ಎಲ್ಲ ರೀತಿಯ ದೂರುಹೇಳುವಿಕೆಯು ತಪ್ಪೊ?
ನಾವು ಯಾವುದರ ಕುರಿತಾಗಿ ದೂರುಹೇಳಲಾರೆವೊ ಆ ಕಾಟಗಳಿಗಿಂತ ಹೆಚ್ಚು ನೋಯಿಸುವಂತಹ ಕಾಟಗಳು ಯಾವುವು?—ಮಾರ್ಕಿಸ್ ಡಾ ಕುಸ್ಟಿನ್, 1790-1857.
ಎರಡು ವರ್ಷಗಳ ವರೆಗೆ ಆಕೆಯು ಒಬ್ಬ ಸಹೋದ್ಯೋಗಿಯಿಂದ ಲೈಂಗಿಕ ಕಿರುಕುಳವನ್ನು ತಾಳಿಕೊಂಡಿದ್ದಳು. ಅವಳ ಆಕ್ಷೇಪಣೆಗಳು, ಮೌಖಿಕ ನಿಂದೆ ಮತ್ತು ಉದ್ದೇಶಪೂರ್ವಕವಾಗಿ ಅಲಕ್ಷಿಸಲ್ಪಡುವುದರಲ್ಲಿ ಫಲಿಸಿದವು. ಅದುಮಿಡಲ್ಪಟ್ಟಿದ್ದ ಒತ್ತಡವು ಆಕೆಯ ಆರೋಗ್ಯವನ್ನು ಬಾಧಿಸುತ್ತಿತ್ತಾದರೂ ಆಕೆ ಏನು ಮಾಡಸಾಧ್ಯವಿತ್ತು? ತದ್ರೀತಿಯಲ್ಲಿ, ತನ್ನ ತರಗತಿಯಲ್ಲಿ ಉಚ್ಚ ದರ್ಜೆಯನ್ನು ಪಡೆಯುತ್ತಿದ್ದ ಒಬ್ಬ ವಿದ್ಯಾರ್ಥಿಯು, ಶಾಲೆಯಿಂದ ಹೊರಹಾಕಲ್ಪಟ್ಟನು, ಏಕೆಂದರೆ ಅವಶ್ಯಪಡಿಸಲ್ಪಟ್ಟಿದ್ದ ಯುದ್ಧೋಚಿತ ಕವಾಯತುಗಳಲ್ಲಿ ಭಾಗವಹಿಸಲು ಅವನ ಮನಸ್ಸಾಕ್ಷಿಯು ಅವನನ್ನು ಅನುಮತಿಸಲಿಲ್ಲ. ಇಬ್ಬರಿಗೂ ತಮಗೆ ಅನ್ಯಾಯ ಮಾಡಲಾಗುತ್ತಿದೆಯೆಂದು ಅನಿಸಿತು, ಆದರೆ ಅವರು ದೂರುಹೇಳಬೇಕೊ? ಅವರು ದೂರುಹೇಳುವಲ್ಲಿ, ಅವರು ಉಪಶಮನವನ್ನು ನಿರೀಕ್ಷಿಸಸಾಧ್ಯವಿತ್ತೊ, ಅಥವಾ ಅದು ಕೇವಲ ಸಂಗತಿಗಳನ್ನು ಹೆಚ್ಚು ಕೆಟ್ಟದ್ದನ್ನಾಗಿ ಮಾಡುವುದೊ?
ಆದರ್ಶಪ್ರಾಯವಲ್ಲದ ಲೋಕವೊಂದರಲ್ಲಿ ನಾವು ಅಪರಿಪೂರ್ಣ ಜನರ ನಡುವೆ ಜೀವಿಸುತ್ತಿರಲಾಗಿ, ಇವುಗಳಂತಹ ಮತ್ತು ಇತರ ದೂರುಗಳು ಇಂದು ಸಾಮಾನ್ಯವಾಗಿವೆ. ದೂರುಹೇಳುವಿಕೆಯು, ಯಾವುದೊ ಸನ್ನಿವೇಶದ ಕುರಿತಾಗಿ ನಿಷ್ಕ್ರಿಯವಾದ ಅತೃಪ್ತಿ, ದುಃಖ, ನೋವು, ಅಥವಾ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುವುದರಿಂದ ಹಿಡಿದು, ಒಂದು ಪಕ್ಷದ ವಿರುದ್ಧ ಒಂದು ಔಪಚಾರಿಕ ಆರೋಪವನ್ನು ಹೊರಿಸುವುದರ ವರೆಗಿನ ಇಡೀ ಕ್ಷೇತ್ರವನ್ನು ಒಳಗೂಡುತ್ತದೆ. ಹೆಚ್ಚಿನ ಜನರು ದೂರುಹೇಳುವುದನ್ನು ಮತ್ತು ಎದುರುಬೀಳುವುದನ್ನು ಹೋಗಲಾಡಿಸಲು ಇಷ್ಟಪಡುತ್ತಾರೆ; ಆದರೆ, ಒಬ್ಬನು ಯಾವಾಗಲೂ ಸುಮ್ಮನೆ ಕುಳಿತುಕೊಳ್ಳಬೇಕೊ? ಬೈಬಲಿನ ದೃಷ್ಟಿಕೋನವೇನಾಗಿದೆ?
ಸ್ವತಃ ತನ್ನ ಮೇಲೆ ಮತ್ತು ಇತರರ ಮೇಲೆ ದೂರುಹೇಳುವುದರ ದುಷ್ಪರಿಣಾಮಗಳು
ನಿರಂತರವಾಗಿ ದೂರುಹೇಳುವ ಮನೋವೃತ್ತಿಯು ಹಾನಿಕರವಾದದ್ದಾಗಿದೆಯೆಂಬುದು ನಿಸ್ಸಂದೇಹ ಮತ್ತು ಅದು ಬೈಬಲಿನಲ್ಲಿ ಖಂಡಿಸಲ್ಪಟ್ಟಿದೆ. ದೂರುಹೇಳುವವನೊಬ್ಬನು, ತನಗೇ ಶಾರೀರಿಕ ಮತ್ತು ಆತ್ಮಿಕ ಹಾನಿಯನ್ನು ತಂದುಕೊಳ್ಳುತ್ತಾನೆ ಮತ್ತು ತನ್ನ ದೂರುಗಳಲ್ಲಿ ಒಳಪಟ್ಟಿರುವವರಿಗೆ ಕ್ಲೇಶವನ್ನು ತರುತ್ತಾನೆ. ದೂರುಹೇಳುವ ಒಬ್ಬ ಹೆಂಡತಿಗೆ ಸೂಚಿಸುತ್ತಾ, ಬೈಬಲ್ ಜ್ಞಾನೋಕ್ತಿಯು ಹೇಳುವುದು: “ದೊಡ್ಡ ಮಳೆಯ ದಿನದಲ್ಲಿ ತಟತಟನೆ ತೊಟ್ಟಿಕ್ಕುವ ಹನಿ, ತಂಟೆಮಾಡುವ ಹೆಂಡತಿ, ಎರಡು ಒಂದೇ.” (ಜ್ಞಾನೋಕ್ತಿ 27:15) ಯೆಹೋವನ ಅಥವಾ ಆತನ ಒದಗಿಸುವಿಕೆಗಳಲ್ಲೊಂದರ ವಿರುದ್ಧ ದೂರುಹೇಳುವಿಕೆಯು ವಿಶೇಷವಾಗಿ ಖಂಡನಾರ್ಹವಾಗಿದೆ. ಇಸ್ರಾಯೇಲ್ ಜನಾಂಗವು, ತನ್ನ 40 ವರ್ಷಗಳ ಅರಣ್ಯದ ಪ್ರಯಾಣದ ಸಮಯದಲ್ಲಿ ಅದ್ಭುತಕರವಾಗಿ ಒದಗಿಸಲ್ಪಟ್ಟ ಮನ್ನವನ್ನು “ನಿಸ್ಸಾರವಾದ ಆಹಾರ”ವೆಂದು ಕರೆಯುತ್ತಾ, ಅದರ ಕುರಿತಾಗಿ ದೂರಿದಾಗ, ಆ ಅಗೌರವಪೂರ್ಣ ದೂರುಗಾರರನ್ನು ಶಿಕ್ಷಿಸಲಿಕ್ಕಾಗಿ ಯೆಹೋವನು ವಿಷಭರಿತ ಸರ್ಪಗಳನ್ನು ಕಳುಹಿಸಿದನು ಮತ್ತು ಅನೇಕರು ಸತ್ತರು.—ಅರಣ್ಯಕಾಂಡ 21:5, 6.
ಇನ್ನೂ ಹೆಚ್ಚಾಗಿ, ಯೇಸು ತನ್ನ ಹಿಂಬಾಲಕರಿಗೆ, ಅವರು ತಮ್ಮ ಜೊತೆ ಮಾನವರಲ್ಲಿ ಗಮನಿಸಬಹುದಾದ ದೋಷಗಳ “ರವೆಯ” ಕುರಿತಾಗಿ ದೂರುಹೇಳದೆ, ತಮ್ಮಲ್ಲಿಯೇ ಇರುವಂತಹ ಕುಂದುಗಳ ಹೆಚ್ಚು ದೊಡ್ಡದಾದ “ತೊಲೆಯ” ಕುರಿತಾಗಿ ಚೆನ್ನಾಗಿ ಅರಿವುಳ್ಳವರಾಗಿರುವಂತೆ ಸಲಹೆ ನೀಡಿದನು. (ಮತ್ತಾಯ 7:1-5) ತದ್ರೀತಿಯಲ್ಲಿ, ಇನ್ನೊಬ್ಬನಿಗೆ ತೀರ್ಪುಮಾಡುವುದನ್ನು (ಒಂದು ರೀತಿಯ ದೂರುಹೇಳುವಿಕೆ) ಖಂಡಿಸುತ್ತಾ ಪೌಲನು ಹೇಳಿದ್ದು, “ಉತ್ತರ ಹೇಳುವದಕ್ಕೆ ನಿನಗೆ ಮಾರ್ಗವಿಲ್ಲ. . . . ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಆ ದೋಷಗಳನ್ನೇ ನಡಿಸುತ್ತೀಯಲ್ಲಾ.” ದೂರುಹೇಳುವುದರ ವಿರುದ್ಧವಾದ ಈ ಎಚ್ಚರಿಕೆಗಳು, ನಾವು ಅನಗತ್ಯವಾಗಿ ಟೀಕಾತ್ಮಕರಾಗುವುದನ್ನು ಮತ್ತು ದೂರುಹೇಳುವ ಒಂದು ಮನೋವೃತ್ತಿಯನ್ನು ವಿಕಸಿಸಿಕೊಳ್ಳುವುದನ್ನು ಹೋಗಲಾಡಿಸುವಂತೆ ನಮ್ಮನ್ನು ಪ್ರಚೋದಿಸತಕ್ಕದ್ದು.—ರೋಮಾಪುರ 2:1.
ಎಲ್ಲ ದೂರುಹೇಳುವಿಕೆಯು ಖಂಡಿಸಲ್ಪಡುತ್ತದೊ?
ಹಾಗಾದರೆ, ಎಲ್ಲ ವಿಧದ ದೂರುಹೇಳುವಿಕೆಯು ಖಂಡಿಸಲ್ಪಡಬೇಕೆಂಬ ತೀರ್ಮಾನಕ್ಕೆ ನಾವು ಬರಬೇಕೊ? ಇಲ್ಲ, ನಾವು ಹಾಗೆ ತೀರ್ಮಾನಿಸಬಾರದು. ನಾವು ಜೀವಿಸುತ್ತಿರುವ ದೋಷಯುಕ್ತ ಲೋಕದಲ್ಲಿ, ಯೋಗ್ಯವಾಗಿಯೇ ತಿದ್ದುಪಡಿಯನ್ನು ಅವಶ್ಯಪಡಿಸುವ ಅನೇಕ ಅನ್ಯಾಯಗಳಿವೆಯೆಂದು ಬೈಬಲ್ ಸೂಚಿಸುತ್ತದೆ. ದೃಷ್ಟಾಂತವೊಂದರಲ್ಲಿ, ದಬ್ಬಾಳಿಕೆಗೊಳಗಾದ ಒಬ್ಬ ವಿಧವೆಯು “ಬಂದು ಬಂದು ಕಡೆಗೆ [ಅವನನ್ನು] ದಣಿ”ಸದಂತೆ, ಒಲ್ಲದ ಮನಸ್ಸಿನಿಂದ ಅವಳಿಗೆ ನ್ಯಾಯವು ಸಿಗುವಂತೆ ಮಾಡಿದಂತಹ ಒಬ್ಬ ಅನೀತಿವಂತ ನ್ಯಾಯಾಧೀಶನ ಕುರಿತಾಗಿ ಯೇಸು ಹೇಳಿದನು. (ಲೂಕ 18:1-8) ಕೆಲವು ವಿಧಗಳಲ್ಲಿ, ತಪ್ಪುಗಳು ಸರಿಪಡಿಸಲ್ಪಡುವ ತನಕ ನಾವೂ ನಮ್ಮ ದೂರುಗಳಲ್ಲಿ ಪಟ್ಟುಹಿಡಿಯಬೇಕಾದೀತು.
ದೇವರ ರಾಜ್ಯವು ಬರುವಂತೆ ಪ್ರಾರ್ಥಿಸಲಿಕ್ಕಾಗಿ ನಮ್ಮನ್ನು ಉತ್ತೇಜಿಸುವ ಮೂಲಕ, ನಾವು ಈ ಸದ್ಯದ ಲೋಕದ ಕುಂದುಗಳನ್ನು ಅಂಗೀಕರಿಸಿ, ಪರಿಹಾರಕ್ಕಾಗಿ ದೇವರಿಗೆ ‘ಮೊರೆಯಿಡು’ವಂತೆ ಯೇಸು ನಮ್ಮನ್ನು ಪ್ರೇರಿಸಿದನಲ್ಲವೊ? (ಮತ್ತಾಯ 6:10) ಪುರಾತನ ಸೊದೋಮ್ ಮತ್ತು ಗೊಮೋರದ ದುಷ್ಟತನದ ಕುರಿತಾದ “ದೊಡ್ಡ ಮೊರೆಯು” ಯೆಹೋವನ ಕಿವಿಗಳಿಗೆ ತಲಪಿದಾಗ, ‘ತನಗೆ ಮುಟ್ಟಿದ ಮೊರೆಯಂತೆಯೇ ಅವರು [ಮಾಡುತ್ತಿದ್ದರೊ] ಇಲ್ಲವೋ ಎಂದು ನೋಡಿ ತಿಳುಕೊಳ್ಳಲು’ ಮತ್ತು ಪರಿಹಾರವನ್ನು ತರಲು ಆತನು ತನ್ನ ಸಂದೇಶವಾಹಕರನ್ನು ಕಳುಹಿಸಿದನು. (ಆದಿಕಾಂಡ 18:20, 21) ತನಗೆ ದೂರುಹೇಳಿದವರಿಗೆ ಪರಿಹಾರವನ್ನು ಒದಗಿಸುತ್ತಾ, ಯೆಹೋವನು ಕಟ್ಟಕಡೆಗೆ ಆ ಎರಡು ಊರುಗಳನ್ನು ಮತ್ತು ಅವುಗಳ ಅನೈತಿಕ ನಿವಾಸಿಗಳನ್ನು ನಾಶಗೊಳಿಸುವ ಮೂಲಕ ಆ ಪರಿಸ್ಥಿತಿಯನ್ನು ಸರಿಪಡಿಸಿದನು.
ಕ್ರೈಸ್ತ ಸಭೆ
ಕ್ರೈಸ್ತ ಸಭೆಯೊಳಗಿನ ಸಹೋದರರ ನಡುವೆ ವಿಷಯವು ಭಿನ್ನವಾಗಿರಬೇಕೊ? ಕ್ರೈಸ್ತರು ಅಪರಿಪೂರ್ಣ ಪುರುಷರು ಮತ್ತು ಸ್ತ್ರೀಯರಾಗಿದ್ದರೂ, ದೇವರನ್ನು ಶಾಂತಿ ಮತ್ತು ಐಕ್ಯದಲ್ಲಿ ಸೇವಿಸಲು ಅವರು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೂ, ಒಂದಿಷ್ಟು ದೂರುವಿಕೆಗೆ ಕಾರಣವನ್ನು ಕೊಡುವ ಮತ್ತು ಒಂದು ಪರಿಹಾರವನ್ನು ಅವಶ್ಯಪಡಿಸುವ ಸನ್ನಿವೇಶಗಳು ಅವರ ನಡುವೆ ಏಳುವವು. ಪ್ರಥಮ ಶತಮಾನದಲ್ಲಿ, ಪಂಚಾಶತ್ತಮದ ಬಳಿಕ ಸ್ವಲ್ಪ ಸಮಯದಲ್ಲೇ, ಅಭಿಷಿಕ್ತರ ಸಭೆಯಲ್ಲಿ ಒಂದು ಸನ್ನಿವೇಶವು ಮೇಲೆದ್ದಿತು. ಹೊಸದಾಗಿ ಪರಿವರ್ತಿತರಾದ ಅನೇಕ ಕ್ರೈಸ್ತರು, ಹೆಚ್ಚಿನ ಉಪದೇಶ ಮತ್ತು ಉತ್ತೇಜನಕ್ಕಾಗಿ ಯೆರೂಸಲೇಮಿನಲ್ಲಿ ಉಳಿದರು. ಅಲ್ಲಿ ಲಭ್ಯವಿದ್ದ ಆಹಾರ ಸರಬರಾಯಿಗಳ ಒಂದು ಹಂಚುವಿಕೆ ಇತ್ತು. ಆದಾಗಲೂ, “ಆ ದಿವಸಗಳಲ್ಲಿ ಶಿಷ್ಯರು ಹೆಚ್ಚುತ್ತಾ ಬರಲಾಗಿ ಅವರೊಳಗೆ ಗ್ರೀಕ್ಭಾಷೆಯವರು ಇಬ್ರಿಯ ಭಾಷೆಯವರ ಮೇಲೆ—ದಿನದಿನದ ಉಪಚಾರದಲ್ಲಿ ನಮ್ಮ ವಿಧವೆಯರನ್ನು ಸರಿಯಾಗಿ ಪರಾಂಬರಿಸುವದಿಲ್ಲವೆಂದು ಗುಣುಗುಟ್ಟಿದರು.” ಈ ದೂರುಗಾರರನ್ನು ತೊಂದರೆಗಾರರೆಂದು ಖಂಡಿಸುವ ಬದಲಿಗೆ, ಅಪೊಸ್ತಲರು ಆ ಸನ್ನಿವೇಶವನ್ನು ಸರಿಪಡಿಸಲು ಕ್ರಿಯೆಗೈದರು. ಹೌದು, ಯೋಗ್ಯವಾದ ಗೌರವ ಮತ್ತು ಯೋಗ್ಯ ಮನೋವೃತ್ತಿಯಿಂದ ಮಾಡಲ್ಪಟ್ಟ ದೂರುಗಳಿಗೆ, ಸಭೆಯ ಮೇಲ್ವಿಚಾರಕರು ನಮ್ರತೆಯಿಂದ ಕಿವಿಗೊಟ್ಟು ಕಾರ್ಯವೆಸಗಿದರು.—ಅ. ಕೃತ್ಯಗಳು 6:1-6; 1 ಪೇತ್ರ 5:3.
ಯೋಗ್ಯ ಅಧಿಕಾರಿಗಳಿಗೆ ದೂರುಗಳನ್ನು ಹೇಳಿರಿ
ಯೋಗ್ಯವಾದ ಮನೋವೃತ್ತಿಯಿಂದ ಮತ್ತು ಯೋಗ್ಯ ಅಧಿಕಾರಿಗಳಿಗೆ ದೂರುಗಳು ಹೇಳಲ್ಪಡಬೇಕೆಂಬುದನ್ನು, ಮೇಲೆ ಕೊಡಲ್ಪಟ್ಟಿರುವ ಉದಾಹರಣೆಗಳಿಂದ ನೀವು ಗಮನಿಸಿದಿರೊ? ಉದಾಹರಣೆಗಾಗಿ, ತೀರ ಹೆಚ್ಚಾದ ತೆರಿಗೆಯ ಹೊರೆಯ ಕುರಿತಾಗಿ ಪೊಲೀಸರಿಗೆ ದೂರುಹೇಳುವುದು ಅಥವಾ ಒಬ್ಬನ ಶಾರೀರಿಕ ಅಸ್ವಸ್ಥತೆಗಳ ಕುರಿತಾಗಿ ಒಬ್ಬ ನ್ಯಾಯಾಧೀಶನಿಗೆ ದೂರುಹೇಳುವುದು ಅರ್ಥರಹಿತವಾಗಿರುವುದು. ಹಾಗೆಯೇ, ಸಭೆಯೊಳಗಿನ ಅಥವಾ ಹೊರಗಿನ ಯಾವುದೇ ಸನ್ನಿವೇಶದ ಕುರಿತಾಗಿ, ಯಾವುದೇ ಅಧಿಕಾರವಿಲ್ಲದ ಅಥವಾ ಸಹಾಯಮಾಡಲು ಅಸಮರ್ಥನಾದ ಒಬ್ಬ ವ್ಯಕ್ತಿಗೆ ದೂರುಹೇಳುವುದು ಅಯೋಗ್ಯವಾಗಿರುವುದು.
ಹೆಚ್ಚಿನ ದೇಶಗಳಲ್ಲಿ ಇಂದು ಒಂದಿಷ್ಟು ಪರಿಹಾರವನ್ನು ಗಳಿಸುವ ನಿರೀಕ್ಷೆಯಿಂದ ಅಪೀಲುಮಾಡಸಾಧ್ಯವಿರುವ ನ್ಯಾಯಾಲಯಗಳು ಮತ್ತು ಇತರ ಸೂಕ್ತ ಅಧಿಕಾರಿಗಳಿದ್ದಾರೆ. ಲೇಖನದ ಆರಂಭದಲ್ಲಿ ತಿಳಿಸಲ್ಪಟ್ಟಿರುವ ವಿದ್ಯಾರ್ಥಿಯು, ತನ್ನ ದೂರನ್ನು ನ್ಯಾಯಾಲಯಕ್ಕೆ ಕೊಂಡೊಯ್ದಾಗ, ನ್ಯಾಯಾಧೀಶರು ಅವನ ಪರವಾಗಿ ತೀರ್ಪುಕೊಟ್ಟರು ಮತ್ತು ಶಾಲೆಯಿಂದ ಕ್ಷಮಾಯಾಚನೆಯೊಂದಿಗೆ ಅವನು ಪುನಃಸೇರಿಸಿಕೊಳ್ಳಲ್ಪಟ್ಟನು. ತದ್ರೀತಿಯಲ್ಲಿ, ಲೈಂಗಿಕವಾಗಿ ಕಿರುಕುಳಕೊಡಲ್ಪಟ್ಟಿದ್ದ ಆ ಮಹಿಳಾ ಕಾರ್ಮಿಕಳು, ಕಾರ್ಮಿಕ ಸ್ತ್ರೀಯರ ಯೂನಿಯನ್ನಿಂದ ಪರಿಹಾರವನ್ನು ಕಂಡುಕೊಂಡಳು. ಶಾಲೆಯ ಮಂಡಳಿಯಿಂದ ಅವಳಿಗೆ ಕ್ಷಮಾಯಾಚನೆಯು ದೊರಕಿತು. ಅವಳ ಧನಿಗಳು, ಲೈಂಗಿಕ ಕಿರುಕುಳವನ್ನು ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಂಡರು.
ಆದಾಗಲೂ, ಎಲ್ಲ ದೂರುಹೇಳುವಿಕೆಗಳಿಗೆ ಒಂದೇ ರೀತಿಯ ಫಲಿತಾಂಶವಿರುವುದೆಂದು ನಿರೀಕ್ಷಿಸಬಾರದು. ವಿವೇಕಿ ರಾಜನಾದ ಸೊಲೊಮೋನನು ವಾಸ್ತವಿಕವಾಗಿ ಗಮನಿಸಿದ್ದು: “ವಕ್ರವಾದದ್ದನ್ನು ಸರಿಮಾಡುವದು ಅಸಾಧ್ಯ.” (ಪ್ರಸಂಗಿ 1:15) ದೇವರು ತನ್ನ ತಕ್ಕ ಸಮಯದಲ್ಲಿ ಸರಿಪಡಿಸಲಿಕ್ಕಾಗಿ ಕೆಲವು ವಿಷಯಗಳು ಕಾಯಬೇಕಾಗುವುದೆಂಬುದನ್ನು ನಾವು ಅಂಗೀಕರಿಸುವುದು ಒಳ್ಳೆಯದು.
[ಪುಟ 31 ರಲ್ಲಿರುವ ಚಿತ್ರ]
ಹಿರಿಯರು ಯುಕ್ತವಾದ ದೂರುಗಳಿಗೆ ಕಿವಿಗೊಟ್ಟು ಕಾರ್ಯವೆಸಗುತ್ತಾರೆ