ನೀವು ನಿಜವಾದ ದೀನಭಾವವನ್ನು ಹೇಗೆ ತೋರಿಸಸಾಧ್ಯವಿದೆ?
ದೇವರ ದೃಷ್ಟಿಯಲ್ಲಿ ನಿಜವಾದ ದೀನಭಾವವು ಅತ್ಯಮೂಲ್ಯವಾಗಿದೆ. ಯಾಕೋಬನು ಬರೆದುದು: “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” (ಯಾಕೋಬ 4:6) ಇಲ್ಲಿ ಯಾಕೋಬನು, ಹೀಬ್ರು ಶಾಸ್ತ್ರವಚನಗಳಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ಅನೇಕ ಅಭಿಪ್ರಾಯಗಳ ಬಗ್ಗೆ ಸೂಚಿಸಿದ್ದಿರಸಾಧ್ಯವಿದೆ. “ಯೆಹೋವನು ಮಹೋನ್ನತನು; ಆದರೂ ದೀನರನ್ನು ಲಕ್ಷಿಸುತ್ತಾನೆ; ಗರ್ವಿಷ್ಠರನ್ನು ದೂರದಿಂದಲೇ ಗುರುತುಹಿಡಿಯುತ್ತಾನೆ.” “ಸಾಮಾನ್ಯರ ಗರ್ವದೃಷ್ಟಿಯು ತಗ್ಗಿಹೋಗುವದು, ಮುಖಂಡರ ಅಹಂಕಾರವು ಕುಗ್ಗಿಹೋಗುವದು, ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು.” “ಯಾರು ಧರ್ಮವನ್ನು ತಿರಸ್ಕರಿಸುವರೋ ಅವರನ್ನು ಆತನು [ದೇವರು] ತಿರಸ್ಕರಿಸುವನು. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುವನು.”—ಕೀರ್ತನೆ 138:6; ಯೆಶಾಯ 2:11; ಜ್ಞಾನೋಕ್ತಿ 3:34.
ಅಪೊಸ್ತಲ ಪೌಲನು ಸಹ ದೀನಭಾವವನ್ನು ಉತ್ತೇಜಿಸಿದನು. ಅವನು ಬರೆದುದು: “ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.”—1 ಪೇತ್ರ 5:5.
ದೀನಭಾವದ ವಿಷಯದಲ್ಲಿ ಕ್ರಿಸ್ತನ ಮಾದರಿ
ದೀನರಾಗಿರುವುದರಲ್ಲಿ ಯಾವ ಒಳ್ಳೇತನವಿದೆ ಅಥವಾ ಅದರಿಂದ ಏನು ಲಾಭವಿದೆ? ಎಂದು ನೀವು ಕೇಳಬಹುದು. ಒಬ್ಬ ನಿಜ ಕ್ರೈಸ್ತನಾಗಲು ಹೆಣಗಾಡುತ್ತಿರುವ ವ್ಯಕ್ತಿಯೊಬ್ಬನು, ದೀನಭಾವದವನಾಗಿದ್ದು, ಕ್ರಿಸ್ತನಂತಿರಬೇಕು. ಸ್ವರ್ಗೀಯ ಸ್ಥಾನದಿಂದ ಭೂಮಿಗೆ ಬರುವ ಅಪೂರ್ವ ನೇಮಕವನ್ನು ಸ್ವೀಕರಿಸಿ, ದೀನ ಮಾನವನಾಗಿ ಪರಿಣಮಿಸಿ, ದೇವದೂತರಿಗಿಂತಲೂ ಕೆಳಗಿನ ಸ್ಥಾನವನ್ನು ಪಡೆಯುವ ಮೂಲಕ ಯೇಸು ತನ್ನ ದೀನಭಾವವನ್ನು ತೋರಿಸಿದನು. (ಇಬ್ರಿಯ 2:7) ಅವನು ದೇವಕುಮಾರನಾಗಿದ್ದರೂ, ಅವನ ಧಾರ್ಮಿಕ ವೈರಿಗಳು ಅವನಿಗೆ ಉಂಟುಮಾಡಿದ ಅವಮಾನಗಳನ್ನು ಸಹಿಸಿದನು. ತನ್ನ ಪರೀಕ್ಷೆಗಳ ಸಮಯದಲ್ಲಿ ಅವನು ತನ್ನ ರಕ್ಷಣೆಗಾಗಿ ದೇವದೂತರ ಸೈನ್ಯದಳವನ್ನು ಕರೆಯಲು ಸಮರ್ಥನಾಗಿದ್ದರೂ, ಹಾಗೆ ಮಾಡದೆ ಶಾಂತಭಾವವನ್ನು ಕಾಪಾಡಿಕೊಂಡನು.—ಮತ್ತಾಯ 26:53.
ಕೊನೆಗೆ, ಯೇಸು ಯಾತನಾ ಕಂಭದ ಮೇಲೆ ಅಪಮಾನಕರ ರೀತಿಯಲ್ಲಿ ನೇತುಹಾಕಲ್ಪಟ್ಟನಾದರೂ, ತನ್ನ ತಂದೆಗೆ ನಂಬಿಗಸ್ತನಾಗಿ ಉಳಿದನು. ಆದುದರಿಂದ, ಪೌಲನು ಅವನ ಕುರಿತು ಹೀಗೆ ಬರೆಯಸಾಧ್ಯವಿತ್ತು: “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ. ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.”—ಫಿಲಿಪ್ಪಿ 2:5-8.
ಹಾಗಾದರೆ ನಾವು ಹೇಗೆ ನಿಜವಾದ ದೀನಭಾವವನ್ನು ತೋರಿಸಸಾಧ್ಯವಿದೆ? ಪ್ರಾಯೋಗಿಕ ಸನ್ನಿವೇಶಗಳ ಕೆಳಗೆ ನಾವು ಅಹಂಕಾರದಿಂದಲ್ಲ, ಬದಲಾಗಿ ದೀನಭಾವದಿಂದ ಹೇಗೆ ಪ್ರತಿಕ್ರಿಯಿಸಸಾಧ್ಯವಿದೆ?
ಒಬ್ಬ ದೀನ ವ್ಯಕ್ತಿಯು ಪ್ರತಿಕ್ರಿಯಿಸುವ ವಿಧ
ಕೆಲಸದ ಸನ್ನಿವೇಶದಲ್ಲಿ ಒಳಗೂಡಿರುವ ದೀನಭಾವದ ಬಗ್ಗೆ ನಾವು ಪರಿಗಣಿಸೋಣ. ಅದು ಕೆಲಸದ ಸ್ಥಳದಲ್ಲಾಗಿರಬಹುದು ಅಥವಾ ಕ್ರೈಸ್ತ ಶುಶ್ರೂಷೆಯಲ್ಲಾಗಿರಬಹುದು. ಒಂದು ಕೆಲಸವನ್ನು ಯಶಸ್ವಿಕರವಾಗಿ ಮಾಡಲಿಕ್ಕಾಗಿ, ಮೇಲ್ವಿಚಾರಕರು, ಮ್ಯಾನೇಜರರು, ಹಾಗೂ ಸೂಪರ್ವೈಸರ್ಗಳ ಅಗತ್ಯವಿರಬಹುದು. ಅದಕ್ಕಾಗಿ ಯಾರಾದರೊಬ್ಬರು ತೀರ್ಮಾನಗಳನ್ನು ಮಾಡಲೇಬೇಕು. ಆಗ ನೀವು ಹೇಗೆ ವರ್ತಿಸುತ್ತೀರಿ? “ನಾನು ಏನು ಮಾಡಬೇಕು ಎಂಬುದನ್ನು ಹೇಳಲು ಅವನಿಗೆ ಯಾವ ಹಕ್ಕಿದೆ? ಈ ಕೆಲಸದಲ್ಲಿ ಅವನಿಗಿಂತಲೂ ನನಗೆ ತುಂಬ ವರ್ಷಗಳ ಅನುಭವವಿದೆ” ಎಂದು ನೀವು ತರ್ಕಿಸುತ್ತೀರೊ? ಹೌದು, ನೀವು ಅಹಂಕಾರಿಗಳಾಗಿರುವಲ್ಲಿ, ಅಧೀನತೆಯ ಪ್ರಶ್ನೆಯೆದ್ದಾಗ ನೀವು ಸಿಡಿಮಿಡಿಗೊಳ್ಳುವಿರಿ. ಇನ್ನೊಂದು ಕಡೆಯಲ್ಲಿ, ಒಬ್ಬ ದೀನ ವ್ಯಕ್ತಿಯು “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸ”ಲು ಶ್ರಮಿಸುತ್ತಾನೆ.—ಫಿಲಿಪ್ಪಿ 2:3.
ಒಬ್ಬ ಕಿರಿಯ ವ್ಯಕ್ತಿಯಿಂದ ಅಥವಾ ಒಬ್ಬ ಸ್ತ್ರೀಯಿಂದ ಸಲಹೆಯೊಂದು ಕೊಡಲ್ಪಡುವಾಗ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ನೀವು ದೀನರಾಗಿರುವಲ್ಲಿ, ಕಡಿಮೆಪಕ್ಷ ಅದನ್ನು ಮನಸ್ಸಿಗೆ ತೆಗೆದುಕೊಳ್ಳುತ್ತೀರಿ. ನೀವು ಅಹಂಕಾರಿಗಳಾಗಿರುವಲ್ಲಿ, ನೀವು ಅದರ ಬಗ್ಗೆ ಅಸಮಾಧಾನ ಪಟ್ಟುಕೊಳ್ಳುತ್ತೀರಿ ಅಥವಾ ಆ ಕೂಡಲೆ ಆ ಸಲಹೆಯನ್ನು ಧಿಕ್ಕರಿಸುತ್ತೀರಿ. ನೀವು ಯಾವುದನ್ನು ಇಷ್ಟಪಡುತ್ತೀರಿ—ವಿನಾಶಕ್ಕೆ ನಡಿಸುವ ಹೊಗಳಿಕೆ ಹಾಗೂ ಮುಖಸ್ತುತಿಯನ್ನೊ ಅಥವಾ ನಿಮ್ಮ ಒಳಿತಿಗಾಗಿ ಕೊಡಲ್ಪಡುವ ಒಂದು ಸಹಾಯಕ ಸಲಹೆಯನ್ನೊ?—ಜ್ಞಾನೋಕ್ತಿ 27:9; 29:5.
ಪ್ರತಿಕೂಲ ಪಂಥಾಹ್ವಾನವನ್ನು ನೀವು ಎದುರಿಸಬಲ್ಲಿರೊ? ನಿಮ್ಮಲ್ಲಿ ದೀನಭಾವವು ಇರುವಲ್ಲಿ, ನೀವು ಸಹ ಕಷ್ಟಕರ ಸನ್ನಿವೇಶಗಳನ್ನು ಎದುರಿಸಿ, ಅವುಗಳನ್ನು ತಾಳಿಕೊಳ್ಳಲು ಶಕ್ತರಾಗುವಿರಿ. ಯೋಬನಿಗೂ ಇಂತಹದ್ದೇ ಅನುಭವವಾಯಿತು. ನೀವು ಅಹಂಕಾರಿಗಳಾಗಿರುವಲ್ಲಿ, ನೀವು ಆಶಾಭಂಗಗೊಳ್ಳುವಿರಿ ಮತ್ತು ಘೋರ ಸನ್ನಿವೇಶಗಳು ಹಾಗೂ ಸಣ್ಣಪುಟ್ಟ ವಿಷಯಗಳ ಬಗ್ಗೆ ಉದ್ರಿಕ್ತರಾಗಲೂಬಹುದು.—ಯೋಬ 1:22; 2:10; 27:2-5.
ದೀನಭಾವವು ಪ್ರೀತಿಯುಳ್ಳದ್ದೂ ಕ್ಷಮಿಸುವಂತಹದ್ದೂ ಆಗಿದೆ
“ನನ್ನನ್ನು ಕ್ಷಮಿಸಿ. ನಾನು ತಪ್ಪುಮಾಡಿದೆ. ನೀವು ಮಾಡಿದ್ದೇ ಸರಿ” ಎಂದು ಹೇಳುವುದು ಕೆಲವರಿಗೆ ತುಂಬ ಕಷ್ಟ. ಏಕೆ? ಅತಿಯಾದ ಅಹಂಕಾರ ಇರುವುದರಿಂದಲೇ! ಆದರೆ ಒಂದು ನಿಜವಾದ ಕ್ಷಮಾಯಾಚನೆಯು, ಒಂದು ವೈವಾಹಿಕ ವ್ಯಾಜ್ಯವನ್ನು ಬಹಳ ಸುಲಭವಾಗಿ ನಿಲ್ಲಿಸಿಬಿಡಸಾಧ್ಯವಿದೆ.
ಯಾರಾದರೊಬ್ಬರು ನಿಮಗೆ ಕೋಪವನ್ನು ಉಂಟುಮಾಡುವಾಗ, ನೀವು ಅವರನ್ನು ಕ್ಷಮಿಸಲು ಸಿದ್ಧರಿದ್ದೀರೊ? ಅಥವಾ ಅಹಂಕಾರದಿಂದ ನೀವು ನಿಮ್ಮ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಂಡು, ಅನೇಕ ದಿವಸಗಳ ವರೆಗೆ ಮತ್ತು ತಿಂಗಳುಗಳ ವರೆಗೆ ಆ ವ್ಯಕ್ತಿಯೊಂದಿಗೆ ಮಾತಾಡಲು ನಿರಾಕರಿಸುತ್ತೀರೊ? ಇನ್ನೂ ಪ್ರತೀಕಾರ ತೀರಿಸಿಕೊಳ್ಳಲಿಕ್ಕಾಗಿ ನೀವು ಬದ್ಧವೈರವನ್ನು ಸಹ ಬೆಳೆಸಿಕೊಳ್ಳುತ್ತೀರೊ? ಕೆಲವು ಬದ್ಧವೈರಗಳಲ್ಲಿ ಜನರು ಕೊಲ್ಲಲ್ಪಟ್ಟಿದ್ದಾರೆ. ಈ ಬದ್ಧವೈರಗಳೇ ವ್ಯಕ್ತಿಯ ಮೇಲಣ ದ್ವೇಷದಿಂದ ಅವನ ಚಾರಿತ್ರ್ಯವಧೆಮಾಡುವುದಕ್ಕೆ ಕಾರಣವಾಗಿವೆ. ಇದಕ್ಕೆ ಪ್ರತಿಯಾಗಿ, ಒಬ್ಬ ದೀನ ವ್ಯಕ್ತಿಯು ಪ್ರೀತಿಯುಳ್ಳವನೂ ಕ್ಷಮಾಶೀಲನೂ ಆಗಿರುತ್ತಾನೆ. ಏಕೆ? ಏಕೆಂದರೆ, ಪ್ರೀತಿಯು ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಇಸ್ರಾಯೇಲ್ಯರು ತಮ್ಮ ಅಹಂಕಾರವನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸುವಲ್ಲಿ, ಯೆಹೋವನು ಅವರನ್ನು ಕ್ಷಮಿಸಲು ಸಿದ್ಧನಿದ್ದನು. ಯೇಸುವಿನ ದೀನ ಹಿಂಬಾಲಕನು, ಪದೇ ಪದೇ ಸಹ ಕ್ಷಮಿಸಲು ಸಿದ್ಧನಿರುತ್ತಾನೆ!—ಯೋವೇಲ 2:12-14; ಮತ್ತಾಯ 18:21, 22; 1 ಕೊರಿಂಥ 13:5.
ಒಬ್ಬ ದೀನ ವ್ಯಕ್ತಿಯು ‘ಮಾನಮರ್ಯಾದೆಯನ್ನು ತೋರಿಸುವುದರಲ್ಲಿ ಮೊದಲಿಗನಾಗಿರುತ್ತಾನೆ.’ (ರೋಮಾಪುರ 12:10) ನ್ಯೂ ಇಂಟರ್ನ್ಯಾಷನಲ್ ವರ್ಷನ್ ಹೀಗೆ ಓದುತ್ತದೆ: “ನಿಮಗಿಂತಲೂ ಹೆಚ್ಚಾಗಿ ಇತರರಿಗೆ ಮಾನಮರ್ಯಾದೆ ತೋರಿಸಿರಿ.” ನೀವು ಇತರರನ್ನು ಪ್ರಶಂಸಿಸಿ, ಅವರ ಸಾಮರ್ಥ್ಯಗಳು ಹಾಗೂ ಬುದ್ಧಿವಂತಿಕೆಯನ್ನು ಗಣ್ಯಮಾಡುತ್ತೀರೊ? ಅಥವಾ ಅವರ ಒಳ್ಳೆಯ ಹೆಸರಿಗೆ ಮಸಿಬಳಿಯಲಿಕ್ಕಾಗಿ ನೀವು ಯಾವಾಗಲೂ ಅವರಲ್ಲಿ ಒಂದು ತಪ್ಪನ್ನು ಹುಡುಕುತ್ತಾ ಇರುತ್ತೀರೊ? ಹೌದು, ನೀವು ಬೇರೆಯವರನ್ನು ಯಥಾರ್ಥವಾಗಿ ಹೊಗಳಲು ಶಕ್ತರಿದ್ದೀರೊ? ಹೀಗೆ ಮಾಡುವುದು ನಿಮಗೆ ಕಷ್ಟಕರವಾಗಿರುವಲ್ಲಿ, ನಿಮಗೆ ವೈಯಕ್ತಿಕ ಅಭದ್ರತೆ ಹಾಗೂ ಅಹಂಕಾರದ ಸಮಸ್ಯೆಯಿದೆ.
ಅಹಂಕಾರವಿರುವ ಒಬ್ಬ ವ್ಯಕ್ತಿಗೆ ಸಹನೆಯಿರುವುದಿಲ್ಲ. ಆದರೆ ದೀನಭಾವವುಳ್ಳ ವ್ಯಕ್ತಿಯು, ತಾಳ್ಮೆಯುಳ್ಳವನೂ ದೀರ್ಘಶಾಂತನೂ ಆಗಿರುತ್ತಾನೆ. ನಿಮ್ಮ ಕುರಿತಾಗಿ ಏನು? ನಿಮ್ಮ ದೃಷ್ಟಿಯಲ್ಲಿ ಅನುಚಿತವೆಂದು ತೋರುವ ಯಾವುದೇ ವಿಷಯವು ನಿಮ್ಮ ಮನಸ್ಸನ್ನು ಕೊರೆಯುತ್ತದೊ? ಅಂತಹ ಒಂದು ಪ್ರತಿಕ್ರಿಯೆಯು ದೀರ್ಘಶಾಂತಿಗೆ ವಿರುದ್ಧವಾಗಿದೆ. ನೀವು ದೀನರಾಗಿರುವಲ್ಲಿ, ನಿಮ್ಮ ಬಗ್ಗೆ ನೀವು ತುಂಬ ಹೆಮ್ಮೆಪಟ್ಟುಕೊಳ್ಳುವುದಿಲ್ಲ. ಯೇಸುವಿನ ಶಿಷ್ಯರು ಹೆಮ್ಮೆಪಟ್ಟುಕೊಂಡಾಗ ಏನು ಸಂಭವಿಸಿತು ಎಂಬುದನ್ನು ಜ್ಞಾಪಿಸಿಕೊಳ್ಳಿ. ತಮ್ಮಲ್ಲಿ ಯಾರು ಹೆಚ್ಚು ಪ್ರಮುಖರು ಎಂಬ ವಿಷಯದ ಕುರಿತು ಅವರಲ್ಲಿ ತೀವ್ರವಾದ ವಾಗ್ವಾದಗಳುಂಟಾದವು. “ನಾವು ಆಳುಗಳು, ಪ್ರಯೋಜನವಿಲ್ಲದವರು” ಎಂಬುದನ್ನು ಅವರು ಮರೆತುಬಿಟ್ಟರು!—ಲೂಕ 17:10; 22:24; ಮಾರ್ಕ 10:35-37, 41.
ಫ್ರೆಂಚ್ ಬರಹಗಾರನಾದ ವೋಲ್ಟೈರ್ ದೀನಭಾವವನ್ನು, “ವಿನಯಶೀಲ ಆತ್ಮವು . . . ಅಹಂಕಾರವನ್ನು ನಿವಾರಿಸುವ ಮದ್ದು” ಎಂದು ವರ್ಣಿಸಿದನು. ಹೌದು, ದೀನಭಾವವು ದೀನಮನಸ್ಸಾಗಿದೆ. ಒಬ್ಬ ದೀನ ವ್ಯಕ್ತಿಯು ಅಹಂಕಾರಿಯಾಗಿರುವುದಿಲ್ಲ, ಬದಲಾಗಿ ವಿನಯಿಯಾಗಿರುತ್ತಾನೆ. ಅವನು ಗೌರವಾರ್ಹನೂ ದಯಾಪರನೂ ಆಗಿರುತ್ತಾನೆ.
ಹಾಗಾದರೆ ನಾವು ದೀನರಾಗಿರಲು ಏಕೆ ಹೆಣಗಾಡಬೇಕು? ಏಕೆಂದರೆ ದೀನಭಾವವು ದೇವರ ಅನುಗ್ರಹವನ್ನು ಪಡೆಯುತ್ತದೆ ಮತ್ತು ದೈವಿಕ ಮಾರ್ಗದರ್ಶನವನ್ನು ಪಡೆದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ದಾನಿಯೇಲನು ದೀನಭಾವವನ್ನು ತೋರಿಸಿದ್ದ ಕಾರಣ, ಯೆಹೋವನು ಆ ಪ್ರವಾದಿಯನ್ನು “ಅತಿಪ್ರಿಯ”ನಾಗಿ ಪರಿಗಣಿಸಿದನು ಮತ್ತು ಒಂದು ದರ್ಶನದ ಬಗ್ಗೆ ತಿಳಿಸಲಿಕ್ಕಾಗಿ ದೇವರು ಒಬ್ಬ ದೇವದೂತನನ್ನು ಅವನ ಬಳಿಗೆ ಕಳುಹಿಸಿದನು! (ದಾನಿಯೇಲ 9:23; 10:11, 19) ದೀನಭಾವವು ಅನೇಕ ಪ್ರತಿಫಲಗಳನ್ನು ತರುತ್ತದೆ. ನಿಮ್ಮನ್ನು ಪ್ರೀತಿಸುವ ನಿಜ ಸ್ನೇಹಿತರನ್ನು ಅದು ಸಂಪಾದಿಸುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಅದು ಯೆಹೋವನಿಂದ ಆಶೀರ್ವಾದಗಳನ್ನು ತರುತ್ತದೆ. “ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ.”—ಜ್ಞಾನೋಕ್ತಿ 22:4.
[ಪುಟ 7 ರಲ್ಲಿರುವ ಚಿತ್ರ]
ಕ್ಷಮಾಯಾಚನೆಯ ಒಂದು ನಮ್ರ ನುಡಿಯು, ಜೀವಿತವನ್ನು ಹೆಚ್ಚು ಸುಗಮಗೊಳಿಸಬಲ್ಲದು