ಅಂತ್ಯವು ಸಮೀಪಿಸುತ್ತಾ ಇರುವುದರಿಂದ ಸ್ವಸ್ಥಚಿತ್ತರಾಗಿರಿ
1 ಯೆಹೋವನ ದಿನವು “ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ,” ಅಂದರೆ ಅನಿರೀಕ್ಷಿತವಾಗಿ, ಇದ್ದಕ್ಕಿದ್ದಂತೆ, ಗೊತ್ತಿಲ್ಲದಂಥ ರೀತಿಯಲ್ಲಿ ಬರುತ್ತದೆ ಎಂದು ದೇವರ ವಾಕ್ಯವು ಪುನಃ ಪುನಃ ವರ್ಣಿಸುತ್ತದೆ. (1 ಥೆಸ. 5:2; ಮತ್ತಾ. 24:43; 2 ಪೇತ್ರ 3:10; ಪ್ರಕ. 3:3; 16:15) ಯೇಸು ಹೇಳಿದ್ದು: “ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” (ಮತ್ತಾ. 24:44) ಅಂತ್ಯವು ಸಮೀಪಿಸುತ್ತಾ ಇರುವಾಗ ನಾವು ಹೇಗೆ ಆತ್ಮಿಕವಾಗಿ ಎಚ್ಚರವಾಗಿ ಉಳಿಯಸಾಧ್ಯವಿದೆ? ಪ್ರೇರಿತ ಬುದ್ಧಿವಾದದಲ್ಲಿ ಇದಕ್ಕೆ ಕೀಲಿ ಕೈಯನ್ನು ಕಂಡುಕೊಳ್ಳಸಾಧ್ಯವಿದೆ: ‘ಸ್ವಸ್ಥಚಿತ್ತರಾಗಿ ಇರ್ರಿ.’—1 ಪೇತ್ರ 4:7.
2 ಸ್ವಸ್ಥಚಿತ್ತರಾಗಿರುವುದರಲ್ಲಿ, ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ವೀಕ್ಷಿಸುವುದು ಒಳಗೂಡಿದೆ. (ಎಫೆ. 5:17) ಇದು ಸದ್ಯದ ವಿಷಯಗಳ ವ್ಯವಸ್ಥೆಯ ಮಧ್ಯೆ ನಾವು ನಮ್ಮನ್ನು “ಪರದೇಶಸ್ಥರೂ ತಾತ್ಕಾಲಿಕ ನಿವಾಸಿಗಳೂ” ಆಗಿ ಪರಿಗಣಿಸಿಕೊಳ್ಳುವಂತೆ ಸಹಾಯಮಾಡುತ್ತದೆ. (1 ಪೇತ್ರ 2:11, NW) ಯಾವುದು ನಿಜವಾಗಿಯೂ ಪ್ರಾಮುಖ್ಯವಾದದ್ದಾಗಿದೆ ಎಂಬುದನ್ನು ವಿವೇಚಿಸಲು, ಆದ್ಯತೆಗಳನ್ನು ಇಡಲು, ಒಳ್ಳೇ ನಿರ್ಣಯಗಳನ್ನು ಮಾಡಲು ಅದು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ.—ಫಿಲಿ. 1:10.
3 ಆತ್ಮಿಕ ಗುರಿಗಳನ್ನಿಡಿರಿ: ಆತ್ಮಿಕ ಗುರಿಗಳನ್ನು ಇಡುವುದು ಮತ್ತು ಅವುಗಳನ್ನು ಸಾಧಿಸುವುದು, ನಾವು ಸ್ವಸ್ಥಚಿತ್ತರಾಗಿರಲು ನಮಗೆ ಸಹಾಯಮಾಡುತ್ತದೆ. ನೀವು ಸದ್ಯಕ್ಕೆ ಬೆನ್ನಟ್ಟುತ್ತಿರುವ ಆತ್ಮಿಕ ಗುರಿಗಳು ನಿಮಗಿವೆಯೋ? ನೀವು ಪ್ರತಿ ದಿನ ಬೈಬಲನ್ನು ಓದಲು, ಎಲ್ಲ ಕ್ರೈಸ್ತ ಕೂಟಗಳಿಗೆ ಹಾಜರಾಗಲು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಯೊಂದು ಸಂಚಿಕೆಯನ್ನು ಓದಲು, ಅಥವಾ ಶುಶ್ರೂಷೆಯಲ್ಲಿ ನಿಮ್ಮ ಪಾಲನ್ನು ಹೆಚ್ಚಿಸಲು ಶ್ರಮಿಸುತ್ತಿದ್ದೀರೋ? ನಿಮಗೆ ಸೂಕ್ತವಾಗಿರುವಂಥ ಗುರಿಗಳನ್ನು ನೀವು ಇಡುವಲ್ಲಿ, ದೃಢನಿರ್ಧಾರದಿಂದ ಅವುಗಳನ್ನು ಬೆನ್ನಟ್ಟುತ್ತಾ ಇರುವಲ್ಲಿ, ಹಾಗೂ ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸುವಂತೆ ಯೆಹೋವನಲ್ಲಿ ಬೇಡಿಕೊಳ್ಳುವಲ್ಲಿ, ಇದರಿಂದ ದೊರಕುವ ಫಲಿತಾಂಶಗಳನ್ನು ನೋಡಿ ನೀವೇ ಬೆರಗಾಗಬಹುದು.
4 ಹಿರಿಯನೊಬ್ಬನು ಒಬ್ಬ ವಿವಾಹಿತ ದಂಪತಿಯ ಆತ್ಮಿಕ ಗುರಿಗಳ ಕುರಿತು ಅವರನ್ನು ಪ್ರಶ್ನಿಸಿದನು. ತಾವು ತಮ್ಮ ಜೀವನವನ್ನು ಸರಳೀಕರಿಸುವಲ್ಲಿ ಮತ್ತು ಹೊರೆಯಂತಿರುವ ಸಾಲವನ್ನು ತೀರಿಸಿಬಿಡುವಲ್ಲಿ, ಪಯನೀಯರ್ ಸೇವೆಯನ್ನು ಮಾಡಸಾಧ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಆ ಪ್ರಶ್ನೆಯು ಅವರಿಗೆ ಸಹಾಯಮಾಡಿತು. ಅವರು ಪಯನೀಯರ್ ಸೇವೆಯನ್ನು ತಮ್ಮ ಗುರಿಯಾಗಿ ಮಾಡಿಕೊಳ್ಳಲು ನಿರ್ಧರಿಸಿದರು. ಅವರು ತಮ್ಮ ಸಾಲವನ್ನು ಪೂರ್ಣವಾಗಿ ತೀರಿಸಿಬಿಟ್ಟರು ಮತ್ತು ಅವರ ಸಮಯ ಹಾಗೂ ಶಕ್ತಿಯನ್ನು ಕಬಳಿಸಿಬಿಡುತ್ತಿದ್ದ ಅನಗತ್ಯ ಚಟುವಟಿಕೆಗಳನ್ನು ಕಡಿಮೆಗೊಳಿಸಲಿಕ್ಕಾಗಿರುವ ಮಾರ್ಗಗಳನ್ನು ಕಂಡುಕೊಂಡರು. ನಿರ್ದಿಷ್ಟವಾಗಿ ಒಂದು ವರ್ಷ ಕಳೆದ ಬಳಿಕ, ಅವರು ತಮ್ಮ ಗುರಿಯನ್ನು ತಲಪಿದ್ದರು. ಯಾವ ಫಲಿತಾಂಶದೊಂದಿಗೆ? ಗಂಡನು ಹೇಳುವುದು: “ನಮಗೆ ಗುರಿಗಳಿಲ್ಲದಿರುತ್ತಿದ್ದಲ್ಲಿ, ನಮ್ಮ ಸದ್ಯದ ಪರಿಸ್ಥಿತಿಯಲ್ಲಿ ನಾವಿರುತ್ತಿರಲಿಲ್ಲ. ಈಗ ನಾವು ಹೆಚ್ಚು ಸಂತೋಷಿತರಾಗಿದ್ದೇವೆ. ನಮ್ಮ ಜೀವನವು ನೆಮ್ಮದಿಯಿಂದ ಕೂಡಿದೆ ಮತ್ತು ಹೆಚ್ಚು ಉತ್ತಮವಾಗಿದೆ. ನಮ್ಮ ಜೀವಿತಗಳಿಗೆ ನಿಜವಾದ ಅರ್ಥವಿದೆ ಮತ್ತು ಉದ್ದೇಶವಿದೆ.”
5 ನಾವು ಯೆಹೋವನ ದಿನಕ್ಕಾಗಿ ಕಾಯುತ್ತಿರುವಾಗ, ದೇವರ ಚಿತ್ತವನ್ನು ಮಾಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾ, ಸ್ವಸ್ಥಚಿತ್ತರಾಗಿ ಜೀವಿಸುವ ಮೂಲಕ ನಮ್ಮ ಆತ್ಮಿಕ ಸಿದ್ಧತೆಯನ್ನು ಕಾಪಾಡಿಕೊಳ್ಳೋಣ.—ತೀತ 2:11-13.