ಯುವ ಜನರು ಪ್ರಶ್ನಿಸುವುದು . . .
ಕೆಟ್ಟ ಸಂಗತಿಗಳು ಸಂಭವಿಸುವಂತೆ ದೇವರು ಬಿಡುವುದೇಕೆ?
ಲಿಡ್ಯಾ, ಆಕೆಯ ಸ್ವದೇಶ—ಯುಗೋಸ್ಲಾವಿಯ ಎಂಬುದಾಗಿ ಈ ಹಿಂದೆ ವಿದಿತವಾಗಿದ್ದ ದೇಶ—ದಲ್ಲಿ ಯುದ್ಧವು ಹೊರಚಿಮ್ಮಿದಾಗ, ಕೇವಲ ಒಬ್ಬ ಹದಿವಯಸ್ಕಳಾಗಿದ್ದಳು. “ನಾನು ಒಂದು ಕತ್ತಲೆಯ ಆಶ್ರಯಸ್ಥಳದಲ್ಲಿ ಅನೇಕ ಹಗಲುಗಳನ್ನೂ ರಾತ್ರಿಗಳನ್ನೂ ಕಳೆದೆ,” ಎಂದು ಆಕೆ ಜ್ಞಾಪಿಸಿಕೊಳ್ಳುತ್ತಾಳೆ. “ನಾನು ಅನೇಕಾವರ್ತಿ ಹೊರಗೆ ಓಡಿಹೋಗುವಂತೆ—ಅದು ಕೊಲ್ಲಲ್ಪಡುವುದನ್ನು ಅರ್ಥೈಸಲಿದ್ದರೂ—ಪ್ರಲೋಭಿಸಲ್ಪಟ್ಟೆ! ಯುದ್ಧದ ಮುಂಚೆ, ನೀವು ಬಯಸಿದೆಲ್ಲವೂ ನಿಮ್ಮಲ್ಲಿತ್ತು, ಆದರೆ ಈಗ ಕೇವಲ ಜೀವಂತರಾಗಿರಲು ನೀವು ಸಂತೋಷಿಸಿದಿರಿ.”
ಯುದ್ಧದ ಒತ್ತಡಗಳು ಮತ್ತು ಭಾರಗಳು ಬೇಗನೆ, ಲಿಡ್ಯಾಳನ್ನು ಆತ್ಮಿಕ ವಿಷಯಗಳಲ್ಲಿ ಪ್ರತಿಕೂಲವಾಗಿ ಬಾಧಿಸಿದವು. ಆಕೆ ಹೇಳುವುದು: “ವಾರಗಳ ವರೆಗೆ ಸಾರುವ ಕೆಲಸಕ್ಕೆ ಅಥವಾ ಕೂಟಗಳಿಗೆ ಹೋಗಲು ನಮಗೆ ಸಾಧ್ಯವಾಗಲಿಲ್ಲ. ಯೆಹೋವನು ನಮ್ಮನ್ನು ಅಲಕ್ಷಿಸುತ್ತಾ ಇದ್ದನೆಂದು ನಾನು ನಿಜವಾಗಿಯೂ ನೆನಸಿದೆ. ‘ಈಗ ಆತನು ನಮಗೆ ಏಕೆ ಸಹಾಯ ಮಾಡುತ್ತಿಲ್ಲ?’ ಎಂದು ನಾನು ಸ್ವತಃ ಕೇಳಿಕೊಳ್ಳುತ್ತಿದ್ದೆ.”
ಯುದ್ಧಗಳು, ಪಾತಕ, ಹಿಂಸಾಚಾರ, ರೋಗ, ವಿಪತ್ತುಗಳು, ಅಪಘಾತಗಳು—ಇವುಗಳಂತಹ ಕೆಟ್ಟ ಸಂಗತಿಗಳು ಎಳೆಯರಿಗೂ ಸಂಭವಿಸಬಲ್ಲವು. ಮತ್ತು ದುರಂತವು ಒಬ್ಬನನ್ನು ವೈಯಕ್ತಿಕವಾಗಿ ಬಾಧಿಸುವಾಗ, ‘ಈ ಕೆಟ್ಟ ಸಂಗತಿಗಳು ಸಂಭವಿಸುವಂತೆ ದೇವರು ಬಿಡುವುದೇಕೆ?’ ಎಂದು ನೀವು ಸ್ವಭಾವಿಕವಾಗಿಯೇ ಕುತೂಹಲಪಡಬಹುದು.
ಗತಕಾಲದ ದೇವ ಪುರುಷರು, ಇದರಂತಹ ಪ್ರಶ್ನೆಗಳನ್ನು ಕೇಳಿದರು. ಉದಾಹರಣೆಗೆ, ಪ್ರವಾದಿಯಾದ ಹಬಕ್ಕೂಕನು, ದೇವರ ಜನರ ಮಧ್ಯದಲ್ಲಿ ಅಸ್ತಿತ್ವದಲ್ಲಿದ್ದ ವಿಷಯಗಳ ಹೀನ ಸ್ಥಿತಿಯನ್ನು ನೋಡಿದಾಗ, ಅವನು ಪ್ರಲಾಪಿಸಿದ್ದು: “ಯೆಹೋವನೇ, ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೇ ಇರುವಿ? ಹಿಂಸೆ, ಹಿಂಸೆ ಎಂದು ನಿನ್ನನ್ನು ಕೂಗಿಕೊಂಡರೂ ರಕ್ಷಿಸದೆ ಇರುವಿ. ಕೇಡನ್ನು ನನ್ನ ಕಣ್ಣಿಗೆ ಏಕೆ ಬೀಳಿಸುತ್ತಿದ್ದೀ? ಕಷ್ಟವನ್ನೇಕೆ ನನಗೆ ತೋರಿಸುತ್ತಿದ್ದೀ?” (ಹಬಕ್ಕೂಕ 1:2, 3) ಕೆಲವು ಕ್ರೈಸ್ತ ಯೌವನಸ್ಥರು ಇಂದು, ತದ್ರೀತಿಯ ಭಾವನಾತ್ಮಕ ಸಂಕಟವನ್ನು ಅನುಭವಿಸುತ್ತಾರೆ.
ತನ್ನ ತಂದೆಯ ಅನಿರೀಕ್ಷಿತ ಮರಣದ ನಂತರ, ಒಬ್ಬ ಯುವ ಕ್ರೈಸ್ತಳಿಗೆ ಹೇಗನಿಸಿತೆಂಬುದನ್ನು ಪರಿಗಣಿಸಿರಿ. ಆಕೆ ಹೇಳುವುದು: “ನಾನು ಕ್ರೋಧೋನ್ಮತ್ತಳಾಗಿ, ಕಿಟಕಿಯ ಆಚೆ ಕಿರುಚುತ್ತಾ, ಯೆಹೋವ ದೇವರನ್ನು ಸಂಬೋಧಿಸಿ ಕೂಗಾಡಿದೆ. . . . ಎಲ್ಲದಕ್ಕೂ ನಾನು ಆತನನ್ನು ದೂರಿದೆ. ಇದು ಹೇಗೆ ಸಂಭವಿಸಸಾಧ್ಯವಿತ್ತು? ತಂದೆಯವರು ಒಬ್ಬ ಉತ್ಕೃಷ್ಟ ಪಿತ ಹಾಗೂ ಒಬ್ಬ ಪ್ರೀತಿಯ ಪತಿಯಾಗಿದ್ದರು, ಮತ್ತು ಈಗ ಅವರು ಮೃತಪಟ್ಟಿದ್ದಾರೆ—ಯೆಹೋವನು ಚಿಂತಿಸುವುದಿಲ್ಲವೊ?” ಈ ರೀತಿಯ ಒಂದು ಸನ್ನಿವೇಶದಲ್ಲಿ, ಒಂದಿಷ್ಟು ಗಲಿಬಿಲಿ, ವ್ಯಥೆ, ಅಥವಾ ಕೋಪದ ಅನಿಸಿಕೆಯೂ ಆಗುವುದು ತೀರ ಸಾಧಾರಣ. ದುಷ್ಟತನವು ಅಸ್ತಿತ್ವದಲ್ಲಿರುವಂತೆ ಅನುಮತಿಸಲ್ಪಟ್ಟ ಕಾರಣ, ನಂಬಿಗಸ್ತ ಪ್ರವಾದಿಯಾದ ಹಬಕ್ಕೂಕನೂ ಚಿಂತೆಗೊಳಗಾಗಿದ್ದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಆದರೂ, ವ್ಯಕ್ತಿಯೊಬ್ಬನು ನಿಷ್ಠುರವಾದ ಅನಿಸಿಕೆಗಳನ್ನು ಪೋಷಿಸುವುದನ್ನು ಮುಂದುವರಿಸುವುದಾದರೆ, ಅಪಾಯವಿದೆ. ಅವನು “ಸ್ವತಃ ಯೆಹೋವನ ವಿರುದ್ಧ ಕೋಪಗೊಳ್ಳ”ಸಾಧ್ಯವಿದೆ.—ಜ್ಞಾನೋಕ್ತಿ 19:3, NW.
ಹಾಗಾದರೆ, ನೀವು ಕೋಪ ಹಾಗೂ ವೈಷಮ್ಯದ ಅನಿಸಿಕೆಗಳಿಗೆ ಒಳಗಾಗುವುದನ್ನು ಹೇಗೆ ದೂರವಿರಿಸಬಲ್ಲಿರಿ? ಪ್ರಥಮವಾಗಿ, ದುಷ್ಟತನವು ಎಲ್ಲಿಂದ ಬರುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು.
ಕೆಟ್ಟ ಸಂಗತಿಗಳು ದೇವರಿಂದ ಬರುವುದಿಲ್ಲ
ನಾವು ಈ ರೀತಿಯಲ್ಲಿ ಕಷ್ಟಾನುಭವಿಸಬೇಕೆಂದು ದೇವರು ಎಂದೂ ಉದ್ದೇಶಿಸಲಿಲ್ಲವೆಂಬುದನ್ನು ಬೈಬಲ್ ಸ್ಪಷ್ಟಗೊಳಿಸುತ್ತದೆ. ಆತನು ಆದ್ಯ ದಂಪತಿಗಳನ್ನು, ನೋವು ಮತ್ತು ಕಷ್ಟಾನುಭವದಿಂದ ಮುಕ್ತವಾಗಿದ್ದ ಒಂದು ಪ್ರಮೋದವನ ಗೃಹದಲ್ಲಿ ಇರಿಸಿದನು. (ಆದಿಕಾಂಡ 1:28) ನಿಸ್ಸಂಶಯವಾಗಿ ನಿಮಗೆ ವಿಷಯಗಳು ಹೇಗೆ ತಪ್ಪಾಗಿ ಸಂಭವಿಸಿದವು ಎಂಬುದು ಚೆನ್ನಾಗಿ ತಿಳಿದಿದೆ: ಪಿಶಾಚನೆಂತಲೂ ಸೈತಾನನೆಂತಲೂ ತದನಂತರ ಜ್ಞಾತನಾದ ಒಬ್ಬ ಅದೃಶ್ಯ ಆತ್ಮ ಜೀವಿಯು, ದೇವರಿಗೆ ಅವಿಧೇಯರಾಗುವಂತೆ ಆದಾಮಹವ್ವರ ಮನವೊಲಿಸಿದನು. (ಆದಿಕಾಂಡ, ಅಧ್ಯಾಯ 3; ಪ್ರಕಟನೆ 12:9) ಇದನ್ನು ಮಾಡುವ ಮೂಲಕ, ಆದಾಮನು ತನ್ನೆಲ್ಲ ಸಂತಾನವನ್ನು ಪಾಪ ಮತ್ತು ಅದರ ವಿಧ್ವಂಸಕ ಪರಿಣಾಮಗಳಿಗೆ ಗುರಿಮಾಡಿದನು.—ರೋಮಾಪುರ 5:12.
ಸ್ಪಷ್ಟವಾಗಿಯೇ, ಮನುಷ್ಯಜಾತಿಯ ಮೇಲೆ ದುಷ್ಟತನವನ್ನು ತಂದಾತನು ದೇವರಾಗಿರಲಿಲ್ಲ, ಸ್ವತಃ ಮನುಷ್ಯನೇ ಆಗಿದ್ದನು. (ಧರ್ಮೋಪದೇಶಕಾಂಡ 32:5; ಪ್ರಸಂಗಿ 7:29) ನಿಶ್ಚಯವಾಗಿಯೂ, ಇಂದು ಜನರು ಅನುಭವಿಸುವ ಎಲ್ಲ ಕೆಟ್ಟ ಸಂಗತಿಗಳು—ಅನಾರೋಗ್ಯ, ಮರಣ, ಯುದ್ಧಗಳು, ಅನ್ಯಾಯಗಳು—ಆದಾಮನ ಉದ್ದೇಶಪೂರ್ವಕವಾದ ಅವಿಧೇಯ ಕ್ರಿಯೆಯಿಂದ ಫಲಿಸಿದವು. ಇನ್ನೂ ಹೆಚ್ಚಾಗಿ, ನಾವೆಲ್ಲರೂ “ಕಾಲ ಮತ್ತು ಮುಂಗಾಣದ ಸಂಭವ”ವೆಂದು ಬೈಬಲ್ ಯಾವುದನ್ನು ಕರೆಯುತ್ತದೊ ಅದಕ್ಕೆ ಒಳಗಾಗಿದ್ದೇವೆ. (ಪ್ರಸಂಗಿ 9:11, NW) ದುಷ್ಟರು ಮತ್ತು ನೀತಿವಂತರು—ಇಬ್ಬರೂ—ಅಸಹಜ ಅಪಘಾತಗಳನ್ನು ಮತ್ತು ದುರಂತಗಳನ್ನು ಅನುಭವಿಸುತ್ತಾರೆ.
ದುಷ್ಟತನಕ್ಕಿರುವ ದೇವರ ಅನುಮತಿ
ದುಷ್ಟತನದ ಉಗಮನು ದೇವರಲ್ಲವೆಂದು ಅರಿಯುವುದು ಸಾಂತ್ವನದಾಯಕವಾಗಿರುವಾಗ್ಯೂ, ‘ದುಷ್ಟತನವು ಮುಂದುವರಿಯುವಂತೆ ಆತನು ಅನುಮತಿಸುವುದೇಕೆ?’ ಎಂದು ನೀವು ಇನ್ನೂ ಕುತೂಹಲಪಡಬಹುದು. ಪುನಃ ಇದು ಏದೆನ್ನಲ್ಲಿ ಎಬ್ಬಿಸಲ್ಪಟ್ಟ ವಿವಾದಾಂಶಗಳಿಗೆ ಸಂಬಂಧಿಸುತ್ತದೆ. ಆದಾಮನು ಅವಿಧೇಯನಾಗುವುದಾದರೆ, ಅವನು ಸಾಯುವನೆಂದು ದೇವರು ಅವನಿಗೆ ಹೇಳಿದನು. (ಆದಿಕಾಂಡ 2:17) ಪಿಶಾಚನಾದರೊ ಹವ್ವಳಿಗೆ, ಆಕೆ ನಿಷೇಧಿಸಲ್ಪಟ್ಟಿದ್ದ ಮರದಿಂದ ಹಣ್ಣನ್ನು ತಿಂದಲ್ಲಿ ಆಕೆ ಸಾಯುವುದಿಲ್ಲ ಎಂಬುದಾಗಿ ಹೇಳಿದನು! (ಆದಿಕಾಂಡ 3:1-5) ಕಾರ್ಯತಃ ಸೈತಾನನು ದೇವರನ್ನು ಒಬ್ಬ ಸುಳ್ಳುಗಾರನೆಂದು ಕರೆದನು. ಇನ್ನೂ ಹೆಚ್ಚಾಗಿ, ಮನುಷ್ಯನು ತನ್ನ ಸ್ವಂತ ನಿರ್ಣಯಗಳನ್ನು ತಾನೇ ಮಾಡಿಕೊಳ್ಳುವುದಾದರೆ ಮತ್ತು ತಾನು ಏನು ಮಾಡಬೇಕೆಂಬುದನ್ನು ಹೇಳುತ್ತಾ ಇರಲಿಕ್ಕೆ ದೇವರಿಲ್ಲದಿರುವುದಾದರೆ ಹೆಚ್ಚಿನ ಪ್ರಯೋಜನವನ್ನು ಪಡೆಯುವನೆಂದು ಸೈತಾನನು ಸೂಚಿಸಿದನು!
ಈ ಆರೋಪಗಳನ್ನು ದೇವರು ಕಡೆಗಣಿಸುವಂತಿರಲಿಲ್ಲ. ಸಹಪಾಠಿಯೊಬ್ಬನು ಶಿಕ್ಷಕನ ಅಧಿಕಾರಕ್ಕೆ ಸವಾಲು ಹಾಕುವುದನ್ನು ನೀವು ಎಂದಾದರೂ ನೋಡಿದ್ದೀರೊ? ಶಿಕ್ಷಕನು ಅವನನ್ನು ಶಿಕ್ಷಿಸದೆ ಬಿಟ್ಟರೆ, ಇತರ ವಿದ್ಯಾರ್ಥಿಗಳೂ ಹಾಗೆಯೇ ವರ್ತಿಸಲಾರಂಭಿಸುತ್ತಾರೆ. ತದ್ರೀತಿಯಲ್ಲಿ, ಯೆಹೋವನು ಸೈತಾನನನ್ನು ನೇರವಾಗಿ ಎದುರಿಸದಿದ್ದಲ್ಲಿ ವಿಶ್ವವ್ಯಾಪಿ ಅಸ್ತವ್ಯಸ್ತತೆಯು ಹೊರಚಿಮ್ಮಸಾಧ್ಯವಿತ್ತು. ಯೆಹೋವನು ಅದನ್ನು, ವಿಷಯಗಳನ್ನು ಪೂರೈಸಲಿಕ್ಕಿರುವ ಸೈತಾನನ ವಿಧವನ್ನು ಮನುಷ್ಯನು ಅನುಸರಿಸುವಂತೆ ಬಿಡುವ ಮೂಲಕ ಮಾಡಿದನು. ಸೈತಾನನು ವಾಗ್ದಾನಿಸಿದ ದೇವಸದೃಶ ಸ್ವಾತಂತ್ರ್ಯವನ್ನು ಮನುಷ್ಯನು ಆನಂದಿಸುತ್ತಾನೊ? ಇಲ್ಲ. ಸೈತಾನನ ಆಳಿಕೆಯು, ಅವನನ್ನು ಒಬ್ಬ ದುಷ್ಟ ಸುಳ್ಳುಗಾರನನ್ನಾಗಿ ರುಜುಪಡಿಸುತ್ತಾ, ವಿಧ್ವಂಸ ಹಾಗೂ ಸಂಕಟವನ್ನು ತಂದಿದೆ!
ದುಷ್ಟತನವು ಸದಾಕಾಲ ಮುಂದುವರಿಯುವಂತೆ ದೇವರು ಅನುಮತಿಸುವನೊ? ಇಲ್ಲ. ಸೈತಾನನು ಎಬ್ಬಿಸಿದಂತಹ ವಿವಾದಾಂಶಗಳನ್ನು ಇತ್ಯರ್ಥ ಮಾಡಲು, ದೇವರು ಬೇಗನೆ ಎಲ್ಲ ದುಷ್ಟತನಕ್ಕೆ ಅಂತ್ಯವನ್ನು ತರುವನು. (ಕೀರ್ತನೆ 37:10) ಆದರೆ ಈ ಮಧ್ಯೆ ನಾವು ಹೇಗೆ ನಿಭಾಯಿಸಬೇಕಾಗಿದೆ?
ನಿಮ್ಮನ್ನು ಒಳಗೊಳ್ಳುವ ಒಂದು ವಿವಾದಾಂಶ
ಎಲ್ಲಕ್ಕಿಂತ ಮೊದಲು, ದೇವರು ಮತ್ತು ಸೈತಾನನ ನಡುವಿನ ಈ ವಿವಾದಾಂಶವು ನಿಮ್ಮನ್ನು ಒಳಗೊಳ್ಳುತ್ತದೆ ಎಂಬುದನ್ನು ಗ್ರಹಿಸಿರಿ! ಅದು ಹೇಗೆ? ನೀತಿವಂತ ಮನುಷ್ಯನಾದ ಯೋಬನ ಹೆಸರನ್ನು ಪಡೆದಿರುವ ಬೈಬಲ್ ಪುಸ್ತಕವನ್ನು ಪರಿಗಣಿಸಿರಿ. ಒಬ್ಬ ನಂಬಿಗಸ್ತ ಆರಾಧಕನೋಪಾದಿ ದೇವರು ಯೋಬನನ್ನು ಒಬ್ಬ ಮಾದರಿಯಂತೆ ಸೂಚಿಸಿದಾಗ, ಸೈತಾನನು ಪ್ರತಿಕ್ರಿಯಿಸಿದ್ದು: “ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ?” (ಯೋಬ 1:9) ನಿಶ್ಚಯವಾಗಿ, ಒತ್ತಡವನ್ನು ಹಾಕುವಂತೆ ಅವನು ಅನುಮತಿಸಲ್ಪಟ್ಟರೆ, ಅವನು ಯಾವನೇ ವ್ಯಕ್ತಿಯನ್ನು ದೇವರ ಸೇವೆಮಾಡುವುದರಿಂದ ದೂರಮಾಡಶಕ್ತನೆಂದು ಸೈತಾನನು ವಾದಿಸಿದನು!—ಯೋಬ 2:4, 5.
ಆದುದರಿಂದ ಸೈತಾನನು ದೇವ ಭಯವಿರುವ ಎಲ್ಲ ಜನರನ್ನು ನಿಂದಿಸಿದ್ದಾನೆ. ಅವನು ನಿಮ್ಮನ್ನು ನಿಂದಿಸಿದ್ದಾನೆ. ಹಾಗಿದ್ದರೂ, ಜ್ಞಾನೋಕ್ತಿ 27:11 ಹೇಳುವುದು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.” ಹೌದು, ನೀವು ವೇದನಾಮಯ ಕಷ್ಟಗಳ ಹೊರತೂ ದೇವರ ಸೇವೆಮಾಡುವಾಗ, ಸೈತಾನನನ್ನು ಒಬ್ಬ ಸುಳ್ಳುಗಾರನನ್ನಾಗಿ ರುಜುಪಡಿಸಲು ನೀವು ನಿಜವಾಗಿಯೂ ಸಹಾಯಮಾಡುತ್ತೀರಿ!
ಸರ್ವಸಮ್ಮತವಾಗಿರುವಂತೆ, ಕೆಟ್ಟ ಸಂಗತಿಗಳಿಂದ ಎದುರಿಸಲ್ಪಟ್ಟಾಗ, ಒಳಗೊಂಡಿರುವ ವಿವಾದಾಂಶಗಳ ಕುರಿತು ಆಲೋಚಿಸುವುದು ಸುಲಭವಲ್ಲ. ಡೈಅನಳ ತಾಯಿಯು ಮೃತಪಟ್ಟಾಗ ಕೇವಲ ಹತ್ತು ವರ್ಷ ಪ್ರಾಯದವಳಾಗಿದ್ದ ಆಕೆ ಹೇಳುವುದು: “ನನ್ನ ಜೀವಿತದಲ್ಲಿನ ಪರೀಕ್ಷೆಗಳ ಕಾರಣ ನಾನು ಕಠೋರಳು ಇಲ್ಲವೆ ನಿಷ್ಠುರಳು ಆಗುವೆನೆಂದು ನಾನು ಭಯಪಟ್ಟೆ.” ಆದರೆ, ದುಷ್ಟತನವನ್ನು ದೇವರು ಏಕೆ ಅನುಮತಿಸಿದ್ದಾನೆಂಬುದನ್ನು ತಿಳಿದುಕೊಂಡಿರುವುದು, ತನ್ನ ಸಮಸ್ಯೆಗಳ ಕುರಿತಾದ ಯೋಗ್ಯ ನೋಟವನ್ನು ಪಡೆದುಕೊಳ್ಳುವಂತೆ ಆಕೆಗೆ ಸಹಾಯಮಾಡಿದೆ. ಈಗ ಆಕೆ ಹೇಳುವುದು: “ವ್ಯವಹರಿಸಲು ಕಷ್ಟಕರವಾದ ವಿಷಯಗಳು ನನ್ನ ಜೀವಿತದಲ್ಲಿ ಇರುವುದಾದರೂ, ಯೆಹೋವನ ಹಸ್ತವು ಯಾವಾಗಲೂ ನನ್ನೊಂದಿಗೆ ಇದೆ.”
ಡೈಅನ್, ಅತ್ಯಂತ ಪ್ರಾಮುಖ್ಯವಾದ ಒಂದು ನಿಜಾಂಶದ ಕುರಿತು ನಮಗೆ ಜ್ಞಾಪಕಹುಟ್ಟಿಸುತ್ತಾಳೆ: ನಮ್ಮ ಸ್ವಂತ ಬಲದಿಂದ ಈ ಒತ್ತಡಗಳನ್ನು ನಾವು ನಿಭಾಯಿಸುವಂತೆ ಯೆಹೋವನು ಅಪೇಕ್ಷಿಸುವುದಿಲ್ಲ. ಕೀರ್ತನೆ 55:22 ನಮಗೆ ಆಶ್ವಾಸನೆ ನೀಡುವುದು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” ಈ ವಿಷಯವು ನಿಜವಾಗಿರುವುದನ್ನು ಯುವ ಕೊಟೊಯೊ ಕಂಡುಕೊಂಡಳು. ಜಪಾನಿನ ಕೋಬಿಯನ್ನು ತಾಕಿದ 1995ರ ಭೂಕಂಪದಲ್ಲಿ ಆಕೆಯ ಹೆತ್ತವರು ಕೊಲ್ಲಲ್ಪಟ್ಟಾಗ, ಆಕೆ ದುರಂತವನ್ನು ಎದುರಿಸಿದಳು. ತನಗಾಗಿ ಮತ್ತು ತನಗಿಂತ ಚಿಕ್ಕವರಾಗಿರುವ ಒಡಹುಟ್ಟಿದವರಿಗಾಗಿ ಮಾತಾಡುತ್ತ, ಆಕೆ ಹೇಳುವುದು: “ಯೆಹೋವನ ಮೇಲೆ ಆತುಕೊಳ್ಳುವಂತೆ ನನ್ನ ತಾಯಿಯು ನಮಗೆ ಕಲಿಸಿದ್ದರಿಂದ, ನಾವು ತಾಳಿಕೊಳ್ಳಬಲ್ಲೆವು.”
ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ಯುವ ಹುಡುಗಿಯಾದ ಲಿಡ್ಯಾಳ ಕುರಿತೇನು? ಯೆಹೋವನು ಆಕೆಯನ್ನು ತೊರೆದಿರಲೇ ಇಲ್ಲ ಎಂಬುದನ್ನು ಸಕಾಲದಲ್ಲಿ ಆಕೆ ಗ್ರಹಿಸಿದಳು. ಈಗ ಆಕೆ ಹೇಳುವುದು: “ಯೆಹೋವನು ಯಾವಾಗಲೂ ನಮಗಾಗಿದ್ದನು. ಆತನು ನಮ್ಮನ್ನು ನಡೆಸಿ, ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸಿದನು.”
ಯೆಹೋವ—ಚಿಂತಿಸುವ ಒಬ್ಬ ಪ್ರೀತಿಪರ ದೇವರು
ಕೆಟ್ಟ ಸಂಗತಿಗಳು ನಿಮಗೆ ಸಂಭವಿಸುವಾಗ ನೀವು ಸಹ ‘ಆತನ ಹಸ್ತದ ಬಲವನ್ನು’ ಅನುಭವಿಸಬಲ್ಲಿರಿ. ಏಕೆ? ಏಕೆಂದರೆ ಯೆಹೋವನು ನಿಮ್ಮ ಕುರಿತು ಚಿಂತಿಸುತ್ತಾನೆ! ಮತ್ತು ಒಳ್ಳೆಯ ಜನರಿಗೆ ಕೆಟ್ಟ ಸಂಗತಿಗಳು ಸಂಭವಿಸುವಂತೆ ಆತನು ಅನುಮತಿಸುತ್ತಾನಾದರೂ, ಆತನು ಪ್ರೀತಿಪರ ಸಾಂತ್ವನವನ್ನೂ ಒದಗಿಸುತ್ತಾನೆ. (2 ಕೊರಿಂಥ 1:3, 4) ಹಾಗೆ ಆತನು ಮಾಡುವ ಒಂದು ವಿಧವು, ಕ್ರೈಸ್ತ ಸಭೆಯ ಮುಖಾಂತರವೇ. ಅಲ್ಲಿ ನೀವು, ಒಂದು ವಿಷಮಸ್ಥಿತಿಯು ತಾಕುವಾಗ ನಿಮ್ಮನ್ನು ಬಲಪಡಿಸಬಲ್ಲ, ‘ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರರನ್ನು’ ಕಂಡುಕೊಳ್ಳಸಾಧ್ಯವಿದೆ. (ಜ್ಞಾನೋಕ್ತಿ 18:24) ಕೊಟೊಯೊ ಜ್ಞಾಪಿಸಿಕೊಳ್ಳುವುದು: “ಭೂಕಂಪದ ತರುವಾಯ ಮೊದಲನೆಯ ದಿನದಿಂದ, ನಾವು ಸಹೋದರರು ಕೂಡಿಬಂದ ಸ್ಥಳಕ್ಕೆ ಹೋದೆವು, ಮತ್ತು ಉತ್ತೇಜನ ಹಾಗೂ ಆವಶ್ಯಕ ವಿಷಯಗಳನ್ನು ನಾವು ಪಡೆದುಕೊಂಡೆವು. ಅದು ನನ್ನಲ್ಲಿ ಭದ್ರತೆಯ ಅನಿಸಿಕೆಯನ್ನು ಮೂಡಿಸಿತು. ನಮ್ಮೊಂದಿಗೆ ಯೆಹೋವನು ಮತ್ತು ಸಹೋದರರು ಇರುವಷ್ಟರ ತನಕ, ನಾವು ಏನನ್ನಾದರೂ ತಾಳಿಕೊಳ್ಳಬಲ್ಲೆವೆಂದು ನನಗನಿಸುತ್ತದೆ.”
ಯೆಹೋವನು ನಿಮ್ಮನ್ನು ಒಬ್ಬ ವ್ಯಕ್ತಿಯೋಪಾದಿ ಅರಿತಿರುವುದರಿಂದ, ಕೆಟ್ಟ ಸಂಗತಿಗಳು ಸಂಭವಿಸುವಾಗ ನಿಮ್ಮ ಆವಶ್ಯಕತೆಗಳ ಕುರಿತು ಆತನು ಕಾಳಜಿಯನ್ನೂ ವಹಿಸಬಲ್ಲನು. ತನ್ನ ತಂದೆಯ ಸಾವನ್ನು ತಾನು ನಿಭಾಯಿಸಿರುವ ವಿಧದ ಕುರಿತು ಡಾನ್ಯಲ್ ಹೀಗೆ ಹೇಳುತ್ತಾ ನೆನಪಿಸಿಕೊಳ್ಳುತ್ತಾನೆ: “ಯೆಹೋವನು ನಿಮಗೊಬ್ಬ ತಂದೆಯಾಗುತ್ತಾನೆ, ಮತ್ತು ಆತನ ಸಂಸ್ಥೆಯು ಆತ್ಮಿಕ ಪುರುಷರನ್ನು ಆದರ್ಶ ವ್ಯಕ್ತಿಗಳೋಪಾದಿ ಒದಗಿಸುತ್ತದೆ. ನಾನು ಸ್ವಾಭಾವಿಕವಾಗಿ ನನ್ನ ತಂದೆಯೊಂದಿಗೆ ಚರ್ಚಿಸಿದ್ದಿರಬಹುದಾದ ನನಗಿರುವ ಪ್ರಶ್ನೆಗಳಿಗೆ ಯೆಹೋವನು ಯಾವಾಗಲೂ ಉತ್ತರಗಳನ್ನು ಒದಗಿಸುತ್ತಾನೆ.” ತನ್ನ ತಾಯಿಯ ಮರಣದ ಸಮಯದಂದಿನಿಂದ ಡೈಅನ್ ಸಹ ತದ್ರೀತಿಯಲ್ಲಿ ಯೆಹೋವನ ಪ್ರೀತಿಯ ಚಿಂತೆಯನ್ನು ಅನುಭವಿಸಿದ್ದಾಳೆ. ಆಕೆ ಹೇಳುವುದು: “ಯಾರು ಉತ್ತೇಜನ, ಮಾರ್ಗದರ್ಶನ, ಹಾಗೂ ಸಲಹೆಯನ್ನು ಒದಗಿಸಿದ್ದಾರೊ, ಆ ವೃದ್ಧ, ಆತ್ಮಿಕವಾಗಿ ಪ್ರೌಢರಾಗಿರುವವರ ಮುಖಾಂತರ ಆತನು ನನ್ನನ್ನು ಮಾರ್ಗದರ್ಶಿಸಿದ್ದಾನೆ ಮತ್ತು ಯಾವುದೇ ನಿರುತ್ತೇಜನವನ್ನು ನಿಭಾಯಿಸುವಂತೆ ನನಗೆ ಸಹಾಯಮಾಡಿದ್ದಾನೆ.”
ನಿಶ್ಚಯವಾಗಿಯೂ, ಕೆಟ್ಟ ಸಂಗತಿಗಳನ್ನು ಅನುಭವಿಸುವುದು ಎಂದಿಗೂ ಹಿತಕರವಲ್ಲ. ಆದರೆ ಇಂತಹ ವಿಷಯಗಳನ್ನು ದೇವರು ಏಕೆ ಅನುಮತಿಸುತ್ತಾನೆಂದು ತಿಳಿದುಕೊಳ್ಳುವುದರಲ್ಲಿ ಸಾಂತ್ವನವನ್ನು ಪಡೆದುಕೊಳ್ಳಿರಿ. ದೇವರು ಬಹಳ ಬೇಗನೆ ಸಮಸ್ಯೆಯನ್ನು ಬಗೆಹರಿಸುವನೆಂದು ಯಾವಾಗಲೂ ನೀವೇ ಜ್ಞಾಪಕಕ್ಕೆ ತಂದುಕೊಳ್ಳಿರಿ. ಅಷ್ಟೇಕೆ, ನಾವು ಅನುಭವಿಸಿರುವ ಕೆಟ್ಟ ಸಂಗತಿಗಳ ಎಲ್ಲ ಕುರುಹುಗಳು ಕಟ್ಟಕಡೆಗೆ ತೊಡೆದುಹಾಕಲ್ಪಡುವುವು! (ಯೆಶಾಯ 65:17; 1 ಯೋಹಾನ 3:8) ನಿಭಾಯಿಸುವಂತೆ ನಮಗೆ ಸಹಾಯಮಾಡಲು ದೇವರು ಮಾಡುವ ಎಲ್ಲ ಒದಗಿಸುವಿಕೆಗಳ ಲಾಭವನ್ನು ಪಡೆದುಕೊಳ್ಳುವ ಮೂಲಕ, ಸೈತಾನನನ್ನು ಒಬ್ಬ ಸುಳ್ಳುಗಾರನೆಂದು ರುಜುಪಡಿಸುವುದರಲ್ಲಿ ನೀವು ನಿಮ್ಮ ಪಾತ್ರವನ್ನು ಪೂರೈಸಬಲ್ಲಿರಿ. ಸಕಾಲದಲ್ಲಿ, ‘ದೇವರು ನಿಮ್ಮ ಕಣ್ಣೀರನ್ನೆಲ್ಲಾ ಒರಸಿಬಿಡುವನು.’—ಪ್ರಕಟನೆ 21:3, 4.
[ಪುಟ 24 ರಲ್ಲಿರುವ ಚಿತ್ರಗಳು]
ಬೇಗನೆ ಯೆಹೋವನು ಎಲ್ಲ ಕೆಟ್ಟ ಸಂಗತಿಗಳಿಗೆ ಒಂದು ಅಂತ್ಯವನ್ನು ತರುವನು