ಮರ್ಯಾದೆಗೆ ತಕ್ಕ ಉಡುಪು ದೇವರಿಗೆ ಪೂಜ್ಯತೆಯನ್ನು ತೋರಿಸುತ್ತದೆ
1. ನಮ್ಮ ಮುಂಬರುತ್ತಿರುವ ಜಿಲ್ಲಾ ಅಧಿವೇಶನಕ್ಕಾಗಿ ನಾವು ಹೇಗೆ ಗಣ್ಯತೆಯನ್ನು ವ್ಯಕ್ತಪಡಿಸಬಲ್ಲೆವು?
1 ಶೀಘ್ರವೇ 2003ರ “ದೇವರನ್ನು ಘನಪಡಿಸಿರಿ” ಜಿಲ್ಲಾ ಅಧಿವೇಶನದಲ್ಲಿ ಯೆಹೋವನ ಅತಿಥಿಗಳಾಗುವ ಸುಯೋಗವು ನಮ್ಮದಾಗಲಿರುವುದು. ಯೆಹೋವನು ನಮ್ಮನ್ನು ಇಂತಹ ಒಂದು ಮೃಷ್ಟಾನ್ನ ಭೋಜನಕ್ಕೆ ಆಮಂತ್ರಿಸಿರುವುದಕ್ಕಾಗಿ ನಾವಾತನಿಗೆ ತುಂಬ ಆಭಾರಿಗಳಾಗಿದ್ದೇವೆ! ನಾವು ನಮ್ಮ ಉಡುಪು ಮತ್ತು ಶೃಂಗಾರದ ಮೂಲಕ ಆತನಿಗಾಗಿರುವ ಪೂಜ್ಯತೆಯನ್ನು ಮತ್ತು ಆತನ ಆತ್ಮಿಕ ಒದಗಿಸುವಿಕೆಗಳಿಗಾಗಿರುವ ನಮ್ಮ ಗಣ್ಯತೆಯನ್ನು ವ್ಯಕ್ತಪಡಿಸಬಲ್ಲೆವು.—ಕೀರ್ತ. 116:12, 17.
2. ನಾವು ಶುದ್ಧವಾಗಿಯೂ ನೀಟಾಗಿಯೂ ಸಿಂಗರಿಸಲ್ಪಟ್ಟಿರಬೇಕೆಂಬುದು ಏಕೆ ಪ್ರಾಮುಖ್ಯವಾಗಿದೆ?
2 ಶುದ್ಧ ಮತ್ತು ಸುವ್ಯವಸ್ಥಿತವಾದ ತೋರಿಕೆ: ನಮ್ಮ ತೋರಿಕೆಯು, ಶುದ್ಧನೂ ಸುವ್ಯವಸ್ಥಿತನೂ ಆದ ನಮ್ಮ ದೇವರ ಮಟ್ಟಗಳನ್ನು ಪ್ರತಿಬಿಂಬಿಸಬೇಕು. (1 ಕೊರಿಂ. 14:33; 2 ಕೊರಿಂ. 7:1) ನಮ್ಮ ದೇಹ, ಕೇಶ, ಮತ್ತು ಉಗುರುಗಳು ಶುದ್ಧವಾಗಿದ್ದು ನಮ್ಮ ಇಡೀ ತೋರಿಕೆ ನೀಟಾಗಿರಬೇಕು. ಯೋಗ್ಯವಾಗಿ ಸಿಂಗರಿಸಿಕೊಳ್ಳದಿರುವುದು ಇಂದು ಸರ್ವಸಾಮಾನ್ಯವಾಗಿದೆ. ಆದರೂ, ಒಬ್ಬ ಚಿತ್ರ ನಟ ಅಥವಾ ಕ್ರೀಡಾ ನಾಯಕ ನೀಟಾಗಿ ಸಿಂಗರಿಸಿಕೊಳ್ಳದ ಕಾರಣ ಒಬ್ಬ ಕ್ರೈಸ್ತನೂ ಹಾಗೆ ಮಾಡಬೇಕೆಂದಿರುವುದಿಲ್ಲ. ನೀವು ಗೀಳುಗಳನ್ನು ಹಿಂಬಾಲಿಸುವುದಾದರೆ, ಜನರಿಗೆ ಸತ್ಯ ದೇವರನ್ನು ಸೇವಿಸುವವರ ಮತ್ತು ಸೇವಿಸದವರ ಮಧ್ಯೆ ವ್ಯತ್ಯಾಸವನ್ನು ಕಂಡುಕೊಳ್ಳಲು ಕಷ್ಟಕರವಾಗಬಹುದು.—ಮಲಾ. 3:18.
3. ನಮ್ಮ ತೋರಿಕೆಯು 1 ತಿಮೊಥೆಯ 2:9, 10ರಲ್ಲಿ ಕಂಡುಬರುವ ಬುದ್ಧಿವಾದಕ್ಕೆ ಅನುಗುಣವಾಗಿದೆ ಎಂಬುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು?
3 ಕ್ರೈಸ್ತ ಶುಶ್ರೂಷಕನಿಗೆ ಯೋಗ್ಯವಾದ ಉಡುಪು: ಅಪೊಸ್ತಲ ಪೌಲನು ಕ್ರೈಸ್ತ ಮೇಲ್ವಿಚಾರಕನಾದ ತಿಮೊಥೆಯನಿಗೆ ಪತ್ರ ಬರೆದಾಗ ಅವನಿಗೆ ಪ್ರೋತ್ಸಾಹಿಸಿದ್ದು: “ಸ್ತ್ರೀಯರು ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು.” (1 ತಿಮೊ. 2:9, 10) ನಮ್ಮ ಉಡುಗೆತೊಡುಗೆಯು ಮರ್ಯಾದೆಗೆ ತಕ್ಕದ್ದಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅದರ ಕಡೆ ಹೆಚ್ಚು ಗಮನಕೊಡುವುದು ಆವಶ್ಯಕವಾಗಿದೆ. ಉಡುಪು ನೀಟಾಗಿಯೂ, ಶುದ್ಧವಾಗಿಯೂ, ಆಡಂಬರವಿಲ್ಲದ್ದೂ ಆಗಿರಬೇಕು—ಥಳಕು ಪಳಕಿನದ್ದೂ ಉದ್ರೇಕಿಸುವಂಥದ್ದೂ ಆಗಿರಬಾರದು.—1 ಪೇತ್ರ 3:3.
4, 5. ಕ್ರೈಸ್ತ ಪುರುಷರು ಮತ್ತು ಸ್ತ್ರೀಯರು ಯಾವ ಮುನ್ನೆಚ್ಚರಿಕೆಗಳಿಗೆ ಕಿವಿಗೊಡಬೇಕು?
4 ಪೌಲನು “ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿ”ಕೊಳ್ಳುವುದರ ವಿಷಯದಲ್ಲಿ ವಿಪರೀತಕ್ಕೆ ಹೋಗುವುದರ ಕುರಿತು ಎಚ್ಚರಿಸಿದನು. (1 ತಿಮೊ. 2:9, 10) ಆಭರಣ, ಸೌಂದರ್ಯ ವರ್ಧಕಗಳು, ಮತ್ತು ಇತರ ಅಲಂಕಾರಗಳ ವಿಷಯದಲ್ಲಿ ಸಮತೂಕವುಳ್ಳವರಾಗಿರುವುದು ಕ್ರೈಸ್ತ ಸ್ತ್ರೀಯರಿಗೆ ವಿವೇಕದ ಮಾರ್ಗವಾಗಿದೆ.—ಜ್ಞಾನೋ. 11:2.
5 ಕ್ರೈಸ್ತ ಸ್ತ್ರೀಯರಿಗೆ ನಿರ್ದೇಶಿಸಿದ ಪೌಲನ ಬುದ್ಧಿವಾದವು ತಾತ್ವಿಕವಾಗಿ ಕ್ರೈಸ್ತ ಪುರುಷರಿಗೂ ಅನ್ವಯಿಸುತ್ತದೆ. ಈ ಲೋಕದ ಯೋಚನಾಧಾಟಿಯಿಂದ ಪ್ರತಿಬಿಂಬಿಸುವ ಶೈಲಿಗಳನ್ನು ಸಹೋದರರು ತ್ಯಜಿಸಬೇಕು. (1 ಯೋಹಾ. 2:16) ಉದಾಹರಣೆಗೆ, ಕೆಲವು ದೇಶಗಳಲ್ಲಿ ಸಡಿಲವಾದ, ಅಥವಾ ಅಳತೆಮೀರಿದ ಬಟ್ಟೆಗಳು ಪ್ರಖ್ಯಾತವಾಗಿವೆ, ಆದರೆ ಈ ಶೈಲಿಯು ಒಬ್ಬ ಕ್ರೈಸ್ತ ಶುಶ್ರೂಷಕನಿಗೆ ಯೋಗ್ಯವಾದದ್ದಾಗಿ ಕಂಡುಬರುವುದಿಲ್ಲ.
6. ಅಧಿವೇಶನಕ್ಕೆ ಮತ್ತು ಅಧಿವೇಶನದಿಂದ ಪ್ರಯಾಣಿಸುತ್ತಿರುವಾಗ, ಅಧಿವೇಶನದ ಸಮಯದಲ್ಲಿ, ಮತ್ತು ಪ್ರತಿ ದಿನದ ಸೆಷನ್ಗಳ ನಂತರ ನಾವು ನಮ್ಮ ಉಡುಗೆ ಮತ್ತು ಶೃಂಗಾರದಲ್ಲಿ ಉಚ್ಚ ಮಟ್ಟವನ್ನು ಏಕೆ ಕಾಪಾಡಿಕೊಳ್ಳಬೇಕು?
6 ಕಾರ್ಯಕ್ರಮದ ನಂತರದ ಚಟುವಟಿಕೆಗಳ ಸಮಯದಲ್ಲಿ: ಕಾರ್ಯಕ್ರಮಕ್ಕೆ ಹಾಜರಿರುವಾಗ, ಹೆಚ್ಚಿನ ಸಹೋದರ ಸಹೋದರಿಯರು ಉಡುಗೆ ಮತ್ತು ಶೃಂಗಾರದ ವಿಷಯದಲ್ಲಿ ಅತ್ಯುತ್ತಮವಾದ ಮಾದರಿಯನ್ನು ಇಡುತ್ತಾರೆ. ಆದರೂ, ಅಧಿವೇಶನಕ್ಕೆ ಮತ್ತು ಅಧಿವೇಶನದಿಂದ ಪ್ರಯಾಣಿಸುತ್ತಿರುವಾಗ ಅಥವಾ ದಿನದ ಕಾರ್ಯಕ್ರಮದ ನಂತರ ಮನೋರಂಜನೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಾಗ ಅವರು ಉದಾಸೀನರಾಗುತ್ತಾರೆಂದು ವರದಿಗಳು ತೋರಿಸುತ್ತವೆ. ನಿಶ್ಚಯವಾಗಿಯೂ, ನಮ್ಮ ವೈಯಕ್ತಿಕ ತೋರಿಕೆಯು—ಕಾರ್ಯಕ್ರಮದ ಸಮಯದಲ್ಲಾಗಲಿ ಅಥವಾ ಬೇರೆ ಸಮಯಗಳಲ್ಲಾಗಲಿ—ದೇವಜನರನ್ನು ಇತರರು ವೀಕ್ಷಿಸುವ ರೀತಿಯನ್ನು ಪ್ರಭಾವಿಸುತ್ತದೆ. ನಾವು ಅಧಿವೇಶನದ ಬ್ಯಾಡ್ಜ್ ಕಾರ್ಡ್ಗಳನ್ನು ಧರಿಸುವುದರಿಂದ, ಯಾವಾಗಲೂ ಕ್ರೈಸ್ತ ಶುಶ್ರೂಷಕರಿಗೆ ಯೋಗ್ಯವಾಗಿರುವ ರೀತಿಯಲ್ಲಿ ಉಡುಪನ್ನು ಧರಿಸಬೇಕು. ಇದು ಅನೇಕ ಸಲ ಇತರರು ನಮ್ಮನ್ನು ಪ್ರಶಂಸಿಸುವಂತೆ ನಡೆಸುತ್ತದೆ ಮತ್ತು ಹೀಗೆ ಒಂದು ಸಾಕ್ಷಿಯನ್ನು ಕೊಡಲು ಅವಕಾಶ ಮಾಡಿಕೊಡುತ್ತದೆ.—1 ಕೊರಿಂ. 10:31-33.
7. ಮರ್ಯಾದೆಗೆ ತಕ್ಕ ನಮ್ಮ ಉಡುಗೆ ಮತ್ತು ಶೃಂಗಾರವು ಇತರರ ಮೇಲೆ ಯಾವ ಪ್ರಭಾವವನ್ನು ಬೀರಸಾಧ್ಯವಿದೆ?
7 ಹೇಗೆ ಒಂದು ನಸುನಗೆಯು ನಮ್ಮ ಮುಖದ ತೋರಿಕೆಯನ್ನು ವೃದ್ಧಿಸುತ್ತದೋ, ಹಾಗೆಯೇ ಮರ್ಯಾದೆಗೆ ತಕ್ಕ ಉಡುಗೆ ಮತ್ತು ಶೃಂಗಾರವು ನಾವು ಪ್ರಕಟಿಸುವ ಸಂದೇಶವನ್ನು ಮತ್ತು ಪ್ರತಿನಿಧಿಸುವ ಸಂಸ್ಥೆಯನ್ನು ಗೌರವಿಸುತ್ತದೆ. ಈ ವರ್ಷದ “ದೇವರನ್ನು ಘನಪಡಿಸಿರಿ” ಜಿಲ್ಲಾ ಅಧಿವೇಶನಗಳ ಸಮಯದಲ್ಲಿ ನಮ್ಮನ್ನು ಗಮನಿಸುವ ಕೆಲವರು ನಾವು ಏಕೆ ಭಿನ್ನರಾಗಿದ್ದೇವೆ ಎಂದು ಕೇಳಲು ಪ್ರಚೋದಿಸಲ್ಪಡಬಹುದು ಮತ್ತು ಅಂತಿಮವಾಗಿ ಅವರೇ ಹೇಳಬಹುದು: “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ [ಮತ್ತು ನಾವೂ ಅವಲೋಕಿಸಿದ್ದೇವೆ].” (ಜೆಕ. 8:23) ನಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನಿಗಾಗಿರುವ ನಮ್ಮ ಪೂಜ್ಯತೆಯನ್ನು ನಮ್ಮ ಉಡುಗೆ ಮತ್ತು ಶೃಂಗಾರದ ಮೂಲಕ ತೋರಿಸಿಕೊಡೋಣ.
[ಪುಟ 5 ರಲ್ಲಿರುವ ಚೌಕ]
ಗೌರವಾನ್ವಿತ ತೋರಿಕೆಯನ್ನು ನೀಡಿರಿ
▪ ಪ್ರಯಾಣಿಸುತ್ತಿರುವಾಗ
▪ ಅಧಿವೇಶನದ ಸಮಯದಲ್ಲಿ
▪ ಮನೋರಂಜನೆಯ ಚಟುವಟಿಕೆಗಳಲ್ಲಿ ತೊಡಗಿರುವಾಗ