ತಿಯ ರಕ್ತಕ್ಕೆ ಒಡ್ಡಲ್ಪಡುವುದಾದರೆ, ಆರ್‌ಏಚ್-ಪಾಸಿಟಿವ್ ರಕ್ತವನ್ನು ನಾಶಮಾಡುವ ಪ್ರತಿವಿಷ ವಸ್ತುಗಳೆಂದು ಕರೆಯಲ್ಪಡುವ ಅಣುಗಳನ್ನು ಅವನು ಅಥವಾ ಅವಳು ಉಂಟುಮಾಡಬಹುದು.
ಹೊರಗಿನ ದಾಳಿಗಳನ್ನು ಅದು ಎದುರಿಸುವಾಗ ದೇಹದ ರೋಗರಕ್ಷಾ ವ್ಯವಸ್ಥೆಯ ಸಾಮಾನ್ಯವಾದ, ಸಹಜವಾದ ಪ್ರತಿಕ್ರಿಯೆಯಾಗಿದೆ. ಸಮಸ್ಯೆಯೇನಂದರೆ, ವಂಶಾನುಕ್ರಮವಾಗಿ ಅದರ ತಂದೆಯಿಂದ ಆರ್‌ಏಚ್-ಪಾಸಿಟಿವ್ ರಕ್ತವನ್ನು ಪಡೆದ ಮಗುವೊಂದನ್ನು ಆರ್‌ಏಚ್-ನೆಗೆಟಿವ್ ತಾಯಿಯೊಬ್ಬಳು ಹೊಂದಿರಬಹುದು. ಮಾಸುಚೀಲ (ಪಸ್ಲೆಂಟ)ವು ಸಮಗ್ರವಾಗಿ ಕೆಲಸ ಮಾಡುವಾಗ ಮತ್ತು ಮಗುವಿನ ರಕ್ತವು ತಾಯಿಯ ರಕ್ತದಿಂದ ಪ್ರತ್ಯೇಕವಾಗಿಡಲ್ಪಟ್ಟಾಗ, ಇದು ಯಾವುದೇ ಸಮಸ್ಯೆಯನ್ನು ತಂದೊಡ್ಡುವುದಿಲ್ಲ. (ಹೋಲಿಸಿ ಕೀರ್ತನೆ 139:13.) ಆದರೆ ನಮ್ಮ ದೇಹಗಳು ಅಪರಿಪೂರ್ಣವಾಗಿರುವುದರಿಂದ, ಮಗುವಿನ ರಕ್ತದ ಸ್ವಲ್ಪ ಪ್ರಮಾಣವು ಕೆಲವೊಮ್ಮೆ ಒಳಗೆ ಸೋರಿ ತಾಯಿಯ ರಕ್ತದೊಂದಿಗೆ ಒಡಗೂಡಬಹುದು. ಆಗಾಗ, ಉಲ್ಬದ್ರವಚೂಷಣ (ಗರ್ಭಕೋಶದಲ್ಲಿ ಬೆಳೆಯುತ್ತಿರುವ ಶಿಶುವನ್ನು ಆವರಿಸಿರುವ, ದ್ರವದ ಸ್ವಲ್ಪ ಭಾಗವನ್ನು ತೆಗೆದುಕೊಳ್ಳುವುದು)ದಂತಹ ಕೆಲವು ವೈದ್ಯಕೀಯ ಕಾರ್ಯವಿಧಾನದಿಂದ ಇದು ಸಂಭವಿಸುತ್ತದೆ. ಅಥವಾ ಹೆರಿಗೆಯ ಸಮಯದಲ್ಲಿ ತಾಯಿಯ ರಕ್ತದೊಂದಿಗೆ ಮಗುವಿನ ರಕ್ತದಲ್ಲಿ ಸ್ವಲ್ಪ ಭಾಗವು ಸಂಮಿಶ್ರವಾಗಬಹುದು. ಯಾವುದೇ ಕಾರಣವಿರಲಿ, ತಾಯಿಯು ಸೂಕ್ಷ್ಮಗ್ರಾಹಿಯಾಗಿ ಪರಿಣಮಿಸಬಹುದು ಮತ್ತು ಆರ್‌ಏಚ್-ಪಾಸಿಟಿವ್ ರಕ್ತದ ವಿರುದ್ಧ ಪ್ರತಿವಿಷ ವಸ್ತುಗಳನ್ನು ಉಂಟುಮಾಡಬಹುದು.
ಸಮಸ್ಯೆಯನ್ನು ಊಹಿಸಿಕೊಳ್ಳಿರಿ: ಒಮ್ಮೆ ತಾಯಿಯು ಅಂತಹ ಪ್ರತಿವಿಷ ವಸ್ತುಗಳನ್ನು ಬೆಳೆಸತೊಡಗಿದರೆ ಹಿಂಬಾಲಿಸಿ ಬರುವ ಎಲ್ಲ ಶಿಶುಗಳು—ಅವರು ತಂದೆಯಿಂದ ವಂಶಾನುಕ್ರಮವಾಗಿ ಆರ್‌ಏಚ್-ಪಾಸಿಟಿವ್ ರಕ್ತವನ್ನು ಪಡೆಯುವಲ್ಲಿ—ಅಪಾಯದಲ್ಲಿರುತ್ತವೆ. ಇದು ಏಕೆಂದರೆ ಆರ್‌ಏಚ್-ಪಾಸಿಟಿವ್ ರಕ್ತದ ವಿರುದ್ಧವಾಗಿ ಈಗ ತಾಯಿಯು ಪ್ರತಿವಿಷ ವಸ್ತುಗಳನ್ನು ಹೊಂದಿದ್ದಾಳೆ.
ಕೆಲವು ಪ್ರತಿವಿಷ ವಸ್ತುಗಳು ಮಾಸುಚೀಲದ ಮೂಲಕ ಸಹಜವಾಗಿ ಹಾದುಹೋಗುತ್ತವೆಂಬುದು ನಿಮಗೆ ತಿಳಿದೇ ಇದೆ. ಇದು ಒಂದು ಒಳ್ಳೆಯ ವಿಷಯವಾಗಿದೆ, ಏಕೆಂದರೆ ತಮ್ಮ ತಾಯಂದಿರ ಮೂಲಕ ತಾತ್ಕಾಲಿಕ ಸಹಜ ರೋಗ ರಕ್ಷೆಯ ಅಂಶದೊಂದಿಗೆ ಎಲ್ಲಾ ಶಿಶುಗಳು ಜನಿಸುವಂತೆ ಮಾಡುತ್ತದೆ. ಆದರೂ, ಆರ್‌ಏಚ್ ರೋಗದಲ್ಲಿ, ಸೂಕ್ಷ್ಮಗ್ರಾಹಿಯಾದ ತಾಯಿಯ ಆರ್‌ಏಚ್ ಪ್ರತಿವಿಷ ವಸ್ತುಗಳು ಮಾಸುಚೀಲದ ಮೂಲಕ ಹಾದುಹೋಗುತ್ತವೆ ಮತ್ತು ಆರ್‌ಏಚ್-ಪಾಸಿಟಿವ್ ಮಗುವಿನ ರಕ್ತವನ್ನು ಆಕ್ರಮಿಸುತ್ತವೆ. ಇದು ಪ್ರಥಮ ಶಿಶುವಿನ ಮೇಲೆ ಪರಿಣಾಮಬೀರುವುದು ವಿರಳವಾದರೂ ಹಿಂಬಾಲಿಸುವ ಯಾವುದೇ ಶಿಶುಗಳಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ. ನವಜಾತ ಶಿಶುವಿಗೆ ಆರ್‌ಏಚ್ ಹೀಮಲಿಟಿಕ್ ರೋಗವೆಂದು ಕರೆಯಲ್ಪಡುವ ಅಸ್ವಸ್ಥತೆಯನ್ನು ಅದು ಉಂಟುಮಾಡುತ್ತದೆ (ನಷ್ಟವು ತೀವ್ರವಾಗಿರುವಲ್ಲಿ ಇರಿತ್ರಬ್ಲಾಸ್ಟೋಸಿಸ್ ಫಿಟಾಲಿಸ್).
ನಾವು ನೋಡುವ ಮೇರೆಗೆ, ಅನೇಕವೇಳೆ ಪರಿಮಿತ ಯಶಸ್ಸು ದೊರಕುವುದಾದರೂ, ಈ ರೋಗವನ್ನು ನಿರ್ವಹಿಸಲು ಅನೇಕ ವಿಧಾನಗಳಿವೆ. ಸಮಸ್ಯೆಯ ಕುರಿತಾದ ಒಂದು ವೈದ್ಯಕೀಯ ಅಂಶದ ಮೇಲೆ—ತಡೆಗಟ್ಟುವಿಕೆಯ ಒಂದು ಸಂಭವನೀಯ ಸಾಧನದ ಮೇಲೆ—ನಾವೀಗ ಕೇಂದ್ರೀಕರಿಸೋಣ.
ತಡೆಗಟ್ಟುವಿಕೆಯಲ್ಲಿ ಒಂದು ಪ್ರಮುಖ ಪ್ರಗತಿ
ಈ ರೋಗವು ವೈದ್ಯರಿಗೆ ಅಷ್ಟೊಂದು ರೋಮಾಂಚನವನ್ನುಂಟುಮಾಡಲು ಎರಡು ಕಾರಣಗಳಿದ್ದವು ಎಂದು ನೀವು ಜ್ಞಾಪಿಸಿಕೊಳ್ಳಬಹುದು. ಅಸ್ವಸ್ಥತೆಯ ಯಾಂತ್ರಿಕ ವ್ಯೂಹವು ಸುವಿದಿತವಾದದ್ದು ಮತ್ತು ಗ್ರಹಿಸಸಾಧ್ಯವಾದದ್ದು ಮೊದಲನೆಯದಾಗಿತ್ತು. ಎರಡನೆಯ ಕಾರಣವು ಏನಾಗಿತ್ತು?
ಅದು 1968ರಲ್ಲಿ ಹೊರಗೆಡಹಲ್ಪಟ್ಟಿತು. ವೈದ್ಯರಿಂದ ಪರಿಮಿತ ಯಶಸ್ಸಿನೊಂದಿಗೆ ಸಂಧಿಸಲ್ಪಟ್ಟ, ತೀರ ಅಸ್ವಸ್ಥವಾದ ಈ ಶಿಶುಗಳ ಚಿಕಿತ್ಸೆ ಮಾಡಲಿಕ್ಕಾಗಿ ವರ್ಷಗಟ್ಟಲೆ ಸಂಶೋಧನೆ ಮತ್ತು ಆಶಾಭಂಗಗೊಳಿಸುವ ಪ್ರಯತ್ನಗಳ ಬಳಿಕ, “ಆರ್‌ಏಚ್ ಶಿಶುಗಳ” ಸಮಸ್ಯೆಯನ್ನು ತಡೆಗಟ್ಟುವುದರಲ್ಲಿ ಪರಿಣಾಮಕಾರಿಯಾಗಿದ್ದ ರೋಗ ರಕ್ಷೆಯು ವಿಕಸಿಸಲ್ಪಟ್ಟಿತು. ಇದು ಶುಭ ವಾರ್ತೆಯಾಗಿತ್ತು. ಆದರೆ ಅದು ಹೇಗೆ ಕಾರ್ಯನಡಿಸಿತು?
ಮೊದಲ ಆರ್‌ಏಚ್-ಪಾಸಿಟಿವ್ ಶಿಶುವಿನಿಂದ ರಕ್ತವು ಆರ್‌ಏಚ್-ನೆಗೆಟಿವ್ ತಾಯಿಯ ರಕ್ತಪ್ರವಾಹದೊಳಗೆ “ಸೋರಿದಾಗ” ಆರ್‌ಏಚ್ ಸಮಸ್ಯೆ (ಎರಡನೆಯ ಮತ್ತು ಹಿಂಬಾಲಿಸುವ ಆರ್‌ಏಚ್-ಪಾಸಿಟಿವ್ ಶಿಶುಗಳಿಗೆ) ವಿಕಸಿಸಿತು ಮತ್ತು ಪ್ರತಿವಿಷ ವಸ್ತುಗಳನ್ನು ಉತ್ಪತ್ತಿಮಾಡಲು ಕಾರಣವಾಯಿತು ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ಅವಳನ್ನು ಸೂಕ್ಷ್ಮಗ್ರಾಹಿಯನ್ನಾಗಿ ಮಾಡಲು ಅವುಗಳಿಗೆ ಒಂದು ಅವಕಾಶವು ದೊರೆಯುವುದಕ್ಕೆ ಮೊದಲು, ತಾಯಿಯ ದೇಹದಲ್ಲಿರುವ ಶಿಶುವಿನ ಕೆಂಪು ರಕ್ತ ಕಣಗಳನ್ನು ಹಿಡಿದು ನಾಶಮಾಡುವ ಒಂದು ಮಾರ್ಗವಿರಸಾಧ್ಯವಿತ್ತೊ?
ಕೆಲವು ದೇಶಗಳಲ್ಲಿ ರೋಗ್ಯಾಮ್ (RhoGAM) ಮತ್ತು ರೆಸೊನೇಟಿವ್‌ಗಳಂತಹ ವ್ಯಾಪಾರಿ ಹೆಸರುಗಳಿಂದ ಪ್ರಸಿದ್ಧವಾದ, ಆರ್‌ಏಚ್ ಇಮ್ಯೂನ್ ಗ್ಲಾಬ್ಯುಲಿನ್ (RhIG) ಎಂದು ಕರೆಯಲ್ಪಡುವ ರೋಗ ರಕ್ಷೆಯ ಚುಚ್ಚುಮದ್ದು ತಾಯಿಗೆ ಕೊಡಲ್ಪಡುವುದು ಯೋಜಿಸಲ್ಪಟ್ಟ ವಿಧಾನವಾಗಿತ್ತು. ಅದು ಆರ್‌ಏಚ್-ಪಾಸಿಟಿವ್ ಪ್ರತಿವಿಷಜನಕದ ವಿರುದ್ಧವಾದ ಪ್ರತಿವಿಷ ವಸ್ತುಗಳಿಂದ ರಚಿಸಲ್ಪಡುತ್ತದೆ. ನಿರ್ದಿಷ್ಟವಾಗಿ ಅದು ಹೇಗೆ ಕಾರ್ಯನಡಿಸುತ್ತದೆ ಎಂಬುದು ಸಂಕೀರ್ಣವೂ ಅಸ್ಪಸ್ಟವಾದದ್ದೂ ಆಗಿದೆ, ಆದರೆ ಮೂಲತಃ ಅದು ಈ ರೀತಿಯಲ್ಲಿ ಕಾರ್ಯನಡಿಸುವಂತೆ ಭಾಸವಾಗುತ್ತದೆ.
ಆರ್‌ಏಚ್-ನೆಗೆಟಿವ್ ತಾಯಿಯು, ಆರ್‌ಏಚ್-ಪಾಸಿಟಿವ್ ಶಿಶುವಿನ ಹೆರಿಗೆಯ ಬಳಿಕ ಆಗುವಂತೆ ಆರ್‌ಏಚ್-ಪಾಸಿಟಿವ್ ರಕ್ತಕ್ಕೆ ಒಡ್ಡಲ್ಪಟ್ಟಿದ್ದಾಳೆ ಎಂದು ಸಂದೇಹಿಸಲ್ಪಡುವಾಗ, ಆರ್‌ಏಚ್‌ಐಜಿ ಚುಚ್ಚುಮದ್ದು ತಾಯಿಗೆ ಕೊಡಲ್ಪಡುವುದು. ಈ ಪ್ರತಿವಿಷ ವಸ್ತುಗಳು, ಶಿಶುವಿನಿಂದ ಸೋರಿದ ಯಾವುದೇ ಆರ್‌ಏಚ್-ಪಾಸಿಟಿವ್ ಕೆಂಪು ರಕ್ತ ಕಣಗಳನ್ನು ಕೂಡಲೆ ಆಕ್ರಮಿಸುತ್ತವೆ ಮತ್ತು ಅವು ತಾಯಿಯನ್ನು ಸೂಕ್ಷ್ಮಗ್ರಾಹಿಯನ್ನಾಗಿ ಮಾಡುವ ಮುನ್ನ ಅವುಗಳನ್ನು ನಾಶಮಾಡುತ್ತವೆ. ಆರ್‌ಏಚ್-ಪಾಸಿಟಿವ್ ರಕ್ತದ ವಿರುದ್ಧವಾಗಿ ತಾಯಿಯಿಂದ ಯಾವುದೇ ಪ್ರತಿವಿಷ ವಸ್ತುಗಳು ಉತ್ಪಾದಿಸಲ್ಪಡದ ಕಾರಣ, ಇದು ಮುಂದಿನ ಶಿಶುವಿಗೆ ಅಪಾಯವನ್ನು ಪರಿಣಾಮಕಾರಿಯಾಗಿ ನಿರ್ಮೂಲನಮಾಡುತ್ತದೆ. ಇದರಲ್ಲಿ ವೈದ್ಯರು ವಾಸ್ತವವಾಗಿ ಕಾಣುವ ಒಳಿತು ಏನಂದರೆ, ಅಸ್ವಸ್ಥತೆಯು ವಿಕಸಿಸಿದ ಬಳಿಕ ಅದಕ್ಕೆ ಚಿಕಿತ್ಸೆ ನಡೆಸುವ ಬದಲಾಗಿ, ಅದು ರೋಗವನ್ನು ತಡೆಗಟ್ಟಲು ಉಪಯುಕ್ತವಾಗಿದೆ ಎಂಬುದನ್ನೇ.
ತತ್ವದಲ್ಲಿ ಇದು ಒಳ್ಳೆಯದಾಗಿ ತೋರುತ್ತದೆ, ಆದರೂ ಅದು ಕಾರ್ಯನಡಿಸಿದೆಯೆ? ಸ್ಪಷ್ಟವಾಗಿಗಿ ಹೌದು. ಒಂದು ದೇಶದಲ್ಲಿ—ಅಮೆರಿಕ—ಆರ್‌ಏಚ್ ಹೀಮಲಿಟಿಕ್ ರೋಗದ ಸಂಭವವು 1970ಗಳಲ್ಲಿ 65 ಪ್ರತಿಶತದಷ್ಟು ಇಳಿಯಿತು. ಅನೇಕ ವಿಷಯಗಳು ಇದಕ್ಕೆ ನೆರವನ್ನಿತ್ತಿರಬಹುದಾದರೂ, ಈ ಇಳಿತದ 60ರಿಂದ 70 ಪ್ರತಿಶತವು ಆರ್‌ಏಚ್‌ಐಜಿಯ ಉಪಯೋಗಕ್ಕೆ ಆರೋಪಯೋಗ್ಯವಾಗಿತ್ತು. ಕೆನಡಿಯನ್ ಪ್ರಾಂತವೊಂದರಲ್ಲಿ, ಆರ್‌ಏಚ್ ಹೀಮಲಿಟಿಕ್ ರೋಗದಿಂದ ಸಾಯುತ್ತಿದ್ದ ಶಿಶುಗಳ ಸಂಖ್ಯೆಯು 1964ರಲ್ಲಿ 29ರಿಂದ, 1974 ಮತ್ತು 1975ರ ನಡುವೆ 1ಕ್ಕೆ ಇಳಿಯಿತು. “ಒಂದು ಪೌಂಡ್ ಗುಣಪಡಿಸುವಿಕೆಗಿಂತಲೂ ತಡೆಗಟ್ಟುವಿಕೆಯ ಒಂದು ಔನ್ಸು ಬೆಲೆಯುಳ್ಳದ್ದಾಗಿದೆ” ಎಂಬ ಮೂಲತತ್ವದ ದೃಢೀಕರಣದೋಪಾದಿ ಇದನ್ನು ವೈದ್ಯಕೀಯ ಸಂಘವು ವೀಕ್ಷಿಸಿತು. ಆಧಾರಭೂತವಾದ ಈ ಹಿನ್ನೆಲೆಯೊಂದಿಗೆ, ಆರ್‌ಏಚ್ ರೋಗದ ಕುರಿತು ಅನೇಕವೇಳೆ ಏಳುವ ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ನಾವು ಪರಿಗಣಿಸಬಲ್ಲೆವು.
ನನ್ನ ಗರ್ಭಧಾರಣೆಯ ಸಮಯದಲ್ಲಿ ಆರ್‌ಏಚ್ ರೋಗದ ಸಮಸ್ಯೆಯನ್ನು ಹೊಂದುವ ಯಾವ ಅಪಾಯಗಳಿವೆ?
ತಾಯಿ ಮತ್ತು ತಂದೆಯ ಆರ್‌ಏಚ್ ರಕ್ತದ ವಿಧಗಳನ್ನು ಒಂದು ಸರಳವಾದ ರಕ್ತದ ಪರೀಕೆಯು ನಿರ್ಧರಿಸಬಲ್ಲದು; ಸರಿಸುಮಾರಾಗಿ 7 ವಿವಾಹಗಳಲ್ಲಿ 1 ಆರ್‌ಏಚ್-ನೆಗೆಟಿವ್ ಸ್ತ್ರೀಯೊಂದಿಗೆ ಆರ್‌ಏಚ್-ಪಾಸಿಟಿವ್ ಪುರುಷನದ್ದಾಗಿರುತ್ತದೆ. ತಂದೆಯ ತಳಿಸಂಬಂಧೀ ರಚನೆಯ ಅಂಶಗಳು ಸಂಪೂರ್ಣ ಅಪಾಯವನ್ನು ಸುಮಾರು 10 ಪ್ರತಿಶತಕ್ಕೆ ತರುತ್ತದೆ.a
ಆದರೂ, ಅವುಗಳು ಜನಸಂಖ್ಯೆಯ ಸರ್ವಸಾಮಾನ್ಯವಾದ ಅಂಕಿ ಅಂಶಗಳಾಗಿವೆ. ಆರ್‌ಏಚ್-ಪಾಸಿಟಿವ್ ಪುರುಷನಿಗೆ ವಿವಾಹವಾಗಿರುವ ಆರ್‌ಏಚ್-ನೆಗೆಟಿವ್ ಸ್ತ್ರೀಯು ನೀವಾಗಿರುವಲ್ಲಿ, ಆರ್‌ಏಚ್-ಪಾಸಿಟಿವ್ ಶಿಶುವನ್ನು ಹೊಂದುವುದರ ಸಂಭವಗಳು, ನಿಮ್ಮ ಗಂಡನ ತಳಿಸಂಬಂಧೀ ರಚನೆಯ ಮೇಲೆ ಹೊಂದಿಕೊಂಡಿದ್ದೇ, 50 ಪ್ರತಿಶತ ಅಥವಾ 100 ಪ್ರತಿಶತವಾಗಿದೆ.b (ಗರ್ಭಾಶಯದಲ್ಲಿರುವ ಒಂದು ಶಿಶುವು ಆರ್‌ಏಚ್-ಪಾಸಿಟಿವೊ ಅಲ್ಲವೊ ಎಂಬುದನ್ನು ಕಂಡುಹಿಡಿಯಲು ಇನ್ನೂ ಯಾವುದೇ ಸರಳ ವಿಧಾನವು ಇಲ್ಲದಿರುವಂತೆಯೇ, ಗಂಡನ ತಳಿಶಾಸ್ತ್ರವನ್ನು ನಿರ್ಧರಿಸಲು ನಿಶ್ಚಿತ ವಿಧಾನವು ಇಲ್ಲ.)
ಆರ್‌ಏಚ್-ಪಾಸಿಟಿವ್ ಶಿಶುವಿನ ಗರ್ಭಧರಿಸಿರುವ ಆರ್‌ಏಚ್-ನೆಗೆಟಿವ್ ತಾಯಿಗೆ, ಪ್ರತಿಯೊಂದು ಗರ್ಭಧಾರಣೆಯಲ್ಲಿ ತಾನು ಸೂಕ್ಷಗ್ರಾಹಿಯಾಗ 16 ಪ್ರತಿಶತ ಸಂಭವವಿದೆ; ಇದು ಭವಿಷ್ಯತ್ತಿನ ಗರ್ಭಧಾರಣೆಗಳನ್ನು ಅಪಾಯಕ್ಕೊಡ್ಡುತ್ತದೆ. ನಿಸ್ಸಂದೇಹವಾಗಿ ಅದು ಕೇವಲ ಸರಾಸರಿಯಾಗಿದೆ. ಮುಂಚಿನ ರಕ್ತ ಪೂರಣ ಅಥವಾ ರಕ್ತಕ್ಕೆ ತಾಯಿಯ ಇತರ ಒಡ್ಡುವಿಕೆಯ ಹೊರತಾಗಿ, ವಿವಾಹದ ಮೊದಲ ಮಗುವು ಸಾಮಾನ್ಯವಾಗಿ ಆರ್‌ಏಚ್ ರೋಗದ ಅಪಾಯದಿಂದ ನಿರ್ಬಾಧಿತವಾಗಿರುತ್ತದೆ. ಆ ಮೊದಲನೆಯ ಮಗುವಿನ ಬಳಿಕ, ಕೊಡಲ್ಪಟ್ಟ ಯಾವುದೇ ವಿದ್ಯಮಾನದಲ್ಲಿ ಅಪಾಯವನ್ನು ಮುಂದಾಗಿಯೇ ಹೇಳುವುದು ವಾಸ್ತವವಾಗಿ ಸ್ವಲ್ಪಮಟ್ಟಿಗೆ ಕಷ್ಟವಾಗಿದೆ. ಒಬ್ಬ ಸ್ತ್ರೀಯು ತನ್ನ ಮೊತ್ತಮೊದಲ ಆರ್‌ಏಚ್-ಪಾಸಿಟಿವ್ ಶಿಶುವಿನಿಂದ ಸೂಕ್ಷ್ಮಗ್ರಾಹಿಯಾಗಿಸಲ್ಪಡಬಹುದು. ಮತ್ತೊಬ್ಬಳು ಐದು ಅಥವಾ ಹೆಚ್ಚು ಆರ್‌ಏಚ್-ಪಾಸಿಟಿವ್ ಶಿಶುಗಳನ್ನು ಹೊಂದಿರಬಹುದು ಮತ್ತು ಎಂದೂ ಸೂಕ್ಷ್ಮಗ್ರಾಹಿಯಾಗಿಲ್ಲದಿರಬಹುದು. ತಾಯಿಯೊಬ್ಬಳು ಸೂಕ್ಷ್ಮಗ್ರಾಹಿಯಾಗಿ ಪರಿಣಮಿಸುವಲ್ಲಿ, ಹಿಂಬಾಲಿಸುವ ಪ್ರತಿಯೊಂದು ಆರ್‌ಏಚ್-ಪಾಸಿಟಿವ್ ಭ್ರೂಣಕ್ಕೆ ಮರಣದ ಅಪಾಯವು 30 ಪ್ರತಿಶತವಾಗಿರುತ್ತದೆ, ಮತ್ತು ಗರ್ಭಧಾರಣೆಗಳ ನಡುವಿನ ಅಂತರದಿಂದ ಇದು ಬದಲಾಯಿಸಲ್ಪಡುವುದಿಲ್ಲ. ಆದುದರಿಂದ ಇದು ಒಂದು ಗಂಭೀರವಾದ ವಿಷಯವಾಗಿದೆ.
ನನ್ನ ಬೆಳೆಯುತ್ತಿರುವ ಶಿಶುವು ಅಪಾಯದಲ್ಲಿರುವುದಾದರೆ ಪ್ರಯೋಗಾಲಯದ ಪರೀಕ್ಷೆಯು ನನಗೆ ಹೇಳಬಲ್ಲದೊ?
ಹೌದು, ಸ್ವಲ್ಪಮಟ್ಟಿಗೆ. ತಾಯಿಯು ಶಿಶುವಿನ ರಕ್ತದ ವಿರುದ್ಧ ಪ್ರತಿವಿಷ ವಸ್ತುಗಳನ್ನು ಉತ್ಪಾದಿಸುತ್ತಿದ್ದಾಳೊ ಎಂಬುದನ್ನು ಹೇಳಲಿಕ್ಕಾಗಿ, ಗರ್ಭಧಾರಣೆಯ ಸಮಯದಲ್ಲಿ ಅವಳ ರಕ್ತದಲ್ಲಿರುವ ಪ್ರತಿವಿಷಜನಕದ ಮಟ್ಟಗಳನ್ನು ಅಳೆಯಸಾಧ್ಯವಿದೆ. ಶಿಶುವಿನ ರಕ್ತವನ್ನು ನಾಶಮಾಡಲಾಗುತ್ತಿದೆಯೊ ಮತ್ತು ಶಿಶುವು ಅಪಾಯದಲ್ಲಿದೆಯೊ ಎಂಬುದನ್ನು ಹೇಳಲು ಉಲ್ಬದ್ರವಚೂಷಣವು ಸಹ ಸಹಾಯ ಮಾಡಬಲ್ಲದು. ಆದರೂ, ಉಲ್ಬದ್ರವಚೂಷಣವು ಕೆಲವೊಮ್ಮೆ ತನ್ನ ಸ್ವಂತ ಜಟಿಲತೆಗಳನ್ನು ತಂದೊಡ್ಡುತ್ತದೆ, ಮತ್ತು ಇದರಿಂದಾಗಿ ಅದಕ್ಕೆ ಒಳಗಾಗುವುದರ ಕುರಿತು ಎಚ್ಚರಿಕೆಯಿಂದಿರತಕ್ಕದ್ದು.
ಆರ್‌ಏಚ್‌ಐಜಿ (RhIG) ಚುಚ್ಚುಮದ್ದು ಅಡ್ಡತೊಡಕುಗಳನ್ನು ಹೊಂದಿದೆಯೆ?
ಬೆಳೆಯುತ್ತಿರುವ ಭ್ರೂಣಕ್ಕೆ ರೋಗ ರಕ್ಷೆಗೆ ಸಂಬಂಧಿಸಿದ ಹಾನಿಯ ಸಂಭವವಿರುವ ಕಾರಣದಿಂದ ಗರ್ಭಧಾರಣೆಯ ಸಮಯದಲ್ಲಿ ಅದರ ಉಪಯೋಗದ ಕುರಿತು ಇನ್ನೂ ಸ್ವಲ್ಪ ವಾಗ್ವಾದವಿದೆ. ಆದರೂ, ರೋಗ ರಕ್ಷೆಯು ತಾಯಿಗೆ ಮತ್ತು ಅವಳ ಒಳಗೆ ಬೆಳೆಯುತ್ತಿರುವ ಶಿಶುವಿಗೆ ಇಬ್ಬರಿಗೂ ಸಂಬಂಧಸೂಚಕವಾಗಿ ಸುರಕ್ಷಿತವಾದದ್ದಾಗಿದೆಯೆಂದು ಅಧಿಕಾಂಶ ಪರಿಣತರು ತೀರ್ಮಾನಿಸುತ್ತಾರೆ.
ವೈದ್ಯರಿಗನುಸಾರ, ನಾನು ಎಷ್ಟು ಬಾರಿ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕು?
ಆರ್‌ಏಚ್-ಪಾಸಿಟಿವ್ ರಕ್ತವು ಆರ್‌ಏಚ್-ನೆಗೆಟಿವ್ ಸ್ತ್ರೀಯ ರಕ್ತ ಪ್ರವಾಹವನ್ನು ಪ್ರವೇಶಿಸುವಂತೆ ಕಾರಣವಾಗಿರಬಹುದಾದ ಯಾವುದೇ ಘಟನೆಯ ಬಳಿಕ ಕೂಡಲೆ ಚುಚ್ಚುಮದ್ದು ಕೊಡಲ್ಪಡಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ಹೀಗೆ, ಪ್ರಚಲಿತ ಶಿಫಾರಸ್ಸುಗಳೇನಂದರೆ, ಶಿಶುವಿನ ರಕ್ತವು ಆರ್‌ಏಚ್-ಪಾಸಿಟಿವ್ ಎಂದು ಕಂಡುಕೊಳ್ಳಲ್ಪಡುವುದಾದರೆ, ಶಿಶುವಿನ ಹೆರಿಗೆಯ ಬಳಿಕ 72 ತಾಸುಗಳೊಳಗೆ ಚುಚ್ಚುಮದ್ದು ಕೊಡಲ್ಪಡಬೇಕು ಎಂಬುದೇ. ಇದೇ ಶಿಫಾರಸ್ಸು ಉಲ್ಬದ್ರವಚೂಷಣ ಆಥವಾ ಗರ್ಭಸ್ರಾವವೊಂದಕ್ಕೆ ಅನ್ವಯಿಸುತ್ತದೆ.
ಇನ್ನೂ ಹೆಚ್ಚಾಗಿ, ಸಹಜ ಗರ್ಭಧಾರಣೆಯ ಸಮಯದಲ್ಲಿ ಅಲ್ಪ ಪ್ರಮಾಣದ ಶಿಶುವಿನ ರಕ್ತವು ತಾಯಿಯ ರಕ್ತ ಪ್ರವಾಹವನ್ನು ಪ್ರವೇಶಿಸಬಹುದೆಂದು ಅಧ್ಯಯನಗಳು ತೋರಿಸಿರುವುದರಿಂದ, ಸೂಕ್ಷ್ಮಗ್ರಾಹಿಯಾಗುವುದನ್ನು ತಡೆಯಲಿಕ್ಕಾಗಿ ಗರ್ಭಧಾರಣೆಯಾಗಿ 28 ವಾರಗಳಲ್ಲಿ ಚುಚ್ಚುಮದ್ದು ಕೊಡಲ್ಪಡುವಂತೆ ಕೆಲವು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಈ ಕೇಸಿನಲ್ಲಿ ಮಗುವು ಜನಿಸಿದ ಬಳಿಕವೂ ಪುನಃ ಈ ಚುಚ್ಚುಮದ್ದು ಶಿಫಾರಸ್ಸು ಮಾಡಲ್ಪಡುವುದು.
ಒಮ್ಮೆ ಒಂದು ಶಿಶುವು ಆರ್‌ಏಚ್ ರೋಗವನ್ನು ಪಡೆದುಕೊಂಡ ಬಳಿಕ ಅದಕ್ಕೆ ಯಾವುದಾದರೂ ಚಿಕಿತ್ಸೆ ಇದೆಯೊ?
ಇದೆ. ನವಜಾತ ಶಿಶುವಿನ ಹೀಮಲಿಟಿಕ್ ರೋಗವು ಗಂಭೀರವಾದ ಒಂದು ಅಸ್ವಸ್ಥತೆಯಾಗಿರುವಾಗಲೂ, ಶಿಶುವಿಗಾಗಿ ವಿನಿಮಯ ರಕ್ತ ಪೂರಣಗಳನ್ನು ಒಳಗೊಂಡಿರದ ಸಾಕ್ಷ್ಯವನ್ನು ಬೆಂಬಲಿಸುವ ಒಳ್ಳೆಯ ಚಿಕಿತ್ಸೆಗಳು ಇವೆ. ಕೆಂಪು ರಕ್ತ ಕಣಗಳ ಕುಸಿತದಿಂದ ಫಲಿಸುವ, ಕೆಂಪಿತ್ತ (ಬಿಲಿರುಬಿನ್) ಎಂದು ಕರೆಯಲ್ಪಡುವ ಒಂದು ರಾಸಾಯನಿಕದ ಜಮಾವಣೆಯನ್ನು ಈ ರೋಗದ ಅತ್ಯಂತ ಭೀಕರ ಜಟಿಲತೆಯು ಒಳಗೊಳ್ಳುತ್ತದೆ. ಇದು ಕಾಮಾಲೆ (ಜಾಂಡಿಸ್)ಯನ್ನು ಉಂಟುಮಾಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಶಿಶುವಿನ ಅವಯವಗಳಿಗೆ ಹಾನಿಯನ್ನು ಉಂಟುಮಾಡಬಲ್ಲದು. (ಪ್ರಾಸಂಗಿಕವಾಗಿ, ತಾಯಿಯ ರಕ್ತ ಮತ್ತು ಮಗುವಿನ ರಕ್ತದ ನಡುವೆ ಎಬಿಓ ಅಸಮಂಜಸತೆಯಿರುವಾಗ ನಸು ಕಾಮಾಲೆಯು ಉಂಟುಮಾಡಲ್ಪಡಬಹುದು, ಆದರೆ ಇದು ಸಾಮಾನ್ಯವಾಗಿ ಅಷ್ಟೊಂದು ಗಂಭೀರವಾದದ್ದಾಗಿರುವುದಿಲ್ಲ.)
ಕಾಮಾಲೆಯ ನಿರ್ದಿಷ್ಟ ಮಟ್ಟವು, ಈ ಶಿಶುಗಳಲ್ಲಿ ವಿನಿಮಯ ರಕ್ತ ಪೂರಣಕ್ಕಾಗಿರುವ ಸೂಚಕವಾಗಿತ್ತೆಂದು ಅನೇಕ ವರ್ಷಗಳ ವರೆಗೆ ವೈದ್ಯರು ಅಭಿಪ್ರಯಿಸಿದ್ದರು; ಆದರೆ ಇನ್ನೂ ಹೆಚ್ಚಿನ ಸಂಶೋಧನೆಯು ವಿವಿಧ ಪರ್ಯಾಯ ಚಿಕಿತ್ಸೆಗಳನ್ನು ಪ್ರಕಟಪಡಿಸಿತು. ಶೀಘ್ರ ಹೆರಿಗೆ ಅಥವಾ ಸಿಜೇರಿಯನ್ ಶಸ್ತ್ರಕ್ರಿಯೆ, ಫೋಟೊಥೆರಪಿ (ನೀಲಿದೀಪ), ಮತ್ತು ಫೀನೊಬಾರ್‌ಬಿಟಾಲ್, ಸಕ್ರಿಯ ಇದ್ದಲುಗಳಂತಹ ಔಷಧ ದ್ರವ್ಯಗಳು, ಹಾಗೂ ಇತರ ಚಿಕಿತ್ಸೆಗಳು ಸಹಾಯಕಾರಿಯಾಗಿ ಪರಿಣಮಿಸಿವೆ ಮತ್ತು ರಕ್ತ ಪೂರಣದ ಅವಲಂಬನದ ಒತ್ತಾಯವನ್ನು ನಾಟಕೀಯವಾಗಿ ಕಡಿಮೆಗೊಳಿಸಿವೆ. ವಾಸ್ತವವಾಗಿ, ಇತ್ತೀಚೆಗಿನ ಕೆಲವು ವರದಿಗಳು, ಆರ್‌ಏಚ್ ರೋಗವಿರುವ ಶಿಶುಗಳಲ್ಲಿ ವಿನಿಮಯ ರಕ್ತ ಪೂರಣಗಳ ನಿಷ್ಪಯ್ರೋಜಕತೆಯನ್ನು ಮತ್ತು ಅಪಾಯವನ್ನು ಸಹ ಅತ್ಯುಜಲ್ವಪಡಿಸಿವೆ.—ಪುಟ 26ರ ರೇಖಾಚೌಕವನ್ನು ನೋಡಿ.
ಆದರೂ, ವಿನಿಮಯ ರಕ್ತ ಪೂರಣವೊಂದೇ ಅಂಗೀಕೃತ ಚಿಕಿತ್ಸೆಯಾಗಿದೆ ಎಂದು ಇನ್ನೂ ವೈದ್ಯರು ಒತ್ತಾಯಿಸುವ ವಿಪರೀತ ಸಂದರ್ಭಗಳಿವೆ. ಆದುದರಿಂದ, ರೋಗವನ್ನು ಮತ್ತು ಹಾಗೆಯೆ ಕಾಮಾಲೆಯನ್ನು ತಡೆಗಟ್ಟುವ ಒಂದು ಚುಚ್ಚುಮದ್ದಿನಿಂದ ಇಡೀ ಸಮಸ್ಯೆಯನ್ನು ದೂರಮಾಡಲು ಇದು ಹೆಚ್ಚು ಉತ್ತಮವಾಗಿದೆ ಎಂದು ಕೆಲವು ಹೆತ್ತವರು ಭಾವಿಸುತ್ತಾರೆ.
ಆರ್‌ಏಚ್‌ಐಜಿ ಚುಚ್ಚುಮದ್ದು ರಕ್ತದಿಂದ ಮಾಡಲ್ಪಟ್ಟಿದೆಯೆ?
ಹೌದು. ಚುಚ್ಚುಮದ್ದನ್ನು ರಚಿಸುವ ಪ್ರತಿವಿಷ ವಸ್ತುಗಳು, ಆರ್‌ಏಚ್ ಫ್ಯಾಕ್ಟರ್‌ಗೆ ರೋಗ ರಕ್ಷೆ ಪಡೆದ ಅಥವಾ ಸೂಕ್ಷ್ಮಗ್ರಾಹಿಯಾಗಿ ಪರಿಣಮಿಸಿದ ವ್ಯಕ್ತಿಗಳ ರಕ್ತದಿಂದ ಸಂಗ್ರಹಿಸಲ್ಪಡುತ್ತದೆ. ರಕ್ತದಿಂದ ಉತ್ಪತ್ತಿಮಾಡಲ್ಪಟ್ಟಿರದ, ಆನುವಂಶೀಯವಾಗಿ ರಚಿಸಲ್ಪಟ್ಟಿರುವ ಆರ್‌ಏಚ್‌ಐಜಿಯು ಭವಿಷ್ಯತ್ತಿನಲ್ಲಿ ಲಭ್ಯವಾಗಬಹುದು.
ಕ್ರೈಸ್ತನು ಆತ್ಮಸಾಕ್ಷಿಕವಾಗಿ ಆರ್‌ಏಚ್‌ಐಜಿಯನ್ನು ತೆಗೆದುಕೊಳ್ಳಬಲ್ಲನೊ?
ಒಳಗೂಡಿರುವ ವಿವಾದಾಂಶವು ರಕ್ತದ ಸಂಭಾವ್ಯ ಅಪಪ್ರಯೋಗವಾಗಿದೆ. ರಕ್ತದ ಇತರ ಅಪಪ್ರಯೋಗವನ್ನು ಅಥವಾ ಸೇವನೆಯನ್ನು ಶಾಸ್ತ್ರವಚನಗಳು ತೀರ ಒತ್ತಾಯಪೂರ್ವಕವಾಗಿ ನಿಷೇಧಿಸುತ್ತವೆ. (ಯಾಜಕಕಾಂಡ 17:11, 12; ಅ. ಕೃತ್ಯಗಳು 15:28, 29) ಆರ್‌ಏಚ್‌ಐಜಿಯು ರಕ್ತದಿಂದ ಉತ್ಪಾದಿಸಲ್ಪಡುವ ಕಾರಣ, ಕ್ರೈಸ್ತ ಸ್ತ್ರೀಯೊಬ್ಬಳು ಚುಚ್ಚುಮದ್ದನ್ನು ಅಂಗೀಕರಿಸಬೇಕಾಗಿದ್ದಲ್ಲಿ, ರಕ್ತವನ್ನು ವಿಸರ್ಜಿಸಿರಿ ಎಂಬ ಬೈಬಲಿನ ಆಜ್ಞೆಯ ಉಲ್ಲಂಘಿಸುವಿಕೆಯು ಅದಾಗಿರಸಾಧ್ಯವೊ?
ಈ ಪತ್ರಿಕೆ ಮತ್ತು ಇದರ ಸಂಗಾತಿ ಪತ್ರಿಕೆಯಾದ ಕಾವಲಿನಬುರುಜು, ಈ ವಿಷಯದ ಕುರಿತು ಏಕಪ್ರಕಾರವಾದ ಹೇಳಿಕೆಯನ್ನು ನೀಡಿವೆ.c ಎಲ್ಲಾ ಗರ್ಭಧಾರಣೆಗಳಲ್ಲಿ ಪ್ರತಿವಿಷ ವಸ್ತುಗಳು ತಾಯಿ ಮತ್ತು ಶಿಶುವಿನ ನಡುವಿನ ಮಾಸುಚೀಲವನ್ನು ತಡೆಯಿಲ್ಲದೆ ಹಾದುಹೋಗುತ್ತವೆ ಎಂದು ನಾವು ಗಮನಿಸಿದ್ದೇವೆ. ಆದುದರಿಂದ ಆರ್‌ಏಚ್‌ಐಜಿಯಂತಹ—ಆ ಕಾರ್ಯವಿಧಾನವು ಸಹಜವಾಗಿ ಏನು ಸಂಭವಿಸುತ್ತದೊ ಅದಕ್ಕೆ ತದ್ರೀತಿಯದ್ದಾಗಿರುವುದರಿಂದ—ಪ್ರತಿವಿಷ ವಸ್ತುಗಳಿಂದ ಕೂಡಿದ ಒಂದು ಚುಚ್ಚುಮದ್ದನ್ನು ತೆಗೆದುಕೊಳ್ಳುವುದು ಬೈಬಲಿನ ನಿಯಮದ ಒಂದು ಉಲ್ಲಂಘನೆಯಾಗಿ ತಮಗೆ ಭಾಸವಾಗುವುದಿಲ್ಲವೆಂದು ಕೆಲವು ಕ್ರೈಸ್ತರು ತೀರ್ಮಾನಿಸಿದ್ದಾರೆ.
ಆದರೂ, ಆರ್‌ಏಚ್‌ಐಜಿಯನ್ನು ತೆಗೆದುಕೊಳ್ಳಬೇಕೊ ಬೇಡವೊ ಎಂಬ ನಿರ್ಣಯವು ಕೊನೆಯದಾಗಿ, ಪ್ರತಿಯೊಬ್ಬ ಕ್ರೈಸ್ತ ದಂಪತಿಗಳು ಆತ್ಮಸಾಕ್ಷಿಯಾಗಿ ನಿರ್ಧರಿಸುವ ಒಂದು ವಿಷಯವಾಗಿದೆ. ಆದಾಗ್ಯೂ, ಆರ್‌ಏಚ್ ವಿವಾದಾಂಶವನ್ನು ಎದುರಿಸುತ್ತಿರುವ ಒಬ್ಬ ಗಂಡ ಮತ್ತು ಹೆಂಡತಿಯು, ವೈದ್ಯಕೀಯವಾಗಿ ಸೂಚಿಸಲ್ಪಟ್ಟಾಗ ಆರ್‌ಏಚ್‌ಐಜಿಯನ್ನು ತೆಗೆದುಕೊಳ್ಳಬಾರದೆಂದು ನಿರ್ಧರಿಸುವುದಾದರೆ, ಅದು ಸಂಭವನೀಯವಾಗಿ ತಡೆಗಟ್ಟಲ್ಪಡಸಾಧ್ಯವಿದ್ದ ಅಸ್ವಸ್ಥತೆಯೊಂದರಿಂದ ಗಂಭೀರವಾಗಿ ಪರಿಣಾಮ ಬೀರಲ್ಪಟ್ಟ ಶಿಶುವೊಂದನ್ನು ಭವಿಷ್ಯತ್ತಿನಲ್ಲಿ ಹೊಂದುವ ಅಪಾಯವನ್ನು ಅವರು ಅಂಗೀಕರಿಸುವ ಇಚ್ಛೆಯುಳ್ಳವರಾಗಿರಬೇಕಾದ ಅಗತ್ಯವಿದೆ. ಈ ಸನ್ನಿವೇಶದಲ್ಲಿ ಹೆಚ್ಚು ಮಕ್ಕಳನ್ನು ಪಡೆಯದಂತೆ ಮತ್ತು ಅಂತಹ ದುರಂತವೊಂದರ ಸಂಭವನೀಯತೆಗೆ ಸ್ವತಃ ತಮ್ಮನ್ನು ಒಡ್ಡಿಕೊಳ್ಳದಂತೆ ಅವರು ಅಧಿಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ವಿವೇಕದ ಮಾರ್ಗವಾಗಿದೆ ಎಂದು ಸಹ ಅವರು ನಿರ್ಧರಿಸಬಹುದು. ಸಂಬಂಧಪಟ್ಟ ಕ್ರೈಸ್ತ ಹೆತ್ತವರು ಅಂತಹ ಪ್ರಮುಖ ನಿರ್ಧಾರಗಳನ್ನು ಮಾಡುವ ಮೊದಲು ಎಲ್ಲಾ ಅಂಶಗಳನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಬೇಕು.
[ಅಧ್ಯಯನ ಪ್ರಶ್ನೆಗಳು]
a ಈ ಅಂಕಿ ಅಂಶಗಳು ವಿವಿಧ ಕುಲಗಳೊಂದಿಗೆ ಭಿನ್ನಭಿನ್ನವಾಗಿವೆ. ಅಧಿಕಾಂಶ ಬಿಳಿಯರಲ್ಲಿ ಆರ್‌ಏಚ್-ನೆಗೆಟಿವಿಟಿಯ ಸಂಭವವು 15 ಪ್ರತಿಶತವಾಗಿದೆ; ಅಮೆರಿಕದ ಕರಿಯರಲ್ಲಿ 7ರಿಂದ 8 ಪ್ರತಿಶತ; ಇಂಡೊ-ಯೂರೇಷನ್ (ಯೂರೋಪಿಯನ್ನರ ಮತ್ತು ಏಷ್ಯನ್ನರ ಮಿಶ್ರ ಸಂತತಿಯವರು)ರಲ್ಲಿ ಸುಮಾರು 2 ಪ್ರತಿಶತ; ಏಷಿಆ್ಯಟಿಕ್ ಚೀನೀಯರು ಮತ್ತು ಜಪಾನೀಯರಲ್ಲಿ ಬಹುಮಟ್ಟಿಗೆ ಸೊನ್ನೆ.—ಟ್ರಾನ್ಸ್‌ಫ್ಯೂಷನ್ ಮೆಡಿಸಿನ್ ರಿವ್ಯೂಸ್, ಸಪ್ಟಂಬರ 1988, ಪುಟ 130.
b ಈ ಪರಿಸ್ಥಿತಿಯಲ್ಲಿ ಕೆಲವು ಸ್ತ್ರೀಯರು ಅನೇಕ ಶಿಶುಗಳನ್ನು ಪಡೆದಿದ್ದರು, ಮತ್ತು ಎಲ್ಲ ಶಿಶುಗಳು ಆರ್‌ಏಚ್-ನೆಗೆಟಿವಾಗಿ ಪರಿಣಮಿಸಿದವು, ಆದುದರಿಂದ ತಾಯಿಯು ಸೂಕ್ಷ್ಮಗ್ರಾಹಿಯಾಗಲಿಲ್ಲ. ಆದರೆ ಬೇರೆ ಕೇಸ್‌ಗಳಲ್ಲಿ, ಪ್ರಪ್ರಥಮ ಮಗುವು ಆರ್‌ಏಚ್-ಪಾಸಿಟಿವ್ ಆಗಿತ್ತು, ಮತ್ತು ತಾಯಿಯು ಸೂಕ್ಷಗ್ರಾಹಿಯಾಗಿ ಪರಿಣಮಿಸಿದಳು.
c ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್.ನಿಂದ ಪ್ರಕಾಶಿಸಲ್ಪಟ್ಟ, ಕಾವಲಿನಬುರುಜು 1990, ಜೂನ್ 1, ಪುಟಗಳು 30, 31; 1978, ಜೂನ್ 15, ಪುಟಗಳು 30, 31; ಮತ್ತು ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು?ಅನ್ನು ನೋಡಿರಿ.
[ಪುಟ 26 ರಲ್ಲಿರುವ ಚೌಕ]
ವಿಪರೀತ ಕೆಂಪಿತ್ತ—ರಕ್ತ ಪೂರಣಕ್ಕೆ ಕಾರಣವೊ?
ಶಿಶುಗಳಲ್ಲಿ ವಿಪರೀತ ಕೆಂಪಿತ್ತದ ಪರಿಣಾಮಗಳ ಕುರಿತು ವೈದ್ಯರು ದೀರ್ಘಸಮಯದಿಂದಲೂ ಭಯಭರಿತರಾಗಿದ್ದಾರೆ, ಎಷ್ಟರಮಟ್ಟಿಗೆಂದರೆ ಕೆಂಪಿತ್ತವು ಏರಲು—ವಿಶೇಷವಾಗಿ 20 mg⁄100 mlರ ಸಂಖ್ಯೆಯ ಕಡೆಗೆ ಏರಿದಾಗ—ಆರಂಭಿಸಿದಾಗ ವೈದ್ಯರು ಅನೇಕವೇಳೆ “ಮಿದುಳಿನ ಹಾನಿಯನ್ನು ತಡೆಗಟ್ಟಲಿಕ್ಕಾಗಿ” (ಕರ್ನಿಕರ್ಟಸ್) ವಿನಿಮಯ ರಕ್ತ ಪೂರಣವು ಅತ್ಯಾವಶ್ಯಕವೆಂದು ಒತ್ತಾಯ ಮಾಡುತ್ತಾರೆ. ಅವರ ಭಯ, ಮತ್ತು ರಕ್ತ ಪೂರಣದ ಮೌಲ್ಯವು ಸಮರ್ಥಿಸಲ್ಪಡುತ್ತದೊ?
ಡಾ. ಆ್ಯಂಟನಿ ಡಿಕ್ಸನ್ ಟಿಪ್ಪಣಿ ಮಾಡುವುದು: “ಅಂತಹ ಶಿಶುಗಳ ಕುರಿತಾದ ಅನೇಕ ಅಧ್ಯಯನಗಳು, 100 mlಗೆ 18 mg-51 mg ನಡುವಿನ ಕೆಂಪಿತ್ತದ ಮಟ್ಟಗಳ ಯಾವುದೇ—ಕೊಂಚ ಕಾಲದ ಅಥವಾ ದೀರ್ಘಕಾಲದ—ಪರಿಣಾಮಗಳನ್ನು ಪತ್ತೆಮಾಡಲು ಅಶಕ್ತವಾಗಿವೆ. “ವಿಜಿಂಟಿಫೋಬಿಯ: 20ರ ಭಯ”ವನ್ನು ಡಾ. ಡಿಕ್ಸನ್ ಚರ್ಚಿಸುತ್ತಾ ಮುಂದುವರಿಯುತ್ತಾರೆ. ಈ ವಿಪರೀತ ಕೆಂಪಿತ್ತದ ಮಟ್ಟಗಳ ಚಿಕಿತ್ಸೆ ಮಾಡುವುದರಿಂದ ಯಾವುದೇ ಲಾಭವು ದೃಢಪಡಿಸಲ್ಪಟ್ಟಿಲ್ಲವಾದಾಗ್ಯೂ, ಡಾ. ಡಿಕ್ಸನ್ ಮುಕ್ತಾಯಗೊಳಿಸಿದ್ದು: “ಸಂದಿಗ್ಧತೆಯು ಸ್ಪಷ್ಟವಾಗಿಗಿದೆ. ವಿಪರೀತ ಸೀರಮ್ ಕೆಂಪಿತ್ತದ ಮಟ್ಟಗಳ ಆಕ್ರಮಣಶೀಲ ಚಿಕಿತ್ಸೆಯು ಈಗ ಆದರ್ಶ ಕಾರ್ಯಾಚರಣೆಯಾಗಿದೆ. ಅದು ತಪ್ಪಾಗಿದೆಯೆಂದು ದೃಢಪಡಿಸಲ್ಪಡುವ ವರೆಗೆ ಆದರ್ಶ ಕಾರ್ಯಾಚರಣೆಯು ಆಕ್ಷೇಪಕ್ಕೆ ಗುರಿಮಾಡಲ್ಪಡಬಾರದು, ಆದರೂ ಅದು ತಪ್ಪಾಗಿದೆಯೆಂದು ಪ್ರದರ್ಶಿಸಲು ಮಾಡುವ ಯಾವುದೇ ಪ್ರಯತ್ನವು ಅನೀತಿಯ ವಿಷಯವಾಗಿದೆ!”—ಕೆನೇಡಿಯನ್ ಫ್ಯಾಮಿಲಿ ಫಿಸಿಷಿಯನ್, ಅಕ್ಟೋಬರ 1984, ಪುಟ 1981.
ಇನ್ನೊಂದು ಕಡೆಯಲ್ಲಿ, ಕೆಂಪಿತ್ತದ ರಕ್ಷಣಾತ್ಮಕ ಪಾತ್ರ ಮತ್ತು “ಅನುಚಿತವಾಗಿ ಕಡಿಮೆ ಸೀರಮ್ ಕೆಂಪಿತ್ತ ಮಟ್ಟಗಳಿಂದ ಬರುವ ಸಂಭಾವ್ಯ ಅನಿರೀಕ್ಷಿತ ಅಪಾಯಗಳ” ಕುರಿತು ಇಟ್ಯಾಲಿಯನ್ ಅಧಿಕಾರಿಣಿಯಾದ ಎರ್ಸೀಲ್ಯಾ ಗಾರ್ಬನ್ಯಾಟಿ ಬರೆದಿದ್ದಾರೆ. (ಓರೆ ಅಕ್ಷರ ನಮ್ಮದು.) (ಪೀಡಿಯಾಟ್ರಿಕ್ಸ್, ಮಾರ್ಚ್ 1990, ಪುಟ 380) ಇನ್ನೂ ಒಂದು ಹೆಜ್ಚೆ ಮುಂದಕ್ಕೆ ಹೋಗುತ್ತಾ, ವೆಸ್ಟರ್ನ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಡಾ. ಜೋನ್ ಹಾಜ್ಮನ್ ಬರೆಯುವುದು: “ಕೆಂಪಿತ್ತದ ಕಡಿಮೆ ಮಟ್ಟಗಳಲ್ಲಿ, ವಿನಿಮಯ ರಕ್ತ ಪೂರಣವು ಮಿದುಳಿನಲ್ಲಿ ಕೆಂಪಿತ್ತದ ಕಲೆಯಾಗುವುದನ್ನು ತಡೆಗಟ್ಟದು ಮತ್ತು, ಮೇಲೆ ಉದ್ಧರಿಸಲ್ಪಟ್ಟ ಪ್ರಾಯೋಗಿಕ ಕೆಲಸದ ದೃಷ್ಟಿಕೋನದಲ್ಲಿ, ವಾಸ್ತವವಾಗಿ ಹಾನಿಕಾರಕವಾಗಿರಬಹುದು.”—ಜೂನ್ 1984, ಪುಟ 933.