ಪಯನೀಯರ್ ಶುಶ್ರೂಷೆಯ ಆಶೀರ್ವಾದಗಳು
“ಯೆಹೋವನ ಆಶೀರ್ವಾದವೇ ಧನಿಕನನ್ನಾಗಿ ಮಾಡುತ್ತದೆ, ಮತ್ತು ಆತನು ಅದರೊಂದಿಗೆ ವೇದನೆಯನ್ನು ಸೇರಿಸುವುದಿಲ್ಲ.”—ಜ್ಞಾನೋಕ್ತಿ 10:22, NW.
1, 2. (ಎ) ಒಬ್ಬ ಪಯನೀಯರನು ಪೂರ್ಣಸಮಯದ ಶುಶ್ರೂಷೆಯ ಕುರಿತ ತನ್ನ ಅನಿಸಿಕೆಗಳನ್ನು ಹೇಗೆ ವ್ಯಕ್ತಪಡಿಸಿದನು? (ಬಿ) ಶಿಷ್ಯರನ್ನಾಗಿ ಮಾಡುವ ಆನಂದಗಳನ್ನು ಹೆಚ್ಚು ಪೂರ್ತಿಯಾಗಿ ಅನುಭವಿಸುವ ಸ್ಥಾನದಲ್ಲಿ ಪಯನೀಯರರು ಏಕಿದ್ದಾರೆ?
“ನಿಮ್ಮೊಂದಿಗೆ ಅಭ್ಯಾಸಮಾಡಿದ ಒಬ್ಬನು ಯೆಹೋವನ ಕ್ರಿಯಾಶೀಲ ಸ್ತುತಿಗಾರನಾಗುವುದನ್ನು ನೋಡುವುದಕ್ಕಿಂತ ಹೆಚ್ಚಿನ ಹರ್ಷವಿರಬಲ್ಲದೊ? ಯೆಹೋವನನ್ನು ಮೆಚ್ಚಿಸಲಿಕ್ಕಾಗಿ ಜನರು ತಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಪ್ರಚೋದಿಸಲ್ಪಡುವುದರಲ್ಲಿ ದೇವರ ವಾಕ್ಯವು ಎಷ್ಟು ಬಲಶಾಲಿಯಾಗಿದೆಯೆಂದು ನೋಡುವುದು ರೋಮಾಂಚಕವೂ ನಂಬಿಕೆವರ್ಧಕವೂ ಆಗಿದೆ.” 32ಕ್ಕಿಂತಲೂ ಹೆಚ್ಚು ವರ್ಷಗಳಿಂದ ಪೂರ್ಣಸಮಯದ ಶುಶ್ರೂಷೆಯಲ್ಲಿರುವ ಕೆನಡದ ಪಯನೀಯರನೊಬ್ಬನು ಹಾಗೆ ಬರೆದನು. ತನ್ನ ಪಯನೀಯರ್ ಶುಶ್ರೂಷೆಯ ಕುರಿತು ಅವನು ಹೇಳುವುದು: “ಇನ್ನೇನನ್ನು ಮಾಡುವುದನ್ನೂ ನಾನು ಕಲ್ಪಿಸಿಕೊಳ್ಳಲಾರೆ. ಇದೇ ರೀತಿಯ ಆನಂದವನ್ನು ತರುವ ಇನ್ನಾವುದನ್ನೂ ನಾನು ಖಂಡಿತವಾಗಿಯೂ ಕಲ್ಪಿಸಿಕೊಳ್ಳಲಾರೆ.”
2 ಜೀವಕ್ಕೆ ನಡೆಸುವ ಮಾರ್ಗದಲ್ಲಿ ಹೋಗಲಿಕ್ಕಾಗಿ ಯಾರಿಗಾದರೂ ಸಹಾಯಮಾಡುವುದರಲ್ಲಿ ಭಾಗಿಯಾಗುವುದರಲ್ಲಿ ಮಹಾ ಆನಂದವಿದೆಯೆಂಬುದನ್ನು ನೀವು ಒಪ್ಪುತ್ತೀರೊ? ಪಯನೀಯರರು ಮಾತ್ರ ಇಂತಹ ಆನಂದವನ್ನು ಅನುಭವಿಸುವುದಿಲ್ಲವೆಂಬುದು ನಿಶ್ಚಯ. ಯೆಹೋವನ ಸಕಲ ಸೇವಕರು “ಶಿಷ್ಯರನ್ನಾಗಿ” ಮಾಡುವ ಆಜ್ಞೆಗೊಳಗಾಗಿದ್ದಾರೆ, ಮತ್ತು ಅವರು ಹಾಗೆ ಮಾಡಲು ಪ್ರಯತ್ನಿಸುತ್ತಾರೆ. (ಮತ್ತಾಯ 28:19) ಆದರೂ, ಕ್ಷೇತ್ರ ಸೇವೆಯಲ್ಲಿ ಪಯನೀಯರರು ಅನೇಕ ತಾಸುಗಳನ್ನು ವ್ಯಯಿಸಲು ಶಕ್ತರಾಗಿರುವುದರಿಂದ, ಅವರು ಅನೇಕಾವರ್ತಿ ಶಿಷ್ಯರನ್ನಾಗಿ ಮಾಡುವ ಆನಂದವನ್ನು ಹೆಚ್ಚು ಪೂರ್ಣವಾಗಿ ಅನುಭವಿಸುವ ಸ್ಥಾನದಲ್ಲಿದ್ದಾರೆ. ಆದರೆ ಪಯನೀಯರ್ ಸೇವೆಯಲ್ಲಿ ಬೇರೆ ಪ್ರತಿಫಲಗಳೂ ಇವೆ. ಪಯನೀಯರರೊಂದಿಗೆ ಮಾತಾಡಿರಿ, ಆಗ ಅವರು ‘ಯೆಹೋವನ ಆಶೀರ್ವಾದವೇ ಧನಿಕನನ್ನಾಗಿ ಮಾಡುತ್ತದೆ’ ಎಂಬುದನ್ನು ಅನುಭವಿಸುವ ಅದ್ಭುತಕರವಾದ ಮಾರ್ಗವು ಪಯನೀಯರ್ ಸೇವೆಯಾಗಿದೆಯೆಂದು ಹೇಳುವರು.—ಜ್ಞಾನೋಕ್ತಿ 10:22.
3. ನಾವು ಯೆಹೋವನನ್ನು ಸೇವಿಸುತ್ತಾ ಮುಂದುವರಿಯುವಾಗ, ಯಾವುದು ನಮ್ಮನ್ನು ಪ್ರಚೋದಿಸಬಹುದು?
3 ಇತ್ತೀಚೆಗೆ, ಲೋಕದ ವಿವಿಧ ಭಾಗಗಳ ಪಯನೀಯರರನ್ನು, ಪೂರ್ಣಸಮಯದ ಶುಶ್ರೂಷೆಯಲ್ಲಿ ಅವರು ಅನುಭವಿಸಿರುವ ಆಶೀರ್ವಾದಗಳನ್ನು ವರ್ಣಿಸುವರೆ ಕೇಳಿಕೊಳ್ಳಲಾಯಿತು. ಅವರಿಗೆ ಏನು ಹೇಳಲಿಕ್ಕಿದೆಯೆಂಬುದನ್ನು ನಾವು ಪರಿಗಣಿಸೋಣ. ಆದರೆ ನ್ಯೂನಾರೋಗ್ಯ, ವೃದ್ಧಾಪ್ಯ ಅಥವಾ ಬೇರೆ ಪರಿಸ್ಥಿತಿಗಳಿಂದಾಗಿ ನಿಮ್ಮ ಸೇವೆಯು ಸೀಮಿತಗೊಳ್ಳುವಲ್ಲಿ ನಿರಾಶರಾಗಬೇಡಿ. ಯೆಹೋವನನ್ನು ಪೂರ್ಣಪ್ರಾಣದಿಂದ—ಯಾವುದೇ ಸ್ಥಾನದಲ್ಲಿದ್ದುಕೊಂಡು—ಸೇವಿಸುವುದೇ ಪ್ರಾಮುಖ್ಯವೆಂಬುದನ್ನು ನೆನಪಿನಲ್ಲಿಡಿರಿ. ಆದರೂ, ಕೆಲವು ಪಯನೀಯರರ ಹೇಳಿಕೆಗಳನ್ನು ಕೇಳಿಸಿಕೊಳ್ಳುವುದು, ಒಂದು ವೇಳೆ ಸಾಧ್ಯವಿರುವಲ್ಲಿ ಈ ಪ್ರತಿಫಲದಾಯಕ ಚಟುವಟಿಕೆಯನ್ನು ಕೈಕೊಳ್ಳುವುದರಲ್ಲಿನ ನಿಮ್ಮ ಆಸಕ್ತಿಯನ್ನು ಹೆಚ್ಚಿಸಬಹುದು.
ಸಂತೃಪ್ತಿ ಮತ್ತು ಆನಂದದ ಗಾಢವಾದ ಅನಿಸಿಕೆಗಳು
4, 5. (ಎ) ಸುವಾರ್ತೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದು ಎಷ್ಟೊ ಪ್ರತಿಫಲದಾಯಕ ವಿಷಯವಾಗಿರುವುದೇಕೆ? (ಬಿ) ಶುಶ್ರೂಷೆಯಲ್ಲಿ ಪೂರ್ಣಸಮಯ ಭಾಗವಹಿಸುವುದರ ಕುರಿತು ಪಯನೀಯರರಿಗೆ ಹೇಗನಿಸುತ್ತದೆ?
4 “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ [“ಸಂತೋಷ,” NW]” ಎಂದನು ಯೇಸು. (ಅ. ಕೃತ್ಯಗಳು 20:35) ಹೌದು, ನಿಸ್ವಾರ್ಥಭಾವದ ಕೊಡುವಿಕೆಗೆ ಅದರದ್ದೇ ಆದ ಪ್ರತಿಫಲಗಳಿವೆ. (ಜ್ಞಾನೋಕ್ತಿ 11:25) ಇತರರೊಂದಿಗೆ ಸುವಾರ್ತೆಯನ್ನು ಸಾರುವ ವಿಷಯದಲ್ಲಿ, ಇದು ವಿಶೇಷವಾಗಿ ಸತ್ಯವಾಗಿದೆ. ನಿಜವಾಗಿಯೂ, ಜೊತೆ ಮಾನವನು ನಿತ್ಯಜೀವಕ್ಕೆ ನಡೆಸುವ ದೇವರ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡುವುದಕ್ಕಿಂತ ಹೆಚ್ಚು ಮಹತ್ತಾದ ಇನ್ನಾವ ಕೊಡುಗೆಯನ್ನು ನಾವು ಕೊಡಬಲ್ಲೆವು?—ಯೋಹಾನ 17:3.
5 ಶುಶ್ರೂಷೆಯಲ್ಲಿ ಪೂರ್ಣಸಮಯ ಭಾಗವಹಿಸುವವರು, ಅನೇಕಾವರ್ತಿ ತಮ್ಮ ಶುಶ್ರೂಷೆಯಿಂದ ತಮಗೆ ದೊರೆಯುವ ಆನಂದ ಮತ್ತು ಸಂಪೂರ್ಣ ನೆರವೇರಿಕೆಯ ಕುರಿತು ಮಾತಾಡುವುದು ಆಶ್ಚರ್ಯವಲ್ಲ. “ಸತ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ಬಂದಿರುವ ಸಂತೃಪ್ತಿಯನ್ನು ಇನ್ನಾವ ಕೆಲಸವೂ ತರಸಾಧ್ಯವಿರಲಿಲ್ಲವೆಂಬುದು ನನಗೆ ಗೊತ್ತು,” ಎನ್ನುತ್ತಾನೆ, ಬ್ರಿಟನ್‌ನ 64 ವಯಸ್ಸಿನ ಪಯನೀಯರನೊಬ್ಬನು. ಸಾಯೆರ್ ದೇಶದ ವಿಧವೆಯೊಬ್ಬಳು ತನಗೆ ಪಯನೀಯರ್ ಸೇವೆ ಏನನ್ನು ಅರ್ಥೈಸಿತೆಂಬುದನ್ನು ವ್ಯಕ್ತಪಡಿಸಿದಳು: “ನನ್ನ ಪ್ರಿಯ ಪತಿಯನ್ನು ಕಳೆದುಕೊಂಡ ಮೇಲೆ ಪಯನೀಯರ್ ಸೇವೆ ನಿಜವಾದ ದುಃಖಶಾಮಕವಾಗಿತ್ತು. ಇತರರಿಗೆ ಸಹಾಯಮಾಡಲು ನಾನು ಸೇವೆಯಲ್ಲಿ ಎಷ್ಟು ಹೆಚ್ಚು ಹೋಗುತ್ತೇನೊ, ಅಷ್ಟು ಆ ಶೋಕಭರಿತ ನಷ್ಟದ ಕುರಿತು ಕಡಮೆ ನೆನಸುತ್ತೇನೆ. ನಾನು ಯೆಹೋವನ ವಾಗ್ದಾನಗಳಲ್ಲಿ ನಂಬಿಕೆಯನ್ನಿಟ್ಟು, ನಾನು ಯಾರೊಂದಿಗೆ ಅಭ್ಯಾಸಮಾಡುತ್ತೇನೊ ಅವರು ತಮ್ಮ ಜೀವಿತದಲ್ಲಿ ಬದಲಾವಣೆಗಳನ್ನು ಮಾಡುವರೆ ಹೇಗೆ ಸಹಾಯಮಾಡಬಲ್ಲೆ ಎಂದು ಹೆಚ್ಚಾಗಿ ಯೋಚಿಸುತ್ತೇನೆ. ಪ್ರತಿ ದಿನಾಂತ್ಯದಲ್ಲಿ ನನ್ನ ನಿದ್ರೆ ಸುಖವಾದದ್ದೂ ನನ್ನ ಹೃದಯ ಆನಂದಭರಿತವೂ ಆದದ್ದಾಗಿರುತ್ತದೆ.”
6. ಕೆಲವು ಮಂದಿ ಪಯನೀಯರರು ಯಾವ ವಿಶೇಷ ಆನಂದದ ಅನುಭವವನ್ನು ಪಡೆದಿದ್ದಾರೆ?
6 ಅನೇಕ ದಶಕಗಳಿಂದ ಪಯನೀಯರ್ ಸೇವೆ ಮಾಡುತ್ತಿರುವ ಕೆಲವರಿಗೆ, ದೂರದ ಪ್ರದೇಶಗಳಲ್ಲಿ, ಅಂತಿಮವಾಗಿ ಸರ್ಕಿಟ್‌ಗಳಾಗಿ ಬೆಳೆದ ಸಭೆಗಳನ್ನು ಸ್ಥಾಪಿಸುವ ವಿಶೇಷಾನಂದವು ದೊರಕಿದೆ. ಉದಾಹರಣೆಗೆ, ಹಾಕೈಡೊದ ಆಬಶಿರೀ (ಜಪಾನಿನ ಅತಿ ಉತ್ತರದಿಕ್ಕಿನ ದ್ವೀಪ)ಯಲ್ಲಿ 33 ವರ್ಷಗಳಿಂದ ಪಯನೀಯರಳಾಗಿರುವ ಒಬ್ಬಾಕೆ ಸಹೋದರಿಯಿದ್ದಾಳೆ. ಇಡೀ ಹಾಕೈಡೊ ಪ್ರದೇಶಕ್ಕಾಗಿದ್ದ ತನ್ನ ಪ್ರಥಮ ಸರ್ಕಿಟ್ ಸಮ್ಮೇಳನದಲ್ಲಿ ಕೇವಲ 70 ಮಂದಿ ಉಪಸ್ಥಿತರಿದ್ದರೆಂದು ಆಕೆ ನೆನಸಿಕೊಳ್ಳುತ್ತಾಳೆ. ಮತ್ತು ಈಗ? ಆ ದ್ವೀಪದಲ್ಲಿ 12 ಸರ್ಕಿಟ್‌ಗಳಿವೆ, ಒಟ್ಟು 12,000ಗಳಿಗೂ ಹೆಚ್ಚು ಮಂದಿ ಪ್ರಚಾಕರರಿದ್ದಾರೆ. ಆಕೆ ಸಮ್ಮೇಳನಗಳನ್ನೂ ಅಧಿವೇಶನಗಳನ್ನೂ ಹಾಜರಾಗುವಾಗ, ಆ ದ್ವೀಪದಲ್ಲಿರುವ ಜೊತೆ ರಾಜ್ಯ ಘೋಷಕರ ಸಮೂಹಗಳನ್ನು ಕಂಡು ಆಕೆಯ ಹೃದಯವು ಹೇಗೆ ಸಂತೋಷದಿಂದ ಉಕ್ಕಿ ಹರಿಯುತ್ತದೆಂಬುದನ್ನು ಭಾವಿಸಿಕೊಳ್ಳಿರಿ!
7, 8. ದೀರ್ಘ ಸಮಯದಿಂದ ಸೇವೆಮಾಡಿರುವಂತಹ ಅಧಿಕಾಂಶ ಪಯನೀಯರರು ಯಾವ ಆನಂದವನ್ನು ಅನುಭವಿಸಿದ್ದಾರೆ?
7 ಇತರ ದೀರ್ಘಕಾಲದ ಪಯನೀಯರರಿಗೆ ಬೈಬಲ್ ವಿದ್ಯಾರ್ಥಿಗಳು ದೀಕ್ಷಾಸ್ನಾನಹೊಂದಿ, ಸೇವೆಯ ಹೆಚ್ಚಿನ ಸುಯೋಗಗಳಿಗಾಗಿ ಎಟುಕಿಸಿಕೊಳ್ಳುವುದನ್ನು ನೋಡುವ ಆನಂದವಿದೆ. ಜಪಾನಿನಲ್ಲಿ, 1957ರಿಂದ ಒಂಬತ್ತು ವಿಭಿನ್ನ ಪಯನೀಯರ್ ನೇಮಕಗಳಲ್ಲಿ ಸೇವೆಮಾಡಿರುವ ಸಹೋದರಿಯೊಬ್ಬಳು, ಬ್ಯಾಂಕ್‌ನಲ್ಲಿ ಕೆಲಸಮಾಡುತ್ತಿದ್ದ ಯುವತಿಯೊಬ್ಬಳಿಗೆ ಎಚ್ಚರ! ಪತ್ರಿಕೆ ಕೊಟ್ಟದ್ದನ್ನು ಜ್ಞಾಪಿಸಿಕೊಳ್ಳುತ್ತಾಳೆ. ಒಂಬತ್ತು ತಿಂಗಳುಗಳೊಳಗೆ ಆ ಯುವತಿ ದೀಕ್ಷಾಸ್ನಾನ ಹೊಂದಿದಳು. ತರುವಾಯ ಅವಳು ಮದುವೆಯಾಗಿ, ಆಕೆಯೂ ಆಕೆಯ ಗಂಡನೂ ಸ್ಪೆಷಲ್ ಪಯನೀಯರರಾದರು. ಈ ಪಯನೀಯರ್ ಸಹೋದರಿಯ ಮೂರನೆಯ ನೇಮಕದಲ್ಲಿ ಒಬ್ಬ ಹೊಸ ಸರ್ಕಿಟ್ ಮೇಲ್ವಿಚಾರಕನೂ ಅವನ ಹೆಂಡತಿಯೂ—ಆಕೆಯ ಹಿಂದಿನ ಬೈಬಲ್ ವಿದ್ಯಾರ್ಥಿ—ಭೇಟಿಕೊಟ್ಟದ್ದು ಎಷ್ಟೊಂದು ಆನಂದದಾಯಕವಾಗಿತ್ತು!
8 ಪಯನೀಯರ್ ಶುಶ್ರೂಷೆಯನ್ನು ಜೀವನಪಥವಾಗಿ ಮಾಡಿಕೊಂಡಿರುವವರು, 22 ವರ್ಷಗಳಷ್ಟು ಸೇವೆಮಾಡಿರುವ ಒಬ್ಬ ಪಯನೀಯರನು ಹೇಳಿದಂತೆ, ಅದನ್ನು “ನಿಧಿಯಂತೆ ಕಾಣಬೇಕಾದ ಬೆಲೆಕಟ್ಟಲಾಗದ ಒಂದು ಸುಯೋಗ”ದಂತೆ ವೀಕ್ಷಿಸುತ್ತಾರೆ!
ಯೆಹೋವನ ಪರಾಮರಿಕೆಯ ಸಾಕ್ಷ್ಯ
9. ಮಹಾ ಒದಗಿಸುವಾತನಾಗಿರುವ ಯೆಹೋವನು ತನ್ನ ಸೇವಕರಿಗೆ ಯಾವ ವಚನವನ್ನು ಕೊಡುತ್ತಾನೆ, ಮತ್ತು ನಮಗಾಗಿ ಅದು ಏನನ್ನು ಅರ್ಥೈಸುತ್ತದೆ?
9 ಮಹಾ ಒದಗಿಸುವಾತನಾದ ಯೆಹೋವನು ತನ್ನ ಸೇವಕರನ್ನು ಆತ್ಮಿಕವಾಗಿಯೂ ಭೌತಿಕವಾಗಿಯೂ ಪರಾಮರಿಸಿ ಪೋಷಿಸುವ ವಚನಕೊಡುತ್ತಾನೆ. ಪುರಾತನಕಾಲದ ರಾಜ ದಾವೀದನು ಯೋಗ್ಯವಾಗಿಯೇ ಹೀಗೆ ಹೇಳಸಾಧ್ಯವಿತ್ತು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.” (ಕೀರ್ತನೆ 37:25) ಹೌದು, ಈ ದೈವಿಕ ಖಾತರಿ, ನಮ್ಮ ಕುಟುಂಬಕ್ಕೆ ಭೌತಿಕವಾಗಿ ಒದಗಿಸುವ ನಮ್ಮ ಜವಾಬ್ದಾರಿಯಿಂದ ನಮಗೆ ವಿನಾಯಿತಿ ನೀಡುವುದೂ ಇಲ್ಲ, ನಮ್ಮ ಕ್ರೈಸ್ತ ಸಹೋದರರ ಉದಾರಭಾವದಿಂದ ಪ್ರಯೋಜನಪಡೆಯುವರೆ ನಮಗೆ ಪರವಾನಗಿ ಕೊಡುವುದೂ ಇಲ್ಲ. (1 ಥೆಸಲೊನೀಕ 4:11, 12; 1 ತಿಮೊಥೆಯ 5:8) ಆದರೂ, ಯೆಹೋವನನ್ನು ಹೆಚ್ಚು ಪೂರ್ಣವಾಗಿ ಸೇವಿಸಲಿಕ್ಕಾಗಿ, ನಾವು ನಮ್ಮ ಜೀವಿತಗಳಲ್ಲಿ ಇಚ್ಛಾಪೂರ್ವಕವಾಗಿ ತ್ಯಾಗಮಾಡುವಾಗ, ಆತನು ಎಂದಿಗೂ ನಮ್ಮನ್ನು ತೊರೆದುಬಿಡುವುದಿಲ್ಲ.—ಮತ್ತಾಯ 6:33.
10, 11. ಅನೇಕ ಪಯನೀಯರರು ಅನುಭವದಿಂದ, ಯೆಹೋವನ ಒದಗಿಸುವ ಸಾಮರ್ಥ್ಯದ ಕುರಿತು ಏನನ್ನು ಅರಿತಿದ್ದಾರೆ?
10 ಯೆಹೋವನ ಪರಾಮರಿಕೆಯ ಹಸ್ತಗಳಲ್ಲಿ ತಮ್ಮನ್ನು ಇರಿಸಿಕೊಳ್ಳುವವರಿಗೆ ಯೆಹೋವನು ಒದಗಿಸುತ್ತಾನೆಂಬುದು ಲೋಕವ್ಯಾಪಕವಾಗಿರುವ ಪಯನೀಯರರಿಗೆ ಅನುಭವದಿಂದ ತಿಳಿದಿದೆ. ರಾಜ್ಯ ಸೌವಾರ್ತಿಕರ ಹೆಚ್ಚಿನ ಆವಶ್ಯಕತೆಯಿದ್ದ ಒಂದು ಚಿಕ್ಕ ಪಟ್ಟಣಕ್ಕೆ ಸ್ಥಳಾಂತರಿಸಿದ ಒಬ್ಬ ಪಯನೀಯರ್ ದಂಪತಿಗಳ ವಿದ್ಯಮಾನವನ್ನು ಪರಿಗಣಿಸಿರಿ. ಕೆಲವು ತಿಂಗಳುಗಳ ಬಳಿಕ, ಉದ್ಯೋಗ ದೊರೆಯುವುದು ವಿರಳವಾಯಿತು ಮತ್ತು ಅವರ ಉಳಿತಾಯದ ಹಣವು ಕ್ಷೀಣಿಸಿತು. ಆಗ ಅವರ ಕಾರ್ ವಿಮೆಯ 81 ಡಾಲರ್‌ಗಳಿಗೆ ಬಿಲ್ ಬಂದು ಮುಟ್ಟಿತು. ಸಹೋದರನು ಹೇಳಿದ್ದು: “ನಮಗೆ ಅದನ್ನು ತೆರುವ ಮಾರ್ಗವೇ ಇರಲಿಲ್ಲ. ನಾವು ಆ ರಾತ್ರಿ ಬಲವತ್ತಾಗಿ ಪ್ರಾರ್ಥಿಸಿದೆವು.” ಮರುದಿನ, ಸ್ವತಃ ಆರ್ಥಿಕವಾಗಿ ಪ್ರಯಾಸಪಡುತ್ತಿದ್ದ ಒಂದು ಕುಟುಂಬದಿಂದ ಅವರಿಗೆ ಒಂದು ಪತ್ರ ಬಂತು. ತಮಗೆ ಒಂದು ತೆರಿಗೆ ಮರುಪಾವತಿ (ರೀಫಂಡ್) ದೊರಕಿದೆಯೆಂದೂ, ಅದು ತಾವು ಎಣಿಸಿದ್ದಕ್ಕಿಂತ ಹೆಚ್ಚಾಗಿರುವುದರಿಂದ ಅವರು ಅದನ್ನು ಪಯನೀಯರ್ ದಂಪತಿಗಳೊಂದಿಗೆ ಹಂಚಿಕೊಳ್ಳಲು ಬಯಸಿದ್ದಾರೆಂದೂ ಆ ಪತ್ರ ತಿಳಿಸಿತು. ಒಳಗೆ 81 ಡಾಲರ್‌ಗಳಿಗಾಗಿ ಒಂದು ಚೆಕ್ ಇಡಲ್ಪಟ್ಟಿತ್ತು! ಆ ಪಯನೀಯರ್ ಸಹೋದರನು ಹೇಳುವುದು: “ಆ ದಿನವನ್ನು ನಾನೆಂದೂ ಮರೆಯಲಾರೆ—ನನ್ನ ಕತ್ತಿನ ರೋಮಗಳು ನೆಟ್ಟಗೆ ನಿಂತಿದ್ದವು! . . . ಈ ಕುಟುಂಬದ ಔದಾರ್ಯವನ್ನು ನಾವೆಷ್ಟೋ ಗಣ್ಯಮಾಡಿದೆವು.” ಇಂತಹ ದಯೆಯನ್ನು ಯೆಹೋವನೂ ಬೆಲೆಯುಳ್ಳದ್ದಾಗಿ ಕಾಣುತ್ತಾನೆ. ಆತನು ತನ್ನ ಸೇವಕರಲ್ಲಿ ಪ್ರೋತ್ಸಾಹಿಸುವ ಉದಾರಭಾವದ ಪ್ರಾತಿನಿಧಿಕವು ಇದೇ ಆಗಿದೆ.—ಜ್ಞಾನೋಕ್ತಿ 19:17; ಇಬ್ರಿಯ 13:16.
11 ಇದಕ್ಕೆ ಹೋಲಿಕೆಯಾಗಿರುವ ಅನುಭವಗಳನ್ನು ಅನೇಕ ಪಯನೀಯರರು ಕೊಡಬಲ್ಲರು. ಅವರನ್ನು ಕೇಳಿರಿ, ತಾವು ಎಂದಿಗೂ ‘ದಿಕ್ಕಿಲ್ಲದವರಾಗಿ’ ಬಿಡಲ್ಪಟ್ಟಿರುವುದಿಲ್ಲವೆಂದು ಅವರು ನಿಮಗೆ ಹೇಳುವರು. ಪೂರ್ಣಸಮಯದ ಶುಶ್ರೂಷೆಯ 55 ವರ್ಷಗಳನ್ನು ಹಿನ್ನೋಡುತ್ತ, 72 ವರ್ಷ ಪ್ರಾಯದ ಒಬ್ಬ ಪಯನೀಯರನು ಹೇಳಿದ್ದು: “ಯೆಹೋವನು ನನ್ನನ್ನು ಎಂದಿಗೂ ತೊರೆದಿರುವುದಿಲ್ಲ.”—ಇಬ್ರಿಯ 13:5, 6.
“ಯೆಹೋವನಿಗೆ ಹೆಚ್ಚು ನಿಕಟವಾಗಲಿಕ್ಕಿರುವ ಒಂದು ಅತ್ಯುತ್ಕೃಷ್ಟ ವಿಧ”
12. ಸುವಾರ್ತೆಯನ್ನು ಘೋಷಿಸುವ ಕಾರ್ಯವು ಅಷ್ಟೊಂದು ಗಮನಾರ್ಹವಾದ ಸುಯೋಗವಾಗಿದೆಯೇಕೆ?
12 ರಾಜ್ಯದ ಸುವಾರ್ತೆಯನ್ನು ಘೋಷಿಸಲು ಯೆಹೋವನು ಕರೆನೀಡುವುದು ಸಹ ನಮಗೆ ಒಂದು ಸುಯೋಗವಾಗಿದೆ. ನಾವು ಅಪರಿಪೂರ್ಣ ಮಾನವರಾಗಿರುವುದಾದರೂ, ಆತನು ನಮ್ಮನ್ನು ಈ ಜೀವರಕ್ಷಕ ಚಟುವಟಿಕೆಯಲ್ಲಿ ತನ್ನ “ಜೊತೆ ಕೆಲಸದವ”ರಾಗಿ ವೀಕ್ಷಿಸುತ್ತಾನೆ. (1 ಕೊರಿಂಥ 3:9; 1 ತಿಮೊಥೆಯ 4:16) ನಾವು ದೇವರ ರಾಜ್ಯದ ಕುರಿತು ಇತರರಿಗೆ ಸಾರುವಾಗ, ದುಷ್ಟತ್ವಕ್ಕೆ ಅಂತ್ಯವನ್ನು ಘೋಷಿಸುವಾಗ, ಪ್ರಾಯಶ್ಚಿತ್ತವನ್ನು ಒದಗಿಸಿದುದರಲ್ಲಿ ದೇವರ ಅದ್ಭುತಕರವಾದ ಪ್ರೀತಿಯನ್ನು ಜನರಿಗೆ ವಿವರಿಸುವಾಗ, ಆತನ ಸಜೀವ ವಾಕ್ಯವನ್ನು ತೆರೆದು ಅದರಲ್ಲಿ ಅಡಕವಾಗಿರುವ ವಿಷಯಗಳನ್ನು ಪ್ರಾಮಾಣಿಕ ಹೃದಯದ ಜನರಿಗೆ ಬೋಧಿಸುವಾಗ, ಸ್ವಾಭಾವಿಕವಾಗಿಯೇ ನಾವು ನಮ್ಮ ಸೃಷ್ಟಿಕರ್ತನಾದ ಯೆಹೋವನ ಕಡೆಗೆ ಹೆಚ್ಚು ನಿಕಟವಾಗಿ ಸೆಳೆಯಲ್ಪಡುತ್ತೇವೆ.—ಕೀರ್ತನೆ 145:11; ಯೋಹಾನ 3:16; ಇಬ್ರಿಯ 4:12.
13. ತಮ್ಮ ಪಯನೀಯರ್ ಶುಶ್ರೂಷೆಯಿಂದಾಗಿ ಯೆಹೋವನೊಂದಿಗೆ ತಮಗಿರುವ ಸಂಬಂಧದ ಮೇಲಾಗಿರುವ ಪರಿಣಾಮದ ಕುರಿತು ಕೆಲವರು ಏನು ಹೇಳುತ್ತಾರೆ?
13 ಯೆಹೋವನ ಕುರಿತು ಕಲಿಯಲು ಮತ್ತು ಕಲಿಸಲು, ಪಯನೀಯರರು ಪ್ರತಿ ತಿಂಗಳಲ್ಲಿ ಹೆಚ್ಚು ಸಮಯವನ್ನು ವ್ಯಯಿಸಲು ಶಕ್ತರಾಗುತ್ತಾರೆ. ಇದು ದೇವರೊಂದಿಗಿನ ಅವರ ಸಂಬಂಧವನ್ನು ಪ್ರಭಾವಿಸುತ್ತದೆಂಬುದರ ವಿಷಯದಲ್ಲಿ ಅವರಿಗೆ ಹೇಗನಿಸುತ್ತದೆ? ಫ್ರಾನ್ಸ್‌ನಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಸಮಯದಿಂದ ಪಯನೀಯರನಾಗಿರುವ ಒಬ್ಬ ಹಿರಿಯನು ಉತ್ತರಿಸುವುದು: “ಯೆಹೋವನಿಗೆ ಹೆಚ್ಚು ನಿಕಟವಾಗಿ ಸೆಳೆಯಲ್ಪಡಲು ಪಯನೀಯರ್ ಸೇವೆ ಒಂದು ಅತ್ಯುತ್ಕೃಷ್ಟವಾದ ವಿಧವಾಗಿದೆ.” ಹದಿನೆಂಟು ವರ್ಷಕಾಲ ಪೂರ್ಣಸಮಯದ ಶುಶ್ರೂಷೆಯಲ್ಲಿ ಕಳೆದ, ಆ ದೇಶದ ಇನ್ನೊಬ್ಬ ಪಯನೀಯರನು ಹೇಳುವುದು: “ಪಯನೀಯರ್ ಸೇವೆಯು, ‘ಯೆಹೋವನು ಉತ್ತಮನೆಂದು ಅನುಭವದಿಂದ ಸವಿದು ನೋಡಲು,’ ಹೀಗೆ, ದಿನೇದಿನೇ ನಮ್ಮ ಸೃಷ್ಟಿಕರ್ತನೊಂದಿಗೆ ಇನ್ನೂ ಬಲವಾದ ಸಂಬಂಧವನ್ನು ಬೆಳೆಸಲು ಅನುಮತಿಯನ್ನೀಯುತ್ತದೆ.” (ಕೀರ್ತನೆ 34:8) ಬ್ರಿಟನ್‌ನಲ್ಲಿ 30 ವರ್ಷಗಳಿಂದ ಪಯನೀಯರಳಾಗಿರುವ ಒಬ್ಬಾಕೆ ಸಹೋದರಿಗೂ ಹಾಗೆಯೇ ಅನಿಸುತ್ತದೆ. ಅವಳು ಹೇಳುವುದು: “ನನ್ನ ಶುಶ್ರೂಷೆಯಲ್ಲಿ ಮಾರ್ಗದರ್ಶನಕ್ಕಾಗಿ ಯೆಹೋವನ ಆತ್ಮವನ್ನು ಅವಲಂಬಿಸುವುದು ನನ್ನನ್ನು ಆತನಿಗೆ ಹೆಚ್ಚು ನಿಕಟವಾಗಿಸುತ್ತದೆ. ಅನೇಕ ಸಂದರ್ಭಗಳಲ್ಲಿ ಯೆಹೋವನ ಆತ್ಮವು ಒಂದು ನಿರ್ದಿಷ್ಟ ಮನೆಗೆ ಸರಿಯಾದ ಸಮಯಕ್ಕೆ ನನ್ನನ್ನು ನಡೆಸಿತೆಂದು ನನಗೆ ನಿಜವಾಗಿಯೂ ಅನಿಸಿದೆ.”—ಹೋಲಿಸಿ ಅ. ಕೃತ್ಯಗಳು 16:6-10.
14. ಇತರರಿಗೆ ಕಲಿಸಲಿಕ್ಕಾಗಿ ಬೈಬಲ್ ಮತ್ತು ಬೈಬಲಾಧಾರಿತ ಪ್ರಕಾಶನಗಳನ್ನು ದಿನೇದಿನೇ ಬಳಸುವುದರಿಂದ ಪಯನೀಯರರಿಗೆ ಹೇಗೆ ಪ್ರಯೋಜನವಾಗುತ್ತದೆ?
14 ಶಾಸ್ತ್ರೀಯ ಸತ್ಯಗಳನ್ನು ವಿವರಿಸಿ, ಕಲಿಸಲು ಬೈಬಲ್ ಮತ್ತು ಬೈಬಲಾಧಾರಿತ ಸಾಹಿತ್ಯಗಳನ್ನು ದಿನೇದಿನೇ ಬಳಸುವುದು, ತಾವು ದೇವರ ವಾಕ್ಯದ ಜ್ಞಾನದಲ್ಲಿ ಬೆಳೆಯುವಂತೆ ಸಹಾಯಮಾಡುತ್ತದೆಂದು ಅನೇಕ ಪಯನೀಯರರು ಕಂಡುಕೊಂಡಿದ್ದಾರೆ. ಸ್ಪೆಯ್ನ್‌ನಲ್ಲಿ 31 ವರ್ಷಗಳಿಂದ ಪಯನೀಯರನಾಗಿರುವ 85 ವರ್ಷ ಪ್ರಾಯದ ಸಹೋದರನು ತಿಳಿಸುವುದು: “ಪಯನೀಯರ್ ಸೇವೆಯು ನನಗೆ ಬೈಬಲಿನ ಗಾಢವಾದ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಿದೆ. ಅನೇಕ ಜನರು ಯೆಹೋವನನ್ನು ಮತ್ತು ಆತನ ಉದ್ದೇಶಗಳನ್ನು ತಿಳಿದುಕೊಳ್ಳುವಂತೆ ಸಹಾಯಮಾಡಲು ನಾನು ಈ ಜ್ಞಾನವನ್ನು ಉಪಯೋಗಿಸಿದ್ದೇನೆ.” ಪಯನೀಯರ್ ಸೇವೆಯನ್ನು 23 ವರ್ಷಗಳಿಂದ ಮಾಡುತ್ತಿರುವ ಬ್ರಿಟನ್‌ನ ಸಹೋದರಿಯೊಬ್ಬಳು ಹೇಳುವುದು: “ಆತ್ಮಿಕ ಆಹಾರಕ್ಕಾಗಿ ಸಾಕಷ್ಟು ಹಸಿವನ್ನು ಬೆಳೆಸುವರೆ ಪೂರ್ಣಸಮಯದ ಸೇವೆ ನನಗೆ ಸಹಾಯ ಮಾಡಿದೆ.” “ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರ”ವನ್ನು ಇತರರಿಗೆ ತಿಳಿಸುವುದು, ನೀವು ಪ್ರಿಯವೆಂದು ಪರಿಗಣಿಸುವ ವಿಶ್ವಾಸಗಳ ಕುರಿತು ನಮಗಿರುವ ಸ್ವಂತ ನಿಶ್ಚಿತಾಭಿಪ್ರಾಯಗಳನ್ನು ಬಲಪಡಿಸಬಲ್ಲದು. (1 ಪೇತ್ರ 3:15) ಆಸ್ಟ್ರೇಲಿಯದ ಒಬ್ಬ ಪಯನೀಯರನು ಹೇಳುವುದು: “ನಾನು ನನ್ನ ನಂಬಿಕೆಯನ್ನು ಇತರರಿಗೆ ತಿಳಿಯಪಡಿಸುವಾಗ, ಪಯನೀಯರ್ ಸೇವೆಯು ನನ್ನ ನಂಬಿಕೆಯನ್ನು ವರ್ಧಿಸುತ್ತದೆ.”
15. ಪಯನೀಯರ್ ಶುಶ್ರೂಷೆಯನ್ನು ಸೇರಿ ಅದರಲ್ಲಿ ಉಳಿಯಲಿಕ್ಕಾಗಿ ಅನೇಕರು ಏನು ಮಾಡಲು ಸಿದ್ಧರಾಗಿದ್ದಾರೆ, ಮತ್ತು ಏಕೆ?
15 ಈ ಪಯನೀಯರ್ ಶುಶ್ರೂಷಕರಿಗೆ, ಯೆಹೋವನಿಂದ ಅಸಂಖ್ಯಾತ ಆಶೀರ್ವಾದಗಳನ್ನು ಪಡೆದುಕೊಳ್ಳುವ ಸೇವಾ ವಿಧಾನವನ್ನು ತಾವು ಆರಿಸಿಕೊಂಡಿದ್ದೇವೆಂಬ ದೃಢನಂಬಿಕೆಯಿದೆಯೆಂಬುದು ಸ್ಪಷ್ಟ. ಪಯನೀಯರ್ ಶುಶ್ರೂಷೆಗೆ ಸೇರಿ, ಅದರಲ್ಲಿ ಉಳಿಯಲಿಕ್ಕಾಗಿ ಅನೇಕರು ತಮ್ಮ ಜೀವಿತಗಳಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು, ಲೌಕಿಕೋದ್ಯೋಗ ಮತ್ತು ಪ್ರಾಪಂಚಿಕ ಐಶ್ವರ್ಯಗಳನ್ನು ತ್ಯಾಗಮಾಡಲೂ ಸಿದ್ಧರಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ!—ಜ್ಞಾನೋಕ್ತಿ 28:20.
ಹೆಚ್ಚನ್ನು ಮಾಡಲು ನಿಮ್ಮ ಹೃದಯವು ಹಾತೊರೆಯುತ್ತದೊ?
16, 17. (ಎ) ಪಯನೀಯರ್ ಸೇವೆಮಾಡುವುದು ನಿಮಗೆ ಸಾಧ್ಯವೊ ಇಲ್ಲವೊ ಎಂದು ನೀವು ಕುತೂಹಲಪಡುತ್ತಿರುವುದಾದರೆ, ನೀವೇನು ಮಾಡಬಹುದು? (ಬಿ) ಪಯನೀಯರ್ ಸೇವೆಮಾಡಲು ಅಶಕ್ತರಾಗುವಾಗ ಕೆಲವರಿಗೆ ಹೇಗನಿಸುತ್ತದೆ?
16 ಪಯನೀಯರ್ ಶುಶ್ರೂಷೆಯ ಆಶೀರ್ವಾದಗಳ ಕುರಿತು ಪಯನೀಯರರು ಹೇಳಿರುವುದನ್ನು ಪರಿಗಣಿಸಿದ ಮೇಲೆ, ಪಯನೀಯರ್ ಸೇವೆ ನಿಮಗೆ ಪ್ರಾಯೋಗಿಕವಾಗಿದೆಯೊ ಇಲ್ಲವೊ ಎಂದು ನೀವು ಕುತೂಹಲಪಡುತ್ತಿರಬಹುದು. ಹಾಗಿರುವಲ್ಲಿ, ಪೂರ್ಣಸಮಯದ ಶುಶ್ರೂಷೆಯಲ್ಲಿ ಸಾಫಲ್ಯಹೊಂದಿರುವ ಪಯನೀಯರನೊಂದಿಗೆ ಏಕೆ ಮಾತಾಡಬಾರದು? ನಿಮ್ಮ ಪರಿಚಯವಿರುವ, ನಿಮ್ಮ ಆರೋಗ್ಯ, ಪರಿಮಿತಿಗಳು ಮತ್ತು ನಿಮ್ಮ ಕುಟುಂಬ ಜವಾಬ್ದಾರಿಗಳನ್ನು ತಿಳಿದಿರುವ ಸಭೆಯ ಹಿರಿಯರೊಂದಿಗೆ ಮಾತಾಡುವುದೂ ಸಹಾಯಕರವೆಂದು ನೀವು ಕಂಡುಕೊಂಡೀರಿ. (ಜ್ಞಾನೋಕ್ತಿ 15:22) ಇತರರ ವಸ್ತುನಿಷ್ಠ ಹೇಳಿಕೆಗಳು, ಪಯನೀಯರ್ ಸೇವೆ ನಿಮಗಾಗಿದೆಯೊ ಇಲ್ಲವೊ ಎಂದು ಮೌಲ್ಯಮಾಪನ ಮಾಡಲು ನಿಮಗೆ ಸಹಾಯಮಾಡೀತು. (ಹೋಲಿಸಿ ಲೂಕ 14:28.) ನೀವು ಪಯನೀಯರರಾಗಲು ಸಾಧ್ಯವಿರುವಲ್ಲಿ, ನಿಮಗಿರುವ ಆಶೀರ್ವಾದಗಳೊ ಮಹತ್ತರವಾಗಿರುವುವು.—ಮಲಾಕಿಯ 3:10.
17 ಹಾಗಾದರೆ, ಶುಶ್ರೂಷೆಯಲ್ಲಿ ಹೆಚ್ಚಿನದ್ದನ್ನು ಮಾಡಲು ಹಾರೈಸಿದರೂ, ಪಯನೀಯರ್ ಸೇವೆಮಾಡುವ ಸ್ಥಾನದಲ್ಲಿಲ್ಲದ ಅನೇಕ ನಂಬಿಗಸ್ತರಾದ ರಾಜ್ಯ ಪ್ರಚಾರಕರ ಕುರಿತೇನು? ದೃಷ್ಟಾಂತಕ್ಕೆ, ತನ್ನ ನಾಲ್ವರು ಮಕ್ಕಳನ್ನು ತಾನಾಗಿಯೇ ಬೆಳೆಸಲು ಹೋರಾಡುತ್ತಿರುವ ಒಬ್ಬ ಕ್ರೈಸ್ತ ಸಹೋದರಿಯ ಅನಿಸಿಕೆಗಳನ್ನು ಪರಿಗಣಿಸಿರಿ. ಅವಳನ್ನುವುದು: “ನನ್ನ ಮನಸ್ಸಿಗೆ ನೋವಾಗುತ್ತದೆ, . . . ಏಕೆಂದರೆ ನಾನು ಕ್ರಮದ ಪಯನೀಯರಳಾಗಿದ್ದೆ, ಆದರೆ ಈಗ, ನನ್ನ ಪರಿಸ್ಥಿತಿಗಳಿಂದಾಗಿ ನನಗೆ ಕ್ಷೇತ್ರಸೇವೆಯಲ್ಲಿ ಮೊದಲಿನಷ್ಟು ಹೋಗಲಿಕ್ಕಾಗುವುದಿಲ್ಲ.” ಈ ಸಹೋದರಿ ತನ್ನ ಮಕ್ಕಳನ್ನು ಗಾಢವಾಗಿ ಪ್ರೀತಿಸುತ್ತಾಳೆ ಮತ್ತು ಅವರಿಗಾಗಿ ಒದಗಿಸಲು ಬಯಸುತ್ತಾಳೆ. ಅದೇ ಸಮಯದಲ್ಲಿ ಸಾರುವ ಕಾರ್ಯದಲ್ಲಿ ಹೆಚ್ಚನ್ನು ಮಾಡಲು ಆಕೆ ಹಾತೊರೆಯುತ್ತಾಳೆ. “ಶುಶ್ರೂಷೆ ನನಗೆ ಬಲು ಇಷ್ಟ” ಎನ್ನುತ್ತಾಳೆ ಅವಳು. ದೇವರಿಗಾಗಿ ಯಾರಲ್ಲಿರುವ ಪ್ರೀತಿಯು, ಅವರು ಯೆಹೋವನನ್ನು ‘ಪೂರ್ಣ ಹೃದಯದಿಂದ’ ಸೇವಿಸಬಯಸುವಂತೆ ಪ್ರೇರಿಸುತ್ತದೊ ಅಂತಹ ಇತರ ಅರ್ಪಿತ ಕ್ರೈಸ್ತರೂ ತದ್ರೀತಿಯ ಅನಿಸಿಕೆಗಳಲ್ಲಿ ಪಾಲಿಗರಾಗುತ್ತಾರೆ.—ಕೀರ್ತನೆ 86:12.
18. (ಎ) ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? (ಬಿ) ನಾವು ಮಾಡಶಕ್ತರಾಗುವುದನ್ನು ಪರಿಸ್ಥಿತಿಗಳು ಪರಿಮಿತಗೊಳಿಸುವುದಾದರೆ ನಾವೇಕೆ ನಿರಾಶರಾಗಬಾರದು?
18 ಯೆಹೋವನು ನಮ್ಮಿಂದ ಅಪೇಕ್ಷಿಸುವುದು ಪೂರ್ಣಪ್ರಾಣದ ಸೇವೆಯೇ ಎಂಬುದನ್ನು ಜ್ಞಾಪಕದಲ್ಲಿಡಿರಿ. ಈ ಸೇವೆಯ ಮೊತ್ತವು ವ್ಯಕ್ತಿಯಿಂದ ವ್ಯಕ್ತಿಗೆ ಗಣನೀಯವಾಗಿ ವ್ಯತ್ಯಾಸವುಳ್ಳದ್ದಾಗಿರಬಹುದು. ಕೆಲವರು ಕ್ರಮದ ಪಯನೀಯರರಾಗಿ ಸೇವೆಮಾಡಲು ತಮ್ಮ ಕಾರ್ಯಕಲಾಪಗಳನ್ನು ಹೊಂದಿಸಿಕೊಳ್ಳಶಕ್ತರಾಗಿರುತ್ತಾರೆ. ಇನ್ನು ಅನೇಕರು ಒಮ್ಮೊಮ್ಮೆ ಅಥವಾ ಅವಿಚ್ಫಿನ್ನವಾಗಿ, ಪ್ರತಿ ತಿಂಗಳಿಗೆ ಶುಶ್ರೂಷೆಯಲ್ಲಿ 60 ತಾಸುಗಳನ್ನು ವ್ಯಯಿಸಲಿಕ್ಕಾಗಿ ಆಕ್ಸಿಲಿಯರಿ ಪಯನೀಯರರಾಗಿ ನಮೂದಿಸಿಕೊಳ್ಳುತ್ತಾರೆ. ಆದರೂ, ಯೆಹೋವನ ಜನರಲ್ಲಿ ಅಧಿಕಾಂಶ ಜನರು ಸಭಾ ಪ್ರಚಾರಕರಾಗಿ ಸಾರುವ ಮತ್ತು ಕಲಿಸುವ ಕಾರ್ಯದಲ್ಲಿ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ಆದಕಾರಣ, ನೀವು ನಿಜವಾಗಿಯೂ ನ್ಯೂನಾರೋಗ್ಯ, ವೃದ್ಧಾಪ್ಯ, ಕುಟುಂಬ ಜವಾಬ್ದಾರಿಗಳು ಅಥವಾ ಬೇರೆ ಪರಿಸ್ಥಿತಿಗಳ ಕಾರಣ ಪರಿಮಿತಿಗೊಳಗಾಗಿರುವುದಾದರೆ, ನಿರುತ್ಸಾಹಗೊಳ್ಳಬೇಡಿ. ನಿಮಗಿರುವ ಅತ್ಯುತ್ತಮವಾದುದನ್ನು ನೀವು ಕೊಡುತ್ತಿರುವಷ್ಟು ಕಾಲ, ದೇವರ ದೃಷ್ಟಿಯಲ್ಲಿ ನಿಮ್ಮ ಸೇವೆಯು, ಪೂರ್ಣಸಮಯದ ಶುಶ್ರೂಷೆಯಲ್ಲಿರುವವರ ಸೇವೆ ಹೇಗೊ ಹಾಗೆಯೇ ಅಮೂಲ್ಯವಾದದ್ದಾಗಿರುತ್ತದೆ!
ಸರ್ವರೂ ಪಯನೀಯರ್ ಮನೋಭಾವವನ್ನು ಪ್ರದರ್ಶಿಸಬಲ್ಲರು
19. ಪಯನೀಯರ್ ಮನೋಭಾವ ಎಂದರೇನು?
19 ನೀವು ಪಯನೀಯರರಾಗಿ ಸೇರಿಕೊಳ್ಳಲು ಶಕ್ತರಾಗಿರಲಿಕ್ಕಿಲ್ಲವಾದರೂ, ನೀವು ಪಯನೀಯರ್ ಮನೋಭಾವವನ್ನು ಪ್ರದರ್ಶಿಸಬಲ್ಲಿರಿ. ಪಯನೀಯರ್ ಮನೋಭಾವ ಎಂದರೇನು? ನಮ್ಮ ರಾಜ್ಯದ ಸೇವೆ (ಇಂಗ್ಲಿಷ್), ಜುಲೈ 1988ರ ಸಂಚಿಕೆಯು ಹೇಳಿದ್ದು: “ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಆಜ್ಞೆಯ ಕಡೆಗೆ ಸಕಾರಾತ್ಮಕ ಭಾವವುಳ್ಳರಾಗಿರುವುದು, ಜನರಿಗೆ ಪ್ರೀತಿ ಮತ್ತು ಪರಿಗಣನೆ ತೋರಿಸುವುದಕ್ಕೆ ಪೂರ್ತಿ ಬದ್ಧರಾಗಿರುವುದು, ಸ್ವತ್ಯಾಗಿಗಳಾಗಿರುವುದು, ಯಜಮಾನನನ್ನು ಒತ್ತಾಗಿ ಅನುಸರಿಸುವುದರಲ್ಲಿ ಆನಂದವನ್ನು ಕಂಡುಕೊಳ್ಳುವುದು ಮತ್ತು ಭೌತಿಕ ವಿಷಯಗಳಲ್ಲಲ್ಲ, ಆತ್ಮಿಕ ವಿಷಯಗಳಲ್ಲಿ ಸಂತೋಷಿಸುವುದು ಎಂದು ಇದನ್ನು ನಿರೂಪಿಸಬಹುದು.” ಈ ಪಯನೀಯರ್ ಮನೋಭಾವವನ್ನು ನೀವು ಹೇಗೆ ಪ್ರದರ್ಶಿಸಬಲ್ಲಿರಿ?
20. ಹೆತ್ತವರು ಪಯನೀಯರ್ ಮನೋಭಾವವನ್ನು ಹೇಗೆ ಪ್ರದರ್ಶಿಸಬಲ್ಲರು?
20 ಚಿಕ್ಕ ಮಕ್ಕಳಿರುವ ಹೆತ್ತವರು ನೀವಾಗಿರುವಲ್ಲಿ, ಅವರಿಗೆ ಪಯನೀಯರರಾಗುವ ಜೀವನಪಥವನ್ನು ನೀವು ಪೂರ್ಣ ಹೃದಯದಿಂದ ಶಿಫಾರಸ್ಸು ಮಾಡಸಾಧ್ಯವಿದೆ. ಶುಶ್ರೂಷೆಯ ಕಡೆಗಿನ ನಿಮ್ಮ ಸಕಾರಾತ್ಮಕ ಮನೋಭಾವವು, ಯೆಹೋವನ ಸೇವೆಯನ್ನು ತಮ್ಮ ಜೀವನದ ಅತಿ ಪ್ರಾಮುಖ್ಯ ವಿಷಯವನ್ನಾಗಿ ಮಾಡುವ ಅಗತ್ಯವನ್ನು ಅವರಿಗೆ ಮನದಟ್ಟುಮಾಡೀತು. ನಿಮ್ಮ ಮಕ್ಕಳು ಪೂರ್ಣಸಮಯದ ಶುಶ್ರೂಷೆಯಲ್ಲಿ ಆನಂದವನ್ನು ಕಂಡುಕೊಂಡವರ ಮಾದರಿಯಿಂದ ಲಾಭಪಡೆಯಲಾಗುವಂತೆ, ನೀವು ಪಯನೀಯರರನ್ನು ಮತ್ತು ಸಂಚಾರ ಮೇಲ್ವಿಚಾರಕರು ಮತ್ತು ಅವರ ಹೆಂಡತಿಯರನ್ನು ನಿಮ್ಮ ಮನೆಗೆ ಆಮಂತ್ರಿಸಬಹುದು. (ಹೋಲಿಸಿ ಇಬ್ರಿಯ 13:7.) ಧಾರ್ಮಿಕವಾಗಿ ವಿಭಾಗವಾಗಿರುವ ಮನೆಗಳಲ್ಲಿ ಸಹ ವಿಶ್ವಾಸಿ ಹೆತ್ತವರು, ನಡೆನುಡಿಗಳಿಂದ ತಮ್ಮ ಮಕ್ಕಳು ಪೂರ್ಣಸಮಯದ ಶುಶ್ರೂಷೆಯನ್ನು ಜೀವನದ ಒಂದು ಗುರಿಯನ್ನಾಗಿ ಮಾಡಿಕೊಳ್ಳುವಂತೆ ಸಹಾಯಮಾಡಬಲ್ಲರು.—2 ತಿಮೊಥೆಯ 1:5; 3:15.
21. (ಎ) ಪಯನೀಯರ್ ಸೇವೆಮಾಡುತ್ತಿರುವವರಿಗೆ ನಾವೆಲ್ಲರೂ ಹೇಗೆ ಬೆಂಬಲವನ್ನು ಕೊಡಬಲ್ಲೆವು? (ಬಿ) ಪಯನೀಯರರನ್ನು ಪ್ರೋತ್ಸಾಹಿಸಲು ಹಿರಿಯರು ಏನು ಮಾಡಬಲ್ಲರು?
21 ಸಭೆಯಲ್ಲಿ ಪಯನೀಯರ್ ಸೇವೆ ಮಾಡಶಕ್ತರಾಗಿರುವವರಿಗೆ ನಾವೆಲ್ಲರೂ ಪೂರ್ಣಹೃದಯದ ಬೆಂಬಲವನ್ನು ಕೊಡಸಾಧ್ಯವಿದೆ. ಉದಾಹರಣೆಗೆ, ವಿಶೇಷವಾಗಿ ಪಯನೀಯರನು ಒಬ್ಬಂಟಿಗನಾಗಿ ಸೇವೆಮಾಡುವ ಸಮಯದಲ್ಲಿ, ನೀವು ಶುಶ್ರೂಷೆಯಲ್ಲಿ ಅವನೊಂದಿಗೆ ಸೇವೆಮಾಡಲು ವಿಶೇಷ ಪ್ರಯತ್ನವನ್ನು ಮಾಡಬಲ್ಲಿರೊ? ಆಗ “ಪ್ರೋತ್ಸಾಹದ ವಿನಿಮಯ” (NW)ವಾಗುವುದನ್ನು ನೀವು ಕಂಡುಕೊಂಡೀರಿ. (ರೋಮಾಪುರ 1:11, 12) ನೀವು ಹಿರಿಯರಾಗಿರುವುದಾದರೆ, ಪಯನೀಯರರನ್ನು ಪ್ರೋತ್ಸಾಹಿಸುವರೆ ನೀವು ಇನ್ನೂ ಹೆಚ್ಚಿನದ್ದನ್ನು ಮಾಡಬಲ್ಲಿರಿ. ಹಿರಿಯರ ಮಂಡಳಿಯು ಕೂಡಿಬರುವಾಗ, ಅವರು ಪಯನೀಯರರ ಅಗತ್ಯಗಳನ್ನು ನಿಯತಕ್ರಮದಲ್ಲಿ ಪರ್ಯಾಲೋಚಿಸಬೇಕು. ಪಯನೀಯರನೊಬ್ಬನು ನಿರಾಶೆಗೊಂಡಿರುವಾಗ ಅಥವಾ ತುಸು ತೊಂದರೆಯನ್ನು ಅನುಭವಿಸುತ್ತಿರುವಾಗ, ಅವನು ಅಥವಾ ಅವಳು ಪಯನೀಯರ್ ಸೇವೆಯನ್ನು ಮುಂದುವರಿಸದಿರುವಂತೆ ಬೇಗನೆ ಶಿಫಾರಸ್ಸು ಮಾಡಬೇಡಿ. ಕೆಲವು ಸಂದರ್ಭಗಳಲ್ಲಿ ಇಂತಹ ಶಿಫಾರಸ್ಸು ಅಗತ್ಯವಾಗಿರಬಹುದಾದರೂ, ಪಯನೀಯರ್ ಸೇವೆಯು, ಆ ಪೂರ್ಣಸಮಯದ ಸೇವಕನು ಬಹಳವಾಗಿ ಆದರಿಸಬಹುದಾದ ಒಂದು ಅಮೂಲ್ಯ ಸುಯೋಗವಾಗಿದೆಯೆಂಬುದನ್ನು ಮರೆಯಬೇಡಿರಿ. ತುಸು ಪ್ರೋತ್ಸಾಹ ಮತ್ತು ತುಸು ಪ್ರಾಯೋಗಿಕ ಸಲಹೆ ಅಥವಾ ನೆರವು ಮಾತ್ರ ಬೇಕಾಗಿರಬಹುದು. ಸ್ಪೆಯ್ನ್‌ನಲ್ಲಿರುವ ಸೊಸೈಟಿಯ ಬ್ರಾಂಚ್ ಆಫೀಸು ಬರೆಯುವುದು: “ಹಿರಿಯರು ಪಯನೀಯರ್ ಸೇವೆಯನ್ನು ಪ್ರೋತ್ಸಾಹಿಸುವಾಗ, ಕ್ಷೇತ್ರ ಶುಶ್ರೂಷೆಯಲ್ಲಿ ಪಯನೀಯರರನ್ನು ಬೆಂಬಲಿಸುವಾಗ ಮತ್ತು ಅವರನ್ನು ಕ್ರಮವಾಗಿ ಪರಿಪಾಲಿಸುವಾಗ, ಪಯನೀಯರರು ಹೆಚ್ಚು ಆನಂದವುಳ್ಳವರು, ತಾವು ಉಪಯುಕ್ತರೆಂಬ ಅನಿಸಿಕೆಯುಳ್ಳವರು ಮತ್ತು ಅಡ್ಡಿತಡೆಗಳು ಏಳಬಹುದಾದರೂ ಮುಂದುವರಿಸುವ ಬಯಕೆಯುಳ್ಳವರು ಆಗಿರುವರು.”
22. ಮಾನವ ಇತಿಹಾಸದ ಈ ಕಠಿನ ಸಮಯಾವಧಿಯಲ್ಲಿ, ನಾವೇನು ಮಾಡಲು ದೃಢನಿಶ್ಚಯವುಳ್ಳವರಾಗಿರಬೇಕು?
22 ನಾವು ಮಾನವ ಇತಿಹಾಸದ ಒಂದು ಕಠಿನಾವಧಿಯಲ್ಲಿ ಜೀವಿಸುತ್ತಿದ್ದೇವೆ. ಯೆಹೋವನು ನಮಗೆ ನೆರವೇರಿಸಲು ಒಂದು ಜೀವರಕ್ಷಕ ಕೆಲಸವನ್ನು ಕೊಟ್ಟಿದ್ದಾನೆ. (ರೋಮಾಪುರ 10:13, 14) ನಾವು ಈ ಕಾರ್ಯದಲ್ಲಿ ಪೂರ್ಣಸಮಯದ ಪಯನೀಯರರಾಗಿ ಭಾಗವಹಿಸಲಿ, ಇಲ್ಲದಿರಲಿ, ಪಯನೀಯರ್ ಮನೋಭಾವವನ್ನು ತೋರಿಸೋಣ. ನಮಗೆ ತುರ್ತುಪ್ರಜ್ಞೆಯೂ ಸ್ವತ್ಯಾಗ ಮನೋಭಾವವೂ ಇರಲಿ. ಯೆಹೋವನು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೊ ಅದನ್ನು—ಪೂರ್ಣಪ್ರಾಣದ ಸೇವೆಯನ್ನು ಕೊಡಲು ನಾವು ದೃಢಮನಸ್ಕರಾಗಿರೋಣ. ಮತ್ತು ನಾವು ಕೊಡಸಾಧ್ಯವಿರುವುದನ್ನೆಲ್ಲ ಕೊಡುವಾಗ, ಅದು ವಿಧವೆಯ ಎರಡು ಚಿಕ್ಕ ನಾಣ್ಯಗಳಿಗೆ ಹೋಲಿಕೆಯಾಗಿರಲಿ, ಮರಿಯಳ ಬೆಲೆಬಾಳುವ ತೈಲಕ್ಕೆ ಹೋಲಿಕೆಯಾಗಿರಲಿ, ನಮ್ಮ ಸೇವೆಯು ಪೂರ್ಣಪ್ರಾಣದ್ದಾಗಿರುತ್ತದೆ ಮತ್ತು ಯೆಹೋವನು ನಮ್ಮ ಪೂರ್ಣಪ್ರಾಣದ ಸೇವೆಯನ್ನು ಆದರದಿಂದ ಕಾಣುತ್ತಾನೆ ಎಂಬುದನ್ನು ನೆನಪಿನಲ್ಲಿಡೋಣ!
ನಿಮಗೆ ನೆನಪಿದೆಯೊ?
◻ ಪೂರ್ಣಸಮಯದ ಶುಶ್ರೂಷೆಯು ಸಂತೃಪ್ತಿ ಮತ್ತು ಆನಂದದ ಅನಿಸಿಕೆಗಳನ್ನು ಏಕೆ ತರುತ್ತದೆ?
◻ ತನ್ನ ಸೇವಕರನ್ನು ಪರಾಮರಿಸಲು ಯೆಹೋವನಿಗಿರುವ ಸಾಮರ್ಥ್ಯದ ಕುರಿತು ಅನೇಕ ಮಂದಿ ಪಯನೀಯರರಿಗೆ ಅನುಭವದಿಂದ ಏನು ತಿಳಿದಿದೆ?
◻ ಯೆಹೋವನೊಂದಿಗಿನ ಸಂಬಂಧದ ಮೇಲೆ ತಮ್ಮ ಶುಶ್ರೂಷೆ ಯಾವ ಪರಿಣಾಮಗಳನ್ನು ಬೀರುತ್ತದೆಂದು ಪಯನೀಯರರು ಅಭಿಪ್ರಯಿಸುತ್ತಾರೆ?
◻ ಪಯನೀಯರ್ ಮನೋಭಾವವನ್ನು ನೀವು ಹೇಗೆ ಪ್ರದರ್ಶಿಸಬಲ್ಲಿರಿ?
[ಪುಟ 23 ರಲ್ಲಿರುವ ಚಿತ್ರ]
ಶಿಷ್ಯರನ್ನಾಗಿ ಮಾಡುವುದರಿಂದ ಪಯನೀಯರರಿಗೆ ಮಹಾ ಆನಂದ ದೊರೆಯುತ್ತದೆ
[ಪುಟ 23 ರಲ್ಲಿರುವ ಚಿತ್ರ]
ಪೂರ್ಣಸಮಯದ ರಾಜ್ಯ ಘೋಷಕರೊಂದಿಗೆ ಒಡನಾಟ ಮಾಡುವುದರಿಂದ ನಿಮ್ಮ ಮಕ್ಕಳು ಪ್ರಯೋಜನವನ್ನು ಪಡೆಯಬಲ್ಲರು
[ಪುಟ 23 ರಲ್ಲಿರುವ ಚಿತ್ರ]
ಹಿರಿಯರು ಪಯನೀಯರರನ್ನು ಕ್ಷೇತ್ರ ಶುಶ್ರೂಷೆಯಲ್ಲಿ ಪ್ರೋತ್ಸಾಹಿಸಬಲ್ಲರು