ಬೈಬಲಿನ ದೃಷ್ಟಿಕೋನ
ಬಡತನವು ಕಳ್ಳತನವನ್ನು ಸಮರ್ಥಿಸುತ್ತದೊ?
“ಬಡತನವು ಮಾನವ ಸಂತೋಷದ ದೊಡ್ಡ ವೈರಿಯಾಗಿದೆ; ಅದು ಖಂಡಿತವಾಗಿಯೂ ಸ್ವಾತಂತ್ರ್ಯವನ್ನು ನಾಶಮಾಡುತ್ತದೆ ಮತ್ತು ಕೆಲವು ಸದ್ಗುಣಗಳನ್ನು ಕಾರ್ಯಸಾಧ್ಯವಲ್ಲದ್ದಾಗಿ ಮಾಡುವಾಗ ಇತರ ಸದ್ಗುಣಗಳ ಅಭ್ಯಾಸವನ್ನು ಅತ್ಯಂತ ಕಠಿನಗೊಳಿಸುತ್ತದೆ.”—18ನೆಯ ಶತಮಾನದ ಗ್ರಂಥಕರ್ತ, ಸ್ಯಾಮೂವೆಲ್ ಜಾನ್ಸನ್.
ರೋಮನ್ ರಾಜ್ಯನೀತಿಜ್ಞ ಮಾಗ್ನಸ್ ಆರೇಲೀಸ್ ಕ್ಯಾಸಿಯೊಡೊರಸ್ ಹೇಳಿದ್ದು: “ಬಡತನವು ಪಾತಕದ ಮಾತೆಯಾಗಿದೆ.” ಕೆಲವು ಪಾತಕಗಳು ಬಡತನದ ಸ್ವಾಭಾವಿಕ ಪರಿಣಾಮವಾಗಿವೆ ಎಂಬುದನ್ನು ಈ ದೃಷ್ಟಿಕೋನಗಳು ಸೂಚಿಸುವಂತೆ ತೋರುತ್ತದೆ. ವಿಶೇಷವಾಗಿ ಪಾತಕವು ಕಳ್ಳತನವಾಗಿರುವಾಗ, ಇಂದು ಅನೇಕರು ಸ್ಪಷ್ಟವಾಗಿ ಸಮ್ಮತಿಸುತ್ತಾರೆ.
ದಬ್ಬಾಳಿಕೆ ಮತ್ತು ಬಡತನವು, ಕಳ್ಳತನವನ್ನು ಸಮರ್ಥಿಸುತ್ತದೆಂಬ ನಂಬಿಕೆಯು ಬಹಳ ಜನಪ್ರಿಯವಾದದ್ದಾಗಿದೆ. ರಾಬಿನ್ ಹುಡ್ನ ಕುರಿತಾದ 14ನೆಯ ಶತಮಾನದ ಜನಪ್ರಿಯ ಇಂಗ್ಲಿಷ್ ಲಘುಕಾವ್ಯಗಳನ್ನು ಪರಿಗಣಿಸಿರಿ. ಅದರಲ್ಲಿ, ಧನಿಕರಿಂದ ಕದ್ದು, ಸಂಪಾದನೆಗಳನ್ನು ಬಡವರಿಗೆ ಹಂಚುತ್ತಿದ್ದ ಒಬ್ಬ ಐತಿಹ್ಯ ದೇಶಭ್ರಷ್ಟನ ವರ್ಣನೆಯಿದೆ. ಶತಮಾನಗಳ ವರೆಗೆ, ಅವನು ಜನಸಾಮಾನ್ಯರ ನಾಯಕನಾಗಿ ಪರಿಗಣಿಸಲ್ಪಟ್ಟಿದ್ದನು.
ಇಂದು ಅನೇಕರು ವಿಪರೀತ ಆರ್ಥಿಕ ಕಷ್ಟಗಳನ್ನು ಅನುಭವಿಸುತ್ತಿರುವುದು ಒಪ್ಪತಕ್ಕ ವಿಷಯವೇ. 131 ಕೋಟಿ ಜನರು ದಿನಕ್ಕೆ ಒಂದು ಡಾಲರ್ಗಿಂತಲೂ ಕಡಮೆ ಹಣದಲ್ಲಿ ಜೀವಿಸುತ್ತಿದ್ದಾರೆಂದು ವಿಶ್ವ ಬ್ಯಾಂಕ್ ಇತ್ತೀಚೆಗೆ ವರದಿಸಿತು. ತಾವು ತಮ್ಮನ್ನು ಬಡವರೆಂದೆಣಿಸಿಕೊಳ್ಳುತ್ತೇವೆಂದು, ಒಂದು ಸಮೀಕ್ಷೆಯಲ್ಲಿ 70 ಪ್ರತಿಶತದಷ್ಟು ಫಿಲಿಪಿನೊ ಜನರು ಹೇಳಿದರು. ಬ್ರೆಸಿಲ್ನಲ್ಲಿ, ಅತ್ಯಂತ ಧನಿಕರಾಗಿರುವ 20 ಪ್ರತಿಶತದಷ್ಟು ಜನರು, ಅತ್ಯಂತ ಬಡವರಾಗಿರುವ 20 ಪ್ರತಿಶತದಷ್ಟು ಜನರಿಗಿಂತ 32 ಪಟ್ಟು ಹೆಚ್ಚಾಗಿ ಸಂಪಾದಿಸುತ್ತಾರೆ. ಇಂತಹ ಪರಿಸ್ಥಿತಿಗಳು ಕೆಲವರನ್ನು ಎಷ್ಟರ ಮಟ್ಟಿಗೆ ಆಶಾಭಂಗಗೊಳಿಸಸಾಧ್ಯವೆಂದರೆ, ಕೇವಲ ಬದುಕಿ ಉಳಿಯಲಿಕ್ಕಾಗಿ ತಮ್ಮ ದೈನಿಕ ಅಗತ್ಯಗಳನ್ನು ಪೂರೈಸಲು ಯಾವುದೇ ಮಾರ್ಗವನ್ನು, ಕಳ್ಳತನವನ್ನೂ ಅವರು ಬಳಸುತ್ತಾರೆ.
ಬೈಬಲು ಸ್ಪಷ್ಟವಾಗಿ ಕಳ್ಳತನವನ್ನು ಖಂಡಿಸುತ್ತದೆ. ದಶಾಜ್ಞೆಗಳಲ್ಲಿ ಎಂಟನೆಯ ಆಜ್ಞೆಯು ಹೇಳುವುದು: “ಕದಿಯಬಾರದು.” (ವಿಮೋಚನಕಾಂಡ 20:15) ಆದರೂ, ಬೈಬಲಿನಲ್ಲಿ ನಂಬಿಕೆಯಿಡುವ ಅನೇಕರು, ಕಳ್ಳನು ವಿಷಾದನೀಯ ಆರ್ಥಿಕ ಪರಿಸ್ಥಿತಿಗಳಿಂದ ಪ್ರಚೋದಿಸಲ್ಪಟ್ಟಿರುವಾಗ ಕಳ್ಳತನವನ್ನು ಸಮರ್ಥಿಸುವ ಪ್ರವೃತ್ತಿಯುಳ್ಳವರಾಗಿದ್ದಾರೆ.
ಇದು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತದೆ: ಬಡತನವು ನಿಜವಾಗಿಯೂ ಕಳ್ಳತನವನ್ನು ಸಮರ್ಥಿಸುತ್ತದೊ? ವ್ಯಕ್ತಿಯೊಬ್ಬನು ವಿಪರೀತ ಆರ್ಥಿಕ ಸಂಕಟದಲ್ಲಿ ಜೀವಿಸುವಾಗ ಅವನೇನು ಮಾಡಬೇಕು? ಪರಾಮರಿಸಬೇಕಾದ ಅಸ್ವಸ್ಥ ಇಲ್ಲವೆ ಹೊಟ್ಟೆಗಿಲ್ಲದ ಮಕ್ಕಳು ಅವನಿಗಿದ್ದರೆ ಆಗೇನು? ಅಂತಹ ಸಂದರ್ಭಗಳಲ್ಲಿ, ವಿಶೇಷವಾಗಿ ಕದಿಯಲ್ಪಡುವ ವಸ್ತುಗಳು, ಅವುಗಳ ಅಗತ್ಯವಿರದವರಿಗೆ ಸೇರಿರುವಾಗ, ಯೆಹೋವ ದೇವರು ಕಳ್ಳತನವನ್ನು ಅನುಮತಿಸುವನೊ?
ದೇವರು ಏನು ಹೇಳುತ್ತಾನೆ?
ಯೇಸು ತನ್ನ ತಂದೆಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸಿದ ಕಾರಣ, ಅವನ ಉದಾಹರಣೆಯು ದೇವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವಂತೆ ನಮಗೆ ಸಹಾಯ ಮಾಡಬಲ್ಲದು. (ಯೋಹಾನ 12:49) ಭೂಮಿಯಲ್ಲಿದ್ದಾಗ, ಅಗತ್ಯದಲ್ಲಿದ್ದವರೊಂದಿಗಿನ ತನ್ನ ವ್ಯವಹಾರಗಳಲ್ಲಿ ಯೇಸು ಬಹಳ ಸಹಾನುಭೂತಿಯುಳ್ಳವನಾಗಿದ್ದನು. “ಜನರ ಗುಂಪುಗಳನ್ನು ನೋಡಿ . . . ಅವರ ಮೇಲೆ ಕನಿಕರಪಟ್ಟ”ನೆಂದು ಬೈಬಲು ಹೇಳುತ್ತದೆ. (ಮತ್ತಾಯ 9:36) ಆದರೂ, ಯಾವುದೇ ಪರಿಸ್ಥಿತಿಗಳಲ್ಲಿ ಅವನೆಂದಿಗೂ ಕಳ್ಳತನವನ್ನು ಮನ್ನಿಸಲಿಲ್ಲ. ತದ್ರೀತಿಯಲ್ಲಿ, ದೇವರಿಗೆ ಬಡವರ ಬಗ್ಗೆ ಚಿಂತೆಯಿರುವುದಾದರೂ, ಆತನು ಬಡತನವನ್ನು ಕಳ್ಳತನಕ್ಕಾಗಿರುವ ಸಮರ್ಥನೆಯಾಗಿ ಪರಿಗಣಿಸುವುದಿಲ್ಲ. ಯೆಶಾಯ 61:8ರಲ್ಲಿ, ದೇವರು ‘ಕೊಳ್ಳೆಯನ್ನೂ ಅನ್ಯಾಯವನ್ನು ದ್ವೇಷಿಸುತ್ತಾನೆಂದು’ ಬೈಬಲು ನಮಗೆ ಹೇಳುತ್ತದೆ. ಮತ್ತು ಕಳ್ಳರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂದು ಅಪೊಸ್ತಲ ಪೌಲನು ಸ್ಪಷ್ಟವಾಗಿ ಹೇಳುತ್ತಾನೆ. ಆದುದರಿಂದ ದೇವರ ದೃಷ್ಟಿಕೋನವು ಏನೆಂಬುದರ ವಿಷಯದಲ್ಲಿ ನಮಗೆ ಯಾವ ಸಂದೇಹವೂ ಇರುವುದಿಲ್ಲ.—1 ಕೊರಿಂಥ 6:10.
ಹಾಗಿದ್ದರೂ, ಜ್ಞಾನೋಕ್ತಿ 6:30 ಹೇಳುವುದೇನೆಂದರೆ, “ಕಳ್ಳನು ಹೊಟ್ಟೆಗಿಲ್ಲದೆ ಹಸಿವೆಯನ್ನು ನೀಗಿಸಲು ಕಳವು ಮಾಡಿದರೆ ಜನರು ಅಷ್ಟೇನೂ ಹೀಯಾಳಿಸರು.” ಈ ಹೇಳಿಕೆಯು ಕಳ್ಳತನವನ್ನು ಮನ್ನಿಸುತ್ತದೊ? ಖಂಡಿತವಾಗಿಯೂ ಇಲ್ಲ. ದೇವರು ಆ ಕಳ್ಳನನ್ನು ಅವನ ತಪ್ಪಿಗಾಗಿ ದಂಡಾರ್ಹನೆಂದು ಇನ್ನೂ ವೀಕ್ಷಿಸುವನೆಂದು ಅದರ ಪೂರ್ವಾಪರವು ತೋರಿಸುತ್ತದೆ. ಮುಂದಿನ ವಚನವು ಹೇಳುವುದು: “ಅವನ ತಪ್ಪು ಬೈಲಾದರೆ ಅವನು ಏಳರಷ್ಟು ಕೊಡಬೇಕಾಗುವದು, ಅಥವಾ ತನ್ನ ಮನೆಯ ಆಸ್ತಿಯನ್ನೆಲ್ಲಾ ತೆತ್ತೇ ತೀರಬೇಕು.”—ಜ್ಞಾನೋಕ್ತಿ 6:31.
ಹೊಟ್ಟೆಗಿಲ್ಲದಿರುವ ಕಾರಣ ಕಳವು ಮಾಡುವ ಕಳ್ಳನು, ಅತ್ಯಾಶೆಯ ಕಾರಣ ಇಲ್ಲವೆ ತನ್ನ ಬಲಿಪಶುವಿಗೆ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಕಳವು ಮಾಡುವವನಷ್ಟು ಆಕ್ಷೇಪಾರ್ಹನಾಗಿರದಿದ್ದರೂ, ದೇವರ ಸಮ್ಮತಿಯನ್ನು ಬಯಸುವವರು ಯಾವುದೇ ರೀತಿಯ ಕಳ್ಳತನದ ವಿಷಯದಲ್ಲಿ ದೋಷಿಗಳಾಗಿರಬಾರದು. ವಿಪರೀತ ಬಡತನದ ಸಂದರ್ಭಗಳಲ್ಲೂ, ಕಳ್ಳತನವು ದೇವರನ್ನು ಅಗೌರವಿಸುತ್ತದೆ. ಜ್ಞಾನೋಕ್ತಿ 30:8, 9 ಅದನ್ನು ಈ ರೀತಿಯಲ್ಲಿ ತಿಳಿಸುತ್ತದೆ: “ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು. . . . ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೇನು.” ಹೌದು, ಕಳ್ಳನೊಬ್ಬನು ದೇವರ ಹೆಸರಿಗೆ ನಿಂದೆಯನ್ನು ತರುತ್ತಾನೆ. ಕಳ್ಳತನವು ಪ್ರೀತಿರಹಿತವಾದ ಕ್ರಿಯೆಯಾಗಿರುವುದರಿಂದ, ಅದು ಧನಿಕರ ವಿರುದ್ಧವೇ ಮಾಡಲ್ಪಡಲಿ ಬಡವರ ವಿರುದ್ಧವೇ ಮಾಡಲ್ಪಡಲಿ ಪಾಪವಾಗಿದೆ. ದೇವರನ್ನು ಮತ್ತು ನೆರೆಯವರನ್ನು ಪ್ರೀತಿಸುವವರಿಗೆ, ಕಳ್ಳತನವು ನ್ಯಾಯವಾದದ್ದಾಗಿರುವುದೇ ಇಲ್ಲ.—ಮತ್ತಾಯ 22:39; ರೋಮಾಪುರ 13:9, 10.
ಪ್ರತಿಕೂಲ ಪರಿಸ್ಥಿತಿಯುಳ್ಳ ವ್ಯಕ್ತಿಯೊಬ್ಬನಿಗೆ ಕಳವು ಮಾಡುವ ಹಕ್ಕಿದೆಯೆಂಬ ವಾದವು ತರ್ಕಬದ್ಧವಾದದ್ದಲ್ಲ. ಇದನ್ನು ಹೇಳುವುದು, ಬಡಕಲು ಮೈಕಟ್ಟಿನ ಒಬ್ಬ ಕ್ರೀಡಾಪಟುವಿಗೆ ಗೆಲ್ಲಲಿಕ್ಕಾಗಿ ನಿಷೇಧಿಸಲ್ಪಟ್ಟ ಅಮಲೌಷಧಗಳನ್ನು ತೆಗೆದುಕೊಳ್ಳುವ ಹಕ್ಕಿದೆಯೆಂದು ಹೇಳುವಂತೆಯೇ ಇರುವುದು. ಅವನು ಗೆಲ್ಲುವುದಾದರೂ, ಅಪ್ರಾಮಾಣಿಕ ಮಾರ್ಗಗಳನ್ನು ಅವನು ಬಳಸಿದ್ದಾನೆ. ತಮ್ಮ ಜಯವನ್ನು ಅವನು ಕಾನೂನುಬಾಹಿರ ವಿಧಾನಗಳ ಮೂಲಕ ತೆಗೆದುಕೊಂಡಿದ್ದಾನೆಂದು ಇತರರು ಯೋಗ್ಯವಾಗಿಯೇ ಭಾವಿಸಿಕೊಳ್ಳುವರು. ಕಳ್ಳನ ವಿಷಯದಲ್ಲಿಯೂ ಹಾಗೆಯೇ. ಅವನು ಇತರರಿಗೆ ಸೇರಿರುವುದನ್ನು ಅಪ್ರಾಮಾಣಿಕ ವಿಧದಲ್ಲಿ ತೆಗೆದುಕೊಳ್ಳುತ್ತಾನೆ. ಅವನ ಪ್ರತಿಕೂಲ ಸ್ಥಾನವು, ಮಾರ್ಗೋಪಾಯಗಳನ್ನು ಸಮರ್ಥಿಸುವುದಿಲ್ಲ.
ದೇವರ ಮೆಚ್ಚುಗೆಯನ್ನು ಬಯಸುವ ಯಾವನೇ ಕಳ್ಳನು, ತನ್ನ ನಡತೆಯ ವಿಷಯದಲ್ಲಿ ಪಶ್ಚಾತ್ತಾಪಪಡಬೇಕು. ಬೈಬಲು ಬುದ್ಧಿವಾದ ಹೇಳುವುದು: “ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದೆ ಕೈಯಿಂದ ಯಾವದೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ.” (ಎಫೆಸ 4:28) ಯಥಾರ್ಥವಾಗಿ ಪಶ್ಚಾತ್ತಾಪಪಟ್ಟಿರುವ ಮಾಜಿ ಕಳ್ಳರು, ಯೆಹೋವನು ತಮ್ಮನ್ನು ಕ್ಷಮಿಸುವನೆಂಬ ವಿಷಯದಲ್ಲಿ ಖಾತ್ರಿಯಿಂದಿರಬಲ್ಲರು.—ಯೆಹೆಜ್ಕೇಲ 33:14-16.
ಬಡವರು ಏನು ಮಾಡಬಲ್ಲರು?
ಬೈಬಲು ವಾಗ್ದಾನಿಸುವುದು: “ಯೆಹೋವನು ನೀತಿವಂತನನ್ನು ಹಸಿವೆಗೊಳಿಸನು; ದುಷ್ಟನ ಆಶೆಯನ್ನು ಭಂಗಪಡಿಸುತ್ತಾನೆ.” (ಜ್ಞಾನೋಕ್ತಿ 10:3) ತಮ್ಮ ಬಯಕೆಗಳನ್ನು ತೃಪ್ತಿಪಡಿಸಲು, ತನ್ನ ನಿಯಮವನ್ನು ಉದ್ದೇಶಪೂರ್ವಕವಾಗಿ ಮುರಿಯುವವರಿಗೆ ದೇವರು ಸಹಾಯ ಮಾಡುವುದಿಲ್ಲ. ಆದರೆ ಯಾರು ಪ್ರಾಮಾಣಿಕವಾಗಿ ಆತನಿಗೆ ವಿಧೇಯರಾಗಿರಲು ಪ್ರಯತ್ನಿಸುತ್ತಾರೊ ಅಂತಹವರಿಗಾಗಿ ಆತನಲ್ಲಿ ಸಹಾನುಭೂತಿಯಿದೆ, ಮತ್ತು ಅಗತ್ಯವಾಗಿರುವವುಗಳನ್ನು ಪಡೆದುಕೊಳ್ಳಲಿಕ್ಕಾಗಿ ಅವರು ಮಾಡುವ ಪ್ರಯತ್ನಗಳನ್ನು ಆತನು ಆಶೀರ್ವದಿಸುವನು.—ಕೀರ್ತನೆ 37:25.
ತಾವು ದೈವಿಕ ತತ್ವಗಳನ್ನು ಅನುಸರಿಸುವಾಗ, ಜೀವಿತದಲ್ಲಿನ ಅವರ ಸನ್ನಿವೇಶವು ಉತ್ತಮಗೊಳ್ಳುವುದನ್ನು ಲಕ್ಷಾಂತರ ಜನರು ಈಗಾಗಲೇ ಕಂಡುಕೊಂಡಿದ್ದಾರೆ. ಉದಾಹರಣೆಗೆ, ಉದ್ಯೋಗಶೀಲರಾಗಿದ್ದು, ಜೂಜಾಟ, ಕುಡಿಕತನ, ಧೂಮಪಾನ, ಮತ್ತು ಅಮಲೌಷಧ ಸೇವನೆಗಳಂತಹ ದುಶ್ಚಟಗಳನ್ನು ತ್ಯಜಿಸಬೇಕೆಂಬ ಬೈಬಲಿನ ಸಲಹೆಯನ್ನು ಅನ್ವಯಿಸುವುದು, ತಮಗೆ ನಿಜವಾಗಿಯೂ ಬೇಕಾಗಿರುವ ವಸ್ತುಗಳನ್ನು ಹೆಚ್ಚಿನ ಮೊತ್ತದಲ್ಲಿ ಪಡೆದುಕೊಳ್ಳಲು ಅವರನ್ನು ಶಕ್ತರನ್ನಾಗಿ ಮಾಡಿದೆ. (ಗಲಾತ್ಯ 5:19-21) ಇದು, ಅವರು ನಂಬಿಕೆಯನ್ನು ಅಭ್ಯಸಿಸುವಂತೆ ಕೇಳಿಕೊಳ್ಳುತ್ತದೆ, ಮತ್ತು ಹಾಗೆ ಮಾಡಿರುವವರು “ಯೆಹೋವನು ಸರ್ವೋತ್ತಮ”ನು ಮತ್ತು ಆತನಲ್ಲಿ ಭರವಸೆಯಿಡುವವರಿಗೆ ಆತನು ನಿಜವಾಗಿಯೂ ಸಹಾಯ ಮಾಡುತ್ತಾನೆಂಬುದನ್ನು ತಿಳಿದುಕೊಂಡಿದ್ದಾರೆ.—ಕೀರ್ತನೆ 34:8.
[ಪುಟ 23 ರಲ್ಲಿರುವ ಚಿತ್ರ ಕೃಪೆ]
ರಾಬಿನ್ ಹುಡ್: General Research Division/The New York Public Library/Astor, Lenox and Tilden Foundations