ಅದ್ಭುತಕಾರ್ಯಗಳು ಮಾತ್ರ ನಂಬಿಕೆಯನ್ನು ಕಟ್ಟದಿರಲು ಕಾರಣ
ಕಣ್ಣಾರೆ ನೋಡುವುದೇ ಉತ್ತಮ ಪ್ರಮಾಣ. ಅದು ಅನೇಕರ ದೃಷ್ಟಿಕೋನವಾಗಿದೆ. ದೇವರು ತನ್ನನ್ನು ಯಾವುದೋ ಅದ್ಭುತಕರ ರೀತಿಯಲ್ಲಿ ಪ್ರಕಟಗೊಳಿಸುತ್ತಿದ್ದಲ್ಲಿ ಆತನಲ್ಲಿ ವಿಶ್ವಾಸವಿಡುವೆವೆಂದು ಕೆಲವರು ಹೇಳುತ್ತಾರೆ. ಪ್ರಾಯಶಃ ವಿಷಯವು ಹಾಗೆಯೇ ಇದೆ, ಆದರೆ ಅಂತಹ ಅಭಿಪ್ರಾಯವು ನಿಜವಾದ ನಂಬಿಕೆಗೆ ನಡಿಸುವುದೊ?
ಕೋರಹ, ದಾತಾನ್, ಅಬೀರಾಮ್ ಎಂಬ ಇಸ್ರಾಯೇಲ್ಯರನ್ನು ಪರಿಗಣಿಸಿರಿ. ಅವರು ದೇವರಿಂದ ನಡೆಸಲ್ಪಟ್ಟ ಈ ಭಯ-ಪ್ರೇರಕ ಅದ್ಭುತಕಾರ್ಯಗಳಿಗೆ ಪ್ರತ್ಯಕ್ಷಸಾಕ್ಷಿಗಳಾಗಿದ್ದರೆಂದು ಬೈಬಲ್ ತೋರಿಸುತ್ತದೆ: ಐಗುಪ್ತದ ಮೇಲೆ ಬರಮಾಡಲ್ಪಟ್ಟ ಹತ್ತು ಬಾಧೆಗಳು, ಕೆಂಪು ಸಮುದ್ರದ ಮೂಲಕ ಇಸ್ರಾಯೇಲ್ ಜನಾಂಗದ ಪಲಾಯನ, ಮತ್ತು ಐಗುಪ್ತ್ಯನಾದ ಫರೋಹ ಹಾಗೂ ಅವನ ಸೇನಾ ಪಡೆಯ ಸಂಹಾರ. (ವಿಮೋಚನಕಾಂಡ 7:19-11:10; 12:29-32; ಕೀರ್ತನೆ 136:15) ಸೀನಾಯಿ ಪರ್ವತದಲ್ಲಿ ಯೆಹೋವನು ಸ್ವರ್ಗದಿಂದ ಮಾತಾಡುವುದನ್ನು ಸಹ ಕೋರಹ, ದಾತಾನ್ ಮತ್ತು ಅಬೀರಾಮ್ ಕೇಳಿಸಿಕೊಂಡಿದ್ದರು. (ಧರ್ಮೋಪದೇಶಕಾಂಡ 4:11, 12) ಆದರೂ, ಈ ಅದ್ಭುತಕಾರ್ಯಗಳು ಸಂಭವಿಸಿದ ಸ್ವಲ್ಪ ಸಮಯದಲ್ಲೇ, ಈ ಮೂವರು ಪುರುಷರು ಯೆಹೋವನ ಮತ್ತು ಆತನ ನೇಮಿತ ಸೇವಕರ ವಿರುದ್ಧ ಒಂದು ದಂಗೆಯನ್ನು ಕೆರಳಿಸಿದರು.—ಅರಣ್ಯಕಾಂಡ 16:1-35; ಕೀರ್ತನೆ 106:16-18.
ಸುಮಾರು 40 ವರ್ಷಗಳ ನಂತರ, ಬಿಳಾಮನೆಂಬ ಒಬ್ಬ ಪ್ರವಾದಿಯೂ ಒಂದು ಅದ್ಭುತಕಾರ್ಯವನ್ನು ಕಣ್ಣಾರೆ ನೋಡಿದನು. ದೇವದೂತ ಸಂಬಂಧಿತ ಹಸ್ತಕ್ಷೇಪವೂ, ದೇವರ ಶತ್ರುಗಳಾದ ಮೋವಾಬ್ಯರ ಪಕ್ಷವಹಿಸುವುದರಿಂದ ಅವನನ್ನು ತಡೆಯಲಿಲ್ಲ. ಆ ಅದ್ಭುತಕಾರ್ಯದ ಹೊರತೂ, ಬಿಳಾಮನು ಮುಂದುವರಿದು, ಯೆಹೋವ ದೇವರು ಮತ್ತು ಆತನ ಜನರ ವಿರುದ್ಧ ಒಂದು ನಿಲುವನ್ನು ತೆಗೆದುಕೊಂಡನು. (ಅರಣ್ಯಕಾಂಡ 22:1-35; 2 ಪೇತ್ರ 2:15, 16) ಆದಾಗಲೂ ಬಿಳಾಮನ ನಂಬಿಕೆಯ ಕೊರತೆಯು, ಇಸ್ಕಾರಿಯೋತ ಯೂದನ ನಂಬಿಕೆಯ ಕೊರತೆಗೆ ಹೋಲಿಸುವಾಗ ನಿಕೃಷ್ಟವಾಗಿದೆ. ಯೇಸುವಿನ ಒಬ್ಬ ನಿಕಟ ಸಂಗಾತಿಯಾಗಿದ್ದು, ಅಸಾಧಾರಣವಾದ ಅನೇಕ ಅದ್ಭುತಕಾರ್ಯಗಳನ್ನು ಪ್ರತ್ಯಕ್ಷವಾಗಿ ನೋಡಿದ್ದ ಹೊರತೂ, ಮೂವತ್ತು ಬೆಳ್ಳಿ ನಾಣ್ಯಗಳಿಗೋಸ್ಕರ ಯೂದನು ಕ್ರಿಸ್ತನಿಗೆ ದ್ರೋಹಬಗೆದನು.—ಮತ್ತಾಯ 26:14-16, 47-50; 27:3-5.
ಯೆಹೂದಿ ಧಾರ್ಮಿಕ ಮುಖಂಡರು ಕೂಡ ಯೇಸುವಿನ ಅನೇಕ ಅದ್ಭುತಕಾರ್ಯಗಳ ಅರಿವುಳ್ಳವರಾಗಿದ್ದರು. ಅವನು ಲಾಜರನನ್ನು ಪುನರುತ್ಥಾನಗೊಳಿಸಿದ ನಂತರ, ಅವರು ಹೀಗೂ ಒಪ್ಪಿಕೊಂಡರು: “ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ.” ಆದರೆ ಈಗ ಪುನರ್ಜೀವಿತನಾದ ಲಾಜರನನ್ನು ನೋಡುವುದು, ಅವರ ಹೃದಯಗಳನ್ನು ಮೃದುಗೊಳಿಸಿ ಅವರಿಗೆ ನಂಬಿಕೆಯನ್ನು ಕೊಟ್ಟಿತೊ? ನಿಶ್ಚಯವಾಗಿಯೂ ಇಲ್ಲ. ಬದಲಿಗೆ, ಅವರು ಯೇಸು ಮತ್ತು ಲಾಜರನನ್ನು, ಇಬ್ಬರನ್ನೂ ಕೊಲ್ಲಲು ಸಂಚುಹೂಡಿದರು!—ಯೋಹಾನ 11:47-53; 12:10.
ದೇವರಿಂದ ನೇರವಾದ ಹಸ್ತಕ್ಷೇಪವೂ, ಆ ದುಷ್ಟ ಮನುಷ್ಯರಲ್ಲಿ ನಂಬಿಕೆಯನ್ನು ಉಂಟುಮಾಡಲು ತಪ್ಪಿಹೋಯಿತು. ಒಂದು ಸಂದರ್ಭದಲ್ಲಿ ಯೇಸು ದೇವಾಲಯದ ಪ್ರಾಕಾರಗಳಲ್ಲಿದ್ದಾಗ, ಅವನು ಗಟ್ಟಿಯಾಗಿ ಪ್ರಾರ್ಥಿಸಿದ್ದು: “ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ.” ಯೆಹೋವನು ಸ್ವರ್ಗದಿಂದ ಒಂದು ವಾಣಿಯಲ್ಲಿ ಉತ್ತರಿಸಿದ್ದು: “ಮಹಿಮೆಪಡಿಸಿದ್ದೇನೆ, ತಿರಿಗಿ ಮಹಿಮೆಪಡಿಸುವೆನು.” ಆದರೂ ಈ ಅದ್ಭುತಕರ ಘಟನೆಯು, ಉಪಸ್ಥಿತರಿದ್ದವರ ಹೃದಯಗಳಲ್ಲಿ ನಂಬಿಕೆಯನ್ನು ಉಂಟುಮಾಡಲಿಲ್ಲ. ಬೈಬಲ್ ಹೇಳುವುದು: “ಆತನು ಅವರ ಮುಂದೆ ಅಷ್ಟು ಸೂಚಕಕಾರ್ಯಗಳನ್ನು ಮಾಡಿದರೂ ಅವರು ಆತನನ್ನು ನಂಬಲಿಲ್ಲ.”—ಯೋಹಾನ 12:28-30, 37; ಹೋಲಿಸಿರಿ ಎಫೆಸ 3:17.
ಅದ್ಭುತಕಾರ್ಯಗಳು ನಂಬಿಕೆಯನ್ನು ಕಟ್ಟದಿದ್ದ ಕಾರಣ
ಅಷ್ಟೊಂದು ಅದ್ಭುತಕಾರ್ಯಗಳ ಹೊರತೂ ಅಂತಹ ನಂಬಿಕೆಯ ಕೊರತೆಯು ಹೇಗೆ ಇರಸಾಧ್ಯವಿದೆ? ಯೇಸು ತನ್ನ ಶುಶ್ರೂಷೆಯನ್ನು ಆರಂಭಿಸಿದ ಸಮಯದಲ್ಲೇ, ಒಟ್ಟಿನಲ್ಲಿ ಯೆಹೂದ್ಯರು “ಕ್ರಿಸ್ತನನ್ನು” ಅಥವಾ ಮೆಸ್ಸೀಯನನ್ನು “ಎದುರುನೋಡು”ತ್ತಿದ್ದರೆಂಬುದನ್ನು ನೀವು ಪರಿಗಣಿಸುವಾಗ, ಯೆಹೂದಿ ಧಾರ್ಮಿಕ ಮುಖಂಡರು ಯೇಸುವನ್ನು ತಿರಸ್ಕರಿಸಿದ್ದು, ವಿಶೇಷವಾಗಿ ತಬ್ಬಿಬ್ಬುಗೊಳಿಸುವಂಥದ್ದಾಗಿ ತೋರುತ್ತದೆ. (ಲೂಕ 3:15) ಆದರೆ ಆ ನಿರೀಕ್ಷಣೆಗಳು ಏನಾಗಿದ್ದವೋ ಅವುಗಳಲ್ಲಿಯೇ ಸಮಸ್ಯೆಯಿತ್ತು. ಯೆಹೂದ್ಯರು, ತಮಗೆ “ಲೌಕಿಕ ವಿಜಯ” ಮತ್ತು “ಪ್ರಾಪಂಚಿಕ ಸಮೃದ್ಧಿಯನ್ನು” ಕೊಡುವ ಒಬ್ಬ ಮೆಸ್ಸೀಯನ ಕಲ್ಪನೆಯಿಂದ ಗೀಳುಹಿಡಿದವರಾಗಿದ್ದರೆಂದು ಹೇಳುವ ಒಬ್ಬ ಪ್ರಸಿದ್ಧ ಬೈಬಲ್ ವಿದ್ವಾಂಸನನ್ನು, ನಿಘಂಟುಕಾರರಾದ ಡಬ್ಲ್ಯೂ. ಈ. ವೈನ್ ಉದ್ಧರಿಸುತ್ತಾರೆ. ಹೀಗಿರುವುದರಿಂದಲೇ, ಸಾ.ಶ. 29ರಲ್ಲಿ ಅವರ ನಡುವೆ ನಿಜ ಮೆಸ್ಸೀಯನೋಪಾದಿ ಪ್ರತ್ಯಕ್ಷನಾದ, ನಮ್ರನೂ, ಅರಾಜಕೀಯನೂ ಆಗಿದ್ದ ನಜರೇತಿನ ಯೇಸುವಿಗಾಗಿ ಅವರು ಸಿದ್ಧರಿರಲಿಲ್ಲ. ಯೇಸುವಿನ ಬೋಧನೆಗಳು ಆಗ ಅಸ್ತಿತ್ವದಲ್ಲಿದ್ದ ಪರಿಸ್ಥಿತಿಯನ್ನು ತಲೆಕೆಳಗೆ ಮಾಡಿ, ತಮ್ಮ ಪ್ರಮುಖ ಸ್ಥಾನಮಾನಗಳನ್ನು ಗಂಡಾಂತರಕ್ಕೊಳಪಡಿಸುವವೆಂದು ಸಹ ಧಾರ್ಮಿಕ ಮುಖಂಡರು ಭಯಪಟ್ಟರು. (ಯೋಹಾನ 11:48) ಅವರ ಪೂರ್ವಕಲ್ಪಿತ ವಿಚಾರಗಳು ಮತ್ತು ಸ್ವಾರ್ಥತೆಯು, ಯೇಸುವಿನ ಅದ್ಭುತಕಾರ್ಯಗಳ ಅರ್ಥಕ್ಕೆ ಅವರನ್ನು ಕುರುಡರನ್ನಾಗಿ ಮಾಡಿತು.
ತದನಂತರ, ಯೆಹೂದಿ ಧಾರ್ಮಿಕ ಮುಖಂಡರು ಮತ್ತು ಇತರರು, ಯೇಸುವಿನ ಹಿಂಬಾಲಕರು ದೈವಿಕ ಅನುಗ್ರಹವನ್ನು ಅನುಭವಿಸುತ್ತಿದ್ದರೆಂಬ ಅದ್ಭುತಕರವಾದ ರುಜುವಾತನ್ನು ತಿರಸ್ಕರಿಸಿದರು. ಉದಾಹರಣೆಗಾಗಿ, ಅವನ ಅಪೊಸ್ತಲರು, ಹುಟ್ಟು ಕುಂಟನಾಗಿದ್ದ ಒಬ್ಬ ಮನುಷ್ಯನನ್ನು ಗುಣಪಡಿಸಿದಾಗ, ಯೆಹೂದಿ ಉಚ್ಚ ನ್ಯಾಯಾಲಯದ ಕುಪಿತ ಸದಸ್ಯರು ಕೇಳಿದ್ದು: “ಈ ಮನುಷ್ಯರಿಗೆ ನಾವೇನು ಮಾಡೋಣ? ಪ್ರಸಿದ್ಧವಾದ ಒಂದು ಸೂಚಕಕಾರ್ಯವು ಇವರ ಮೂಲಕವಾಗಿ ನಡೆಯಿತೆಂಬದು ಯೆರೂಸಲೇಮಿನಲ್ಲಿ ವಾಸಮಾಡುವವರೆಲ್ಲರಿಗೂ ಗೊತ್ತಾಗಿದೆಯಷ್ಟೆ; ಅದು ಆಗಲಿಲ್ಲವೆನ್ನುವದಕ್ಕಾಗದು. ಆದರೆ ಇದು ಜನರಲ್ಲಿ ಇನ್ನೂ ಹಬ್ಬದಂತೆ ಮುಂದೆ ಆ ಹೆಸರನ್ನು ಎತ್ತಿ ಯಾರ ಸಂಗಡಲೂ ಮಾತಾಡಬಾರದೆಂದು ಅವರನ್ನು ಬೆದರಿಸೋಣ.” (ಅ. ಕೃತ್ಯಗಳು 3:1-8; 4:13-17) ಸ್ಪಷ್ಟವಾಗಿಯೇ, ಈ ಆಶ್ಚರ್ಯಕರವಾದ ಅದ್ಭುತಕಾರ್ಯವು, ಆ ಮನುಷ್ಯರ ಹೃದಯಗಳಲ್ಲಿ ನಂಬಿಕೆಯನ್ನು ಕಟ್ಟಲಿಲ್ಲ ಅಥವಾ ಉಂಟುಮಾಡಿರಲಿಲ್ಲ.
ಮಹತ್ತ್ವಾಕಾಂಕ್ಷೆ, ಗರ್ವ, ಮತ್ತು ಲೋಭಗಳು, ಅನೇಕರು ತಮ್ಮ ಹೃದಯಗಳ ದ್ವಾರಗಳನ್ನು ಮುಚ್ಚಿಸುವಂತೆ ಪ್ರಚೋದಿಸಿರುವ ಅಂಶಗಳಾಗಿವೆ. ಆರಂಭದಲ್ಲಿ ಉಲ್ಲೇಖಿಸಲ್ಪಟ್ಟಿರುವ, ಕೋರಹ, ದಾತಾನ್ ಮತ್ತು ಅಬೀರಾಮರ ವಿಷಯದಲ್ಲಿ ಇದು ನಿಜವಾಗಿತ್ತೆಂದು ತೋರುತ್ತದೆ. ಈರ್ಷ್ಯೆ, ಭಯ ಮತ್ತು ಇನ್ನಿತರ ಹಲವಾರು ಹಾನಿಕಾರಕ ಮನೋಭಾವಗಳು ಇತರರನ್ನು ತಡೆಗಟ್ಟಿವೆ. ಒಂದು ಕಾಲದಲ್ಲಿ ದೇವರ ಮುಖವನ್ನೇ ನೋಡುವ ಸುಯೋಗವಿದ್ದಂತಹ ಅವಿಧೇಯ ದೇವದೂತರಾದ ದೆವ್ವಗಳ ಕುರಿತಾಗಿಯೂ ನಮಗೆ ಜ್ಞಾಪಕ ಹುಟ್ಟಿಸಲಾಗುತ್ತದೆ. (ಮತ್ತಾಯ 18:10) ಅವರು ದೇವರ ಅಸ್ತಿತ್ವದ ಕುರಿತು ಸಂದೇಹಪಡುವುದಿಲ್ಲ. ನಿಶ್ಚಯವಾಗಿ, “ದೆವ್ವಗಳು ಕೂಡ . . . ನಂಬಿ ಹೆದರಿ ನಡುಗುತ್ತವೆ.” (ಯಾಕೋಬ 2:19) ಆದರೂ ಅವುಗಳಿಗೆ ದೇವರಲ್ಲಿ ನಂಬಿಕೆಯಿಲ್ಲ.
ನಿಜ ನಂಬಿಕೆಯ ಅರ್ಥ
ನಂಬಿಕೆಯು ಬರಿಯ ವಿಶ್ವಾಸಕ್ಕಿಂತ ಹೆಚ್ಚಿನದ್ದು. ಅದು ಯಾವುದೊ ಅದ್ಭುತಕಾರ್ಯಕ್ಕೆ ತೋರಿಸುವ ಒಂದು ಕ್ಷಣಿಕ ಭಾವನಾತ್ಮಕ ಪ್ರತಿಕ್ರಿಯೆಗಿಂತಲೂ ಹೆಚ್ಚಾಗಿರುತ್ತದೆ. ಇಬ್ರಿಯ 11:1 ಹೇಳುವುದು: “ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ.” ನಂಬಿಕೆಯಿರುವ ಒಬ್ಬ ವ್ಯಕ್ತಿಯು, ಯೆಹೋವ ದೇವರು ವಾಗ್ದಾನಿಸುವ ಎಲ್ಲಾ ಸಂಗತಿಗಳು ನೆರವೇರಿದಂತೆಯೇ ಎಂದು ತನ್ನ ಹೃದಯದಲ್ಲಿ ಮನಗಂಡಿರುತ್ತಾನೆ. ಇನ್ನೂ ಹೆಚ್ಚಾಗಿ, ಈ ಕಾಣಲಾರದ ನೈಜತೆಗಳ ನಿರಾಕರಿಸಲಾಗದ ರುಜುವಾತು ಎಷ್ಟು ಶಕ್ತಿಶಾಲಿಯಾಗಿದೆಯೆಂದರೆ, ನಂಬಿಕೆಯು ತಾನೇ ಆ ಪ್ರಮಾಣಕ್ಕೆ ಸಮಾನವಾದದ್ದಾಗಿದೆಯೆಂದು ಹೇಳಲಾಗಿದೆ. ಹೌದು, ನಂಬಿಕೆಯು ಪ್ರಮಾಣದ ಮೇಲೆ ಆಧಾರಿತವಾಗಿರುತ್ತದೆ. ಮತ್ತು ಗತ ಸಮಯಗಳಲ್ಲಿ ಅದ್ಭುತಕಾರ್ಯಗಳು, ನಂಬಿಕೆಯ ವಿಕಸನದಲ್ಲಿ ಅಥವಾ ಅದನ್ನು ಕಟ್ಟುವುದರಲ್ಲಿ ಒಂದು ಪಾತ್ರವನ್ನು ವಹಿಸಿದವು. ಯೇಸುವಿನಿಂದ ಮಾಡಲ್ಪಟ್ಟ ಸೂಚಕಕಾರ್ಯಗಳು, ಅವನು ವಾಗ್ದತ್ತ ಮೆಸ್ಸೀಯನಾಗಿದ್ದನೆಂಬುದನ್ನು ಇತರರಿಗೆ ಮನಗಾಣಿಸುವ ಉದ್ದೇಶವನ್ನು ಪೂರೈಸಿದವು. (ಮತ್ತಾಯ 8:16, 17; ಇಬ್ರಿಯ 2:2-4) ತದ್ರೀತಿಯಲ್ಲಿ, ಅದ್ಭುತಕರವಾದ ಗುಣಪಡಿಸುವಿಕೆ ಮತ್ತು ನಾನಾ ಭಾಷೆಗಳನ್ನು ಮಾತಾಡುವುದರಂತಹ, ದೇವರ ಪವಿತ್ರಾತ್ಮ ಇಲ್ಲವೇ ಕಾರ್ಯಕಾರಿ ಶಕ್ತಿಯ ಅಂತಹ ದಾನಗಳು ರುಜುಪಡಿಸಿದವೇನೆಂದರೆ, ಇನ್ನು ಮುಂದೆ ಯೆಹೂದ್ಯರ ಮೇಲೆ ಯೆಹೋವನ ಅನುಗ್ರಹವು ಇರಲಿಲ್ಲ, ಬದಲಾಗಿ ಆತನ ಸಮ್ಮತಿಯು ಈಗ ಆತನ ಪುತ್ರನಾದ ಯೇಸು ಕ್ರಿಸ್ತನ ಮೂಲಕ ಸ್ಥಾಪಿಸಲ್ಪಟ್ಟ ಕ್ರೈಸ್ತ ಸಭೆಯ ಮೇಲೆ ನೆಲೆಸಿತ್ತು.—1 ಕೊರಿಂಥ 12:7-11.
ಆತ್ಮದ ಅದ್ಭುತಕರ ದಾನಗಳಲ್ಲಿ, ಪ್ರವಾದಿಸುವ ಸಾಮರ್ಥ್ಯವು ಒಂದಾಗಿತ್ತು. ಅವಿಶ್ವಾಸಿಗಳು ಈ ಅದ್ಭುತಕಾರ್ಯವನ್ನು ಗಮನಿಸಿದಾಗ, ದೇವರನ್ನು ಆರಾಧಿಸುವಂತೆ ಕೆಲವರು ಪ್ರಚೋದಿಸಲ್ಪಟ್ಟರು. ಅವರು ಹೀಗೆ ಘೋಷಿಸಿದರು: “ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ.” (1 ಕೊರಿಂಥ 14:22-25) ಆದಾಗಲೂ, ಅದ್ಭುತಕಾರ್ಯಗಳು ಕ್ರೈಸ್ತ ಆರಾಧನೆಯ ಒಂದು ಶಾಶ್ವತ ವೈಶಿಷ್ಟ್ಯವಾಗಿರಬೇಕೆಂದು ಯೆಹೋವ ದೇವರು ಉದ್ದೇಶಿಸಲಿಲ್ಲ. ಅದಕ್ಕನುಸಾರವಾಗಿ, ಅಪೊಸ್ತಲ ಪೌಲನು ಬರೆದುದು: “ಪ್ರವಾದನೆಗಳಾದರೋ ಇಲ್ಲದಂತಾಗುವವು; ವಾಣಿಗಳೋ ನಿಂತುಹೋಗುವವು.” (1 ಕೊರಿಂಥ 13:8) ಈ ದಾನಗಳು, ಅಪೊಸ್ತಲರು ಹಾಗೂ ಅವರ ಮೂಲಕ ಅಂತಹ ದಾನಗಳನ್ನು ಪಡೆದವರು ಮೃತಪಟ್ಟಾಗ ನಿಂತುಹೋದವೆಂದು ವ್ಯಕ್ತವಾಗುತ್ತದೆ.
ಹಾಗಾದರೆ ಜನರು ನಂಬಿಕೆಗಾಗಿ ಒಂದು ಆಧಾರವಿಲ್ಲದೆ ಬಿಡಲ್ಪಡುವರೊ? ಇಲ್ಲ, ಯಾಕಂದರೆ ಪೌಲನು ಹೇಳಿದ್ದು: “ಆತನು [ದೇವರು] ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ ಉಪಕಾರಮಾಡುತ್ತಾ ಬಂದವನು ಆತನೇ.” (ಅ. ಕೃತ್ಯಗಳು 14:17) ನಿಜವಾಗಿಯೂ, ನಮ್ಮನ್ನು ಸುತ್ತುವರಿದಿರುವ ಪುರಾವೆಗೆ ತಮ್ಮ ಹೃದಮನಸ್ಸುಗಳನ್ನು ತೆರೆಯಲು ಸಿದ್ಧರಾಗಿರುವ ಪ್ರಾಮಾಣಿಕ ಹೃದಯದವರಿಗೆ, ಯೆಹೋವ ದೇವರ “ಕಣ್ಣಿಗೆ ಕಾಣದಿರುವ . . . ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ; ಹೀಗಿರುವದರಿಂದ ಅವರು [ದೇವರನ್ನು ಅಲ್ಲಗಳೆಯುವವರು] ಉತ್ತರವಿಲ್ಲದವರಾಗಿದ್ದಾರೆ.”—ರೋಮಾಪುರ 1:20.
ದೇವರ ಅಸ್ತಿತ್ವದಲ್ಲಿ ವಿಶ್ವಾಸವನ್ನಿಡುವುದಕ್ಕಿಂತ ಹೆಚ್ಚಿನದ್ದು ಅಗತ್ಯ. ಪೌಲನು ಪ್ರೇರಿಸಿದ್ದು: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” (ರೋಮಾಪುರ 12:2) ಈ ಪತ್ರಿಕೆಯಂತಹ ಕ್ರೈಸ್ತ ಪ್ರಕಾಶನಗಳ ಸಹಾಯದಿಂದ, ಶಾಸ್ತ್ರಗಳನ್ನು ಶ್ರದ್ಧೆಯಿಂದ ಅಭ್ಯಾಸಮಾಡುವ ಮೂಲಕ ಇದನ್ನು ಮಾಡಸಾಧ್ಯವಿದೆ. ದೇವರ ವಾಕ್ಯವಾದ ಬೈಬಲಿನ ನಿಷ್ಕೃಷ್ಟ ಜ್ಞಾನದ ಮೇಲೆ ಆಧಾರಿತವಾದ ನಂಬಿಕೆಯು, ದುರ್ಬಲವಲ್ಲ ಅಥವಾ ಮೇಲುಮೇಲಿನದ್ದಾಗಿರುವುದಿಲ್ಲ. ದೇವರ ಚಿತ್ತವನ್ನು ವಿವೇಚಿಸಿರುವವರು ಮತ್ತು ಅದನ್ನು ನಂಬಿಕೆಯಿಂದ ಮಾಡುತ್ತಿರುವವರು, ದೇವರಿಗೆ ಪವಿತ್ರವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.—ರೋಮಾಪುರ 12:1.
ಕಣ್ಣಾರೆ ನೋಡದಿದ್ದರೂ ನಂಬುವುದು
ಸತ್ತವರೊಳಗಿಂದ ಆದ ಯೇಸುವಿನ ಪುನರುತ್ಥಾನದಲ್ಲಿ ನಂಬಿಕೆಯನ್ನಿಡುವುದು ಅಪೊಸ್ತಲ ತೋಮನಿಗೆ ಕಷ್ಟವಾಗಿತ್ತು. “ನಾನು ಆತನ ಕೈಗಳಲ್ಲಿ ಮೊಳೆಗಳಿಂದಾದ ಘಾಯವನ್ನು ನೋಡಿ ಆ ಮೊಳೆಯ ಘಾಯದಲ್ಲಿ ನನ್ನ ಬೆರಳನ್ನು ಇಟ್ಟು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಹಾಕಿದರೆ ಹೊರತು ನಿಮ್ಮ ಮಾತನ್ನು ನಂಬುವದೇ ಇಲ್ಲ” ಎಂದು ತೋಮನು ಘೋಷಿಸಿದನು. ತದನಂತರ ಯೇಸು, ಅವನು ಶೂಲಕ್ಕೇರಿಸಲ್ಪಟ್ಟಾಗ ಆದ ಗಾಯಗಳನ್ನು ತೋರಿಸಿದ ಒಂದು ದೇಹರೂಪವನ್ನು ತಾಳಿದಾಗ, ತೋಮನು ಈ ಅದ್ಭುತಕಾರ್ಯಕ್ಕೆ ಪ್ರಸನ್ನಕರವಾಗಿ ಪ್ರತಿಕ್ರಿಯಿಸಿದನು. ಆದಾಗಲೂ, ಯೇಸು ಹೇಳಿದ್ದು: “ನೋಡದೆ ನಂಬಿದವರು ಧನ್ಯರು.”—ಯೋಹಾನ 20:25-29.
ಇಂದು, ಲಕ್ಷಾಂತರ ಯೆಹೋವನ ಸಾಕ್ಷಿಗಳು ‘ನೋಡುವವರಾಗಿ ನಡೆಯದೆ ನಂಬುವವರಾಗಿಯೇ ನಡೆಯು’ತ್ತಿದ್ದಾರೆ. (2 ಕೊರಿಂಥ 5:7) ಬೈಬಲಿನಲ್ಲಿ ದಾಖಲಾಗಿರುವ ಅದ್ಭುತಕಾರ್ಯಗಳನ್ನು ಅವರು ನೋಡಿರದಿದ್ದರೂ, ಇವು ಸಂಭವಿಸಿದವೆಂದು ಅವರು ದೃಢವಾಗಿ ನಂಬುತ್ತಾರೆ. ಈ ಸಾಕ್ಷಿಗಳು ದೇವರಲ್ಲಿ ಮತ್ತು ಆತನ ವಾಕ್ಯದಲ್ಲಿ ನಂಬಿಕೆಯನ್ನಿಡುತ್ತಾರೆ. ಆತನ ಆತ್ಮದ ಸಹಾಯದಿಂದ, ಅವರು ಬೈಬಲಿನ ಬೋಧನೆಗಳು ಮತ್ತು ಅದರ ಪ್ರಧಾನವಾದ ಶೀರ್ಷಿಕೆ—ಯೆಹೋವ ದೇವರ ಸ್ವರ್ಗೀಯ ರಾಜ್ಯದ ಮೂಲಕ ಆತನ ಪರಮಾಧಿಕಾರದ ನಿರ್ದೋಷೀಕರಣ—ಯನ್ನು ಅರ್ಥಮಾಡಿಕೊಳ್ಳಲು ಶಕ್ತರಾಗಿದ್ದಾರೆ. (ಮತ್ತಾಯ 6:9, 10; 2 ತಿಮೊಥೆಯ 3:16, 17) ಸ್ವತಃ ತಮಗೆ ಮಹತ್ತಾದ ಪ್ರಯೋಜನವನ್ನು ತಂದುಕೊಳ್ಳುತ್ತಾ, ಈ ನಿಜ ಕ್ರೈಸ್ತರು ಬೈಬಲಿನ ವಿವೇಕಯುತವಾದ ಸಲಹೆಯನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುತ್ತಾರೆ. (ಕೀರ್ತನೆ 119:105; ಯೆಶಾಯ 48:17, 18) ಬೈಬಲ್ ಪ್ರವಾದನೆಗಳು ನಮ್ಮ ಸಮಯವನ್ನು ‘ಕಡೇ ದಿವಸಗಳು’ ಆಗಿ ಗುರುತಿಸುತ್ತವೆ ಎಂಬ ನಿರಾಕರಿಸಲಸಾಧ್ಯವಾದ ರುಜುವಾತನ್ನು ಅವರು ಸ್ವೀಕರಿಸುತ್ತಾರೆ ಮತ್ತು ದೇವರ ವಾಗ್ದತ್ತ ಹೊಸ ಲೋಕವು ಹತ್ತಿರದಲ್ಲೇ ಇದೆಯೆಂದು ಅವರಿಗೆ ನಂಬಿಕೆಯಿದೆ. (2 ತಿಮೊಥೆಯ 3:1-5; ಮತ್ತಾಯ 24:3-14; 2 ಪೇತ್ರ 3:13) ದೇವರ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಅವರಿಗೆ ಒಂದು ಆನಂದವಾಗಿದೆ. (ಜ್ಞಾನೋಕ್ತಿ 2:1-5) ಶಾಸ್ತ್ರಗಳ ಒಂದು ಅಧ್ಯಯನದ ಮೂಲಕ ಮಾತ್ರವೇ ದೇವರನ್ನು ಹುಡುಕುವವರು ಆತನನ್ನು ನಿಜವಾಗಿ ಕಂಡುಕೊಳ್ಳಸಾಧ್ಯವಿದೆಯೆಂದು ಅವರಿಗೆ ತಿಳಿದಿದೆ.—ಅ. ಕೃತ್ಯಗಳು 17:26, 27.
ಹಿಂದಿನ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟಿದ್ದ ಆಲ್ಬರ್ಟ್ನನ್ನು ನೀವು ಜ್ಞಾಪಿಸಿಕೊಳ್ಳಬಲ್ಲಿರೊ? ಒಂದು ಅದ್ಭುತಕಾರ್ಯಕ್ಕಾಗಿ ಅವನು ಮಾಡಿದ ಪ್ರಾರ್ಥನೆಯು ಉತ್ತರಿಸಲ್ಪಡದೇಹೋದ ಕೆಲವೇ ದಿನಗಳ ನಂತರ, ಅವನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಿಂದ ಸಂದರ್ಶಿಸಲ್ಪಟ್ಟನು. ಅವನೊಂದಿಗೆ ಕೆಲವು ಬೈಬಲ್ ಆಧಾರಿತ ಸಾಹಿತ್ಯಗಳನ್ನು ಬಿಟ್ಟುಹೋದ ಒಬ್ಬ ವೃದ್ಧ ಸ್ತ್ರೀ ಅವಳಾಗಿದ್ದಳು. ತದನಂತರ ಆಲ್ಬರ್ಟ್ ಒಂದು ಉಚಿತ ಮನೆ ಬೈಬಲ್ ಅಭ್ಯಾಸವನ್ನು ಸ್ವೀಕರಿಸಿದನು. ಅವನು ಬೈಬಲಿನ ಸಂದೇಶದೊಂದಿಗೆ ಹೆಚ್ಚು ಉತ್ತಮವಾಗಿ ಪರಿಚಿತನಾದಂತೆ, ಅವನ ಆಶಾಭಂಗವು ಸಂಭ್ರಮವಾಗಿ ಬದಲಾಯಿತು. ಕೊನೆಗೂ ತಾನು ದೇವರನ್ನು ಕಂಡುಕೊಂಡಿದ್ದೇನೆಂಬುದನ್ನು ಅವನು ಗ್ರಹಿಸಲಾರಂಭಿಸಿದನು.
ಶಾಸ್ತ್ರಗಳು ಉತ್ತೇಜಿಸುವುದು: “ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ.” (ಯೆಶಾಯ 55:6) ನೀವು ಇದನ್ನು ಮಾಡಸಾಧ್ಯವಿದೆ. ದೇವರಿಂದ ಮಾಡಲ್ಪಡುವ ಒಂದು ಆಧುನಿಕ ದಿನದ ಅದ್ಭುತಕಾರ್ಯಕ್ಕಾಗಿ ಕಾಯುವ ಮೂಲಕವಲ್ಲ, ಬದಲಾಗಿ ಆತನ ವಾಕ್ಯದ ನಿಷ್ಕೃಷ್ಟ ಜ್ಞಾನವನ್ನು ಗಳಿಸುವ ಮೂಲಕವೇ. ಇದು ಒಂದು ಆವಶ್ಯಕತೆಯಾಗಿದೆ, ಯಾಕಂದರೆ ಅದ್ಭುತಕಾರ್ಯಗಳು ಮಾತ್ರ ನಂಬಿಕೆಯನ್ನು ಕಟ್ಟುವುದಿಲ್ಲ.
[ಪುಟ 5 ರಲ್ಲಿರುವ ಚಿತ್ರ]
ಲಾಜರನ ಅದ್ಭುತಕರ ಪುನರುತ್ಥಾನವು ಸಹ, ನಂಬಿಕೆಯನ್ನಿಡುವಂತೆ ಯೇಸುವಿನ ಶತ್ರುಗಳನ್ನು ಪ್ರಚೋದಿಸಲಿಲ್ಲ
[ಪುಟ 7 ರಲ್ಲಿರುವ ಚಿತ್ರ]
ನಂಬಿಕೆಯು ಬೈಬಲಿನ ನಿಷ್ಕೃಷ್ಟ ಜ್ಞಾನದ ಮೇಲೆ ಆಧಾರಿತವಾಗಿರಬೇಕು