ಸೀಲ—ಪ್ರೋತ್ಸಾಹನೆಯ ಮೂಲ
ಕ್ರೈಸ್ತ ಇತಿಹಾಸದ ಆರಂಭದಿಂದಲೂ, ನಂಬಿಗಸ್ತ ಸಂಚರಣ ಮೇಲ್ವಿಚಾರಕರ ಚಟುವಟಿಕೆಯು, ದೇವಜನರ ಸಭೆಗಳಿಗೆ ಉತ್ತೇಜನವನ್ನು ನೀಡುವುದರಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೆ ಸುವಾರ್ತೆಯನ್ನು ಸಾರುವುದರಲ್ಲಿಯೂ ಪ್ರಾಮುಖ್ಯವಾಗಿತ್ತು. ನೇಮಿಸಲ್ಪಟ್ಟ ಪ್ರಪ್ರಥಮ ಮೇಲ್ವಿಚಾರಕರಲ್ಲಿ ಸೀಲನೂ ಒಬ್ಬನಾಗಿದ್ದನು. ಅವನು ಒಬ್ಬ ಪ್ರವಾದಿಯೂ ಯೆರೂಸಲೇಮಿನ ಸಭೆಯ ಒಬ್ಬ ಪ್ರಮುಖ ಸದಸ್ಯನೂ ಆಗಿದ್ದನು. ಸಾರುವ ಕಾರ್ಯದಲ್ಲಾದ ಗಮನಾರ್ಹವಾದ ಅಭಿವೃದ್ಧಿಗಳಲ್ಲಿ ಪ್ರಮುಖ ಪಾತ್ರವಹಿಸಿದನು ಮತ್ತು ಐರೋಪ್ಯ ದೇಶಗಳಲ್ಲಿ ಪ್ರಥಮ ಬಾರಿಗೆ ಸುವಾರ್ತೆಯನ್ನು ಸಾರಿದ ಮಿಷನೆರಿಗಳಲ್ಲಿ ಒಬ್ಬನಾಗಿದ್ದನು. ಇದೆಲ್ಲವನ್ನು ಮಾಡಲು ಸೀಲನನ್ನು ಯಾವುದು ಅರ್ಹಗೊಳಿಸಿತು? ಮತ್ತು ಅವನ ವ್ಯಕ್ತಿತ್ವದ ಯಾವ ಗುಣಗಳನ್ನು ನಾವು ಅನುಕರಿಸಬೇಕು?
ಸುನ್ನತಿಯ ವಿವಾದಾಂಶ
ಸುಮಾರು ಸಾ.ಶ. 49ರಲ್ಲಿ ಸುನ್ನತಿಯ ವಿಷಯದಲ್ಲಿ ಒಮ್ಮತವಿಲ್ಲದ ಪ್ರಶ್ನೆಯು ಎದ್ದಾಗ, ಈ ವಿವಾದಾಂಶವನ್ನು ಇತ್ಯರ್ಥಗೊಳಿಸಲಿಕ್ಕಾಗಿ, ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಳಿಯು ಕ್ರೈಸ್ತರಿಗೆ ಸ್ಪಷ್ಟವಾದ ಮಾರ್ಗದರ್ಶನವನ್ನು ನೀಡುವ ಅಗತ್ಯವನ್ನು ಕಂಡುಕೊಂಡಿತು. ಈ ಸಂದರ್ಭಗಳಲ್ಲಿ, ಸಿಲ್ವಾನಸನು ಎಂದು ಸಹ ಕರೆಯಲ್ಪಡುವ ಸೀಲನ ಹೆಸರು ಬೈಬಲಿನಲ್ಲಿ ಕಂಡುಬರುತ್ತದೆ. ‘ಅಂತಿಯೋಕ್ಯ ಸಿರಿಯ ಕಿಲಿಕ್ಯ ಸೀಮೆಗಳಲ್ಲಿ ವಾಸಿಸುವ . . . ಸಹೋದರರನ್ನು’ ಸಂಪರ್ಕಿಸಿ ತಮ್ಮ ನಿರ್ಣಯವನ್ನು ತಿಳಿಸಲು, “ಅಪೊಸ್ತಲರೂ ಹಿರಿಯರೂ” ಆಗಿ ಪ್ರತಿನಿಧಿಸುವಂತೆ, ಆಗ ಆರಿಸಲ್ಪಟ್ಟ ನಿರ್ಣಯಗಾರರಲ್ಲಿ ಇವನೂ ಒಬ್ಬನಾಗಿದ್ದಿರಬಹುದು. ಅಂತಿಯೋಕ್ಯದಲ್ಲಿ, ಬಾರ್ನಬನು ಮತ್ತು ಪೌಲನೊಟ್ಟಿಗೆ, ಸೀಲನು ಮತ್ತು ಯೂದನು (ಬಾರ್ಸಬ್ಬ), ಸಮಾಚಾರವನ್ನು ಕೊಂಡೊಯ್ದರು. ಯೆರೂಸಲೇಮ್ ಕೂಟದಲ್ಲಾದ ಘಟನೆಗಳು, ತೆಗೆದುಕೊಳ್ಳಲ್ಪಟ್ಟ ನಿರ್ಣಯಗಳು, ಮತ್ತು ಪತ್ರದಲ್ಲಿರುವ ವಿಷಯಗಳನ್ನು ಇವರು ಬಾಯಿಮಾತಿನಲ್ಲೂ ತಿಳಿಯಪಡಿಸಿದ್ದರೆಂಬುದು ಸ್ಪಷ್ಟ. ಅವರು “ಅನೇಕ ಮಾತುಗಳಿಂದ” ಸಹೋದರರಿಗೆ “ಪ್ರಬೋಧಿಸಿ ದೃಢಪಡಿಸಿದರು.” ಇದರಿಂದಾಗಿ, ಅಂತಿಯೋಕ್ಯದಲ್ಲಿದ್ದ ಕ್ರೈಸ್ತರು ತುಂಬ “ಸಂತೋಷಪಟ್ಟರು.”—ಅ. ಕೃತ್ಯಗಳು 15:1-32.
ಹೀಗೆ, ಈ ಪ್ರಾಮುಖ್ಯವಾದ ವಿವಾದಾಂಶವನ್ನು ಇತ್ಯರ್ಥಗೊಳಿಸುವುದರಲ್ಲಿ ಸೀಲನು ನಿಜವಾಗಿಯೂ ಒಂದು ಮಹತ್ತ್ವಪೂರ್ಣವಾದ ಪಾತ್ರವನ್ನು ವಹಿಸಿದನು. ಆದರೆ ಅವನ ನೇಮಕವು ಸುಲಭವಾದದ್ದಾಗಿರಲಿಲ್ಲ. ನಿರ್ಧರಿಸಲ್ಪಟ್ಟ ವಿಷಯಕ್ಕೆ ಅಂತಿಯೋಕ್ಯ ಸಭೆಯು ಹೇಗೆ ಪ್ರತಿಕ್ರಿಯಿಸಬಹುದು ಎಂಬುದು ಅವನಿಗೆ ಗೊತ್ತಿರಲಿಲ್ಲ. ಆದುದರಿಂದ, “ಅಪೊಸ್ತಲರು ಬರೆದಿದ್ದ ಪತ್ರದಲ್ಲಿದ್ದ ವಿಷಯವನ್ನು ವಿವರಿಸಿ ಹೇಳಲು ಒಬ್ಬನಿಗೆ ತುಂಬ ವಿವೇಕವೂ ಜಾಣ್ಮೆಯೂ ಅಗತ್ಯವಿತ್ತು” ಎಂದು ಒಬ್ಬ ವ್ಯಾಖ್ಯಾನಕಾರನು ಹೇಳುತ್ತಾನೆ. ಈ ಸೂಕ್ಷ್ಮವಾದ ನೇಮಕಕ್ಕೆ ಸೀಲನನ್ನು ಆಯ್ಕೆಮಾಡಿದ್ದು, ಅವನು ಯಾವ ರೀತಿಯ ಒಬ್ಬ ವ್ಯಕ್ತಿಯಾಗಿದ್ದಿರಬಹುದು ಎಂಬುದನ್ನು ಅದು ಹೇಳುತ್ತದೆ. ಆಡಳಿತ ಮಂಡಳಿಯ ಪ್ರತಿನಿಧಿಯಾಗಿ ಆದೇಶಗಳನ್ನು ನಂಬಿಗಸ್ತಿಕೆಯಿಂದ ಹೇಳುವನೆಂದು ಅವನ ಮೇಲೆ ಭರವಸೆಯಿಡಸಾಧ್ಯವಿತ್ತು. ವಾಗ್ವಾದದಿಂದ ಸಭೆಯು ಬೆದರಿಸಲ್ಪಟ್ಟಾಗ ರಾಜಿಮಾಡಿಸುವ ಸಾಮರ್ಥ್ಯವುಳ್ಳ ಒಬ್ಬ ಬುದ್ಧಿವಂತ ಮೇಲ್ವಿಚಾರಕನೂ ಅವನಾಗಿದ್ದಿರಬಹುದು.
ಪೌಲನೊಂದಿಗೆ ಸಂಚಾರ
ಆ ಕಾರ್ಯವಾದ ನಂತರ ಸೀಲನು ಯೆರೂಸಲೇಮಿಗೆ ಹಿಂತಿರುಗಿದನೋ ಇಲ್ಲವೋ ಎಂಬುದು ಸರಿಯಾಗಿ ಗೊತ್ತಿಲ್ಲ. ಏನೇ ಆಗಲಿ, ಯೋಹಾನ ಮಾರ್ಕನ ಬಗ್ಗೆ ಬಾರ್ನಬನಿಗೂ ಪೌಲನಿಗೂ ಆದ ಭಿನ್ನಾಭಿಪ್ರಾಯದ ಅನಂತರ, ಪೌಲನು ತನ್ನ ಪ್ರಥಮ ಮಿಷನೆರಿ ಪ್ರಯಾಣದಲ್ಲಿ ಪ್ರಚಾರಮಾಡಿದ್ದ ನಗರಗಳಿಗೆ ಪುನಃ ಭೇಟಿಮಾಡಲಿಕ್ಕಾಗಿ ಸೀಲನನ್ನು ಆರಿಸಿಕೊಂಡನು. ಆ ಸಮಯದಲ್ಲಿ ಸೀಲನು ಅಂತಿಯೋಕ್ಯದಲ್ಲಿದ್ದನು.—ಅ. ಕೃತ್ಯಗಳು 15:36-41.
ಅನ್ಯಜಾತಿಯವರ ಬಳಿ ಹೋಗಲು ಸೀಲನಿಗಿದ್ದ ಸಕಾರಾತ್ಮಕ ಮನೋಭಾವ ಮತ್ತು ಒಬ್ಬ ಪ್ರವಾದಿಯೂ ಪ್ರತಿನಿಧಿಯೂ ಆಗಿ, ಸಿರಿಯ ಕಿಲಿಕ್ಯದಲ್ಲಿದ್ದ ವಿಶ್ವಾಸಿಗಳಿಗೆ ಆಡಳಿತ ಮಂಡಳಿಯ ನಿರ್ಣಯಗಳನ್ನು ತಿಳಿಸುವುದರಲ್ಲಿ ಸಹಾಯಮಾಡುವ ಅಧಿಕಾರವಿದ್ದುದರಿಂದ ಪೌಲನು ಇವನನ್ನು ಆರಿಸಿಕೊಂಡಿದ್ದಿರಬಹುದು. ಫಲಿತಾಂಶಗಳು ಅತ್ಯುತ್ತಮವಾಗಿದ್ದವು. ಅಪೊಸ್ತಲರ ಕೃತ್ಯಗಳ ಪುಸ್ತಕವು ಅದನ್ನು ಹೀಗೆ ತಿಳಿಸುತ್ತದೆ: “ಬಳಿಕ ಅವರು ಊರೂರುಗಳಲ್ಲಿ ಸಂಚಾರಮಾಡುತ್ತಿರುವಾಗ ಯೆರೂಸಲೇಮಿನಲ್ಲಿದ್ದ ಅಪೊಸ್ತಲರೂ ಸಭೆಯ ಹಿರಿಯರೂ ನಿರ್ಣಯಿಸಿದ್ದ ವಿಧಿಗಳನ್ನು ಅವರಿಗೆ ಒಪ್ಪಿಸಿ ಇವುಗಳನ್ನು ನೀವು ಅನುಸರಿಸಿ ನಡೆಯಬೇಕೆಂದು ಬೋಧಿಸಿದರು. ಸಭೆಗಳು ಕ್ರಿಸ್ತನಂಬಿಕೆಯಲ್ಲಿ ದೃಢವಾಗುತ್ತಾ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ ಬಂದವು.”—ಅ. ಕೃತ್ಯಗಳು 16:4, 5.
ಮಿಷನೆರಿಗಳು ಪ್ರಯಾಣದಲ್ಲಿದ್ದಾಗ, ಪವಿತ್ರಾತ್ಮವು ಅವರನ್ನು ಯೋಜಿಸಿದ ಮಾರ್ಗದಿಂದ ಎರಡು ಬಾರಿ ದಿಕ್ಕು ಬದಲಾಯಿಸಿತು. (ಅ. ಕೃತ್ಯಗಳು 16:6, 7) ತಿಮೊಥೆಯನ ಬಗ್ಗೆ ಅನಿರ್ದಿಷ್ಟ “ಪ್ರವಾದನೆಗಳು” ಉಂಟಾದ ಅನಂತರ, ಲುಸ್ತ್ರದಲ್ಲಿ ಅವನನ್ನು ಸೇರಿಸಿಕೊಳ್ಳಲಾಯಿತು. (1 ತಿಮೊಥೆಯ 1:18; 4:14) ಪೌಲನಿಗೂ ಪ್ರವಾದಿಸುವ ವರದಾನವಿತ್ತು, ಮತ್ತು ಅವನಿಗೆ ಕಾಣಿಸಿಕೊಂಡ ಒಂದು ದರ್ಶನದಲ್ಲಿ ಅವನು ಮತ್ತು ಅವನ ಸಹಪ್ರಯಾಣಿಕರು ಯೂರೋಪಿನಲ್ಲಿರುವ ಮಕೆದೋನ್ಯಕ್ಕೆ ಹೋಗುವಂತೆ ನಿರ್ದೇಶಿಸಲಾಯಿತು.—ಅ. ಕೃತ್ಯಗಳು 16:9, 10.
ಹೊಡೆಯಲ್ಪಟ್ಟು ಸೆರೆಮನೆಗೆ ಹಾಕಲ್ಪಟ್ಟದ್ದು
“ಪ್ರಧಾನ ಪಟ್ಟಣ”ವಾದ ಫಿಲಿಪ್ಪಿಯದಲ್ಲಿ, ಸೀಲನು ಮರೆಯಲಾರದಂತಹ ಉಗ್ರಪರೀಕ್ಷೆಯನ್ನು ಅನುಭವಿಸಿದನು. ಪೌಲನು ಒಬ್ಬ ದಾಸಿಯಿಂದ ಪ್ರೇತಾತ್ಮವನ್ನು ಓಡಿಸಿದಾಗ, ಬರುತ್ತಿದ್ದ ಆದಾಯವು ನಿಂತುಹೋದದ್ದನ್ನು ನೋಡಿ, ಅವಳ ಒಡೆಯರು ಸೀಲನನ್ನೂ ಪೌಲನನ್ನೂ ಪಟ್ಟಣದ ನ್ಯಾಯಾಧಿಪತಿಗಳ ಮುಂದೆ ಎಳೆದುಕೊಂಡು ಬಂದರು. ಇದರ ಪರಿಣಾಮವಾಗಿ, ಅವರಿಬ್ಬರೂ ತುಂಬ ಅವಮಾನವನ್ನು ಅನಭವಿಸಬೇಕಾಯಿತು. ದುಷ್ಟರೆಂದು ಅವರನ್ನು ಸರ್ವರ ಸಮ್ಮುಖದಲ್ಲಿ ನಿಲ್ಲಿಸಲಾಯಿತು, ಅವರ ಹೊರ ಉಡುಪುಗಳನ್ನು ಹರಿದುಹಾಕಿ, ಮಾರುಕಟ್ಟೆಯಲ್ಲಿ ಚಡಿಗಳಿಂದ ಹೊಡೆದರು.—ಅ. ಕೃತ್ಯಗಳು 16:12, 16-22.
ಅಂತಹ ಹೊಡೆತಗಳು, ಮನುಷ್ಯರ ತಾಳ್ಮೆಯನ್ನು ಪರೀಕ್ಷಿಸುತ್ತಾ, ಭಯಂಕರವಾದ ಶಿಕ್ಷೆಗಳನ್ನು ಮಾತ್ರವೇ ನೀಡಲಿಲ್ಲ. ಬದಲಿಗೆ ಪೌಲನಿಗೂ ಸೀಲನಿಗೂ ಕೊಡಲ್ಪಟ್ಟ ಶಿಕ್ಷೆಗಳು ಕಾನೂನುಬಾಹಿರವೂ ಆಗಿದ್ದವು. ಏಕೆ? ರೋಮನ್ ನಿಯಮಗಳಲ್ಲಿ ಯಾವ ಒಬ್ಬ ರೋಮನ್ ನಿವಾಸಿಯನ್ನೂ ಹೊಡೆಯಬಾರದೆಂಬ ನಿಯಮವಿತ್ತು. ಪೌಲನೂ ಸೀಲನೂ ರೋಮನ್ ನಿವಾಸಿಗಳಾಗಿದ್ದರು. ಪೌಲನಿಗೂ ಸೀಲನಿಗೂ “ಬಹಳ ಪೆಟ್ಟುಗಳನ್ನು” ಕೊಟ್ಟ ಅನಂತರ, ಅವರನ್ನು ಸೆರೆಮನೆಗೆ ಹಾಕಲಾಯಿತು. ಮತ್ತು ಅಲ್ಲಿ ಅವರ ಕಾಲುಗಳಿಗೆ ಕೋಳಗಳನ್ನು ಹಾಕಲಾಯಿತು. ಇವುಗಳು “ಒಬ್ಬ ಸೆರೆವಾಸಿಯ ಕಾಲುಗಳನ್ನು ಎಷ್ಟು ಬೇಕೊ ಅಷ್ಟು ವಿಸ್ತಾರವಾಗಿ ಅಗಲಿಸುವ ಒಂದು ಭಯಂಕರವಾದ ಉಪಕರಣ”ವಾಗಿದ್ದವು ಮತ್ತು ಇವು “ಕಣ್ಣವೆಯನ್ನು ಮುಚ್ಚದಂತೆ ಮಾಡುತ್ತಿದ್ದವು” ಎಂದು ಗಸ್ಟಾಫ್ ಸ್ಟಾಲಿನ್ ವಿವರಿಸುತ್ತಾರೆ. ಅವರ ಬೆನ್ನುಗಳ ಮೇಲೆಲ್ಲಾ ಗಾಯಗಳಾಗಿದ್ದು, ವೇದನಾಮಯವಾಗಿದ್ದರೂ, ಮಧ್ಯರಾತ್ರಿಯಲ್ಲಿ “ಪೌಲನೂ ಸೀಲನೂ ಪ್ರಾರ್ಥನೆಮಾಡುವವರಾಗಿ ದೇವರಿಗೆ ಸ್ತುತಿ ಪದಗಳನ್ನು ಹಾಡುತ್ತಿದ್ದರು.”—ಅ. ಕೃತ್ಯಗಳು 16:23-25.
ಇದು ಸೀಲನ ವ್ಯಕ್ತಿತ್ವದ ಬಗ್ಗೆ ಇನ್ನೂ ಹೆಚ್ಚಿನದ್ದನ್ನು ಹೇಳುತ್ತದೆ. ಅವನು ತುಂಬ ಸಂತೋಷವುಳ್ಳವನಾಗಿದ್ದನು ಏಕೆಂದರೆ, ಅವರು ಕ್ರಿಸ್ತನ ಹೆಸರಿನ ನಿಮಿತ್ತವಾಗಿ ಕಷ್ಟವನ್ನು ಸಹಿಸಿಕೊಳ್ಳುತ್ತಿದ್ದರು. (ಮತ್ತಾಯ 5:11, 12; 24:9) ಇದೇ ಮನೋಭಾವವು, ಹಿಂದಿನ ಅಂತಿಯೋಕ್ಯದ ಪ್ರಯಾಣದಲ್ಲಿ ಅಲ್ಲಿದ್ದ ಜೊತೆ ಕ್ರೈಸ್ತರು ಸಹ ಆನಂದಿಸುವಂತೆ, ಆ ಸಭೆಗೆ ಉತ್ತೇಜನವನ್ನು ನೀಡಲು ಮತ್ತು ಬಲಪಡಿಸಲು ಸೀಲನಿಗೂ ಅವನ ಜೊತೆಗಾರರಿಗೂ ಸಹಾಯಮಾಡಿತು ಎಂಬುದು ಸ್ಪಷ್ಟ. ಪೌಲನೂ ಸೀಲನೂ ಅದ್ಭುತಕರವಾದ ರೀತಿಯಲ್ಲಿ ಭೂಕಂಪದಿಂದ, ಸೆರೆಮನೆಯಿಂದ ಬಿಡಿಸಲ್ಪಟ್ಟಿದ್ದು ಮತ್ತು ಆತ್ಮಹತ್ಯೆಯನ್ನು ಮಾಡಿಕೊಳ್ಳಲು ನಿಶ್ಚಯಿಸಿದ್ದ ಸೆರೆಮನೆಯ ಯಜಮಾನನು ಮತ್ತು ಅವನ ಕುಟುಂಬವು ದೇವರಲ್ಲಿ ನಂಬಿಕೆಯನ್ನಿಡುವಂತೆ ಸಹಾಯಮಾಡಿದ್ದು ಅವರ ಸಂತೋಷವನ್ನು ಇನ್ನೂ ಹೆಚ್ಚಿಸಿದ್ದಿರಬೇಕು.—ಅ. ಕೃತ್ಯಗಳು 16:26-34.
ಹೊಡೆತ, ಸೆರೆಮನೆವಾಸ ಇವುಗಳಿಂದ ಪೌಲನಾಗಲಿ ಇಲ್ಲವೇ ಸೀಲನಾಗಲಿ ಭಯಭೀತರಾಗಲಿಲ್ಲ. ಅವರನ್ನು ಬಿಡುಗಡೆಮಾಡಬೇಕೆಂದು ಆಜ್ಞಾಪಣೆಯು ಸಿಕ್ಕಿದಾಗ, ನ್ಯಾಯಾಧಿಪತಿಗಳು ನಿರೀಕ್ಷಿಸಿದಂತೆ ಯಾರಿಗೂ ಮುಖವನ್ನು ತೋರಿಸದೆ ಫಿಲಿಪ್ಪಿಯದಿಂದ ಹೋಗಿಬಿಡಲು ಒಪ್ಪಲಿಲ್ಲ. ಹೀಗೆ ಅವರು ಬಿಟ್ಟುಕೊಡದೆ, ದುರಹಂಕಾರಿಗಳೂ ಅನಿಯಂತ್ರಿತರೂ ಆದ ಅಧಿಕಾರಿಗಳಿಗೆ ತಿರುಗುಬಾಣವನ್ನು ಎಸೆದರು. “ನಮ್ಮನ್ನು ಎಲ್ಲರ ಮುಂದೆ ಹೊಡಿಸಿ ಸೆರೆಮನೆಯೊಳಗೆ ಹಾಕಿಸಿದರು; ಈಗ ನಮ್ಮನ್ನು ಗುಪ್ತವಾಗಿ ಹೊರಗೆ ಕಳುಹಿಸುತ್ತಾರೋ? ಹಾಗೆ ಎಂದಿಗೂ ಆಗಕೂಡದು; ಅವರೇ ಬಂದು ನಮ್ಮನ್ನು ಹೊರಗೆ ಕರಕೊಂಡುಹೋದರೆ ಸರಿ” ಎಂದು ಪೌಲನು ಹೇಳಿದನು. ಮುಂದೆ ಸಂಭವಿಸಬಹುದಾದ ಪರಿಣಾಮಗಳಿಂದ ಭಯಭೀತರಾಗಿ, ನ್ಯಾಯಧಿಪತಿಗಳೇ ಅವರ ಬಳಿ ಬಂದು, ನಗರವನ್ನು ಬಿಟ್ಟುಹೋಗಲು ಅವರನ್ನು ವಿನಯದಿಂದ ಬೇಡಿಕೊಂಡರು.—ಅ. ಕೃತ್ಯಗಳು 16:35-39.
ತಾವು ರೋಮನರಾಗಿರುವುದರಿಂದ ತಮಗೂ ಹಕ್ಕುಗಳಿವೆಯೆಂಬುದನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಿದ ಅನಂತರವೇ ಪೌಲನೂ ಸೀಲನೂ ನ್ಯಾಯಾಧಿಪತಿಯ ಭಿನ್ನಹಕ್ಕೆ ಮಣಿದರು. ಇದಕ್ಕೆ ಮುಂಚೆ ಅವರು ತಮ್ಮ ಮಿತ್ರರಿಗೆ ವಿದಾಯವನ್ನು ಹೇಳಿದರು. ಇಡೀ ಸಾರುವಿಕೆಯ ಪ್ರಯಾಣದ ವೈಶಿಷ್ಟ್ಯಕ್ಕನುಗುಣವಾಗಿ, ಸೀಲನು ಮತ್ತು ಅವನ ಜೊತೆಗಾರನು ಪುನಃ ಒಮ್ಮೆ ಸಹೋದರರನ್ನು “ಧೈರ್ಯಗೊಳಿಸಿ” ಅಲ್ಲಿಂದ ಹೊರಟರು.—ಅ. ಕೃತ್ಯಗಳು 16:40.
ಮಕೆದೋನ್ಯದಿಂದ ಬಾಬಿಲೋನ್ಯಕ್ಕೆ
ಇಂತಹ ಸಂಕಷ್ಟದಲ್ಲೂ ಅವರು ನಿರುತ್ತೇಜಿತರಾಗದೆ, ಪೌಲ, ಸೀಲ ಮತ್ತು ಅವರ ಸಂಗಡಿಗರು ಹೊಸ ಮಿಷನೆರಿ ಕ್ಷೇತ್ರಗಳಿಗೆ ಮುನ್ನಡೆದರು. ಥೆಸಲೊನೀಕದಲ್ಲಿ ಅವರು ಪುನಃ ಕಷ್ಟಗಳನ್ನು ಎದುರಿಸಿದರು. ಮೂರು ಸಬ್ಬತ್ತುಗಳ ಅವಧಿಯಲ್ಲಿ ಪೌಲನ ಶುಶ್ರೂಷೆಯಲ್ಲಿ ಅವನಿಗೆ ಸಿಕ್ಕಿದ ಯಶಸ್ಸಿನ ಕಾರಣದಿಂದ, ಮತ್ಸರಗೊಂಡ ವಿರೋಧಿಗಳು ಗಲಭೆಯನ್ನು ಎಬ್ಬಿಸಿದರು, ಇದರಿಂದಾಗಿ ಮಿಷನೆರಿಗಳು ರಾತ್ರೋರಾತ್ರಿ ಆ ಜಾಗವನ್ನು ಬಿಟ್ಟುಹೋಗಬೇಕಾಯಿತು. ಅವರು ಬೆರೋಯಕ್ಕೆ ಹೋದರು. ಆ ನಗರದಲ್ಲಿಯೂ ಪೌಲನ ಮತ್ತು ಅವನ ಸಂಗಡಿಗರ ಸಾಧನೆಗಳನ್ನು ಕೇಳಿಸಿಕೊಂಡಾಗ, ವಿರೋಧಿಗಳು ಥೆಸಲೊನೀಕದಷ್ಟು ದೂರದಿಂದ ಅಲ್ಲಿಗೆ ಬಂದರು. ಹೊಸದಾಗಿ ಆಸಕ್ತಿಯನ್ನು ತೋರಿಸಿದ ಜನರ ಗುಂಪಿಗೆ ಸಹಾಯಮಾಡಸಾಧ್ಯವಾಗುವಂತೆ ಸೀಲನು ಮತ್ತು ತಿಮೊಥೆಯನು ಬೆರೋಯದಲ್ಲಿಯೇ ಉಳಿದಾಗ, ಪೌಲನು ಮಾತ್ರ ಒಂಟಿಯಾಗಿ ಪ್ರಯಾಣವನ್ನು ಮುಂದುವರಿಸಿದನು. (ಅ. ಕೃತ್ಯಗಳು 17:1-15) ಸೀಲನು ಮತ್ತು ತಿಮೊಥೆಯನು ಕೊರಿಂಥದಲ್ಲಿ ಪೌಲನನ್ನು ಜೊತೆಗೂಡಿದರು ಮತ್ತು ಅಲ್ಲಿ ಅವರು ಸುವಾರ್ತೆಯನ್ನು ಸಾರಿದರು ಮತ್ತು ಮಕೆದೋನ್ಯದಲ್ಲಿ ನಂಬಿಗಸ್ತ ಮಿತ್ರರು ಕೊಟ್ಟ ಕೊಡುಗೆಯನ್ನು ಅವನಿಗೆ ನೀಡಿದರು. ಇದು ಅಗತ್ಯದಲ್ಲಿದ್ದ ಅಪೊಸ್ತಲನು ಐಹಿಕ ಕೆಲಸವನ್ನು ಬಿಟ್ಟು, ಪೂರ್ಣ ಸಮಯದ ಸಾರುವಿಕೆಯ ಕಾರ್ಯವನ್ನು ಕೈಗೊಳ್ಳುವಂತೆ ಅವನನ್ನು ಶಕ್ತಮಾಡಿದ್ದಿರಬಹುದು. (ಅ. ಕೃತ್ಯಗಳು 18:1-5; 2 ಕೊರಿಂಥ 11:9) ಕೊರಿಂಥದಲ್ಲಿ, ಸೀಲ ಮತ್ತು ತಿಮೊಥೆಯರು, ಸೌವಾರ್ತಿಕರೂ ಪೌಲನ ಸಂಗಾತಿಗಳೂ ಎಂದು ಸಹ ಕರೆಯಲ್ಪಟ್ಟಿದ್ದಾರೆ. ಆ ನಗರದಲ್ಲಿಯೂ ಅವರು ತಮ್ಮ ಸಾರುವ ಕಾರ್ಯಗಳಲ್ಲಿ ಹಿಮ್ಮೆಟ್ಟಲಿಲ್ಲ ಎಂಬುದನ್ನು ಇದು ಸ್ಪಷ್ಟಗೊಳಿಸುತ್ತದೆ—2 ಕೊರಿಂಥ 1:19.
ಕೊರಿಂಥದಿಂದ ಥೆಸಲೊನೀಕದವರಿಗೆ ಬರೆದ ಪತ್ರದಲ್ಲೆಲ್ಲ “ನಾವು” ಎಂದು ಉಪಯೋಗಿಸಲ್ಪಟ್ಟಿರುವ ಬಹುವಚನವು, ಪತ್ರವನ್ನು ಬರೆಯುವುದರಲ್ಲಿ ಸೀಲನು ಮತ್ತು ತಿಮೊಥೆಯನು ಸಹಾಯಮಾಡಿದರೆಂಬುದನ್ನು ತಿಳಿಸುತ್ತದೆ. ಎರಡೂ ಪತ್ರಗಳು ಕೊರಿಂಥದಿಂದ ಬರೆಯಲ್ಪಟ್ಟವು. ಸೀಲನು ಲಿಪಿಕಾರನಾಗಿ ಪತ್ರವನ್ನೂ ಬರೆಯುತ್ತಿದ್ದನು ಎಂಬ ವಿಚಾರವು ಪೇತ್ರನು ಸ್ವತಃ ಬರೆದ ಪತ್ರಗಳಲ್ಲೊಂದರಲ್ಲಿ ತಿಳಿಸುವ ವಿಷಯದಿಂದ ತಿಳಿದುಬರುತ್ತದೆ. ಪೇತ್ರನು ತನ್ನ ಪ್ರಥಮ ಪತ್ರವನ್ನು ಬಾಬಿಲೋನ್ಯದಿಂದ, “ನಂಬಿಗಸ್ತನಾದ ಸಹೋದರನೆಂದು ನಾನು ಎಣಿಸುವ ಸಿಲ್ವಾನನ” ಮುಖಾಂತರ ಬರೆದೆನೆಂದು ಹೇಳುತ್ತಾನೆ. (1 ಪೇತ್ರ 5:12, 13, NW) ಇದು ಸಿಲ್ವಾನನು ಪತ್ರವನ್ನು ಕೊಂಡೊಯ್ಯುವವನಾಗಿದ್ದನೆಂದು ಅರ್ಥೈಸುವುದಾದರೂ, ಪೇತ್ರನ ಎರಡು ಪತ್ರಗಳ ನಡುವಿನ ಶೈಲಿಯಲ್ಲಿನ ಭಿನ್ನತೆಯು, ಪ್ರಥಮ ಪತ್ರಕ್ಕೆ ಸೀಲನನ್ನು ಲಿಪಿಕಾರನಾಗಿ ಉಪಯೋಗಿಸಲಾಯಿತು, ಆದರೆ ಎರಡನೆಯ ಪತ್ರಕ್ಕಲ್ಲ ಎಂಬುದನ್ನು ಸೂಚಿಸಸಾಧ್ಯವಿದೆ. ಹೀಗೆ, ನಾನಾ ಬಗೆಯ ಮೇಧಾಶಕ್ತಿಗಳಲ್ಲಿ ಮತ್ತು ದೇವಪ್ರಭುತ್ವ ಸುಯೋಗಗಳಲ್ಲಿ ಒಬ್ಬ ಕಾರ್ಯದರ್ಶಿಯೂ ಆಗಿದ್ದದ್ದು ಇನ್ನೊಂದು ಸುಯೋಗವಾಗಿರಬಹುದು.
ಅನುಕರಿಸಲು ಯೋಗ್ಯವಾದ ಒಂದು ಮಾದರಿ
ಸೀಲನು ಮಾಡಿದ ವಿಷಯಗಳನ್ನು ಯೋಚಿಸಿ ನೋಡುವಾಗ, ಅವನ ಕುರಿತಾದ ಮಾಹಿತಿಯು ನಿಜವಾಗಿಯೂ ಮನತಾಕುವಂತಿದೆ. ಆಧುನಿಕ ದಿನದ ಮಿಷನೆರಿಗಳು ಹಾಗೂ ಸಂಚರಣ ಮೇಲ್ವಿಚಾರಕರಿಗೆ ಇವನು ಅತ್ಯುತ್ತಮ ಮಾದರಿಯಾಗಿದ್ದಾನೆ. ಎಷ್ಟೇ ಹಣ ಖರ್ಚಾದರೂ, ದೂರದೂರದ ವರೆಗೆ ಹೋಗಿ ಅವನು ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದನು. ಇದನ್ನು ಭೌತಿಕ ಲಾಭವನ್ನು ಪಡೆಯಲಿಕ್ಕೋ ಇಲ್ಲವೇ ಪ್ರತಿಷ್ಠೆಗೋ ಮಾಡಲಿಲ್ಲ ಬದಲಿಗೆ, ಇಷ್ಟೆಲ್ಲ ತ್ಯಾಗಗಳನ್ನು ಇತರರಿಗೆ ಸಹಾಯ ನೀಡಲಿಕ್ಕಾಗಿ ಮಾಡಿದನು. ಬುದ್ಧಿಯನ್ನು ಉಪಯೋಗಿಸಿ, ಜಾಣತನದಿಂದ ಅವರಿಗೆ ಸಲಹೆಯನ್ನು ನೀಡಿ, ಚೆನ್ನಾಗಿ ತಯಾರಿಸಿದ ಮತ್ತು ಆದರಣೀಯ ಭಾಷಣಗಳನ್ನು ನೀಡುವ ಮೂಲಕ, ಹಾಗೂ ಸ್ವತಃ ಶುಶ್ರೂಷೆಯಲ್ಲಿ ಹುರುಪನ್ನು ತೋರಿಸುವ ಮೂಲಕ ಅವರನ್ನು ಉತ್ತೇಜಿಸುವುದೇ ಅವನ ಗುರಿಯಾಗಿತ್ತು. ಯೆಹೋವನ ಸಂಘಟಿತ ಜನರೋಪಾದಿ ನಿಮ್ಮ ಪಾತ್ರವು ಏನೇ ಆಗಿರಲಿ, ನೀವು ಸಹ ಅದೇ ರೀತಿಯಲ್ಲಿ ಸಕಾರಾತ್ಮಕವಾಗಿ ಪ್ರಯತ್ನಿಸುವಲ್ಲಿ, ಎಡರುತೊಡರುಗಳ ಎದುರಿನಲ್ಲಿಯೂ, ನೀವು ನಿಮ್ಮ ಜೊತೆ ವಿಶ್ವಾಸಿಗಳಿಗೆ ಪ್ರೋತ್ಸಾಹನೆಯ ಮೂಲವಾಗಿರಸಾಧ್ಯವಿದೆ.
[ಪುಟ 29ರಲ್ಲಿರುವಚಿತ್ರ]
(For fully formatted text, see publication)
ಪೌಲನ ಎರಡನೆಯ ಮಿಷನೆರಿ ಪ್ರಯಾಣ
ಮಹಾ ಸಮುದ್ರ
ಅಂತಿಯೋಕ್ಯ
ದೆರ್ಬೆ
ಲುಸ್ತ್ರ
ಇಕೋನ್ಯ
ತ್ರೋವ
ಫಿಲಿಪ್ಪಿ
ಅಂಫಿಪೊಲಿ
ಥೆಸಲೊನೀಕ
ಬೆರೋಯ
ಅಥೇನೆ
ಕೊರಿಂಥ
ಎಫೆಸ
ಯೆರೂಸಲೇಮ್
ಕೈಸರೈಯ
[ಕೃಪೆ]
Mountain High Maps® Copyright © 1997 Digital Wisdom, Inc.