ಯುವ ಜನರು ಪ್ರಶ್ನಿಸುತ್ತಾರೆ . . .
ಯಾವುದೇ ವಿಷಯದ ಮೇಲೆ ನಾನು ಮನಸ್ಸನ್ನು ಹೇಗೆ ಕೇಂದ್ರೀಕರಿಸಬಲ್ಲೆ?
“ವರ್ಷಗಟ್ಟಲೆ ನಾನು ಕೂಟಗಳಲ್ಲಿ ಕುಳಿತು ಕಾಲಹರಣಮಾಡಿದೆ. ಆದರೆ ಅವುಗಳಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಲಿಲ್ಲ. ಸುಮ್ಮನೆ ನನ್ನ ಮನಸ್ಸು ಎಲ್ಲೆಲ್ಲೋ ಅಲೆದಾಡುತ್ತಿತ್ತು.”—ಮ್ಯಾಥ್ಯೂ.
ನೀವು ತರಗತಿಯಲ್ಲಿಯೊ ಅಥವಾ ಕ್ರೈಸ್ತ ಕೂಟದಲ್ಲಿಯೊ ಕುಳಿತುಕೊಂಡಿದ್ದೀರೆಂದು ಊಹಿಸಿಕೊಳ್ಳಿ. ಆದರೆ ಸ್ವಲ್ಪ ಸಮಯದ ಬಳಿಕ ಅಲ್ಲಿ ಏನು ನಡೆಯುತ್ತಿದೆ ಎಂಬ ಅರಿವೇ ಇಲ್ಲದಿರುವಂತಹ ಒಂದು ಅನುಭವ ಎಂದಾದರೂ ನಿಮಗಾಗಿದೆಯೊ? ಕೆಲವೊಮ್ಮೆ ನಿಮ್ಮ ಮನಸ್ಸು ಅಲೆದಾಡುವ ಪ್ರವೃತ್ತಿಯುಳ್ಳದ್ದಾಗಿರುವಲ್ಲಿ, ಇದು ಒಂದು ವಿಚಿತ್ರ ಸಂಗತಿಯೇನಲ್ಲ. ಹಿಂದಿನ ಲೇಖನವು ಸೂಚಿಸಿದಂತೆ, ಸ್ವಲ್ಪ ಕಾಲ ಮಾತ್ರ ಗಮನಕೊಡುವುದು ಯುವ ಜನರ ನಡುವೆ ಸರ್ವಸಾಮಾನ್ಯವಾಗಿದೆ.a ಆದರೂ, ಸ್ವಲ್ಪ ಹೆಚ್ಚಿನ ಪ್ರಯತ್ನವನ್ನು ಮಾಡುವ ಮೂಲಕ ಹಾಗೂ ನಿಮ್ಮ ಮನೋಭಾವವನ್ನು ಸ್ವಲ್ಪಮಟ್ಟಿಗೆ ಹೊಂದಿಸಿಕೊಳ್ಳುವ ಮೂಲಕ, ನೀವು ನಿಮ್ಮ ಗಮನ ಕೊಡುವ ಸಾಮರ್ಥ್ಯವನ್ನು ಉತ್ತಮಗೊಳಿಸಲು ಸಾಧ್ಯವಿದೆ.
ಆಸಕ್ತಿಯುಳ್ಳವರಾಗಿರಿ
ತರಬೇತಿ ಹೊಂದಿರುವ ಒಬ್ಬ ಕ್ರೀಡಾಪಟುವಿನ ಕುರಿತು ಯೋಚಿಸಿರಿ. “ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ಮನುಷ್ಯನು, ಎಲ್ಲ ವಿಷಯಗಳಲ್ಲಿ ಆತ್ಮಸಂಯಮವನ್ನು ರೂಢಿಮಾಡಿಕೊಳ್ಳುತ್ತಾನೆ” (NW) ಎಂದು ಅಪೊಸ್ತಲ ಪೌಲನು ಹೇಳುತ್ತಾನೆ. ಕ್ರೀಡಾಪಟುವೊಬ್ಬನು ಒಂದೇ ಒಂದು ಕ್ಷಣ ತನ್ನ ಮನಸ್ಸನ್ನು ಅಪಕರ್ಷಣೆಗೆ ಒಳಗಾಗುವಂತೆ ಬಿಟ್ಟುಕೊಡುವುದಾದರೂ, ಅವನು ಸೋಲನ್ನು ಅನುಭವಿಸುತ್ತಾನೆ. ಆಟದಲ್ಲಿ ಗೆಲ್ಲಬೇಕಾದರೆ, ಅವನು ಮನಸ್ಸನ್ನು ಕೇಂದ್ರೀಕರಿಸಲು ಕಲಿಯಬೇಕು—ಅಂದರೆ ಗದ್ದಲ ಮಾಡುತ್ತಿರುವ ಗುಂಪಿಗೆ ಗಮನ ಕೊಡದಿರುವುದು, ತನ್ನ ನೋವು ಹಾಗೂ ಆಯಾಸವನ್ನು ಅಲಕ್ಷಿಸುವುದು, ಸೋಲಿನ ಆಲೋಚನೆಯನ್ನೇ ಮನಸ್ಸಿನಿಂದ ತೆಗೆದುಹಾಕುವುದು. ಆದರೆ ಅಂತಹ ವಿಶೇಷ ಪ್ರಯತ್ನವನ್ನು ಮಾಡುವಂತೆ ಆ ಕ್ರೀಡಾಪಟುವನ್ನು ಯಾವುದು ಪ್ರಚೋದಿಸುತ್ತದೆ? ಅಪೊಸ್ತಲ ಪೌಲನಿಗನುಸಾರ, ಅವರು “ಬಾಡಿ ಹೋಗುವ ಜಯಮಾಲಿಕೆಯನ್ನು ಹೊಂದು”ವುದಕ್ಕಾಗಿ, ವಿಜಯಿಗಳಿಗೆ ಕೊಡಲ್ಪಡುವ ಟ್ರೋಫಿಗಳನ್ನು ಹಾಗೂ ಪುರಸ್ಕಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ಹಾಗೆ ಮಾಡುತ್ತಾರೆ.—1 ಕೊರಿಂಥ 9:25.
ತದ್ರೀತಿಯಲ್ಲಿ, ಗಮನ ಕೊಡಲಿಕ್ಕಾಗಿ ನೀವು ಪ್ರಚೋದಿತರಾಗಬೇಕು! ವಿಲಿಯಮ್ ಏಚ್. ಆರ್ಮ್ಸ್ಟ್ರಾಂಗ್ ಅವರಿಂದ ಬರೆಯಲ್ಪಟ್ಟ, ಅಧ್ಯಯನವು ಕಷ್ಟಕರವಾದ ಕೆಲಸವಾಗಿದೆ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಒಂದು ವಿಷಯದಲ್ಲಿ ಆಸಕ್ತಿಯನ್ನು ಹೊಂದಿರುವುದು ವಿದ್ಯಾರ್ಥಿಯ ಜವಾಬ್ದಾರಿಯಾಗಿದೆ. ನಿಮ್ಮ ಪರವಾಗಿ ಯಾರೂ ಅದರಲ್ಲಿ ಆಸಕ್ತಿವಹಿಸಲು ಸಾಧ್ಯವಿಲ್ಲ, ಮತ್ತು ನೀವೇ ಆಸಕ್ತಿಯನ್ನು ತೋರಿಸಬೇಕೇ ವಿನಃ ಯಾರೊಬ್ಬರೂ ನಿಮ್ಮ ಆಸಕ್ತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ.” ನಿಮ್ಮ ಸುತ್ತಲೂ ಇರುವ ಲೋಕವನ್ನು ಅರ್ಥಮಾಡಿಕೊಳ್ಳಲು ಜ್ಞಾನವು ಕೀಲಿ ಕೈಯಾಗಿದೆ. ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳುವಲ್ಲಿ, ನೀವು ಹೆಚ್ಚು ವಿಷಯಗಳನ್ನು ಕಲಿಯಸಾಧ್ಯವಿದೆ. “ವಿವೇಕಿಗೆ ತಿಳುವಳಿಕೆಯು ಸುಲಭವಾಗಿ ದೊರೆಯುವದು” ಎಂದು ಜ್ಞಾನೋಕ್ತಿ 14:6 ಹೇಳುತ್ತದೆ. ಶಾಲೆಯಲ್ಲಿ ಕಲಿಯುವ ಎಲ್ಲ ವಿಷಯಗಳನ್ನು ನೀವು ಜ್ಞಾಪಕದಲ್ಲಿಟ್ಟುಕೊಳ್ಳಲು ಸಾಧ್ಯವಾಗದೆ ಇರಬಹುದು, ಆದರೆ ಕಡಿಮೆಪಕ್ಷ ನಿಮ್ಮ ಆಲೋಚನಾ ಸಾಮರ್ಥ್ಯವನ್ನು ಸಂರಕ್ಷಿಸಿಕೊಳ್ಳಲು ಹಾಗೂ ಹೆಚ್ಚಿಸಿಕೊಳ್ಳಲು ಶಾಲೆಯು ನಿಮಗೆ ಸಹಾಯ ಮಾಡುತ್ತದೆ. (ಜ್ಞಾನೋಕ್ತಿ 1:4ನ್ನು ಹೋಲಿಸಿರಿ.) ಮಾನಸಿಕ ಶಿಸ್ತು ಹಾಗೂ ಮನಸ್ಸನ್ನು ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೊಂದಿರುವುದು, ನಿಮ್ಮ ಜೀವಮಾನ ಕಾಲದಲ್ಲೆಲ್ಲ ನಿಮಗೆ ಪ್ರಯೋಜನವನ್ನು ತರುವುದು.
ಬೋರಾದ ಹಾಗೂ ಬೋರ್ ಮಾಡುವ ಶಿಕ್ಷಕರು
ನಮ್ಮ ಶಿಕ್ಷಕರಿಗೇ ಪಾಠದಲ್ಲಿ ಆಸಕ್ತಿಯಿಲ್ಲ ಎಂಬಂತೆ ತೋರುತ್ತದೆ ಎಂದು ಕೆಲವು ಹದಿವಯಸ್ಕರು ದೂರುಹೇಳುತ್ತಾರೆ. ಜೆಸ್ಸೀ ಎಂಬ ಹೆಸರಿನ ಒಬ್ಬ ಯುವಕನು ಹೇಳುವುದು: “ಶಿಕ್ಷಕರು ನಿಮ್ಮ ಮುಂದೆ ನಿಲ್ಲುತ್ತಾರೆ, ಏನೋ ಒಂದು ವಿಷಯವನ್ನು ಹೇಳಿಬಿಡುತ್ತಾರೆ, ನಿಮಗೆ ಸ್ವಲ್ಪ ಮನೆಗೆಲಸವನ್ನು ಕೊಡುತ್ತಾರೆ, ಮತ್ತು ನಿಮ್ಮನ್ನು ತರಗತಿಯಿಂದ ಕಳುಹಿಸಿಬಿಡುತ್ತಾರೆ. ಅವರು ಅಸಡ್ಡೆ ತೋರಿಸುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ. ಇದು ಒಂದು ಪ್ರಾಮುಖ್ಯ ವಿಷಯವಾಗಿದೆ ಎಂಬಂತಹ ರೀತಿಯಲ್ಲಿ ಶಿಕ್ಷಕರು ವರ್ತಿಸುವುದಿಲ್ಲ, ಆದುದರಿಂದ ನಾವೂ ಗಮನ ಕೊಡುವ ಗೋಜಿಗೇ ಹೋಗುವುದಿಲ್ಲ.”
ಹಾಗಾದರೆ, ಗಮನ ಕೊಡುವುದು ಸುಮ್ಮನೆ ಕಾಲಹರಣ ಮಾಡುವುದಾಗಿದೆ ಎಂಬ ತೀರ್ಮಾನಕ್ಕೆ ನೀವು ಬರಬೇಕೊ? ಇಲ್ಲ. ಅನೇಕ ಶಿಕ್ಷಕರು ಒಂದು ವಿಷಮ ಚಕ್ರದಲ್ಲಿ ಸಿಕ್ಕಿಕೊಂಡಿರಬಹುದು. ಕೋಲನ್ ಎಂಬ ಹೆಸರಿನ ಒಬ್ಬ ಹದಿವಯಸ್ಕನು ವಿವರಿಸುವುದು: “ಯಾರೂ ಶಿಕ್ಷಕರಿಗೆ ಗಮನ ಕೊಡುವುದಿಲ್ಲ, ಆದುದರಿಂದ ಯಾರಿಗೂ ಕಲಿಯುವ ಮನಸ್ಸಿಲ್ಲ ಎಂದು ಶಿಕ್ಷಕರು ನೆನಸುತ್ತಾರೆ. ಇದರಿಂದಾಗಿ ಅವರು ಕಲಿಸುವಾಗ ಹೆಚ್ಚು ಪ್ರಯತ್ನ ಹಾಗೂ ಹುರುಪನ್ನು ತೋರಿಸುವುದಿಲ್ಲ.”
ನೀವು ನಂಬಿ ಇಲ್ಲವೆ ಬಿಡಿ, ಅವರ ವರ್ತನಾ ರೀತಿಯನ್ನು ನಿಲ್ಲಿಸುವ ಸಾಮರ್ಥ್ಯ ನಿಮಗಿರಬಹುದು. ಹೇಗೆ? ನೀವು ಅವರಿಗೆ ಗಮನ ಕೊಡಬೇಕಷ್ಟೇ. ಕೇವಲ ಒಬ್ಬ ಆಸಕ್ತ ವಿದ್ಯಾರ್ಥಿಯಿರುವುದಾದರೂ, ಬೋರಾಗಿರುವ ಶಿಕ್ಷಕರೊಬ್ಬರು ತಮ್ಮ ಕಲಿಸುವಿಕೆಯಲ್ಲಿ ನವಚೈತನ್ಯವುಳ್ಳವರಾಗಿ ಕಲಿಸುವಂತೆ ಮಾಡುವುದು. ಕೆಲವು ಶಿಕ್ಷಕರಿಗೆ ತರಗತಿಯ ಆಸಕ್ತಿಯನ್ನು ಅಂಕೆಯಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ ಎಂಬುದು ಒಪ್ಪತಕ್ಕ ವಿಷಯವೇ. ಆದರೆ ನೀವು ಹಗಲುಗನಸು ಕಾಣಲು ತೊಡಗುವ ಮುಂಚೆ, ಸ್ವತಃ ಹೀಗೆ ಪ್ರಶ್ನಿಸಿಕೊಳ್ಳಿ, ‘ಅವರು ಏನು ಹೇಳುತ್ತಿದ್ದಾರೋ ಅದು ಅವರಿಗೆ ತಿಳಿದಿದೆಯೊ?’ ಹಾಗಾದರೆ, ಅವರಿಂದ ಏನಾದರೂ ಒಂದು ವಿಷಯವನ್ನು ಕಲಿತುಕೊಳ್ಳುವ ಮನಸ್ಸು ಮಾಡಿರಿ. ಜಾಗರೂಕತೆಯಿಂದ ಕಿವಿಗೊಡಿರಿ—ಮನಸ್ಸನ್ನು ಕೇಂದ್ರೀಕರಿಸಿರಿ! ತರಗತಿಯ ಚರ್ಚೆಗಳಲ್ಲಿ ಒಳಗೂಡಿರಿ. ಯುಕ್ತವಾದ ಪ್ರಶ್ನೆಗಳನ್ನು ಕೇಳಿರಿ. ಪ್ರೌಢ ಶಾಲೆಯಲ್ಲಿ ಅಭ್ಯಾಸಿಸುವ ವಿಧ (ಇಂಗ್ಲಿಷ್) ಎಂಬ ಪುಸ್ತಕವು ಹೀಗೆ ತಿಳಿಸುತ್ತದೆ: “ಶಿಕ್ಷಕರು ಬೋರ್ಡಿನ ಮೇಲೆ ಬರೆಯುವ ಅಥವಾ ಬಾಯಿಮಾತಿನಲ್ಲಿ ಒತ್ತಿಹೇಳುವ ವಿಷಯಗಳು, ಚಿತ್ರಗಳು, ಶಬ್ದಗಳು, ನಕ್ಷೆಗಳು, ಅರ್ಥನಿರೂಪಣೆಗಳು, ಹಾಗೂ ಮುಖ್ಯ ವಿಚಾರಗಳನ್ನು ಬರೆದುಕೊಳ್ಳುವುದನ್ನು ಅನೇಕ ವಿದ್ಯಾರ್ಥಿಗಳು ಸಹಾಯಕರವಾದದ್ದಾಗಿ ಕಂಡುಕೊಳ್ಳುತ್ತಾರೆ.”
“ಹೆಚ್ಚು ಗಮನಕೊಡು”ವುದು
ಕ್ರೈಸ್ತ ಕೂಟಗಳಲ್ಲಿ ಕಿವಿಗೊಡುವುದು ಇದಕ್ಕಿಂತಲೂ ಹೆಚ್ಚು ಅತ್ಯಾವಶ್ಯಕವಾಗಿದೆ. ಜೆಸ್ಸೀ ಒಪ್ಪಿಕೊಳ್ಳುವುದು: “ಕೆಲವೊಮ್ಮೆ ಯುವ ಜನರು, ಕೂಟಗಳಂತಹ ವಿಷಯಗಳಿಗೆ ಗಮನ ಕೊಡುವುದಿಲ್ಲ, ಏಕೆಂದರೆ ಕೂಟಗಳು ಎಷ್ಟು ಪ್ರಾಮುಖ್ಯವಾಗಿವೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ.” ಇಬ್ರಿಯ 2:1ರಲ್ಲಿ (NW) ನಮಗೆ ಹೀಗೆ ಆಜ್ಞಾಪಿಸಲಾಗಿದೆ: “ನಾವು ಕೇಳಿದ ಸಂಗತಿಗಳಿಗೆ ತಪ್ಪಿಹೋದೇವೆಂದು ಭಯಪಟ್ಟು ಅವುಗಳಿಗೆ ಹೆಚ್ಚು ಗಮನ ಕೊಡಬೇಕು.” ಒಂದು ಸಭಾ ಕೂಟಕ್ಕೆ ಹಾಜರಾದ ಬಳಿಕ, ಪ್ರತಿಯೊಂದು ಭಾಷಣದಿಂದ ನೀವು ಯಾವುದಾದರೊಂದು ವಿಷಯವನ್ನು ಜ್ಞಾಪಿಸಿಕೊಳ್ಳಸಾಧ್ಯವಿದೆಯೊ? ಅಥವಾ ಕೆಲವೊಮ್ಮೆ ಆ ಕಾರ್ಯಕ್ರಮದಲ್ಲಿ ಏನು ಒಳಗೂಡಿತ್ತು ಎಂಬುದು ಸಹ ನಿಮಗೆ ಮರೆತುಹೋಗಿರುತ್ತದೊ?
ಪುನಃ ಒತ್ತಿ ಹೇಳತಕ್ಕ ವಿಷಯವೇನೆಂದರೆ, ನೀವು ಕಲಿಯುತ್ತಿರುವ ವಿಷಯದ ಪ್ರಮುಖತೆಯನ್ನು ಅರ್ಥಮಾಡಿಕೊಳ್ಳುವುದೇ ಆಗಿದೆ. ಏಕೆಂದರೆ, ನಿಮ್ಮ ಜೀವಿತವೇ ಅದರಲ್ಲಿ ಒಳಗೂಡಿದೆ! (ಯೋಹಾನ 17:3) ಆಲೋಚಿಸಲಿಕ್ಕಾಗಿ ಇನ್ನೊಂದು ಅಂಶವು ಕೊಡಲ್ಪಟ್ಟಿದೆ: ನೀವು ಬೈಬಲಿನ ಕುರಿತು ಕಲಿಯುತ್ತಿರುವಾಗ, ನೀವು ಸ್ವತಃ ದೇವರಂತೆ ಆಲೋಚಿಸಲು ಕಲಿಯುತ್ತಿದ್ದೀರಿ. (ಯೆಶಾಯ 55:8, 9) ಮತ್ತು ನೀವು ಕಲಿಯುವ ವಿಷಯವನ್ನು ಅನ್ವಯಿಸುವಾಗ, ಬೈಬಲು ಯಾವುದನ್ನು “ನೂತನಸ್ವಭಾವ” ಎಂದು ಕರೆಯುತ್ತದೋ ಅದನ್ನು ನೀವು ಧರಿಸಿಕೊಳ್ಳುತ್ತಿದ್ದೀರಿ. (ಕೊಲೊಸ್ಸೆ 3:9, 10) ಇನ್ನೊಂದು ಕಡೆಯಲ್ಲಿ, ನೀವು ಗಮನ ಕೊಡಲು ತಪ್ಪಿಹೋಗುವಲ್ಲಿ, ನಿಮ್ಮ ಜೀವಿತದಲ್ಲಿ ಅಗತ್ಯವಾದ ಪ್ರಗತಿಗಳನ್ನು ನೀವು ಮಾಡದಿರಬಹುದು; ನಿಮ್ಮ ಆತ್ಮಿಕ ಬೆಳವಣಿಗೆಯನ್ನು ನೀವೇ ತಡೆಯುವಿರಿ. ನಾವೆಲ್ಲರೂ ನಮ್ಮ ಮನಸ್ಸುಗಳನ್ನು ಅಪಕರ್ಷಣೆಗಳಿಗೆ ಒಳಗಾಗುವಂತೆ ಬಿಟ್ಟುಕೊಡುತ್ತೇವೆ ಎಂಬುದು ಯೆಹೋವನಿಗೆ ಗೊತ್ತು. ಆತನು ಬೇಡಿಕೊಳ್ಳುವುದು: “ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, . . . ಕಿವಿಯನ್ನು ಇತ್ತ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ; ಆಲಿಸಿದರೆ ಬದುಕಿ ಬಾಳುವಿರಿ.”—ಯೆಶಾಯ 55:2, 3.
ಕೂಟಗಳಿಂದ ಹೆಚ್ಚಿನ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ?
ಹಾಗಿದ್ದರೂ, ಆರಂಭದಲ್ಲಿ ಕೂಟಗಳಿಗೆ ಹೆಚ್ಚು ಗಮನ ಕೊಡುವುದು ತುಂಬ ಕಷ್ಟಕರವಾಗಿರಬಹುದು. ಆದರೆ ನಾವು ಮನಸ್ಸನ್ನು ಕೇಂದ್ರೀಕರಿಸಲು ಹೆಚ್ಚೆಚ್ಚು ರೂಢಿಮಾಡಿಕೊಂಡಷ್ಟು, ನಮ್ಮ ಮಿದುಳು ಆ ಕೆಲಸಕ್ಕೆ ಹೊಂದಿಕೊಳ್ಳುತ್ತದೆ ಎಂದು ಸಂಶೋಧಕರು ಪ್ರತಿಪಾದಿಸುತ್ತಾರೆ. ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ಮ್ಯಾಥ್ಯೂ, ಕೂಟಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸುವ ರೂಢಿಮಾಡಿಕೊಂಡನು. ಅವನು ಹೇಳುವುದು: “ಗಮನ ಕೊಡಲಿಕ್ಕಾಗಿ ನನ್ನನ್ನು ಶಿಸ್ತುಪಡಿಸಿಕೊಳ್ಳಬೇಕು ಎಂಬುದನ್ನು ನಾನು ಕಂಡುಕೊಂಡೆ. ಸ್ವಲ್ಪ ಸಮಯದ ಬಳಿಕ ಅದು ಸರಿಹೋಗುತ್ತದೆ, ಮತ್ತು ನೀವು ದೀರ್ಘ ಸಮಯದ ವರೆಗೆ ಗಮನ ಕೊಡಬಲ್ಲಿರಿ.” ಕೂಟಗಳನ್ನು ಆನಂದದಾಯಕವಾಗಿ ಮಾಡುವುದರಲ್ಲಿ ಸಹಾಯ ಮಾಡುವ ಏಕಮಾತ್ರ ಅಂಶವನ್ನೂ ಮ್ಯಾಥ್ಯೂ ಸೂಚಿಸುತ್ತಾನೆ. ಅವನು ಹೇಳುವುದು: “ನಾನು ಮುಂದಾಗಿಯೇ ಅಭ್ಯಾಸಮಾಡುತ್ತೇನೆ.” ತದ್ರೀತಿಯಲ್ಲಿ, ಶರೀಸ್ ಎಂಬ ಹೆಸರಿನ ಯುವತಿಯು ಹೇಳುವುದು: “ನಾನು ಮುಂಚಿತವಾಗಿಯೇ ತಯಾರಿ ಮಾಡಿರುವಾಗ, ನನಗೆ ಕೂಟಗಳಿಗೆ ಹಾಜರಾಗುವುದು ಹೆಚ್ಚು ಆನಂದದಾಯಕವಾಗಿರುತ್ತದೆ. ಭಾಷಣಗಳು ಹೆಚ್ಚು ತಲ್ಲೀನವಾಗುವಂತೆ ಮಾಡುತ್ತವೆ ಮತ್ತು ಆ ಭಾಷಣಗಳು ನನಗೆ ಹೆಚ್ಚು ಅರ್ಥಭರಿತವಾಗಿರುತ್ತವೆ.”
ಅಪಕರ್ಷಣೆಯನ್ನು ಉಂಟುಮಾಡುವಂತಹ ಆಲೋಚನೆಗಳನ್ನು ಹತೋಟಿಯಲ್ಲಿಡುವುದು ಸಹ ಪ್ರಾಮುಖ್ಯವಾದದ್ದಾಗಿದೆ. ನಿಮ್ಮ ಮನಸ್ಸಿನಲ್ಲಿ ಸೂಕ್ತವಾದ ಅನೇಕ ಚಿಂತೆಗಳು ಇರಬಹುದು ನಿಜ: ಅಂದರೆ, ಮುಂದಿನ ವಾರ ಇರುವಂತಹ ಒಂದು ಕಿರುಪರೀಕ್ಷೆ, ನಿಮಗೆ ಒತ್ತಡವನ್ನು ಉಂಟುಮಾಡುತ್ತಿರುವ ಒಂದು ವ್ಯಕ್ತಿತ್ವ ಸಮಸ್ಯೆ, ನೀವು ತೆರಬೇಕಾಗಿರುವ ಕೆಲವು ವೆಚ್ಚಗಳು. ಆದರೆ ಯೇಸು ಈ ಸಲಹೆಯನ್ನು ನೀಡಿದನು: “ಚಿಂತೆಮಾಡಿಮಾಡಿ ಒಂದು ಮೊಳ ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು? ಆದದರಿಂದ ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು.” (ಮತ್ತಾಯ 6:27, 34) ಸಭಾ ಕೂಟಗಳಲ್ಲಿ ಆಸಕ್ತಿಯಿಂದ ಗಮನ ಕೊಡುವುದು, ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲವಾದರೂ, ನೀವು ಆತ್ಮಿಕವಾಗಿ ಚೈತನ್ಯವನ್ನು ಪಡೆದುಕೊಳ್ಳಲು, ಹಾಗೂ ಸಮಸ್ಯೆಗಳನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಲು ನಿಮಗೆ ಸಹಾಯ ಮಾಡುವುದು.—2 ಕೊರಿಂಥ 4:16ನ್ನು ಹೋಲಿಸಿರಿ.
ಕಿವಿಗೊಟ್ಟು ಕೇಳುವುದು ಸಹ ನೀವು ಆಸಕ್ತಿಯಿಂದ ಗಮನ ಕೊಡುವಂತೆ ನಿಮಗೆ ಸಹಾಯ ಮಾಡುವುದು. ಮ್ಯಾಥ್ಯೂ ಹೇಳುವುದು: “ಭಾಷಣ ನೀಡುವಾಗ ಭಾಷಣಕರ್ತನು ಯಾವ ವಿಷಯವನ್ನು ಹೊರತರುವನೆಂಬುದನ್ನು ಮುಂಭಾವಿಸಲು ನಾನು ಪ್ರಯತ್ನಿಸುತ್ತೇನೆ, ತದನಂತರ ಅವನು ಅದನ್ನು ಹೇಗೆ ಮಾಡುತ್ತಾನೆ ಎಂಬುದನ್ನು ಗಮನಿಸುತ್ತೇನೆ.” ನೀವು ಹೀಗೆ ಪ್ರಶ್ನಿಸಿಕೊಳ್ಳಿರಿ, ‘ಚರ್ಚಿಸಲ್ಪಡುತ್ತಿರುವ ವಿಷಯದಲ್ಲಿರುವ ಮುಖ್ಯ ಅಂಶಗಳು ಯಾವುವು? ಕಲಿಸಲ್ಪಡುತ್ತಿರುವ ವಿಷಯವನ್ನು ನಾನು ಹೇಗೆ ಉಪಯೋಗಿಸಸಾಧ್ಯವಿದೆ?’ ಭಾಷಣಕರ್ತನು ಮುಂದೆ ಏನು ಹೇಳಲಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ಮುಂಭಾವಿಸುವುದು ಸಹ, ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡಬಲ್ಲದು. ಅವನ ತರ್ಕಸರಣಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಅವನು ಉಪಯೋಗಿಸುವ ಶಾಸ್ತ್ರೀಯ ಪ್ರಮಾಣಗಳನ್ನು ಗಮನಿಸಿರಿ. ಅವನ ಭಾಷಣದ ಮುಖ್ಯಾಂಶಗಳನ್ನು ಪರಿಶೀಲಿಸಿರಿ ಹಾಗೂ ಅದರ ಸಾರಾಂಶವನ್ನು ಗ್ರಹಿಸಿರಿ. ಸಂಕ್ಷಿಪ್ತವಾದ, ಅರ್ಥಭರಿತ ಟಿಪ್ಪಣಿಗಳನ್ನು ಬರೆದುಕೊಳ್ಳಿರಿ. ಒಂದು ಭಾಗದಲ್ಲಿ ಸಭಿಕರ ಭಾಗವಹಿಸುವಿಕೆ ಇರುವಾಗ, ಅದರಲ್ಲಿ ಭಾಗವಹಿಸಿರಿ! ಹಾಗೆ ಮಾಡುವಲ್ಲಿ, ನೀವು ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ಹಾಗೂ ನಿಮ್ಮ ಆಲೋಚನೆಗಳನ್ನು ನಿಯಂತ್ರಿಸಿಕೊಳ್ಳಲು ಸಹಾಯ ಮಾಡಸಾಧ್ಯವಿದೆ.
ಒಬ್ಬ ಭಾಷಣಕರ್ತನು ಹುರುಪಿನಿಂದ ಭಾಷಣ ನೀಡದಿದ್ದಲ್ಲಿ ಅಥವಾ ಅವನು ಮಂಕಾಗಿ ಭಾಷಣ ಕೊಡುವಲ್ಲಿ, ಕಿವಿಗೊಡುವುದು ಒಂದು ಪಂಥಾಹ್ವಾನವಾಗಿರಸಾಧ್ಯವಿದೆ ಎಂಬುದು ಒಪ್ಪತಕ್ಕ ವಿಷಯವೇ. ಅಪೊಸ್ತಲ ಪೌಲನ ಮಾತನಾಡುವ ಸಾಮರ್ಥ್ಯದ ಕುರಿತು ಪ್ರಥಮ ಶತಮಾನದ ಕೆಲವು ಕ್ರೈಸ್ತರು ಏನು ಹೇಳಿದರೆಂಬುದನ್ನು ಜ್ಞಾಪಿಸಿಕೊಳ್ಳಿರಿ: “ಅವನು ಸಾಕ್ಷಾತ್ತಾಗಿ ಬಂದರೆ ಅವನು ನಿರ್ಬಲನು, ಅವನ ಮಾತು ಗಣನೆಗೆ ಬಾರದ್ದು.” (2 ಕೊರಿಂಥ 10:10) ಆದರೆ “ನಾನು ವಾಕ್ಚಾತುರ್ಯದಲ್ಲಿ ನಿಪುಣನಲ್ಲದಿದ್ದರೂ ಜ್ಞಾನದಲ್ಲಿ ನಿಪುಣನಾಗಿದ್ದೇನೆ” ಎಂದು ಹೇಳುವ ಮೂಲಕ ಪೌಲನು ಅಂತಹ ಟೀಕೆಗೆ ಪ್ರತಿಕ್ರಿಯಿಸಿದನು. (2 ಕೊರಿಂಥ 11:6) ಹೌದು, ಪೌಲನ ಮಾತುಗಳನ್ನು ಆಲಿಸುತ್ತಿದ್ದವರು, ಅವನ ಮಾತಿನ ಸಾಮರ್ಥ್ಯವನ್ನು ನೋಡದೆ, ಅವನು ಹೇಳುತ್ತಿದ್ದ ವಿಷಯದ ಸಾರಾಂಶಕ್ಕೆ ಗಮನ ಕೊಟ್ಟಿರುತ್ತಿದ್ದಲ್ಲಿ, ಅವರು “ದೇವರ ಅಗಾಧವಾದ ವಿಷಯಗಳನ್ನು” ಕಲಿಯುವ ಸಾಧ್ಯತೆಯಿತ್ತು. (1 ಕೊರಿಂಥ 2:10) ತದ್ರೀತಿಯಲ್ಲಿ, ನೀವು ಮನಸ್ಸನ್ನು ಕೇಂದ್ರೀಕರಿಸಿ, ಕಿವಿಗೊಡುವಲ್ಲಿ, ಒಬ್ಬ “ಮಂಕಾದ” ಭಾಷಣಕರ್ತನಿಂದಲೂ ನೀವು ವಿಷಯಗಳನ್ನು ಕಲಿತುಕೊಳ್ಳಸಾಧ್ಯವಿದೆ. ಯಾರಿಗೆ ಗೊತ್ತು? ಅವನು ಒಂದು ವಿಷಯವನ್ನು ಬೇರೆ ಅರ್ಥದಲ್ಲಿ ವಿವರಿಸಬಹುದು ಅಥವಾ ನೀವು ಈ ಹಿಂದೆ ಎಂದೂ ಆಲೋಚಿಸಿರದಂತಹ ರೀತಿಯಲ್ಲಿ ಅವನು ಒಂದು ವಚನದ ಅನ್ವಯವನ್ನು ಮಾಡಬಹುದು.
ಲೂಕ 8:18ರಲ್ಲಿರುವ ಯೇಸುವಿನ ಮಾತುಗಳು ವಿಷಯಗಳನ್ನು ಚೆನ್ನಾಗಿ ಸಾರಾಂಶಿಸುತ್ತವೆ: “ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ.” ಗಮನವನ್ನು ಕೊಡಲು ಹಾಗೂ ಮನಸ್ಸನ್ನು ಅಲೆದಾಡುವಂತೆ ಬಿಡದಿರಲು ಕಲಿಯುವುದು, ಪ್ರಯತ್ನ ಹಾಗೂ ಅಭ್ಯಾಸವನ್ನು ಅಗತ್ಯಪಡಿಸುತ್ತದೆ. ಆದರೆ ಸಕಾಲದಲ್ಲಿ ನೀವು ಪ್ರಯೋಜನಗಳನ್ನು ಹೊಂದುವಿರಿ. ಮನಸ್ಸನ್ನು ಕೇಂದ್ರೀಕರಿಸಲು ಕಲಿಯುವುದು, ನೀವು ಶಾಲೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳುವಂತೆ ಮಾಡುತ್ತದೆ—ಮತ್ತು ಹೆಚ್ಚು ಪ್ರಾಮುಖ್ಯವಾಗಿ, ಆತ್ಮಿಕ ಪ್ರಗತಿಯನ್ನು ಅರ್ಥೈಸುತ್ತದೆ!
[ಅಧ್ಯಯನ ಪ್ರಶ್ನೆಗಳು]
a ನಮ್ಮ ಆಗಸ್ಟ್ 8, 1998ರ ಸಂಚಿಕೆಯಲ್ಲಿ ಬಂದಿರುವ, “ಯುವ ಜನರು ಪ್ರಶ್ನಿಸುವುದು . . . ನನಗೆ ಲಕ್ಷ್ಯಕೊಡಲು ಸಾಧ್ಯವಾಗುವುದಿಲ್ಲವೇಕೆ?” ಎಂಬ ಲೇಖನವನ್ನು ನೋಡಿರಿ.
[ಪುಟ 21 ರಲ್ಲಿರುವ ಚಿತ್ರ]
ನೀವು ಕೇಳಿಸಿಕೊಳ್ಳುವ ವಿಷಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುವುದು, ಗಮನ ಕೊಡುವುದಕ್ಕೆ ಕೀಲಿ ಕೈಯಾಗಿದೆ