ಬೈಬಲು ನಮಗೆ ಲಭ್ಯವಾದ ವಿಧ—ಭಾಗ ಒಂದು*
* ಭಾಗಗಳು 2 ಮತ್ತು 3, ಅನುಕ್ರಮವಾಗಿ ಸೆಪ್ಟೆಂಬರ್ 15 ಮತ್ತು ಅಕ್ಟೋಬರ್ 15ರ ಸಂಚಿಕೆಗಳಲ್ಲಿ ತೋರಿಬರುವುವು.
ಒಂದು ಚಿಕ್ಕ ಕಾರ್ಯಾಗಾರದಲ್ಲಿ, ಒಬ್ಬ ಮುದ್ರಣಕಾರನು ಮತ್ತು ಅವನ ಯುವ ಅಭ್ಯಾಸಿಗಳು, ಅಚ್ಚಿನ ಮೊಳೆಗಳ ಮೇಲೆ ಖಾಲಿ ಕಾಗದದ ಹಾಳೆಗಳನ್ನು ಜಾಗರೂಕತೆಯಿಂದ ಇಡುತ್ತ, ತಾಳಬದ್ಧವಾಗಿ ತಮ್ಮ ಮರದ ಚೌಕಟ್ಟಿನ ಮುದ್ರಣಯಂತ್ರವನ್ನು ನಡೆಸುತ್ತಾರೆ. ಕಾಗದಗಳನ್ನು ಹಿಂದಕ್ಕೆ ತೆಗೆದು ಮುದ್ರಿತ ಅಕ್ಷರಗಳನ್ನು ಅವರು ಪರೀಕ್ಷಿಸುತ್ತಾರೆ. ಗೋಡೆಯಿಂದ ಗೋಡೆಗೆ ಕಟ್ಟಿರುವ ದಾರಗಳ ಮೇಲೆ ಅವರು ಮಡಚಿದ ಕಾಗದಗಳನ್ನು ಒಣಗಲು ಹಾಕುತ್ತಾರೆ.
ಒಡನೆ, ಜೋರಾಗಿ ಬಾಗಿಲು ಬಡಿಯುವ ಸದ್ದಾಗುತ್ತದೆ. ಗಾಬರಿಗೊಂಡು, ಮುದ್ರಣಕಾರನು ಬಾಗಿಲಿನ ಚಿಲಕ ತೆಗೆಯಲಾಗಿ, ಸಶಸ್ತ್ರ ಸೈನಿಕರ ಒಂದು ತಂಡ ಒಳನುಗ್ಗುತ್ತದೆ. ಅವರು ಶಾಸನಬದ್ಧವಲ್ಲದ ಸಾಹಿತ್ಯಗಳಲ್ಲಿ ಅತಿಯಾಗಿ ಖಂಡಿಸಲ್ಪಟ್ಟ ಸಾಹಿತ್ಯ—ಸಾಮಾನ್ಯ ಜನರ ಭಾಷೆಯಲ್ಲಿನ ಬೈಬಲ್—ಕ್ಕಾಗಿ ಹುಡುಕಲಾರಂಭಿಸುತ್ತಾರೆ!
ಅವರು ತೀರ ತಡವಾಗಿ ಬಂದಿದ್ದಾರೆ. ಅಪಾಯದ ಎಚ್ಚರಿಕೆ ಕೊಡಲ್ಪಟ್ಟವರಾಗಿದ್ದ ಭಾಷಾಂತರಕಾರನೂ ಸಹಾಯಕನೂ ಆಗಲೇ ಕಾರ್ಯಾಗಾರಕ್ಕೆ ಓಡಿ, ತೋಳುತುಂಬ ಪುಟಗಳನ್ನು ಎತ್ತಿಕೊಂಡು, ರೈನ್ ನದಿಯ ಮಾರ್ಗವಾಗಿ ಈಗ ಪಲಾಯನ ಮಾಡುತ್ತಿದ್ದಾರೆ. ಕಡಮೆ ಪಕ್ಷ ಅವರು ತಮ್ಮ ಕೆಲಸದ ಸ್ವಲ್ಪ ಭಾಗವನ್ನಾದರೂ ಉಳಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ವಿಲ್ಯಮ್ ಟಿಂಡೇಲ್ ಭಾಷಾಂತರಕಾರನಾಗಿದ್ದನು. ಅವನು 1525ರಲ್ಲಿ ಜರ್ಮನಿಯ ಕಲೋನ್ನಲ್ಲಿ ನಿಷೇಧಿಸಲ್ಪಟ್ಟಿದ್ದ ಇಂಗ್ಲಿಷ್ “ಹೊಸ ಒಡಂಬಡಿಕೆ”ಯನ್ನು ತಯಾರಿಸಲು ಪ್ರಯತ್ನಿಸುತ್ತಿದ್ದನು. ಅವನ ಅನುಭವವು ತೀರ ಸಾಮಾನ್ಯವಾಗಿತ್ತು. ಬೈಬಲನ್ನು ಬರೆದು ಮುಗಿಸಿದ ಅನಂತರದ ಸುಮಾರು 1,900 ವರುಷಗಳಲ್ಲಿ, ದೇವರ ವಾಕ್ಯವನ್ನು ಭಾಷಾಂತರಿಸಿ, ವಿತರಣೆ ಮಾಡಲಿಕ್ಕಾಗಿ ಅನೇಕ ಮಂದಿ ಸ್ತ್ರೀಪುರುಷರು ಸರ್ವಸ್ವವನ್ನೂ ಅಪಾಯಕ್ಕೊಳಪಡಿಸಿದ್ದಾರೆ. ಇಂದು ನಾವು ಅವರ ಕೆಲಸದಿಂದ ಇನ್ನೂ ಪ್ರಯೋಜನವನ್ನು ಪಡೆಯುತ್ತಿದ್ದೇವೆ. ಅವರೇನು ಮಾಡಿದರು? ಈಗ ನಾವು ನಮ್ಮ ಕೈಗಳಲ್ಲಿ ಹಿಡಿದಿರುವ ಬೈಬಲುಗಳು ನಮಗೆ ಹೇಗೆ ಲಭ್ಯವಾದವು?
ಆದಿ ಬೈಬಲ್ ಪ್ರತಿಮಾಡುವಿಕೆ ಮತ್ತು ಭಾಷಾಂತರ
ದೇವರ ನಿಜ ಸೇವಕರು ಆತನ ವಾಕ್ಯವನ್ನು ಸದಾ ಬಹಳ ಗೌರವದಿಂದ ಕಂಡಿದ್ದಾರೆ. ನ್ಯೂ ಕ್ಯಾಥೊಲಿಕ್ ಎನ್ಸೈಕ್ಲೊಪೀಡಿಯ ಒಪ್ಪಿಕೊಳ್ಳುವುದು: “ತಮ್ಮ ಯೆಹೂದಿ ಪಿತೃಗಳಂತೆ, ಆದಿ ಕ್ರೈಸ್ತರು ಪವಿತ್ರ ಪುಸ್ತಕಗಳ ವಾಚನವನ್ನು ಅಮೂಲ್ಯವೆಂದೆಣಿಸಿದರು. ಯೇಸುವಿನ ಮಾದರಿಯನ್ನನುಸರಿಸುತ್ತ (ಮತ್ತಾ 4.4; 5.18; ಲೂಕ 24.44; ಯೋಹಾ 5. 39), ಅಪೊಸ್ತಲರು ಹ[ಳೆ] ಒ[ಡಂಬಡಿಕೆ]ಯೊಂದಿಗೆ ಚಿರಪರಿಚಿತರಾಗಿದ್ದರು. ಇದು ದೀರ್ಘವಾದ ಮತ್ತು ಜಾಗರೂಕತೆಯ ವಾಚನ ಹಾಗೂ ಅಧ್ಯಯನವನ್ನು ಸೂಚಿಸುತ್ತದೆ, ಮತ್ತು ಹಾಗೆ ಮಾಡುವಂತೆ ಅವರು ತಮ್ಮ ಶಿಷ್ಯರನ್ನೂ ಪ್ರೋತ್ಸಾಹಿಸಿದರು (ರೋಮಾ 15.4; 2 ತಿಮೊ 3.15-17).”
ಈ ಉದ್ದೇಶದಿಂದ ಬೈಬಲಿನ ಪ್ರತಿಗಳನ್ನು ಮಾಡಬೇಕಾಗಿತ್ತು. ಕ್ರೈಸ್ತಪೂರ್ವ ಸಮಯಗಳಲ್ಲಿ, ಈ ಕೆಲಸದಲ್ಲಿ ಹೆಚ್ಚಿನದ್ದು, ಯಾರು ನಕಲು ಮಾಡುವಾಗ ತಪ್ಪು ಮಾಡುವುದನ್ನು ಭಯದಿಂದ ಕಾಣುತ್ತಿದ್ದರೊ ಅಂತಹ ವಿಶೇಷ ವೃತ್ತಿಪರರಾದ ‘ಕುಶಲ ನಕಲುಗಾರ’ರಿಂದ ಮಾಡಲ್ಪಟ್ಟಿತು. (ಎಜ್ರ 7:6, 11, 12) ಪರಿಪೂರ್ಣ ಪ್ರತಿಗಳನ್ನು ಮಾಡಲು ಪ್ರಯಾಸಪಡುತ್ತಾ, ಅವರು ಅನಂತರದ ಎಲ್ಲ ಬೈಬಲ್ ನಕಲುಗಾರರಿಗೆ ಉನ್ನತ ಮಟ್ಟವನ್ನಿಟ್ಟರು.
ಆದರೂ, ಸಾ.ಶ.ಪೂ. ನಾಲ್ಕನೆಯ ಶತಮಾನದಲ್ಲಿ ಒಂದು ಪಂಥಾಹ್ವಾನವೆದ್ದಿತು. ಲೋಕದ ಜನರೆಲ್ಲರು ಗ್ರೀಕ್ ಸಂಸ್ಕೃತಿಯಲ್ಲಿ ವಿದ್ಯೆ ಪಡೆಯಬೇಕೆಂದು ಮಹಾ ಅಲೆಗ್ಸಾಂಡರನು ಇಷ್ಟಪಟ್ಟನು. ಅವನ ವಿಜಯಗಳು, ಮಧ್ಯಪೂರ್ವದಲ್ಲೆಲ್ಲ ಸಾಮಾನ್ಯ ಗ್ರೀಕ್ ಅಥವಾ ಕೈನೆಯನ್ನು ಸಂಪರ್ಕ ಭಾಷೆಯನ್ನಾಗಿ ದೃಢೀಕರಿಸಿದವು. ಇದರ ಪರಿಣಾಮವಾಗಿ, ಅನೇಕ ಮಂದಿ ಯೆಹೂದ್ಯರು ಹೀಬ್ರುವನ್ನು ಓದಲು ಕಲಿಯದವರಾಗಿ ಬೆಳೆದು, ಶಾಸ್ತ್ರಗಳನ್ನು ಓದಲು ಅಶಕ್ತರಾಗಿದ್ದರು. ಆದಕಾರಣ, ಸುಮಾರು ಸಾ.ಶ.ಪೂ. 280ರಲ್ಲಿ, ಈಜಿಪ್ಟ್ನ ಅಲೆಗ್ಸಾಂಡ್ರಿಯದಲ್ಲಿ ಹೀಬ್ರು ಪಂಡಿತರ ಒಂದು ಗುಂಪು ಹೀಬ್ರು ಬೈಬಲನ್ನು ಜನಪ್ರಿಯ ಕೈನೆಗೆ ಭಾಷಾಂತರಿಸಲಿಕ್ಕಾಗಿ ಕೂಡಿಬಂತು. ಅವರ ಭಾಷಾಂತರವು ಸೆಪ್ಟೂಅಜಿಂಟ್ ಎಂದು ಜ್ಞಾತವಾಯಿತು. ಗ್ರೀಕ್ನಲ್ಲಿ “ಎಪ್ಪತ್ತು” ಎಂಬುದನ್ನು ಸೂಚಿಸುವ ಈ ಪದವು, ಭಾಷಾಂತರದಲ್ಲಿ ಒಳಗೊಂಡಿದ್ದರು ಎಂದು ನಂಬಲಾಗುವ ಒಟ್ಟಂದಾಜು ಸಂಖ್ಯೆಯನ್ನು ಸೂಚಿಸಿತು. ಸುಮಾರು ಸಾ.ಶ.ಪೂ. 150ರಲ್ಲಿ ಇದನ್ನು ಮುಗಿಸಲಾಯಿತು.
ಯೇಸುವಿನ ಸಮಯದಲ್ಲಿ, ಪ್ಯಾಲೆಸ್ಟೈನ್ನಲ್ಲಿ ಹೀಬ್ರು ಇನ್ನೂ ಬಳಕೆಯಲ್ಲಿತ್ತು. ಆದರೂ ಅಲ್ಲಿ ಮತ್ತು ರೋಮನ್ ಜಗತ್ತಿನ ಉಳಿದ ದೂರದ ರಾಜ್ಯಗಳಲ್ಲಿ ಪ್ರಬಲವಾಗಿದ್ದದ್ದು ಕೈನೆ ಭಾಷೆಯೇ. ಆದಕಾರಣ, ಕ್ರೈಸ್ತ ಬೈಬಲ್ ಲೇಖಕರು, ಬೇರೆ ಜನಾಂಗಗಳ ಸಾಧ್ಯವಾಗುವಷ್ಟು ಹೆಚ್ಚು ಜನರನ್ನು ತಲಪಲು ಗ್ರೀಕ್ನ ಈ ಸಾಮಾನ್ಯ ರೂಪವನ್ನು ಬಳಸಿದರು. ಅಲ್ಲದೆ, ಅವರು ಸೆಪ್ಟೂಅಜಿಂಟ್ನಿಂದ ಮುಕ್ತವಾಗಿ ಉಲ್ಲೇಖಿಸಿ, ಅದರ ಅನೇಕ ಪದಸರಣಿಗಳನ್ನು ಉಪಯೋಗಿಸಿದರು.
ಆದಿ ಕ್ರೈಸ್ತರು ಹುರುಪುಳ್ಳ ಮಿಷನೆರಿಗಳಾಗಿದ್ದುದರಿಂದ, ಯೇಸು ದೀರ್ಘನಿರೀಕ್ಷಿತ ಮೆಸ್ಸೀಯನೆಂದು ರುಜುಪಡಿಸುವರೆ ಸೆಪ್ಟೂಅಜಿಂಟ್ಅನ್ನು ಉಪಯೋಗಿಸುವುದರಲ್ಲಿ ಅವರು ಬೇಗನೆ ಪ್ರವೀಣರಾದರು. ಇದು ಯೆಹೂದ್ಯರನ್ನು ಕೆರಳಿಸಿ, ಅವರು ಗ್ರೀಕ್ನಲ್ಲಿ ಕೆಲವು ಹೊಸ ಭಾಷಾಂತರಗಳನ್ನು ತಯಾರಿಸುವಂತೆ ಉತ್ತೇಜಿಸಿತು. ಇವು ತಮ್ಮ ಬೋಧನೆಗಳನ್ನು ಬೆಂಬಲಿಸಲಿಕ್ಕಾಗಿ ಕ್ರೈಸ್ತರಿಂದ ಉಪಯೋಗಿಸಲ್ಪಡುವ ಕೆಲವೊಂದು ಭಾಗಗಳನ್ನು ಪರಿಷ್ಕರಿಸುವ ಮೂಲಕ, ಅವರ ವಾದಗಳಿಂದ ಅವರನ್ನು ವಂಚಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟವು. ಉದಾಹರಣೆಗೆ, ಯೆಶಾಯ 7:14ರಲ್ಲಿ ಸೆಪ್ಟೂಅಜಿಂಟ್, “ಕನ್ನಿಕೆ” ಎಂಬ ಅರ್ಥದ ಗ್ರೀಕ್ ಪದವನ್ನು, ಪ್ರವಾದನಾರೂಪವಾಗಿ ಮೆಸ್ಸೀಯನ ತಾಯಿಯನ್ನು ಸೂಚಿಸುತ್ತ ಉಪಯೋಗಿಸಿತು. ಹೊಸ ಭಾಷಾಂತರಗಳು “ಯುವ ಸ್ತ್ರೀ” ಎಂಬ ಅರ್ಥದ ಇನ್ನೊಂದು ಗ್ರೀಕ್ ಪದವನ್ನು ಉಪಯೋಗಿಸಿದವು. ಕ್ರೈಸ್ತರಿಂದ ಸೆಪ್ಟೂಅಜಿಂಟ್ನ ಮುಂದುವರಿದ ಬಳಕೆಯು, ಕೊನೆಗೆ ಯೆಹೂದ್ಯರು ತಮ್ಮ ತಂತ್ರವನ್ನೆಲ್ಲ ಬಿಟ್ಟುಬಿಡುವಂತೆ ಪ್ರೇರಿಸಿ, ಹೀಬ್ರು ಗ್ರಂಥಪಾಠಕ್ಕೆ ಹಿಂದಿರುಗುವುದನ್ನು ಉತ್ತೇಜಿಸಿತು. ಅಂತಿಮವಾಗಿ, ಈ ಕ್ರಿಯೆಯು ಅನಂತರದ ಬೈಬಲ್ ಭಾಷಾಂತರಕ್ಕೆ ಆಶೀರ್ವಾದವಾಗಿ ಪರಿಣಮಿಸಿತು, ಏಕೆಂದರೆ ಹೀಬ್ರು ಭಾಷೆಯನ್ನು ಜೀವಂತವಾಗಿಡಲು ಅದು ಸಹಾಯಮಾಡಿತು.
ಪ್ರಥಮ ಕ್ರೈಸ್ತ ಪುಸ್ತಕ ಪ್ರಕಾಶಕರು
ಉತ್ಸಾಹಿ ಆದಿ ಕ್ರೈಸ್ತರು ತಮಗೆ ಸಾಧ್ಯವಾಗುವಷ್ಟು ಹೆಚ್ಚು ಬೈಬಲ್ ಪ್ರತಿಗಳನ್ನು, ಎಲ್ಲವನ್ನೂ ಕೈಯಿಂದ ನಕಲುಮಾಡಿ ತಯಾರಿಸಲು ತಮ್ಮನ್ನು ತೊಡಗಿಸಿಕೊಂಡರು. ಅವರು ಸುರುಳಿಗಳನ್ನು ಉಪಯೋಗಿಸುತ್ತ ಮುಂದವರಿಯುವ ಬದಲಿಗೆ, ಕೋಡೆಕ್ಸ್ ಅನ್ನು ಬಳಸುವುದರಲ್ಲಿ ಮೊದಲಿಗರಾದರು. ಇದರಲ್ಲಿ ಆಧುನಿಕ ಪುಸ್ತಕದಂತಹ ಪುಟಗಳಿದ್ದವು. ಶಾಸ್ತ್ರವಚನಗಳನ್ನು ಬೇಗನೆ ಹುಡುಕಲು ಇದು ಅನುಕೂಲವಾಗಿದ್ದುದಲ್ಲದೆ, ಕೋಡೆಕ್ಸ್ನ ಒಂದು ಸಂಪುಟದಲ್ಲಿ, ಒಂದು ಸುರುಳಿಯಲ್ಲಿ ದಾಖಲೆ ಮಾಡಸಾಧ್ಯವಿರುವುದಕ್ಕಿಂತ ಹೆಚ್ಚಿನ ವಿಷಯಗಳನ್ನು ಒಳಗೊಳ್ಳಸಾಧ್ಯವಿತ್ತು—ಉದಾಹರಣೆಗೆ, ಇಡೀ ಗ್ರೀಕ್ ಶಾಸ್ತ್ರಗಳು ಅಥವಾ ಇಡೀ ಬೈಬಲು ಕೂಡ ಒಳಗೊಳ್ಳಸಾಧ್ಯವಿತ್ತು.
ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಅಂಗೀಕೃತ ಮೂಲಕೃತಿಗಳ ಪಟ್ಟಿಯು, ಬದುಕಿದ್ದ ಕೊನೆಯ ಅಪೊಸ್ತಲ ಯೋಹಾನನ ಪುಸ್ತಕಗಳೊಂದಿಗೆ ಸುಮಾರು ಸಾ.ಶ. 98ರಲ್ಲಿ ಪೂರ್ತಿಗೊಂಡಿತು. ಯೋಹಾನನ ಸುವಾರ್ತೆಯ ಒಂದು ಪ್ರತಿಯ ಅವಶಿಷ್ಟ ಭಾಗವೊಂದು ಅಸ್ತಿತ್ವದಲ್ಲಿದೆ. ರೈಲೆಂಡ್ಸ್ ಪಪೈರಸ್ 457 ಎಂದು ಕರೆಯಲ್ಪಡುವ ಇದು, ಸಾ.ಶ. 125ರ ಬಳಿಕ ಬರೆದದ್ದಾಗಿರುವುದಿಲ್ಲ. ಸಾ.ಶ. 150ರಿಂದ 170ರಷ್ಟು ಆರಂಭದಲ್ಲಿ, ಜಸ್ಟಿನ್ ಮಾರ್ಟರ್ನ ಒಬ್ಬ ವಿದ್ಯಾರ್ಥಿಯಾಗಿದ್ದ ಟೇಷನ್, ನಮ್ಮ ಈಗಿನ ಬೈಬಲ್ಗಳಲ್ಲಿ ಕಂಡುಬರುವ ಅವೇ ನಾಲ್ಕು ಸುವಾರ್ತೆಗಳಿಂದ ಸಂಕಲಿಸಿದ ಯೇಸುವಿನ ಜೀವನದ ಒಂದು ಸಂಘಟಿತ ವೃತ್ತಾಂತವಾದ ಡಯಟೆಸರನ್ಅನ್ನು ತಯಾರಿಸಿದನು.a ಆ ಸುವಾರ್ತೆಗಳು ಮಾತ್ರ ಅಧಿಕೃತವೆಂದು ಅವನು ಪರಿಗಣಿಸಿದನೆಂದೂ ಅವು ಆಗಲೇ ಚಲಾವಣೆಯಲ್ಲಿದ್ದವೆಂದೂ ಇದು ಸೂಚಿಸಿತು. ಸುಮಾರು ಸಾ.ಶ.ಪೂ. 170ರಲ್ಲಿ, “ಹೊಸ ಒಡಂಬಡಿಕೆ”ಯ ಪುಸ್ತಕಗಳ ಜ್ಞಾತ ಅನುಕ್ರಮಣಿಕೆ (ಕ್ಯಾಟಲಾಗ್)ಗಳಲ್ಲಿ ಅತಿ ಆದಿಯದ್ದಾದ ಮೂರಾಟೋರಿಯನ್ ಅವಶಿಷ್ಟವನ್ನು ತಯಾರಿಸಲಾಯಿತು. ಇದು ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಹೆಚ್ಚಿನ ಪುಸ್ತಕಗಳ ಪಟ್ಟಿಯನ್ನು ಮಾಡಿರುತ್ತದೆ.
ಕ್ರೈಸ್ತ ನಂಬಿಕೆಗಳ ಹರಡಿಕೆಯು ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಹಾಗೂ ಹೀಬ್ರು ಶಾಸ್ತ್ರಗಳ ಭಾಷಾಂತರಕ್ಕೆ ಬೇಗನೆ ಬೇಡಿಕೆಯನ್ನು ಉಂಟುಮಾಡಿತು. ಆರ್ಮೀನಿಯನ್, ಕಾಪ್ಟಿಕ್, ಜಾರ್ಜಿಯನ್ ಮತ್ತು ಸಿರಿಯ್ಯಾಕ್ನಂತಹ ಭಾಷೆಗಳಲ್ಲಿ ಅನೇಕ ಭಾಷಾಂತರಗಳು ಕಟ್ಟಕಡೆಗೆ ಮಾಡಲ್ಪಟ್ಟವು. ಅನೇಕ ವೇಳೆ ಆ ಉದ್ದೇಶಕ್ಕಾಗಿಯೇ ಅಕ್ಷರಮಾಲೆಗಳನ್ನು ರಚಿಸಬೇಕಾಯಿತು. ಉದಾಹರಣೆಗೆ, ರೋಮನ್ ಚರ್ಚ್ನ ನಾಲ್ಕನೆಯ ಶತಮಾನದ ಬಿಷಪನಾಗಿದ್ದ ಉಲ್ಫಿಲಾಸ್, ಬೈಬಲನ್ನು ಭಾಷಾಂತರಿಸಲಿಕ್ಕಾಗಿ ಗಾಥಿಕ್ ಲಿಪಿಯನ್ನು ಕಂಡುಹಿಡಿದನೆಂದು ಹೇಳಲಾಗುತ್ತದೆ. ಆದರೆ ಅವನು ಅರಸರುಗಳು ಪುಸ್ತಕಗಳನ್ನು, ಗಾಥ್ ಜನರ ಯುದ್ಧದಂತಹ ಪ್ರವೃತ್ತಿಯನ್ನು ಅವು ಉತ್ತೇಜಿಸಬಹುದೆಂದು ನೆನಸುತ್ತ, ಭಾಷಾಂತರದಲ್ಲಿ ಸೇರಿಸಲಿಲ್ಲ. ಆದರೆ ಈ ಕ್ರಿಯೆಯು, “ಕ್ರೈಸ್ತೀಕರಿಸಲ್ಪಟ್ಟಿದ್ದ” ಗಾಥ್ ಜನರು ಸಾ.ಶ. 410ರಲ್ಲಿ ರೋಮನ್ನು ಸೂರೆಮಾಡುವುದರಿಂದ ತಡೆಯಲಿಲ್ಲ!
ಲ್ಯಾಟಿನ್ ಮತ್ತು ಸ್ಲವಾನಿಕ್ ಬೈಬಲ್ಗಳು
ಏತನ್ಮಧ್ಯೆ, ಲ್ಯಾಟಿನ್ ಪ್ರಾಧಾನ್ಯಕ್ಕೆ ಬರಲಾಗಿ, ಅನೇಕ ಹಳೆಯ ಲ್ಯಾಟಿನ್ ಭಾಷಾಂತರಗಳು ತೋರಿಬಂದವು. ಆದರೆ ಶೈಲಿ ಮತ್ತು ನಿಷ್ಕೃಷ್ಟತೆಯಲ್ಲಿ ಅವು ಭಿನ್ನವಾಗಿದ್ದವು. ಆದುದರಿಂದ ಸಾ.ಶ. 382ರಲ್ಲಿ, ಪೋಪ್ ಡಾಮಸಸ್ ತನ್ನ ಕಾರ್ಯದರ್ಶಿಯಾಗಿದ್ದ ಜೆರೋಮ್ನನ್ನು, ಅಧಿಕೃತ ಲ್ಯಾಟಿನ್ ಬೈಬಲನ್ನು ತಯಾರಿಸುವರೆ ನಿಯೋಜಿಸಿದನು.
ಜೆರೋಮ್ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಲ್ಯಾಟಿನ್ ಭಾಷಾಂತರಗಳನ್ನು ಪರಿಷ್ಕರಿಸುವ ಮೂಲಕ ಆರಂಭಿಸಿದನು. ಆದರೆ ಹೀಬ್ರು ಶಾಸ್ತ್ರಗಳ ಸಂಬಂಧದಲ್ಲಿ, ತಾನು ಅವನ್ನು ಮೂಲ ಹೀಬ್ರು ಭಾಷೆಯಿಂದ ಭಾಷಾಂತರಿಸುತ್ತೇನೆಂದು ಪಟ್ಟುಹಿಡಿದನು. ಹೀಗೆ, ಸಾ.ಶ. 386ರಲ್ಲಿ, ಅವನು ಹೀಬ್ರು ಭಾಷೆಯನ್ನು ಕಲಿಯಲು ಮತ್ತು ಒಬ್ಬ ರಬ್ಬಿಯ ಸಹಾಯವನ್ನು ಪಡೆಯಲು ಬೆತ್ಲೆಹೇಮಿಗೆ ಹೋದನು. ಇದರಿಂದ ಅವನು ಚರ್ಚ್ ವೃಂದಗಳಲ್ಲಿ ಗಣನೀಯ ರೀತಿಯ ವಾಗ್ವಾದಗಳನ್ನು ಎಬ್ಬಿಸಿದನು. ಜೆರೋಮ್ನ ಸಮಕಾಲೀನನಾದ ಅಗಸ್ಟಿನ್ನನ್ನು ಸೇರಿಸಿ ಕೆಲವರು, ಸೆಪ್ಟೂಅಜಿಂಟ್ ಪ್ರೇರಿತವೆಂದು ನಂಬಿ, ಜೆರೋಮನು “ಯೆಹೂದ್ಯರ ಮೊರೆಹೊಕ್ಕಿದ್ದಾನೆ” ಎಂದು ಅವನ ಮೇಲೆ ಅಪವಾದ ಹೊರಿಸಿದರು. ಮುಂದುವರಿಯುತ್ತ, ಜೆರೋಮನು ತನ್ನ ಕೃತಿಯನ್ನು ಸುಮಾರು ಸಾ.ಶ. 400ರಲ್ಲಿ ಮುಗಿಸಿದನು. ಮೂಲಭಾಷೆಗಳ ಮತ್ತು ಪ್ರಮಾಣಪತ್ರಗಳ ಉಗಮದ ಸಮೀಪ ಹೋಗುವ ಮೂಲಕ ಮತ್ತು ಆ ದಿನದ ಜೀವಂತ ಭಾಷೆಗೆ ಅವುಗಳನ್ನು ಭಾಷಾಂತರಿಸುವ ಮೂಲಕ, ಜೆರೋಮನು ಆಧುನಿಕ ಭಾಷಾಂತರ ವಿಧಾನಗಳನ್ನು ಸಾವಿರ ವರ್ಷಗಳ ಹಿಂದೆಯೇ ಮುಂಭಾವಿಸಿದನು. ಅವನ ಕೃತಿ ವಲ್ಗೇಟ್ ಅಥವಾ ಕಾಮನ್ ವರ್ಷನ್ ಎಂದು ಜ್ಞಾತವಾಗಿ, ಶತಮಾನಗಳಲ್ಲಿ ಇದು ಜನರಿಗೆ ಪ್ರಯೋಜನಕಾರಿಯಾಗಿ ಪರಿಣಮಿಸಿತು.
ಪೌರಸ್ತ್ಯ ಕ್ರೈಸ್ತಪ್ರಪಂಚದಲ್ಲಿ, ಅನೇಕರಿಗೆ ಇನ್ನೂ ಸೆಪ್ಟೂಅಜಿಂಟ್ ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರಗಳನ್ನು ಓದಲು ಸಾಧ್ಯವಿತ್ತು. ಆದರೆ ತರುವಾಯ, ಇಂದಿನ ಸ್ಲಾವಿಕ್ ಭಾಷೆಗಳ ಅಗ್ರಗಾಮಿಯಾಗಿದ್ದ ಹಳೆಯ ಸ್ಲವಾನಿಕ್ ಭಾಷೆಯು, ಈಶಾನ್ಯ ಯೂರೋಪಿನ ಮುಖ್ಯ ಭಾಷೆಯಾಯಿತು. ಸಾ.ಶ. 863ರಲ್ಲಿ, ಗ್ರೀಕ್ ಭಾಷೆಯನ್ನು ಮಾತಾಡುವ, ಸಿರಿಲ್ ಮತ್ತು ಮೆಥೋಡಿಯಸ್ ಎಂಬ ಸೋದರರಿಬ್ಬರು, ಈಗ ಚೆಕ್ ರಿಪಬ್ಲಿಕ್ನಲ್ಲಿರುವ ಮರೇವಿಯಕ್ಕೆ ಹೋದರು. ಅವರು ಬೈಬಲನ್ನು ಹಳೆಯ ಸ್ಲವಾನಿಕ್ ಭಾಷೆಗೆ ಭಾಷಾಂತರಿಸಲಾರಂಭಿಸಿದರು. ಹಾಗೆ ಭಾಷಾಂತರಿಸಲಿಕ್ಕಾಗಿ ಅವರು ಗ್ಲ್ಯಾಗಲಿಡಿಕ್ ಅಕ್ಷರಮಾಲೆಯನ್ನು ರಚಿಸಿದರು. ಆ ಬಳಿಕ ಇದು ಸಿರಿಲ್ನ ಹೆಸರು ಪಡೆದ ಸಿರಿಲಿಕ್ ಅಕ್ಷರಮಾಲೆಯಿಂದ ಸ್ಥಾನಭರ್ತಿಮಾಡಲ್ಪಟ್ಟಿತು. ಈ ದಿನಗಳ ರಷ್ಯನ್, ಯುಕ್ರೇನಿಯನ್, ಸರ್ಬಿಯನ್ ಮತ್ತು ಬಲ್ಗೇರಿಯನ್ ಲಿಪಿಗಳ ಮೂಲವು ಇದೇ ಆಗಿತ್ತು. ಸ್ಲವಾನಿಕ್ ಬೈಬಲು ಆ ಪ್ರದೇಶದ ಜನರಿಗೆ ಅನೇಕ ಸಂತತಿಗಳ ತನಕ ಸೇವೆಸಲ್ಲಿಸಿತು. ಆದರೆ, ಸಕಾಲದಲ್ಲಿ, ಭಾಷೆಗಳು ಬದಲಾವಣೆಗೊಂಡಂತೆ ಅದು ಸಾಮಾನ್ಯ ವ್ಯಕ್ತಿಗೆ ಅಗ್ರಾಹ್ಯವಾಯಿತು.
ಹೀಬ್ರು ಬೈಬಲ್ ಪಾರಾಗಿ ಉಳಿಯುತ್ತದೆ
ಈ ಸಮಯದಲ್ಲಿ, ಸಾ.ಶ. ಆರರಿಂದ ಹತ್ತನೆಯ ಶತಮಾನಗಳ ತನಕ, ಮ್ಯಾಸರೀಟರೆಂಬ ಯೆಹೂದಿ ಗುಂಪೊಂದು, ಹೀಬ್ರು ಶಾಸ್ತ್ರದ ಗ್ರಂಥಪಾಠವನ್ನು ಸಂರಕ್ಷಿಸಲು ಕ್ರಮಬದ್ಧವಾದ ನಕಲುಮಾಡುವ ವಿಧಾನಗಳನ್ನು ವಿಕಸಿಸಿತು. ಅವರು ಎಲ್ಲ ಪಂಕ್ತಿಗಳನ್ನು ಮತ್ತು ಪ್ರತಿಯೊಂದು ಅಕ್ಷರವನ್ನೂ ಲೆಕ್ಕಿಸಿ, ಹಸ್ತಪ್ರತಿಗಳಲ್ಲಿರುವ ವ್ಯತ್ಯಾಸಗಳನ್ನು ಗುರುತಿಸಿ ಪಟ್ಟಿಮಾಡಿದರು. ಇದೆಲ್ಲವೂ ಒಂದು ವಿಶ್ವಾಸಾರ್ಹವಾದ ಗ್ರಂಥಪಾಠವನ್ನು ಕಾಪಾಡುವ ಉದ್ದೇಶದಿಂದಲೇ ಆಗಿತ್ತು. ಅವರ ಪ್ರಯತ್ನಗಳು ವ್ಯರ್ಥವಾಗಿರಲಿಲ್ಲ. ಒಂದು ಉದಾಹರಣೆಯನ್ನು ಕೊಡುವಲ್ಲಿ, ಆಧುನಿಕ ಮ್ಯಾಸರೆಟಿಕ್ ಗ್ರಂಥಪಾಠಗಳನ್ನು ಸಾ.ಶ.ಪೂ. 250 ಮತ್ತು ಸಾ.ಶ. 50ರ ಮಧ್ಯೆ ಬರೆಯಲಾಗಿದ್ದ ಡೆಡ್ ಸೀ ಸ್ಕ್ರೋಲ್ (ಲವಣ ಸಮುದ್ರ ಸುರುಳಿ)ಗಳೊಂದಿಗೆ ಹೋಲಿಸುವಾಗ, 1,000ಕ್ಕೂ ಹೆಚ್ಚು ವರುಷಗಳಲ್ಲಿ ಯಾವ ತಾತ್ತ್ವಿಕ ಬದಲಾವಣೆಯನ್ನೂ ತೋರಿಸುವುದಿಲ್ಲ.b
ಯೂರೋಪಿನಲ್ಲಿ ಮಧ್ಯಯುಗಗಳು ಅಂಧಕಾರದ ಯುಗಗಳಿಗೆ ಬಹಳವಾಗಿ ಸಮಾನಾರ್ಥಕವಾಗಿದ್ದವು. ಜನಸಾಮಾನ್ಯರ ಮಧ್ಯೆ ಓದುವಿಕೆ ಮತ್ತು ಕಲಿಕೆಗಳು ಕನಿಷ್ಠ ಮಟ್ಟದಲ್ಲಿದ್ದವು. ಕೊನೆಗೆ, ಹೆಚ್ಚಿನದಾಗಿ, ಪುರೋಹಿತ ವರ್ಗವೂ ಚರ್ಚ್ ಲ್ಯಾಟಿನನ್ನು ಓದಲು ಅಸಮರ್ಥವಾದುದಲ್ಲದೆ, ಅನೇಕ ವೇಳೆ, ತಮ್ಮ ಸ್ವಂತ ಭಾಷೆಯನ್ನೂ ಅವರಿಗೆ ಓದಸಾಧ್ಯವಾಗಲಿಲ್ಲ. ಇದು ಯೂರೋಪ್ನಲ್ಲಿ ಯೆಹೂದ್ಯರನ್ನು ಅವರ ಗೆಟೋ (ಕೇರಿ)ಗಳಿಗೆ ಅಟ್ಟಿದ ಸಮಯವೂ ಆಗಿತ್ತು. ಆಂಶಿಕವಾಗಿ, ಈ ಪ್ರತ್ಯೇಕತೆಯ ಕಾರಣದಿಂದ, ಬೈಬಲ್ ಸಂಬಂಧವಾದ ಹೀಬ್ರು ಪಾಂಡಿತ್ಯವು ಸಂರಕ್ಷಿಸಲ್ಪಟ್ಟಿತು. ಆದರೂ, ಅವಿಚಾರಾಭಿಪ್ರಾಯ ಮತ್ತು ಅಪನಂಬಿಕೆಯ ಕಾರಣ, ಯೆಹೂದ್ಯರ ಜ್ಞಾನವು ಅನೇಕ ವೇಳೆ ಗೆಟೋವಿನ ಹೊರಗೆ ಸುಲಭಲಭ್ಯವಾಗಿರಲಿಲ್ಲ. ಪಾಶ್ಚಾತ್ಯ ಯೂರೋಪಿನಲ್ಲಿ, ಗ್ರೀಕ್ ಭಾಷಾಜ್ಞಾನವೂ ಅವನತಿಗೊಳ್ಳುತ್ತಿತ್ತು. ಜೆರೋಮ್ನ ಲ್ಯಾಟಿನ್ ವಲ್ಗೇಟ್ನ ಸಂಬಂಧದಲ್ಲಿ ಪಾಶ್ಚಾತ್ಯ ಚರ್ಚಿನ ಪೂಜ್ಯಭಾವವು ಪರಿಸ್ಥಿತಿಯನ್ನು ಇನ್ನೂ ಕೆಡಿಸಿತು. ಮ್ಯಾಸರೆಟಿಕ್ ಸಮಯಾವಧಿಯ ಅಂತ್ಯದೊಳಗೆ ಲ್ಯಾಟಿನ್ ಮೃತ ಭಾಷೆಯಾಗುತ್ತ ಬರುತ್ತಿದ್ದರೂ, ವಲ್ಗೇಟ್ ಸಾಮಾನ್ಯವಾಗಿ ಏಕೈಕ ಅಧಿಕೃತ ಭಾಷಾಂತರವಾಗಿ ಎಣಿಸಲ್ಪಡುತ್ತಿತ್ತು. ಹೀಗೆ, ಬೈಬಲನ್ನು ಅರಿಯುವ ಬಯಕೆಯು ನಿಧಾನವಾಗಿ ಮೊಳಕೆಯೊಡೆಯಲಾರಂಭಿಸಿದಾಗ, ಮಹಾ ಸಂಘರ್ಷಕ್ಕೆ ರಂಗವು ಸಿದ್ಧವಾಗಿತ್ತು.
ಬೈಬಲ್ ಭಾಷಾಂತರವು ವಿರೋಧವನ್ನು ಎದುರಿಸುತ್ತದೆ
1079ರಲ್ಲಿ, VIIನೆಯ ಪೋಪ್ ಗ್ರೆಗರಿ, ದೇಶಭಾಷೆಗಳ ಭಾಷಾಂತರಗಳ ತಯಾರಿಯನ್ನು ಮತ್ತು ಕೆಲವೊಮ್ಮೆ ಅದನ್ನು ಪಡೆದಿರುವುದನ್ನೂ ನಿಷೇಧಿಸುತ್ತಾ, ಮಧ್ಯಯುಗಗಳ ಅನೇಕ ಚರ್ಚ್ ಶಾಸನಗಳಲ್ಲಿ ಮೊದಲನೆಯದನ್ನು ಹೊರಡಿಸಿದನು. ಪವಿತ್ರ ಶಾಸ್ತ್ರಗಳ ಭಾಗಗಳನ್ನು ಭಾಷಾಂತರಿಸಬೇಕಾಗಬಹುದೆಂಬ ಕಾರಣದಿಂದ ಮ್ಯಾಸ್ ಆರಾಧನಾ ವಿಧಿಯನ್ನು ಸ್ಲವಾನಿಕ್ ಭಾಷೆಯಲ್ಲಿ ಆಚರಿಸುವ ಅನುಮತಿಯನ್ನು ಅವನು ರದ್ದುಮಾಡಿದನು. ಆದಿ ಕ್ರೈಸ್ತರ ಸ್ಥಾನಕ್ಕೆ ಪೂರ್ಣ ವ್ಯತಿರಿಕ್ತವಾಗಿ ಅವನು ಬರೆದುದು: “ಪವಿತ್ರ ಶಾಸ್ತ್ರವು ಕೆಲವು ಸ್ಥಳಗಳಲ್ಲಿ ರಹಸ್ಯವಾಗಿರಬೇಕೆಂಬುದು ಸರ್ವಶಕ್ತ ದೇವರ ಇಷ್ಟವಾಗಿದೆ.” ಇದು ಚರ್ಚಿನ ಅಧಿಕೃತ ಸ್ಥಾನವಾಗಿದ್ದುದರಿಂದ ಬೈಬಲ್ ವಾಚನವನ್ನು ಉತ್ತೇಜಿಸುವವರನ್ನು ಹೆಚ್ಚೆಚ್ಚು ಅಪಾಯಕಾರಿ ವ್ಯಕ್ತಿಗಳಾಗಿ ಪರಿಗಣಿಸಲಾಗುತ್ತಿತ್ತು.
ವಾತಾವರಣವು ಅನುಕೂಲಕರವಾಗಿ ಇರದಿದ್ದರೂ, ಸಾಮಾನ್ಯ ಭಾಷೆಗಳಿಗೆ ಬೈಬಲನ್ನು ನಕಲುಮಾಡುವುದೂ ಭಾಷಾಂತರಿಸುವುದೂ ಮುಂದುವರಿಯಿತು. ಯೂರೋಪಿನಲ್ಲಿ ಅನೇಕ ಭಾಷೆಗಳ ಭಾಷಾಂತರಗಳು ಗೋಪ್ಯವಾಗಿ ವಿತರಿಸಲ್ಪಟ್ಟವು. ಇವೆಲ್ಲವೂ ಕೈಬರಹದ ನಕಲುಗಳಾಗಿದ್ದವು, ಏಕೆಂದರೆ ಯೂರೋಪಿನಲ್ಲಿ 1400ಗಳ ಮಧ್ಯಭಾಗದ ತನಕ ಚಲನ ವಿಧಾನದ ಮುದ್ರಣವು ಕಂಡುಹಿಡಿಯಲ್ಪಟ್ಟಿರಲಿಲ್ಲ. ಆದರೆ ಪ್ರತಿಗಳು ದುಬಾರಿಯೂ ಸಂಖ್ಯೆಯಲ್ಲಿ ಪರಿಮಿತವೂ ಆಗಿದ್ದುದರಿಂದ, ಬೈಬಲಿನ ಒಂದು ಪುಸ್ತಕದ ಒಂದಂಶ ಮಾತ್ರ ಅಥವಾ ಕೆಲವೇ ಪುಟಗಳು ಒಬ್ಬ ಸಾಮಾನ್ಯ ಪೌರನಿಗೆ ದೊರೆತರೆ ಅವನು ಸಂತುಷ್ಟನೆಂದು ಎಣಿಸಬಹುದಾಗಿತ್ತು. ಕೆಲವರು ದೊಡ್ಡ ಭಾಗಗಳನ್ನು, ಹೌದು, ಇಡೀ ಕ್ರೈಸ್ತ ಗ್ರೀಕ್ ಶಾಸ್ತ್ರಗಳನ್ನೇ ಬಾಯಿಪಾಠ ಮಾಡಿಕೊಂಡರು!
ಆದರೆ ಸಕಾಲದಲ್ಲಿ, ಚರ್ಚಿನ ಸುಧಾರಣೆಗೆ ವ್ಯಾಪಕವಾದ ಆಂದೋಲನಗಳು ಎದ್ದವು. ದೈನಂದಿನ ಜೀವಿತದಲ್ಲಿ ದೇವರ ವಾಕ್ಯದ ಪ್ರಾಧಾನ್ಯದ ನವೀಕರಿಸಲ್ಪಟ್ಟ ಪ್ರಜ್ಞೆಯು, ಆಂಶಿಕವಾಗಿ ಈ ಆಂದೋಲನಗಳನ್ನು ಪ್ರಚೋದಿಸಿತು. ಆದರೆ ಈ ಆಂದೋಲನಗಳು ಮತ್ತು ಮುದ್ರಣ ಯಂತ್ರದ ಬೆಳವಣಿಗೆಯು ಬೈಬಲನ್ನು ಹೇಗೆ ಬಾಧಿಸಲಿತ್ತು? ಮತ್ತು ಆರಂಭದಲ್ಲಿ ಹೇಳಲಾದ, ವಿಲ್ಯಮ್ ಟಿಂಡೇಲ್ ಮತ್ತು ಅವನ ಭಾಷಾಂತರಕ್ಕೆ ಏನು ಸಂಭವಿಸಿತು? ಮುಂದಿನ ಸಂಚಿಕೆಗಳಲ್ಲಿ ನಾವು ಈ ಚಿತ್ತಾಕರ್ಷಕ ಕಥೆಯನ್ನು ನಮ್ಮ ಸ್ವಂತ ದಿನಗಳ ತನಕ ಅನುಸರಿಸಿಕೊಂಡು ಹೋಗುವೆವು.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕವು, ನಾಲ್ಕು ಸುವಾರ್ತೆಗಳ ಸಾಮರಸ್ಯದ ಒಂದು ಆಧುನಿಕ ಮಾದರಿಯಾಗಿದೆ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ, ಶಾಸ್ತ್ರಗಳ ಮೇಲಿನ ಒಳನೋಟ (ಇಂಗ್ಲಿಷ್), ಸಂಪುಟ 2, ಪುಟ 315ನ್ನು ನೋಡಿ.
[ಪುಟ 8,9ರಲ್ಲಿರುವಚಿತ್ರ]
ಮುಖ್ಯ ವರ್ಷಾಂಕಗಳು ಬೈಬಲಿನ ರವಾನೆ
(For fully formatted text, see publication)
ಸಾಮಾನ್ಯ ಶಕ ಪೂರ್ವ (ಸಾ.ಶ.ಪೂ.)
ಹೀಬ್ರು ಶಾಸ್ತ್ರಗಳು ಮುಕ್ತಾಯಗೊಂಡದ್ದು ಸುಮಾರು
ಸಾ.ಶ.ಪೂ. 443
ಸಾ.ಶ.ಪೂ. 400
ಮಹಾ ಅಲೆಗ್ಸಾಂಡರ್ (d. ಸಾ.ಶ.ಪೂ. 323)
ಸಾ.ಶ.ಪೂ. 300
ಸೆಪ್ಟೂಅಜಿಂಟ್ ಆರಂಭಿಸಿದ್ದು ಸು. ಸಾ.ಶ.ಪೂ. 280
ಸಾ.ಶ.ಪೂ. 200
ಸಾ.ಶ.ಪೂ. 100 ಹೆಚ್ಚಿನ ಲವಣ ಸಮುದ್ರ ಸುರುಳಿಗಳು
ಸು. ಸಾ.ಶ.ಪೂ. 100ರಿಂದ ಸಾ.ಶ. 68
ಸಾಮಾನ್ಯ ಶಕ (ಸಾ.ಶ.)
ಯೆರೂಸಲೇಮ್ ನಾಶವಾದದ್ದು ಸಾ.ಶ. 70
ಗ್ರೀಕ್ ಶಾಸ್ತ್ರಗಳು ಮುಕ್ತಾಯಗೊಂಡದ್ದು ಸಾ.ಶ. 98
ಸಾ.ಶ. 100
ಯೋಹಾನನ ಸುವಾರ್ತೆಯ ರೈಲೆಂಡ್ಸ್ ಪಪೈರಸ್
(b. ಸಾ.ಶ. 125)
ಸಾ.ಶ. 200
ಸಾ.ಶ. 300
ಸಾ.ಶ. 400 ಜೆರೋಮನ ಲ್ಯಾಟಿನ್ ವಲ್ಗೇಟ್ c. ಸಾ.ಶ. 400
ಸಾ.ಶ. 500
ಸಾ.ಶ. 600
ಮ್ಯಾಸರೆಟಿಕ್ ಗ್ರಂಥ ಪಾಠ ತಯಾರಿ ಸಲ್ಪಟ್ಟದ್ದು
ಸಾ.ಶ. 700
ಸಾ.ಶ. 800
ಸಿರಿಲ್ ಮರೇವಿಯದಲ್ಲಿ ಸಾ.ಶ. 863
ಸಾ.ಶ. 900
ಸಾ.ಶ. 1000
ದೇಶಭಾಷೆಯ ಬೈಬಲಿನ ವಿರುದ್ಧ ಶಾಸನ ಸಾ.ಶ. 1079
ಸಾ.ಶ. 1100
ಸಾ.ಶ. 1200
ಸಾ.ಶ. 1300
[ಪುಟ 9 ರಲ್ಲಿರುವ ಚಿತ್ರ]
ಕೋಡೆಕ್ಸ್ನ ಉಪಯೋಗವನ್ನು ಆದಿ ಕ್ರೈಸ್ತರು ಆರಂಭಿಸಿದರು
[ಪುಟ 10 ರಲ್ಲಿರುವ ಚಿತ್ರ]
ಜೆರೋಮನು ಹೀಬ್ರು ಭಾಷೆಯನ್ನು ಕಲಿಯಲು ಬೆತ್ಲೆಹೇಮಿಗೆ ಹೋದನು